ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು

ಕನಕ ಜಯಂತಿಯ ವಿಶೇಷ ಲೇಖನ

ಕನಕದಾಸ ಸಾಹಿತ್ಯದಲ್ಲಿ ಜಾತಿ

ಪ್ರಶ್ನೆಯ ಆಯಾಮಗಳು

ಡಾ.ಸುಜಾತಾ ಸಿ. ವಿಜಯಪುರ

ಕನ್ನಡ ನಾಡು ಕಂಡ ಶ್ರೇಷ್ಠ ಭಕ್ತ ಕವಿ ದಾರ್ಶನಿಕ ಸಮಾಜ ಸುಧಾರಕ ಮಹಾಮಾನವತಾವಾದಿ ಕನಕದಾಸರು. ವರ್ಗ ವರ್ಣಗಳ ಸಂಘರ್ಷದಲ್ಲಿ ನಲುಗುತ್ತಿದ್ದ ಸಮಾಜವನ್ನು ತೆರೆದ ಹೃದಯ ಮತ್ತು ಮನಸ್ಸುಗಳಿಂದ ಕಂಡು ವರ್ಗ ವರ್ಣರಹಿತ ತಳಹದಿಯ ಮೇಲೆ ನಿರ್ಮಿಸಬೇಕೆಂಬ ಅವರ ಆಶಯವಾಗಿತ್ತು. ಇಹಲೋಕದ ಜಂಜಾಟಗಳಿಂದ ತತ್ತರಿಸಿದ ಮನುಕುಲಕ್ಕೆ, ವಿಶ್ವಮಾನವ ಸಮತಾವಾದದ ಸಿದ್ಧಾಂತವನ್ನು ಕೀರ್ತನೆಗಳ ಮೂಲಕ ಬೋಧಿಸಿದರು. ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ಚಾತುರ್ವರ್ಣ ವ್ಯವಸ್ಥೆಯೇ ತಳಹದಿಯಾಗಿತ್ತು. ಕನಕದಾಸರು ಕೇವಲ ತಮ್ಮ ಸಾಹಿತ್ಯದಲ್ಲಿ ಜಾತಿಯನ್ನು ಕರಾಳತೆಯನ್ನು ಹೇಳಲಿಲ್ಲ ಬದಲಾಗಿ ಸ್ವತಃ ತಾವೂ ಅನುಭವಿಸಿದವರು.ವ್ಯಾಸರಾಯರು ತಮ್ಮ ಗರಡಿಯಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಾರೆ. ಹಾಗೇ  ಉಡುಪಿಯ ಶ್ರೀ ಕೃಷ್ಣನ ದೇವಾಲಯದಲ್ಲಿ ಕೀಳು ಕುಲದವರು ಎಂದು ಪ್ರವೇಶವನ್ನು ನಿಷೇಧಿಸಿದಾಗ ಅವರಿಗೆ ಭಕ್ತಿಮಾರ್ಗದಿಂದ ಕೃಷ್ಣನ ದರ್ಶನ ಕೂಡಾ ಆಗಬಹುದು ಎಂದು ತೋರಿಸಿಕೊಟ್ಟರು. ಕನಕನ ಕಿಂಡಿ ಕೇವಲ ಭಕ್ತಿಯ ಪರಾಕಾಷ್ಠೆಯ ಆಗದೇ ನಮ್ಮೆಲ್ಲರ ಎದುರಿಗಿದ್ದ ಜಾತಿಯ ಗೊಡೆಯನ್ನು ಒಡೆಯುವ ಕೆಲಸ ಮಾಡುತ್ತದೆ. 

ಋಗ್ವೇದದ ಪುರುಷಸೂಕ್ತಕ್ಕೆ ಸಂಬಂಧಿಸಿದ ವರ್ಣಸಿದ್ದಾಂತಕ್ಕೆ ಅನುಗುಣವಾಗಿ ವರ್ಗೀಕರಿಸಲಾಗಿತ್ತು. ಇವರ ಮೂಲ ಗುಣಕರ್ಮ ಭಾಗಶಃ ಆದರೂ ಕಾಲಾಂತರದಲ್ಲಿ ಮೇಲು-ಕೀಳುಗಳೆಂಬ ವೃತ್ತಿಪರ ಸಮಾಜವನ್ನು ನಿರ್ಮಾಣ ಮಾಡಲಿಕ್ಕೆ ಕಾರಣವಾದವು. ಇದನ್ನು ಕಂಡ ಕನಕದಾಸರು ಕುಲದ ವಿಚಾರವಾಗಿ ಹೀಗೆ ತಿಳಿಸಿದ್ದಾರೆ.

