ಪುಸ್ತಕ ಪರಿಚಯ

ಕಾಲಚಕ್ರ

ಬೈಟು ಕಾಫಿ ಮತ್ತು ತೇಜಾವತಿ ಅವರ ‘ಕಾಲಚಕ್ರ’ ಎಂಬ ಕವಿತೆಗಳ ಕಟ್ಟು

‘ ಮನಸು ನೀಲ ಗಗನದಲಿ ಸ್ವಚ್ಛಂದವಾಗಿ
ವಿಹರಿಸುವ ಬಾನಾಡಿ’

ನಾನು ಬರಿ ಸಣ್ಣ ದನಿ ಹೊರಹಾಕುವ ಸ್ವಂತ ಅಸ್ತಿತ್ವವಿಲ್ಲದ ಹುಲುಗೆಜ್ಜೆ. ಆದರೆ ಕವಿತೆ ಹಾಗಲ್ಲ.ಅದು ವಿನೀತ ಭಾವವನ್ನು ಅಪ್ಪಿಕೊಂಡು ಬಿಚ್ಚು ಮನಸಿನ ಸ್ಮೃತಿಗಳ ಹಾಯಿಯನ್ನು ಹೊರ ಹಾಕುತ್ತದೆ.ಅಂತೆ ಭರವಸೆಯ, ಪ್ರತಿಭಾನ್ವಿತ ಕವಯಿತ್ರಿ ತೇಜಾವತಿ ಹುಳಿಯಾರ ಅವರ ‘ಕಾಲಚಕ್ರ’ ಕೃತಿಯು ಬೆಳಗಿನ ಕಾಫಿಯೊಂದಿಗೆ ಕೈಗೆತ್ತಿಕೊಂಡೆ.ಇದೊಂದು ಹೊನ್ನುಡಿ ಕವಿತೆಗಳ ಪುಟ್ಟ ಸಂಕಲನ.ಓದುವಿನ ಕುತೂಹಲ ಇನ್ನಷ್ಟು ತೀವ್ರಗೊಂಡಿತು.ಮೊದಲ ಗುಟುಕಿನೊಂದಿಗೆ ಓದು ಸುರುವಿಟ್ಟುಕೊಂಡು ಕೊನೆಯ ಹನಿ ಹೀರುವಿಕೆಯೊಂದಿಗೆ ಸಂಕಲನ ತನ್ನ ಓದು ಮುಗಿಸಿಕೊಂಡಿತು.
ಪ್ರೇಮ,ಬದುಕು ಮತ್ತು ನಿಸರ್ಗದೊಂದಿಗಿನ ಒಡನಾಡಿತನಗಳು ಇಲ್ಲಿನ ಕಾವ್ಯದ ಆತ್ಮೀಯ ಸಂಬಂಧಗಳೆನಿಸಿದವು.ಇಲ್ಲಿನ ಬಹುತೇಕ ಕವಿತೆಗಳು ಏಕಮೇವ ಹೊನ್ನುಡಿಯೆಂಬ ಶೀರ್ಷಿಕೆ ಹೊಂದಿರುವ ಚುಟುಕು ಕವಿತೆಗಳಾಗಿವೆ.ಆದರೆ ದೀರ್ಘ ಕವಿತೆಗಳ ಆಯಾಮಗಳನ್ನು ಹೊಂದಿರುವುದಲ್ಲದೇ ಓದುಗರ ಮನಸಿಗೆ ತಲ್ಲೀನತೆ ನೀಡುವ ಬರೆಹಗಳೇ ಆಗಿವೆ ಜೊತೆಗೆ ಕನಸುಗಳಿಗೆ ಮೂರ್ತಸ್ವರೂಪ ಕೊಟ್ಟು ರೂಪಾಂತರಗೊಳಿಸುವ ನುಡಿಗಳಾಗಿವೆ.ಕಾವ್ಯ ರಚನೆಯ ಲಕ್ಷಣ ಕೂಡಾ ಅದೇ ಆಗಿರುತ್ತದೆ.ಇಲ್ಲಿನ ಬಹುತೇಕ ಕವಿತೆಗಳು ಓದುತ್ತಾ ಹೋದಂತೆಲ್ಲಾ ಪರಿವರ್ತಿತ ಸಮಾಜದಲ್ಲಿನ ಕೌಟಂಬಿಕ ಸಂಬಂಧಗಳು,ಯಾಂತ್ರಿಕ ಬದುಕು,ಒಡಲಾಳದ ಉರಿಯ ನೋವು ಇಂತಹವೆ ವಿಷಯಗಳು ಸರಳ ಪ್ರತಿಮೆಗಳ ಮುಖಾಂತರ ವೈವಿದ್ಯಮಯ ಆಯ್ಕೆಯಾಗಿ ಕಂಡುಬರುತ್ತವೆ. ಅಲ್ಲಲ್ಲಿ ತಿಳಿಯಾದ ಭಾವಗಳು ಇಡುಕಿಕರಿಸಿಕೊಂಡಿವೆ.

