ವಿಚಿತ್ರ ಆಸೆಗಳು…ಹೀಗೊಂದಷ್ಟು,

ಲಲಿತ ಪ್ರಬಂಧ

ವಿಚಿತ್ರ  ಆಸೆಗಳು…ಹೀಗೊಂದಷ್ಟು,

ಸಮತಾ ಆರ್.

Cock, Farm, Village, Chicken, Polygamy

“ಕಕ್ ಕಕ್ ಕಕ್ ಕೊಕ್ಕೋಕ್ಕೊ” ಅಂತ ಒಂದು ಬಿಳಿ,ಬೂದು,ಕೆಂಪು ಬಣ್ಣದ ರೆಕ್ಕೆ ಪುಕ್ಕಗಳ,ಅಂಗೈ ಅಗಲದ ಜುಟ್ಟಿದ್ದ,ಕಮ್ಮಿ ಅಂದರೂ ನಾಲ್ಕೈದು ಕೆಜಿ ತೂಗುತ್ತಿದ್ದ ಗಿರಿರಾಜ ಹುಂಜ ವೊಂದು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಗತ್ತಿನಿಂದ ,ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದಾಗ,ಸುತ್ತ ನಾಲ್ಕೈದು ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿಕೊಂಡು ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ಕಲಿಸುತ್ತಿದ್ದ ನನಗೆ ಎಷ್ಟು ಪ್ರಯತ್ನ ಪಟ್ಟರೂ ಆ ಹುಂಜನಿಂದ ಕಣ್ಣು ಕೀಳ ಲಾಗಲಿಲ್ಲ.

ನನ್ನಿಂದ ಅನತಿ ದೂರದಲ್ಲಿ ಕುಳಿತಿದ್ದ ನನ್ನ ಸಹೋದ್ಯೋಗಿ ಗೆಳತಿ ನಾನು ಹುಂಜವನ್ನೆ ನೋಡುತ್ತಿರುವುದನ್ನು ಕಂಡು,ನನ್ನ ಕೋಳಿ ಪ್ರೀತಿ ಅರಿತಿದ್ದ ಆಕೆ”ಮೇಡಂ ,ಕೋಳಿ ಅನಾಟಮಿ ಆಮೇಲೆ ಮಾಡಿದ್ರಾಯಿತು,ಈಗ ಮಕ್ಕಳ ಕಡೆ ಗಮನ ಕೊಡಿ” ಎಂದು ನಕ್ಕಾಗ ನಾಚಿಕೆ ಎನಿಸಿ ಮತ್ತೆ ಪಾಠದ ಕಡೆ ಮರಳಿದೆ.

ಇದಾಗಿದ್ದು ಹೇಗೆಂದರೆ, ಕರೋನ ಕಾರಣ ದಿಂದಾಗಿ,ಶಾಲೆಗಳು ತೆರೆಯಲಾಗದೆ ಶಿಕ್ಷಕರೇ ಮಕ್ಕಳಿರುವ ಕಡೆ ಹೋಗಿ ಕಲಿಸುವ ವಿದ್ಯಾಗಮ ಎನ್ನುವ ಕಾರ್ಯಕ್ರಮದಡಿಯಲ್ಲಿ,ನನಗೆ ಮತ್ತು ನನ್ನ ಗೆಳತಿಗೆ  ಹಂಚಿಕೆಯಾದ ಏರಿಯಾಗಳಲ್ಲಿ, ಒಂದು ವಿಶಾಲವಾದ ತೋಟದ ಮನೆಯ ಅಂಗಳದಲ್ಲಿ ಮಕ್ಕಳ ಕೂರಿಸಲು ಒಂದು ವರಾಂಡ  ಬಳಸಿಕೊಳ್ಳಲು ಅವಕಾಶ ಸಿಕ್ಕಿತು.

 ತೋಟದ ಮನೆ ಅಂದ ಮೇಲೆ ಕೇಳಬೇಕೆ,ಎಲ್ಲೆಲ್ಲೂ ಹಸಿರು,ಶುದ್ಧವಾದ ಗಾಳಿ,ಬೆಳಕು,ಕಲಿಕೆಗೆ ಒಳ್ಳೆಯ ವಾತಾವರಣ ಅನ್ನಿಸಿ,ನಾವಿಬ್ಬರೂ  ಬೇರೆ ಬೇರೆ ಗುಂಪು ಗಳಲ್ಲಿ ಕುಳಿತು ಕಲಿಸುತ್ತಿದ್ದಾಗಲೇ ಆ ಹುಂಜ ಬಂದು ನಮ್ಮ ಮನ ಸೆಳೆದದ್ದು.

