ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

ನಾನೂ ಅವನoತಾಗಬೇಕು

ಕನಕನ ಎದೆಯ ಮೇಲೆ
ಕೂಸಾಗಿ ಹಾಯಾಗಿ
ಮಲಗಬೇಕು
ಎದೆಕರುಗುವ ಜೋಗುಳ
ಕೇಳುತ
ಸಿರಿ ಸಂಪದ ಸೂರೆಗೊಂಡು
ನಿಜ ಸುಖವ ಹುಡುಕುತ
ಹೊರಟ ಕನಕನoತೆ
ನಡೆಯಬೇಕು ನಾನೂ ಅವನoತಾಗಬೇಕು

ಕಂಬಳಿಯ ಬಿಸಿಗೆ ಕರಗಿ
ನಾನೂ ಬೆಳಕಾಗಿ
ಹರಿಯಬೇಕು
ನಿಲ್ಲದಂತೆ
ಚಲಿಸುತ್ತಲೇ ಇರಬೇಕು
ನಾನೂ ಬೆಳಕಾಗಬೇಕು
ಅವನಂತೆ ಒಳ ಹೊರಗ ಗೆಲ್ಲಬೇಕು

ಅಧಿಕಾರ ಗದ್ದುಗೆಯ
ಕೆಡುವಬೇಕು
ನಾನೂ ಅವನಂತೆ
ಜನರೆದೆಯ
ಹಾಡಾಗಿ
ತಾಳ ತಂಬೂರಿಯ
ಜೊತೆಗೊಂದಾಗಬೇಕು

ನಾನೂ ಕನಕನಂತಾಗಬೇಕು
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿದಂತೆ
ಹರಿವ ಮನವ ಕಟ್ಟಿ
ಹರಿಯೆಡೆಯೆಗೆ
ನಡೆಯಬೇಕು

ಹುಟ್ಟು ಸಾವುಗಳಾಚೆ
ನಿಂತ ದೊರೆಯಾತ
ಕಾಗಿನೆಲೆಯ ಆದಿಕೇಶವನ ದಾಸ
ದೊರೆತನವ ನೀಗಿ
ಕುಲದ ಗೋಡೆಯೊಡೆದು
ಬಯಲ ತಬ್ಬಿದಾತ
ಬೆಳಕ ಬಿತ್ತಿದಾತ ಕನಕ
ಬಾಡದ ಬನದ ಕೋಗಿಲೆಯಾತ
ನೆಲದ ಮಣ್ಣಿಗಂಟಿಕೊಂಡು
ಜೀವದನಿಯಾದಾತ
ನಾನೂ ಅವನoತಾಗಬೇಕು

ಕನಕನoತಾಗಲು
ಒಳಗಿನ ವೈರಿಗಳ ಕೊಲ್ಲಬೇಕು
ನನ್ನ ನಾನು ಗೆಲ್ಲಬೇಕು
ಇದು ಸುಲಭವಲ್ಲ ಸುಲಭವಲ್ಲ
ಎಲ್ಲಾ ಇದ್ದೂ
ಎಲ್ಲಾ ತೊರೆಯುವುದು
ಸುಲಭವಲ್ಲ ಸುಲಭವಲ್ಲ
ಕನಕನoತಾಗುವುದು
ಸುಲಭವಲ್ಲ ಸುಲಭವಲ್ಲ
ಆದರೂ ನಾನೂ ಅವನoತಾಗಬೇಕು….


ಡಾ. ಪುಷ್ಪಾ ಶಲವಡಿಮಠ

About The Author

5 thoughts on “ಡಾ. ಪುಷ್ಪಾ ಶಲವಡಿಮಠ-ನಾನೂ ಅವನoತಾಗಬೇಕು”

Leave a Reply

You cannot copy content of this page

Scroll to Top