ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರಕವಿತೆ “ಹೊನ್ನೆರಳು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಹೊನ್ನೆರಳು” ಹುಣ್ಣಿಮೆಯ ಹೊನ್ನೆರಳುಸಾಗರ ಮೈಮೇಲೆ ಹರಿದು,ಅಲೆಗಳ ಮೌನ ನಿದ್ರೆಯಲಿಚಂದ್ರ ಕನಸಾಗಿ ಕರಗಿತು. ನೀರಿನ ತುಟಿಯ ನಡುಕದಲಿಬೆಳ್ಳಿಯ ತೇವ ಮೊಳಗಿತು,ದೂರದ ವಿರಹ ಉಪ್ಪಾಗಿಎದೆಯ ಆಳದಲಿ ನೆಲಸಿತು. ನೀಲಿಯ ಶಂಖ ಊದಿದ ಗಾಳಿರಾತ್ರಿಯ ಕೂದಲು ಸವರಿತು,ಅಲೆಗಳ ರಕ್ತನಾಳದಲಿಮೌನ ಬೆಳಕು ಹರಿಯಿತು. ತೀರ ಮುಟ್ಟದ ಅಲೆಗಳಲಿಹಂಬಲ ಹಕ್ಕಿ ತೇಲಿತು,ನೀರೊಳ ಮುರಿದ ಚಂದ್ರಬಿಂಬಪ್ರೀತಿಯ ಗಾಯವಾಯಿತು. ಬೆಳದಿಂಗಳ ಮೃದುವೆರಳುಅಲೆಗಳ ಬೆನ್ನಲಿ ಜಾರಿತು,ಸಾಗರದ ಕತ್ತಲ ಗರ್ಭದಲಿಮೌನ ಕಮಲ ಅರಳಿತು. ನೀ ಇಲ್ಲದ ಕಪ್ಪು ರಾತ್ರಿಸಾಗರ ಶಿಲೆಯಾಗಿ ನಿಂತು,ನೀ ಬಂದ ಬೆಳ್ಳಿ ಹುಣ್ಣಿಮೆಉಪ್ಪಿನ ದೀಪವಾಗಿ ಹೊತ್ತು. ಮರಳ ತೀರದ ಮಡಿಲೊಳಗೆಹೆಜ್ಜೆಯ ದಾಹ ಮಲಗಿತ್ತು,ಅಲೆಗಳ ಮರುಳು ಕರೆಯೊಳಗೆ“ಬರುವೆಯಾ…” ತೇವ ಉಳಿಯಿತು. ಆಕಾಶ ತಗ್ಗಿ ಮುತ್ತಿಟ್ಟಸಾಗರದ ಉಪ್ಪು ನೆತ್ತಿಗೆ,ಪ್ರಕೃತಿ ಬೆಳ್ಳಿ ಮಸಿಯಲಿಪ್ರೀತಿ ಬರೆದು ಹೋಯ್ತು ರಾತ್ರಿಗೆ. ಹುಣ್ಣಿಮೆ ದೂರ ಸರಿದರೂಚಂದ್ರಗಂಧ ಉಸಿರಾಯಿತು,ಸಾಗರದ ನೀಲಿ ಎದೆಯೊಳಗೆಮೌನ ಬೆಳಕು ತೇಲಿತು. ಪ್ರೀತಿಒಮ್ಮೆ ತಾಕಿದ ಚಂದ್ರತಂಪು,ಜೀವಪೂರ್ತಿ ಅಲೆಯುವ ಉಪ್ಪು. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರಕವಿತೆ “ಹೊನ್ನೆರಳು” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-25 ಅರ್ಜುನ ಉವಾಚ ವಿಸ್ವನಾಥ ಎನ್‌ ನೇರಳೆಕಟ್ಟೆ ಸಮರಥ ಮಹಾರಥರಿಗೆ ಸೋಲುಣಿಸಿದ ಹಂಸಧ್ವಜಸುತ ಸುರಥ ರಥವೇರಿ ಕುಳಿತಾಗಲೇ ಸುರಥನಲ್ಲಿದ್ದದ್ದು ಅತಿರೇಕದ ರೋಷ. ಸಹೋದರ ಸುಧನ್ವನ ರಣಮರಣಕ್ಕೆ ಕಾರಣರಾದವರ ಮರಣವನ್ನು ಕಾಣದೆ ತೆರಳಲಾರೆ ಈ ರಣರಂಗದಿಂದ ಎಂದು ನಿಶ್ಚಯಿಸಿಕೊಂಡೇ ಬಂದಂತಿತ್ತು ಅವನ ನಿಲುವು. “ಇನ್ನು ಆಯುಷ್ಯ ನಿನಗಿಲ್ಲವೋ ಅರ್ಜುನ. ಮೇಧಿನಿಯನ್ನಾಳ್ವ ಋಣವದು ನಿನ್ನಿಂದ ದೂರವಾಯಿತು” ಎಂದು ಆರ್ಭಟಿಸಿದ ನನ್ನೆದುರು ನಿಂತು.ಅವನ ರಣೋತ್ಸಾಹವನ್ನು ಕಂಡ ಕೃಷ್ಣ ನನ್ನಲ್ಲಿ “ಭೂಮಿಯಲ್ಲಿರುವ ಸಕಲ ಪುಣ್ಯಕಾರ್ಯಗಳನ್ನು ಕೈಗೊಂಡವನಿವನು. ಒಂದೂ ಪಾಪಕಾರ್ಯಗಳನ್ನು ಎಸಗಿದವನಲ್ಲ. ಇವನನ್ನು ಗೆಲ್ಲುವುದು ಅತಿಕಠಿಣ ಕಾರ್ಯ. ಈಗಲೇ ನಾವು ಇವನ ಜೊತೆ ಯುದ್ಧಕ್ಕಿಳಿದರೆ ಸೋಲಾಗುವುದು ಖಚಿತ. ಮೊದಲು ಪ್ರದ್ಯುಮ್ನ, ಸಾತ್ಯಕಿ, ಸಾಂಬ, ಅನುಸಾಲ್ವ, ಕೃತವರ್ಮ, ಯೌವನಾಶ್ವ, ವೃಷಕೇತು, ನೀಲಧ್ವಜರನ್ನು ಇವನೆದುರು ಕಳಿಸು. ಅವರು ಯುದ್ಧ ಮಾಡಲಿ” ಎಂದು ರಣೋಪಾಯವನ್ನು ಅರುಹಿದ.ಹಾಗೆಯೇ ಮಾಡಿದೆ. ಸಹೋದರನ ಮರಣದಿಂದ ಕೆರಳಿ ಕೆಂಡವಾಗಿದ್ದ ಸುರಥನ ಮುಂದೆ ನಮ್ಮವರ ಶೌರ್ಯ ಸಾಹಸಗಳು ಸಾಗಲಿಲ್ಲ.ಪ್ರದ್ಯುಮ್ನನನ್ನು ಪುರುಸೊತ್ತಿನಿಂದ ಪತನಗೊಳಿಸಿದ. ಸಾತ್ಯಕಿಗೆ ಸುಲಭವಾಗಿಯೇ ಸೋಲುಣಿಸಿದ. ಕೃತವರ್ಮ ಕ್ರೋಧವದು ಕದನರಂಗದಲ್ಲಿ ಕರಹಿಡಿಯಲಿಲ್ಲ. ಸಾಂಬ ಸರಳವಾಗಿಯೇ ಸೋತುಹೋದ. ಅನುಸಾಲ್ವ ಅನುಕ್ರಮದಿ ಅದಃಪತನವಾದ. ಯೌವನಾಶ್ವ ಯುದ್ಧದಲ್ಲಿ ಯಶಗಾಣಲಿಲ್ಲ. ನೀಲಧ್ವಜ ನೀತಿಯದು ನೆರವೀಯಲಿಲ್ಲ. ಕರ್ಣಸುತ ಕಡುಗೋಪವದು ಕಾರ್ಯವೆಸಗಲಿಲ್ಲ.