ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಸಾಮಾಜಿಕ ಕಾಳಜಿಯ ಅಭಿವ್ಯಕ್ತಿ
ಡಾ ಮಲ್ಲಿನಾಥ ತಳವಾರ

ಅವರ ಗಜಲ್

ಕಳ್ಳನೆಂದು ಕೂಗಿದವರ್ಯಾರೂ ಕದ್ದುದನ್ನು ನೋಡಿರುವದಿಲ್ಲ
ಕಲ್ಲು ಎಸೆಯುರ್ರ್ಯಾರೂ ಅದರ ಕಾರಣವನ್ನು ತಿಳಿಯುವದಿಲ್ಲ
ಸಮಾಜ ಶರಾಬಿಯನ್ನು ಆಡಿಕೊಳ್ಳುತ್ತದೆ ಇರುತ್ತದೆ ಇಲ್ಲಿ
ಮೈಖಾನದೊಂದಿಗಿನ ಅವನ ಬಂಧವನ್ನು ಹುಡುಕುವುದಿಲ್ಲ
ಬಾಜಾರು ಹೆಂಗಸರ ಬಗ್ಗೆ ಮೂಗು ಮುರಿಯುವವರೇ ಹೆಚ್ಚು
ಈ ದುನಿಯಾ ವ್ಯವಸ್ಥೆಯ ಕರಾಳತೆಯನ್ನು ಪ್ರಶ್ನಿಸುವದಿಲ್ಲ
ಸೆರೆಮನೆಯಿಂದ ಬಂದವರಿಗೆ ಚಂದದ ಹಣೆಪಟ್ಟಿ ಹಚ್ಚುವರು
ಇಲ್ಲಿ ಕಾಣದ ಕೈಗಳ ಹಿಂದಿನ ಪವಾಡವನ್ನು ಭೇದಿಸುವದಿಲ್ಲ
ಹಣವಂತರ ಓಲೈಕೆಗೆ ಸಿದ್ಧವಾಗುತಿದೆ ಬೃಹತ್ ವೇದಿಕೆ
ಗಳಿಕೆಯ ಹಿಂದಿರುವ ಅಂಧಕರ ಕರಾಮತನ್ನು ಗುರುತಿಸುವದಿಲ್ಲ
ಫಲಿತಾಂಶವೇ ಪ್ರಮುಖವಾಗುತಿದೆ ಎಲುಬಿನ ಹಂದರದಲ್ಲಿ
ಚಂಚಲ ಮನವು ತುಳಿಯುವ ಹಾದಿಯನ್ನು ಗಮನಿಸುವುದಿಲ್ಲ
ಪರಪಂಚದ ಮೋಹದ ನೀಲನಕ್ಷೆ ಅರ್ಥ ಆಗುತ್ತಿಲ್ಲ ‘ಮಲ್ಲಿ’
ಇಂದ್ರಜಾಲವಾದ ಜಮಾನ ಮೌಲ್ಯವನ್ನು ಗೌರವಿಸುವದಿಲ್ಲ
ಡಾ.ಮಲ್ಲಿನಾಥ ತಳವಾರ
ಗಜಲ್ ವಿಶ್ಲೇಷಣೆ

ಸಾಮಾನ್ಯವಾಗಿ ಮಧುರ ಭಾವದ ಅಭಿವ್ಯಕ್ತಿಗೆ ಮಾತ್ರ ಯೋಗ್ಯವಾದ ಕಾವ್ಯಪ್ರಕಾರ ಎಂಬುದು ಅದರ ಕುರಿತು ಇರುವ ಒಂದು ವ್ಯಾಪಕ ಹೇಳಿಕೆ. ಆದರೆ ಅದನ್ನು ಮೀರಿ ಹಿರಿಯರು ಬೇರೆಬೇರೆ ಸಂಗತಿಗಳ ಅಭಿವ್ಯಕ್ತಿಗೆ ಅದನ್ನು ಬಳಸಿಕೊಂಡಿದ್ದಾರೆ. ಗಜಲ್ ಕಾವ್ಯದ ಆದ್ಯರೂ ಆದ ಶಾಂತರಸರಂಥವರೇ ಗಜಲ್ ಕಾವ್ಯವನ್ನು ಬದುಕಿನ ಇನ್ನಿತರ ಮುಖಗಳ ಅಭಿವ್ಯಕ್ತಿಯಾಗಿ ಬಳಸಿದುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಸಮಕಾಲೀನ ಸಂದರ್ಭದಲ್ಲಿ ಗಜಲ್ ಕೋವಿದರಲ್ಲಿ ತುಂಬ ಪ್ರಸಿದ್ಧರು ಡಾ ಮಲ್ಲಿನಾಥ ತಳವಾರ ಅವರು. ಅವರು ಕೇವಲ ಗಜಲ್ಕಾರರಾಗಿ ಮಾತ್ರವಲ್ಲ, ಗಜಲ್ ಕುರಿತ ಆಳವಾದ ಅಧ್ಯಯನ ಮಾಡಿದ ಗಜಲ್ ಚಿಂತಕರಲ್ಲಿ ಒಬ್ಬರು. ಇಂದು ಗಜಲ್ ಕಾವ್ಯದ ಕುರಿತು ಅಧಿಕೃತವಾಗಿ ಅಧ್ಯಯನಪೂರ್ಣವಾಗಿ ಬರೆಯಬಲ್ಲ, ಮಾತನಾಡಬಲ್ಲ ನಮ್ಮ ನಡುವಿನ ಚಿಂತಕರಲ್ಲಿ ಅವರದು ಮುಂಚೂಣಿ ಹೆಸರು ಎಂದರೆ ಅತಿಶಯೋಕ್ತಿಯಲ್ಲ ಎಂದು ನನ್ನ ನಂಬಿಕೆ.
ಡಾ.ತಳವಾರ ಅವರು ಸಧ್ಯಕ್ಕೆ ಕಲಬುರ್ಗಿಯ ನೂತನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು ಕಾವ್ಯ ,ವಿಮರ್ಶೆ, ಹೈಕು, ಗಜಲ್ ,ಮೊದಲಾದ ಪ್ರಕಾರಗಳಲ್ಲಿ ೨೦ಕ್ಕೂ ಅಧಿಕ ಕೃತಿಗಳೂ ಬಂದಿವೆ. ಅವರು ಒಂದಲ್ಲ, ನಾಲ್ಕು ಸ್ವತಂತ್ರ ಗಜಲ್ ಸಂಕಲನಗಳನ್ನು ,ಪ್ರಭಾವತಿ ದೇಸಾಯಿ ಇವರೊಂದಿಗೆ ಸೇರಿಕೊಂಡು ಒಂದು ಜುಗಲ್ ಗಜಲ್ ಸಂಕಲನವನ್ನು , ಗಜಲ್ಗಳ ವಿಮರ್ಶಾ ಸಂಕಲನವನ್ನು ಹೊರತಂದಿದ್ದಾರೆ. ನಿತ್ಯವೂ ಒಂದಲ್ಲ ಒಂದು ಗಜಲ್ ಕೃತಿಗೆ ಮುನ್ನುಡಿಯನ್ನೊ, ಬೆನ್ನುಡಿಯನ್ನೊ, ವಿಮರ್ಶೆಯನ್ನೋ ಅವರು ಬರೆಯವುದು ಅವರ ಗಜಲ ಮೇಲಿನ ಪ್ರೀತಿಯನ್ನು ತೋರಿಸುತ್ತದೆ . ಗಜಲ್ ಸ್ಮೃತಿ , ಮಲ್ಲಿಗೆ ಸಿಂಚನ ಮೊದಲಾದ ನಾಲ್ಕು ಗಜಲ್ ಕೃತಿಗಳು ಹೊರಬಂದಿವೆ. ಇಲ್ಲಿ ಅವರ ‘ಗಜಲ್’ ಒಂದನ್ನು ನಾನು ‘ಗಜಲ್ ಗಂಧ’ ಸಂಚಿಕೆಗೆ ಆಯ್ದುಕೊಂಡಿದ್ದೇನೆ . ಇದನ್ನು ಅವರ ಇತ್ತೀಚಿನ ಸಂಕಲನ “ಮಲ್ಲಿಗೆ ಸಿಂಚನ” ದಿಂದ (ಪು-೬) ಆರಿಸಲಾಗಿದೆ.
