ಅಂಕಣ ಬರಹ
ಫ್ರಾಂಕಿನ್‌ಸ್ಟೈನ್
ಫ್ರಾಂಕಿನ್‌ಸ್ಟೈನ್
ಮೂಲ ಇಂಗ್ಲಿಷ್ : ಮೇರಿ ಷೆಲ್ಲಿ ಕನ್ನಡಕ್ಕೆ : ಶ್ಯಾಮಲಾ ಮಾಧವ
ಪ್ರ : ಅಂಕಿತ ಪುಸ್ತಕ
ಪ್ರಕಟಣೆಯ ವರ್ಷ :೨೦೦೭
ಬೆಲೆ : ರೂ.೯೫
ಪುಟಗಳು : ೨೦೩
ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೈನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ. ನಿಸರ್ಗ ನಿಯಮಗಳ ವಿರುದ್ಧ ಹೋಗುವ ಅಹಂಕಾರವನ್ನು ಮನುಷ್ಯ ತೋರಿಸಿದರೆ ಪರಿಣಾಮವೇನಾಗಬಹುದು ಎಂಬ ವಿಷಯದ ಕುರಿತುಳ್ಳ ಈ ಕಾದಂಬರಿ ತನ್ನ ನಿರೂಪಣೆಗೆ ಫ್ಯಾಂಟಸಿ ಶೈಲಿಯನ್ನು ಆಯ್ದುಕೊಂಡಿದೆ ಮಾತ್ರವಲ್ಲದೆ ಅದು ಒಂದು ಭಯಾನಕ ವಾತಾವರಣವನ್ನೂ ಸೃಷ್ಟಿಸುತ್ತದೆ.
ಹಿಮಾಚ್ಛಾದಿತ ಉತ್ತರ ಧ್ರುವದತ್ತ ಅನ್ವೇಷಕನಾಗಿ ಸಾಹಸ ಯಾತ್ರೆ ಕೈಗೊಳ್ಳುವ ವಾಲ್ಟನ್ ತನ್ನ ಪ್ರಿಯ ಸೋದರಿ ಮಾರ್ಗರೆಟ್‌ಗೆ ಬರೆಯುವ ಪತ್ರಗಳೇ ಇಲ್ಲಿ ಇಡೀ ಕಥೆಯನ್ನು ಹೇಳುತ್ತವೆ. ವಾಲ್ಟನ್ ಹಿಮ ಸಾಗರದಲ್ಲಿ ಭೇಟಿಯಾಗುವ ಫ್ರಾಂಕಿನ್‌ಸ್ಟೈನ್ ಎಂಬ ವ್ಯಕ್ತಿ ಅವನಲ್ಲಿ ತನ್ನ ಭೀಭತ್ಸ ಅನುಭವಗಳನ್ನು ಹೇಳಿಕೊಳ್ಳುತ್ತಾನೆ. ಪ್ರಾಕೃತಿಕ ವಿಜ್ಞಾನದ ಅವ್ಯಕ್ತ ಸೆಳೆತಕ್ಕೊಳಗಾಗಿ ಆತ ಹಗಲು-ರಾತ್ರಿ ಪರಿಶ್ರಮ ಪಟ್ಟು ಆ ವಿಷಯದ ಆಳಕ್ಕಿಳಿದು ಅಧ್ಯಯನ ನಡೆಸಿ ಅದುವರೆಗೆ ಯಾವ ಮಾನವನೂ ಮಾಡದಿರುವ, ಮೈ ನವಿರೇಳಿಸುವ ಒಂದು ವಿಶಿಷ್ಟ ಪ್ರಯೋಗವನ್ನು ಕೈಗೊಳ್ಳುತ್ತಾನೆ. ಸತ್ತ ಮನುಷ್ಯರ ಶವಗಳಿಂದ ಪ್ರತಿಯೊಂದು ಬಿಡಿ ಭಾಗಗಳನ್ನು ತೆಗೆದು ಅವೆಲ್ಲವನ್ನೂ ಪುನಃ ಸುಸ್ಥಿತಿಯಲ್ಲಿ ಜೋಡಿಸಿ ಒಂದು ದೈತ್ಯಾಕೃತಿಯನ್ನು ನಿರ್ಮಿಸಿ ಅದರೊಳಗೆ ಜೀವ ತುಂಬುವ ಒಂದು ಭಯಾನಕ ಕೃತ್ಯವದು. ರಾಕ್ಷಸನಂತೆ ವಿಕಾರನೂ ಭಯಂಕರನೂ ಆಗಿ ಬರುವ ಆ ದೈತ್ಯ ಮುಂದೆ ಬಂದು ನಿಲ್ಲುತ್ತಲೇ ಫ್ರಾಂಕಿನ್‌ಸ್ಟೈನ್ ಭಯಗೊಂಡು ಓಡಿ ಹೋಗಿ ತನ್ನ ಊರು ಸೇರುತ್ತಾನೆ. ಆದರೆ ಆ ದೈತ್ಯ ಅವನನ್ನು ಅಲ್ಲಿಗೂ ಬಿಡದೆ ಹಿಂಬಾಲಿಸುತ್ತಾನೆ. ತನ್ನ ಸೃಷ್ಟಿಕರ್ತನನ್ನು ತಾನು ಮುಂದೇನು ಮಾಡಬೇಕೆಂದು ಕೇಳುವ ಅವಕಾಶಕ್ಕಾಗಿ ಕಾಯುತ್ತಾನೆ. ಮನುಷ್ಯ ಸಂಪರ್ಕದಲ್ಲಿ ಇರಲು ಅವನಿಂದ ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವನನ್ನು ಕಂಡ ಕೂಡಲೇ ಎಲ್ಲರೂ ಕಿಟಾರನೆ ಕಿರುಚಿ ಓಡಿ ಹೋಗುತ್ತಾರೆ, ಇಲ್ಲವೇ ಎಲ್ಲರೂ ಜೊತೆ ಸೇರಿ ಅವನಿಗೆ ಹೊಡೆದು ಹಿಂಸಿಸಿ ಓಡಿಸುತ್ತಾರೆ.