              ಕುಲ ಕುಲ ಕುಲವೆಂದು ಹೊಡೆದಾಡದಿರಿ

              ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ.

ಎಂಬ ಮೇಲಿನ ವಿಚಾರಗಳು ನವಸಮಾಜ ನಿರ್ಮಾಣಕ್ಕೆ ಸಮಾನತೆಯನ್ನು ಸಾರಲು, ವರ್ಗ-ವರ್ಣ ವ್ಯವಸ್ಥೆಗೆ ಎದಿರೇಟು ನೀಡಿದ್ದು, ವಿಶ್ವಸಂದೇಶವನ್ನು ಸಾರಿವೆ ಎಂಬುದನ್ನು ಸರ್ವರೂ ಒಪ್ಪಿಕೊಳ್ಳಬೇಕಾದ ವಿಚಾರವಾಗಿದೆ.  ಅಸಮಾನತೆಯನ ವಕ್ತಾರರನ್ನು ಪ್ರಶ್ನಿಸುವಾಗ ಅವರು ಬಳಸುವ ನಿದರ್ಶನಗಳೆಲ್ಲವೂ ದೇವರನ್ನು ಕೇಂದ್ರವಾಗಿಸಿಕೊಂಡಿದ್ದರಿಂದ ಒದಗಿದ ತಿಳುವಳಿಕೆ ಕೂಡಾ ಹೌದು ಎನ್ನುವುದನ್ನು ಮರೆಯುವಂತಿಲ್ಲ.

ಅವರ ಮೌಖಿಕ ಸಾಹಿತ್ಯವು ಕೀರ್ತನೆ ಭಜನೆಗಳ ರೂಪಗಳಲ್ಲಿ ಸಮಾಜದ ಏರು ಪೇರುಗಳನ್ನು ಕರಿಯ-ಬಿಳಿಯ, ಸತ್ಯ-ಅಸತ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡಿವೆ. ಮತ್ತು ಸದಾಚಾರ ಮಾರ್ಗವನ್ನು ತೋರಿಸಿವೆ. ಸಾಮಾಜಿಕ ಆಂದೋಲನಗಳಲ್ಲಿ ಎಲ್ಲ ದಾಸರೂ ಭಾಗಿಗಳಾಗಿ ಸರ್ವರೂ ಒಪ್ಪಿಕೊಳ್ಳುವ ಜೀವನ ಮೌಲ್ಯಗಳನ್ನು ಜನರ ಹೃದಯಗಳಿಗೆ ಕೀರ್ತನೆಗಳ ಮೂಲಕ ತಲುಪುವಂತೆ ಮಾಡಿರುತ್ತಾರೆ.

              “ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ

              ಅಟ್ಟು ಉಣ್ಣದ ವಸ್ತುಗಳಿಲ್ಲವೊ

              ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು

              ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ”

ನಮ್ಮ ಭೌತಿಕ ಕಾಯದ ಪಾಡುಗಳನ್ನು ಈ ಮಾತುಗಳು ವಿವರಿಸುತ್ತವೆ. ಭೂಮಿಯಲ್ಲಿಯ ಎಲ್ಲ ಜೀವಿಗಳ ಹುಟ್ಟು  ಸಾವಿನಲ್ಲಿ ವ್ಯತ್ಯಾಸಗಳೇನೂ ಇರವು; ಆದರೆ ಈ ವಿದ್ಯಮಾನದ ನೆಲೆ ಬೆಲೆಗಳು ನಮಗೆ ತಿಳಿದಿದೆಯೇ? ಸೃಷ್ಟಿಯ ಹಿಂದಿರುವ ಗುಟ್ಟುಗಳ ಅರಿವು ನಮಗಿಲ್ಲ; ಜನನ ಮರಣ ಅದರ ನಡುವೆ, ಊಟ ಕೂಟಗಳ ಆಟದ ಪ್ರೇಕ್ಷಕರಷ್ಟೆ ನಾವು.  ಹೀಗಿರುವಾಗ ಎಲ್ಲವನ್ನು ತಿಳಿದಿರುವ ಎಲ್ಲವನ್ನು ನಿಯಂತ್ರಿಸುವ ‘ಸರ್ವಜ್ಞ’ನನ್ನು ನಾವು ಮನನ ಮಾಡಿದರೆ ಆಗ ಸಹಜವಾಗಿಯೇ ನಮ್ಮ ಶ್ರೇಷ್ಠ ಕನಿಷ್ಟಗಳ ಸೀಮಿತ ಲೆಕ್ಕಾಚಾರ ಕೊನೆಯಾಗದಿದ್ದೀತೆ? ಕುಲವನ್ನು ನಿರಾಕರಿಸಲು ಕನಕದಾಸರಿಗೆ ಒದಗಿದ ಮೊದಲ ವಿಚಾರ ನಮ್ಮ ಗೋಚರ ಪ್ರಪಂಚಕ್ಕೆ ಸೇರಿದ ವಿವರಗಳು.

                ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ

                ಜಲದ ಕುಲವನೇನಾದಾರೂ ಬಲ್ಲಿರಾ

                ಜಲದ ದೊಬ್ಬೂಳಿಯಂತೆ ಸ್ಥಿರವಲ್ಲ ಈ ದೇಹ

                ನೆಲೆಯನರಿತು ನೀ ಹರಿದು ನೆನೆ ಮನುಜ

ಸೃಷ್ಟಿ ಕ್ರಮದಲ್ಲಿ ಯಾವುದು ಹುಟ್ಟಿತು ಎಂಬ  ಎಣಿಕೆಯ ವಿನಿಕೆ ನಡೆಯುತ್ತಲೇ ಬಂದಿದೆ. ಈ ಎಣಿಕೆಯಲ್ಲಿ ಪರಿಣಾಮವಾದವೋ ವಿಕಾಸವಾದವೊ ಯಾವ ವಾದವೇ ಆಗಿರಲಿ, ಅದು ಯಾವುದೋ ಒಂದು ಮೂಲವಸ್ತುವಿಗೆ ಬಂದು ನಿಲ್ಲಲೇಬೇಕು. ಸೃಷ್ಟಿಯ ಮೂಲ ನೀರು ಎನ್ನುವುದು ಅಂಥದೊಂದು ಎಣಿಕೆ. ಇದನ್ನು ಒಪ್ಪೋಣ: ಹೀಗೆ ಒಪ್ಪಿದರೂ ಪ್ರಶ್ನಾಪರಂಪರೆ ಅಲ್ಲಿಗೆ ನಿಲ್ಲದು; ಆ ನೀರಿನ ಮೂಲ ಯಾವುದು? ಇದಕ್ಕೆ ಉತ್ತರವನ್ನು ಹೇಳಬಲ್ಲವರು ಯಾರು? ಕುಲದ ಘೋಷಣೆ, ತಾನೆ? ನಮ್ಮೆಲ್ಲರಿಗೂ ಮೂಲವಾಗಿರುವ ನೀರಿನ ಮೂಲವೇ ನಮಗೆ ಗೊತ್ತಿಲ್ಲ; ಹೀಗಾಗಿ ನಮ್ಮ ಕುಲಗಳ ಘೋಷಣೆಯಲ್ಲಿ ಎಷ್ಟು ಖಚಿತತೆ ಇದ್ದೀತು? ಕನಕದಾಸರು ಜಲವನ್ನು ‘ತಾಯಿ’ ಎಂದು ಕರೆದಿರುವುದು ಇಲ್ಲಿ ಧ್ವನಿ ಪೂರ್ಣವಾಗಿದೆ. ನಮ್ಮ ತಿಳಿಗೇಡಿತನದ ವಿಕೃತಬುದ್ಧಿಯು ಎಲ್ಲ ಕೊಳೆಯನ್ನು ತೊಳೆದು ಹಾಕಲು ನೀರೆಂಬ ತಾಯಿಯನ್ನು ಅವರು ಬಳಸಿಕೊಳ್ಳುತ್ತಿರುವುದು ಮನನೀಯವಾಗಿದೆ. ನೀರಿನ ಮೂಲವನ್ನು ಕಂಡು ಹಿಡಿಯಲಾಗಿದ್ದ ನಮ್ಮ ಮಂದಮತಿಗೆ ಆ ನೀರಿನ ಶರೀರವೇ ಇಂಥ ಹುಡುಕಾಟದ ಸಾಪೇಕ್ಷತನವನ್ನೂ ನಶ್ವರತೆಯನ್ನೂ ಪ್ರಕಟಿಸುತ್ತಿರುವ ದೃಕ್–ದೃಶ್ಯ ವಿವೇಕವಾಗಿದೆ ಎನ್ನುವುದನ್ನು ಅವರು ತಿಳಿಸಿಕೊಡುತ್ತಿದ್ದಾರೆ.

