ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-35 ಮೈಸೂರು ಶಾಖೆ ಎರಡಕ್ಕೆ ಬಂದು ರಿಪೋರ್ಟ್ ಮಾಡಿಕೊಂಡಿದ್ದು ಆಯಿತು. ಮಾಮೂಲಿನಂತೆ ಇಲ್ಲಿಯೂ ಒಂದು ಕೈಯಲ್ಲಿ ಕರ್ತವ್ಯ ಹಾಜರಾಗುವ ಪತ್ರ ಇದ್ದರೆ ಮತ್ತೊಂದು ಕೈಯಲ್ಲಿ ವರ್ಗಾವಣೆ ಅರ್ಜಿ. ಈ ಬಾರಿ ಮನೆಗೆ ಹತ್ತಿರದ ಶಾಖೆ ೫ ಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದೆ. ಇಲ್ಲಿ ನನಗೆ ಮತ್ತೆ ನನ್ನ ಮೆಚ್ಚಿನ ಪಾಲಿಸಿ ಸೇವಾ ವಿಭಾಗ ಕೊಟ್ಟರು. ಪಾಲಿಸಿಯ ಪುನರುಜ್ಜೀವನ, ಅಸೈನ್ಮೆಂಟ್ ಮತ್ತು ನಾಮನಿರ್ದೇಶನ ಹಾಗೂ ಪಾಲಿಸಿಗಳ ಅಲ್ಟ್ರೇಶನ್ ಇಷ್ಟು ವಿಭಾಗಗಳ ಮೇಲ್ವಿಚಾರಣೆ ನನ್ನದು. ಈ ಮೂರು ವಿಭಾಗಗಳಿಗೂ ಒಬ್ಬೊಬ್ಬರು ಸಹಾಯಕರು ಇದ್ದರು. ನನ್ನದೇ ಬ್ಯಾಚ್ ನ ಶ್ರೀಹರಿ ಸುಬ್ರಹ್ಮಣ್ಯ ಶೋಭಾ ಮತ್ತು ಪುಟ್ಟ ಲಕ್ಷ್ಮಿ ಈ ವಿಭಾಗದ ಸಹಾಯಕರು. ಈ ಹಿಂದೆ ನಂಜನಗೂಡಿನಲ್ಲಿ ನನ್ನ ಜೊತೆ ಉನ್ನತ ಶ್ರೇಣಿ ಸಹಾಯಕರಾಗಿದ್ದ ಜಗದೀಶ್ ಅವರು ಈಗ ಆಡಳಿತ ಅಧಿಕಾರಿಯಾಗಿ ಶಾಖೆಯಲ್ಲಿ ಇದ್ದರು. ಬಹುತೇಕ ಬಹುತೇಕ ಎಲ್ಲರೂ ಮೊದಲಿನಿಂದ ಪರಿಚಯದವರೇ ಆಗಿದ್ದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸ್ವಲ್ಪವೂ ಕಷ್ಟವಾಗಲಿಲ್ಲ. ಬೇರೆ ವಿಭಾಗಗಳಿಂದ ವರ್ಗವಾಗಿ ಬಂದಿದ್ದ ಹೇಮಗೋಮತಿ ಮತ್ತು ರೇಖಾ ಮಾತ್ರ ಹೊಸ ಪರಿಚಯ ಆದರೂ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ನನ್ನದೇ ಬ್ಯಾಚ್ನ ಅನಿತ ಗಾಯಿತ್ರಿ ಹಾಗೂ ಶೋಭಾ ಈ ಮುಂಚೆ ಮಂಡ್ಯದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಗಾಯಿತ್ರಿ ದೇವಿ ಸಹಪಾಠಿ ಸುಮಾ ಇವರೆಲ್ಲರೂ ಇದೇ ಬ್ರಾಂಚ್ ನಲ್ಲಿ ಇದ್ದರು. ಪ್ರಸೂತಿ ರಜೆಗೆ ಹೋಗಿದ್ದ ಮಂಜುಳಾ ಸಹ ವಾಪಸ್ ಆಗಿದ್ದು ಅವಳು ಸಹ ತುಂಬಾ ಕ್ಲೋಸ್ ಆದಳು. ಈ ಮುಂಚೆ ನಾನು ಪ್ರಸ್ತಾಪಿಸಿದ ಮಂಡ್ಯ ಬ್ರಾಂಚ್ ನಲ್ಲಿದ್ದ ಪ್ರೈಮರಿ ಶಾಲೆಯ ಸಹಪಾಠಿ ಮಂಜುನಾಥ್ ಸಹ ಇಲ್ಲಿಯೇ ಇದ್ದಿದ್ದು .ಬಹಳ ವರ್ಷಗಳಿಂದ ಅವರೆಲ್ಲ ಒಟ್ಟಿಗೆ ಅದೇ ಶಾಖೆಯಲ್ಲಿ ಕೆಲಸ ಮಾಡಿದ್ದರಿಂದ ಏಕವಚನದಲ್ಲಿಯೇ ಮಾತನಾಡಿಸಿಕೊಳ್ಳುವಷ್ಟು ಆತ್ಮೀಯತೆ ಇತ್ತು ಒಂದು ರೀತಿಯ ಕೋಝೀ ವಾತಾವರಣ. ಆ ಬ್ರಾಂಚ್ ನಲ್ಲಿ ಮನೆಯ ಸದಸ್ಯರ ಹಾಗೆ ಎಲ್ಲರೂ ಹೊಂದಿಕೊಂಡು ಇದ್ದದ್ದು ತುಂಬಾ ಖುಷಿ ಕೊಟ್ಟಿತ್ತು ಇದುವರೆಗೆ ನಾನು ಕೆಲಸ ಮಾಡಿದ ಯಾವುದೇ ಶಾಖೆ ಗಿಂತ ಇಲ್ಲಿ ತುಂಬಾ ಆತ್ಮೀಯತೆಯ ಅನುಬಂಧ ಇದ್ದದ್ದು ಕಾಣಿಸುತ್ತಿತ್ತು. ಹಾಗಾಗಿ ಕೆಲಸಗಳನ್ನು ಸಹ ಹಂಚಿಕೊಂಡಿದೆ ಮಾಡಿಬಿಡುತ್ತಿದ್ದರಿಂದ ತುಂಬಾ ಸುಗಮವಾಗಿ ನಡೆಯುತ್ತಿತ್ತು. ನಂಜನಗೂಡು ಶಾಖೆ ಬಿಡುವ ಸ್ವಲ್ಪ ಮೊದಲು ನಾವು ಮಾರುತಿ ಒಮ್ಮೆ ಗಾಡಿಯನ್ನು ಖರೀದಿಸಿದವು ನಮ್ಮ ಮನೆಯವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಲು ಈ ವ್ಯವಸ್ಥೆ. ಆ ಸಮಯದಲ್ಲಿ ಮೊಬೈಲ್ ಗಳು ಹೆಚ್ಚು ಜನಪ್ರಿಯ ವಾಗುತ್ತಿತ್ತು ಅದೇ ಬಿಲ್ಡಿಂಗ್ನ ಒಂದು ಕಡೆ ಬಿ ಎಸ್ ಎನ್ ಎಲ್ ಸಿಮ್ ಗಳನ್ನು ಕೊಡುತ್ತಿದ್ದರು. ಸುಲಭವಾಗಿಯೇ ಸಿಮ್ ಸಿಕ್ಕಿತು .