ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು “ಕನ್ನಡವೇ ನಮ್ಮ ಉಸಿರು”

ಕನ್ನಡ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು “ಕನ್ನಡವೇ ನಮ್ಮ ಉಸಿರು” ಮೊಲೆಹಾಲೊಡನೆ ಬಂದ ಸೊಲ್ಲು ಕನ್ನಡವು,ಕಣ್ತೆರೆದು ಜಗ ನೋಡಿದ ದೃಶ್ಯ ಕನ್ನಡವೇ ಉಚ್ವಾಸದ ಈ ಗಾಳಿ,ಈಮಣ್ಣ ಪರಿಮಳವು ಕನ್ನಡವು,ನನ್ನೊಡಲ ನುಡಿಯಾಗಿ ಮಿಡಿದ ಭಾವ ಕನ್ನಡವುತಾಯಂತೆ ಸಲಹಿರುವೆ  ಅಮ್ಮಾ ನೀ ನನ್ನೊಲವು  ಹಾಲಿನೊಳು ಬೆರೆತ ಸಕ್ಕರೆಯು ನೀನು ,ಈ ಪಯಣದ ಜೊತೆಗಿದ್ದ ನೆರಳು ನೀನುನಾವ್ ನುಡಿವ ಪದ ಶಕ್ತಿಯ ಸೊಗಡು ನಿನದುನೀನಲದೆ ಅನ್ಯವೆನಲು ಒಪ್ಪದಿದು ಮನವು    ಭಾವದೊಲುಮೆಯಲಿ ಜೀವ ತುಂಬಿತಂದವಳುಎದೆಯ ಹಂದರದೊಳಗೆ  ಕಾವ್ಯ ಹರಿಸಿದಳು ನಡೆ ನುಡಿಯಲಿ ನಿಂತು ,ಬಾಳ ಬೆಳಗಿದಳು ಇಹಪರದ  ಬೇಡಿಕೆಯು ಈ ಧನಿಯ ಬಲಿಸುಕನ್ನಡವು ನಮ್ಮಮ್ಮ ಎಂದೆಂದೂ ಸಿರಿಯು  ಬದುಕ  ಹಾದಿಗೆ ಬೆಳಕಾಗಿ ನಿಂತವಳೇ,ಬೋಧನೆಗೆ ಜೊತೆಯಾಗಿ ಕೈಹಿಡಿದು ಬಂದವಳೆಭಾವ ಕಡಲಿನ ಅಲೆಯಲೆಯಲಿ ಹೊನ್ನುಸಿರ ಕೊಟ್ಟಳು  ಕಸುವಿತ್ತು ಕೈಯೊಳಗೆ ಎದೆಯ ಶೃಂಗರಿಸಿದಳು ನನ್ನ ಬೇಡಿಕೆಯೊಂದ  ನಡೆಸು ಕನ್ನಡಾಂಬೆಸವಿ ಜೇನಸುರಿಸುತ್ತಿರು ನಿತ್ಯ ನಾಲಿಗೆಯೊಳಗೆತುಟಿಯಂಚಲಿ  ಪದಗಳ ಬಿತ್ತರಿಸಿ ನಡೆಸುಉಸಿರು ನಿಲ್ಲುವ ತನಕ  ಜೊತೆಗಿದ್ದು ಬೆಳೆಸು. ವನಜಾಕ್ಷಿ ಬೆಟ್ಟದಾಲೂರು

ವನಜಾಕ್ಷಿ ಬೆಟ್ಟದಾಲೂರು “ಕನ್ನಡವೇ ನಮ್ಮ ಉಸಿರು” Read Post »

ನಿಮ್ಮೊಂದಿಗೆ

“ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳು” ಕವಿತಾ ಹಿರೇಗೌಡ್ರ

ಕನ್ನಡ ಸಂಗಾತಿ ಕವಿತಾ ಹಿರೇಗೌಡ್ರ “ಸರ್ಕಾರಿ ಕನ್ನಡ ಶಾಲೆಗಳನ್ನು ಬಲಡಿಸಲು ಕೈಗೊಳ್ಳಬೇಕಾದ ಕ್ರಮಗಳು” I.ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳು ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ತನ್ನದೆ ಹರವುಗಳನ್ನು ಹೊಂದಿಕೊಂಡು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಡಿಜಿಟಲ್ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣದ ಪ್ರಗತಿ ಇಷ್ಟು ವೇಗದ ಮಹತ್ವ ಪಡೆಯುತ್ತಿರುವುದು ಹರ್ಷದ ಸಂಗತಿ. ಈ ನಿಟ್ಟಿನಲ್ಲಿ ಶಿಕ್ಷಣವನ್ನು ಮತ್ತು ಶಾಲೆಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳೆಡೆಗೆ ಗಮನ ಹರಿಸುವ ಜರೂರಿದೆ…1. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆಶಿಕ್ಷಕರು ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವುದಕ್ಕೆ ಸೀಮಿತವಾಗದೆ, ಚಿಂತನೆ, ಸೃಜನಶೀಲತೆ, ಸಂವಹನ ಕೌಶಲ್ಯ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಬೇಕು.2. ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕೌಶಲಮಕ್ಕಳಿಗೆ ಕನ್ನಡದಲ್ಲಿ ಉತ್ತಮ ಅಡಿಪಾಯ ನೀಡುವುದರ ಜೊತೆಗೆ, ಇಂಗ್ಲಿಷ್ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಅಗತ್ಯವಾದ ಕೌಶಲಗಳನ್ನು ಬೆಳೆಸಬೇಕು. ಕನ್ನಡ ಮತ್ತು ಇಂಗ್ಲಿಷ್ ಪರಸ್ಪರ ವಿರೋಧಿಗಳಲ್ಲ ಎಂಬ ಅರಿವು ಪೋಷಕರಲ್ಲಿಯೂ ಮೂಡಬೇಕಾಗಿದೆಕನ್ನಡ ಮಾಧ್ಯಮದಲ್ಲಿ ಓದಿದರೂ ಇಂಗ್ಲಿಷ್‌ನಲ್ಲಿ ಉತ್ತಮ ಜ್ಞಾನ ಮತ್ತು ಕೌಶಲ ಬೆಳೆಸಿಕೊಳ್ಳಲು ಸಾಧ್ಯ ಎಂಬುದನ್ನು ತರಬೇತಿಯ ಮೂಲಕ ಬಲಪಡಿಸಬೇಕು3. ಮೂಲಸೌಕರ್ಯಗಳ ಅಭಿವೃದ್ಧಿಪ್ರತಿಯೊಂದು ಶಾಲೆಯಲ್ಲಿಯೂ ಸ್ವಚ್ಛವಾದ ತರಗತಿಗಳು, ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯಗಳು, ಗ್ರಂಥಾಲಯ, ಆಟದ ಮೈದಾನ ಮತ್ತು ಅಗತ್ಯ ಕಲಿಕಾ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕು4. ತಂತ್ರಜ್ಞಾನ ಆಧಾರಿತ ಶಿಕ್ಷಣಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಶಿಕ್ಷಣ, ಶೈಕ್ಷಣಿಕ ವಿಡಿಯೊಗಳು ಮತ್ತು ಡಿಜಿಟಲ್ ಕಲಿಕಾ ಸಂಪನ್ಮೂಲಗಳು ಮತ್ತು ಅರ್ಹ ಮತ್ತು ನುರಿತ ಶಿಕ್ಷಕರ ಸಹಾಯದಿಂದ ಮಕ್ಕಳ ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕವಾಗಿಸಬಹುದು.5. ಪೋಷಕರ ವಿಶ್ವಾಸ ಗಳಿಸುವುದುಶಾಲೆಯಲ್ಲಿ ಮಕ್ಕಳ ಕಲಿಕಾ ಪ್ರಗತಿ, ಶಿಕ್ಷಕರ ಬೋಧನಾ ಕ್ರಮ ಪರೀಕ್ಷಾ ಫಲಿತಾಂಶ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ನಿಯಮಿತವಾಗಿ ಮಾಹಿತಿ ನೀಡುವುದರೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ . ಪೋಷಕ-ಶಿಕ್ಷಕ-ಮಕ್ಕಳ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುವುದರ ಮೂಲಕ ಮಕ್ಕಳ ಮತ್ತು ಪಾಲಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು 6. ಶಾಲಾಭಿವೃದ್ಧಿಯಲ್ಲಿ ಸಮುದಾಯದ ಪಾತ್ರಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ದಾನಿಗಳು, ಆಸಕ್ತರು ಶಾಲೆಯ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳನ್ನು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಪ್ರೇರೆಪಿಸಬೇಕು7. ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪರಿಚಯಿಸುವುದುಕನ್ನಡ ಸಾಹಿತ್ಯ, ಕವಿತೆ, ಕಥೆ, ನಾಟಕ, ಜನಪದ ಕಲೆ, ಗಾದೆ ಮತ್ತು ಒಗಟುಗಳ ಮೂಲಕ ಮಕ್ಕಳಲ್ಲಿ ಭಾಷೆಯ ಮೇಲಿನ ಪ್ರೀತಿ ಬೆಳೆಸಬೇಕು. ಬದುಕಿನ ಮಹತ್ವಗಳು, ಮಾನವೀಯ ಮೌಲ್ಯಗಳು ನೆಲೆಯೂರಿ ನಿಲ್ಲುವಂತೆ ಮಾಡಬೇಕು ಹಾಗೂ ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕು.8. ಶಿಕ್ಷಕರಿಗೆ ನಿರಂತರ ತರಬೇತಿಹೊಸ ಬೋಧನಾ ವಿಧಾನಗಳು,ತಂತ್ರಜ್ಞಾನದ ಪೂರೖಕೆ,ಮಕ್ಕಳ ಮನೋವಿಜ್ಞಾನ, ತಂತ್ರಜ್ಞಾನ ಬಳಕೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯ ಕುರಿತು ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡಬೇಕು. ಶಿಕ್ಷಕರು ತಮ್ಮ ವೃತ್ತಿಪರ ಕೌಶಲಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶ ಕಲ್ಪಿಸುತ್ತ ಶಿಕ್ಷಕರನ್ನೂ ಬೆಳೆಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು9. ಸರ್ಕಾರಿ ಶಾಲೆಗಳ ಸಾಧನೆಗಳನ್ನು ಜನರಿಗೆ ತಲುಪಿಸುವುದುಶಾಲೆಯ ವಿದ್ಯಾರ್ಥಿಗಳು ಕ್ರೀಡೆ, ವಿಜ್ಞಾನ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದಾಗ ಅವುಗಳನ್ನು ಸಾರ್ವಜನಿಕವಾಗಿ ಗುರುತಿಸಿ ಸೂಕ್ತ ಬಹುಮಾನ ಪ್ರೋತ್ಸಾಹ ನೀಡಬೇಕು. ಇದರಿಂದ ಪೋಷಕರಲ್ಲಿ ವಿಶ್ವಾಸ ಮೂಡುತ್ತದೆ.10. ಸರ್ಕಾರದ ಜವಾಬ್ದಾರಿಸರ್ಕಾರವು ಶಾಲೆಗಳಿಗೆ ಅಗತ್ಯ ಅನುದಾನ, ಎಲ್ಲ ವಿಷಯಗಳ ಶಿಕ್ಷಕರ ನೇಮಕಾತಿ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಒದಗಿಸಲು ಸರ್ಕಾರ ದಾಪುಗಾಲು ಇಡಬೇಕು ಮತ್ತು ಶಾಲೆಗಳ ಸಮಸ್ಯೆಗಳನ್ನು ಗುರುತಿಸಿ ಕಾಲಮಿತಿಯೊಳಗೆ ಪರಿಹರಿಸುವ ವ್ಯವಸ್ಥೆ ಇರಬೇಕು.4. ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವಲ್ಲಿ ಶಿಕ್ಷಕರ ಪಾತ್ರಶಿಕ್ಷಕರು ಶಾಲೆಯ ಜೀವಾಳ. ಮಕ್ಕಳಿಗೆ ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕೆಲಸವಲ್ಲ; ಅವರಲ್ಲಿ ಆತ್ಮವಿಶ್ವಾಸ, ಮಾನವೀಯ ಮೌಲ್ಯಗಳು, ವೈಜ್ಞಾನಿಕ ಮನೋಭಾವ ಮತ್ತು ಕಲಿಯುವ ಆಸಕ್ತಿಯನ್ನು ಬೆಳೆಸುವುದೂ ಶಿಕ್ಷಕರ ಕರ್ತವ್ಯವಾಗಿದೆ.ಪ್ರತಿಯೊಬ್ಬ ಮಗುವಿನ ಕಲಿಕಾ ಸಾಮರ್ಥ್ಯ ವಿಭಿನ್ನವಾಗಿರುವುದರಿಂದ, ಮಕ್ಕಳ ಅಗತ್ಯಗಳಿಗೆ ಅನುಗುಣವಾಗಿ, ಮಕ್ಕಳ ಬುದ್ಧಿಮತ್ತೆ ಅನುಸಾರ ಬೋಧನಾ ವಿಧಾನಗಳನ್ನು ರೂಪಿಸಬೇಕು, ಮತ್ತು ಮಕ್ಕಳ ಪ್ರತಿಭೆ ಗುರುತಿಸಿ ನೀರೆರೆದು ಪ್ರೋತ್ಸಾಹಿಸಿ ಪಾಲಕರೊಟ್ಟಿಗೆ ಈ ಕುರಿತು ಆಪ್ತ ಸಮಾಲೋಚನೆ ಮತ್ತು ಮನವರಿಕೆ ಮಾಡಬೇಕು. ಶಾಲೆಗೆ ಬರುವ ಪ್ರತಿಯೊಂದು ಮಗುವೂ ಕಲಿಕೆಯಲ್ಲಿ ಪ್ರಗತಿ ಸಾಧಿಸುವಂತೆ ನೋಡಿಕೊಳ್ಳಬೇಕು.ಒಂದು ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಾದರೆ, ಆ ಶಾಲೆಯ ಮೇಲಿನ ಪೋಷಕರ ವಿಶ್ವಾಸ ಹೆಚ್ಚುತ್ತದೆ. ಪೋಷಕರ ವಿಶ್ವಾಸ ಹೆಚ್ಚಾದರೆ, ಮಕ್ಕಳ ದಾಖಲಾತಿಯೂ ಹೆಚ್ಚುವ ಸಾಧ್ಯತೆ ಇದೆ.5. ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವಲ್ಲಿ ಪೋಷಕರ ಪಾತ್ರ…ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸಬೇಕು. ಮಕ್ಕಳ ದಿನನಿತ್ಯದ ಕಲಿಕೆಯನ್ನು ಗಮನಿಸಬೇಕು. ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಸಹಕರಿಸಬೇಕು.ಸರ್ಕಾರಿ ಶಾಲೆಯಲ್ಲಿ ಓದುವುದು ಕೀಳರಿಮೆಯ ವಿಷಯವಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆಯೇ, ಅವರ ಜ್ಞಾನ ಮತ್ತು ಕೌಶಲಗಳು ಬೆಳೆಯುತ್ತಿವೆಯೇ ಎಂಬುದಕ್ಕೆ ಹೆಚ್ಚಿನ ಮಹತ್ವವನ್ನು ಪಾಲಕರು ನೀಡಬೇಕು.ಹೆಣ್ಣು ಗಂಡೆಂಬ ಭೇದವಿಲ್ಲದೆ ಶಿಕ್ಷಣದ ಹಕ್ಕು ಸದ್ಭಳಕೆಯಾಗಬೇಕು.. ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವುದು ಕೇವಲ ಸರ್ಕಾರದ ಕೆಲಸವಲ್ಲ. ಅದು ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಸಮುದಾಯ ಮತ್ತು ಕನ್ನಡಪರ ಸಂಘಟನೆಗಳೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.ಕನ್ನಡ ಶಾಲೆಗಳನ್ನು ಉಳಿಸುವುದೆಂದರೆ ಕೇವಲ ಕನ್ನಡ ಭಾಷೆಯನ್ನು ಉಳಿಸುವುದಲ್ಲ; ಸಮಾನ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವುದು, ಗ್ರಾಮೀಣ ಮಕ್ಕಳ ಶಿಕ್ಷಣ, ಅವರಭವಿಷ್ಯವನ್ನು ರೂಪಿಸುವುದು ಮತ್ತು ನಮ್ಮ ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುವುದೂ ಆಗಿದೆ.“ಸರ್ಕಾರಿ ಶಾಲೆ ಉಳಿಸಿ” ಎಂಬ ಘೋಷಣೆಯು ಕೇವಲ ಮಾತಿನಲ್ಲಿ ಉಳಿಯಬಾರದು. “ಸರ್ಕಾರಿ ಶಾಲೆಯನ್ನು ಗುಣಮಟ್ಟದ ಶಾಲೆಯನ್ನಾಗಿ ರೂಪಿಸಿ” ಎಂಬ ಸಂಕಲ್ಪವಾಗಿ ಬದಲಾಗಬೇಕು.ಕನ್ನಡ ಶಾಲೆಗಳು ನಮ್ಮ ಹೆಮ್ಮೆ. ಅವುಗಳ ಅಭಿವೃದ್ಧಿ ನಮ್ಮೆಲ್ಲರ ಹೊಣೆ ಎನ್ನುವ ಮನೋಧೋರಣೆ ಹೊಂದಬೇಕು.. ಕವಿತಾ ಹಿರೇಗೌಡ್ರಶಿಕ್ಷಕಿ, ಬೆಂಗಳೂರು

“ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳು” ಕವಿತಾ ಹಿರೇಗೌಡ್ರ Read Post »

ಇತರೆ

ಇಂದುಮತಿ ಲಮಾಣಿ ವಿಜಯಪುರ “ಎಲ್ಲರೂ ಕೈಜೋಡಿಸಬೇಕು”

ಕನ್ನಡ ಸಂಗಾತಿ ಇಂದುಮತಿ ಲಮಾಣಿ ವಿಜಯಪುರ “ಎಲ್ಲರೂ ಕೈಜೋಡಿಸಬೇಕು” .ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳಿಗೆ ಯಾಕೆ ಮಾನ್ಯತೆ ಇಲ್ಲ!! ಸರಕಾರಿ ಶಾಲೆಗಳಿಗೆ ಯಾಕೆ ಹಿನ್ನಡೆ!!ಸರಕಾರಿ ಶಾಲೆಗಳು ಬಡವರ ಶಾಲೆ ಎಂದೆನಿಸುವ ಹೀನತೆ ನಮ್ಮ ತಲೆಯಿಂದ ಮೊದಲು ತೊಲಗಬೇಕು. ಸರಕಾರಿ ಶಾಲೆಗಳಿಗಿರುವ  ನಿರ್ಲಕ್ಷ್ಯತೆಯನ್ನು  ಸರಕಾರ ಬಿಡಬೇಕು.ಅದಕ್ಕೆ ಸಾಕಷ್ಟು ಯೋಜನೆಗಳಿವೆ.ಅದನ್ನೆಕೆ ಜಾರಿ ಮಾಡುವುದಿಲ್ಲ!ಶಾಲೆಗಳಿಗೆ ಸುಸಜ್ಜಿತ ತರಗತಿ ಕೋಣೆಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳು (KPS): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಆಯ್ದ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (KPS) ಪರಿವರ್ತಿಸಿ, ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಉಚಿತ ಶಿಕ್ಷಣ ನೀಡುವುದು.ಡಿಜಿಟಲ್ ಕ್ಲಾಸ್‌ರೂಮ್: ಸ್ಮಾರ್ಟ್ ಬೋರ್ಡ್‌ಗಳು, ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಡಿಜಿಟಲ್ ಶಿಕ್ಷಣ ಸಿಗಬೇಕು.ಜೊತೆಗೆ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲೂ ಸಂವಹನ ನಡೆಸಲು ಮತ್ತು ಬರೆಯಲು ವಿಶೇಷ ತರಬೇತಿ ನೀಡಬೇಕುನವೀನ ಬೋಧನಾ ಪದ್ಧತಿ: ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ಚಟುವಟಿಕೆ ಆಧಾರಿತ ಕಲಿಕೆ ಮೂಲಕ ಕಲಿಸುವಂತೆ ಆಗಬೇಕು.   ಸರಕಾರಿ ಉದ್ಯೋಗದಲ್ಲಿರುವ ಪಾಲಕರು ಸರ್ಕಾರಿ ಶಾಲೆಗಳಿಗೆ ಮಹತ್ವ ಕೊಡಲಾರದ ಕಾರಣ  ಆಂಗ್ಲ ಮಾಧ್ಯಮದ ಮೇಲಿರುವ ವ್ಯಾಮೋಹ. ಮೂಲ ಸೌಕರ್ಯಗಳ ಕೊರತೆ, ಸಾಮಾಜಿಕ ಪ್ರತಿಷ್ಠೆ. ಮತ್ತು ಬೋಧಕೇತರುಗಳ ಕೆಲಸದ ಒತ್ತಡದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗದ ಶಿಕ್ಷಣ.   ಸರಕಾರಿ ಶಾಲೆಗಳನ್ನು ಸರಕಾರವೇ ನಿರ್ಲಕ್ಷ್ಯ ಧೋರಣೆ ತೋರುತ್ತಿರುವಾಗ ಅಭಿವೃದ್ಧಿಯೆಲ್ಲಿ!! ಒಟ್ಟಿನಲ್ಲಿ ಹೇಳುವುದಾದರೆ ಖಾಸಗಿ ಶಿಕ್ಷಣದಲ್ಲಿ ಸಿಗುವ ಶಿಕ್ಷಣದ ಗುಣಮಟ್ಟವನ್ನು ಸರ್ಕಾರಿ ಶಾಲೆಗೂ ತಂದರೆ ಸರಕಾರಿ ಶಾಲೆಗಳೂ ಅಭಿವೃದ್ಧಿ ಹೊಂದಹುದು. ಮತ್ತು ಸರಕಾರಿ ಶಾಲೆಗಳಲ್ಲಿ ಓದಿದ ಪದವಿಧರರಿಗೆ ಸರ್ಕಾರಿ ಕೆಲಸ ಎಂದು ಸರಕಾರದ ಘೋಷಣೆ ಆಗಲಿ.           ಇನ್ನು ಈ ವಿಚಾರಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ ಕೂಡ ಕನ್ನಡ ಶಾಲೆಯ ಉನ್ನತಿಗಾಗಿ ತುಸು ಸಮಯ ವ್ಯವಹಿಸಬೇಕು. ಪೋಷಕರಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವವನ್ನು ತಿಳಿಸಲು ಮತ್ತು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸುವಂತೆ ಪ್ರೇರೇಪಿಸಲು ರಾಜ್ಯಾದ್ಯಂತ ಜಾಗೃತಿ ಜಾಥಾಗಳನ್ನು ನಡೆಸಬೇಕು.ಆರ್ಥಿಕವಾಗಿ ಹಿಂದುಳಿದಿರುವ ಅಥವಾ ಮೂಲಸೌಕರ್ಯದ ಕೊರತೆಯಿರುವ ಕನ್ನಡ ಶಾಲೆಗಳನ್ನು ದತ್ತು ಪಡೆದು, ಅವುಗಳ ಸೌರಭವನ್ನು ಹೆಚ್ಚಿಸಲು ದಾನಿಗಳನ್ನು ಪ್ರೇರೇಪಿಸುವ ಕೆಲಸ ಆಗಬೇಕು. ——————– ಇಂದುಮತಿ ಲಮಾಣಿ ವಿಜಯಪುರ

ಇಂದುಮತಿ ಲಮಾಣಿ ವಿಜಯಪುರ “ಎಲ್ಲರೂ ಕೈಜೋಡಿಸಬೇಕು” Read Post »

ಇತರೆ

ಸರ್ಕಾರಿ ಶಾಲೆಯ ಬಗ್ಗೆ ಭಾಷಣ ಮಾಡುವ ಶಿಕ್ಷಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆಯೇ? ಟಿ.ಬಿ.ಪೃಥ್ವಿರಾಜ್

ಕನ್ನಡ ಸಂಗಾತಿ ಟಿ.ಬಿ.ಪೃಥ್ವಿರಾಜ್ ಸರ್ಕಾರಿ ಶಾಲೆಯ ಬಗ್ಗೆ ಭಾಷಣ ಮಾಡುವ ಶಿಕ್ಷಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆಯೇ? “ನಾನು ಕೇವಲ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳುವುದಲ್ಲ; ನನ್ನ ಮಕ್ಕಳನ್ನೂ ಸರ್ಕಾರಿ ಶಾಲೆಯಲ್ಲಿಯೇ ಓದಿಸಿದ್ದೇನೆ” — ಈ ಮಾತು ಕೇವಲ ಒಬ್ಬ ಶಿಕ್ಷಕರ ಹೆಮ್ಮೆಯ ಮಾತಲ್ಲ, ಅದು ಸರ್ಕಾರಿ ಶಿಕ್ಷಣದ ಮೇಲಿನ ನಂಬಿಕೆಯ ಪ್ರತೀಕ. ಇಂದಿನ ಸಮಾಜದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಣದ ಗುಣಮಟ್ಟ ಮತ್ತು ಪೋಷಕರ ಆಯ್ಕೆಗಳ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ. ಸರ್ಕಾರಿ ಶಾಲೆಗಳನ್ನು ಉಳಿಸಬೇಕು, ಬೆಳೆಸಬೇಕು, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ ಈ ಮಾತುಗಳನ್ನು ಹೇಳುವವರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಾರೆಯೇ ಎಂಬ ಪ್ರಶ್ನೆ ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಕೆಲವು ಕಡೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದನ್ನು ಕಾಣುತ್ತೇವೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಈ ಪರಿಸ್ಥಿತಿ ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ನನ್ನ ತಂದೆಯೇ ನನಗೆ ಮಾದರಿ ನನ್ನ ಜೀವನದಲ್ಲಿ ಸರ್ಕಾರಿ ಶಾಲೆಯ ಮಹತ್ವವನ್ನು ತಿಳಿಸಿಕೊಟ್ಟವರು ನನ್ನ ತಂದೆ. ಅವರು ಒಬ್ಬ ಸರ್ಕಾರಿ ಶಾಲೆಯ ಶಿಕ್ಷಕರು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ನನ್ನನ್ನು ಸರ್ಕಾರಿ ಶಾಲೆಯಲ್ಲಿಯೇ ಓದಿಸಿದರು. ಅವರು ಬಯಸಿದ್ದರೆ ನನ್ನನ್ನೂ ಖಾಸಗಿ ಶಾಲೆಗೆ ಸೇರಿಸಬಹುದಿತ್ತು. ಆದರೆ ಅವರು ಸರ್ಕಾರಿ ಶಾಲೆಯ ಶಿಕ್ಷಣದ ಮೇಲೆ ನಂಬಿಕೆಯಿಟ್ಟಿದ್ದರು. ಆ ನಂಬಿಕೆಯನ್ನು ಕೇವಲ ಮಾತಿನಲ್ಲಿ ವ್ಯಕ್ತಪಡಿಸದೆ, ತಮ್ಮ ಜೀವನದಲ್ಲಿಯೇ ಅನುಸರಿಸಿದರು. ನಮ್ಮ ತಂದೆಯವರು ತಮ್ಮ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳುತ್ತಿದ್ದ ಮಾತು ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ: “ನಾನು ಕೇವಲ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳುವುದಲ್ಲ; ನನ್ನ ಮಕ್ಕಳನ್ನೂ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿಯೇ ಓದಿಸಿದ್ದೇನೆ.” ಈ ಮಾತಿನಲ್ಲಿ ಎಷ್ಟು ಆತ್ಮವಿಶ್ವಾಸವಿದೆ! ಎಷ್ಟು ಪ್ರಾಮಾಣಿಕತೆಯಿದೆ! ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳ ಮುಂದೆ ನಿಂತು, ತಾನು ಬೋಧಿಸುವ ಶಿಕ್ಷಣದ ಮೇಲೆ ನಂಬಿಕೆಯಿಟ್ಟು, ತನ್ನ ಮಕ್ಕಳ ಭವಿಷ್ಯವನ್ನೂ ಅದೇ ಶಿಕ್ಷಣಕ್ಕೆ ಒಪ್ಪಿಸುವುದು ಸಾಮಾನ್ಯ ಸಂಗತಿಯಲ್ಲ. ಅದು ಅವರ ವೃತ್ತಿಯ ಮೇಲಿನ ಗೌರವ ಮತ್ತು ಸರ್ಕಾರಿ ಶಾಲೆಯ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ. ನನ್ನ ತಂದೆಯವರು ನನಗೆ ಕೇವಲ ಶಿಕ್ಷಣವನ್ನಷ್ಟೇ ನೀಡಲಿಲ್ಲ; ಶಿಕ್ಷಣದ ಬಗ್ಗೆ ನಂಬಿಕೆ, ಸರಳತೆ, ಆತ್ಮಗೌರವ ಮತ್ತು ಸಮಾನತೆಯ ಮೌಲ್ಯಗಳನ್ನೂ ಕಲಿಸಿದರು. ಸರ್ಕಾರಿ ಶಾಲೆಯಲ್ಲಿ ಓದುವುದು ಕೀಳರಿಮೆಯ ವಿಷಯವಲ್ಲ, ಅದು ಹೆಮ್ಮೆಯ ವಿಷಯ ಎಂಬುದನ್ನು ತಮ್ಮ ನಡೆನುಡಿಗಳ ಮೂಲಕ ತೋರಿಸಿಕೊಟ್ಟರು. ಸರ್ಕಾರಿ ಶಾಲೆಗಳ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕೇ? ಇಂದು ಅನೇಕ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯದಿಂದ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡುತ್ತಾರೆ. ಅವರ ನಿರ್ಧಾರವನ್ನು ತಪ್ಪೆಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರುತ್ತದೆ. ಆದರೆ ಸರ್ಕಾರಿ ಶಾಲೆಗಳ ಬಗ್ಗೆ ಸಮಾಜದಲ್ಲಿ ಇರುವ ಕೆಲವು ಪೂರ್ವಗ್ರಹಗಳನ್ನು ಪ್ರಶ್ನಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಅರ್ಹ ಶಿಕ್ಷಕರು, ಅನುಭವಿಗಳು, ಉಚಿತ ಅಥವಾ ಕಡಿಮೆ ವೆಚ್ಚದ ಶಿಕ್ಷಣ, ವಿವಿಧ ಸರ್ಕಾರಿ ಸೌಲಭ್ಯಗಳು ಮತ್ತು ಸಮಾಜದ ಎಲ್ಲ ವರ್ಗದ ಮಕ್ಕಳೊಂದಿಗೆ ಕಲಿಯುವ ಅವಕಾಶಗಳಿರಬಹುದು. ಅನೇಕ ಸರ್ಕಾರಿ ಶಾಲೆಗಳು ಉತ್ತಮ ಸಾಧನೆ ಮಾಡುತ್ತಿವೆ. ಅದೇ ಸಮಯದಲ್ಲಿ ಕೆಲವು ಶಾಲೆಗಳಲ್ಲಿ ಮೂಲಸೌಕರ್ಯ, ಶಿಕ್ಷಕರ ಲಭ್ಯತೆ, ಕಲಿಕಾ ಸಾಮಗ್ರಿಗಳು ಮತ್ತು ಗುಣಮಟ್ಟದ ಸುಧಾರಣೆ ಅಗತ್ಯವಿದೆ. ಸಮಸ್ಯೆಗಳನ್ನು ಒಪ್ಪಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದೇ ನಿಜವಾದ ಪ್ರಗತಿ. ಸರ್ಕಾರಿ ಶಾಲೆಯೆಂದರೆ ಗುಣಮಟ್ಟವಿಲ್ಲದ ಶಿಕ್ಷಣ, ಖಾಸಗಿ ಶಾಲೆಯೆಂದರೆ ಉತ್ತಮ ಶಿಕ್ಷಣ ಎಂಬ ಸರಳ ನಿರ್ಧಾರ ಸರಿಯಲ್ಲ. ಶಾಲೆಯ ಗುಣಮಟ್ಟವನ್ನು ಶಿಕ್ಷಕರ ಬದ್ಧತೆ, ಬೋಧನಾ ವಿಧಾನ, ಮಕ್ಕಳಿಗೆ ದೊರೆಯುವ ಕಲಿಕಾ ವಾತಾವರಣ, ಪೋಷಕರ ಸಹಕಾರ ಮತ್ತು ಶಾಲೆಯ ನಿರ್ವಹಣೆ ನಿರ್ಧರಿಸುತ್ತವೆ. ಶಿಕ್ಷಕರ ಜವಾಬ್ದಾರಿ ಏನು? ಶಿಕ್ಷಕ ಎಂದರೆ ಕೇವಲ ಪಾಠ ಹೇಳಿಕೊಡುವ ವ್ಯಕ್ತಿಯಲ್ಲ; ಸಮಾಜಕ್ಕೆ ದಾರಿ ತೋರಿಸುವ ಮಾರ್ಗದರ್ಶಕ. ಶಿಕ್ಷಕರು ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಹೆಮ್ಮೆಯಿಂದ ಮಾತನಾಡುವುದಾದರೆ, ತಮ್ಮ ಶಾಲೆಯ ಬೋಧನೆ, ಮಕ್ಕಳ ಕಲಿಕೆ ಮತ್ತು ಶಾಲೆಯ ಅಭಿವೃದ್ಧಿಯಲ್ಲಿಯೂ ಅದೇ ಬದ್ಧತೆಯನ್ನು ತೋರಿಸಬೇಕು. ಎಲ್ಲ ಶಿಕ್ಷಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲೇಬೇಕು ಎಂದು ಒತ್ತಾಯಿಸುವುದು ನ್ಯಾಯಸಮ್ಮತವಲ್ಲ. ಏಕೆಂದರೆ ಪ್ರತಿಯೊಂದು ಕುಟುಂಬದ ಪರಿಸ್ಥಿತಿ, ಮಗುವಿನ ಅಗತ್ಯ ಮತ್ತು ಶಾಲೆಗಳ ಸೌಲಭ್ಯಗಳು ವಿಭಿನ್ನವಾಗಿರುತ್ತವೆ. ಆದರೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಶಿಕ್ಷಕರೂ ಸರ್ಕಾರಿ ಶಾಲೆಗಳ ಸುಧಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ತಮ್ಮ ಶಾಲೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮತ್ತು ಪೋಷಕರ ಆತಂಕಗಳಿಗೆ ಉತ್ತರಿಸುವುದು ಅವರ ಪ್ರಮುಖ ಜವಾಬ್ದಾರಿಗಳಾಗಿವೆ. ಸರ್ಕಾರಿ ಶಾಲೆ ಉಳಿಸುವುದು ಯಾರ ಜವಾಬ್ದಾರಿ? ಸರ್ಕಾರಿ ಶಾಲೆಗಳನ್ನು ಉಳಿಸುವುದು ಕೇವಲ ಶಿಕ್ಷಕರ ಜವಾಬ್ದಾರಿಯಲ್ಲ. ಸರ್ಕಾರ, ಶಿಕ್ಷಣ ಇಲಾಖೆ, ಶಿಕ್ಷಕರು, ಪೋಷಕರು ಮತ್ತು ಸ್ಥಳೀಯ ಸಮುದಾಯ—ಎಲ್ಲರ ಸಹಕಾರವೂ ಅಗತ್ಯ. ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ, ಸಮರ್ಪಕ ಶಿಕ್ಷಕರ ನೇಮಕಾತಿ, ಗುಣಮಟ್ಟದ ಬೋಧನೆ ಮತ್ತು ಮಕ್ಕಳಿಗೆ ಸುರಕ್ಷಿತ ಕಲಿಕಾ ವಾತಾವರಣ ಒದಗಿಸಬೇಕು. ಪೋಷಕರು ಕೂಡ ಶಾಲೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಕ್ಕಳ ಕಲಿಕೆಗೆ ಸಹಕರಿಸಬೇಕು. ಒಂದು ಸರ್ಕಾರಿ ಶಾಲೆ ಮುಚ್ಚಿದಾಗ ಅಲ್ಲಿ ಕೇವಲ ಕಟ್ಟಡವೊಂದು ನಿಶ್ಶಬ್ದವಾಗುವುದಿಲ್ಲ; ಆ ಊರಿನ ಅನೇಕ ಬಡ ಮತ್ತು ಸಾಮಾನ್ಯ ಕುಟುಂಬಗಳ ಮಕ್ಕಳಿಗೆ ಹತ್ತಿರದಲ್ಲೇ ಶಿಕ್ಷಣ ಪಡೆಯುವ ಅವಕಾಶವೂ ಕಡಿಮೆಯಾಗಬಹುದು. ಆದ್ದರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಎಂದರೆ ಕೇವಲ ಒಂದು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲ; ಅದು ಸಮಾಜದ ಸಮಾನ ಅವಕಾಶಗಳ ಅಭಿವೃದ್ಧಿಯೂ ಹೌದು. ಕೊನೆಯ ಮಾತು ನನ್ನ ತಂದೆಯವರು ನನ್ನನ್ನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿಸಿದ ಸಂಗತಿ ನನಗೆ ಸದಾ ಹೆಮ್ಮೆಯ ವಿಷಯ. ಅವರು ವೇದಿಕೆಯ ಮೇಲೆ ನಿಂತು ಹೇಳಿದ ಮಾತುಗಳಿಗಿಂತ, ತಮ್ಮ ಜೀವನದಲ್ಲಿ ಅನುಸರಿಸಿದ ಮೌಲ್ಯಗಳು ನನಗೆ ದೊಡ್ಡ ಪಾಠವಾಗಿವೆ. ಸರ್ಕಾರಿ ಶಾಲೆಯ ಬಗ್ಗೆ ಮಾತನಾಡುವುದು ಸುಲಭ; ಅದರ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುವುದು ಮುಖ್ಯ. ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆಪಡುವುದು ಒಳ್ಳೆಯದು; ಆ ಹೆಮ್ಮೆಗೆ ತಕ್ಕಂತೆ ಶಿಕ್ಷಣದ ಗುಣಮಟ್ಟವನ್ನು ಬೆಳೆಸುವುದು ಇನ್ನೂ ಮುಖ್ಯ. ಶಿಕ್ಷಕರು ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸುತ್ತಾರೆ ಎಂಬುದೊಂದೇ ಅವರ ಬದ್ಧತೆಯನ್ನು ಅಳೆಯುವ ಮಾನದಂಡವಾಗಬಾರದು. ಆದರೆ ಅವರು ನೀಡುವ ಶಿಕ್ಷಣದ ಗುಣಮಟ್ಟ, ಮಕ್ಕಳ ಮೇಲಿನ ಕಾಳಜಿ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಲ್ಲಿಸುವ ಕೊಡುಗೆ ಖಂಡಿತವಾಗಿಯೂ ಮುಖ್ಯ. ಸರ್ಕಾರಿ ಶಾಲೆಯ ಗೌರವ ಅದರ ಗೋಡೆಗಳಲ್ಲಿಲ್ಲ; ಅಲ್ಲಿ ಕಲಿಯುವ ಮಕ್ಕಳ ಕನಸುಗಳಲ್ಲಿ, ಬೋಧಿಸುವ ಶಿಕ್ಷಕರ ಬದ್ಧತೆಯಲ್ಲಿ ಮತ್ತು ಸಮಾಜವು ಆ ಶಾಲೆಯ ಮೇಲೆ ಇಡುವ ನಂಬಿಕೆಯಲ್ಲಿ ಅಡಗಿದೆ. ನನ್ನ ತಂದೆಯವರಂತೆ, ತಾವು ನಂಬಿದ ಶಿಕ್ಷಣ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಅದನ್ನು ತಮ್ಮ ಬದುಕಿನಲ್ಲಿ ಅನುಸರಿಸುವ ಪ್ರತಿಯೊಬ್ಬ ಶಿಕ್ಷಕರೂ ಸಮಾಜಕ್ಕೆ ಮಾದರಿಯಾಗುತ್ತಾರೆ. ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದರೆ ಕೇವಲ ಘೋಷಣೆಗಳು ಸಾಲದು; ಗುಣಮಟ್ಟದ ಶಿಕ್ಷಣ, ಪ್ರಾಮಾಣಿಕ ಪ್ರಯತ್ನ ಮತ್ತು ಸಾಮೂಹಿಕ ಜವಾಬ್ದಾರಿ ಬೇಕು. ಏಕೆಂದರೆ, ಸರ್ಕಾರಿ ಶಾಲೆಯ ಬಾಗಿಲು ತೆರೆದಿರುವುದು ಕೇವಲ ಮಕ್ಕಳಿಗಾಗಿ ಮಾತ್ರವಲ್ಲ; ಸಮಾನತೆಯ, ಜ್ಞಾನದ ಮತ್ತು ಉತ್ತಮ ಸಮಾಜದ ಭವಿಷ್ಯಕ್ಕಾಗಿ.

