ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನನ್ನ ಸಾವು….

ಕಾಂತರಾಜು ಕನಕಪುರ

ಅಂದು ಬೆಳ್ಳಂಬೆಳಗ್ಗೆ
ಮನೆಯ ಮೇಲೆ ಕುಳಿತಿದ್ದ
ಕಾಗೆಯೊಂದು ಸತ್ತss… ಸತ್ತss… ಸತ್ತss…
ಎಂದು ತನ್ನ ಕೀರಲು ಸ್ವರದಿಂದ ಸಾರಿ
ಮನೆಯ ಹೆಂಗಸರು ರಾಗವಾಗಿ
ಅಳುವುದರಿಂದ ಮೊದಲ್ಗೊಂಡು
ಊರವರು, ನೆಂಟರು, ಇಷ್ಟರು, ಇಷ್ಟವಿರದವರು
ಹತ್ತಿರದವರು ಮತ್ತೆ ದೂರದವರು ಹೀಗೆ
ಎಲ್ಲರ ಕಿವಿಗಳಿಗೆ
ಅವರವರ ಮಗ್ಗಲುಗಳಲ್ಲೇ ಮಲಗಿದ್ದ
ಮೊಬೈಲುಗಳು ನನ್ನ ಸಾವಿನ ಸುದ್ದಿಯನು ಬಿತ್ತರಿಸಿ
ಬೆಳಗಿನ ಸವಿ ನಿದ್ರೆಗೆ ಭಂಗ ತಂದವು…!

ನಾನೇ ಹದಮಾಡಿಟ್ಟಿದ್ದ ಮರದ ಕೊರಡೊಂದಕ್ಕೆ
ಬೆಂಕಿ ತಾಗಿಸಿ ಸುದ್ದಿ ಹಂಚಲಾಯಿತು
ನನ್ನ ಹೆಣವನು ಸಾಗಿಸಲು
ಬಿದಿರಿನ ಬೊಂಬು, ಕೋಲುಗಳು, ತೆಂಗಿನ ಗರಿ
ಮತ್ತು ಹುಲ್ಲಿನಿಂದ ಚಟ್ಟ ಸಿದ್ದಗೊಳ್ಳತೊಡಗಿತು
ಹೆಣಕ್ಕೆ ಕೋರಾ ಬಟ್ಟೆಯೇ ಬೇಕೆಂದು ಕೆಲವರನು
ಪೇಟೆಗೆ ಅಟ್ಟಲಾಯಿತು, ಪಕ್ಕದ ಊರಿನಿಂದ
ತಮಟೆ ವಾದ್ಯದವರನು ಕರೆಸಿ
ಕಿವಿಗಳಿಗೆ ಕಷ್ಟವನು ಕೊಡಲಾಯಿತು…!

ಅಂತು ಹೊತ್ತು ಅರ್ಧ ಮಾರು
ಏರುತ್ತಿದ್ದ ಹಾಗೆ
ನನ್ನದಾಗಿದ್ದ ಮನೆಯ ಅಂಗಳದಲ್ಲಿ
ಜನ ಜಮಾಯಿಸತೊಡಗಿದರು

ಅರೆ… ಹೋಗ್ಬಿಟ್ನಾ?
ಛೇ… ಸಾಯಬಾರದಿತ್ತು…!
ಬೋ ಒಳ್ಳೆ ಮನ್ಸ…
ಗುಂಡುಕಲ್ಲಿನ ಹಾಗಿದ್ದ…!
ಕಡಿದರೂ ತುಂಡಾಗದಂತೆ ಇದ್ದ…!
ಏನಾದರೂ ಮಾಡಿಕೊಂಡನಾ?
ಏನೋ ಒಳರೋಗ ಇದ್ದಿರಬೇಕು…
ಏನೇನೋ ಚಟ ಇದ್ದವಂತೆ
ಇದ್ದು ಏನು ತಾನೇ ಮಾಡುತಿದ್ದ?
ಸರಿಯಾಗಿ ಮಾಡಿ ಗಂಟು ಕಟ್ಟಿದ್ದಾನೆ
ಹೋಗ್ಲಿ ಬಿಡು ಭಾಳ ಮೆರೀತಿದ್ದ
ಹೀಗೆ…
ಎಲ್ಲರಿಗೆ ಬೇಕಾದ್ದನ್ನು ಹೇಳಿ
ತಮ್ಮೊಳಗಿನ ಕುದಿಯನು ಅದುಮಿ
ನನ್ನ ಜೀವವಿರದ ದೇಹ ದರ್ಶನ ಮಾಡಿದರು

ಸಾವು ಇಷ್ಟೆಲ್ಲಾ ವಿಚಾರಗಳನ್ನು
ಹೊರತೆಗೆಯುತ್ತದೆಂಬ ಅರಿವು ನನಗಿರಲಿಲ್ಲ
ನಾನು ಸತ್ತದ್ದು ಇದೇ ಮೊದಲಲ್ಲ
ಆದರೆ ಕೊನೆಯದ್ದು ಹೌದು
ಈ ಹಿಂದೆ ನಾನು ಸತ್ತದ್ದಕ್ಕೆ ಲೆಕ್ಕವೂ ಇಲ್ಲ

