ಜುಮ್ಮಾ- ಕಥಾ ಸಂಕಲನ

ಜುಮ್ಮಾ- ಕಥಾ ಸಂಕಲನ
ತೆಲುಗು ಮೂಲ: ವೇಂಪಲ್ಲಿ ಶರೀಫ್
ಕನ್ನಡಕ್ಕೆ:ಸೃಜನ್
ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ.೭೫
ಪುಟಗಳು : ೯೬

ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ.  ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ ನಿರುದ್ವಿಗ್ನತೆಯಿಂದ ದಾಖಲಿಸುತ್ತಾ ಹೋಗುತ್ತಾರೆ.  ತಮ್ಮ ಅನುಭವಗಳನ್ನು ತಾರ್ಕಿಕ ವಿಶ್ಲೇಷಣೆಗೆ ಒಳಪಡಿಸಿ ನಿರೂಪಿಸುತ್ತ ಹೋಗುತ್ತಾರೆ.

 ಇಲ್ಲಿನ ಪ್ರತಿಯೊಂದು ಕಥೆಯೂ ದಮನಿತರ ಹದಗೆಟ್ಟ ಬದುಕು ಮತ್ತು ವ್ಯವಸ್ಥೆಯ ಹುಳುಕನ್ನು ಪ್ರತಿಫಲಿಸುತ್ತ ಓದುಗರ ಕಣ್ಣುಗಳನ್ನು ಹನಿಗೂಡಿಸುತ್ತವೆ. ದುಃಖವು ಈ ಕಥೆಗಳ ಸ್ಥಾಯೀಭಾವ.

           ‘ಪರದೆ’ ಅನ್ನುವ ಕಥೆಯಲ್ಲಿ ಪರದೆ ಅನ್ನುವುದು ಧಾರ್ಮಿಕತೆಯ ದ್ಯೋತಕವಾದರೂ  ಅದು ಹೇಗೆ ಮನುಷ್ಯ ಸಂಬಂಧಗಳ ನಡುವೆ ಗೋಡೆ ನಿರ್ಮಿಸುತ್ತದೆ ಮತ್ತು ಬದುಕನ್ನು ಹೇಗೆ ಕೃತಕಗೊಳಿಸುತ್ತದೆ ಎನ್ನುವ ಸತ್ಯವನ್ನು ಕಥೆ ಬಯಲಿಗೆಳೆಯುತ್ತದೆ. ‘ಜುಮ್ಮಾ’ ಎಂಬ ಕಥೆಯಲ್ಲಿ ಧಾರ್ಮಿಕ ಶ್ರದ್ಧೆಯ ಹೆಸರಿನಲ್ಲಿ ಶುಕ್ರವಾರ ನಮಾಜು ಮಾಡಲು ಮಸೀದಿಗೆ ಹೋಗಲೇ ಬೇಕೆಂದು ಒತ್ತಾಯಿಸುವ ಅಮ್ಮ  ಕೊನೆಯಲ್ಲಿ ಅಷ್ಟು ಭವ್ಯವಾದ ಮಸೀದಿಯೊಳಗೆ  ಸ್ಫೋಟ ಸಂಭವಿಸಿದ ಸುದ್ದಿ ಕೇಳಿ  ತನ್ನ ನಂಬಿಕೆಯಿಂದಲೇ ಕಳಚಿಕೊಳ್ಳುವುದು ಬದುಕು ಹೇಗೆ ಮತೀಯ ನಂಬಿಕೆಗಿಂತ ದೊಡ್ಡದು ಅನ್ನುವ ಸತ್ಯವನ್ನು ನಿರೂಪಿಸುತ್ತದೆ.

 ‘ಜೀಪು ಬಂತು’ ಎಂಬ ಕಥೆ ಬಡತನದ ಕುರಿತಾದದ್ದು. ಜೀವನೋಪಾಯಕ್ಕಾಗಿ ಹೊಲದಲ್ಲಿ ಬೆವರು ಸುರಿಸುವ ರೈತ ಮಳೆಯಿಲ್ಲದೆ ಅಸಹಾಯಕನಾಗಿ ಬೋರ್ ಹಾಕಿಸಿದರೆ  ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಂದು ಹಣ ಕಟ್ಟಲಿಲ್ಲವೆಂದು ಅವನ ಜತೆಗೆ ನಿರ್ದಯವಾಗಿ ನಡೆದುಕೊಳ್ಳುವುದು  ಅಧಿಕಾರಶಾಹಿಯ ಕ್ರೌರ್ಯವನ್ನು  ಬಿಂಬಿಸುತ್ತದೆ.  ‘ಪಚ್ಚೆ ರಂಗೋಲಿ’ ಕಥಾನಾಯಕನ ಅಕ್ಕ ಹಿಂದೂ ಸಂಸ್ಕೃತಿಯಾದ ರಂಗೋಲಿಯ ಮೇಲಿನ ಪ್ರೀತಿಯಿಂದಾಗಿ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವುದು, ಮುಂದೆ ತನ್ನ ಆ ಆಸೆಯನ್ನು ಮೆಹಂದಿ ವಿನ್ಯಾಸದ ಮೂಲಕ ಪೂರೈಸಿಕೊಳ್ಳುವುದು-ಚಿಕ್ಕ ಚಿಕ್ಕ ವಿಷಯಗಳೂ ಹೇಗೆ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹೇಳುತ್ತದೆ.

     ಹೀಗೆ ಇಲ್ಲಿನ ಎಲ್ಲ ಕಥೆಗಳೂ ಮತೀಯ ಪೂರ್ವಾಗ್ರಹದಿಂದ ಮುಕ್ತವಾದ ಸೌಹಾರ್ದದ ಆಶಯವನ್ನು ವ್ಯಕ್ತಪಡಿಸುತ್ತಾನೆ. ಮೂಲಕಥೆಗಳ ವಸ್ತು, ಭಾಷೆ, ನಿರೂಪಣಾ ತಂತ್ರ ಎಲ್ಲವೂ ಸೊಗಸಾಗಿವೆ. ಅನುವಾದದ ಶೈಲಿ ಬಹಳ ಸುಂದರವಾಗಿದೆ.

************************************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top