Category: ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾ ಮೆಚ್ಚಿದ ಪುಸ್ತಕ

ಯಾದ್ ವಶೇಮ್ ನೇಮಿಚಂದ್ರ ನಾ ಮೆಚ್ಚಿದ ಪುಸ್ತಕ, ಶ್ರೀಮತಿ ನೇಮಿಚಂದ್ರ ಅವರು ಬರೆದ ಯಾದ ವಶೇಮ್’. ಈ ಪುಸ್ತಕ ಕನ್ನಡ ಸಾಪ್ತಾಹಿಕದಲ್ಲಿ ಧಾರಾವಾಹಿಯಾಗಿ ಬಂದಾಗ ಇದರ ಹೆಸರು ‘ನೂರು ಸಾವಿರ ಸಾವಿನ ನೆನಪು’ ಆಗಿತ್ತು. ಹಿಟ್ಲರನ ರಕ್ತದಾಹದ, ಅಶಾಂತಿಯ ನೆಲದಿಂದ ಗಾಂಧಿಯ ಅಹಿಂಸೆಯ ನೆಲಕ್ಕೆ ರಕ್ಷಣೆ ಮತ್ತು ಶಾಂತಿಯನ್ನು ಅರಸಿ ಬಂದ ಪುಟ್ಟ ಯಹೂದಿ ಬಾಲೆಯ ನೈಜ ಕತೆಯಿದು. ನಾನು ಈ ಪುಸ್ತಕವನ್ನು ಮೆಚ್ಚಿಕೊಳ್ಳಲು ಮೂಲ ಕಾರಣ ಕೆಳಗೆ ಬರೆದ ಐದು ಅಂಶಗಳು. ಇವು ಯಾವುದೇ ಶ್ರೇಷ್ಠ ಸಾಹಿತ್ಯ ರಚನೆಗೆ ಬೇಕಾದ ಅವಶ್ಯಕ ಅಂಶಗಳು ಕೂಡ. ೧. ದೃಷ್ಯೀಕರಣ : ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ ಬರೆಯುವುದು. ಬೆಂಗಳೂರಿನ ಗೋರಿಪಾಳ್ಯದ ಸ್ಮಶಾನದಿಂದ ಹೊರಟು ಜರ್ಮನಿ, ಇಂಗ್ಲೆಂಡ್, ಅಮೇರಿಕಾ ಕೊನೆಗೆ ಇಸ್ರೇಲ್ ಮುಟ್ಟಿದ ನಿರಂತರ ಪ್ರವಾಸ, ಅಧ್ಯಯನ ಮತ್ತು ಆ ಕಾಲದ ಆಗುಹೋಗುಗಳ, ರಣಘಟನೆಗಳ ಸಂಶೋಧನೆಗಳನ್ನು ಎದುರಿಗೆ ತೋರಿಸುವಂತೆ ಬರೆದದ್ದು, ಚಿತ್ತದಲ್ಲಿ ಕೊರೆದು ಮನಸ್ಸಿನಲ್ಲಿ ಉಳಿಯುತ್ತದೆ. ನಾನೂ ಕೂಡ ಲೇಖಕಿಯ ಜೊತೆಗೆ ಪ್ರಯಾಣಿಸಿದ್ದೆನೇನೋ ಅನ್ನುವ ಭ್ರಾಂತಿ ಉಂಟಾಗುವಂತೆ ಬರೆದ ಅದ್ಭುತ ಶೈಲಿ. ೨. ಭಾವನೆಗಳನ್ನು ತಟ್ಟುವುದು : ಯಾದ್ ವಶೇಮ್ ಓದುವಾಗ, ಯಹೂದಿ ಬಾಲಿಕೆ ಮತ್ತವಳ ತಂದೆಯನ್ನು ಬೆನ್ನಟ್ಟಿದ ನಾಜಿಗಳ ದುಷ್ಕ್ರತ್ಯ, ಕ್ರೂರತೆ, ಹಿಂಸೆ ಹೃದಯವನ್ನು ಹಿಂಡಿಬಿಡುತ್ತದೆ. ಹೆದರಿಕೆ, ಸಂಕಟ ತಂತಾನೇ ಉಂಟಾಗಿ ಒಂದು ರೀತಿಯ ಆರ್ದ ಭಾವ ಮನದಲ್ಲಿ ಸ್ರವಿಸಿ ಕರುಣಾರಸ ಗೊತ್ತಾಗದೇ ಹರಿಯತೊಡಗುತ್ತದೆ. ಗುರಿ ತಲುಪಿ ತನ್ನವರನ್ನು ಹುಡುಕಿ ತೆಗೆದು ಶತಮಾನದಿಂದ ದೂರಾಗಿದ್ದ ಹೃದಯ ಒಂದಾದಾಗ ನಾಯಿಕೆಯ ಮತ್ತು ಲೇಖಕಿಯ ಕನಸು ನೆನಸಾಗುತ್ತದೆ. ಅವರಿಗಾದಷ್ಟೇ ಸಂತೋಷ, ಆತ್ಮತೃಪ್ತಿ ಓದುಗರೂ ಅನುಭವಿಸುತ್ತಾರೆ. ದುಃಖ ಕೊಡವಿ ಮೇಲೆದ್ದಂತೆ ಮನ ಹಗುರಾಗುತ್ತದೆ. ೩. ಭವಿಷ್ಯದ ಚಿಂತನೆ : ಯಾದ ವಶೇಮ್ ಗತಕಾಲವನ್ನು ಹೇಳುವದರೊಂದಿಗೆ ಭವಿಷ್ಯದ ಚಿಂತನೆ ಮಾಡುತ್ತದೆ. ಲೇಖಕಿಯೇ ಬರೆದಂತೆ “ಅಂದು ಹೊತ್ತಿ ಉರಿಯುತ್ತಿತ್ತು ಜರ್ಮನಿ. ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ, ಅಮೇರಿಕೆಯಲ್ಲಿ, ಇಸ್ರೇಲದಲ್ಲಿ, ಯುರೋಪದಲ್ಲಿ. ‘ಅಹಿಂಸೆಯೇ ಪರಮ ಧರ್ಮ’ ಎಂದು ಜಗತ್ತಿಗೆ ಸಾರಿದ ಭಾರತದಲ್ಲೂ ಕೂಡ. ನಮ್ಮ ನಡುವೆ ಎಲ್ಲಿ ಬೇಕಾದರೂ ಹುಟ್ಟಿ ಬಿಡಬಲ್ಲದು ಈ ಪೈಶಾಚಿಕ ಮನೋಭಾವದ ಉಗ್ರತಾಂಡವ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರ್ ನನ್ನು ತಡೆಹಿಡಿಯುವ ಹೊಣೆ ನಮ್ಮದು”. ಮನುಷ್ಯನ ಪಾಶವೀ ಕೃತ್ಯದ ಬಗೆಗೆ ಈ ಮಾತು ನೇಮಿಚಂದ್ರರ ಹೃದಯದಿಂದ ಬಂದದ್ದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಈ ಪುಸ್ತಕ ಕನ್ನಡಿಯಾಗಬಲ್ಲದು. ೪. ಸಮಾಜಕ್ಕೆ ಹಿಡಿದ ಕನ್ನಡಿ : ಸೋಲನ್ನು ಸವಾಲಾಗಿ ಸ್ವೀಕರಿಸಿ ಹೋರಾಡುವದರ ಬಗೆಗೆ, ಗುರಿಯನ್ನು ಮುಟ್ಟುವದರ ಬಗೆಗೆ ಈ ಕೃತಿ ಆದರ್ಶಪ್ರಾಯ. ಓದುಗರಿಗೆ ಅನುಸರಿಸುವ ಹಂಬಲ, ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುತ್ತದೆ. ಸಮಾಜದಲ್ಲ ನಡೆಯುವ ವಿದ್ಯಮಾನಗಳನ್ನು ಮುಲಾಜಿಲ್ಲದೆ ಚರ್ಚಿಸುವ ಧೈರ್ಯವನ್ನು ತೋರುತ್ತದೆ ಈ ಪುಸ್ತಕ. ೫. ಬರೆಯುವ ಶೈಲಿ ಮತ್ತು ಭಾಷೆ : ಉಪಯೋಗಿಸಿದ ಶಬ್ದಗಳು ಅತೀ ಸೂಕ್ತವಾದುವು. ಸಮಾನಾರ್ಥದ ಇಷ್ಟು ಸರಿಯಾದ ಇನ್ನೊಂದು ಪರ್ಯಾಯ ನುಡಿ ಇರಲಿಕ್ಕಿಲ್ಲ ಎನ್ನುವ ಭಾವನೆ ಬರುತ್ತದೆ. ಉದಾಹರಣೆಗೆ ಕೆಟ್ಟ ಸಂಬಂಧದ ಬಗೆಗೆ ಹೀಗೆ ಬರೆದಿದ್ದಾರೆ, ” ನನ್ನ ಅವನ ನಡುವೆ ಸಪ್ತಸಾಗರದ ಉಪ್ಪಿತ್ತು” ಅಂತ. ಎಷ್ಟೊಂದು ಆಳವಾದ ಅರ್ಥ. ಗಹನ ಅಧ್ಯಯನ, ಸಂಶೋಧನೆಗಳಿಂದ ಮಾತ್ರ ಇಂಥ ಕೃತಿ ರಚಿಸಲು ಸಾಧ್ಯ ಅಲ್ಲದೆ ಹೃದಯದ ಉಕ್ಕು ಭಾವನೆಗಳಲ್ಲಿ ಎದ್ದಿ ತೆಗೆದ ಭಾಷೆ ಉಪಯೋಗಿಸಿದಾಗ ಹೊರಬಂದ ಪುಸ್ತಕ ಯಾದ ವಶೇಮ್. ಬೆಂಗಳೂರಿನಲ್ಲಿ ಆಶ್ರಯ ಪಡೆದಿರುವ ಕಥಾನಾಯಕಿ ಕೊನೆಗೆ ಇಸ್ರೇಲದಲ್ಲಿ ತನ್ನ ಅಕ್ಕನನ್ನು ಹುಡುಕುವ ಪ್ರಯತ್ನದಲ್ಲಿ ಯಶ ಕಾಣುತ್ತಾಳೆ. ಆದರೆ ತಾಯಿ ಮತ್ತು ತಮ್ಮ ಹಿಟ್ಲರ್ ಸೃಷ್ಟಿಸಿದ ನರಕದಲ್ಲಿ ಅಂತ್ಯ ಕಂಡಿರುತ್ತಾರೆ. ಅವರು ಅನುಭವಿಸಿದ ನರಕಯಾತನೆಯಷ್ಟೇ ನಾಯಕಿಗೆ ಲಭ್ಯ. ಒಟ್ಟಿನಲ್ಲಿ ಕರುಳ ಕಲಕುವ ಇತಿಹಾಸ ಮಾನವ ನಿರ್ಮಿತ. ಅದು ಎಂದೂ ಭವಿಷ್ಯದಲ್ಲಿ ಪುನರಾವರ್ತನೆ ಆಗಬಾರದೆಂದು ಎಲ್ಲರ ಆಶಯ. ******* ವಿನುತಾ ಹಂಚಿನಮನಿ

