ಚಪ್ಪರದ ಗಳಿಕೆ

ಅನುಭವ

ಚಪ್ಪರದ ಗಳಿಕೆ

ಶಾಂತಿವಾಸು

ನಮ್ಮ ಮನೆಗೆ ಹೊದ್ದಿಸಿದ ಸಿಮೆಂಟ್ ಶೀಟ್ ಮೇಲೆ ಹತ್ತಿ ನಡೆಯಲಾರಂಭಿಸಿದರೆ ಸುಮಾರು ಇಪ್ಪತ್ತು ಮನೆಗಳನ್ನು ದಾಟಬಹುದಿತ್ತು.  ನಲವತ್ತು ವರ್ಷಗಳ ಮೊದಲು ನಮ್ಮ ರಸ್ತೆಯಲ್ಲಿ ಯಾವುದೇ ಮಹಡಿ ಮನೆ ಇರಲಿಲ್ಲ. ನೆರಳಿಗಾಗಿ ನಮ್ಮ ಮನೆಯ ಹೊಸ್ತಿಲಿನ ನಂತರ ಹತ್ತು ಅಡಿಗಳಷ್ಟು ಮುಂದಕ್ಕೆ, ಮೇಲೆ ಕವಲುಹೊಡೆದ ಉದ್ದದ ಊರುಗೋಲುಗಳನ್ನು ನಿಲ್ಲಿಸಿ ಮೇಲೆ ಚೌಕಟ್ಟು ಮಾಡಿ  ಇಪ್ಪತ್ತು ಅಡಿಗಳಷ್ಟು ಅಗಲಕ್ಕೆ ತೆಂಗಿನ ಗರಿಗಳನ್ನು ಹೊದಿಸಿದ್ದರು. ನಮ್ಮ ಮನೆ ಬಿಟ್ಟು ಎಡಗಡೆಗೆ ಬಾಡಿಗೆ ಮನೆಗಳು ಹಾಗೂ ಬಲಗಡೆಗೆ ಗಿಡಮರಗಳು (ಮಾವು ಹಾಗೂ ಸೀಬೆ), ಬಟ್ಟೆ ಒಗೆಯುವ ಕಲ್ಲು ಹಾಗೂ ಬಾಡಿಗೆ ಮನೆಯವರಿಗಾಗಿ ಒಂದು ನೀರಿನ ತೊಟ್ಟಿ ಇದ್ದಿತು.  ಬೆಳಗ್ಗೆ ಸಂಜೆ ಕಾಫೀ ಕುಡಿಯಲು ಚಪ್ಪರದ ನೆರಳು ಒಳ್ಳೆಯ ಜಾಗವಾಗಿತ್ತು.