ಅಂತೂ ತರಗತಿಗಳ ಮುಗಿಸಿ ನಾವಿಬ್ಬರೂ ಮರಳಿ ಹಿಂದಿರುಗುವಾಗ ನಾನು ನನ್ನ ಗೆಳತಿಗೆ”ಅಲ್ಲರಿ, ತೋಟದ ಮನೆ ಇದ್ರೆ ಎಷ್ಟು ಚಂದ ಅಲ್ವಾ,ಹಸು,ಕುರಿ,ಕೋಳಿ ,ನಾಯಿ ,ಬೆಕ್ಕು ಎಲ್ಲಾ ಸಾಕೊಂಡು ಇರಬಹುದಿತ್ತು.ದಿನ ನಿತ್ಯ ಮನೆ ಕೆಲಸ,ಹೊರಗಿನ ಕೆಲಸ ಅಂತ ದಣಿಯೋದಕ್ಕಿಂತ ಎಷ್ಟೋ ವಾಸಿ”ಎಂದು ಕೊರಗಿದಾಗ ಅವರು”ಹೌದಪ್ಪ,ನನಗಂತೂ ಗಿಡ,ಮರ,ಪ್ರಾಣಿ,ಪಕ್ಷಿ ಎಲ್ಲಾ ಇರೋ ಮನೆ ಬೇಕು ಅನಿಸುತ್ತೆ, ಈ ಕಾಲದಲ್ಲಿ ಅದೆಲ್ಲ ನಮ್ಮ ಕೈ ಗೆಟುಕದ ಆಸೆಗಳೆ ಬಿಡಿ,ಈಗಿನ ರೇಟ್ ನಲ್ಲಿ ತೋಟದ ಮನೆ ಮಾಡಿದ ಹಾಗೆಯೇ”ಎಂದವರು,

“ಮೇಡಂ ನನಗೆ ಒಂದು ವಿಚಿತ್ರ ಆಸೆಯಿತ್ತು,ಯಾರಿಗೂ ಹೇಳಿಲ್ಲ,ನಿಮಗೆ ಹೇಳ್ತೀನಿ ,ನಗೋದಿಲ್ಲ ತಾನೇ”ಎಂದಾಗ,ನನಗೆ ಕುತೂಹಲ ತಡೆಯಲಾರದೆ,”ಛೆ ಖಂಡಿತ ಇಲ್ಲ,ಅದೇನು ಹೇಳಿ “ಎಂದೆ.

“ಅದೂ,ನನಗೆ ಚಿಕ್ಕಂದರಿಂದ ಒಂದು ಕೋಳಿ ಫಾರ್ಮ್ ಮಾಡೋ ಆಸೆ ಇದೆ,ಚೆನ್ನಾಗಿ ಕೋಳಿ ಸಾಕಿ,ಒಂದು ಆಪೆ ಆಟೋದಲ್ಲಿ ಹಾಕ್ಕೊಂಡು,ಅಂಗಡಿ ಅಂಗಡಿಗೆ,ನಾನೇ ಆಪೆ ಓಡಿಸ್ಕೊಂಡು ಹೋಗಿ ಸಪ್ಲೈ ಮಾಡ್ಕೊಂಡು,ವ್ಯವಹಾರ ಮಾಡ್ಬೇಕು ಅನ್ನಿಸುತ್ತಿತ್ತು,”ಎಂದಾಗ, ನಗೋದಿಲ್ಲ ಅಂತ ಹೇಳಿದ್ರೂ ನನ್ನಿಂದ ತಡೆಯಲಾರದೆ ನಗು ಕಟ್ಟೆಯೊಡೆದು ಹರಿಯಲಾರಂಭಿಸಿತು. ಅವರೂ ನಗುತ್ತಾ”ನೋಡಿದ್ರ ನಾನ್ ಹೇಳ್ಳಿಲ್ವ,ವಿಚಿತ್ರ ಆಸೆ ಅಂತಾ”ಅಂತ ಹೇಳಿ ತಾವೂ ನಗುವಿಗೆ ಜೊತೆಯಾದರು.

Poultry Images, Stock Photos & Vectors | Shutterstock

ಮಾರನೆಯದಿನ ಶಾಲೆಯಲ್ಲೂ ಇದೇ ವಿಷಯದ ಚರ್ಚೆ ಮತ್ತು ನಗು.ಎಲ್ಲರ  ಮನದಾಳದ ಆಸೆಗಳು ಹೇಳಿಕೊಳ್ಳ ಲು ಆಗದಿರುವುವು ಆಚೆ ಬರಲಾರಂಭಿಸಿದವು.

ನನ್ನ ಸಹೋದ್ಯೋಗಿಯೊಬ್ಬರು ಮೆಲು ಮಾತಿನ,ಮೃದು ಸ್ವಭಾವದ, ಸಾಂಪ್ರದಾಯಿಕ ಉಡುಗೆ ತೊಡುಗೆಗಳ,ದೇವರು ದಿಂಡಿರ ಮೇಲೆ ಅಪಾರ ನಂಬಿಕೆ ಭಕ್ತಿ ಹೊಂದಿರುವ  ಮಹಿಳೆ.ಅವರ ಆಸೆ ಮಾತ್ರ,ಅವರ ಬಾಯಲ್ಲೇ ಕೇಳಿದಂತೆ”ನನಗಂತೂ ಒಂದು ಬುಲ್ಲೆಟ್ ಬೈಕ್ ತೊಗೊಂಡು, ಬ್ಯಾಕ್ ಪ್ಯಾಕ್ ಹಾಕ್ಕೊಂಡು ಇಡೀ ಪ್ರಪಂಚ ಸುತ್ತಬೇಕು ಅನ್ನೋ ಆಸೆ ಇದೆ”ಎನ್ನುವುದನ್ನು ಕೇಳಿ,ಸಾಂಪ್ರದಾಯಿಕ ಮನಸ್ಸಲ್ಲಿ  ಆಧುನಿಕತೆಗೆ ತುಡಿಯುವ ಚೈತನ್ಯವೂ ಇದೆ ಎನ್ನಿಸಿ ಖುಷಿಯಾಯಿತು.