ಮೊದಲ ನೋಕಿಯಾ ಮೊಬೈಲ್ ರವೀಶ್ ಖರೀದಿಸಿದರು ಆಗ ಅದರ ಬೆಲೆ ಹತ್ತು ಸಾವಿರ ರೂಪಾಯಿಗಳು ಆಗ ಮೊಬೈಲ್ ದರಗಳು ಸ್ವಲ್ಪ ಹೆಚ್ಚೇ ಇದ್ದವು. ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಪದೋನ್ನತಿ ಆಗಿ ಉಪ ಶಾಖಾಧಿಕಾರಿಗಳಾಗಿ ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ ಶಾಖೆಗೆ ವರ್ಗಾವಣೆ ಆಯಿತು. ಛಾಯಾ ಸಹ ಬೆಂಗಳೂರಿಗೆ ಅರ್ಜಿ ಕೋರಿದಳು ಬಹಳ ಬೇಗನೆ ಅವಳಿಗೂ ಬೆಂಗಳೂರಿನ ಸಿಎ ಬ್ರಾಂಚ್ ಗೆ ವರ್ಗ ಸಿಕ್ಕಿತು ಈಗ ಅವರು ಬೆಂಗಳೂರಿನ ಹಲಸೂರಿನಲ್ಲಿ ಮೊದಲು ನಂತರ ಸಂಜಯ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ನನಗೆ ಓಡಾಡಲು ಸಹ ಅನುಕೂಲವಾಗಿತ್ತು. ಆಫೀಸಿನ ಎದುರಿಗೆ ಬಸ್ ಸ್ಟ್ಯಾಂಡ್. ಯಾವಾಗಲಾದರೂ ಬೆಂಗಳೂರಿಗೆ ಹೋದಾಗ ಬೆಳಿಗ್ಗೆ ಎದ್ದು ಹೊರಟು ನೇರ ಆಫೀಸಿಗೆ ವಾಪಸ್ ಬರುತ್ತಿದ್ದೆ. ಹಾಗೆ ಒಮ್ಮೆ ವಾಪಸ್ ಬರುವಾಗ ಎಸ್ ಎಲ್ ಭೈರಪ್ಪನವರ ಸಹಪಾಠಿ ವೃದ್ಧರೊಬ್ಬರು ನನ್ನ ಪಕ್ಕದ ಸೀಟ್ ನಲ್ಲಿಯೇ ಕುಳಿತಿದ್ದು ದಾರಿಯುದ್ದಕ್ಕೂ ಭೈರಪ್ಪನವರ ಬಗ್ಗೆ, ಅವರ ಕೃತಿಗಳ ಬಗ್ಗೆ ಚರ್ಚೆ ಮಾಡುತ್ತಾ ಬಂದಿದ್ದು ಒಂದು ಸುಂದರ ಸವಿ ನೆನಪು. ಅವರು ಅಕ್ಕಿಹೆಬ್ಬಾಳದವರಾಗಿದ್ದು ಅಲ್ಲಿನ ಜಾತ್ರೆಗೆ ಬನ್ನಿ ಎಂದು ಆಮಂತ್ರಣವನ್ನು ಸಹ ಕೊಟ್ಟಿದ್ದರು. ನನ್ನ ಸಹಪಾಠಿ ಮಂಜುವಿನ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು ಮೊದಲಿನಿಂದ ನಮ್ಮ ಮನೆಗೆ ಬರುತ್ತಿದ್ದು ಅಮ್ಮನ ಕೈ ರುಚಿ ನೋಡುತ್ತಿದ್ದವನಿಗೆ ಆಗಲಿಂದ ಅಕ್ಕಿ ಮಸಾಲೆ ರೊಟ್ಟಿ ಎಂದರೆ ತುಂಬಾ ಇಷ್ಟ ನಾನು ಡಬ್ಬಿಗೆ ಅದನ್ನು ತಂದ ದಿನಗಳಲ್ಲೆಲ್ಲ ನನ್ನ ಡಬ್ಬಿಯನ್ನು ಅವನೇ ತೆಗೆದುಕೊಂಡು ಬಿಟ್ಟು ನನಗೆ ಕೆಳಗಿನ ಹೋಟೆಲ್ ನಿಂದ ಮಸಾಲೆ ದೋಸೆ ತರಿಸಿ ಕೊಟ್ಟುಬಿಡುತ್ತಿದ್ದ ಅದರಲ್ಲೂ ಅವರೇ ಕಾಳು ರೊಟ್ಟಿ ಮಾಡಿದಾಗಲಂತೂ ನಾನು ಅವನಿಗಾಗಿಯೇ ಪ್ರತ್ಯೇಕ ಎರಡು ರೊಟ್ಟಿ ಮಾಡಿ ಡಬ್ಬಿಯಲ್ಲಿ ತಂದುಕೊಡುತ್ತಿದೆ ಅಷ್ಟು ಖುಷಿಯಾಗಿ ತಿನ್ನುತ್ತಿದ್ದ ಜೀವನದಲ್ಲಿ ಅಷ್ಟೊಂದು ಉತ್ಸಾಹ ತುಂಬಿಕೊಂಡಿದ್ದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಂತೂ ನನಗೆ ಇಂದಿಗೂ ಅರಗಿಸಿಕೊಳ್ಳಲಾಗದ ಆಘಾತ. ಫೆಬ್ರವರಿ ತಿಂಗಳ ಮೊದಲ ಭಾಗದಲ್ಲಿ ಒಂದು ಹೊಸ ಬೆಳವಣಿಗೆ ಆರಂಭವಾಯಿತು. ಚುನಾವಣಾ ಕಚೇರಿಯಿಂದ ನಮ್ಮ ಸಿಬ್ಬಂದಿಗಳ ಪಟ್ಟಿಯನ್ನು ತೆಗೆದುಕೊಂಡು ಹೋಗಲು ಆರಂಭಿಸಿದ್ದರು. ಇದುವರೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಉಪಾಧ್ಯಾಯರು ಶಿಕ್ಷಕರುಗಳನ್ನು ಮಾತ್ರ ಈ ಡ್ಯೂಟಿಗೆ ತೆಗೆದುಕೊಳ್ಳುತ್ತಿದ್ದದ್ದು ಈ ಬಾರಿ ರಾಜ್ಯ ಹಾಗೂ ಕೇಂದ್ರ ಎರಡು ಕಡೆಯ ಚುನಾವಣೆಗಳು ನಡೆಯುತ್ತಿದ್ದರಿಂದ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯತೆ ಉಂಟಾಗಿದ್ದು ಬ್ಯಾಂಕುಗಳು ಹಾಗೂ ಭಾರತೀಯ ಮತ್ತು ಸಾಮಾನ್ಯ ವಿಮೆ ನೌಕರರನ್ನು ಚುನಾವಣಾ ಡ್ಯೂಟಿಗೆ ಕರೆಯುವ ಪರಿಪಾಠ ಆರಂಭವಾಯಿತು ಇಲ್ಲಿಂದ ಮೊದಲುಗೊಂಡು ಚುನಾವಣೆ ಘೋಷಣೆ ಎಂದ ತಕ್ಷಣ ನಮಗೆಲ್ಲ ದುಃಸ್ವಪ್ನಗಳು ಕಾಡಲು ಆರಂಭವಾಗಿತ್ತು. ಚುನಾವಣೆ ಹೆಸರು ಕೇಳಿದರೆ ಬೆಚ್ಚಿ ಬೀಳುವಷ್ಟು ಚುನಾವಣೆ ಕರ್ತವ್ಯಗಳ ಕಾಟ. ನಿವೃತ್ತಿಯ ಕಡೆಯ ವರ್ಷದಲ್ಲಿಯೂ ಸಹ ಈ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಬೇಕಾಯಿತು. ಏಪ್ರಿಲ್ 26 2004 ರಂದು ಚುನಾವಣೆಗಳು ನಿಗದಿಯಾಗಿತ್ತು. ಅದಕ್ಕೆ ಮುಂಚೆ ಒಂದು ವಾರದಲ್ಲಿ ತರಬೇತಿಗೆಂದು ಕರೆದಿದ್ದರು ಮೈಸೂರಿನ ಟೌನ್ ಹಾಲ್ ನಲ್ಲಿ ತರಬೇತಿ ಒಂದು ರೀತಿಯ ದೊಂಬಿಯೇ ಅದು. ಯಾವ ವಿಷಯಗಳು ನಮಗೆ ಸರಿಯಾಗಿ ಅರ್ಥವಾಗಲಿಲ್ಲ ಅವರು ಹೇಳಿಕೊಟ್ಟಿದ್ದು ಸರಿಯಾಗಿರಲಿಲ್ಲ ಎಂಬುದು ಒಂದು ಕಾರಣವಾದರೆ ಅವೆಲ್ಲವೂ ನಮಗೆ ಮೊಟ್ಟಮೊದಲಿಗೆ ಬಾರಿ ಆದ್ದರಿಂದ ಎಲ್ಲಾ ಹೊಸದು ಎನಿಸತೊಡಗಿತ್ತು. ಶಾಖೆಯ ಎಲ್ಲಾ ಬಹುತೇಕ ಮಂದಿ ಚುನಾವಣಾ ಕರ್ತವ್ಯಕ್ಕೆ ಕರೆ ಬಂದಿತ್ತು. ನನಗೆ ಎ ಪಿ ಆರ್ ಒ ಅಂದರೆ ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಕಾರ್ಯ ಇತ್ತು .ಅಕಸ್ಮಾತ್ ಪಿ ಆರ್ ಓ ಬರಲಿಲ್ಲ ಎಂದರೆ ನಾನೇ ಆ ಕರ್ತವ್ಯವನ್ನು ನಿರ್ವಹಿಸಬೇಕಿತ್ತು, ಮೊದಲೇ ಹೆದರುವವರ ಮೇಲೆ ಕಪ್ಪೆ ಎಸೆದಂತಾಗಿತ್ತು ನನ್ನ ಪರಿಸ್ಥಿತಿ. ನಾವು ಕಾರ್ಯನಿರ್ವಹಿಸಬೇಕಾಗಿದ್ದು ಹುಣಸೂರು ತಾಲೂಕು. ಚುನಾವಣೆಯ ಹಿಂದಿನ ದಿನವೇ ಮಹಾರಾಜ ಕಾಲೇಜು ಮೈದಾನಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗಿದ್ದು ಅಲ್ಲಿಂದ ಏರ್ಪಾಡು ಮಾಡಿದ್ದ ಬಸ್ಗಳಲ್ಲಿ ಹೋಗಿದ್ದಾಯಿತು. ಅಲ್ಲಿ ಬೂತ್ ನಂಬರ್ ಹಾಗೂ ಕಾರ್ಯನಿರ್ವಹಿಸಬೇಕಾಗಿದ್ದ ಶಾಖೆ ಹಾಗೂ ನಾವು ಹತ್ತಬೇಕಿದ್ದ ಬಸ್ ನಂಬರ್ ತಿಳಿಸಿದರು. 12 ಗಂಟೆಗೆ ಬಸ್ ಹೊರಡುವುದು ಎಂದು ತಿಳಿಯಿತು ಅಲ್ಲಿಯೇ ಕ್ಯಾಂಪ್ ಹಾಕಿದ್ದ ಹೋಟೆಲ್ ನಲ್ಲಿ ತಿಂಡಿ ತಿಂದು ನಮ್ಮ ನಮ್ಮ ಬೂತ್ ನವರ ಪರಿಚಯ ಮಾಡಿಕೊಂಡು ಅವರಿಂದ ಸಾಮಗ್ರಿಗಳನ್ನು ಪಡೆದೆವು ವಿದ್ಯಾವರ್ಧಕ ಕಾಲೇಜಿನ ಲೆಕ್ಚರರ್ ಒಬ್ಬರು ಖಾಸಗಿ ಶಾಲೆಗೆ ಶಿಕ್ಷಕಿ ಗೀತಾ ಇನ್ನೊಬ್ಬರು ಹಾಗೂ ಉಳಿದಿದ್ದರು ಸರ್ಕಾರಿ ರಾಜ್ಯ ಸರ್ಕಾರಿ ನೌಕರರು ನಮ್ಮ ತಂಡದಲ್ಲಿ ಇದ್ದರು. ಅಂತೂ ಇಂತೂ ಹನ್ನೆರಡುವರೆಗೆ ಬಸ್ ಹೊರಟಿದ್ದು ದಾರಿಯ ಮದ್ಯ ಹುಣಸೂರಿನ ಹೋಟೆಲ್ ನಲ್ಲಿ ನಿಲ್ಲಿಸಿ ಊಟ ಮಾಡಿದೆವು. ನಮ್ಮ ಪಿ ಆರ್ ಓ ಅವರಿಗೂ ಇದೆ ಮೊದಲ ಚುನಾವಣಾ ಅನುಭವ ತುಂಬಾ ಜಾಗರೂಕತೆಯಿಂದ ವರ್ತಿಸುತ್ತಿದ್ದರು. ನಾಲ್ಕು ಗಂಟೆಯ ವೇಳೆಗೆ ನಮ್ಮನ್ನು ಬಳಿ ಬಿಟ್ಟರು ಅಲ್ಲಿ ಇಲ್ಲ ವ್ಯವಸ್ಥೆಗಳನ್ನು ಮಾಡಿ ಕೊಂಡೆವು. ರಾತ್ರಿ ಅಲ್ಲಿ ಹಳ್ಳಿಯವರೆ ಅಡುಗೆಯ ವ್ಯವಸ್ಥೆ ಮಾಡಿದ್ದರು. ನಾನು ಮತ್ತು ಗೀತಾ ಅವರು ನಾನು ತೆಗೆದುಕೊಂಡು ಹೋಗಿದ್ದ ಚಪಾತಿ ಹಾಗೂ ಹಾಗಲಕಾಯಿ ಗೊಜ್ಜುಗಳಲ್ಲಿ ರಾತ್ರಿಯ ಊಟ ಮುಗಿಸಿದೆವು .ಹಳ್ಳಿಯ ಶಾಲೆ, ಸದ್ಯ ನಮಗೆ ಶಿಕ್ಷಕರು ಉಪಯೋಗಿಸುವ ಶೌಚಾಲಯವನ್ನು ಸ್ವಚ್ಛಗೊಳಿಸಿ ಬಿಟ್ಟು ಕೊಟ್ಟಿದ್ದರು. ಆದರೆ ಸ್ನಾನಕ್ಕೆ ಮಾತ್ರ ವ್ಯವಸ್ಥೆ ಇರಲಿಲ್ಲ ಬೆಳಗಾಗುವ ಮೊದಲೇ ಸ್ನಾನ ಮಾಡಿಕೊಂಡಿದ್ದರಂತೆ .ನಮಗೆ ಮಾತ್ರ ಅಂದು ಸ್ನಾನ ಭಾಗ್ಯ ಸಿಗಲಿಲ್ಲ.