ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ
ಪುಸ್ತಕ ಸಂಗಾತಿ ಗಂಗಾ ಚಕ್ರಸಾಲಿ ಶ್ರೀ ಕಿರಣ ಗಣಾಚಾರಿ ಬೆಳಕಿನ ಹೊಳೆಯ ಪ್ರವಾಹ ಬದುಕಿನಪ್ರವಾಹದಲ್ಲಿಮಿಂದೆದ್ದ ಕವಿತೆಗಳು ಪುಸ್ತಕ: ಬೆಳಕಿನ ಹೊಳೆಯ ಪ್ರವಾಹಲೇಖಕರು: ಶ್ರೀ ಕಿರಣ ಗಣಾಚಾರಿಬೆಲೆ:೧೦೦ ರೂಪ್ರಕಾಶನ: ಸಂಭ್ರಮ ಫೌಂಡೇಶನ್ ಶ್ರೀ ಕಿರಣ ಗಣಾಚಾರಿಯವರ ಎರಡನೇ ಕವನ ಸಂಕಲನ ಬೆಳಕಿನ ಹೊಳೆಯ ಪ್ರವಾಹ. ಕವಿಯಾದವನು ತನ್ನ ಸುತ್ತಮುತ್ತಲಿನ ಘಟನೆಗಳಿಗೆ ಕಿವಿಯಾಗುತ್ತಾನೆ, ಕಣ್ಣಾಗುತ್ತಾನೆ ಕೊನೆಗೆ ವಿಮರ್ಶಕನೂ ಆಗುತ್ತಾನೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ಐವತ್ತು ಕವಿತೆಗಳು ಪ್ರಸ್ತುತ ಸಮಾಜ, ರಾಜಕೀಯ, ಶೈಕ್ಷಣಿಕ, ಮಾನವೀಯ ಸಂಬಂಧಗಳ ನೆಲೆಯೊಳಗೆ ಓದುಗನಿಗೆ ಭಾವನಾತ್ಮಕವಾಗಿ ಪ್ರವಾಹವನ್ನೇ ಹರಿಸುತ್ತವೆ.ಹುಲಿಜೊತೆ ಚಿಗುರೆಯೊಂದು ಸಂವಾದಿಸಿದಂತೆಅಪ್ಪನೆಂದರೆ ಭಯದ ಬಕಾಸುರನಂತೆನಿಸಿದ್ದೇ ಹೆಚ್ಚುಅಪ್ಪನ ಕುರಿತಾದ ಭಯ, ನಡುಕ ೮೦- ೯೦ ರ ದಶಕದಲ್ಲಿ ತುಸು ಹೆಚ್ಚಾಗಿಯೇ ಇತ್ತು. ಅಪ್ಪನೆಂದರೆ ಅರ್ಥವಾಗದವನಾಗಿದ್ದನು. ಪ್ರತಿಯೊಂದು ಜವಾಬ್ದಾರಿಯೊಳಗೆ ಮುಳುಗೆದ್ದ ಅಪ್ಪ ಮೌನದ ಪರ್ವತವೇ ಆಗಿದ್ದ. ಆಗಾಗ ಒಂದೆರೆಡು ಮಾತುಗಳು ಗುಡುಗಿನಂತೆ ಸದ್ದಾದರೂ , ಅವನ ಹೃದಯದಲಿ ಪ್ರೀತಿ ಕಾಳಜಿಯ ತೊರೆಯು ಮಾತ್ರ ಬತ್ತುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೂಡಿಬಂದ ಈ ಕವಿತೆ ಓದುಗನನ್ನು ತನ್ನ ಬಾಲ್ಯಾವಸ್ಥೆಗೆ ಕರೆದೊಯ್ದು ಕಣ್ಣಹನಿ ಜಾರಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಪ್ರಭಾವಿಸುವವರೆಂದರೆ ಅಮ್ಮ, ಅಪ್ಪ, ಗೆಳೆಯ. ಈ ನೆಲೆಯೊಳಗೆ ಅಪ್ಪನೆಂಬ ಪ್ರಶ್ನೆಗಳ ಹುತ್ತ, ಪ್ಲೀಸ್…ಅಮ್ಮ, ಮುದ್ದು ಕಂದ, ಅವ್ವ ಮತ್ತು ಧೂಳು, ಗೆಳೆಯ ಬದಲಾಗಿದ್ದಾನೆ ಕವಿತೆಗಳು ಮನವನ್ನು ಕದಡುತ್ತವೆ.