ಕವಯತ್ರಿ ತೇಜಾವತಿ ಅವರಿಗೆ ಬದುಕು ಮತ್ತು ಕಾವ್ಯ ಅವರ ಜೀವದ್ರವ್ಯವೇ ಆಗಿದೆ.ಸಮಾಜದಲ್ಲಿ ನಡೆಯುವ ಕೆಲವು ಕ್ಷುಲ್ಲಕಗಳ ಕುರಿತು ಹತಾಸೆಯಿದೆ,ನೋವಿದೆ.ಈ ತೆರನಾದ ಅಭಿವ್ಯಕ್ತಿಗಳು ಕವಯಿತ್ರಿಯ ಮನದ ಬಾಗಿಲಿಗೆ ಬಂದು ಮೌನ ಮುರಿದಿವೆ.

ಹೀಗೆ ಕಾಫಿ ಹೀರುತ್ತಾ ಸಂಕಲನದ ಪುಟ ತಿರುವುತ್ತಿದ್ದಾಗ ಇಲ್ಲಿನ ಒಂದು ಕವಿತೆ ನನಗೆ ತಟ್ಟನೆ ನೆನಪಿಗೆ ತರಿಸಿದ್ದು ಇಂಗ್ಲಿಷಿನ ಪ್ಯಾಟ್ ಪ್ಲೇಮಿಂಗ್ ಅವರ ‘Depression is a monster’ ಕವಿತೆ ನೆನಪಿಸಿತು.


ಇವೆರಡಕ್ಕೂ ಅಂತರ ಸಾಮ್ಯತೆ ಕುರಿತು ಹೇಳುವುದಾದರೆ ಪ್ಯಾಟ್ ಅವರು ಖಿನ್ನತೆ ಎನ್ನುವುದು ಕರುಣೆಯನ್ನು ಹಿಸುಕುತ್ತಿದೆ ಎನ್ನುವ ದನಿ ವ್ಯಕ್ತಪಡಿಸಿದರೆ,ಇಲ್ಲಿ ತೇಜಾವತಿ ಅವರಿಗು ಕೂಡಾ ಮನುಷ್ಯನ ಸಹಜ ಅಂತಪ್ರೇರಣೆಗಳಲ್ಲೊಂದೆನಿಸಿದ
ಅಸಮಾಧಾನದ ಕುರಿತು ಅಸಮಾಧಾನವಿದೆ,ಸೆಡುವು ಇದೆ.ಹಾಗಾಗಿ ಅದನ್ನು ಯಾವುದೋ ರೂಪದಲ್ಲಾದರೂ ಹೊರಹಾಕಬೇಕು,ಇಲ್ಲದಿದ್ದರೆ ಜ್ವಾಲಾಮುಖಿಯಾಗಿ ಸ್ಪೋಟಗೊಳ್ಳುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ.
ಅಂತೆಯೇ ಪ್ಯಾಟ್ ಫ್ಲೆಮಿಂಗ್‌ ಮತ್ತು ಕವಯಿತ್ರಿ ಹುಳಿಯಾರ್ ಅವರಿಗೆ ಕ್ರಮವಾಗಿ ಖಿನ್ನತೆ ಮತ್ತು ಅಸಮಾಧಾನದ ಬಗೆಗೆ ಭಯವಿದೆ. ಖಿನ್ನತೆ/ಅಸಮಾಧಾನವು ಹೃದಯ ಮತ್ತು ಆತ್ಮ ಎರಡೂ ನಾಶಪಡಿಸುತ್ತವೆ ಎಂದು ತಮ್ಮತಮ್ಮ ಕವಿತೆಗಳಲ್ಲಿ ಹಳಹಳಿಸುತ್ತಾರೆ.

ವಿಫಲ ಪ್ರೇಮ,ದುಷ್ಟ ನಡವಳಿಕೆಯ ಕುರಿತು ಮಾತನಾಡುವ ಬರೆಹ, ಹೊಸತನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯ ಬಗೆಗೂ ಇಲ್ಲಿನ ಕವಿತೆಗಳು ಮಾತಾಡ್ತವೆ.ಜೊತೆಗೆ ಬದುಕಿನ ಮುಂದುವರೆದ ಭಾಗವೆಂಬಂತೆ ನಿರ್ದಿಷ್ಟ ಗುರಿ ತನ್ನ ಚಲನಶೀಲ ಕಳೆದುಕೊಂಡು ಹೊಸತನಕ್ಕೆ ಒಗ್ಗಿಕೊಳ್ಳುವ ಕವಿತೆ ಹೀಗೆ ದನಿಸುತ್ತದೆ.