ಬೆಳಿಗ್ಗೆ 7.30ಗೆ ಚುನಾವಣೆ ಆರಂಭವಾಯಿತು ಎರಡೆರಡು ಸ್ಥಾನಗಳಿಗೆ ಆದ್ದರಿಂದ ಸ್ವಲ್ಪ ಸಮಯ ಹಿಡಿಯುತ್ತಲು ಇತ್ತು ಬೆಳಿಗ್ಗೆ 7.30 ಇಂದ ಸಂಜೆ ಆರು ಗಂಟೆಯ ತನಕ ಚುನಾವಣೆಗಳು ತಿಂಡಿ ತಿನ್ನಲು ಸಹ ಬಿಡುವಾಗಲಿಲ್ಲ ನಮಗೆಲ್ಲ ಕೈ ತುಂಬಾ ಕೆಲಸ ಇದ್ದುದರಲ್ಲಿ ಪಿ ಆರ್ ಓ ಅವರೇ ಮೇಲ್ವಿಚಾರಣೆ ಮಾಡಿಕೊಳ್ಳುತ್ತ ನಾವು ಕೆಲಸ ಮಾಡುತ್ತಲೇ ತಿನ್ನುವ ಹಾಗೆ ಬ್ರೆಡ್ ಚಾ ಬಾಳೆಹಣ್ಣು ಬಿಸ್ಕತ್ತು ಇವುಗಳನ್ನು ಸರಬರಾಜು ಮಾಡಿದರು ಒಂದು ಗಂಟೆಯ ವೇಳೆಗೆ ಸ್ವಲ್ಪ ಜನಸಂದಣಿ ಕಡಿಮೆಯಾಗಿದ್ದರಿಂದ ಒಬ್ಬೊಬ್ಬರಾಗಿ ಹೋಗಿ ಊಟ ಮಾಡಿಕೊಂಡು ಬಂದೆವು .ನನಗೆ ಅಲ್ಲಿಯ ಅಡಿಗೆ ಹೇಗಪ್ಪಾ ತಿನ್ನುವುದು ಎಂದು ಚಿಂತೆ .ಆದರೆ ಬೆಳಿಗ್ಗೆ ತಂದಿಟ್ಟಿದ್ದ ಉಪ್ಪಿಟ್ಟು ಹಾಗೆ ಇತ್ತು ಅದನ್ನ ತಿಂದು ಮೊಸರನ್ನ ತಿಂದು ಹೇಗೋ ಕಥೆ ಮುಗಿಸಿದ್ದಾಯಿತು. ಸಂಜೆ ಆರು ಗಂಟೆಗೆ ಮುಕ್ತಾಯ ಎಂದಿದ್ದರು ಆ ವೇಳೆಗೆ ಇದ್ದವರನ್ನೆಲ್ಲ ಮತದಾನ ಮಾಡಲು ಅವಕಾಶ ಮಾಡಿಕೊಡಲೇಬೇಕಿತ್ತು, ಆರು ಗಂಟೆಯ ನಂತರವೂ 60 70 ಜನ ಇದ್ದರು ನಮ್ಮ ಬೂತ್ ನಲ್ಲಿ 95% ಮತದಾನ ಆಗಿತ್ತು, ಅದು ಏಳು ಗಂಟೆಯ ವೇಳೆಗೆ ಮುಗಿದು ನಾವು ಎಲ್ಲಾ ಸ್ಟೇಟ್ಮೆಂಟ್ ಗಳನ್ನು ತಯಾರಿಸಿಕೊಳ್ಳುವ ವೇಳೆಗೆ 8.30 ಆಗಿತ್ತು ಬಸ್ ಆಗ ಬಂತು ಸಣ್ಣಪುಟ್ಟ ಉಳಿದದ್ದನ್ನು ಅಲ್ಲಿಗೆ ಮುಗಿಸಿಕೊಂಡು ಎಂದು ಹೊರಟುಬಿಟ್ಟವು ಮತ್ತೆ ಹುಣಸೂರು ತಾಲೂಕು ಕಚೇರಿಯಲ್ಲಿ ತುಂಬಾ ಜನ ಸಂದಣಿ. ಏನೊಂದು ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಹೇಗೋ ನುಗ್ಗಿ ಅಂತೂ ಎಲ್ಲವನ್ನು ಸಲ್ಲಿಸುವ ವೇಳೆಗೆ ರಾತ್ರಿ 10:30 ಆಗಿ ಹೋಗಿತ್ತು. ನಂತರ ಮೈಸೂರಿಗೆ ಹೊರಡುವ ಬಸ್ನಲ್ಲಿ ಕುಳಿತು ಹೊರಟೆವು. ನಮ್ಮ ಪಿ ಆರ್ ಓ ಬಳಿ ಇದ್ದ ಮೊಬೈಲಿನಿಂದ ನನ್ನ ತಾಯಿಯ ಮನೆಯ ಲ್ಯಾಂಡ್ಲೈನ್ ಗೆ ಫೋನ್ ಮಾಡಿ ನಮ್ಮ ಪತಿಗೆ ವಿಷಯ ತಿಳಿಸಿ ಅವರು ಬಂದು ಬಸಪ್ಪ ಹಾಸ್ಪಿಟಲ್ ಬಳಿ ನನಗಾಗಿ ಕಾಯುತ್ತಿದ್ದರು. ಅಂತೂ ಇಂತೂ ನಾಳೆ ಮುಗಿಸಿ ಮನೆಗೆ ಬಂದಾಗ ಆ ದಿನ ದಾಟಿ ಹೋಗಿತ್ತು. ಈ ಶಾಖೆಯಲ್ಲಿ ಇದ್ದಾಗಲೇ ಮತ್ತೊಮ್ಮೆ ಹೈದರಾಬಾದ್ ತರಬೇತಿಗೆ ಕರೆ ಬಂತು ಅದು ಮತ್ತೆ ನಾನು ಹಾಗೂ ನಂದಶ್ರೀ ಕುಲಕರ್ಣಿ ಕಟ್ಟಿ ಜೊತೆಯಾಗಿ ಹೈದರಾಬಾದಿಗೆ ಹೋಗಿದ್ದೆವು. ಮಕ್ಕಳನ್ನು ಅವರ ತಾಯಿ ಮನೆಗೆ ಬಿಟ್ಟು ಹೋಗಬೇಕಾಗಿತ್ತು. ಮೊದಲು ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿ ಬಿಟ್ಟು ನಂತರ ಹೈದರಾಬಾದ್ ಟ್ರೈನ್ ಹಿಡಿದದ್ದು ಇಂದಿನಂತೆ ಹೈದರಾಬಾದ್ ತರಬೇತಿ ತುಂಬಾ ಆಸಕ್ತಿದಾಯಕವಾಗಿ ಚೆನ್ನಾಗಿಯೂ ಇತ್ತು. ಈ ಬಾರಿ ಬರಿ ಬಿರ್ಲಾ ಮಂದಿರ ಮಾತ್ರ ನೋಡಿದ್ದು ಖರೀದಿಯೇ ಹೆಚ್ಚು. ನನ್ನ ತಂಗಿಯರಿಗೆ ಹಾಗೂ ಈಗಾಗಲೇ ನನ್ನ ಮೈದುನನಿಗೆ ಮದುವೆಯಾಗಿ ನಾನು ಓರಗಿತ್ತಿಗೆ ಸೀರೆ ತೆಗೆದುಕೊಂಡಿದ್ದೆ ನನ್ನ ನಾದಿನಿ ಮೂರು ಜನರಿಗೂ ಹೈದರಾಬಾದ್ ಸರಗಳು. ತುಂಬಾ ಖುಶಿ ಕೊಟ್ಟ ಪ್ರವಾಸ ಅದು.(ಮುಂದುವರೆಯುವುದು) ಸುಜಾತಾ ರವೀಶ್ಮೈಸೂರು
ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ.
