ಪುಸ್ತಕ ಪರಿಚಯ

ಕೃತಿ-ಗುಣ (ಕಾದಂಬರಿ)

ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ

ಛಂದ ಪುಸ್ತಕ

ಡಾ.ಅಜಿತ್ ಹರೀಶಿ

ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ.

ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ ಕಥಾನಕವೇ ‘ ಗುಣ ‘ ಎನ್ನಬಹುದು.

ಇದು ವಿದೇಶಿ ನೆಲದಲ್ಲಿ ಚಲಿಸುವ ಘಟನಾವಳಿಗಳ ನೋಟವಾದರೂ ಇದರ ಕೇಂದ್ರ ಭಾರತೀಯ ಮನಸ್ಥಿತಿಯೇ ಆಗಿದೆ. ಗೌತಮ ಮತ್ತು ಭಾರತಿ ಎಂಬ ವೈದ್ಯರ ಬದುಕಿನ ಕಥೆಯನ್ನು ಹೇಳುತ್ತಾ ವಾಸ್ತವದ ಮೇಲೆ ಬೆಳಕನ್ನು ಚೆಲ್ಲುತ್ತದೆ.

ಅಮಿಗ್ಡಲ್, ಥ್ಯಾಲಮಸ್, ಹೈಪೊಥ್ಯಾಲಮಸ್ ಸೇರಿ – ‘ಅಮಿಗ್ಡಲ ಸರ್ಕ್ಯೂಟ್’ ಆಗುತ್ತದೆ. ಈ ಸರ್ಕ್ಯೂಟ್ ಬೇಗ ಫೈರ್ ಆಗುತ್ತದೆ. ಇದರಿಂದ ಸಿಟ್ಟು ಬಲು ಬೇಗ ಬರುತ್ತದೆ.

ಅದೇ ಹೈಪೊಥ್ಯಾಲಮಸ್, ಥ್ಯಾಲಮಸ್ ಜೊತೆ ಪ್ರಿಫ್ರಂಟಲ್ ಕಾರ್ಟೆಕ್ಸ್ ಸೇರಿದರೆ ‘ ಪ್ರಿಫ್ರಂಟಲ್ ಸರ್ಕ್ಯೂಟ್’ ಆಗುತ್ತದೆ. ಇದು ಶಾಂತಿ, ಪ್ರೀತಿ ಮತ್ತು ತಾಳ್ಮೆಯ ಸರ್ಕ್ಯೂಟ್ ‌.

ಸೋ…. ಪ್ರಿಫ್ರಂಟಲ್ ಸರ್ಕ್ಯೂಟ್ ಸ್ಟಿಮ್ಯುಲೇಟ್ ಮಾಡಿಕೊಳ್ಳೋಣ. ಇದೇ ‘ ಮೈಂಡ್ ಫುಲ್ ಅವೇರ್ ನೆಸ್’ ಎಂಬಂತಹ ಶಕ್ತಿಯುತ ವೈದ್ಯಕೀಯ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಗೌತಮ ಮತ್ತು ಮಲಿಸ್ಸಾ ಎಂಬ ನರ್ಸ್ ಇರುವಾಗ ನಡೆಯುವ ಪೋಲಿ ಸಾಲುಗಳೂ ಇವೆ.

ಗೌತಮ ಮತ್ತು ಭಾರತಿ ಅವರ ಮಗಳು ಕ್ಷಮಾಳ ಪಾತ್ರ ಸಶಕ್ತವಾಗಿದ್ದು ಗಮನ ಸೆಳೆಯುತ್ತದೆ. ಸ್ಟೀವ್ ವಾರೆನ್, ಕೀರ್ತಿ ಎಂಬ ಗೇ ಗಳ ಸಮಸ್ಯೆ ಮತ್ತು ಬದುಕು ಕಾಡುತ್ತದೆ. ಗುಂಡಪ್ಪ ಮತ್ತು ನರಸಿಂಹರಾಯರು ಈಗ ಬೆಂಗಳೂರಿನಲ್ಲಿ ಅಥವಾ ನಮ್ಮೂರಿನಲ್ಲಿ ಸಿಗಬಹುದು. ಅಂತೆಯೇ ಶಕುಂತಳಾ ಬಾಯಿ ಎಂಬ ಟಿಪಿಕಲ್ ವುಮನ್ ಕೂಡ.

ಜನರೇಷನ್ ಗ್ಯಾಪ್, ಇಂದಿನ ತಲೆಮಾರು ಬಳಸುವ ಪದಪುಂಜ ಗೌತಮ ಮತ್ತು ಭಾರತಿ ಎಂಬ ಪಾಲಕರನ್ನು ಮಾತ್ರವಲ್ಲ, ನಮ್ಮನ್ನೂ ಯೋಚನೆಗೀಡುಮಾಡುತ್ತದೆ. ಫ್ರೆಂಡ್, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ವ್ಯತ್ಯಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ.

ಹೀಗೆ ವಿವಿಧ ಆಯಾಮಗಳನ್ನು ಹೇಳುತ್ತಾ ಕಥೆ ತೆರೆದುಕೊಳ್ಳುವ ಪರಿ ಅನನ್ಯವಾದುದು. ಒಂದು ಉತ್ತಮ ಕಾದಂಬರಿ ‘ಗುಣ’. ಗುಣಮಟ್ಟದ ಓದಿಗಾಗಿ ಖಂಡಿತಾ ಈ ಕೃತಿಯನ್ನು ಓದಿ.


Leave a Reply

Back To Top