ಇದೊಂದು ಜುಲ್ ಕಾಫಿಯಾ ಗಜಲ್ . ಅಂದರೆ ಎರಡೆರಡು ಕಾಫಿಯಾಗಳನ್ನು ಒಳಗೊಂಡ ಗಜಲ್ ಅಗಿದೆ. ಒಂದು ಕಾಫಿಯ ಒಳಗೊಂಡರೆ ಅದು ಪಾರಿಭಾಷಿಕವಾಗಿ ಕಾಫಿಯಾನಾ ಅಥವ ಕಾಫಿಯಾ ಸಹಿತ ಗಜಲ್ ಎಂದು ಕರೆಸಿಕೊಂಡರೆ ಗಜಲ್ ಗಜಲ್ ಪ್ರತಿ ಮಿಶ್ರಾದಲ್ಲೂ ನಿಯತವಾಗಿ ರದೀಫ್ ,ಮೊದಲು ಎರಡು ಕಾಫಿಯಾಗಳಿದ್ದರೆ ‘ಜುಲ್ ಕಾಫಿಯಾ ಗಜಲ್’ ಎನಿಸಿಕೊಳ್ಳುತ್ತದೆ. ಇಂಥ ಗಜಲ್ಗಳನ್ನು ಬರೆಯಲು ಭಾಷಿಕ ಸಾಮರ್ಥ್ಯ ಅಧಿಕವಾಗಿರಬೇಕು . ಅದು ಡಾ. ತಳವಾರ ಅವರಿಗೆ ಅತ್ಯಂತ ಸರಳವಾಗಿ ಸಿದ್ದಿಸಿದೆ.
ನಮ್ಮ ಸಮಾಜದ ನಡವಳಿಕೆ ಕೆಲವೊಮ್ಮೆ ತೀರ ಉಡಾಫೆಯಿಂದ ಕೂಡಿರುತ್ತದೆ. ಅದೂ ಕೆಲವೊಂದಿಷ್ಟು ಸಲವಂತೂ ಅಮಾನವೀಯ ಎನ್ನುವಂತೆ ಇರುತ್ತದೆ . ಬಡವರನ್ನು ಕಳ್ಳರೆಂದು ನಿರ್ಧರಿಸುವಾಗಲಂತೂ ಇದು ಅಧಿಕವಾಗಿ ಕಂಡು ಬರುತ್ತದೆ .ಗಜಲ್ ಇಂಥದೊಂದು ಭಾವವನ್ನು ವ್ಯಕ್ತ ಮಾಡುತ್ತದೆ .ಅಂದರೆ ಈ ಗಜಲ್ನ ವಸ್ತು ಸಾಮಾಜಿಕವಾದುದು ಎಂಬುದು ಇಲ್ಲಿ ಸ್ಪಷ್ಟ. ಕೆಲವರನ್ನು ಮೇಲು ನೋಟದಿಂದಲೆ ಅಂದರೆ ಅವರ ವೇಷಭೂಷಣ ನೋಡಿಯೆ ಕಳ್ಳರೆಂದು ನಾವು ತೀರ್ಮಾನಿಸಿ ಬಿಡುತ್ತೇವೆ .ಅವರು ಮಾಡಿರುವ ಕಳ್ಳತನವನ್ನು ನೋಡಿರುವುದೇ ಇಲ್ಲ. ನಮ್ಮ ಈ ಬಗೆಯ ಅಮಾನವೀಯವ ನಡೆಯನ್ನು ವಿಡಂಬಿಸುವ ಕವಿ
ಕಳ್ಳನೆಂದು ಕೂಗಿದವರ್ಯಾರೂ ಕದ್ದುದನ್ನು ನೋಡಿರುವದಿಲ್ಲ
ಕಲ್ಲು ಎಸೆಯುರ್ಯಾರೂ ಅದರ ಕಾರಣವನ್ನು ತಿಳಿಯುವದಿಲ್ಲ
ಒಬ್ಬನನ್ನು ತಪ್ಪಿತಸ್ಥ ಎಂದು ಸಾರುವಾಗ ನಾವು ಸಾಮಾನ್ಯವಾಗಿ ಸಾರಾಸಾರ ವಿಚಾರಿಸಬೇಕು. ಆದರೆ ಅದು ಸಮಾಜಕ್ಕೆ ಬೇಕಿಲ್ಲ. ಯಾರೋ ಒಬ್ಬರನ್ನು ತಪ್ಪಿತಸ್ಥರೆಂದು ನಿರೂಪಿಸಿ ಬಿಡುವದೆ ಅದರ ಸ್ವಭಾವ .
