ಗೊಲ್ಲರ ರಾಮವ್ವ

ಅನುವಾದಿತ ಕಥೆ

ಗೊಲ್ಲರ ರಾಮವ್ವ(ಭಾಗ- ಒಂದು)

ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ

ಕಥೆಯ ಕನ್ನಡಾನುವಾದ


ಪಿ.ವಿ.ನರಸಿಂಹರಾವ್

Prime Ministers of India - P. V. Narasimha Rao

ತಮ್ಮ ಮಾತೃಭಾಷೆಯಾದ ತೆಲುಗಿನಲ್ಲೇ ಅಲ್ಲದೇ ಹಿಂದಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ತೆಲುಗಿನಲ್ಲಿ ಜ್ಞಾನ ಪೀಠ ಪ್ರಶಸ್ತಿ‌ ಪಡೆದ ವಿಶ್ವನಾಥ ಸತ್ಯನಾರಾಯಣ ಅವರ
ವೇಯಿ ಪಡಗಲು (ಸಾವಿರ ಹೆಡೆ) ಕಾದಂಬರಿಯನ್ನು ಹಿಂದಿಗೆ “ಸಹಸ್ರ ಫಣ್” ಎಂಬ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಮತ್ತೆ ಮರಾಠಿಯ ಹರಿನಾರಾಯಣ ಆಪ್ಟೆಯವರ ” ಪಣ್ ಲಕ್ಷ್ಯತ್ ಕೋಣ್ ಘೇತೊ ಕಾದಂಬರಿಯನ್ನು ತೆಲುಗಿಗೆ ತಂದಿದ್ದಾರೆ. ಒಟ್ಟು ೧೭ ಭಾಷೆ ಬಲ್ಲವರಾಗಿದ್ದರು.

ಕನ್ನಡಕ್ಕೆ:

ರಮೇಶ್ ಬಾಬು ಚಂದಕ ಚರ್ಲ

ಢಾಂ…..ಢಾಂ…..ಢಾಂ…!

ಬಾಂಬುಗಳ ಸ್ಫೋಟದಿಂದ ಅರ್ಧ ರಾತ್ರಿಯ ಪ್ರಶಾಂತ ವಾತಾವರಣ ಕದಡಿತು. ಎಲ್ಲೆಡೆ ತುಂಬಿನಿಂತ ನೀರವತೆಯನ್ನು ಆ ಧ್ವನಿ ತರಂಗಗಳು ಒಂದು ವಿಚಿತ್ರ ಸಂಚಲನವನ್ನೆಬ್ಬಿಸಿ ಶೂನ್ಯದಲ್ಲಿ ವಿಲೀನ ಮಾಡಿದವು. ಗಾಢ ನಿದ್ರೆಯಲ್ಲಿದ್ದ ಗ್ರಾಮವೆಲ್ಲಾ ಒಮ್ಮೆಲೇ ತತ್ತರಿಸಿ ಹೋಯಿತು. ಮಕ್ಕಳಾದಿಯಾಗಿ ಎಲ್ಲಾರೂ ಗೋಳಿಟ್ಟರು. ನಿದ್ದೆಯ ಮಂಪರಿನಲ್ಲಿ ಏನು ನಡೆಯುತ್ತಿದೆಯೋ ಯಾರಿಗೂ ತಿಳಿಯುತ್ತಿಲ್ಲ. ಏನೋ ನೋವು… ಏನೋ ಕಳವಳ… ಏನೋ ಹೆದರಿಕೆ. ಆದರೂ ಎಲ್ಲಾ ಅಗಮ್ಯಗೋಚರ. ಊರಿನವರಿಗೆಲ್ಲಾ ಯಾವುದಾದರೂ ದುಃಸ್ವಪ್ನ ಬಿದ್ದು ಎಲ್ಲರೂ ಒಟ್ಟಿಗೆ ಎದ್ದು ಕೂತಿದ್ದಾರಾ ಎನ್ನುವಷ್ಟು ಗಲಿಬಿಲಿ ಯಾಗಿತ್ತು ಆ ಎರಡು ನಿಮಿಷಗಳಲ್ಲಿ….

