ಅಂಕಣ ಬರಹ

ಕಬ್ಬಿಗರ ಅಬ್ಬಿ

ಕಾವ್ಯೋದ್ಭವ

“ಗುರುಗಳೇ, ನನಗೆ ಸಂಗೀತ ಕಲಿಯಬೇಕು! ಕಲಿಸುವಿರಾ..”

ಅಲ್ಲಲ್ಲಿ ಹರಿದರೂ ತಕ್ಕಮಟ್ಟಿಗೆ ಒಪ್ಪವಾಗಿದ್ದ ಅಂಗಿ, ಖಾಕಿ ಚಡ್ಡಿ ಧರಿಸಿದ ಹುಡುಗ, ‘ಧ್ರುಪದ್ ಗಂಧರ್ವ’ ಮನೆ ತಲಪಿದ್ದ. ಮನೆಯ ಬಂಧನ ಬಿಟ್ಟು, ಎರಡು ದಿನ, ಮೂರು ರಾತ್ರೆ ರೈಲು ಯಾತ್ರೆ ಮಾಡಿದಾಗ, ಹೊತ್ತು ತಂದದ್ದು ಕಪ್ಪು ಕಣ್ಣುಗಳ ತುಂಬಿದ ಕನಸು ಮಾತ್ರ.

ಕಣ್ಣಲ್ಲಿ ಕಣ್ಣಿಟ್ಟು ಒಳಗಿನ ಭಾಷೆಯನ್ನು ಅರ್ಥ ಮಾಡಿಕೊಂಡವರಂತೆ ಗುರುಗಳು ಒಪ್ಪಿಕೊಂಡರು.

ಗುರುಗಳ ಮನೆಯಲ್ಲಿಯೇ ವಾಸ. ಬೆಳಗ್ಗೆ ಗಡಿಯಾರದ ಲೋಲಕ ಢಣ್ ಢಣ್ ಎಂದು ನಾಲ್ಕು ಬಾರಿ ಆಂದೋಳಿಸಿದಾಗ ಎದ್ದು ಮನೆ,ಅಂಗಳ ಗುಡಿಸಬೇಕು. ಆ ಮೇಲೆ ಬಾವಿಯೊಳಗೆ ಬಿಂದಿಗೆಯಿಳಿಸಿ ಒಂದೊಂದೇ ಬಿಂದಿಗೆ ನೀರನ್ನು ತಂದು ಮನೆಯ, ಬಚ್ಚಲು ಮನೆಯ,ಅಡುಗೆ ಮನೆಯ ಹಂಡೆ ತುಂಬುವ ಕೆಲಸ. ಗುರುಗಳ ಅಂಗಳದಲ್ಲಿ ತಂಬೂರಿ ಕೂಡಾ ೫ ಗಂಟೆಗೇ ಎದ್ದು ಸ್ವರ ಹಚ್ಚಲು ತಂತಿ ಬಿಗಿ ಮಾಡುತ್ತಿತ್ತು.

ತಂಬೂರಿಯ ಮಂದ್ರ ಶಡ್ಜಕ್ಕೆ  ಗುರುಗಳು ಸ್ವರ ಹಚ್ಚುವಾಗ, ಉಳಿದ ಶಿಷ್ಯರು ತಮ್ ತಮ್ಮ ಕೊರಳನ್ನೂ ಸೇರಿಸಿದಾಗ ಅನುರಣನೆಗೆ, ಬೆಳಗಿನ ಮಂಜು ಕರಗುತ್ತಿತ್ತು. ಪೂರ್ವದಿಗಂತ ವರ್ಣಮಯವಾಗುತ್ತಿತ್ತು.

ಗುರುಗಳ ಮನೆಗೆ ತಲಪಿದ್ದು ಅಮವಾಸ್ಯೆಯ ದಿನ. ಇಂದು ಆಗಲೇ ಹುಣ್ಣಿಮೆ. ರಾತ್ರೆ ಗುರುಗಳ ಪಾದ ಒತ್ತುತ್ತಾ ಹುಡುಗ ಅನ್ನುತ್ತಾನೆ.

” ಗುರುಗಳೇ, ನನಗೆ ಸಂಗೀತ ಪಾಠ ದಯವಿಟ್ಟು ಶುರುಮಾಡಿ”

” ಬೇಟೇ! ನಿನ್ನ ಸಂಗೀತ ಪಾಠ ಆಗಲೇ ಆರಂಭವಾಗಿದೆ. ರಾತ್ರೆಯ ಮೌನದಲ್ಲಿಯೂ ಪ್ರಕೃತಿಯ ಸಂಗೀತ ಆಲಿಸು. ಗಡಿಯಾರದ ಲೋಲಕದ ಆಂದೋಲನದಲ್ಲಿ ಇಂಪಿನಲೆ ಇಲ್ಲವೇ?. ಬಾವಿಯೊಳಗೆ ಬಿಂದಿಗೆ ನೀರನ್ನು ಸ್ಪರ್ಶಿಸಿದಾಗ ಆದ ಕಂಪನ ಬಾವಿಯೊಳಗಿಂದ ಮೊಳಗುವಾಗ ಅದರಲ್ಲಿ ಸಂಗೀತ ಆಲಿಸಿರುವೆಯಾ?. ಇಬ್ಬನಿಯ ಒಂದೊಂದೇ ಬಿಂದುಗಳು ತೊಟ್ಟಿಕ್ಕುವಾಗ ಅದರೊಳಗಿಂದ ಸ್ಪಂದಿಸುವ ಸ್ವರ ಸಾಮರಸ್ಯ ನೋಡಿರುವೆಯಾ?. ಇಂದು ಹುಣ್ಣಿಮೆಯ ರಾತ್ರಿ. ಕಿಟಿಕಿಯ ಹೊರಗೆ ನೋಡು. ಚಂದ್ರನ ಬೆಳಕಿನ ಉತ್ಕರ್ಷದಲ್ಲಿ ಪ್ರಕೃತಿಯ ಜೀವತಂತುಗಳು ಮಿಡಿಯುವ ಸಂಗೀತ ಕೇಳಿಸುತ್ತಿದೆಯಾ?.

ಮಗೂ, ನಿನಗದು ಕೇಳಿಸಲು ನಿನ್ನ ಮನಸ್ಸೊಳಗೆ ಮೌನವನ್ನು ತುಂಬಿಸಬೇಕು. ಅಲೆಗಳು ಮೌನದ ನೆಲೆಯಲ್ಲಿ ಯೋಗ ಸಮಾಧಿ ಹೊಂದಬೇಕು.ಬೇಟಾ, ಅಂತಹ ಒಂದು ಶಾಂತಿಯ ಪ್ರಜ್ಞೆಯನ್ನು ಕ್ಷಣ ಕ್ಷಣವೂ ಅನುಭವಿಸುತ್ತಾ ಪ್ರಕೃತಿಯನ್ನು ಗಮನಿಸು. ಆಗ ಜೀವಕ್ರಿಯೆಯ ಪ್ರತೀ ಕ್ಷಣಗಳಲ್ಲಿ ಜೀವಲಯ, ಜೀವಸ್ವರ, ಭಾವತರಂಗ ನಿನಗೆ ಕೇಳಿಸುತ್ತೆ. ಆ ಸ್ವರ ಲಯ,ಭಾವದಲ್ಲಿ ಒಂದಾಗುವ, ತಾದಾತ್ಮ್ಯ ಅನುಭವಿಸುವ ಮನಸ್ಸು ನಿನಗೆ ಸಂಭವಿಸಲಿ. ಸಂಗೀತದ ಜೀವಾತ್ಮ ನಿನ್ನೊಳಗೆಯೇ ಸಾಕ್ಷಾತ್ಕಾರ ಆಗಲು ಇದೊಂದೇ ಮಾರ್ಗ. ಪ್ರಕೃತಿಯೇ ನಿನ್ನ ಸಂಗೀತದ ಮೊದಲ ಗುರು, ಮಗೂ.”

ಕ್ಷಮಿಸಿ! ಮೇಲಿನ ಕಥೆಯಂತಹಾ ಕಥೆ ಕಳೆದ ಶತಮಾನದಲ್ಲಿ ಸಂಗೀತ ಕಲಿತ ಹಲವು ಮಹಾನ್ ಸಂಗೀತ ಕಲಾಕಾರರ ಬಾಲ್ಯದ ಕಲಿಕೆಯ, ಕಷ್ಟದ, ಸಮರ್ಪಣೆಯ ಕಥೆಯೇ. ಪ್ರಪಂಚದ ಪ್ರತಿಯೊಂದು ಸ್ಥಿತಿಯಲ್ಲೂ ಸಿಮ್ಮಟ್ರಿ, ಸೌಂದರ್ಯ ಇರುವ ಹಾಗೆಯೇ, ಪ್ರತೀ ಕ್ರಿಯೆಯಲ್ಲಿ, ಲಯವಿದೆ, ತರಂಗವಿದೆ, ಆವರ್ತನವಿದೆ ಮತ್ತು ಸಂಗೀತವೂ ಇದೆ. ಕಾವ್ಯದ ಉಗಮದಲ್ಲಿಯೂ,ಈ ಭಾವಲಯ, ಭಾವತರಂಗ, ಮತ್ತು ತುರೀಯಾವಸ್ತೆ ಅಂತರ್ಗತವಾಗಿದೆ.

ಸಂಗೀತವಿರಲಿ ಕಾವ್ಯವಿರಲಿ, ಮೂಡುವ ಕ್ಯಾನುವಾಸು ಮನಸ್ಸೇ ತಾನೇ.

ಹೆಣ್ಣುಗಂಡಿನ ಮಿಲನದಿಂದ ಎರಡು ಜೀವಕೋಶಗಳು ಒಂದಾಗಿ, ಆ ಕೋಶ, ಸ್ವವಿಭಜನೆಯಿಂದ, ಎರಡಾಗಿ, ಮತ್ತೆ ನಾಲ್ಕಾಗಿ, ಹಲವು ಲಕ್ಷ ಪುನರಾವರ್ತನೆಗಳ ನಂತರ 27 ಟ್ರಿಲಿಯನ್ ( 27 ಲಕ್ಷ ಕೋಟಿ ) ಜೀವಕೋಶಗಳ ದೇಹರೂಪೀ ಮಗುವಾಗುವುದು ಸೃಷ್ಟಿಯ ವಿಸ್ಮಯ. ಅದಕ್ಕಿಂತ ದೊಡ್ಡ ವಿಸ್ಮಯ,  ಮನುಷ್ಯ ದೇಹದ, ಹೃದಯ, ಶ್ವಾಸಕೋಶ,, ಉದರ, ಕೈಕಾಲುಗಳು, ಮಿದುಳು, ಅಸಂಖ್ಯ ರಕ್ತನಾಳಗಳು ಹೇಗಿರಬೇಕು, ಎಲ್ಲಿರಬೇಕು, ಹೇಗೆ ಕೆಲಸ ಮಾಡಬೇಕು, ಇಷ್ಟೊಂದು ಎಂಜಿನಿಯರಿಂಗ್ ವ್ಯವಸ್ಥೆಗಳು ಹೇಗೆ ಟೀಮ್ ವರ್ಕ್ ಮಾಡ ಬೇಕು ಎಂಬ ಎಲ್ಲಾ ಜ್ಞಾನವೂ ಆ ಒಂದು ಕೋಶದೊಳಗಿಂದಲೇ ವಿಕಸಿತವಾಯಿತು ಎಂಬುದು. ಮಿದುಳಿನೊಳಗಿನ ಸಾಫ್ಟ್‌ವೇರ್ ಕೂಡಾ ಆ ಒಂದು ಕೋಶದೊಳಗಿಂದಲೇ ಇವಾಲ್ವ್ ಆಗಿ ಮಿದುಳಿನೊಳಗೆ ಇನ್‌ಸ್ಟಾಲ್ ಆಗಿದೆ. ಹುಟ್ಟಿದ ಮಗುವಿನ ಹಲವು ಪ್ರತಿಭೆಗಳೂ, ಆ ಕೋಶದಲ್ಲಿ ಬೀಜವಾಕ್ಯವಾಗಿದ್ದವು.

ಹೀಗೆ ಎಲ್ಲವನ್ನೂ ತನ್ನ ಕೇಂದ್ರದಿಂದ ಸೃಜಿಸಿ, ಸೃಷ್ಟಿಯಾಗುವ ಕ್ರಿಯೆ, ಅಂತರಂಗದಿಂದ ಚಿಲುಮಿಸಿ ಹೊರಬರುವ ಕ್ರಿಯೆ, ಕಾವ್ಯೋದ್ಭವದ ಹಲವು ಸಾಧ್ಯತೆಗಳಲ್ಲಿ ಮೊದಲನೆಯದೂ ಹೌದು, ಮತ್ತು ಅತ್ಯಂತ ಸಂಕೀರ್ಣವೂ ಹೌದು. ಆದರೆ ಇಂತಹ ಪ್ರಯತ್ನದಿಂದ ಮೊಳೆತ ಕವಿತೆ, ಅನನ್ಯವೂ ಆತ್ಮಾರ್ಥಪೂರ್ಣವೂ ಆಗಿರುತ್ತೆ.

ಇಂತಹ ಕವಿತೆಗಳನ್ನು ಸೃಜಿಸುವ ಕವಿ ರಸ ಋಷಿಗಳೇ ಆಗಿರುತ್ತಾರೆ. ಕುವೆಂಪು ಅವರ “ಓ ನನ್ನ ಚೇತನ, ಆಗು ನೀ ಅನಿಕೇತನ” ಇಂತಹ ಒಂದು ಸೃಷ್ಟಿ.

ದ.ರಾ. ಬೇಂದ್ರೆಯವರ ‘ ನಾಕುತಂತಿ’ ,  ‘ಚೈತನ್ಯದ ಪೂಜೆ’ ಕವಿತೆಗಳೂ ಅಷ್ಟೇ.

Discovering A Poet At Bendre Bhavan, Dharwad | Inditales

” ಚೈತನ್ಯದ ಪೂಜೆ ನಡೆದSದ

ನೋಡS ತಂಗಿ।। ಅಭಂಗದ ಭಂಗೀS

ಸತ್ಯ ಎಂಬುವ ನಿತ್ಯದ ದೀಪ

ಸುತ್ತೆಲ್ಲಾ ಅವನದೇ ರೂಪ

ಪ್ರೀತಿ ಎಂಬುವ ನೈವೇದ್ಯ

ಇದು ಎಲ್ಲರ ಹೃದಯದ ಸಂವೇದ್ಯ.

ಸೌಂದರ್ಯ ಧ್ಯಾನಾ ಎದೆಯಲ್ಲಿ

ಅಸ್ಪರ್ಶಾ ಚಿನ್ಮಯದಲ್ಲಿ

ಆನಂದಗೀತ ಸಾಮSವೇದಾ

ಸರಿಗಮ ನಾದಾ”

ಇಂತಹ ಕವಿತೆಯನ್ನು ಬರೆಯಲು ಧ್ಯಾನಸ್ಥ ಸ್ಥಿತಿಯಲ್ಲಿ ಕವಿ ಹಗಲಿರುಳು ಸಾಧನೆ ಮಾಡಬೇಕು. ಕವಿತೆಯೇ , ತಪಸ್ಸಾಗಿ ಬದುಕಬೇಕು. ಒಳಗೊಳಗಿಂದಲೇ ಅರಳಬೇಕು.

ಒಳಲೋಕದಿಂದ ಕವಿತೆ ಹುಟ್ಟುವ ಇನ್ನೊಂದು ವಿಧಾನ, ಕವಿಯ ತೀವ್ರ ಭಾವೋತ್ಕರ್ಷದ ಹರಿವು.

ಬೇಂದ್ರೆಯವರ ಮಗನ ಸಾವಿನ ಸಂದರ್ಭದಲ್ಲಿ ತಮ್ಮ ಪತ್ನಿಯ ಕಣ್ಣೊಳಗೆ ಕಣ್ಣಿಟ್ಟು ನೋಡುವ ಕವಿ, ನೋವಿನ, ಹತಾಶೆಯ, ಅಸಹಾಯಕತೆಯ ಭಾವದ ತುರೀಯಕ್ಕೆ ತಲಪಿದಾಗ” ನೀ ಹೀಂಗ ನೋಡ ಬ್ಯಾಡ ನನ್ನ” ದಂತಹಾ ಕವಿತೆ ಜನ್ಮಿಸುತ್ತೆ.

ಹೀಗೆ ಅಂತರಾಳದಿಂದ ರೂಪ ಪಡೆದು ಹೊರಬರುವ ಕವಿತೆಯ ಸ್ವರೂಪದಲ್ಲಿ ಯಾವುದೇ ಪೂರ್ವಯೋಜನೆ ಇರುವುದಿಲ್ಲ. ಈ ಕವಿತೆಯ,ಚಂದ, ಛಂದ, ಅರ್ಥ ಎಲ್ಲವೂ ಆ ಕ್ಷಣದ ಆ ಸ್ಥಿತಿಯ ಕ್ರೋಮೋಸೋಮ್ ಗಳ ಅಭಿವ್ಯಕ್ತಿ.

ಕಾವ್ಯ ಹುಟ್ಟುವ ಇನ್ನೊಂದು ಬಗೆ, ಕಥಾ ಪಾತ್ರದೊಳಗೆ ಕವಿ ಮಾಡುವ ಪರಕಾಯ ಪ್ರವೇಶ. ಹಾಗೆ ಪ್ರವೇಶಿಸಿದ ಕವಿ, ಆ ಪಾತ್ರದ ಅಷ್ಟೂ ಅನುಭವಗಳನ್ನು, ಸ್ವಂತವಾಗಿಸಿ, ಹನಿಯಾಗಿ ಜಿನುಗುತ್ತಾನೆ.

ಹೆಚ್.ಎಸ್.ವಿ. ಅವರು ಅಭಿನಯ ಮತ್ತು ಕಾವ್ಯ ಸೃಷ್ಟಿಯ ಬಗ್ಗೆ ಹೀಗೆ ಹೇಳುತ್ತಾರೆ.

” ಬರವಣಿಗೆಯಲ್ಲಿ ಅಭಿನಯವೇ ಇದೆಯಲ್ಲವೇ? ಕಾವ್ಯ, ಕಥೆ ಬರೆಯುವಾಗ ಅನೇಕ ಪಾತ್ರಗಳು ಬರುತ್ತವೆ. ಆ ಪಾತ್ರ ನಾನಾಗದೇ ಬರಹದಲ್ಲಿ ಸಹಜತೆ ಬರುವುದಿಲ್ಲ. ಬುದ್ಧಚರಿತವನ್ನೇ ನೋಡು, ರಾಹುಲನ ಮಾತುಗಳನ್ನು ನಾನು ಬರೆಯಬೇಕಾದರೆ ರಾಹುಲನನ್ನು ನಾನು ಆವಾಹಿಸಿಕೊಳ್ಳಬೇಕು. ಸೀತೆಯಾಗಬೇಕಾದರೆ ಸೀತೆಯ ಹೆಣ್ತನವನ್ನು ನಾನು ಪಡೆಯದಿದ್ದರೆ ಸಹಜತೆ ಬರುವುದಿಲ್ಲ. ಕವಿಯ ಮನಸ್ಸು ಅನೇಕ ಸ್ಥರಗಳಲ್ಲಿ ಸಂಚಾರ ಮಾಡುತ್ತಿರುತ್ತದೆ.

ವಿಫುಲ ರೂಪ ಧಾರಿಣಿ ಕವಿಯ ಮನಸ್ಸು ಎಂದು ಕುವೆಂಪು ಹೇಳಿಲ್ಲವೇ. ಹಾಗೆ ಬರವಣಿಗೆ ಎಂಬುದು ಅಂತರಂಗದಲ್ಲಿ ಅಭಿನಯ.

 ಸಿನಿಮಾ, ನಾಟಕ ಎಂಬುದು ಬಹಿರಂಗದಲ್ಲಿ ತೋರಿಸಬೇಕಾದ್ದು.ಕವಿತೆ ಕಷ್ಟ ಏಕೆಂದರೆ ಅದರಲ್ಲಿ ಬರುವ ಎಲ್ಲಾ ಪಾತ್ರಗಳನ್ನೂ ಕವಿ ಅಭಿನಯಿಸಬೇಕು”

ಹರಿಶ್ಚಂದ್ರ ಕಾವ್ಯದಲ್ಲಿ, ಚಂದ್ರಮತಿ, ತನ್ನ ಮಗ ಹಾವು ಕಚ್ಚಿ ಸತ್ತಾಗ, ವಿಲಪಿಸುವ ಸಾಲುಗಳು ಹೀಗಿವೆ.

“ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು

ನಿಂದರಂ ಲೋಹಿತಾಶ್ವಾ ಎಂದು ಗಾಳಿ ಗಿಱಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗಱುವಿನಂತೆ

ಮಂದಮತಿಯಾಗಿರ್ದ ಚಂದ್ರಮತಿಗೊಬ್ಬನೈ

ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ

ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು ಹೇಳಿದನಾಗಳು”

ಚಂದ್ರಮತಿಯ ಪ್ರಲಾಪ,  ಕನ್ನಡ ಕಾವ್ಯಜಗತ್ತಿನ ಇತಿಹಾಸದಲ್ಲಿ ದುಃಖ ರಸದ ಮನಮುಟ್ಟುವ ಅಭಿವ್ಯಕ್ತಿಯಾಗಿ ಪರಿಗಣಿಸಲ್ಪಡುವುದರ ಹಿಂದೆ, ರಾಘವಾಂಕ ಕವಿ, ಚಂದ್ರಮತಿಯ ಪಾತ್ರದೊಳಗೆ ಹೊಕ್ಕು, ಮಗನ ಸಾವಿನ ತೀವ್ರ ಶೋಕದ ಅನುಭೂತಿಯನ್ನು ಅನುಭವಿಸಿ ಪಾತ್ರವೇ ತಾನಾಗಿ,ಬರೆದದ್ದು ಕಾರಣವಲ್ಲವೇ.

ಕವಿತೆ ಹುಟ್ಟಲೇಬೇಕೇ?. ಕವಿತೆಯನ್ನು ಕಟ್ಟಲೂ ಬಹುದು. ಪ್ರಕೃತಿಯಿಂದ ಪ್ರೇರಣೆ ಪಡೆದು, ಬದುಕು ಕಟ್ಟಿಕೊಡುವ ಅನುಭವದ ಕಡುಬನ್ನು ಮೆದ್ದು ಅದರ ಆಧಾರದಲ್ಲಿ, ನವರಸಗಳ ಪಾಕ ಬಡಿಸಬಹುದು. ದೇಶ, ಸಮಾಜ, ಗಗನ, ಸೂರ್ಯ,ನದಿ, ಪ್ರೀತಿ, ಹೀಗೆ ಹತ್ತು ಹಲವು ನೂಲೆಳೆಗಳನ್ನು ನೇಯ್ದು ಪದ್ಯಮಾಡಬಹುದು.

 ಕವಿಗೆ ನಿಜ ಜೀವನದ ವಸ್ತುವೇ ಕಾವ್ಯ ವಾಸ್ತುವಾಗಿ ಕೆಲವೊಮ್ಮೆ ಹೊಲದ ನಡುವಿನ ಗುಡಿಸಲು, ಮತ್ತೊಮ್ಮೆ ಗಗನ ಚುಂಬಿ ಕಟ್ಟಡಗಳು, ಬಗೆ ಬಗೆಯ ಕಟ್ಟಡಗಳಂತಹ ಕವಿತೆಗಳು ನೆಲದ ಅಡಿಪಾಯದ ಮೇಲೆ ಎದ್ದು ನಿಲ್ಲುತ್ತವೆ. ಗುಂಪು ಗುಂಪಾಗಿ ಓಡುವ ಕುರಿಮಂದೆಯನ್ನು ಕಂಡಾಗ, ಕವಿ ನಿಸಾರ್ ಅಹಮದ್ ಅವರು ಹೀಗೊಂದು ಅಪೂರ್ವ ಕವಿತೆ ಬರೆಯುತ್ತಾರೆ.

Poet KS Nisar Ahmed no more

” ಕುರಿಗಳು ಸಾರ್ ಕುರಿಗಳು

ಸಾಗಿದ್ದೇ ಗುರಿಗಳು

ಮಂದೆಯಲ್ಲಿ ಒಂದಾಗಿ ಸ್ವಂತತೆಯೇ ಬಂದಾಗಿ

ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ

ದನಿ ಕುಗ್ಗಿಸಿ ತಲೆ ತಗ್ಗಿಸಿ ಅಂಡಲೆಯುವ ನಾವು ನೀವು

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ

ಹೇಗೆ ಹೇಗೋ ಏಗುತಿರುವ ಬರೀ ಕಿರುಚಿ ರೇಗುತಿರುವ

ನೊಣ ಕೂತರೆ ಬಾಗುತಿರುವ ತಿನ್ನದಿದ್ದರು ತೇಗುತಿರುವ

ಹಿಂದೆ ಬಂದರೊದೆಯದ ಮುಂದೆ ಬರಲು ಹಾಯದ

ನಾವು ನೀವು ಅವರು ಇವರು

ನಮ್ಮ ಕಾಯ್ವ ಕುರುಬರು”

ಕಾಣುವ ವಸ್ತು, ಕ್ರಿಯೆ ಮತ್ತು ಡೈನಾಮಿಕ್ಸ್, ಕವಿಯ ಮನಸ್ಸೊಳಗೆ ಹಲವು ಕಲ್ಪನೆಗಳಿಗೆ, ಚಿಂತನೆಗಳಿಗೆ ಪ್ರೇರಣೆಯಾಗುತ್ತೆ. ಏನೋ ಹೇಳಬೇಕಾದ ತುಡಿತ, ಸಂದೇಶದ ಸಮೀಕರಣವಾಗಿ, ಹಲವು ಪ್ರತಿಮೆಗಳ ಮೂಲಕ ಕಾವ್ಯಕಟ್ಟಡವನ್ನು ಕವಿ ಕಟ್ಟುತ್ತಾರೆ. ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾ ಪ್ರತಿಮೆಗಳು  ಗೋಡೆಗಳಲ್ಲಿ ಸಾಲುಗಟ್ಟಿ  ಒಂದು ಕತೆಯನ್ನು ಹೇಳುವ ಹಾಗೆಯೇ ಇದೂ.

ಮೇಲಿನ ಕವಿತೆಯಲ್ಲಿ, ಕುರಿಗಳು ಅಂದರೆ ಬಹುಮುಖೀ ಪ್ರತಿಮೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ.

ನವ್ಯ ಮತ್ತು ನಂತರದ ಇಂತಹಾ ಕವಿತೆಗಳು ಅಬ್ಸ್ಟ್ರಾಕ್ಟ್ ಆಗಿರುವುದರಿಂದ, ಇವುಗಳ ಅರ್ಥ ಓದುಗನ ಗ್ರಹಿಕೆಗೆ, ಹ್ರಹಿಸುವ ಮನಸ್ಸಿನ ಪರದೆಯ ವಿನ್ಯಾಸಕ್ಕೆ ಸಾಪೇಕ್ಷವಾಗಿರುತ್ತೆ.

ಕವಿತೆ ಕಟ್ಟುವ ಕ್ರಿಯೆಯಲ್ಲಿ, ಕವಿ ಮೊದಲೇ ಒಂದು ಪದಹಂದರದೊಳಗೆ ತನಗೆ ಹೇಳಬೇಕಾದ ಅರ್ಥ ತುಂಬಿ, ವ್ಯವಸ್ಥೆ ಯೊಳಗೆ ಹರಿಯಬಿಟ್ಟು, ಸಂಚಲನವೆಬ್ಬಿಸುವುದೂ ಒಂದು ಬಗೆ. ಸಮಾಜವಾದ, ಮಾರ್ಕ್ಸ್ ವಾದ, ಮಾನವತಾವಾದ, ಪರಿಸರವಾದ, ಹೀಗೆ ಹತ್ತು ಹಲವು ‘ಇಸಂ’ ಗಳನ್ನು ತನ್ನ ವಾಸ್ತುವಿನೊಳಗೆ ತುಂಬಿಸಿಕೊಂಡ ಕವಿತೆಗಳು ಕಳೆದ ಹಲವು ದಶಕಗಳಲ್ಲಿ ಮೂರ್ತರೂಪ ಪಡೆದಿವೆ. ಸಮಾಜದ ಬದಲಾವಣೆಗಾಗಿ, ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವತ್ತ ಕವಿತೆಯನ್ನು ದುಡಿಸಿಕೊಳ್ಳುವ ಪ್ರಯತ್ನ ಇದು.