ಸರ್ಕಾರಿ ಶಾಲೆಯ ಬಗ್ಗೆ ಭಾಷಣ ಮಾಡುವ ಶಿಕ್ಷಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆಯೇ? ಟಿ.ಬಿ.ಪೃಥ್ವಿರಾಜ್ Read Post »

ಇತರೆ

“ಸರಕಾರಿ ಶಾಲೆಗಳು ಮತ್ತುಕನ್ನಡ” ವನಜ ಮಹಾಲಿಂಗಯ್ಯ

ಕನ್ನಡ ಸಂಗಾತಿ ವನಜ ಮಹಾಲಿಂಗಯ್ಯ “ಸರಕಾರಿ ಶಾಲೆಗಳು ಮತ್ತುಕನ್ನಡ” 1. ಸರ್ಕಾರಿ ಕನ್ನಡ ಶಾಲೆ ಬಲಪಡಿಸುವುದು ಹೇಗೆ? ಬಲಪಡಿಸುವುದು ಕಷ್ಟವಲ್ಲ , ಮನಸ್ಸು ಮಾಡಬೇಕು ಅಷ್ಟೇ.ಶಿಕ್ಷಕರನ್ನು ಕೊಡಬೇಕು:ಒಬ್ಬರೇ ಮಾಸ್ತರು 5 ಕ್ಲಾಸು ನಡೆಸಿದರೆ ಹೇಗೆ? ಪ್ರತಿ ಶಾಲೆಗೆ ವಿಷಯವಾರು ಶಿಕ್ಷಕರು ಬೇಕು. ಇಂಗ್ಲಿಷ್ ಭಯ ಹೋಗಿಸಬೇಕು:ಸರ್ಕಾರಿ ಶಾಲೆ ಎಂದರೆ ಕನ್ನಡ ಮಾತ್ರ ಎಂಬ ಭ್ರಮೆ ಬೇಡ. 1ನೇ ತರಗತಿಯಿಂದಲೇ ಚೆನ್ನಾಗಿ ಇಂಗ್ಲಿಷ್ ಕಲಿಸಿದರೆ, ಪೋಷಕರು ಖಾಸಗಿ ಶಾಲೆಗೆ ಹೋಗಲ್ಲ.ಶಾಲೆ ಶಾಲೆಯಂತೆ ಇರಬೇಕು:ಚೆನ್ನಾಗಿ ಟಾಯ್ಲೆಟ್, ಕುಡಿಯುವ ನೀರು, ಆಟದ ಮೈದಾನ, ಕಂಪ್ಯೂಟರ್. ಖಾಸಗಿ ಶಾಲೆಯಲ್ಲಿ ಏನಿದೆಯೋ ಅದೆಲ್ಲ ಸರ್ಕಾರಿ ಶಾಲೆಯಲ್ಲೂ ಕೊಟ್ಟರೆ ಸಾಕು. 2. ಶೇ. 90 ರಷ್ಟು ಸರ್ಕಾರಿ ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಏಕೆ ಕಳುಹಿಸುವುದಿಲ್ಲ? ಇದು ಕಹಿ ಸತ್ಯ, ಆದರೆ ನಿಜ.ಶಿಕ್ಷಕರಿಗೆ ಗೊತ್ತಿದೆ – ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು. ಒಬ್ಬ ಟೀಚರ್ ರಜೆ ಹಾಕಿದರೆ ಆ ದಿನ ಪೂರ್ತಿ ಕ್ಲಾಸು ಖಾಲಿ. ಮೂಲಭೂತ ಸೌಕರ್ಯ ಇಲ್ಲ. ಸರ್ಕಾರದಿಂದ ಬರುವ ಕೆಲಸದ ಒತ್ತಡ – ಜನಗಣತಿ, ಚುನಾವಣೆ ಡ್ಯೂಟಿ, ಮಧ್ಯಾಹ್ನದ ಬಿಸಿಯೂಟದ ಲೆಕ್ಕ – ಇದೆಲ್ಲದರಲ್ಲಿ ಮಕ್ಕಳಿಗೆ ಪಾಠವೇ ಆಗುವುದಿಲ್ಲ. ತನ್ನ ಮಗು ಚೆನ್ನಾಗಿ ಇಂಗ್ಲಿಷ್ ಮಾತನಾಡಬೇಕು, ದೊಡ್ಡ ಶಾಲೆಯ ಸಮವಸ್ತ್ರ ಹಾಕಿಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬ ತಂದೆ ತಾಯಿಗೂ ಇರುತ್ತದೆ. ಶಿಕ್ಷಕರೂ ಮನುಷ್ಯರೇ ತಾನೇ? ತಮ್ಮ ಕೈಯಲ್ಲೇ ವ್ಯವಸ್ಥೆ ಸರಿ ಇಲ್ಲ ಎಂದ ಮೇಲೆ, ತಮ್ಮ ಮಕ್ಕಳನ್ನು ಹೇಗೆ ಅಲ್ಲಿಗೆ ಕಳುಹಿಸುತ್ತಾರೆ? ಇದು ಶಿಕ್ಷಕರ ತಪ್ಪಲ್ಲ, ವ್ಯವಸ್ಥೆಯ ತಪ್ಪು. 3. ಕನ್ನಡ ಉಳಿಸಲು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು? ಕನ್ನಡ ಉಳಿಯುವುದು ಭಾಷಣದಿಂದಲ್ಲ, ಕೆಲಸದಿಂದ.ಸರ್ಕಾರ ಮಾಡಬೇಕಾದ್ದು:ಕನ್ನಡದಲ್ಲಿ ಓದಿದವರಿಗೆ ನೌಕರಿಯಲ್ಲಿ 5% ಮೀಸಲಾತಿ ಕೊಡಲಿ. ಆಗ ತಾನೇ ತಾನಾಗಿ ಎಲ್ಲರೂ ಕನ್ನಡ ಕಲಿಯುತ್ತಾರೆ. ಬರೀ ನಾಮಫಲಕ ಕನ್ನಡದಲ್ಲಿ ಹಾಕಿಸಿದರೆ ಸಾಲದು. ಸಾಹಿತ್ಯ ಪರಿಷತ್ತು ಮಾಡಬೇಕಾದ್ದು:ಪರಿಷತ್ತು ಅಂದರೆ ವರ್ಷಕ್ಕೊಮ್ಮೆ ಸಮ್ಮೇಳನ ಮಾಡಿ ಬಿರಿಯಾನಿ ತಿಂದು ಹೋಗುವ ಜಾಗ ಆಗಬಾರದು. ಹಳ್ಳಿ ಹಳ್ಳಿಗೆ ಹೋಗಿ, ಕನ್ನಡದ ನಾಟಕ, ಕವಿಗೋಷ್ಠಿ, ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮ ಮಾಡಬೇಕು. ಕನ್ನಡವನ್ನು ಮನೆಯ ಭಾಷೆಯಾಗಿ ಉಳಿಸಬೇಕು, ವೇದಿಕೆಯ ಭಾಷೆಯಾಗಿ ಅಲ್ಲ. ಕೊನೆಗೆ ಒಂದು ಮಾತು,ಸರ್ಕಾರಿ ಶಾಲೆ ಮತ್ತು ಸಂಸಾರ ಎರಡೂ ಒಂದೇ. ತಾಳ್ಮೆಯಿಂದ, ಹೊಂದಾಣಿಕೆಯಿಂದ ಕಟ್ಟಿ ಬೆಳೆಸಿದರೆ ಮಾತ್ರ ಉಳಿಯುತ್ತದೆ. ಬಿಟ್ಟುಬಿಟ್ಟರೆ ಕುಸಿದು ಬೀಳುತ್ತದೆ. ಶ್ರೀಮತಿ ವನಜಾ ಮಹಾಲಿಂಗಯ್ಯ                   