   ನಮ್ಮ ಮನೆಯಲ್ಲಿ ಮೊದಲೇ ಬಾಡಿಗೆಗಿದ್ದ ತಮ್ಮನ ಸಂಸಾರದೊಡನೆ ಸೇರಿಕೊಳ್ಳಲು ಆಂಧ್ರದ ಒಂದು ಹಳ್ಳಿಯಿಂದ ಇಪ್ಪತ್ತು ವರ್ಷ ವಯಸ್ಸಿನ ಮಗನೊಡನೆ ಬಂದ ಕುಂಟಮ್ಮನಿಗೆ (ಶಾಂತಮ್ಮ ಇವರ ಹೆಸರು) ಒಂದು ಕಾಲು ಚಿಕ್ಕದಾದ್ದರಿಂದ ಕುಂಟುತ್ತಾ ಸ್ವಲ್ಪ ದೂರವೂ ನಡೆಯಲಾಗುತ್ತಿರಲಿಲ್ಲ. ಅಲ್ಲದೆ ಒಂದೇ ಕಡೆ ಗಂಟೆಗಟ್ಟಲೆ ಕುಳಿತಿರುತ್ತಿದ್ದರಿಂದ ತುಂಬಾ ದಪ್ಪಗಾಗಿದ್ದರಲ್ಲದೆ   ಸೋರುವಂತೆ ತಲೆಗೆ ಹಚ್ಚುತ್ತಿದ್ದ ಎಣ್ಣೆ, ಕಪ್ಪಾಗಿದ್ದ ಮುಖವನ್ನು ಫಳಫಳನೆ ಹೊಳೆಯುವಂತೆ ಮಾಡಿತ್ತು. ವಿಧವೆಯಾದ್ದರಿಂದ ಕುಂಕುಮವಿರದ ಬೋಳು ಹಣೆ, ಕೈಗಳಿಗೊಂದೊಂದು ಮಾಸಿದ ಹಿತ್ತಾಳೆಯ ಬಳೆ, ಕಿವಿಗಳಿಗೆ  ತೆಳುವಾದ ಪುಟ್ಟ ಚಿನ್ನದ ಓಲೆ, ಏಳುಕಲ್ಲಿನ ಮೂಗುತ್ತಿ ಧರಿಸಿದ್ದಾಕೆಗೆ ಬೇರೆ ಒಡವೆಗಳಿರಲಿಲ್ಲ.  ಬೆಳಗ್ಗೆ ಎಂಟು ಗಂಟೆಗೆಲ್ಲಾ ಚಪ್ಪರದ ಕೆಳಗೆ ಕುಳಿತು ಮುತ್ತುಗದ ಎಲೆಗಳನ್ನು ಒಪ್ಪ ಮಾಡಿ, ಊಟದ ಎಲೆಗಳನ್ನು ಕಡ್ಡಿಗಳಿಂದ ಹೊಲಿಯುತ್ತಿದ್ದರು. ಮಗ ಎಲೆಗಳು ಹಾಗೂ ಅವನ್ನು ಹೊಲಿಯಲು ಕಡ್ಡಿಗಳನ್ನು ತಂದು ಕೊಟ್ಟು ಹೊಲಿದ ಎಲೆಗಳನ್ನು ತೆಗೆದುಕೊಂಡು ಹೋಗಿ ಅಂಗಡಿಗಳಿಗೆ  ಮಾರಿ ಬರುತ್ತಿದ್ದ. ಅದರಲ್ಲಿಯೇ ಅಮ್ಮ ಮಗನ ಜೀವನ  ನಡೆಯುತ್ತಿತ್ತು. ಅಲ್ಲದೆ ಮತ್ತೊಂದು ಜೊತೆ  ಬಿಳಿಕಲ್ಲಿನ ದೊಡ್ಡ ಓಲೆ ಕೊಳ್ಳುವ ಉದ್ದೇಶದಿಂದ ಕಷ್ಟಪಟ್ಟು ಹಣ ಕೂಡಿಡುತ್ತಿದ್ದರು. ನಾವು ಯಾರೇ ಮನೆಯಲ್ಲಿರಲಿ ಬಿಡಲಿ ಕುಂಟಮ್ಮ ಮಾತ್ರ ತಮ್ಮ ವಸ್ತುಗಳೊಡನೆ ನಿಶ್ಚಿತ ಸ್ಥಳದಲ್ಲಿ ಇದ್ದೇ ಇರುತ್ತಿದ್ದರು. ಆರು ಗಂಟೆಯ ನಂತರ ಅವರ ಎಲ್ಲ ವಸ್ತುಗಳನ್ನು ಸುಣ್ಣಬಳಿದ ಗೋಡೆಗೊತ್ತಿ ಬಿಟ್ಟು ಹೋಗುತ್ತಿದ್ದರು. ನಮ್ಮ ಮನೆಗೆ ಬರುವವರಾಗಲಿ ಅಥವಾ ಅವರ ಮನೆಗೆ ಬರುವವರಾಗಲಿ ಚಪ್ಪರದ ಕೆಳಗೆ ಕುಳಿತುಕೊಳ್ಳುತ್ತಿದ್ದರು. ಗಂಡಸರಾದರೆ ಹಲಗೆ ಮುಚ್ಚಿದ ತೊಟ್ಟಿಯ ಮೇಲೆ ಇಬ್ಬರು ಹಾಗೂ ಕಬ್ಬಿಣದ ಮಡಚುವ ಖುರ್ಚಿಯಲ್ಲಿ ಒಬ್ಬರು ಕೂರಬಹುದಿತ್ತು. ಹೆಂಗಸರು ಮಕ್ಕಳೆಲ್ಲಾ ಸಗಣಿಯಿಂದ ಸಾರಿಸಿದ ನೆಲದ ಮೇಲೆ ಕೂರುವುದು ಸಾಮಾನ್ಯವಾಗಿತ್ತು. ಬಂದವರೊಡನೆ ಮಾತನಾಡುತ್ತಲೇ ಪ್ಲಾಸ್ಟಿಕ್ ಬುಟ್ಟಿಗಳನ್ನು ಹೆಣಿಯುತ್ತಿದ್ದ ನಮ್ಮ ತಾಯಿ, ಕೇಳಿದವರಿಗೆ ಮಾರುತ್ತಿದ್ದರು.

