ಕವಿತೆ
ಪಾತ್ರ
ಚಂದ್ರಿಕಾ ನಾಗರಾಜ್
ಬಿಟ್ಟ ಕಂಗಳ ನಡುವೆ
ಹಾಯಲೆಷ್ಟೋ ಪಾತ್ರಗಳಿವೆ
ಕಂಗೆಟ್ಟ ಬಿಕ್ಕುಗಳಷ್ಟೇ ಸಾಕ್ಷಿ
ಇಲ್ಲೂ ದುರ್ಯೋಧನ ಸಿಗುತ್ತಾನೆ
ಆಸ್ತಿಗಾಸೆ ಪಟ್ಟು ದುರಂಹಕಾರದ ಪಣ ತೊಟ್ಟು
ಅವನಿಗಿಲ್ಲಿ ಎಲ್ಲರೂ ದಾಯಾದಿಗಳೇ
ಅವನಂತವರ ಹೊರತು ಪಡಿಸಿ
ಸೀರೆಯ ಸೆರಗ ಎಳೆದು ಎಳೆದು ಸುಸ್ತಾಗದೆ ನಗುವ
ದುಶ್ಯಾಸನನಿದ್ದಾನೆ
ಪರರ ಮಾನಾಪಮಾನವ ಲೆಕ್ಕಿಸದೇ ಉಳಿಯುತ್ತಾನೆ
ಅಗೋ ಅಲ್ಲಿ ಕರ್ಣ ಗೊತ್ತಿದ್ದೋ
ಗೊತ್ತಿಲ್ಲದೆಯೋ
ದಾನಿಯಾದ
ದ್ರೌಪದಿಯ ಕಣ್ಣೀರ ನೋಡಿದನೋ ಇಲ್ಲವೋ
ಇಲ್ಲಿರುವವನು
ಮಾಯಾ ಜಂಗಮವಾಣಿಗೆ ಹಲ್ಲು ಕಿರಿಯುತ್ತಾನೆ
ಮತ್ತೊಬ್ಬ ಕರ್ಣ ಕೊಟ್ಟೂ ಕೊಡದಂತೆ ಮೌನಿ
ಅಪಮಾನದ ಸೀರೆ ಹೊದ್ದ
ಪಾಂಚಾಲಿಯರು
ಕೇಶ ರಾಶಿಗೆ ಅದ್ಯಾವುದೋ
ಶಾಂಪು ಹಚ್ಚಿಕೊಂಡು ಮೀಯಿಸುತ್ತಾರೆ
ಧರ್ಮರಾಯ ಅಪರೂಪವಾಗಿದ್ದಾನೆ ಬಿಡಿ
ಇಲ್ಲಿ ಮಾತಲ್ಲಷ್ಟೇ ತಾವು ಭೀಮನಂತೆ ಆರ್ಭಟಿಸುವವರು
ಅವನ ತೋಳ ಸಮ ಉಳಿದಿಲ್ಲ ಏನೂ
ಅರ್ಜುನನ ಪರಾಕ್ರಮ ಸಿಕ್ಕುವುದಿಲ್ಲ ನಿಮಗೆ
ಇವರ ಮಾತುಗಳು ನಿಲ್ಲವು ಅವ ಬಿಟ್ಟಿರುವ ಬಾಣಗಳ ಮುಂದೆ
ನಕುಲ ಸಹದೇವರನ್ನಂತೂ ಹುಡುಕಲೇ ಬೇಡಿ
ಧರ್ಮದುಳಿವಿಗಾಗಿ
ಸೂತ್ರದಾರನಾಗಿ
ಕುದುರೆಗಳ ಮೂಗುದಾರ ಹಿಡಿದ
ಅವನು ಇನ್ನಷ್ಟೇ ಹುಟ್ಟಬೇಕಿದೆ
ಆ ಮಹಾ ಸಾರಥಿಯ ನಾಮ ಜಪವ ಮರೆಯಬೇಡಿ
ಹುಡುಕಬೇಡಿ
ಹಾಗೊಂದು ವೇಳೆ ಸಿಕ್ಕರೆ
ನಿಮ್ಮೊಳಗೆ ಹಿಡಿದಿಟ್ಟುಕೊಳ್ಳಿ
***************************************
ಚಂದದ ಅಭಿವ್ಯಕ್ತಿ.
ಧನ್ಯವಾದ
Nice..
ಧನ್ಯವಾದ
vry nice
ಧನ್ಯವಾದ