ಅಂಕಣ ಬರಹ

” ಹೆಣ್ಣೆಂಬ ತಾರತಮ್ಯವೇ ಪದೆ

ಪದೆ ಕಾಡುವ ವಿಷಯ “

ಇಂದುಮತಿ ಲಮಾಣಿ

ಪರಿಚಯ;


ಇಂದುಮತಿ ಲಮಾಣಿ. ಬಿಜಾಪುರದವರು. ೧೯೫೯ ಜನನ. ಓದಿದ್ದು ಪಿಯುಸಿ.
ಕತೆ ,ಕವನ ಸಂಕಲನ ,ಸಂಪಾದನಾ ಕೃತಿ ಸೇರಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಆಸೆ ಎಂಬ ಕವನ ೯ ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅತ್ತಿಮಬ್ಬೆ,
ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ.‌ ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರ
ಮಹಿಳಾ ಸೇನಾ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ಕಿ, ಈಜಿಪ್ಟ್ ದೇಶಗಳ ಪ್ರವಾಸ ಮಾಡಿದ್ದಾರೆ. ಬಂಜಾರ ನೃತ್ಯ ಸಂಸ್ಕೃತಿ ಉಳಿಸಲು ತಂಡ ಕಟ್ಟಿ‌ ಶ್ರಮಿಸುತ್ತಿದ್ದಾರೆ.
ಇವರ ಮಗ ಬಸವರಾಜು ಡಿವೈಎಸ್ಪಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ.


ಈ ಸಲದ ಮುಖಾಮುಖಿಯಲ್ಲಿ ಕತೆಗಾರ್ತಿ, ಕವಿ

ಇಂದುಮತಿ ಲಮಾಣಿ  ಇವರನ್ನು ಮಾತಾಡಿಸಿದ್ದಾರೆ ನಾಗರಾಜ್ ಹರಪನಹಳ್ಳಿ

 ಕತೆಗಳನ್ನು ಯಾಕೆ ಬರೆಯುತ್ತೀರಿ ?

ಮನಸ್ಸಿಗೆ ಕಾಡುವ ಕೆಲ ವಿಷಯಗಳು, ಎನಾದರೂ ಬರೆಯಲು ಪ್ರೇರೇಪಿಸುತ್ತವೆ. ಆಗ ಸಹಜ ಕಥೆಯ ರೂಪದಲ್ಲಿ ಬರಹ ಆರಂಭವಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲೂ  ನನ್ನ ಬರಹ ಕಾರಣವಾಗಿದೆ.

ಕತೆ ಹುಟ್ಟುವ ಕ್ಷಣ ಯಾವುದು ?

ನನ್ನ ಸುತ್ತ ಮುತ್ತ ಘಟಿಸುವ ಆಗುಹೋಗುಗಳು ಮನಸಿನ ಮೇಲೆ ಘಾಡ ಪರಿಣಾಮ ಬೀರಿದಾಗ, ಒಂಟಿಯಾಗಿ ಇರುವಾಗ  ಅವು ಕಥೆ ರೂಪದಲ್ಲಿ ಹೊರ ಹೊಮ್ಮುತ್ತವೆ.

ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ?

ಹೆಚ್ಚಾಗಿ ನನ್ನ ವಸ್ತು ವ್ಯಾಪ್ತಿ ಸಾಮಾಜಿಕ ಜೀವನ. ಪ್ರತಿಭೆಯನ್ನು ಕತ್ತು ಹಿಸುಕುವಂಥಹ ಸನ್ನಿವೇಶ, ಮತ್ತು, ವಯಸ್ಸಿನ ಪರಿ ಇಲ್ಲದೆ ಹೆಣ್ಣಿನ ಮೇಲೆ ಘಟಿಸುವಂಥಾ ಅತ್ಯಾಚಾರ ,ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹೀನಾಯ ಬಂಧನ, ಆಕೆಯ   ಜೀವನ ಪಥ, ಜಾತಿ ಭೇದತೆ, ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ.

 ಕತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ?

ಖಂಡಿತಾ. ಎರಡೂ ಇರುತ್ತವೆ.ಆ ಎರಡೂ ಇದ್ದಾಗಲೇ ಕಥೆಗೆ ಇಂಬು ಮೂಡುತ್ತದೆ.

 ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ರಾಜಕೀಯ ಇವತ್ತು ಸ್ವಾರ್ಥದ ಅಂಗಿ ತೊಟ್ಟು, ಮುಖವಾಡ ಧರಸಿ ತಿರುಗುತ್ತಿದೆ. ಅಂದಿನ ಜನನಾಯಕರ ನಡೆ, ನುಡಿ, ನಿಸ್ವಾರ್ಥ ಈಗ ಇಲ್ಲ. ಮುಖ ನೋಡಿ ಮಣೆ ಹಾಕುವುದೇ ಜನ್ಮ ಸಿದ್ದ ಹಕ್ಕು ಎಂಬಂತಾಗಿದೆ. ಜನರಿಗಾಗಿ ಅಂದು ಅವರು ದುಡಿದರು,ಮಡಿದು ಹೆಸರಾದರು. ಇವತ್ತು ಜನರೇ ಇವರಿಗಾಗಿ ಹೋರಾಡಿ ಹಾರಾಡಿ  ಮಡಿಯುತ್ತಿದ್ದಾರಷ್ಟೆ.

 ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?

ಮಾತಾಪಿತರ ಕಾಳಜಿ, ಮಹಿಳೆ ಮತ್ತು  ಹಿರಿಯರಲ್ಲಿ ಗೌರವ, ಇರುವಲ್ಲಿ ಮತ್ತು, ಎಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೋ ಅದೇ ಧರ್ಮ. ಕಷ್ಕಕ್ಕಾದವರೇ ಪರಮ ದೇವರು.

ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ?

ಸಂಸ್ಕೃತಿ ಜೀವಂತ ಇರೋತನಕಾ ಸಾಂಸ್ಕೃತಿಕ ಬದುಕು  ಸದಾ ಇರುತ್ತದೆ. ಇವತ್ತು ಸಂಸ್ಕೃತಿ ಮುಸುಕಾಗಿದೆ. ಫ್ಯಾಷನ್ ಯುಗ ಎಲ್ಲೆಲ್ಲೂ ಕುಣಿಯುತ್ತಿದೆ. ಕೇವಲ ಸಿನೇಮಾ,ಧಾರಾವಾಹಿ,  ವೇದಿಕೆಯಲ್ಲಿ  ಸಂಸ್ಕೃತಿ ತೋರಿಸುವದಲ್ಲ. ನಮ್ಮ ನಿಮ್ಮ  ನಡೆ,ನುಡಿಯಲ್ಲಿ ಅದು ಪಕ್ಕಾ ಇರಬೇಕು. ಸಂಸ್ಕೃತಿ  ನಶಿಸುವುದಕ್ಕೆ  ಸಾಕಷ್ಟು  ಉದಾಹರಣೆಗಳಿವೆ.

ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಈಗ ಈ  ವಿಷಯ ಅತ್ಯಂತ ಬೇಸರ ತರಿಸುವಂಥಹದ್ದು. ಸಾಹಿತ್ಯದಲ್ಲಿ ರಾಜಕೀಯ ಇವತ್ತು ಕೈಯಾಡಿಸದೆ ನಡಿಯೋದೇ ಇಲ್ಲವೆನ್ನುವಂತಾಗಿದೆ. ಸಾಹಿತ್ಯದ ಯಾವ ಗಂಧ ಗಾಳಿಯೂ ಇಲ್ಲದವರನ್ನು ತಂದು ಮೆರೆಸುವದು, ಸಾಹಿತ್ಯ ಪ್ರತಿಭೆಗೆ ಸಿಗಬೇಕಾದ ಮನ್ನಣೆಗೆ ಕತ್ತರಿ ಹಾಕುವುದು, ಲಾಭಿ ಮಾಡುವವರನ್ನು ದೊಡ್ಡ ವೇದಿಕೆಯಲ್ಲಿ ಕೂಡಿಸುವದು ಇತ್ತೀಚೆಗೆ ತೀರಾ ಸಾಮಾನ್ಯ ಆಗಿದೆ. ಸಾಹಿತಿಗಳಿಗೆ ಸಿಗದ ಪರಿಷತ್ತಿನ ಅಧಿಕಾರ, ರಾಜಕೀಯ ವ್ಯಕ್ತಿಗಳು ಅಲಂಕರಿಸುವದು ಕೂಡ ಸಹಜವಾಗಿಯೇ ಇದೆಯೆಂದು ಖಾತ್ರಿ ಅನಿಸುತಿದೆ.

ಸಾಹಿತ್ಯಕ್ಕೆ ಮಾನ ಮನ್ನಣೆ ಸಿಗಬೇಕು ಅಂದರೆ ಮುಂದಾಳತ್ವ ನುರಿತ ಸಾಹಿತಿಯಿಂದ ಮಾತ್ರ ಅರಿವು ಬರೋದು.  ಇಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು.

ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ನಮ್ಮ ದೇಶವೀಗ ಬಲಿಷ್ಠತೆಯಲ್ಲಿ ಯಾವ ದೇಶಗಳಿಗಿಂತಲೂ ಕಮ್ಮಿ ಎನಿಲ್ಲ.ಬಡತನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದನ್ನು ಕಾಣುತ್ತಿದ್ದೆವೆ. ಈಗ ಮೊದಲಿಗೆ ಇದ್ದ ಬಡತನ ಇಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂಧನಭಾಗ್ಯ ಹೀಗೆ ಹಲವಾರು ಉಪಕೃತ ಯೋಜನೆಗಳನ್ನು ಕಾಣುತ್ತಿದ್ದೆವೆ.ಆಗಿನಂತೆ ಈಗ ಹಸಿವಿನಿಂದ ಸಾವು ಇಲ್ಲ.ಒಟ್ಟಿನಲ್ಲಿ ನಮ್ಮ ದೇಶದಲ್ಲಿ  ಇವತ್ತು ಇತರ ದೇಶಕ್ಕಿಂತ ಹೆಚ್ಚಿನ ಪ್ರಗತಿಯಲ್ಲಿ ಸಾಗಿದೆ.

 ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ?

ಸಾಹಿತ್ಯದಲ್ಲಿ ನಾನು ಇನ್ನೂ ಬೆಳೆಯಬೇಕು,  ಕಲಿಯಬೇಕು. ತಿಳಿದುಕೊಳ್ಳಬೇಕು.

ಕನ್ನಡ   ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ?

ಕನ್ನಡದ ಕವಿ  ನಿಸಾರ್ ಅಮಹ್ಮದ .

 ಈಚೆಗೆ ಓದಿದ ಕೃತಿಗಳಾವವು?

ನಾಗೇಶ್ ಜೆ, ನಾಯಕರ

ಓಲವ ತುಂತುರು

ಮತ್ತು

ವಿಶ್ವೇಶ್ವರ ಮೇಟಿ ಅವರ

ಸೋಲಾಪುರ ಜಿಲ್ಲೆಯ ಇತಿಹಾಸದತ್ತ ಒಂದು ನೋಟ

ನಿಮಗೆ ಇಷ್ಟವಾದ ಕೆಲಸ ಯಾವುದು?

ಬರವಣಿಗೆ

ನಿಮಗೆ ಇಷ್ಟವಾದ ಸ್ಥಳ ಯಾವುದು ?

ಬಾಗೇವಾಡಿ ತೋಟದ ಮನೆ

ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು?

ಶರಪಂಜರ

ನೀವು ಮರೆಯಲಾರದ‌ ಘಟನೆ‌ ಯಾವುದು?

