ಒಕ್ಕಲುತನ

ಲಹರಿ

ಒಕ್ಕಲುತನ

ಚಂದ್ರಪ್ರಭ

Know about Dryland Agriculture and Farming Technology

ಜಮಖಂಡಿಯಿಂದ ಬಿಜಾಪುರ ( ಈಗ ವಿಜಯಪುರ) ಕ್ಕ ಬಸ್ ಹೊಂಟ್ತು ಅಂದ್ರ ಗಾಡಿ ಎಲ್ಲೂ ಹೊಳ್ಳೂದಿಲ್ಲ ಬಬಲೇಶ್ವರ ಬರೂ ತನಕ. ಚಿಕ್ಕಪಡಸಲಗಿ ಬ್ಯಾರೇಜ್ ಆದ ಕೂಡಲೇ ಒಂದ ಕ್ರಾಸ್ ಬರತೈತಿ ಚಿಕ್ಕಲಕಿ ಕ್ರಾಸ್ ಅಂತ. ಅಲ್ಲಿಂದ ಬಿಜಾಪುರ ಸೀಮಿ ಸುರುವಾತ ನೋಡ್ರಿ. ಡಿಸೆಂಬರ್ ಜನವರಿ ತಿಂಗಳದಾಗ ಈ ರಸ್ತೆಗುಂಟ ಹೋಗೂದೇ ಒಂದು ಖುಷಿ. ಎಡಕ್ಕ ಬಲಕ್ಕ ಯಾವ ಕಡೆ ನೋಡಿದರೂ ಹಸರs ಹಸರು. ಕಪ್ಪ ಮಣ್ಣ, ಕೆಂಪ ಮಣ್ಣ, ಹಾಳ ಮಣ್ಣ..ಒಂದರ ಮಗ್ಗಲ ಒಂದು.. ಬ್ಯಾರ ಬ್ಯಾರೆ ಪಟ್ಟಿ ಹಾಸಿದಂಗ.. ಏನ ಚಂದ ಅಂತೀರಿ. ಬೆಳಿಯರೆ ನೋಡಾಕ ಕಣ್ಣ ಸಾಲಲಾರದು. ಜ್ವಾಳ, ಗೋಧಿ, ಗೊಂಜಾಳ ( ಮೆಕ್ಕ ಜ್ವಾಳ), ಕಡ್ಲಿ, ತೊಗರಿ. ಒಂದರಕಿಂತ ಒಂದು ಪೈಪೋಟಿಗೆ ಬಿದ್ದಂಗ ತೊನೆದಾಡೂ ಆಟ ನೋಡಬೇಕ ಒಳೆ. ನಡನಡುವ ಎದ್ದ ಕಾಣೂ ಚಲುವಿ ಸಾಸವಿ. ಮತ್ತ ಕೆಲವೊಂದ ಕಡೆ ಬಾಳಿ, ಈಗೀಗ ಕೆಲವರು ಹಾಕಿರೊ ದ್ರಾಕ್ಷಿ  ಬಳ್ಳಿ. ಉದ್ದ ತೋಳಿನ ಅಂಗಿ ತೊಟ್ಟು, ತಲೀಗಿ ಬಟ್ಟೆ ಕಟಕೊಂಡು ಬಗ್ಗಿ ಕೆಲಸಾ ಮಾಡೂ ಹೆಣ್ಮಕ್ಕಳು. ಅಲ್ಲೇ ಮಾವಿನದೊ ತೆಂಗಿನದೊ ಹುಂಚೀದೊ ಗಿಡದ ಕೆಳಗ ಎತ್ತಾ ನಿಲ್ಸಿ ನೀರು ಕುಡೀತಿರೊ ರೈತಣ್ಣ.

