ನಾದಬೇಕು …ನಾದ ಬೇಕು !!

ಭಾವಲಹರಿ

ನಾದಬೇಕು …ನಾದ ಬೇಕು !!

ರಶ್ಮಿ.ಎಸ್.

How to make dough for Roti/Chapati (Indian Bread) - YouTube

ಭಾಳದಿನದ ಮ್ಯಾಲೆ ಚಪಾತಿ ಮಾಡಾಕ ನಿಂತಾಗ ನಮ್ಮವ್ವ ಹೇಳೂ ಹಾಡು ನೆನಪಾಗಿತ್ತು. ’ನಾದಬೇಕು, ನಾದ ಬೇಕು…’ ಅಂತ ಅಡಗಿಮನಿ ಅಲ್ಲಲ, ಮನಿ ಎಲ್ಲಿರ್ತದ ಈಗ! ಕಿಚನ್ ಅಂತ ಅನ್ಬೇಕು. ಚಿಕನ್‌ನಷ್ಟೇ ಸಣ್ಣವು. ಕಟ್ಟಿಮ್ಯಾಲೆ ಹಿಟ್ಟು ಕಲಿಸಿ, ನಾದೂಮುಂದ ನೆನಪಾತು ಈ ಹಾಡು. ಅಮ್ಮ. ಅಮ್ಮ ಮಾಡು ಚಪಾತಿ. ಚಪಾತಿಯೊಳಗಿನ ಪದರು.

ಅದೇನೋ ಒಂಥರ ಹಳವಂಡ. ಚಪಾತಿಯ ಹೊರಮೈ ಮ್ಯಾಲಿನ ಕರಿಚುಕ್ಕಿ, ಒಳಪದರಿನ ಮೃದುತ್ವ, ಮನಸಿನ ಕೋಮಲತನವನ್ನು ಪ್ರತಿನಿಧಿಸ್ತಾವ. ಚಪಾತಿಗೂ ಜೀವನಕ್ಕೂ ಒಂಥರಾ ಸಂಬಂಧ. ಬದುಕಿನಾಗ ಭಾಳ ಬೆಂದಾನ ಮನಶಾ ಮೆತ್ತಗಾಗ್ಯಾನ ಅಂತಾರ. ಚಪಾತಿನೂ ಹಂಗರಿ. ಬೆಂದಾಗ ಮೆತ್ತಗಾಗ್ತಾವ. ನಾವೂನು. ಒಮ್ಮೆ ಬೇಯಬೇಕು. ಅವಮಾನದ ಸುಡುಬೆಂಕಿಯೊಳಗ. ಅನುಮಾನದ ಕಿಡಿಯ ಕಾವಿನಾಗ. ಪ್ರೀತಿಯ ಅಗ್ಗಷ್ಟಿಕೆಯ ಬೆಚ್ಚನೆಯ ಬಿಸುಪನಾಗ. ಎಲ್ಲಾದ್ರೊಳಗೂ ಬೇಯೂದ ಆದ್ರೂ ಒಂದೊಂದು ಕಾವೂ ನಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಸ್ತಾವ. ಒಂದು ನಮ್ಮೊಳಗಿನ ಅಹಂಕಾರ ಸುಟ್ರ ಇನ್ನೊಂದು ನಮ್ಮ ಅಭಿಮಾನ ಅರಳಸ್ತದ. ಮತ್ತೊಂದು ಭಟ್ಟಿಯೊಳಗ ಅರಳು ಪುಟಿಪುಟಿದು ಸಿಡಿಯೂಹಂಗ ನಮ್ಮೊಳಗ ಉಲ್ಲಾಸ ಉಕ್ಕೂಹಂಗ ಮಾಡ್ತದ.