ನಾನು ಓದಿದ ಕಾದಂಬರಿ

ಮಲೆಗಳಲ್ಲಿ ಮದುಮಗಳು ಕುವೆಂಪು ಇದು ಬರಿ ಅನಿಸಿಕೆ ಅಷ್ಟೇ ವಿಮರ್ಶೆ ನನಗೆ ತಿಳಿಯದು. ನಾನು ಇತ್ತೀಚಿಗೆ ಓದಲ್ಪಟ್ಟ ಮತ್ತು ಮೊದಲ ಕಾದಂಬರಿ ಕನ್ನಡದ ಮನೆ ಮಾತಾಗಿರುವ, ಕನ್ನಡ ಸಾಹಿತ್ಯ ಲೋಕದಲ್ಲೇ ತನ್ನದೇ ಆದ ಛಾಪನ್ನು ಮೂಡಿಸಿರುವ ಅದ್ಬುತವಾದ, ಸುದೀರ್ಘವಾದ ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರವರ ಕನಸಿನ ಕೂಸುಮಗಳು ಈ ಮಲೆಗಳಲ್ಲಿ ಮದುಮಗಳ ಓದಿದ ನಂತರ ನನ್ನ ಮನಸಲ್ಲಿ ಅಳಿಯದೆ ಉಳಿದ ವಿಷಯಗಳ ಬಗ್ಗೆ ಬರೆಯುತ್ತೇನೆ “ಮಲೆಗಳಲ್ಲಿ ಮದುಮಗಳು” ಸುದೀರ್ಘವಾದ, ಹೆಚ್ಚು ದೃಶ್ಯಗಳಿರುವ, ಹತ್ತಾರು ಮನೆತನಗಳು ನೂರಾರು ಕಥೆಗಳೇ ಒಳಗೊಳಗೇ ನೆಡೆದುಕೊಂಡಿರುವ ಕಾದಂಬರಿ ಇದು ಇನ್ನೂರು ವರ್ಷದ ಹಿಂದಿನ ಕಥೆಯಾದರು ಇಂದಿಗೂ ಕೂಡ ಪ್ರಸ್ತುತವೆನಿಸುವ ಘಟನೆಗಳು ಇಲ್ಲಿ ಬಂದು ಹೋಗುತ್ತದೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎಂದು ಮೊದಲೇ ಬರೆದಿರುವ ಕುವೆಂಪುರವರು ಇಲ್ಲಿನ ವಿಷಯ, ಘಟನೆ, ಸ್ಥಳ, ವ್ಯಕ್ತಿ, ವಿಶೇಷ ಯಾವುದು ಕೂಡ ಮುಖ್ಯವಲ್ಲ ಹಾಗೇ ಯಾವುದು ಕೂಡ ಮುಖ್ಯವಲ್ಲ ಎನ್ನುವಂತೆ ಬರೆದಿದ್ದಾರೆ. ಇಲ್ಲಿ ಯಾರೂ ಮುಖ್ಯರಲ್ಲ ಅಂದ್ರೆ ಹಣವಿರುವ ಯಜಮಾನರು ಹಳೆಮನೆ ಸುಬ್ಬಣ್ಣ ಹೆಗ್ಗಡೆಯಾಗಲಿ, ಸಿಂಭಾವಿ ಭರಮೈಹೆಗ್ಗಡೆ, ಬೆಟ್ಟಳ್ಳಿ ಕಲ್ಲಯ್ಯ ಗೌಡರಾಗಲಿ, ಹೂವಳ್ಳಿ ವೆಂಕಣ್ಣನಾಗಲಿ, ಕೋಣೂರು ಗೌಡರಾಗಲಿ ಹೀಗೆ ಅನೇಕ ದಣಿಗಳು ಪಾದ್ರಿ ಜೀವರತ್ನಯ್ಯರಾಗಲಿ ಯಾರು ಮುಖ್ಯರಲ್ಲ. ಹಾಗೆಯೇ ಇಲ್ಲಿ ಯಾರೂ ಅಮುಖ್ಯರಲ್ಲ ಹೊಲೆಯ ಸಿಂಭಾವಿ ನಾಯಿ ಗುತ್ತಿಯಾಗಲಿ, ಕೋಣೂರು ಐತ-ಪೀಂಚಲು, ಆ ಪುಡಿಸಾಬೀಗಳು, ಸೆರೆಗಾರ ಚಿಂಕ್ರ, ಅಕ್ಕಣಿ-ಪಿಜಿಣ, ತಿಮ್ಮಪ್ಪ ಹೆಗ್ಗಡೆ ಹೀಗೆ ಇನ್ನು ಹತ್ತಿಪ್ಪತ್ತು ಪಾತ್ರಗಳು ಅಮುಖ್ಯರಲ್ಲ. ಹಾಗೇ ಇಲ್ಲಿ ಯಾವುದು ಯಃಕಶ್ಚಿತವಲ್ಲ! ಗುತ್ತಿಯ ನಾಯಿ ಹುಲಿಯ ಆಗಲಿ, ಕಾವೇರಿ ದುರಂತಕ್ಕೆ ಕಾರಣವಾದ ಹಾಗೂ ಕಥೆಗೆ ಹಲವು ತಿರುವು ಕೊಡ ಉಂಗುರವಾಗಲಿ, ಚಿಂಕ್ರ ಬಿಟ್ಟು ಹೋದ ಲ್ಯಾಟಿನ್ ಆಗಲಿ, ಜೀವರತ್ನಯ್ಯ ಪರಿಚಯಿಸಿದ ಬೀಸೆಕಲ್ಲು(ಬೈಸಿಕಲ್) ಆಗಲಿ, ಹುಲಿಕಲ್ ನೆತ್ತಿ ಆಗಲಿ, ಹಾಗೇ ಕಾದಂಬರಿ ಅಲ್ಲಿ ಬರುವ ಸಣ್ಣ ಮಕ್ಕಳ ಪಾತ್ರವಾಗಲಿ ಯಾವುದು ಯಃಕಶ್ಚಿತವಲ್ಲ ಇಲ್ಲಿ ಎಲ್ಲಕ್ಕೂ ಇದೇ ಅರ್ಥ, ಯಾವುದು ಅಲ್ಲ ವ್ಯರ್ಥ ಅನ್ನೋ ಹಾಗೇ ಪ್ರತೀ ಸನ್ನಿವೇಶಗಳು ತಿಳಿಸುತ್ತಾ ಹೋಗುತ್ತೇ ಈ ಕಾದಂಬರಿ ಅಲ್ಲಿ ಹೇಳೋ ವಿಷಯಗಳು ಸಾಕಷ್ಟಿವೆ ಕುವೆಂಪುರವರೇ ಸಾಕಷ್ಟು ವಿಷಯಗಳನ್ನ ಬರೆದು ಒಂದು ದೊಡ್ಡ ಕಾದಂಬರಿ ಬರೆದು ಬಿಟ್ಟಿದ್ದಾರೆ, ಅದರಲ್ಲಿ ಇರುವ ಅಂಶಗಳನ್ನ ನನಗೆ ತೋಚಿದ ಹಾಗೆ ತಿಳಿಸುವೆ! ಕಾದಂಬರಿ ಅಲ್ಲಿ ನಾವು ಕಾಣದಿದ್ದ ಅದೆಷ್ಟೋ ಸಾಮಾಜಿಕ ಪಿಡುಗುಗಳು, ಮೂಢನಂಬಿಕೆಗಳು, ಜಾತಿವ್ಯವಸ್ಥೆ, ಧರ್ಮ ಪ್ರಚಾರ ಹಾಗೂ ಆ ಧರ್ಮ ಪ್ರಚಾರಕ್ಕೋಡ್ಡುವ ಆಮಿಷ, ಉಳ್ಳವರ ದರ್ಪ, ಹೆಣ್ಣಿನ ದೇಹದ ಮೇಲಿನ ಮೋಹಕ್ಕೆ ಏನೆಲ್ಲಾ ಮಾಡುತ್ತಾರೆ ಕೊಲೆ,ಅತ್ಯಾಚಾರ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಚಿತ್ರಿತವಾಗುತ್ತ ಹೋಗುತ್ತೆ ಮಲೆನಾಡಿನಂತ ಆ ಕಾಡಿನ ಸುತ್ತಮುತ್ತಣದಲ್ಲಿ ಇದ್ದ ಗೌಡಿಕೆ ಯಜಮಾನಿಕೆ ಮೇಲೆ ಬೆಳಕು ಚೆಲ್ಲುತ್ತೆ, ತಮ್ಮ ಸ್ವಾರ್ಥಕ್ಕಾಗಿ ಹಾಗೂ ತಮ್ಮ ಮನೆತನದ ಗೌರವಕ್ಕಾಗಿ ಏನೂ ಬೇಕಾದರೂ ಮಾಡುವ ಅಂದಿನ ಕಾಲದ ದುಡ್ಡು ಇರುವರ ದರ್ಪ, ಗತ್ತು ಹಾಗೇ ಮೋಸದ ರೀತಿಯಲ್ಲಿ ಕಪಟವಾಗಿ ಆಸ್ತಿ ಸಂಪಾದನೆ ಮಾಡೋ ಮಂಜಯ್ಯ ಭಟ್ಟರಂತ ವ್ಯಕ್ತಿಗಳ ಪರಿಚಯ ಮಾಡುತ್ತೆ ಅಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಇದ್ದ ಬ್ರಾಹ್ಮಣ, ಹೆಗ್ಗಡೆ , ಗೌಡ, ಹೊಲೆಯ-ಬಿಲ್ಲ-ನಾಯಕ-ಬೆಸ್ತ ಹೀಗೆ ಇನ್ನೂ ಅನೇಕ ಜಾತಿವ್ಯವಸ್ಥೆ ಬಗ್ಗೆ ತಿಳಿಸಿದರೆ, ಮೇಲಿನ ವರ್ಗದವರು ಕೆಳಗಿನ ವರ್ಗದವರನ್ನ ಓದು ಬರದ ಜನರನ್ನ ಹೇಗೆಲ್ಲಾ ಅನ್ಯಾಯ, ಶೋಷಣೆ ಹಾಗೂ ತಾರತಮ್ಯ ಮಾಡ್ತಾ ಇದ್ರು ಅನ್ನೋದರ ಬಗ್ಗೆ ಆಗಲೇ ತಿಳಿಸಿದ್ದಾರೆ. ಉಳ್ಳವರು, ದುಡ್ಡಿರುವರು ಮಾಡಿದ್ದು ಏನೇ ಮಾಡಿದರೂ ಸರಿ ತಮ್ಮ ಜೀತದಾಳುಗಳು ಮಾಡೋದು ತಪ್ಪು ಅನ್ನೋ ಸಿದ್ಧಾಂತ ಎದ್ದು ಕಾಣುತ್ತೆ….. ಮಲೆಗಳಲ್ಲಿ ಮದುಮಗಳು ಹೆಚ್ಚು ಪ್ರೇಮಕಥೆಯನ್ನ ಹೊಂದಿರುವ ಒಂದು ಸುಂದರ ಕಾದಂಬರಿ ಓದುತ್ತಿದ್ದರೆ ಮಜಾ ಕೊಡೋ ಪ್ರೇಮ ಕಥನ ಅಂದ್ರೆ ಗುತ್ತಿ-ತಿಮ್ಮಿ, ಐತಾ-ಪೀಂಚಲು, ಹಾಗೆಯೇ ಮಲೆನಾಡಿನ ದೊಡ್ಡವರ ಪ್ರೇಮಕಥೆ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇದರಲ್ಲಿ ಸಾಹಸಮಯ ಪ್ರೇಮಕಥನ ಅಂದ್ರೆ ಗುತ್ತಿ ಮತ್ತು ತಿಮ್ಮಿಯರದ್ದು ಹೊಲೆಯರಾದ ಗುತ್ತಿ ತನ್ನ ಅತ್ತೆಯ ಮಗಳನ್ನ ಪ್ರೇಮಿಸಿ ಅವಳನ್ನ ಸಂಧಿಸಿ, ಅಪಹರಿಸಿ ಹೇಗೋ ಮದುವೆಯಾಗಿ ಮತ್ತೇ ತನ್ನ ಹೆಂಡತಿಯಿಂದ ದೂರ ಆಗಿ ಈ ಗೌಡರ, ಪೊಲೀಸರ ಹೆದರಿಕೆಯ ಮದ್ಯೆ ಊರನ್ನೇ ಬಿಟ್ಟು ದೇಶಾಂತರ ಹೋಗುವ ಇವನ ಜೀವನದ ಬದುಕು ಅಷ್ಟೇ ಸಾಹಸವು ಸ್ವಾರಸ್ಯಕರವು ಹೌದು ಇಲ್ಲಿ ಗುತ್ತಿಯ ಮನೋಬಲ ಹಾಗೇ ಅವರ ನಿಜವಾದ ಪ್ರೇಮ ಬದುಕನ್ನ ಎಲ್ಲೆಲ್ಲೋ ಕರೆದುಕ್ಕೊಂಡು ಹೋಗಿ ಎಲ್ಲ ಸವಾಲುಗಳನ್ನು ಎದುರಿಸುವ ಇವರ ಜೋಡಿ ಕೊನೆಗೆ ಒಂದಾಗಿ ತಮ್ಮ ಬದುಕಿಗಾಗಿ ಊರನ್ನೇ ಬಿಡುವ ಹಾಗೇ ಆಗುತ್ತೆ ಇನ್ನಾ ಐತಾ ಮತ್ತು ಪೀಂಚಲು ದಂಪತಿಯ ಪ್ರೇಮಕಥೆ ಗಂಡ-ಹೆಂಡತಿಯ ಇರಬೇಕಾದ ಮುಗ್ದತೆ, ಸರಸ-ವಿರಸ ಓದುಗುರನ್ನ ಸೆಳೆಯುತ್ತೆ, ಗಂಡನ ಅನುಮಾನ ಮುನಿದ ಗಂಡನನ್ನ ಸಮಾಜಯಿಸುವ ಹೆಂಡತಿಯ ಜಾಣತನ ಇವರಿಬ್ಬರ ಜೋಡಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ ಹಾಗೆಯೇ ಸ್ವಾಮಿ ಭಕ್ತಿ ಕೂಡ ಈ ದಂಪತಿ ಪಾತ್ರದಲ್ಲಿ ಕಂಡು ಬರುತ್ತೆ ಇನ್ನಾ ಮುಕುಂದಯ್ಯ-ಚೆನ್ನಮ್ಮ ಪ್ರೇಮಕಥೆ ಇಲ್ಲಿ ಹೆಣ್ಣಿನ ದಿಟ್ಟತನ ಹಾಗೂ ಗಂಡು ತನ್ನ ಪ್ರೇಮವನ್ನ ಉಳಿಸಿಕೊಳ್ಳಲು ಮಾಡಬೇಕಾದ ಸಾಹಸ ಎಲ್ಲಾ ಸಮ್ಮಿಳಿತವಾಗಿದೆ, ಚಿಕ್ಕಂದಿನಿಂದ ಇರೋ ಪ್ರೇಮಕಥೆ ಅದೂ ಇಲ್ಲದೆ ಹಿಂದಿನ ಜನುಮದ ನಂಟು ಇರೋ ಜೋಡಿ (ಏಳೇಳು ಜನ್ಮದ ನಂಟು) ಪ್ರೀತಿ ಅಜ್ಜಿಯನ್ನ ಮನೆಯವರನ್ನ ಬಿಟ್ಟು ಬರೋ ಚಿನ್ನಕ್ಕ ಕಾಡಿನ ದಾರಿಯಲ್ಲಿ ನಡೆದು ಹುಲಿಕಲ್ ನೆತ್ತಿ ಹತ್ತಿ ತನ್ನ ಭಾವನ ಕೈ ಹಿಡಿಯುವ ಆಸೆ ತನ್ನವರ ಬಿಟ್ಟು ಬಂದೇ ಅನ್ನೋ ಹೆಣ್ಣಿನ ಸಹಜ ನೋವು ಚೆನ್ನಮ್ಮನ ಪಾತ್ರದಲ್ಲಿ ಅನಾವರಣ ಆಗುತ್ತೆ, ತಾನು ಪ್ರೀತಿಸಿದ ಹುಡುಗಿಯ ಕೈ ಹಿಡಿಯಲು ಎದುರಾಗುವ ಸವಾಲುಗಳನ್ನು ಎದುರಿಸಲು ಏನೇನೋ ತಂತ್ರ, ಸಾಹಸ ಮಾಡಿ ಮುಕುಂದಯ್ಯ ಕೊನೆಗೆ ತಾನು ಬಯಸಿದ್ದನ್ನೇ ದಕ್ಕಿಸಿಕೊಳ್ಳುವ ಅವನ ದೃಢ ಸಂಕಲ್ಪ ಇಷ್ಟ ಆಗುತ್ತೆ ಮನುಷ್ಯ-ಮನುಷ್ಯರ ನಡುವಿನ ಪ್ರೀತಿ ಅಷ್ಟೇ ಅಲ್ಲದೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಬಂಧ, ಪ್ರೀತಿ ತ್ಯಾಗ ಗುತ್ತಿ ಮತ್ತು ಹುಲಿಯ(ನಾಯಿ) ಓದುಗರನ್ನ ಕಾಡುತ್ತೆ ಕಾಮದಿಂದ ಆಚೆಗೆ ಪ್ರೀತಿಯನ್ನ ಗೆಲ್ಲುವ ಸನ್ನಿವೇಶಗಳು ಒಂದು ಕಡೆ ಆಗರೆ ಆ ಕಾಮದಾಸೆಗೆ ಬಲಿ ಆಗೋ ಕಾವೇರಿಯ ದುರಂತ ಕಥೆ ಇನ್ನೊಂದು ಕಡೆ, ಕಾವೇರಿಯ ಮೇಲೆ ನಡೆಯುವ ಅತ್ಯಾಚಾರ ಇತ್ತೀಚಿನ ದೇಶದ ಪರಿಸ್ಥಿತಿ ಹಿಡಿದ ಕೈಗನ್ನಡಿ ಅನ್ನೋ ಹಾಗೇ ಇದೆ ಅಂದಿನ ಆ ಕಾವೇರಿಯ ಕಣ್ಣೀರಿನ ಕಥೆ…. ಈಗಲೂ ಕೂಡ ಅಂತಹ ದುಷ್ಟ ಚಿಂಕ್ರ-ಸಾಬೀಗಳ ಜನರು ನಮ್ಮ ನಡುವೆ ಇಬ್ಬರೇ ಅನ್ನೋದೇ ಶೋಚನೀಯ….! ಇನ್ನೂ ನಾಗಕ್ಕನ ಪಾತ್ರ ಸ್ವಲ್ಪ ಹತ್ತಿರ ಆಯ್ತು ಯಾಕಂದ್ರೆ ತನ್ನದು ಏನೇ ದುರಂತ ಕಥೆ ಇದ್ರೂ ತನ್ನ ಬದುಕೇ ಮುಳ್ಳಿನ ಮೇಲಿನ ನಡೆಯಾಗಿದ್ರು ಇನ್ನೊಬ್ಬರ ಅಂದ್ರೆ ಚಿನ್ನಮ್ಮನ ನಲಿವಿನಲ್ಲೇ ತನ್ನ ನೋವ ಮರೆತು ಅವಳಿಗಾಗಿ ಪಡಿಸೋ ಅವಳ ಮನಸುಇಷ್ಟ ಆಗುತ್ತೆ ಈ ಕಾದಂಬರಿ ಒಳಗೆ ನೋವು-ನಲಿವು, ಮದುವೆ-ಸಾವು, ಪ್ರೀತಿ-ಫಜೀತಿ, ಹಣ-ದರ್ಪ-ಅಧಿಕಾರ-ಮೋಹ, ಆಶ್ಚರ್ಯ-ಭವಿಷ್ಯ-ಶಿಕ್ಷಣ ಹೀಗೆ ಅನೇಕ ಮಜಲುಗಳಿಂದ ಕೂಡಿದೆ……. ಯಾವುದು ಮುಖ್ಯ ಅಲ್ಲ, ಅಮುಖ್ಯ ಅಲ್ಲ ಅನ್ನೋ ಹಾಗೆ ಎಷ್ಟೋ ವಿಷಯಗಳಿವೆ ಹೇಳಲು ಆದರೂ ನನಗೆ ಓದಿದ ಅನುಭವ ನನ್ನ ಗ್ರಹಿಕೆಯೇ ಬಂದ ಅಂಶಗಳು ಇದರಲ್ಲಿವೆ ಧನ್ಯವಾದಗಳು ಸಂಗಾತಿ ಪತ್ರಿಕೆಗೆ ಮತ್ತು ಸಂಪಾದಕರಿಗೆ ನಾನು ಓದಿದ್ದನ್ನ ನೆನೆದು ಬರೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ….. ******************** ಮದನ್ ಕುಮಾರ್