ಸಂಪೂರ್ಣ ಯಾದವ ಸೇನೆ ಸುರಥನೆದುರು ಸೋಲುಕಂಡಿತು. ಚತುರಂಗ ಸೈನ್ಯವನ್ನು ಸರಳವಾಗಿ ಸವರಿಬಿಟ್ಟ ಸುರಥ. ತನ್ನ ಒಂದೇ ರಥವನ್ನು ಮುಂದಿಟ್ಟುಕೊಂಡು ಸಮರಥ ಮಹಾರಥರನ್ನು ಹೊಡೆದುರುಳಿಸಿದ.ಕಾಲವುರುಳಿದಂತೆ ಅವನ ಶಕ್ತಿಯದು ಹೆಚ್ಚುತ್ತಲೇ ಹೋಯಿತು. ಸರೋವರದ ನೀರನ್ನು ಕಲಕಿ ಮೆರೆಯುವ ಮದ್ದಾನೆಯಂತಿತ್ತು ಅವನ ವರ್ತನೆ. ಅವನ ಬಾಣದ ಹೊಡೆತಕ್ಕೆ ಸಕಲ ಸೇನೆ ನೊಂದಿತು. ಸರ್ವ ಸೈನಿಕರ ಶರೀರದಲ್ಲಿ ಗಾಯದ ಗುರುತುಗಳೆದ್ದವು. ಯುದ್ಧರಂಗವನ್ನು ಬಿಟ್ಟು ಬೀದಿ ಬೀದಿಗಳಲ್ಲಿ ಸೈನಿಕರು ಓಡಿಹೋಗುವಂತೆ ಅವರನ್ನು ಬೆದರಿಸಿದ ಸುರಥ. ಅದೆಂತೋ ಕಷ್ಟಪಟ್ಟು ಸೈನಿಕರನ್ನು ಕರೆತಂದು ಮತ್ತೆ ಯುದ್ಧರಂಗದಲ್ಲಿ ನಿಲ್ಲಿಸಿದರೆ ತನ್ನ ಬಾಣದಿಂದ ಅವರ ಪ್ರಾಣವನ್ನು ತಿಂದುಮುಗಿಸಿದ.ಆ ಬಳಿಕ ಅವನ ನಯನಗಳು ಹುಡುಕಿದ್ದು ನನ್ನನ್ನು; ನನ್ನ ಜೊತೆಗೆ ಘನಶಕ್ತಿಯಾಗಿದ್ದ ಕಮಲನಯನನನ್ನು. ಅವನು ನಮ್ಮ ಸೈನಿಕರನ್ನು ಕೊಂದದ್ದಷ್ಟೇ ಅಲ್ಲ, ಉಳಿದಿದ್ದ ಸೈನಿಕರ ಎದೆಯೊಳಗೆ ಭೀತಿಛಾಯೆಯನ್ನು ಮೂಡಿಸಿದ್ದ. ನಮ್ಮ ಸೈನ್ಯವನ್ನು ಸರ್ವನಾಶ ಮಾಡುವುದಕ್ಕೆ ಸನ್ನದ್ಧನಾದ ಅವನ ಬಗೆಗೆ ನನಗೆ ಕ್ರೋಧ ಉಕ್ಕಿಬಂತು. ನನ್ನನ್ನು ಹುಡುಕುತ್ತಿದ್ದ ಅವನೆದುರು ನಾನೇ ಹೋಗಿನಿಂತೆ. ರೋಷಾವೇಶದಿಂದ ನನ್ನ ಕೈಯ್ಯಲ್ಲಿದ್ದ ಬಿಲ್ಲು ಅದುರಿತು.ನಾನು ಇದುವರೆಗೂ ಅವನೆದುರು ಹೋಗಿನಿಂತು ಶೌರ್ಯ ತೋರದೇ ಇದ್ದುದಕ್ಕೆ ಕೃಷ್ಣನಿತ್ತಿದ್ದ ಸಲಹೆ ಒಂದು ಕಾರಣವಾದರೆ, ಇನ್ನೊಂದು ಕಾರಣವೂ ಇತ್ತು. ಅದನ್ನೇ ಅವನಲ್ಲಿ ಹೇಳಿದೆ. “ನಿನ್ನ ಸೋದರನಾದ ಆ ಸುಧನ್ವ ಅಳಿದ ದುಃಖವದು ನಿನ್ನಲ್ಲಿದೆ ಎನ್ನುವುದರ ಅರಿವು ನನಗಿದೆ. ಅದಕ್ಕಾಗಿಯೇ ನಾನು ನಿನ್ನ ಮೇಲೆ ದಯೆದೋರಿ ಯುದ್ಧರಂಗಕ್ಕಿಳಿಯುವ ಮನಸ್ಸು ಮಾಡಲಿಲ್ಲ. ಆದರೆ ನೀನು ನನ್ನ ಕರುಣಾಭರಿತ ಚಿತ್ತವನ್ನು ಭಯಪೂರಿತ ಮನಸ್ಸಾಗಿ ಪರಿಭಾವಿಸಿರುವಂತಿದೆ ನಿನ್ನ ವರ್ತನೆ. ಗಟ್ಟಿಯಿದೆಯೆಂದು ತಲೆಯನ್ನು ಬಂಡೆಗೆ ಹೊಡೆದುಕೊಳ್ಳುವ ಮನಸ್ಸು ಮಾಡಿರುವೆ. ನನ್ನೆದುರು ಹೋರಾಡಿದ ಮಾತ್ರಕ್ಕೆ ಗೆಲುವು ನಿನ್ನದಾಗುತ್ತದೆಂಬ ಭ್ರಮೆಯಲ್ಲಿರುವೆ. ಅದು ಸಾಧ್ಯವಿಲ್ಲ. ಕುದುರೆಯನ್ನು ಬಿಟ್ಟುಬಿಡು. ಧರ್ಮರಾಯನ ಸಾರ್ವಭೌಮತ್ವವನ್ನು ಒಪ್ಪು. ಅದುವೇ ನಿನಗೆ ಒಳ್ಳೆಯದು” ಎಂದೆ.ಕರುಣೆಯ ಕಣ್ಣೋಟವದು ಅವನಿಗೆ ಬೇಕಿರಲಿಲ್ಲ. ಅದು ನಿಜವೀರನ ನಿಲುವು. ಸ್ವಾಭಿಮಾನ ಇರುವ ವ್ಯಕ್ತಿ ದೈನ್ಯಾವಸ್ಥೆಯಲ್ಲಿ ಇನ್ನೊಬ್ಬರೆದುರು ಕಾಣಿಸಲಾರ. ಇನ್ನೊಬ್ಬರ ದೈನ್ಯತೆ ಬೆರೆತ ದೃಷ್ಟಿಯನ್ನು ಸಹಿಸಲಾರ. ಸಹೋದರ ಸುಧನ್ವನ ಸಾವನ್ನು ಅಸಾಮಾನ್ಯ ಬಗೆಯಲ್ಲಿ ವರ್ಣಿಸುವ ಮಾತುಗಳನ್ನಾಡಿದ. “ನಿನ್ನಂತಹ ವೀರರು, ಕೃಷ್ಣನಂತಹ ದೇವತೆಗಳೂ ಸಹ ನನ್ನ ಸಹೋದರನ ಸಾಮರ್ಥ್ಯಕ್ಕೆ ಸರಿಹೊಂದುವವರಲ್ಲ. ನಿನ್ನ ಕ್ರೋಧದ ಫಲವಾಗಿ ಮಡಿದವನು ಅವನಲ್ಲ. ಆ ಶ್ರೀಕೃಷ್ಣ ದಯಪಾಲಿಸಿದ ಪುಣ್ಯವದು ನಿನ್ನ ಬಾಣವನ್ನು ಸೇರಲು ಹರಿಪಾದ ಸೇರಿದವನು ಆ ಸುಧನ್ವ. ಇದರಲ್ಲಿ ನಿನ್ನ ಶಕ್ತಿಯಾದರೂ ಏನಿದೆ! ಸುಧನ್ವನ ಸೋಲಾದರೂ ಎಲ್ಲಿದೆ! ಮುಕ್ತಿ ಪಡೆದಿದ್ದಾನೆ ನನ್ನ ಪ್ರಿಯ ಸಹೋದರ” ಎಂದು ಸೋದರ ಸುಧನ್ವನ ಬಗೆಗೆ ಅತಿಮೆಚ್ಚುಗೆಯ ಮಾತನ್ನಾಡಿ ನನ್ನ ಗೆಲುವನ್ನು ಹೀಗಳೆದ ಸುರಥ. “ಕುದುರೆಯನ್ನು ಬಿಟ್ಟು ಕಳುಹಿಸುವುದಕ್ಕೆ ನಾವೇನೂ ಅರಣ್ಯವಾಸಿಗಳಲ್ಲ” ಎಂದು ಗೂಢಾರ್ಥದ ಮಾತನ್ನು ನುಡಿದು ನನ್ನನ್ನು ಚುಚ್ಚಿದ.