ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್


ಅವಳ ಮಡಿಲಲಿ ಮಲಗಿ ನೋವುಗಳ ಮರೆಯುವ ಹಂಬಲ
ಅವಳ ಕಂಗಳಲಿ ನಕ್ಷತ್ರವಾಗಿ ಹೊಳೆಯುವ ಹಂಬಲ
ಮನದಲಿ ಅಡಗಿವೆ ಹೇಳಲಾಗದ ನೂರು ಮಾತುಗಳು
ಅವಳ ಭಾವನೆಗಳಿಗೆ ರಾಗವಾಗಿ ಬೆರೆಯುವ ಹಂಬಲ
ತಿಳಿ ಕೊಳಕೆ ಕಲ್ಲೆಸೆಯುವ ಜನಗಳೇ ಬಹಳ ಜಗದಲಿ
ಅವಳ ಎದೆ ಕಡಲ ಅಲೆಗಳ ತಳಮಳ ಅರಿಯುವ ಹಂಬಲ
ಮದಿರೆ ತುಂಬಿದ ಬಣ್ಣದ ಹೂಜಿಗಳು ಕರೆಯುತಿವೆ ಇಂದು
ಅವಳ ಒಲವ ಕೈಯ ಅಮೃತ ತುತ್ತು ಪಡೆಯುವ ಹಂಬಲ
ಮುಖವಾಡ ಧಾರಿಗಳ ಮಧ್ಯೆ ಬಾಳು ಸಾಗಿದೆ ನೋಡು
ಅವಳ ಬದುಕಲಿ ಶಾಂತ ಪ್ರಭೆಯಾಗಿ ಉಳಿಯುವ ಹಂಬಲ
ಪ್ರಭಾವತಿ ಎಸ್ ದೇಸಾಯಿ