ಪತಿಯ ಅಗಲಿಕೆ

ಇನ್ನು ಕೆಲ ಹೇಳಲೇ‌ ಬೇಕಾದ ಸಂಗತಿಗಳಿದ್ದರೂ ಹೇಳಿ…….

ಇವತ್ತು ನಾವು ಮಹಾತ್ಮಾ ಗಾಂಧೀಜಿಯವರ ಕುರಿತು ಹೊಗಳಿಕೆಯ ಭಾಷಣ ಮಾಡುತ್ತೆವೆ, ಅದೇ ರೀತಿ ಜಗತ್ತಿನಲ್ಲಿ  ಮಹಾ ಮಹಾನ್ ರಾಗಿ ಆಗಿ ಹೋದವರ ಕುರಿತು ಹಾಡಿ ಅಭಿಮಾನ ತೋರುತ್ತೆವೆ. ದುರಂತವೆಂದರೆ,  ನಾವು ಅವರಾಗುವದಿಲ್ಲ. ಅವರನ್ನೇ ಹುಟ್ಟಿ ಬರಬೇಕು ಅಂತ ಬಯಸುತ್ತೆವೆ. ಹುಟ್ಟಿರುವ ನಾವೇಕೆ ಅವರ ದಾರಿಯಲ್ಲಿ ನಡಿಯೋದಿಲ್ಲ?

         ಅತ್ತೆಯೊಬ್ಬಳು, ವೇದಿಕೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ,ದ ಕುರಿತು, ಅವಳಿಗೆ ಬೇಕಾದ ಸ್ವಾತಂತ್ರ್ಯದ ಕುರಿತು  ಭಾಷಣ ಮಾಡುತ್ತಾಳೆ, ಆದರೆ ಮನೆಯಲ್ಲಿ ಸೊಸೆಗೆ ಸ್ವಾತಂತ್ರ್ಯ ಏಕೆ ಬೆಕೆಂದು  ಅವಾಜು ಹಾಕುತ್ತಾಳೆ.

         ಇದಕ್ಕೆ ತದ್ವಿರುಧ್ಧವಾಗಿ ಅತ್ತೆಯು, ಸೊಸೆಯನ್ನು ಮಗಳಾಗಿ ಪ್ರೀತಿಸಿದರೂ ಸೊಸೆ ಪರಕೀಯತೆಯಿಂದ ಹೊರ ಬಾರದೆ ಪತಿ ಸಹಿತ ಬೇರೆ ಹೋಗಿ, ಅತ್ತೆಯನ್ನು ಕತ್ತೆ ಸಮಾನವಾಗಿ ಕಾಣುತ್ತಾಳೆ.

   ಮಕ್ಕಳು ಇದ್ದರೂ ಭಿಕಾರಿಯಾಗಿ ತಿರಗುವ ಹೆತ್ತವರ ಪಡಿಪಾಲು ನೋವು ನೀಡುತ್ತವೆ.

ಇವೆಲ್ಲ ನೋಡುತ್ತಾ ಇರುವಾಗ ಅನಿಸಿದ್ದೆನೆಂದರೇ,

ನಾವೆಕೆ ಮನುಷ್ಯರಾದೆವು!! ನಾವೂ ಉಳಿದ ಜೀವಜಂತುಗಳಂತೆ ಇರಬಹುದಿತ್ತಲ್ಲವೆ! ದೇವರು ತನ್ನ ಆಟಕ್ಕೆ ಮನುಷ್ಯರನ್ನೇ  ತನ್ನಾಟದ ದಾಳವೆಂದೆಕೆ ಆಯ್ಕೆ ಮಾಡಿಕೊಂಡ ಅಂತ!!

ಇಂಥಹ ವೈಪ್ಯರೀತತೆಗಳು ಬಹಳ ಕಾಡುತ್ತವೆ.

******************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Leave a Reply

Back To Top