ಕವಿತೆ
ಕಮಲೆ
ಮಾಂತೇಶ ಬಂಜೇನಹಳ್ಳಿ
ಕೆರೆಯ ಏರಿ ಮೇಲೆ
ನಿನ್ನ ಕನಸುಗಳ ಬೆನ್ನೇರಿ
ಕುಳಿತ ನಾ… ಅಲ್ಲೇ ಸನಿಹ
ತಣ್ಣಗೆ ಸುಳಿದೋಗುವಾಗ
ಕಾಣಲಿಲ್ಲವೇ?
ಕೆರೆ ದಿಣ್ಣೇಲಿ ಆಜಾನುಬಾಹು
ಆಲದ ಬಿಳಲು, ನಾ ಜೀಕುವ
ಜೋಕಾಲಿ, ನೀನೇ ಹರಿದದ್ದು..
ತಿಳಿದೂ ಬೇಸರಿಸದೆ
ಮರೆತುಬಿಟ್ಟಿರುವೆ…
ರವಿ ಪಡುವಣಕ್ಕಿಳಿದ,
ಕಣ್ಣುಗಳೋ ಮಬ್ಬಾಗುತಿವೆ..
ನನ್ನವೇ ಕನಸುಗಳ
ಪುಕ್ಕಟೆ ಬಿಕರಿಗಿಟ್ಟಿದ್ದೇನೆ..
ಚೌಕಾಸಿಯಿನ್ನೇಕೆ?!..
ನೀಡಿಬಿಡುವೆ ನಿನಗೆ,
ಕಾಣಬಾರದೇ?..
ಇಳಿ ಹೊನ್ನ ಸಂಜೇಲಿ,
ನಿರ್ಜನ ನೀರವ ಮೌನದಿ,
ನಿರೀಕ್ಷೆಯ ಕಂಗಳಲಿ,
ಸುತ್ತಲೂ ಹುಡುಕುತಲೇ..
ನೆನಪುಗಳ ಅಡಕುತಿರುವೆ,
ಬರಬಾರದೇ?..
ಕೆರೆಯೊಳಗೆದ್ದು ತಾಕಿಯೂ..
ಅಂಟದ ತೇವ ಬಿಂದುಗಳ್ಹೊತ್ತ
ಪಂಕಜೆಯ ಪತ್ರಗಳಂತೆ,
ನನ್ನ ಕನಸುಗಳ
ಕೊಳ್ಳಲೊಪ್ಪದ, ಅಪ್ಪದ
ಓ ಕಮಲೇ..
ಒಮ್ಮೆ ಒಪ್ಪು ಬಾರೆ…
**********************