“ಸರಕಾರಿ ಶಾಲೆಗಳು ಮತ್ತುಕನ್ನಡ” ವನಜ ಮಹಾಲಿಂಗಯ್ಯ Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದಮಾತುಗಳು ನೀರೆಂಬ ಸಂಜೀವಿನಿಯು , ಬರಗಾಲವೂ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ. ಕನ್ನಡ ಭಾಷೆ ಅಂದ್ರೆ ಬರಿ ಬೆಂಗಳೂರು ಕನ್ನಡ ಭಾಷೆ ಅಲ್ಲ.ಕರ್ನಾಟಕದ ಎಲ್ಲಾ ಜಿಲ್ಲೆಗಳ ವಿಧವಿಧ ಭಾಷೆಗಳಿಗೂ ಒಂದೇ ಪ್ರೀತಿ ಇರಲಿ.ಬೀದರನಿಂದ , ಚಾಮರಾಜನಗರದವರೆಗೆ ಕನ್ನಡದಲ್ಲಿ ಮಾತಾಡುವ ಅದೆಷ್ಟೋ ಕನ್ನಡ ಧಾಟಿಗಳು. ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆ ಕಲ್ಬುರ್ಗಿಯ ಭಾಷೆಯಲ್ಲಿ ಪ್ರತಿ ತಿಂಗಳು ಅಂಕಣ ಬರಹ ಬರೆಯುವ ಉದ್ದೇಶ ಮುಖ್ಯವಾಗಿ ಕನ್ನಡದಲ್ಲೆ ಆಡುವ ಮಾತಿನ ಧಾಟಿ , ಸೊಗಸಿನೊಂದಿಗೆ ಎಲ್ಲಾ ಜಿಲ್ಲೆಗಳ ಮಾತಿನ ಧಾಟಿಗೂ ಸಮಾನ ಗೌರವ ಸಿಗಲಿ ಎಂಬ ಉದ್ದೇಶ. ಉತ್ತರ ಕರ್ನಾಟಕ ಎಂಬುದು ದಕ್ಷಿಣ ಕರ್ನಾಟಕದವ್ರಿಗೆ ಅದಾವದೋ ಭಾಷೆ ಅನಿಸಬಾರದು.ಕರವಳಿ ಭಾಷೆ ಬೀದರನವರಿಗೆ ನಗೆಪಾಟಲಾಗಬಾರದು ಭಾಷೆ ವಿವಿಧ ಆದ್ರೂ ಅದರೊಳಗಿನ ಭಾವ ಒಂದೇ.ಭಾಷೆ ಎಲ್ಲರನ್ನೂ ಬೆಸೆದಿಡಲಿ. ಈ ಸಂದರ್ಭದ ಮುಖ್ಯ ವಿಷಯ ಅಂದ್ರ ಮಳಿ , ಬೆಳಿ.ನಮ್ಮ ಕಡಿ ಈ ವರ್ಷ ಮಳಿ ಪೂರಾ ಮುನಸಿಕೊಂಡು ಬಿಟ್ಟದ . ಹೊಲದಾಗ ಬಿತ್ತಿದ ಉದ್ದು , ಹೆಸರು , ಎಲ್ಲಾ ಬೆಳೆಗಳು ಮಳಿ ಇಲ್ದೆ ಮೊಳಕೆ ಭೂಮಿಯೊಳಗಿಂದ ಹೊರಗೆ ಬಂದಿಲ್ಲ.ಎರಡನೆ ಬೆಳೆ ತೊಗರಿ ಬ್ಯಾಳಿ , ಕಡ್ಲಿ ಬ್ಯಾಳಿ ಬೆಳೆಗಳು ಒಣಗಿ ಫಸಲು ಕೈಗೆ ಬರೊದು ಕನಸಾಗ್ಯಾದ.ಇನ್ನೂ ನಮ್ಮ ದಿನನಿತ್ಯದ ಊಟ ಜೋಳ ಅಂತೂ ಈ ವರ್ಷ ಬೆಳಿ ಬರೊದು ಕಷ್ಟನೆ.ನಮಗ ಅನ್ನ ಉಣ್ಣಲಿಲ್ಲ ಅಂದ್ರೂ ನಡಿತದ , ಎರಡೊತ್ತು ರೊಟ್ಟಿ ಬೇಕು.ಜೋಳ ಪಿರೆ ಆದುವಂದ್ರ ನಮ್ಮ ಉತ್ತರ ಕರ್ನಾಟಕ ದ ಜನ ಬಾಯಿ ಬಿಡಬೇಕು.ಈಗ ಪ್ರತಿ ವರ್ಷಕ್ಕಿಂತ ಎರಡ್ಮೂರು ಸಾವ್ರ ಹೆಚ್ಚು ರೇಟ್ ಆಗ್ಯಾದ ಜೋಳಕ್ಕ. ಎಲ್ಲಾ ಆಹಾರ ಧ್ಯಾನಗಳು , ಅಡುಗಿ ಎಣ್ಣಿ ಎಲ್ಲಾ ಪಿರೆ ಆಗಿಬಿಟ್ಟದ. ಬರಗಾಲದ ಪರಿಣಾಮ ಈಗ ಹಿಂದಿನಂಗ ಭೀಕರ ಇರಲಾರದು. ನಲವತ್ತು , ಐವತ್ತು ವರ್ಷಗಳ ಹಿಂದೆ ಇದ್ದ ನೀರಿನ ಅಭಾವ , ಆಹಾರದ ಅಭಾವ ,ಹಣಕಾಸಿನ ಅಭಾವ ಈಗೀನ ಪೀಳಿಗೆ ನೋಡಿರಲಿಕ್ಕಿಲ್ಲ. ಝೆನ್‌ ಝಿ ಗಳಿಗಂತೂ ಯಾವುದೇ ತಾಪತ್ರಯ ಇಲ್ಲದಹಂಗ ಬದುಕ್ತಿದ್ದಾರ.ಮಳಿ ಇಲ್ದೆ ನೀರು ಇಲ್ದೆ ಹ್ಯಾಂಗ್ ಇರಬೇಕು ಅಂತ ನಾವು ತಲೆ ಕೆಡಿಸಿಕೊಂಡಷ್ಟು ಅವ್ರು ಚಿಂತಿ ಮಾಡಲ್ಲ ಬಿಡ್ರಿ.ಯಾಕಂದ್ರ ಅವ್ರಿಗಿ ಯಾವ ಚಿಂತೆ ಇಲ್ದೆ ಬೆಳಸಲಿಕ್ಕ ತಂದೆ ತಾಯಿ ಸತತ ಪ್ರಯತ್ನಿಸತಿರತಾರ.ಹಳ್ಳಿಗಳ ಕಡಿ ದೊಡ್ಡ ಮಕ್ಕಳು ನೀರು ಬಾವಿಯಿಂದ ಇಲ್ಲ ಬೊರ್ವೆಲ್ ನಿಂದ ಕೊಡದಲ್ಲಿ ತುಂಬಿಕೊಂಡು ಸೊಂಟದ ಮ್ಯಾಲ್ ಇಲ್ಲ ತಲಿಮ್ಯಾಲ್ ಹೊತ್ತುಕೊಂಡು ತರೋದು ನೊಡ್ತಿವಿ.ಸಿಟಿಯಲ್ಲಿರುವವರಿಗಿ ಒಂದು ನೀರಿನ ಕೊಡ ಕೂಡ ಎತ್ತಲಿಕ್ಕ ಬರಲ್ಲ.ಪಟ್ಟಣಗಳಲ್ಲಿ ಅವ್ರ ಮನ್ಯಾಗ್ ಎಲ್ಲೆಂದ್ರಲ್ಲಿ ನೀರಿನ ವ್ಯವಸ್ಥೆ ಇರತದ.ಒಂದು ಗ್ಲಾಸ್ ಕೂಡ ಎತ್ತುವ ಪರಿಸ್ಥಿತಿ ಇರಲ್ಲ.ಒಮ್ಮೆಲೆ ಇಡೀ ಪಟ್ಟಣದಲ್ಲಿ ನೀರಿನ ಬರಗಾಲ ಆವರಿಸಿದ್ರ ಅದರ ಪರಿಣಾಮ ಉಹಿಸಿಕೊಳ್ಳಕ್ಕೂ ಆಗಲ್ಲ.ಆವಾಗೆಲ್ಲ ನಾವು ನೀರನ್ನು ಸಂಪು (ನಮ್ಮ ಕಡಿ ಅದಕ್ಕ ಹೌದು ಅಂತಿವಿ ) ನಾಗ ಇಲ್ಲ ಬ್ಯಾರಲ್ ನಾಗ ತುಂಬತಿದ್ವಿ.ಈಗ ಮಾಳಿಗಿ ಮ್ಯಾಲ್ ಸಿಂಟೆಕ್ಸ ಇರತದ.ಅದರಿಂದ ಇಡೀ ಮನಿಗಿ ನೀರು ಸಪ್ಲೈ ಆಗತದ. ಒಂದು ವ್ಯಾಳೆ ಬೋರ್ವೆಲ್ , ಭಾವಿದಾಗ ನೀರು ಮುಗಿದ್ರ , ಹೊರಗಿನಿಂದ ನೀರು ತಂದು ಸಂಗ್ರಹಿಸಿಕೊಳ್ಳಬೆಕಂದ್ರ ಯಾರ ಮನಿಯಾಗೂ ಸಂಪು ಅಥವಾ ಬ್ಯಾರಲ್ ಅಥವಾ ದೊಡ್ಡ ದೊಡ್ಡ ಪಾತ್ರೆಗಳು ಇಲ್ಲ. ಹೆಂಬತ್ತು, ಹೆಂಬತೈದರ ದಶಕಗಳಲ್ಲಿ ನೀರಿನ ಅಭಾವ ನಮ್ಮ ಕಡಿ ಭಾಳ ಇತ್ತು.ಊರಲ್ಲಿ ಅಲ್ಲೊಂದು ಇಲ್ಲೊಂದು ಭಾವಿಗಳು ಇದ್ವು.ಬೊರ್ವೆಲ್ ಗಳು ಶ್ರೀಮಂತ ರ ಮನ್ಯಾಗ ಮಾತ್ರ ಇರತಿದ್ದವು.ಬ್ಯಾಸಗಿ ಬಂದ್ರ ಭಾವಿಗಳ ನೀರು ಒಣಗಿ ಬತ್ತಿಹೋಗತಿದ್ವು.ನಮ್ಮೂರ ಹೊರಗೆ ಒಂದು ಭಾವಿ ಇತ್ತು .ನಸುಕಿನಾಗ ಎದ್ದು ಮನಿ ಹೆಂಗಸ್ರು ಗಂಡಸ್ರೆಲ್ ಕೊಡ ಹಿಡಕೊಂಡು ಭಾವಿ ಕಡಿ ಓಡತಿದ್ರು.ಅಷ್ಟರಲ್ಲಿ ಭಾವಿ ಒಳಗ ಒಂದಿಬ್ರು ಗಂಡಸ್ರು ಇಳಿದಿರತಿದ್ರು.ಹಗ್ಗದಿಂದ ಭಾವಿ ಒಳಗ ಬಿಡತಿದ್ದ ಕೊಡಗಳಲ್ಲಿ ಅವ್ರು ಒಂದು ಪಾತ್ರೆಯಿಂದ ನೀರು ಮೊಗೆದು ಕೊಡಗಳಲ್ಲಿ ತುಂಬುತಿದ್ರು.ಕೊಡ ಮುಳುಗುವಷ್ಟು ನೀರು ಇರತಿರಲಿಲ್ಲ ಭಾವಿಯಲ್ಲಿ.ಇದು ಮದ್ಯಾನ್ಹದ ವರೆಗೆ ನಡಿತಿತ್ತು.ನಾನು ಒಂದು ಚಿಕ್ಕ ಬಿಂದಿಗಿ ತಗೊಂಡು ಮನಿಗಿ ಭಾವಿಗಿ ಓಡಾಡತಿದ್ಧೆ.ಆಗ ನೀರು ತುಂಬುವದೆ ಒಂದು ದೊಡ್ಡ ಕೆಲಸ. ಹಬ್ಬ ಹರಿದಿನಗಳದಾಗ ಮನ್ಯಾಗ ಹೆಣ್ಣಮಕ್ಳಿಗಿ ಬಾಳ ಕೆಲಸ ಇದ್ರ ಗಂಡ ಮಕ್ಳು ಎತ್ತಿನ ಮ್ಯಾಲ ನೀರು ತರತಿದ್ರು..ಎತ್ತಿನ ಬೆನ್ನ ಮ್ಯಾಲ್ ಆಕಡಿ ಈ ಕಡಿ ಕೊಡ ಹಿಡಿಯುವಂತ ಕಬ್ಬಿಣದ ಗೊಲಾಕಾರದ ಸಾಚಾಗಳಲ್ಲಿ ಕೊಡ ಇಟ್ಟು ನೀರು ತರತಿದ್ರು.