ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ

ಚರ್ಚೆ- ಮುದ್ರಣ ಮಾಧ್ಯಮ

ಮತ್ತು ಸಾಹಿತ್ಯೋಪಾಸನೆ

ಡಿ.ಎಸ್.ರಾಮಸ್ವಾಮಿ

Kannada Newspapers - Apps on Google Play

ಸಾಹಿತ್ಯವನ್ನು ಮುದ್ರಣ ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಂಗಾತಿಯ ಸಂಪಾದಕರು ಅಲವತ್ತುಕೊಂಡಿದ್ದಾರೆ. ಪ್ರತಿ ಭಾನುವಾರ ಎಲ್ಲ ಪತ್ರಿಕೆಗಳ ಪುರವಣಿಗಳನ್ನು ಹರಡಿಕೊಂಡು ಓದುತ್ತಿದ್ದ ಅನುಭೂತಿ ಈ ಕೋವಿಡ್ ನೆವದಿಂದಾಗಿ ಇಲ್ಲವಾದದ್ದು ನೆನಪಾಗಿ ಸಂಗಾತಿಯ ಸಂಪಾದಕರ ಆರೋಪ ಸರಿ ಅನ್ನಿಸಿತು ಕೂಡ.

ಆದರೆ ಸ್ವಲ್ಪ ಕಾಲ ಯೋಚಿಸಿದ ಮೇಲೆ ಆ ಅಭಿಪ್ರಾಯ ತಾತ್ಕಾಲಿಕ ಅನ್ನಿಸುತ್ತಿದೆ. ಓದುಗರೇ ಇಲ್ಲದೆ ಪ್ರಸರಣವೇ ಇಲ್ಲದೆ ಪತ್ರಿಕೆಗಳೇ ಮುಚ್ಚುತ್ತಿರುವ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ ಅಂತೆಲ್ಲ ಕೇಳುವುದು ಹೊಟ್ಟೆ ಹಸಿದು ಸಾಯುತ್ತಿರುವನ ಮುಂದೆ ಸಂಗೀತ ನುಡಿಸಿದಂತೆ ಅನ್ನಿಸಿತು. ಈ ನಡುವೆ ಬಾಗಿಲು ಹಾಕಿಕೊಂಡ ಟಿವಿ ವಾಹಿನಿಗಳು, ಕೆಲಸ ಕಳೆದುಕೊಂಡ ಮುದ್ರಣ ಮಾಧ್ಯಮದ ಗೆಳೆಯರು ನೆನಪಾದರು.

ಕೋವಿಡ್ ಎನ್ನುವುದೇ ಒಂದು ನೆವವಾಗಿ ಒಳಗೊಳಗೇ,  ಸಾಯುತ್ತಿದ್ದ ಎಷ್ಟೊಂದು ಆರ್ಥಿಕ ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ಬಾಗಿಲು ಮುಚ್ಚಿದವು. ನಿವೃತ್ತಿಯ ಸೌಲಭ್ಯವನ್ನೇ ಮೊಟಕು ಮಾಡಿದ ಸಂಸ್ಥೆಗಳಂತೆಯೇ ಹೊಸ ನಿವೃತ್ತಿಯ ಯೋಜನೆ ಪ್ರಕಟಿಸಿದ ಸಂಸ್ಥೆಗಳೂ ಇವೆ. ಸದಾ ಸರ್ವದಾ ಜಾಹೀರಾತಿನ ಆದಾಯದ ಮೇಲೇ ನಿಂತಿರುವ ಪತ್ರಿಕೆಗಳಿಗೆ ಈ ಪುರವಣಿಗಳ ನಿರ್ವಹಣೆ ಯಾವತ್ತೂ ಸವಾಲಿನದೇ….ಏನೆಲ್ಲ ಮಾಡಿಯೂ ಒಂದು ಸಂಚಿಕೆ ತಂದರೆ ಅದಕ್ಕೆ ಬರುವ ಪ್ರತಿಕ್ರಿಯೆ ಪೂರಕವಾಗಿರುವುದಿರಲಿ ಆ ಸಂಚಿಕೆಯ ಹಿಂದಿನ ಉದ್ದೇಶಗಳನ್ನು ಮರೆತು ಅಲ್ಲಿ ಒಳಗೊಂಡ ಲೇಖಕರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವವರೇ ಕಾಣುತ್ತಾರೆ.

