ಪ್ರಬಂಧ
ಆಡು ಭಾಷೆಯ ವೈಶಿಷ್ಟ್ಯತೆ
ಬಾಲಾಜಿ ಕುಂಬಾರ
ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ ಕಲಿಕೆ, ಹೊಸ ಅಲೋಚನೆ , ವಿಶಿಷ್ಟ ಕಾರ್ಯಗಳಿಗೆ ಹೆಸರುವಾಸಿ ಜನ ಉತ್ತರ ಕರ್ನಾಟಕ ಮಂದಿ, ಹೀಗಾಗಿ ಉತ್ತರ ಕರ್ನಾಟಕ ಭಾಷೆ ಕೂಡ ಅಷ್ಟೇ ವೈವಿಧ್ಯಮಯ ಲವಲವಿಕೆಯಿಂದ ಕೂಡಿದೆ.
ಇಲ್ಲಿನ ಜನ ಹೊರಗಡೆ ಹೋಗಲು ಬಸ್ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದರೆ ಪಕ್ಕದ ಸೀಟಿನಲ್ಲಿ ಕುಳಿತಿರುವ ದಕ್ಷಿಣ ಕನ್ನಡ ಭಾಗದವರಿಗೆ ನಾವು ಬೀದರ್ ನವರು ಎಂದು ಹೇಳಬೇಕಾಗಿಲ್ಲ.
‘ಎಲ್ಲಿ , ಕಲ್ಲಿ, ಹೊಂಟಾನ, ಹೋಗ್ಯಾನ’ ಇಷ್ಟು ಸಾಕು, ಅವರು ಅನಾಮತ್ತಾಗಿ ನೀವು ಬೀದರ್ ದವರು ಅಲ್ಲವೇ? ಎಂದು ಕೇಳೇ ಬೀಡ್ತಾರೆ.
ಇನ್ನೂ ನಮ್ಮ ಬೀದರ್, ಮೊದಲೇ ಗಡಿನಾಡು ಜಿಲ್ಲೆ ,
ಆ ಕಡೆ ‘ಎಕ್ಕಡ’ ಎನ್ನುವ ಆಂಧ್ರ ಪ್ರದೇಶ, ಹಾಗೇ ಸ್ವಲ್ಪ ದೂರ ಹೋದರೆ ‘ರಂಡಿ, ಪೊಂಡಿ’ ಎಂದು ಮತ್ತು ತೆಲುಗುಮಾತನಾಡುವ ತೆಲಂಗಾಣ, ಈ ಕಡೆ ‘ಕಸ,ಕಾಯಿ, ಗೇಲಾ, ಏ ರೇ’ ಎನ್ನುವ ಮರಾಠಿ ಪದಗಳು, ‘ಕಲ್ ‘ ಎನ್ನುವ ಹಿಂದಿ ಪದ ಕನ್ನಡದಲ್ಲಿ ‘ಕಲ್ಲು’ ಎನ್ನುವ ಅರ್ಥ ಕೊಡುತ್ತದೆ, ಹೀಗೆ ಕನ್ನಡದವರಿಗೆ ವಿಭಿನ್ನ ಅರ್ಥಗಳಾಗಿ ಕಾಣುತ್ತವೆ.
ಬೀದರಿನ ಹೆಚ್ಚಿನ ಜನರು ತ್ರಿಭಾಷಾ ಪಾಂಡಿತ್ಯ ಉಳ್ಳವರು, ಕನ್ನಡ ನಾಡಿನ ಯಾವುದೇ ಭಾಗದಲ್ಲಿ ಹೋಗಿ, ನಾಲ್ಕೈದು ಕಿ.ಮೀ. ಗೊಂದು ಬದಲಾಗುವ ಭಾಷಾಶೈಲಿ, ಜನರ ಬದುಕು, ಕಲೆ, ಉಣ್ಣುವ ಅನ್ನ, ತೊಡುವ ಬಟ್ಟೆ ಎಲ್ಲವೂ ಭಿನ್ನ ವಿಭಿನ್ನ, ಇದೇ ನಮ್ಮ ನಾಡಿನ ವೈಶಿಷ್ಟ್ಯತೆ ಕನ್ನಡದ ಅಸ್ಮಿತೆ, ಹಸಿರು, ಉಸಿರು ಎಲ್ಲವೂ ಒಳಗೊಂಡಿದೆ.