ಅದಕ್ಕ ಲಗಳಿ ಅಂತಿದ್ರು. ಬೆಳಗೆದ್ರೆ ಎಲ್ಲರ ಮನ್ಯಾಗೂ ಲಗಳಿ ಹೊಡೆಯುವ ಗಡಿಬಿಡಿ.ಒಂದೇ ಸಲ ಆ ಕಡೆ ಮೂರು , ಈ ಕಡೆ ಮೂರು ಒಟ್ಟು ಆರು ಕೊಡಗಳು ಎತ್ತು ಹೋರುತಿತ್ತು.  ಈಗ ನೆನಸಿಕೊಂಡ್ರ ಆಶ್ಚರ್ಯ ಆಗತದ.ಮನಿಮಂದಿಎಲ್ಲ ಸ್ವಲ್ಪ ನೀರಿನಾಗ ಅದ್ಯಾಂಗ್ ಸಂಭಾಳಿಸ್ತಿದ್ದೆವು ಅಂತ.ಎಲ್ಲರ ಸ್ನಾನ್ , ಬಟ್ಟಿ , ಭಾಂಡೆ , ಕುಡಿಯುವ ನೀರು ಎಲ್ಲಾ ಬಾವಿಯಿಂದ ತಂದು ತುಂಬಿದ್ದ ನೀರಿನಿಂದ ಆಗತಿತ್ತು.ಎರಡಕ್ಕ ಮಾತ್ರ ತಂಬಿಗಿ ತಗೊಂಡು ಹೊರಗ ಹೋಗಬೇಕಾಗ್ತಿತ್ತು.ಈಗ ಎಲ್ಲಕ್ಕಿಂತ ಹೆಚ್ಚಾಗಿ ಶೌಚಾಲಯದ ಸಲುವಾಗಿ ಹೆಚ್ಚು ನೀರು ಬೇಕು. ಹೆಚ್ಚು ಕಮ್ಮಿ ನನ್ನ ಪಿಯುಸಿ ವಿದ್ಯಾಭ್ಯಾಸ ಮುಗಿಯುವ ವರೆಗೂ ನೀರಿನ ಗೋಳು ಇದ್ದೆ ಇತ್ತು.ಅದೇಷ್ಟು ಕೊಡ ನೀರು ಹೊತ್ತು ತರತಿದ್ದೆನೋ ಈಗ ನೆನಸಿಕೊಂಡ್ರೆ ಆಶ್ಚರ್ಯ ಆಗತದ.ಯಾಕಂದ್ರ ಈಗ ಒಂದು ಕೊಡ ಎತ್ತಿ ಸೊಂಟದ ಮ್ಯಾಲ ಇಟ್ಟಕೊಂಡ್ರ ಆನೆ ಭಾರ ಹೊತ್ತಂಗ ಆಗತದ. ಕೈ ತಿರುಗಿಸಿದ್ರ ನೀರು ಬರೊ ವ್ಯವಸ್ಥೆ ಇದ್ದ ಮ್ಯಾಕ್ ಕೊಡ ಹೊತ್ತುಕೊಳ್ಳೊ ಪ್ರಶ್ನೆನೆ ಬರಲ್ಲ. ಈಗಿನ ಮಕ್ಳು ಒಂದು ತಂಬಿಗಿ ನೀರು ಎತ್ತಿ ರೂಢಿ ಇಲ್ದವ್ರು. ದೂರದ ಬಾವಿಯಿಂದ ಇಲ್ಲ ನಲ್ಲಿಯಿಂದ ನೀರು ತುಂಬಿಕೊಂಡು ಬರ್ರಿ ಅಂದ್ರ ಸ್ನಾನ್ ಮಾಡ್ಲಾರದೆ ಹಂಗೆ ಇರತಿವಿ , ನೀರು ಹೊತ್ತಕ್ಕೊಂಡು ಬರಲ್ಲ ಅಂತ ಹೆಳತಾರ.ಬರಗಾಲದ ಸಂದರ್ಭ ಅದ್ಯಾಂಗ್ ಎದುರಿಸ್ತಾರ..!ನಮ್ಮ ಕಲ್ಬುರ್ಗಿ ಕಡಿ ಪ್ರತಿ ಸಲ ಫೆಬ್ರವರಿ ನಲ್ಲಿ ಶುರು ಆಗುವ ನಿರಿನ ಅಭಾವ ಈ ವರ್ಷ ಮಳಿ ಇಲ್ದಕ್ಕ ಸೆಪ್ಟೆಂಬರ್ ನಲ್ಲೆ ಶುರು ಆಗ್ಯಾದ. ಅಂತರ್ಜಲ ಮಟ್ಟ ಕುಸದು ಎಲ್ಲರ ಮನಿ ಬೊರ್ವೆಲ್ಲಗಳು ಒಣಗಿ ಬಿಟ್ಟಾವ.ಎಲ್ರೂ ಟ್ಯಾಂಕರ್ ನೀರಿಗಿ ಮೊರೆ ಹೊಗತಿದ್ದಾರ.ಕುಡಿಯುವ ನೀರು ಖರಿದಿ ತಗೊಬೇಕು.ಹಿಂದಿನ ಕಾಲ್ದಲ್ಲಿ ಒಂದನಾಲ್ಕು ಕೊಡದಾಗ ಎಲ್ಲಾ ಮನಿ ಕೆಲಸಗಳು ಆಗತಿದ್ವು ಅಂತ.ಈಗ ಮನ್ಯಾಗ್ ಇಬ್ರೆ ಇದ್ರು ಒಂದು ಸಿಂಟೆಕ್ಸ ಪೂರಾ ನೀರು ಬೇಕು.ಎನ್ ಮಾಡ್ತಿವಿ ನಮಗೆ ಗೊತ್ತಿಲ್ಲ. ಬರಗಾಲ ಬಂದ್ರೂ ಆಹಾರ ತುಟ್ಟಿಯಾಗಬಹುದು, ಪೂರಾ ಸಿಗಲಾರದಂಗಂತೂ ಆಗಲ್ಲ.ಒಂದು ಕಡಿಯಿಂದ ಮತ್ತೊಂದು ಕಡಿಗಿ ಕಳಿಸೊದು , ತರಿಸಿಕೊಳ್ಳೊ ವ್ಯವಸ್ಥೆ ಇರತದ.ಆದ್ರ ಭೂಮಿದಾಗ ನೀರೆ ಮುಗಿದುವಂದ್ರ ಎನ್ ಮಾಡ್ಬೇಕು.ಎಷ್ಟು ದುಡ್ಡಕೊಟ್ರು ನೀರು ತರಿಸಲಿಕ್ಕ ಆಗಲ್ಲ.ಅದಕ್ಕ ಮಳಿನೆ ಬೇಕು.ಮಳಿ ಈ ವರ್ಷ ಜೀವಕುಲದ ಮ್ಯಾಲ ಬಾಳ ಮುನಸಿಕೊಂಡದ.ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಪ್ರವಾಹ ಆಗತದ.ನಮ್ಮಲ್ಲಿ ಕುಡಿಯೋ ನೀರಿಗೂ ಗತಿ ಇಲ್ದಂಗ ಆಗ್ಯದ.ಪ್ರಕೃತಿನೆ ವಿಚಿತ್ರ. ಅಥವಾ ನಾವೇ ಪ್ರಕೃತಿ ಮುನಸಿಕೊಳ್ಳೊ ಹಂಗ ಮಾಡ್ತಿದ್ದೆವೋ. ಮುಂದೆ ಒಮ್ಮೆ ಭೂಮಿ ನೀರಿನ ಅಭಾವ ಎದುರಿಸಬೇಕಾಗತದ.ವಾತಾವರಣದಾಗ ಎರತಿರೋ ತಾಪಮಾನ ಒಂದು ಕಾರಣ.ವಿಶ್ವ ದ ಮೂರು ಭಾಗ ನೀರೆ ಇದ್ರು ಅದು ನಿರುಪಯೋಗಿ.ಎಲ್ಲದಕ್ಕೂ ಸಿಹಿ ನೀರು ಮಾತ್ರ ಬೇಕು.ದಿನೆ ದಿನೆ ಮುಂದುವರಿತಾ ಇರೋ ತಂತ್ರಜ್ಞಾನ ಗಳು ಇನ್ನಷ್ಟು ಹೆಚ್ಚು ನೀರು ಬೇಡತಾವ.ತಂತ್ರಜ್ಞಾನ ದ ಡೇಟಾ ಸಂಗ್ರಹಣೆ ಗೆ ಬೇಕಾಗುವ ನೀರಿನ ಬಳಕೆ ಮುಂದಿನ ದಿನಗಳಲ್ಲಿ ಭೂಮಿ ಅದ್ಯಾಂಗ್ ಪೂರೈಸತದ ಅನ್ನುವದೆ ದೊಡ್ಡ ಚಿಂತೆ. ಹಿಂದ ಬರಗಾಲದಾಗ ಜನ ಅದೇನೊ ಗಡ್ಡೆ ಗೆಣಸು ತಿಂದು ಬದುಕ್ತಿದ್ರು ಅಂತ ಓದಿರತಿವಿ.ಈಗ ಮಳಿ ಇಲ್ದೆ ಇದ್ರೂ ಉಣ್ಣಲಿಕ್ಕ ಅಷ್ಟೊಂದು ತ್ರಾಸ ಆಗ್ಲಿಕ್ಕಿಲ್ಲ.ಯಾಕಂದ್ರ ಸರ್ಕಾರ ಕೂಡ ಆ ನಿಟ್ಟಿನಾಗ ಪ್ರಯತ್ನಿಸತದ.ಎನಿದ್ರೂ ನಿರಿಂದೆ ಚಿಂತೆ.ಈಗಾಗ್ಲೆ ನಮ್ಮ ಕಡಿ ನೀರಿನ ಪೂರೈಕೆಗಾಗಿ ನೀರಿನ ಟ್ತಾಂಕರ್ ವ್ಯವಸ್ಥೆ ಮಾಡ್ತಿದ್ದಾರ. ನೀರು ಶೇಖರಿಸಿ ಇಡೊದು ಒಂದು ಸಾಹಸ.ಅಂತ ಜನ ಕಡೆ ಜಗಳಗಳು ಸಾಮನ್ಯ.ಒಂದೊಂದು ಸಾರಿ ನೀರು ಹೊಡಪೆಟ್ಟಿಗೂ ಕಾರಣ ಆಗತದ.ಮನಿಯೋಳಗ ಶೋ ಕ್ಕಾಗಿ ಬೆಳೆಸಿದ ಗಿಡಗಳು ಒಣಗೋದು ನೋಡ್ಲಿಕ್ಕಾಗಲ್ಲ. ಈಗ ಎನಿದ್ರು ನೀರಿಗಾಗಿ ಪ್ರಾರ್ಥನೆ ಮಾಡಬೇಕು ಅಷ್ಟೆ ಮತ್ತು ಬಳಕೆ ಮಾಡುವ ಕಡೆ ನಿಗಾ ಇರಬೇಕು .ವ್ಯರ್ಥ ಬಳಸಲಾರದಂಗ ನಮಗ ನಾವೆ ಶಪಥ ಮಾಡೋಣ. ಈ ಲೇಖನ ಬರೆಯುತ್ತಿರುವಾಗ ಮಳೆ ಬರತಿತ್ತು.ಮಳೆಗಾಲ ಮುಗಿತಾ ಬಂದ್ರೂ ಮಳಿ ಕಾಣದೆ ಅದೇಷ್ಟೋ ತಿಂಗಳಾಗಿದ್ವು.ಈಗ ಬರತಿದ್ದ ಮಳಿಯೂ ಅದ್ಯಾವದೋ ಚಂಡ ಮಾರುತದ ಪರಿಣಾಮ ಅಂತೆ.ಹೊಲದಲ್ಲಿರುವ ತೊಗರಿ ಪೈರು ,ಕಬ್ಬು , ಜೋಳಕ್ಕ ಈಗ ಸುರಿಯುತ್ತಿರೊ ಮಳಿ ಸಂಜೀವಿನಿ ಆಗ್ಲಿ. ಜ್ಯೋತಿ ಡಿ ಬೊಮ್ಮಾ ಅವರು ಕಲಬುರ್ಗಿ ಜಿಲ್ಲೆಯವರು.ಇದುವರೆಗು ನಾಲ್ಕುಕವನ ಸಂ ಕಲನಗಳನ್ನು, ಎರಡು ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ.ಪ್ರಿತಿ ತಿಂಗಳ ಒಂದನೇತಾರೀಖು ಸಂಗಾತಿಪತ್ರಿಕೆಗಾಗಿ ಅವರ ದೇಸಿ ನುಡಿಗಟ್ಟಿನಲ್ಲಿ ಅಂಕಣಬರೆಯುತ್ತಿದ್ದಾರೆ. ಜ್ಯೋತಿ ,ಡಿ .ಬೊಮ್ಮಾ.