ಈ ವರ್ಷ ಕೋವಿಡ್ ದಾಳಿಯ ಪೂರ್ವದಲ್ಲಿ ಪ್ರಕಟವಾದ ಎಲ್ಲ ಪತ್ರಿಕೆಗಳ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನು ಹರಡಿಕೊಂಡು ಕೂತರೆ ಆ ಎಲ್ಲ ಪತ್ರಿಕೆಗಳೂ ವಿಶೇಷಾಂಕದ ಹೂರಣಕ್ಕಿಂತ ಜಾಹೀರಾತಿನ ಬಲ ಸಾಧಿಸುರುವುದೇ ಸಾಧನೆಯಾಗಿದೆ.

ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗೆ ತಕ್ಕನಾದ ಅವಕಾಶ ಬೇಕಾಗುವುದು ಬೌದ್ಧಿಕ ಹಸಿವೆಯ ನಿವಾರಣೆಗೆ. ಸದ್ಯದ ಸ್ಥಿತಿಯಲ್ಲಿ ಎಲ್ಲ ಸಮುದಾಯಗಳೂ ಆತಂಕ ಮತ್ತು ಭಯದಲ್ಲಿ ಇರುವಾಗ  ಮತ್ತು ಹೊಟ್ಟೆಯ ಹಸಿವೆಯನ್ನು ನೀಗಿಕೊಳ್ಳಲು ಯಾವುದಾದರೂ ಮಾರ್ಗ ಇದೆಯೇ ಎಂದು ಚಿಂತಿಸುತ್ತಿರುವಾಗ ಸಂಪಾದಕರ ಆಗ್ರಹಕ್ಕೆ ಅರ್ಥ ಇರುವಂತಿಲ್ಲ. ಏಕೆಂದರೆ ಸದ್ಯ ನಾವೆಲ್ಲರೂ ಎದುರಿಸುತ್ತಿರುವ ಮೂಲಭೂತ ಸಮಸ್ಯೆಯ ಮುಂದೆ ಸಾಹಿತ್ಯವೋ ಸಂಗೀತವೋ ಅಥವ ಸಂಸ್ಕೃತಿ ಚಿಂತನೆಯೋ ಅರ್ಥವಿಲ್ಲದ ಪ್ರಶ್ನೆಯಾಗಿಯೇ ಕಾಡುತ್ತಿದೆ……

ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ.

ಲಲಿತ ಕಲೆ ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು. ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. “ಏಕಂ ಸತ್ ವಿಪ್ರಾ ಬಹುದಾ ವದಂತಿ” ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ.