ಇಷ್ಟು ಗೊಂದಲ ವಾದರೂ ಬಜಾರು ಮಾತ್ರ ನಿರ್ಮಾನುಷ್ಯ ವಾಗೇ ಇತ್ತು. ಬಾಗಿಲು ತೆಗೆದು ಹೊರಗೆ ನೋಡಬೇಕೆನ್ನುವವರ ಕೈಗಳು ಸಹಿತ ಚಿಲಕ ಗಳ ಮೇಲೆ ಹೋಗುತ್ತಿದ್ದ ಹಾಗೇ ಜಡವಾಗಿದ್ದವು. ಬೇಜಾರಿನಿಂದ ಆಚೆ ಈಚೆ ಹಾರುವ ಹಕ್ಕಿಗುಂಪು, ಅವುಗಳ ರೆಕ್ಕೆಗಳ ಪಟಪಟ ಸದ್ದು, ಊರಿನ ಎಲ್ಲ ಹಿತ್ತಲುಗಳಿಂದ ಕೇಳಿಬರುತ್ತಿದ್ದ ನಾಯಿಗಳ ಬೊಗಳಿಕೆ, ದೊಡ್ಡಿಗಳಲ್ಲಿ ಮೆಲಕು ಹಾಕುತ್ತಿದ್ದ ದನಕರುಗಳ ಸಪ್ಪಳ. ಅಲ್ಲಲ್ಲಿ ಬೇಲಿಗಳನ್ನೆಲ್ಲ ತುಳಿದು ಓಡುತ್ತಿದ್ದ ಕೋಣಗಳ ಗೊರಸುಗಳ ಘರ್ಷಣೆ- ಇವುಮಾತ್ರ ನಂತರ ಕೇಳಿಬಂದವು.  ಸದ್ದು ಕೇಳಿದ ತಕ್ಷಣ ಗೋಳಿಟ್ಟ ಗ್ರಾಮಸ್ಥರಾರೂ ಅದೇನೋ ದಿವ್ಯ ಜ್ಞಾನ ಬೋಧಿತರ ತರ ಕಿಮ್ಮೆನ್ನಲಿಲ್ಲ.

ಕಿಮ್ಮೆನಲಿಲ್ಲ ನಿಜ. ಆದರೇ ಹಸುಗೂಸುಗಳೂ ಸೇರಿ ಅಲ್ಲಿ ಯಾರೂ ನಿದ್ರೆ ಮಾಡಲಿಲ್ಲ. ಏನೋ ಗುಸು ಗುಸು .. ಏನೋ ಸಂಜ್ಞೆಗಳು.. ಏನೋ ಅಸಹಾಯಕ ನೋಟ… ಏನೋ ಕೇಳಿಸದಂಥ ಹರಕೆಗಳು. ತಾಯಿಗಳು ಮಕ್ಕಳಿಗೆ “ಶ್ರೀರಾಮರಕ್ಷ” ಎನ್ನುತ್ತ ದೃಷ್ಟಿ ತೆಗೆದರು. ಮಕ್ಕಳ ಹೆದರಿಕೆ ಹೋಗಲಾಡಿಸಲು ಅವರ ಅಂಗಾಲಿನ ಧೂಳು ತೆಗೆದು ಅವರ ಹಣೆಗೆ ಹಚ್ಚಿದರು. ಬೆನ್ನು ನೇವರಿಸಿದರು. ಆದರೇ ಮಕ್ಕಳ ಹೆದರಿಕೆಗೆ ಉಪಾಯ ಹೇಳುವ ತಾಯಂದರಿಗೆ ತಮ್ಮ ಹೆದರಿಕೆ ಹೋಗಲಾಡಿಸುವ ಉಪಾಯವೇ ಗೊತ್ತಾಗಲಿಲ್ಲ. ಹಣೆಗೆ ಬೊಟ್ಟಿಡುತ್ತಿದ್ದ ಕೈಗಳ ಬಳೆಗಳು ಗಲಗಲ ಎನ್ನುತ್ತಲೇ ಇದ್ದವು. ಕಾಲಿನ ಪಟ್ಟಿಗಳು ಕೂಡ ಕೊಂಚ ಝೇಂಕರಿಸುತ್ತಲೇ ಇದ್ದವು.