ನಾನು ಓದಿದ ಕಾದಂಬರಿ

ತುಂಗಭದ್ರ ಶ್ರೀಮತಿ ಎಂ.ಕೆ.ಇಂದಿರಾ ಮನುಷ್ಯನಿಗೆ ಯಾವ ದುಃಖವೂ ಶಾಶ್ವತವಲ್ಲ! ಆಘಾತ ಸಿಡಿಲಿನಂತೆರಗಿದಾಗ ಅದನ್ನ ತಡೆದುಕೊಳ್ಳುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ರೀತಿ! ಅದು ಪ್ರತಿಯೊಬ್ಬರಿಗೂ ಅವರ ಮನೋಬಲದ ಮೇಲೆ ಅವಲಂಬಿತವಾಗಿರುತ್ತೆ! ಅದೇ ರೀತಿ ಸುಖವನ್ನ ಕೂಡ ಸ್ವೀಕರಿಸೋದು ಅಷ್ಟು ಸುಲಭವಲ್ಲ. ಎಲ್ಲವೂ ಮನೋಭಿಲಾಷೆಯಂತೆಯೇ ಇಡೇರಿ ಸಕಲ ಸಿರಿ ಸಂಪತ್ತು ದೊರೆತಾಗ ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋದು, ಚಿತ್ತ ತಣ್ಣಗಿರಿಸೋದು ಅಷ್ಟು ಸುಲಭವಲ್ಲ! ಕಷ್ಟ ಬಂದಾಗ, ಪ್ರಕೃತಿ ವೈಪರಿತ್ಯಗಳಿಂದಾಗಿ ಜೀವನವೇ ಡೋಲಾಯಮಾನವಾದಾಗ ಅದನ್ನ ಸ್ವೀಕರಿಸುವುದು ಹೇಳಿದಷ್ಟು ಸುಲಭವಂತೂ ಅಲ್ಲ! ಆದರೆ ಜರುಗುವ ಕೆಲ ಘಟನೆಗಳಿಗೆ ಮನಸ್ಸು ತೆರೆದುಕೊಂಡರೆ ಮತ್ತೆ ಜೀವನ ಹಸನಾಗಬಹುದು. ಕವಿದ ಕಾರ್ಮೋಡಗಳು ಸರಿದು ಶುಭ್ರ ನಿಲಾಗಸದಂತಾಗಬಹುದು ಜೀವನ. ಕಷ್ಟಕಾಲದಲ್ಲಿ ರವಷ್ಟು ಸಹನೆಯೇ ದೊಡ್ಡ ಕುತ್ತಿನಿಂದ ಪಾರುಮಾಡಬಹುದು. ಹಾಗೆಯೇ ಪ್ರೀತಿಸುವ ಸ್ನೇಹಿತರು – ಕುಟುಂಬವಿದ್ದರೆ ಎಂತಹುದೇ ಕಷ್ಟದ ಸಮಯದಲ್ಲೂ ಜೀವ ಉಳಿದು, ಅದು ಪುನರ್ಜನ್ಮವಾದೀತು! ಇದಷ್ಟು ಅನಿಸಿದ್ದು, ೧೯೬೩ರಲ್ಲೇ ಬರೆದ ಪುಸ್ತಕ “ತುಂಗಭದ್ರ”, ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ಎಂ.ಕೆ.ಇಂದಿರಾ ಅವರ ಮೊದಲ ಕಾದಂಬರಿಯನ್ನ ಓದಿದಾಗ! ಅಚನಕ್ಕಾಗಿ ಈ ಕಾದಂಬರಿ ಹಿಂದಿನ ಕಥೆಯನ್ನ ಯಾವುದೋ ಜಾಲತಾಣದಲ್ಲಿ ಓದಿದಾಗ ರೋಮಾಂಚನವೆನಿಸಿತು! ಪ್ರಕಾಶಕರು ಹಸ್ತಪ್ರತಿಯನ್ನು ಇಟ್ಪ ಬ್ಯಾಗು ಮುಂಬಯಿಯ ಮಾಯಾನಗರಿಯಲ್ಲಿ ಕಳೆದು ಬಹಳಷ್ಟು ಹಳಹಳಿಸುವಂತಾದಾಗ, ಬೇರೆ ಯಾವುದೇ ರೀತಿಯ ಪ್ರತಿಗಳು ಇಲ್ಲದೆ, ಪ್ರತಿ ಮಾಡಲೂ ಯಾವುದೇ ಅನುಕೂಲವಿಲ್ಲದಂತಹ ಕಾಲಘಟ್ಟದಲ್ಲಿ ಇಂದಿರಾರವರು ಎದೆಗುಂದದೆ ಕೇವಲ 15 ದಿನಗಳಲ್ಲಿ ಪುನಃ ಸಂಪೂರ್ಣ ಕಾದಂಬರಿಯನ್ನ ಬರೆದು ಕೊಡುತ್ತಾರೆ. ಪ್ರಕಟಣೆಯಾಗುತ್ತಿದ್ದಂತೆ ಅಪಾರ ಮೆಚ್ಚುಗೆ ಪಡೆಯುತ್ತೆ. ತಕ್ಷಣವೇ ತಡ ಮಾಡದೆ ಅಮೇಜಾನ್ ನಲ್ಲಿ ಖರೀದಿಸಿ ಒಂದೇ ಏಟಿಗೆ ಇಡೀ ರಾತ್ರಿ ಓದಿ ಮುಗಿಸಿದೆ! ಕೃಷ್ಣ ವೇಣಿ, ಮುದ್ದುರಾಮ, ರಾಘು, ತುಂಗಾ-ಭದ್ರ ರೆಂಬ ಹುಟ್ಟು ಕುರುಡು ಅವಳಿಗಳು, ಶಂಭು, ಭಾಗಮ್ಮ, ಮಂದಾ, ದುಗ್ಗಾಭಟ್ಟರು, ನಾಗಾಭಟ್ಟರು, ಮೂಕಮ್ಮ, ಮಧುರಾ, ಶೇಷಾಚಾರರು, ತುಳಸಿ, ರಾಘುವಿನ ಅತ್ತೆ.. ಹೀಗೇ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚಳಿಯದಂತಿವೆ!… ಸಂಬಂಧಗಳು, ಪ್ರೀತಿ ಇವೆಲ್ಲವೂ ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲು! ನಾಗಾಲೋಟದಲ್ಲೋಡುವ ಕಾಲಘಟ್ಟದಲ್ಲಿರುವ ನಮಗೆ ಈ ಕಾದಂಬರಿ ಓದಿದಾಗ ಇವರಿಗೆಲ್ಲ ಜೀವನವನ್ನ ನಿಧಾನಗತಿಯಲ್ಲಿ ಅನುಭವಿಸೋ ತಾಳ್ಮೆ ಅದೆಷ್ಟಿದ್ದೀತು ಅನ್ನಿಸದಿರಲಾರದು! 60ರ ದಶಕದಲ್ಲಿ ಬರೆದ ಕಾದಂಬರಿ. ಓದಿಸಿಕೊಂಡು ಹೋಗುತ್ತೆಯೇ ಅನ್ನುವುದೇ ನನ್ನ ಅನುಮಾನವಾಗಿತ್ತು. ಅದರೆ ಆದು ಯಾವ ಕಾಲಘಟ್ಟದಲ್ಲಿಯಾದರೂ ಓದಿಸಿಕೊಳ್ಳುವಂತಹದು ಎಂದು ಓದಿ ಮುಗಿಸುವಾಗ ಕಣ್ಣಂಚಿನ ತೇವ ಸಾಬೀತು ಪಡಿಸಿತು! ಹೆಣ್ಣಿಗೆ ಶಿಕ್ಷಣದ ಅಗತ್ಯವೇ ಇಲ್ಲವೆಂದುಕೊಂಡಿದ್ದ ಕಾಲಮಾನದಲ್ಲಿ, ಮಲೆನಾಡಿನ ಹಳ್ಳಿಗಾಡಿನ ಜೀವನ, ಅಲ್ಲಿನ ಪರಿಸರ, ಹೆಣ್ಣು-ಗಂಡಿನ ತುಮುಲಗಳು, ಆಗಿನ ಮೂಢತೆ ಮತ್ತು ಪ್ರಕೃತಿಯ ಚೆಲುವು ಕಣ್ಣಿಗೆ ಕಟ್ಪುವಂತೆ ಬರೆದಿದ್ದಾರೆ ಶ್ರೀಮತಿ ಇಂದಿರಾರವರು. ಖಂಡಿತವಾಗಿಯೂ ಓದಲೇಬೇಕಾದಂತಹ ಕಾದಂಬರಿ! “ಓಲ್ಡ್ ಇಸ್ ಗೋಲ್ಡ್” ಅನ್ನುವಂತಹ ಕೃತಿಯಿದು! ***************************** ಚೈತ್ರಾ ಶಿವಯೋಗಿಮಠ

