ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.
ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ.

*********

        ತಿಳುವಳಿಕೆಯಿಲ್ಲದ ಅಜ್ಞಾನಿಗಳ ಜೊತೆಗೆ ಸಹವಾಸ ಮಾಡಿದರೆ ಕಲ್ಲಿನಿಂದ ಕಲ್ಲಿಗೆ ಹೊಡೆದು ಬೆಂಕಿಯನ್ನು ಪಡೆದಂತಾಗುತ್ತದೆ.    ತಿಳುವಳಿಕೆಯುಳ್ಳವರ,   ಜ್ಞಾನಿಗಳ ಜೊತೆಗೆ ಸಂಗವನ್ನು ಮಾಡಿದರೆ ಮೊಸರನ್ನು ಕಡೆದು ಬೆಣ್ಣೆಯನ್ನು ಪಡೆದಂತಾಗುತ್ತದೆ.   ಹೀಗೆ ನನಗೆ ಶರಣರ ಸಹವಾಸ ದೊರೆತು ಅವರ ಸಂಗವನ್ನು ಮಾಡಿದರೆ ಕರ್ಪೂರದ ಗಿರಿಯನ್ನು ಬೆಂಕಿಯು ಸ್ಪರ್ಶಿಸಿ ಅದರಲ್ಲಿ ಒಂದಾದಂತೆ, ನಾನೂ ಕೂಡ ನಿನ್ನಲ್ಲಿ ಒಂದಾಗುವೆನೆಂದು ಚೆನ್ನಮಲ್ಲಿಕಾರ್ಜುನನಲ್ಲಿ ಅಕ್ಕಮಹಾದೇವಿಯು ಹೇಳಿಕೊಳ್ಳುತ್ತಾಳೆ.

            ಸಂಘಜೀವಿಯಾದ ಮನುಷ್ಯ ಮತ್ತೊಬ್ಬ ವ್ಯಕ್ತಿ, ವಸ್ತು, ಪ್ರಾಣಿ, ಪಕ್ಷಿಗಳೊಂದಿಗೆ ಸ್ನೇಹವೊ,  ದ್ವೇಷವೋ ಒಟ್ಟಿನಲ್ಲಿ ಅವುಗಳ ಸಹವಾಸದಲ್ಲಿರುತ್ತಾನೆ.   ಸಂಗ –  ಸಹವಾಸಗಳಿಲ್ಲದೆ ಯಾವ ಜೀವಿಯೂ ಇಲ್ಲಿ ಹೆಚ್ಚು ಕಾಲ ಜೀವಿಸಲಾರದು.  ಅಷ್ಟೇ ಏಕೆ ಸಂಗವಿಲ್ಲದೆ ಈ ಜಗತ್ತಿನಲ್ಲಿ ಯಾವ ಕ್ರಿಯೆಯೂ ಕೂಡ  ನಡೆಯಲಾರದು.    ಇದನ್ನೇ ಅಕ್ಕ ಇನ್ನೊಂದಡೆಗೆ,

ಸಂಗದಿಂದಲ್ಲದೆ ಅಗ್ನಿ ಹುಟ್ಟದು, ಸಂಗದಿಂದಲ್ಲದೆ ಬೀಜ ಮೊಳೆದೋರದು, ಸಂಗದಿಂದಲ್ಲದೆ ಹೂವಾಗದು. ಸಂಗದಿಂದಲ್ಲದೆ ಸರ್ವಸುಖದೋರದು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಮಹಾನುಭಾವಿಗಳ ಸಂಗದಿಂದಲಾನು ಬದುಕಿದೆನು.

         ನಿಸರ್ಗದ ಎಲ್ಲ ಕ್ರಿಯೆಗಳು ಜರುಗುವುದು ಪರಸ್ಪರ ಸ್ನೇಹ ಸಹಕಾರದಿಂದಲೇ.    ಬೀಜದಿಂದ ಮೊಳಕೆ, ಮೊಗ್ಗು ಹೂವಾಗಿ ಅರಳುವಿಕೆ, ಕಾಯಿ ಹಣ್ಣಾಗುವಿಕೆ,  ಪ್ರೀತಿಯ ಸ್ಫುರಣ(ಹುಟ್ಟು),   ಮೋಡ ಕಟ್ಟಿ ಮಳೆಯಾಗುವುದು,  ಇತ್ಯಾದಿಗಳೆಲ್ಲವೂ  ಸಂಗದ ಪ್ರತಿಫಲಗಳೇ ಆಗಿವೆ.    ಆದರೆ ಇಲ್ಲಿ ಅಕ್ಕಮಹಾದೇವಿ ಹೇಳಬಯಸಿದ್ದು ಎಂಥವರ ಸಹವಾಸದಿಂದ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ಮಾತ್ರ.

