ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಧ್ಯಾಯ -76

ಸಂತೆಯಿಂದ ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ತುಂಬಿ ತುಳುಕುತ್ತಿದ್ದ ಬಸ್ ನಲ್ಲಿ ಹೇಗೋ ಹತ್ತಿ ಪ್ರಯಾಣ ಬೆಳೆಸಿದಳು. ತಾನು ಇಳಿಯುವ ನಿಲ್ದಾಣ ಬಂದಾಗ ಕತ್ತಲೆಯಾಗುತ್ತಾ ಬಂದಿತ್ತು. ಬಸ್ಸು ನಿಂತ ಕೂಡಲೇ ಇಳಿದು ತಾನು ಖರೀದಿ ಮಾಡಿದ್ದ ಸಾಮಾಗ್ರಿಗಳನ್ನು ತಲೆಯ ಮೇಲೆ ಹೊತ್ತು ಇಳಿಜಾರಿನಿಂದ ಕೂಡಿದ ರಸ್ತೆಯಲ್ಲಿ ನಿಧಾನವಾಗಿ ನಡೆದಳು. ಮುಂದೆ ನಡೆಯುತ್ತಾ ಹೋದಂತೆ ಕತ್ತಲೆ ಆವರಿಸಿತು. ದಾರಿಯ ಎರಡೂ ಕಡೆ ಕಾಫಿ ಗಿಡಗಳು ಹಾಗೂ ಹಲವಾರು ಜಾತಿಯ ದೊಡ್ಡ ಮರಗಳು ಇದ್ದವು. ಹಾಗಾಗಿ ದಾರಿ ಇನ್ನೂ ಹೆಚ್ಚು ಕತ್ತಲಾಗಿ ಕಾಣುತ್ತಿತ್ತು. ಸುಮಾರು ಮೂರು ಕಿಲೋಮೀಟರುಗಳಷ್ಟು ದೂರದ ದಾರಿ ನಿರ್ಜನವಾಗಿತ್ತು. ಸ್ವಲ್ಪ ದೂರದವರೆಗೆ ಒಬ್ಬರೋ ಇಬ್ಬರೋ ದಾರಿಹೋಕರು ಇದ್ದರು. ನಂತರದ ದಾರಿ ತೀರಾ ಕತ್ತಲು ಹಾಗೂ ನಿರ್ಜನವಾಗಿರುತ್ತಿತ್ತು. ಮಣ್ಣಿನ ರಸ್ತೆಯಲ್ಲಿ ದಾರಿದೀಪಗಳೂ ಇರಲಿಲ್ಲ. ನಡೆದು ಅಭ್ಯಾಸವಾದ ದಾರಿಯಾದ್ದರಿಂದ ಹೇಗೋ ತಡವರಿಸಿ ಮುಂದೆ ಸಾಗಿದಳು. ಆ ದಾರಿಯಲ್ಲಿ ವಾಹನ ಸಂಚಾರವೂ ಇರಲಿಲ್ಲ. ತೋಟದ ಮಾಲೀಕರ ಜೀಪು ಬಿಟ್ಟರೆ ಅಲ್ಲಿ ಬೇರೆ ಯಾವ ವಾಹನವೂ ಬರುತ್ತಿರಲಿಲ್ಲ. ಕಾಡು ಪ್ರಾಣಿಗಳಿಗಿಂತ ಅವಳು ಭಯ ಪಡುತ್ತಿದ್ದದ್ದು ದಾರಿ ಹೋಕ ಅಪರಿಚಿತರನ್ನು. ಯಾರಾದರೂ ತನಗೆ ಏನಾದರೂ ತೊಂದರೆ ಮಾಡಿದರೆ ಎನ್ನುವ ಭಯ ಸದಾ ಅವಳನ್ನು ಕಾಡುತ್ತಲೇ ಇರುತ್ತಿತ್ತು. ತಾನು ಒಂಟಿ ಹೆಂಗಸು ಯಾರಾದರೂ ತೊಂದರೆ ಕೊಟ್ಟರೂ ಅವರ ವಿರುದ್ಧ ಸೆಣಸುವ ಶಕ್ತಿಯೂ ತನಗಿಲ್ಲ!! ಯಾವ ಆಪತ್ತೂ ತನಗೂ ಮಕ್ಕಳಿಗೂ ಬಾರದಿರಲಿ ಎಂದು ಶ್ರೀಕೃಷ್ಣನಿಗೆ ಮೊರೆಯಿಡುವಳು. ಜೀವವನ್ನು ಕೈಲಿ ಹಿಡಿದುಕೊಂಡೇ ಕತ್ತಲಲ್ಲಿ ಅಷ್ಟು ದೂರದ ದಾರಿ ಕ್ರಮಿಸಿ ಮನೆ ತಲುಪುತ್ತಿದ್ದಳು.