Woman in black thick-strap shirt and blue jeans riding red cruiser  motorcycle in the middle of gray asphalt road during daytime HD wallpaper |  Wallpaper Flare

ಮರುದಿನ ಗೆಳತಿಯೊಬ್ಬಳು ಕರೆಮಾಡಿ ಹರಟುತ್ತಿದ್ದಾಗ ಅವಳಿಗೆ ಈ ಆಸೆಗಳ ವಿಷಯಗಳ ಹೇಳಿದಾಗ ಅವಳು”ಅಯ್ಯೋ ಅದಕ್ಕೇನು,ನನಗಂತೂ ದಿನಕ್ಕೊಂದು ರೀತಿಯ ವಿಚಿತ್ರ ಆಸೆಗಳು ಬರುತ್ತವೆ,ಯಾರ ಹತ್ತಿರ ಹೇಳೋದು? ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಮ್ಮನಾಗುತ್ತೇನೆ.ಮೊನ್ನೆ ದಿನ ಏನಾಯಿತು ಗೊತ್ತಾ ನನ್ನ ಗಂಡನ ಸ್ನೇಹಿತರೊಬ್ಬರ ಕುಟುಂಬ ಮೊದಲ ಬಾರಿ ನಮ್ಮ ಮನೆಗೆ ಯಾವುದೋ ಊರಿಂದ ಬರುತ್ತಾ ಇದ್ದರು,ನಾನು ಅಡಿಗೆ ಎಲ್ಲಾ ಮಾಡಿಕೊಂಡು ಸತ್ಕಾರ ಮಾಡಲು ರೆಡಿಯಾಗಿದ್ದೆ .

ಮಧ್ಯಾಹ್ನದಷ್ಟರಲ್ಲಿ ಅವರೆಲ್ಲ ಬಂದು ನನ್ನ ಗಂಡ ಪರಸ್ಪರ ಪರಿಚಯ ಕೂಡ ಮಾಡಿ ಕೊಟ್ಟರು, ಇವರ ಆ ಸ್ನೇಹಿತ ಎಷ್ಟು ಮುದ್ದು ಮುದ್ದಾಗಿದ್ದ ಅಂದರೆ ನನಗೆ ಇದ್ದಕ್ಕಿದ್ದಂತೆ ಆ ಮನುಷ್ಯನನ್ನು ನೋಡಿ ಚಿಕ್ಕ ಮಕ್ಕಳನ್ನು ನೋಡಿದರೆ ಎತ್ತಿಕೊಳ್ಳಬೇಕು ಅನ್ನೋ ಆಸೆಯಾಗುವುದಿಲ್ಲವ ಆ ರೀತಿ ಅನ್ನಿಸಿಬಿಟ್ಟಿತು. ಈ ಹುಚ್ಚಿಗೇನು ಹೇಳುವುದು.ನನ್ನ ಗಂಡನಿಗೆ ಹೇಳುವ ಧೈರ್ಯ ನನಗಾಗಲಿಲ್ಲ.ಬಚ್ಚಲು ಮನೆಗೆ ಹೋಗಿ ಜೋರಾಗಿ ನಕ್ಕು ಸುಮ್ಮನಾದೆ” ಎಂದಾಗ ಸೋಜಿಗ ವೆನಿಸಿ”ಅಲ್ಲ ಕಣೇ ಯಾಕೆ ಹಾಗನ್ನಿಸಿದ್ದು,ನೀನು ನೋಡಿದರೆ ಗೌರಮ್ಮನ ಹಾಗೆ ಇರ್ತಿಯಾ ಯಾವಾಗಲೂ,ಅದು ಯಾಕೆ ಅವನ ಮೇಲೆ ಹಾಗೆ ಅನ್ನಿಸಿತು”ಅಂದಿದಕ್ಕೆ,”ಗೊತ್ತಿಲ್ಲ ಕಣೆ,ಏನೋ ಆ ಕ್ಷಣ ಹಾಗನ್ನಿಸಿತು,ಆಮೇಲೆ ಅವರೆಲ್ಲ ಹೋದ ಮೇಲೆ ಏನೂ ಅನ್ನಿಸಲಿಲ್ಲ”ಎಂದು ಸುಮ್ಮನಾದಳು.

