ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ

ಕಥಾ ಸಂಗಾತಿ ನಾಗರಾಜ ಬಿ. ನಾಯ್ಕ “ಒಬ್ಬ”  ಗುಡ್ಡದ ತುದಿಗೆ ಒಂಟಿ ಮನೆ. ಅಲ್ಲಿಂದ ಹೊರಗೆ ನೋಡಿದರೆ ಕಣ್ಣು ಮುಟ್ಟುವಷ್ಟು ಕಡಲು. ಅವನು ಆಗಾಗ ನಿಂತು ಆ ಕಡಲನ್ನು ನೋಡುವನು. ಅಲೆಗಳ ಕುಣಿತ ಅವನೊಳಗೆ ಹೊಸ ಸಂಚಲನವ ನೀಡುವುದು.  ತನಗೆ ಎಷ್ಟು ವರ್ಷ ಗೊತ್ತಿಲ್ಲ ಅವನಿಗೆ. ತನ್ನವರು ಎನ್ನುವರು ಯಾರೂ ಪರಿಚಯವಿಲ್ಲ ಅವನಿಗೆ. ಸುಮ್ಮನೆ ದುಡಿಯುವುದು, ತಿನ್ನುವುದು ಅದೊಂದೇ ಅವನ ಗುರುತು. ಎಲ್ಲರಿಗೂ ಅವನು ಬೇಕು. ಆದರೆ ಅವನು ಮಾತ್ರ ಒಂಟಿ. ಯಾವ ಹಂಗೂ ಇರದ ಬದುಕು ಅವನದ್ದು . ಒಮ್ಮೊಮ್ಮೆ ಆಕಾಶ ನೋಡುತ್ತಾ ಮಲಗುವ. ನೋಡಿದ ಆಗಸದಲ್ಲಿ ಯಾರದೋ ಮುಖ ಅವನಿಗೆ ಕಾಣುವುದು. ವಿಚಿತ್ರ ಎನಿಸುವುದು ಅವನಿಗೆ ಮೋಡಗಳಲ್ಲಿ, ಆಕಾಶದಲ್ಲಿ ಮುಖಗಳು ಕಾಣುವುದು. ಒಮ್ಮೊಮ್ಮೆ ಓಡಾಡುವ ಜನರ ನಡುವಿನ ಮುಖದ ಭಾವವನ್ನ ಅವನು ಗುರುತಿಸುವ. ಅವರಾರು ತನ್ನವರಲ್ಲ ಎನಿಸುವುದು ಅವನಿಗೆ. ವ್ಯವಹಾರ ಎನಿಸುವ ಜೀವನ ಅವನಿಗೆ ಬೇಸರ ತರಿಸುವುದು. ಆದರೂ ಅವನು ಬದುಕುವನು ಅವರೊಟ್ಟಿಗೆ. ಅವರೆಲ್ಲರೂ ಒಂಟಿ ಅಂದುಕೊಳ್ಳುವನು ಆಗಾಗ. ಆದರೆ ಅವರ ಮುಖಭಾವದಲ್ಲಿ ಅವರಾರು ಒಂಟಿ ಎನ್ನುವುದು ಇರುವುದಿಲ್ಲ ಎಂದುಕೊಂಡು ಮನೆಗೆ ಹೋದರೆ ಮಾತನಾಡಿಸುವ ಜೀವಗಳು ಅನೇಕ ಅವರಿಗೆ ಎಂದುಕೊಳ್ಳುವನು. ಆದರೆ ಅವನಿಗೆ ಯಾರಿಲ್ಲ ಮಾತನಾಡುವವರು. ಯಾರು ಇಲ್ಲದ ಮನೆಯಲ್ಲಿ ಸಾಕಿದ ಬೆಕ್ಕು, ಸಾಕಿದ ನಾಯಿ ಒಂದೆರಡು ಆಕಳು ಇವುಗಳನ್ನು ಬಿಟ್ಟರೆ ಅವನಿಗೆ ತನ್ನವರು ಎನ್ನುವರು ಯಾರು ಇಲ್ಲ. ಆದರೆ ಅವುಗಳೇ ಅವನ ಸರ್ವಸ್ವ. ಕಾಡಿನ ದಾರಿ. ದಿನಾಲು ಒಂಟಿ ಸಾಗುವವನು. ಅವನೆಂದುಕೊಂಡಂತೆ ಅವನ ಬದುಕು. ಹಸಿವೆಯಾದರೆ ತಿನ್ನುವನು ಅನ್ನವನ್ನು. ಯಾರೋ ಕೊಟ್ಟ ಹಣ್ಣನ್ನು ,ಯಾರು ಕಟ್ಟಿಕೊಟ್ಟ ರೊಟ್ಟಿಯನ್ನು. ಹಸಿವಿಗೆ ಎಂದು ಉಣ್ಣುವಾಗ ಕೊಟ್ಟ ಕರಗಳನ್ನು ಎಣಿಸುವ ಆತ ಮುಖವನ್ನ ಸ್ಮರಿಸುವ ಹಂಚಿ ತಿನ್ನುವ ತನ್ನೊಟ್ಟಿಗೆ ಬಂದ ಬೆಕ್ಕು ನಾಯಿ ದನ ಕರುಗಳ ಜೊತೆ.        ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತಾಗ ಅವನಲ್ಲಿ ಹೊಸ ಹುರುಪು. ಮರದ ನೆರಳಿಗೆ ಎಂದು ಬಂದು ಕುಳಿತಾಗ ಹಕ್ಕಿಗಳು ಉಲಿವವು. ಸುತ್ತ ಹುಟ್ಟಿದ ಮರಗಿಡಗಳಲ್ಲಿ ಅನೇಕ ಹಕ್ಕಿಗಳು ಬಂದು ಚಿಲಿಪಿಲಿ ಎನ್ನುವವು. ತಿಂದು ಎಸೆದ ಬೀಜಗಳು ಸಸಿಯಾಗಿ ಹುಟ್ಟಿ ಮರವಾಗಿ ಬೆಳೆದು ನಿಂತು ಉಪಕರಿಸುವ ರೀತಿಗೆ ಅವನು ಸೋಲುತ್ತಾನೆ. ಎತ್ತರವಾಗಿ ಬೆಳೆದು ನಿಂತ ಮರದ ನೆರಳಿಗೆ ಕುಳಿತು ಗುಡ್ಡದ ಕೆಳಗೆ ಇರುವ ಕಡಲಲ್ಲಿ ರವಿ ಮುಳುಗುವ ವಿಹಂಗಮ ನೋಟವನ್ನು ಕಾಣುತ್ತಾನೆ. ಸೂರ್ಯ ಒಂದು ಪ್ರಶ್ನೆ ಅವನಿಗೆ. ಎಷ್ಟೆಲ್ಲಾ ಕಲಾಕೃತಿಗಳು ಅವನ ಬೆಳಕಿನ ಸೃಷ್ಟಿ ಎಂಬುದರಿತು ಹೆಮ್ಮೆ ಪಡುತ್ತಾನೆ. ಕೆಂಬಣ್ಣದ ಆಗಸದಲ್ಲಿ ಬೆಳ್ಳಕ್ಕಿಗಳ ಸಾಲೊಂದು ಓಡುವ ಸಂಭ್ರಮವ ನೋಡಿ ಅಂತರಂಗದಿ ಕರಗುತ್ತಾನೆ. ಪಯಣದ ದಿಕ್ಕುಗಳ ನೋಡಿ ಆನಂದಿಸಿ ಸುಮ್ಮನಾಗುತ್ತಾನೆ. ತನ್ನೊಳಗೆ ತಾನೇ ಪ್ರಶ್ನೆಯ ಎಳೆದುಕೊಂಡು ಎಲ್ಲೆಲ್ಲೂ ಸುತ್ತಿ ಬರುತ್ತಾನೆ. ಸಂಜೆಯ ಕತ್ತಲಿಗೆ ಗುಡ್ಡದ ಜೀರುಂಡೆಗಳ ಸದ್ದು ಕೇಳುತ್ತದೆ. ಮರಗಿಡಗಳಲ್ಲಿ ಹಕ್ಕಿ ಮಲಗಿರುವ ಮೌನ ಕತ್ತಲೆಗೆ ಒರಗಿ ನಿದ್ದಿಸುವ ಕೌತುಕಕ್ಕೆ ಬೆರಗಾಗುತ್ತಾನೆ. ಕತ್ತಲೆಯ ಮಧ್ಯೆ ಬೆಳಗುವ ಚಂದಿರನ ಕಂಡು ನಸು ನಗುತ್ತಾನೆ. ನನ್ನಂತೆ ನೀನು ಸುಖಿ ಎನ್ನುತ್ತಾನೆ. ಅಚ್ಚರಿಗಳ ಆಶಾ ಗೋಪುರ ಅವನದಾಗುತ್ತದೆ. ತಾನು ಒಬ್ಬನೇ ಎನ್ನುವ ಅವನಲ್ಲದ ಭಾವ ಅವನನ್ನು ತಾಕದೇ ಮರೆಯಾಗುತ್ತದೆ. ಹಸಿವೆ, ನಿದ್ದೆಯ ದಾಟಿ ಬೆಳಕು ಹರಿಯುತ್ತದೆ. ಹೊಸ ಬೆಳಕಿನ ಸೃಷ್ಟಿಗೆ ಕಾದು ಎದ್ದು ಹೊರಡುತ್ತಾನೆ. ಬಾಗಿಲಿಲ್ಲದ ಮನೆಯ ಬಿಟ್ಟು. ಸಾಕಿದ ಬೆಕ್ಕು ಬಂದು ಮ್ಯಾಂವ್ ಎಂದು ಕಳುಹಿಸಿ ಹೋಗುತ್ತದೆ. ಊರ ದಾರಿಗಳಲ್ಲಿ ಸಾಗುವಾಗ ಮಂದಹಾಸ ಬೀರುತ್ತ ನಡೆವ. ನಡೆವಾಗ ಎದುರಾದ ಯಾರೋ ಹೆಸರು ಹೇಳಿ ಕರೆಯುವರು. ಓ ಎಂದು ನಾಲ್ಕು ಮಾತು ಆಡಿ ಹೋಗಿಬಿಡುವ. ಕರೆದ ಮನೆಯ ಅಂಗಳದಲ್ಲಿ ಕುಳಿತು ಕೊಟ್ಟ ಕೆಲಸವ ಮಾಡಿ ಹೊರಡುವವ. ಅವನ ಕೆಲಸದ ಚಾಕ ಚಕ್ಯತೆ ಒಂದು ಕುಶಲತೆ ಎನಿಸುತ್ತಿತ್ತು. ಅವನು ನೆಟ್ಟ ಗಿಡ ತಾನೇ ತಾನಾಗಿ ಚಿಗುರು ಬಿಡುತ್ತಿತ್ತು. ಹಸಿರು ಅವನ ಕೈಯಾರೆ ಬೆಳೆದು ಇಳೆಯ ಹಸಿರಿಗೊಂದು ಹೆಸರಾಗುತ್ತಿತ್ತು. ಆತ್ಮ ಅಭಿಮಾನ ಗೌರವಕ್ಕೆ ಋಣಿ ಎಂದುಕೊಳ್ಳುತ್ತಿದ್ದ. ಅವನೇ ಬೆಳೆಸಿ ಉಪಕರಿಸಿದ ಮರಗಳು ಬೆಳೆದು ಊರ ತುಂಬಾ ಹರಡಿದ್ದವು.              ಕಾಲದ ಕನ್ನಡಿಗೆ ಹಲವು ಗುರುತು. ಅವನು ಆಗಾಗ ಅಂದುಕೊಳ್ಳುವ. ಅದಾರೋ ಕೊಟ್ಟ ತಿಂಡಿ ತಿಂದು ಅಲ್ಲಿ ಇಲ್ಲಿ ಬೆಳೆದು ದೊಡ್ಡವನಾದ ಮೇಲೆ ಈ ಊರಿಗೆ ಬಂದು ನಿಂತವ. ತನ್ನವರಲ್ಲದ ಜನರ ನಡುವೆ ಜಾತ್ರೆಗೆಂದು ಬಣ್ಣ ತುಂಬಲೆಂದು ಬಂದವ. ಅದೇನೋ ಖುಷಿ ಅನಿಸಿ ಈ ರೀತಿ ದಿನ ಒಂದೊಂದು ಊರು ಅಲೆಯುವುದು ಸಾಕಾಗಿ ಇಲ್ಲೇ ಉಳಿದರೆ ಸಾಕು ಎಂದು ಉಳಿದವ. ದೂರದ ಗುಡ್ಡದಂಚಿನ ಮರದ ಕೆಳಗೆ ಮಲಗಿ ಹಲವು ದಿನ ಕಳೆದವ. ಒಂಟಿತನ ಕಾಡಲಿಲ್ಲ ಅವನಿಗೆ. ಏಕೆಂದರೆ ಒಂಟಿಯಾಗಿ ಬೆಳೆದವನಿಗೆ ಅದು ಕರಗತ. ಈಗೀಗ ನಗುವುದು ಕಲಿತಿದ್ದ. ತನ್ನಂತೆ ಇದ್ದ ಇತರರ ನೆನಪಿಸಿಕೊಂಡ. ಅವರೆಲ್ಲಾ ಎಲ್ಲಿ ತಲುಪಿರಬಹುದು ಎಂದು ಯೋಚಿಸಿದ. ತಾನೇ ಸುಖಿ ಎಂದುಕೊಂಡ. ಹಸಿವೆಯಾದಾಗ ಗುಡ್ಡದಿಂದ ಇಳಿದು ಬಂದು ಊರ ದಾರಿ ಹಿಡಿದ. ಯಾರೋ ಊಟ ಕೊಟ್ಟರು. ಕೆಲಸ ಕೊಟ್ಟರು. ಒಂಟಿಯಾದರೂ ಜೀವನ ಸಾಗಿತು. ಅದೊಂದು ದಿನ ವಯಸ್ಸಾದ ಅಜ್ಜಿಯೊಬ್ಬಳ ಮನೆಗೆ ಹೋಗಿದ್ದ. ಇದ್ದ ಒಬ್ಬ ಮಗ ಬಾರದ ನೋವು ಅಜ್ಜಿಗೆ ಕಾಡಿತ್ತು. ತುಂಬಾ ಮಾತನಾಡಿದ ಅಜ್ಜಿ ಜೊತೆಗೆ. ಅಜ್ಜಿಗೆ ಮಗ ಸಿಕ್ಕಂತಾಯಿತು. ಅವನೂ ಖುಷಿ ಪಟ್ಟ. ಈ ಲೋಕದ ಮಾಯೆಗೆ ಬೆರಗಾದ. ಕಾಲದ ಕರೆಗಂಟೆಯಲ್ಲಿ ಕರಗಿಹೋದ ನೋವುಗಳ ಎಣಿಸಿದ. ಅವನ ಮನೆಗೆ ಕಿಟಕಿ ಬಾಗಿಲು ಯಾವುದು ಇರಲಿಲ್ಲ. ಚಪ್ಪರದೊಳಗಿನ ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿದ್ದ. ಹತ್ತಾರು ವರ್ಷಗಳ ಕಾಲ ಉಳಿದ. ಈಗ ಅವನಿಗೆ ಊರಿನ ಜನರ ನಂಟು ಹೆಚ್ಚಾಗಿತ್ತು ‌. ಕರೆವವರು ಬಹಳ ಅವನಿಗೆ. ಅದೊಂದು ದಿನ ಆ ಊರಿನ ಜಾತ್ರೆ ನಡೆಯುತ್ತಿತ್ತು. ಅವನು ಜಾತ್ರೆಗೆ ಹೋದ‌. ಕಂಡ ಮುಖಗಳಲ್ಲಿ ಬದುಕಿನ ಭಾವಗಳ ಹುಡುಕಿದ. ಅರೇ ಹೌದಲ್ಲ ಇದೇ ನನ್ನ ಬದುಕಾಗಿತ್ತು. ಜಾತ್ರೆಗೆ ಬಂದ ಎಲ್ಲರೂ ಸೇರಿ ಸಂಭ್ರಮದಿಂದ ನಡೆವಾಗ ಹೆಮ್ಮೆ ಎನಿಸುತ್ತಿತ್ತು. ಅದೆಷ್ಟು ಜಾತ್ರೆಗಳ ಸುತ್ತಿದ್ದ ಅವನು. ಮತ್ತೆ ಅದೇ ಬದುಕು ಅವನ ಸುತ್ತಿ ಕೊಂಡಿತು. ಜಾತ್ರೆ ಇದ್ದಷ್ಟು ದಿನ ಅಲ್ಲೇ ಉಳಿದ. ಜಾತ್ರೆ ಮುಗಿಯಿತು. ಬಂದವರು ಹೊರಟರು ಒಂಟಿಯಾಗಿ. ಅವನೆಂದುಕೊಂಡ ಇವರೊಡನೆ ಹೊರಟರೆ ಹೇಗೆ ಅಂದುಕೊಂಡ. ಆ ಗುಡ್ಡದ ಗುಡಿಸಲೇ ವಾಸಿ ಎನಿಸಿ ಮರಳಿದ…….. ಇರುವವರೆಗೆ ಒಬ್ಬನಾಗಿಯೇ ಉಳಿದ. ಊರಿಗೆ ಮರಳಿದ ಅವನ ಕಂಡವರಿಗೆ ಖುಷಿ ಎನಿಸಿತು. ತಾನೇ ಕಟ್ಟಿದ ಗುಡಿಸಲಿಗೆ ಬಂದು ಕುಳಿತು ಹೊರಗೆ ನೋಡಿದ. ಅಸ್ತದ ವಿಶಾಲ ನೋಟ ಅಚ್ಚರಿಯೊಳಗಿನ ಬಂಧುತ್ವ ಎನಿಸಿತು. ಜಗದ ನಿಯಮಕೆ ಎಲ್ಲವೂ ವಾಸ್ತವದ ಪ್ರತಿಬಿಂಬಗಳು. ನನ್ನ ಉಸಿರು ಕೂಡಾ ಹಾಗೆ ಅಂದುಕೊಂಡ. ಬದುಕಿದ. ಎಲ್ಲರೊಳಗೆ ನಾನು ಒಬ್ಬ ಎಂದು ಅಂದುಕೊಂಡ. ಸಾಗುವ ಬದುಕಿನ ಚಿತ್ರದಲ್ಲಿ ಸಾಗಿ ಹೋದ ಒಬ್ಬನಾಗಿ. ನಾಗರಾಜ ಬಿ. ನಾಯ್ಕ.