ನಾನು ಓದಿದ ಕಾದಂಬರಿ

ಹರಿಚಿತ್ತ ಸತ್ಯ ವಸುಧೇಂದ್ರ ಹರಿಚಿತ್ತ ಸತ್ಯ ವಸುಧೇಂದ್ರ ಅವರ ಮೊದಲ ಕಾದಂಬರಿ. ಅದರ ಮುದ್ರಣ ಪ್ರತಿ ಲಭ್ಯವಿಲ್ಲದೇ ಓದಲಾಗಿರಲಿಲ್ಲ. ಈ ದುರಿತ ಕಾಲದಲ್ಲಿ ರಿಯಾಯಿತಿ ದರದಲ್ಲಿ ಈ ಕೃತಿ ಲಭ್ಯವಿದೆ. ಸರಳ, ಸುಂದರವಾದ ಸಾಮಾಜಿಕ ಕಾದಂಬರಿಯಿದು. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯ ಸಮೃದ್ಧ ಚಿತ್ರಣ ಈ ಕೃತಿಯಲ್ಲಿದೆ. ದಿ. ಸುಬ್ಬರಾಯರು ಮತ್ತು ರಂಗಮ್ಮನವರ ಏಕಮಾತ್ರ ಪುತ್ರಿ ಪದ್ದಿ. ಪದ್ದಿ ಸ್ವಲ್ಪ ಚೆಲ್ಲು ಸ್ವಭಾವದವಳು. ಅವಳನ್ನು ಬಳ್ಳಾರಿಯಿಂದ ಸಂಡೂರಿಗೆ, ವರನಾದ ರಾಘವೇಂದ್ರನಿಗೆ ತೋರಿಸಲು ಹೊರಟಿರುವ ಸನ್ನಿವೇಶದಿಂದ ಕತೆ ಆರಂಭವಾಗುತ್ತದೆ. ವಕೀಲ ಬಿಂಧುಮಾದವರು ವಿಧವೆ ರಂಗಮ್ಮನವರ ಕುಟುಂಬಕ್ಕೆ ಆಶ್ರಯವಾಗಲು ಕಾರಣವಾಗುವ ಸನ್ನಿವೇಶ ತಮಾಶೆಯಾಗಿದೆ. ಆಚಾರ್ಯನಾಗಿ ಸಾಧನೆ ಮಾಡುವ ಕರಿಹನುಮನ ಹಿನ್ನೆಲೆ, ರಂಗಮ್ಮನವರೊಂದಿಗೆ ಆತ್ಮೀಯತೆ, ಪದ್ದಿಯ ಜಾತಕ ತೋರಿಸಿದಾಗ ಅವರು ಹೇಳುವ ಭವಿಷ್ಯ ಕಾದಂಬರಿಯಲ್ಲಿ ಕೊನೆಯಲ್ಲಿ ನಿಜವಾಗುವುದು ಕುತೂಹಲಕಾರಿಯಾಗಿದೆ. ಎಲ್ಲೆಂದರಲ್ಲಿ ನಿದ್ದೆ ಮಾಡುವ ಶ್ರೀಪತಿ ಹನುಮಂತನ ಪ್ರತಿರೂಪವಾದ ಕೋತಿಗಳಿಗೆ ಕೈಮುಗಿಯುವ ಮನುಷ್ಯ. ಅವನ ಹೆಂಡತಿ ಸುಭದ್ರಮ್ಮನ ಗೋಟಾವಳಿ ನಗೆ ತರಿಸುತ್ತಿದೆ. ಪದ್ಮಾವತಿ ಮತ್ತು ಅವಳ ಗೆಳತಿ ಪಂಕಜಳ ಸ್ನೇಹ, ಅವರ ಸಾಹಸಗಳು ಕಚಗುಳಿಯಿಡುತ್ತವೆ. ಪಂಕಜಳ ದುಬಾಯಿ ಗಂಡ ವಿಮಾನ ಯಾನದಲ್ಲಿ ಭಸ್ಮವಾಗಿದ್ದು ಕಾಡುತ್ತದೆ . ಮೋಟಾರು ರಾಮರಾಯರು, ವನಮಾಲಾಬಾಯಿ ಮತ್ತು ರಾಘವೇಂದ್ರನ ಪಾತ್ರಗಳು ಸಶಕ್ತವಾಗಿ ಮೂಡಿಬಂದಿವೆ. ವಧು ಪರೀಕ್ಷೆ ಮಾಡುವ ಗುಡೇಕೋಟಿ ಗೋವಿಂದಾಚಾರ್ಯ ಮನಸೆಳೆಯುತ್ತಾರೆ. ರಾಘುವನ್ನು ಪದ್ದಿಯೇ ತಿರಸ್ಕರಿಸಲು ಇರುವ ಕಾರಣ ಪದ್ದಿಯ ಗುಣಧರ್ಮವನ್ನು ಸರಿಯಾಗಿ ಬಿಂಬಿಸುತ್ತದೆ. ಮುಂದೆ ರಾಘು ರಾಮಸಾಗರದ ಸುಧಾಳ ಜೊತೆ ಮದುವೆಯಾಗುತ್ತಾನೆ. ಪ್ರತಿಭಾ, ಪ್ರಮೀಳಾ ಮತ್ತು ಪ್ರಕಾಶನ ಜನನ ಮತ್ತು ಪ್ರಕಾಶನ ಅಂಧತ್ವ ಗೊತ್ತಾದಾಗ ನಮಗೂ ಸಂಕಟವಾಗುತ್ತದೆ. ಆದರೆ ಪ್ರಕಾಶನ ಚುರುಕುತನ ಅದನ್ನು ಮರೆಸುತ್ತದೆ. ಸಿರೇಕೊಳ್ಳದ ಆಚಾರ್ಯರು ಮತ್ತು ಅವರು ಸೂಚಿಸುವ ಡಾ. ಥಾಮಸ್ ರಿಂದ ಪದ್ದಿಯ ಮನೋರೋಗ ವಾಸಿಯಾಗುತ್ತದೆ.ಆನೆಗೊಂದಿ ದ್ವೀಪದ ನವವೃಂದಾವನದಲ್ಲಿ ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಮುಗಿಯುತ್ತದೆ. ಉಪಸಂಹಾರದಲ್ಲಿ ನಾವು ಊಹಿಸಿದ ತಿರುವಿನೊಂದಿಗೆ ಕತೆ ಅಂತ್ಯಗೊಳ್ಳುತ್ತದೆ. ಹರಿಚಿತ್ತ ಸತ್ಯ, ಹಲವು ಕಥಾಸಂಕಲನಗಳನ್ನು ಓದಿ ಅನಂತರ ವಸುಧೇಂದ್ರರ ತೇಜೋ ತುಂಗಭದ್ರಾ ಕಾದಂಬರಿ ಓದಿದರೆ ಅವರ ಸಾಹಿತ್ಯದ ಹಾದಿಯ ಅರಿವು ನಮಗಾಗಬಹುದು. ಒಮ್ಮೆ ಓದಬೇಕಾದ ಕೃತಿಯಿದು. ** ಅಜಿತ್ ಹರೀಶಿ ಡಾ.ಅಜಿತ್ ಹರೀಶಿ