ಹುಡುಕುತ್ತಾ ಹೋದರೆ ಪ್ರತಿಯೊಬ್ಬರಲ್ಲೂ ಈ ರೀತಿ ” ಯಾರಿಗಾದರೂ ಹೇಳಿದರೆ  ನಗೆಪಾಟಲಿಗೆ ಈಡಾಗುವೆನೇನೋ ” ಅನ್ನಿಸುವ,ಮುಗ್ದ,ವಿಚಿತ್ರ ಬಯಕೆಗಳು ಇದ್ದೇ ಇರುತ್ತವೆ.ಮಕ್ಕಳಂತೂ ಬಿಡಿ, ಕೇಳುತ್ತಾ ಹೋದರೆ ಒಂದು ಕಿನ್ನರ ಪ್ರಪಂಚವನ್ನೇ ಸೃಷ್ಟಿ ಮಾಡುವಷ್ಟು ಕಥೆಗಳ ಹೇಳಿಯಾರು.

ನನ್ನ ಮಕ್ಕಳಿಬ್ಬರೂ ಚಿಕ್ಕವರಿದ್ದಾಗ ನನ್ನ ಮನೆ ಕೆಲಸದ ಸಹಾಯಕ್ಕೆ ಸಾವಿತ್ರಮ್ಮ ಅಂತ ಒಬ್ಬರು ಮಹಿಳೆ ಬರುತ್ತಿದ್ದರು.ನನ್ನ ಶಾಲೆ ಮನೆಯಿಂದ ದೂರ ಇದ್ದುದರಿಂದ ದಿನವೂ ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಹೊರಟು ಹೋಗುವ ಧಾವಂತದಲ್ಲಿರುತ್ತಿದ್ದ ನಾನು ಮಕ್ಕಳ ಮಾತುಗಳ ಕಡೆಗೆ ಅಷ್ಟು ಗಮನ ನೀಡಲು ಆಗದೆ,ಸುಮ್ಮನೆ ಅವರು ಹೇಳಿದ್ದಕ್ಕೆಲ್ಲಾ “ಹೂಂ”  ಗುಟ್ಟಿ ಕೊಂಡು ಇರುತ್ತಿದ್ದೆ.ಅವರು ಹೇಳಿದ್ದಕ್ಕೆ ಸರಿಯಾದ ಉತ್ತರ ನನ್ನಿಂದ ಬಾರದ ಕಾರಣ ಅವರ ಗಮನವೆಲ್ಲ ಸಾವಿತ್ರಮ್ಮನ ಕಡೆ ತಿರುಗಿತು. ಅವಳೋ ಕೆಲಸ ಮಾಡಿಕೊಂಡೇ ಮಕ್ಕಳ ಜೊತೆ ಮಾತೇ ಮಾತು.”ಹೌದಾ ಪುಟ್ಟಾ,ಆಮೇಲೆ,ಓಹ್ ಹಂಗಾ,ಅಯ್ಯೋ ನಂಗೆ ಗೊತ್ತೇ ಇರಲಿಲ್ಲ”ಹೀಗೆ ಮಕ್ಕಳ ಜೊತೆ ಮಕ್ಕಳಾಗಿ ಮಾತನಾಡುತ್ತಾ ಇರುತಿದ್ದವಳನ್ನು ಮಕ್ಕಳಿಬ್ಬರೂ ಬಹಳ ಹಚ್ಚಿಕೊಂಡು ಬಿಟ್ಟಿದ್ದರು.ಅವರಿಗೆ ಗೊತ್ತಿದ್ದ ಭೂಮಿ ಮೇಲಿರೋ ವಿಷಯವನ್ನೆಲ್ಲ ಅವಳ ಕಿವಿಗೆ ತುಂಬಬೇಕು.ನನಗೆ ಕೆಲವು ಬಾರಿ ಅವರ ಕುಚೇಷ್ಟೆಯ ಮಾತುಗಳಿಗೆ ರೇಗಿ ಹೋದರೂ ಅವಳು ಮಾತ್ರ ಒಂದು ದಿನವೂ ಬೇಸರಿಸಿದವಳೇ  ಅಲ್ಲ.

ಆಗ ಒಂದು ದಿನ ಸಂಜೆ ಸುಮ್ಮನೆ ಕುಳಿತಿದ್ದಾಗ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು ಅನ್ನೋ ಆಸೆ ಇದೆ “ಎಂದು ಕೆಣಕಿದೆ,ನನ್ನ ಮಗಳು ಪಟ್ ಅಂತ  ” ನಾನಂತೂ ದೊಡ್ಡವಳಾದ ಮೇಲೆ ಮನೆ ಮನೆಗೆ ಹೋಗಿ ಪಾತ್ರೆ ತೊಳೆಯುವ ಸಾವಿತ್ರಮ್ಮ ಆಗ್ತೀನಿ”ಅಂತ ಘೋಷಿಸಿಯೆ ಬಿಟ್ಟಳು.  ಆ ಉತ್ತರವನ್ನು ಕೇಳಿ ನಿಬ್ಬೆರಗಾದ ನನಗೆ ನಗು ತಡೆಯದಾದರೂ, ಮಕ್ಕಳ ನಿಷ್ಕಲ್ಮಶ ಮನಸ್ಸನ್ನು ಪ್ರೀತಿ  ಸೆಳೆಯುವಷ್ಟು ಮತ್ತೇನೂ ಸೆಳೆಯದು ಅನ್ನಿಸಿತು. ಮಾರನೇ ದಿನ ಸಾವಿತ್ರಮ್ಮನಿಗೆ ಹೇಳಿದಾಗ ಅವಳ ಕಣ್ಣಾಲಿಗಳು ತುಂಬಿ ಬಂದು”ಅಯ್ಯೋ ನನ್ನ ಕಂದಾ” ಎಂದು ಮಗಳ ಮುದ್ದಿಸಿದ್ದೇ ಮುದ್ದಿಸಿದ್ದು.