ಅದೊಂದು ವಿಚಿತ್ರ ಪ್ರಳಯ…ಅದೊಂದು ಕ್ಷಣಿಕ ಮೃತ್ಯು ತಾಂಡವ…..

ಅದೊಂದು ಅಸ್ಥಿರೊತ್ಪಾತ…..

ಒಂದು ಗಂಟೆ ಕಳೆಯಿತು.  ಎಂದಿನಹಾಗೇ ಸುತ್ತೂ ಅಂಧಕಾರ ಆವರಿಸಿತು. ಚಿಮ್ಮಂಡಿ ಹುಳಗಳು ಏಕಶೃತಿಯಲ್ಲಿ ಹಾಡುತ್ತಿವೆ. ಎಲ್ಲಾ ಎಂದಿನ ಹಾಗೇನೇ ! ಆದರೇ ನಿದ್ರೆ ಮಾತ್ರ ಊರಿನ ಹತ್ತಿರ ಸುಳಿದಿರಲಿಲ್ಲ.

ಗೊಲ್ಲರ ರಾಮವ್ವ ತನ್ನ ಗುಡಿಸಲಲ್ಲಿ ಕತ್ತಲಲ್ಲೇ ಕುಳಿತಿದ್ದಾಳೆ. ಅವಳ ಕೈಕಾಲುಗಳು ನಡುಗುತ್ತಿವೆ. ಸ್ವಲ್ಪ ಅವಳ ವಯಸ್ಸಿನಿಂದ, ಮತ್ತೆ ಸಲ್ಪ ಭಯದಿಂದ. ಅವಳ ಮಡಿಲಲ್ಲಿ ಒಬ್ಬ ಹದಿನೈದು ವರ್ಷದ ಹುಡುಗಿ ಹುದುಗಿಕೊಂಡು ಮಲಗಿದ್ದಾಳೆ.

“ಅವ್ವಾ! ಈಗ ಇದೇನ್ ಸಪ್ಪಳಾನೇ ?” ಮೆತ್ತಗೆ ಕೇಳಿತು ಆ ಹುಡುಗಿ.

“ನಿನ್ಗ್ಯಾಕೇ ಮೊದ್ದುಮುಂಡೇ !ಇದೇನು ? ಅದೇನು?… ಬರೀಕೇಳೋದೇ ….ಏನೋ ಮುಳುಗಿಹೋದ ಹಾಗೆ ಎಲ್ಲಾ ನಿನಗೇ ಬೇಕು “

ಆ ಹುಡುಗಿ ಮತ್ತೆ ಮಾತಾಡುವ ಸಾಹಸ ಮಾಡಲಿಲ್ಲ. ಮತ್ತೆ ಕೆಲ  ನಿಮಿಷದ ನಂತರ ಮುದುಕಿ ತನ್ನಲ್ಲಿ ತಾನೇ ಗೊಣಗಲು ಶುರುಮಾಡಿದಳು. ” ಏನಂದ್ಕೊಂಡಿಯೇ ತಾಯೀ ! ಹಾಳು ಕಾಲ ಬಂತು. ನೀವೆಲ್ಲ ಹೇಗೆ ಬದುಕ್ತೀರೋ ಏನೋ? ಈ ತುರುಕರ ಜತೆ ಒಳ್ಳೆ ಸಾವು ಬಂತು… ಮೊನ್ನೆ ನಾಲ್ಕು ಮಂದಿನ್ನ ಗುಂಡು ಹೊಡೆದು ಕೊಂದ್ರು. ಮತ್ತೆ ಇವತ್ತು ಕೂಡ ಅಂಥದೆ ಅಘಾಯಿತ್ಯ ಮಾಡ್ಯಾರೋ ಏನೋ ! ಅದೇನ್ ಹೋಗೋ ಕಾಲಾನೋ ಇವರಿಗೆ”

ಮತ್ತೆ ನಿಶ್ಶಬ್ದ. ರಾಮವ್ವ, ಮಲ್ಲಮ್ಮ ಇಬ್ಬರೂ ತಮ್ಮ ತಮ್ಮ ಆಲೋಚನೆಗಳಲ್ಲಿ ಮುಳುಗಿಹೋದರು. ನಿದ್ರೆಗೆ ಮಾತ್ರ ಬಹಿಷ್ಕಾರ ಹಾಕಿಯಾಗಿತ್ತು. ಎಪ್ಪತ್ತು ದಾಟಿದ ರಾಮವ್ವನಿಗೂ ಜಾಗರೆಣೆನೇ. ಹದಿನೈದು ವಯಸ್ಸಿನ ಮಲ್ಲಮ್ಮನಿಗೂ ಜಾಗರಣೆನೇ.