ಲಲಿತ ಕಲೆಗಳ ಒಂದೊಂದು ವಿಭಾಗಕ್ಕೂ ಒಂದೊಂದು ವಿಶೇಷ ಲಕ್ಷಣಗಳಿವೆ. ಪ್ರತಿ ಕಲೆಗೂ ಸಾಧನಗಳು ಬೇರೆ,ಬೇರೆ. ಸಾಹಿತಿ ತಾನು ತನ್ನ ಕಾಲದಲ್ಲಿ ನೋಡಿದ್ದನ್ನು ಅನುಭವಿಸಿದ್ದನ್ನು ಆಗಿನ ಭಾಷೆ, ಶೈಲಿ, ಸಂಪ್ರದಾಯ, ಕಟ್ಟಳೆಗಳನ್ನು ಅನುಸರಿಸಿ ದಾಖಲು ಮಾಡುತ್ತಾನೆ. ತನ್ನ ಪ್ರತಿಭೆಗೆ ತಕ್ಕ ಶಬ್ದಾರ್ಥ,ಧ್ವನಿಗಳ ಮೂಲಕ ಆ ಸಮಯದಲ್ಲಿ ಹೊಳೆದ ಸೌಂದರ್ಯವನ್ನು ಬುದ್ಧಿಯಿಂದ ಸೆರೆಹಿಡಿದು, ಧಾರಣೆಯಿಂದ ನಿಲ್ಲಿಸಿ ತನ್ನ ಕೃತಿಯಲ್ಲೊಂದು ಜಾಗವನ್ನು ಕೊಟ್ಟು ಸಲಹಿರುತ್ತಾನೆ. ಸಾಹಿತ್ಯವೆಂಬುದು ಎಲ್ಲ ಕಾಲಕ್ಕೂ ಸಹಜವಾದ, ಮಾನವ ಪ್ರಪಂಚಕ್ಕೆಲ್ಲ ಸಾಮಾನ್ಯವಾಗಿ ಹೊಂದುವ, ರಸಸೃಷ್ಟಿಯಾಗಿರುವುದರಿಂದ ಸಾಹಿತಿಯೊಬ್ಬನ ಕೃತಿ ಮುಂದೆ ಎಲ್ಲ ಕಾಲದಲ್ಲೂ ಅದನ್ನು ಸವಿಯುವವರಿಗೆ ಅಕ್ಷಯಪಾತ್ರೆಯಾಗಿ ಒದಗುತ್ತಲೇ ಇರುತ್ತದೆ, ಅದಕ್ಕೆ ಅಂಥ ತಾಕತ್ತು ಇದ್ದರೆ. ಹಾಗೇ ದೂಷಿಸುವವರಿಗೂ ಅದು ಅಕ್ಷಯಪಾತ್ರೆಯೇ ಸರಿ! ಇನ್ನು ಚಿತ್ರಕಾರ-ಚಿತ್ರಕ್ಕೆ ಬೇಕಾಗುವ ಬಣ್ಣ, ರೂಪರೇಖೆ, ಕುಂಚ, ಹಲಗೆ, ಕಾಗದ,ಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಯೋಚಿಸಿ ಯೋಜಿಸುತ್ತಾನೆ. ಸಂಗೀತವಂತೂ ನಾದ, ಶಾರೀರ, ಪಕ್ಕ ವಾದ್ಯ, ಸಾಧನೆ ಇತ್ಯಾದಿಗಳಿಂದ ಹುಲುಸುಗೊಂಡರೆ, ಶಿಲ್ಪಿ ತನ್ನ ವ್ಯವಸಾಯಕ್ಕೆ ಮಣ್ಣು, ಕಲ್ಲು, ಗಾರೆ, ಮರ, ಲೋಹ, ಬಟ್ಟೆ, ಬೆಂಡು. ಉಳಿ, ಸುತ್ತಿಗೆ, ಚಾಣ ಇತ್ಯಾದಿಗಳನ್ನು ಬಳಸಿ ತನ್ನಿಷ್ಟದ ಕೃತಿಯನ್ನು ರಚಿಸುತ್ತಾನೆ. ರಸಾಸ್ವಾದನೆ ಅದನ್ನು ಸವಿಯುವವರ ಮಟ್ಟಕ್ಕೆ ತಕ್ಕ ಆಳ ಅಗಲಗಳ ವ್ಯಾಖ್ಯೆಯನ್ನು ತುಂಬಿಕೊಡುತ್ತದೆ.