ನಾವೊಮ್ಮೆ ಶಾಲಾ ಮಕ್ಕಳಿಗೆ ಮೈಸೂರು ಭಾಗದ ವಿವಿಧ ಕಡೆ ಪ್ರವಾಸಕ್ಕೆ ತೆಗೆದುಕೊಂಡು ಹೋಗಿದ್ದೇವು, ಆ ಭಾಗದ ಬಹುತೇಕ ಗ್ರಾಮ, ಪಟ್ಟಣಗಳ ಹೆಸರು ಓದಿಕೊಂಡು ನಮ್ಮ ಶಾಲಾ ಮಕ್ಕಳಿಗೆ ವಿಚಿತ್ರ ಅನುಭವ ಹಾಗೂ ನಗುತ್ತಿದ್ದರು. ಹಾಗೇ ಬೀದರ್ ಜಿಲ್ಲೆಯಲ್ಲಿ ಒಂದು ಗ್ರಾಮದ ಹೆಸರು ‘ಹುಡುಗಿ’ ಅಂತ ಇದೆ, ಬೇರೆ ಭಾಗದವರು ಈ ಕಡೆ ಬಂದರೆ ಈ ‘ಹುಡುಗಿ’ ಎಲ್ಲಿ ಸರ್, ಇನೆಷ್ಟು ದೂರ ಸರ್ ಎಂದು ಕೇಳಿ ತುಂಬಾ ನಗಬಹುದು, ಆ ಕಡೆ ‘ಸೂಳೆಬಾವಿ’ ಎಂದು ಕೇಳಿ ನಗಬಹುದು, ಆದರೆ ಹಾಸ್ಯವಾಗಿ ಕಂಡರು ತನ್ನದೇ ಆದ ವೈವಿಧ್ಯಮಯ ಹೊಂದಿರುವ ಪ್ರದೇಶಗಳು ಎಂದು ಅರ್ಥೈಸಿಕೊಳ್ಳಬೇಕು.
ಹಾಗೇ ಉತ್ತರ ಕರ್ನಾಟಕದ ತಿಂಡಿ ತಿನಿಸು, ಹೆಸರು, ಅಡ್ಡ ಹೆಸರು, ಮಾತು, ಬೈಗಳು ತುಂಬಾ ವಿಚಿತ್ರ, ಇಂಗ್ಲಿಷ್ ಬಾರದ ನಮ್ಮ ಹಳ್ಳಿಯ ಜನರೂ ಕೂಡ ಗ್ಲಾಸ್ ಬದಲಿಗೆ ‘ಗಿಲಾಸ್’ ಫೋಟೋ ಬದಲಿಗೆ ‘ಫೂಟೂ’ ಕೋಟೆಗೆ ‘ಕ್ವಾಟೀ’ ಮದುವೆಗೆ ‘ಮದಿ’ ಮುದುಕ ಬದಲು ‘ಮುದ್ಯಾ’ ಖರೀದಿ ಬದಲಾಗಿ ಖರ್ದಿ, ಬಟ್ಟೆ ಬದಲಿಗೆ ‘ಅರ್ಬಿ’ ಮಕ್ಕಳಿಗೆ ನಿಮ್ಗು ಎಷ್ಟು ‘ಪಾರುಗೋಳು’ ಎಂದು ಕೇಳುತ್ತಾರೆ.
ಒಮ್ಮೆ ಮಹಾರಾಷ್ಟ್ರದ ಒಂದು ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ‘ಕಚರಾ ಕುಂಡಿ’ ಎಂದು ಮರಾಠಿಯಲ್ಲಿ ಬರೆದಿದ್ದು ನೋಡಿ ನಾವೇ ನಕ್ಕಿದ್ದೇವೆ. ಇಂತಹ ಬಹುತೇಕ ಮಿಶ್ರಿತ ಭಾಷೆ, ಅನ್ಯ ಭಾಷೆ, ವಿವಿಧ ಅರ್ಥಗಳಿಂದ ಕೂಡಿದ್ದು ಈ ನೆಲದ ವಿಶೇಷ ಎನ್ನಬಹುದು.