ಘನಘೋರವಾದ ಕದನವೇ ಪ್ರಾರಂಭವಾಯಿತು. ಶ್ರೀಕೃಷ್ಣನನ್ನೂ ಗಾಯಕ್ಕೀಡುಮಾಡುವ ಘನಗಂಭೀರತೆ ತೋರಿದ ಸುರಥ. ನನ್ನನ್ನೂ ಘಾಸಿಗೊಳಿಸಿದ. ಇನ್ನಿವನನ್ನು ಉಳಿಸಬಾರದು ಎಂಬ ಛಲ ಮೂಡಿತು ನನ್ನಲ್ಲಿ. ಕೃಷ್ಣವಾಣಿಯೂ ಅದೇ ತೆರದಲ್ಲಿತ್ತು. ಬಲವಾದ ಬಾಣದಿಂದ ಅವನ ತೋಳನ್ನು ಕತ್ತರಿಸಿದೆ. ಒಂದು ಕೈಯ್ಯನ್ನು ಕಳೆದುಕೊಂಡವನು ನನ್ನ ರಥದೆಡೆಗೇ ಓಡಿಬರತೊಡಗಿದ. ಇನ್ನೊಂದು ತೋಳನ್ನೂ ಕತ್ತರಿಸುವಂತೆ ಕೃಷ್ಣ ಹುರಿದುಂಬಿಸಿದ. ಹಾಗೆಯೇ ಮಾಡಿದೆ. ಎರಡೂ ಕರಗಳಿಲ್ಲದವನಾದ ಕರಕೌಶಲಿ ಸುರಥ. ಅದೇ ಸ್ಥಿತಿಯಲ್ಲಿ ನನ್ನನ್ನು ಕಾಲಿನಿಂದ ಒದೆಯುವುದಾಗಿ ಬೊಬ್ಬೆ ಹೊಡೆಯುತ್ತಾ ಓಡಿ ಬರತೊಡಗಿದ. ಬಾಣ ಪ್ರಯೋಗಿಸಿದೆ. ಅವನ ಎರಡೂ ತೊಡೆಗಳು ಮುರಿದವು. ನೆಲದೆಡೆಗೆ ಮುಖಮಾಡಿ ಸಂಪೂರ್ಣವಾಗಿ ಕುಸಿದುಬಿದ್ದ. ಆಗಲೂ ಅವನ ಛಲ ತಣಿಯಲಿಲ್ಲ. ಹಾಗೆ ತೆವಳುತ್ತಲೇ ನನ್ನೆಡೆಗೆ ಬರತೊಡಗಿದ. ಆಗ ಅವನ ಶಿರದ ಕಡೆಗೆ ಬಾಣಬಿಟ್ಟೆ. ಶಿರವದು ದೇಹದಿಂದ ಬೇರೆಯಾಗಿ ಬಂದು ಕೃಷ್ಣಪಾದವನ್ನು ಸೇರಿತು.ಅದನ್ನು ಎತ್ತಿಕೊಂಡ ಕೃಷ್ಣ ಕರುಣೆ ನೋಟವನ್ನು ಹರಿಸಿದ. ಆಕಾಶಮಾರ್ಗದಲ್ಲಿ ಸಂಚರಿಸುತ್ತಿದ್ದ ಗರುಡನನ್ನು ಕರೆದ. “ಇದನ್ನು ಪ್ರಯಾಗಕ್ಕೆ ತಲುಪಿಸುವ ಹೊಣೆ ನಿನ್ನದು” ಎಂದು ಹೇಳಿ ಆ ಶಿರವನ್ನಿತ್ತ. ಹರಿಯಾಜ್ಞೆಗೆ ಅನುಸಾರವಾಗಿ ಅದನ್ನು ಕೊಂಡೊಯ್ಯುತ್ತಿದ್ದ ಗರುಡ ನಡೆಯನ್ನು ಕಂಡವನು ಆ ಶಿವ. ತನಗೆ ಸಲ್ಲಬೇಕಾದ ಶಿರವಿದು ಎನಿಸಿತು ಅವನಿಗೆ. ಗರುಡನಿಂದ ಶಿರವನ್ನು ಪಡೆದುಕೊಂಡು ಬರುವಂತೆ ತಿಳಿಸಿ ನಂದಿಯನ್ನು ಕಳುಹಿಸಿಕೊಟ್ಟ… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “

ಕಾವ್ಯ ಸಂಗಾತಿ ಸವಿತಾ ದೇಶಮುಖ “ಮನಸ್ಸೆಂಬ ಬೆಳಕೆಂಡಿ “ ಮನಸ್ಸೆಂಬ ಬೆಳಕಿಂಡಿಯ ಮುಚ್ಚಳವತೆರೆದು ನೋಡು ಇಡೀ ಬ್ರಹ್ಮಾಂಡವಪರಮ ಗೂಡು ನಿನ್ನೊಳಗೆ…. !!೧!! ಇಡಿ ಭೂಲೋಕ ಹುದುಗಿ ಇರುತಿರೆ ನಿನ್ನೊಳುನೀನೇ ದಾರಿ ದೀಪ ಕತ್ತಲೆಯ ಅಲೆಯೊಳುಹತ್ತಿದ ಉರಿಗೆ ತಣ್ಣೇ ಎಳಲು ನೀನು !!೨!! ಒಂದೆಡೆ ನಗಿಸುವ ಮತ್ತೆ ಅಳಿಸುವಕುಣಿಸುವ ಮೆರೆಸುವ ಮರಗಿಸುವಸೂತ್ರಧಾರಿ ತುಂಟ ನಡೆಯುವ ನಿನ್ನದು!!೩!! ಮನಸೆಂಬ ದೀಪದೊಲವಿನಲ್ಲಿಹೊಸ ಹೊಸ ಕನಸಿನಾಗರದಲ್ಲಿನೂರೊಂದು ಕಥೆಗಳ ಸರಣಿ ಕಂತು.. !!೪!! ಅರಿಯದ ಕಾರ್ಪಣ್ಯ ಸಂಕಟಗಳ ದಾಳಿಬೀಸಲಿ ,ಆರದು ನಿನ್ನೊಳಗಿನ -ಗಾಳಿನಂದಿಸದು ಸ್ತ್ರೈರ್ಯವನು …!!೫!! ನಿಟ್ಟುಸಿರಿನ ಕ್ಷಣದಲೂ ಧೈರ್ಯದಬೆಳಕಿನ ಹಂದರದ ಹಚ್ಚಡ ಹಾಸಿದನೀನೇ ಸಮಾಧಾನದ ಅದಿರು ….!!೬!! ದಣಿದ ನನ್ನ ಉಸಿರಿಗೆ- ನಿನ್ನ ಮೃದುತಡಕಾಟ ಶಾಂತವಾಗಿಸುವದುನನ್ನ ಮುಂದಲ ಹೃದಯ ತಂತಿ ಮಿಟಿ!!೭!!  ನನಗರಿವಿಲ್ಲದೆ ತಿಳಿದು ತಿಳಿಯದೇಸರಿ ಹೊಂದಿಸಿ ಹೃದಯ ರಾಗ ತಾಳಮೇಳಯಿಸುವೆ ನಿನ್ನ ಬೆಳಕಿನೊಳು!!೮!! ಮನದಾಳದಲ್ಲಿ ಉಕ್ಕುತ್ತಿರುವ ಭಾವಗಳಉದ್ವೇಗಕ್ಕೆ ನೀನಾಗುವೆ ಬೆಳಕಿಂಡಿಅಳಿವು  ಅಳಿಸಿ ಶಾಂತಿ ಅಜರಾಮರ.,!!೯!!  ಅಮರ ಜ್ಯೋತಿ ಮನಸ್ಸೇ ಪರಮ ಜ್ಯೋತಿ ಬೆಳಗುವ ಬೆಳಕಂಡಿ…. ನೀನೇ..!!!! ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಮನಸ್ಸೆಂಬ ಬೆಳಕೆಂಡಿ “ Read Post »

ಇತರೆ

ಕವಿತಾ ಶ್ರೀನಿವಾಸ್ ನಾಯಕ್ ಅವರ “ನಿರ್ಗಮಿಸುವ ಮುನ್ನ….”

