ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪರಂಗಿಗಳ ಗುಂಡಿಗೂ ಹೆದರದೆ
ದಂಡಿಗೂ ಹೆದರದೆ ಎದೆಯೊಡ್ಡಿ ನಿಂತು !
ಭಾರತ ಬಿಟ್ಟು ತೊಲಗಿ ಎಂಬ ಎದೆ ನಡಗಿಸುವ ಘೋಷ ವಾಕ್ಯ ಮೊಳಗಿಸಿ !
ಮಧ್ಯರಾತ್ರಿ ಅವರು ಓಡಿ ಹೋಗುವಂತೆ ಮಾಡಿ
ನಮಗೆಲ್ಲರಿಗೂ ಸ್ವಾತಂತ್ರ ತಂದುಕೊಟ್ಟೆ !
ನಾವಾಗ ಪಂಜರದಿಂದ ಹಾರಿಬಿಟ್ಟ ಹಕ್ಕಿಗಳಂತಾದೆವು
ದೇಶಕ್ಕೆ ದೇಶವೇ ಸ್ವಾತಂತ್ರ್ಯದ ಸಂಭ್ರಮವನ್ನು ಹಬ್ಬದಂತೆ ಆಚರಿಸಿತು !
ಆದರೆ ನೀನು ಮಾತ್ರ ಯಾವುದೇ ಹುದ್ದೆಗೆ
ಆಸೆ ಪಡದೆ ಮಹಾತ್ಮನಾದೆ ಗಾಂಧಿ !

‘ಮಹಿಳೆಯೊಬ್ಬಳು ಮಧ್ಯರಾತ್ರಿ ಒಬ್ಬಳೇ
ಧೈರ್ಯದಿಂದ ಅಡ್ಡಾಡಿದಾಗ ನಮ್ಮ
ದೇಶಕ್ಕೆ ನಿಜವಾದ ಸ್ವಾತಂತ್ರ್ಯ
ಸಿಕ್ಕಂತೆ’ ! ಅಂದು ನೀನು ಹೇಳಿದ ಮಾತು
ಇಂದಿಗೂ ನಮಗೆಲ್ಲರಿಗೂ ನೆನಪಿದೆ !
ಅದನ್ನು ನಿಜ ಮಾಡಲು ಸ್ವತಂತ್ರ ಭಾರತದಲ್ಲಿ ಹಗಲಿರಳು ಶ್ರಮಿಸುವ ಮೊದಲೇ ನೀನು
ಹಂತಕನ ಗುಂಡಿಗೆ ‘ಹೇ ರಾಮ’ ಎನ್ನುತ್ತಾ ಬಲಿಯಾದೆ!
ಇಡೀ ಜಗತ್ತೇ ಶೋಕ ಸಾಗರದಲ್ಲಿ ಮುಳುಗಿತು
ಆಗ ಭಾರತದ ಭವಿಷ್ಯದ ಕಥೆಯೂ ಮುಗಿಯಿತು !

ಈಗ ವರ್ಷಕ್ಕೊಮ್ಮೆ ನಾವು ನಿನ್ನ
ಜಯಂತಿಯನ್ನು ಆಚರಿಸಿ ಅಂದು ಮಾತ್ರ
ನಿನ್ನನ್ನು ನೆನಪು ಮಾಡಿಕೊಂಡು
ವರ್ಷಪೂರ್ತಿ ನಿನ್ನನ್ನು ಮರೆಯುತ್ತೇವೆ !
ನೀನು ಕಂಡ ಕನಸು ಒಂದೂ ನನಸಾಗಲಿಲ್ಲ !
ಮದ್ಯಪಾನ ತೊಲಗಲಿಲ್ಲ !
ಬಡತನ ನೀಗಲಿಲ್ಲ !
ಅಸ್ಪೃಶ್ಯತೆ ಅಳಿಯಲಿಲ್ಲ !
ಜಾತಿಯತೆ ಹೋಗಲೇ ಇಲ್ಲ !
ದೀನ-ದಲಿತರು, ದುರ್ಬಲರ ಮೇಲಿನ
ದಬ್ಬಾಳಿಕೆ ಇನ್ನೂ ನಿಂತಿಲ್ಲ !
ಈಗ ಅದನ್ನು ತಡೆಯುವ ಯಾವೊಬ್ಬ
ನಾಯಕನು ನಮ್ಮ ದೇಶದಲ್ಲಿ ಇಲ್ಲ !
ಲಂಚಕ್ಕೆ ಜನ ನಾಚಿಕೆಯಿಲ್ಲದೆ ಕೈ ಒಡ್ಡುತ್ತಿದ್ದಾರೆ !
ಮಹಿಳೆಗೆ ಇನ್ನೂ ಮಧ್ಯರಾತ್ರಿ ಒಬ್ಬಳೇ
ತಿರುಗಾಡುವ ಸ್ವಾತಂತ್ರ್ಯ ಸಿಕ್ಕಿಲ್ಲ !
ಬಡವರು ಇನ್ನೂ ಬಡವರಾದರೆ,
ಸಿರಿವಂತರು ಇನ್ನೂ ಸಿರಿವಂತರಾಗುತ್ತಿದ್ದಾರೆ !
ಭ್ರಷ್ಟಾಚಾರ, ಅನಾಚಾರ, ಅತ್ಯಾಚಾರಗಳು
ದೇಶದಲ್ಲಿ ಹೆಚ್ಚಾಗಿ ನಿನ್ನನ್ನು ಅಣಕಿಸುತ್ತಿವೆ !
ರಾಜಕಾರಣಿಗಳು ದೇಶವನ್ನು
ಲೂಟಿ ಹೊಡೆಯುತ್ತಿದ್ದಾರೆ !
ಆಂತರಿಕ ಭಯೋತ್ಪಾದನೆ ದೇಶದಲ್ಲಿ ಭುಗಿಲೆದ್ದಿದೆ !
ದೇಶ ಸೇವೆ ಸಲ್ಲಿಸಬೇಕಾದ ವೈದ್ಯರು,
ಇಂಜಿನಿಯರ್ ಗಳು, ವಿಜ್ಞಾನಿಗಳು ಹಣದಾಸೆಗಾಗಿ ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ !
ಹುಟ್ಟಿ ಬೆಳೆದ ಪುಣ್ಯಭೂಮಿ ಭಾರತ ದೇಶ
ಅವರಿಗೆ ಬೇಡವಂತೆ !
ನೀನು ಇದ್ದಿದ್ದರೆ ಈಗ ಇದೆಲ್ಲವನ್ನು ಹೇಗೆ ಸಹಿಸಿಕೊಳ್ಳುತ್ತಿದ್ದೆ,ಗೊತ್ತಿಲ್ಲ ಗಾಂಧಿ !

