ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಹಸಿರು ಮಂದಿರ” ಹಸಿರಿನ ಹೊದಿಕೆ ಹೊದ್ದ ಪವಿತ್ರ ಮಂದಿರ,ಜ್ಞಾನದ ಜ್ಯೋತಿ ಬೆಳಗುವ ಸರಕಾರಿ ಶಾಲೆ;ಸುಣ್ಣದ ಬಿಳಿಯ ಗೋಡೆಗಳ ನಗು,ನೋಡುವ ಮನದಲಿ ಅರಳಿಸುವ ಹೂವಿನ ಮಾಲೆ// ಶಾಲೆಯ ಆವರಣ ಹಚ್ಚಹಸಿರಾಗಿ,ಗಿಡಮರಗಳು ಕೈಬೀಸಿ ಸ್ವಾಗತಿಸುತಿವೆ;ತಂಗಾಳಿಯ ತಂಪಿನಲಿ ಹಕ್ಕಿಗಳ ಗಾಯನ,ಕಲಿಕೆಯ ದಾರಿಯಲಿ ಕನಸು ಬಿತ್ತುತ್ತಿವೆ// ಎಡಬಲ ಹಸಿರಿನ ಸಾಲುಗಳ ನಡುವೆ,ಪ್ರಕೃತಿಯೇ ಪಾಠ ಹೇಳುವ ಗುರುವಾಗುತಿದೆ;ಸ್ವಚ್ಛತೆ, ಶಿಸ್ತು, ಸಮಯದ ಮೌಲ್ಯ,ಪ್ರತಿ ಹೆಜ್ಜೆಯಲಿ ಬದುಕಿನ ಬೆಳಕಾಗುತಿದೆ// ಮಕ್ಕಳ ದಾಹ ತಣಿಸುವ ಶುದ್ಧ ನೀರಿನ ತೊರೆ,ಆರೋಗ್ಯದ ಅರಿವು ಬೆಳೆಸುವ ಅಕ್ಕರೆಯ ಸ್ಪರ್ಶ;ಹಸಿ–ಒಣ ಕಸದ ವಿಂಗಡಣೆಯ ಪಾಠ,ಪರಿಸರ ಪ್ರೀತಿಯ ಬದುಕಿನ ಆದರ್ಶ// ಸಾವಿತ್ರಿಬಾಯಿ ಫುಲೆ ವೇದಿಕೆಯ ಸೊಬಗು,ಜ್ಞಾನದ ದೀಪವನು ಹೊತ್ತ ಮಹಿಮೆಯ ಸಂಕೇತ;ಅದನು ನೋಡುವ ಎರಡು ಕಣ್ಣು ಸಾಲದೆ,ಮನದಲಿ ಮೂಡುತ್ತದೆ ಭವಿಷ್ಯದ ಸುಂದರ ಚಿತ್ರ// ಶಿಕ್ಷಕಿಯ ಉದಾತ್ತ ಚಿಂತನೆ, ದೂರದೃಷ್ಟಿ,ಮಕ್ಕಳ ಏಳಿಗೆಗೆ ಅಕ್ಷಯ ತಪಸ್ಸಾಗಿದೆ;ತಾಯಿಯ ಮಮತೆಯಲಿ ಜ್ಞಾನವನುಣಿಸುವ,ಸೇವೆಯ ಬದುಕು ಸಾರ್ಥಕತೆಯಾಗಿದೆ// ಇದು ಶಾಲೆಯಲ್ಲ ಹಸಿರು ದೇವಾಲಯ,ಇದು ಕೋಣೆಗಳು ಕನಸುಗಳ ನೆಲೆ;ಇಲ್ಲಿಂದ ಹೊರಡುವ ಪ್ರತಿಯೊಂದು ಮಗು,ನಾಡಿನ ಭವಿಷ್ಯವ ಬೆಳಗಿಸುವ ದಿವ್ಯ ಕಿರಣ// ಹಸಿರು ಉಳಿಯಲಿ, ಶಿಕ್ಷಣ ಅರಳಲಿ,ಸಾವಿತ್ರಿಯ ಕನಸು ಸದಾ ಚಿಗುರಲಿ;ಇಂತಹ ಹಸಿರು ಮಂದಿರಗಳು ಎಲ್ಲೆಡೆ ಬೆಳೆಯಲಿ,ಜ್ಞಾನ ಭಾರತವು ಹಸಿರಾಗಿ ನಗುತಿರಲಿ ವಿಜಯಲಕ್ಷ್ಮಿ ಹಂಗರಗಿ