ಕವಿತೆ
ಗೀತಗಾಮಿನಿ
ಪವಿತ್ರ.ಎಂ
ಕವಿಯಾಗಲಾರೆ
ಸ್ಪರ್ಧೆಗೆ ಬರೆದ ಕವಿತೆಯಿಂ
ಮೆಚ್ಚುಗೆಯ ನುಡಿಗೆ
ನುಡಿದ ನುಡಿಯಿಂ.
ಕಟ್ಟಲಾರೆನೂ ಗೀತವ
ಬರಿದೆ ಅಕ್ಷರಗಳಿಂ
ಸೃಜಿಸಲಾರೆ ಭಾವದ
ಬೆಚ್ಚನೆಯ ಬೆವರ!
ಗುರು ಪೊರೆದ.
ಉಳಿಪೆಟ್ಟು ಬಿದ್ದ ಪ್ರತಿಮೆ
ರೂಪಕ ಉಪಮೆ ಅಲಂಕಾರ
ನಿಲುಕದ ಅರ್ಥ
ಕರ್ತ ಕರ್ಮಟಗಳು ನಿಗೂಢ
ಧನಿಯಿಹುದು
ಮೋಹನ ಮುರಳಿನಾದದೊಲು
ಸೃಜನಶೀಲ ಚಿಲುಮೆ
ಭೂರಮೆ ಬಸಿರು
ಉದಿಸಿ ಬೀಜದಿಂ
ಮೊಳೆವಂತೆ ಚೈತ್ರದಿ,
ಶಿಶಿರದಿ ಭುವಿಯ
ಸ್ಪರ್ಶ ಹಣ್ಣಾದ ಎಲಗೆ!
ಚಿಗಿತಂತೆ ವಸಂತದಲಿ.
ಭಾನಕಾಂತಿಗೊರಳಿ
ಬಿರಿವ ಪುಷ್ಪ
ಪಕಳೆಪಕಳೆಯೊಲು
ಸುಗಂಧ ತುಂಬಿ
ಗಂಧ ತೇಯ್ವಂತೆ.
ಮೈಹರಡಿ ಬಾನಿಗೆ
ತಂಪತೀಡ್ವ ತರುಲತೆಗಳು.
ಹುಣ್ಣುಮೆಯ ರಾತ್ರಿಯೊಳು ಹಾಲಬೆಳಕನಾಸ್ವ ಶಶಿಕಾಂತಿ
ದೀವಳಿಗೆ ದೀವಿಗೆ ದೀಪ್ತ
ಪ್ರಭಾವಳಿ ಮಂಡಲದ ಪೀಠ
ಚೆಲುವೆಯ ಬಿನ್ನಾಣದ ನಡಿಗೆ
ತೀರದ ತಾಯೊಡಲ ಮಮತೆ
ಮೂಡು ಬಾನು
ಬಿಡಿಸುವ ಮುಗಿಲ ರಂಗವಲ್ಲಿ
ತೇಲಬೇಕದು ಜಲದಗಡಿಗೆಯನೊತ್ತ ಮೋಡದೊಲು
ಪಾಡಲಹುದು ಒಲಿದು ನಲಿವ ಜೀವದೊಲುಮೆ ಗಾಥೆ
ಬಾಳ ಬವಣೆ ವ್ಯಥೆಯ ಕಳೆ
ಇಂತಿಂತೆ ಅಂತೆ ಕೇಳ್ದಂತೆ ಕಾಡ್ವ ಕಥೆ
ಜನ್ಮಿಪೆ ಜನಕೆ ಬೆರಗು
ಸದ್ದಿಲ್ಲದೆ ಜವರಾಯ ಜೀವ ಜೊತೆಗೋಯ್ವಂತೆ.!
********************************
ಚಂದದ ಕವಿತೆ
ಕವಿತಾಭಾವ ಸೊಗಸಾಗಿದೆ!
ತುಂಬಾ ಚಂದ ಉಂಟು ಮೇಡಂ