‍ಬದುಕಿನ ಅರ್ಥವನ್ನು ಬಗೆಬಗೆಯಾಗಿ ಬಗೆಯುತ್ತಲೇ ಇರುವ ಸಾಹಿತಿ-ಕಲಾವಿದರನ್ನು ಅನುಮಾನಿಸುವುದು, ಸನ್ಮಾನಿಸುವುದು, ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಅವನನ್ನು ಎತ್ತಿ ಮೆರಸುವುದು ಹಾಗೇ ಎತ್ತಿ ಎಸೆಯುವುದನ್ನೂ ಲೌಕಿಕ ಮಾಡುತ್ತಲೇ ಬಂದಿದೆ. ಟಿ.ಆರ್.ಪಿಗಳ ಕಾಲದಲ್ಲಿ ಇದು ಸಹಜವೂ, ನ್ಯಾಯವೂ ಆದುದೇ ಆಗಿದೆ! ಸಮಾಜದ ಆಶಯಕ್ಕೆ ಅಂದರೆ ಪ್ರಭುತ್ವಕ್ಕೆ ಪೂರಕವಾಗಿ ಕೃತಿ ರಚಿಸುವವನಿಗೆ ಇರುವ ಮಾನ ಮರ್ಯಾದೆಗಳು ಅದಕ್ಕೆ ವಿರೋಧಿಯಾಗಿರುವವನಿಗೆ ಸಲ್ಲುವುದು ಯಾವತ್ತೂ ವಿಳಂಬವೇ. ಏಕೆಂದರೆ ಸತ್ಯದ ಹುಡುಕುವಿಕೆಯಲ್ಲಿ ಯಾವತ್ತೂ ಪರಿಣಾಮಗಳು ತಟ್ಟಂತ ಸಿಕ್ಕ ಉದಾಹರಣೆಗಳು ಇಲ್ಲವೇ ಇಲ್ಲ. ಸತ್ಯ ಎನ್ನುವುದು ಸಿಗುತ್ತದೋ ಇಲ್ಲವೋ ಅಂಥದೊಂದು ಸತ್ಯವನ್ನು ಬೆನ್ನು ಹಿಡಿದು ಹೊರಡುವುದೇ ನಿಜಕ್ಕೂ ಅಗ್ನಿದಿವ್ಯದ ಅಸಲಿಯತ್ತು. ಉಪನಿಷತ್ತಿನಿಂದ ಓಷೋವರೆಗೂ ಈ ಇದೇ ಸತ್ಯದ ಹುಡುಕುವಿಕೆಯೇ ನಮ್ಮೆಲ್ಲ ಸಾಹಿತಿ-ಕಲಾವಿದರನ್ನೂ ಪೋಷಿಸಿದೆ, ತನ್ನ ಉದರದಲ್ಲಿಟ್ಟುಕೊಂಡು ಕಾಪಾಡಿದೆ. ತಾನು ಬದುಕಿದ್ದ ಕಾಲದಲ್ಲಿ ಅಜ್ಞಾತನಾಗಿದ್ದ ಬೋದಿಲೇರ್, ಸತ್ತ ನಂತರವೇ ತೀವ್ರ ತರದ ಚರ್ಚೆಗಳನ್ನು ಹುಟ್ಟುಹಾಕಿದ ಬ್ರೆಕ್ಟ್, ಎಂಟುನೂರು ವರ್ಷಗಳ ಹಿಂದೆ ರಚಿತವಾದರೂ ಇವತ್ತಿಗೂ ಹೊಸ ಹೊಸ ಜಿಜ್ಞಾಸೆಗಳಿಗೆ ಒಡ್ಡುವ ವಚನಗಳು, ಲಿಯಾನಾರ್ಡೊ ಡಾವಿಂಚಿಯ ಚಿತ್ರಗಳು, ಯಾವುದೋ ಉತ್ಖನನದಲ್ಲಿ ಸಿಕ್ಕುವ ಪುರಾತನರ ಜೀವನಶೈಲಿಯ ಪುರಾವೆಗಳು ಯಾವತ್ತೂ ವರ್ತಮಾನದ ಜನಜೀವನ ಆಧುನಿಕತೆಯ ಬಾಗಿಲಿನಲ್ಲಿದ್ದೂ ಹೇಗೆ ಇನ್ನೂ ತನ್ನ ಹಳೆಯ ಹೊಸಿಲಲ್ಲೇ ಏದುಸಿರು ಬಿಡುತ್ತಿದೆ ಅಂತ ಪ್ರಮಾಣೀಕರಿಸುತ್ತಲೇ ಬಂದಿವೆ. ವರ್ತಮಾನದ ಸಾಹಿತ್ಯ ನಿರ್ಮಾಪಕರನ್ನು, ಅದರಲ್ಲೂ ಪರಂಪರೆಯ ಹಂಗಿಲ್ಲದೇ ತಾನು ತಿಳಿದ ಸಂಗತಿಯೇ ದೊಡ್ಡದೆಂದು ವಾದಕ್ಕೆ ನಿಲ್ಲುವವರನ್ನು ಪರಂಪರೆಯೆಂಬ- ಬಳಸದೇ ಅಂದಗೆಟ್ಟ ಸರೋವರಕ್ಕೆ ಒಮ್ಮೆ ಕರೆದೊಯ್ದು-ಈಗಿನ ಬಹುತೇಕರು ಹೇಳುವ ಹಾಗೇ ಆ ಸರೋವರದ ನೀರು ಬಳಸುವವರಿಲ್ಲದೇ ಕೊಳಚೆಯಾಗಿ ಕೆಸರು ತುಂಬಿದೆ. ಹಸಿರು ಪಾಚಿಗಟ್ಟಿ ಹೂಳು ತುಂಬಿಕೊಂಡಿದೆ-ಅದರ ಹೂಳನ್ನೆತ್ತಿ ತೆಗೆದು ಎಸೆದು, ಸ್ವಲ್ಪ ಆಳಕ್ಕೆ ಅದನ್ನು ತೋಡಿ ವಿಸ್ತರಿಸಿ, ಎಲ್ಲೋ ಮುಚ್ಚಿ ಹೋಗಿರುವ ಜಲದ ಕಣ್ಣುಗಳನ್ನು ತೆರೆದು ಹೆಚ್ಚು ನೀರು ಬಂದು ಸೇರುವಂತೆ ಮಾಡಿದರೆ ಜೊತೆಗೇ ಕುಸಿದಿರುವ ಸೋಪಾನದ ಪಾವಟಿಗೆಗಳನ್ನು ದುರಸ್ತಿ ಮಾಡಿಸಿದರೆ ಆ ಕೊಳದ ನೀರನ್ನೇ ಆಶ್ರಯಿಸಿ ಉದ್ಯಾನವನ್ನೇ ಬೆಳಸಬಹುದು. ಉದ್ಯಾನ ನಿರ್ಮಾಣವಾದರೆ ಅಳುವ ಮಕ್ಕಳು ಆಟವಾಡಲು ಬಂದಾವು. ಹಕ್ಕಿ ಪಕ್ಷಿಗಳ ಜೊತೆಜೊತೆಗೇ ದಣಿವಾರಿಸಿಕೊಳ್ಳಲು ನಮಗೂ ಒಂದಿಷ್ಟು ತಾವು ಸಿಕ್ಕುತ್ತದೆ. ಆಗ ಆರಾಮವಾಗಿ ಕೂತು ಮುರಿದು ಕಟ್ಟಿದ ಸರೋವರದ ದಡದಲ್ಲಿ ಭಾಷೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಬಹುದು. ಅದು ಬಿಟ್ಟು ಯಾವ ಮೂಲದಿಂದ ಮನೆಯ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಅರಿವಿಲ್ಲದೇ ಬರಿದೇ ತೋಡಿ ತೋಡಿ ಬಳಸಿದರೆ ನೀರಿನ ಮಹತ್ವ ಅರಿಯುವುದಾದರೂ ಹೇಗೆ? ಭಾಷೆಯ ಸಂಗತಿ ಸಿದ್ಧಿಸುವುದಾದರೂ ಹೇಗೆ?