ಪುಸ್ತಕ ಸಂಗಾತಿ ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ ಯುವ ಜನತೆಯಲ್ಲಿ ಮೂಡಲಿ ರಾಷ್ಟ್ರೀಯತೆಯ ಭಾವನೆ* -ಶರಣಬಸಪ್ಪಾ ದೇಶಮುಖ*ಔರಾದ* : ಪ್ರತಿಯೊಬ್ಬ ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಯಬೇಕಾಗಿದೆ. ದೇಶದ ಅಭಿವೃದ್ಧಿಯಾಗಬೇಕು ಎಂದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಯ ಜೀವನದಲ್ಲಿಯೇ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ *ರಾಷ್ಟ್ರೀಯ ಸೇವಾ ಯೋಜನೆ* ಜಾರಿಗೆ ತಂದರು. ನಾವು ಉಳಿಯಬೇಕು, ಬೆಳೆಯಬೇಕು ಅಂದರೆ ದೇಶದ ಅಭಿವೃಧ್ಧಿಯಲ್ಲಿ ನಾವೆಲ್ಲರೂ ಸಹಭಾಗಿತ್ವ ನೀಡಬೇಕೆಂದು ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಕಾರ್ಯದರ್ಶಿಗಳಾದ ಶರಣಬಸಪ್ಪಾ ದೇಶಮುಖ ಅವರು ನುಡಿದರು. ಇಂದು ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಸರಕಾರಿ ಪ್ರೌಢ ಶಾಲೆ ಯನಗುಂದಾದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ *ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ* ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದುಷ್ಚಟಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ತಾವೆಲ್ಲರೂ ಹಾಗೆ ಆಗದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು. ಶಿಬಿರವನ್ನು ಉದ್ಘಾಟಿಸಿ, ಸಾಹಿತಿ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಅವರು ರಚಿಸಿರುವ ಆಧುನಿಕ ಕಥನ ವಚನಗಳ “ಸ್ಮರಣಾಂಜಲಿ” ಕೃತಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಸದಸ್ಯರಾದ ರವೀಂದ್ರ ಮೀಸೆರವರು ಯುವಕರು ದೇಶ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿಯೇ ಎನ್.ಎಸ್.ಎಸ್ ಸಂಘಟನೆ ಹುಟ್ಟಿಕೊಂಡಿದೆ. ಅದೇ ಉದ್ದೇಶದಿಂದ ಎನ್.ಎಸ್.ಎಸ್. ಘಟಕದ ಮೂಲಕ ಶ್ರಮದಾನ, ಸ್ವಚ್ಛತಾ ಅಭಿಯಾನ, ಜನಜಾಗೃತಿ ಜಾಥಗಳು, ವಿಶೇಷ ಉಪನ್ಯಾಸಗಳು, ಜಾಗೃತಿ ಶಿಬಿರಗಳು ಹೀಗೆ ಇನ್ನೂ ಅನೇಕ ರಚನಾತ್ಮ ಚಟುವಟಿಕೆಗಳ ಮೂಲಕ ಯುವಜನರನ್ನು ಜಾಗೃತಗೊಳಿಸುವ ಕಾರ್ಯ ಎನ್.ಎಸ್.ಎಸ್.ಘಟಕಗಳು ಮಾಡುತ್ತಿವೆ ಎಂದು ತಿಳಿಸಿದರು. ಯನಗುಂದಾ ಗ್ರಾಮದ ಗಣ್ಯರಾದ ಶಿವರಾಜ ದೇಶಮುಖರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಿಸ್ತು, ಶಾಂತಿ, ಸಹಬಾಳ್ವೆ, ಸಂಘಟನೆ, ಸಾಹಿತ್ಯದ ಅಭಿರುಚಿ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ನಿರುದ್ಯೋಗ, ಭ್ರಷ್ಟಾಚಾರ, ಅನ್ಯಾಯ ಅತ್ಯಾಚಾರಗಳು ನಿಲ್ಲಬೇಕಾದರೆ ನಮ್ಮ ಯುವಕರು ಜಾಗೃತರಾದಾಗ ಮಾತ್ರ ಸಾಧ್ಯ. ದೇಶಕ್ಕಾಗಿ ನಾವೇನು ಮಾಡಬೇಕು ಎನ್ನುವುದು ತುಂಬಾ ಮುಖ್ಯ, ನಾವೆಲ್ಲರೂ ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸುತ್ತೇನೆ ಆದರೆ ನಾವು ನಮ್ಮ ಕರ್ತವ್ಯದ ಬಗ್ಗೆಯು ಆಲೋಚಿಸಬೇಕು ಅಂದಾಗಲೇ ಮಾತ್ರ ನಾವು ನಮ್ಮ ದೇಶವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಲು ಸಾಧ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ *ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ* ಜಂಟಿ ಕಾರ್ಯದರ್ಶಿ ಧನರಾಜ ತಾಂಡುರೆ, ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ, ಯನಗುಂದಾ ಗ್ರಾಮದ ಪ್ರಮುಖರಾದ ಗುರಯ್ಯ ಸ್ವಾಮಿ, ಗೋಪಾಲರಡ್ಡಿ ಬರ್ಯೆ, ಜಗದೀಶ ಪಾಟೀಲ್, ಬಸವರಾಜ ದೇಶಮುಖ, ಕೃಷ್ಣಾ, ಹಾಗೂ ಎನ್.ಎಸ್.ಎಸ್. ಅಧಿಕಾರಿ ಉತ್ತಮ ದಂಢೆ, ಶಿಕ್ಷಕರಾದ ಖುರಮ್ ಮರ್ತುಜಾ, ಮಲ್ಲಿಕಾರ್ಜುನ ಟಂಕಸಾಲೆ, ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ಉತ್ತಮ ಜಾದವ, ಕಪೀಲ ಡೋಣಗಾವೆ, ತುಳಸಿರಾಮ ಮಾನೆ, ಮಲ್ಲಿಕಾರ್ಜುನ ಭಾಲ್ಕೆ, ಶಿವರಾಮ ರಾಠೋಡ, ಶೇಖ್ ಮುಜಿಬ್, ಪ್ರೀಯಾ ಸದಾಫುಲೆ, ಆರತಿ ನೌಬಾದೆ, ಸಿಕಂದರ ಚವ್ಹಾಣ, ನಿರ್ಮಲಾ ಶಿವಪೂಜೆ, ರಾಜಲಕ್ಷ್ಮಿಕಾಂತಹಾಗೂ ಶಿಬಿರಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಉತ್ತಮ ಜಾಧವ ನಿರೂಪಿಸಿದರು. ಎನ್. ಎಸ್.ಎಸ್. ಅಧಿಕಾರಿಗಳಾದ ಉತ್ತಮ ದಂಡೆ ಅವರು ವಂದಿಸಿದರು.
ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ”
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಒಂಟಿತನಕೆ ಆಸರೆ” ಒಂಟಿ ಹೃದಯದ ಮೂಲೆಮೂಲೆಯಲಿ ಕತ್ತಲು ಕವಿದಾಗ ಯಾರೋ ಸಣ್ಣ ದೀಪ ಹಚ್ಚಿದ ಭಾವ ಆಸರೆಯಾಗಿ ಬರುವುದು ನೋಡಾಗ ಕಣ್ಣೀರ ಹನಿಯ ಜೊತೆ ಮಾತನಾಡುವ ಗಾಳಿಯ ಸ್ಪರ್ಶವೇ ಸಾಂತ್ವನ ಮೌನದ ನಡುವೆ ಬೆಳಕು ಹರಡುವ ಭರವಸೆಯದೇ ಒಂದು ಬಂಧನ ನೀ ಒಂಟಿಯಲ್ಲ, ಜಗವೇ ಜೊತೆಯಿದೆ ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ ನಿನ್ನ ನೋವಿಗೂ ಒಂದು ಅರ್ಥವಿದೆ ಬದುಕು ಚಿಗುರುವುದು ವಸಂತ ನಿನಗಾಗಿ ಕಾಲ ನೋವನ್ನು ಮಾಯಿಸುವ ಮಂತ್ರ ನಾಳೆಯೆಂಬ ಕನಸೇ ಆಸರೆ ಎದ್ದು ನಿಂತರೆ ಸಾಕು ಗೆಳತಿ ಒಂಟಿತನವೂ ತಾನೆ ದೂರ ಸರಿವ ಕರೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ” Read Post »
ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ”
ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಖುಷಿಯ ಆಸ್ತಿ” ಖುಷಿ ಮರೀಚಿಕೆಯಲ್ಲಮನಸು ಮರುಳುಗಾಡಲ್ಲ ಪುಟ್ಟಪುಟ್ಟ ಆಸೆಗಳುದೊಡ್ಡ ದೊಡ್ಡ ನಿರಾಸೆಗಳುಮಜಲುಗಳುಎಲ್ಲಾ ಗೋಜಲುಗಳ ಕುಸ್ತಿ ಈ ದಿನ ರವಿ ಪೂರ್ವದಲ್ಲಿರುವುದಕ್ಕೆ ಖುಷಿಯಾಗಿರು,ಈ ದಿನವೂ ಸಾಗರದಲ್ಲಿಉಬ್ಬರವಿಳಿತ ಕಂಡು ನಿಬ್ಬೆರಗಾಗು. ಇರುವ ಭಕ್ತಿ ಮೆರೆಸಲೂ ಖುಶಿಇಲ್ಲದಿರುವ ಆಸ್ತಿ ಮರೆಯಲೂ ಖುಶಿ ಖುಶಿ ಇರುವಷ್ಟಕ್ಕೆ ತೃಪ್ತಿಇಲ್ಲದಾಗಿದ್ದಷ್ಟಕ್ಕೆ ಖುಷಿಹುಟ್ಟಿದ್ದಕ್ಕೆ, ಇರುವಷ್ಟನ್ನೇ ಅನುಭವಿಸಿದ್ದಕ್ಕೆ,ಖುಷಿಯಾಗಿರು ಸದಾ. ಮುಷ್ಟಿಯಲ್ಲಿ, ಮನಸಲ್ಲಿಉಳಿದಷ್ಟಕ್ಕೆ ತೃಪ್ತಿಕನಸಲ್ಲಿ ಕಂಡದ್ದಕ್ಕೂ ತೃಪ್ತಿನನಸಲ್ಲಿಹೊಂದಿದ್ದಕ್ಕೂ ತೃಪ್ತಿ ತೃಪ್ತಿಯೇ ಖುಷಿಯ ಆಸ್ತಿ ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ” Read Post »
ಡಾ.ರೇಖಾ ಉದಯ್ ಅವರ ಗಜಲ್
ಕಾವ್ಯ ಸಂಗಾತಿ ಡಾ.ರೇಖಾ ಉದಯ್ ಗಜಲ್ ನಿನ್ನೊಳಗಿನ ಸೆಳೆತಕ್ಕೆ ಸೋತಿದ್ದೇನೆ ಕವಿತೆನನ್ನೊಳಗಿನ ಭಾವನೆಗಳ ಹೇಳಿದ್ದೇನೆ ಕವಿತೆ ಸೋತು ಗೆದ್ದು ನನ್ನೊಳಗೆ ನೀನಾಗಿದ್ದೀಯಲ್ಲೇನಿನ್ನಿಂದ ನವೀರಾದ ಭಾವ ತಾಳಿದ್ದೇನೆ ಕವಿತೆ ದುಗುಡ ದುಮ್ಮಾನಗಳ ಸರಸಿ ಆವರಿಸಿದ್ದಿಯಲ್ಲೇನೀನಿಲ್ಲದ ನಾನು ಶೂನ್ಯಳೆಂದು ಕೇಳಿದ್ದೇನೆ ಕವಿತೆ ಮುದುಡಿದ ಮನಸ್ಸಿಗೆ ಹೊಸ ಸಂಚಲನ ಮೂಡಿಸಿದೆನನ್ನಲ್ಲಿ ತಿಳಿಯದೆ ನೀ ಅವಿತದ್ದು ನೋಡಿದ್ದೇನೆ ಕವಿತೆ ಒಣಗಿದ ಮರದಲ್ಲಿ ಹೊಸ ಚಿಗುರ ಕಂಡಂತಾಗಿದೆರೇಖೂಳ ಮೇಲಿರುವ ಆ ಒಲವಿಗೆ ನಕ್ಕಿದ್ದೇನೆ ಕವಿತೆ ಡಾ.ರೇಖಾ ಉದಯ್
ಡಾ.ರೇಖಾ ಉದಯ್ ಅವರ ಗಜಲ್ Read Post »
ಸುನಂದ ಅರುಣ್ ಕುಮಾರ್ ಗೋಸಿ ಅವರಿಂದ”ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಗೊರೂರು ಅನಂತರಾಜು
ವಚನ ಸಂಗಾತಿ ಗೊರೂರು ಅನಂತರಾಜು ಸುನಂದ ಅರುಣ್ ಕುಮಾರ್ ಗೋಸಿ “ದೇವರ ದಾಸಿಮಯ್ಯ ಅವರ ವಚನಗಳ ಪ್ರಸಾರ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ” ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿ ಅವರು ಆದ್ಯ ವಚನಕಾರ ದೇವರ ದಾಸಿಮಯ್ಯನವರ ಎಲ್ಲಾ 176 ವಚನಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಹಾಡಿಸಿ ಭಾವಾಥ೯ ಸಹಿತ ದೃಶ್ಯಿಕರಿಸಿ ಯೂ ಟ್ಯೂಬ್ ನಲ್ಲಿ ಹಾಕಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಶ್ರೀಮತಿ ಸುನಂದ ಅರುಣ್ ಕುಮಾರ್ ಗೋಸಿಯವರ ತಂದೆ ಶೇಷಾದ್ರಿ ಮತ್ತು ತಾಯಿ ಕಮಲಮ್ಮನವರು. ಇವರು ಬೆಂಗಳೂರಿನ ನಿವಾಸಿಗಳಾಗಿದ್ದು, ಪತಿ ಅರುಣ್ ಕುಮಾರ್ ರವರು ಇಂಜಿನಿಯರಿಂಗ್ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಆಕಾಶ್, ಮಹೇಶ್, ಸೊಸೆ ಐಶ್ವರ್ಯ, ಸ್ನಾತಕೋತ್ತರ ಪದವಿ ಮುಗಿಸಿ, ಮೊಮ್ಮಗ ಆವಿಯನ್ ಅಮೇರಿಕದಲ್ಲಿ ನೆಲಿಸಿದ್ದಾರೆ. ಇವರು ಸಮಾಜದ ಕಳಕಳಿಯುಳ್ಳವರಾಗಿ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜದ ಏಳಿಗೆಯ ಸದುದ್ದೇಶದಿಂದ ದೇವಾಂಗ ಇತಿಹಾಸವನ್ನು ಸಂಗ್ರಹಿಸಿ, ತಾವೇ ನಿರ್ಮಿಸಿದ ಗೋಸಿ ಯೂನಿವರ್ಸ ( Gosi Universe ) ಎಂಬ ಅಂತರ್ಜಾಲ ತಾಣದಿಂದ (Website) ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ದೇವಲ ಮಹರ್ಷಿ ಹಾಗು ದಾಸಿಮಯ್ಯನವರ ಜೀವನ ಚರಿತ್ರೆಯನ್ನು ವಿಕಿಪೀಡಿಯದಲ್ಲಿ ದಾಖಲಿಸಿದ್ದಾರೆ.ವಚನ ಸಾಹಿತ್ಯಕ್ಕೆ ಭದ್ರಬುನಾದಿಯನ್ನು ಹಾಕಿ ಬಸವಾದಿ ಪ್ರಮಥರಿಗೆ ಮಾರ್ಗದರ್ಶನ ಮಾಡಿದ ಆದ್ಯ ವಚನಕಾರ, ವಚನ ಬ್ರಹ್ಮ , ಶ್ರೀ ದೇವರ ದಾಸಿಮಯ್ಯನವರು ರಚಿಸಿರುವ ಎಲ್ಲಾ 176 ವಚನಗಳನ್ನು ರಾಗ ಸಂಯೋಜನೆ ಮಾಡಿಸಿ, ಮೊಟ್ಟಮೊದಲ ಬಾರಿಗೆ “ವಚನ ಬ್ರಹ್ಮನ ವಚನಾಮೃತ” ಎಂಬ ನಾಮದಿಂದ, ವಚನ, ಗಾಯನ, ಮತ್ತು ಭಾವಾರ್ಥ ಸಹಿತ ದೃಶ್ಯೀಕರಿಸಿ, ಸಾಹಿತ್ಯ ಲೋಕ ಹಾಗೂ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಲೋಕ ಕಲ್ಯಾಣಾರ್ಥಕ್ಕಾಗಿ ನಿರ್ಮಿಸಿದ ಈ ಮಹತ್ಕಾರ್ಯವನ್ನು ಗುರುತಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅವರು ದಾಖಲಿಸಿ ಸನ್ಮಾನಿಸಿದ್ದಾರೆ.ಇದರ ಸಂಪೂರ್ಣ ನಿರ್ದೇಶನ ಹಾಗೂ ನಿರ್ಮಾಣವನ್ನು, ಅವರ ಕುಟುಂಬದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಿ.ಈ ಎಲ್ಲಾ ವಚನಗಳನ್ನು ನಿರಂತರವಾಗಿ ವೀಕ್ಷಿಸಲು, Gosi Universe, You tube Channel ನಲ್ಲಿ ಪ್ರಸಾರ ಮಾಡಿರುತ್ತಾರೆ. ಹಾಗು ಮೊಟ್ಟ ಮೊದಲ ಬಾರಿಗೆ ದಾಸಿಮಯ್ಯ ವಚನಗಳನ್ನು, ದೂರದರ್ಶನ ಚಂದನ ವಾಹಿನಿಯಲ್ಲಿ ಕೂಡ ಪ್ರಸಾರ ಮಾಡಿಸಿರುತ್ತಾರೆ. ಇವರ ಈ ಮಹತ್ಕಾರ್ಯವನ್ನು ಗುರುತಿಸಿ ಹಲವಾರು ಸಂಘ – ಸಂಸ್ಥೆಗಳು ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿವೆ. ಮೇಡಂ ಕುಟುಂಬದ ಈ ಮಹತ್ಕಾರ್ಯ ಸಮಾಜ ಮೆಚ್ಚುವಂತಹದ್ದಾಗಿದೆ. ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ – 573 201
ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?”
ಕಾವ್ಯ ಸಂಗಾತಿ ಮೂಗಪ್ಪ ಗಾಳೇರ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” ಬಿದ್ದ ವೈರಿಗಳನ್ನಷ್ಟೇ ಅಲ್ಲಬದ್ಧ ವೈರಿಗಳಿಗೂ ಬೆಚ್ಚಿ ಬೀಳಿಸಿದ್ದ ಬುದ್ಧಮಾಡಿದ್ದು ರಕ್ತ ಹರಿಸುವ ಯುದ್ಧವನಲ್ಲಪ್ರೀತಿ ತುಂಬಿ ಸ್ನೇಹ ಬೆಳೆಸುವ ಧರ್ಮದ ನಡಿಗೆ ಬುದ್ಧ ನಡೆದ ಹಾದಿ ಉದ್ದಗಲಕ್ಕೂ ಜನಸಸಾಗರವೋ ಜನಸಾಗರನಿಮ್ಮ ಯುದ್ಧದ ಪಿರಿಂಗಿಗಳುಆಕಾಶದೆತ್ತರಕ್ಕೆ ಚಿಮ್ಮುತ್ತ ಬೆಂಕಿಯ ಕೆಂಡವನ್ನು ಉಗುಳುತಿದ್ದರೆಬುಧ್ದನ ಉಪದೇಶಗಳುಆ ಬೆಂಕಿಯ ಕೆಂಡದಲ್ಲಿ ಶಾಂತಿಯ ತೋಟವನ್ನು ಸೃಷ್ಟಿಸುತ್ತಿವೆ ಯುದ್ಧ ಗೆದ್ದಿತು ಎನ್ನುವುದಕ್ಕೆನಿಮ್ಮ ಪಿರಿಂಗಿಯ ಮದ್ದು ಗುಂಡುಗಳು ಹರಿಸಿದ ರಕ್ತದ ಚರಿತ್ರೆಗೆಸಡ್ಡು ಹೊಡೆದು ನಿಂತಿದ್ದುಮುಗಿಲೆತ್ತರಕ್ಕೂ ಚಿಮ್ಮಿ ಶಾಂತಿ ಮಳೆ ಸುರಿಸಿದ್ದುನನ್ನ ಬುದ್ಧನ ಮೌನ ಮತ್ತು ಅಹಿಂಸೆ ಅಗೋ ಅಲ್ಲೋಡಿನನ್ನ ಬುದ್ಧನ ಮೌನದ ಮಳೆಗೆನಿಮ್ಮ ಪಿರಂಗಿಯ ಅವಶೇಷಗಳುಸುಟ್ಟ ಇಟ್ಟಿಗೆಗಳಾಗಿವೆಹೆದರ ಬೇಡಿ ಅವುಗಳಿಗೆ ಒಂದಿಷ್ಟುಬುದ್ಧನ ನಾಲ್ಕು ಆರ್ಯ ಸತ್ಯಗಳನ್ನ ಲೇಪಿಸಿದರೆಮತ್ತೆ ಆಕಾಶದೆತ್ತರಕ್ಕೆ ನಿಮ್ಮ ಪಿರಿಂಗಿಗಳು ಸಿಡಿಯಬಹುದುಆಗ ಸಿಡಿಯುವ ಪಿರಿಂಗಿಗಳಿಂದ ಸುರಿಯುವುದು ಬೆಂಕಿ ಉಂಡೆಯಲ್ಲನನ್ನ ಬುದ್ಧನ ಶಾಂತಿ ಮತ್ತು ಅಹಿಂಸೆಯ ಮಳೆಆಗ ಯುದ್ಧದಲ್ಲಿ ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….? ಮೂಗಪ್ಪ ಗಾಳೇರ
ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” Read Post »
ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ”
ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಮಣ್ಣಿಗೆ ಭೇದವಿಲ್ಲ” ಊರ ಬಿಟ್ಟು ದೂರಾಚೆ ಹಾಳು ಸುಡುಗಾಡಂತೆಅದ್ಯಾಕೋ ಯಾರಿಗೂ ಇಷ್ಟವಲ್ಲದ ಜಾಗವಂತೆಇಲ್ಲ್ಯಾರಿಗೂ ಯಾವುದೇ ಭೇದವಿಲ್ಲವಂತೆಹಾಸಿ ಹೊದ್ದಿಕೊಳ್ಳಲಿರುವುದೊಂದೆ ಮಣ್ಣಿನ ಮುದ್ದೆಯಂತೆ ಮನುಷ್ಯನ ಎಲ್ಲದಕ್ಕೂ ಪೂರ್ಣವಿರಾಮ ಇಲ್ಲಿಇದ್ದಾಗ ನಾನೇ ಎನ್ನುವ ಭರದಲ್ಲಿಬೀದಿಯು ನಮ್ಮದಲ್ಲ ಎನ್ನುತ ಉಗಿಯುವನಲ್ಲಿನಾನು ನನ್ನದೆನ್ನುವ ಸ್ವಾರ್ಥದ ವ್ಯಾಮೋಹದಲ್ಲಿ. ನಶ್ವರ ಕಾಯವ ಕಾಯಕಕ್ಕಾಗಿ ಮೀಸಲಿಡುಪರೋಪಕಾರಾರ್ಥಂ ಇದಂ ಶರೀರಂ ಮರೆಯದಿರುಸಮಾಜದ ಉಪಯೋಗಕ್ಕಾಗಿ ಜೀವಿಸಿ ನೋಡುಕಾಯಕದಲ್ಲೇ ಕೈಲಾಸವ ಕಾಣುತಿರು. ಪ್ರತಿಫಲ ಬಯಸದೆ ಸೇವೆಯ ಮಾಡುತಿರುಕಂಗಳ ಕೊಡದಿದ್ದರೂ ಅನ್ಯರ ಕಣ್ಗಳ ಕೀಳದಿರುನಡೆಸಲಾಗದಿದ್ದರೂ ಬೆಳಕಿನ ಮಾರ್ಗ ತೋರಿಸುಜೊತೆ ನಡೆಯಲಾಗದಿದ್ದರೂ ಎಡರು ತೊಡರಾಗದಿರು. ದೇಹವ ನಂಬಿ ಬದುಕು ನಡೆಸುವ ಮನುಜನುಮಣ್ಣಲಿ ಮಣ್ಣಾಗುವ ಮುನ್ನ ನಾಲ್ವರ ಬಾಯಲ್ಲಿರು ನೀನುಅಳಿಯದೆ ಉಳಿಯುವವು ಮಾನವೀಯ ಮೌಲ್ಯಗಳಲ್ಲವೇನು!ಸತ್ಯದ ಮಾರ್ಗದೊಳು ನಡೆ ಅರಿತು ನೈಜತೆಯನು. ಕಲ್ಪನಾ ಎಸ್ ಪಾಟೀಲ
ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ” Read Post »
ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಎದೆಗಡಲನು ಮಥಿಸಿ ಪಡೆದಿಹ ಅಮೃತವದು ಪ್ರೀತಿಭಾವದಲೆಯು ದಡವ ಸೇರಿದ ಸಂಗಮವದು ಪ್ರೀತಿ ತೋರಿಕೆಗೆ ತಳೆದ ಹೂ ಹೇರಿಕೆಗೆ ಹಬ್ಬಿದ ಬಳ್ಳಿಯಲ್ಲನೆಲ ಮುಗಿಲುಗಳ ನೆಚ್ಚಿ ಬಿರಿದ ಕುಸುಮವದು ಪ್ರೀತಿ ಅಹಮಿಕೆಯ ಅರಿವಿಲ್ಲ ಸಂಶಯಗಳ ಸುಳಿವೆನಿತಿಲ್ಲಗುಡಿಸಲನೇ ಗುಡಿಯ ಮಾಡಿದ ಪವಾಡವದು ಪ್ರೀತಿ ಹೆಚ್ಚು ಕಡಿಮೆ ಎಂಬ ಗಡಿಗಳಿಲ್ಲ ಗಡಿಬಿಡಿಯೂ ಇಲ್ಲಆಡಂಬರಕಾತುಕೊಳ್ಳದ ಸುಗ್ಗಿ ಸಂಭ್ರಮವದು ಪ್ರೀತಿ ಈ ಒಲವ ಜನನಕೆ ಮಹೂರ್ತ ಘಳಿಗೆಗಳು ಬೇಕಿಲ್ಲಬೆಸೆದ ಮನಗಳಂಗಳದ ನಿತ್ಯದ ಉತ್ಸವವದು ಪ್ರೀತಿ ಎಮ್ಮಾರ್ಕೆ
ಎಮ್ಮಾರ್ಕೆ ಅವರ ಗಜಲ್ Read Post »
ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು
ಅನುವಾದ ಸಂಗಾತಿ “ಜಲಭಾಷೆ” ತೆಲುಗು ಮೂಲ:ಡಾ. ದೇವರಾಜು ಮಹಾರಾಜು ಕನ್ನಡಾನುವಾದ ರಂಗನಾಥ ರಾಮಚಂದ್ರರಾವು ಕವನ ಒಂದು ಪ್ರತ್ಯೇಕ ಪರಿಭಾಷೆಅದು ಎಲ್ಲಾ ಭಾಷೆಗಳಿಗೂ ಬಗ್ಗುತ್ತದೆಎಲ್ಲಾ ಭಾಷೆಗಳನ್ನು ಬಗ್ಗಿಸಿಕೊಳ್ಳುತ್ತದೆತಲೆ ಬಗ್ಗಿಸಿದಂತೆ ಬಗ್ಗಿಸಿ, ಎಲ್ಲಾ ಪ್ರಕಾರಗಳನ್ನುತನ್ನ ರೆಕ್ಕೆಗಳ ಕೆಳಗೆ ಎಳೆದುಕೊಳ್ಳುತ್ತದೆಕಾಲದೊಂದಿಗೆ ಸಾಗುತ್ತಾಒಂದೊಂದು ಸಲ ಕಾಲವನ್ನೂ ದಾಟಿಹೋಗುತ್ತದೆಕವನ ಒಂದು ಜಲ ಭಾಷೆಅದು ಯಾವ ಪಾತ್ರೆಯಲ್ಲಾದರೂ ತುಂಬುತ್ತದೆ –ಒದಗುತ್ತದೆ ಕವನ ಒಂದು IDEOGRAMಅದು ಛಂದಸ್ಸಿನಲ್ಲಿ ಬದುಕುವುದೇಮಾತ್ರಾ ಛಂದಸ್ಸಿನಲ್ಲಿ ಬದುಕುವುದೇವಚನದಲ್ಲಿ ಬದುಕುತ್ತದೆ ಎಂಬ ಚರ್ಚೆಎಷ್ಟು ಅರ್ಥರಹಿತವೆಂದರೆ …ಜೀವವು ಯಾವ ರೀತಿಯ ಜೀವಿಯಾಗಿ ನಿಲ್ಲುತ್ತದೆಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ , ಆದರೆ …ನಿರಂತರವಾಗಿ ಮುಂದುವರಿಯುವುದು ಜೀವಶಕ್ತಿ ಮಾತ್ರವೇ!ಪ್ರಕಾರಗಳೂ ಅಷ್ಟೇ !!ಅಂತರ್ಗತವಾಗಿ ಸಾಗುವುದು ಕವನಶಕ್ತಿ ಮಾತ್ರವೇ!ಅದೊಂದೇ ಕಾಲಕ್ಕೂ ಜೀವನಕ್ಕೂ ಮಾನವತೆಗೂತಳಮಟ್ಟದಲ್ಲಿ ಹರಿಯುವುದುಆಧಾರವಾಗಿ ಇರುತ್ತಿರುವುದುಕವನ ಒಂದು ಫ್ರತ್ಯೇಕ ಭಾಷೆಅದು ಎಲ್ಲಾ ಜೀವಿಗಳ ಜೀವ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತದೆ ! ತೆಲುಗುಮೂಲ: ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು
ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »









