ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ನೆನಪಿನದೋಣಿಯಲಿ

ಮಳೆಬಂತುನೆನಪಿನಹೊಳೆತಂತು

ಮುತ್ತಿನ ಹನಿಗಳು ಸುತ್ತಲು ಮುತ್ತಲು 

ಮನವು ಅರಳಿ ಹೊಸತನ ತಂದಿದೆ ನನ್ನಲ್ಲಿ ನಿನ್ನಲ್ಲಿ 

ಮಳೆಯೆಂದರೆ ಅದೊಂದು ಅದ್ಭುತ! ತುಂತುರು ಹನಿಯ ಸಿಂಚನ ಇರಲಿ ಜಡಿಮಳೆಯ ಸೋನೆ ಇರಲಿ,  ಆರ್ಭಟಿಸಿ ಭೋರೆಂದು ಸುರಿಯುವ ಬಿರುಮಳೆಯೇ ಆಗಲಿ, ಪ್ರಕೃತಿಯ ಸೋಜಿಗವಾದ ಮಳೆ ಎಂದೆಂದಿಗೂ ಆಪ್ಯಾಯಮಾನವೇ.  ಚಿಕ್ಕಂದಿನಲ್ಲಿ ಹಾಡುತ್ತಿದ್ದ

ಮಳೆ ಬಂತು ಮಳೆ ಕೊಡೆ ಹಿಡಿದು ನಡೆ 

ಪ್ರಾಸಬದ್ಧ ಪದ್ಯವಾಗಲಿ 

ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ 

ಎಂದು ಕಿರುಚಾಡಿ ಗೆಳೆಯರೊಂದಿಗೆ ಹುಯಿಲೆಬ್ಬಿಸಿದ್ದುದಾಗಲಿ ಮರೆಯಲುಂಟೆ ? ಬಾಲ್ಯದ ನೆನಪುಗಳೊಂದಿಗೆ ಮಳೆ ಎಂತಹ ತಳುಕು ಹಾಕಿಕೊಂಡಿದೆ ಎಂದರೆ ಪ್ರತಿ ಬಾಲ್ಯದ ಮೆಲುಕುಗಳಲ್ಲಿ ಮಳೆ ಇಣುಕಿ ನೋಡುತ್ತದೆ ಹಣಿಕಿ ಹಾಕೇ ಬಿಡುತ್ತದೆ. 

 ವರ್ಷದ ಮೊದಲ ಮಳೆ 

ಯುಗಾದಿಯ ನಂತರ ಬಿರುಬೇಸಿಗೆ ಶುರುವಾದರೂ ಅದೇ ಸಮಯದಲ್ಲಿ ವರ್ಷದ ಮೊದಲ ಮಳೆಯ ಆಗಮನವೂ ಕೂಡ . ಅದೇನು ಒಂದೇ ಬಾರಿಗೆ ಧಿಡೀರ್ ಭೇಟಿ ಕೊಡುತ್ತಿತ್ತೇ? ಒಂದೆರಡು ದಿನ ಸಂಜೆಯಲ್ಲಿ ಕಾರ್ಮೋಡವಾಗಿ ಮಿಂಚು ಗುಡುಗು ಸಿಡಿಲುಗಳ ಆರ್ಭಟ ತೋರಿಸಿ ಆಸೆ ತೋರಿಸಿ ಮರೆಯಾಗಿ ಇನ್ನೆಲ್ಲೋ ಸುರಿಯುತ್ತಿತ್ತು.  ಅಂತೂ ಇಂತೂ 1 ದಿನ ಸಂಜೆ ಧೋ ಎಂದು ಮಳೆ ಸುರಿದು ಮನವೂ ವಾತಾವರಣವೂ ತಂಪು. ಅಂದಹಾಗೆ ಈ ಬೇಸಿಗೆಯ ಮಳೆಗಳ ಮುಸ್ಸಂಜೆಯಲ್ಲಿ ಸಂಜೆ ಮಳೆ ಶುರುವಾಗುತ್ತಿದ್ದ ಹಾಗೆ ಬಿಸಿಬಿಸಿ ಕರಿದ ತಿಂಡಿ ಮಾಡುತ್ತಿದ್ದುದು ನಮ್ಮ ಮನೆಯ ವಿಶೇಷ . ಅದಕ್ಕೇ ಏನೋ ಈಗಲೂ ಮಳೆ ಬಂದಾಗ ಮನ ಬಜ್ಜಿ ಬೋಂಡಾಗಳ ಕಡೆಗೆ ಓಡಿ ಬಿಡುತ್ತದೆ .ಹಾಗೆಯೇ ಅಮ್ಮ ಪ್ರತಿ ಸಾರಿಯೂ “ಸಂಜೆ ಬಂದ ಮಳೆ ಸಂಜೆ ಬಂದ ನೆಂಟ ರಾತ್ರಿ ಉಳಿಯುತ್ತಾರೆ ” ಎನ್ನುತ್ತಿದ್ದ ಗಾದೆಯೂ ನೆನಪಿಗೆ ಬರುತ್ತದೆ. ಬೇಸಿಗೆಯಾದ್ದರಿಂದ ಒಣಗಲಿಟ್ಟ ಹಪ್ಪಳ ಸಂಡಿಗೆ ಕಾಳು ಹುಣಸೆ ಹಣ್ಣುಗಳನ್ನು ಓಡಿಹೋಗಿ ತರುವ ಕೆಲಸವೂ ಬೀಳುತ್ತಿತ್ತು .