ಹೀಗೆ ಒಂಟಿತನದ ನೋವಿನ ಕ್ಷಣಗಳಲ್ಲಿ ದೈತ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಸಿಟ್ಟಾಗುತ್ತಾನೆ. ಕೋಪದ ಆವೇಶದಲ್ಲಿ ಅವನುಫ್ರಾಂಕಿನ್‌ಸ್ಟೈನನ ಪುಟ್ಟ ತಮ್ಮನ ಕತ್ತು ಹಿಚುಕಿ ಅವನನ್ನು ಕೊಲ್ಲುತ್ತಾನೆ. ಆ ಕುರಿತು ಫ್ರಾಂಕಿನ್‌ಸ್ಟೈನ್ ದುಃಖಿಸುತ್ತಿರುವಾಗ ಒಂದು ದಿನ ಕಾಡು ಪ್ರದೇಶವೊಂದರಲ್ಲಿ ಅವರಿಬ್ಬರು ಭೇಟಿಯಾಗುತ್ತಾರೆ. ದೈತ್ಯನು ತನ್ನ ಸೃಷ್ಟಿಕರ್ತನಲ್ಲಿ ತನ್ನ ನೋವನ್ನು ತೋಡಿಕೊಳ್ಳುತ್ತಾನೆ. ತನ್ನನ್ನು ಒಂಟಿತನ ಕಾಡುತ್ತಿದೆಯಾದ್ದರಿಂದ ತನಗೆ ತನ್ನಂತಯೇ ಇರುವ ಹೆಣ್ಣು ಜೀವವೊಂದನ್ನು ಸೃಷ್ಟಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತಾನೆ. ಆದರೆ ಇದರಿಂದ ಮಾನವ ಸಮುದಾಯಕ್ಕೆ ಅಪಾಯವಿದೆ ಎಂಬುದನ್ನರಿತ ಫ್ರಾಂಕಿನ್ ಸ್ಟೈನ್ ಅದಕ್ಕೊಪ್ಪುವುದಿಲ್ಲ. ರೋಷಗೊಂಡ ದೈತ್ಯನು ಫ್ರಾಂಕಿನ್‌ಸ್ಟೈ ನ್‌ನ ಪ್ರೀತಿಪಾತ್ರರೆಲ್ಲರನ್ನೂ ಕೊಂದು ಕೊನೆಗೆ ಅವನನ್ನೂ ಕೊಲ್ಲಲು ಹೊರಡುತ್ತಾನೆ. ಕೊನೆಯ ಹಂತದಲ್ಲಿ ವಾಲ್ಟನ್‌ನ ಮುಂದೆ ಕಾಣಿಸಿಕೊಳ್ಳುವ ಫ್ರಾಂಕಿನ್‌ಸ್ಟೈ ನ್ ತಾನಿನ್ನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.
ವಿಜ್ಞಾನವನ್ನು ಒಂದು ಮಿತಿಗಿಂತ ಆಚೆ ಬಳಸುವವರಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಅರಿವು ಇರಬೇಕೆಂದು ಈ ಕಾದಂಬರಿ ಎಚ್ಚರಿಸುತ್ತದೆ. ಶ್ಯಾಮಲಾ ಅವರ ಅನುವಾದ ಸುಂದರವಾಗಿದ್ದು ಕನ್ನಡದಂತೆಯೇ ಓದಿಸಿಕೊಂಡು ಹೋಗುತ್ತದೆ.
**************************************************
ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಪ್ರಸ್ತುತ ಜಗತ್ತು ಓದಲೇಬೇಕಾದ ಅನುವಾದ.ಕನ್ನಡಿಗರಿಗೆ ನೀಡಿರುವ ತಮ್ಮಕೃತಿ ಅನುಕರಣೀಯ.