ಲಹರಿ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ “ನಿರ್ಗಮಿಸುವ ಮುನ್ನ….” ​ನಾನು ಮಲಗುವ ಕೋಣೆಯಲ್ಲಿ ವಿಶಾಲವಾದ ಗಾಜಿನ ಬಾಲ್ಕನಿ ಇದೆ. ಬಾಲ್ಕನಿಯಿಂದ ಪ್ರತಿದಿನ ಉದಯಿಸುವ ಸೂರ್ಯನನ್ನು ನೋಡಲು ಸಾಧ್ಯವಾಗದಿದ್ದರೂ, ದಿನದ ಕೊನೆಯಲ್ಲಿ ಮೌನವಾಗಿ ನಿರ್ಗಮಿಸುವ ಸೂರ್ಯ ಮಾತ್ರ ಅದ್ಭುತವಾಗಿ ಕಾಣುತ್ತಾನೆ.​ಆದರೆ, ಆ ಸುಂದರ ಸಂಜೆಯ ಕೆಂದಾವರೆ ಬಣ್ಣವನ್ನು ಕಣ್ತುಂಬಿಕೊಳ್ಳುವ ಮೊದಲು, ಸೂರ್ಯನ ತೀಕ್ಷ್ಣವಾದ ಕಿರಣಗಳ ಶಾಖವನ್ನು ಸಹಿಸಿಕೊಳ್ಳಲೇಬೇಕು. ಆ ತಾಪ ಮೈಗೆ ತಾಗಿದಾಗ ದೇಹಕ್ಕೆ ಕೊಂಚ ಘಾಸಿಯಾದ್ದದಂತು ನಿಜ. ಆದರೆ ಆ ಸುಡುವ ಹೊತ್ತನ್ನು ತಾಳ್ಮೆಯಿಂದ ಕಳೆದರೆ ಮಾತ್ರ, ಆನಂತರ ಬರುವ ತಂಪಾದ, ಪ್ರಶಾಂತವಾದ ಸೂರ್ಯಾಸ್ತದ ಕ್ಷಣಗಳನ್ನು ಅನುಭವಿಸಲು ಸಾಧ್ಯ.​ನಮ್ಮ ಬದುಕು ಕೂಡ ಹೀಗೆಯೇ ಅಲ್ಲವೇ? ನೆಮ್ಮದಿಯ ನಾಳೆಗಳಿಗಾಗಿ ಇಂದಿನ ಸುಡುವ ಕಷ್ಟಗಳನ್ನು ನಾವು ಸಹಿಸಲೇಬೇಕು. ಆ ತೀಕ್ಷ್ಣವಾದ ಹೋರಾಟದ ನಂತರ ಸಿಗುವ ಸುಖವೇ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದದ್ದನ್ನು ಪಡೆಯಲು ಸ್ವಲ್ಪ ನೋವನ್ನು ಅನುಭವಿಸುವುದು ಪ್ರಕೃತಿಯ ಅಲಿಖಿತ ನಿಯಮ.​​”ವಾಸ್ತವವಾಗಿ, ಆ ಸೂರ್ಯನ ತೀಕ್ಷ್ಣತೆ ನಮ್ಮನ್ನು ದಣಿಸುವುದಕ್ಕಲ್ಲ, ಬದಲಾಗಿ ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ. ಕಿಟಕಿಯ ಗಾಜಿನಿಂದ ನುಗ್ಗಿ ಬರುವ ಆ ಉರಿ ಬೆಳಕು, ಕತ್ತಲಾಗುವ ಮೊದಲು ನಾವೆಷ್ಟು ಗಟ್ಟಿಯಾಗಿ ನಿಲ್ಲಬಲ್ಲೆವು ಎಂದು ಕೇಳುವಂತಿದೆ.​ಆ ನೋವನ್ನು ದಾಟಿ ನಿಂತಾಗಲೇ, ಆಕಾಶವು ಬಣ್ಣಗಳ ಹಬ್ಬವನ್ನು ಆಚರಿಸುವುದು. ನಮಗೂ ಅಷ್ಟೇ, ಕಷ್ಟದ ಬಿಸಿ ತಾಕಿದಾಗ ಕುಗ್ಗದೆ ಕುಳಿತರೆ, ದಿನದ ಕೊನೆಯಲ್ಲಿ ನೆಮ್ಮದಿಯ ತಂಗಾಳಿ ಮೈದಡವುವುದು ಖಚಿತ. ಒಮ್ಮೊಮ್ಮೆ ಸುಂದರವಾದದ್ದನ್ನು ಅನುಭವಿಸಲು, ನಮಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾದ ನೋವನ್ನು ಪ್ರೀತಿಯಿಂದಲೇ ಸ್ವೀಕರಿಸಬೇಕಾಗುತ್ತದೆ.” ಕವಿತಾ ಶ್ರೀನಿವಾಸ್ ನಾಯಕ್

ಕವಿತಾ ಶ್ರೀನಿವಾಸ್ ನಾಯಕ್ ಅವರ “ನಿರ್ಗಮಿಸುವ ಮುನ್ನ….” Read Post »

ಇತರೆ

“ಹೊಗಳಿ ಹೊನ್ನ ಶೂಲಕ್ಕೇರಿಸದಿರಿ…. ಅಮ್ಮ ಕೂಡ ಸ್ವತಂತ್ರ ವ್ಯಕ್ತಿತ್ವ” ವೀಣಾ ಹೇಮಂತ್ ಗೌಡ ಪಾಟೀಲ್

ವೀಣಾ ಹೇಮಂತ್ ಗೌಡ ಪಾಟೀಲ್ “ಹೊಗಳಿ ಹೊನ್ನ ಶೂಲಕ್ಕೇರಿಸದಿರಿ…. ಅಮ್ಮ ಕೂಡ ಸ್ವತಂತ್ರ ವ್ಯಕ್ತಿತ್ವ” ( ಆಕೆಯ ವ್ಯಕ್ತಿತ್ವದ ಅದುಮಿಟ್ಟ ಭಾವವನ್ನು ಸಂಭ್ರಮಿಸಲು ಅವಕಾಶ ಕಲ್ಪಿಸಿ) ಈ ದಿನ ಅಮ್ಮಂದಿರ ದಿನ. ವಿಶ್ವದಾದ್ಯಂತ ಅಮ್ಮಂದಿರ ದಿನವನ್ನು ಎಲ್ಲರೂ ಆಚರಿಸುತ್ತಾರೆ. ಅಮ್ಮನ ಮಮತೆ, ಪ್ರೀತಿ, ತ್ಯಾಗ, ಕರ್ತವ್ಯಪರತೆಯನ್ನು ಹಾಡಿ ಹೊಗಳುತ್ತಾರೆ. ಆಕೆಯನ್ನು ದೇವತೆಯ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಾರೆ. ಆಕೆಯ ಗುಣಗಾನ ಮಾಡಿ, ಹಾಡಿ ಹೊಗಳುತ್ತಾರೆ.ಝೆನ್ ಜಿ ಮಕ್ಕಳಿಂದ ಹಿಡಿದು ಇಂದಿನ ಸಾಮಾಜಿಕ ಜಾಲತಾಣಗಳ ಬಳಕೆದಾರರೆಲ್ಲರೂ ತಮ್ಮ ತಮ್ಮ ಮೊಬೈಲ್ನ ಸ್ಟೇಟಸ್ಗಳಲ್ಲಿ ತಾಯಿಯ ಚಿತ್ರವನ್ನು ಹಾಕಿ ನನ್ನ ಹಿಂದಿನ ಶಕ್ತಿ, ನನ್ನ ಸರ್ವಸ್ವ ಎಂದು ಹೇಳುವ ಮಕ್ಕಳ ಸಂಖ್ಯೆ ಕೋಟಿ ಇದ್ದರೆ ಅಯ್ಯೋ ಅಲ್ಲಿ ಹಾಕಿದ್ರೆ ಮಾತ್ರ ತಾಯಿಯ ಮೇಲೆ ಪ್ರೀತಿ ಇರುತ್ತದೆಯೇ ಎಂದು ತಾವು ಸ್ಟೇಟಸ್ ಗಳಲ್ಲಿ ಏನನ್ನೂ ಹಾಕದೆ ಇರುವ ಕಾರಣವನ್ನು ಹೇಳುವ ಮಕ್ಕಳು ಕೂಡ ಇದ್ದಾರೆ.