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ Read Post »

ಇತರೆ, ಜೀವನ

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಜಪಾನೀಯರ ದೀರ್ಘಾಯುಷ್ಯದ ಗುಟ್ಟು”  ಇತ್ತೀಚಿಗಿನ ವರದಿಯ ಪ್ರಕಾರ ಜಪಾನಿನಲ್ಲಿ 95,000ಕ್ಕೂ ಹೆಚ್ಚು ಶತಾಯುಷಿಗಳಿದ್ದಾರೆ. ಆರೋಗ್ಯವಾಗಿ ಓಡಾಡಿಕೊಂಡು ತಮ್ಮ ದೈನಂದಿನ ಬದುಕನ್ನು ನಡೆಸುತ್ತಿರುವ ಅವರನ್ನು ನೋಡಿದಾಗ ಅಬ್ಬಾ ಎಂಥ ಅದೃಷ್ಟವಂತರು ಇವರು ಎಂದು ನಮಗೆ ಅನಿಸಿದರೆ ತಪ್ಪಿಲ್ಲ.  ಆದರೆ ಇಲ್ಲಿ ಕೇವಲ ಅದೃಷ್ಟದ ಪಾಲು ಇಲ್ಲ. ದೀರ್ಘಾಯುಷ್ಯ ಅವರ ವಂಶವಾಹಿಗಳಲ್ಲಂತೂ ಮೊದಲೇ ಇಲ್ಲ….. ಹಾಗಿದ್ದರೆ ಅವರ ದೀರ್ಘಾಯುಷ್ಯದ ಗುಟ್ಟೇನು? ಎಂದು ಕೇಳಿದರೆಅವರ ಶಾಂತ ಸ್ವಭಾವ, ಉದ್ದೇಶ ಹಾಗೂ ಆಳವಾದ ಬುದ್ದಿವಂತಿಕೆ ಎಂದು ಹೇಳಬಹುದು.  ಬದುಕಿನಲ್ಲಿ ಅವರ ಕೆಲವು ಅಭ್ಯಾಸಗಳನ್ನು  ಅರ್ಥಮಾಡಿಕೊಳ್ಳೋಣ* ಅವರು ಅತ್ಯಂತ ಧಾನಪೂರ್ವಕವಾಗಿ ಆಹಾರವನ್ನು ಸೇವಿಸುತ್ತಾರೆ ಹಾಗೂ ಅನವಶ್ಯಕವಾಗಿ ಹೆಚ್ಚು ಆಹಾರವನ್ನು ಸೇವಿಸುವುದಿಲ್ಲ ಅವರು ಸೇವಿಸುವ ಆಹಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.ತಾಜಾ ಆಗಿರುವ, ಆಯಾ ಋತುಮಾನದಲ್ಲಿ ದೊರೆಯುವ ತರಕಾರಿ, ಹಣ್ಣು, ಆಹಾರಗಳನ್ನು ಅವರು ಸೇವಿಸುತ್ತಾರೆ.ಸಾಧ್ಯವಿದ್ದಷ್ಟು ತರಕಾರಿಗಳು, ಅಕ್ಕಿ, ಮೀನು ಹಾಗೂ ಹುದುಗು ಬರಿಸಿದ ಆಹಾರ ಪದಾರ್ಥಗಳು ಅವರ ಮೊದಲ ಆದ್ಯತೆ. ತಮ್ಮ ಅವಶ್ಯಕತೆಯ 80% ನಷ್ಟು ಆಹಾರವನ್ನು ಮಾತ್ರ ಅವರು ಸೇವಿಸುತ್ತಾರೆ…. ಅಂದರೆ ಹೊಟ್ಟೆ ತುಂಬುವ ಮುನ್ನವೇ ಅವರು ಆಹಾರ ಸೇವನೆಯನ್ನು ನಿಲ್ಲಿಸುತ್ತಾರೆ.‘ಹರಾ ಹಚೀ ಬು’ ಎಂದರೆ ನಿಮ್ಮ ಅವಶ್ಯಕತೆಯ ಕೇವಲ 80 ಶೇಕಡಾ ಆಹಾರವನ್ನು ನೀವು ಸೇವಿಸಿ ಎಂಬ ನಿಯಮವನ್ನು ಅವರು ಪಾಲಿಸುತ್ತಾರೆ. *ಸಾಮಾನ್ಯವಾಗಿ ಅವರು ಅತ್ಯಂತ ಸಹಜವಾಗಿ, ನೈಸರ್ಗಿಕವಾಗಿ ಪ್ರತಿದಿನ ನಡೆದಾಡುತ್ತಾರೆ.ಮನೆಯ ಕೈದೋಟಗಳನ್ನು ನಿರ್ವಹಿಸುತ್ತಾ ಓಡಾಡುತ್ತಾರೆ.ಇತರರನ್ನು ಅವಲಂಬಿಸದೆ ಮನೆಯ ಸ್ವಚ್ಛತೆಯನ್ನು ತಾವೇ ಮಾಡಿಕೊಳ್ಳುತ್ತಾರೆ. ಚಿಕ್ಕ ಪುಟ್ಟ ದೂರವನ್ನು ಮಾತ್ರವಲ್ಲದೆ ತುಸು ಹೆಚ್ಚಿನ ದೂರವನ್ನು ಕೂಡ ಅವರು ನಡೆದು ಪೂರೈಸುತ್ತಾರೆಪ್ರತಿದಿನ ಕೆಲ ಸೂಕ್ತ ವ್ಯಾಯಾಮಗಳನ್ನು ಮಾಡುತ್ತಾರೆ.ಅವರು ವ್ಯಾಯಾಮ ಮಾಡಲು ಜಿಮ್ ನಂತಹ ಯಂತ್ರಗಳ ಅವಲಂಬನೆಯನ್ನು ಮಾಡದೆ ಅತ್ಯಂತ ಸಹಜವಾಗಿ ಅವರು ಓಡಾಡಿಕೊಂಡು ತಮ್ಮ ನಿತ್ಯ ಬದುಕನ್ನು ನಡೆಸುತ್ತಾರೆ. ಪ್ರತಿದಿನ ಮುಂಜಾನೆ ಬೇಗನೆ ಏಳಲು ಅವರಿಗೆ ಅವರದ್ದೇ ಆದ ಕಾರಣವಿದೆ. ಇಕಿಗಾಯಿ ಎಂದು ಅದಕ್ಕೆ ಹೆಸರು. ಅದೆಷ್ಟೇ ಚಿಕ್ಕದಾದ ವಸ್ತು, ವಿಷಯವಿರಲಿ ಅದರಲ್ಲಿ ಒಂದು ಉದ್ದೇಶವನ್ನು ಅವರು ಹೊಂದಿರುತ್ತಾರೆ. ಸದಾ ಚಟುವಟಿಕೆಯಿಂದ ಇರುತ್ತಾರೆ.ಎಂದೂ ನಿವೃತ್ತರಾಗುವುದಿಲ್ಲ. ಸಾಧ್ಯವಾದಷ್ಟು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಪ್ರತಿ ಹುಟ್ಟುಹಬ್ಬಕ್ಕೂ ಮತ್ತಷ್ಟು ಆರೋಗ್ಯವಂತರಾಗಿರುವ ಆಶಯವನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. *ಮಕ್ಕಳನ್ನು, ಮೊಮ್ಮಕ್ಕಳನ್ನು ಕಾಳಜಿ ಮಾಡುವ ಅವರೇ ಎಲ್ಲ ಕೆಲಸ ಕಾರ್ಯಗಳನ್ನು ಅವರು ನಿರ್ವಹಿಸಲು ಸಹಾಯ ಮಾಡುವರು. ಚಿಕ್ಕ ಸಸಿ ಇರಲಿ ದೊಡ್ಡ ಮರವಿರಲಿ ಅದನ್ನು ಕೂಡ ಅತ್ಯಂತ ಕಾಳಜಿ ಪೂರ್ವಕವಾಗಿ ಬೆಳೆಸುತ್ತಾರೆ . ಸಮಾಜದ ಹಾಗೂ ಸಮುದಾಯದ ಕುರಿತು ಕೂಡ ಅದೇ ಪ್ರಮಾಣದ ಕಾಳಜಿಯನ್ನು ಅವರು ಹೊಂದಿರುತ್ತಾರೆ. ತಮ್ಮನ್ನು ತಾವು ಅತ್ಯಂತ ಉಪಯುಕ್ತ ಮತ್ತೊಬ್ಬರ ಅವಶ್ಯಕತೆಗೆ ಜೊತೆಯಾಗುವ ಹಾಗೂ ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿರುತ್ತಾರೆ   ಅತ್ಯಂತ ಬಲವಾದ ಸಾಮಾಜಿಕ ಬಂಧುಗಳನ್ನು ಕೂಡ ಅವರು ಕಾಯ್ದುಕೊಳ್ಳುತ್ತಾರೆ *ಕುಟುಂಬ ಮತ್ತು ನೆರೆಹೊರೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹಾಗೂ ನಿರಂತರ ಸಂಪರ್ಕವನ್ನು ಹೊಂದಿರುತ್ತಾರೆ. ಹಿರಿಯರಿಗೆ ಅನಾದರ ತೋರದೆ ಗೌರವ ಪೂರ್ವಕವಾಗಿ ನಡೆಸಿಕೊಳ್ಳುತ್ತಾರೆ.ಒಂಟಿತನವನ್ನು ಅವರು ಬಯಸುವುದಿಲ್ಲ ಸದಾ ಸಮಾಜದ ಸಮುದಾಯದ ಜೊತೆ ಬೆರೆತು ಅದರ ಆಗುಹೋಗುಗಳಲ್ಲಿ ಒಂದಾಗಿ ನಡೆಯುತ್ತಾರೆ ಅತ್ಯಂತ ಕಡಿಮೆ ಒತ್ತಡವನ್ನು ಹೊಂದಿರುತ್ತಾರೆ ಇದು ಅವರ ನರವ್ಯೂಹವನ್ನು ಶಾಂತಗೊಳಿಸುತ್ತದೆ. ಬದುಕಿನಲ್ಲಿ ಅತ್ಯಂತ ಕಡಿಮೆ ಅವಶ್ಯಕತೆಗಳು ಹಾಗೂ ಹೆಚ್ಚು ಉಪಯುಕ್ತತೆ ಯನ್ನು ಬಯಸುವ ವ್ಯಕ್ತಿತ್ವ ಅವರದಾಗಿದ್ದು ಅತ್ಯಂತ ನಿಧಾನ ಆದರೆ ಅಷ್ಟೇ ಅರ್ಥಪೂರ್ಣವಾದ ಶೈಲಿಯ ಬದುಕು ಅವರದಾಗಿರುತ್ತದೆ. ನಿರಂತರವಾಗಿ ಎಲ್ಲವನ್ನು ವಿರೋಧಿಸದೆ  ಒಪ್ಪಿಕೊಳ್ಳುವ ಮನೋಭಾವವನ್ನು ಹೊಂದಿರುತ್ತಾರೆ.ಹಣ, ಆಸ್ತಿ, ಅಂತಸ್ತುಗಳ ಕುರಿತು ಅವರಿಗೆ ವಿಶೇಷ ಮೋಹ ಇರುವುದಿಲ್ಲ. ಇತರರೊಂದಿಗೆ ಹೋಲಿಕೆ ಮಾಡಿಕೊಂಡು ವ್ಯಥೆ ಪಡುವ ಸ್ವಭಾವ ಕೂಡ ಅವರದಲ್ಲ. * ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಅವರದ್ದುಮನೆಯಲ್ಲಿ ಅತಿಯಾಗಿ ಲೈಟುಗಳನ್ನು ಫ್ಯಾನುಗಳನ್ನು ಉರಿಸುವುದಿಲ್ಲ ನೈಸರ್ಗಿಕ ಗಾಳಿ, ಬೆಳಕನ್ನು ಹೆಚ್ಚು ಆಸ್ವಾದಿಸುತ್ತಾರೆ. ಅವರ ದಿನಚರ್ಯ ಹಾಗೂ ಋತುಚರ್ಯಗಳಿಗೆ ಅನುಸಾರವಾಗಿ ಬದುಕನ್ನು ನಡೆಸುತ್ತಾರೆ. ಬದುಕಿನ ಕುರಿತು ಅಪಾರ ಗೌರವವನ್ನು ಹೊಂದಿರುವ ಅವರು ಆಹಾರ ಸೇವನೆಯ ಕುರಿತು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯನ್ನು ತೋರುತ್ತಾರೆ ಯಾವುದನ್ನೇ ಆಗಲಿ ಪೋಲು ಮಾಡದೆ ಬಳಸುವ ರೂಢಿಯನ್ನು  ಹೊಂದಿರುತ್ತಾರೆ.ತಮ್ಮ ದೇಹದ ಕುರಿತು ಕೂಡ ಅಷ್ಟೇ ಕಾಳಜಿ, ಗೌರವವನ್ನು ಹೊಂದಿದ್ದು ಪ್ರೀತಿಪೂರ್ವಕ ಪೋಷಣೆ ಅವರದ್ದಾಗಿರುತ್ತದೆ. *ಸಂತೋಷಕ್ಕಾಗಿ ಅವರು ಹಪಹಪಿಸುವುದಿಲ್ಲ ಬೆನ್ನತ್ತುವುದಿಲ್ಲ…. ಅವರು ಬದುಕಿನಲ್ಲಿ ಸಮತೋಲನವನ್ನು ಇಚ್ಚಿಸುತ್ತಾರೆ ಹಾಗೂ ಅದನ್ನೇ ಅಳವಡಿಸಿಕೊಳ್ಳುತ್ತಾರೆ.ಅವರು ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆಬದುಕಿನ ತಾತ್ಕಾಲಿಕ ವಿಷಯ ಸುಖಗಳ ಕುರಿತು ಅವರಿಗೆ ಅರಿವು ಇದ್ದು ಅಶಾಶ್ವತತೆಯನ್ನು ಒಪ್ಪಿಕೊಂಡು ಬಾಳುತ್ತಾರೆ.ಯಾವುದೇ ರೀತಿಯ ದ್ವೇಷ ಅಸಹನೆ ಅಸಮಾಧಾನಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಂಡು ಮಾನಸಿಕವಾಗಿ ಬೇಯುವುದಿಲ್ಲ…. ಹೋಗಲಿ ಬಿಡು ಎಂದು ವಿಷಯಗಳನ್ನು ಅವು ಇರುವಂತೆಯೇ ಒಪ್ಪಿ ಅಪ್ಪಿಕೊಳ್ಳುತ್ತಾರೆ.  ನೋಡಿದಿರಾ ಸ್ನೇಹಿತರೆ,ಬುದ್ಧನ ಎಲ್ಲ ಬೋಧನೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಅವರು ಹೇರಳತೆಯ ವಿರುದ್ಧ ವಿರಳತೆಯನ್ನು ಅತಿ ಬಳಕೆಯ ವಿರುದ್ಧ ಸರಳತೆಯನ್ನು ಭೋಗ ಮತ್ತು ಲಾಲಸೆಯ ಬದುಕಿನ ಮೇಲೆ ಮಿತಿಯನ್ನು ತಮ್ಮನ್ನು ವಿಚಲಿತಗೊಳಿಸುವ ವಿಷಯಾಸಕ್ತಿಗಳ ಕುರಿತು ಅರಿವನ್ನು ಹೊಂದಿರುತ್ತಾರೆಒಬ್ಬಂಟಿತನದ ವಿರುದ್ಧ ಸಮುದಾಯದ ಜೊತೆಗಿನ ಭಾಗವಹಿಸುವಿಕೆಯನ್ನು ಹೊಂದಿರುತ್ತಾರೆ. ಇವೆಲ್ಲವೂ ಬೌದ್ಧ ಧರ್ಮದ ಬೋಧನೆಯ ಜಾಣ್ಮೆಯನ್ನು ಬದುಕಿನ ಕನ್ನಡಿಯಲ್ಲಿ ಅಳವಡಿಸಿಕೊಂಡು ನಮ್ಮನ್ನು ನಾವು ನೋಡಿಕೊಳ್ಳಲು ಅವರು ಬಳಸುವ ವಿಧಾನಗಳು. ಅಂತಿಮವಾಗಿ ದೀರ್ಘಾಯುಷ್ಯ ಎಂದರೆ ಬದುಕಿನ ದಿನಗಳಿಗೆ ಮತ್ತಷ್ಟು ಆಯುಷ್ಯವನ್ನು ತುಂಬುವುದು ಅಲ್ಲ.ಮತ್ತಷ್ಟು ಹೆಚ್ಚು ವರ್ಷ ಬಾಳುವುದಂತೂ ಅಲ್ಲವೇ ಅಲ್ಲ…. ಇದು ಬದುಕಿನಲ್ಲಿ ನಮಗೆ ನಿಧಾನ ವಿಷವಾಗಿ ಪರಿಣಮಿಸುವ ವಸ್ತು, ವಿಷಯ ಹಾಗೂ ವ್ಯಕ್ತಿಗಳನ್ನು ನಿರಾಕರಿಸುವ ದೂರವಿಡುವ ಒಂದು ಪ್ರಕ್ರಿಯೆ.  ಹಾಗಾದರೆ ಬದುಕಿನಲ್ಲಿ ನಿಧಾನ ವಿಷವಾಗಿ ಪರಿಣಮಿಸುವ ವಿಷಯಗಳು ಯಾವುವು ಎಂದರೆ* ಅತಿಯಾದ ಒತ್ತಡ *ಅತಿಯಾದ ಆಹಾರ ಸೇವನೆ *ಒಬ್ಬಂಟಿತನ *ಎಲ್ಲದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವುದು /   ಆತುರತೆಯನ್ನು ತೋರುವುದು *ಅರ್ಥ ರಹಿತ ಬದುಕನ್ನು ನಡೆಸುವುದು ಹಾಗೂ ಅಂತಿಮವಾಗಿ ಇನ್ನೊಬ್ಬರೊಂದಿಗೆ ನಮ್ಮ ಬದುಕನ್ನು ಹೋಲಿಸಿಕೊಂಡು ವ್ಯಕ್ತಪಡುವುದು ಸ್ನೇಹಿತರೇ…ಜಪಾನೀಯರು ದೀರ್ಘಾಯುಷಿಗಳಾಗಲು ಕಾರಣ ಅವರು ಹೆಚ್ಚೇನು ಮಾಡಿಲ್ಲ ಬದಲಾಗಿ ಜಾಣತನದಿಂದ ತಮ್ಮ ಬದುಕನ್ನು ನಡೆಸುವ ಮೂಲಕ ಅನಾವಶ್ಯಕ ವಿಷಯಗಳನ್ನು ದೂರವಿಟ್ಟಿದ್ದಾರೆ.ಬಹಳಷ್ಟು ಬಾರಿ ದೀರ್ಘಾಯುಷ್ಯದ ಗುಟ್ಟು ಯಾವುದೇ ಔಷಧಿ ಚಿಕಿತ್ಸೆಗಳಲ್ಲಿ ಇಲ್ಲ… ಬೇರೆಯವರು ನಮ್ಮ ಕುರಿತು ಗಮನ ಹರಿಸದೇ ಇದ್ದಾಗಲೂ ಕೂಡ ನಾವು ಹೇಗೆ ನಮ್ಮ ಬದುಕನ್ನು ನಡೆಸುತ್ತೇವೆ ಎಂಬುದು ನಮ್ಮ ದೀರ್ಘಾಯುಷ್ಯದ ಗುಟ್ಟಾಗಿರಬೇಕು. ವೀಣಾ ಹೇಮಂತ್ ಗೌಡ ಪಾಟೀಲ್

