ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಕಣ್ಣಲ್ಲಿಳಿದ ಮಳೆಹನಿ

ಕಣ್ಣಲ್ಲಿಳಿದ ಮಳೆಹನಿ – ಕಾಜೂರು ಸತೀಶ್ ಅವರ ಹೊಸ ಕವನ ಸಂಕಲನ.. ಚಿ. ಶ್ರೀನಿವಾಸ ರಾಜು ಕಾವ್ಯ ಪುರಸ್ಕಾರ ಪಡೆದ ಈ ಕೃತಿ ಸಂಗಾತ ಪುಸ್ತಕದಿಂದ ಪ್ರಕಟವಾಗಿದೆ. 40ಕವಿತೆಗಳ ಈ ಸಂಕಲನ ಸೊಗಸಾದ ಮುಖಪುಟದಿಂದ ಓದಲು ಹಿಡಿದಾಗಲೇ ಹತ್ತಿರವಾಗುತ್ತದೆ.

ಮೊದಲ ಕವಿತೆ – ಎಲ್ಲಿ- ಕಾಡು ನಾಡಾದ ಬಗೆಗಿನ ಈ ಪ್ರಶ್ನೆಯೊಂದಿಗೆ ಸಂಕಲನದ ಓದು ಆರಂಭ. ಪುಟ್ಟ ಪುಟ್ಟ ಶೀರ್ಷಿಕೆಯ ಇಲ್ಲಿನ ಪದ್ಯಗಳು ಆಳದಲ್ಲಿ ಅಪಾರ ಜಿಜ್ಞಾಸೆಯಿಂದ ಕೂಡಿವೆ.
ಮರ ಯಾರದು? ಕವಿತೆ , ಎಲ್ಲರದ್ದೂ ಆಗಬಹುದಾಗಿದ್ದ ಮರ ಈಗ ಯಾರಾದ್ದೂ ಅಲ್ಲದೆ ನೆನಪುಗಳ ಸಂತೆಯನ್ನು ಎದೆಯಲ್ಲಿ ನೆಟ್ಟು ಬಿಡುತ್ತದೆ.
ಎಲೆಯನ್ನು ಪತ್ನಿಯಾಗಿ ಕಾಣುವ ಈ ಕವಿ ತವರನ್ನು ನೆನೆನೆನೆದು ಪುಳಕಗೊಳ್ಳುವ ಅವಳಲ್ಲಿ. ಮತ್ತೆ ಮತ್ತೆ ಹಸಿರು/ ಮತ್ತೆ ಮತ್ತೆ ಬೆಳಕು/ ಕಂಡು ಈ ಸಾಲುಗಳಲ್ಲಿ ಎಷ್ಟು ಅರ್ಥಗಳ ಹೊಳಹಿಸಿದೆ. ಮ್ಯಾನ್ ಹೋಲಿನಲ್ಲಿ ಸತ್ತ ಕವಿತೆ- ಒಂದು ಸಶಕ್ತ ವಿಡಂಬನೆ. ಇಲ್ಲಿ ಸಾಯುವುದು ಕವಿತೆಯೋ, ನಿಜ ಸಾಹಿತ್ಯವೋ, ಒಳ್ಳೆಯ ಸಂಸ್ಕಾರವೋ ಅಥವಾ ಮುಚ್ಚಳ ಮುಚ್ಚಿದ ಕವಿತೆ ಬರೆಯುವ ಕೈಗಳ ಹೊಲಸು ಯಾರ ಅರಿವಿಗೂ ಸಿಗದೆ ಅಡಗಿ ಹೋದಂತಿದೆಯೋ! ಗುಡಿಸಲು- ಕವಿತೆಯಲ್ಲಿನ ರೂಪಕಗಳು, ಅದರೊಳಗಿನ ಬದುಕಿನಂತೆ, ಅದರ ಸುತ್ತಲಿನ ಸಮಾಜವನ್ನು ಚಿತ್ರಿಸುವ ಬಗೆ ಆಶ್ಚರ್ಯ ಹುಟ್ಟಿಸುತ್ತದೆ. ಒಂದಾದರೂ ಬರಬಾರದೆ? ಕವಿತೆಯಲ್ಲಿ ಮರಕುಟಿಗ ಹಕ್ಕಿಯ ಮೂಲಕ ಆಧುನಿಕತೆಯ ಐಬುಗಳನ್ನೆಲ್ಲ ಬಗೆದು, “ಹಚ್ಚಹಸಿರು ಹೃದಯದ ಮನುಷ್ಯರ ನೋಡುವ ” ಹಂಬಲ ಕವಿಯದು. ಕೊಲೆ, ಕವಿತೆ – ಸುಕೋಮಲ ಹೂಗಳನ್ನು ಕೊಲೆ ಮಾಡುವ. ಈ ದುರುಳ ಕಾಲದ ತಣ್ಣಗಿನ ಕ್ರೌರ್ಯನನ್ನು ಧ್ವನಿಸಿದರೆ , ರೊಟ್ಟಿ- ಕವಿತೆಯಲ್ಲಿ ರೊಟ್ಟಿ ಸುಡುತ್ತದೆ ನೆಲದ ಕಾವಲಿಯಲ್ಲಿ/ ನೇಗಿಲು ಸೌದೆ ಎಷ್ಟು ಚೆನ್ನಾಗಿ ಉರಿಯುತ್ತದೆ , ಎಂದು ಚುಚ್ಚುವ ವ್ಯಂಗ್ಯವಿದೆ. ನನ್ನೊಳಗೆ ಇಳಿಯುವಾಗ – ಕವಿತೆಯಲ್ಲಿ ವಚನಗಳನ್ನು ನೆನಪಿಸುವ ಭಾವವಿದೆ. ದೇಹವೇ ದೇಗುಲ ಎಂಬಂತೆ ಪಕ್ಕೆಲುಬುಗಳ ತಟ್ಟಿದರೂ ಮನೆ- ಮನದ ಕದ ತೆರೆಯುತ್ತದೆ .
ಎದೆಯ ದನಿಯಿದು; ಶೃಂಗಾರ ಕಾವ್ಯವಲ್ಲ! ಕವಿತೆಯಲ್ಲಿ ಅಂಗೈ ಗೆರೆಗಳು ಸಲಾಕೆಯ ಹಿಡಿತಕ್ಕೆ ಸವೆಯುವುದಿಲ್ಲ. ಬದಲಾಗಿ ಅವು ನಿರ್ಮಿಸಿದ ಹಳಿಗಳು ಸವೆಯುತ್ತವೆ.. ಎದೆಗಳು ವಾಹನ ಸಂಚಾರದಿಂದ ದುರಸ್ತಿಯಲ್ಲಿವೆ. ಆ ಎದೆಯೊಳಗೆ ಮಲಗಲು ಹೊತ್ತಾಗಿರುವ ಮಗುವಿಗೆ ಹಾಲೂಡಿಸಲು ಕವಿ ಆ ತಾಯಿಯನ್ನು ಕರೆಯುವುದಾದರೂ ಹೇಗೆ? ನೇತು ಹಾಕಿರುವ ಕೆಂಬಟ್ಟೆಯ ತುಂಡೊಂದು ಧ್ವಜವಾಗಿ , ಆ ಧ್ವಜವನ್ನು ಇಳಿಸಿ, ಟಾರು ಕುದಿಯುವುದರೊಳಗೆ ಆಕೆ ಹಾಲು ಕುಡಿಸಬೇಕು. ಅವರಿಬ್ಬರೂ ಬೇರೊಬ್ಬರಿಗಾಗಿ ರಸ್ತೆ, ರೈಲು ಹಳಿ, ಮನೆಗಳನ್ನು ಕಟ್ಟುತ್ತಲೇ ಇರುತ್ತಾರೆ. ತಮಗೆ ನೆರಳೆಂಬ ಕಪ್ಪನ್ನು ಉಳಿಸಿಕೊಂಡು, ಅದನ್ನೇ ಹಾಸಿ ಹೊದೆಯುತ್ತಾರೆ. ಇಲ್ಲಿ ಜಗದ ಕಾರ್ಮಿಕ ವರ್ಗದ ನೋವು, ಸಂಕಟ ತಣ್ಣಗೆ ಕೊರೆಯುತ್ತದೆ.
