ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
“ಹೊರಟಿದ್ದೇನೆ”


ಕಾಲಾನುಕ್ರಮದಿ ನಡೆಯತೊಡಗಿದ್ದೇನೆ
ಎಡರು ತೊಡರುಗಳನೇಕ
ಮುಗ್ಗುರಿಸಿದಾಗಲೇ ತಿಳಿವುದು
ನಾ ಎಡವಿದ್ದೆಲ್ಲಿ ಎಂದು
ನಿರಾಶೆ ಹತಾಶೆ ಬದಿಗೊತ್ತಿ
ಅವಿತಿರುವ ಮಿಣುಕು ಹುಡುಕಿ
ಭರವಸೆಯ ದೀವಿಗೆ ಹಿಡಿದು
ಕಾಲದ ಮಹಿಮೆಯಲಿ ಎಲ್ಲವೂ
ನೋವು ನುಂಗಿ ಮೂಕನಾಗಿ
ಒಳಗೊಳಗೆ ಕುದಿದು ಕಪ್ಪಾಗಿ
ಬೆಪ್ಪನಂತೆ ಮತ್ತೆ ಮೆತ್ತಗೆ
ತಪ್ಪು ಒಪ್ಪಿ ನಡೆಯುತೊಡಗಿದ್ದೇನೆ
ಕನಸ ಗೋಪುರ ಕಳಚಿದರು
ನಿರಾಶೆಯ ಹೊಸ್ತಿಲು ದಾಟಿ
ಗಸ್ತು ತಿರುಗುತ್ತಿದ್ದೇನೆ ತಿದ್ದಿ ತೀಡಲು
ಹೊಂಗನಸು ಬಿತ್ತಲೂ ಮತ್ತೆ ಹೊರಟಿದ್ದೇನೆ.
ರೇಷ್ಮಾ ಕಂದಕೂರ