ಅಷ್ಟರಲ್ಲಿ ಕಿಟಿಕೀಯನ್ನ ಯಾರೋ ತಟ್ಟಿದರು. ಕಿಟಿಕಿ ಅಂದರೇ ಅದರದೆಷ್ಟು ತ್ರಾಣ ? ಬೆಳಕಿನ ಸಲುವಾಗಿ ಗೋಡೆಯಲ್ಲಿ ಕೊರೆದ ಒಂದು ತೂತಷ್ಟೇ. ಅದಕ್ಕೆ ಗೆದ್ದಲು ಹತ್ತಿದ ಯಾವುದೋ ಕಟ್ಟಿಗೆಯಲ್ಲಿ ಮಾಡಿದ ಎರಡು ಚಿಕ್ಕ ಬಾಗಿಲು. ಅದೇ ಆ ಗುಡಿಸಲಿಗೆ ಕಿಟಿಕಿ.

ಆ ಸದ್ದಿಗೆ ಇಬ್ಬರೂ ಬೆಚ್ಚಿಬಿದ್ದು ಕುಳಿತರು. ಕೂತಲ್ಲಿಯೇ ಶ್ವಾಸ ಬಿಗಿಹಿಡಿದು ಜಾಗ್ರತೆಯಾಗಿ ಕೇಳತೊಡಗಿದರು. ಕಿಟಿಕಿ ಬಾಗಿಲು ಗಾಳಿಗೆ ಹೊಡೆದುಕೊಂಡವೋ ಅಥವಾ ಯಾವ ಬೆಕ್ಕೇನಾದರೂ ಅದನ್ನ ಸರಿಸಿತೋ ಅಂತ !

ಮತ್ತೆ ಅದೇ ಸದ್ದು. ಈಸಲ ಸಂಶಯವೆನಿಸಲಿಲ್ಲ. ಯಾರೋ ಕಿಟಿಕಿ ಬಾಗಿಲು ಹೊಡೆಯುತ್ತಿರುವುದು ನಿಜ. ಅದು ಗಾಳಿ ಅಲ್ಲ. ಬೆಕ್ಕಂತೂ ಅಲ್ಲವೇ ಅಲ್ಲ.

ಏನು ಮಾಡೋದು? ಒಂದೂ ತೋಚಲಿಲ್ಲ.

ಮತ್ತೆ ಸದ್ದು ಕೇಳಿಸಿತು.ಈ ಸಲ ದೊಡ್ಡದಾಗೇ ಕೇಳಿಸಿತು. ಯಾವುದೋ ಸ್ಥಿರ ಸಂಕಲ್ಪದೊಂದಿಗೆ ತಟ್ಟಿದಹಾಗೆ.