ಬಹುತೇಕ ಎಲ್ಲಾದರಾಗೂ ಕಾಣೋದು ಹಳದಿ ಹೂವs.. ಆಕಾರ ಅಷ್ಟs ವ್ಯತ್ಯಾಸ. ಛಟ್ಟಿ ಅಮಾಸಿಗೆ ಹೂವ ಬಿಡೂ ಕಡ್ಲಿ ಗಿಡ ಎಳ್ಳಮಾಸಿಗೆ ಕಾಯಿ ಕಟ್ಟಿ ರಾಶಿ ತಯಾರಿ ನಡಸತದ. ಕಡ್ಲಿ ಪಡ್ಲ ಒಡದು ಬೆಳೀಬೇಕಾದರ ಅದರ ತುದಿ ಕತ್ತರಸಬೇಕು. ಹಾಂಗ ಎಳೀ ಕಡ್ಲಿ ಸಮಾ ಕಿತ್ತು ಸಂತಿ ಪ್ಯಾಟಿಗೆ ಮಾರಾಟಕ ತರ್ತಾರು ರೈತ ಹೆಣ್ಮಕ್ಕಳು. ಏನ್ ಡಿಮಾಂಡ್ ಅಂತೀರಿ ಕಡ್ಲಿಪಲ್ಲೇದು. ಪಾವ ಕಿಲೊ ( ಕಾಲ ಕೆ.ಜಿ.) ಕ್ಕ ಮೂವತ್ತು ನಲವತ್ತು ರೂಪಾಯಿ. ಬಿರಸ  ಬ್ಯಾಳಿ ಹಾಕಿ ಬಳ್ಳೊಳ್ಳಿ ಉಪ್ಪು ಖಾರ ಕಲಸಿ ತಾಳಸಿದರ ಆಹಾ!  ಅದರ ರುಚಿ.. ತಿಂದs ಸವೀಬೇಕು. ಕಡ್ಲಿ ಬುಡ್ಡಿ ಎಳೀದಿದ್ದಾಗ ಅಂತೂ ಇನ್ನೂ ರುಚಿ. ಅದರ ಜೋಡಿ ಮೆಕ್ಕಿ ತೆನಿ ಸುಟ್ಟು, ಕುದಸಿ ತಿನ್ನೂ ಮಜಾ ಅಂತೂ ಸ್ವಾದಿಷ್ಟ.

ಇನ್ನ ಕಬ್ಬ ಸುಲದು ರಸಾ ಹೀರೂದು ನಮ್ ಜನಕ್ಕೆ ಭಾರೀ ಸಲೀಸು. ಒಂದ ಕೈಯಾಗ ಸೈಕಲ್ ಹಿಡದು ಮತ್ತೊಂದ ಕೈಯಾಗ ಕಬ್ಬ ತಿನಕೋತ ಹೋಗವರನ್ನ ನೀವು ಎಲ್ಲೆಲ್ಲೂ ನೋಡಬಹುದು. 