“ಜಪಾನೀಯರ ದೀರ್ಘಾಯುಷ್ಯದ ಗುಟ್ಟು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನು ಬಾಳ ಪುಸ್ತಕಕೆ ಮುನ್ನುಡಿ ಬರೆದಿದ್ದಾನೆಬದುಕಿನ ಪುಟ ಪುಟಕೂ ಚೆನ್ನುಡಿ ಬರೆದಿದ್ದಾನೆ ಲೋಕದ ಸುಖವೆಲ್ಲ ನನಗೆ ಇರಲೆಂಬ ಹಂಬಲಮುಖಪುಟಕೆ ಬಣ್ಣ ತುಂಬಿ ನಲ್ನುಡಿ ಬರೆದಿದ್ದಾನೆ ಅನಂತತೆಯ ಹರವಿನಲಿ ನಾನೊಂದು ಬಿಂದುಅಕ್ಷರ-ಅಕ್ಷರ ಸರಿಪಡಿಸಿ ಹೊನ್ನುಡಿ ಬರೆದಿದ್ದಾನೆ ತಾನೆಟ್ಟ ಸಸಿ ಆಗಸದೆತ್ತರಕೆ ಹಬ್ಬಲೆಂಬ ಆಶಯ ಉಳಿಯಲೆಂದು ಕಾಪಿಟ್ಟು ಜೇನ್ನುಡಿ ಬರೆದಿದ್ದಾನೆ ಬೆರಗಿನಲ್ಲಿ ಜಗವಿದನು ಓದಬೇಕೆಂಬ ಹರಕೆ ಅವನದುಮುಗುದೆ ಅರುಣಾಳ ಬೆನ್ನು ತಟ್ಟಿ ಬೆನ್ನುಡಿ ಬರೆದಿದ್ದಾನೆ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಶರಣಾಗಿರುವೆ ನಿನಗೀಗ” ಓ ಮೌನವೇ! ಮಹಾಮೌನವೇ!ನೀರವ ನಿರಾಳ ಮೌನವೇ!ಬಾ ನನ್ನೆದೆಯಾಳದಲಿನಿಶ್ಚಲವಾಗಿ ನೆಲೆಸುಶರಣಾಗಿರುವೆ ನಿನಗೀಗಸೋತು ಬಂದಿರುವೆ ನಿನ್ನ ಬಳಿಗೀಗಕರುಣೆದೋರು ದಯೆತೋರಿ|| ಓ!ಅನಂತ ಮಹಾಮೌನವೇ!ನಿನ್ನ ಮೌನಗರ್ಭದಲಿ ಮಿಸುಕಾಡುತಿರುವಭಾವಕೂಸುಗಳೆಲ್ಲ ಸುಂದರ ಪದಗಳೇಒಂದೊಂದು ಮೌನ ಮಹಾಕಾವ್ಯಗಳೇ|| ತೀಡಿ ಬಂದ ತಂಗಾಳಿಯುತೂಗಿ ತಂದ ಮಣ್ಣ ಗಂಧವೆಲ್ಲಬಾಳ ಗಂಧವೇlತುಂಬಿ ಬಂದ ತಾಯ್ ಮಮತೆಯೆಲ್ಲಮಡಿಲ ಮಗುವಿಗೆ ಜೋಗುಳವೇ lಮೌನದ ಬಿಸಿ ಅಪ್ಪುಗೆಯದುಸುಂದರ ಭಾಷೆಯೇ ll ಪ್ರಕೃತಿಯ ಭಾಷೆಯೆಲ್ಲವೂ ಮೌನವೇlಮೊಗ್ಗೆಯೊಡೆದು ಅರಳುವ ಅರಳೇ!ಒಲವಿನ ಬೆಳಕೇ!ಸದ್ದಿಲ್ಲದೇ ನಡೆಯುವ ಸಂಭ್ರಮವೇ! ಓ ಮೌನವೇ!ಸೂರ್ಯೋದಯ ಚಂದ್ರೋದಯನಿನ್ನ ಪದ ಲಾಲಿತ್ಯವೇ lದಣಿದ ಮನಗಳಿಗೆ ನಿನ್ನ ಮಡಿಲದುಹೂವಿನ ಹಾಸಿಗೆಯೇ ll ಗಾಳಿಯ ಮೃದು ಸ್ಪರ್ಶಕೆ ತೂಗುವಸಸ್ಯ ಕುಲವೇ ಭೂ ದೇವಿಯ ದಣಿವಿಗೆಬೀಸಿದ ಮೌನ ಚಾಮರವೇ llಅಯ್ಯೋ!ಗಳಿಗೆಗೊಂದು ತೆರೆ ಬಂದುಕಲಕುತಿದೆ ಕಡಲ ಧ್ಯಾನವನೆ lಹಕ್ಕಿಗಳಿಂಚರವದು ತೇಲಿ ಬಂದುಕದಡುತಿದೆ ಅನಂತಕಾಲದ ಬನದ ತಪವನೆ lನೀರವತೆಯಲೂ ಮೌನವೇಸದ್ದಿನಲ್ಲೂ ನಿದ್ದೆಯೇ lಮೌನವೇ ಇದೆಲ್ಲ ನಿನ್ನ ಲೀಲೆಯೇ ll ಋಷಿಮುನಿಗಳ ಕವಿಪುಂಗವರೆದೆಯಲಿವಿರಮಿಸಿದ ಮಾತೆಯೇ!ಮೌನ ತಪಸ್ವಿನಿಯೇ!ಜಗದ ಸುಂದರ ಭಾಷಿಣಿ ನೀನೆಯೇ llಕರುಣೆದೋರಿ ಬಾ ನನ್ನೊಳಗೆ ತಾಯಿಯೇ lಮೌನದೇವಿಯೇ!ಅನಂತಯಾನಕೆ ಮೌನದಲಿಕೈಹಿಡಿದು ನಡೆಸೆನ್ನನುl ಶರಣಾಗಿರುವೆ ನಾನೀಗ ನಿನಗೆಓ!ಮೌನದೇವತೆಯೇನಾನೀಗ ಶರಣಾಗಿರುವೆ ನಿನ್ನಡಿಗಳಿಗೆಓ!ಮೌನ ದೇವತೆಯೇಶರಣಾಗಿರುವೆ ನಿನಗೀಗ ಶರಣಾಗಿರುವೆ. ಡಾ. ಪುಷ್ಪಾವತಿ ಶಲವಡಿಮಠ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಜಾತಿಭೂತ” ಹಿಡ್ಕೊಂಡದ ಬಡ್ಕೊಂಡದಹಾಳು ಜಾತಿಯ ಭೂತ,ಅದರ ಬೆನ್ನು ಹತ್ತಿ ಹತ್ತಿಯೇಈ ಮನುಷ್ಯಾ ಸೋತ ಮ್ಯಾಲ ಮ್ಯಾಲಂತ ಇವ್ರುತುಂಬಾ ಮೆರಿಲಾಕತ್ತಾರ,ಕೀಳ ಕೀಳ ಅಂತ ಅವ್ರನತುಂಬ ತುಳಿಲಾಕತ್ತಾರ ಖೊಟ್ಟಿ ಮಂದಿ ಎಲ್ಲ ಸೇರಿಗಟ್ಟ್ಯಾನ ಗ್ವಾಡಿ ಕಟ್ಟ್ಯಾರ,ಆರಕ ಜೋತ ಬಿದ್ದ ಮ್ಯಾಲಇದ್ದ ಮೂರನ್ನೂ ಬಿಟ್ಟಾರ ಜಾತಿಯ ಹೆಸರಲ್ಲಿ ಎಷ್ಟೋಜೀವಗಳ ಬಲಿ ಕೊಟ್ಟಾರ,ದೇವ್ರು ದಿಂಡ್ರೆಲ್ಲವು ಕೂಡಜಾತಿಗಿ ಸೇರಿಸಿ ಬಿಟ್ಟಾರ ಭೂಮಿ ಮ್ಯಾಲ ಏನಂತಇಂತವರೆಲ್ಲ ಹುಟ್ಟ್ಯಾರ,ಜಾತಿ ಜಾತಿ ಅಂತಾ ಹೇಳಿಮನುಷ್ಯತ್ವವ ಸುಟ್ಟಾರ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ” Read Post »

ಕಾವ್ಯಯಾನ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ”

ಕಾವ್ಯ ಸಂಗಾತಿ ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ”. ಮರಿ ಹಕ್ಕಿಗೆ ರೆಕ್ಕೆಗಳಿವೆಎಲ್ಲವನು ಎದುರಿಸುವಛಲವಿದೆಆಗಸದೆತ್ತರಕ್ಕೆ ಏರುವಆಕಾಂಕ್ಷೆಯಿದೆರೆಕ್ಕೆಯ ಶಕ್ತಿಗೆ  ಅನುಮತಿಗಿಂತಪ್ರೀತಿ ವಿಶ್ವಾಸದಆರೈಕೆಯಿರಲಿಬಾನೆತ್ತರಕೆ ಹಾರಬೇಕಾದಒಲವಿರಲಿಜೊತೆಯಿರುವೆನೆಂಬ ಭರವಸೆಯಿರಲಿಸಂವಾದದಸಂವೇದನೆಯಿರಲಿ. ಪ್ರೊ. ರಾಜೇಶ್ವರಿ ಶೀಲವಂತ ಪುಣೆ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ” Read Post »

ಇತರೆ

“ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ವನಜ ಮಹಾಲಿಂಗಯ್ಯ ಮಾದಾಪುರ.                     