ಈ ಮೊದಲ ಮಳೆಯ ನೆನಪು ಬಾಲ್ಯದಲ್ಲಿ ಹರೆಯದಲ್ಲೂ ಮತ್ತೀಗ ಬಾಳ ಮುಸ್ಸಂಜೆಯಲ್ಲೂ ಒಂದೊಂದು ಅನುಭೂತಿ…… ಮೂರನೇ ತರಗತಿಯಲ್ಲಿದ್ದಾಗ ಕಡೆಯ ಪರೀಕ್ಷೆಯ ದಿನ 4ಗಂಟೆಗೆ ಪರೀಕ್ಷೆ ಮುಗಿದರೂ ಶಾಲೆಯಲ್ಲಿ ಹೊಸದಾಗಿ ಕಟ್ಟಿದ ಜಾರುಬಂಡೆಯಲ್ಲಿ ಮನಸೇಚ್ಛೆ  ನಾನು ಹಾಗೂ ನಮ್ಮ ಮನೆ ಬಳಿ ಇದ್ದ ಗಾಯತ್ರಿ ಆಡಿ ನಂತರ ಮನೆಕಡೆ ಹೊರಟೆವು. ದಾರಿಯಲ್ಲಿ ಎಡಪಕ್ಕ ಸ್ಮಶಾನ ಬಲಗಡೆ ತೆಂಗಿನತೋಟ. ಆಗ ಶುರುವಾದ ಜೋರು ಮಳೆಯಲ್ಲಿ ತೋಪಿನಲ್ಲಿ ಎಷ್ಟೋ ಹೊತ್ತು ನಿಂತಿದ್ದು ಎದುರುಗಡೆ ಸ್ಮಶಾನ ನೋಡಲು ಅಂಜಿ ತಿರುಗಿಕೊಂಡು ನಿಂತಿದ್ದು ಎಷ್ಟೋ ವರ್ಷಗಳಾದರೂ ಕಣ್ಣಿಗೆ ಕಟ್ಟಿದಂತಿದೆ.  ಆ ನಂತರ ಮನೆಯಲ್ಲಿ ಬೈಸಿಕೊಂಡಿದ್ದರ ಬಗ್ಗೆ ಮತ್ತೆ ಕೇಳಬೇಡಿ! ನಮ್ಮ ಮದುವೆಗೆ ಮುಂಚೆ ಕುಕ್ಕನಹಳ್ಳಿ ಕೆರೆದಂಡೆಯ ಮೇಲಿರುವಾಗ ಇದೇ ಬೇಸಿಗೆಯ ಸಂಜೆ ಮಳೆ….. ಎದುರಿಗಿದ್ದ ಜಲರಾಶಿಯ ಮೇಲೆ ಮಳೆಯ ನರ್ತನ. ಲತಾ ಚಪ್ಪರದ ಸಂದಿಯಿಂದ ತೊಟ್ಟಿಕ್ಕುತ್ತಿದ್ದ ಜಲಧಾರೆ.. ಒತ್ತಿ ನಿಂತಿದ್ದ ಜೋಡಿ ಜೀವಗಳಲ್ಲಿ “ಒಲಿದ ಜೀವ ಜೊತೆಯಲಿರಲು ಬಾಳು ಸುಂದರ” ಹಾಡನ್ನು ನೆನಪಿಸಿದ್ದು ಸುಳ್ಳಲ್ಲ. ಆ ರೋಮಾಂಚನದ ಸವಿಗಳಿಗೆ ಈಗಲೂ ಮುಗುಳು ನಗೆ ತರಿಸುತ್ತಿದೆ.  ನಂತರದ ಧಾವಂತದ ದಿನಗಳಲ್ಲಿ ಕಚೇರಿಯಿಂದ ಹೊರಡುವಾಗ ಬಂದು ವಿಳಂಬ ಮಾಡಿಸುತ್ತಿದ್ದ ಮಳೆಯ ಬಗ್ಗೆ ಬೇಸರವೇ. ಇತ್ತೀಚೆಗೆ ಸಂಜೆಯ ವಾಯುವಿಹಾರಕ್ಕೆ ಅಪರೂಪಕ್ಕೆ ಹೋದಾಗ ಮಳೆಗೆ ಸಿಲುಕಿ ಮತ್ತೊಮ್ಮೆ ಮೊದಲ ಮಳೆಯ ಭೇಟಿಯಾಗಿತ್ತು. ಭಯ ಧಾವಂತವಿರದೆ ಮಳೆಯ ಆರ್ಭಟ ನೋಡುವಾಗ ಜೀವನದ ಸಣ್ಣ ಸಣ್ಣ ಸವಿಕ್ಷಣಗಳನ್ನು ಆಸ್ವಾದಿಸುವುದನ್ನೇ ಮರೆತಿದ್ದೇನಲ್ಲ ಎಂದೆನಿಸಿತು . ಸಣ್ಣಗೆ ಮಳೆ ಬರುತ್ತಿದ್ದರೂ ಚಿಕ್ಕ ಮಕ್ಕಳ ಹಾಗೆ ನೆಂದು ಬಂದೇ ಸಂಭ್ರಮಿಸಿದೆ .”ಏನೋ ಹೊಸ ಉಲ್ಲಾಸ ಸಂತೋಷ ಈ ದಿನ”  ಎಂದು ಗುನುಗಿಕೊಳ್ಳುತ್ತಾ… ಸದ್ಯ ಬಾಲ್ಯದ ಹಾಗೆ ಕಾಗದದ ದೋಣಿ ಮಾಡಿ ತೇಲಿ ಬಿಡಲಿಲ್ಲ .