       ಅಜ್ಞಾನಿಗಳ ಜೊತೆಗಿನ ಸ್ನೇಹ ಮಾಡುವುದರಿಂದ ಕಲ್ಲಿನಿಂದ ಕಲ್ಲಿಗೆ ಉಜ್ಜಿ  ಸದಾಕಾಲ ಸುಡುವಂತಹ ಕಷ್ಟ ನಷ್ಟ ನೋವು ತೊಂದರೆಗಳ ಬೆಂಕಿಯನ್ನು ಮಡಿಲಲ್ಲಿ ಕಟ್ಟಿಕೊಳ್ಳಬೇಕಾಗುತ್ತದೆ.  ಅದೇ ಜ್ಞಾನಿಗಳ ಅನುಭಾವಿಗಳ ಸ್ನೇಹವಾದಲ್ಲಿ ಅವರ ಸಹವಾಸವು ಮೊಸರನ್ನು ಕಡೆದು ಬೆಣ್ಣೆಯಂತಹ ಸುಮಧುರ ಸುಕುಮಲ ವಸ್ತುವನ್ನು ಪಡೆದಂತಾಗುತ್ತದೆ.   ಇದನ್ನೇ ಸರ್ವಜ್ಞ

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ |
ದುರ್ಜನರ ಸಂಗದೊಡನಾಟ ಬಚ್ಚಲ-|
ರೊಜ್ಜಿನಂತಿಹುದು! ಸರ್ವಜ್ಞ.
ಎಂದಿದ್ದಾನೆ.

 ಬಸವಣ್ಣನವರೂ  ಕೂಡ

  ಸಾರ, ಸಜ್ಜನರ ಸಂಗವ ಮಾಡುವುದು:
ದೂರ, ದುರ್ಜನರ ಸಂಗ ಬೇಡವಯ್ಯಾ!
ಆವ ಹಾವಾದರೇನು? ವಿಷವೊಂದೆ;
ಅಂತವರ ಸಂಗ ಬೇಡವಯ್ಯಾ.
ಅಂತರಂಗ ಶುದ್ಧವಿಲ್ಲದವರ ಸಂಗ
ಸಿಂಗಿ, ಕಾಳಕೂಟ ವಿಷವೋ, ಕೂಡಲಸಂಗಮದೇವಾ!

    ಎಂದು ಸಂಗದ ಮಹತ್ವವನ್ನು ಹೇಳುತ್ತಾ

“ಭವಿಸಂಗವನೊಲ್ಲೆನೊಲ್ಲೆ-
ಆ ಸಂಗ ಮುಂದೆ ಅನಂತ ಭವಂಗಳಲ್ಲಿ ಬರಿಸುವುದಾಗಿ. ………………..”  

   ಎಂದು ಹೇಳುತ್ತ ಅಜ್ಞಾನಿಗಳ, ಭವಿಗಳ ಸಂಗದಿಂದ ಉಂಟಾಗುವ ಕೇಡುಗಳನ್ನು ಹೇಳುತ್ತಾರೆ. ಅಂಥವರ ಸಂಗದಿಂದ ಜೀವನದಲ್ಲಿ ಕಷ್ಟ ನಷ್ಟ, ನೋವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.     ಅರಿವುಳ್ಳ ಅನುಭಾವಿ  ಶರಣರ ಸಂಗವ  ಮಾಡಿದರೆ ಎರಡರ ಭೇದವನ್ನು ನಾಶಗೊಳಿಸಿ,  ಅದ್ವೈತ ಭಾವವನ್ನು ಮೂಡಿಸುತ್ತದೆ.   ಆ ಮೂಲಕ ಜೀವಾತ್ಮನು ಪರಮಾತ್ಮನಲ್ಲಿ ಕರ್ಪೂರದ ರಾಶಿಯನ್ನು ಉರಿಯುಕೊಂಡಂತೆ ಐಕ್ಯವಾಗಿ ಬಿಡುತ್ತಾನೆ.


About The Author

6 thoughts on “ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ”

  1. ವಚನ ಕುಮಾರಸ್ವಾಮಿ

    ತುಂಬಾ ಉತ್ತಮವಾದ ವಿವರಣೆ. ತಮ್ಮಿ ಪ್ರವೃತ್ತಿ ಮುಂದುವರೆಯಲಿ

    1. ಅರ್ಥಗರ್ಭಿತ ವಚನ ಮತ್ತು ವಿಶ್ಲೇಷಣೆ. ಧನ್ಯವಾದಗಳು ಗುರುಗಳೇ

  2. ಸರಳ ಸುಂದರವಾದ ವ್ಯಾಖ್ಯಾನ. ಸೋದಾಹರಣವಾದ ವಿವರಣೆ. ಅಕ್ಕನ ವಚನದ ವಿವರಣೆಯೊಂದದಿಗೆ ಸರ್ವಜ್ಞ ಹಾಗೂ ಬಸವಣ್ನನವರ ವಚನವನ್ನು ಏಕಕಾಲದಲ್ಲಿ ಸವಿವರವಾಗಿ ವಿಸ್ತರಿಸುವ ಶ್ರೀಯುತ ತಿಗಡಿ ಗುರುವರರ ವ್ಯಾಖ್ಯಾನ ಶೈಲಿ ಸಹೃದಯರ ಓದುಗರ ಮನವನ್ನು ಮುದಗೊಳಿಸುವುದರ ಜೊತೆಗೆ ಚಿಂತನಕ್ಕೆ ತೊಡಗಿಸುತ್ತದೆ. ವಚನ ಸಾಹಿತ್ಯದ ಕುರಿತು ಅವರ ಆಳವಾದ ಅನುಭವ ಮತ್ತು ಅದನ್ನು ವಿಶ್ಲೇಷಿಸುವ ಬಗೆಗೆ ನಮೋ ನಮಃ ಶರಣು, ಶರಣಾರ್ಥಿ.

Leave a Reply

You cannot copy content of this page

Scroll to Top