ಎಲ್ಲೊ ಒಬ್ಬಿಬ್ಬರು ಕಬ್ಬಿನ ಗಾಣ ಹಾಕಿದವರು ಸಿಗತಾರ ವಿನಾ ಉಳದವರೆಲ್ಲಾ  ತಮ್ಮ ಕಬ್ಬು ಫ್ಯಾಕ್ಟರೀಗೇ ಕಳಸೂದು. ಕಬ್ಬ ಕಡಿಯೂ ಸೀಜನ್ ಬಂತು ಅಂದ್ರ ಎರಡೆರಡ ಟ್ರಾಲಿ ಹಚ್ಕೊಂಡು ಹೊರಲಾರದ ಭಾರ ಹೊತ್ತು ಅತ್ಲಾಗ ಇತ್ಲಾಗ ಹೊಯ್ದಾಡಕೋತ ಮೆಲ್ಲsಕ ಸಾಗೂ ಟ್ರ್ಯಾಕ್ಟರ್ ಗಳದು ಸುಗ್ಗೀನs ಸುಗ್ಗಿ. ಉಳದೂವೆಲ್ಲಾ ವಾಹನ ನಿಂತ ನಿಂತ ಹೋಗಬೇಕು. ಹರೇದ ಹುಡಗರು ಒಳ್ಳೆ ಜೋಶ್ ನಿಂದ ಟ್ರ್ಯಾಕ್ಟರ್ ಓಡಸತಾರ. ಅದೇನೇನೊ ನಮೂನಿ ನಮೂನಿ ಕ್ಯಾಸೆಟ್ ಹಾಕಿ ಎಂತೆಂತಾವೊ ಹಾಡಾ ದೊಡ್ಡ ದನಿಯಾಗ ಹಾಕ್ಕೊಂಡು ಹೊರಟ ಬಿಡತಾರ. ಅವು ಜಾನಪದ ಅಂದ್ರ ಜಾನಪದ ಅಲ್ಲ ಮತ್ತೊಂದು ಅಂದ್ರ ಮತ್ತೊಂದಲ್ಲ. ಹೆಚ್ಚಾನೆಚ್ಚು ಹರಯದ ಹೆಣ್ಣು ಗಂಡಿನ ಸರಸ ವಿರಸ,  ವಿಫಲ ಪ್ರೇಮದ ಕತಿ ಹೇಳೂವಂಥಾ ಹಾಡು ಇವೆಲ್ಲಾ.  ಒಮ್ಮೊಮ್ಮೆ ಆ ಸಾಹಿತ್ಯ ಎಷ್ಟು ಹದಗೆಟ್ಟ ಹೋಗಿರತದಂದ್ರ ಅದನ್ನ ಕೇಳಿದರ ಅಲರ್ಜಿ ಅನಸತದ.  ಆದರ ಆ ಹುಡಗರಿಗೆ ಅದs ಮಜಾ. ಯಾವುದರ ಒಂದು ಕಬ್ಬಿನ ಗಾಡಿ ಹೊಳ್ಕೊಂಡು ರಸ್ತೆ ಮ್ಯಾಲೆ ಬಿದ್ದ ಬಿಟ್ಟರಂತೂ ದೇವ್ರೇ ಗತಿ. ತಗಿಯೂತನಕ ಆ ಕಡೆ ಈ ಕಡೆ ರಸ್ತಾ ಬಂದ್.. ಟ್ರಾಫಿಕ್ ಜಾಮ್.  ಆದರ ಸಸಾ ಹಂಗಾಗೂದು ಕಮ್ಮಿ. 

ಎಳ್ಳಮಾಸಿಗೆ ಪ್ರತಿ ಒಬ್ಬ ರೈತನೂ ಚರಗಾ ಚೆಲ್ಲೂ ಸಂಭ್ರಮ. ಸ್ನೇಹಿತರು, ಬಂಧು ಬಳಗದವರು, ನೆಂಟರು ಎಲ್ಲಾರನ್ನೂ ಕರಕೊಂಡು ಎತ್ತ ಇದ್ದವರು ಎತ್ತಾ ಹೂಡಿ ಇರಲಾರದವರು ಮತ್ತೇನರ ಗಾಡಿ ಮಾಡಕೊಂಡು ಹೊಲಕ್ಕ ಹೋಗತಾರ. ನಮೂನಿ ನಮೂನಿ ಅಡಗಿ ಮಾಡಿಕೊಂಡು ಭೂಮಿ ತಾಯಿ ಪೂಜಾ ಮಾಡಿ ಎಲ್ರೂ ಸೇರಿ ಊಟಾ ಮಾಡಿ ಖುಷಿ ಹಂಚ್ಕೊಳ್ಳೊ ಸಮಯ ರೈತರಿಗೆ ಇದು. ಕಡ್ಲಿ ಗಿಡಾ, ಮೆಕ್ಕಿ ತೆನಿ, ಜ್ವಾಳದ ತೆನಿ, ಕಬ್ಬು ಎಲ್ಲಾ ತಿಂದು ಶೇಂಗಾ ಹೋಳಿಗಿ, ಎಳ್ಳ ಹೋಳಗಿ, ಎಲ್ಲಾ ತರದ ಕಾಳಪಲ್ಯ, ಶೇಂಗಾ, ಅಗಸಿ, ಕಾರೆಳ್ಳದು ಚಟ್ನಿ, ಜ್ವಾಳದ ಕಡಬು, ಅಕ್ಕಿ ನುಚ್ಚು,  ಜ್ವಾಳದ ನುಚ್ಚು.. ಕೆನಿ ಮೊಸರು.. ಅದೇನ್ ಮಾತಾಡಂಗಿಲ್ಲ ಅದರ ಸುದ್ದೀ. ಸುಮ್ಮನ ತಲಿ ಕೆಳಗ ಹಾಕ್ಕೊಂಡು ಮಸ್ತ ಹೊಡೀತಿರಬೇಕು ಅಷ್ಟs. ಗಟ್ಟಿ ತುಪ್ಪ ಹಚ್ಕೊಂಡು ಶೇಂಗಾ ಹೋಳಿಗಿ ತಿನ್ನೂದಂದ್ರ ಅದಕ್ಕ ಚರಗದಂಥಾ ಹಬ್ಬನs ಬರಬೇಕು.