ಶ್ರಾವಣದ ಜಡಿ ಮಳೆ 

ಮೇ ಜೂನ್ ಶಾಲೆ ಆರಂಭವಾಗುವುದಕ್ಕೂ ಮುಂಗಾರು ಅಡಿಯಿಡುವುದಕ್ಕೂ ಸರಿಯಾಗುತ್ತಿತ್ತು.  ಹೊಸ ಪುಸ್ತಕಗಳು ಬಟ್ಟೆಯ ಪಾಟೀಚೀಲದಲ್ಲಿ ನೆನೆಯಬಾರದೆಂದು ಆಗ ಅಪರೂಪವಾಗಿದ್ದ ಪ್ಲಾಸ್ಟಿಕ್ ಕವರುಗಳನ್ನು ಸಂಪಾದಿಸಿ ಜೋಪಾನ ಮಾಡಿದ್ದೇ ಮಾಡಿದ್ದು . ನಾವು ನೆಂದರೂ ಪರವಾಗಿಲ್ಲ ಅಂತ . ಇನ್ನು ನಾಗರ ಪಂಚಮಿಯಂದು ಅರ್ಧ ದಿನ ಶಾಲೆ.  ಜಡಿ ಮಳೆಯಲ್ಲಿ ನೆನೆದು ಬಂದು ಅಮ್ಮ ಬಿಸಿ ಬಿಸಿ ಮಾಡಿ ಕೊಡುತ್ತಿದ್ದ ಪಂಚಮಿಯ ಕುಚ್ಚಲ ಕಡುಬುಗಳ ರುಚಿ ಮರೆಯಲು ಸಾಯುವವರೆಗೂ ಸಾಧ್ಯವಿಲ್ಲ. ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನಾಚರಣೆಗೂ ಮಳೆ ಗೂ ಅದೇನೋ ನಂಟು . ಪ್ರತಿ ವರ್ಷವೂ ನಡೆಯುತ್ತಿದ್ದ ಧ್ವಜಾರೋಹಣ ಕವಾಯತು ಗಳೆಲ್ಲ ಜಿನು ಜಿನುಗೋ ಮಳೆ ಹನಿಯ ಸಿಂಚನ ದಲ್ಲೇ ಸಾಗುತ್ತಿದ್ದುದು ವಿಶೇಷ . ಇನ್ನು ಗೌರಿ ಗಣೇಶ ವರಮಹಾಲಕ್ಷ್ಮಿ ಹಬ್ಬಗಳಲ್ಲಿಯೂ ಅಷ್ಟೆ ಕುಂಕುಮ ಆರತಿಗೆ ಕರೆಯಲು ಹೋಗಲು ಮಳೆ ಅಡ್ಡ ಮಾಡುತ್ತಿದ್ದುದೇ ಹೆಚ್ಚು.  