ಮಾಧ್ಯಮ ಸಂಗಾತಿ ವನಜ ಮಹಾಲಿಂಗಯ್ಯ .                      “ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ಈಗ ಏಳೆಂಟು ವರ್ಷಗಳ ಹಿಂದೆ ಹೋಗಿ ನೋಡಿ, ಮೊಬೈಲ್ ಗಳನ್ನಿಡಿದು ರಸ್ತೆಗಳಲ್ಲಿ ಹುಚ್ಚರಂತೆ ಒಬ್ಬೊರೇ ಮಾತನಾಡುತ್ತಾ, ಕಿವುಡರು ಹಾಕಿಕೊಳ್ಳುವ ಮಿಷನ್ಗಳಂತೆ  ಇಯರ್ ಪೋನ್, ಬ್ಲೂಟೂತ್ ಹಾಕಿಕೊಂಡು ಓಡಾಡುವವರನ್ನು ನೋಡಿ ಏನಪ್ಪ ಇದು  ಅನ್ನೋ ತರ ಆಗಿತ್ತು. ಇತ್ತೀಚೆಗಂತೂ ಮೊಬೈಲ್ ನ ಹಾವಳಿ  ಬೇರೆ ತರ ಆಗಿದೆ.watsapp , F b, insta ದಲ್ಲಿ ಪರಿಚಯವಾದವರ ಜೊತೆಯಲ್ಲಿ ಚಾಟಿಂಗ್ ಮಾಡ್ತಾ ಮಾಡ್ತಾ ಮನೆಯ ಪ್ರತಿಯೊಂದು ವಿಷಯಗಳನ್ನು ವಿವರವಾಗಿ ಹಂಚಿಕೊಳ್ಳುವ ಪ್ರವೃತ್ತಿಯನ್ನು ಮಕ್ಕಳು ಹೆಚ್ಚಾಗಿಯೇ ಬೆಳಸಿಕೊಳ್ಳುತ್ತಿದ್ದಾರೆ.ಇದನ್ನೇ ಬಳಸಿಕೊಂಡು  ಹುಡುಗಿಯರ  ಜೊತೆ ಸಲುಗೆಯಿಂದ ಮಾತನಾಡುತ್ತಾ ಅವರನ್ನು ಸಂತೈಸುತ್ತ  ನಾಟಕವಾಡುವ ಮಂದಿ ಜಾಸ್ತಿಯಾಗುತ್ತಿದ್ದಾರೆ.ಆದರೆ ಮಕ್ಕಳು ತಂದೆ ತಾಯಂದಿರ ಪ್ರೀತಿ ಅವರ ಜವಾಬ್ದಾರಿಗೆ ಬೆಲೆ ಕೊಡದೇ ಮೂರು ದಿನದ ಪರಿಚಯಸ್ಥರಿಗೆ ತಮ್ಮೆಲ್ಲಾ ಗುಟ್ಟನ್ನು ಬಿಟ್ಟುಕೊಟ್ಟು ಮೂರ್ಖರಾಗುತ್ತಿದ್ದಾರೆ. ಎಷ್ಟೇ ಆಗಲಿ ನನ್ನ ಅಪ್ಪ ಅಮ್ಮ ಹೆತ್ತು ಹೊತ್ತು ಸಾಕಿ ನಮ್ಮನ್ನು ಬೆಳೆಸಲು ಎಷ್ಟು ಕಷ್ಟ ಕಾಳಜಿ ವಹಿಸಿದ್ದಾರೆ ಎನ್ನುವ  ಅರಿವಿಲ್ಲದೆ ಮನೆಯ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದು ಎಷ್ಟು ಸರಿ? ಮೊನ್ನೆ ಇದೇ ತರಹದ ಒಂದು ದೂರು ನನಗೆ ಬಂದಿತ್ತು.ಅಪ್ಪ ಅಮ್ಮನಿಗೆ ಮಗಳಿಂದ ತುಂಬಾ ಕಿರುಕುಳ, ಮಾತೇ ಕೇಳುವುದಿಲ್ಲ, ಪಿ ಜಿ ಗೆ ಸೇರಿಸಿ   ಎಂದು ಒತ್ತಾಯ ಮಾಡುತಿದ್ದಾಳೆಂದು. ನಾನು ಹೋದೆ ಅಲ್ಲಿ ಅವಳ ತಂದೆ ತಾಯಿ ಅವಳ ಬಗ್ಗೆ ಏನು ಹೇಳಲು ಹುಡುಗಿ ಬಿಡುತ್ತಿಲ್ಲ.ಒಂದೇ ಹಠ ನನ್ನ ಪಿಜಿಗೆ ಕಳಿಸಿ ಮೇಡಂ ನಾನು ಮನೆಯಲ್ಲಿರುವುದಿಲ್ಲ. ನನಗೆ ತುಂಬಾ ಕಿರುಕುಳ ಕೊಡುತ್ತಾರೆ ನಾನು ಪಿ ಜಿಯಲ್ಲಿರುತ್ತೇನೆ ಎಂದು. ಯಾಕೆ ಇಂತಹ ತೀರ್ಮಾನವೆಂದು ಕೆಳಿದರೆ ನನಗೆ ಮನೆಯಲ್ಲಿರಲು ಇಷ್ಷವಿಲ್ಲ.ಒಂದೇ ಉತ್ತರ. ನಾನಾಗ ನಿನ್ನ ಮೊಬೈಲ್ ಕೊಡು ಎಂದು ಕೇಳಿದೆ. ಇಲ್ಲ ಮೇಡಂ ನನ್ನ ಹತ್ತಿರ ಮೊಬೈಲ್ ಇಲ್ಲಅಂದಳು .ಇದೆ ಎಂದು ಅವರ ತಾಯಿ ಹೇಳಿದರು..ಕೊಡು ಎಂದೆ ತಂಬಾ ಜೋರುಮಾಡಿದ ಮೇಲೆ ಸ್ವಿಚ್ ಆಫ್ ಮಾಡಿ   ಬಚ್ಚಿಟ್ಟ ಮೊಬೈಲ್ ಕೊಟ್ಟಳು. ಲಾಕ್ ಓಪನ್ ಮಾಡೆಂದರೆ ಮಾಡಲೇ ಇಲ್ಲ ಗೊತ್ತಿಲ್ಲ, ಮರೆತೋಗಿದೆ ಅಂದಳು. ಸಿಟ್ಟು ಬಂದು ಎರಡು ಬಿಟ್ಟೆ.ಆಗ ಆನ್ ಮಾಡಿದಳು.ನಾನು ತೆಗೆದು ನೋಡ್ತಿನಿ ಮನೆಯಲ್ಲಿ ನಡೆಯೋದನ್ನೆಲ್ಲ ಒಬ್ಬ ಹುಡುಗನಿಗೆ ಮೆಸೇಜ್ ಮಾಡಿದಾಳೆ. ಅವನ್ಯಾರೆಂದು ಕೇಳಿದೆ , f b ಸ್ಹೇಹಿತ  ತುಂಬಾ ಒಳ್ಳೆಯವನು ಅಂದಳು. ಸರಿ ಅಂದು  ಅವನಿಗೆ ಕಾಲ್ ಮಾಡಿದೆ.ಯಾರೆಂದು ವಿಚಾರಿಸಿದೆ,  ಅವನು ಬೇಂಗಳೂರಿನಲ್ಲಿ ಕೋರಿಯರ್ ಬಾಯ್. ಅಂತೆ ,  ಏನಪ್ಪ ನೀನು ನಮ್ಮ ಹುಡುಗಿಗೆ  ಇಷ್ಷವಾಗಿದಿಯಂತೆ ಇವಳಿಗೆ ಮದುವೆ ಮಾಡ್ಕೋತಿಯಾ? ಅಂತ ಕೇಳಿದೆ. ಸ್ಪೀಕರ್ ಅನ್ ಮಾಡಿದ್ದೆ  ನಾನ್ಯಾಕರಿ ಅವಳನ್ನ ಮದುವೆಯಾಗಲಿ ಟೈಂಪಾಸಿಗೆ ಅವಳ ಹತ್ತಿರ ಮಾತಾಡ್ತಿದ್ದೆ , ನನಗೆ ಲವ್ವರ್ ಇದಾಳೆ ಅಂದ. ಹುಡುಗಿ ಶಾಕ್!  ಅವಳು ಪಿ ಜಿ ಗೆ ಹೊರಟಿದ್ದು ಅವನ ಜೊತೆ ಚಾಟಿಂಗ್ ಮಾಡಲಿಕ್ಕೆ.ಅವನು ಹೇಳಿದ್ದು ಕೇಳಿದ ನಂತರ ನಾನು ಎಲ್ಲಿಗೂ ಹೊಗಲ್ಲ. ಮನೆಯಲ್ಲಿಯೆ ಇರುತ್ತೇನೆ ಅಂದಳು. ಅಂದರೆ ಅರ್ಥ ಮಾಡಿಕೊಳ್ಳಿ ಮೊಬೈಲ್ನಿಂದ  ತಾಯಿ ತಂದೆಯನ್ನು ದೂರಮಾಡಿಕೊಂಡು ಹೋಗುವ ಕೆಟ್ಟ ನಿರ್ಧಾರಕ್ಕೆ ಬರುವ ಈ ಮಕ್ಕಳು  ಎಂತಹ ವಿದ್ಯಾವಂತರು?  ಪೋನಿಂದ ಪರಿಚಯವಾದ ತಕ್ಷಣ ಮನೆಯ ವಿಷಯವನ್ನೆಲ್ಲ  ಹೇಳಿಕೊಳ್ಳುವುದು ಎಷ್ಟು ಸಮಂಜಸ?  ಬೇಡ ಮಕ್ಕಳೇ ಬಂಗಾರದಂತಹ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ಹೆತ್ತವರನ್ನು ನೋಯಿಸಬೇಡಿ. ಜೀವ ಜೀವನ ಹೋದರೆ ಮತ್ತೆ ಸಿಗುವುದಿಲ್ಲ. ತಂದೆ ತಾಯಿಯ ಮರ್ಯಾದೆಯನ್ನು ಕಳೆದು  ಯಾರನ್ನೋ ನಂಬಿ ಹಾಳಾಗಬೇಡಿ.ಮೊಬೈಲನ್ನು ಒಳ್ಳೆಯದಕ್ಕೆ ಉಪಯೋಗಿಸಿ ಎಂದಷ್ಟೆ ನನ್ನ ಕಾಳಜಿ ವನಜ ಮಹಾಲಿಂಗಯ್ಯ                      