ಹಿಟ್ಟಿನ ಹುಡಿ, ನೀರಿನ ಜೊತಿಗೆ ಕಲೆತು ಜಿಗಿ ಬಂದ್ರ, ಎಣ್ಣಿ ಜೊತಿ ಬೆರತು ನುಣ್ಣಗ ಆಗ್ತದ.  ಹಿಟ್ಟಿನ ಜೊತಿಗೆ ಆಟ ಆಡೂದು ಅಂದ್ರ ಮಕ್ಕಳಿಗೆ ಮಹಾಪ್ರೀತಿ. ನಾವೂ ಸಣ್ಣೋರಿದ್ದಾಗ ಗೋದಿ ಹಿಟ್ಟಿನ ನಾಗಪ್ಪ, ಹಕ್ಕಿ, ದೇಶವಿದೇಶಗಳ ನಕಾಷೆ ಮಾಡ್ತಿದ್ವಿ. ದೊಡ್ಡವರಾದಂಗ ಅಮ್ಮ ಹಿಟ್ಟು ನಾದಾಕ ಹೇಳ್ತಿದ್ರು. ಅಳ್ಳಕಾದ್ರ ದುಂಡಕಾಗೂದಿಲ್ಲ. ನಾಕಮೂಲಿ ನಸೀಬ್ ಅಂತಿದ್ರು. ಹೆಂಗ ತೀಡಿದ್ರು ಆ ಚಪಾತಿಗೆ ನಾಲ್ಕು ಮೂಲಿನ ಬರ್ತಿದ್ವು. ಮೂರುಪದರ ಮಡಚೂದು ಹೇಳಿದಮ್ಯಾಲೆ ಹೆಂಗ ತೀಡಿದ್ರು ಶ್ರೀಲಂಕಾ ನಕ್ಷೆನ. ಅಮ್ಮನ ಕೈಗೆ ಹೋದ ಹಿಟ್ಟು ಮಾತ್ರ ದುಂಡಕ, ಬಳಿ ಆಕಾರದಾಗ ಚಪಾತಿ ಆಗೂವು. ಪದರಪದರ ಇರೂವು. ಹಂಚಿಗೆ ಹಾಕಿದಕೂಡಲೇ ಹೊಟ್ಟಿ ಡುಮ್ಮಣ್ಣನ್ಹಂಗ ಉಗಿ ತುಂಬ್ಕೊಂಡು ದೊಡ್ಡ ಹೊಟ್ಟಿ ಮಾವನಂಗ ನಗೂವು, ನಮ್ಮ ಮುಖ ಮಾತ್ರ ಗಟ್ಟಿ ಹಿಟ್ಟಿನ ಚಪಾತಿಹಂಗ ಬಿಗಕೊಂಡು ಹೋಗ್ತಿತ್ತು.

ಆಮೇಲೆ ಆಮೇಲೆ, ಅಮ್ಮನ್ಹಂಗ ಚಪಾತಿ ಮಾಡಬೇಕು ಅನ್ನೂ ಛಲ ಹಿಟ್ಟನಾಗ ಕೈ ಆಡಸೂದ್ರೊಳಗ ಸಿಗೂ ಸಮಾಧಾನ ಯಾವ ಧ್ಯಾನಕ್ಕೂ ಕಡಿಮಿ ಇರೂದಿಲ್ಲ ಅನಸಾಕ ಶುರುವಾತು. ನಾದೂದು, ನಾದೂದು., ಸುಮ್ನ ನಾದೂದು. ಹಿಟ್ಟು ಮೆದು ಆದಂಗ ಆದಂಗ ಮನಸೂ ಒಂಥರಾ ಯಾವುದೇ ವಿಚಾರಗಳಿಲ್ಲದ ಸ್ಥಿತಿಗೆ ಬಂದು ನಿಂತಬಿಡ್ತದ. ಈ ಧ್ಯಾನಸ್ಥ ಸ್ಥಿತಿಯೊಳಗ ಚಪಾತಿ ಲಟ್ಟಿಸಿದರ ಅವು ಭ್ರೂ ಮಧ್ಯ ಕೇಂದ್ರದ ಹಂಗ ದುಂಡಕ ಆಗ್ತಾವ. ನಮ್ಮೊಳಗೂ ಚಪಾತಿ ಹಂಗ ಪದರ ಇರ್ತಾವ.