Read Post »

ಇತರೆ

ಸಂಗಮೇಶ ಎನ್. ಜವಾದಿ “ಕನ್ನಡ ಭಾಷೆಗೆ ದೈವತ್ವದ ಘನತೆ ತಂದುಕೊಟ್ಟ ಬಸವಾದಿ ಶರಣರು”

ಕಾವ್ಯ ಸಂಗಾತಿ ಸಂಗಮೇಶ ಎನ್. ಜವಾದಿ “ಕನ್ನಡ ಭಾಷೆಗೆ ದೈವತ್ವದ ಘನತೆ ತಂದುಕೊಟ್ಟ ಬಸವಾದಿ ಶರಣರು” ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ಕನ್ನಡಿಗರ ಬದುಕಿನ ಉಸಿರು, ಸಂಸ್ಕೃತಿಯ ಜೀವನಾಡಿ, ಜ್ಞಾನದ ಬೆಳಕು ಮತ್ತು ಸಾಮಾಜಿಕ ಪರಿವರ್ತನೆಯ ಶಕ್ತಿಯಾಗಿದೆ. ಕನ್ನಡ ಭಾಷೆಯ ಇತಿಹಾಸವನ್ನು ಅವಲೋಕಿಸಿದಾಗ, ಅದಕ್ಕೆ ಹೊಸ ಚೈತನ್ಯ, ಹೊಸ ಆಯಾಮ ಮತ್ತು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದ ವಿಶಿಷ್ಟ ಘನತೆಯನ್ನು ತಂದುಕೊಟ್ಟ ಮಹನೀಯರಲ್ಲಿ ಬಸವಣ್ಣನವರು ಹಾಗೂ ಬಸವಾದಿ ಶರಣರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಕನ್ನಡವನ್ನು ಅರಮನೆಗಳ, ಪಂಡಿತರ ಮತ್ತು ನಿರ್ದಿಷ್ಟ ವರ್ಗಗಳ ಭಾಷೆಯಾಗಿ ಉಳಿಸದೆ, ಸಾಮಾನ್ಯ ಜನರ ಅನುಭವ, ನೋವು, ನಲಿವು, ಬದುಕು ಮತ್ತು ಹೋರಾಟಗಳ ಅಭಿವ್ಯಕ್ತಿಯ ಭಾಷೆಯನ್ನಾಗಿ ರೂಪಿಸಿದ ಕೀರ್ತಿ ಶರಣ ಚಳವಳಿಗೆ ಸಲ್ಲುತ್ತದೆ. ಕನ್ನಡ ಭಾಷೆಗೆ ದೈವತ್ವದ ಘನತೆ ದೊರಕಿತು ಎನ್ನುವುದರ ನಿಜವಾದ ಅರ್ಥವೂ ಇದೇ ಆಗಿದೆ. ಹನ್ನೆರಡನೆಯ ಶತಮಾನದಲ್ಲಿ ಸಮಾಜವು ಜಾತಿ, ವರ್ಗ, ಲಿಂಗಭೇದ, ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳ ಸಂಕೋಲೆಗಳಲ್ಲಿ ಬಂಧಿತವಾಗಿತ್ತು. ಧಾರ್ಮಿಕ ಆಚರಣೆಗಳು ಮತ್ತು ಜ್ಞಾನಸಂಪತ್ತು ಕೆಲವೇ ವರ್ಗಗಳ ಹಿಡಿತದಲ್ಲಿದ್ದವು. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಸಾಮಾಜಿಕ ಸಮಾನತೆ, ಕಾಯಕದ ಘನತೆ, ದಾಸೋಹದ ಮಹತ್ವ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ತರ ಚಳವಳಿಗೆ ನಾಯಕತ್ವ ನೀಡಿದರು. ಈ ಚಳವಳಿಯ ಪ್ರಮುಖ ಶಕ್ತಿಯಾಗಿದ್ದುದು ಕನ್ನಡ ಭಾಷೆ. ಜನರಿಗೆ ಅರ್ಥವಾಗದ ಭಾಷೆಯಲ್ಲಿ ಧರ್ಮ ಮತ್ತು ತತ್ವಜ್ಞಾನವನ್ನು ಬೋಧಿಸುವ ಬದಲು, ಜನರ ನಿತ್ಯಜೀವನದ ಭಾಷೆಯಲ್ಲಿಯೇ ಆಳವಾದ ವಿಚಾರಗಳನ್ನು ಸರಳವಾಗಿ, ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲಾಯಿತು. ಬಸವಣ್ಣನವರು ಕನ್ನಡವನ್ನು ಕೇವಲ ಮಾತನಾಡುವ ಭಾಷೆಯಾಗಿ ನೋಡಲಿಲ್ಲ; ಅದನ್ನು ಮಾನವೀಯ ಚಿಂತನೆಗಳನ್ನು ಜನಮನಕ್ಕೆ ತಲುಪಿಸುವ ಶಕ್ತಿಯುತ ಮಾಧ್ಯಮವನ್ನಾಗಿ ಬಳಸಿದರು. ಅವರ ವಚನಗಳಲ್ಲಿ ಬದುಕಿನ ಸತ್ಯ, ಸಾಮಾಜಿಕ ನ್ಯಾಯ, ಸಮಾನತೆ, ಕಾಯಕನಿಷ್ಠೆ, ದಯೆ, ಪ್ರಾಮಾಣಿಕತೆ ಮತ್ತು ಆತ್ಮಶುದ್ಧಿಯ ಸಂದೇಶಗಳು ಅನುರಣಿಸುತ್ತವೆ. “ಕಾಯಕವೇ ಕೈಲಾಸ” ಎಂಬ ಮಹೋನ್ನತ ತತ್ವವು ದುಡಿಮೆಯೇ ಪೂಜೆ, ಪ್ರಾಮಾಣಿಕ ಪರಿಶ್ರಮವೇ ಶ್ರೇಷ್ಠ ಸಾಧನೆ ಎಂಬ ಮೌಲ್ಯವನ್ನು ಸಾರುತ್ತದೆ. ಈ ತತ್ವವು ಕನ್ನಡ ಭಾಷೆಯ ಮೂಲಕ ಜನಸಾಮಾನ್ಯರ ಹೃದಯವನ್ನು ತಲುಪಿ, ಬದುಕಿನ ದರ್ಶನವಾಗಿ ರೂಪುಗೊಂಡಿತು. ಬಸವಣ್ಣನವರ ಪ್ರಸಿದ್ಧ ವಚನವಾದ “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ” ಎಂಬ ಸಾಲುಗಳಲ್ಲಿ ಬಡವರ ಬದುಕಿನ ವಾಸ್ತವ ಮತ್ತು ಆಧ್ಯಾತ್ಮಿಕತೆಯ ಹೊಸ ವ್ಯಾಖ್ಯಾನ ಅಡಕವಾಗಿದೆ. ದೇವರನ್ನು ಕೇವಲ ದೇವಾಲಯಗಳಲ್ಲಿ ಹುಡುಕದೆ, ತನ್ನ ದೇಹವನ್ನೇ ದೇಗುಲವನ್ನಾಗಿ, ತನ್ನ ಮನಸ್ಸನ್ನೇ ಭಕ್ತಿಯ ನೆಲೆಯನ್ನಾಗಿ ಕಾಣುವ ದೃಷ್ಟಿಕೋನವನ್ನು ಅವರು ಮುಂದಿಟ್ಟರು. ಇಂತಹ ಗಹನವಾದ ತತ್ವವನ್ನು ಜನಸಾಮಾನ್ಯರ ಭಾಷೆಯಲ್ಲಿ ತಿಳಿಸುವ ಮೂಲಕ ಕನ್ನಡದ ಅಭಿವ್ಯಕ್ತಿ ಸಾಮರ್ಥ್ಯವನ್ನು ವಿಶಾಲಗೊಳಿಸಿದರು. ಬಸವಣ್ಣನವರೊಂದಿಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣ ಸೇರಿದಂತೆ ಅನೇಕ ಶರಣರು ವಚನ ಸಾಹಿತ್ಯದ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಪ್ರತಿಯೊಬ್ಬ ಶರಣರೂ ತಮ್ಮದೇ ಆದ ಅನುಭವ, ಚಿಂತನೆ ಮತ್ತು ಜೀವನದರ್ಶನವನ್ನು ವಚನಗಳ ಮೂಲಕ ವ್ಯಕ್ತಪಡಿಸಿದರು. ಅವರ ವಚನಗಳಲ್ಲಿ ಆಧ್ಯಾತ್ಮಿಕ ಅನುಭವದ ಜೊತೆಗೆ ಸಾಮಾಜಿಕ ಅನ್ಯಾಯದ ವಿರುದ್ಧದ ಧ್ವನಿ, ಮಹಿಳೆಯರ ಸ್ವಾತಂತ್ರ್ಯದ ಆಶಯ, ಶ್ರಮಜೀವಿಗಳ ಗೌರವ ಮತ್ತು ಮಾನವೀಯ ಸಂಬಂಧಗಳ ಮೌಲ್ಯಗಳು ಸ್ಪಷ್ಟವಾಗಿ ಕಾಣುತ್ತವೆ. ಅಲ್ಲಮಪ್ರಭುಗಳ ವಚನಗಳು ಆತ್ಮಜ್ಞಾನ ಮತ್ತು ಅಂತರಂಗದ ಅನುಭವಗಳ ಆಳವನ್ನು ತೆರೆದಿಟ್ಟರೆ, ಅಕ್ಕಮಹಾದೇವಿಯವರ ವಚನಗಳು ವೈಯಕ್ತಿಕ ಸ್ವಾತಂತ್ರ್ಯ, ಆತ್ಮಗೌರವ ಮತ್ತು ಆಧ್ಯಾತ್ಮಿಕ ಸ್ವತಂತ್ರ ಚಿಂತನೆಯ ಮಹತ್ವವನ್ನು ಸಾರುತ್ತವೆ. ಮಡಿವಾಳ ಮಾಚಿದೇವರು ತಮ್ಮ ಕಾಯಕನಿಷ್ಠೆಯ ಮೂಲಕ ಶರಣ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ, ಅಂಬಿಗರ ಚೌಡಯ್ಯನವರು ಸಮಾಜದ ಅಸಮಾನತೆ ಮತ್ತು ಕಪಟವನ್ನು ಪ್ರಶ್ನಿಸಿದರು. ಹೀಗೆ ವಿವಿಧ ವೃತ್ತಿ, ವರ್ಗ ಮತ್ತು ಹಿನ್ನೆಲೆಯ ಶರಣರು ಕನ್ನಡ ಭಾಷೆಯನ್ನು ತಮ್ಮ ಅನುಭವಗಳ ಅಭಿವ್ಯಕ್ತಿಯ ಸಾಧನವನ್ನಾಗಿ ಮಾಡಿಕೊಂಡರು. ಇದರಿಂದ ಕನ್ನಡವು ಜನಜೀವನದ ಎಲ್ಲ ಆಯಾಮಗಳನ್ನು ಒಳಗೊಳ್ಳುವ ವಿಶಾಲವಾದ ಭಾಷೆಯಾಗಿ ಬೆಳೆದಿತು. ಬಸವಣ್ಣನವರ ನೇತೃತ್ವದಲ್ಲಿ ರೂಪುಗೊಂಡ ಅನುಭವ ಮಂಟಪವು ಶರಣರ ವಿಚಾರ ವಿನಿಮಯಕ್ಕೆ ಮಹತ್ವದ ವೇದಿಕೆಯಾಯಿತು. ವಿವಿಧ ಸಾಮಾಜಿಕ ಹಿನ್ನೆಲೆಯ ಪುರುಷರು ಮತ್ತು ಮಹಿಳೆಯರು ತಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಈ ಪರಂಪರೆಯು ಸಮಾನತೆ ಮತ್ತು ವಿಚಾರಸ್ವಾತಂತ್ರ್ಯದ ಮಹತ್ವವನ್ನು ಸಾರಿತು. ಶರಣರ ವಚನಗಳು ಜನರ ಬದುಕಿನಿಂದಲೇ ಹುಟ್ಟಿಕೊಂಡಿದ್ದರಿಂದ ಅವುಗಳಲ್ಲಿ ಕೃತಕತೆಯಿರಲಿಲ್ಲ; ಅನುಭವದ ಸತ್ಯವಿತ್ತು. ಆ ಸತ್ಯವನ್ನು ಸರಳ ಕನ್ನಡದಲ್ಲಿ ಅಭಿವ್ಯಕ್ತಿಸಿದ ಕಾರಣ ವಚನಗಳು ಶತಮಾನಗಳ ನಂತರವೂ ಜನಮಾನಸದಲ್ಲಿ ಜೀವಂತವಾಗಿವೆ. ಕನ್ನಡಕ್ಕೆ ದೈವತ್ವದ ಘನತೆ ದೊರಕಿತು ಎನ್ನುವುದು ಕನ್ನಡವೇ ಇತರ ಭಾಷೆಗಳಿಗಿಂತ ಶ್ರೇಷ್ಠ ಎಂಬ ಅರ್ಥವಲ್ಲ. ಬದಲಾಗಿ, ಜನರ ಭಾಷೆಯಲ್ಲಿಯೇ ದೇವರು, ಧರ್ಮ, ತತ್ವಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ಅಭಿವ್ಯಕ್ತಿಸಬಹುದು ಎಂಬುದನ್ನು ಬಸವಾದಿ ಶರಣರು ತಮ್ಮ ಬದುಕು ಮತ್ತು ಸಾಹಿತ್ಯದ ಮೂಲಕ ಸಾಬೀತುಪಡಿಸಿದರು. ದೇವರನ್ನು ಅರಿಯಲು ಭಾಷೆಯ ಹೆಸರಿನಲ್ಲಿ ಯಾವುದೇ ಅಡೆತಡೆ ಇರಬಾರದು; ಜ್ಞಾನವು ಎಲ್ಲರಿಗೂ ಲಭ್ಯವಾಗಬೇಕು ಎಂಬ ಪ್ರಜಾಸತ್ತಾತ್ಮಕ ಆಶಯವನ್ನು ಅವರು ಪ್ರತಿಪಾದಿಸಿದರು. ಈ ದೃಷ್ಟಿಯಿಂದ ಶರಣರ ಕೊಡುಗೆ ಕನ್ನಡ ಭಾಷೆಯ ಇತಿಹಾಸದಲ್ಲಿ ಕ್ರಾಂತಿಕಾರಕವಾಗಿದೆ. ವಚನ ಸಾಹಿತ್ಯವು ಕನ್ನಡದ ಸಾಹಿತ್ಯಿಕ ಬೆಳವಣಿಗೆಗೆ ಮಾತ್ರವಲ್ಲದೆ, ಸಮಾಜದ ನೈತಿಕ ಮತ್ತು ಸಾಂಸ್ಕೃತಿಕ ಪ್ರಗತಿಗೂ ಅಪಾರ ಕೊಡುಗೆ ನೀಡಿದೆ. ಶರಣರು ಭಾಷೆಯನ್ನು ಜನರ ಸಮಸ್ಯೆಗಳನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವ ಸಾಧನವನ್ನಾಗಿ ಬಳಸಿದರು. ಅವರ ಸಾಹಿತ್ಯದಲ್ಲಿ ಜಾತಿಯ ಅಹಂಕಾರಕ್ಕೆ ಸ್ಥಾನವಿಲ್ಲ; ದುಡಿಮೆಯನ್ನು ಕೀಳಾಗಿ ಕಾಣುವ ಮನೋಭಾವಕ್ಕೆ ಅವಕಾಶವಿಲ್ಲ; ಮಹಿಳೆಯರನ್ನು ಕಡೆಗಣಿಸುವ ಸಂಕುಚಿತ ದೃಷ್ಟಿಕೋನಕ್ಕೆ ಮನ್ನಣೆಯಿಲ್ಲ. ಮಾನವೀಯತೆಯೇ ಧರ್ಮ, ದಯೆಯೇ ಅದರ ಮೂಲ ಮತ್ತು ಪ್ರಾಮಾಣಿಕ ಕಾಯಕವೇ ಬದುಕಿನ ಶ್ರೇಷ್ಠತೆ ಎಂಬ ಸಂದೇಶವೇ ಶರಣರ ಚಿಂತನೆಯ ಸಾರವಾಗಿದೆ. ಇಂದಿನ ಕಾಲಘಟ್ಟದಲ್ಲಿಯೂ ಬಸವಾದಿ ಶರಣರ ಭಾಷಾ ಪ್ರಜ್ಞೆ ನಮಗೆ ಅತ್ಯಂತ ಪ್ರಸ್ತುತವಾಗಿದೆ. ಜಾಗತೀಕರಣ, ತಂತ್ರಜ್ಞಾನ ಮತ್ತು ಆಂಗ್ಲ ಭಾಷೆಯ ಪ್ರಭಾವದ ನಡುವೆ ಕನ್ನಡದ ಅಸ್ತಿತ್ವವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡವನ್ನು ಕೇವಲ ಹಬ್ಬ, ಉತ್ಸವ ಮತ್ತು ಘೋಷಣೆಗಳಿಗೆ ಸೀಮಿತಗೊಳಿಸದೆ, ಶಿಕ್ಷಣ, ಆಡಳಿತ, ವಿಜ್ಞಾನ, ತಂತ್ರಜ್ಞಾನ, ಉದ್ಯೋಗ ಮತ್ತು ದೈನಂದಿನ ವ್ಯವಹಾರಗಳಲ್ಲಿ ಸಮರ್ಥವಾಗಿ ಬಳಸಬೇಕು. ವಚನ ಸಾಹಿತ್ಯವನ್ನು ಯುವಜನತೆಗೆ ಪರಿಚಯಿಸಬೇಕು. ಶಾಲಾ-ಕಾಲೇಜುಗಳಲ್ಲಿ ಶರಣರ ಜೀವನ, ವಿಚಾರ ಮತ್ತು ಸಾಹಿತ್ಯದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡದಲ್ಲಿ ಹೊಸ ಜ್ಞಾನಸಂಪತ್ತನ್ನು ಸೃಷ್ಟಿಸುವ ಮೂಲಕ ಭಾಷೆಯನ್ನು ಆಧುನಿಕ ಕಾಲಕ್ಕೆ ಹೊಂದಿಕೊಳ್ಳುವಂತೆ ಬೆಳೆಸಬೇಕು. ಬಸವಣ್ಣನವರು ಮತ್ತು ಬಸವಾದಿ ಶರಣರು ಕನ್ನಡಕ್ಕೆ ನೀಡಿದ ಕೊಡುಗೆ ಕೇವಲ ಸಾಹಿತ್ಯ ರಚನೆಗೆ ಸೀಮಿತವಾಗಿಲ್ಲ. ಅವರು ಕನ್ನಡವನ್ನು ಜನರ ಬದುಕಿನ ಭಾಷೆಯನ್ನಾಗಿ, ಸಮಾನತೆಯ ಸಂದೇಶದ ವಾಹಕವನ್ನಾಗಿ ಮತ್ತು ಮಾನವೀಯ ಮೌಲ್ಯಗಳ ಅಭಿವ್ಯಕ್ತಿಯ ಸಾಧನವನ್ನಾಗಿ ರೂಪಿಸಿದರು. ಅವರ ವಚನಗಳು ಭಾಷೆಯ ಮೂಲಕ ಸಮಾಜವನ್ನು ಬದಲಾಯಿಸಬಹುದು ಎಂಬುದಕ್ಕೆ ಶಾಶ್ವತ ಸಾಕ್ಷಿಗಳಾಗಿವೆ. ಆದ್ದರಿಂದ ಕನ್ನಡ ಭಾಷೆಗೆ ದೈವತ್ವದ ಘನತೆ ತಂದುಕೊಟ್ಟ ಮಹಾನ್ ಚೇತನಗಳೆಂದು ಬಸವಣ್ಣನವರು ಹಾಗೂ ಬಸವಾದಿ ಶರಣರನ್ನು ಗೌರವಿಸುವುದು ಅರ್ಥಪೂರ್ಣವಾಗಿದೆ. ಕನ್ನಡವನ್ನು ಪ್ರೀತಿಸುವುದು ಎಂದರೆ ಅದರ ಅಕ್ಷರಗಳನ್ನು ಮಾತ್ರ ಪ್ರೀತಿಸುವುದಲ್ಲ; ಅದರೊಳಗಿನ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ದಯೆಯ ತತ್ವಗಳನ್ನು ಜೀವನದಲ್ಲಿ ಪಾಲಿಸುವುದೇ ಶರಣರಿಗೆ ಸಲ್ಲಿಸುವ ನಿಜವಾದ ಗೌರವ. ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಮತ್ತು ಜಗತ್ತಿನ ಜ್ಞಾನಭಾಷೆಗಳ ಸಾಲಿನಲ್ಲಿ ಮತ್ತಷ್ಟು ಎತ್ತರಕ್ಕೆ ಏರಬೇಕು. ಅದಕ್ಕಾಗಿ ಪ್ರತಿಯೊಬ್ಬ ಕನ್ನಡಿಗನೂ ಶರಣರ ವಿಚಾರಧಾರೆಯನ್ನು ಅರಿತು, ಕನ್ನಡದ ಅಸ್ಮಿತೆಯನ್ನು ಕಾಪಾಡುವ ಸಂಕಲ್ಪ ಮಾಡಬೇಕು. ಬಸವಣ್ಣನವರ ವಚನಗಳ ಬೆಳಕು ಕನ್ನಡದ ಮೂಲಕ ಮಾನವೀಯತೆಯನ್ನು ಬೆಳಗಿಸುತ್ತಲೇ ಇರಲಿ ಎಂಬುದೇ ನಮ್ಮೆಲ್ಲರ ಆಶಯವಾಗಬೇಕು. ಸಂಗಮೇಶ ಎನ್. ಜವಾದಿ.

ಸಂಗಮೇಶ ಎನ್. ಜವಾದಿ “ಕನ್ನಡ ಭಾಷೆಗೆ ದೈವತ್ವದ ಘನತೆ ತಂದುಕೊಟ್ಟ ಬಸವಾದಿ ಶರಣರು” Read Post »

ಇತರೆ

ಕಮಲಾಕ್ಷಿ ಸಿ ಆರ್ “ಕನ್ನಡ ನಿತ್ಯೋತ್ಸವವಾಗುವುದೆಂದು?”