ಈಗೀಗ ದ್ರಾಕ್ಷಿ ಕಟಾವ್ ಮಾಡೂವಾಗ ಮಂದೀನೆಲ್ಲಾ ಕರದು ಊಟಾ ಹಾಕ್ಸಿ ದ್ರಾಕ್ಷಿ ತಿನ್ನಿಸಿ ಮತ್ತ ಮ್ಯಾಲೆ ಮನೀಗೆ ಕಟ್ಟಿ ಕೊಡೂದೂ ಈ ಭಾಗದಾಗ ಪ್ರಚಲಿತ ಆಗಾಕತ್ತೇತಿ. 

ಒಟ್ಟಾರೆ ಹೇಳೂದಂದ್ರ ತಮ್ಮ ತಮ್ಮ ಮಂದಿ ಮಕ್ಕಳು ಬಂಧು ಬಳಗ ಎಲ್ಲಾರನೂ ಕರಕೊಂಡು ನಕ್ಕೋತ ಕೆಲಕೋತ ಬದುಕಿನ ಬಂಡಿ ಎಳಿಯೂ ಸಾಹಸವನ್ನ ಹಗರ ಮಾಡಕೊಳ್ಳೂ ರೈತಾಪಿ ಜನರ ಪ್ರಯತ್ನ ಇದೆಲ್ಲಾ.

ಆದರ ಹತ್ತ ವರ್ಷದ ಹಿಂದ ಇದ್ದಷ್ಟು ಭೂಮಿ ಈಗಿಲ್ಲ. ಅಲ್ಲಲ್ಲಿಗೆ ಪ್ಲಾಟ್ ಹಾಕ್ಯಾರ..ಮನಿ ಆಗ್ಯಾವ. ಬರಗಾಲ ಬರಲಿ ಪ್ರವಾಹ ಬರಲಿ, ರೊಕ್ಕ ಇರಲಿ ಬಿಡಲಿ ನಮ್ ರೈತರ ಸಂಭ್ರಮಕ್ಕ ಕೊರತಿ ಅನ್ನೂದು ಇಲ್ಲೀತನಕ ಇದ್ದಿಲ್ಲ. ಇತ್ತಿತ್ಲಾಗ ಸಾಲ ಕೊಡೂ ಬ್ಯಾಂಕಿನರ ಚಿತ್ರ ವಿಚಿತ್ರ ಕಾಯ್ದೆ, ಇದ್ದೂ ಇರಲಾರದಂಗ ಇರೂ ಸರಕಾರದ ಸಹಾಯ ಇವತರ ನಡುವ ಸಿಕ್ಕ ಒದ್ದಾಡಿ ಹೋಗ್ಯಾರ ನಮ್ ರೈತರು. ನೇಣಿಗೆ ಕೊರಳು ಕೊಟ್ಟವರ ಸಂಖ್ಯಾ ದಿನದಿನಕ್ಕ ಹೆಚ್ಚಾಕ್ಕೋತ ನಡದದ. ದೊಡ್ಡ ರೈತರದು ಹೆಂಗಾದರೂ ನಡೀತದ ಜೀವನ. ಅವರು ಅನಕೂಲಸ್ಥರೂ ಇರತಾರ. ಸಣ್ಣ ಪುಟ್ಟ ಹಿಡವಳಿ ಮಾಡವ್ರ ಕಷ್ಟ ಯಾರೂ ಕೇಳವರಿಲ್ಲ. ಅವರಿಗೆ ಭೂಮಿ ಐತ್ಯಂದ್ರ ಐತಿ ಇಲ್ಲಂದ್ರ ಇಲ್ಲ. ಅವರು ಭೂಮಿ ಒಡೆಯರು ನಿಜ. ಆದರ ಉತ್ಪನ್ನ ಕನಿಷ್ಠ. ಜೀವನಕ್ಕ ಸಾಲದು. ಅವರು ಸ್ವತಾ ದುಡದರ ನಾಲ್ಕ ಕಾಸು ಕೈಗೆ ಸಿಗತಾವು. ಇಲ್ಲಾಂದ್ರ ಬೆಳೀಕಿಂತ ಕೂಲೀನ ದೊಡ್ಡದಾಗಿ ಪರದಾಡೂದಂತೂ ನಿಶ್ಚಿತ. ಹಿಂಗಾಗೇ ಮಕ್ಕಳ್ನ ಸಾಲಿ ಬಿಡಿಸಿ ತಮ್ಮ ಕೂಡ ಕೆಲಸಕ್ಕ ತಗೊತಾರ. ಕಲಿಯೂ ಇಚ್ಛಾ ಇದ್ದ ಹುಡಗೂರೂ ಕೂಡಾ  ಅನಿವಾರ್ಯಕ್ಕ ತಂದಿ ತಾಯಿ ಜೊತೆ ಭಾರ ಹೊರತಾರ. ಆದರೂ ಒಂದ ಹೊತ್ತಿನ ಊಟಕ್ಕ ಅವರು ಯಾರ ಮುಂದೂ ಕೈ ಚಾಚಬೇಕಾಗಿಲ್ಲ.