ನಮ್ಮಮ್ಮ, ಚಪ್ಪರದಾಚೆ ಬಲಗಡೆ ಮಣ್ಣು ಅಗೆದು ಗೊಬ್ಬರ ಹಾಕಿ ಮನೆಯ ಸಿಮೆಂಟ್ ಶೀಟಿನ ಮೇಲೆ ಬರುವಂತೆ ಸಿಹಿಗುಂಬಳ, ಬೂದುಗುಂಬಳ, ಪಡವಲ, ಹೀರೆ, ತುಪ್ಪೀರೆಕಾಯಿಗಳನ್ನು (ಇವ್ಯಾವುದನ್ನೂ ನಮ್ಮ ಮನೆಯಲ್ಲಿ ಯಾರೂ ತಿನ್ನುತ್ತಿರಲಿಲ್ಲ) ಹಾಗೂ ಚಪ್ಪರದ ಮೇಲೆ ಹವಾಮಾನಕ್ಕೆ ತಕ್ಕಂತೆ ಚಪ್ಪರದ ಅವರೆ ಅಥವಾ ಹಾಗಲಕಾಯಿ ಹಾಗೂ ಮನೆಯ ಮುಂದಿನ ಮಣ್ಣಿನ ಜಾಗದಲ್ಲಿ ಹಲವು ಬಗೆಯ ಹೂವುಗಳು, ಟೊಮ್ಯಾಟೋ, ಬೆಂಡೆಕಾಯಿಗಳನ್ನು ಬೆಳೆದು, ಅಗತ್ಯವಿರುವಷ್ಟನ್ನು ಉಪಯೋಗಿಸಿ ಮಿಕ್ಕಿದ್ದನ್ನು ಮಾರುತ್ತಿದ್ದರು. ಇವುಗಳಿಂದ ಬರುವ ವರಮಾನ ನಮ್ಮಮ್ಮನದು. ಮಧ್ಯಾನ್ಹದವರೆಗೂ ಕೆಲಸ, ಊಟ ಮುಗಿಸಿ ಬರುವ ಅಕ್ಕಪಕ್ಕದ ಮನೆಯ ನಮ್ಮಮ್ಮನ ಗೆಳತಿಯರು ಶಾಂತಮ್ಮನ ಊಟದೆಲೆ ಹಾಗೂ ನಮ್ಮಮ್ಮನ ಬುಟ್ಟಿ, ಹೂವು ಹಾಗೂ ತರಕಾರಿಗಳ                      ಗ್ರಾಹಕರುಗಳಾಗಿದ್ದರು.

ನಮ್ಮ ತಾತ ಸ್ವಂತದ ಸೌದೆ ಡಿಪ್ಪೋ ಹೊಂದಿದ್ದರು. ವಯಸ್ಸಾದ ನಂತರ ಅದನ್ನು ಮಾರಿ ಮನೆಯಲ್ಲಿಯೇ ಇರುತ್ತಿದ್ದರು. ಮೂರು ಜನರು ಕೂರಬಹುದಾದ ಮರದ ಬೆಂಚೊಂದನ್ನು ಬೆಳಗ್ಗಾದರೆ ಮನೆಯೊಳಗಿನಿಂದ ಚಪ್ಪರದ ಕೆಳಗೆ ಹಾಕಿಸಿಕೊಂಡು ಕೂರುತ್ತಿದ್ದರು, ಸೊಂಟ ನೋಯುವಾಗ ಮಲಗುತ್ತಿದ್ದರು. ಹಲವಾರು ಮನೆಯ ಪಂಚಾಯಿತಿಗಳು, ಮದುವೆಯ ಮಾತುಕತೆ, ಪಂಚಾಂಗ(ತೆಲುಗು) ನೋಡಿ ಮದುವೆ ದಿನ ಗೊತ್ತು ಮಾಡುವುದೆಲ್ಲವೂ ಈ ಚಪ್ಪರದ ಕೆಳಗೇ ನಮ್ಮ ತಾತನ ಮೇಲುಸ್ತುವಾರಿಯಲ್ಲಿ ನಡೆಯುತ್ತಿತ್ತು. ತಾತನನ್ನು ನೋಡಲು ಬರುವವರು ಕಡಲೆಕಾಯಿ, ಗೆಣಸು, ತೆಂಗಿನಕಾಯಿಗಳನ್ನು ತಂದುಕೊಡುತ್ತಿದ್ದರು.

  ನಮ್ಮ ತಂದೆ ಆಂಧ್ರದ ಕಡೆಯವರು, ತಾಯಿ ತಮಿಳುನಾಡಿನ ತೆಲುಗು ಭಾಷಿಕರು. ಹೀಗಾಗಿ ಎರಡೂ ಕಡೆಯ ನೆಂಟರಿಂದ ಸದಾ ತುಂಬಿರುತ್ತಿದ್ದ ಮನೆ ನಮ್ಮದು. ಬಂದವರು ಎರಡು ಮೂರು ದಿನ ತಂಗಿ ವಾಪಸ್ಸು ಹೊರಟರೆ, ಈ ಚಪ್ಪರದ ಕೆಳಗೆ ಒಲೆ ಬಾಣಲೆ ಇಟ್ಟು, ಚೆಕ್ಕುಲಿ ಇಲ್ಲದಿದ್ದರೆ ಕರ್ಜಿಕಾಯಿ ಮಾಡಿ ಊರಿಗೆ ಕೊಟ್ಟುಕಳಿಸುವ ದೃಶ್ಯ ಆಗಾಗ ನೆನನಾಗುತ್ತದೆ. ಯಾಕೆಂದರೆ ಅಪ್ಪಿತಪ್ಪಿ ಹುಷಾರಿಲ್ಲದೆಯೋ ಅಥವಾ ಸಮಯ ಒದಗಿ ಬರದೆ ಕುರುಕಲು ಮಾಡಿಕೊಡಲಿಲ್ಲವೆಂದರೆ  ಮುಖ ತಿರುವಿ ಹೋದ ನೆಂಟರನ್ನು ಮರೆಯಲಾದೀತೇ??  ದೀಪಾವಳಿ ಹಬ್ಬದ ಹಿಂದಿನ ದಿನ ನಮ್ಮ ಸೋದರಮಾವಂದಿರು ಬಂದು, ಇದೇ ಚಪ್ಪರದ ಕೆಳಗೆ ಕಲ್ಲುಗಳನ್ನು ಪೇರಿಸಿ,  ತಲೆಯಮೇಲೆ ಗರಿಕೆ ಹುಲ್ಲು ಸಿಕ್ಕಿಸಿದ ಸಗಣಿಯ ಗಣಪನನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಿ, ಒಲೆ ಹಚ್ಚಿ, ಸುತ್ತ ಕುಳಿತು ರಾಶಿರಾಶಿ ಕಜ್ಜಾಯ ಮಾಡುತ್ತಿದ್ದ ಸಂಭ್ರಮವನ್ನು ಎಲ್ಲರೂ ನೆನಪಿಸಿಕೊಳ್ಳುವುದುಂಟು.

