ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೋಗಿಲೆಯ ಗಾನವನು
ಕವಿತೆಯಲಿ ನುಡಿಸಿ
ಹಂಸಪಕ್ಷಿಯನು
ಭಾವ ಸಲಿಲದಿ ತೇಲಿಸಿ
ಪಿಸುಮಾತಲಿ ಚಕೋರಿಯ
ಚಂದ್ರಮಂಚಕೆ ಕರೆಯುವ
ಎಂಥ ! ರಸಭರಿತ ಕಾವ್ಯ..

ಜಲಗಾರ , ಶೂದ್ರ ತಪಸ್ವಿ
ಬಲಪಡೆದ ಕೀಳರಿಮೆ
ಶತಮಾನಗಳ ಹಳೆಯ
ಕೊಳೆಯನು ತೊಳೆದು
ಹೊಸಹೊಳವು ಬೆಳಕಿನ
ಹೊಂಗಿರಣದ ಅನಂತದೆಡೆಗೆ
ಸಾಗಿದಾ ದೋಣಿಯು..

ನೆಮ್ಮದಿಯ ಬದುಕಿಗೆ
ಹಮ್ಮಬಿಮ್ಮಿಲ್ಲದ ನಡೆ
ಭೇದಭಾವ ಅಳಿಸಿ
ಗುಡಿ ಚರ್ಚು ಮಸೀದಿಗಳ
ಒಳಗಿನ ದೇವರೆಲ್ಲ ಒಂದೇ
ಮನುಜ ಕುಲವೊಂದೇ
ಮತದ ಮಾತೇಕೆ..

ಮೌಢ್ಯತೆಯ ಅಜ್ಞಾನದಿ
ಮುಳುಗಿದವರ ಕೈಯಲಿ
ವಿಜ್ಞಾನ ದೀವಿಗೆಯ ಹಿಡಿಸಿ
ಅಂತರಂಗವ ಬೆಳಗಿಸುತ
ಮೂಢಮತಿಗಳ ಭ್ರಮೆ
ಕ್ಲೇಷಗಳ ಕಳೆಯುವ
ವೈಚಾರಿಕ ಚಿಂತನೆಗಳು..

ಕಲ್ಕಿ ,ಕಲ್ಕಿ ಕವಿತೆಯ
ಸಾರವು ಏನು ಅದ್ಭುತ?
ಕನಸಲಿ ಸ್ವರ್ಗದ್ವಾರದಿ
ಯಕ್ಷಪ್ರಶ್ನೆಗುತ್ತರದ ಶೈಲಿ
ಮೋಡಿ ಮಾಡುವುದು
ನಿಜಕೂ ಮೇರು ಮಂದಾರ..

ಮಹಾಕಾವ್ಯ ಕಾಲ ಮುಗಿದೋಯ್ತು
ಅನುವಾಗ ಮತ್ತೆ
ಪರಂಪರೆಯ
ಸೃಜಿಸಿದಿರಿ ನೀವು
ಶ್ರೀ ರಾಮಾಯಣ
ದರ್ಶನಂ ಮಹಾಕಾವ್ಯ ..

ಕನ್ನಡ ಭಾಷೆಯ
ಹೆಮ್ಮೆಯನು
ಹೆಚ್ಚಿಸುತ
ಅನುವಾದದಿ
ತೊಡಗಿ ನೀವು
ಕಿಂದರ ಜೋಗಿಯ
ಕಿನ್ನರಿ ನಾದವಗೈದಿರಿ..

ಕನ್ನಡದ ಈ ನೆಲವು
ಜಲವೆಲ್ಲ ಪಾವನವು
ನುಡಿ ಶ್ರೇಷ್ಠವಾಗಿಸಿ
ಕನ್ನಡವೇ ಕಲ್ಪತರು
ತಾಯ್ನೆಲವು ಸ್ವರ್ಗವು
ರಸ ಕಾವ್ಯ ರಚಿಸಿ
ರಸ ಋಷಿಯಾದಿರಿ..

ಭಾರತಕೆ ಬಲವಾಗಿ ತಾವು
ಕರ್ನಾಟಕದ ಇತಿಹಾಸದ
ಸಾಹಿತ್ಯ ಸಂಸ್ಕೃತಿಯ
ಸೌರಭವ ಎಲ್ಲೆಡೆಗೆ
ಸೂಸುತಲಿ ಅನವರತ
ಕಾವ್ಯ ಸಾಮ್ರಾಜ್ಯದಲಿ
ನವ ಚಕ್ರವರ್ತಿ ..

ನಿಮಗಿಂದು
ಜನುಮದಿನವು
ಮತ್ತೆ ಮರಿದುಂಬಿ
ಗಿಳಿ ಕೋಗಿಲೆಯಾಗಿ
ಎಳೆಬಳ್ಳಿ ಅಲರಿನಲಿ
ಮಲ್ಲಿಗೆಯ ನನೆಯಲಿ

ಚಿಮ್ಮಿತಾ ಬನ್ನಿ ನೀವು..


About The Author

Leave a Reply

You cannot copy content of this page

Scroll to Top