ಈಗ ಅದೇನೊ ಕಾಯ್ದೆ ಬದಲಾವಣೆ ಮಾಡಲಿಕ್ಕೆ ಹೊಂಟಾರಲ್ಲ ಸರಕಾರದವರು.. ಹಂಗೇನರ ಆದರ ರೈತರು ತಮ್ಮ ಭೂಮ್ಯಾಗಿನ ಬೆಳಿ ಬರೇ ನೋಡಿ ಖುಷಿ ಪಡಬೇಕಾಕ್ಕೈತಿ ಹೊರತಾಗಿ ತಾವು ಬೆಳೆದದ್ದು ತಮಗs ಎರವಾಗ್ತೈತಿ, ಇದ ಮಾತ್ರ ಖರೆ. ಹೆಸರಿಗೆ ಇವರು ಭೂಮಿ ಒಡೆಯರು. ಬಿಳಿ  ಮ್ಯಾಲೆ ಖಾಸಗಿಯವರ ಒಡೆತನ ಆದಮ್ಯಾಲೆ ಇವರದು ಅಂತ ಏನಿದ್ದು ಏನ ಪ್ರಯೋಜನ?  ರೈತರು ಈ ಹೋರಾಟ ಯಾಕ ಮಾಡಾಕತ್ತಾರ, ಗಡಗಡಾ ಅನ್ನೂ ಚಳಿಯಾಗ ದಿಲ್ಲಿಯಂಥಾ ದಿಲ್ಲೀವಳಗ ರೈತರು ಧರಣಾ ಕೂಡತಾರಂದ್ರ ಸುಮ್ಮನs ಕೂಡತಾರೇನು? ಸ್ವಲ್ಪನಾದರೂ ರೈತರ ಬಗ್ಗೆ ಕಾಳಜಿ ಕಕ್ಕುಲಾತಿ ಇದ್ದವರಿಗೆ ಅವರ ಬವಣಿ ಅರ್ಥ ಆಗ್ತೈತಿ.  ಹೊಟ್ಟಿ ತುಂಬಿದವರಿಗೆ ಇವರ ತ್ರಾಸ್ ತಿಳಿ ಅಂದ್ರ ಹೆಂಗ ತಿಳದೀತು! ರೈತ ನಮ್ಮ ಬೆನ್ನೆಲುಬಾ..ನಾವ್ ಮಣ್ಣಿನ ಮಕ್ಕಳು ಅಂತ ಪದಾ ಹಾಡಕೋತ ಹೊತ್ತಗಳದರ ವಸ್ತುಸ್ಥಿತಿ ಬದಲಾಕ್ಕದ ಏನು?  ಧೋತರಾ ನೆಹರೂ ಶರ್ಟು ಗಾಂಧಿ ಟೊಪ್ಪಿಗಿ, ರುಂಬಾಲು ಬಿಟ್ಟು ನಮ್ಮ ರೈತಾಪಿ ಜನರು  ಹೊಸಾ ನಮನಿ ಬಟ್ಟಿ ತೊಡಲಿಕ್ಕೆ ಕಾರಣ ಅಂದ್ರ  ಅವು ಆರಾಮ ಅನಸತಾವು. ಮತ್ತ ಜೀನ್ಸ್ ಪ್ಯಾಂಟ್ ಅಂತೂ ಹರೀ ಅಂದ್ರ ಹರಿಯೂದಿಲ್ಲ.. ನೋಡಾಕೂ ಮಸ್ತ ಕಾಣಸತಾವು. ನೆಟ್ಟಗ ಒಗೀಲಿಲ್ಲಂದ್ರೂ ನಡೀತದ. ಹೊಲಸ ಕಪ್ಪಸತಾವು. ಚಕ್ಕಡಿ ಗಾಡಿ ಬಿಟ್ಟು ಟ್ರಾಕ್ಟರ್ ಬಂದಿಲ್ಲಾ ಈಗ?  