ಕ್ಷಮಯಾ ಧರಿತ್ರೀ …

ಕ್ಷಮಯಾ ಧರಿತ್ರೀ

ಲಕ್ಷ್ಮಿ ನಾರಾಯಣ ಭಟ್

ಜೀವನ ಪ್ರವಾಹ ನಿಂತ ನೀರಲ್ಲ; ಅದು ಚಿರಂತನ. ನಿರಂತರವಾಗಿ ಹರಿಯುತ್ತಲೇ ಇರುವುದು ಅದರ ಸ್ವ-ಭಾವ. ಯಾವುದು ವ್ಯಕ್ತಿ/ವಸ್ತುವೊಂದಕ್ಕೆ ಸಹಜ ಭಾವವಾಗಿರುತ್ತದೋ ಅದೇ ಅದರ ಸ್ವಭಾವ. ಆದರೆ ಸ್ವಭಾವವನ್ನು ಪರಿಶ್ರಮ, ಚಿಂತನೆಗಳಿಂದ ಪರಿಷ್ಕರಿಸಿಕೊಳ್ಳಬಹುದು. ಇದು ಮನುಷ್ಯನಾದವನಿಗೆ ಮಾತ್ರ ಪ್ರಕೃತಿಯೇ ಕರುಣಿಸಿದ ವಿಶೇಷ ಕರ್ತೃತ್ವ. ಇದರಿಂದ ಆತ ಪ್ರಕೃತಿಯನ್ನೂ ಮಣಿಸಬಲ್ಲ! ಉದಾಹರಣೆಗೆ, ಎತ್ತರದಿಂದ ತಗ್ಗಿಗೆ ಹರಿಯುವುದು ನೀರಿನ ಸ್ವಭಾವವಲ್ಲವೇ? ಆ ಸ್ವಭಾವವನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಪರಿರ್ತಿಸಿದಾಗ, ಜೋಗದಲ್ಲಿ ಜಲಪಾತವಾಗಿ ಧುಮುಕುವ ಶರಾವತಿ ನದಿ ನಮಗೆ ಅತ್ಯಾವಶ್ಯಕವಾದ ವಿದ್ಯುಚ್ಛಕ್ತಿಯನ್ನು ಕೊಡುವ ಅಪಾರ ಸಂಪನ್ಮೂಲವಾಗಿ ಬದಲಾಗುತ್ತಾಳೆ. ಸರ್.ಎಂ. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಪರಿಷ್ಕರಣವಿಲ್ಲದೇ ಹೋಗುತ್ತಿದ್ದರೆ ಶರಾವತಿ ಹಾಗೆ ಹರಿದು, ಹೀಗೆ ಧುಮ್ಮಿಕ್ಕಿ ಸಾಗರವನ್ನು ಸೇರಿ ನಿರ್ಲಿಪ್ತ ಭಾವದಿಂದಿರುತ್ತಿದ್ದಳಲ್ಲವೇ? (ಮಹಾತ್ಮಾ ಗಾಂಧೀಜಿ ಶಿವಮೊಗ್ಗಕ್ಕೆ ಬಂದೂ ಜೋಗ ಜಲಪಾತ ನೋಡಲು ಹೋಗಿರಲಿಲ್ಲ! ಕಲೆ ಮತ್ತು ಪ್ರಕೃತಿ ಸೌಂರ್ಯದ ಬಗ್ಗೆ ಅವರ ನಿಲುವು ಬೇರೆಯೇ ಇತ್ತು; ಅದನ್ನು ವಿವರವಾಗಿ ಪ್ರಸ್ತಾಪಿಸಲು ಇದು ಸೂಕ್ತ ವೇದಿಕೆಯಲ್ಲ, ಅಷ್ಟೇ.)