ತರಕಾರಿಗಳಿಗೂ ವಿಚಿತ್ರವಾಗಿ ಕರೀತಾರೆ, ಉಳಾಗಡ್ಡೆ ಬದಲು ‘ಉಳಗಡ್ಡಿ’ ಬೆಳ್ಳುಳ್ಳಿ ಬದಲು ‘ಬೆಳಗಡ್ಡಿ’ ಕೊತ್ತಂಬರಿ ಅನ್ನುವ ಬದಲು’ ಕೊತ್ಮೀರಿ, ಟಮೋಟೋ ಅನ್ನದೇ ‘ಟಮಾಟೆ ,ಟಮಟಾ’ ಮೌಂಸದ ಬದಲು ಇಗೊತ್ತು ಸಂಡೇ ಅದಾ ‘ಖಂಡಾ’ ತಿಂಬರೀ ಅಂತಾರೆ. ಶಾಲೆ ಅಂತೂ ಕರೆಯುವ ಅಪರೂಪದ ಜನರ ನಡುವೆ ಈವತ್ತು ‘ಸಾಳಿ’ ಅವನಾ ಸರ್’ ಎಂದೇ ಬಹಳಷ್ಟು ಜನ ಕೇಳುತ್ತಾರೆ. ಕೆಟ್ಟದ್ದಕ್ಕೆ ‘ಖರಾಬ್’ ಎಂದು, ಚಟಗಳಿಗೆ ‘ರಾಟಿ’ ಜೋಳಕ್ಕೆ ‘ಜ್ವಾಳಾ’, ಜ್ವರ ಬಂದರೆ ‘ಉರಿ’ ಬಂದವ ಎನ್ನುತ್ತಾರೆ.
ಇನ್ನೂ ಸಿಟ್ಟು ಬಂದಾಗ ‘ಸುಳೆಮಗಾ’ ‘ಅಕ್ಕಲ್’
ಆ ಮಗಾ ಎಷ್ಟು ಹುಷಾರ್ ಆಗ್ಯಾನ್ ಅಂತ ‘ಜರಾ ತೋರ್ಸತಾ’ ಎನ್ನುತ್ತಾರೆ, ಮತ್ತೆ ಚಿಕ್ಕ ಮಕ್ಕಳಿಗೆ ಸಲುಗೆಯಿಂದ ‘ಹಲ್ಕಟ್ ಹಾಟ್ಯಾ’ ‘ಭಾಡಕಾವ್’ ‘ಮುಕುಡ್ಯಾ’ ಅವನ ‘ಇವ್ನ ಹೆಣ ಎತ್ಲಿ’ ಎಂದು ಪ್ರೀತಿಯಿಂದಲೇ ಬೈಯ್ತಾರೆ. ಹೀಗಾಗಿ ‘ಬೀದರ್ ಜಿಲ್ಲೆಯ ಬೈಗಳು’ ಎನ್ನುವ ಪುಸ್ತಕ ಬೀದರ್ ಭಾಷೆ ವೈಶಿಷ್ಟ್ಯತೆ ಬಿಂಬಿಸುತ್ತದೆ.
ಇತ್ತೀಚೆಗೆ ಲಾಕ್ ಡೌನ್ ಸಂದರ್ಭದಲ್ಲಿ ‘ಲಂಗ್ ಡಂಗ್’ ‘ಲಾಕ್ ಡಾನ್’ ಮುಖ ಬದಲಿಗೆ ‘ಮೂತಿ’ ‘ಮಾರಿ’ ಮಾಸ್ಕ್ ಬದಲಿಗೆ ‘ಮುಸ್ಕಿ’ ಡ್ರೆಸ್ ಬದಲು ‘ಡಿರೇಸ್’ ‘ಸಾರಿ’ಗೆ ‘ಸೀರಿ’ ಒನ್ ಪ್ಲಾಟ್ ಜಾಗ ಎನ್ನದೇ ‘ಒಂದು ಪಿಲೇಟ್ ಜಾಗ’ ಎಂದು ಉಚ್ಚರಿಸುತ್ತಾರೆ. ಕನ್ನಡ ನಾಡಿನ ಇಂಗ್ಲಿಷ್ ಬಲ್ಲವರಿಗೆ ಇವೆಲ್ಲ ಹಾಸ್ಯ ಅನ್ನಿಸಬಹುದು, ಆದರೆ ತಾಯ್ನುಡಿಯವರು ಅವುಗಳನ್ನು ಉಚ್ಚರಿಸುವುದು ಬೇರೆ ರೀತಿ.
ಹೆಚ್ಚು ಕಾಡಿಸುವರನ್ನು ಕಂಡು ಅವನ ‘ಕಟ ಕಟಿ’ ಜಾಸ್ತಿ ಮತನಾಡಿದರೆ ಹೆಚ್ಚಿಗ್ ‘ತಿನ್ಕಬ್ಯಾಡ್’ ಅಂತಾರೆ, ಮೆಣಸಿನಕಾಯಿ, ಕತ್ತೆ, ಮೊಸರೆ, ತುಪ್ಪ, ಜೀರ್ಗೆ, ಉಳಾಗಡ್ಡೆ, ಲಂಗೋಟಿ, ಬ್ಯಾಳೆ ಎನ್ನುವ ಅಡ್ಡ ಹೆಸರುಗಳು ಈ ಪ್ರಾದೇಶಿಕ ವೈಶಿಷ್ಟ್ಯ ಹಾಗೂ ಪುರಾತನ ಸಂಸ್ಕೃತಿಯ ಸಂಕೇತವಾಗಿ ಗುರುತಿಸುತ್ತೇವೆ. ಹಾಗೇ ನಮ್ಮ ಬೀದರ್ ಕಲ್ಬುರ್ಗಿ ಭಾಗದಲ್ಲಿ ಬಹುತೇಕ ಹಣ್ಣುಗಳಿಗೆ ಹಣ್ಣು ಎಂದು ಕರೆಯುವ ಬದಲಿಗೆ ಕಾಯಿ ಎಂದೇ ಉಚ್ಚರಿಸುತ್ತಾರೆ. ಮಾವಿನಕಾಯಿ, ಬಾಳೆಕಾಯಿ, ಕ್ಯಾರೆಕಾಯಿ ಎನ್ನುತ್ತಾರೆ. ಸೀತಾಫಲ ಹಣ್ಣಿಗೆ ಚಿಪ್ಪುಲಕಾಯಿ, ನೆರಳೆ ಹಣ್ಣಿಗೆ ನೆಳ್ಳೆಕಾಯಿ ಕರೆಯುತ್ತಾರೆ,
ಹೆಜ್ಜೆ ಹೆಜ್ಜೆಗೂ ಭಾಷಾ ಭಿನ್ನತೆ ಮಾತಿನ ಉಚ್ಚಾರದಲ್ಲಿ ವ್ಯತ್ಯಾಸ, ವಿವಿಧ ಅರ್ಥದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ರೊಟ್ಟಿ- ಗಿಟ್ಟಿ, ಬ್ಯಾಳಿ- ಗೀಳಿ, ಎನ್ನುವ ಹಲವು ವಿಭಿನ್ನತೆಗಳು ಇರುವಾಗ ಈ ಕೆಲವರು ಕೊತ್ತುಂಬರಿಗೆ ಕೊತ್ಮೀರಿ ಎನ್ನುವುದು ಏನು ದೊಡ್ಡ ವಿಷಯವೇ ಆಗಬೇಕಿರಲಿಲ್ಲ. ಚಂದಿರನಿಗೆ ‘ಚಂದಮಾಮ’, ಭೂಮಿಗೆ ‘ತಾಯಿ’, ನೀರಿಗೆ ‘ದೇವತೆ’ ಎಂದು ಪೂಜಿಸುತ್ತಾರೆ. ಇನ್ನೂ ಅನೇಕ ವ್ಯಕ್ತಿಗಳ ಹೆಸರುಗಳು ಕೂಡ ಆಯಾ ಪ್ರಾದೇಶಿಕ ಪರಂಪರೆ, ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ.
ಉತ್ತರ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ಪ್ರಭಾವ ಹೆಚ್ಚಿದೆ, ಬಸಪ್ಪ , ಶರಣಪ್ಪ, ಕಲ್ಲಪ್ಪ, ಮಹಾದೇವಿ, ಶರಣಮ್ಮ, ಹೀಗೆ ಪಟ್ಟಿ ಬೆಳೆಯುತ್ತದೆ. ಇನ್ನೂ ಒಂದು ವಿಚಿತ್ರ ಎಂದರೆ ಕೃಷಿಕರು ಹೊಲದಲ್ಲಿ ಕೆಲಸಕ್ಕೆ ಹೋದಾಗ ಮಗು ಜನನ ಆಗಿರುವ ಕಾರಣಕ್ಕೆ ಅಡೆಪ್ಪಾ, ಹುಲ್ಲಪ್ಪ ಎನ್ನುವ ಹೆಸರುಗಳು ಉಂಟು, ದೇವರ ಹೆಸರುಗಳೇ ತಮ್ಮ ಮಕ್ಕಳಿಗೆ ಹೆಸರಿಡುವ ಪರಂಪರೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ ಎಂದು ಹೇಳಬಹುದು.
ಸಮಾಜದಲ್ಲಿ ಕೊರೊನಾ ವೈರಸ್ ಗಿಂತಲೂ ಭೀಕರ ಮತ್ತು ಅಷ್ಟೇ ಮಾರಕವಾಗಿ ಹರಡಿರುವ ‘ಕೋಮು ವೈರಸ್ ‘ ಈಗ ಬಹುತೇಕ ಮೆದುಳುಗಳ ಒಳಹೊಕ್ಕಿ ಕೊಳೆತು ನಾರುತ್ತಿದೆ. ಹಳ್ಳಿಗಾಡಿನ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಸಪ್ಪ – ಬಶೀರ್ ಅವರಿಗೆ ಯಾವುದೇ ಜಾತಿ ಧರ್ಮಗಳಿಲ್ಲ, ತಮ್ಮನ್ನು ತಾವು ಭಾಯಿ – ಭಾಯಿಗಳಾಗಿ ಅನ್ಯೋನ್ಯತೆ ಬೆಳೆಸಿಕೊಂಡು ಬದುಕುತ್ತಿದ್ದಾರೆ. ರಕ್ತ ಸಂಬಂಧಗಳು ಇರದೇ ಇರುವ ಮುಸ್ಲಿಂ ಸಹೋದರು ಹಿಂದೂ ಸಹೋದರಿಯರಿಗೆ ಅವ್ವ, ಸಣ್ಣಪ್ಪಾ, ದೊಡ್ಡಪ್ಪ , ಕಾಕಾ ಎಂದು ಆಪ್ತವಾದ ಸಂಬಂಧ ಹೊಂದಿದ್ದಾರೆ. ಹೀಗಾಗಿ ಹಳ್ಳಿಗಾಡಿನಲ್ಲಿ ಇಂದಿಗೂ ಜಾತಿ ಧರ್ಮಗಳ ಚೌಕಟ್ಟ ಮೀರಿ ಸೌಹಾರ್ದತೆ ಪ್ರೀತಿಯೇ ಉಸಿರಾಡುತ್ತಿದೆ.
ಆಡು ಭಾಷೆಯ ಆಳ ಯಾರಿಗೂ ನಿಲುಕಲು ಸಾಧ್ಯವಿಲ್ಲ, ಅದರ ವ್ಯಾಪ್ತಿ ವಿಶಾಲವಾಗಿ ಬೇರೂರಿದೆ. ಇದುವೇ ಕನ್ನಡ ನಾಡಿನ ವಿಶೇಷ ಗಮ್ಮತ್ತು, ಇದರೊಳಗೆ ಅಡಗಿದೆ ಕನ್ನಡತನದ ತಂಪು, ಇಂಪು, ಉಸಿರು, ಹಸಿರು… ಎಲ್ಲವೂ…ಹೌದಲ್ಲವೇ..?
*************************************************