ಅಮ್ಮನಿಗೆ ಒಂದು ಹೂವನ್ನು ಅರ್ಪಿಸುವ, ಒಂದು ಕಾಣಿಕೆಯನ್ನು ತಂದು ಕೊಡುವ, ಒಂದು ಸೀರೆಯನ್ನು ಗಿಫ್ಟ್ ನೀಡುವ ಮಕ್ಕಳು ಇದ್ದಾರೆ.ತಾಯಿ ತಮಗೆ ನೀಡಿದ ಸಮಯದ ಸಾವಿರಾರು ಘಂಟೆಗಳಲ್ಲಿ ಕೇವಲ ಒಂದು ಗಂಟೆ ಆಕೆಗೆ ನೀಡದ ಮಕ್ಕಳು ಕೇವಲ ಸ್ಟೇಟಸ್ ಹಾಕಿ ಸಂಭ್ರಮಿಸುವುದು ಯಾವ ನ್ಯಾಯ? ತನ್ನಿಡಿ ಬದುಕನ್ನು ಗಂಡ ಮನೆ ಮಕ್ಕಳು ಕೌಟುಂಬಿಕ ಜವಾಬ್ದಾರಿ ಎಂದು ಎಲ್ಲವನ್ನು ತನ್ನ ತಲೆ ಮೇಲೆ ಹೇರಿಕೊಳ್ಳುವ ಹೆಣ್ಣುಮಗಳನ್ನು ಗೌರವಿಸುವ ರೀತಿ ಇದಲ್ಲ?ನಮ್ಮೆಲ್ಲರ ನಿರೀಕ್ಷೆಗಳ ಭಾರಕ್ಕೆ ಯಾರದೋ ಮಗಳು, ಯಾರದೋ ಪತ್ನಿ, ಯಾರದ್ದೋ ಪುತ್ರಿ, ಯಾರದೋ ಸಹೋದರಿಯಾಗಿ ಬಾಳುವ ಹೆಣ್ಣು ಮಗಳಿಗೆ ತನ್ನದು ಎನ್ನುವ ಸ್ವಂತ ಮನೆ ಇಲ್ಲ. ಆಸೆ ಆಕಾಂಕ್ಷೆಗಳಿಗೆ ಬೆಲೆ ಇಲ್ಲ. ಕನಸುಗಳಿಗೆ ಬೆಂಬಲವಿಲ್ಲ. ನನಸಾಗಿಸಿಕೊಳ್ಳಲು ಸಾಧ್ಯವಾಗದಂತೆ ಆಕೆಯ ಕನಸಿನ ಹಕ್ಕಿಯ ರೆಕ್ಕೆಯನ್ನು ಮುರಿದು ಬಿಡುವರಲ್ಲ. ಆಕೆಯಿಂದಲೇ ಇಹ ಪರವನ್ನು ಕಾಣುವ, ಬೆಳಗಿನಿಂದ ಬೈಗಿನವರೆಗೂ ತಮ್ಮೆಲ್ಲ ಕೆಲಸಗಳಿಗೆ ಆಕೆಯ ಮೇಲೆ ಭಾವನಾತ್ಮಕವಾಗಿ, ಕೌಟುಂಬಿಕವಾಗಿ, ಧಾರ್ಮಿಕವಾಗಿ ಸಾಮಾಜಿಕವಾಗಿ ಅವಲಂಬಿತರಾಗಿರುವ ನಾವು ಕೇವಲ ಆರ್ಥಿಕ ಅವಲಂಬನೆಯನ್ನು ಆಕೆ ನಮ್ಮ ಮೇಲೆ ಹೊಂದಿರುವ ಕಾರಣ ಆಕೆಯನ್ನು ಅವಲಂಬಿತಳು ಎಂಬಂತೆ ಬಿಂಬಿಸುವುದು ಯಾವ ನ್ಯಾಯ? ನಿಜವಾಗಿಯೂ ಇಲ್ಲಿ ಯಾರ ಮೇಲೆ ಯಾರು ಅವಲಂಬಿತರಾಗಿದ್ದಾರೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ ?.. ನೂರಕ್ಕೆ ನೂರರಷ್ಟು ಹೆಣ್ಣು ಮಕ್ಕಳ ಮೇಲೆ ಅವಲಂಬಿತರಾಗಿರುವ ಬಹುತೇಕ ಎಲ್ಲರೂ ಕೇವಲ ಒಂದು ಶೇಕಡ ಆಕೆ ತಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿರುವುದನ್ನೇ ದೊಡ್ಡದಾಗಿಸುವುರು ಹೆಣ್ಣು ಮಕ್ಕಳ ಶೋಚನೀಯ ಪರಿಸ್ಥಿತಿಯನ್ನು, ಪಿತೃ ಸತ್ತಾತ್ಮಕ ವ್ಯವಸ್ಥೆಯ ಕ್ರೌರ್ಯವನ್ನು ತೋರಿಸುತ್ತದೆ.ಇಲ್ಲಿ ಹೆಣ್ಣಾಗಲಿ ಗಂಡಾಗಲಿ ಪರಸ್ಪರಾವಲಂಬಿಗಳು… ಅನಾದಿಕಾಲದಿಂದಲೂ ಸಾಮಾಜಿಕವಾಗಿ ತಮಗೆ ಕೊಡಮಾಡಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದವರು ಆದರೆ ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಕ್ಷುಲ್ಲಕವಾಗಿ ಕಾಣುವ ಅವರ ಅಸ್ಮಿತೆಯನ್ನು ಕಡೆಗಣಿಸುವ ಅವರನ್ನು ತೇಜೋವಧೆ ಮಾಡುವ ಹುನ್ನಾರಗಳು ಆರಂಭವಾದವು. ಭಾರತೀಯ ಸಮಾಜದ ಪಿತೃ ಸತ್ತಾತ್ಮಕ  ದೃಷ್ಟಿಕೋನವು ಇದಕ್ಕೆ ಪೂರಕವಾಗಿ ಹೆಣ್ಣು ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿಸಿತು. ಅವರನ್ನು ಅಕ್ಷರಶಃ ತೊತ್ತಿನ ಸ್ಥಾನಕ್ಕೆ ಇಳಿಸಿತು. ಆಗಾಗ ಅಲ್ಲಲ್ಲಿ ಇದರ ವಿರುದ್ಧವಾಗಿ ಒಬ್ಬಿಬ್ಬರು ಹೆಣ್ಣು ಮಕ್ಕಳು ಧ್ವನಿ ಎತ್ತಿದರಾದರೂ ಅದನ್ನು ವ್ಯವಸ್ಥಿತವಾಗಿ ಸಂಪ್ರದಾಯದ ಹೆಸರಿನಲ್ಲಿ ಅಲ್ಲಲ್ಲಿಯೇ ಅಡಗಿಸಲಾಯಿತು. ಇದನ್ನು ಮೀರಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ನೋಡಿಕೊಂಡವರನ್ನು ಕೆಟ್ಟದಾಗಿ ನಡೆಸಿಕೊಂಡರು.ತಮಗಿರುವ ಜವಾಬ್ದಾರಿಗಳು, ತ್ಯಾಗಗಳು, ಕುಟುಂಬವೇ ಮೊದಲು ಎಂಬ ಸಾಮಾಜಿಕ ಒತ್ತಡಗಳ ನಡುವೆ ಹೆಣ್ಣು ಮಕ್ಕಳು ತಣ್ಣಗಿನ ಕ್ರೌರ್ಯವನ್ನು ಎದುರಿಸುತ್ತಾ ವಿರೋಧಿಸುವ ಗುಣವನ್ನೇ ಕಳೆದುಕೊಂಡರು. ತಮ್ಮ ಕನಸುಗಳನ್ನು ಬದಿಗೊತ್ತಿ, ಕುಟುಂಬದ ಮರ್ಯಾದೆಯ ದೃಷ್ಟಿಯಿಂದ ಸರಿ ಎಂದು ತೋರಿದ್ದನ್ನೇ ಮಾಡುವ ಮೂಲಕ ತಮ್ಮತನವನ್ನು ಕಳೆದುಕೊಂಡರು. ಬದುಕಿನಿಂದ ಹೆಚ್ಚಿನದನ್ನು ಅಪೇಕ್ಷಿಸದೆ ತಮ್ಮ ಕುಟುಂಬ, ತಮ್ಮ ಮಕ್ಕಳು ಎಂದು ಎಲ್ಲರ ಬದುಕನ್ನು ನೇರ್ಪಡಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ಗಾಣಕ್ಕೆ ಕಟ್ಟಿದ ಎತ್ತಿನಂತೆ ಭಾವಿಸಿ ಕಾರ್ಯನಿರ್ವಹಿಸಿದರು. ತಮ್ಮ ವೈಯುಕ್ತಿಕ ಆಸೆ ಆಕಾಂಕ್ಷೆಗಳು ಅವರಿಗೆ ನಗಣ್ಯವಾಗಿ ಕನಿಷ್ಠ ಪಕ್ಷ ತಮ್ಮ ಮಕ್ಕಳಾದರೂ ಚೆನ್ನಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿ ಎಂದು ಭಾವಿಸಿ ಗಂಧದ ಕೊರಡಿನಂತೆ ತಮ್ಮನ್ನು ತಾವು ಸವೆಸಿಕೊಂಡು ಉಳಿದವರ ಬದುಕಿಗೆ ಸುಗಂಧವಾದರು. ತನ್ನನ್ನು ತಾನುರಿಸಿಕೊಂಡು ಇತರರಿಗೆ ಬೆಳಕಾಗುವ ದೀಪವಾಗಿ ಬೆಳಗಿದರು.ಸಾಕು…. ಇನ್ನಾದರೂ ಹೆಣ್ಣು ಮಕ್ಕಳನ್ನು ಕಡೆಗಣಿಸುವ ಅವರ ಆಸೆ-ಆಕಾಂಕ್ಷೆಗಳಿಗೆ ತಣ್ಣೀರೆರಚುವ ಮತ್ತು ವರ್ಷದ ಯಾವುದೋ ಒಂದು ದಿನ ಅವರ ತ್ಯಾಗವನ್ನು, ಪ್ರೀತಿಯನ್ನು ಕರ್ತವ್ಯ ಪ್ರಜ್ಞೆಯನ್ನು  ಅಮ್ಮಂದಿರ ದಿನವನ್ನಾಗಿ ಆಚರಿಸುವ ಈ ಪದ್ಧತಿಯನ್ನು ಬಿಟ್ಟುಬಿಡೋಣ.ನಮ್ಮ ತಾಯಿಯೂ ಕೂಡ ಓರ್ವ ಹೆಣ್ಣು ಮಗಳು. ಓರ್ವ ಸ್ವತಂತ್ರ ವ್ಯಕ್ತಿ, ತನ್ನದೇ ಆದ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದ ವ್ಯಕ್ತಿ ಎಂಬುದನ್ನು ಮೊದಲು ಗುರುತಿಸೋಣ. ಆಕೆಯ ವ್ಯಕ್ತಿತ್ವವನ್ನು ಸಂಭ್ರಮಿಸುವುದರ ಜೊತೆ ಜೊತೆಗೆ  ಚಿಕ್ಕಂದಿನಿಂದ ಕಂಡಿರುವ ಕನಸನ್ನು ಈಗಲಾದರೂ ನನಸಾಗಿಸುವ ಪ್ರಯತ್ನಕ್ಕೆ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಮಮತೆಯ, ಮಾತೃತ್ವದ ಪ್ರತೀಕವಾದ ಆಕೆಯೂ ಕೂಡ ಒಂದೊಮ್ಮೆ ಹೊಂದಿರಬಹುದಾದ ತನ್ನದೇ ಆದ ಆಸೆ ಆಕಾಂಕ್ಷೆಗಳನ್ನು ಅರಿತು ಅವುಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡೋಣ.ಅಮ್ಮ ಎಂದರೆ ಕೇವಲ ತ್ಯಾಗವಲ್ಲ, ಪ್ರೀತಿ, ವಾತ್ಸಲ್ಯಗಳ ಹಾಗೂ ಮಮತೆಯ ಮೂರ್ತಿಯಲ್ಲ. ಎಲ್ಲಕ್ಕೂ ಮುನ್ನ ಆಕೆ ಓರ್ವ ಹೆಣ್ಣು ಮಗಳು ನಮ್ಮ ನಿಮ್ಮೆಲ್ಲರಂತೆ ಆಕೆಯಲ್ಲಿಯೂ ಇರಬಹುದು. ಆಕೆಯ ಚಿಕ್ಕ ಪುಟ್ಟ ಆಸೆಗಳು,ಆಕಾಂಕ್ಷೆಗಳು, ಅದುಮಿಟ್ಟಿರುವ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಆಕೆಗೆ ಜೊತೆಯಾಗೋಣ. ಅತ್ಯಂತ ಪ್ರೀತಿಯಿಂದ ಆಕೆಯನ್ನು ತಬ್ಬಿಕೊಂಡು ಐ ಲವ್ ಯು ಅಮ್ಮ ಎಂದು ಹೇಳುವುದು ನಿಜವಾದ ಪ್ರೀತಿಯ ಅಭಿವ್ಯಕ್ತಿ ಎಂದು ನಾವು ಭಾವಿಸುವುದು ಬೇಕಿಲ್ಲ… ನಿಜವಾದ ಪ್ರೀತಿಯೆಂದರೆ ನಿಸ್ವಾರ್ಥದಿಂದ ತಮ್ಮೆಲ್ಲವನ್ನು ನಮಗಾಗಿ ಬಿಟ್ಟು ಕೊಟ್ಟಿರುವ ನಮ್ಮ ತಾಯಂದಿರದು. ತಾಯಂದಿರ ದಿನದಂದು ಭಾವನಾತ್ಮಕವಾಗಿ ತಾಯಿಯ ಬಗ್ಗೆ ಹೇಳುತ್ತಾ ತಾಯ್ತನ ತಂದು ಕೊಡುವ ನೂರೆಂಟು ತ್ಯಾಗ ಬಲಿದಾನದ ಕಥೆಗಳ ಮೂಲಕ ಜಾಹೀರು ಮಾಡುವ ಬದಲಾಗಿ ಹೆಣ್ಣು ಮಕ್ಕಳನ್ನು ಅವರವರ ಪಾಡಿಗೆ ಬಿಟ್ಟುಬಿಡಬೇಕು. ಅವರದ್ದೇ ರೀತಿಯಲ್ಲಿ ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡಬೇಕು. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಮಗುವನ್ನು , ಇಂದಿನ ಈ ಸ್ವಾವಲಂಬಿ ಬದುಕಿಗೆ ಸಿದ್ದ ಮಾಡಲು ಅವರನ್ನು ಪಾಲಿಸಿ ಪೋಷಿಸಿ ಸದಾ ಅವರ  ಕೈ ಹಿಡಿದು ಇಲ್ಲಿಯತನಕ ನಡೆಸಿರುವ ತಾಯಂದಿರನ್ನು ಪರಾವಲಂಬಿಯಾಗಿಸದೆ, ಈ ಹಿಂದೆ ನಮ್ಮಲ್ಲಿ ಆಕೆ ತುಂಬಿದ ಮಾನಸಿಕ, ಭಾವನಾತ್ಮಕ ಕೌಟುಂಬಿಕ ಹಾಗೂ ವಾಸ್ತವಿಕವಾದ ಆರ್ಥಿಕ ಬೆಂಬಲವನ್ನು ನಾವು ನೀಡಲೇಬೇಕು.ಆ ಮೂಲಕ ತಾಯಂದಿರು ಮತ್ತಷ್ಟು ಸಶಕ್ತರಾಗಿ, ಸಚೇತನರಾಗಿ ನಮ್ಮ ಬಾಳಿನ ಬೆಳಕಾಗಿ ಪ್ರಖರವಾಗಿ ಬೆಳಗುವಂತೆ ಪೋಷಿಸಬೇಕು. ಅವರಿಗೆ ತಮ್ಮ ಕುರಿತು ಯೋಚಿಸುವಂತೆ ಪ್ರೇರೇಪಿಸಬೇಕು. ಎಲ್ಲರಿಗೂ ಎಲ್ಲವನ್ನೂ ಮಾಡುವ ತಾಯಿ ತನ್ನ ವೈಯಕ್ತಿಕ ಕಾಳಜಿಯನ್ನು ಮಾಡಿಕೊಳ್ಳಬೇಕು. ಹಾಗೆ ತನ್ನ ಕಾಳಜಿಯನ್ನು  ಮಾಡಿಕೊಳ್ಳದೆ ಆತ್ಮ ದ್ರೋಹ ಮಾಡಿಕೊಳ್ಳಬಾರದು.  ನಿಜ! ಪೋಷಣೆಯ ಅಗತ್ಯ ಕೇವಲ ಮಕ್ಕಳಿಗೆ ಮಾತ್ರವಲ್ಲ…. ತಾಯಂದಿರಿಗೂ ಇದೆ ಎಂಬ ಸತ್ಯವನ್ನು ಅರಿತು ಅವರ ಸಂತೋಷಕ್ಕೆ ಕಾರಣವಾಗಬೇಕು. ಆಗಲೇ ತಾಯಂದಿರ ದಿನಾಚರಣೆಗೆ ನಿಜವಾದ ಸಾರ್ಥಕತೆ ಹಾಗೂ ಅರ್ಥಪೂರ್ಣತೆ ದೊರೆಯುವುದು…ಏನಂತೀರಾ ಸ್ನೇಹಿತರೇ ? ವೀಣಾ ಹೇಮಂತ್ ಗೌಡ ಪಾಟೀಲ್

“ಹೊಗಳಿ ಹೊನ್ನ ಶೂಲಕ್ಕೇರಿಸದಿರಿ…. ಅಮ್ಮ ಕೂಡ ಸ್ವತಂತ್ರ ವ್ಯಕ್ತಿತ್ವ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಪ್ರಿಯತಮ” ದೈವದ ಅನುಗ್ರಹ ನಮ್ಮಿಬ್ಬರ ಪರಿಚಯಬರೆಯಲು ಸಾಲದು ಕಳೆದಿರುವ ಸಮಯಪದಗಳಿಲ್ಲ ಹೇಳಲು ಹೃದಯದ ವಿಷಯನೆನೆಯಲು ನಿನ್ನಾ ನೋವೆಲ್ಲಾ ಮಾಯಾ. ಆಲಿಸಲಾರೆಯ ನನ್ನ ಪ್ರೀತಿಯ ಕರೆಯನೋಡಲು ಬಯಸಿದೆ ಮನ ಮೋರೆಯತವಕಿಸುತ್ತಿದೆ ಕಾಣಲು ಹೃದಯದ ದೊರೆಯನೋಡಲೆಂದು ನನ್ನೆಡೆ ನೀ ಬರುವೆಯಾ ಹೇಗೆ ತಿಳಿಸಲಿ ಹೃದಯದ ಪರಿಯಜೀವನದ ಹಸಿರು ಮರೆಯದಿರು ಗೆಳೆಯಬಯಸಿರುವೆ ಬಾಳಲಿ ನೀನೆ ಇನಿಯಬಯಸಿದೆ ನಿನ್ನನೇ ಪುಟ್ಟ ಹೃದಯ ಬರುವಿಕೆಯ ಹಾದಿ ಕಾದು ಬಳಲಿರುವೆಸವಿ ನುಡಿಯ ಪ್ರೇಮಕೆ ಸೋತಿರುವೆನೀನೇಕೆ ಸವಿ ನೆನಪಿನ ಪ್ರೀತಿ ಮರೆತಿರುವೆನನ್ನೊಳಗೆ ನೀನೆಂದೋ ಮನೆ ಮಾಡಿರುವೆ ಜೀವನದ ಕೊನೆ ಅಂಚಿನಲಿ ನಿಂತಿರುವೆಕಣ್ ತುಂಬಾ ಕಾಣಲು ಕಾದಿರುವೆನೀನೇಕೆ ನಿನ್ನ ಶಬರಿಯ ಮರೆತಿರುವೆಬಂದೆ ಬರುವ ದಾರಿಯ ನೋಡುತ್ತಿರುವೆ. ಡಾ. ಲತಾ ಎ ಆರ್ ಬಾಳೆಹೊನ್ನೂರು

ಡಾ. ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಪ್ರಿಯತಮ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಅನುರಾಗ” ಗೆಳತಿ…ನಾನೇಗೆ ನಿನ್ನ ಮರೆಯಲಿಮರೆಯಾಗಿ ನಿಂತರೂ ದೂರದಲಿಅದೇಕೋ ಮೋಹ ಅಂತರಾಳದಲಿ,!! ನೆನಪುಗಳು ಸುಳಿಯಾಗಿಆಸೆಗಳೆಲ್ಲ ಸವಿ ಸವಿ ಮಾತಾಗಿಬಯಕೆಗಳೆಲ್ಲ ಮನಸ್ಸಿನಲ್ಲಿ ಕನಸಾಗಿ,!! ನನ್ನೊಳಗೆ ನಿನ್ನದೇಪ್ರತಿಕ್ಷಣ ಮಧುರ ಚಿತ್ರಣನೆನೆಪಿನಾಂಗಳ ಅನುದಿನವು,!! ಮನವು ಕುಣಿಯಿತುಆಸೆಯ ಮುಗಿಲೇರಿಸಿ ಅನುಕ್ಷಣಭರವಸೆ ಮೂಡಿಸಿತು ಅನುರಾಗದಲಿ.