Chapatis - Cookidoo® – the official Thermomix® recipe platform

ಅಮ್ಮ ರೊಟ್ಟಿ ಚಪಾತಿ ಮಾಡೂ ಮುಂದ ಹಾಡ್ತಿದ್ಲು. ’ನಾದಬೇಕು, ನಾದ.,,, ಬೇಕು ಅಂತ. ಆ ಹಾಡು, ನಾದೂದ್ರೊಳಗ ಅಕಿ ತನ್ಮಯ ಆಕ್ಕೊಂತ ಎಲ್ಲ ಮರೀತಿದ್ಲು. ಅಡಗಿ ಆದ್ರ ನಿರಾಳ ಅನ್ನೂ ಮಾತು ಈಗ ಅರ್ಥ ಆಗ್ತದ. ಒಮ್ಮೆ ಚಪಾತಿ ಹಿಟ್ಟು ಕಲಸೂ ಚಟ ಬಿತ್ತಂದ್ರ ಸಾಕು, ಅಡಗಿ ಬಗ್ಗೆ ಅಕ್ಕರೆ ತಾನೇ ಹುಟ್ತದ. ಇದಕ್ಕ ಹೆಣ್ಮಕ್ಕಳ ಆಗಬೇಕಂತೇನೂ ಇಲ್ಲ. ನಮ್ಮ ಮನಿ ಪಕ್ಕದ ಪಠಾಣ ಸಮುದಾಯಕ್ಕೆ ಸೇರಿದ ತಾಯಾ ಪಠಾಣಿ ಪರಾಠಾ ಮಾಡಿದ್ರ ಹದಿನಾರು ಪದರ ಏಳ್ತಿದ್ವು. ಅವರೂ ಛಂದ ಹಾಡ್ತಿದ್ರು. ಜೀವನ ನಾದಬೇಕು. ಜೀವನದೊಳಗ ನಾದನೂ ಬೇಕು.

ನಾವು ಸಣ್ಣೋರಿದ್ದಾಗ ಬುತ್ತಿ ಕಟ್ಟೂಮುಂದ ಎರಡು ನಿಂಗ, ಒಂದು ಹಂಚಾಕ ಅಂತ ಹೇಳೇ ಕಟ್ತಿದ್ರು. ಹಂಚ್ಕೊಂಡು ತಿನ್ನೂದನ್ನು ಕಲೀಲಿ ಅಂತ ಇತ್ತು. ಈಗ ಹಂಚ್ಕೊಂಡು ತಿನ್ನೂದಕ್ಕಿಂತ ಹೊಂಚ್ಕೊಂಡು ತಿನ್ನಬೇಕಾಗೈತಿ. ನಿಂಗೆರಡು, ಅಪ್ಪಗೆರಡು, ಅಮ್ಮಗೆರಡು, ಡಬ್ಬಿಗೆ ನಾಕು, ಹಿಂಗ ಲೆಕ್ಕಾ ಹಾಕಿ ಹೇಳಿದ್ರ, ಅಡಗಿ ಮಾಡೋರು ಬಂದು, ಒಂದು ಹೆಚ್ಚಿಲ್ಲ, ಒಂದು ಕಡಿಮಿ ಇಲ್ಲ.  ಅಷ್ಟೇ ಚಪಾತಿ ಮಾಡಿಟ್ಟು ಹೋಗ್ತಾರ್ರಿ. ರೊಟ್ಟಿ ಬುಟ್ಟಿ ಖಾಲಿ ಇರಬಾರ್ದು. ಚಪಾತಿ ಹಂಚು ಆರಬಾರ್ದು ಅಂತ ಮಾತಿತ್ತು. ಯಾರರೇ ರಾತ್ರಿ ಅಪರಾತ್ರಿ ಊಟಕ್ಕ ಬಂದ್ರೂ ಏನರೆ ನೀಡೂದು ಅಲ್ಲ, ಶಿಸ್ತಗೆ ಊಟಾನೇ ನೀಡಬೇಕು ಅನ್ನೂ ಕಾಳಜಿ ಅದಾಗಿತ್ತು. ಆದ್ರ ಈಗ..?

ಲೆಕ್ಕ, ಲೆಕ್ಕ, ಲೆಕ್ಕ. ಅಳತಿ ಮಾಡಿ ಅಡಗಿ ಮಾಡೂದು. ತೂಕಾ ಹಾಕಿ ಊಟಾ ಮಾಡೂದು. ಉಂಡ ಮ್ಯಾಲೆ ಮತ್ತ ತೂಕಾ ನೋಡೂದು. ಮಾತಿಗೆ ಕುಂತ್ರ ಹಂಗೇ ನೋಡ್ರಿ, ಚಪಾತಿ ಹಿಟ್ಟು ಹಿಂಜಿದ್ಹಂಗ ಎಲ್ಲೆಲ್ಲೇ ಹೋಗ್ತದ. ನಾದಿದ ಹಿಟ್ಟು, ಮನಸು ಇದ್ಹಂಗ. ತೀಡ್ಕೊಂತ ಹೋದ್ಹಂಗ ಹದ ಸಿಗ್ತದ. ದಂಡಿಗೆ ದಂಡಿಸೂಹಂಗ ಸ್ವಲ್ಪ ಒತ್ತಿ ತೀಡಬೇಕು. ದಂಡಿ ತೆಳು ಆದ್ರ, ಚಪಾತಿ ಉಬ್ಬತದ. ನಡಕ ದಪ್ಪಿರಬೇಕು. ಉಬ್ಬತದ. ಮನಸೂ ಹಂಗೇರಿ. ಒಲವು ಇದ್ದ ಕಡೆ ಎಳಕೊಂತ ಹೋಗ್ತದ. ಹೊರಮನಸು ಯವಾಗಲೂ ತಿಳಿ ಇದ್ರ, ಒಳಮನಸು ತಾನೇ ಶಾಂತ ಆಗ್ತದ. ಅದಕ್ಕ, ಮಂಗ್ಯಾನ್ಹಂಗ ಜಿಗಿದಾಡೋ ಹೊರಮನಸಿಗೆ ತೀಡಬೇಕು. ಒಳಮನಸು ಅರಳ್ತದ. ಹೊರಮನಸು ಹಂಗೇ ಬಿಟ್ರ, ಒಳಮನಸು ಅಶಾಂತ ಆಗ್ತದ.