“ಮೊಬೈಲ್ ನಿಂದ ಆಗುತ್ತಿರುವ ಅನಾಹುತ” ವನಜ ಮಹಾಲಿಂಗಯ್ಯ ಮಾದಾಪುರ.                      Read Post »

ಕಾವ್ಯಯಾನ

“ಹೌದು, ಗಂಡಸರೆ ಹೀಗೇ!!” ಸರಸ್ವತಿ ಕೆ ನಾಗರಾಜ್

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ಹೌದು, ಗಂಡಸರೆ ಹೀಗೇ!!” ಗಂಡಸರು ಸ್ವಲ್ಪ ಕೆಟ್ಟವರೇ ಹೌದು,ಆದರೆ ಜವಾಬ್ದಾರಿಯ ಸಾಹುಕಾರರು.ಮಾತಿನಲ್ಲಿ ಕಠಿಣತೆ ಇದ್ದರೂ,ಮನದೊಳಗೆ ಕರ್ತವ್ಯದ ಭಾರ ಹೊತ್ತವರು. ಹೌದು, ಅವರು ಕೆಟ್ಟವರೇ ಸರಿ,ಭಾವನೆ ತೋರಿಸೋದು ಅವರು ಕಲಿತಿಲ್ಲ.ನೋವುಗಳನ್ನು ನಗು ಮುಖಕ್ಕೆ ಮರೆಸಿಕೊಂಡು,ಜೀವನದ ಹೊರೆ ಹೊತ್ತು ನಡೆಯುವವರು. ತಮ್ಮ ಕನಸುಗಳನ್ನು ಬಲಿಕೊಟ್ಟು,ಕುಟುಂಬದ ನಗುವಲ್ಲಿ ಸಂತೋಷ ಕಂಡವರು.ಮೌನದಲ್ಲೇ ಪ್ರೀತಿ ತೋರಿ,ನಗುವ ಮಾರಿಯೇ ಬದುಕಿದವರು. ಕಣ್ಣೀರು ಕಣ್ಣಲ್ಲಿ ನಿಂತರೂ,“ನಾನು ಬಲಿಷ್ಠ” ಎನ್ನುವ ಮುಖವಾಡ.ಕುಟುಂಬದ ನಾಳೆಗೆ ಆಶ್ರಯವಾಗಿ,ಇಂದಿನ ನೋವನ್ನು ನುಂಗಿದವರು. ಹೆಣ್ಣಿಗೆ ಸಹಾಯ ಮಾಡಿದರೆ,ಅವನು “ಕಾಮುಕ” ಎಂಬ ಬಿರುದು.ಉದ್ದೇಶದ ಪಾವಿತ್ರ್ಯ ಕಾಣದೆ,ಸಮಾಜವೇ ತೀರ್ಪು ಬರೆಯುವುದು. ಒಳ್ಳೆಯತನಕ್ಕೂ ಸಂಶಯದ ಕಣ್ಣು,ಸಹಾಯಕ್ಕೂ ತಪ್ಪು ಅರ್ಥ.ಮೌನವಾಗಿ ಹಿಂದೆ ಸರಿದು,ತಮ್ಮ ಮನಸನ್ನೇ ಮುಚ್ಚಿಕೊಂಡವರು. ಹೌದು ಗಂಡಸರೆ ಹೀಗೆ ಅವರು ದೂರ ಉಳಿದರು,ಭಾವನೆ ತೋರಿಸೋ ಧೈರ್ಯ ಕಳೆದುಕೊಂಡರು.ತಪ್ಪಾಗಿ ಅರ್ಥವಾಗುವ ಭಯದಲ್ಲಿ,ಒಳ್ಳೆಯತನವನ್ನೇ ಮರೆಮಾಚಿಕೊಂಡರು.  ಹೌದು ಗಂಡಸರೆ ಹೀಗೆ,ಅತ್ತರು ಅವಮಾನ, ನಕ್ಕರು ಅವಮಾನ,ಭಾವನೆ ತೋರಿಸದಿದ್ದರೆ,ಕಲ್ಲು ಹೃದಯದವರು. ಅವರಿಗೆ ಯಾರೂ ಹೇಳಲಿಲ್ಲ,“ನಿನ್ನ ಅಳುವಿಗೂ ಅರ್ಥ ಇದೆ” ಎಂದು.ಕಣ್ಣೀರಿಲ್ಲದೇ ಅಳುವುದನ್ನ ಕಲಿತು,ಹೃದಯವನ್ನೇ ಸಮಾಧಿ ಮಾಡಿಕೊಂಡವರು.ಈ ಗಂಡಸರು. ಹೌದು ಈ ಗಂಡಸರೆ ಹೀಗೆ ಸರಸ್ವತಿ ಕೆ ನಾಗರಾಜ್.

“ಹೌದು, ಗಂಡಸರೆ ಹೀಗೇ!!” ಸರಸ್ವತಿ ಕೆ ನಾಗರಾಜ್ Read Post »

