ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ನೆನಪಿನದೋಣಿಯಲಿ

ಸ್ಪಟಿಕ /  ಗೊರಟಿಗೆ ಹೂ

ಹೂವು ಎಂದರೆ ಮನಕ್ಕೆ ಒಂಥರಾ ಹರ್ಷ. ಬಾಲ್ಯ ಅಂದರೆ ಸಹ ಅಷ್ಟೇ .ನನ್ನ ಬಾಲ್ಯಕ್ಕೂ ಹೂವಿಗೂ ತುಂಬಾನೇ ನಂಟು.  ಈಗಲೂ ಆ ಬೆಸುಗೆ ತುಂಡಾಗದ ಹಾಗೆ ಹೂವಿನ ಮೇಲಿನ ಪ್ರೀತಿ ಹಾಗೇ ಇದೆ. ಚಿಕ್ಕವರಿದ್ದಾಗಿನ ನಮ್ಮ ಮನೆಯ ಕೈ ತೋಟದಲ್ಲಿ ಹೂವಿನ ಗಿಡಗಳೇ ಹೆಚ್ಚು. ಅಮ್ಮನೇ ಮಾಡಿದ ತೋಟದಲ್ಲಿ ಇಲ್ಲದ ಹೂ ಗಿಡಗಳೇ ಇರಲಿಲ್ಲ ಅಂದರೆ ಅತಿಶಯೋಕ್ತಿ ಅಲ್ಲ.  ಕೊಂಡು ತರಲು ನರ್ಸರಿಗಳಿರದ ಆ ಕಾಲದಲ್ಲಿ ವಿನಿಮಯದಿಂದಲೇ ಗಿಡಗಳು ಬೆಳೆಯುತ್ತಿದ್ದು ಉಳಿಯುತ್ತಿದ್ದುದು. ಆಗಿನ ಹೂವುಗಳಲ್ಲಿ ಅಚ್ಚಳಿಯದ ನೆನಪು ಅಂದರೆ ಸ್ಫಟಿಕದ ಹೂ. ಅರ್ಥ ಆಗಲಿಲ್ಲವಾ ? ಗೊರಟಿಗೆ ಅಥವಾ ಗೊರಟೆ ಹೂ ಅಂತಾರಲ್ಲ ಅದು . ಮೊದಲೆಲ್ಲ ಎಂಕೆ ಇಂದಿರಾ ವಸುಮತಿ ಉಡುಪ ಅವರ ಕಾದಂಬರಿಗಳಲ್ಲಿ ಗೊರಟೆ ಹೂ ಅಂತ ಓದಿದಾಗ ಯಾವುದಪ್ಪಾ ಇದು ಅಂದುಕೊಂಡಿದ್ದು ಉಂಟು. ಆಮೇಲಾಮೇಲೆ ಗೊತ್ತಾಯ್ತು ಗೊರಟಿಗೆ ಹೂ ಅಂದರೆ ನಮ್ಮ ಸ್ಫಟಿಕದ ಹೂವೇ ಅಂತ. ತೀರಾ ಹಳ್ಳಿ ಉಚ್ಛಾರಣೆಯಲ್ಲಿ ಪಟಿಕ ಹೂ ಅಂತಾನೂ ಅನ್ನುವ ಈ ಸ್ಪಟಿಕಕ್ಕೆ ಆ ಹೆಸರು ಹೇಗೆ ಬಂತು ಅಂತ ಮಾತ್ರ ದೇವರಾಣೆಗೂ ಗೊತ್ತಿಲ್ಲ.  ದಯವಿಟ್ಟು ಕೇಳಬೇಡಿ.😁😁

