ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತಿಯ ಪ್ರೇಮವೇ…

ದೇವಿ ಬಳಗಾನೂರರ ಪ್ರೇಮ ಪತ್ರ

Pin on Radhe krishna

               ಹೇಗಿದ್ದಿಯಾ? ನಾನಿಲ್ಲಿ ನೂರು ನೋವುಗಳೊಂದಿಗೆ ಕ್ಷೇಮ, ನಿಜ ಹೇಳು ನಿನಗೆ ಒಂದಾದರು ನೆನಪು ನೆನಪಲ್ಲಿ ಉಳಿದಿದೆಯಾ? ಇನ್ನೇನು ಪ್ರೇಮಿಗಳ ದಿನ ಬಂದೇ ಬಿಡ್ತು. ಮೊದಲೆಲ್ಲ ಈ ದಿನಕ್ಕೆ ನೀನೇ ಮೊದಲು ಶುಭಾಶಯ ತಿಳಿಸ್ತಿದ್ದೆ ಬೇಕಂತಲೇ ನಾನು ಕಾದು ಕೂತ್ಕೋತಿದ್ದೆ. ಈಗ ನೋಡು ನಾನೇ ಲವ್ ಯು ಹೇಳಿದರು ನೀ ಕೇಳಿಸಿಕೊಳ್ಳಲ್ಲ. ಪ್ರೇಮ ಅಂದು ಇಂದು ಮುಂದೆಯೂ ಪ್ರೇಮವಾಗಿಯೇ ಇರುತ್ತೆ. ಆದರೆ ಬದಲಾಗಿದ್ದು ಮಾತ್ರ ನಾನು ನೀನು ಮತ್ತು ನನ್ನ ನಿನ್ನಂತಹ ಹಲವರು. ಈಗಲಾದರು ಹೇಳು ಯಾಕೆ ಬದಲಾದೆ ಮತ್ತು ಬಿಟ್ಟು ಹೋಗುವ ಇರಾದೆಯಿದ್ದರೆ ನನ್ನನ್ನೇಕೆ ಇಷ್ಟೊಂದು ಬದಲಾಯಿಸಿದೆ.

ನಾ…

ಏನೇ ಕೇಳಿದರು ನಿನ್ನ ಉತ್ತರ ಅದೊಂದೇ ಅಂತ ಗೊತ್ತು .ನಿನಗೇನಾದರು ಗೊತ್ತಾ? ದಿನವೂ ನನ್ನಂತರಂಗದಲ್ಲಿ ಏನೆಲ್ಲಾ ಯುದ್ದಗಳಾಗುತ್ತವೆ? ಪರ, ವಿರೋಧ, ಒಮ್ಮೊಮ್ಮೆ ನಿರ್ಲಿಪ್ತ. ಎಲ್ಲಾ ಯುದ್ದಗಳಲ್ಲೂ ನಾನು ನನ್ನನ್ನು ಉಳಿಸಿಕೊಳ್ಳಲು ಹೆಣಗಾಡಿದ್ದೇನೆ ಬೇಡದ ನಿರ್ಧಾರಗಳೊಂದಿಗೆ ಸೆಣಸಾಡಿದ್ದೇನೆ ಆದರೂ ನನ್ನ ನಾನು ಉಳಿಸಿಕೊಳ್ಳಲಾಗದೆ ಮತ್ತೆ ನಿನ್ನದೇ ನೆನಪುಗಳ ಮುಂದೆ ಮಂಡಿಯೂರಿ ಹೀನಾಯ ಸೋಲನ್ನನುಭವಿಸಿದ್ದೇನೆ.

ಇಷ್ಟಾದರೂ…

ಮನಸ್ಸು ಇವತ್ತಿಗೂ ನಿನ್ನ ತಿರಸ್ಕರಿಸಿಲ್ಲ, ದ್ವೇಷಿಸಿಲ್ಲ, ಯಾಕಂತ ನನಗೂ ಗೊತ್ತಿಲ್ಲ ದಟ್ಟಡವಿಯಲ್ಲಿ ನಿಂತು ಕೂಗಿ ಕೂಗಿ ಹೇಳಬೇಕಿದೆ ಕಣೋ ಹುಡುಗ ಈಗಲೂ ನಾ ನಿನ್ನ ಪ್ರೀತಿಸ್ತಿದೀನಿ “ಐ ಲವ್ ಯೂ ಸೋ ಮಚ್” ಅಂತ. ನಾನೇನೋ ಹೇಳಿ ಬಿಡುವೆ ನೀನು ಕೇಳಲು ತಯಾರಿರಬೇಕಲ್ಲವಾ? ಮತ್ತದೇ ಅದೇ ಮಾತು ಹೇಳಿದರೆ ಏನು ಮಾಡಲಿ? ಅದೇ ಅವತ್ತು ಅಂದೆಯಲ್ಲಾ ಬಲವಂತದಿಂದ ನನ್ನ ಪಡೆಯಬಹುದು ನನ್ನ ಪ್ರೀತಿಯನ್ನಲ್ಲ ಅಂತ ಆ ಮಾತನ್ನು ಮತ್ತೊಮ್ಮೆ ಕೇಳುವ ಶಕ್ತಿ ಈಗ ನನಗಿಲ್ಲ ಕಣೊ…