ಬಂಧಿ, ಕವಿತೆ ಬದುಕಿನ ನಾಲ್ಕು ಮಜಲುಗಳು ಎದುರಿಸಬಹುದಾದ ಸಂದಿಗ್ಧ ಗಳನ್ನು ಧ್ವನಿಪೂರ್ಣವಾಗಿಸಿದೆ. ಅವುಗಳನ್ನು ಮೀರಿ ನಿಲ್ಲಲಾರದ್ದೂ ಒಂದು ಸಂದಿಗ್ಧವೆ. ಕಾಲಕಾಲಕ್ಕೆ ಎದುರಾಗುವ ಅವು ಹೇಗೆ ಒಂದಿಡೀ ಬದುಕನ್ನು ಇಷ್ಟಿಷ್ಟೇ ಮುಗಿಸಿಬಿಡಬಲ್ಲವು ಎಂಬುದನ್ನು ಬಹಳ ಮಾರ್ಮಿಕವಾಗಿ ಹೇಳಲಾಗಿದೆ.
ಬುಡ್ಡಿ ದೀಪದ ಬುಡ ಕವಿತೆಯಲ್ಲಿ ಬಿಸಿಲಿಗೂ, ಸಾವಿಗೂ ಲಾಲಿ ಹಾಡುತ್ತ ನಿಲ್ಲುವ ಪರಿಗೆ ಮನಸ್ಸು ಮೂಕವಾಗುತ್ತದೆ.
ಇಲ್ಲಿಯ ಕವಿತೆಗಳ ಮಳೆಯಲ್ಲಿ ಬೆಂಕಿ ಮಳೆಹನಿ ಉದುರುತ್ತದೆ. ಅನೇಕ ಕವಿತೆಗಳು ಕವಿತೆಯ ಕುರಿತಾಗಿಯೇ ಬರೆದುವಾಗಿದ್ದು ಕವಿತೆ ಬೇರೆ ಬೇರೆ ರೂಪಕಗಳಾಗಿ ಕಾಣುತ್ತದೆ. ಕೆಲವು ಬಾರಿ ಕವಿತೆ ಹಾಡಾದರೆ, ಕೆಲವು ಬಾರಿ ಅತ್ಯಂತ ಸುಖೀ ಜೀವವಾಗುತ್ತದೆ. ಕೆಲವೊಮ್ಮೆ ಕವಿತೆ ಅಂತರಂಗದ ನೋವಾಗಿ ಕವಿತೆಯನ್ನು ಕಬಳಿಸುವ ಟಿವಿ, ಮೊಬೈಲು, ಬೈಕು, ಕತ್ತಿ ಮೊದಲಾದ ಅಭೀಪ್ಸೆಗಳಾಗಿ ಕಾಣುತ್ತದೆ. ಬೆಳಕಿನ ಕುರಿತು ಬರೀ ಮಾತಾಡುವ ಇಂದಿನ ದಿನಗಳಲ್ಲಿ ಬೆಳಕ ಕುರಿತು ಮಾತಾಡದೆ ಬೆಳಕು ಹಚ್ಚುತ್ತೇನೆ ಎಂಬ ಕವಿಯ ನಿರ್ಮಲ ಭಾವ ಹಾಗೂ ಸದಾಶಯ ಎಲ್ಲ ಕವಿತೆಗಳಲ್ಲೂ ಕಾಣುವುದೇ ಇವುಗಳ ಸೊಗಸು. ಅಮ್ಮನ ಸೀರೆಯಲ್ಲಿ ಬಿದ್ದಿರುವ ತೂತು ಹೊಟ್ಟೆ ತುಂಬಿದಾಗಲೆಲ್ಲ ಸುಡಲೆಂಬಂತೆ ಉಳಿದಿದೆ ಎಂದು ಈ ಕವಿಯಷ್ಟೇ ಹೇಳಬಲ್ಲರು.


ನೂತನ

About The Author

Leave a Reply

You cannot copy content of this page

Scroll to Top