ನಾನು ಓದಿದ ಕಾದಂಬರಿ

ಅಶ್ವತ್ಥಾಮನ್ ಜೋಗಿ ನನ್ನ ಪ್ರಕಾರ ಒಂದು ಬರವಣಿಗೆ ಅಥವಾ ಪುಸ್ತಕ “ಚೆನ್ನಾಗಿದೆ” ಎನ್ನುವುದಕ್ಕೆ ಬರವಣಿಗೆಯ ಪ್ರಪಂಚದಲ್ಲಿ ಕ್ರಾಂತಿಯನ್ನು ಉಂಟುಮಾಡುವಂತಹ ಅಥವಾ ಇತಿಹಾಸವನ್ನು ಸೃಷ್ಟಿ ಮಾಡುವಂತಹ ಯಾವುದೋ ಕಾರಣದ ಅಗತ್ಯವಿಲ್ಲ. ನಾವು ದಿನಸಿ ಅಂಗಡಿಯಲ್ಲೋ, ತರಕಾರಿ ಕೊಳ್ಳುವಾಗಲೋ ಅಪರೂಪಕ್ಕೆ ಎದುರಾಗುವ ಮುಖವೊಂದು ಅಥವಾ ಬಿಡುವಾದಾಗ ನಮ್ಮನ್ನ ನಾವು ವಿಮರ್ಶಿಸಿಕೊಂಡಾಗ ಸಿಗುವ ಪಾತ್ರವೊಂದು ಕತೆಯೋ ಕಾದಂಬರಿಯೋ ಆಗಿ ನಮ್ಮೆದುರು ನಿಂತಾಗ ಸಿಗುವ ಸಣ್ಣದೊಂದು ಆಶ್ಚರ್ಯಚಕಿತ ಸಂತೋಷವಿದೆಯಲ್ಲ ಅದು ಒಂದು ಓದಿಗೆ ಸಿಗಬೇಕಾದ ಸಕಲ ಸಮಾಧಾನವನ್ನೂ ಒದಗಿಸಬಲ್ಲದು. ಅಂತಹ ಪುಸ್ತಕಗಳಲ್ಲೊಂದು ಜೋಗಿಯವರ ಕಾದಂಬರಿ “ಅಶ್ವತ್ಥಾಮನ್”. ಕಾದಂಬರಿಯ ಹೆಸರೇ ಹೇಳುವಂತೆ ಮೇಲ್ನೋಟಕ್ಕೆ ಇದೊಂದು ವ್ಯಕ್ತೀಕೇಂದ್ರಿತ ಕೃತಿ. ಅಶ್ವತ್ಥಾಮ ಎಂಬ ಜಿಗಟು ವ್ಯಕ್ತಿತ್ವವೊಂದು ಅಶ್ವತ್ಥಾಮನ್ ಎಂಬ ಹೆಸರಿನ ಜನಪ್ರಿಯ ನಟನಾಗಿ, ನಟನೆಯನ್ನೂ ಜನಪ್ರಿಯತೆಯನ್ನೂ ಅಹಂಕಾರವನ್ನಾಗಿಸಿಕೊಂಡು, ಅಹಂಕಾರವನ್ನೇ ಶಕ್ತಿಯಾಗಿಸಿಕೊಂಡು ಬದುಕುವ ಪಾತ್ರ ನಮಗೇ ಅರಿವಿಲ್ಲದಂತೆ ನಮ್ಮದಾಗುತ್ತ ಹೋಗುವುದು ಈ ಕೃತಿಯ ಅಹಂಕಾರ. ಈ ಪಾತ್ರವನ್ನು ಪೋಷಿಸಲೂ ಆಗದೇ, ದ್ವೇಷಿಸಲೂ ಆಗದೇ, ಕೊನೆಗೆ ನಮ್ಮೊಳಗೆಲ್ಲೋ ಅಡಗಿ ಕುಳಿತಿರುವ ಅಶ್ವತ್ಥಾಮನನ್ನು ಕಾದಂಬರಿಯುದ್ದಕ್ಕೂ ಅನುಭವಿಸುತ್ತ ಹೋಗುತ್ತೇವೆ. ಪಾರ್ಶ್ವವಾಯುವಿಗೆ ಬಲಿಯಾದ ಅಶ್ವತ್ಥಾಮನ್ ತನ್ನ ಆತ್ಮಚರಿತ್ರೆ ಬರೆಸಬೇಕೆಂಬ ಆಶಯದಲ್ಲಿ ಕೊಂಚ ಸಿನಿಮೀಯವಾಗಿ ಆರಂಭವಾಗುವ ಈ ಕಾದಂಬರಿ, “ಎದುರಾಳಿ ಸೋತ ಮೇಲೆ ನಾನು ಯಾರ ಜೊತೆಗೆ ಆಡಲಿ, ನನ್ನ ಆಟ ಮುಗಿಯಿತು” ಎನ್ನುವ ಮಾತಿನಿಂದ ಅಲ್ಲೊಂದು ತಾತ್ವಿಕ ವಾತಾವರಣವನ್ನು ಸೃಷ್ಟಿ ಮಾಡಿ, ಓದುಗ ಅಶ್ವತ್ಥಾಮನೊಂದಿಗೆ ಮುಖಾಮುಖಿಯಾಗತೊಡಗುತ್ತಾನೆ. ಎದುರಾಗುವ ಪಾತ್ರಗಳಲ್ಲಿ, ದೃಶ್ಯಗಳಲ್ಲಿ ಅಶ್ವತ್ಥಾಮನಿದ್ದಾನೋ, ಅಶ್ವತ್ಥಾಮನ್ ಇರುತ್ತಾನೋ ಅಥವಾ ನಮ್ಮೊಳಗಿರುವ ನಾವು ಒಬ್ಬರಿಗೊಬ್ಬರು ಎದುರಾಗಿ ಕಣ್ಣು ತಪ್ಪಿಸುತ್ತೇವೋ ಎನ್ನುವುದು ನಮ್ಮ ಅನುಭವಕ್ಕೆ ಮಾತ್ರ ದಕ್ಕುವ ವಿಷಯ. “ಮಾತು” ಇಲ್ಲಿ ಕೇವಲ ಮಾತಾಗದೇ, ಕಳೆದುಹೋಗದೇ ಅನುಭಾವವಾಗಿ ಜೀವ ತಳೆದಿದೆ; ಸರಳವಾಗಿ, ಕೆಲವೊಮ್ಮೆ ಸಿನಿಮೀಯವಾಗಿ ತಾತ್ವಿಕವಾದ ನೆಲೆಗಟ್ಟಿನಲ್ಲಿ “ಕಾಲ”ವನ್ನು ಕಟ್ಟಿಕೊಟ್ಟಿದೆ. ಅಶ್ವತ್ಥಾಮನ ಪಾತ್ರ ಅನಾವರಣಗೊಳ್ಳುತ್ತ ಹೋಗುವುದು ಅವನ ಅಹಂಕಾರವನ್ನು ಜೀವಂತವಾಗಿರಿಸುವ ಹೆಣ್ಣುಪಾತ್ರಗಳ ಮೂಲಕ. ದೀಪಾವಳಿಯ ದಿನ ಎಣ್ಣೆ ಹಚ್ಚಲು ಬಂದ ಸುಲೋಚನಾ ತನ್ನನ್ನು ಸಾಯಿಸಲೇ ಬಂದವಳೆಂದು ಕಣ್ಣುಮುಚ್ಚಿ, ಹಸಿದ ಗಂಡಸಿನ ಪಾತ್ರವನ್ನು ಎಷ್ಟು ಚೆನ್ನಾಗಿ ನಟಿಸಿದೆ ಎನ್ನುವ ನಟ, ನಮ್ಮ ಕಣ್ಣೆದುರಿಗೊಂದು ಹೊಸ ಪ್ರಪಂಚವನ್ನು ತೆರೆದಿಡುವಲ್ಲಿ ಯಶಸ್ವಿಯಾಗುತ್ತಾನೆ. ಪ್ರತೀ ಕ್ಷಣದ ಬದುಕು ಒಂದಿಲ್ಲೊಂದು ಬಗೆಯ ನಟನೆಯೇ ಆದಾಗ, ಕಣ್ಣುಮುಚ್ಚಿ ನಾವು ನಾವಾಗಿ ನಟಿಸುವುದು ಸರಳವೆನ್ನುವಂಥ ವಿಲಕ್ಷಣ ಸತ್ಯಗಳೆಲ್ಲ ನಮ್ಮ ಸೈದ್ಧಾಂತಿಕ ನಿಲುವುಗಳನ್ನು ಪ್ರಶ್ನಿಸದೇ ಬಿಡುವುದಿಲ್ಲ. ಮೊದಲನೇ ಹೆಂಡತಿ ಶುಭಾಂಗಿನಿ ತನ್ನ ಪಾಲಿನ ದೇವತೆ ಎಂದು ಗೌರವಿಸುವ ಅಶ್ವತ್ಥಾಮ, ಎರಡನೇ ಹೆಂಡತಿ ಸರೋಜಿನಿ ತನ್ನನ್ನು ಪಳಗಿಸಲು ಯತ್ನಿಸುತ್ತಿದ್ದಾಳೆ ಎನ್ನುವ ಕಾರಣಕ್ಕೆ ಬಿಡುಗಡೆ ಬಯಸಿ, ದಾಂಪತ್ಯದ ನೀತಿ ನಿಲುವುಗಳನ್ನೇ ಇಕ್ಕಟ್ಟಿಗೆ ಸಿಲುಕಿಸುವ ಹುಚ್ಚು ಮನಸ್ಥಿತಿಯಂತೆ ಭಾಸವಾಗಿಯೂ ಪರಿಹಾರವಿಲ್ಲದ ಗೊಂದಲದಂತೆ ಮನಸ್ಸಲ್ಲಿ ಉಳಿದುಬಿಡುತ್ತಾನೆ. “ನಿಜವಾದ ನೋವು ಕೊಡುವುದಕ್ಕೂ ಶಕ್ತಿ ಬೇಕು; ನನ್ನಲ್ಲಿ ನೋವಿಲ್ಲದೇ ಹೋದರೆ ನಾನು ಮತ್ತೊಬ್ಬರಿಗೆ ಎಲ್ಲಿಂದ ಕೊಡ್ಲೊ” ಎನ್ನುವಂತಹ ಅಸಹಜ ಮಾತುಗಳು ಸತ್ಯಾಸತ್ಯತೆಯ ವಿಮರ್ಶೆಗಳನ್ನೆಲ್ಲ ಮೀರಿ ನೆನಪಲ್ಲಿ ಉಳಿದುಕೊಳ್ಳುತ್ತವೆ. “ನಾನು ಅವಳಿಂದ ಬಿಡಿಸಿಕೊಳ್ಳಲು ಹವಣಿಸಲಿಲ್ಲ, ಅವಳಾಗಿಯೇ ನನ್ನಿಂದ ದೂರ ಹೋಗುವಂತೆ ಮಾಡುವ ಉಪಾಯಗಳನ್ನು ಹುಡುಕುತ್ತಿದ್ದೆ” ಎಂದು ಮೂರನೇ ಹೆಂಡತಿಯಿಂದಲೂ ಬಿಡುಗಡೆಗೆ ತವಕಿಸುವ ಅಶ್ವತ್ಥಾಮ ವಿಕೃತ ಮನಸ್ಸಿನ ಪ್ರತಿರೂಪವಾಗಿ ಹೊರನೋಟಕ್ಕೆ ಭಾಸವಾದರೂ , ನಟಿಸುತ್ತಲೇ ನೈಜವಾಗುವ ಅಸಹಾಯಕ ಅಲೆದಾಟದ ಮನುಷ್ಯನ ಸಹಜ ಮನಸ್ಥಿತಿಯ ತಲ್ಲಣಗಳಾಗಿ ನಮ್ಮೊಳಗೊಂದಾಗುತ್ತಾನೆ. “ದುರದೃಷ್ಟವಶಾತ್ ನನ್ನ ಸ್ಥಾಯೀಭಾವ ನಟನೆ” ಎನ್ನುವಂತಹ ಹೇಳಿಕೆಗಳು ಕೇವಲ ಹೇಳಿಕೆಗಳಾಗದೇ, ಓದುಗನೊಬ್ಬನ ಹಳವಳಿಕೆಗಳನ್ನು ಬರೆಯುವವ ಹೇಳುತ್ತಾ ಹೋದಂತೆ ಎದೆಗಿಳಿಯುತ್ತವೆ. ಪಾತ್ರಗಳ ಸೃಷ್ಟಿಯ ಜೊತೆಗೆ ಭಾಷಪ್ರಯೋಗ ಮತ್ತು ನಿರೂಪಣಾ ವಿಧಾನವೂ ಕೂಡಾ ಈ ಕೃತಿಯನ್ನು ಸುಂದರವಾಗಿಸಿರುವುದರಲ್ಲಿ ಸಂಶಯವಿಲ್ಲ. ಯಾವುದೇ ಆಡಂಬರವಿಲ್ಲದ, ಅನಗತ್ಯ ಅಲಂಕಾರಗಳಿಲ್ಲದ ಶಬ್ದಗಳ ಬಳಕೆ ಹಾಗೂ ಪಾತ್ರಕ್ಕೆ ತಕ್ಕ ಭಾಷಾಪ್ರಯೋಗ ಈ ಕೃತಿಯ ಆಕರ್ಷಣೆ. “ನನ್ನ ಅಹಂಕಾರವೇ ನನ್ನ ಶಕ್ತಿ” ಎನ್ನುವ ಮಾತು ಅದನ್ನು ಆಡಿದವನ ಸಂಪೂರ್ಣ ವ್ಯಕ್ತಿತ್ವದ ಪರಿಚಯ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತದೆ. ಹಾಗೆಯೇ ನಿರೂಪಣೆಯಲ್ಲೂ ಲೇಖಕರೇ ಹೇಳುವಂತೆ ಸಿದ್ಧಪ್ರಕಾರಗಳಿಂದ ಆಚೆ ನಿಲ್ಲುವ ಈ ಕೃತಿ “ಮಾತುಕತೆ”ಯ ಮಾದರಿಯಲ್ಲಿದ್ದೂ ವಾಚಾಳಿಯಾಗದೇ ವಿಶಿಷ್ಟವಾಗುಳಿಯುತ್ತದೆ. “ಇದನ್ನು ಕಬೀರ ಬರೆದನೋ ನಾನೇ ಬರೆದೇನೋ ನೆನಪಿಲ್ಲ. ನಾನು ಕಬೀರನಾದಾಗ ಬರೆದಿರಬಹುದೇನೋ?” ಎನ್ನುವ ಮಾತಿನಲ್ಲಿ ಅಸ್ಪಷ್ಟತೆಯೇ ಪಾತ್ರಸೃಷ್ಟಿಯ ಸೂಕ್ಷ್ಮತೆಗೆ ಒದಗಿಬಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಉದಾಹರಿಸುತ್ತ ಹೋಗುವಂತಹ ಸಾಕಷ್ಟು ಭಾಷಪ್ರಯೋಗ ಹಾಗೂ ವಿಶಿಷ್ಟ ನಿರೂಪಣೆ ಕಾದಂಬರಿಯುದ್ದಕ್ಕೂ ಕಾಣಬಹುದು. ಕಾದಂಬರಿಯ ಅಂತ್ಯ ನಾಟಕೀಯವೆನಿಸಿದರೂ ಕೃತಿಯ ಆಶಯವನ್ನು ಹಾನಿ ಮಾಡಿಲ್ಲ. ಹೀಗೆ ತಾನೇ ಪಾತ್ರವಾಗುತ್ತ, ಪಾತ್ರದುದ್ದಕ್ಕೂ ನಟಿಸುತ್ತಾ, ಓದುಗನನ್ನು ನಟನಾಗಿಸುತ್ತ ತಳಮಳಕ್ಕೆ ತಳ್ಳುವ ಅಶ್ವತ್ಥಾಮ ನಟನಾಗಿ, ಪಾತ್ರವಾಗಿ, ನಟನೆಯಾಗಿ, ಓದುಗನ ನೆನಪಲ್ಲಿ ಉಳಿಯುವ ಚಿತ್ರವಾಗಿ ನಿಲ್ಲುತ್ತಾನೆ ****************************** ಅಂಜನಾ ಹೆಗಡೆ

ಪುಸ್ತಕ ಪರಿಚಯ

ಸಂಕೋಲೆಗಳ ಕಳಚುತ್ತ ಕೃತಿ: ಸಂಕೋಲೆಗಳ ಕಳಚುತ್ತ ಕವಿ: ಕು.ಸ.ಮಧುಸೂದನ ಪ್ರಕಾಶಕರು: ಕಾವ್ಯಸ್ಪಂದನ ಪ್ರಕಾಶನ, ಬೆಂಗಳೂರು ಪುಸ್ತಕ ದೊರೆಯುವ ವಿವರಗಳು ಸಂಕೋಲೆಗಳ ಕಳಚುತ್ತ ಪುಸ್ತಕತರಿಸಿಕೊಳ್ಳುವ ವಿವರಗಳು ಪುಸ್ತಕದ ಬೆಲೆ=150=00 ಬ್ಯಾಂಕ್ ವಿವರಗಳು IFSC CODE-CNRB0002698 AC/NO=1145101036761 Bhadravathiramachari Canara bank,rajajinagar 2nd block***********