ಗುಂಪಿನಲ್ಲಿ ಗೋವಿಂದ ಎಂಬ ಒಂದು ಗಾದೆ ಮಾತು ಕನ್ನಡದಲ್ಲಿ ಇದೆ. ಅದರ ಅರ್ಥ ‘ಎಲ್ಲರೂ ಅಂದರು ಎಂದು ನಾವೂ ಅನ್ನುವದು ಎಂದು’. ಒಬ್ಬ ವ್ಯಕ್ತಿಯ ಮೇಲೆ ತಪ್ಪಿತಸ್ಥ ಎಂದು ತೀರ್ಮಾನಿಸಿದ ಅನೇಕರು ಅವನು ಮಾಡಿದ ತಪ್ಪನ್ನೆನೂ ನೋಡಿರುವದಿಲ್ಲ .ಸುಮ್ಮನೇ ‘ಗೂಳಿಬಿದ್ದಾಗ ಆಳಿಗೊಂದು ಕಲ್ಲು’ ಎನ್ನುವವರಂತೆ ಯಾರನ್ನೋ ನೋಡಿ ತಾವೂ ಅಂದು ಬಿಡುತ್ತಾರೆ. ಇಂಥ ಗುಂಪುಗಾರಿಕೆಯನ್ನು ಗಜಲ್ ಎತ್ತಿ ತೋರುತ್ತದೆ. ಒಬ್ಬರ ಮೇಲೆ ತಪ್ಪನ್ನು ಹೊರಿಸುವಾಗ ಈ ಜಗತ್ತು ಅದನ್ನು ಸಾರಾಸಾರ ವಿಚಾರಿಸುವದೇ ಇಲ್ಲ ಎಂಬುದು ಕವಿಯ ಆರೋಪವಾಗಿದೆ. ಅದು ಬಡವರ ವಿಷಯವಾಗಿಯಂತೂ ಈ ಸಮಾಜದಲ್ಲಿ ಅತಿ ಹೆಚ್ಚಿನ ದೌರ್ಜನ್ಯ ನಡೆಯುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಗಜಲ್ ಅಭಿವ್ಯಕ್ತವಾಗಿದೆ. ಅದಕ್ಕೆ ಮುಂದಿನ ಶೇರ್ ಗಳು ಬೇರೆ ಬೇರೆ ಉದಾಹರಣೆಗಳ ಮೂಲಕ ಇದೇ ಭಾವವನ್ನು ವ್ಯಕ್ತಮಾಡುತ್ತವೆ.
ಸಮಾಜ ಶರಾಬಿಯನ್ನು ಆಡಿಕೊಳ್ಳುತ್ತದೆ ಇರುತ್ತದೆ ಇಲ್ಲಿ
ಮೈಖಾನದೊಂದಿಗಿನ ಅವನ ಬಂಧವನ್ನು ಹುಡುಕುವುದಿಲ್ಲ
ನಾವು ಕೆಲವರನ್ನು ಕುಡುಕ, ವ್ಯಸನಿ ಎಂದು ಕರೆದು ದೂಷಿಸುತ್ತೇವೆ ಆದರೆ ಅವನು ಕುಡುಕನಾಗಲು ವಾಸ್ತವವಾದ ಕಾರಣವೊಂದು ಇರುತ್ತದೆ ಎಂಬ ಸಹಾನುಭೂತಿ ತೋರುವುದೇ ಇಲ್ಲ .ಅವನನ್ನು ಕುಡುಕ ಎಂದು ದೂಷಿಸಿಬಿಡುವ ವರೇ ಹೆಚ್ಚು.ಆದರೆ ಗಜಲ್ ಗೋ ಮಾತ್ರ ಇಲ್ಲಿ ತುಸು ಹೊತ್ತು ಭಿನ್ನವಾಗಿ ಅಲೋಚಿಸುತ್ತಿದ್ದಾರೆ ಎನಿಸುತ್ತದೆ.ಮೈಖಾನ ಎಂದರೆ ಸಾರಾಯಿ ಮಾರಾಯಿ ಅಂಗಡಿ ಶರಾಬಿಗೆ ನೆಮ್ಮದಿಯ ತಾಣವೂ ಅಗಿರಬಹುದಲ್ಲವೇ. ಅವನ ನೋವನ್ನು ಮರೆಯಲು ಅದು ಆಶ್ರಯ ನೀಡಿರಬಹುದಲ್ಲವೇ. ಈ ಬಗೆಯ ಆಲೋಚನೆ ಗಜಲ್ ಗೋ ನ ಹೊರತು ನಮ್ಮದಾಗಲಾರದು. ಅಂತೆಯೇ ಮುಂದುವರೆದ ಮಿಶ್ರಾ ಮತ್ತೊಂದು ದೂಷಿತ ವರ್ಗದೆಡೆ ನಮ್ಮ ಗಮನ ಸೆಳೆಯುತ್ತದೆ.
ಕೆಲವು ದೇಹ ಮಾರಿ ಬದುಕುವ ಹೆಂಗಳೆಯರನ್ನು ವೇಶ್ಯೆಯರು,ಸೂಳೆ ಯರು ಎಂದು ದೂಷಿಸಿ ಬಿಡುತ್ತೇವೆ ಒಳಗೊಳಗೆ ಅವರನ್ನು ಆರಾಧಿಸುವ ಪುರುಷ ಪ್ರವೃತ್ತಿ ಹೊರನೋಟಕ್ಕೆ ಅವರನ್ನು ಅತ್ಯಂತ ಕೀಳಾಗಿ ಕಂಡAತೆ ನಟಿಸುತ್ತದೆ .ಆದರೆ ಆಕೆಯನ್ನು ತನ್ನ ಮೈಮಾರುವ ದುಸ್ಥಿಗೆ ತಂದವರು ಯಾರು? ಅವಳು ವೇಶ್ಯೆಯಾಗಲು ಕಾರಣಗಳೇನು? ಇಂಥ ಯೋಚನೆ ಈ ದುಷ್ಟ ಸಮಾಜಕ್ಕೆ ಬರಲಾರದು ಎಂಬುದು ಗಜಲ್ ಕವಿಯ ಸತ್ಯವಾದ ಆರೋಪವಾಗಿದೆ. ಅಂತೆಯೇ ಗಜಲ್ ಮಿಶ್ರಾ ಅವಳನ್ನು ಕುರಿತು
ಬಾಜಾರು ಹೆಂಗಸರ ಬಗ್ಗೆ ಮೂಗು ಮುರಿಯುವವರೇ ಹೆಚ್ಚು
ಈ ದುನಿಯಾ ವ್ಯವಸ್ಥೆಯ ಕರಾಳತೆಯನ್ನು ಪ್ರಶ್ನಿಸುವದಿಲ್ಲ
ಎನ್ನುತ್ತದೆ. ಬಾಜಾರು ಹೆಂಗಸರು ಎಂದರೆ ಮೈಮಾರಿ ಬದುಕುವವರು ಎಂತಲೇ ಇಲ್ಲಿ ಅರ್ಥ ಅವರಿಗೆ ಅವರ ಹೊಟ್ಟೆ ತುಂಬಿಸಲು ತಮ್ಮ ದೇಹ ಮಾರುವ ದುಸ್ಥಿತಿ ಬಂದೊದಗಿದೆ . ಬಾಜಾರಿನಲ್ಲಿ ನಿಂತು ತನ್ನ ಸೆರಗು ಜಾರಿಸುವ ಅವಳ ಜಾರುವ ಸೆರಗನ್ನೊ ಅವಳ ಅಕರ್ಷಕ ಎದೆಯನ್ನೊ ನೋಡುವ ದುಷ್ಟ ಕಂಗಳು ಅವಳ ಹಸಿದ ಹೊಟ್ಟೆಯನ್ನೆನೂ ನೋಡುವುದೇ ಇಲ್ಲ .ಅವಳಬಗ್ಗೆ ಅವಳು ಸೂಳೆ ಎಂದು ಕನಿಷ್ಟವಾಗಿ ನೋಡುವವರೆ ಅಧಿಕ. ಹೌದು ಅಕೆ ಯಕೆ ಸೂಳೆಯಾದಳು? ಯಾರು ಅದಕ್ಕೆ ಕಾರಣ? ಎಂದು ಯಾವತ್ತಿಗೂ ಯಾವ ಹೆಂಗಸಿನ ಬಗ್ಗೆಐ ಈ ಸಮಾಜ ಸಮಾಧಾನದಿಂದ ಯೋಚಿಸಿಯೇ ಇಲ್ಲ .’ಈ ದುನಿಯಾದ ಕರಾಳ ವ್ಯವಸ್ಥೇಯೇ ಅದಕ್ಕೆ ಕಾರಣ ‘ ಎಂದು ಯಾವತ್ತಿಗಾದರೂ ಆಲೋಚಿಸಿದ್ದಿದೆಯಾ ? ಎಂದರೆ ಇಲ್ಲ ಎಂಬುದೇ ಉತ್ತರ .