ನೀನಿಲ್ಲದ ಭಾರತವೀಗ ಅನಾಥವಾಗಿದೆ ಬಾಪು !
ಆದರೂ ನನ್ನದೊಂದು ವಿನಂತಿ ಮಹಾತ್ಮ
ಇನ್ನೊಮ್ಮೆ ನಮ್ಮ ದೇಶದಲ್ಲಿ ಹುಟ್ಟಿ ಬರಬೇಡ !
ದೇಶದ ದುಸ್ಥಿತಿಯನ್ನು ನೋಡಿ ನೀನು ಮರಗಿ ಕಣ್ಣೀರು ಹಾಕುವುದು ಬೇಡ !
ನಮ್ಮ ತಾಪತ್ರಯಗಳು ನಮಗೇ ಇರಲಿ !
ನೀನು ಮಾತ್ರ ಎಲ್ಲವನ್ನು ನೋಡುತ್ತಾ ಸುಖವಾಗಿ ಸ್ವರ್ಗದಲ್ಲಿ ಸುಮ್ಮನಿದ್ದು ಬಿಡು !


About The Author

1 thought on “ಪ್ರೊ. ಸಿದ್ದು ಸಾವಳಸಂಗ-ಮತ್ತೊಮ್ಮೆ ಹುಟ್ಟಿ ಬರಬೇಡ ಮಹಾತ್ಮ”

  1. ಇನ್ನೊಮ್ಮೆ ಹುಟ್ಟಿ ಬರಬೇಡ ಎಂದಾಗ ಋಣಾತ್ಮಕವಾಗಿ ಇರಬಹುದೇನೋ ಏಂದು ಏಲ್ಲರಿಗೂ ಅನ್ನಿಸುತ್ತದೆ. ಅವರಿದ್ದಿದ್ದರೇ ಸದ್ಯದ ದೇಶದ ಪರಿಸ್ಥಿತಿ ನೋಡಿ ಮರುಗುವಂತಿತ್ತು ಎನ್ನುವದು ಸಹಜ. ಆದರೇ, ಇದಕ್ಕೆ ಕಾರಣ ಹುಡುಕಬೇಕಾದವರು ಜನರೇ ಅಲ್ಲವೇ ? ಜಾತಿ ರಾಜಕಾರಣವಂತೂ ಮುಗಿಲು ಮುಟ್ಟಿದೆ. ಜನರು ಅದನ್ನು ಸಹಿಸಿದಷ್ಟು ರಾಜಕೀಯ ಬ್ರಷ್ಟರು ಶ್ರೀಮಂತರಾಗುತ್ತಾರೆ. ಒಂದಂತೂ ಸತ್ಯ, ಲಕ್ಷ ಕೋಟಿ ಬ್ರಷ್ಟತನದಿಂದ ಜನತೆಯ ಹಣ ದಿವಾಳಿಗೆ ಬಲಿಯಾಗಿದೆ. ನಮ್ಮ ದೇಶ ಬೆಳೆಯದಿದ್ದರೂ ಪರವಾ ಇಲ್ಲ ಬ್ರಷ್ಟತನ ನಿರ್ಮೂಲನವಾಗಲಿ ಏಂಬುದೇ ಕಳಕಳಿ. ಅದು ಬಾಪೂಜಿ ಕಂಡ ಕನಸು.

Leave a Reply

You cannot copy content of this page

Scroll to Top