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಅನುರಾಗ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಇಂದೇಕೊ!” ಇಂದೇಕೊ ಈ ಅಕ್ಷರಗಳುಪದಗಳಾಗದೆ ಕಾಡುತಿವೆಲೇಖನಿಗೂ ಸಿಗದಂತೆ ದೂರಸಾಗುತಿವೆಗೀಚಿದರೂ ಮತ್ತಷ್ಟುಗೀಚುಗಾಚು ಹಾಕಿಸಿಕೊಳ್ಳುತಿವೆಹಾಳೆಯ ಹರಿಯಲು ಹೊರಟರೂಅದಕ್ಕೂ ಹಠವ ಮಾಡುತಿವೆಸಾಲೊಂದ ಮುಂದೆ ಹೋಗದಂತೆರಚ್ಚೆ ಹಿಡಿದಿವೆಪುಟ್ಟ ಕಂದನಂತೆ ಬಿಡದೆ ಆಗಾಗಬಡಿಸಿಕೊಂಡವರಂತೆ ಮಿಡುಕಿಅಳುತಿವೆಸಾಕು ನಿಮ್ಮ ಸಹವಾಸ ಎಂದರೂಬಿಡದೆ ಬೆನ್ನ ಹತ್ತಿವೆಬೇಕೆಂದಾಗ ಬರೆಯಲು ಕುಳಿತರೆಮರೆವಿನೂರಿಗೆ ಪ್ರಯಾಣ ಬೆಳೆಸಿವೆಅಂದುಕೊಂಡಿದ್ದನೆಲ್ಲ ಅದಲುಬದಲಾಗಿಸಿವೆತಿಪ್ಪರಲಾಗ ಹಾಕಿದರೂ ಅದೇಕೋಮೊದಲು ನೆನಪಾದಂತೆ ನೆನಪಿಗೆಬರದೆ ಪ್ರೇಮಿಯಂತೆ ಸತಾಯಿಸಿವೆಇಂದೇಕೊ ಈ ಅಕ್ಷರಗಳು ಕಾಡಿವೆಕಾಡಿಸುತಿವೆ,ಕಾಲೆಳೆಯುತಿವೆಶಬ್ಧ ಭಂಡಾರ ಖಾಲಿಯಾದಂತಭಾವವ ಭಾಸವಾಗುವಂತೆ ಮಾಡಿವೆಹಠ ನಿಮಗಷ್ಟೇ ಇದೆಯೋ ನನ್ನಲ್ಲೂಹಠ ಇದೆ ಏನೋನೋಡಿಯೇ ಬಿಡುವಾ ನೀವಾ!? ನಾವಾ?ನಾನು ಮತ್ತು ನನ್ನ ಲೇಖನಿ…! ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಇಂದೇಕೊ!” Read Post »

ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ”

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ತಾಯ್ತನ” ಜೀವಸಂಕುಲದ ತಾಯ್ತನದವಿಶ್ವದ ತತ್ವವೇ ಅವ್ವಮಾನವ ಜನ್ಮದ ಜೀವನದಸಾರದ ಸತ್ವವೇ ಅವ್ವ|| ಸೃಷ್ಟಿಕರ್ತನ ಲೀಲೆ ಭುವಿಯಅತ್ಯದ್ಭುತ ಸೃಷ್ಟಿದೇವ ತಾ ಇಳೆಗಿಳಿದುಬಾರದಮಮತೆಯ ವೃಷ್ಟಿ|| ಬಡವಳಿರಲಿ ಬಲ್ಲಿದಳೇ ಇರಲಿಮಕ್ಕಳಿಗೆ ಮಾತೆ ಶ್ರೇಷ್ಠಭಿಕ್ಷುಕಿ ಇರಲಿ ರಾಣಿ ಆಗಿರಲಿಮಕ್ಕಳಿಗೆ ತಾಯಿ ನಿಷ್ಠ || ಇರುವೆಯಿಂದ ಆನೆಯವರೆಗೆಅವುಗಳ ತಾಯಿ ಆಧಾರದೇವಾನುದೇವತೆಗಳಿಗೂ ಸಹಆದಿಶಕ್ತಿಯೇ ಆಶ್ರಯ|| ಮಾನವ ಜನ್ಮದ ಸಾರ್ಥಕತೆಜನ್ಮ ಕೊಟ್ಟ ಹೆತ್ತತಾಯಿಜೀವನದಲ್ಲಿ ಬದುಕಿ ಇರಲುಅನ್ನ ನೀಡಿದ ಭೂತಾಯಿ || ನೀರು ಕೊಟ್ಟ ಕಾವೇರಿ ತಾಯಿನುಡಿ ಕಲಿಸಿದ ಕನ್ನಡ ತಾಯಿನನ್ನ ಜೀವದಾತೆ ಭಾರತಮಾತೆತಮಗೆಲ್ಲರಿಗೂ ಚಿರಋಣಿ ನಾ|| ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಒಂದು ಗೆರೆ ಕಡಿಮೆಯಿದೆ..ನಿನ್ನ ಪಡೆಯುವ ನಸೀಬಿಗೆಒಂದು ಹನಿ ಕಡಿಮೆಯಿದೆ..ನಿನ್ನ ಮರೆಸುವ ಮಧುಬಟ್ಟಲಿಗೆ..!! ನೋವಿಗೆ ಹಳೆಯ ಗಿರಾಕಿಯ ಹುಸಿನಗುವ ಮನಕೆ…ಒಂದು ಉನ್ಮಾದ ಬೇಕಿದೆ,ಪುನಃ: ನಿನ್ನ ಪ್ರೀತಿಸುವ ಚಾಳಿಗೆ!! ದಿನದ ಲೆಕ್ಕಹಚ್ಚಿಟ್ಟೆನಗೆ ಹೋದೆ ದೂರಯಾನಕೆ..ಒಂದು ಶರಧಿ ಬಾಕಿಯಿದೆ,ನಿನ್ನ ಸೇರುವ ಪರಿಧಿಗೆ..!! ಸಿಕ್ಕ ಘಳಿಗೆಯನ್ನು ಸಂಭ್ರಮಿಸಲು ಬಿಡಲಿಲ್ಲ ಬದುಕು..ಒಂದು ಏಕಾಂತ ಬೇಕಿದೆ,ನಿನ್ನ ಸ್ಮರಿಸುವ ಮನಸ್ಸಿಗೆ..!! ಸೀತಾ,ರಾಮ,ಲಕ್ಷ್ಮಣರ ವನವಾಸಕ್ಕಿಂತ ದೀರ್ಘವಾಯ್ತು ನೋವುಒಂದು ವಿರಾಮ ಬೇಕಿದೆ,ನಿನ್ನ ಕಾಡುವ ಮೌನಪಾಳಿಗೆ..!! ಬಂಧನಕ್ಕೆ ಬೆನ್ನು ಮಾಡಿ ತುದಿನಗುವ ಕದ್ದವನೇ,,ಒಂದು ನೂಲಿನ ಅಂತರವಿದೆ…ನಿನ್ನ ಕೂಡುವ ಹಾದಿಗೆ..!! ಕಂಬನಿ ಕುಡಿದು ಸಾಕಾಯ್ತು ಜಯಾ,ಕೇಳಿಲ್ಲಿ ಗೆಳೆಯಾ..ಒಂದು ಕಿಡಿ ಕಡಿಮೆಯಿದೆ,ನನ್ನ ನಿನ್ನ ಒಂದಾಗಿಸುವಅಗ್ನಿಸಾಕ್ಷಿಗೆ…!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

You cannot copy content of this page

Scroll to Top