ಪುಸ್ತಕ ಪರಿಚಯ

ಸಾರಾ ಶಗುಫ್ತಾ (ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ  ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.) ಸಾರಾ ಶಗುಫ್ತಾರವರ ಜೀವನ ಮತ್ತು ಕಾವ್ಯ ಕುರಿತ ವೃತಾಂತ ‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’..! ಹಾಲ ಮೇಲೆ ಆಣೆ… ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ ಬಾತುಕೋಳಿಗಳಿಗೆ ಬಿಳಿಯ ರೆಕ್ಕೆಗಳಿದ್ದವು. ಆಗ ಅವು ಒಂದು ಪ್ರಚಂಡ ಬಿರುಗಾಳಿಗೆ ಸಿಲುಕಿಕೊಂಡವು. ಅವು ಹದ್ದುಗಳ ಗೂಡಿನಲ್ಲಿ ಆಶ್ರಯ ಪಡೆಯಬೇಕಾಯಿತು. ಹದ್ದುಗಳು ಸಾಯಂಕಾಲ ತಮ್ಮ ಗೂಡಿಗೆ ಮರಳಿದಾಗ ಅಲ್ಲಿ ಬಾತುಕೋಳಿಗಳಿದ್ದುದನ್ನು ಕಂಡವು. ಕೆರಳಿ ಕೆಂಡವಾದ ಹದ್ದುಗಳು ತಮ್ಮ ಚುಂಚದಿಂದ ಅವುಗಳ ರೆಕ್ಕೆಗಳನ್ನು ಎಳೆಯತೊಡಗಿದವು. ಬಾತುಕೋಳಿಗಳ ರೆಕ್ಕೆಗಳು ಇಲ್ಲವಾದವು. ಹದ್ದುಗಳು ಅವುಗಳನ್ನು ತಮ್ಮ ಉಗುರುಗಳಲ್ಲಿ ಹಿಡಿದುಕೊಂಡು ದೂರದ ಒಂದು ಕಾಡಿನಲ್ಲಿ ಎಸೆದವು.. ತಿನ್ನಲು ಮತ್ತು ಕುಡಿಯಲು ಏನೂ ಸಿಗದೆ ಬಾತುಕೋಳಿಗಳು ತಮ್ಮ ಸಾವನ್ನು ಎದುರು ನೋಡತೊಡಗಿದ್ದಾಗ ಕೆಲವು ಕಾಗೆಗಳು ಬಂದವು, ಅವುಗಳ ಬಗ್ಗೆ ಕನಿಕರಪಟ್ಟವು. ಬಾತುಕೋಳಿಗಳು ತಮ್ಮ ಗೋಳಿನ ಕತೆ ಹೇಳಿಕೊಂಡವು. ಕಾಗೆಗಳು “ಈ ಹದ್ದುಗಳು ನಮ್ಮ ವೈರಿಗಳು. ನೀವು ಸೇಡು ತೀರಿಸಿಕೊಳ್ಳಬೇಕು. ಅವು ಪಾಠ ಕಲಿಯುವಂತಾಗಬೇಕು. ಅವುಗಳಿಗೆ ಅದೇ ಗತಿಯಾಗಬೇಕು.” ಎಂದವು. ನೆರವಿನ ಸಂಕೇತವಾಗಿ ಕಾಗೆಗಳು ಅವುಗಳಿಗೆ ತಮ್ಮ ರೆಕ್ಕೆಗಳನ್ನು ನೀಡಿದವು. ಆ ಕಾರಣದಿಂದಾಗಿ ಆಸ್ಟ್ರೇಲಿಯನ್ ಬಾತುಕೋಳಿಗಳು ಇಂದಿಗೂ ಕಪ್ಪು ರೆಕ್ಕೆಗಳನ್ನು ಹೊಂದಿರುತ್ತವೆ… ಆ ಕತೆಯ ಕಾಗೆಗಳು ನನಗೆ ನೆನಪಾಗುತ್ತಲೇ ಸಾರಾಳ ಒಂದು ಕವನ ಓದತೊಡಗಿದೆ… ನೀ ಒಬ್ಬ ಕವಿ ನಾನು ಗೂಡಿನಲ್ಲಿ ಕೊಳೆಯುತ್ತಿರುವ ಕ್ಷುಲ್ಲಕ ಹೆಣ್ಣು ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು ಸೂಳೆಯಾದ ನಾನು ಒಲಿಸಿಕೊಳ್ಳಲಾಗಲಿಲ್ಲ ನಿನ್ನನ್ನು ನನ್ನೆದೆಯಿಂದ ಜಾರಿದವು ಬರಿ ಖೊಟ್ಟಿ ನಾಣ್ಯ ನೀನು ತಪ್ಪಿಸಿಕೊಂಡೆ ಮದುವೆಯನ್ನು ಇಡೀ ನಾಲ್ಕು ದಿನ ಹೆಣೆದೆ ಅರ್ಧ ಹೊರಸು ನೀನು ಮಲಗಿದೆ ನನ್ನ ಲಜ್ಜೆಯ ಹಾಸಿಗೆಯಲ್ಲಿ ನಾನೊಬ್ಬ ಕ್ಷುಲ್ಲಕ ಹೆಣ್ಣು ಹಾಗಾಗಿ ಬೇಕಿದೆ ಪರಿಹಾರ ನೀನು ಮರೆಯಲಾರೆ ಸಾವನ್ನು ನಾ ಮರೆಯಲಾರೆ ನೋವನ್ನು ಖರೇ ನಾಣ್ಯವೆನಿಸಿಕೊಂಡಿತು ನನ್ನ ಖೊಟ್ಟಿ ನಾಣ್ಯ ಬೇಕೆಂದಾಗ ನಾನು ನಿನ್ನನ್ನು ಖರೀದಿಸಬಲ್ಲೆ ಎಲ್ಲೇ ಆಗಲಿ ಇಳಿಸಿಕೋ ಮುಸುಕಿನಲ್ಲಿ ನಿನ್ನ ಭಾರವನ್ನು ನಿನ್ನಿಂದಲೇ ಶುರುವಾಗಲಿ ನನ್ನ ವ್ಯಾಪಾರ ನಾನು ನರ್ತನದಿಂದ ಸವೆಸಿದೆ ನನ್ನ ಪೈಜಣದ ಗೆಜ್ಜೆಗಳನ್ನು ನೀನು ಸರ್ವಸ್ವವನ್ನು ಕಳೆದುಕೊಂಡೆ ಮೌನದಲ್ಲಿ ಗೂಡಿನಲ್ಲಿ ಕೂಡಿ ಹಾಕಲು ಒಂದು ಹೆಣ್ಣನ್ನು ಮದುವೆಯಾಗಿ ಸೂಳೆಮಕ್ಕಳು ಮೀರಿದರು ಎಲ್ಲ ಮಿತಿಗಳನ್ನು ಅದನ್ನೆಲ್ಲ ಅರಿತುಕೊಂಡೆ ಜೀವ ಪಣಕ್ಕೊಡ್ಡಿ ನಿನ್ನೆಲ್ಲ ಪದಗಳು ನೆರವಾಗುತ್ತವೆ ಕುಂಟಲಗಿತ್ತಿಯರಾಗಿ ನಿನ್ನಿಂದ ನಾ ತಿರುಗಿ ಪಡೆಯಲಾರೆ ಮೆಹರ್ ಅಷ್ಟೊಂದು ಮುಗ್ಗಲಗೇಡಿ ನಾನು ಜನ ನನಗೆ ನೀಡುವರು ಕಾಣಿಕೆಯಾಗಿ ನನ್ನ ಮೆಹರ್ ಜನಜನಿತವಾಗಿದೆ ನಿನ್ನ ಬಳಲಿಕೆ ಹೆಪ್ಪುಗಟ್ಟಿವೆ ನಿನ್ನ ಕೈಗಳು ಏನಾಯಿತು ನಿನ್ನ ಸಮರಕಲೆಗಳಿಗೆ ಆ ನಾಲ್ವರು ಹಿಜಡಾಗಳ ಅಣತಿ ಮೇರೆಗೆ ಯಾವಾಗ ನಾನಾದೆ ನಿನ್ನ ಮಾನ-ಮರ್ಯಾದೆ ನಿನ್ನ ಮಕ್ಕಳನ್ನು ಮರೆ ಮಾಚುವುದು ನಿನ್ನ ಸ್ವಾಭಿಮಾನ ರಮಿಸೀತು ಹೇಗೆ ಅದು ನನ್ನ ಚೂರಾದ ಮನಸ್ಸನ್ನು? ನನ್ನ ಕೊನೆಯ ಮನುಷ್ಯ ಸತ್ತು ಹೋದ ಅವನ ಮಡದಿಯಾಗಿದ್ದೆ ಇಲ್ಲಿ ತನಕ ನನ್ನ ಬಳೆಗಳೆ ಬದಲಾಗಿವೆ ಈಗ ಬರ್ಚಿಗಳಾಗಿ ಬರ್ಚೆಗಳಿಂದಲೇ ಬರೆಯುವೆ ನನ್ನ ಕತೆಯನ್ನು… ಕಡೆಗೂ ಸಾರಾ ತನ್ನ ಇಡೀ ಕತೆ ನನಗೆ ನಿರೂಪಿಸಿದಳು– “ಅಮೃತಾ, ದಿನಾಲು ನಿನ್ನ ತಲೆ ತಿನ್ನಲು ಬರುತ್ತಿದ್ದೇನೆ. ಅಷ್ಟಕ್ಕೂ ನಾನು ಹೋಗುವುದಾದರೂ ಎಲ್ಲಿ? ಹೌದಲ್ಲ, ನಾನು ಇಲ್ಲಿಯವರೆಗೆ ಕಾವ್ಯ ರಚನೆಗೆ ಹೇಗೆ ತೊಡಗಿದೆಯೆನ್ನುವುದನ್ನೇ ನಿನಗೆ ಹೇಳಲಿಲ್ಲ. ಐದು ವರ್ಷಗಳ ಹಿಂದೆ, ನನ್ನೊಂದಿಗೆ ಕುಟುಂಬ ಯೋಜನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ತನ್ನನ್ನು ಕವಿ ಎಂದುಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಬಂದ. ಆಗ ನಾನೊಬ್ಬ ವಿಚಿತ್ರ ಸಾಂಪ್ರದಾಯವಾದಿ ಯುವತಿಯಾಗಿದ್ದೆ. ಮನೆಯಿಂದ ಆಫೀಸಿಗೆ ನಡೆದುಕೊಂಡು ಬರುವುದನ್ನೇ ಬಹಳ ಕಷ್ಟಪಟ್ಟು ಕಲಿತುಕೊಂಡಿದ್ದೆ. ಯಾವುದೇ ಬಗೆಯ ಸೃಜನಶೀಲತೆಯಲ್ಲಿ ನನಗ ಆಸಕ್ತಿ ಇದ್ದಿರಲಿಲ್ಲ. ಆದಾಗ್ಯೂ ಕವಿಗಳು ಬಹಳ ದೊಡ್ಡ ವ್ಯಕ್ತಿಗಳೆಂದು ನನಗೆ ಅನಿಸಿತ್ತು. ಒಂದು ದಿನ ಕವಿ ಮಹಾಶಯ “ನಾನು ಒಂದು ಮಹತ್ವಪೂರ್ಣ ವಿಷಯ ಕುರಿತು ಮಾತಾಡಬೇಕಿದೆ.”ಎಂದ. ನಾವು ರೆಸ್ಟಾರೆಂಟೊಂದರಲ್ಲಿ ಭೇಟಿಯಾದೆವು. “ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಆತ ಕೇಳಿದ. ಮರುದಿನವೇ ನಮ್ಮ ಮದುವೆ ನಿಶ್ಚಿತಾರ್ಥವಾಯಿತು. ಕಾಜಿಗೆ ಕೊಡುವುದಕ್ಕೆ ನಮ್ಮ ಬಳಿ ಹಣವಿದ್ದಿರಲಿಲ್ಲ. “ಅರ್ಧ ಹಣ ನೀವು ವ್ಯವಸ್ಥೆ ಮಾಡಿರಿ, ಇನ್ನರ್ಧ ನಾನು ಕೊಡುವೆ.” ಎಂದೆ… “ನನ್ನ ತಂದೆತಾಯಿಯರಿಗೆ ನನ್ನ ನಿರ್ಧಾರ ಇಷ್ಟವಾಗಿಲ್ಲ. ಅವರು ಮದುವೆಗೆ ಹಾಜರಾಗುವುದಿಲ್ಲ. ನನ್ನ ಪರವಾಗಿ ನೀವೇ ಸಾಕ್ಷಿಗಳನ್ನು ಕರೆ ತರುವ ವ್ಯವಸ್ಥೆ ಕೂಡ ಮಾಡಬೇಕು.” ಎಂದೂ ಅವನಿಗೆ ಸೂಚಿಸಿದೆ… ನನ್ನೊಬ್ಬ ಗೆಳತಿಯ ಬಟ್ಟೆಗಳನ್ನು ಎರವಲು ತಂದು ವಿವಾಹ ಸ್ಥಳ ತಲುಪಿದೆ. ನಮ್ಮ ಮದುವೆ ನೆರವೇರಿತು. ಕಾಜಿ ತನ್ನ ಶುಲ್ಕ ಮತ್ತು ಮಿಠಾಯಿಯ ಬಾಕ್ಸ್ ಸ್ವೀಕರಿಸಿದ. ನಮ್ಮ ಬಳಿ ಕೇವಲ ಆರು ರೂಪಾಯಿ ಉಳಿದಿತ್ತು. ನಾವು ನಮ್ಮ ಗುಡಿಸಲು ತಲುಪಿದಾಗ ನಮ್ಮ ಬಳಿ ಉಳಿದದ್ದು ಎರಡು ರೂಪಾಯಿ… ಕಂದೀಲ ಬೆಳಕಿನಲ್ಲಿ ಬುರ್ಖಾ ತೊಟ್ಟು ನಾನು ಕುಳಿತುಕೊಂಡೆ. ಕವಿ ಮಹಾಶಯ “ನಿನ್ನ ಬಳಿ ಎರಡು ರೂಪಾಯಿ ಇದೆಯೆ?” ಎಂದು ಕೇಳಿದ. ತನ್ನ ಗೆಳೆಯರ ಮರುಪ್ರಯಾಣಕ್ಕೆ ಅದು ಬೇಕಿತ್ತು. ನಾನು ನನ್ನ ಕಡೆಯ ಎರಡು ರೂಪಾಯಿ ಸಹ ಕೊಟ್ಟುಬಿಟ್ಟೆ… ಕೆಲ ದಿನಗಳ ನಂತರ “ನನ್ನ ಮನೆತನದಲ್ಲಿ ಹೆಂಡತಿ ಕೆಲಸ ಮಾಡುವುದಿಲ್ಲ.” ಎಂದು ಅವನು ಹೇಳಿದ. ನಾನು ಕೆಲಸ ಬಿಟ್ಟೆ. ಪ್ರತಿ ದಿನ ತಮ್ಮನ್ನು ಸುಪ್ರಸಿದ್ಧ ಕವಿಗಳೆಂದು ಭಾವಿಸಿದ್ದ ಕೆಲವು ಸೋಮಾರಿಗಳು ನಮ್ಮ ಮನೆಗೆ ಬರತೊಡಗಿದರು… ಹಿಂಸೆ ನನ್ನ ರಕ್ತದಲ್ಲಿಲ್ಲ. ಆದರೆ ಹಸಿವೆಯನ್ನು ಮಾತ್ರ ತಾಳಿಕೊಳ್ಳಲಾರೆ. ಪ್ರತಿ ದಿನ ‘ಮಹಾನ್’ ವಿಚಾರಗಳ ಕುರಿತು ಚರ್ಚೆಯಾಗುತ್ತಿತ್ತು. ನಮ್ಮ ಮನೆಯಲ್ಲಿ ಚಿಂತನ-ಮಂಥನ ನಡೆಯುತ್ತಿತ್ತು. ಇಷ್ಟರ ಹೊರತಾಗಿ ನನ್ನ ಗಂಡ ಬೇರೆ ಏನೂ ಮಾಡುತ್ತಿರಲಿಲ್ಲ… ಒಂದು ದಿನ ನಮ್ಮ ಬಾಡಿಗೆ ಗುಡಿಸಿಲಿನಿಂದ ಹೊರ ದಬ್ಬಲಾಯಿತು. ಅನಂತರ ಇದರರ್ಧದಷ್ಟು ಮನೆಯನ್ನು ಬಾಡಿಗೆಗೆ ಪಡೆದೆವು. ಹಾಸಿಗೆ ಮೇಲೆ ಮಲಗಿಕೊಂಡು ನಾನು ಗೋಡೆಗಳನ್ನು ದಿಟ್ಟಿಸುತ್ತಿದ್ದೆ. ಎಷ್ಟೋ ಸಲ ನಾನು ನನ್ನವೇ ಮೂರ್ಖ ಯೋಚನೆಗಳಿಗೆ ಬಲಿಯಾಗುತ್ತಿದ್ದೆ… ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಪ್ರಸವ ವೇದನೆ ಶುರುವಾಯಿತು. ಕಾವ್ಯ ಪ್ರತಿಭೆಯ ಹಮ್ಮಿನ ಅಮಲೇರಿಸಿಕೊಂಡು ಕವಿ ಮಹಾಶಯ ತನ್ನ ಗೆಳೆಯರೊಂದಿಗೆ ಹೊರಗೆ ಹೋಗಿಬಿಟ್ಟ ನನ್ನತ್ತ ಕಣ್ಣೆತ್ತಿಯೂ ನೋಡದೆ… ನನಗೆ ನೋವು ಅಸಹನೀಯವಾದಾಗ ನನ್ನ ಮನೆಯೊಡತಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಳು. ನನ್ನ ಕೈಯಲ್ಲಿ ಬರೀ ಐದು ರೂಪಾಯಿ ಇತ್ತು. ಸ್ವಲ್ಪ ಹೊತ್ತಿನ ನಂತರ ನನಗೆ ಗಂಡು ಮಗುವಾಯಿತು. ಚಳಿ ಇತ್ತು. ಕೂಸಿಗೆ ಹೊದಿಸಲು ಒಂದು ಟಾವೆಲ್ ಸಹ ಇದ್ದಿರಲಿಲ್ಲ. ಮಗುವು ಐದು ನಿಮಿಷದ ಮಟ್ಟಿಗೆ ಕಣ್ಣು ತೆರೆಯಿತು. ನಂತರ ತನ್ನ ಕಫನ್ ಅರಸಿಕೊಂಡು ಹೋಯಿತು… ಆ ಕ್ಷಣದಿಂದ ಮೈ ತುಂಬ ಕಣ್ಣಾದೆ… ನರ್ಸ್ ನನ್ನನ್ನು ಬೇರೊಂದು ವಾರ್ಡ್‍ಗೆ ಕರೆದೊಯ್ದಳು. ಅಲ್ಲಿ ನನಗೆ ಒರಗಲು ನೆರವಾದಳು. ನಾನು ಮನೆಗೆ ಹೋಗಬೇಕೆಂದಿದ್ದೇನೆ ಎಂದು ಅವಳಿಗೆ ಹೇಳಿದೆ. ಏಕೆಂದರೆ ಮನೆಯಲ್ಲಿ ಯಾರೊಬ್ಬರಿಗೂ ಏನು ನಡೆದಿದೆ ಎನ್ನುವುದು ಗೊತ್ತಿರಲಿಲ್ಲ. ಅಪಾರ ಕಾಳಜಿಯಿಂದ ಅವಳು ನನ್ನತ್ತ ದೃಷ್ಟಿ ಬೀರಿದಳು. “ನಂಜೇರುವ ಎಲ್ಲ ಸಾಧ್ಯತೆ ಇದೆ. ಅದಕ್ಕಾಗಿ ಹಾಸಿಗೆಯಲ್ಲಿ ಮಲಗಿರು.” ಎಂದು ಹೇಳಿದಳು… ಆಗ ನನ್ನ ಬಳಿ ಸತ್ತ ಕೂಸು ಮತ್ತು ಐದು ರೂಪಾಯಿ ಇತ್ತು. “ಆಸ್ಪತ್ರೆ ಬಿಲ್ ಕೊಡಬೇಕೆಂದರೆ ನನ್ನ ಬಳಿ ಹಣವಿಲ್ಲ. ನಾನು ಒಂದಷ್ಟು ಹಣ ತರುವೆ. ಇನ್ನು ಹೆಚ್ಚು ಕಾಲ ಹಾಸಿಗೆಯಲ್ಲಿ ಮಲಗಿರುವುದು ನನಗೆ ಸಾಧ್ಯವಾಗಲಾರದು. ನೀವು ನನ್ನ ಮಗುವನ್ನು ಭದ್ರತೆ ಎಂದು ಇಟ್ಟುಕೊಳ್ಳಿರಿ. ನಾನು ಬರುವೆ. ಓಡಿ ಹೋಗುವುದಿಲ್ಲ.” ಎಂದು ನರ್ಸ್‍ಗೆ ಮೊರೆ ಇಟ್ಟೆ… ನಾನು ನೆಲ ಮಹಡಿಗೆ ಹೋದೆ. ನನಗೆ ವಿಪರೀತ ಜ್ವರವಿತ್ತು. ನಾನು ಬಸ್ ಹತ್ತಿದೆ. ಹೇಗೋ ಮನೆ ತಲುಪಿದೆ. ನನ್ನ ಸ್ತನಗಳು ಹಾಲಿನಿಂದ ಬಿಗಿದುಕೊಂಡಿದ್ದವು. ನಾನು ಪಾತ್ರೆಯಲ್ಲಿ ಹಾಲು ಹಿಂಡಿದೆ. ಈ ಮಧ್ಯ ಕವಿ ಮಹಾಶಯ ತನ್ನ ಎಂದಿನ ಗೆಳೆಯರ ತಂಡದೊಂದಿಗೆ ಪ್ರವೇಶಿಸಿದ… ನಾನಂದೆ “ಗಂಡು ಮಗುವು ಆಗಿತ್ತು. ಸತ್ತು ಹೋಯಿತು.” ತುಂಬ ಮಾಮೂಲು ಎನ್ನುವಂತೆ ಅವನು ಕೇಳಿಸಿಕೊಂಡ. ತನ್ನ ಗೆಳೆಯರಿಗೆ ಸುದ್ದಿ ತಲುಪಿಸಿದ. ಆ ಮೇಲೆ ಏನೂ ನಡೆದೇ ಇಲ್ಲವೆನ್ನುವಂತೆ ಚರ್ಚೆಯನ್ನು ಎಲ್ಲಿಗೆ ಬಿಟ್ಟಿದ್ದರೋ ಅಲ್ಲಿಂದ ಮುಂದುವರಿಸಿದರು… … ಫ್ರೈಡ್ ಬಗ್ಗೆ ಏನಂತೀರಾ? … ರಿಂಬಾ ಏನು ಹೇಳಿದ್ದಾನೆ? … ಶಾಹಿದ್ ಹೇಳಿದ್ದೇನು? … ವಾರಿಸ್ ಶಾಹ್ ಬಹಳ ದೊಡ್ಡ ವ್ಯಕ್ತಿ. ಈ ವಿಷಯ ನಾನು ನಿತ್ಯವೂ ಕೇಳುತ್ತಿದ್ದೆ. ಆದರೆ ಆ ದಿನ ಶಬ್ದಗಳ ಅಬ್ಬರ ಜೋರಾಗಿತ್ತೆಂದು ಅನಿಸಿತು. ಈ ಎಲ್ಲ ಮಹಾನ್ ವ್ಯಕ್ತಿಗಳು ಈಗಾಗಲೇ ನನ್ನ ರಕ್ತದಲ್ಲಿದ್ದಾರೆ, ನನ್ನ ಎದೆ ಹಾಲಿನಲ್ಲಿದ್ದಾರೆ ಎಂದು ಅನಿಸಿತು. ರಿಂಬಾ ಮತ್ತು ಫ್ರೈಡ್ ನನ್ನ ಮಗುವನ್ನು ಕಿತ್ತುಕೊಳ್ಳುತ್ತಿದ್ದಾರೇನೋ, ಜಜ್ಜಿ ಹಾಕುತ್ತಿದ್ದಾರೇನೋ ಎಂದು ಅನಿಸಿತು… ಅಮೃತಾ, ಜ್ಞಾನಾರ್ಜನೆ ನನ್ನನ್ನು ಅಣಕಿಸುತ್ತಿತ್ತು ಎಂದು ನಿನಗೆ ಅನಿಸಬಹುದಲ್ಲವೆ? ಆ ದಿನ ಜ್ಞಾನ ನನ್ನ ಸ್ಥಳಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿತೇನೋ. ಹೀಗಿತ್ತು ನನ್ನ ಮಗುವಿನ ಜನನ… ಅದೇನೇ ಇರಲಿ ಅವರ ಚರ್ಚೆ ಮತ್ತಷ್ಟು ಹೆಚ್ಚು ಕಾಲು ಮುಂದುವರಿಯಿತು. ಅಷ್ಟೂ ಕಾಲ ಮೌನ ತನ್ನ ದುರ್ಬಲ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸುತ್ತಿತ್ತು… ನಂತರ ಈ ಜನ ಹೊರಟು ಹೋದರು. ತಮ್ಮ ಚಿಂತನೆಗಳ ಅಮಲೇರಿಸಿಕೊಂಡು… ನಾನು ಒಂದು ಚೀತ್ಕಾರದಂತೆ ಮೆಟ್ಟಲಿಳಿದು ಹೋದೆ. ಆಗ ನನ್ನ ಕೈಯಲ್ಲಿ ಕೇವಲ ಮೂರು ರೂಪಾಯಿ ಇತ್ತು. ನಾನು ನನ್ನ ಗೆಳತಿಯ ಮನೆಗೆ ಹೋದೆ. ಮುನ್ನೂರು ರೂಪಾಯಿ ಸಾಲ ಕೇಳಿದೆ. ಅವಳು ಹಣ ನೀಡಿದಳು. ಆದರೆ ನನ್ನತ್ತ ನೋಡುತ್ತ “ಮೈಯಲ್ಲಿ ಹುಷಾರಿಲ್ಲವೆ?” ಎಂದು ಕೇಳಿದಳು. “ಸ್ವಲ್ಪ ಜ್ವರವಿದೆ. ನಾನು ನಿಲ್ಲುವಂತಿಲ್ಲ. ನನ್ನ ಮಾಲೀಕನಿಗೆ ಹಣ ಕೊಡಬೇಕಿದೆ. ಅವನು ನನಗಾಗಿ ದಾರಿ ನೋಡುತ್ತಿದ್ದಾನೆ”… ನಾನು ಆಸ್ಪತ್ರೆ ತಲುಪಿದೆ. ಬಿಲ್ ಎರಡು ನೂರ ತೊಂಬತ್ತೈದು ಆಗಿ ಬಿಟ್ಟಿತ್ತು. “ದಯವಿಟ್ಟು ನನ್ನ ಮಗುವಿಗೆ ಕಫನ್ ವ್ಯವಸ್ಥೆ ಮಾಡಿ ಎಲ್ಲಾದರೂ ಅದನ್ನು ದಫನ್ ಮಾಡಿರಿ.” ಎಂದು ಡಾಕ್ಟರ್‍ಗೆ ಮನವಿ ಮಾಡಿಕೊಂಡೆ… ನಿಜವಾದ ಗೋರಿ ನನ್ನ ಹೃದಯದಲ್ಲಿ ಆಗಲೇ ನಿರ್ಮಾಣಗೊಂಡಿತ್ತು.– ಆಗ ನಾನು ಜೋರಾಗಿ ಕಿರುಚಿಕೊಂಡೆ. ಮಗುವನ್ನು ಕಳೆದುಕೊಂಡಿದ್ದರಿಂದ ನಾನು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬೇಕೆಂದು ಡಾಕ್ಟರ್ ಭಾವಿಸಿದರು. ಬರಿಗಾಲಲ್ಲೇ ಓಡುತ್ತಾ ಬಸ್ ಹತ್ತಿದೆ. ಕಂಡಕ್ಟರ್ ನನಗೆ ಟಿಕೆಟ್ ಕೊಡುವ ಗೊಡವೆಗೆ ಹೋಗಲಿಲ್ಲ. ಕಾರಣ ನನ್ನ ಬಟ್ಟೆಯೆಲ್ಲ ರಕ್ತಸಿಕ್ತವಾಗಿತ್ತು. ನನ್ನ ಸ್ಟಾಪ್ ಬರುತ್ತಲೇ ಬಸ್ ಇಳಿದೆ. ಐದು ರೂಪಾಯಿ ನೋಟನ್ನು ಕಂಡಕ್ಟರ್ ಕೈಗೆ ತುರಿಕಿ ಹೊರಟು ಹೋದೆ… ಹೋಮ್… ಹೋಮ್… ಸ್ವೀಟ್ ಹೋಮ್… ಈಗ ನಾನು ಮನೆ ತಲುಪಿದೆ. ಹಾಲು ಇನ್ನೂ ಪಾತ್ರೆಯಲ್ಲಿತ್ತು. ಆದರೆ ಅದು ಕಫನ್‍ಗಿಂತಲೂ ಶುಭ್ರವಾಗಿತ್ತು. ನಾನು ಹಾಲ ಮೇಲೆ ಆಣೆ