                “ಏನೆಂತೆಂದೊಲಿವೆ ನಿನ್ನವರಂತೆ ಕೇಡಬುದ್ದಿ ಎನ್ನೊಳಿಲ್ಲ

                ಗುಣಹೀನರಲ್ಲದೆ ದೀನರ ಪಾಲಿಪ ಬುದ್ದಿ ನಿನ್ನೊಳಿಲ್ಲ

                ತರಳ ಪ್ರಹ್ಲಾದನಂದದಿ ನಿನ್ನ ರೂಪವ ಕೆಡಿಸಲಿಲ್ಲ

                ನರನಂತೆ ಬಂಡಿಯ ಬೋಧನ ಮಾಡಿ ನಾ ಹೊಡೆಸಲಿಲ್ಲ

                ಆತ್ಮನಿವೇದನಾಭಕ್ತಿ”

ಆತ್ಮನಿವೇದನವು ಎಲ್ಲದಕ್ಕಿಂತ ಹಿರಿದಾಗಿರುವುದು ಎಂದು ಕೀರ್ತನಾಚಾರ್ಯ ಬೇಲೂರು ಕೇಶವದಾಸರು ಹೇಳಿದ್ದಾರೆ.

                 “ಉದಯಾಸ್ತಮಾನವೆಂಬ ಎರಡು ಕೊಳಗವ ಮಾಡಿ

                  ಆಯುಷದ ರಾಸಿಯನು ಅಳೆಯಿರಯ್ಯಾ||

                  ಇದು ಕಾರಣ ಕಾಗಿನೆಲೆಯಾದಿಕೇಶವನ||

                  ಮುದದಿಂದ ನೆನೆನೆದು ಸುಖಿಯಾಗಿರಯ್ಯಾ

Kanakadasa Jayanti: 3-day programmes from tomorrow – Mysuru Today

ನಮ್ಮ ಜೀವನದ ಪೂರ್ತಿ ಕೃಷಿ ಮಾಡಿ ಒಟ್ಟು ಮಾಡಿದ ಧಾನ್ಯದ ರಾಶಿಯೆಂದರೆ ಅದು ನಮ್ಮ ಜೀವನವಲ್ಲದೆ ಬೇರಲ್ಲ. ಇದನ್ನು ಅಳೆಯುವ ಕೊಳಗ ಎಂದರೆ ಉದಯ ಅಸ್ತಮಾನ: ಎಂದರೆ ನಮ್ಮ ನಿತ್ಯದ ಬದುಕು. ನಾವು ಅಳೆಯ ಬೇಕಾದದ್ದು ನಾರಾಯಣ ಎಂಬ ಧಾನ್ಯವನ್ನು ನಮ್ಮ ಹೃದಯದಲ್ಲಿ ಎಷ್ಟು ಬೆಳೆದಿದ್ದೇವೆ ಎನ್ನುವದನ್ನು ‘ನೆನೆನೆನೆದು’ ಎನ್ನುವಾಗ ಅಳೆಯುವ ಪ್ರಕ್ರಿಯೆಯ ನಿರಂತರತೆಯನ್ನೆ ಅಭಿನಯಿಸಿದಂತಾಗುತ್ತದೆ. ಬೆಳೆ ಹೆಚ್ಚು ಬೆಳೆದಷ್ಟು ಕೃಷಿಕನಿಗೆ ಸಂತೋಷ; ಸುಖ; ಅಂತೆಯೇ ಆದಿಕೇಶವನನ್ನು ನೆನೆದಷ್ಟು ಖುಷಿಗೆ ಸಂತೋಷ; ಸುಖ ಅಂತರAಗದ ಕೃಷಿಕಾರನೇ ದಿಟನಾದ ಖುಷಿ ಎನ್ನುತ್ತಿದ್ದಾರೆ. ಮೇಲುನೋಟಕ್ಕೆ ಜೀವನದ ತತ್ವ ಸಾರವನ್ನು ಹೇಳುವ ಅವರ ಜನಪ್ರಿಯ ಕೀರ್ತನೆಯಾದ

           ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

           ತುತ್ತು ಹಿಟ್ಟಿಗಾಗಿ  ವೇದಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ

           ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಎಂಬ ಕೀರ್ತನೆಯೂ ಸಹ ಆಲಯವನ್ನು ಬಿಡಿಸಿಕೊಳ್ಳುವುದರ ಕಡೆಗಿನ ದಾಸರ ನಿರಾಕರಣೆಯ ಕಥನವನ್ನು ಹೇಳುತ್ತದೆ.