ಆದರೂ ರಾತ್ರಿಯಿಡೀ ಜಿನುಗುವ ಕೊಟಕೊಟ ಮಳೆಯ ಸದ್ದು ,ವಟಗುಟ್ಟುವ ಕಪ್ಪೆಗಳು ಜೀರುಂಡೆಯ ದನಿ ಬೆಚ್ಚಗೆ ಇಬ್ಬರು ಸೇರಿ ಹೊದ್ದ ಕಂಬಳಿಯಲ್ಲಿ ಜೋಗುಳ ಹಾಡಿ ಮಲಗಿಸುತ್ತಿದ್ದವು. “ಮರೆತೇನೆಂದರೂ ಮರೆಯಲಿ ಹ್ಯಾಂಗ ಆ ದಿನಗಳ “

ನವರಾತ್ರಿಯ ಮಳೆ 

ನವರಾತ್ರಿಯ ಸಮಯದಲ್ಲಿ ಸಮಾರಂಭಗಳ ಸಂಜೆ ಗೊಂಬೆ ಆರತಿಯ ಸಂದರ್ಭಗಳಲ್ಲೆಲ್ಲ ಈ ಮಳೆಯದೇ ಅಡ್ಡಗಾಲು.    ಗಣಪತಿ ಪೆಂಡಾಲ್ ಗಳ ಆರ್ಕೆಸ್ಟ್ರಾಗಳ ಅದರಲ್ಲೂ ಮೆಚ್ಚಿನ ಕಾರ್ಯಕ್ರಮಗಳು ಇದ್ದುದು ಮಳೆಗೆ ಯಾರು ತಿಳಿಸುತ್ತಿದ್ದರೋ ಏನೋ ಕಾರ್ಯಕ್ರಮ ಆರಂಭವಾಗಿ ಸ್ವಲ್ಪ ಹೊತ್ತಿಗೆ ಕುಂಭದ್ರೋಣ ಸುರಿಯುತ್ತಿತ್ತು.  ನಾವೇನೂ ಕಡಿಮೆ ಅಲ್ಲ ಬಿಡಿ ನೆಂದರೂ ಸಹ ಕಾರ್ಯಕ್ರಮ ನೋಡಿಯೇ ಸಿದ್ಧ. ನಮ್ಮ ಈ ಸ್ಪರ್ಧೆಯಲ್ಲಿ ಕೆಲವೊಮ್ಮೆ ಮಾತ್ರ ನಾವು ಗೆಲ್ಲುತ್ತಿದ್ದುದು. ಬಹುಪಾಲು ಜಯ ವರುಣನದೇ ಆಗಿರುತ್ತಿತ್ತು . ಇಂದು ಅವೆಲ್ಲಾ ಕನಸು!  ಅರಮನೆಯ ಸಂಗೀತ ಕಾರ್ಯಕ್ರಮ, ದೀಪಾಲಂಕಾರ, ದಸರಾ ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ ಎಲ್ಲ ಕಡೆಯೂ ಈ ಮಳೆ ವಿಘ್ನ ಸಂತೋಷಿಯಾಗಿರುತ್ತಿದ್ದರೂ ಅದರ ಜೊತೆಜೊತೆಗೆ ನಾವು ಹೊಂದಿಕೊಂಡು ಹೋಗಿಬಿಡುತ್ತಿದ್ದೆವು. 