ಇನ್ನು ಶಾಲೆಯಲ್ಲಿ ಮಕ್ಕಳನ್ನು “ದೊಡ್ಡವರಾದ ಮೇಲೆ ಏನಾಗಬೇಕು  ಅಂದುಕೊಂಡಿದ್ದೀರಿ ಎಂದು ಹೇಳಿ” ಎಂದು ಕೇಳಿದರೆ,ದೊಡ್ಡ ಮಕ್ಕಳಾದರೆ,”ಡಾಕ್ಟರ್,ಎಂಜಿನಿಯರ್, ಆರ್ಮಿ,ಡ್ರೈವರ್,ಪೊಲೀಸ್ ,ಟೀಚರ್”ಅಂತೆಲ್ಲ ಉತ್ತರ ಹೇಳಿದರೆ,ಚಿಕ್ಕವರಲ್ಲಿ, ಹುಡುಗರೆಲ್ಲ ದೊಡ್ಡ  ಲಾರಿಯಿಂದ ಶುರುವಾಗಿ ರೈಲಿನವರೆಗೆ ಪ್ರಪಂಚದಲ್ಲಿರುವ ಎಲ್ಲಾ ವಾಹನಗಳನ್ನು ಓಡಿಸುವವರೆ.ಕೋಳಿ ,ಮೀನಂಗಡಿ ಇಡುವವರು, ಐಸ್ಕ್ರೀಮ್ ಡಬ್ಬದಲ್ಲಿ ಹೊತ್ತು ಮಾರುವವರು,ಸೈಕಲ್ ರಿಪೇರಿ,ಮೊಬೈಲ್ ರಿಪೇರಿ ಅಂಗಡಿ ಇಡುವವರು ಎಲ್ಲಾ ಸಿಕ್ಕರು.ಹುಡುಗಿಯರಲ್ಲಿ ಮಾತ್ರ ಬಹಳಷ್ಟು ಜನಕ್ಕೆಅವರ ಟೀಚರ್ ಥರ ಆಗೋ ಆಸೆ.

ಇಷ್ಟೆಲ್ಲಾ ಹೇಳಿ ಇನ್ನು ನನ್ನ ಆಸೆ ಹೇಳದೆ ಇದ್ದರೆ ಹೇಗೆ.ಆಗಿನ್ನೂ ಹೈಸ್ಕೂಲ್ ನಲ್ಲಿದ್ದೆ.ಅಪಾರ ಓದುವ ಹುಚ್ಚಿದ್ದ ಅಪ್ಪ ತರುವ ಪುಸ್ತಕಗಳನ್ನೆಲ್ಲಾ ನಾನೂ ಓದುವ ಚಪಲ.ಒಂದು ದಿನ ಅಪ್ಪ ಒಂದು ಚಿಕ್ಕ ಪುಸ್ತಕ ತಂದು ಅದನ್ನು ಓದಲು ಕುಳಿತವರು ಮುಗಿಯುವ ತನಕ ಮೇಲೇಳಲೆ ಇಲ್ಲ.

ಮಾರನೇ ದಿನ ನಾನು ‘ ಇದ್ಯಾವ ಪುಸ್ತಕ’ ಅನ್ನೋ ಕುತೂಹಲದಿಂದಾಗಿ ನೋಡಿದರೆ,ಅದು ಜಪಾನಿನ ಕೃಷಿ ವಿಜ್ಞಾನಿ ಮಸನೊಬು ಫುಕುವೋಕ ರವರ ,ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿದ್ದ

“ಒಂದು  ಹುಲ್ಲೆಸಳ  ಕ್ರಾಂತಿ”ಪುಸ್ತಕ.

ಓದಲು ಕುಳಿತಿದ್ದೆ ಬಂತು,ಮುಗಿಸುವ ತನಕ

  ಕೈಬಿಡಲು    ಮನಸ್ಸಾಗಲಿಲ್ಲ.

