ಪ್ರತಿಮೆಯೂ ಕನ್ನಡಿಯೂ..

ಸ್ವಗತ

ಪ್ರತಿಮೆಯೂ ಕನ್ನಡಿಯೂ..

ಚಂದ್ರಪ್ರಭ.ಬಿ.

Mirrors. Gold framed mirrors in a loo royalty free stock photos

ಪ್ರತಿಮೆಯೂ ಕನ್ನಡಿಯೂ


“ತೋರಾ ಮನ ದರಪನ ಕೆಹಲಾಯೆ
ಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..
………….. ………… ……….. …………… …………


ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..”

“ಕಾಜಲ್” ಹಿಂದಿ ಸಿನಿಮಾ(೧೯೬೫) ದಲ್ಲಿ ಆಶಾ ಭೋಸ್ಲೆ ಹಾಡಿದ ಕೃಷ್ಣ ಭಜನೆ ಸಾಗುವುದು ಹೀಗೆ, ಸಾಹಿತ್ಯ ಸಾಹಿರ್ ಲುಧಿಯಾನ್ವಿ.
ಮೀನಾಕುಮಾರಿ ಎಂಬ ಅಮರ ತಾರೆಯ ನಟನೆಯಲ್ಲಿ ಮೂಡಿ ಬಂದ ಅದ್ಭುತ..ಅಮರ ಗೀತೆ.
‘ಮನುಜ ತನ್ನ ಮನಸ್ಸಿನಿಂದ ತಾನು ಓಡಿ ಹೋಗಲಾರ.. ಹೋಗಲಾಗದು’ ಎಂಬುದು ಕಟುವಾಸ್ತವ, ಮತ್ತದು ತುಂಬ ದೊಡ್ಡ ಸಂಗತಿ. ಚಲನಚಿತ್ರ ಗೀತೆಯೊಂದರಲ್ಲಿ ಇಂಥ ಲೋಕೋತ್ತರ ಸತ್ಯವನ್ನು ಹಿಡಿದಿಟ್ಟ ರೀತಿ ಕೂಡಾ ಅನನ್ಯ.

ಕನ್ನಡದ ಸಂತ ಕವಿ ಸರ್ಪಭೂಷಣ ಶಿವಯೋಗಿ ಯ ಒಂದು ಜನಪ್ರಿಯ ತತ್ವ ಪದವೊಂದು ಇದನ್ನೇ ಇನ್ನೂ ವಿವರವಾಗಿ ಬಣ್ಣಿಸುತ್ತ ಸಾಗುತ್ತದೆ.

“ಬಿಡು ಬಾಹ್ಯದೊಳು ಡಂಭವ
ಮಾನಸದೊಳು ಎಡೆ ಬಿಡದಿರು ಶಂಭುವ/
ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯ
ಪಡೆದರೆ ಶಿವ ನಿನಗೊಲಿಯನು ಮರುಳೇ//

ಜನಕಂಜಿ ನಡಕೊಂಡರೇನುಂಟು ಲೋಕದಿ
ಮನಕಂಜಿ ನಡಕೊಂಬುದೇ ಚಂದ/
ಜನರೇನು ಬಲ್ಲರು ಒಳಗಾಗೊ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ//

ಮನದಲಿ ಶಿವ ತಾ ಮನೆ ಮಾಡಿಕೊಂಡಿಹ
ಮನ ಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ/
ಮನಕಂಜಿ ನಡೆಯದೆ ಜನಕಂಜಿ ನಡೆದರೆ
ಮನದಾಣ್ಮ ಗುರುಸಿದ್ಧ ಮರೆಯಾಗೊನಲ್ಲ//

‘ಮುಖ ಮನಸ್ಸಿನ ಕನ್ನಡಿ’ ಇದು ಕನ್ನಡದ ಬಲು ಜನಪ್ರಿಯ ನುಡಿಗಟ್ಟು. ದೇಶ, ಭಾಷೆಗಳ ಹಂಗು ಮೀರಿ ಮುಖ, ಮನಸ್ಸು, ಕನ್ನಡಿ – ಈ ಮೂರೂ ಪದಗಳಿಗಿರುವ ನಂಟನ್ನು ಶೋಧಿಸತೊಡಗಿದರೆ ಬಹು ಆಯಾಮಗಳ, ಮಾನವೀಯ ನೆಲೆಗಟ್ಟಿನ ಅನುಪಮ ಸಂಗತಿಯೊಂದು ಪದರುಪದರಾಗಿ ಬಿಚ್ಚಿಕೊಳ್ಳತೊಡಗುತ್ತದೆ. ಮನದ ಕನ್ನಡಿಯಲ್ಲಿ ತನ್ನ ತಾ ನೋಡಿಕೊಳ್ಳಲು ಅರಿತ ಜೀವಿಯಲ್ಲಿ ಒಂದು ಎಚ್ಚರ, ಒಂದು ಪ್ರಜ್ಞೆ ಸದಾವಕಾಲವೂ ಮೌನವಾಗಿ ಅಷ್ಟೇ ಸಹಜವಾಗಿ ಮೊರೆಯುತ್ತಿರುತ್ತದೆ. ಕನ್ನಡಿಯೆದುರು ಪರದೆ ಎಳೆದಿರುವಲ್ಲಿ ಅವಲೋಕನಕ್ಕೆ ಅವಕಾಶವೆಲ್ಲಿ!?

ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸಮುದಾಯದ ನೆಲೆಯಲ್ಲೇ ಆಗಿರಲಿ ಪಾರದರ್ಶಕತೆ ಬೀರುವ ಪ್ರಭಾವ ಗಮನಾರ್ಹ. ತತ್ಪರಿಣಾಮವಾಗಿ ಅದರಿಂದ ದೊರಕುವ ಅಂತಿಮ ಫಲಿತಾಂಶವೂ ಅಷ್ಟೇ ಪರಿಣಾಮಕಾರಿ. ಹೀಗಿದ್ದೂ ಪ್ರತಿ ದಿನದ ಪ್ರತಿ ಹೆಜ್ಜೆಯಲ್ಲಿ ಮುಖವಾಡಗಳನ್ನು ಬದಲಾಯಿಸುತ್ತಲೇ ಸಾಗುವುದು ತೀರ ಸಹಜ ಎನ್ನುವ ರೀತಿಯಲ್ಲಿ ಬದುಕು ಸಾಗುವುದು. ನಿಜಕ್ಕೂ ಇದು ವಿಸ್ಮಯದ ಸಂಗತಿ. ನೈಜೀರಿಯನ್ ಕವಿ ಗೇಬ್ರಿಯಲ್ ಒಕಾರ ತನ್ನ “ಒಂದಾನೊಂದು ಕಾಲದಲ್ಲಿ” ಕವಿತೆಯಲ್ಲಿ ಹೇಳುವಂತೆ ಮನೆ, ಆಫೀಸು, ಬೀದಿ, ಸಭೆ ಸಮಾರಂಭ – ಹೀಗೆ ಯಾವುದಕ್ಕೆ ಎಂಥದು ಸೂಕ್ತವೊ ಅಂಥದೊಂದು ಮುಖವಾಡ ಧರಿಸಿ ಮುಗುಳ್ನಗುವೊಂದರಲ್ಲಿ ಅದನ್ನು ಅದ್ದಿ ತೆಗೆದು ಕಾರ್ಯ ಸಾಧಿಸಿಬಿಡುವುದು ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಹೀಗಾಗಿ ನೈಜವಾದ ನಮ್ಮ ಮೂಲ ಮುಖದ ಅಸ್ತಿತ್ವವೇ ಕಳೆದುಹೋಗುತ್ತಿದೆ. ಇದು ತುಂಬ ಅಪಾಯಕಾರಿ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಬಗೆಯ ಅರಾಜಕತೆಗೂ ದಾರಿ ಮಾಡಿಕೊಡುವಂಥದು.

ಯಾರನ್ನೊ ಮೆಚ್ಚಿಸುವುದಕ್ಕಾಗಿ ಅಲ್ಲ, ಯಾರಿಗೊ ವರದಿ ಒಪ್ಪಿಸುವುದಕಾಗಿ ಅಲ್ಲ. ತನ್ನ ಆತ್ಮಸಾಕ್ಷಿ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಆತ್ಮಸಾಕ್ಷಿ ಎದುರು ಸ್ವತಃ ಕುಬ್ಜನಾಗದಿರಲು ಮನದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸಾಗುವ ಅಗತ್ಯ ಮನಸ್ಸನ್ನು ಎಡೆಬಿಡದೆ ಸತಾಯಿಸಿದಲ್ಲಿ ಸ್ವಾಸ್ಥ್ಯ ತಂತಾನೇ ಪಸರಿಸತೊಡಗುತ್ತದೆ. ಇದು ಆಮೆ ಗತಿಯಲ್ಲಿ ಸಂಭವಿಸುವ ಬಲು ನಿಧಾನವಾದ ಪ್ರಕ್ರಿಯೆ. ವ್ಯಕ್ತಿಯಿಂದ ಸಮಷ್ಟಿ ವರೆಗೆ ಸಾಗುವ ಸುದೀರ್ಘ ಪಯಣ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ!

************************************

Leave a Reply

Back To Top