 ಆದರೆ ಇಂದು ಮನದ ತುಂಬಾ ತನ್ನ ಅನಾರೋಗ್ಯದ ಬಗ್ಗೆಯೇ ಚಿಂತಿಸುತ್ತಾ ವೈದ್ಯರು ನೀಡಿದ ಸೂಚನೆಗಳನ್ನು ಮೆಲುಕು ಹಾಕುತ್ತಾ ಬಂದವಳಿಗೆ ಮನೆ ಸಮಿಸಿದ್ದೇ ತಿಳಿಯಲಿಲ್ಲ. ಅಮ್ಮನ ಬರವನ್ನೇ ಕಾಯುತ್ತಾ ಕುಳಿತಿದ್ದ ಮಕ್ಕಳಿಗೆ ಹೆಜ್ಜೆಯ ಸಪ್ಪಳದಿಂದ ಅಮ್ಮ ಬಂದಿದ್ದು ತಿಳಿಯಿತು. ಹಿರಿಯ ಮಗಳು ಬಾಗಿಲು ತೆರೆದಾಗ ಅವಳ ಕೈಲಿ ತಾನು ಹೊತ್ತಿದ್ದ ಸಾಮಾಗ್ರಿಗಳ ಮೂಟೆಯನ್ನು ಕೊಟ್ಟಳು. ಮನೆಯ ಜಗುಲಿಯಲ್ಲಿ ಕುಳಿತಳು….” ಮಗಳೇ ಅಮ್ಮನಿಗೆ ಆಯಾಸವಾಗಿದೆ…ಕುಡಿಯಲು ಸ್ವಲ್ಪ ನೀರನ್ನು ಕೊಡು”… ಎಂದು ಕೇಳಿದಳು. ಮಗಳು ನೀರು ತಂದು ಕೊಟ್ಟ ಕೂಡಲೇ ಗಟಗಟನೆ ಒಂದೇ ಬಾರಿಗೆ ಚೆಂಬು ಖಾಲಿ ಮಾಡಿದಳು. ಕೆಲವು ನಿಮಿಷಗಳ ಕಾಲ ಅಲ್ಲೇ ಕುಳಿತಿದ್ದು ಸ್ವಲ್ಪ ಸುಧಾರಿಸಿಕೊಂಡ ನಂತರ ಎದ್ದು ಒಳಗೆ ಬಂದಳು. ಹಿರಿಯ ಮಗಳು ಅದಾಗಲೇ ಮನೆಯಲ್ಲಿ ಇದ್ದ ಸಾಮಾಗ್ರಿಗಳಿಂದಲೇ ಅಡುಗೆ ತಯಾರಿ ಮಾಡಿದ್ದಳು. ಸುಮತಿ ಕೈ ಕಾಲು ಮುಖ ತೊಳೆದು ದೇವರಿಗೆ ದೀಪ ಹಚ್ಚಿ ಕೈ ಮುಗಿದು ನಿಂತಳು. ಶ್ರೀ ಕೃಷ್ಣನ ಮುಂದೆ ಕಣ್ಣುಮುಚ್ಚಿ ನಿಂತೊಡನೇ ಅವಳು ಬೆಳಗ್ಗಿನಿಂದ ತಡೆ ಹಿಡಿದಿದ್ದ ದುಃಖದ ಕಟ್ಟೆ ಒಡೆಯಿತು. ಮೌನವಾಗಿ ಕೆಲವು ನಿಮಿಷಗಳ ಕಾಲ ಹಾಗೇ ನಿಂತಳು. ಕಿರಿಯ ಮಗಳು ಬಂದು…”ಅಮ್ಮಾ”… ಎಂದು ಕೂಗುತ್ತಾ ಓಡಿ ಬಂದು ಅವಳನ್ನು ಅಪ್ಪಿದಾಗ ಅಳು ನಿಲ್ಲಿಸಿ ಮಗಳನ್ನು ಎತ್ತಿಕೊಂಡು…”ಏನು ಮಗಳೇ”….ಎಂದು ಕೇಳಿದಳು. ಏನಿಲ್ಲ ಎಂಬಂತೆ ಆ ಮಗು ತಲೆ ಅಲ್ಲಾಡಿಸಿ ಅಮ್ಮನ ಮುಖವನ್ನೇ ನೋಡಿತು. ತಾನು ಅತ್ತಿದ್ದು ಕಾಣಬಾರದು ಎಂದು ಸೆರಗಿನಿಂದ ಕಣ್ಣುಗಳನ್ನು ಒರೆಸಿಕೊಂಡಳು. ಆಗ ಮಗು ಅಮ್ಮನ ಕೆನ್ನೆಗೆ ಮುತ್ತಿಟ್ಟು ಅಮ್ಮನ ಕುತ್ತಿಗೆಯನ್ನು ಅಪ್ಪಿಕೊಂಡಿತು. ಸುಮತಿಗೆ ಸಾಂತ್ವನ ಸಿಕ್ಕಷ್ಟು ಖುಷಿಯಾಯಿತು. ಹಿರಿಯ ಮಗಳು ಮಾಡಿದ ಅಡುಗೆಯನ್ನು ಬಡಿಸಿ ಮಕ್ಕಳಿಗೆ ಕೊಟ್ಟು ತಾನೂ ಊಟ ಮಾಡಿ ಮಲಗಿದಳು.