Organic Farming A Sustainable Way Of Living | The Live Nagpur

 ಆ ಪುಸ್ತಕ ಒಳಗೊಂಡಿದ್ದ , ಫುಕುವೊಕರವರ, ‘ನಿಸರ್ಗದೊಂದಿಗೆ ಹೊಂದಿಕೊಂಡು ಮನುಷ್ಯ ನೆಮ್ಮದಿ ಯಾಗಿ ಹೇಗೆ ಬದುಕಬಹುದೆಂಬ ವಿಚಾರ ಧಾರೆ,ಅವರ ನೈಸರ್ಗಿಕ ಕೃಷಿ ಪದ್ಧತಿ ಅನುಭವಗಳು , ಮನುಷ್ಯ ಹೇಗೆ ಪ್ರಕೃತಿಯ ಒಂದು ಭಾಗ ಮಾತ್ರ ‘ ಎಂದೆಲ್ಲ ವಿವರಿಸಿದ್ದ ವಿಷಯಗಳು  ,ಆಗ ಎಷ್ಟು ಇಷ್ಟವಾಯಿತೆಂದರೆ ತೊಗೊ ಅವತ್ತಿನಿಂದಲೆ ಕನಸು ಮನಸ್ಸಲ್ಲೆಲ್ಲ ನನ್ನದೇ  ಆದ ಒಂದು ನೈಸರ್ಗಿಕ ಕೃಷಿ ಪದ್ಧತಿಯ ತೋಟ ಕಾಡ ಲಾರಂಭಿಸಿತು.ಆದರೆ ಯಾರಿಗಾದರೂ ಹೇಳುವುದುಂಟ!

ಶಾಲೆಯಲ್ಲಿ ಆಗ ಒಂದು ಪರೀಕ್ಷೆಯಲ್ಲಿ ಕೇಳಿದ್ದ “ನಿಮ್ಮ ಭವಿಷ್ಯದ ಕನಸು “ಅನ್ನೋ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದಾಗ, ಪುಟಗಟ್ಟಲೆ ನನ್ನ ತೋಟದ ಕನಸಿನ ಬಗ್ಗೆ ಬರೆದಿದ್ದು ಬರೆದಿದ್ದೇ.ಆದರೆ ಆ ಕನಸು ನನಸಾಗುವುದು ಸಾಧ್ಯವೇ? ತವರು ಮನೆ ಜಮೀನು ಅಣ್ಣ ತಮ್ಮಂದಿರದ್ದು,ಗಂಡನ ಮನೆ ಜಮೀನು ಗಂಡನದ್ದು.ಆಸೆಯ ಹೇಳಿದರೆ ಸಿಗುವ ಉತ್ತರ “ನಿನಗೆ ತಲೆ ಕೆಟ್ಟಿದೆ”ಅಂತ.

ಬಹುಶಃ ಕನಸು ಕಾಣುವುದು,ಆಸೆಗಳ ಪಡುವುದು ಹೆಣ್ಣು ಗಂಡುಗಳಿಬ್ಬರಿಗೂ ಸಾಮಾನ್ಯವಾಗಿ ಬಂದಿರುವ ಗುಣಗಳೇ.  ಆದರೆ ಗಂಡು ಮಕ್ಕಳ ಆಸೆ ಕನಸುಗಳೆಂದೂ ವಿಚಿತ್ರ ವೆನಿಸುವುದಿಲ್ಲ. ಏನಾದರೂ ಭಿನ್ನ ಮಾರ್ಗದಲ್ಲಿ ಯೋಚಿಸಿ ಅದನ್ನು ಸಾಕಾರ ಮಾಡಿಕೊಳ್ಳಲು ಹೊರಟರೆ ಅವರು ಕಷ್ಟ ಪಟ್ಟು ಕೆಲಸ ಮಾಡಿದರೆ ಸಾಕು, ಅಂದುಕೊಂಡಿದ್ದೆಲ್ಲ ಸಿಕ್ಕರೂ ಸಿಗಬಹುದು.ಆದರೆ ಹೆಣ್ಣು ಮಕ್ಕಳ ಅಸಾಮಾನ್ಯ ಕನಸುಗಳು ಬಾಯಿಂದ ಆಚೆ ಬರಲೂ ಅಸಾಧ್ಯ ಧೈರ್ಯ ಬೇಕು,ಅಕಸ್ಮಾತ್ ಹೇಳಿಕೊಂಡರೂ ಅದನ್ನು ಸಹಜವಾಗಿ ಸ್ವೀಕರಿಸುವುದು ಎಲ್ಲರಿಂದ ಆಗದು. ಬಹುಶಃ ಮೇಲ್ವರ್ಗದವರಲ್ಲಿ, ಇಲ್ಲವೇ ಎಲ್ಲೋ ಕೆಲವರು  ಅದೃಷ್ಟವಂತರಾಗಿದ್ದಲ್ಲಿ, ಗಟ್ಟಿ ಎದೆಯ  ಧೈರ್ಯಶಾಲಿ ಗಳಾಗಿದ್ದಲ್ಲಿ, ಇಲ್ಲವೇ ಪ್ರೋತ್ಸಾಹಿಸುವ ಪೋಷಕರಿದ್ದರೆ ಮಾತ್ರ ವಿಚಿತ್ರ ಕನಸುಗಳು ನನಸಾಗುವುದು ಸಾಧ್ಯವೇನೋ.