ಬರೀ ಕಳ್ಳರು, ಸೂಳೆಯರು ಮೊದಲಾದವರ ಬಗ್ಗೆ ಈ ಸಮಾಜದ ಕಟು ಅಲೋಚನೆಗಳನ್ನು ಗಜಲ್ ಕವಿ ಚಿಂತಿಸುತ್ತಿದ್ದಾನೆ. ಹಾಗೆಂದು ಕವಿ ಆ ವ್ಯವಸ್ಥೆಗಳನ್ನು ಬೆಂಬಲಿಸುತ್ತಿಲ್ಲ ಬದಲಾಗಿ ಸಹಾನುಭೂತಿಯಿಂದ ನೋಡುತ್ತಿದ್ದಾನೆ.
ಹೀಗೆಯೇ ಸಮಾಜದ ಸಾಮಾನ್ಯ ನಿಂದನೆಗೆ ಒಳಗಾಗುವ ಇನ್ನೊಂದು ಗುಂಪೆಂದರೆ ಅದು ಜೈಲು ಪಾಲಾದವರದು. ಸೆರೆಮನೆಯಿಂದ ತಿರುಗಿ ಬಂದವರಿಗೆ ನಾವು ಅ ಪರಾಧಿಗಳು, ಕೊಲೆಗಾರರು ಎಂಬ ಹಣೆ ಪಟ್ಟಿ ಹಚ್ಚಿ ಅವರನ್ನು ದೂರವೆ ಇರಿಸುತ್ತೇವೆ ಅವರನ್ನು ಕುರಿತು ಗಜಲ್ ಹೇಳುವದು ಹೀಗೆ.
ಸೆರೆಮನೆಯಿಂದ ಬಂದವರಿಗೆ ಚಂದದ ಹಣೆಪಟ್ಟಿ ಹಚ್ಚುವರು
ಇಲ್ಲಿ ಕಾಣದ ಕೈಗಳ ಹಿಂದಿನ ಪವಾಡವನ್ನು ಭೇದಿಸುವದಿಲ್ಲ
ಸೆರೆಮನೆಗೆ ಹೋದವರು ಸೆರೆಮನೆಗೆ ಹೋಗಲು ಅಪರಾಧಿಯಾಗಲು ಏನು ಕಾರಣ?ಅವರು ತಾವಾಗಿಯೇ ಸೆರೆಮನೆ ಗೆ ಹೋಗಬೇಕಾಗಿ ಬಂದಿತೋ?ಅಥವಾ ಅವರು ನಿರಪರಾಧಿಗಳೋ? ಅಥವಾ ಯಾವುದೋ ಕಾಣದ ಶಕ್ತಿ ಅವರನ್ನು ಮಾಡದ ತಪ್ಪು ಹೊರಸಿ ಜೈಲಿಗೆ ತಳ್ಳಿತೇ? ಇದನ್ನೆಲ್ಲ ಅಲೋಚನೆಯೆ ಮಡದ ಜಗತ್ತು ಸೆರಮೆನೆಯಿಂದ ಬಂದವನು ಎಂಬ ಆರೋಪನ್ನು ಹೊರಿಸಿ ಬಿಡುತ್ತದೆ,ಆದರೆ ಅದೇ ಜಗತ್ತು ಸಿರಿವಂತರು ಮಾಡುವ ಯಾವುದೇ ತಪ್ಪುಗಳನ್ನು ಬಯಲಿಗೆಳೆಯಲಾರದು . ಇಲ್ಲಿಂದ ಮುಂದೆ ಗಜಲ್ ಎರಡನೆಯ ತಿರುವು ತಗೆದುಕೊಳ್ಳುತ್ತದೆ ಸೂಕ್ಷ್ಮ ವಾಗಿ ತನ್ನ ಪ್ರತಿಭಟನೆಯನ್ನೂ ವ್ಯಕ್ತ ಮಾಡುತ್ತದೆ.