ಇತರೆ, ಲಹರಿ

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ

ಲಹರಿ ಸಂಗಾತಿ ಪ್ರೇಮಾ ಟಿ ಎಂ ಆರ್‌ ಅವರ ಲಹರಿ “ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..” ಒಂದು ಕಪ್ ಕೊಫಿ ಹೊಯ್ಕೊಂಡು ಬಿಡೋಣ ಅನ್ನುವ ಮನಸಿನ ಗಿಂಜಾಟಕ್ಕೆ  ಕಭಿಕಭಿ ರಾಜಿಯಾಗುವದು. ಕಿಚನ್ನಿನ ಪುಟ್ಟ ಗ್ಲಾಸ್ ಶೋಕೇಸಿನ ಬಾಗಿಲು ತೆರೆದರೆ ಮಣ್ಣಿನ ಬಣ್ಣದ ದೊಡ್ಡ  ಕಾಫಿ ಮಗ್ ಕೈಗೆ ತಗಲಿತು.‌ ಹಾಗೇ ಎತ್ತಿಕೊಂಡು ಮೈ ಸವರಿದೆ. ಕ್ಷಣ ಎಲ್ಲೋ ಜಾರಿತು ಮನ.. ಈಗ ಹೇಗಿರಬಹುದು…? ಯಾವುದೋ ನೆನಪಿಗೆ ಮನ ಬಿರಿಯಿತು.. ಆ ಕೊಫಿಮಗ್ ಬರೀ ಆಗಾಗ ಸವರಿ ಒಳಗಿಡೋಕೆ ಮಾತ್ರ… ಅದ್ರಲ್ಲಿ ನಾನ್ಯಾವತ್ತೂ ಕುಡಿದಿಲ್ಲ, ಕುಡ್ಯೋದಿಲ್ಲ. ಅಂಥದ್ದೊಂದು ಎದೆ ಕರಗುವ ನೆನಪು ಥಳಕುಗೊಂಡಿದೆ ಅದರಲ್ಲಿ.. ಕೈಲಿದ್ದ ಕೊಫಿಮಗ್ ಒಳಕ್ಕೆ ನೂಕಿ, ಬೇರೊಂದನ್ನು ಎತ್ತಿಕೊಂಡು, ಕುದಿದಹಾಲು ಕಾಫಿಪುಡಿ ಸಕ್ಕರೆ ಸುರಿದುಕೊಂಡು  ಕಲಕುತ್ತ ಮತ್ತೆ ಅಂಗಳಕ್ಕೆ  ಬಂದೆ. ಎಲ್ಲಿದ್ದವೋ ಪುಟ್ಟಪುಟ್ಟ ಎರಡು ಬಿಳಿ ಚಿಟ್ಟೆ ಮರಿಗಳು ಆಗಷ್ಟೇ ಅರಳುವ ಕಾಯಕದಲ್ಲಿರುವ ಗೂಡುಮೊಗ್ಗುಗಳ ಬಳಿಯಲ್ಲಿ ಸುಳಿದಾಡುತ್ತಿದ್ದವು. ಈಗ ಮನಸ ಹಿಡಿದಿಡೋಕೆ ಸಾಧ್ಯವಾಗಲಿಲ್ಲ.. ಎರಡೂವರೆ ದಶಕಗಳ ಹಿಂದಕ್ಕೆ ಜಿಗಿದು ಗಡಕ್ಕನೆ ಬ್ರೇಕ್ ಒತ್ತಿಕೊಂಡು ನಿಂತಿತು ಮನಸೆಂಬ ಮಂಗ್ಯ..        ಇದೇ ಚಳಿಗಾಲ ಡಿಸೆಂಬರ್ ತಿಂಗಳ ಕೊನೆಯ ದಿನಗಳಿರಬಹುದು, ಕರಾವಳಿ ಉತ್ಸವ ಮುಗಿದಿತ್ತು. ಎಲ್ಲೆಲ್ಲಿಂದಲೋ  ಬಂದ ಬಯಲ ವ್ಯಾಪಾರೀ ಅಲೆಮಾರಿಗಳು ಕಡಲದಂಡೆಯ ಮೇಲೆಯೇ ಬೀಡು ಬಿಟ್ಟಿದ್ದರು. ಬೆಳಗಿನ ಹೊತ್ತು ಇಂದಿನಂತೆಯೇ ಹೊರಗಿನ ಮೆಟ್ಟಿಲಮೇಲೆ ಕೂತು ಎಳೆ ಬಿಸಿಲಿಗೆ ಮೈಯೊಡ್ಡಿದ್ದೆ.. ಕಪ್ಪು ಬಸೀರಿ.. ಕಪ್ಪುಬಸಿ.. ಕೂಗುತ್ತ ಬಂದ ಹೆಣ್ಣೊಂದು ಗೇಟಲ್ಲಿ ನಿಂತಿತ್ತು. ಪಕ್ಕದಲ್ಲೊಂದು  ಪುಟ್ಟಮ್ಮ..‌ ಬೇಡ ಹೋಗವ್ವ… ಅಂದೆ “ಯವ್ವಾ ಸೆನ್ನಾಗೈತೆ ಒಂದ್ಕಿತಾ ನೋಡ್ರವ್ವ” ಪಿರಿಪಿರಿಗುಟ್ಟಿದಳು… ಸರಿ ಬಾ.. ಅವಳ ಕಪ್ಪುಬಸಿಗಿಂತ ಪಕ್ಕದಲ್ಲಿ ನಿಂತ ಪಾದರಸದಂತೆ ನಿಂತಲ್ಲಿ ನಿಲ್ಲದ ಕಪ್ಪು ಹುಡುಗಿ ನನ್ನ ಸೆಳೆದಿದ್ದಳು.‌ ಬುಟ್ಟಿ ಇಳಿಸಿದಳು. ಪೂರಾ ಗುಂಜಾಡಿದೆ.. “ಬ್ಯಾಡವ್ವೋ, ಒಂಚೂರು ಚೆನ್ನಾಗಿಲ್ಲ ಬಿಡು, ಸುಮ್ನೆ ನಿನ್ನ ಟೇಮು ಹಾಳು, ನಂಗೂ ಹೊತ್ತಾತು, ತಿಂಡಿಯಾಗಿಲ್ಲ ಇನ್ನೂ..” ಅಂದೆ.. “ಅವ್ವಾ, ಒಂದಾರ ತಗಳವ್ವ, ಇನ್ನ ಬೋಣಿ ಆಗಿಲ್ಲ, ಮೊದಲ್ಕ ನಿನ್ಮನಿ ಹೊಕ್ಕೀನೀ” ಅಂದ್ಲು.. “ಇಲ್ಲವ್ವ, ಪಸಂದಾಗಿಲ್ಲ, ವಸಿ ನಿಲ್ಲು” ಎಂದು ಒಳಹೋದೆ. ಇಡ್ಲಿ ಪಾತ್ರೆ ಘಮ್ಮನೆ ಸುಂಯ್ಗುಡುತ್ತಿತ್ತು. ಎರಡು ಬಿಸಿಬಿಸಿ ಹಬೆಯಾಡುವ ಇಡ್ಲಿ ತಟ್ಟೆಗೆ ಹಾಕಿಕೊಂಡು ಮೇಲೊಂದಷ್ಟು ಚಟ್ನಿ ಹಾಕ್ಕೊಂಡು, ಒಂದ್ಹಿಡಿ ಒಣದ್ರಾಕ್ಷಿ ಇಟ್ಕೊಂಡು ಬಂದು ಬೊಗಸೆಗೆ ಹಾಕಿ, “ದ್ರಾಕ್ಷಿ ಮಗೀಗೆ ತಿನ್ಸು, ಇಡ್ಲಿ ನೀನು ತಿನ್ನು ಅಂದೆ..‌ ಎಳೆಕೂಸನ್ನ ನೋಡ್ತಾ ಅಲ್ಲೇ ತುಸು ದೂರ ಕೂತೆ. ಗೋಲಮುಖದಲ್ಲಿ ಕಡುನೀಲಿ ಮಿಂಚುಗಣ್ಣು, ಚೂಪು ಮೂಗು, ಕಪ್ಪುಕಂಚಿನ ಬಣ್ಣ, ಸರ್ರನೆ ಜಾರುವ ನುಣ್ಪುಗೂದಲು.. ಅವಳಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಬೊಗಸೆಗೆ ಬಿದ್ದ ಒಣ ದ್ರಾಕ್ಷಿಯನ್ನು ಕೊಳಕು ಫ್ರಾಕಿನ ಬದಿಯ ಕಿಸೆಗೆ ತುಂಬುವ ಪ್ರಯತ್ನ ಮಾಡುತ್ತಿದ್ದಳು.. ದ್ರಾಕ್ಷಿ ಬದ್ದೀತೆಂಬ ಕಾಳಜಿಗೆ ಬೊಗಸೆ ಮುಚ್ಚಿಟ್ಟುಕೊಂಡೇ ಕಿಸೆಯೆಡೆಗೆ ಬಾಗುವ ಸರ್ಕಸ್ ನೋಡಿ ಕಳ್ಳು ಚುಳ್ಳೆಂತು. ಆಗಷ್ಟೇ ಸ್ನಾನಮಾಡಿ ಬಂದಿದ್ದೆ. ಪೂಜೆ ಮುಗಿದಿರಲಿಲ್ಲ. ಅವಳನ್ನು ಮುಟ್ಟಿದ್ರೆ ಮತ್ತೆ ಸ್ನಾನ ಮಾಡ್ಬೇಕು… ಅಷ್ಟು ಕೊಳಕಾಗಿದ್ದಳು.  ಮಾರುದೂರ ನಿಂತವಳು ಬುಗ್ಗನೆ ವಾಸನೆ ಬಡಿಯುತ್ತಿದ್ದಳು.. ಅವಳೊಳಗೆ ತುಂಟ ಕೃಷ್ಣ ಕಾಣುತ್ತಿದ್ದ ನನಗೆ.  ಕೈತೊಳ್ಕೊಂಡ್ರಾಯ್ತು, ಬಾಗಿ ಅವಳ ಅಂಗಿ ಹಿಡಿದು ಬಳಿಗೆಳೆದುಕೊಂಡು ಒಣದ್ರಾಕ್ಷಿ ಕಾಳುಗಳನ್ನು ಕಿಸೆಗೆ ತುಂಬಿಸಿದೆ.  ಇಷ್ಟಗಲ ಕಣ್ಣುಗಳು ಇನ್ನಷ್ಟು ಅರಳಿದವು. ನನ್ನ ಹಿಡಿತದಿಂದ ನುಣುಚಿಕೊಂಡು ಅಷ್ಟುದೂರ ನಿಂತು ಉಬ್ಬಿದ ಕಿಸೆಯಮೇಲೆ‌ ಕೈಯಾಡಿಸಿಕೊಂಡವಳು ಕಿಸಕ್ಕನೆ  ನಕ್ಕಳು. ಎರಡೂ ಕೆನ್ನೆಯ ನಡುವೆ ಸುಳಿಗುಳಿ ಅರಳಿಕೊಂಡಿತು. ನಾನದರಲ್ಲಿ  ಕರಗುವ ಮೊದಲೇ ಹೂಗಳ ಮೇಲೆ ಹರಿದಾಡುವ ಬಿಳಿಚಿಟ್ಟೆಯ ಮರಿಗಳ ಹಿಂದಿಂದೆ ಓಡಿ ಹಿಡಿಯಲು ಕೈಚಾಚಿದಳು. ಹಾರುವ  ಚಿಟ್ಟೆ ಮರಿಗಳ ಜೊತೆಗೆ ತಾನೂ ಪಾದರಸದಂತೆ ಹರಿದಾಡತೊಡಗಿದಳು. ಅವಳ ತೊಡೆಮುಚ್ಚದ ಪುಟ್ಟ ಸ್ಕರ್ಟ್ ಅವಳೊಂದಿಗೆ ಚಿಮ್ಮುತ್ತಿತ್ತು.. ಮತ್ತೆಮತ್ತೆ ಮುಖಕ್ಕೆ ಮುತ್ತುವ ತುಂಡುಗೂದಲುಗಳನ್ನು ಗತ್ತಿನಿಂದ ಹಿಂದಕ್ಕೆ ನೂಕುತ್ತಿದ್ದಳು. ಯಾಕೋ ಅಕ್ಕರೆಯುಕ್ಕಿತು..  ಮಣ್ಣು ಮೆತ್ತಿಕೊಂಡ ಹಿಮ್ಮಡಿ ತುಂಬು ಪಾದ  ಗಮನ ಸೆಳೆದವು. “ಎಷ್ಟು ದಣಿದವೋ ಪಾದಗಳು. ಒಂದಷ್ಟು ಎಣ್ಣೆಯುಜ್ಜಿ ಬಿಸಿಬಸಿ ನೀರಲ್ಲಿ ಮೈತೊಳೆದರೆ ಪರಿಯಂತೆ ಹೊಳೆದಾಳು ಪುಟ್ಟವ್ವ..” ನನ್ನ ಯೋಚನೆಗೆ ನಗು ಬಂತು. ‘ಯಾರದೋ ಕೂಸು ಆಸೆನೋಡು?’ ತಲೆಮೇಲೊಂದು ಮೊಟಕಿಕೊಂಡೆ..  