ಪುಸ್ತಕ ವಿಮರ್ಶೆ

ತಗಿ ನಿನ್ನ ತಂಬೂರಿ ಲೇಖಕಿ-ಚಂದ್ರಪ್ರಭ ದಾವಲ್ ಸಾಬ್ ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. ಭಾರತೀಯರ ಪ್ರಾಚೀನ ಬದುಕು ಸುಖದ ಸುಪತ್ತಿಗೆಯಾಗಿತ್ತು. ಅಲ್ಲಿ ಎಲ್ಲ ಬಗೆಯ ಸಮಾನತೆ ಇತ್ತು.ವೈದಿಕಯುಗದಲ್ಲಿ ಶಾಂತಿ,ಸಮೃದ್ದಿಯಿತ್ತು ಎಂಬ ಹೇಳಿಕೆಗಳು ಡಾಂಭಿಕತೆಯನ್ನು ಮೆರೆಯುತ್ತಿವೆ. ಹಸಿ ಸುಳ್ಳನ್ನು ಪ್ರದರ್ಶಿಸುತ್ತಿವೆ. ವಾಸ್ತವವೆಂದರೆ ರಾಜಪ್ರಭುತ್ವದ ಕಾಲದಲ್ಲಿ ಜನಸಾಮಾನ್ಯರ ಬದುಕು ಅತಿ ಹೆಚ್ಚು ಸಂಕಟ ಮತ್ತು ಶೋಷಣೆಗೆ ಒಳಗಾಗಿತ್ತು ಎಂಬುದನ್ನು ಶರೀಫರ ತತ್ವಪದಗಳಲ್ಲಿ ಕಂಡುಬರುತ್ತದೆ ಎಂಬಂತಹ ವಿಚಾರ ಚಂದ್ರಪ್ರಭಾ ರವರ ಈ ಹೊತ್ತಿಗೆಯಲ್ಲಿ ಕಾಣುತ್ತೇವೆ. ಬೌದ್ಧಿಕ ಬದುಕಿನ ದುಃಖ ದುಮ್ಮಾನಗಳನ್ನು ಧಿಕ್ಕರಿಸಿ ಜನನ ಮರಣ ಭವ ಚಕ್ರದಿಂದ ಪಾರಾಗುವ ಮುಕ್ತಿ ಸಾಧನೆಯನ್ನು ಸಾಧಿಸಬಹುದು. ಲೋಕ ಜೀವನವು ಹಲವು ವ್ಯಾಧಿಗಳಿಂದ ಕೂಡಿದೆ.ಹಸಿವು ನಿದ್ದೆ ನೀರಡಿಕೆ ನೆರೆಹಾವಳಿ ಅತಿವೃಷ್ಟಿ ಅನಾವೃಷ್ಟಿ ಬಡತನ ಅಜ್ಞಾನ ಮೌಢ್ಯ ಮೊದಲಾದವುಗಳು ಇಡುಕಿರಿದು ಭವ ಸಾಗರವು ಘೋರವಾಗಿದೆ.ಈ ಭವ ಸಾಗರದಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಆಧ್ಯಾತ್ಮ ಮಾರ್ಗವೇ ಸಾಧನ. ಜೀವ ಜಗತ್ತು, ಈಶ್ವರ ಮಾಯೆ ಮೊದಲಾದ ತತ್ವಗಳ ಹುಡುಕಾಟ, ನಂತವಾದ ಈ ಬದುಕಿನಿಂದ ಅನಂತವಾದದತ್ತ ಚಲಿಸುವುದೇ ಜೀವನದ ಗುರಿಯಾಗಿದೆ. ಹೀಗೆ ಇನ್ನೂ ಹಲವಾರು ವಿಷಯಗಳನ್ನು ಶ್ರೀಮತಿ.ಚಂದ್ರಪ್ರಭಾ ರವರು “ತಗಿ ನಿನ್ನ ತಂಬೂರಿ” ಎಂಬ ಕಿರುಹೊತ್ತಿಗೆಯಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ.