ಮನುಷ್ಯನ ಸ್ವಭಾವವೂ ಇದಕ್ಕೆ ವ್ಯತಿರಿಕ್ತವಾಗಿಲ್ಲ! ‘ಮಂಗನಿಂದ ಮಾನವ’ ಎಂಬ ಮಾತೊಂದಿದೆಯಲ್ಲವೇ? ಇದು ಸ್ಥೂಲವಾಗಿ ನಮ್ಮ ಬದುಕಿನ ರೀತಿಯನ್ನೇ ನರ್ದೇಶಿಸುತ್ತದೆ. ಬಾಲ್ಯದಿಂದ ತೊಡಗಿ ಹರೆಯದ ವರೆಗೂ – ಕೆಲವೊಮ್ಮೆ ಕೊನೆಗಾಲದ ವರೆಗೂ – ಚಿತ್ತ ಚಾಂಚಲ್ಯ, ಜಿಹ್ವಾ ಚಾಪಲ್ಯ, ಇಂದ್ರಿಯ ದೌರ್ಬಲ್ಯಗಳನ್ನು ಹದ್ದುಬಸ್ತಿನಲ್ಲಿಡದೇ ಹೋದರೆ ನಾವು ‘ಮರ್ಕಟ’ ಹಂತದಿಂದ ‘ಮಾನ’ವುಳ್ಳ – ಅಂದರೆ ಹದವರಿತು ಬಾಳಬಲ್ಲ ಮನುಷ್ಯತ್ವವನ್ನು ಪಡೆಯುವುದು ಅಸಾಧ್ಯ ಎಂದು ನನ್ನ ನಂಬಿಕೆ. ಇದು ಮಾನವೀಯತೆಯೆಡೆಗೆ ನಮ್ಮ ಮೊದಲ ದೃಢ ಹೆಜ್ಜೆ. ಮಾನವೀಯತೆಯ ಲಕ್ಷಣಗಳೆಂದರೆ ಪಕ್ವತೆ ಮತ್ತು ಆರ್ದ್ರತೆ. ಇದನ್ನೇ “ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು” ಎಂದು ಸರ್ವಜ್ಞ ಹೇಳಿದ್ದು. ಆದರೆ ಇದು ಬಡಪೆಟ್ಟಿಗೆ ಸಾಧಿತವಾಗುವುದಿಲ್ಲ. ಜೀವನದಲ್ಲಿ ಅನೇಕ ಅನುಭವಗಳ ಮೂಲಕ, ಪ್ರಾಯ ಸಂದಂತೆ ನಿಧಾನವಾಗಿ ಬರಬೇಕಾದದ್ದೇ ಹೊರತು ರಾತ್ರಿ ಬೆಳಗಾಗುವುದರೊಳಗೆ “ಓ ನಾನು ಈಗ ಪರಿಪಕ್ವತೆಯನ್ನು ಪಡೆದೆ” ಎಂದಂತಲ್ಲ. ಅದು ಅಕಾಲಿಕವಾಗಿ ಬರಲೂ ಬಾರದು. ಅದು ಲೋಕ ವ್ಯವಹಾರಕ್ಕೆ ವಿರುದ್ಧವಾದದ್ದು ಮತ್ತು ಜನಸಾಮಾನ್ಯರಾದ ನಮ್ಮ ನಿಮ್ಮಂತಹವರಿಗಲ್ಲ. ವಿರಳಾತಿವಿರಳವಾಗಿ ಮಹಾತ್ಮರಿಗೆ ಮಾತ್ರ ದಕ್ಕುವಂತದ್ದು. ಉದಾಹರಣೆಗೆ ಬುದ್ಧ: “ಜಗವೆಲ್ಲ ಮಲಗಿರುವಾಗ ಅವನೊಬ್ಬ ಎದ್ದ” ಅದಕೆಂದೇ ಅವನು “ಬುದ್ಧ”. ಎಲ್ಲರೂ ಹಾಗೆ ಮಾಡಕೂಡದು. ಹಾಗಾಗಿ ನಮ್ಮ ಭಾರತೀಯ ಪರಂಪರೆಯಲ್ಲಿ ಸನ್ಯಾಸಿಯಾಗಬೇಕಾದರೆ ಮದುವೆಯ ಮೊದಲು ತಾಯಿಯ ಒಪ್ಪಿಗೆ, ಮದುವೆಯ ಬಳಿಕವಾದರೆ ಹೆಂಡತಿಯ ಒಪ್ಪಿಗೆ ಕಡ್ಡಾಯ. ಒಬ್ಬನೇ ಮಗ ಸನ್ಯಾಸಿಯಾಗುವುದು ಶಂಕರರ ತಾಯಿಗೆ ಇಷ್ಟವಿರಲಿಲ್ಲ; ಆ ತಾಯಿಯ ಒಪ್ಪಿಗೆಯನ್ನು ಪಡೆಯಲು ಒಂದು ಮೊಸಳೆಯ ಕಥೆ ಬರುತ್ತದೆ. ಇದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಮೊಸಳೆ ಶಂಕರರ ಕಾಲನ್ನು ಹಿಡಿದಿದೆ ಎಂಬಾಗ ಶಂಕರರು ತಾಯಿ ಆರ್ಯಾಂಭ ಅವರಲ್ಲಿ “ತಾಯೇ, ನಾನು ಸನ್ಯಾಸಿಯಾಗಲು ನೀನು ಒಪ್ಪಿಗೆ ಕೊಟ್ಟರೆ ಈ ಮೊಸಳೆ ನನ್ನನು ಬಿಟ್ಟು ಬಿಡುವುದಂತೆ” ಎಂದಾಗ ತಾಯಿ ಕರುಳು ಚುರುಕ್ ಅಂದಿರಬೇಕು. ಮಗ ಬದುಕಿದರೆ ಸಾಕು ಎಂದ ತಾಯಿ ಒಪ್ಪಿಗೆ ಕೊಟ್ಟರಂತೆ. ಈ ಕಥೆಯ ಸತ್ಯಾಸತ್ಯತೆ ಇಲ್ಲಿ ಪ್ರಸ್ತುತವಲ್ಲ. ‘ಸನ್ಯಾಸತ್ವಕ್ಕೆ ತಾಯಿಯ ಒಪ್ಪಿಗೆ’ ಎಂಬ ತಾತ್ವಿಕತೆ ಮುಖ್ಯ, ಅಷ್ಟೇ. ಈ ಪದ್ಧತಿಯನ್ನು ಮಾಡಿದ ಉದ್ದೇಶವೆಂದರೆ ಯಾರೂ ಉಡಾಳರಾಗಿ ಸಂಸಾರದ ಜವಾಬ್ದಾರಿಯಿಂದ ಸುಖಾ ಸುಮ್ಮನೆ ಓಡಿ ಹೋಗಬಾರದು ಎನ್ನುವುದಷ್ಟೇ ಎಂದು ನನ್ನ ಅಭಿಪ್ರಾಯ. ಇರಲಿ. ಅದಕ್ಕೆ ಹೇಳಿದ್ದು ಅಕಾಲಿಕವಾಗಿ ವೈರಾಗ್ಯ ಬರಬಾರದು. ವಾತ್ಸಾಯನನನ್ನು ಓದುವ ಪ್ರಾಯದಲ್ಲಿ ವೇದಾಂತ, ಭಗವದ್ಗೀತೆ ಸಲ್ಲ. ಅಂದರೆ ಅದನ್ನು ಓದಲೇ, ಕಲಿಯಲೇ ಬಾರದು ಎಂಬ ನಿರ್ಬಂಧವಿಲ್ಲ; ಆದರೆ ಅದರಲ್ಲೇ ಮುಳುಗಿ ಹೋಗಬಾರದು ಎನ್ನುವ ಭಾವ.