                        “ಜಪವ ಮಾಡಿದರೇನು, ತಪವ ಮಾಡಿದರೇನು

                        ಕಪಟ ಗುಣ ವಿಪರೀತ ಕಲುಷವಿದ್ದವರು”

ಎಂದು ಯಾವ ನೇಮ,ಜಪ ತಪ ಮಾಡಿದರು ಫಲವಿಲ್ಲವೆಂದು ಹೇಳುತ್ತಲೇ “ನೇಮವಿಲ್ಲದ ಹೋಮವೇತಕಯ್ಯಾ” ಎಂದು ಢಾಂಬಿಕ ಭಕ್ತಿಯನ್ನು ಖಂಡಿಸುತ್ತಾರೆ.

            ಮೇಲ್ವರ್ಗದವರು ಜಾತಿಯನ್ನು ತಮ್ಮ ಹಿರಿಮೆಗೆ ಅಂತಸ್ತಿಗೆ ಅಸ್ತ್ರವಾಗಿ ಬಳಸಿಕೊಂಡರೆ, ಕನಕದಾಸರು ಜಾತಿಯ ಬಳಕೆ ಅಪಾಯವೆಂದು; ಮನುಷ್ಯಕುಲದ ಅನಿಷ್ಟವೆಂದು ವಿರೋಧಿಸಿದರು. ಆದರೆ ಜಾತಿಯ ಸಾಂಸ್ಕೃತಿಕ ಅಸ್ಮಿತೆಯನ್ನು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ಸ್ಪರ್ಶಿಸುವುದನ್ನು ಕೈಬಿಡಲಿಲ್ಲ. ಅವರು ಜಾತಿಯನ್ನು ಭೇದಿಸಿದ ರೀತಿ ಆಶ್ಚರ್ಯವೆನಿಸುತ್ತದೆ. ಕನಕದಾಸರನ್ನು ಸುತ್ತುವರಿದ ಕತೆಗಳು, ಐತಿಹ್ಯಗಳೂ ಈ ಮೂಲವನ್ನು ನೆನಪಿಸುತ್ತವೆ.

Kanakadasa Jayanti 2020: Remembering the Great Kannada Poet on His Birth  Anniversary