ಸಂಸ್ಕೃತದಲ್ಲಿ ಈ ಪುಷ್ಪಕ್ಕೆ ಸಹಚರ ಸರೈಕಾ ಎಂಬ ಹೆಸರುಗಳಿವೆ .ಇದರ ವೈಜ್ಞಾನಿಕ ನಾಮ ಬರ್ಲೇರಿಯ 

ಕ್ರಿಸ್ಪಾಟ .ಅಕಾಂತರ್ಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ .ಇದು ಪೊದೆಯ ಆಕಾರದಲ್ಲಿ ಉದ್ದುದ್ದ ಕಾಂಡಗಳನ್ನು ಹೊಂದಿದೆ .ಕಾಂಡಕ್ಕೆ ಅಂಟಿಕೊಂಡಂತೆ ಮೊಗ್ಗಿನ ಗೊಂಚಲುಗಳು. ಮೊಗ್ಗಲ್ಲಿ ಕಿತ್ತಾಗ ಸಂಪೂರ್ಣ ಅರಳುವುದಿಲ್ಲ. ಗಿಡದಲ್ಲಿದ್ದರೆ ಬೆಳಿಗ್ಗೆ ಬೇಗನೆ ಪೂರ್ಣ ಅರಳುವ ಇವು ಬೇಗನೆ ಬಾಡುವುದಿಲ್ಲ ಕೂಡ. ತೆಳುವಾದ ಬೀಜಗಳಾದ್ದರಿಂದ ಹಗುರವಾಗಿ ಗಾಳಿಯಲ್ಲಿ ಹರಡಿ ಹೊಸ ಗಿಡಗಳ ಉತ್ಪತ್ತಿ ಸುಲಭವಾಗಿ ಆಗುತ್ತದೆ .

ಬಣ್ಣ ಬಣ್ಣವಾಗಿ ಆಕರ್ಷಕವಾಗಿರುವ ಈ ಹೂವಿಗೆ ಯಾವುದೇ ಸುವಾಸನೆ ಇಲ್ಲ.  ಅಲಂಕಾರಕ್ಕೆ ಮುಡಿಯಲು ಹಾಗೂ ಇತ್ತೀಚೆಗೆ ಪೂಜೆಗೆ ಸಹ ಬಳಸುತ್ತಾರೆ ನಾವು ಚಿಕ್ಕವರಿದ್ದಾಗ ಹಾರ ಮಾಡಿ ದೇವರಿಗೆ ಹಾಕುತ್ತಿದ್ದರು ಆದರೆ ಪೂಜೆ ಅರ್ಚನೆಗೆ ಬಳಸುತ್ತಿರಲಿಲ್ಲ .ಕಾಲಿನ ಹಿಮ್ಮಡಿ ಒಡೆದಿದ್ದಾಗ( ಆಗ ಅದು ತುಂಬಾ ಮಾಮೂಲಿ) ಈ ಸೊಪ್ಪನ್ನು ಅರೆದು ಹಚ್ಚುತ್ತಿದ್ದ ನೆನಪು . ಪಕ್ಕದ ಮನೆಯ ಅಜ್ಜಿ ಮೊಳಕಾಲಿನ ನೋವಿಗೆ ಈ ಗಿಡದ ಬೇರನ್ನು ತೆಗೆದುಕೊಂಡು ಹೋಗುತ್ತಿದ್ದರ. ಸಂಧಿವಾತ ಕಿವಿ ನೋವು ಹಲ್ಲು ನೋವುಗಳ ಉಪಶಮನಕ್ಕೆ ಬಳಸುತ್ತಾರೆಂದು ಇತ್ತೀಚೆಗೆ ತಿಳಿಯಿತು.