ಆದರೆ ನಿದ್ರೆ ಅವಳ ಬಳಿ ಸುಳಿಯಲೇ ಇಲ್ಲ. ತನ್ನ ಬಾಲ್ಯದ ಕಾಲ, ಗೆಳತಿಯರು,ಅಪ್ಪ ಅಮ್ಮ ಹಾಗೂ ತಾನು ಕಳೆದ ಸಂತಸದ ದಿನಗಳು ನೆನಪಾದವು. ನಂತರದ ತನ್ನ ಜೀವನ, ಈಗಿನ ತನ್ನ ಪರಿಸ್ಥಿತಿ ಎಲ್ಲವೂ ಚಲನಚಿತ್ರದ ಹಾಗೆ ಕಣ್ಣ ಮುಂದೆ ಹಾದು ಹೋಯಿತು. ಮಧ್ಯರಾತ್ರಿ ಕಳೆದು ಬೆಳಗಿನ ಜಾವ ಹತ್ತಿರ ಬಂದಂತೆ ಅವಳಿಗೆ ನಿದ್ರೆ ಹತ್ತಿತು. ಆದರೂ ಕೋಳಿ ಕೂಗುವ ಸಮಯಕ್ಕೆ ಎದ್ದಳು. ಸ್ನಾನ ಮುಗಿಸಿ ದೇವರಿಗೆ ದೀಪ ಹಚ್ಚಿ ದೇವರ ಸ್ತೋತ್ರಗಳನ್ನು ಹಾಡುತ್ತಾ ಅಡುಗೆ ಕೆಲಸದಲ್ಲಿ ನಿರತಳಾದಳು. ಎಂದಿನಂತೆ ಶಾಲೆಗೆ ಹೋದಳು. ಕೆಲವು ಮಕ್ಕಳು ಮಾತ್ರ ಬಂದಿದ್ದರು. ಅವರನ್ನು ಅಲ್ಲಿಯೇ ಕುಳಿತುಕೊಳ್ಳಲು ಹೇಳಿ ಕಾರ್ಮಿಕರ ಮನೆಗಳೆಡೆಗೆ ತೆರಳಿ ಅಲ್ಲಲ್ಲಿ ಅಡಗಿ ಕುಳಿತ ಮಕ್ಕಳನ್ನು ಪುಸಲಾಯಿಸಿ ಕರೆದುಕೊಂಡು ಬಂದಳು. ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ, ಕಪ್ಪು ಹಲಗೆಯ ಮೇಲೆ ಅಕ್ಷರಕ್ಕೆ ಹೊಂದುವ ಚಿತ್ರಗಳನ್ನು ಬಿಡಿಸಿ ತೋರಿಸಿ ವಿವರಿಸುತ್ತಿದ್ದಳು. ಹಾಗಾಗಿ ಮಕ್ಕಳಿಗೆ ಪಾಠ ಚೆನ್ನಾಗಿ ಅರ್ಥವಾಗುತ್ತಿತ್ತು. ಕೆಲವು ದಿನಗಳ ನಂತರ ಮಧ್ಯಾಹ್ನದ ಗೋಧಿ ಉಪ್ಪಿಟ್ಟು ಕಾರಣಾಂತರದಿಂದ ನಿಂತು ಹೋಯಿತು ಆಗ ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದ ಮಕ್ಕಳು ಕೆಲವೊಮ್ಮೆ ಶಾಲೆಗೆ ಚಕ್ಕರ್ ಹೊಡೆದು ತೋಟ ತಿರುಗಲು ಹೋಗುತ್ತಿದ್ದರು. ಅಪ್ಪಿ ತಪ್ಪಿ ತೋಟದ ರೈಟರ್ ಕಣ್ಣಿಗೆ ಬಿದ್ದಾಗ ಅವರು ಗದರಿಸಿ ಮತ್ತೊಮ್ಮೆ ಶಾಲೆಗೆ ಮಕ್ಕಳನ್ನು

