ಅಂಕಣ ಬರಹ

ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….7

ಅಲಗೇರಿಯಲ್ಲಿ ಬೆಂಕಿ

ಮತ್ತು ಮೊಲ

The perfectly timed rabbit-shaped fire picture: | When you see it,  Perfectly timed photos, Funny pictures

            ನಾಗಮ್ಮಜ್ಜಿಯ ಅಂತ್ಯಸಂಸ್ಕಾರ ಅನಿವಾರ್ಯವಾಗಿ ಕಾರವಾರದಲ್ಲಿ ನಡೆದುಹೋಯಿತು. ಕ್ರಿಯಾ ಕರ್ಮಗಳನ್ನು ಪೂರ್ಣಗೊಳಿಸುವವರೆಗೆ ಊರಿಗೆ ಮರಳುವ ಹಾಗೆಯೂ ಇರಲಿಲ್ಲ. ತಾತ್ಕಾಲಿಕವಾಗಿ ನಮ್ಮ ಪರಿವಾರ ಕಾರವಾರ ತಾಲೂಕಿನ ಅರಗಾ ಎಂಬಲ್ಲಿ ಶಾನುಭೋಗಿಕೆಯಲ್ಲಿರುವ ನಾರಾಯಣ ಆಗೇರ ಎಂಬ ಜಾತಿ ಬಂಧುವೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡಬೇಕಾಯಿತು. ಶಾನುಭೋಗರ ಪತ್ನಿ (ಅವಳ ಹೆಸರೂ ನಾಗಮ್ಮ) ನನ್ನ ಯೋಗಕ್ಷೇಮಕ್ಕೆ ನಿಂತಳು. ತಬ್ಬಲಿ ತನದಲ್ಲಿ ನೊಂದು ಹಾಸಿಗೆ ಹಿಡಿದ ಅವ್ವ, ತರಬೇತಿಯ ಜವಾಬ್ದಾರಿಯಲ್ಲಿ ದಿಕ್ಕು ತೋಚದಂತಿದ್ದ ಅಪ್ಪ ಮತ್ತು ಹಸುಳೆಯಾದ ನನಗೆ ಅಂದು ನಾರಾಯಣ ಶಾನುಭೋಗ ದಂಪತಿಗಳು ನೀಡಿದ ಆಶ್ರಯ, ಮಾಡಿದ ಉಪಕಾರಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಅವ್ವ ಈಗಲೂ ನೆನಪಿಸಿಕೊಳ್ಳುತ್ತಾಳೆ. ಆದರೆ ಅವರಿಗೆ ಕೃತಜ್ಞತೆ ಹೇಳಲು ಇಬ್ಬರೂ ಬದುಕಿ ಉಳಿದಿಲ್ಲ ಎಂಬುದು ನಮ್ಮ ದೌರ್ಭಾಗ್ಯ!

            ಮರಳಿ ಮಾಸ್ಕೇರಿಯ ತೌರಿಗೆ ಬಂದು ಸೇರುವಾಗ ಅವ್ವನಿಗೆ ತಾಯಿಯಿಲ್ಲದ ತೌರುಮನೆಯಾಗಿತ್ತು ಅದು. ಹಾಗೆಂದು ಅವ್ವ ನೊಂದುಕೊಂಡಿದ್ದರೂ ಮಾಸ್ಕೇರಿಯ ಜಾತಿ ಬಂಧುಗಳೆಲ್ಲರೂ ತಾಯಿ ತಂದೆಯರ ಹಾಗೆ ಅಕ್ಕರೆ ತೋರಿದರಂತೆ. ಅದರಲ್ಲಿಯೂ ಸಾಕವ್ವ ಎಂಬ ಮುದುಕಿ ಸರಿಯಾದ ಬಾಣಂತನವಿಲ್ಲದೆ ಅವ್ವನ ಮುಖ ಸೊರಗಿದುದನ್ನು ಗ್ರಹಿಸಿ ಎರಡು ತಿಂಗಳು ಕಟ್ಟು ನಿಟ್ಟಿನ ಬಾಣಂತನ ಮಾಡಿದಳಂತೆ. ತನ್ನ ಮನೆಯಿಂದ ಹತ್ತಾರು ಮಾರು ಅಂತರದಲ್ಲಿದ್ದ ನಮ್ಮ ಮನೆಗೆ ಮುಂಜಾನೆ ಸಂಜೆ ತಪ್ಪದೇ ಬರುತ್ತ ಅರಶಿನ ಎಣ್ಣೆ ತಿಕ್ಕಿ, ಅಡಕಲ ತುಂಬ ಬಿಸಿನೀರು ಹೊಯ್ದು, ಧೂಪದ ಹೊಗೆ ಹಾಕಿ ತಾಯಿ ಮಗುವನ್ನು ಉಪಚರಿಸಿದ ಸಾಕವ್ವ ಅವ್ವನಿಗೆ ಹದವಾದ ಕಾಳು ಮೆಣಸಿನ ಚಟ್ನಿಯನ್ನು ಮಾಡಿ ಉಣ್ಣಿಸುತ್ತಿದ್ದಳಂತೆ. ಸಾಕವ್ವನ ಅಂಥ ಕಟ್ಟುನಿಟ್ಟಿನ ಬಾಣಂತನದಿಂದಾಗಿಯೇ ಮುಂದೆ ಮತ್ತೆ ಐದು ಜನ ಮಕ್ಕಳನ್ನು ಹೆತ್ತರೂ ತನ್ನ ದೇಹದ ಚೈತನ್ಯ ಉಡುಗದೆ ಉಳಿಯುವುದು ಸಾಧ್ಯವಾಯಿತು ಅನ್ನುತ್ತಾಳೆ ಅವ್ವ.

            ಬೆಳ್ಳಗೆ ಎತ್ತರದ ನಿಲುವಿನ ಸಾಕವ್ವ’ ಅವ್ವನಿಗೆ ಮಾತ್ರ ಸಾಕವ್ವನಾಗಿರದೆ ಕೇರಿಗೇ ಅಕ್ಕರೆಯ ಅವ್ವನಾಗಿದ್ದಳಂತೆ. ಶುಚಿಯಾಗಿ ಅಡಿಗೆ ಮಾಡುವ ಅವಳು, ಕೇರಿಯಲ್ಲಿ ಯಾರಿಗೇ ಕಾಯಿಲೆಯಾದರೂ ನಾರುಬೇರುಗಳ ಕಷಾಯ ಮಾಡಿ ಕುಡಿಸಿ ಕಾಯಿಲೆಗಳನ್ನು ಗುಣ ಪಡಿಸುತ್ತಿದ್ದಳಂತೆ. ೧೯೬೧-೬೨ ರ ಸುಮಾರಿಗೆ ನಾವೆಲ್ಲ ಬನವಾಸಿಯಲ್ಲಿರುವಾಗ ಊರಲ್ಲಿ ಹಬ್ಬಿದ ಆಮಶಂಕೆ’ ಕಾಯಿಲೆ ನಮ್ಮಕೇರಿಯ ಒಂದಿಷ್ಟು ಪ್ರಾಯದ ಮತ್ತು ಎಳೆಯ ಮಕ್ಕಳನ್ನು ಬಲಿತೆಗೆದುಕೊಂಡಿತ್ತು. ಸಾಕವ್ವಜ್ಜಿ ಕೂಡ ಇದೇ ಕಾಯಿಲೆಯಲ್ಲಿ ಸಾವು ಕಂಡಿದ್ದಳು.

            ಕಾರವಾರದ ಶಿಕ್ಷಕ ತರಬೇತಿಯ ಬಳಿಕ ಕೆಲವು ವರ್ಷಗಳಲ್ಲಿ ಅಪ್ಪನಿಗೆ ಅಂಕೋಲಾ ತಾಲೂಕಿನ ಅಲಗೇರಿ’ ಎಂಬ ಹಳ್ಳಿಯ ಸರಕಾರಿ ಶಾಲೆಗೆ ವರ್ಗವಾಯಿತು. ನನಗೆ ಮೂರೋ ನಾಲ್ಕೋ ವರ್ಷ ತುಂಬಿರಬಹುದು. ಆಗಿನ್ನೂ ಬಾಲವಾಡಿ, ಅಂಗನವಾಡಿ ಇತ್ಯಾದಿ ವ್ಯವಸ್ಥೆ ಇರಲಿಲ್ಲ. ನಾನು ಮನೆಯಲ್ಲೇ ಆಡಿಕೊಂಡಿದ್ದೆ. ನಮಗೆ ನಮ್ಮ ಜಾತಿಯ ಜನರ ಕೇರಿಯಲ್ಲೇ ವಾಸ್ತವ್ಯಕ್ಕೆ ಒಂದು ಚಿಕ್ಕ ಹುಲ್ಲಿನ ಮನೆ ವ್ಯವಸ್ಥೆಯಾಗಿತ್ತು. ಅಪ್ಪ ಅದಾಗಲೇ ಹಳ್ಳಿಯ ಜನರ ಯಕ್ಷಗಾನ ಬಯಲಾಟಗಳಿಗೆ ಅರ್ಥಬರೆದುಕೊಡುವುದೂ, ಕುಣಿತ ಕಲಿಸುವುದೂ ಇತ್ಯಾದಿ ಮಾಡುತ್ತಿದ್ದ. ಇದರಿಂದ ಇತರ ಸಮಾಜದ ಜನರು ಅಪ್ಪನನ್ನು ವಿಶೇಷ ಗೌರವದಿಂದ ಕಾಣುತ್ತಿದ್ದರು. ಸಮಯಕ್ಕೊದಗಿ ಸಹಾಯವನ್ನು ಮಾಡುತ್ತಿದ್ದರು. ಹೆಚ್ಚಾಗಿ ಅಲ್ಲಿನ ಹಾಲಕ್ಕಿಗಳು ಮನೆಯವರೆಗೂ ಬಂದು ಹೆಚ್ಚಿನ ಪ್ರೀತಿ, ವಿಶ್ವಾಸ ತೋರಿಸುತ್ತಿದ್ದರು. ತಾವು ಬೆಳೆದ ತರಕಾರಿಗಳನ್ನು ಪುಕ್ಕಟೆಯಾಗಿ ತಂದು ಕೊಡುತ್ತಿದ್ದರು. ಒಬ್ಬ ಹಾಲಕ್ಕಿ ಗೌಡನಂತೂ ಒಂದು ಮೊಲವನ್ನು ಜೀವಂತ ಹಿಡಿದು ತಂದು ಅಪ್ಪನಿಗೆ ಕಾಣಿಕೆಯಾಗಿ ಒಪ್ಪಿಸಿದ್ದ. ಅಪ್ಪ ಅದಕ್ಕೊಂದು ಪಂಜರ ಮಾಡಿ ಸೊಪ್ಪು ಸದೆ ತಿನ್ನಿಸಿ ಅಕ್ಕರೆ ತೋರುತ್ತಿದ್ದರೆ, ನನಗೋ ಅದು ಜೀವಂತ ಆಟಿಗೆಯ ವಸ್ತುವಾಗಿತ್ತು. ಒಂದೆರಡು ತಿಂಗಳಲ್ಲೇ ನಮಗೆ ಹೊಂದಿಕೊಂಡ ಮೊಲ ಪಂಜರದ ಹೊರಗೂ ಅಷ್ಟೇ ನಿರಾಳವಾಗಿ ಓಡಾಡತೊಡಗಿತು. ಅಪ್ಪ ಶಾಲೆಗೆ ಹೊರಟರೆ ಹತ್ತು ಹೆಜ್ಜೆಯಾದರೂ ಅವನೊಟ್ಟಿಗೆ ಕುಪ್ಪಳಿಸಿ ನಡೆದು ಮತ್ತೆ ಆಚೀಚೆ ಬೆಕ್ಕು ನಾಯಿಗಳ ಸದ್ದು ಕೇಳಿದರೆ ಮರಳಿ ಬಂದು ಗೂಡು ಸೇರುತ್ತಿತ್ತು.

            ಯಾವ ಊರಿನಲ್ಲಾದರೂ ಸಜ್ಜನರ ನಡುವೆಯೇ ಒಂದಿಬ್ಬರಾದರೂ ನಯವಂಚಕ ಜನ ಇದ್ದೇ ಇರುತ್ತಾರೆ ಎಂಬ ಸರಳ ಸತ್ಯದ ಅರಿವು ನಮ್ಮ ಮುಗ್ಧ ತಾಯಿ ತಂದೆಯರ ಗಮನಕ್ಕೆ ಬರಲೇ ಇಲ್ಲ. ಮೊಲವನ್ನು ಕಾಣಿಕೆ ನೀಡಿದ ಅದೇ ಜಾತಿಯ ಮನುಷ್ಯನೊಬ್ಬ ಮೆತ್ತಗಿನ ಮಾತನಾಡಿ, “ಮೊಲಕ್ಕೆ ಹುಲ್ಲು ಮೇಯಿಸಿ ತರುವೆ” ಎಂದು ಸುಳ್ಳು ಹೇಳಿ ಕೊಂಡೊಯ್ದವನು ಅದನ್ನು ಕೊಂದು ತಿಂದು ವಂಚನೆ ಮಾಡಿದ. ಅಪ್ಪ-ಅವ್ವ ಮತ್ತು ನಾನು ಮೊಲದ ಸಾವಿಗಾಗಿ ಮರುಗುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವಂತಿರಲಿಲ್ಲ.

            ಅಲಗೇರಿಯಲ್ಲಿ ನನ್ನನ್ನು ಆಡಿಸುವುದಕ್ಕೂ ಆಯಿತು ತಾನು ಶಾಲೆ ಕಲಿಯುವುದಕ್ಕೂ ಆಯಿತು ಎಂಬ ಉದ್ದೇಶದಿಂದ ಅವ್ವನ ಚಿಕ್ಕಪ್ಪನ ಮಗ (ನನ್ನ ಸೋದರ ಮಾವ) ರಾಮ ಎಂಬ ಹುಡುಗ ಬಂದು ನಮ್ಮ ಜೊತೆಗೆ ಉಳಿದುಕೊಂಡಿದ್ದ. ಅಗ್ಗರಗೋಣದ ನಮ್ಮ ಸೋದರತ್ತೆಯ (ನಮ್ಮ ತಂದೆಯವರ ಅಕ್ಕ) ಮಗ ನಾರಾಯಣ ಎಂಬುವವನೂ ಕೆಲವು ದಿನ ನಮ್ಮೊಡನೆಯೇ ಇದ್ದ. ಇಬ್ಬರೂ ನನ್ನನ್ನು ಮುದ್ದು ಮಾಡುತ್ತ, ಹಟ ಮಾಡಿದರೆ ಬಡಿದು ತಿದ್ದುತ್ತ ಅಕ್ಕರೆಯಿಂದ ಆಟವಾಡಿಸುತ್ತಿದ್ದರು. ನಮಗೆ ಇಂಥಹುದೇ ಆಟಿಗೆ ವಸ್ತು ಎಂಬುದೇನೂ ಇರಲಿಲ್ಲ. ಮುರಿದ ತೆಂಗಿನ ಹೆಡೆ, ಗರಟೆ ಚಿಪ್ಪು, ಬಿದಿರಿನ ಕೋಲು, ಹುಲ್ಲಿನ ಬಣವೆ ಇತ್ಯಾದಿ ನಿಸರ್ಗ ಸಹಜ ವಸ್ತುಗಳೇ ನಮಗೆ ಆಟಿಕೆಯಾಗಿದ್ದವು.

            ಒಂದು ಮುಸ್ಸಂಜೆಯ ಹೊತ್ತು. ಅವ್ವ ಮೀನು ಕೊಯ್ಯುತ್ತಾ ಅಂಗಳದ ಆಚೆ ಕುಳಿತಿದ್ದಳು. ಬದಿಯ ಮನೆಯವಳು ಕತ್ತಲಾಯಿತೆಂದು ನಮ್ಮ ಮನೆಯ ದೀಪದ ಬುರುಡಿಯನ್ನು ತನ್ನ ಮನಗೊಯ್ದು ಎಣ್ಣೆ ಹಾಕಿ ಹೊತ್ತಿಸಿ ತಂದ…

**************************************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Leave a Reply

Back To Top