ಇಡ್ಲಿ ತಿಂದು ಮುಗಿಸಿದ ಹೆಣ್ಣು “ಅವ್ವಾ ನೀರ್ಕೊಡ್ರಿ ವಸಿ ಗಂಗಾಳ ತೊಕ್ಕೊಡ್ತೀನಿ”  ತಟ್ಟೆ ತೊಳ್ಸೋಕೆ ಅವ್ಸರ ಮಾಡಿದ್ಲು. “ಏನೂಬೇಡ, ಕೊಡವ್ವ  ನನ್ಕೈಯ್ಯಲ್ಲಿ, ನಾನೇ ತೊಳ್ಕೊಂತೇನೆ ಅಂದೆ. “ಅಯ್ಯೋ ಬ್ಯಾಡವ್ವ, ನಮ್ಮೆಂಜ್ಲು ನೀ ತೊಳಿತೀಯಾ? ನಮ್ಗೆ ಪಾಪ ಬತ್ತೈತೆ.” ಕೊಸರಿದಳು. “ಸರಿ ನಾನ್ಯಾವಾಗಾದ್ರೂ ಕಾಲ್ತಪ್ಪಿ ನಿನ್ ಜೋಪ್ಡೀತಾವ ಬಂದ್ರೆ, ನೀನೇನಾರ ಒಂದ್ಗುಟ್ಗಿ ನೀರು ಕೊಟ್ಟೀ ಅಂದ್ಕೊ, ತಟ್ಟೆ ತೊಳಿಸ್ತೀಯಾ ನನ್ಕಡೆ!” ಕೇಳಿದೆ. ‘ಯವ್ವಾ ನೀಯಾಕ್ಬಂದಿ ನಮ್ಮ ಗುಡ್ಸಲ್ಕೆ’ ಎಂದು ಕೆನ್ನೆಗೆ ಹೊಡ್ಕೊಳ್ಳುತ್ತಲೇ ಎಂಜಲು ತಟ್ಟೆ ನನ್ಕೈಲಿಟ್ಟು ನಿನ್ನ ಹೊಟ್ಟೆ ತಣ್ಣಗಿರ್ಲಿ ಅವ್ವ.” ಹರಸಿದಳು. “ಏಟ್ ವರ್ಷಾತು ಮಗೀಗೆ? ಚಂದದಾಳ. ಕಾಲಿಗೊಂದು ಚಪ್ಲೀನೂ ಹಾಕಿಲ್ವಲ್ಲ, ಈ ಎಳೆಕೂಸನ್ನ ಯಾಕೆ ಹಿಡ್ಕೊಂಡು ಬರೋಕೋದೆ?” ಅಲ್ಲೇ ಕೂತು ಮಾತಿಗಿಳಿದೆ. “ಮತ್ತೆಲ್ಬಿಡ್ಬೇಕ್ರಿ ಮಗೀನ.?” “ನಿನ್ಗಂಡ ಏನ್ಮಾಡ್ತಾನ.. ಜೋಪ್ಡಿ ಒಳ್ಗ ಕುಡ್ದ ಬಿದ್ದಾನಾ..? ತಲಿಮ್ಯಾಲ ಒಂದ್ಗಡ್ಗಿ ತಣ್ಣೀರ್ ಸುರ್ದು ಎಬ್ಸಿ ಮಗೀನ ಅವನ್ತಾವ ಬಿಟ್ಟ ಬರ್ಬೇಕು ತಾನೇ..” ಕೋಪ ಕಾರಿದೆ… “ನನ್ನ ಕೂಸಲ್ರಿ ಅವ್ವಾ, ಮೊಮ್ಮಗ್ಳೂರೀ.” ನಾನು ಮಿಕಿಮಿಕಿ ಅವ್ಳನ್ನೇ ನೋಡಿದೆ. ಇನ್ನೂ ಮೂವತ್ತೈದರೊಳಗಿನ ಕೆಂಚು ದೇಹದ ಹೆಣ್ಣು, ಆಗ್ಲೇ ಮೊಮ್ಮಗ್ಳಾ..?ಹುಬ್ಬೇರಿಸಿದೆ.. “ಹೂಂನ್ರವ್ವಾ.. ಇದ್ರವ್ವ ಹೆರ್ಗಿ ಕಾಲಕ್ಕೆ ಸತ್ತೋತ್ರಿ..” ಕಣ್ಣೊರಸಿಕೊಂಡಳು. “ಇವ್ಳ ಅಪ್ಪ ಏನ್ಮಾಡ್ತಾನೆ? ಮತ್ತೆ ನಿನ್ಗಂಡ?” “ಯವ್ವ ಅದ್ನೆಲ್ಲ ನೀವು ಕೇಳ್ಬಾರ್ದು, ನಾವು ಹೇಳ್ಬಾರ್ದೂರಿ.. ನಾನೂ ಅಪ್ನ ಮುಖ ಕಂಡಿರ್ಲಿಲ್ರಿ  ನನ್ಮಗ್ಳೂ ಅಪ್ಪ್ನ ಮುಖ ಕಂಡಿಲ್ರೀ… ಇದ್ಕೂ ಅಪ್ಪನ್ನಾಕ ಯಾರಿಲ್ರೀ..” ನಿಸ್ಸಂಕೋಚದ ನುಡಿ. ಒಮ್ಮೆ ನನ್ನ ಮೈ ನಡುಗಿತು. ಅವಳ ಮುಖದಲ್ಲಿನ ಭಾವನೆಗಳನ್ನು ಓದೋಕಾಗ್ಲಿಲ್ಲ ನನಗೆ..ನಿರ್ಭಾವವಾಗಿದ್ದಳು…  ಹೊಕ್ಕುಳಲ್ಲಿ ಹುಟ್ಡಿದ ಚಳಿ ಇಡೀ ಎದೆಯ ಆವರಿಸಿ ಕ್ಚಣ ನಡುಗಿದೆ.. “ನಮ್ಮವ್ವ ಅದಾಳ್ರೀ…‌ ಆಕೀನೂ ಕಪ್ಪ ಬಸೀ ಮಾರಾಕಂತ ಹೊಂಟೋಯ್ತಾಳೆ..‌ ಹಾಂಗಾಗಿ ಕೂಸ್ನ ನನ್ಜೊತೀನ ಕಟ್ಗೊಂಡ್ ಬತ್ತೀನ್ರಿ.” ಅಂದ್ಲು.  ಯಾಕೋ ಅಂಗಾಂಗಗಳೆಲ್ಲ ಮರಗಟ್ಟಿದಂತೆ ಮಿಸುಕಾಡಿದೆ..  “ಯವ್ವಾ ಬತ್ತೀವ್ರಿ, ಬುಟ್ಟಿಗ್ ಒಸಿ ಕೈಹಚ್ರಿ, ಭಾರೈತ್ರಿ” ಅಂದ್ಲು.. ಈಗ ಸಾವರಿಸಿಕೊಂಡೆ..                 “ಅವ್ವಾ, ನಿಮ್ಗೊಂದು ಕೇಳ್ತೇನೆ ಬೈಯ್ಬ್ಯಾಡ” ಅಂದೆ..  ತಡೆದು ನಿಂತಳು.  ಮಗೀನ ನನಗ್ ಕೊಟ್ಬಿಡವ್ವಾ.. ಚಂದಾಗಿ ಸಾಕೊಂತೀನಿ, ನಿನಗ್ ನೆನ್ಪಾದಾಗ ಯಾವಾಗ್ಬೇಕೋ ಅವಾಗ್ಬಂದು ನೋಡ್ಕೊಂಡೋಯ್ತಾ ಇರು,  ಇಕೀಗ ಸಾಲಿ ಕಲ್ಸಿ ದೋಡ್ಡ ನೌಕ್ರೀ ಮಾಡಿಸ್ತೀನಿ, ನನ್ನ ಮಗನ್ಮೇಲೆ ಆಣಿ ಮಾಡ್ತೀನಿ. ನನ್ಮಗಾ ಬ್ಯಾರೆ ಈ ಮಗೀ ಬ್ಯಾರೆ  ಯಾವತ್ತೂ ಮಾಡಂಗಿಲ್ಲವ್ವ, ಕೊಟ್ಬಿಡು” ಅಂದೆ. ಒಂದು ಕ್ಷಣ ಅವಳ ದೃಷ್ಟಿ ಕ್ರೂರವಾಯಿತು, “ಕೂಸ್ಬೇಕಿದ್ರ ಒಂದ್ಹೆತ್ಕೊಳ್ಳಾಕ ಏನ್ಬಂದಿತ್ತ ಬ್ಯಾನಿ, ಬ್ಯಾರೆದವ್ರ ಕೂಸಿಗೆ ಬಾಯ್ಬಿಡ್ತಿ.. ಯವ್ವಾ ಹೆಂತಾಕಿ ನೀನು? ” ದುರುಗುಟ್ಟಿದವಳು ಮತ್ತೆ ಮೆದುವಾದಳು.. ಯವ್ವಾ, ಅದೊಂದ ಕೇಳ್ಬ್ಯಾಡವ್ವ.. ಕೂಸಿನ್ಮ್ಯಾಲ  ನನ್ ಜೀವಾನೇ ಮಡಿಕಂಡೀನಿ, ಮುನ್ಸಕಬ್ಯಾಡವ್ವ” ದೈನ್ಯವಾಗಿ ಹೇಳಿದವಳು, ದೊಗ್ಗಾಲುಕೊಟ್ಟು ಹೆಣಗಿ ಭಾರದ ಬುಟ್ಟಿ ತಲೆಮೇಲೆ ಹೊತ್ತು, “ಲೇ  ಕಾವೇರಿ ಬಾರಿತ್ತಾಗ.. ಹೋಗಾನ” ಗೇಟಿನತ್ತ ನಡೆದಳು.. ಕಾವೇರಿ ಮರಿಜಿಂಕೆಯಂತೆ ಜಿಗಿದು ಅಜ್ಜಿಯ ಬೆನ್ನಟ್ಟಿದಳು.. ಅವಳು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಳು.. ನಾನು ಸರಿಯೆಂದು ದೃಢಪಡಿಸಲು ನನ್ನಲ್ಲಿ ಮಾತುಗಳಿರಲಿಲ್ಲ..  ಹಿಂದ್ಹಿಂದೇ ನಡೆದು ಬಂದಿದ್ದೆ.. ಗೇಟು ದಾಟುವ ಮುನ್ನ ಏನನ್ನಿಸಿತೋ..ಹಿಂತಿರುಗಿದಳು.. ಕಂಪೌಂಡ್ ವಾಲಿನ ಮೇಲೆ ಬುಟ್ಟಿಯೂರಿ ಹೆಗಲ ಚೀಲಕ್ಕೆ ಕೈಹಾಕಿ ಚಂದದ ಮಣ್ಣುಬಣ್ಣದ ದೊಡ್ಡ ದೊಡ್ಡ ಕಾಫಿ ಮಗ್ ಗಳ ಆರರ ಸೆಟ್ ಹೊರತೆಗೆದಳು, “ತಗಳ್ರವ್ವ  ಇದ್ನ.. ಇದ್ ಪಸಂದಾಗೈತಾ ಯೋಳಿ” ಅಂದ್ಲು…. ಯಾಕೋ ನಿರಾಕರಿಸಲು ಮನಸು ಬಾರದೇ ‘ಎಷ್ಟಾಗ್ತೈತೆ?’ ಅಂದೆ. “ಕೊಡವ್ವ, ನಿಂಗ್ ಯೋನ್ ಕೊಡ್ಬಕನ್ಸತೈತಿ ಅದ್ನ ಕೊಡು” ಅಂದ್ಲು… ಐದ್ನೂರು ತಂದು ಕೈಲಿಟ್ಟೆ… ಮುನ್ನೂರು ಸಾಕು ಅಂದ್ಲು.. ಇಟ್ಕಳವ್ವ ಕಾವೇರಿಗೆ ಚಪ್ಲಿ ಕೊಡ್ಸು ಅಂದೆ. “ಬತ್ತೀನವ್ವಾ, ನಿನ್ಮನ್ಸು ನಾ ಬಲ್ಲೆ, ತೆಪ್ಪಾತು ಕಣವ್ವಾ, ಮತ್ಯಾವಾಗ್ಲೋ ಕಾಲ್ತೆಪ್ಪಿ ಈ ಊರಿಗ್ಬಂದ್ರ ಮತ್ತ ಮಗೀನ ತೋರಿಸ್ಕೊಂಡು ಹೋಕ್ಕೀನಿ.. ಆದ್ರ ಇದೇ ಕೊನಿ, ಮಗೀನ ಬೇಡ್ಬ್ಯಾಡ” ಕಪ್ಪುಬಸೀರಿ ಒದರುತ್ತ ಸಾಗಿದಳು.. ತಿರುಗಿ ತಿರುಗಿ ನನ್ನೇ ನೋಡುತ್ತ ಅಜ್ಜಿಯ ಕೈಹಿಡಿದು ಕುಣಿಕುಣಿದು ಸಾಗಿದ ಕಾವೇರಿಯನ್ನು ದೇವಸ್ಥಾನದ ಮುರ್ಕಿ ತಿರುಗುವತನಕ ನೋಡುತ್ತ ನಿಂತೆ… ಈ ಪುಟ್ಟ ಕಾವೇರಿಗೊಂದು ಅಪ್ಪನಿಲ್ಲದ ಕೃಷ್ಣೆ ಹುಟ್ಟದ ಹಾಗೇ ಇವಳನ್ನು ನಿನ್ನ ಕಣ್ಣಲ್ಲಿಟ್ಕೊಂಡು ತಲೆ ಕಾಯುವದು ತಂದೆ… ಎದೆ ರೋಧಿಸುತ್ತಿತ್ತು…. ಮತ್ತೆ ಅವಳು ಈ ಬೀದಿಗೆ ಬಂದಿಲ್ಲ. ನಾನವಳ ಮರೆತಿಲ್ಲ…. ಒಂದು ನೋವಿನ ನಗೆಯಾಗಿ ಸದಾ ನನ್ನೊಳಗೆ ಇದ್ದಾಳೆ ಕಾವೇರಿ…. ನಿಮ್ಮ ಪ್ರೇಮಾ… ಪ್ರೇಮಾ ಟಿ ಎಂ ಆರ್

