ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದ್ದು ಬಿಡು ಸುಮ್ಮನೆ   ಸುಮ್ಮನಿದ್ದುಬಿಡು
ಹೊರಟು ಬಿಡು
ಬುದ್ಧನಂತೆ ಎದ್ದು ಬಿಡು
 ಈ ಜಗದ ಜಂಜಡ
 ಕಳೆದುಕೊಂಡು ಬಿಡು
 ಕೊಡವಿಕೊಂಡು ಬಿಡು

 ಹೊರಟು ಬಿಡು ನೀನು
ನಡೆವ ದಾರಿ ದೊಡ್ಡದಿದೆ
ಕಲ್ಲು ಮುಳ್ಳು ಚುಚ್ಚಬಹುದು
ರಕ್ತ ಒಸರಬಹುದು
ಮುಲಾಮು ಹಚ್ಚಿಕೋ
ಪಟ್ಟಿ ಕಟ್ಟಿಕೋ
ನಡೆಯುವುದು  ಮಾತ್ರ ಬಿಡಬೇಡ
ಎಲ್ಲೂ ನಿಲ್ಲಬೇಡಾ
ನಡೆಯುತ್ತಲೇ ಇದ್ದುಬಿಡು

ನಿನ್ನ ಅಂಜಿಸುವವರು ಹೀಯಾಳಿಸುವವರು
ಅನುಮಾನಿಸುವವರು
ಹಿಂದೆಳೆಯುವವರು
ತೆಗಳುವವರು
ಬೈಯುವವರು
ಇರಬಹುದು ನೂರೆಂಟು ಮಂದಿ
ಬಿಟ್ಟು ಬಿಡು ಅವರಿವರ ಮಾತುಗಳ
ಮನದ ಮಾತು ಕೇಳು ಸಾಕು

ನಿನ್ನ ಕಷ್ಟ ಕಣ್ಣಿರಿಗೆ ಕರುಗುವರಿಲ್ಲ
ಕರಗಲೆಂದು ಕಾಯುತ್ತ ಬೇಡಿಕೊಳ್ಳಬೇಡ
ಈ ದುರ್ಬಲತೆಯ ನೀಗಲೇ ಬೇಕು ನೀನು
ನಿನಗೆ ನೀನು ಆಸರೆಯಾಗಬೇಕು
ಕಾಲ ನಿಲ್ಲುವುದಿಲ್ಲ
ನೀನು ನಿಂತರೆ ಹೇಗೆ?!
ತಳ್ಳಿಕೊಂಡೆ ಹೋಗಿಬಿಡುವುದು ಕಾಲ
ಜೊತೆಗೆ ನಿಲ್ಲುವರಿಲ್ಲ
ನಿಲ್ಲಬೇಡ  ನೀನು ಚಲಿಸುತ್ತಲಿರು
ಯಾರಿಗೂ ಕಾಯಬೇಡ
ಯಾರೂ ಕಾದಿಲ್ಲ ನಿನಗಾಗಿ

ಒಂಟಿ ಪಯಣವೆಂದು ಬೇಸರಸದಿರು
ದೂರದ  ದಡ ಸೇರಲು
ಒಂಟಿಯಾಗಿಯೇ ನಡೆಯಬೇಕು
ನಿನ್ನ ಪಾಪ ಪುಣ್ಯಗಳ ಮೂಟೆ ನೀನೇ ಹೆಗಲಿಗೆರಿಸಿಕೊಳ್ಳಬೇಕು
ಪಾಲುದಾರರಿಲ್ಲ ಪಾಪಗಳಿಗೆ
ನಡೆದು ಬಿಡು ಮೋಹ ಮಮಕಾರಗಳ ತೊರೆದು
ಬುದ್ಧ ಬಸವ ಅಂಬೇಡ್ಕರ್ ನಡೆಯಲಿಲ್ಲವೇ
ಅವರ ದಾರಿಯೇನು ಸಲೀಸಾಗಿತ್ತೆ?!

ಬೆಳಕಿನ ಅರಮನೆಗೆ
ನೂರಾರು ದಾರಿಗಳಿವೆಯಂತೆ
ನಡೆದು ಬಿಡು ಬೆಳಕಿನೆಡೆಗೆ
ಸವಿ ಸಗ್ಗ ಪಡೆಯಲು
ಇಹದ ಕಗ್ಗ ಬಿಡಿಸಿಕೊಳ್ಳಬೇಕು
ಬಿಡಿಸಿಕೊಂಡು ಬಿಡು
ಅಲ್ಲಮ ನಡೆದ ದಾರಿ
ಅಕ್ಕ ನಡೆದ ದಾರಿ
ನಿನ್ನೆದುರಿಗಿದೆ
ಆ ದಾರಿಗುಂಟ ನಡೆದು ಬಿಡು
ಸಿಗಬಹುದು ನಿನಗೆ
ಅರಿವಿನ ಮನೆ
ಬೆಳಕಿನ ಅರಮನೆ

ತೊರೆದು ಬಿಡು ಸಾವಿರ ಚಿಂತೆ
ಇದ್ದು ಬಿಡು ಬುದ್ಧನಂತೆ
ಹೊರಟು ಬಿಡು ಹೊರಟು ಬಿಡು
ಬಿಟ್ಟು ಅವರಿವರ ಚಿಂತೆ
ಅರಿವ ದಾರಿ ಹುಡುಕುತ
ಕನಕ ಶರೀಫರು ಮೀಟಿದ
ತಂಬೂರಿ ಮೀಟತ…..


About The Author

3 thoughts on “ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ””

  1. ತುಂಬಾ ಅದ್ಬುತ ವಾಗಿ ಬಂದಿದೆ ಮೇಡಂ ಧನ್ಯವಾದಗಳು

Leave a Reply

You cannot copy content of this page

Scroll to Top