ಚಪಾತಿಯ ಪದರಿದ್ಹಂಗ ನಾವೂ ಇರ್ಬೇಕ್ರಿ. ಒಂದಕ್ಕೊಂಡು ಅಂಟ್ಕೊಂಡಿದ್ರೂ ಒಂದರಿಂದ ಒಂದು ಬ್ಯಾರೆನ ಇರ್ತಾವ. ಬಿಡಿಸಿಟ್ರ ಬ್ಯಾರೆ ಆಗುವ ಪದರು ’ಅಟ್ಯಾಚ್ಡ್ ಅಂಡ್ ಡಿಟ್ಯಾಚ್ಡ್’ ತತ್ವ ಇದ್ದಂಗ. ನಮಗೆಷ್ಟು ಬೇಕೊ ಅಷ್ಟನ್ನ ಮಾತ್ರ ಹಚ್ಕೊಬೇಕು. ಇಲ್ಲಾಂದ್ರ ಪದರ ಬಿಡಿಸಿಟ್ಹಂಗ ಬ್ಯಾರೆ ಆಗಬೇಕು. ಭಾಳಷ್ಟು ಹೆಣ್ಮಕ್ಕಳ ಮುಂದಿನ ಸವಾಲಂದ್ರ, ಕಚೇರಿ ಕೆಲಸ, ಮನೀ ಕೆಲಸದ ನಡೂ ತಾವೇ ಸವಿಯೂದು. ಇವೆರಡು ಚಪಾತಿ ಪದರಿನ್ಹಂಗ ಇರ್ಬೇಕು. ಮನಿಗೆ ಬಂದಾಗ ಕಚೇರಿ ಅಲ್ಲೇ ಬಿಟ್ಟು ಬರಬೇಕು. ಕಚೇರಿಗೆ ಬಂದಾಗ, ಮನೀನ ಮರತು ಬಿಡಬೇಕು. ಆದ್ರ ನಮ್ಮೊಳಗಿನ ಗೃಹವಾದಿನಿ ಭೂತ ಯಾವತ್ತೂ ನಮಗ ಹಂಗ ಬ್ಯಾರೆ ಇಡೂದಿಲ್ಲ. ಆ ಭೂತ ನಮಗ ನುಂಗದ್ಹಂಗ ಎಚ್ಚರ ವಹಿಸಬೇಕು. ಆಗ ಬೇಯೂದರ ಕಾವು ಕಡಿಮಿ ಆಗ್ತದ.

ಹೆಚ್ಚಾಗಿ ಚಪಾತಿ ಇಲ್ಲಾಂದ್ರ ರೊಟ್ಟಿ ಮಾಡೂಮುಂದ ಎಲ್ಲಾ ಹೆಣ್ಮಕ್ಕಳು ತಮ್ಮ ಮನಿ ವಿಷಯ ಬಿಟ್ರ ಬ್ಯಾರೇನೂ ವಿಚಾರ ಮಾಡಾಂಗಿಲ್ಲ. ಗಂಡ, ಮಕ್ಕಳ ಕಾಳಜಿ ಬಿಟ್ರ ಮತ್ತೇನೂ ಆ ಹೊತ್ತಿನಾಗ ಮನಸಿನೊಳಗ ಏನೂ ಬರೂದಿಲ್ಲ. ಕುರುಕುರು ಮಾಡ್ಬೇಕ, ಮೆತ್ತಗ ಮಾಡ್ಬೇಕ? ಬಿಸಿವು ತಿನ್ನೂದಾದ್ರ, ಎಣ್ಣೀ ಕಡಿಮಿ ಹಾಕೂನು. ಬುತ್ತಿಗಿ ಒಯ್ಯೂದಾದ್ರ ತುಸು ಎಣ್ಣೀ ಬಿಟ್ಟು ಮೆತ್ತಗ ಮಾಡೂನು. ಹಿಂತಾವ ವಿಚಾರ. ಅಡಗಿ ಮಾಡುಮುಂದಿನ ಈ ಬದ್ಧತೆ ಊಟಕ್ಕೊಂದು ಹೊಸ ರುಚಿ ತಂದುಕೊಡ್ತದ.