   ನಮ್ಮಲ್ಲಿಯ ಹೆಣ್ಣು ಮಕ್ಕಳು ದಾಟದ ಹತ್ತನೇ ತರಗತಿಯನ್ನು ನಮ್ಮಕ್ಕ ಪಾಸು ಮಾಡಿಬಿಟ್ಟಿದ್ದರು. ನಮ್ಮಪ್ಪ ಹಾಗೂ ತಾತನ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. ಸಂತೋಷ ಹಂಚಿಕೊಳ್ಳಲು ಲಾಡು ಮಾಡುವವರನ್ನು ಕರೆಸಿ, ಇನ್ನೂರು ಲಾಡುಗಳನ್ನು  (ಚಪ್ಪರದ ಕೆಳಗೆ) ಮಾಡಿಸಿ, ಮನೆಗೆ ಬಂದವರಿಗೆ, ರಸ್ತೆಯಲ್ಲಿ ಓಡಾಡುವ ಪರಿಚಯದವರಿಗೆ,  ಕೆಲವು ಮನೆಗಳಿಗೆ ನಡೆದು ಮತ್ತು ಬಸ್ಸಿನಲ್ಲಿಯೂ ಹೋಗಿ ಕೊಟ್ಟು ಬಂದರು ನಮ್ಮ ತಂದೆ. ನಮ್ಮ ಚಪ್ಪರದ ಊರುಗೊಲಿಗೆ ಬಾಡಿಗೆ ಮನೆಯ ನಾಗಮ್ಮ ತಮ್ಮ ಒಂದೂವರೆ ವರ್ಷದ ಮಗ, ರಾಜನ ಒಂದು ಕಾಲು ಕಟ್ಟಿಹಾಕಿ ಮನೆಗೆ ಹೋಗಿಬಿಡುವರು. ಅವರು ಕೆಲಸ ಮುಗಿಸಿ ಬರುವವರೆಗೂ  ಅಳುತ್ತಲೋ, ಅರಚುತ್ತಲೋ ಉಚ್ಛೆಹುಯ್ದುಕೊಂಡು ಅದರಲ್ಲಿಯೇ ಒದ್ದಾಡಿಕೊಂಡು ಅವನು ಕುಳಿತಿರುತ್ತಿದ್ದ ಕೆಲವೊಮ್ಮೆ ಅಲ್ಲಿಯೇ ನಿದ್ರಿಸಿಯೂ ಬಿಡುತ್ತಿದ್ದ. ರಜಾ ದಿನಗಳಲ್ಲಿ ನಾನು, ನನ್ನ ತಂಗಿ ಉಮಾ ಕೆಲವು ಗೆಳತಿಯರೊಡನೆ ಸೇರಿ ಚಪ್ಪರಕ್ಕೆ ಸೀರೆಗಳನ್ನು ಪರದೆಯಂತೆ ಸಿಕ್ಕಿಸಿ ಒಳಾಂಗಣವನ್ನು ವೇದಿಕೆಯನ್ನಾಗಿಸಿ, ಐದೈದು ಪೈಸೆ ವಸೂಲಿ ಮಾಡಿ ವಿಧವಿಧವಾದ ನಾಟಕಗಳನ್ನಾಡಿ, ಬಂದ ಹಣವನ್ನು ಹಂಚಿ ಕಮ್ಮರ್ಕಟ್ಟು ತಿಂದುಬಿಡುತ್ತಿದ್ದೆವು. ಇಂಥ ಬಹುಪಯೋಗಿ ಚಪ್ಪರವು ನೋಡಲು ಬಹು ಸುಂದರವಾಗಿತ್ತು. ಮೇಲೆ ಬೀಳುವ ಮುಂಜಾವಿನ ಬಿಸಿಲಿನ ತೆಳುಕಿರಣಗಳು ಚಪ್ಪರಕ್ಕೆ ಹಾಸಿದ್ದ ಗರಿಗಳ ಸಂದುಗಳಿಂದ  ಓರೆಯಾಗಿ ಬಿದ್ದು ನೆಲವನ್ನು ಒಂದು ತೆರನಾಗಿ ಅಂದಗೊಳಿಸಿದರೆ, ಬೇಸಿಗೆಯಲ್ಲಿ ನೆಲದ ಮೇಲೆ ಮೂಡುವ ದಟ್ಟ ಕಪ್ಪು ನೆರಳಿನೊಂದಿಗಿನ ಬೆಳಕು ವರ್ಣನಾತೀತವಾದದ್ದು. ಮಳೆಗಾಲದಲ್ಲಿ ಪಟಪಟನೆ ಸದ್ದು ಮಾಡಿ ನೀರು ಸೋರುತ್ತಿದ್ದ ಚಪ್ಪರವು, ಚಳಿಗಾಲದ ಬೆಳಗು ಹಾಗೂ ಸಂಜೆ ಕಣ್ಣಿಗೆ ಕಾಣದಷ್ಟು ದಟ್ಟವಾದ ಹಿಮದಿಂದ ಮುಚ್ಚಿ ಹೋಗಿರುತಿತ್ತು. ಈ ಹಿಮದ ಮದ್ಯೆ ಬುಟ್ಟಿ ಹೊತ್ತು ಬಂದ ಹೂವಿನವಳು ಮೊಳ ಹಾಕುತ್ತಿದ್ದ ಮಲ್ಲಿಗೆ ಹೂವಿನ ವಾಸನೆಯ ಅಮಲು, ನೆನೆದಾಗಲೆಲ್ಲಾ ನನ್ನನ್ನು ಸ್ವರ್ಗದಲ್ಲಿ ತೇಲಿಸುತ್ತದೆ. ಇಷ್ಟೆಲ್ಲಾ ಮೇರು ಮಹಿಮೆಯುಳ್ಳ ಚಪ್ಪರದ ಕೆಳಗೆ, ಬೆಳದಿಂಗಳ ಚಂದ್ರನು ಮೂಡಿಸಿದ ಅಂದದ ಚಿತ್ತಾರದ ಮೇಲೆ ಕುಳಿತು  ನನ್ನಮ್ಮ ಬೇಳೆ, ಒಣಮೆಣಸಿನಕಾಯಿ  ಜೊತೆಗೆ ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು ಹಾಕಿ ಬೇಯಿಸಿ ಮಸೆದ ಸಾರು, ನೆಂಚಿಕೊಳ್ಳಲು ಒಂದು ಅಥವಾ ಎರಡು ವರ್ಷ ಹಳೆಯದಾದ ಒಣಗಿಸಿದ ಮಾವಿನಕಾಯಿಯಿಂದ ಮಾಡಿದ ಉಪ್ಪಿನಕಾಯಿ ರುಚಿಯನ್ನು ಬಾಯಿಚಪ್ಪರಿಸುತ್ತಾ ಅಕ್ಕತಂಗಿಯರೊಂದಿಗೆ ಊಟವನ್ನು ಹಂಚಿ ತಿಂದ ನನ್ನ ಭಾಗ್ಯಕ್ಕೆ ಮಿತಿಯೇ ಇಲ್ಲ…

*******************************************

Leave a Reply

Back To Top