ಕಳುಹಿಸುತ್ತಿದ್ದರು. ಆಗಾಗ ರೈಟರ್ ಶಾಲೆಯ ಕಡೆಗೆ ಬಂದು ಮಕ್ಕಳ ಓದಿನ ಬಗ್ಗೆ ಗಮನಿಸುತ್ತಿದ್ದರು. ಕೆಲವೊಮ್ಮೆ ಸುಮತಿಯನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಆದರೂ ಹಲವು ಬಾರಿ ಅವಳಿಗೆ ತಿಳಿಯದಂತೆ ಮರೆಯಲ್ಲಿ ನಿಂತು ಶಾಲೆಯ ಆಗು ಹೋಗುಗಳನ್ನು ಗಮನಿಸುತ್ತಿದ್ದರು. ಇದು ಯಾವುದರ ಪರಿವೆಯೂ ಇಲ್ಲದೇ ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡುತ್ತಿದ್ದಳು.

ಮಧುಮೇಹದಿಂದಾಗಿ ಅವಳಿಗೆ ಬಹಳ ಆಯಾಸ ನೀರಡಿಕೆಯಾಗುತ್ತಿತ್ತು. ಕೆಲವೊಮ್ಮೆ ಕುರ್ಚಿಯಲ್ಲಿ ಕುಳಿತಾಗ ಮಂಪರು ಅವಳನ್ನು ಆವರಿಸಿ ಬಿಡುತ್ತಿತ್ತು. ಹಾಗೆ ಒಮ್ಮೆ ಕುರ್ಚಿಯಲ್ಲಿ ಕಣ್ಣು ಮುಚ್ಚಿ ಕುಳಿತಾಗ ರೈಟರ್ ತಮ್ಮ ಮುಂದೆ ಬಂದು ನಿಂತಿದ್ದು ಅವಳಿಗೆ ತಿಳಿಯಲೇ ಇಲ್ಲ. ಶಾಲೆಗೆ ಬರುತ್ತಿದ್ದ ಸಣ್ಣ ಹುಡುಗನೊಬ್ಬ ಮೆಲ್ಲಗೆ  ಹತ್ತಿರ ಬಂದು…” ಟೀಚರೆ”….ಎಂದು ಕರೆದಾಗ ದಡಬಡಿಸಿ ಎದ್ದಳು. ಎದುರಿಗೆ ನೋಡಿದರೆ ತೋಟದ ರೈಟರ್ ನಿಂತಿದ್ದರು….”ಏನು ಸುಮತಿಯವರೆ? ಶಾಲೆಯ ವೇಳೆಯಲ್ಲಿ ನೀವು ಹೀಗೆ ಕುಳಿತು ನಿದ್ರೆ ಮಾಡಿದರೆ ಹೇಗೆ?”