“ಕಾವೇರಿ ಒಂದು ನೋವಿನ ನಗೆಯಾಗಿ ಸದಾ ಎದೆಯಲ್ಲಿರುತ್ತಾಳೆ..”ಪ್ರೇಮಾ ಟಿ ಎಂ ಆರ್‌ ಅವರ ಲಹರಿ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ “ಆ ರಾತ್ರಿ”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಆ ರಾತ್ರಿ” ಆ…. ರಾತ್ರಿ… ಯಾಕೇ… ಹೀಗೆಕಡಲ ತೆರೆಯ ಶಬ್ದದ ಹಾಗೆ….ತೆರೆಯನೊರೆಯು ತಟವ ಸೇರಿದ ಹಾಗೆ..ಕತ್ತಲೆಯಲ್ಲಿ ಮೌನವೇ ಮಾತಾಡಿದ ಹಾಗೆ ನಿನ್ನ ಕಣ್ಣೊಳಗಿನ ಬೆಳಕಿನಲಿನನ್ನ ಕನಸು ಕರಗಿದ ಹಾಗೆತುಟಿಗಳ ಅಂಚಿನ ನಗುವಿನಲಿನನ್ನ ಮನಸು ನಾಚಿದ ಹಾಗೆ ನಿನ್ನ ಉಸಿರಿನ ಬೆಚ್ಚನೆಯಲಿನಾ ನನ್ನ ಮರೆತ ಹಾಗೆನಿನ್ನ ಹೃದಯದ ಬಡಿತಕೆನನ್ನ ಹೃದಯ ನೃತ್ಯ ಮಾಡಿದ ಹಾಗೆ ನಿನ್ನ ಬೆರಳ ಬಂಧನದಲ್ಲಿನನ್ನ ಅಲಂಕಾರ ಕಂಡ ಹಾಗೆನಿನ್ನ ಎದೆಗೆ ತಲೆಬಾಗಿನನ್ನುಸಿರನು ಚೆಲ್ಲಿದ ಹಾಗೆ ನಿನ್ನ ತುಟಿಗಳ ಮೌನನನ್ನೊಡಲ ಮಧುರತೆಯ ಹಾಗೆಈ ಪ್ರೀತಿಯ ರಾತ್ರಿಯ ಅಂಗಳದಲ್ಲಿನಿನ್ನಲ್ಲಿ ನಾನು ಲೀನವಾದ ಹಾಗೆ. ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಅವರ ಕವಿತೆ “ಆ ರಾತ್ರಿ” Read Post »

You cannot copy content of this page

Scroll to Top