‘ಹಳೆಯ ಮಾರ್ಗಗಳು
ನೀರಸವಾದಾಗ
ಹೊಸ ದಾರಿಗಳ ಅನ್ವೇಷಣೆ
ಅನಿವಾರ್ಯ
ಅವಶ್ಯಕ’

ಮುಂದುವರೆದು,ಇಚ್ಚೆ ಸಿಡಿಮದ್ದಿನಂತಿರಬೇಕು/ಪಡೆಯುವಿಕೆ ಜೀವಜಲದಂತೆ ತಣಿಸಬೇಕು ಎನ್ನುತ್ತಲೇ ಕವಯಿತ್ರಿ ಸದಾ ಹೊಸತನಕ್ಕೆ ಹಂಬಲಿಸುವ ಆಶಾವಾದ ವ್ಯಕ್ತಪಡಿಸುತ್ತಾರೆ.ಈ ಕಾವ್ಯದ ಕುರಿತು ಆರಂಭದಲ್ಲಿಯೇ ನಾನು ಕಂಡುಕೊಂಡದ್ದು ತುಂತುರು ಹನಿಗಳಂತೆ,ಬುಳುಬುಳು ಬೀಳುವ ಅನ್ ಪಿನಿಶ್ಡ್ ಸೋಸಿಯಲ್ ಕಾಂಟ್ರಾಕ್ಟ್ ಗಳು,ಬಾಲ್ಯದ ನೆನಪುಗಳು,ಮುಟ್ಟದೆ ಮುಂದು ಹೋಗುವ ಸಂಗತಿಗಳು,ಅಮೂರ್ತವಾದ ಮೌನ,ನೋವು,ಬೇಸರ,ಬದುಕಿನ ಉಲ್ಲಾಸತೆಗಳು,ಶುಗರ್ ಮಿಶ್ರಿತಗೊಂಡ ಅರೆಬೆಂದ ಕಾಫಿ ಸವಿಯುತ್ತಲೇ ಓದಿಸಿಕೊಂಡ ಆಪ್ತಸಾಲುಗಳಿವು.


ಪ್ರಾರ್ಥನೆ,ಶ್ರದ್ಧೆ, ಸಮರ್ಪಣಾ ಭಾವ,ಅಹಂಕಾರದ ವಿನಾಶತೆ ಇತ್ಯಾದಿ ಸಂದೇಶಗಳೂ ಒಳಗೊಂಡಿರುವ ಕವಿತೆಗಳು ಕಾಫಿಯಂತೆ ಸಮನ್ವಯವಾಗಿ, ಒಟ್ಟಾರೆಯಾಗಿ ಲೋಕರೂಡಿ ಗುರುಗಳಂತಿವೆ.ತಮಗೆ ತೋಚಿದ್ದನ್ನು ಹೇಳುವ ಬಗೆಯಲ್ಲಿ ಹೊಸತನವಿದೆ.ದ್ವನಿ ಕವಿತೆಯ ರೂಪಗಳಲ್ಲಿ ಅಡಗಿ ಸಹಜೋಕ್ತಿಯಾಗಿ ಓದುಗರಿಗೆ ತಲುಪುವ ಪರಿ ಮೆಚ್ಚುಗೆಯಾಗುತ್ತದೆ.ಮುಂದಿನ ದಿನಮಾನಗಳಲ್ಲಿ ದೀರ್ಘ ಕವಿತೆಗಳೊಂದಿಗೆ ನಮ್ಮ ಮುಖಾಮುಖಿಯಾಗುತ್ತಾರೆಂಬ ಭರವಸೆಯೊಂದಿಗೆ ಬೆಳಗಿನ ಕಾಫಿಯ ರುಚಿ ಮತ್ತು ಓದುವಿನ ಕೊನೆಯ ಸಾಲು ಮುಗಿಸುತ್ತೇನೆ.

******************

ದೇವೂ ಮಾಕೊಂಡ

6 thoughts on “ಪುಸ್ತಕ ಪರಿಚಯ

  1. ಕಾಲಚಕ್ರದ ತುಡಿತವನ್ನು ಲೇಖಕಿಯರ ಕವಿತೆಯ ಒಳಹೊಕ್ಕು ಅ೦ದವಾದ ನಿರೂಪಣೆಯ ಚಹಾ ನಮಗೆ ದಕ್ಕಿದ೦ತಾಯ್ತು. ಧನ್ಯವಾದಗಳು ಲೇಖಕಿಗೆ. ಮತ್ತು ತಮಗೂ.

Leave a Reply

Back To Top