ಕನ್ನಡ ಸಂಗಾತಿ ಕಮಲಾಕ್ಷಿ ಸಿ ಆರ್ “ಕನ್ನಡ ನಿತ್ಯೋತ್ಸವವಾಗುವುದೆಂದು?” ಕನ್ನಡ ನಿತ್ಯೋತ್ಸವವಾಗುವುದೆಂದು?‘ಜೈನರ ಕಾವ್ಯದ ಶರಣರ ವಚನದದಾಸರ ಹಾಡಿನದೀ ನಾಡು…’ ಈ ಸಾಲಿನಲ್ಲಿ ವರಕವಿ ದ.ರಾ. ಬೇಂದ್ರೆಯವರು ಕರುನಾಡು ಹಲವು ಬಗೆಯ ಸಾಹಿತ್ಯ ಪ್ರಕಾರಗಳ ಹಾಡಿನಂತೆ ಇದೆ ಎಂದಿದ್ದಾರೆ. ಕರ್ನಾಟಕದ ಭಾಷೆ ಕನ್ನಡ. ೧೯೫೬ರ ನವೆಂಬರ್ ೧ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿದ್ದರ ಐತಿಹಾಸಿಕ ದಿನದ ಪ್ರತೀಕವಾಗಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತ ಬಂದಿದ್ದೇವೆ. ಕನ್ನಡ ಎಂಬುದು ಭಾಷೆ ಮಾತ್ರವಲ್ಲ; ಪುರಾಣದಿಂದ ಇತಿಹಾಸದವರೆಗೆ, ಸಂಸ್ಕೃತಿಯಿಂದ ಸಾಹಿತ್ಯದವರೆಗೆ, ಜನಪದದಿಂದ ರಾಜವಂಶಗಳವರೆಗೆ, ಕ್ರೀಡಾಪಟುಗಳಿಂದ ವಿಜ್ಞಾನಿಗಳವರೆಗೆ ಅನನ್ಯ ಪರಂಪರೆಯನ್ನು ಹೊಂದಿರುವ ಶಾಸ್ತ್ರೀಯ ಭಾಷೆ. ಕನ್ನಡ ಭಾಷೆ ಸರಳ, ಸುಂದರ ಹಾಗೂ ಶ್ರೀಮಂತ ಎನ್ನುವುದು ಕನ್ನಡಿಗರ ಹೆಮ್ಮೆ. ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಹಾಗೂ ಕನ್ನಡದ ಇಬ್ಬರು ಮೇರು ನಟರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡದ ಗರಿಮೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷಾ ಪ್ರೇಮವನ್ನು ಜಗತ್ತಿಗೆ ಸಾರಿದರೆ ಸಾಲದು. ಕನ್ನಡ ಭಾಷೆಯ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಭಾಷಾ ಪ್ರೇಮವನ್ನು ಚಿಗುರಿಸಿ ಹೆಮ್ಮರವಾಗಿಸುವ ಜವಾಬ್ದಾರಿ ಕನ್ನಡ ಭಾಷೆ ನುಡಿಯುವವರ, ಸಾಹಿತಿಗಳ, ಶಿಕ್ಷಣ ಸಂಸ್ಥೆಗಳ, ಸರ್ಕಾರದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಆದ್ಯ ಕರ್ತವ್ಯವಾಗಿದೆ. ಕನ್ನಡ ಭಾಷಾ ಜನರೊಡನೆ ಬಹುಭಾಷಾ ಜನರ ನೆಚ್ಚಿನ ತಾಣ ನಮ್ಮ ಕರ್ನಾಟಕ. ಇದಕ್ಕೆ ಕನ್ನಡಿಗರ ಔದಾರ್ಯವೇ ಕಾರಣ. ಪರಭಾಷಾ ದಾಳಿಯಿಂದಾಗಿ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಮಹಾತ್ಮ ಗಾಂಧಿಯವರು ‘ಪರರ ಸಂಸ್ಕೃತಿಯನ್ನು ಪ್ರೀತಿಸು, ಆದರೆ ನಿನ್ನ ಸಂಸ್ಕೃತಿಯಲ್ಲಿ ಜೀವಿಸು’ ಎಂದಿದ್ದರು. ಸಂಸ್ಕೃತಿ ಎನ್ನುವುದು ನಮ್ಮ ಭಾಷೆ, ಭಾವನೆ ಹಾಗೂ ಅಸ್ತಿತ್ವ. ಒಂದು ರೀತಿಯಲ್ಲಿ ಅದೇ ನಮ್ಮ ಬೇರು. ಬೇರು ಸದೃಢವಾಗಿದ್ದರಷ್ಟೇ ಮರಕ್ಕೆ ಭದ್ರತೆ. ಕನ್ನಡ ಭಾಷೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಕನ್ನಡ ಭಾಷೆ ನೆಪಮಾತ್ರಕ್ಕೆ ನಾಡ ಭಾಷೆಯಾಗದೆ, ಶಿಕ್ಷಣ, ಆಡಳಿತ ಹಾಗೂ ನಾಡಿನ ಅಧಿಕೃತ ಭಾಷೆಯಾಗಿ ಅಕ್ಷರಶಃ ಚಲಾವಣೆಯಲ್ಲಿ ಇರಬೇಕು. ಕನ್ನಡ ಭಾಷೆಯನ್ನು ಬಳಸುವಂತಾದರೆ ಮಾತ್ರ ಅದು ಉಳಿಯುವುದು ಹಾಗೂ ಬೆಳೆಯುವುದು. _ಪರಿಹಾರದ ಹಾದಿ:_ ಕನ್ನಡ ಉಳಿಸುವ ಹಾಗೂ ಜನಮನದ ಭಾಷೆಯಾಗುವಂತೆ ಮಾಡುವ ಕಾರ್ಯದಲ್ಲಿ ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಕಾರ್ಯೋನ್ಮುಖವಾಗಬೇಕು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವಂತೆ, ಬಾಲ್ಯದಿಂದ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ, ಅದರ ಸೌಂದರ್ಯವನ್ನು ಪರಿಚಯಿಸುವ ಹಾಗೂ ಕನ್ನಡ ಭಾಷೆಯ ಹಿರಿಮೆ ಸಾರುವ ಕಾರ್ಯಕ್ರಮಗಳ ಮೂಲಕ ಕ್ರಮ ಕೈಗೊಳ್ಳಬೇಕು. ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯ ಮಾಡಬೇಕು. ಆಂಗ್ಲ ಭಾಷೆಯ ಕಲಿಕೆ ಕನ್ನಡ ಭಾಷೆಯ ಕಲಿಕೆಯ ನಂತರವಾದರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವಿನ ಅಂತರ ಕಡಿಮೆಯಾಗುತ್ತದೆ. ನುಡಿದಂತೆ ಬರೆಯುವ, ಬರೆದಂತೆ ನುಡಿಯುವ ಸುಂದರ ಭಾಷೆ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರೆ ಕನ್ನಡ ಸುಲಲಿತವಾಗುತ್ತದೆ. ಆಸಕ್ತಿ ಮೊಳೆಯದೆ ಕಲಿಕೆ ಕ್ಲಿಷ್ಟ. ಕನ್ನಡ ಭಾಷೆಯ ಸಾಹಿತ್ಯ ಪರಂಪರೆಯನ್ನು, ಸಾಧಕರನ್ನು ಪರಿಚಯಿಸುವ ಕಾರ್ಯ ಮೊದಲಾಗಬೇಕು. ನವೆಂಬರ್ ತಿಂಗಳಿನಲ್ಲಿ ದೊಡ್ಡ ವೇದಿಕೆ ನಿರ್ಮಿಸಿ ಹಿರಿಯರನ್ನಷ್ಟೇ ಸೇರಿಸಿ ಕಾರ್ಯಕ್ರಮ ಮಾಡುವುದಕ್ಕಿಂತ, ಸಾಹಿತ್ಯ ಪರಿಷತ್ತು ಸರ್ಕಾರದ ಸಹಯೋಗದೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರ ನಾಡು-ನುಡಿಯ ಕುರಿತು ಕಾರ್ಯಗಳನ್ನು ಆಯೋಜಿಸಬೇಕು. ಇದರಿಂದ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಲು ಸಾಧ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮಾತನಾಡುವುದು ಕೀಳರಿಮೆ ಎಂಬ ಭಾವ ಮೂಡಿಸುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರಿಂದ ಮಕ್ಕಳಿಗೆ ಭದ್ರತಾ ಭಾವ ಮೂಡಿ, ಅವರು ಹೆಮ್ಮೆಯಿಂದ ಕನ್ನಡ ಮಾತನಾಡುವಂತೆ ಮಾಡಲು ಸಾಧ್ಯವಾಗುತ್ತದೆ. ಕನ್ನಡ ಶಾಲೆಗಳನ್ನು ಪರಿಷತ್ತು ದತ್ತು ಸ್ವೀಕರಿಸಿ, ಮಾದರಿ ಶಾಲೆಯನ್ನಾಗಿ ಪರಿವರ್ತಿಸುವುದರಿಂದ ಶಾಲೆಯನ್ನು ಬಲಪಡಿಸಬಹುದು. ಕನ್ನಡ ನಾಡು-ನುಡಿಯ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಮಕ್ಕಳಿಗೆ ತರಬೇತಿ ನೀಡಿ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದರಿಂದ ಕನ್ನಡ ಶಾಲೆಗಳು ಬಲಗೊಳ್ಳುತ್ತವೆ. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದರೆ ಕನ್ನಡ ಉಳಿಯುತ್ತದೆ. ಶಿಕ್ಷಣ ಕೇಂದ್ರಗಳಿಂದ ಹೊರಬಂದು ನೋಡಿದರೆ ಕನ್ನಡ ಬಳಕೆಗೆ ಹಿನ್ನಡೆಯಾಗುತ್ತಿರುವುದು ಔದ್ಯೋಗಿಕ ಕ್ಷೇತ್ರದಿಂದ. ಔದ್ಯೋಗಿಕ ಬೆಳವಣಿಗೆಗಳಿಂದ ನಗರಗಳು ಜಾಗತಿಕ ಗ್ರಾಮಗಳಂತಾಗಿವೆ. ಇದರ ಪರಿಣಾಮವಾಗಿ ಕನ್ನಡೇತರರ ಪ್ರಾಬಲ್ಯ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಪರಭಾಷಾ ನೌಕರರ ಪ್ರಾಬಲ್ಯ ಹೆಚ್ಚುತ್ತಿದ್ದು ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಅದೆಷ್ಟೋ ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ಮಾತೃಭಾಷೆ ಎಂಬ ಕಾರಣಕ್ಕೆ ಕನ್ನಡಿಗರನ್ನು ಸಂದರ್ಶನಕ್ಕೂ ಆಹ್ವಾನಿಸದಿರುವುದು ಖೇದಕರ. ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಉಗ್ರ ಕ್ರಮ ಜರುಗಿಸಿ, ಕನ್ನಡಿಗರಿಗೆ ಹೆಚ್ಚು ಉದ್ಯೋಗ ಅವಕಾಶ ಸಿಗುವಂತಾಗಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಔದ್ಯೋಗಿಕವಾಗಿ ಮೀಸಲು ವ್ಯವಸ್ಥೆ ಕಲ್ಪಿಸಿದರೆ, ಕನ್ನಡ ಭಾಷಿಕರಿಗೆ ಭದ್ರತೆ ದೊರಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪರಿಷತ್ತು ಪ್ರಯತ್ನಿಸಿದರೆ ಕನ್ನಡ ಉಳಿಸಲು ಸಾಧ್ಯವಾಗುತ್ತದೆ. ಕನ್ನಡಿಗರಿಗೆ ಕನ್ನಡವೇ ಸಾರ್ವಭೌಮ. ಕನ್ನಡದಲ್ಲಿಯೇ ನಮ್ಮ ಭಾವನೆಗಳು ಜಾಗೃತವಾಗುತ್ತವೆ. ನವೆಂಬರ್ ತಿಂಗಳು ಮಾತ್ರ ಕನ್ನಡ ಭಾಷೆಯ ಕುರಿತು ಕಾರ್ಯಕ್ರಮ ನಡೆದರೆ ಸಾಲದು, ನಮ್ಮ ಭಾಷೆಯ ಶ್ರೀಮಂತಿಕೆಯನ್ನು ಪರಿಚಯಿಸುವ ಸಾಹಿತ್ಯ ಭಂಡಾರವನ್ನು ನಾಡಿನಾದ್ಯಂತ ಪರಿಚಯಿಸುವಂತಾದರೆ ಕನ್ನಡ ಬಳಕೆಯಲ್ಲಿ ಉಳಿಯುವುದು. ಬಳಕೆಯಲ್ಲಿರುವ ನಾಣ್ಯ ಚಲಾವಣೆಯಲ್ಲಿ ಇರುವಂತೆ, ಬಳಸುವ ಭಾಷೆ ಕೂಡ ಚಲಾವಣೆಯಲ್ಲಿ ಇರುವುದು. ಇದರಿಂದ ಕನ್ನಡ ಉಳಿಯುವುದು, ಬೆಳೆಯುವುದು. ಇದಕ್ಕೆ ಸರ್ಕಾರ ಹಾಗೂ ಪರಿಷತ್ತು ಜೊತೆ ಜೊತೆಯಾಗಿ ಇರಲೆಂಬುದೇ ನನ್ನ ಆಶಯ. ಕನ್ನಡ ನಮ್ಮ ಬಾಯಿಯ ಭಾಷೆಯಷ್ಟೇ ಅಲ್ಲ, ಬದುಕಿನ ಭಾಷೆಯಾಗಬೇಕು. ಹಲವು ರಾಜ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಿದ್ದು ನಿರಂತರ ಹೋರಾಟದಿಂದ. ಸುಲಭವಾಗಿ ದಕ್ಕಿದ್ದನ್ನು ಉಳಿಸಿಕೊಳ್ಳಲು ಯಾರೂ ಪ್ರಯಾಸ ಪಡುವುದಿಲ್ಲ. ಕನ್ನಡ ಏಕೀಕರಣ ಹಾಗೆಯೇ ಕೈಗೆ ಬಂದ ತುತ್ತಲ್ಲ ಎಂಬುದನ್ನು ಕನ್ನಡಿಗರಿಗೆ ಮನವರಿಕೆ ಮಾಡುವ ಯತ್ನ ಮೊದಲಾಗಬೇಕು. ಕನ್ನಡದ ಮೇರು ಗ್ರಂಥಗಳನ್ನು ಓದಿಸುವ, ಆ ಮೂಲಕ ಕನ್ನಡದ ಪಾಂಡಿತ್ಯವನ್ನು, ಪ್ರೌಢಿಮೆಯನ್ನು ತಿಳಿಸಲು ಅನುಕೂಲವಾಗುತ್ತದೆ. ಅದಕ್ಕಾಗಿ ಅಲ್ಲಲ್ಲಿ ಗ್ರಂಥಾಲಯಗಳನ್ನು ತೆರೆದು, ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು, ಅಂತೆಯೇ ಕನ್ನಡ ಭಾಷೆ ಪಾರಂಪರಿಕ ಶಾಸ್ತ್ರೀಯ ಭಾಷೆಯಾಗಿ ಹೊರಹೊಮ್ಮಿದ ಇತಿಹಾಸವನ್ನು ಮರೆಯಬಾರದು. ಶ್ರೀಮಂತ ಕನ್ನಡ ಭಾಷೆಯನ್ನು ಇತರ ಭಾಷಿಗರಿಗೂ ಸ್ನೇಹಪೂರ್ವಕವಾಗಿ ಕಲಿಸಿದಲ್ಲಿ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯು ಇಲ್ಲಿ ಬಂದು ನೆಲೆಸುವ ಜನಮನದ ಭಾಷೆಯಾಗಲು ಸಾಧ್ಯವಿದೆ. ಒಂದು ಕೈಯಲ್ಲಿ ಚಪ್ಪಾಳೆ ತಟ್ಟಲಾಗದು. ಕನ್ನಡಿಗರೆಲ್ಲರ ಸಹಕಾರ ಅಗತ್ಯ. ಕನ್ನಡ ಭಾಷೆಯ ನಿರಂತರತೆಗೆ ಕನ್ನಡಿಗರು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ರಾಜ್ಯೋತ್ಸವವು ಒಂದು ದಿನದ ಆಚರಣೆಯಾಗದೆ, ನಿತ್ಯೋತ್ಸವವಾಗುತ್ತದೆ. ಕಮಲಾಕ್ಷಿ ಸಿ ಆರ್

ಕಮಲಾಕ್ಷಿ ಸಿ ಆರ್ “ಕನ್ನಡ ನಿತ್ಯೋತ್ಸವವಾಗುವುದೆಂದು?” Read Post »

ಇತರೆ

ರುದ್ರಮ್ಮ ಸಂ ಗಿಡ್ಡಪ್ಪಗೋಳ ಕೊಲ್ಹಾರ “ಕನ್ನಡ ಉಳಿಸಲು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಏನು ಮಾಡಬೇಕು?”