ಬೋಧಿಸುವ ಅಯ್ಯಂಗಳೆಲ್ಲಾ ನಕಲಿಗಳ
ನಾಯಕರಂತೆ ವರ್ತಿಸುವುದನು ಕಂಡಾಗ ಒಮ್ಮೆ…
ಏನೋ ನೀನು ಗಾಂಧಿ ತರಹ ಇದ್ದೀಯಾ
ಕೊಂದುಬಿಡ್ತಾರೋ ಗೋಡ್ಸೆ… ಗೋಡ್ಸೆ ತರಹ
ಇರಬೇಕೋ ಎಂದಾಗ ಮತ್ತೊಮ್ಮೆ…

ಒಳ್ಳೆ ಸತ್ಯಹರಿಶ್ಚಂದ್ರನ ತುಂಡು ಆಡಿದಂಗೆ ಆಡ್ತೀಯಲ್ಲೋ
ನಕ್ಷತ್ರಿಕ… ನಕ್ಷತ್ರಿಕ ಆಗಿರಬೇಕೋ ನಾಲ್ಕು ದಿನ
ನೆಮ್ಮದಿಯಾಗಿ ಬದುಕಿಕೊಳ್ತೀಯಾ ಎಂದಾಗ ಒಮ್ಮೆ…
ಕಛೇರಿಯ ಸಹೋದ್ಯೋಗಿಗಳು
ಒಹ್ ನಾಯಿ ಒಂದೇ ನಿಯತ್ತಿನದ್ದು ಅಂದ್ಕೊಂಡಿದ್ವಿ
ಇವನೊಬ್ಬ ಇದ್ದಾನೆ ಅಂದಾಗ ಮತ್ತೊಮ್ಮೆ…

ಅತಿಶಯವೆಂದು ಬರೆದದ್ದು ರದ್ದಿಯಾದಾಗ
ಬೆಟ್ಟದಷ್ಟು ಭರವಸೆಗಳು ಹುಸಿಯಾದಾಗ
ಒಲಿದವಳು ಒಲ್ಲೆನೆಂದು ಎದ್ದು ಹೊರಟಾಗ
ನಂಬಿದವರು ನಡು ನೀರಿನಲ್ಲಿ ಕೈಬಿಟ್ಟಾಗ
ಹೀಗೆ ಹತ್ತು ಹಲವು ಬಾರಿ ಸತ್ತಿದ್ದೆ…

ನಿನಗೆ ಬದುಕೋಕೆ ಬರೋದಿಲ್ಲ
ಹಿಂಗಾದ್ರೆ ಕಷ್ಟ, ಯಾಕೋ ನೀನು ಹೀಗೆ?
ಎಂಥವನೋ ನೀನು?
ಅಯ್ಯೋ ನೀನು ಒಬ್ಬ ಮನುಷ್ಯನಾ?
ಎಲ್ಲಾ ಕಟಕಿ, ಕುಹಕ, ಕೊಂಕು ಕುಚೋದ್ಯಗಳು
ಎದುರಾದಾಗ ದಿನ ದಿನವೂ ಸಹೇಳಬೇಕೆನಿಸಿತು

ಹಲವು ಬಾರಿ ಹಲವು ರೀತಿ
ಸತ್ತವನಿಗೆ
ಸಾವು ಗೂಢವಾದದ್ದು
ಹೀಗೆ ಎಂದು ಹೇಳಲು ಆಗುವುದಿಲ್ಲ
ಯಾರಿಗೆ, ಎಲ್ಲಿ, ಯಾವಾಗ, ಹೇಗೆ ಸಾವು
ಬರುತ್ತದೆಯೋ ಹೇಳಲಾಗದು
ಎಂದು ಕೊಂದವರೇ ಹೇಳುತ್ತಿದ್ದುದನ್ನು
ಕೇಳಿ
ಹೌದು ಮನಸಿನ ಕುಲುಮೆಯಲ್ಲಿ ಮಾತಿನ
ಅಸ್ತ್ರಗಳನ್ನು ಮೊನಚು ಮಾಡಿಕೊಂಡವರು
ಮನುಜರನು ಇರಿಯಲು ಎಲ್ಲೆಡೆಯಲ್ಲಿಯೂ
ಕಿಕ್ಕಿರಿದಿದ್ದಾರೆ ಎಂದು ಕಿರುಚಿ ಹೇಳಬೇಕೆನಿಸಿತು

ಆಗಲಿಲ್ಲ ಕಣ್ಮುಚ್ಚಿದ್ದೆ…!


About The Author

4 thoughts on “ನನ್ನ ಸಾವು….”

  1. ಸುಜಾತಾ ಲಕ್ಮನೆ

    ವಾಹ್!! ಸಾವಿನ ಮಜಲುಗಳನ್ನು ಬಿತ್ತರಿಸಿದ- ಸಾವಿನ ಮುಖಕ್ಕೆ ಸತ್ಯವನ್ನೇ ಅಂಟಿಸಿದ ಕವನ. ನೈಸ್..

    1. ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಧನ್ಯವಾದಗಳು…

Leave a Reply

You cannot copy content of this page

Scroll to Top