ಇನ್ನು ಲಾಭವಿಲ್ಲ. ಮುದುಕಿ ನಿದಾನವಾಗಿ ಏಳತೊಡಗಿದಳು. ಮಲ್ಲಮ್ಮನಿಗೆ ಎದೆ ಹೊಡೆತ ಜೋರಾಯಿತು. ಅವ್ವನನ್ನು ಹಿಡಿದುಕೊಂಡು ಕಂಪಿಸುವ ದನಿಯಲ್ಲಿ “ನಂಗೆ ಭಯವಾಗ್ತಿದೆ ಅವ್ವಾ ” ಅಂತ ಮಾತ್ರ ಅಂದಳು. “ಹಾಗೇ ಇರು. ಅದೇನೋ ನೋಡೋಣ.” ಮುದುಕಮ್ಮ ದೃಢ ನಿಶ್ಚಯದಿಂದ ಎದ್ದಳು. ಅಭ್ಯಾಸ ಬಲದಿಂದ ಕತ್ತಲಲ್ಲೇ ಕಿಟಿಕಿ ಹತ್ತಿರ ಸೇರಿದಳು. ಒಳಗಿನ ಚಿಲಕ ತೆಗೆಯುತ್ತಾ ” ಯಾರು” ಅಂದಳು. ಅವಳ ಆ ಪ್ರಶ್ನೆ ಮುಗಿಯುತ್ತಿದ್ದ ಹಾಗೇ ಅವಳ ಬಾಯಿ ಮುಚ್ಚಲ್ಪಟ್ಟಿತು. ತಕ್ಷಣ ಒಬ್ಬ ವ್ಯಕ್ತಿ ಆ ಇಕ್ಕಟ್ಟಾದ ಸಂದಿನಿಂದ ಅತಿ ಕಷ್ಟದಲ್ಲಿ ನುಸುಳಿ ಬಂದ. ಅವನ ಕಾಲು ನೆಲಕ್ಕೆ ತಾಗುತ್ತಿರುವ ಹಾಗೇ ಒಳಗಿನ ಚಿಲಕವನ್ನು ಹಾಕಿದ. ಮುದುಕಮ್ಮ ಹಾಗೇ ನಿಂತಿದ್ದಳು. ಇನ್ನೊಂದು ಕಡೆ ಮಲ್ಲಮ್ಮ ಕಣ್ಣು ಮುಚ್ಚಿ ಕತ್ತಿಯ ಇರಿತಕ್ಕಾಗಿ ಕಾಯುತ್ತಿರುವ ಹಾಗೆ ಬಿದ್ದಿದ್ದಳು. ಕತ್ತಲಲ್ಲಿ ಏನೋ ಕಾಣ್ತಾಇಲ್ಲ. ಮುದುಕಮ್ಮನಿಗೆ ಮಾತ್ರ ಸಂಶಯವೇ ಇರಲಿಲ್ಲ. ಗತಾನುಭವವೇ ಎಲ್ಲಾ ಹೇಳ್ತಾ ಇತ್ತು. ಪೋಲೀಸರವನೋ ಅಥವಾ ರಜಾಕಾರ್ ತುರುಕುವರವನೋ ಮನೆಯೊಳಗೆ ಬಂದಿದ್ದಾನೆ. ಇನ್ನೇನಿದೆ ? ತನಗೆ ಸಾವು ತಪ್ಪುವುದಿಲ್ಲ. ಮುದ್ದಾಗಿ ಬೆಳೆಸಿದ ಮೊಮ್ಮಗಳಿಗೆ ಮಾನ ಭಂಗ ತಪ್ಪುವುದಿಲ್ಲ. ಈ ರಾಕ್ಷಸರನ್ನು ಯಾರು ಎದುರಿಸುತ್ತಾರೆ….? ತಾನು ಗದ್ದಲ ಮಾಡಿದರೇ ಪಕ್ಕದ ಮನೆಯವರು ಕೇಳಿಸ್ಕೋತಾರಾ ? ಇಲ್ಲ. ಅದೆಲ್ಲ ಕನಸಿನ ಮಾತು. ಅವರವು ಮಾತ್ರ ಪ್ರಾಣಗಳಲ್ಲಾ ? ಅವರ ಮನೆಯಲ್ಲಿ ಮಾತ್ರ ಹರೆಯದ ಹುಡುಗಿಯರಿಲ್ಲಾ ? ಆವತ್ತು ಶಾನುಭೋಗರ ಮಗಳ್ನ ಬಲಾತ್ಕಾರದಿಂದ ಹೊತ್ಕೊಂಡು ಹೋದಾಗ ಯಾರಿಗೇನು ಮಾಡಲಾಗಿತ್ತು? ಯಾರಡ್ಡ ಬರಲಿಕ್ಕಾಯಿತು? ಈಗ ತನಗೆ ಮಾತ್ರ ಯಾರು ದಿಕ್ಕಾಗ್ತಾರೆ …?

ಒಂದು ನಿಮಿಷದಲ್ಲಿ ಮುದುಕಮ್ಮ ಇಷ್ಟೆಲ್ಲಾ ಆಲೋಚಿಸಿದಳು. ಇನ್ನು ನಡೆಯೋದು ಅವಳಿಗೆ ಸ್ಪಷ್ಟವಾಗಿ ಕನ್ನಡಿಯಲ್ಲಿಯ ತರ ಕಾಣಿಸಲಾರಂಭಿಸಿತು.