    ಬಹುತೇಕ ಹೆಣ್ಣು ಮಕ್ಕಳಿಗೆ ಸಮಾಜ ನಿರ್ಮಿಸಿರುವ ಚೌಕಟ್ಟಿನೊಳಗೆ,ಆರಾಮದಾಯಕ ಕ್ಷೇತ್ರಗಳಲ್ಲೇ ತಮ್ಮ ತಮ್ಮ ಜೀವನ ರೂಪಿಸಿಕೊಳ್ಳುವ ಸಲಹೆ ಸೂಚನೆಗಳು ಸಿಗುವುದೇ ಹೆಚ್ಚು.ಅದರಾಚೆ ಯೋಚಿಸಿದರೆ ಕೆಲವು “ಅದು ಹೆಂಗಸರಿಗೆ ಸಾಧ್ಯವಿಲ್ಲ,ಅವರಿಂದಾಗದು”ಎಂದಾದರೆ, ಹಲವು  ನಗೆಪಾಟಲಿಗೆ ಒಳಗಾಗುವ ವಿಷಯಗಳೇ.

ಎಲ್ಲೋ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹೊರತಾದ ಉದಾಹರಣೆಗಳು  ಸಿಗಬಹುದೇನೋ.

           ಅನಿವಾರ್ಯವಾಗಿ ಬೇರೆ ದಾರಿ ಕಾಣದೆ ಜೀವನೋಪಾಯಕ್ಕಾಗಿ ಕೆಲವು ಹೆಂಗಸರು ಗಂಡಸರು ಮಾಡುವ ವೃತ್ತಿಗಳನ್ನು,ಉದಾಹರಣೆಗೆ,ಆಟೋ ಡ್ರೈವರ್, ಬಸ್, ಟ್ರೈನ್  ಡ್ರೈವರ್ ಗಳಂತಹ ಕೆಲಸ ಕೈಗೊಂಡಿರುವ ಉದಾಹರಣೆಗಳಿವೆ,ಆದರೆ ಅದೇ ವೃತ್ತಿ ಕೈಗೊಂಡು ಮಾಡುತ್ತೇನೆ ಅನ್ನುವ ಮನೋಭಾವ ಹೆಂಗಸರಲ್ಲಿಯೇ  ಬರುವುದು ಅಪರೂಪದಲ್ಲಿ ಅಪರೂಪವೇ.ಅದನ್ನು ಸಹಜವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ.ಯಾರಾದರೂ ಹುಡುಗಿ ಪೈಲಟ್ ಆದರೆ ಇಲ್ಲವೇ ಸೈನ್ಯ ಸೇರಿದರೆ ಅದು ದೊಡ್ಡ ಸಾಧನೆ ಎಂದು ಬಿಂಬಿಸುವುದುದಕ್ಕಿಂತ ಸಹಜವಾಗಿ ಯಾಕೆ ತೆಗೆದುಕೊಳ್ಳಬಾರದು.

ಎಲ್ಲಾ ರೀತಿಯ ವಿದ್ಯಾಭ್ಯಾಸದ ಕೋರ್ಸ್ ಗಳು,ವೃತ್ತಿ ಪರ ತರಬೇತಿಗಳು,ಉದ್ಯೋಗಗಳು ಎಲ್ಲರಿಗೂ ಸಮಾನ ಅನ್ನುವ ಮನೋಭಾವ ಸಹಜವಾಗಿ  ಮಕ್ಕಳಲ್ಲಿ ಯಾಕೆ ಬೆಳೆಸಬಾರದು.?

ಆ ಸಮಾನತೆಯ ಸಮಾಜ ನಿರ್ಮಾಣ ಬಹುಶಃ ಸಧ್ಯಕ್ಕಂತೂ ಸಾಧ್ಯವಿಲ್ಲ. ಅಲ್ಲಿಯವರೆಗೆ  ಇರುವ ಕನಸುಗಳ,  ಆಸೆಗಳ   ಅದುಮಿ. ಇಟ್ಟುಕೊಳ್ಳಲಾದೀತೇ.

ಅವುಗಳಿಗೆ ಪರ್ಯಾಯವಾಗಿ ಬೇರೆ ಹವ್ಯಾಸಗಳ ಬೆಳೆಸಿಕೊಂಡು ಖುಷಿ ಪಡುವವರು ಇದ್ದಾರೆ.ಬುಲ್ಲೆಟ್ ಓಡಿಸಲಾಗದಿದ್ದರೂ ಸ್ಕೂಟಿ,ಕಾರ್ ಓಡಿಸುವುmದು ಕಲಿತು ಓಡಾಡುವುದು ಇದ್ದೇ ಇದೆ. ಪುಕುವೋಕಾನ ತೋಟ ನನ್ನ ಮನೆಯ ಬಾಲ್ಕನಿಯ ಕುಂಡಗಳಲ್ಲಿ ಅರಳುತ್ತಿದೆ.ನಾನಂತೂ ಕುಂಡದಲ್ಲಿ ಇರುವ ಗಿಡಗಳ ಜೊತೆಗೆ ಬೇರೆ ಯಾವ ಗಿಡ ಹುಟ್ಟಿದರೂ ಅದ ಕೀಳಲಾರೆ.ಗಿಡಗಳಿಗೆ ರೋಗ ,ಕೀಟ ಬಾಧೆ ತಗುಲಿದರೆ ಯಾವ ಕೀಟನಾಶಕಗಳ ಕೂಡ ಬಳಸುವುದಿಲ್ಲ.ಗಿಡ ಗಟ್ಟಿಯಾಗಿದ್ದರೆ ತಾನೇ ಬದುಕುತ್ತದೆ ಇಲ್ಲದೇ ಹೋದರೆ ಇನ್ನೊಂದು ಗಿಡಕ್ಕೆ ದಾರಿ ಮಾಡಿಕೊಟ್ಟು ಮಣ್ಣು ಸೇರುತ್ತದೆ. ಈ ರೀತಿ ವರುಷಗಟ್ಟಲೆ ಕುಂಡದ ಸೀಮಿತ ಮಣ್ಣು,ಬಾಲ್ಕನಿಯ ಕೊಂಚ ಬೆಳಕಿನಲ್ಲಿ ಬೆಳೆದು  ಗಟ್ಟಿಯಾಗಿರುವ  ನನ್ನ ಹೂ ಗಿಡಗಳು  ಹೂವರಳಿಸಿ ನಗುವಾಗ,ಯಾವುದಕ್ಕೂ  ಜಗ್ಗದ ಪ್ರಕೃತಿಯ ಅದಮ್ಯ ಚೇತನದ  ತುಣುಕೊಂದು ನನ್ನ ‘ಫುಕುವೋಕ ತೋಟ’ದ ಆಸೆಯನ್ನು ಜೀವಂತ ವಾಗಿರಿಸಿರುವಂತೆ ಅನ್ನಿಸುತ್ತದೆ.