…. ಎಂದಾಗ ತನ್ನ ಕೈಯಲ್ಲಿ ಕಟ್ಟಿದ್ದ ಗಡಿಯಾರದ ಕಡೆಗೆ ನೋಡಿದಳು ಆಗಿನ್ನೂ ಒಂದೂ ಮುಕ್ಕಾಲು ಗಂಟೆಯಾಗಿತ್ತು. ಎದ್ದು ನಿಂತು ಗೌರವ ಪೂರ್ವಕವಾಗಿ ಅವರಿಗೆ ವಂದಿಸುತ್ತಾ….” ಸರ್ ಎರಡು ಗಂಟೆಗೆ ಶಾಲೆ ಪುನರಾರಂಭ…. ಈಗಿನ್ನೂ ಊಟ ಮಾಡಿ ಮಕ್ಕಳು ಬಂದಿದ್ದಾರಷ್ಟೇ….ಸ್ವಲ್ಪ ಅಯಾಸವಾಗಿತ್ತು ಹಾಗಾಗಿ ಕಣ್ಣು ಮುಚ್ಚಿ ಕುಳಿತೆ ಎಂದಳು ಸುಮತಿ….”ಹೂಂ” ಎಂದಷ್ಟೇ ಹೇಳಿ ಅವರು ಹೊರಟು ಹೋದರು. ಆದರೆ ಸುಮತಿಗೆ ಒಳಗೊಳಗೇ ಭಯ. ಎಲ್ಲಿ ತನ್ನ ಬಗ್ಗೆ ಏನಾದರೂ ಮಾಲೀಕರಿಗೆ ಹೇಳಿದರೆ? ಆದರೂ ತಾನು ಪಾಠದ ಅವಧಿಯಲ್ಲಿ ನಿದ್ರೆ ಮಾಡಿಲ್ಲ ಎನ್ನುವ ಸಮಾಧಾನವಿತ್ತು. ಊಟಕ್ಕೆ ಹೋದ ಕೆಲವು ಮಕ್ಕಳು ಬಂದ ನಂತರ ನೀತಿ ಪಾಠಗಳನ್ನು ಹೇಳಿ, ಜೊತೆ ರಾಮಾಯಣ ಮಹಾಭಾರತದ ಪಾತ್ರಗಳ ಬಗ್ಗೆ  ಸ್ವಲ್ಪ ಸ್ವಲ್ಪ ವಿವರಿಸುವುದು ದಿನವೂ ಅವಳು ಮಾಡುತ್ತಿದ್ದ ಕೆಲಸ. ಕಥೆ ಕೇಳುವುದು ಎಂದರೆ ಮಕ್ಕಳಿಗೂ ಇಷ್ಟ ಹಾಗಾಗಿ ಬೆಳಗಿನ ವೇಳೆಗಿಂತ ಮಧ್ಯಾಹ್ನ ಮಕ್ಕಳು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಸುಮತಿ ರಾಮಾಯಣದಲ್ಲಿ ಬರುವ ಉಪಕಥೆಗಳನ್ನು ಹೇಳುವಾಗ ಮಕ್ಕಳು ಮೈಯೆಲ್ಲಾ ಕಿವಿಯಾಗಿಸಿ ಉತ್ಸುಕತೆಯಿಂದ ಕೇಳುತ್ತಿದ್ದರು.


About The Author

Leave a Reply

You cannot copy content of this page

Scroll to Top