ಹಾಗಾದರೆ ಪಕ್ವತೆ, ಆರ್ದ್ರತೆಯನ್ನು ಸಾಧಿಸುವ ಬಗೆ ಹೇಗೆ? ಮನುಷ್ಯನ ಜೀವನದಲ್ಲಿ ಬಹುಶಃ ಕ್ಷಮಾಗುಣಕ್ಕಿಂತ ದೊಡ್ಡ ಮಾನವೀಯತೆ ಇಲ್ಲವೇನೋ! ಹಾಗಾಗಿ ವ್ಯಕ್ತಿತ್ವದ ಪಕ್ವತೆ,ಆರ್ದ್ರತೆಗಳ ಒಂದು ವಿಶೇಷ ಲಕ್ಷಣ ಅಂದರೆ ಕ್ಷಮಾಗುಣ ಎಂದು ನಾವು ತಿಳಿಯಬಹುದು. ತನ್ನ “ಶ್ರೀ ರಾಮಾಯಣ ದರ್ಶನಂ” ನಲ್ಲಿ ಕವಿ ಕುವೆಂಪು ಅವರು ಈ ಮಾತು ಹೇಳುತ್ತಾರೆ: “ಪಾಪಿಗುದ್ಧಾರಮಿಹುದೌ ಸೃಷ್ಟಿಯ ಈ ಮಹದ್ವ್ಯೂಹದೋಳ್”

ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳದೆ ಕ್ಷಮಾಗುಣವನ್ನು ರೂಢಿಸಿಕೊಳ್ಳಲು ಅಸಾಧ್ಯ. ಶಿರಚ್ಛೇಧದ ಮೂಲಕ ಮರಣದಂಡನೆಯನ್ನು ಜಾರಿಗೊಳಿಸುವ ದೇಶದಲ್ಲೂ ಕ್ಷಮಾಗುಣಕ್ಕೆ ಆದ್ಯತೆ ಇದೆಯೆಂಬುದನ್ನು ನಾವು ಮರೆಯಬಾರದು. ಮತ್ತು ಈ ಕ್ಷಮಾದಾನದ ಪರಮಾಧಿಕಾರ ಕೊಡಲ್ಪಟ್ಟಿರುವುದು ಪ್ರಭುತ್ವಕ್ಕಲ್ಲ, ಬದಲಾಗಿ ಅನ್ಯಾಯಕ್ಕೊಳಗಾದ ವ್ಯಕ್ತಿ ಅಥವಾ ಆತನ ನಿಕಟ ಕುಟುಂಬ-ಸಂಬಂಧಿಗೆ ಮಾತ್ರ. [ಇದನ್ನು ಈಗ ಅಪರಾಧ ಶಾಸ್ತ್ರ ದಲ್ಲಿ  ಎಂಬ ಹೆಸರಿನಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಇದು ಈ ಅಧ್ಯಯನ ಕ್ಷೇತ್ರವೊಂದರ ಇತ್ತೀಚಿಗಿನ ಹೊಸ ಬೆಳವಣಿಗೆ.]

ಇದೊಂದು ಸತ್ಯ ಘಟನೆ. ಕೊಲ್ಲಿ ರಾಷ್ಟ್ರವೊಂದರಲ್ಲಿ ಒಂದು ಕುಟುಂಬದ ನಾಲ್ಕೈದು ಮಂದಿಯನ್ನು ಬರ್ಬರವಾಗಿ ಹತ್ಯೆಗೈದುದಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಗಿತ್ತು. ಆ ದೇಶದ ಪದ್ಧತಿಯಂತೆ ಸಾರ್ವಜನಿಕವಾಗಿ ಅಪರಾಧಿಯ ತಲೆ ಕಡಿದು ಮರಣದಂಡನೆಯನ್ನು ವಿಧಿಸುವುದು ರೂಢಿ. ಅಲ್ಲಿ ನೆರೆದಿದ್ದವರಲ್ಲಿ ಆ ಕುಟುಂಬದ ನಿಕಟ ಸಂಬಂಧಿಯೂ ಇದ್ದ. ಆತನಿಗೆ ಅಪರಾಧಿಯ ಬಗ್ಗೆ ಅತ್ಯಂತ ದ್ವೇಷ, ತಿರಸ್ಕಾರ, ಜಿಗುಪ್ಸೆ ಎಲ್ಲವೂ ಇತ್ತು. ಇದು ಸಹಜ ತಾನೇ? ಇನ್ನೇನು ಶಿಕ್ಷೆ

ಜಾರಿಯಾಗಬೇಕೆನಿಸುವಷ್ಟರಲ್ಲಿ ಅಪರಾಧಿ ಆ ಕುಟುಂಬ ಸದಸ್ಯನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸುವಂತೆ ಬಗೆ ಬಗೆಯಾಗಿ ಬೇಡಿಕೊಂಡ. ಯಾಕೋ ಏನೋ ಆ ಕ್ಷಣದಲ್ಲಿ ಆತನ ಮನ ಕರಗಿ ಕ್ಷಮಾದಾನ ಮಾಡಿದನಂತೆ. ಆ ಬಳಿಕ ಆತ ಹೇಳಿದ ಮಾತು ತುಂಬಾ ಅರ್ಥಪೂರ್ಣ ಮಾರ್ಮಿಕವಾಗಿತ್ತು: “ನನ್ನ ಹೃದಯದ ಕಹಿಯೆಲ್ಲಾ ಈಗ ಬತ್ತಿ ಹೋಗಿದೆ. ನನ್ನೊಳಗೆ ಅನಿರ್ವಚನೀಯ ಶಾಂತಿ ತುಂಬಿದ ಧನ್ಯತಾ ಭಾವ ಅರಳಿದೆ. ಕ್ಷಮಾಗುಣಕ್ಕೆ ಇಂತಹ ಶಕ್ತಿ ಇದೆಯೆಂದು ನನಗೆ ಈ ವರೆಗೂ ತಿಳಿದಿರಲಿಲ್ಲ! ಅಪರಾಧಿಯನ್ನು ಕ್ಷಮಿಸಲು ನನಗೆ ಪ್ರೇರಣೆ ನೀಡಿದ ಪರಮ ದಯಾಳು ದೇವರಿಗೆ ನಾನು ಚಿರಋಣಿ.” ಈ ತೃಪ್ತ ಭಾವವನ್ನು ಕಿಂಚಿತ್ ಪ್ರಮಾಣದಲ್ಲಾದರೂ ಅರ್ಥೈಸಿಕೊಳ್ಳಬೇಕಿದ್ದರೆ ನಾವೂ ಯಾರನ್ನಾದರೂ ಕ್ಷಮಿಸಿದ್ದರೆ ಮಾತ್ರ ಸಾಧ್ಯ ಎಂಬುದನ್ನು ಪ್ರಾಮಾಣಿಕವಾಗಿ ವಿನಮ್ರತೆಯಿಂದ, ಸ್ವಾನುಭವದಿಂದ ನಾನು ಹೇಳಬಲ್ಲೆ. (ನನ್ನ ಅನುಭವ ಬಹಳ ದೊಡ್ಡ ಮಟ್ಟದ್ದು ಎಂದಾಗಲಿ, ನಾನು ಕ್ಷಮಾಗುಣದ ಸಾಕಾರಮೂರ್ತಿ ಎಂಬ ಅಹಂಕಾರವಾಗಲಿ ಒಂದಿಷ್ಟೂ ಇಲ್ಲದೆ ಈ ಮಾತನ್ನು ಬಹಳ ಸಂಕೋಚದಿಂದ ಹೇಳುತ್ತಿದ್ದೇನೆ. ಆ ಘಟನೆಯ ವಿವರಗಳನ್ನು ಮಾತ್ರ ಇಲ್ಲಿ ಈಗ ಹೇಳುವ ಸ್ಥಿತಿಯಲ್ಲಿ ನಾನಿಲ್ಲ, ಕ್ಷಮಿಸಿ.)

ತನಗೆ ಕೇಡು ಬಗೆದವರಿಗೂ ಮನಸಾರೆ ಒಳಿತನ್ನು ಹಾರೈಸುವುದು ಮಾನವೀಯತೆಯ ಪರಾಕಾಷ್ಠೆಯಲ್ಲದೆ ಮತ್ತಿನ್ನೇನು? ನನಗೆ ತಿಳಿದಿರುವ ಎರಡು ಬದ್ಧ ದ್ವೇಷಿ ಕುಟುಂಬದ ಓರ್ವ ಹಿರಿಯ ಮರಣ ಹೊಂದಿದಾಗ ಜೀವನದುದ್ದಕ್ಕೂ ಆತನ ಕಡು ವೈರಿಯಾಗಿದ್ದಾತ ಶವ ಸಂಸ್ಕಾರಕ್ಕೆ ಬಂದು ಬಿಕ್ಕಿ ಬಿಕ್ಕಿ ಅತ್ತು (ಅದು ನಾಟಕವಾಗಿರಲಿಲ್ಲ ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ) ಕುಗ್ಗಿ ಹೋದ ಘಟನೆ ನನ್ನ ಮನಸ್ಸಿನಲ್ಲಿದೆ. ಅದನ್ನು ಆ ಸತ್ತ ವ್ಯಕ್ತಿ ಜೀವಂತವಾಗಿರುವಾಗಲೇ ಮಾಡಿದ್ದರೆ ಒಳಿತಿತ್ತು ಎನ್ನುವ ವ್ಯಾವಹಾರಿಕ ಮಾತು ಬೇರೆ. ಅದು ವ್ಯಕ್ತಿ ಬಹಳ ಆಳವಾಗಿ ಯೋಚಿಸಿ     ಮಾಡಿದ ಕೆಲಸವಾದ್ದರಿಂದ  ಮಹತ್ವದ್ದು ಎಂದು ನನ್ನ ಭಾವನೆ.

ಸಾಯಿಸಲೆತ್ನಿಸಿದ ರಾಕ್ಷಸಿ ಪೂತನಿಗೂ ಶ್ರೀ ಕೃಷ್ಣ ಮೋಕ್ಷವನ್ನು ಕರುಣಿಸಿದ. ಆಕೆಯದು ತೋರಿಕೆಯ ಕಪಟ ಮಾತೃತ್ವವಾಗಿದ್ದರೂ ಕೃಷ್ಣ ಅದನ್ನು ನೋಡಿದ ಬಗೆ ಬೇರೆ. ಹಾಗೆಯೇ ತನ್ನನ್ನು ಶಿಲುಬೆಗೇರಿಸಿದವರ ಬಗ್ಗೆ “ಮರಣವೃಕ್ಷದೊಳಮೃತ ಫಲದಂತೆ” (‘ಗೊಲ್ಗೊಥಾ’ – ಮಂಜೇಶ್ವರ ಗೋವಿಂದ ಪೈ) ಕಾಣುತ್ತಿದ್ದ ಯೇಸುಸ್ವಾಮಿಯೂ “ತನ್ನ ಕಡಿರ್ಗೆ ತಣ್ಣೆಳಲೀವ ಮರದಂತೆ” (‘ಗೊಲ್ಗೊಥಾ’) ಈ ಮಾತನ್ನು ಹೇಳಿದ: “ತಂದೆಯೇ, ಅವರ ಅಪರಾಧಗಳನ್ನು ಕ್ಷಮಿಸು; ತಾವೇನು ಮಾಡುತ್ತಿದ್ದೇವೆ ಎಂಬುದನ್ನರಿಯರು” ಕ್ಷಮಾಗುಣದ ಚರಮ ಸೀಮೆ ಇದು ಎಂಬುದಕ್ಕೆ ಬೇರೆ ಉದಾರಹರಣೆ ಬೇಕೇ? ನೀವು ಹೇಳಬಹುದು ಇದು ಅಂತಹ ದೈವಾಂಶ ಸಂಭೂತರಿಗೆ ಮಾತ್ರ ಸಾಧ್ಯ. ನಮ್ಮಂತಹ ಹುಲು ಮಾನವರಿಗಲ್ಲ. ಒಪ್ಪಿದೆ. ನನ್ನ ಯೋಚನೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಇನ್ನೊಂದು ಸತ್ಯ ಘಟನೆಯನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಆ ಘಟನೆ ಹೀಗಿದೆ:

ಒಮ್ಮೆ ನಮ್ಮ ಕಾಲೇಜಿಗೆ ಓರ್ವ ಅಮೇರಿಕನ್ ಮಹಿಳೆ ಬಂದಿದ್ದರು. ಇದು ನಮ್ಮ ಕಾಲೇಜಿಗೆ ವಿಶೇಷವೇನೂ ಅಲ್ಲ. ಅವರ ಭಾಷಣ ಪೂರ್ವಸೂಚನೆ ಇಲ್ಲದೆ ನಿಗದಿಯಾಯಿತು. ಎಲ್ಲರೊಂದಿಗೆ ನಾನೂ ಆ ಭಾಷಣ ಕೇಳಲು ಹೋಗಿದ್ದೆ. ಅವರು ಒಂದು ಘಟನೆಯನ್ನು ವಿವರಿಸಿದರು. ಅಮೇರಿಕಾದಲ್ಲಿ ಸಾಮಾನ್ಯವಾಗಿ ಎಲ್ಲರೂ ವಾರಾಂತ್ಯದಲ್ಲಿ ಸಕುಟುಂಬವಾಗಿ ಅವರು ಮನೆಯಿಂದ ದೂರ ಸಂಚಾರಕ್ಕೆ ಹೋಗುತ್ತಾರೆ. ಹಾಗೆಯೇ ಒಂದು ಕುಟುಂಬ ತನ್ನ ಐವರು ಮಕ್ಕಳೊಂದಿಗೆ ಊರ ಹೊರಗೆ ಹೋಗಿ ರಾತ್ರಿ ಕಾಲದಲ್ಲಿ ತೆರೆದ ಬಯಲಲ್ಲಿ ತಮ್ಮ ತಮ್ಮ ಸ್ಲೀಪಿಂಗ್ ಬ್ಯಾಗ್ ನಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದರು. ಬೆಳಗ್ಗೆ ಎದ್ದು ನೋಡುವಾಗ ಅವರ ಕೊನೆಯ ಮಗಳು ಸುಮಾರು ಹದಿಮೂರು ವಯಸ್ಸಿನ ಹುಡುಗಿ ಕಾಣೆಯಾಗಿದ್ದಳು. ಎಲ್ಲೆಲ್ಲೋ ಹುಡುಕಿ ಸೋತ ಅವರಿಗೆ ಕೊನೆಗೆ ಆ ಹುಡುಗಿಯ ಮೃತ ದೇಹ ಒಂದು ಪೊದೆಯಲ್ಲಿ ಎರಡು ದಿನಗಳ ಬಳಿಕ ಸಿಕ್ಕಿತು. ಆಕೆಯನ್ನು ಅಮಾನುಷವಾಗಿ ಬಲಾತ್ಕರಿಸಿ ಕೊಂದು ಬಿಟ್ಟಿದ್ದ ಓರ್ವ ಪಾತಕಿ. ಆ ಕುಟುಂಬ ತನ್ನ ಶಾಂತಿ, ನೆಮ್ಮದಿಯನ್ನು ಕಳೆದುಕೊಂಡು ದು:ಖದಲ್ಲಿ ಮುಳುಗಿತ್ತು. ಆ ಮೇಲೆ ಗೊತ್ತಾಯಿತು ಇದು ಓರ್ವ ವಿಕೃತ ಕಾಮಿಯ ಕೆಲಸ; ಆತ ಈಗಾಗಲೇ ಸುಮಾರು ಹದಿನೈದು ಮಂದಿ ಅಮಾಯಕ ಹೆಣ್ಣುಮಕ್ಕಳನ್ನು ಇದೇ ರೀತಿ ಬಲಾತ್ಕರಿಸಿ ಕೊಂದು ಹಾಕಿದ್ದ. ಸರಿ! ಕಾನೂನಿನ ಕೈಗಳಿಂದ ಅಪರಾಧಿ ಧೀರ್ಘ ಕಾಲ ತಪ್ಪಿಸಿಕೊಳ್ಳಲಾರ ಎಂಬುದು ಅಪರಾಧ ಶಾಸ್ತ್ರದ ಒಂದು ಪ್ರಮೇಯ. ಸ಼ುಮಾರು ಇಪ್ಪತ್ಮೂರು ವಯಸ್ಸಿನ ಓರ್ವ ಯುವಕ ಈ ಕೃತ್ಯ ಮಾಡಿದವನು ಎಂದು ಪೊಲೀಸರು ಸಾಕ್ಷ್ಯಾಧಾರಗಳ ಮೂಲಕ ಕಂಡು ಹಿಡಿದು ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.

ಇತ್ತ ಮಗಳನ್ನು ಕಳೆದುಕೊಂಡ ಆ ತಾಯಿ ಮಾನಸಿಕ ರೋಗಿಯಾಗಿ ಚಿಕಿತ್ಸೆ ಪಡೆಯಬೇಕಾಯಿತು. ಚಿಕಿತ್ಸೆಯ ಭಾಗವಾಗಿ ನೊಂದು, ಬೆಂದ ಆ ಮಹಿಳೆಗೆ ಮಾನಸಿಕ ತಜ್ಞರು ಆ ಅಪರಾಧಿಯನ್ನು ಕ್ಷಮಿಸಿದರೆ ಆಕೆಗೆ ಮಾನಸಿಕ ನೆಮ್ಮದಿ ಸಿಕ್ಕರೂ ಸಿಗಬಹುದು ಎಂದು ಹೇಳಿದರು. ಹಾಗೆ ಆಕೆಯ ಪತಿ ಆಕೆಯನ್ನು ಇದಕ್ಕೆ ಒಪ್ಪಿಸಿದರಂತೆ. ಆಗ ಆ ಮಹಿಳೆ ಆ ಬಗ್ಗೆ ಯೋಚಿಸಿ, “ನೋಡೋಣ. ಪ್ರಯತ್ನ ಪಡುವೆ” ಎಂಬ ಪ್ರಾಮಾಣಿಕತೆಯಿಂದ ಆ ಯುವಕನನ್ನು ಜೈಲಿನಲ್ಲಿ ಭೇಟಿಯಾಗುತ್ತಾಳೆ. ಮೊದಲಿಗೆ ಅವಳ ಮನವಿಯನ್ನು ತಿರಸ್ಕರಿಸಿದ ಅಪರಾಧಿ ಕೊನೆಗೂ ಮನಸ್ಸು ಬದಲಿಸಿ ಆಕೆಯನ್ನು ಭೇಟಿಯಾಗಲು ಒಪ್ಪುತ್ತಾನೆ. ಈ ಮಹಿಳೆ ಅಲ್ಲಿಗೆ ಹೋಗಿ ಆತನಲ್ಲಿ ಮಾತನಾಡಿ “ನಾನು ನಿನ್ನನ್ನು ಮನ:ಪೂರ್ವಕವಾಗಿ ಕ್ಷಮಿಸಿದ್ದೇನೆ” ಎಂದು ಹೇಳಿದರೂ ಆತ ಅದನ್ನು ನಿರ್ಭಾವುಕವಾಗಿ ಕೇಳಿಸಿಕೊಂಡನಂತೆ. ಅವನಲ್ಲಿ ಯಾವ ಬದಲಾವಣೆಯನ್ನೂ ಆ ತಾಯಿ ಕಾಣಲಿಲ್ಲವಂತೆ. ಆದರೆ ಆಕೆ ಆತನನ್ನು ಮನ:ಪೂರ್ವಕವಾಗಿ ಕ್ಷಮಿಸಿ ಹಿಂತಿರುಗಿ ಬಂದ ಮೇಲೆ ನಿಧಾನವಾಗಿ ಆಕೆಯ ಮಾನಸಿಕ ಸ್ವಾಸ್ಥ್ಯ ಮರುಕಳಿಸಿತಂತೆ. ಇಷ್ಟು ಹೇಳಿ ಆ ಅಮೇರಿಕನ್ ಮಹಿಳೆ ತನ್ನ ಮಾತು ಮುಗಿಸಿ “ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಸ್ಸಂಕೋಚವಾಗಿ ತಿಳಿಸಿ: ಎಂದಾಗ ಸಭೆಯಲ್ಲಿ ಒಂದು ಮೌನ ಆವರಿಸಿತ್ತು. ಆಗ ನಾನು ಹೇಳಿದೆ: “ಇದು ಕೇಳಲಿಕ್ಕೇನೋ ಬಹಳ ಚೆನ್ನಾಗಿದೆ. ಆದರೆ ನಿಜ ಜೀವನದಲ್ಲಿ ಹೀಗಾಗುವುದು ಸಾಧ್ಯವೇ ಎಂಬ ಬಗ್ಗೆ ನನಗೆ ಸಂದೇಹವಿದೆ” ಆ ಅಮೇರಿಕನ್ ಮಹಿಳೆ ತಕ್ಷಣ ಯಾವ ಉತ್ತರವನ್ನೂ ಕೊಡದೆ ಉಳಿದವರ ಅಭಿಪ್ರಾಯಗಳನ್ನು ಕೇಳತೊಡಗಿದರು. ವಿದ್ಯಾರ್ಥಿಗಳೂ, ಅಧ್ಯಾಪಕರೂ ತಮಗೆ ಸರಿ ಕಂಡಂತೆ ಪ್ರತಿಕ್ರಿಯಿಸಿದರು. ಹೆಚ್ಚು ಕಡಿಮೆ ಎಲ್ಲರ ಅಭಿಪ್ರಾಯ ನಾನು ಹೇಳಿದ ರೀತಿಯಲ್ಲಿಯೇ ಇತ್ತು. ನಾನು ಸರಿಯಾಗಿಯೇ ಯೋಚನೆ ಮಾಡಿದ್ದೇನಲ್ಲ ಎಂದು ಉಬ್ಬಿ ಹೋದೆ. ಎಲ್ಲರ ಅಭಿಪ್ರಾಯಗಳನ್ನು ಕೇಳಿದ ಆ ಅಮೇರಿಕನ್ ಮಹಿಳೆ ಕೊನೆಗೆ ಒಂದೇ ಒಂದು ವಾಕ್ಯ ಹೇಳಿದರು; ಅದು ನನ್ನ ಕಪಾಳಕ್ಕೆ ಹೊಡೆದಂತಿತ್ತು. “ಆ ತಾಯಿ ಬೇರೆ ಯಾರೂ ಅಲ್ಲ, ಸ್ವತ: ನಾನೇ” ಎಂದಾಗ ನಾನು ಪಾತಾಳಕ್ಕೆ ಕುಸಿದು ಹೋದೆ. ಆ ಕ್ಷಮಾಗುಣದ ಸಾಕಾರ ಮರ್ತಿ ನನ್ನೆದುರಿಗೆ ಸಜೀವವಾಗಿ ಇದ್ದಳು. ನಾನು ಈ ಸತ್ಯವನ್ನು ತಿಳಿಯದೇ ಹೋದೆ. ನನ್ನ ಅಲ್ಪಮತಿಗೆ ತೋರಿದ ಪ್ರತಿಕ್ರಿಯೆ ನೀಡಿ ಅದೇ ಸರಿ ಎಂಬ ಅಹಂಭಾವದಲ್ಲಿದ್ದೆ. ಆಮೇಲೆ ಆಕೆ ಹೇಳಿದರು: “ಯಾವಾಗ ಕ್ಷಮಾಗುಣದ ಕಾರಣದಿಂದ ನನ್ನ ಮಾನಸಿಕ ಅಸ್ವಸ್ಥತೆ ದೂರವಾಗಿ ನಾನು ಆ ಘಟನೆಯನ್ನು ಮಾನವೀಯ ನೆಲೆಯಲ್ಲಿ ನೋಡಲು ಸಾಧ್ಯವಾಯಿತೋ ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಪ್ರಚಾರ ಮಾಡಬೇಕು ಎಂಬ ಉದ್ದೇಶದಿಂದ ಪ್ರಪಂಚವನ್ನು ಸುತ್ತುತ್ತಿದ್ದೇನೆ. ಇದರ ಭಾಗವಾಗಿ ನಿಮ್ಮ ಕಾಲೇಜಿಗೂ ಭೇಟಿ ನೀಡಿದ್ದೇನೆ. ನನ್ನ ಜೀವನವೇ ನನ್ನ ಸಂದೇಶ” ಎಂದಾಗ ಆಶ್ಚರ್ಯ ಪಡುವ ಸರದಿ ನನ್ನದಾಯಿತು. ಈ ಮಹಿಳೆ ಓರ್ವ ಸಾಧಾರಣ ಕುಟುಂಬದ ಹೆಣ್ಣುಮಗಳು. ಯಾವ ರೀತಿಯಲ್ಲೂ ಆಕೆ ‘ಮಹಾತ್ಮ’ ಪಟ್ಟಕ್ಕೆ ಹಾತೊರೆದವಳಲ್ಲ. ಆದರೆ ಪರಿಸ್ಥಿಯ ಕೈಗೂಸಾಗಿ ಆಕೆಯ ವ್ಯಕ್ತಿತ್ವದಲ್ಲಾದ ಬದಲಾವಣೆ ಆಕೆಯ ಮೇಲಿನ ನನ್ನ ಗೌರವವನ್ನು ನರ್ಮಡಿಗೊಳಿಸಿತು.