ಹೀಗೆ ಹರಿದಾಸ ಸಾಹಿತ್ಯದಲ್ಲಿ ಮೊಟ್ಟ ಮೊದಲು ಹರಿದಾಸ ಕೀರ್ತನೆ ಎಂದು ಪ್ರಖ್ಯಾತಿಯಾದವರು ‘ಎಂತು ಮರುಳಾದೆ ನಾನೆಂತು ಮರುಳಾದೆ’, ಮತ್ತು ‘ಹರಿಯೇ ಇದು ಸರಿಯೇ!’ “ಚರಣ ಸೇವಕನಲ್ಲಿ ಕರುಣ ಬಾರದ್ಯಾಕೆ” ಎಂದು ತಮ್ಮ ಕೀರ್ತನೆಗಳಲ್ಲಿ ಹರಿಗೆನೇ ಪ್ರಶ್ನಿಸುತ್ತಾನೆ. ಶ್ರೀಪಾದರಾಜನದು ನರಹರಿತೀರ್ಥರ ನಂತರ ದಾಸಸಾಹಿತ್ಯವನ್ನು ಮುಂದುವರಿಸಿದ ಕೀರ್ತಿ ಇವರದಾಗಿದೆ. ‘ರಂಗವಿಠಲ’ ಎಂಬ ಅಂಕಿತನಾಮ ಅನೇಕ ದೇವರ ನಾಮಗಳನ್ನು ರಚಿಸಿದ್ದಾರೆ. ಆಧ್ಯಾತ್ಮ ಅನುರಾಗ ಮಹಿಮಾನ್ವಿತನಾಗಿ ಇತನು ಕಂಡು ಬರುತ್ತಾನೆ. ‘ಭಕ್ತಿ ಬೇಕು, ವಿರಕ್ತಿ ಬೇಕು, ಶಕ್ತಿ ಬೇಕು, ಮುಂದೆ ಮುಕ್ತಿ ಬಯಸುವಗೆ’ ಎಂಬುದು ಈತನ ಆಧ್ಯಾತ್ಮಕ ನಿಲುವಾಗಿದೆ. ವ್ಯಾಸರಾಯರು,ಶ್ರೀಪಾದರಾಜನ ಶಿಷ್ಯನಾದ ವ್ಯಾಸರಾಯನು ನ್ಯಾಯಾಂಮೃತ ತರ್ಕತಾಂಡವ, ತಾತ್ರ‍್ಯಚಂದ್ರಿಕಾ ಮೂರು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಾನೆ. ಇವರ ಕೀರ್ತನೆಗಳ ಅಂಕಿತನಾಮ ಕೃಷ್ಣ, ಶ್ರೀಕೃಷ್ಣ, ಸಿರಿಕೃಷ್ಣ ವ್ಯಾಸರಾಯನಿಂದ ವ್ಯಾಸಪಥ, ದಾಸಪಥಗಳೆರಡು ಶ್ರೀಮಂತವಾದವು. ವಿಜಯದಾಸರು ಪ್ರಸನ್ನ ವೆಂಕಟದಾಸರ ಸಮಕಾಲೀನರು. ‘ಹಯವದನ ವಿಠಲ’ ಎಂಬ ಅಂಕಿತದಿಂದ ಅನೇಕ ಹಾಡುಗಳನ್ನು ರಚಿಸಿದ್ದಾರೆ. ಗೋಪಾಲದಾಸರು ‘ಗೋಪಾಲ ವಿಠಲ’ ಇವರ ಅಂಕಿತನಾಮ. ಜಗನ್ನಾಥದಾಸರು ‘ಜಗನ್ನಾಥ ವಿಠಲ’ ಎನ್ನುವ ಅಂಕಿತನಾಮವನ್ನು ಹೊಂದಿದ್ದಾರೆ. ಜಗನ್ನಾಥದಾಸರು ೨೦೦ ಕೀರ್ತನೆಗಳು ಲಭ್ಯವಾಗಿವೆ. ಕೀರ್ತನೆ, ಸುಳಾದಿಗಳನ್ನು ಮಾತ್ರವೇ ಅಲ್ಲದೆ ತ್ರಿಪದಿಯ ಛಂದಸ್ಸಿನಲ್ಲಿ ಭಕ್ತಿ ಭರಿತವಾದ ‘ತತ್ವಸುವಾಲಿಗಳನ್ನು’ ವಿಷ್ಣುಸ್ತುತಿರೂಪವಾದ ೨೭ ನುಡಿಗಳನ್ನು ಒಳಗೊಂಡ ತಂತ್ರಸಾರವನ್ನು ರಚಿಸಿದ್ದಾರೆ. ಹೀಗೆ ಒಟ್ಟಾರೆಯಾಗಿ ಪುರಂದರದಾಸರು ಹಾಗೂ ಕನಕದಾಸರ ವಿಚಾರಗಳು ದಾರ್ಶನಿಕ ಸಮಾಜವನ್ನು ಕಟ್ಟುವಲ್ಲಿ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ನೈತಿಕ ಪ್ರಜ್ಞೆ, ಗುರುವಿನೊಂದಿಗೆ ಗೌರವದ ಮನೋಭಾವನೆ ಅಸ್ಪೃಶ್ಯತಾ ನಿವಾರಣೆ, ಮೌಢ್ಯತನದ ಖಂಡನೆ ಇದೆ. ಎಲ್ಲ ದಾಸರು ಭಕ್ತಿಯ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದ ದಾಸರಾಗಿದ್ದಾರೆ.

**********************************************

2 thoughts on “ಕನಕದಾಸ ಸಾಹಿತ್ಯದಲ್ಲಿ ಜಾತಿ ಪ್ರಶ್ನೆಯ ಆಯಾಮಗಳು

  1. ಹಾದಿ ತಪ್ಪಿದ ಮಕ್ಕಳೆಲ್ರಿಗೂ ಮೊಮ್ಮನಂತವರು ಸಿಗಲಿ.

Leave a Reply

Back To Top