ಸದ್ಯದ ವರ್ತಮಾನದಲ್ಲಿ ಸಾಹಿತ್ಯ ಸಂಸ್ಕೃತಿ ಭಾಷೆಗಿಂತಲೂ ಅತ್ಯಗತ್ಯವಾಗಿ ಆರ್ಥಿಕ ಚೇತರಿಕೆಗೆ ಸಹಾಯವಾಗುವ ಯೋಜನೆಗಳು ತುರ್ತಾಗಿ ಬೇಕಿವೆ. ಹೊಟ್ಟೆ ತುಂಬಿದ ನಂತರ ಉಳಿದೆಲ್ಲವನ್ನೂ ನಿಭಾಯಿಸಬಹುದು. ಆದರೆ ಬದುಕಿಗೆ ಆಸರೆಯಾಗಿ ಇಷ್ಟೂ ದಿನ ಇದ್ದ ಪರಿಕರಗಳು ಇದ್ದೂ ಇಲ್ಲದ ಹಾಗೆ ಆಗಿರುವ ಹೊತ್ತಲ್ಲಿ ಮುದ್ರಣ ಮಾಧ್ಯಮವೇನು ಬೇರೆ ಯಾರಿಗೂ ಸಾಹಿತ್ಯದ ಉಪಾಸನೆಗೆ ಸಮಯವಾಗಲೀ ವ್ಯವಧಾನವಾಗಲೀ ಇರಬೇಕೆನ್ನುವುದೇ ಅನುಚಿತ ಸಲಹೆ ಅನ್ನಿಸುತ್ತಿದೆ.

*************************************

Leave a Reply

Back To Top