ಕವಿತೆ
ಆಲದ ಮರದ ಅಳಲು
ನೂತನ ದೋಶೆಟ್ಟಿ
ನಾನೊಂದು ಆಲದ ಮರ ಅಜ್ಜ ನೆಟ್ಟಿದ್ದಲ್ಲ
ಬಿಳಲ ಬಿಟ್ಟು ಬೆಳೆದೆ, ಹರಡಿದೆ ಬಯಲ ತುಂಬ
ನಾನು ಬೆರಳ ಚಾಚಿ ನಿಂತಿದ್ದೇನೆ
ಅದರ ದಿಕ್ಕು ಬಯಲಿನಾಚೆಗಿದೆ!
ಆ ಬೆರಳ ತುದಿಯವರೆಗೆ ನೋಡಿದಿರಿ, ನಡೆದಿರಿ
ಅಲ್ಲೇ ಗುಂಪಾದಿರಿ
ಓಟವಿನ್ನೂ ಮುಗಿದಿಲ್ಲ
ಇದು ದೂರದಾರಿ ಗೆಳೆಯರೆ
ಗಡಿರೇಖೆಗಳ ಅಳಿಸಿದಾಗ
ನಾನು ಒಬ್ಬನೇ ಇದ್ದೆ
ಬುದ್ಧನಿಗೆ ಹತ್ತಿರವಾದೆ
ಅವನೂ ಆಲೂ ತಾನೆ?
ನಾನು , ಬುದ್ಧ ಕೇಳಬೇಕಿದೆ ನಿಮ್ಮನ್ನು
ನಮ್ಮ ಬಿಳಲುಗಳ ಅಂಟಿಕೊಂಡಿರಿ
ನೀವೇಕೆ ಆಲವಾಗಲಿಲ್ಲ?
ಸಂವಿಧಾನವ ಕೇಳಿ ನೋಡಿ
ನಾನು ಹೋರಾಡಿದ್ದು
ಕರ್ತವ್ಯ ಮಾಡುತ್ತ
ಕಾಯಕ ದೇವರು ನನಗೆ
ದೇವರ ಮರೆತ ಹಕ್ಕಿಗೆ ಯಾವ ಲೆಕ್ಕ ?
ಬುದ್ಧ ಬೋಧಿಸಿದಂತೆ ಬದುಕಿದ
ಲೋಕ ಅವನ ಹಿಂದೆ ನಡೆಯಿತು
ಹೆಚ್ಚೇನು ಹೇಳಲಿ?
ಇನ್ನೀಗ ಬಯಲಾಚೆ ಜಿಗಿಯಿರಿ
ನಾನು, ಬುದ್ಧ ನಿಮಗಾಗಿ ಕಾಯುತ್ತೇವೆ.
*****************************************
Very nice