ಹಂಗನ ವೇಷಭೂಷಣ.  ಅದ್ನ ಬಿಟ್ಟು ನೀವು ರೈತರಾಗಿ ಜೀನ್ಸ್ ಹಾಕತೀರಿ!  ಅನ್ನಾವ್ರಿಗೆ ಯಾತರಲೆ ಹೊಡೀಬೇಕ ಹೇಳ್ರಿ! ಭೂಮಿ ಆಸರ ಇರೂತನಕಾ ರೈತರ ಬಾಳೇ ಚಂದ. ಅದ ಬಿಟ್ಟು ಇದ್ದ ಬಿದ್ದ ಭೂಮಿ ಖಾಸಗಿಯವರ ಪಾಲಾತು..  ಬೇಕಬೇಕಾದವರು ಭೂಮಿ ಕೊಳ್ಳೂದು ಸುಲಭ ಆತು ಅಂದ್ರ ರೈತನ ಜೀವನ ಅಷ್ಟs ಅಲ್ಲ ಜನಸಾಮಾನ್ಯರ ಜೀವನಾನೂ ನರಕ ಆಗ್ತೈತಿ. ಆವಾಗ ಯಾರಿಗೆ ಯಾರ ಸಮಾಧಾನ ಹೇಳಬೇಕು.. ಯಾರಿಗೆ ಯಾರು ಸಹಾಯ ಮಾಡಬೆೇಕು?  ವಿಚಾರ ಭಾಳ ಸೂಕ್ಷ್ಮ ಐತಿ.  ಆದರ ಸತ್ಯಾಸತ್ಯತೆ  ಎಲ್ಲಾರಿಗೂ ಒಂದs ತರಾ ಅರ್ಥ ಆಗವಲ್ತು. ಈ ದೇಶದಾಗ ಒಕ್ಕಲತನ ಒಕ್ಕಲಿಗ ಉಳದರ ದೇಶಕ್ಕ ಭವಿಷ್ಯ ಅನ್ನೂದು ಇರತದ. ಇದು ಎಲ್ಲಾರಿಗೂ ಅರ್ಥ ಆಗಲಿ ಮತ್ತ ಅನ್ನದಾತನ ಬಾಳೇ ಹಸನಾಗಲಿ.

**********************************

One thought on “ಒಕ್ಕಲುತನ

  1. ಎಂಥ ಒಳ್ಳೆಯ ಬರಹ. ಒಂದು ಭಾಗದ ನೆಲದ ಸರಿ- ಬೆಸಗಳ ಚೆಂದದ ಚಿತ್ರ ಕಟ್ಟಿ ಕೊಟ್ಟೀದ್ದೀರಿ. ರೈತರನ್ನು ಅಳೆವ ಜೊಳ್ಳು ಮಾನದಂಡ ಗಳಿಗೆ ಕನ್ನಡಿ ಹಿಡಿದಿದ್ದೀರಿ.

Leave a Reply

Back To Top