ಅಡಗಿ ಮಾಡೂಮುಂದ ಒಂದೋ ಹಾಡು ಗುನುಗ್ತಾರ. ರೇಡಿಯೋ ಕೇಳ್ತಾರ. ಅಮ್ಮನ ಜಮಾನಾದಾಗ ಎಫ್‌ಎಂ ಇರ್ಲಿಲ್ಲ. ಹಾಡು ಕೇಳಾಕ ಆಕಾಶವಾಣಿನೇ ಆಗ್ಬೇಕಿತ್ತು. ಅದಕ್ಕ ನಮ್ಮಮ್ಮ ಹಾಡ್ತಿದ್ಲು. ’ನಾದ ಬೇಕು, ನಾದಾ ಬೇಕು, ನಾದಕ್ಕ ಪ್ರತಿನಾದ ಬೇಕು. ನಾದಾನ ನಾದ ಮ್ಯಾಲೆ ಬ್ಯಾರೆ ಯಾಕ ವಾದ ಬೇಕು?’ ಈ ಹಾಡ್ಕೊಂತ ಚಪಾತಿ ತೀಡು ಮುಂದ ’ತನ್ನ ತಾನ ನೋಡಬೇಕು’ ಅಂತ ಒಂದು ಸಾಲು ಬರ್ತಿತ್ತು. ಅದನ್ನ ಹೇಳ್ಕೊಂತ ಅಮ್ಮ, ’ನಾ’-ದಾನ ಮಾಡ್ತಿದ್ಲು. ಅವಾಗ ಜಗಳದೊಳಗಿನ ನಾ ಹೋಗಿ, ನಾದ ಮಾತ್ರ ಉಳೀತಿತ್ತು.

ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ  ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ. ಅಡಗಿಯೋರು ಬೇಕೆಬೇಕು ಅನ್ನು ಅನಿವಾರ್ಯನೂ ಸೃಷ್ಟಿ ಆಗೇದ. ಹಿಂಗಿದ್ದಾಗ, ನಾದ, ನಾದೂದು ಹೆಂಗ? ಹಿಟ್ಟು ನಾದ್ಲಿ ಬಿಡ್ಲಿ, ನಾದ ಹಾಡ್ಲಿ ಬಿಡ್ಲಿ, ಆದ್ರ ಆ ಕವನದ ಆಶಯದ್ಹಂಗ ಅಂತಃಕರಣ ತಾಕುಹಂಗ, ಸೋಕು ಹಂಗ ಅಂತೂ ಇರಬೇಕು. ಅಲ್ಲ.

 ಇಷ್ಟೆಲ್ಲ ಅನಸೂದು ಚಪಾತಿ ನಾದಿ, ತೀಡಿ ಬೇಯಿಸುಮುಂದ. ಫರಾತನಾಗ ಹಿಟ್ಟಹಾಕ್ಕೊಂಡು ನಾದಿ, ಹಂಚಿನ ಮ್ಯಾಲೆ ಸುಟ್ರ ಈ ಚಪಾತಿ ಮಾಡುವ ಸುಖ ದಕ್ಕತದ. ಆದ್ರ ಫುಡ್‌ಪ್ರೊಸೆಸರ್‌ನಾಗ ಹಿಟ್ಟು ತಿರುವಿ, ಚಪಾತಿ ಮೇಕರ್‌ನಾಗ ರೋಟಿ ಮಾಡಕೊಂಡ್ರ, ನಮ್ಮ ಕೈ ಅಕ್ಕರೆ ನಮ್ಮ  ಸಿಗ್ತದೇನು?  ಜೀವನಾ ನಾದಿ, ನಮ್ಮೊಳಗ ಗಟ್ಟಿಯಾಗಕೊಂತ, ಮೆತ್ತಗಿರಾಕ ಬರ್ತದೇನು?

****************************************************************

Leave a Reply

Back To Top