ಹಣವಂತರ ಓಲೈಕೆಗೆ ಸಿದ್ಧವಾಗುತಿದೆ ಬೃಹತ್ ವೇದಿಕೆ
ಗಳಿಕೆಯ ಹಿಂದಿರುವ ಅಂಧಕರ ಕರಾಮತನ್ನು ಗುರುತಿಸುವದಿಲ್ಲ
ಕೇವಲ ಸಿರಿವಂತರನ್ನು ಹೊಗಳುವವರೆ ಅಧಿಕ ಆದರೆ ಆತ ಹೇಗೆ ಸಿರಿವಂತನಾದ . ಯಾರನ್ನು ಕೊಳ್ಳೆ ಹೊಡೆದು ಸಿರಿವಂತನಾದ ಎಂದು ಚಿಂತಿಸುವದಿಲ್ಲ . ಸುಮ್ಮನೆ ಕಣ್ಣು ಮುಚ್ಚಿ ಅವನ ಹೊಗಳುವ ಜಗತ್ತಿದು ಎಂಬುದು ಕವಿಯ ಅನಿಸಿಕೆ ಮತ್ತು ಅದು ಸತ್ಯವೂ ಆಗಿದೆ. ಬಡವರಿಗೆ ಒಂದು ನ್ಯಾಯ ಸಿರಿವಂತರಿಗೆ ಒಂದು ನ್ಯಾಯ! ಇದು ಸಮಾಜದ ಮರ್ಮ. ! ಎಂದು ಉದ್ಘರಿಸುವ ಕವಿ ಅದರ ಹಿಂದಿರುವ ಮೌಢ್ಯವನ್ನು ವಿಡಂಬಿಸುತ್ತಾನೆ.
ಇಲ್ಲಿ ಪರಿಕ್ಷೆ ಅಥವ ಚುನಾವಣೆಯಂಥ ವಿಷಯಬಂದಾಗ ಎಲ್ಲರೂ ಅದರ ಫಲಿತಾಂಶವನ್ನು ನೋಡುವರೇ ಹೊರತು ಯಾವರೀತಿ ಪರಿಕ್ಷೆ ಬರೆದರೂ ? ಅಥವ ಅಥವಾ ಯಾವರೀತಿ ಚುನಾವಣೆ ಗೆದ್ದರು ? ಇದೆ ಮುಖ್ಯ ವಾಗುವುದೆ ಇಲ್ಲ .ಅದ್ದರಿಂದಲೇ ಕವಿ
ಫಲಿತಾಂಶವೇ ಪ್ರಮುಖವಾಗುತಿದೆ ಎಲುಬಿನ ಹಂದರದಲ್ಲಿ
ಚಂಚಲ ಮನವು ತುಳಿಯುವ ಹಾದಿಯನ್ನು ಗಮನಿಸುವುದಿಲ್ಲ
ಎನ್ನುತ್ತಾನೆ .ಮುಟ್ಟುವ ಗುರಿಯಷ್ಟೇ ನಡೆಯುವ ದಾರಿಯೂ ಸ್ವಚ್ಛವಾಗಿರಬೇಕು. ಆದರೆ ಅದು ಇದೆಯಾ ? ಎನ್ನವ ಕವಿಯ ಮಾತಲ್ಲಿಯೆ ಅದು ಇಲ್ಲ ಎಂಬುದೆ ಉತ್ತರವಾಗಿದೆ.
ಆದ್ದರಿಂದಲೇ ಗಜಲ್ ನ ಮಕ್ತಾಯ ಸಾರುವುದು ಹೀಗೆ. ಕವಿ ಒಂದು ರೀತಿಯಲ್ಲಿ ಪ್ರಪಂಚದ ನಡೆಗೆ ಬೇಸತ್ತಿದ್ದಾನೆ.
