ನೆನಪುಗಳು:

ಕವಿತೆ

ನೆನಪುಗಳು:

ಡಾ. ಅರಕಲಗೂಡು ನೀಲಕಂಠ ಮೂರ್ತಿ

1.
ನೆನಪುಗಳೇ ಹಾಗೆ —
ಒಮ್ಮೆ ಚುಚ್ಚುಸೂಜಿಗಳು
ಒಮ್ಮೆ ಚಕ್ಕಳಗುಳಿ ಬೆರಳುಗಳು
ಮತ್ತೊಮ್ಮೆ ಮುಗುಳುನಗೆಯ ಜೋಕುಗಳು
ಇನ್ನೊಮ್ಮೆ ಕಣ್ಣ ಬಸಿಯುವ ಹಳೆಯ ಹೊಗೆಯ ಅಲೆಗಳು…ಮತ್ತು
ಪಿಸುಮಾತಲಿ ಮುಲುಗುವ
ಒಲವಿನ ಬಿಸಿ ಬಂಧುರ ಬಂಧನಗಳು…!

2.
ನೆನಪುಗಳು —
ಪ್ರಪ್ರಥಮ ಮಳೆಗೆ ವಟಗುಟ್ಟುವ
ಕೊರಕಲ ಕಪ್ಪೆಗಳು;
ಹರೆಯದ ಹುತ್ತದಲಿ ಭುಸುಗುಟ್ಟು
ಮತ್ತೆಲ್ಲೋ ಹರಿದು ಮರೆಯಾದ
ಹಾವಿನ ಪೊರೆಗಳು…!
ನೆನಪುಗಳು ಏಕಾಂತದಲಿ ಕಳಚುತ್ತವೆ
ದಿರಿಸು ಒಂದೊಂದಾಗಿ,
ಎಂದೋ ಹಂಬಲಿಸಿದ ಬಿಸಿಯ
ಬೆಂಕಿಯಾಗಿ…

3.
ನೆನಪುಗಳು —
ಕಳೆದುಹೋದ ಕೋಲ್ಮಿಂಚಿನ ಹಸಿರ ಚಿಗುರು
ಈ ಋತು ಒಣಗಿ ಉದುರುವ ತರಗು…
ಸಗಣಿ ಗೋಡೆಗೆಸೆವುದು ಬೆರಣಿಗಾಗಿ,
ಆ ಬೆರಣಿಯುರಿದು ಬೆಂಕಿ…ಅಷ್ಟೆ!

ಎಂಥ ಸುಕೃತವೋ ಏನೋ —
ನೆನಪಿನ ಆಯಸ್ಸು ನಮ್ಮಷ್ಟೆ
ಅಥವಾ…ಇನ್ನೂ ಕಮ್ಮಿ…!

****************************

10 thoughts on “ನೆನಪುಗಳು:

  1. ಮತ್ತೊಮ್ಮೆ ಉತ್ತಮವಾದ ಕವಿತೆಯನ್ನು ರಚಿಸಿದ್ದೀರಿ. ಅಭಿನಂದನೆಗಳು

Leave a Reply

Back To Top