ಇನ್ನು ನಮ್ಮ ತೋಟದ ವಿಷಯಕ್ಕೆ ಮತ್ತೆ ಬಂದರೆ ಮಾಮೂಲಿ ಸ್ಫಟಿಕ ಹೂವಿನ ಗಾಢ ನೀಲಿ ಹೂಗಳು ತೆಳು ಗುಲಾಬಿ,  ಅಚ್ಚ ಗುಲಾಬಿ ರಂಗಿನವು ಬಿಳಿ ಮತ್ತು ಸರಸ್ವತಿ (ಮೆಜಂತಾ) ಬಣ್ಣಗಳು ಪ್ರಮುಖವಾಗಿತ್ತು. ಡಬ್ಬಲ್ ಕಲರ್ ನಾಮ ಸ್ಫಟಿಕ ಎಂಬ ಪ್ರಭೇದದಲ್ಲಿ ನೀಲಿಗೆ ಬಿಳಿ ಗೆರೆ ಹಾಗೂ ಬಿಳಿಗೆ ನೀಲಿ ಗೆರೆ ಈ ತರಹ ಎರಡು ವಿಧ .ಇನ್ನು ಗಾಢ ಹಳದಿ ಬಣ್ಣದ ಸ್ಫಟಿಕ ಗಿಡವೆಲ್ಲ ಮುಳ್ಳು. ಈ ಹಳದಿ ಸ್ಫಟಿಕದ ಗಿಡವನ್ನು ಕಾಂಪೌಂಡ್ ಪಕ್ಕಕ್ಕೆ ಸುತ್ತಲೂ ಹಾಕಿ ಬಿಟ್ಟು ನೈಸರ್ಗಿಕ ಬೇಲಿ ಆಗಿಬಿಟ್ಟಿತ್ತು.  ಗಿಡಗಳು ಹೆಚ್ಚಾಗಿ ಇದ್ದಿದ್ದರಿಂದ ಜಾಸ್ತಿಯೇ ಹೂ ಬಿಡುತ್ತಿತ್ತು ಬೆಳಿಗ್ಗೆ ಎದ್ದು ಕಾಫಿ ಕುಡಿದು ಹೂ ಬಿಡಿಸಿ ಕಟ್ಟಿ ಸ್ಕೂಲಿಗೆ ಮುಡಿದು ಹೋಗುತ್ತಿದ್ದ ವಾಡಿಕೆ . ಮಿಡಲ್ ಸ್ಕೂಲ್ ತನಕ ಸಮವಸ್ತ್ರ ಬೇರೆ ಗಾಢ ನೀಲಿ ಸ್ಕರ್ಟ್ ಹಾಗೂ ಪಿಂಕ್ ಶರ್ಟ್ ಹಾಗಾಗಿ ಎರಡು ಬಣ್ಣದ ಹೂ ಬೆರೆಸಿ ದಂಡೆಗಳನ್ನು ಕಟ್ಟಿದರೆ ನಮ್ಮ ಮೂರು ಜನರ ಸಮವಸ್ತ್ರಕ್ಕೆ ಮ್ಯಾಚಿಂಗ್. ಹೈಸ್ಕೂಲಿನಲ್ಲಿ ನೀಲಿ ಸ್ಕರ್ಟ್ ಬಿಳಿ ಶರ್ಟ್ ಅದಕ್ಕೂ ಮ್ಯಾಚಿಂಗ್ ಸರಿ ಹೋಗ್ತಿತ್ತು .

ಇನ್ನು ಹೂವು ಕಟ್ಟುವ ವಿಷಯಕ್ಕೆ ಬಂದರೆ ಎರಡು ಹೂ ಸೇರಿಸಿ ತೆಳುವಾಗಿ ಕಟ್ಟುವುದು, ನಾಲ್ಕು ಹೂ ಸೇರಿಸಿ ಒತ್ತಾಗಿ ಕಟ್ಟುವುದು, ಕಾಲಿನಲ್ಲಿ ಕಟ್ಟುವ ದಂಡೆ, ಹಾರ ಕಟ್ಟುವ ಹಾಗೆ ತೋಮಾಲೆ ದಂಡೆ!  ನಿಜಕ್ಕೂ ಎಷ್ಟು ಸೃಜನಾತ್ಮಕ ಕಲಾತ್ಮಕ ಕಲೆ. ಇನ್ನು ಹೊಗಳಿಸಿಕೊಂಡ ರಂತೂ ಉಬ್ಬಿ ಮತ್ತಷ್ಟು ರಚನಾತ್ಮಕವಾಗಿ ಮಾಡುತ್ತಿದ್ದುದು.

ಆ ಪಾಟಿ ಹೂ ಕೀಳಕ್ಕೆ ಕಟ್ಟಕ್ಕೆ ಬೇಜಾರಾಗಲ್ವಾ ನಿನಗೆ ತುಂಬಾ ಸಹನೆ ಅಂತಿದ್ರು ಆಗ . ನಾವು ಮಾತ್ರ ಅಲ್ಲದೆ ಗೆಳತಿಯರಿಗೂ ಟೀಚರ್ಸ್ಗೂ ತಗೊಂಡು ಹೋಗಿ ಕೊಡುವುದು. ಬರೀ ಒಂದೇ ಬಗೆಯ ಹೂವನ್ನು ಕಟ್ಟಿ ಸ್ಟಾಫ್ ರೂಮಿಗೆ ಕೊಡುವುದು . ಮಿಸ್ ನಾನು ಕೊಟ್ಟಿದ್ದನ್ನು ಮುಡಿದಿದ್ದಾರೆ ಅಂತ ಖುಷಿ ಪಡುವುದು. ಈಗಂತೂ ನನ್ನ ಕಣ್ಣಿಗೆ ನೀಲಿ ಮತ್ತು ಬಿಳಿ ಪ್ರಭೇದ ಮಾತ್ರ ಕಾಣಸಿಕ್ಕಿದೆ . ಬೇರೆಯವರೆಲ್ಲಾ ಏನಾದವೋ ತಳಿಯೇ ನಾಶವಾಯ್ತು ಏನೋ ಗೊತ್ತಿಲ್ಲ .ನಾಮ ಸ್ಫಟಿಕವಂತೂ ಕಾಣುತ್ತಲೇ ಇಲ್ಲ .

ಸಾಮಾನ್ಯ ಆಷಾಢದಿಂದ ನವರಾತ್ರಿಯವರೆಗೆ ಹಬ್ಬ ಸಾಲಿನಲ್ಲಿ ಬಿಡುತ್ತಿದ್ದ ಹೂಗಳು ಅಗತ್ಯಕ್ಕೆ ತುಂಬಾ ಒದಗುತ್ತಿದ್ದವು.  ಸರಸ್ವತಿ ಸ್ಫಟಿಕದ ಸಸಿಯನ್ನು ದೂರದ ಒಂಟಿ ಕೊಪ್ಪಲಿನಿಂದ ಅಪ್ಪನ ಗೆಳೆಯರ ಮನೆಯಿಂದ ತಂದು ಹಾಕಿದ ನೆನಪಿದೆ. ಅದರ ಮುಂದಿನ ವರ್ಷ ನಮ್ಮ ಮನೆಯಲ್ಲಿ ಅದರ ಅಷ್ಟೊಂದು ಸಸಿಯಾಗಿತ್ತು. ನವರಾತ್ರಿಯ ವೇಳೆಗೆ ಹಳದಿ ಸ್ಫಟಿಕ ಬಿಡಲು ಶುರು. ಅದು ಅರಳಿದರೆ ಪರಾಗ ತುಂಬಾ ಉದುರುತ್ತೆ ಅಂತ ಮೊಗ್ಗೆ ಕಿತ್ತು ಕಟ್ಟುತ್ತಿದ್ದ ನೆನಪು .ಅದು ಬೇರೆಯವಕ್ಕಿಂತ ಪುಟ್ಟ ತೊಟ್ಟು ಆಕಾರವೂ ಚಿಕ್ಕದೇ .ಹಾಗಾಗಿ ಬೇರೆ ಬಣ್ಣದ ಹೂವುಗಳೊಂದಿಗೆ ಬೆರೆಸುತ್ತಿರಲಿಲ್ಲ .

ಆ ಮನೆ ಬಿಟ್ಟ ಮೇಲೆ ಸ್ಫಟಿಕ ಹೂವಿನ ಒಡನಾಟ ಕಡಿಮೆಯೇ ಆಗಿತ್ತು. .ಕೆಲಸ ಸಿಕ್ಕಿ ಚಿಕ್ಕಬಳ್ಳಾಪುರಕ್ಕೆ ಹೋದಾಗ ವರ್ತನೆಗೆ ಹೂ ತರುತ್ತಿದ್ದವಳು ಸ್ಫಟಿಕದ ಮಾಲೆಯನ್ನೂ ತರುತ್ತಿದ್ದಳು.  ಮೈಸೂರಿನಲ್ಲೇ ಇದ್ದೇನೇನೋ ಅಂತ ಅನ್ನಿಸೋ ಹಾಗೆ ಮಾಡ್ತಾ ಇದ್ದಿದ್ದು ಹೂವಿನ ಈ ನಂಟೇ. ಮನೆಯವರ ಅಗಲಿಕೆಯನ್ನು ಸ್ವಲ್ಪ ಮಟ್ಟಿಗಾದರೂ ಮರೆಸಕ್ಕೆ ಸಹಾಯ ಮಾಡ್ತಿತ್ತು .ಬರೀ ಕುಂಡಗಳನ್ನಿಟ್ಟು ಕೊಂಡಾಗಲೂ ಗೆಳತಿಯ ಮನೆಯಿಂದ ತಂದು ಸ್ಫಟಿಕದ ಸಸಿ ಹಾಕಿ ಬಾಲ್ಯದ ನೆನಪನ್ನು ಅದರಲ್ಲೇ ಕಾಣುತ್ತಿದ್ದೆ. ಈ ವರ್ಗಾವಣೆಗಳ ಜಂಜಾಟದಲ್ಲಿ ಅದಕ್ಕೂ ಕತ್ತರಿ ಆಯಿತು .

ಈಗ ಇರುವ ಮನೆಯಲ್ಲಿ ಸ್ವಲ್ಪ ಗಿಡ ಹಾಕಲು ಅವಕಾಶವಿದೆ.  ಮೊದಲು ತಂದಿದ್ದು ಸ್ಫಟಿಕದ ಸಸಿಯೇ. ಗೃಹಪ್ರವೇಶವಾದ ಸ್ವಲ್ಪ ದಿನದಲ್ಲೇ ಶಿವಮೊಗ್ಗೆಗೆ ಗೆಳತಿ ಶಶಿ ಮನೆಗೆ ಹೋದಾಗ ಅಲ್ಲಿಂದ ತಂದ ನೀಲಿ ಸ್ಫಟಿಕ ಇನ್ನೂ ಈಗಲೂ ಇದೆ.  ಆದರೆ ಅದೇನೋ ಕಾಲ ಪ್ರಭಾವವೋ ಗೊತ್ತಿಲ್ಲ. ವರ್ಷವಿಡೀ ಹೂ ಬಿಡುತ್ತಿರುತ್ತೆ. ಮೊಗ್ಗು ಖಾಲಿಯಾದಾಗ ಗಿಡ ಕತ್ತರಿಸಿದರೆ ಮತ್ತೆ ಚಿಗುರಿ ಹೂವು. ಈ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿಯೂ ಸ್ಫಟಿಕ ಹೂವಿನ ದರ್ಶನ ಆಗುತ್ತಿದೆ . ಸಾಧ್ಯವಾದರೆ ಬಾಲ್ಯದಲ್ಲಿ ಸಿಗುತ್ತಿದ್ದ ಎಲ್ಲ ರೀತಿಯ ಪ್ರಭೇದದ ಸ್ಫಟಿಕ ಪ್ರಕಾರಗಳನ್ನು ಸಂಗ್ರಹಿಸಬೇಕೆಂಬ ಆಸೆ . ಆದರೆ ಸಿಕ್ಕುತ್ತಿಲ್ಲ ಕೆಲವೆಲ್ಲ ಪ್ರಭೇದಗಳು ತಳಿಗಳು ಮಾಯವಾಗಿದೆಯೋ ಏನೋ !

ನೋಡಿದಾಗಲೆಲ್ಲ ಬಾಲ್ಯದ ನೆನಪು ಅಮ್ಮನ ನೆನಪು ತರುವ ಈ ಸ್ಫಟಿಕದ ಹೂ ನನಗಂತೂ ಹೃದಯಕ್ಕೆ ತುಂಬಾ ಆಪ್ತ .ಮತ್ತೆ ಚಿಕ್ಕ ಹುಡುಗಿಯಾದೆನೇನೋ ಅನ್ನಿಸುವಂತೆ ಮಾಡುತ್ತದೆ .ಈಗ ಸ್ಫಟಿಕದ ಹೂ ಮುಡಿದು ಹೋದರೆ ಆಶ್ಚರ್ಯದಲ್ಲಿ ನೋಡೋ ಜನನೂ ಇದ್ದಾರೆ ಅಂದ್ರೆ ಆಶ್ಚರ್ಯನಾ?  ಹೂ ಮುಡಿಯೋದೇ ಅಪರೂಪ ಅಲ್ಲೂ ನೈಸರ್ಗಿಕ ಹೂಗಳಿಗಿಂತ ಕೃತಕ ಹೂಗಳಿಗೆ ಆದ್ಯತೆ . ಆದರೂ ನಾನು ಬಿಡೋದಿಲ್ಲ .ಕಟ್ಟಿ ಮುಡಿದು ಹೋಗ್ತೀನಿ .ಮನದಲ್ಲೇ ಎರಡು ಬದನೆಕಾಯಿ ಜಡೆಗೆ ಹೂ ಮುಡಿದ ಸಮವಸ್ತ್ರ ಧಾರಿಣಿ ಚಿಕ್ಕ ಹುಡುಗಿ ನಾನು ಅನ್ನೋ ಲವಲವಿಕೆಯ ಭಾವನೆ ಮೂಡಿಸಿಕೊಳ್ಳುತ್ತಾ ………..


                               ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

About The Author

Leave a Reply

You cannot copy content of this page

Scroll to Top