ಕನ್ನಡ ಸಂಗಾತಿ ರುದ್ರಮ್ಮ ಸಂ ಗಿಡ್ಡಪ್ಪಗೋಳ ಕೊಲ್ಹಾರ “ಕನ್ನಡ ಉಳಿಸಲು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಏನು ಮಾಡಬೇಕು?”  ಕನ್ನಡ ಉಳಿಸಲು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಏನು ಮಾಡಬೇಕು? ಕನ್ನಡ ಪ್ರೇಮ ಮತ್ತು ಅನನ್ಯ ದೇಶಭಕ್ತಿಗೆ ಹೆಸರಾಗಿರುವ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ  ಗೋವಿಂದ ಪೈ ಅವರು, ತನು ಕನ್ನಡ ಮನ ಕನ್ನಡ ನುಡಿ ಕನ್ನಡ ಎಂದು ಸಾರುವ ಮೂಲಕ ಕನ್ನಡಿಗರು ತಮ್ಮ ಇಡೀ ಅಸ್ತಿತ್ವದಲ್ಲೇ  ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿರುವುದನ್ನು ಸ್ಮರಿಸುತ್ತಾ… *ತಾಯೆ ಬಾರ* *ಮೊಗವ ತೋರ* *ಕನ್ನಡಿಗರ ಮಾತೆ* ” ಎಂಬ  ಮಂಜೇಶ್ವರ ಗೋವಿಂದ ಪೈ  ಕವಿತೆಯಂತೆ, ಕರ್ನಾಟಕದ ಇತಿಹಾಸದಲ್ಲಿ ಎಂದಿಗಿಂತಲೂ ಇಂದು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಗಂಭೀರ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಾಗತೀಕರಣ, ಆರ್ಥಿಕ ಬದಲಾವಣೆಗಳು, ಬಹುಭಾಷಾ ಸಂಸ್ಕೃತಿಯ ಅಲೆ ಹಾಗೂ ಅನ್ಯ ಭಾಷೆಗಳ ಅತಿಯಾದ ಪ್ರಭಾವದಿಂದಾಗಿ ಕನ್ನಡವು ತನ್ನದೇ ನೆಲದಲ್ಲಿ ಕಡೆಗಣಿಸಲ್ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಮಾತನಾಡುವ ಭಾಷೆಯಾಗಿ ಮಾತ್ರವಲ್ಲದೆ, ಆಡಳಿತ, ಶಿಕ್ಷಣ, ಉದ್ಯೋಗ ಮತ್ತು ತಂತ್ರಜ್ಞಾನದ ಭಾಷೆಯಾಗಿ ಕನ್ನಡವನ್ನು ಗಟ್ಟಿಗೊಳಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕೇವಲ ಉತ್ಸವಗಳಿಗೆ ಸೀಮಿತವಾಗದೆ, ವ್ಯವಸ್ಥಿತ, ದೀರ್ಘಕಾಲೀನ ಹಾಗೂ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವುದು ಅನಿವಾರ್ಯವಾಗಿದೆ. *. ಸರ್ಕಾರದ ಜವಾಬ್ದಾರಿಗಳು*…. ಕಾನೂನು ಮತ್ತು ಆಡಳಿತಾತ್ಮಕ ದೃಢತೆಸರ್ಕಾರವು ಇಚ್ಛಾಶಕ್ತಿಯನ್ನು ಪ್ರದರ್ಶಿಸಿದಾಗ ಮಾತ್ರ ಭಾಷೆಯೊಂದರ ಉಳಿವಿಗೆ ಬಲವಾದ ಭದ್ರತೆ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರವು ಮಾಡಬೇಕಾದ ಪ್ರಮುಖ ಕೆಲಸಗಳೆಂದರೆ…. ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯ ಕನ್ನಡ ನೀತಿ ಜಾರಿಯಾಗಬೇಕು  *”ಮಕ್ಕಳ ಮನಸ್ಸು ಹಸಿಮಣ್ಣಿನ ಮುದ್ದೆ ಇದ್ದಂತೆ,  ಅಲ್ಲಿ ಮೂಡುವ ಮೊದಲ ಅಕ್ಷರ ತಾಯ್ನುಡಿಯದ್ದಾಗಿರಬೇಕು.”*  ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಶಿಕ್ಷಣ ಮಂಡಳಿಗಳ (CBSE, ICSE, IB ಸೇರಿದಂತೆ) ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಕನ್ನಡವನ್ನು ಒಂದು ಕಡ್ಡಾಯ ವಿಷಯವನ್ನಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.  ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ಅಥವಾ ಕನ್ನಡವನ್ನು ಕಡೆಗಣಿಸುವ ಶಿಕ್ಷಣ ಸಂಸ್ಥೆಗಳಿಗೆ ತೀವ್ರ ಸ್ವರೂಪದ ದಂಡನೆ ಹಾಗೂ ಮಾನ್ಯತೆ ರದ್ದುಪಡಿಸುವ ಕಾನೂನು ರೂಪಿಸಬೇಕು. ಆಡಳಿತ ಮತ್ತು ನ್ಯಾಯಾಂಗದಲ್ಲಿ ಕನ್ನಡದ ವ್ಯಾಪ್ತಿ ವಿಸ್ತರಣೆಯಾಗಬೇಕು. ಆಡಳಿತದ ಉಚ್ಚ ಮಟ್ಟದಿಂದ ಗ್ರಾಮ ಪಂಚಾಯತ್ ಮಟ್ಟದವರೆಗೆ ಸಂಪೂರ್ಣ ಆಡಳಿತ ವ್ಯವಸ್ಥೆ ಕನ್ನಡದಲ್ಲೇ ನಡೆಯಬೇಕು. ‘ಆಡಳಿತ ಕನ್ನಡ’ ಕೇವಲ ಕಾಗದದ ಮೇಲಿನ ಘೋಷಣೆಯಾಗದೆ, ಕಾಟಾಚಾರಕ್ಕಾಗದೆ ,ಆಚರಣೆಗೆ ಬರುವಂತೆ ಕಟ್ಟುನಿಟ್ಟಿನ ದಂಡನಾತ್ಮಕ ಕ್ರಮಗಳನ್ನು ಜಾರಿಗೊಳಿಸಬೇಕು.  ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದ-ಪ್ರತಿವಾದ ಹಾಗೂ ತೀರ್ಪುಗಳು ಬರುವಂತಾಗಲು ಬೇಕಾದ ಮೂಲಭೂತ ಸೌಕರ್ಯ ಮತ್ತು ಅನುವಾದಕ ವ್ಯವಸ್ಥೆಯನ್ನು ಸರ್ಕಾರವೇ ಒದಗಿಸಬೇಕು. ಉದ್ಯೋಗ ರಂಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿರುವ ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಮರ್ಪಕ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ  *( ‌ ಡಾ. ಸರೋಜಿನಿ ಮಹಿಷಿ ವರದಿಯು ಕರ್ನಾಟಕದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತಾಗಿ 1983ರಲ್ಲಿ ರಚನೆಯಾಗಿ 1984ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾದ ಒಂದು ಪ್ರಮುಖ ವರದಿಯಾಗಿದೆ)* ಯನ್ನು ಅದರ ಸಂಪೂರ್ಣ ಸ್ವರೂಪದಲ್ಲಿ ಜಾರಿಗೆ ತರಬೇಕು. ಬ್ಯಾಂಕಿಂಗ್, ರೈಲ್ವೆ, ಅಂಚೆ ಸೇರಿದಂತೆ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಸ್ಥಳೀಯ ಭಾಷೆಯಾದ ಕನ್ನಡ ಬಲ್ಲವರಿಗೆ ಮಾತ್ರ ಉದ್ಯೋಗಾವಕಾಶ ಸಿಗುವಂತೆ ಕೇಂದ್ರದೊಂದಿಗೆ ನಿರಂತರವಾಗಿ ವ್ಯವಹರಿಸಿ ಒತ್ತಡ ಹೇರಬೇಕು. . *ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ*   ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಚುನಾವಣೆಗಳ ಅಖಾಡ ಆಗಿ  ಉಳಿಯಬಾರದು. ಬದಲಿಗೆ ಅದು ರಾಜ್ಯದ ಮೂಲೆಮೂಲೆಗೂ ತಲುಪುವ ಸಾಂಸ್ಕೃತಿಕ ಸೇನಾಪಡೆಯಾಗಬೇಕು.ಹಳ್ಳಿ ಹಳ್ಳಿಗಳಲ್ಲಿ ಪುಸ್ತಕ ಸಂಸ್ಕೃತಿ ಮತ್ತು ಓದುವ ಅಭಿಯಾನ ಆಗಬೇಕು.  *”ಪುಸ್ತಕಗಳು ಮನುಷ್ಯನ ಅತ್ಯಂತ ನಂಬಿಕಸ್ಥ ಸ್ನೇಹಿತರು, ಭಾಷೆಯನ್ನು ಉಳಿಸುವ ಜೀವಸೆಲೆಗಳು.”*  ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸಜ್ಜಿತ ಕನ್ನಡ ಗ್ರಂಥಾಲಯಗಳನ್ನು ಸ್ಥಾಪಿಸಿ, ಯುವಕರು ಮತ್ತು ಮಕ್ಕಳನ್ನು ಓದುವ ಕಡೆಗೆ ಆಕರ್ಷಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.  ವರ್ಷಕ್ಕೊಮ್ಮೆ ನಡೆಯುವ ಸಾಹಿತ್ಯ ಸಮ್ಮೇಳನಗಳ ಖರ್ಚನ್ನು ಕಡಿಮೆ ಮಾಡಿ, ಆ ಹಣವನ್ನು ಹಳ್ಳಿಗಳಲ್ಲಿ ಸಾಹಿತ್ಯ ಪ್ರಸಾರ, ಬಡ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳ ವಿತರಣೆ ಮತ್ತು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸಬೇಕು. ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಲೋಕದಲ್ಲಿ ಕನ್ನಡ ಹೆಚ್ಚು ಹೆಚ್ಚು ಬಳಕೆಯಾಗುವಂತೆ ಮಾಡಬೇಕು. ಕೃತಕ ಬುದ್ಧಿಮತ್ತೆ (AI), ಯಂತ್ರ ಅನುವಾದ (Machine Translation) ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಅಗಾಧವಾಗಿ ಬೆಳೆಯುವಂತೆ ತಂತ್ರಜ್ಞರ ಸಹಯೋಗದೊಂದಿಗೆ ವಿನೂತನ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಬೇಕು.  ವಿಕಿಪೀಡಿಯಾ, ಬ್ಲಾಗ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಗುಣಮಟ್ಟದ ಲೇಖನಗಳು ಹಾಗೂ ಡಿಜಿಟಲ್ ಕಂಟೆಂಟ್ ರಚಿಸಲು ಯುವ ಬರಹಗಾರರಿಗೆ ಆರ್ಥಿಕ ಪ್ರೋತ್ಸಾಹ ಮತ್ತು ತರಬೇತಿ ನೀಡಬೇಕು.ಹೊಸ ತಲೆಮಾರಿಗೆ ಕನ್ನಡದ ಮೇರುಕೃತಿಗಳ ಪರಿಚಯ ಮಾಡಿಸಬೇಕು.  ಪಂಪ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಕಾರಂತ ಮುಂತಾದವರ ಮೇರುಕೃತಿಗಳನ್ನು ಇಂದಿನ ಯುವಜನತೆಗೆ ಅರ್ಥವಾಗುವಂತೆ  ಸರಳ ರೂಪದಲ್ಲಿ  ರೂಪಿಸಿ ಸಾಮಾಜಿಕ ಜಾಲತಾಣಗಳ ಮೂಲಕ ತಲುಪಿಸಬೇಕು. . ಸರ್ಕಾರದ ಜೊತೆ ಕಸಾಪದ ಸಮನ್ವಯ ಮತ್ತು ಜಂಟಿ ಯೋಜನೆಗಳು ಕೂಡ ಚೆನ್ನಾಗಿರಬೇಕು.ಕನ್ನಡದ ಉಳಿವಿಗಾಗಿ ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಪ್ರತ್ಯೇಕವಾಗಿ ಕೆಲಸ ಮಾಡುವುದಕ್ಕಿಂತ ಎರಡೂ ಸಂಸ್ಥೆಗಳು ಕೈಜೋಡಿಸಿ ಕಾರ್ಯನಿರ್ವಹಿಸಿದರೆ  ಅತ್ಯಂತ ಪರಿಣಾಮಕಾರಿಯಾಗುವುದು.  ಕನ್ನಡ ಭಾಷಾ ಆಯೋಗದ ಸ್ಥಾಪನೆಯಾಗಬೇಕು .ಭಾಷೆಯ ಉಲ್ಲಂಘನೆ, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ನಿಯಮದ ಪಾಲನೆ ಇತ್ಯಾದಿಗಳನ್ನು ಪರಿಶೀಲಿಸಲು ಶಾಸನಬದ್ಧವಾದ ‘ಕನ್ನಡ ಭಾಷಾ ಆಯೋಗ’ವನ್ನು ಸರ್ಕಾರ ಮತ್ತು ಕಸಾಪ ಗಳು ಜಂಟಿಯಾಗಿ ರಚಿಸಬೇಕು. ಕರ್ನಾಟಕದ ಪ್ರತಿಯೊಂದು ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಶೇಕಡಾ ೮೦ ರಷ್ಟು ಮುಂಚೂಣಿ ಸ್ಥಾನ ಕಲ್ಪಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಸಾಪ ಸದಸ್ಯರ ನೇತೃತ್ವದಲ್ಲಿ ಸ್ವಯಂಸೇವಕ ಪಡೆಗಳನ್ನು ರಚಿಸಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು.  ” *ಕನ್ನಡ ಎಂದರೆ ಕೇವಲ ಅಕ್ಷರಗಳ ಗುಂಪಲ್ಲ, ಅದು ನಮ್ಮ ಅಸ್ಮಿತೆ, ನಮ್ಮತನ ಮತ್ತು ನಮ್ಮ ಪೂರ್ವಜರ ಸಂಸ್ಕೃತಿಯ ಪ್ರತೀಕ.”* ಕನ್ನಡ ಉಳಿಯುವುದು ಕೇವಲ ಸರ್ಕಾರದ ಆದೇಶಗಳಿಂದ ಅಥವಾ ಪರಿಷತ್ತಿನ ಸಭೆಗಳಿಂದ ಮಾತ್ರ ಸಾಧ್ಯವಿಲ್ಲ , ಅದು ಪ್ರತಿಯೊಬ್ಬ ಕನ್ನಡಿಗನ ದಿನನಿತ್ಯದ ಬದುಕಿನ ಅಭ್ಯಾಸವಾಗಬೇಕು. ಮನೆಯಲ್ಲಿ ತಾಯ್ನುಡಿಯಲ್ಲಿ ಮಾತನಾಡುವುದು, ಸಾರ್ವಜನಿಕವಾಗಿ ಕನ್ನಡದಲ್ಲಿ ವ್ಯವಹರಿಸುವುದು ಮತ್ತು ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಸರ್ಕಾರ ತನ್ನ ಬಲವಾದ ಕಾನೂನುಗಳನ್ನು ಜಾರಿಗೆ ತರಲಿ, ಕಸಾಪ ತನ್ನ ಸಾಂಸ್ಕೃತಿಕ ನಾಯಕತ್ವವನ್ನು ಗಟ್ಟಿಗೊಳಿಸಲಿ. ಇವೆರಡರ ಸಮಾಗಮದಿಂದ ಮಾತ್ರ “ಶಿರಬಾಗು ನೀ ಎಲ್ಲರ ತಾಯ್ನೆಲಕೆ, ಮುಗಿಲಂಚಿನಲಿ ನಗುವ ಕನ್ನಡದ ನೆಲಕೆ” ಎಂಬ ಕನಸು ನೈಜ ರೂಪ ತಾಳಲು ಸಾಧ್ಯವಾಗುವುದು. *ಕನ್ನಡವೇ ಸತ್ಯ ಕನ್ನಡವೇ ನಿತ್ಯ*! *ಸಿರಿಗನ್ನಡಂ ಗೆಲ್ಗೆ!* ರುದ್ರಮ್ಮ ಸಂ ಗಿಡ್ಡಪ್ಪಗೋಳ ಕೊಲ್ಹಾರ

ರುದ್ರಮ್ಮ ಸಂ ಗಿಡ್ಡಪ್ಪಗೋಳ ಕೊಲ್ಹಾರ “ಕನ್ನಡ ಉಳಿಸಲು ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಏನು ಮಾಡಬೇಕು?” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಅವರಕವಿತೆ “ಚೆಲುವ ಕನ್ನಡ ನಾಡು”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಚೆಲುವ ಕನ್ನಡ ನಾಡು” ಚೆಲುವಿನ ಒಲವಿನ ಕನ್ನಡ ನಾಡುವೀರರಮಣೀಯರು ಬೆಳಗಿದ ಬೀಡುವನಸಿರಿಗಳಿಂದ ಕೂಡಿದ ನಾಡುಅಂದ ಚಂದದ ಗಂಧದ ಬೀಡು ಪೊನ್ನ ಜನ್ನ ರನ್ನ ಉದಯಿಸಿದ ನಾಡುಕ್ರಾಂತಿ ಕಹಳೆ ಕಲಿಗಳ ಬೀಡುವೀರ ಧೀರರಾಳಿದ ಹೆಮ್ಮಯ ನಾಡುಕನ್ನಡ ಕಸ್ತೂರಿ ಸೂಸುವ ಬೀಡು ರಸಋಷಿಗಳು ನೆಲೆಸಿದ ನಾಡುಕಣ್ಮನ ಸೆಳೆಯುವ ಕಲೆಗಳ ಬೀಡುಶರಣರ ಸಂತರ ಕವಿಗಳ ನಾಡುಗಂಗೆ ತುಂಗೆ ಹರಿಯುವ ಬೀಡು ಪ್ರೀತಿ ಸ್ನೇಹ ಜೀವಿಗಳ ನಾಡುಸಭ್ಯತೆ ಸ್ವಾಭಿಮಾನದ ಬೀಡುಸತ್ಯ ಸಮತೆ ಸಾರಿದ ನಾಡುಜಾತಿ ಮತಗಳ ಮೀರಿದ ಬೀಡು ಜಗದಲಿ ಮೆರೆದಿದೆ ಕನ್ನಡ ನಾಡುಹಿರಿಮೆ ಗರಿಮೆಗಳ ಹೊನ್ನಿನ ಬೀಡುಶಾಂತಿ ಸೌಹಾರ್ದ ಸಂಸ್ಕೃತಿ ನಾಡುಕನ್ನಡಾಂಬೆಯ ಕರುಣೆಯ ಬೀಡು ಕನ್ನಡ ತೇರನು ಎಳೆಯುವ ನಾಡುಅಪಾರ ಕಿರ್ತಿ ಗಳಿಸಿದ ಬೀಡುಬಾನೆತ್ತರಕ್ಕೆ ಬಾವುಟ ಹಾರಿಸಿದ ನಾಡುಕನ್ನಡಮ್ಮನ ಉಸಿರಿನ ಬೀಡು ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಅವರಕವಿತೆ “ಚೆಲುವ ಕನ್ನಡ ನಾಡು” Read Post »

You cannot copy content of this page

Scroll to Top