ತಾನು ಸತ್ತರೂ ಸರಿಯೇ… ತಂದೆ ತಾಯಿ ಇಲ್ಲದ ಈ ಮಲ್ಲಿಗಾದ್ರೂ ಮಾನಭಂಗ ತಪ್ಪಿದ್ರೇ… ತಾನು ಇಷ್ಟು ದಿನ ಸಾಕಿ ಸಲಹಿದ್ದು ಈ ರಾಕ್ಷಸನ ಕೈಗೆ ಕೊಡಲಿಕ್ಕಾ ? ಮುದುಕುಮ್ಮ ಕಣ್ಣೀರು ಹಾಕುತ್ತಾ ಕೊರಡಿನ ತರ ನಿಂತಳು. ವೃದ್ಧಾಪ್ಯದ ನಡುಗು ಸಹ ತಾನಾಗಿಯೇ ನಿಂತುಹೋಯಿತು.

ಮುದುಕಮ್ಮನಿಗೂ, ಆ ವ್ಯಕ್ತಿಗೂ ಸುಮಾರು ಎರಡು ಗಜ ದೂರವಿತ್ತು. ಹೀಗೆ ಆಲೋಚಿಸುತ್ತಿರುವಾಗಲೇ ಆತ ಅವಳ ಕಡೆಗೆ ಎರಡು ಹೆಜ್ಜೆ ಹಾಕಿದ. ಕತ್ತಲಲ್ಲೂ ನೇರವಾಗಿ ಸಮೀಪಿಸುತ್ತಿದ್ದಾನೆ.

ಅವಳಿಗೆ ಆಕಾಶವೇ ಮೇಲೆ ಬಿದ್ದಂತಾಯಿತು. ಇನ್ನೊಂದು ಹೆಜ್ಜೆಯಲ್ಲಿ ತನ್ನ ಬದುಕು ಕೊನೆಗಾಣುತ್ತದೆ. ಮತ್ತೆ ಮಲ್ಲಿ….!

ಅತಿ ಕಷ್ಟದಲ್ಲಿ ಮುದುಕಮ್ಮ “ಅಯ್ಯಾ ” ಎನ್ನುವವಳಿದ್ದಳು.

ಆದರೇ ಮತ್ತೆ ಅವಳ ಬಾಯಿ ಮುಚ್ಚಲ್ಪಟ್ಟಿತು. ಆ ಕ್ಷಣದಲ್ಲಿ ತನಗೆ ಗೊತ್ತಿದ್ದ ದೇವರನ್ನೆಲ್ಲಾ ನೆನೆದಳು. ತನ್ನ ಮೊಮ್ಮಗಳ ಸಲುವಾಗಿ.

ಅಷ್ಟರಲ್ಲಿ ಆ ವ್ಯಕ್ತಿಯ ಗುಸುಗುಸು ಕೇಳಿಬಂತು ಮುದುಕಮ್ಮನ ಕಿವಿಯಲ್ಲಿ ” ಸದ್ದು ಮಾಡಬೇಡ. ನಾನು ಕಳ್ಳನಲ್ಲ. ರಜಾಕಾರನಲ್ಲ. ಪೋಲೀಸರವನೂ ಅಲ್ಲ. ನಿಮ್ಮನ್ನೇನೂ ಮಾಡಲ್ಲ. ಸದ್ದು ಮಾತ್ರ ಮಾಡಬೇಡ. “

“ಅಬ್ಬಾ ! ಏನೂ ಮೋಸ ಇವರದು ! ನಂಬಿಸಿ ಕುತ್ತಿಗೆ ಕೊಯ್ಯಲು ನೋಡುತ್ತಿದ್ದಾನೆ ಇವನು. ಸವಿ ಮಾತಿನಲ್ಲಿ ಮುದಗೊಳಿಸಿ ಮಲ್ಲೀನ್ನ….