ಕವಿತೆ ಬರೆಯಲು ಏಕಾಂತ ಬೇಕು. ಏಕಾಂತದೊಳಗೆ ಮನಸ್ಸು ಮೌನವಾಗ ಬೇಕು. ಇದೊಂದು ಥರಾ ಧ್ಯಾನದ ಹಾಗೆ. ನಿಧಾನವಾಗಿ ಮನಸ್ಸು ಅದರೊಳಗೆ ಇಳಿಯುತ್ತಾ, ಇಳಿದಂತೆ ಮನಸ್ಸು, ಕಾವ್ಯವಸ್ತುವಿನಲ್ಲಿ ಕೇಂದ್ರೀಕರಿಸಿ ಯಾವುದೋ ಒಂದು ಹಂತದಲ್ಲಿ ಕವಿತೆ ಅವತರಿಸಿ ಸಾಲುಗಳು ಹರಿಯುತ್ತವೆ. ಯಶವಂತ ಚಿತ್ತಾಲರು ಬೆಳಗ್ಗೆ ಮೂರು ಗಂಟೆಗೆ ಎದ್ದು, ದೀಪದ ಬೆಳಕಿನಲ್ಲಿ ಕತೆ ಬರೆಯುತ್ತಿದ್ದರಂತೆ. ಸುತ್ತಲೂ ಕತ್ತಲು, ದೀಪವೊಂದೇ ಜ್ಯೋತಿ. ಆ ಏಕಾಂತದಲ್ಲಿ ಜ್ಯೋತಿಗೆ ನೋಟ ಸಂಧಿಸಿದಾಗ ಕತೆಯ ಪಾತ್ರಗಳು ನಿಧಾನವಾಗಿ ನಿಚ್ಚಳವಾಗಿ ಕಣ್ಣಲ್ಲಿ ರೂಪುಗೊಂಡು ಕತೆಯಾಗುತ್ತಿದ್ದವಂತೆ. ಬೆಳಗಾದಂತೆ, ದೀಪದ ಜ್ಯೋತಿ ಮಂಜಾಗಿ ಕತೆಯ ಪಾತ್ರಗಳೂ ಮಾಯವಾದಾಗ ಕತೆ ಬರೆಯುವುದು ನಿಲ್ಲಿಸುತ್ತಿದ್ದರು,ಎಂದು ಹಿಂದೆಂದೋ ಓದಿದ ನೆನಪು.

ಇಂತಹಾ ಅನುಸಂಧಾನದ ಜತೆಗೆ ಕವಿತೆ ಬರೆಯಲು ಅಗತ್ಯವಾದ ಸಾಹಿತ್ಯದ ಪರಿಣತಿ, ಪರಿಸರದತ್ತ, ಜೀವಪ್ರಪಂಚದ ಕಷ್ಟ ಸುಖಗಳತ್ತ  ಸೂಕ್ಷ್ಮ ಸ್ಪಂದನೆ, ಕಲ್ಪನಾ ಸಾಮರ್ಥ್ಯ ಕೂಡಾ ಅಗತ್ಯ.  ಹಾಗೆ ಪಕ್ವವಾದ ಕವಿಗೆ ಕವಿತೆ ಬರೆಯುವ ಚಾಲೆಂಜ್ ನೀವು ಕೊಡಬಹುದು. ಸಿನೆಮಾ, ನಾಟಕ, ಸೀರಿಯಲ್, ಗಳ ದೃಶ್ಯಕ್ಕೆ ಪೂರಕವಾದ ಕವಿತೆಗಳು ಒಂದು ರೀತಿಯಲ್ಲಿ ಹೊಸತನದ ತೆನೆಯೇ. ಉದಾಹರಣೆಗೆ, ಮುಕ್ತ ಸೀರಿಯಲ್ ಗಾಗಿ ಹೆಚ್.ಎಸ್.ವಿ. ಅವರು ಬರೆದ ಈ ಸಾಲುಗಳನ್ನು ನೋಡಿ.

Venkatesh Murthy chosen Sahitya Sammelana president | Deccan Herald

” ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ

ನೀಡಿ ನೀಡಿ ಮುಕ್ತ…

ಬೇವ ಅಗಿವ ಸವಿ ಗಾನದ ಹಕ್ಕಿ

ಹಾಡಿ ಮುಕ್ತ ಮುಕ್ತ…

ತನ್ನಾವರಣವೆ ಸೆರೆಮನೆಯಾದರೆ

ಜೀವಕೆ ಎಲ್ಲಿಯ ಮುಕ್ತಿ…

ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ

ಬಯಲೇ ಜೀವನ್ಮುಕ್ತಿ “

ಧಾರಾವಾಹಿಯ ಒಟ್ಟೂ ಥೀಮ್ ಗೆ ಹೊಂದುವ ಹಾಗೆ, ಕತೆಯ ವಿಸ್ತಾರಕ್ಕೆ ಗಗನದ ವ್ಯಾಪ್ತಿ ಕೊಡುವ ಶಕ್ತಿ ಇಂತಹ ಕವಿತೆಗಳಿಗೆ.

ಚಿತ್ರಕಲೆ, ನಾಟ್ಯ, ಸಂಗೀತ, ದೃಶ್ಯ ಮಾಧ್ಯಮ ಹೀಗೆ  ಹಲವು ಕಲೆಗಳ ಜತೆಗೆ ಕವಿತೆಯೂ ಸಮಗ್ರ ಅಭಿವ್ಯಕ್ತಿಯ ಅನುಭೂತಿಯಲ್ಲಿ ಪೂರಕವಾಗಿ ಅನುರಣಿಸುತ್ತದೆ.

ಅಧ್ಯಾತ್ಮ ಸಾಧನೆಯಲ್ಲಿ ತೊಡಗಿದ, ಭೌತಿಕಕ್ಕೆ ಮೀರಿದ ಅನುಭೂತಿಯನ್ನು ಸವಿದ  ಮನಸ್ಸು ಕವಿಯಾದರೆ, ಆತ ಅಲ್ಲಮನಾಗುತ್ತಾನೆ, ಕಬೀರನಾಗುತ್ತಾನೆ, ಕನಕದಾಸನಾಗುತ್ತಾನೆ. ಯೋಗಸಾಧನೆಯಿಂದ, ಸಮಾಧಿ ಸ್ಥಿತಿಯನ್ನು, ತುರೀಯಾವಸ್ತೆಯನ್ನು, ಅಣುರೇಣು ತೃಣ ಕಾಷ್ಟದಲ್ಲಿ ತನ್ನನ್ನೇ ಕಂಡು, ಬ್ರಹ್ಮಾನಂದ ಹೊಂದಿದಾಗ ಬರೆಯುವ ಕವಿತೆಗಳೂ ಜಗತ್ತಿನ ಭೌತಿಕ ಆಯಾಮ ಮೀರಿದ ತತ್ವಗಳನ್ನು, ಅನುಭವಗಳನ್ನು ಹಂಚಿಕೊಳ್ಳುತ್ತವೆ. ಅರಬಿಂದೋ ಅವರ ‘ ಸಾವಿತ್ರಿ’ ಎಂಬ ಮಹಾ ಕಾವ್ಯ ಇದಕ್ಕೆ ಉದಾಹರಣೆ. ಬೇಂದ್ರೆಯವರು ಈ ಕಾವ್ಯದಿಂದ ತುಂಬಾ ಪ್ರಭಾವಿತರಾಗಿದ್ದರಂತೆ. ಬಹುಷಃ ಅದಕ್ಕೇ ಏನೋ, ಬೇಂದ್ರೆಯವರ ಹಲವು ಕವಿತೆಗಳು ತುಂಬಾ ವಿಭಿನ್ನ ನೆಲೆಯಲ್ಲಿ ಅರಳಿವೆ. ಶಿಶುನಾಳ ಶರೀಫರ ಕವಿತೆಗಳೂ ಇಂತಹದೇ ನೆಲೆಯವು.

10 Things To Know About Shishunala Sharifa - The Kabir Of Karnataka -  MetroSaga

ಛಂದಸ್ಸಿನ ಕಟ್ಟುಪಾಡುಗಳಿಂದ ಬಿಡಿಸಿಕೊಂಡ ಇಂದಿನ ಕಾವ್ಯಪ್ರಪಂಚದಲ್ಲಿ ಕವಿಯಾಗುವುದು ಸುಲಭ!. ಕಾವ್ಯ ಚಿತ್ರದ ಕೆಲವು ಕುಂಚಗಳನ್ನು, ಬಣ್ಣಗಳನ್ನು, ಕ್ಯಾನುವಾಸುಗಳ ಪರಿಚಯವನ್ನು ಮಾಡುವ ಪ್ರಯತ್ನ ಮಾಡಿರುವೆ. ತಡ ಯಾಕೆ! ನೀವೂ ಬರೆಯಿರಿ ಕವಿತೆ!

***********************************************************************

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

16 thoughts on “

  1. ಅಲ್ಲಮ, ಕನಕದಾಸರಾಗುವುದೆಂದರೆ…ಈ ಸಾಲುಗಳು ಚಿಂತನೆಗೆ ನೂಕಿದವು. ಕೊನೆಗೆ ನೀವೂ ಕವಿತೆ ಬರೆಯಿರಿ ಅಂತೀರಿ.ಆದರೆ ನನಗೆ ಸುಮ್ಮಗೆ ಹಾಕು ಮೂಳು ಕವಿತೆ ಗೀಚಲೆ ಬಾರದು ಇನ್ನೂ ಮುಂದೆ ಅಂತನ್ನಿಸುತ್ತಿದೆ. ಕವಿಯಾಗುವುದೆಂದರೆ ಸುಲಭವಾ? ನನ್ನೊಳಗೆ ನಾನೇ ಹಣಕಿ ಹಾಕುವಂತೆ ಮಾಡಿದೆ.ಒಳ್ಳೆಯ ಬರಹಕ್ಕಾಗಿ ಅಭಿನಂದನೆ ಮತ್ತು ವಂದನೆಗಳು ಕಾನತ್ತಿಲ ಸರ್.

    1. ಸ್ಮಿತಾ ಅವರೇ, ನೀವು ಬರೆದ ಹಲವು ಕವಿತೆಗಳನ್ನು ನಾನು ಓದಿದ್ದೇನೆ. ನಿಮ್ಮ ಕವಿತೆಗಳು, ಪ್ರಕೃತಿಯ ಮಡಿಲಿನಿಂದ ನ್ಯಾಚುರಲ್ ಆಗಿ ಮೂಡಿ ಬಂದವುಗಳು(ಉದಾಹರಣೆಗೆ, ದಾರಿ ಬದಲಿಸಿದ ನದಿ, ಬಾವಿ ಕಟ್ಟೆ ಇತ್ಯಾದಿ ಕವಿತೆಗಳು). ಹಾಳು ಮೂಳು ಕವಿತೆಗಳಲ್ಲವೇ ಅಲ್ಲ ಅವು. ಒಳಗೆ ಹಣಕಿಹಾಕುವುದು ನಿರಂತರ ಕ್ರಿಯೆ. ನಡೆದಷ್ಟು ನಿಮ್ಮ ಅಭಿವ್ಯಕ್ತಿಗೆ ಆತ್ಮ ದರ್ಶನ ಸಿಗುತ್ತೆ.
      ತುಂಬಾ ಧನ್ಯವಾದಗಳು

  2. ಈ ನಿಮ್ಮ ಬರಹ ಅನೇಕ ಚಿಂತನೆಗಳಿಗೆ ಪ್ರಚೋದನೆ ನೀಡುವಂತಹುದು.ಮುಖ್ಯವಾಗಿ ಕಾವ್ಯೋದ್ಭವವಾಗುವ,ಬರೆಯುವ ರೀತಿ,ಕವಿಗೆ
    ಷ್ಟಿುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುುು
    ನೀವು ಬರೆಯಿರಿಯೆಂದಿರಿ.ನೀವು ಹೇಳಿದ ಹಾಗೆ ಭಾವೋತ್ಕರ್ಷವಾದರೆ ಬರೆಯುವದಕ್ಕಿಂತ ಬರೆಯಲಾರದೆ ಇರುವುದೇ ಕಷ್ಚವೇನೋ.ಕವಿತೆ ಹೆಣೆಯಲು ನೂಲಾಗಬಹುದಾದ ವಸ್ತುಗಳನ್ನು ತೋರಿಸಿದಿರಿ ನಿಜ ,ಆದರೆ ಹೆಣೆಯುವ ಕಲೆ ಇರದಿದ್ದರೆ ಶಬ್ದಗಳು ಯಾವ ಸಂವೇದನೆಯನ್ನೂ ಭಾವನೆಯನ್ನೂ
    ಪ್ರದೀಪ್ತಗೊಳಿಸದೇ ಬರೀ ಶಬ್ದಗಳಾಗಿ ನಿಂತು ಬಿಡುತ್ತವೆಯೇನೋ.
    ನಿಮ್ಮ ಬರಹವನ್ನು ಓದುತ್ತಾ ನಿಮ್ಮ ವಿಚಾರದ ಪರಿಧಿಯ ವಿಸ್ತೀರ್ಣದ ಅರಿವಾಯಿತು.ನೋಡುವೆ ಕವಿತೆ ಬರೆದು.

    1. ಮೀರಾ ಜೋಶಿ ಅವರೇ,
      ತುಂಬಾ ಸರಿಯಾಗಿ ಹೇಳಿದಿರಿ. ಭಾವೋತ್ಕರ್ಷವಾದಾಗ ಬರೆಯುವುದೇ ಸ್ವಾತಂತ್ರ್ಯ ದತ್ತ ಪಯಣ. ಬರೆದಷ್ಟು ಬಿಡುಗಡೆ. ನಿಮಗೂ ಕವಿತೆ ಹೆಣೆಯುವ ಕಲೆ ಸಿದ್ಧಿಸಿದೆ. ಖಂಡಿತಾ ಬೊಗಸೆ ತುಂಬಾ ಕವಿತೆ ಬರೆಯಿರಿ.

      ನಿಮ್ಮ ಪ್ರೋತ್ಸಾಹ ಕ್ಕೆ ಕೃತಜ್ಞ ನಾನು.

  3. ಛಂದಸ್ಸಿನ ಬಂಧನವಿಲ್ಲದ ಮಾತ್ರಕ್ಕೆ ಕವಿಯಾಗುವುದು ಸುಲಭ ಎನ್ನುವುದನ್ನು ಎಷ್ಟು ಸರಿ?. ಯಾವ ಶಿಸ್ತಿನ ಚೌಕಟ್ಟು ಇಲ್ಲದೇ ಸುಂದರ ಕವನ ಬರೆಯುವುದಾಗಲಿ ಓದುಗರ ಮನ ತಟ್ಟುವುದಾಗಲಿ ಇನ್ನೂ ಕಷ್ಟಕರ.
    ಅಷ್ಟಕ್ಕೂ ಕವಿತೆ ರಚಿಸುವುದು ಪ್ರಯತ್ನಪೂರ್ವಕ ಮಾಡುವ ಕ್ರಿಯೆಯೆ?
    ಒಳ್ಳೆಯ ಕವಿತೆ ಬರೆಸಿಕೊಳ್ಳಲ್ಪಡುತ್ತದೆ. “ಇದು ನಾನು ಬರೆದದ್ದು ಹೌದೆ?” ಎಂಬ ವಿಸ್ಮಯ ಮೂಡಿಸುತ್ತದೆ. ಮದುವೆಯಾದ ಹುಡುಗಿಯಂತೆ ತವರನ್ನು ಬಿಟ್ಟು ಹೋಗುತ್ತದೆ. ಓದುಗರ ಮನದಲ್ಲಿ ಮನೆ ಮಾಡಿ ಬೆಳೆಯುತ್ತ ಹೋಗುತ್ತದೆ.
    ಕಾನತ್ತಿಲರೇ, ನೀವು ಕವಿತೆ ಬಗ್ಗೆ ಬರೆಯುವುದಕ್ಕಿಂತ ಕವಿತೆಯನ್ನೇ ಇನ್ನೂ ಚೆನ್ನಾಗಿ ಬರೆಯಬಲ್ಲಿರಿ ಎಂದು ಬಲ್ಲೆ.
    ಶುಭಾಶಯಗಳು

    1. ಅನಾಮಿಕ ಅವರೇ, ಕಾವ್ಯೋದ್ಭವದ ಬಗ್ಗೆ ನೀವು ಬರೆದ ಪ್ರತೀ ಸಾಲುಗಳಿಂದ ಹೊಸತನ ಘಮಘಮಿಸುತ್ತಿದೆ. ಛಂದಸ್ಸಿನ ಬಂಧವಿಲ್ಲದೆ ಎಂದು ನಾನು ಬರೆಯುವಾಗ ನನ್ನ ಮನಸ್ಸಲ್ಲಿ ಇದ್ದದ್ದು, ಕಟ್ಟುಪಾಡುಗಳಿಂದ ಬಿಡುಗಡೆ ಬಯಸುವ ಪ್ರಜ್ಞೆ ಅಷ್ಟೇ. ನಿಮ್ಮ ಅಭಿಪ್ರಾಯ, ತುಂಬಾ ಮುಖ್ಯ.
      ತುಂಬಾ ತುಂಬಾ ಧನ್ಯವಾದಗಳು

  4. .ಮಹದೇವರೇ, ಕವಿತೆ ಉದ್ಭವವಾಗುವ ಅನೇಕ ಪ್ರಕ್ರಿಯೆಗಳನ್ನು ವಿಶದೀಕರಿಸಿದಿರಿ. ಆದರೆ ಹಿರಯರು ಹೇಳಿದ್ದು ” ಕವಿತೆ ಸದ್ಯೋಜಾತ ” ಅಲ್ಲವೇ ! ಭಾವನೆಗಳನ್ನು ಬಂದ ಹಾಗೆ ದಾಖಲಿಸುವುದೇ ಸರಿ. ಏನಂತೀರಿ ?

    1. ರಮೇಶ್ ಬಾಬು ಸರ್
      ನೀವಂದದ್ದು ಒಪ್ಪಿಗೆಯೇ. ಹರಿಯುವ ತೊರೆಗೆ ಸಾವಿರ ದಾರಿಗಳು. ಹಾಗೆಯೇ ಕಾವ್ಯಕ್ಕೂ.
      ನಮಿಪೆ

  5. ಭಗವದ್ಗೀತೆ ಉದ್ಭವಿಸಲು ಕಾರಣ ಅರ್ಜುನನ ವಿಷಾದ .
    ಅದು ಉದ್ಭವಿಸಿದ್ದು ರಣರಂಗದ ಮಧ್ಯದಲ್ಲಿ .
    ಹಿಮಾಲಯದ ಪ್ರಶಾಂತ ಏಕಾಂತ ವಾತಾವರಣದಲ್ಲಿ ಅಲ್ಲ .
    ಬರೆಯುವ ಕೋಣೆಯಲ್ಲಿ ಒಬ್ಬಳೇ ಕುಳಿತರೂ ಕವಿತೆ ಬರೆಯಲಾಗಲಿಲ್ಲ!

    1. ತಾರಾಮತಿ ಅವರೇ, ಸಾಮಾಜಿಕ, ಮಾನಸಿಕ ಸಂಘರ್ಷಗಳು, ಅದ್ಭುತ ಕವಿತೆಗಳ ಸೃಷ್ಟಿಗೆ ಕಾರಣವಾಗುತ್ತೆ ಎಂಬ ನಿಮ್ಮ ಅಭಿಪ್ರಾಯ ಖಂಡಿತಾ ಸರಿ. ಅದಕ್ಕಾಗಿಯೇ, ಎರಡನೇ ಮಹಾಯುದ್ಧದ ಸಮಯದಲ್ಲಿ, ರಷ್ಯಾ ದ ಕ್ರಾಂತಿಯ ಸಮಯದಲ್ಲಿ, ಅಂತಹಾ ಹಲವು ನೋವಿನ, ಸಂಘರ್ಷದ ಸಂಧಿಯಲ್ಲಿ ಅನನ್ಯ ಕವಿತೆಗಳು ಹುಟ್ಟಿವೆ.

      ನಮಿಪೆ

  6. ಛಂದಸ್ಸಿನ ಕಟ್ಟುಪಾಡುಗಳಿಂದ ಬಿಡಿಸಿಕೊಂಡ ಇಂದಿನ ಕಾವ್ಯಪ್ರಪಂಚದಲ್ಲಿ ಕವಿಯಾಗುವುದು ಸುಲಭ!.ಎನ್ನುವ ನಿಮ್ಮ ಹೇಳಿಕೆ ಬಹಳಷ್ಟು ಆಲೋಚನೆ ಯ ಸ್ತರಕ್ಕೆ ಏರಿತು.ಪದ್ಯ ಎಂದರೆ ಗದ್ಯವನ್ನು ತುಂಡರಿಸುವದೇ,ಪದಗಳನ್ನು ಅಕ್ಕ ಪಕ್ಕದಲ್ಲಿ (Juxtaposition)ಇಡುವದೇ,ಲಯತಪ್ಪಿ ಹಾಡುವ ಹಾಡುಗಾರಿಕೆಯೇ, ಸಮಸಂಗತಿ(Symmetry) ಇಲ್ಲದೆ ನಡೆದಾಡುತ್ತ ಮುಗ್ಗರಿಸುವದೇ.ನಿಮ್ಮ ಪ್ರಾರಂಭದ ಮಾತುಗಳಿಗೆ,ಮುಕ್ತಾಯದ ಮಾತುಗಳನ್ನು ನೋಡುವಾಗ ನಾನು ಮೇಲೆ ಹೇಳಿದ ನಿಮ್ಮ ಸಾಲುಗಳು ಯಾವ ಅರ್ಥ ಸುರಿಸುತ್ತವೆ ತಿಳಿಯದ ಜಿಜ್ಞಾಸೆ ಕಾಡುತ್ತಿದೆ.ಮೌನವಾಗಿ ವಿಶ್ಲೇಷಿಸಿಕೊಳ್ಳಬೇಕು.ನಿಮ್ಮ ಅಂಕಣ ನಿಜಕ್ಕೂ ಅದ್ಭುತ,ವೈಚಾರಿಕ.ಅಭಿನಂದನೆಗಳು.

    1. ಕಿಶನ್ ಸರ್,
      ನಿಮ್ಮ ಪಾಂಡಿತ್ಯದ ಮುಂದೆ ನಾನೊಬ್ಬ ಪುಟ್ಟ ಮಗು. ನಿಮ್ಮ ಮಾತುಗಳು ಕವಿತೆ ಬರೆಯುವ ಉತ್ಸಾಹಿಗಳಿಗೆ ಹಾದಿ ಕಂದೀಲು. ಛಂದಸ್ಸಿನ ಕಟ್ಟುಪಾಡುಗಳಿಲ್ಲದಿರುವುದರಿಂದ ಬರೆಯಲು ಸುಲಭ ಅಂತ ನಾನು ಅಂದಿದ್ದು, ಅಭಿವ್ಯಕ್ತಿಗೆ ಏನೋ ಒಂದು ರೀತಿಯ ಸ್ವಾತಂತ್ರ್ಯ ಲಭಿಸಿದಂತಹಾ ಅನುಭವದ ಆಧಾರದ ಮೇಲೆ. ನಡೆಯಲು ಪ್ರಯತ್ನ ಮಾಡುವಾಗ ಬೀಳುವುದು ಇದ್ದದ್ದೇ. ನಾವೆಲ್ಲಾ ಮಗುವಾಗಿದ್ದಾಗ ನಡೆಯಲು ಕಲಿಯುವಾಗ ಎಷ್ಟೊಂದು ಬಾರಿ ಬಿದ್ದು,ಎದ್ದು, ನಡೆಯಲು ಕಲಿತೆವು. ಹಾಗೆಯೇ ಕವಿತೆಯೂ, ಬರೆಯುತ್ತಾ ಹರಿಯುತ್ತಾ ಸಂಭವಿಸುವ ಸಾಧನೆ ಅಂತ ಅನಿಸುತ್ತೆ.

      ನಿಮ್ಮ ವಿಸ್ತಾರವಾದ ಕಣ್ತೆರೆಸುವ ಪ್ರತಿಕ್ರಿಯೆಗೆ ತುಂಬಾ ಕೃತಜ್ಞ ನಾನು.

  7. ಕವಿತೆ ಹೇಗೆಲ್ಲ ಜನ್ಮ ತಾಳಬಲ್ಲದು ಎಂಬುದನ್ನು ಸೊಗಸಾಗಿ ತಿಳಿಸಿದ ಅಧ್ಯಯನಪೂರ್ಣ ಬರಹ. ಬಹಳಷ್ಟು ವಿಷಯಗಳು ತಿಳಿಯಿತು. .ಒಳ್ಳೆಯ ಬರಹಕ್ಕೆ ಅಭಿನಂದನೆಗಳು

    1. ಪೂರ್ಣಿಮಾ ಅವರೇ, ಲೇಖನದ ಮನಃಪ್ರತಿಫಲನದ ಚಿತ್ರ ಕೊಟ್ಟಿರಿ. ತುಂಬಾ ಧನ್ಯವಾದಗಳು

  8. ಕಾನತ್ತಿಲ ಸರ್ ನಿಮ್ಮ ಒಂದೊಂದು ಅಂಕಣವೂ ಒಂದೊಂದು ಸಾಹಿತ್ಯದ ಪಾಠ ಇದ್ದಂತೆ….ನನಗೆ ಬಹಳವೇ ಉಪಯುಕ್ತ…. ಕಾವ್ಯ ಎನ್ನುವುದು ನಮ್ಮೊಳಗೆ ಕಾಡಿ ತಾನಾಗೆ ಬರೆಸಿಕೊಂಡರೇ ಅದರ ಸಾರ್ಥಕತೆ ಪಡೆಯುವುದು ಅಂತ ಒಮ್ಮೊಮ್ಮೆ ಅನಿಸುತ್ತದೆ… ನಿಮ್ಮ ಬರಹ ಓದಿದ ಮೇಲೆ ಕಾವ್ಯ ಕಟ್ಟುವಿಕೆಯ ಬಗೆಗೂ ಹೊಸ ದಾರಿ ತೋರಿದಂತೆನಿಸಿತು… ನಮ್ಮನ್ನು ಕಾಡದೆ ನಾವು ಹೇಗೆ ಅದನ್ನು ಹೊರತರಬಲ್ಲೆವು ಎಂಬ ಜಿಜ್ಞಾಸೆ ಕೂಡ…. ಒಟ್ಟಿನಲ್ಲಿ ಅತ್ಯಂತ ಚೆಂದ ವಿಷಯ ವಿಶ್ಲೇಷಣೆ ನೀಡುವ ನಿಮ್ಮ ಬರಹ ನಮಗೂ ಬರೆಯುವಾಸೆ ಜೀವಂತವಾಗುಳಿಸಿದೆ …. ಬರೆಯುವ ಪ್ರಜ್ಞೆ, ಅಧ್ಯಯನ, ಸೂಕ್ಷ್ಮಗ್ರಹಿಕೆ, ಆತ್ಮವಿಶ್ವಾಸ ಇಟ್ಟು ಕೊಂಡು ಬರೆಯಬಹುದು ಎಂಬ ನಂಬಿಕೆ ನನ್ನದು… ಧನ್ಯವಾದಗಳು ಸರ್ ನಿಮಗೆ

    1. ಮಮತಾ ಶಂಕರ್ ಅವರೇ,

      “ಕಾವ್ಯ ಎನ್ನುವುದು ನಮ್ಮೊಳಗೆ ಕಾಡಿ ತಾನಾಗೆ ಬರೆಸಿಕೊಂಡರೇ ಅದರ ಸಾರ್ಥಕತೆ ಪಡೆಯುವುದು ಅಂತ ಒಮ್ಮೊಮ್ಮೆ ಅನಿಸುತ್ತದೆ…”

      ತುಂಬಾ ಸರಿಯಾಗಿ ಹೇಳಿದಿರಿ. ಸ್ವತಃ ಕವಯಿತ್ರಿಯಾದ ನಿಮ್ಮ ಅನುಭವ ಜನ್ಯ ಮಾತುಗಳಿವು. ನಾನು ನನಗೆ ಹೊಳೆದದ್ದನ್ನು ಬರೆದೆ. ಖಂಡಿತಾ ಅದು ಅಪೂರ್ಣ. ಈ ವಿಷಯದಲ್ಲಿ ಒಂದು ಚಿಂತನೆಯನ್ನು, ಚರ್ಚೆಯನ್ನು ಹುಟ್ಟುಹಾಕುವುದಷ್ಟೇ ಲೇಖನದ ಉದ್ಧೇಶ. ಅದು ಲೇಖನದ ಮಿತಿಯೂ ಹೌದು.
      ನಿಮ್ಮ ಪ್ರತಿಕ್ರಿಯೆ ಈ ಯೋಚನಾಲಹರಿಯನ್ನು ಶ್ರೀಮಂತ ಗೊಳಿಸುತ್ತೆ. ಹಾಗೆ ನಮ್ಮೊಳಗೆ ಲಹರಿಸುವ ಚಿಂತನೆ ಒಂದು ನಿರ್ದಿಷ್ಟ ಪಾಕವಾದಾಗ, ಅರಿವು ತಿಳಿಯಾಗುತ್ತೆ.
      ನಿಮ್ಮ ಪ್ರೀತಿಯ ನುಡಿಗಳಿಗೆ, ಅವು ಕೊಡುವ ಪ್ರೋತ್ಸಾಹಕ್ಕೆ ಯಾವಾಗಲೂ ಋಣಿ ನಾನು.

      ತುಂಬಾ ಧನ್ಯವಾದಗಳು

Leave a Reply

Back To Top