ಪುಸ್ತಕ ಬಿಡುಗಡೆ

ಸಂಕೋಲೆಗಳ ಕಳಚುತ್ತ ಕೃತಿ-ಸಂಕೋಲೆಗಳಕಳಚುತ್ತ ಕವಿ-ಕು.ಸ.ಮಧುಸೂದನ ಪ್ರಕಾಸಕರು- ಕಾವ್ಯಸ್ಪಂದನ ಪ್ರಕಾಶನ,ಬೆಂಗಳೂರು. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಂಡ ‘ಸಂಕೋಲೆಗಳ ಕಳಚುತ್ತಲ ಕವನಸಂಕಲನ        ಕವಿ ಕು.ಸ.ಮಧುಸೂದನ್ ಅವರ ಕವನಸಂಕಲನ ’ಸಂಕೋಲೆಗಳ ಕಳಚುತ್ತ’ ಕೃತಿಯು 15-03-2020ರ ಬಾನುವಾರ ಲೋಕಾರ್ಪಣೆಗೊಂಡಿತು.    ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ, ಫೇಸ್ ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕವನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.ಈ ಲೈವ್ ಕಾರ್ಯಕ್ರಮದಲ್ಲಿ ಮಾತಾಡಿದ ಕವಿಯಿತ್ರಿ ಅವ್ಯಕ್ತ ಅವರು ಮದುಸೂದನ್ ಅವರ ಕಾವ್ಯ ಜನಪರ ಕಾವ್ಯವಾಗಿದ್ದು, ಅವರಿಂದ ಮತ್ತಷ್ಟುಕೃತಿಗಳು ಮೂಡಿಬರಲೆಂದು ಹಾರೈಸಿದರು. ನಂತರ ಮಾತಾಡಿದ ಕವಿ ಮದುಸೂದನ್ ಅವರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕೆಂದು ಕರೆ ನೀಡಿದರು. ಕೃತಿ ಬಿಡುಗಡೆಯ ಈ ಕಾರ್ಯಕ್ರಮವನ್ನು ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದರು. ಸಂಕೋಲೆಗಳ ಕಳಚುತ್ತಆನ್ ಲೈನ್ ಮೂಲ ಪುಸ್ತಕ ಕೊಳ್ಳುವ ಮಾಹಿತಿಪುಸ್ತಕದ ಬೆಲೆ-150=00 ರೂಪಾಯಿಗಳುIFSC code:CNRBOOO2698A/c:. 1145101036761Bhadravathi RamachariCanara bank,. Rajajinagar 2nd Block. ಮೇಲಿನ ಖಾತೆಗೆ ಹಣ ಹಾಕಿಕೆಳಗಿನ ವಾಟ್ಸಪ್ ನಂಬರಿಗೆ ವಿಳಾಸ ಕಳುಹಿಸಿನಂಬರ್-8861495610ಇಂದ: ಕಾವ್ಯ ಸ್ಪಂದನ ಪ್ರಕಾಶನ,ಬೆಂಗಳೂರು ***********************************

ಪುಸ್ತಕ ವಿಮರ್ಶೆ

ಸಿರ್ವಂತೆ ಕ್ರಾಸ್ ದಿನೇಶ ಹುಲಿಮನೆ ಮಲೆನಾಡಿನ ಬದುಕಿನ ಆಗುಹೋಗುಗಳ ಹಂದರವೇ ಆಗಿದೆ ದಿನೇಶ ಹುಲಿಮನೆಯವರ ‘ಸಿರ್ವಂತೆ ಕ್ರಾಸ್’ ಕಥೆಗಳ ಸಂಕಲನ..! ದಿನೇಶ ಹುಲಿಮನೆಯವರು ಮಲೆನಾಡು ಆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಿಮನೆಯವರು. ಹಾಗಾಗಿ ಇಲ್ಲಿ ಬರುವ ಎಲ್ಲಾ ಕಥೆಗಳೂ ದಿನೇಶ ಹಲಿಮನೆಯವರ ಮಲೆನಾಡಿನ ಕಲರವವಿದ್ದಂತೆ ಭಾಸವಾಗುತ್ತವೆ. ಭಾಸವಾಗುವುದೇನು ಬಂತು ಇದು ನಿಜವೂ ಆಗಿದೆ. ಏಕೆಂದರೆ ಈ ದಿನೇಶ ಹುಲಿಮನೆಯವರ ಈ ‘ಸಿರ್ವಂತೆ ಕ್ರಾಸ್’ ಈ ಕಥೆಗಳ ಸಂಕಲನವು ‘ಸಿರ್ವಂತೆ ಕ್ರಾಸ್‌’ ಕಥೆಯೂ ಸೇರಿದಂತೆ ಒಟ್ಟು ೧೮ ಸಣ್ಣ ಸಣ್ಣ ಕಥೆಗಳನ್ನು ಒಳಗೊಂಡಿದೆ ಮತ್ತು ಮಲೆನಾಡಿನಲ್ಲಿ ನಡೆಯುವ ವಿದ್ಯಮಾನಗಳಾಗಿವೆ ಇಲ್ಲಿಯ ಕಥೆಗಳು. ದಿನೇಶ ಹಲಿಮನೆಯವರು ಮಲೆನಾಡನ್ನು ಬಿಟ್ಟು ಇರಲಾರರು. ಹಾಗಾಗಿಯೇ ಇವರ ಕಥೆಗಳು ಮಲೆನಾಡಿನ ಬದುಕು-ಬವಣೆಗಳನ್ನು ತೆರೆದಿಡುತ್ತವೆ ಇಲ್ಲಿನ ಕಥೆಗಳು. ದಿನೇಶ ಹುಲಿಮನೆಯವರೇ ಹೇಳುವಂತೆ ‘ನನ್ನ ಬದುಕು-ಬರಹ ಮಲೆನಾಡನ್ನು ಬಿಟ್ಟು ಇರಲಾರವು. ಹಾಗಾಗಿಯೇ ಇಲ್ಲಿಯ ಕಥೆಗಳೆಲ್ಲಾ ಮಲೆನಾಡಿನ ಆಗು-ಹೋಗಗಳಾವೆ’ ಎಂದು. ಈ ಕಥೆಗಳ ಸಂಕಲನದಲ್ಲಿಯ ‘ಸಿರ್ವಂತೆ ಕ್ರಾಸ್’ ‘ಮಧ್ಯ ರಾತ್ರಿಯ ಮಾತು’ನಂತಹ ಕಥೆಗಳು ಮಲೆನಾಡಿನ ಬೆಟ್ಟಗುಡ್ಡಗಳನ್ನು ಹತ್ತಿಳಿದು, ಅಂಕು-ಡೊಂಕಾದ ಮಣ್ಣು ರಸ್ತೆಗಳಲ್ಲಿ ಸಂಚರಿಸಿದರೆ ‘ಸ್ಮಾರ್ಟ್ ಜಗತ್ತು’ ‘ಕನ್ನಡದ ಕಂದ’ದಂತಹ ಕೆಲ ಚುಟುಕು ಕಥೆಗಳು ಬೆಂಗಳೂರು ಕಾಂಕ್ರೀಟ್ ಹಾದಿಯಲ್ಲಿ ನುಸುಳುವಂತೆ ಭಾಷವಾಗುತ್ತವೆ. ‘ಅರ್ಧ ಸತ್ಯ!’, ‘ಎಡ-ಬಲಗಳ ನಡುವೆ’, ‘ತಳವಾರ ತಿಮ್ಮ’, ‘ಪ್ರಜಾ ಸಮಾಧಿ’, ‘ಕೃಷ್ಣನ ಪ್ರಣಯ ಪ್ರಸಂಗ’, ‘ಕಿಲಾರ’ದ ಹುಡುಗರು’ ಒಟ್ಟಾರೆ ಎಲ್ಲಾ ಕಥೆಗಳೂ ಓದಿಸಿಕ್ಕೊಂಡು ಹೋಗುವ ಕಥೆಗಳಷ್ಟೇ ಅಲ್ಲ,‌‌ ವಾಸ್ತವ ಬದುಕಿನ ಪಯಣವೇ ಆಗಿವೆ ಎಂದು ನನ್ನ ಅನಿಸಿಕೆ. ‘ಕಡಲ ಮುತ್ತು’ ‘ಕುಮಟಾದ ಹಳೇ ಬಸ್ ನಿಲ್ದಾಣ’ದಂತಹ ಕಥೆಗಳು ಕರಾವಳಿಯ ಬದುಕನ್ನು ಪರಿಚಯಿಸುತ್ತವೆ. ಇನ್ನುಳಿದ ಕಥೆಗಳು ಮನುಷ್ಯ ಸಹಜವಾದ ಪ್ರಾಕೃತಿಕ ಆಶೆ-ಅತಿಯಾಶೆ, ಪ್ರೀತಿ-ಪ್ರಣಯ, ಜೀವನ-ಜಂಜಾಟ, ಹಲವಾರು ಬಗೆಯ ಎಡರು-ತೊಡರುಗಳ ಮೇಲೆ ಇಲ್ಲಿಯ ಕಥೆಗಳನ್ನು ಹೆಣದಿದ್ದಾರೆ ದಿನೇಶ ಹಲಿಮನೆಯವರು. ನಂಬಿಕೆಯೇ ಜೀವನಾಧಾರ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡುವುದೇ ಜೀವನ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ವಾಣಿಯಂತೆ ಜೀವನದಲ್ಲಿ ಬರುವ ಕೆಲವು ಸಣ್ಣಪುಟ್ಟ ವಿಚಾರಗಳೇ ಇಲ್ಲಿಯ ಕಥಾವಸ್ತು ಅಲ್ಲದೇ ಇಲ್ಲಿಯ ಕಥೆಗಳು ನನ್ನ ದೃಷ್ಟಿಯಲ್ಲಿ ಕೇವಲ ಕಾಲ್ಪನಿಕವಲ್ಲ. ವಾಸ್ತವವೂ ಆದ ಬದುಕಿನ ಹಲವಾರು ಮಜಲುಗಳು. ಕಥೆಗಳಲ್ಲಿ ಹೆಚ್ಚು, ಹೆಚ್ಚು ವಿಷಯಗಳನ್ನು ತರಲಾಗದಿದ್ದರೂ ದಿನನಿತ್ಯ ನಡೆಯುವ ಬದುಕಿನ ಘಟಕಗಳ ಹಂದರವೇ ಆಗಿದೆ ಇಲ್ಲಿಯ ಕಥೆಗಳ ವಸ್ತು. ಹೀಗೆಯೇ ಬರುವ ಇಲ್ಲಿನ ಕಥೆಗಳು ವಿಶಿಷ್ಟ ಶೈಲಿಯದ್ದಾಗಿವೆ. ಇಲ್ಲಿಯ ಎಲ್ಲಾ ಕಥೆಗಳು ಓದುಗರನ್ನು ಹಿಡಿದಿಡುತ್ತವೆ. ದಿನೇಶ ಹಲಿಮನೆಯವರು ಹವ್ಯಾಸಿ ಲೇಖಕರಾಗಿ ಕಳೆದ ನಾಲ್ಕೈದು ವರ್ಷಗಳಲ್ಲಿ ಬರೆದ ಕಥೆಗಳು ಇವು. ಒಂದೆರಡು ನೀಳ್ಗತೆಯೂ ಸೇರಿದಂತೆ ಸಣ್ಣ-ಪುಟ್ಟ ಕಥೆಗಳೂ ಸೇರಿದಂತೆ ಒಟ್ಟು ಹದಿನೆಂಟು ಕಥೆಗಳು ಇಲ್ಲಿವೆ. ಇದು ಈ ದಿನೇಶ ಹಲಿಮನೆಯವರ ಮೊದಲ ಕಥೆಗಳ ಸಂಕಲನವಾಗಿದೆ. ಮೊದಲ ಕಥಾ ಸಂಕಲನ ಮೂಲಕವೇ ಇವರು ಒಬ್ಬ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಇವರಿಂದ ಇನ್ನೂ ಇಂತಹ ಕಥಾ ಬರಹವನ್ನು ನಿರೀಕ್ಷಿಸಬಹುದು. ಅಂಕೋಲಾದ ಶಿಕ್ಷಕಿಯಾದ ಶುಭಾ ಪಟಗಾರರವರ ಬೆನ್ನುಡಿ ಇದೆ. ********* ‌ —ಕೆ.ಶಿವು.ಲಕ್ಕಣ್ಣವರ

Back To Top