ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಡ ಕಡಿದು ನಾಡ ಮಾಡುತಿಹ ಸುಶಿಕ್ಷಿತರು
 ವನ ದೇವಿಯ ಕರುಳ ಕುಡಿಗೆ ಕೊಳ್ಳಿ ಇಡುತಿಹರು

ಮನುಜನ ದುರಾಸೆಗೆ ಪ್ರಕೃತಿಯೂ ಹೊರತಾಗಿಲ್ಲ
 ಭೂದೇವಿಯ ಮಡಿಲನು ಬರಿದು ಮಾಡುತಿಹರಲ್ಲ

 ಮರವೊಂದು ಬೆಳೆಯಲು ವರುಷಗಳೆ ಬೇಕು
ದಹಿಸಿ ಬೂದಿಯಾಗಲು ಕಿಡಿಯೊಂದು ಸಾಕು

 ಕಾನನವಿಲ್ಲದೆ ಮಳೆ ಮೋಡಗಳ ಆಕರ್ಷಣೆಯಿಲ್ಲ
 ವರ್ಷಧಾರೆಯ ಕಾಣದೆ ಅಂತರ್ಜಲ ಇಂಗುತಿಹುದಲ್ಲ

 ವನ್ಯಜೀವರಾಶಿಗೆ ಆಸರೆಯಿತ್ತ  ಹಸಿರು ಕಾನನ
ಕಾಡ್ಗಿಚ್ಚಿಗೆ ಬಲಿಯಾಗಿ ಆಗುತಿಹುದು ಆಪೋಷಣ

 ಭುವಿಯೊಡಲ ತಾಪ ಅಡಗದೆ ಮುಗಿಲೇರುತಿದೆ
ಮನುಜ ತನ್ನ ತಪ್ಪನು ತಾ ಅರಿಯಲೇಬೇಕಾಗಿದೆ

ಸುತ್ತಲೂ ಗಗನಚುಂಬಿ ಕಟ್ಟಡ ಕಾಂಕ್ರೀಟ್ ಕಾಡುಗಳು
 ಅತಿಯಾದ ನಾಗರಿಕತೆಯಿಂದ ಭಸ್ಮವಾಗುತಿಹ ಅಡವಿಗಳು

 ನೆಲೆಯಿಲ್ಲದೆ ನಾಡಿಗೆ ಲಗ್ಗೆ ಇಡುವ ವನ್ಯಜೀವಿಗಳು
ಕರುಣೆ ಇಲ್ಲದೆ ಗುಂಡಿಕ್ಕಿ ಕೊಲ್ಲುವ ಕ್ರೂರಮನಗಳು

 ಮನುಜ ದಹಿಸಬೇಕಿದೆ ಸ್ವಾರ್ಥ ದುರಾಸೆಯ ಹೆಮ್ಮರವನು
 ಇನ್ನಾದರೂ ಉಳಿಸಬೇಕಿದೆ ವಸುಂಧರೆಯ ಹಸಿರುಸಿರನು

————————————————

About The Author

3 thoughts on “ಮಧುಮಾಲತಿರುದ್ರೇಶ್ ಕವಿತೆ-ದಹಿಸು ಸ್ವಾರ್ಥದ ಹೆಮ್ಮರ”

  1. ತುಂಬು ಧನ್ಯವಾದಗಳು..ಹೊಸಬರಹಗಾರರಿಗೆ ನಿಮ್ಮ ಪ್ರೋತ್ಸಾಹ ಅದ್ಭುತ

  2. ಸ್ವಾರ್ಥ ದ ಹೆಮ್ಮರವನ್ನು ದಹಿಸುವ ಭರದಲ್ಲಿ
    ಮಧುಮಾಲತಿಯವರು ಬಹಳ ಸಹನಾಶೀಲರಾಗಿ ಕವನವನ್ನು ಹೆಣೆದಿದ್ದಾರೆ.ಈ ಹಿಂದಿನ ಅವರ ಕವನಗಳಲ್ಲಿನ ಧಾವಂತ ಇಲ್ಲಿ ತಣ್ಣಗಿದೆ
    ವಸ್ತುವಿನ ನಿರೂಪಣೆ ಆರೋಹಣ ಗತಿಯಲ್ಲಿ ಸಾಗಿ ಅದೇಗತಿಯ ಉತ್ತುಂಗದಲ್ಲಿ.ಉಪಸಂಹಾರವನ್ನು ಕಾಣುತ್ತದೆ
    ವನ್ಯಜೀವಿಗಳ ಉಳಿವಿಗಿರುವ ಕಳಕಳಿ, ವೃಕ್ಷ ಸಂಪತ್ತಿನ ಬಗೆಗಿನ ಕಾಳಜಿ.ಮಾನವನ ಸ್ವಾರ್ಥ ಸಾಧನೆಯಿಂದ ಬರಡಾಗುತ್ತಿರುವ ಕಾನನ ,ಹನನದಿಂದಾಗುತ್ತಿರುವ ಬವಣೆ –ಎಲ್ಲವುಗಳ ರಸಾಯನದಿಂದ ಹದವಾಗಿದೆ ಕವನ.
    ಅಂ ದ ಮಾತ್ರಕ್ಕೆ ನಿಮ್ಮ ಬರವಣಿಗೆ ಮೇರು ಮುಟ್ಟಿದೆ ಎಂದು ತಿಳಿಯಬೇಕಿಲ್ಲ..ಮುಂದೆ ನಿಮ್ಮಕನ್ನಡ ಸೇವೆಯು ಸಾರ್ಥಕ್ಯವಾಗಿ ಸಾಗಬೇಕಿದೆ.ಅರಿತು ನಡೆಯಿರಿ..ಹಜ್ಜೆಯ ಮೇಲೆ ಹೆಜ್ಜೆ ಇಟ್ಟು ಸಾಗಿರಿ……….
    ೦ ೦ ೦ ೦ ೦ ೦ ೦ ೦ ೦

    ೦ ಜಿ.ಎಸ್.ಪ್ರಕಾಶ್,ಬೆಂಗಳೂರು ೦
    ‌ ೦೦೦

Leave a Reply

You cannot copy content of this page

Scroll to Top