ಇದು ದೂರದ ಅಮೆರಿಕಾದ ಮಹಿಳೆಯ ಸತ್ಯ ಕಥೆಯಾದರೆ ನಮ್ಮ ಮಂಗಳೂರಲ್ಲೇ ಇಂತಹ ಓರ್ವ ಅಪರೂಪದ ಮಹಿಳೆ ಇದ್ದಾರೆ ಮತ್ತು ಆಕೆ ನನಗೆ ಚಿರಪರಿಚಿತೆ. ಆಕೆಯ ಬಗ್ಗೆ ಸೂಕ್ಷ್ಮವಾಗಿ ನಾನು ಇದೇ ವೇದಿಕೆಯಲ್ಲಿ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಅದು ನನಗೆ ತುಂಬಾ ನೋವು ಉಂಟು ಮಾಡಿದ ನೈಜ ಘಟನೆ. ಅದನ್ನು ಮತ್ತೆ ಪುನರಾರ್ತಿಸುವ ಧರ್ಯ ನನ್ನಲ್ಲಿಲ್ಲ. ಆದರೆ ಇದನ್ನು ಹೇಳಿದ ಉದ್ದೇಶವೇನೆಂದರೆ ನಾನು ವೈಯಕ್ತಿಕವಾಗಿ ಆ ಮಟ್ಟಕ್ಕೆ ಏರುವ ಆರ್ಹತೆ ಪಡೆಯದಿದ್ದರೂ ಅದನ್ನು ಜೀವನದಲ್ಲಿ ಸಾಧಿಸಿ ತೋರಿಸಿದ ಜನಸಾಮಾನ್ಯರೆಂದುಕೊಳ್ಳುವ ವ್ಯಕ್ತಿಗಳನ್ನು ಹತ್ತಿರದಿಂದ ನಾನು ಬಲ್ಲೆ ಎನ್ನುವುದೇ ನನ್ನ ಹೆಗ್ಗಳಿಕೆ. ಈ ಅಸದೃಶ ಕ್ಷಮಾಗುಣ ಅಸಾಧ್ಯದುದಲ್ಲ ಮತ್ತು ಕೇವಲ ಮಹಾತ್ಮರೆಂದುಕೊಂಡವರಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಸೋದಾಹರಣವಾಗಿ ನಿಮ್ಮ ಗಮನಕ್ಕೆ ತರುವ ಕೈಂರ್ಯ ಮಾತ್ರ ನನ್ನದು ಎಂದಷ್ಟೇ ಹೇಳಿ ಇದರ ಸಾಧಕ ಬಾಧಕಗಳನ್ನು ಸಾಧ್ಯಾಸಾಧ್ಯತೆಗಳನ್ನು ನಿಮ್ಮ ವಿವೇಚನೆಗೆ ಬಿಟ್ಟು ವಿರಮಿಸುತ್ತೇನೆ. ಆಗದೆ?

*********************************************

Leave a Reply

Back To Top