ಕನಸು ಕಾಣುವುದು ,ಆಸೆ ಪಡುವುದು   ನನಸಾಗಲೆ ಬೇಕು ಅಂತ ಏನೂ ಅಲ್ಲವಷ್ಟೇ.ಬದುಕಿನ ಕಠಿಣ ಕತ್ತಲ ದಾರಿಗಳ ಸವೆಸುವಾಗ ಹಗಲು ಗನಸುಗಳ ದಾರಿ ದೀಪ ವಿದ್ದರೆ ಗಮ್ಯ ಸುಲಭವಾಗಿ ಸಿಗುವುದೇನೋ.ಆಸೆಯೆಂಬ ಚಾಲನಾಬಲ ಇಲ್ಲದೇ ಹೋಗಿದಿದ್ದರೆ ಬದುಕಿನ ಬಂಡಿ ಎಳೆಯುವುದೆಂತು?ತನ್ನ ಮುಂದೆ ತೂಗುಬಿಟ್ಟ ಕ್ಯಾರಟ್ ನ  ಆಸೆಗೆ ಹೇಸರಗತ್ತೆ ಯೊಂದು ಮುಂದೆ ಮುಂದೆ ಸಾಗುವಂತೆ,ಬಣ್ಣದ ಕನಸುಗಳ ಹಿಂಬಾಲಿಸಿ ಜೀವನ ಯಾತ್ರೆ ಸಾಗುತ್ತಿದೆ.

*******************************************************************

8 thoughts on “ವಿಚಿತ್ರ ಆಸೆಗಳು…ಹೀಗೊಂದಷ್ಟು,

  1. ಚೆನ್ನಾಗಿದೆ. ನನ್ನ ನೆನಪಿನ ಬುಟ್ಟಿಯಿಂದ ಒಂದಷ್ಟು ವಿಚಿತ್ರ ಆಸೆಗಳು ಇಣುಕಿ ನೋಡಲು ಪ್ರೇರಣೆಯಾಯಿತು, ನಿಮ್ಮ “ವಿಚಿತ್ರ ಅಸೆಗಳು ಹೀಗೂಂದಷ್ಟು” ವಿನಿಂದ…

  2. ಚೆಂದದ ಬರೆಹ ಸಮತಾ..ನಿಮ್ಮ ಕನಸುಗಳೆಲ್ಲಾ ನನಸಾಗಲೀ..ಆಸೆಗಳೆಲ್ಲಾ ಈಡೇರಲಿ..ಮನದ ಬತ್ತಳಿಕೆಯಿಂದ ಮತ್ತಷ್ಟು ಬರೆಹಗಳ ಸುಖ ಪ್ರಸವವಾಗಲಿ..

  3. ನಿಜ ಸಮತಾ ಮೇಡಂ ನಮ್ಮ ಆಸೆ ನೆರವೇರದ್ದಿದ್ದಾಗ ವಿಚಿತ್ರ ಆಸೆಗಳಾಗುತವೆ. ಆದರೆ ಆಸೆಗಳ ಆಶಾಗೋಪುರ ಕಟ್ಟಿಕೊಂಡು ಭರವಸೆಯ ಬದುಕನ್ನು ಹುಡಿಕಿ ಬದುಕುತಿರುವ ಸ್ತ್ರಿ ಯಾರಿಗೆ ಕಡಿಮೆ. ನಮ್ಮ ಬೆನ್ನನ್ನು ನಾವೇ ತಟ್ಟಿ ಸಂಸಾರದ ಕಣ್ಣಾಗುವ. ನಿಮ್ಮ ಬರಹ ಓದಿದ ನಂತರ ನಮ್ಮ ಆತ್ಮ ಗೌರವ ಇನ್ನಷ್ಟು ಹೆಚ್ಚಾಗಿದೆ.

Leave a Reply

Back To Top