ನಾ…

ನಿನ್ನ ಅಲ್ಲಲ್ಲಾ ನಿನ್ನನ್ನಲ್ಲ ನೀ ನನಗೆ ಕೊಟ್ಟ ಆ ಪವಿತ್ರ ಪ್ರೀತಿಯನ್ನು ಪ್ರೀತಿಸಿದ್ದೆ. ಇವತ್ತಿಗೂ ಕೂಡ ಪ್ರೀತಿಸುತ್ತಿರುವೆ ಮುಂದೆಯೂ ಪ್ರೀತಿಸುತ್ತಲೇ ಇರುವೆ. ನೀನು ಒಂಥರಾ ಜಾದುಗಾರ ಕಣೋ ಹುಡುಗ. ಅದೆಲ್ಲೋ ಕುಳಿತು ನನ್ನ ಬದುಕಿನಲ್ಲೂ ಜಾದು ಮಾಡ್ತಿದಿಯಾ. ಬದುಕಿನ ಭರವಸೆಗಳೆಲ್ಲಾ ಬೆಂದಾಗ ಮನಸ್ಸು ನೊಂದಾಗ ನೀನಾಡಿದ ಪ್ರತಿ ಮಾತು ಬದುಕುವ ಸ್ಪೂರ್ತಿ ತುಂಬುತ್ತೆ .ಬದುಕನ್ನು ಹೀಗೇ  ಹೀಗೇ… ಪ್ರೀತಿಸುತ್ತಲೇ ಕಳೆದು ಬಿಡಲೇ ಅನ್ನಿಸುತ್ತೆ .ಆದರೂ ಎದೆಯ ಕವಿತೆಯೊಂದು ಹೀಗೆ ಕೇಳುತ್ತೆ ಉತ್ತರಿಸಿಬಿಡು..

“ ನೀನು ನನ್ನ ಪ್ರಾಣ, ಬದುಕು

 ನೀನಿಲ್ಲದೇ ಎಲ್ಲಾ ಶೂನ್ಯ

ಅಂದವರೆಲ್ಲಿರುವರು? ” ಎಂದು.

ಎದೆಯ ಕವಿತೆಯೊಂದು

ಅಣಕಿಸುತಿದೆ ಎದುರು ಕೂತು ಇಂದು”

ಕವಿತೆಗಳು…

ಎದೆಯೊಡಲ ಬೆಳಗಿದ ಹಣತೆಗಳು ಜಯಂತ ಕಾಯ್ಕಿಣಿಯವರು ಹೇಳ್ತಾರೆ “ಕವಿತೆಗಳು ಬದುಕಿಗೆ ಬರೆಯುವ ಪ್ರೇಮ ಪತ್ರಗಳು”ನೀನು ನನ್ನ ಬದುಕು ಕವಿತೆಗಳು ನಿನಗೆಂದೇ ಬರೆಯುವ ಪ್ರೇಮಪತ್ರಗಳು ಸಾಧ್ಯವಾದರೆ ಓದು ಸ್ಪಂದನೆಗೆ ಪ್ರತಿಸ್ಪಂದನೆಯಿರಲಿ ನಾ ನಿನಗಾಗಿ ಸದಾ ಕಾಯುವ  ರಾಧೆ ಮುಗಿಸಿಬಿಡು ಗೆಳೆಯ ಬದುಕಿನೊಡನಿರುವ ಈ ಇರಾದೆ .ನೀ ಸಿಗದಿದ್ದರೂ ಬದುಕಿಗೆ ನೀನಷ್ಟೇ ನಿಜ ಪ್ರೀತಿ ನನಗೆ, ಸದಾ ಹಸಿರಾಗಿರಲಿ ಪ್ರೀತಿ ನಿನಗಿದೋ “ಪ್ರೇಮಿಗಳ ದಿನದ ಶುಭಾಶಯಗಳು” ಯಾವಾಗಲೂ ಚೆನ್ನಾಗಿರು.. ಚೆನ್ನಾಗಿರು ಅಷ್ಟೇ

                                                                                                           ಇಂತಿನಿನಗುಳಿಯದ ರಾಧೆ


About The Author

Leave a Reply

You cannot copy content of this page

Scroll to Top