ಅಬ್ಬ ! ಯಾವುದಕ್ಕೂ ಹೇಸುವುದಿಲ್ಲ ಈ ರಾಕ್ಷಸರು. ಮೊದಲು ಸಿಹಿ ಮಾತು. ಅದಾಗದಾದರೇ ಬೇರೇ ಉಪಾಯ. ಅದೇ ವರಸೆ ಅಲ್ಲಾ… “

ಯಾವುದಾದರಾಗಲೀ ಅಂತ ಮುದುಕಮ್ಮ ಅವನ ಎರಡೂ ಕಾಲು ಹುಡುಕಿದಳು. ದೀನವಾಗಿ ಬೇಡಿಕೊಂಡಳು.  ” ನಿನ್ನ ಗುಲಾಮಳು ನಾನು. ನಿನ್ನ ಮೆಟ್ಟು ಹೊರ್ತೀನಿ. ನನ್ ತಲೆ ಬೇಕಾದ್ರೇ ತೊಗೋ. ಹುಡುಗೀನ್ನ ಮಾತ್ರ ಮುಟ್ಟಬೇಡ. ನಿನ್ನ ತಂಗಿ ಅಂತ ತಿಳ್ಕೋ. ನಿನ್ ಕಾಲಿಗೆ ಬೀಳ್ತೀನಿ “

“ಇಲ್ಲವ್ವಾ ! ನಾನು ಹೇಳ್ತಿದ್ರೆ ನಂಬ್ತಾ ಇಲ್ಲ ಯಾಕೆ ? ನಾನು ನೀನು ಹೇಳಿದ ಯಾವ ದುಷ್ಟನೂ ಅಲ್ಲ. ನಿನ್ನ ಹಾಗೇ ತೆಲುಗಿನವನು.

ಹೌದು. ಶುದ್ಧ ತೆಲುಗಿನಲ್ಲೇ ಮತಾಡ್ತಾ ಇದಾನೆ. ಮುದುಕಮ್ಮನಿಗೆ ಇನ್ನುವರೆಗೋ ಇಷ್ಟು ಒಳ್ಳೆ ತೆಲುಗು ಮಾತಾಡಿದ ರಜಾಕಾರ್ ಕಂಡುಬಂದಿರಲಿಲ್ಲ. ಬರೀ ಬಂದೂಬಾರದ ತೆಲುಗು ಮಾತಾಡುವ ನಿಜಾಮಿನ ತುರುಕರನ್ನೇ ನೋಡಿದ್ದಳಾಕೆ. ಹಾಗಾದರೇ ಇವನು ರಜಾಕಾರ್ ಅಲ್ಲವೆಂದೇ ಚರ್ಚೆ ಮಾಡಿಕೊಂಡಳಾಕೆ.

ಕೆಲ ನಿಮಿಷಗಳಾದರೂ ಸಾವು, ಮಾನಭಂಗ ತಪ್ಪಿದವು ! ಮುದುಕಮ್ಮನಿಗದೇ ಇಂದ್ರಜಾಲವೆನಿಸಿದವು. ಮಾನವನ ಹೃದಯಲ್ಲಿರುವ ಅಡಗಿರೋ ಅಜೇಯ ಆಶಾವಾದ ಶಕ್ತ ಆಕೆಗೆ ಆಸರೆಯಾಯಿತು. ಬಂದ ಮನುಷ್ಯ ಎಷ್ಟು ಹೊಸಬನಾದರೂ, ಆತ ಬಂದ ಪರಿಸ್ಥಿತಿಗಳು ಎಷ್ಟು ಅನುಮಾನಾಸ್ಪದವಾಗಿದ್ದರೂ ಅದೇಕೋ ಮುದುಕಮ್ಮನಿಗೆ ಮಾತ್ರ ಅವನನ್ನು ನಂಬಬಹುದೆನಿಸಿತು.  ಅದು ವಿಶ್ವಾಸವಲ್ಲ. ವಿಶ್ವಾಸೇಚ್ಛೆ. ವಿಪತ್ತಿನ ಸ್ಥಿತಿಯಲ್ಲಿ ಕಾಣಿಸಿದ ಏಕೈಕ ಆಧಾರ. ಅದನ್ನು ಹೇಗೆ ಬಿಟ್ಟಾಳು?