 ದೀಪಾವಳಿಯ ಮಳೆ 

ದೀಪಾವಳಿಗೂ ಮಳೆಗೂ ಅವಿನಾಭಾವ ಸಂಬಂಧ.  ಪಟಾಕಿ ಹಚ್ಚಲು ಆಗದೇ, ಹಚ್ಚಿದರೂ ಟುಸ್ಸೆನಿಸುತ್ತಿದ್ದ, ಹಣತೆಗಳನ್ನಿಟ್ಟು ದೀಪ ಬೆಳಗಿಸಲು ಬಿಡದೆ ಬರುತ್ತಿದ್ದ ಮಳೆ ಈಗಲೂ ಹಾಗೆಯೇ ಮಾಡಿ ಕೆಲವೊಮ್ಮೆ ಬಾಲ್ಯವನ್ನು ನೆನಪಿಸುತ್ತಿರುತ್ತದೆ. 

 ವಾಯುಭಾರ ಕುಸಿತದ ಮಳೆ 

ಡಿಸೆಂಬರ್ ಜನವರಿಯಲ್ಲಿ ವಾಯುಭಾರ ಕುಸಿತದ ಮಳೆಗಳು 3 ದಿನಗಳ ಕಾಲ ಹಿಡಿದುಕೊಳ್ಳುತ್ತಿದ್ದವು.  ಸೊನೆ ಸೊಗಡು ಅವರೆಯ ಕಾಲ. ರುಚಿಯಾಗಿ ಮಾಡಿರುತ್ತಿದ್ದ ಅಡುಗೆ ತಿಂಡಿಗಳನ್ನು ಪಟ್ಟಾಗಿ ಹೊಡೆದು ಪಗಡೆ ಚೌಕಾಬಾರ ಆಡುತ್ತಲೋ ಅಥವಾ ಮೆಚ್ಚಿನ ಕಥೆ ಪುಸ್ತಕ ಹಿಡಿದು ಕೂತಿರುತ್ತಿದ್ದ ಆ ದಿನಗಳು ಮರಳಿ ಮತ್ತೆ ಬರಬಾರದೇ ಅನ್ನಿಸತ್ತೆ.  