ಪರಪಂಚದ ಮೋಹದ ನೀಲನಕ್ಷೆ ಅರ್ಥ ಆಗುತ್ತಿಲ್ಲ ‘ಮಲ್ಲಿ’
ಇಂದ್ರಜಾಲವಾದ ಜಮಾನ ಮೌಲ್ಯವನ್ನು ಗೌರವಿಸುವದಿಲ್ಲ
ಇಲ್ಲಿ ಮೌಲ್ಯಗಳು ಕಾಣೇಯಾಗಿ ಇಡೀ ಜಗತ್ತೇ ಒಂದು ಬಗೆಯ ಮೋಸಗಾರಿಕೆ ಯ ಜಾಲವಾಗಿರುವದು ಕವಿಯನ್ನು ಕಾಡಿದೆ. ‘ಇಂದ್ರಜಾಲ’ , ‘ಜಮಾನ’ , ‘ಪರಪಂಚ’ ಇಂಥ ಪದಗಳು ಇದನ್ನು ಸೂಚಿಸುತ್ತವೆ.
‘ಮಲ್ಲಿ’ ಎಂಬುದು ಗಜಲ್ಕಾರರ ‘ತಖಲ್ಲುಸ್ ನಾಮ ‘ ಆಗಿದೆ ಕವಿ ತನಗೆ ತಾನೇ ಹೇಳುವಂತೆ ನೀರೂಪಣಾ ವಿಧಾನ ಹೊಂದಿದ ಗಜಲ್ ಒಂದು ರೀತಿಯಲ್ಲಿ ಸ್ವ ಅವಲೋಕನಕ್ಕಿಳಿದಂತಿದೆ. ಆದರೆ ಈ ಬುದ್ದಿ ಸಮಾಜಕ್ಕೂ ಬಂದಾಗಲೇ ಇಂಥ ಸೂಕ್ಷ್ಮತೆ ಅರ್ಥವಾಗುತ್ತದೆ ಅಲ್ಲಿಯವರೆಗೆ ಕವಿ ಅಥವಾ ಗಜಲ್ಕಾರ ಹಳಹಳಿಸುತ್ತಲೇ ಬದುಕುವದು ಅನಿವಾರ್ಯ ವಾಗಿದೆ.
ಇಡೀ ಗಜಲ್ ಒಂದು ಸೂಕ್ಷ್ಮ ವ್ಯಂಗ್ಯ ಮತ್ತು ಪ್ರತಿಭಟನೆಯನ್ನು ಹಿನ್ನೆಲೆಯಾಗಿ ಆವರಿಸಿಕೊಂಡಿದೆ. ಉತ್ತವವಾದ ಕವಿತೆ ನಮ್ಮನ್ನು ಬಹು ಕಾಲ ಕಾಡಬೇಕು , ಹಾಗೆ ನಮ್ಮನ್ನು ಕಾಡುವ ಗಜಲಾಗಿ ಇದು ಸಾಬೀತಾಗಿದೆ. ಡಾ.ಮಲ್ಲಿನಾಥರ ಸೂಕ್ಷ್ಮ ಕಲಾಕುಸುರಿಗೆ ಸಾಕ್ಷಿಯಾಗಿದೆ.
ಏಳು ಶೆರ್ ಗಳಾಗಿ ಹರಡಿರುವ ಗಜಲ್ ತಾನು ಬಳಸುವ ಉರ್ದು ಪದಗಳಿಂದ ಒಂದು ಸ್ಥಳೀಯ ಸಹಜತೆಯನ್ನು ಗಜಲ್ ಗೆ ಇತ್ತಿದೆ. ಉರ್ದು ಪದಗಳ ಬಳಕೆ ಸಹಜತೆಯನ್ನು ತಾಜಾತನವನ್ನು , ಕವಿಯ ಪ್ರಾಮಾಣಿಕ ಕಾಳಜಿಯನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿದೆ.
ಡಾ.ವೈ.ಎಂ.ಯಾಕೊಳ್ಳಿ






ಡಾ. ಮಲ್ಲಿನಾಥ ತಳವಾರ ಅವರು ವಿಡಂಬನಾತ್ಮಕ ಗಜಲ್ ಒಂದನ್ನು ಆರಿಸಿ ಕೊಂಡು, ಸಮರ್ಥವಾಗಿ ವಿಶ್ಲೇಷಣೆ ಮಾಡಿದ ಯಾಕೊಳ್ಳಿ ಗುರುಗಳಿಗೆ ಅಭಿನಂದನೆಗಳು..
ಶಮಾ ಜಮಾದಾರ.
Nice criticism sir,congratulations