ಬಂದ ಮನಷ್ಯನ ಕಾಲು ಹಿಡಿದ ಮುದುಕಮ್ಮ ಮೆಲ್ಲ ಮೆಲ್ಲಗೆ ಏಳುತ್ತಾ, ಅವನ ಮೊಣಕಾಲು, ಸೊಂಟ, ಎದೆ, ಬೆನ್ನು, ಮುಖ, ತಲೆ ತಡವಿದಳು. ಮೈಮೇಲೆ ಒಂದು ಚಡ್ಡಿಮಾತ್ರವಿತ್ತು. ಅಂಗಿ ಇಲ್ಲ. ಮೈಯೆಲ್ಲ ನಾನಾ ತರದ ಹುಲ್ಲು, ಮಣ್ಣು ಮೆತ್ತಿಕೊಂಡಿತ್ತು. ದೇಹದ ಎಲ್ಲಾ ಕಡೆ ಗಾಯಗಳಾಗಿದ್ದವು. ಕೆಲ ಕಡೆಯಿಂದ ಇನ್ನೂ ರಕ್ತ ಒಸರುತ್ತಿದ್ದು ರಕ್ತ ಮುದುಕಮ್ಮನ ಕೈಗಂಟಿತು. ಕೆಲವು ಕಡೆ ಯಾವಾಗೋ ಜಿನುಗಿ ಅಟ್ಟಿ ಕಟ್ಟಿದ ರಕ್ತದ ಕುರುಹು ಕೈಗೆ ತಗುಲುತ್ತಿತ್ತು. ಮೈಯೆಲ್ಲಾ ಜ್ವರದಿಂದ ಕುದಿಯುತ್ತಿತ್ತು. ಮುಖದ ತುಂಬಾ ಬೆವರು. ಉಸಿರು ಸಹ ಕಷ್ಟದಲ್ಲಿ ಆಡುತ್ತಿದ್ದ ಹಾಗಿತ್ತು. ನಡುನಡುವೆ ಅವನಿಗರಿವಿಲ್ಲದ ಹಾಗೇ ನರಳುವಿಕೆ ಹೊರಬರುತ್ತಿತ್ತು. ಎದೆಯಂತೂ ತಿದಿಯಂತೆ ಏರಿಳಿಯುತ್ತಿತ್ತು.

ತನ್ನ ಸ್ಪರ್ಶದಿಂದಲೇ ಮುದುಕಮ್ಮನಿಗೆ ಗೊತ್ತಾಯಿತು. ಈ ವ್ಯಕ್ತಿ ನಿಸ್ಸಹಾಯಕ. ಯಾವುದೋ ಆಪತ್ತಿನ ಸ್ಥಿತಿಯಲ್ಲಿದ್ದ ಶರಣಾಗತ ಅಂತ.

ಇಷ್ಟು ತಿಳಿದ ತಕ್ಷಣ ಮುದುಕಮ್ಮನ ಮನಃಸ್ಥಿತಿ ಗಟ್ಟಿಯಾಯಿತು. ಕಾಯಕವು ಎದ್ದು ನಿಂತಿತು. ಅನಿರ್ವಚನೀಯವಾದ ಪರಿವರ್ತನೆ ಉಂಟಾಯಿತು. ಐದು ನಿಮಿಷದ ಕೆಳಗೆ ಮೊಮ್ಮಗಳ ಶೀಲ ರಕ್ಷಣೆಯ ಸಲುವಾಗಿ ಅವನ ಕಾಲು ಹಿಡಿದು “ನಾನು ನಿನ್ನ ಗುಲಾಮಳು. ನಿನ್ನ ಕಾಲಿಗೆ ಬೀಳ್ತೀನಿ” ಎಂದು ಬೇಡಿದ ಮುದುಕಮ್ಮ ಈಗ ಆಶ್ಚರ್ಯ ಮತ್ತು ಸಹಾನುಭೂತಿ ಮಿಶ್ರಿತ ಸ್ವರದಲ್ಲಿ ” ಇದೇನ್ ಗತಿನೋ ನಿಂದು? ಏನಾಗಿದೆ ಮಗಾ ನಿನಗೆ?” ಅಂತ ಕೇಳಿದಳು.  

                                            ( ಮುಂದುವರೆಯುತ್ತದೆ)

****************************************************************************

Leave a Reply

Back To Top