ನಾನು ಹುಟ್ಟಿದ್ದೇ ಬೇಸಿಗೆಯ ಮೊದಲ ಮಳೆಯ ದಿನದಲ್ಲಂತೆ.  ಅಜ್ಜ ಸೂಲಗಿತ್ತಿಯನ್ನು ಕರೆತರಲು ಛತ್ರಿ ಹಿಡಿದು ಹೋಗಿದ್ದರು ಅಂತ ಅಮ್ಮ ಹೇಳುತ್ತಿದ್ದರು.  ಅದಕ್ಕೆ ಮಳೆಯೆಂದರೆ ನನಗೆ ತುಂಬಾನೇ ಪ್ರೀತಿ . ಮಲೆನಾಡಿನ ವರ್ಣನೆ ಓದಿದಾಗಲೆಲ್ಲ ನಾನು ಅಲ್ಲಿರಬಾರದಿತ್ತೇ ಅನ್ನಿಸುತ್ತಿತ್ತು.  ಅದಕ್ಕೆ 2ವರ್ಷ ಸಕಲೇಶಪುರಕ್ಕೆ ವರ್ಗವಾಗಿ ಹೋಗುವ ಅವಕಾಶ ಒದಗಿ ಬಂದಿತ್ತು . ಮಳೆಯ ಸವಿಯ ಬೋನಸ್ ಜತೆ ಬಟ್ಟೆ ಒಣಗಿಸಲಾಗದ , ತರಕಾರಿ ಬೂಷ್ಟು ಹಿಡಿಯುವ ಕಷ್ಟ,  ದಿನಗಟ್ಟಲೆ ವಿದ್ಯುತ್ ಇಲ್ಲದೆ ಕೆಳಗಿನಿಂದ ನೀರು ಹೊರುವ ಸಜಾ ಎಲ್ಲಾ ಇದ್ದರೂ ಜಿಟಿಜಿಟಿ ಮಳೆ ನೋಡುತ್ತಾ ಬಿಸಿಬಿಸಿ ಕಾಫಿ ಕುರುಕು ತಿನ್ನುತ್ತಿದ್ದ ಆ ಮಜಾನೇ ಬೇರೆ.  

ಇಂದು ಮಳೆ ಬಗೆಗಿನ ಸವಿ ನೆನಪುಗಳನ್ನು ಮಾತ್ರ ಹಂಚಿಕೊಂಡಿರುವೆ.  ಫಜೀತಿಗೆ ಸಿಲುಕಿಸಿದ ಪ್ರಸಂಗಗಳನ್ನು ಮತ್ತೆಂದಾದರೂ ನೆನಪಿಸಿಕೊಳ್ಳುವೆ.  ಆದರೆ ಮಳೆ ಬಂದು ಇಳೆ ತಂಪಾಗಿ ಬೆಳೆ ತರುವ ಸೊಗದ ಸಿರಿ ಹರಿಸುವ ಗಳಿಗೆಗಳು ನಿರಂತರವಾಗಿರಲಿ . ವರುಣನನ್ನು ಪೂಜಿಸಿ ಆರಾಧಿಸಿ ಕರೆಯೋಣ .”ಮಳೆ ಬಂದರೆ ಕೇಡೇ ಮಕ್ಕಳಾದರೆ ಕೇಡೇ” ಎನ್ನುವ ಸಂಸ್ಕೃತಿ ನಮ್ಮದು.  “ರೇನ್ ರೇನ್ ಗೋ ಅವೇ” ಅನ್ನುವ ಪರಿಪಾಠ ಜಾಯಮಾನ ನಮ್ಮದಲ್ಲ. ಬೇಡವೂ ಬೇಡ ಏನಂತೀರಿ? 

ಸುರಿವ ಮಳೆಯ ಹನಿಯ ತೆರೆಗಳ ಹಿಂದೆ ಅಗಲಿದ ಪ್ರೀತಿಪಾತ್ರರ ಮುಖಗಳು ಹಾಗೇ ತೇಲಿ ಬರುತ್ತದೆ . ನೋವುನಲಿವುಗಳ ಆವರ್ತನ ಸಹಜವೆಂಬ ಪಾಠದೊಂದಿಗೆ ಕಳೆದ ಸವಿಗಳಿಗೆಗಳ ನೆನಪಷ್ಟೇ ನಿರಂತರ . ಇಂದಿನ ಈ ವರ್ತಮಾನವೂ ನಾಳೆಯ ಗತಕಾಲ ಎಂಬ ಜೀವನದ ಸತ್ಯವನ್ನು ಹೇಳುತ್ತಲೇ ಇರುತ್ತದೆ.  


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

About The Author

Leave a Reply

You cannot copy content of this page

Scroll to Top