ವರ್ತಮಾನದಲ್ಲಿ ಬದುಕುತ್ತಿರುವ ನಾವುಗಳು ಅಂದು ಇಂದು ಎಂಬ ಪದಗಳ ಜರಡಿಯೊಳಗೆ ಸಮಾಜವನ್ನು ನೋಡುತ್ತೇವೆ. ಕವಿಯಾದವನು ತುಸು ಹೆಚ್ಚೇ ಈ ಬದಲಾವಣೆಗಳನ್ನು ಗಮನಿಸುತ್ತಾನೆ. ಈ ಬದಲಾವಣೆಯ ಪರದೆಯೊಳಗೆ ಹಲವು ಕವಿತೆಗಳು ಮೂಡಿಬಂದಿವೆ. ಎಂದಿನಂತೆ ನಾನಿಲ್ಲ, ಒಪ್ಪಿಕೊಳ್ಳಲಾರದ ವಾಸ್ತವ, ಬೆಳಕಿನ ಹೊಳೆಯ ಪ್ರವಾಹ, ಅಮವಾಸ್ಯೆ ಹೊದ್ದವರು, ಇಶಾರೆ, ಸೆರೆಯಾಗದ ಭಾವಚಿತ್ರ, ಹೇ! ಸಮಯವೇ…, ಕೊಡು ಕೊಳ್ಳುವಾಟ ಹೀಗೆ ಹಲವು ಕವಿತೆಗಳು ಇಂದಿನ ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತಾ ನಮ್ಮೊಳಗಿನ ನಮ್ಮತನವನ್ನು ಬಡಿದೆಬ್ಬಿಸುತ್ತವೆ. ಬೆಳಕಿನ ಹೊಳೆ ಹರಿಸುತ್ತಿದ್ದೇವೆಂದುಅದೆಷ್ಟು ಕಲ್ಲು ಮಣ್ಣು ಕಸ ಕಡ್ಡಿಹಾಕುತ್ತಿದ್ದೇವೆನೀವೇ ಹೇಳಿ…ನೋಡೋಣ ! ಈ ಪುಸ್ತಕದ ಶೀರ್ಷಿಕೆಯ ಈ ಕವಿತೆ ಇಂದಿನ ಮಾನವರ ಅತಿಯಾದ ಬಯಕೆ, ಅಹಮ್ಮಿನ ಫಲಶೃತಿಯನ್ನು ಕಣ್ಣಮುಂದೆ ತೆರೆದಿಡುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಸವೆದುಹೋದ, ಕ್ಲೀಷೆಗೊಳಗಾದ, ಜೀರ್ಣಗೊಂಡ, ಶಿಥಿಲಗೊಂಡ, ಸಡಿಲವಾದ ಬದುಕಿನ ಸಾಮಾನ್ಯ ಸಹಜ ನಿಯಮಗಳು ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳದೆ, ಹೊಸ ಜಗತ್ತನ್ನು ಧ್ಯೇನಿಸುತ್ತಿರುವ ಸತ್ಯವನ್ನು ಹೊರಹೊಮ್ಮಿಸುತ್ತವೆ ಎಂಬ ಪ್ರೊ. ಎಸ್ ಎಂ ಗಂಗಾಧರಯ್ಯನವರ ಮುನ್ನುಡಿ ಮಾತು ಅರ್ಥಪೂರ್ಣವಾಗಿದೆ. ಹಳತಾದ ಬಣ್ಣಗೆಟ್ಟ ಗೋಡೆಗಳುನಮ್ಮ ಬದುಕ ಬಣ್ಣವಾಗಿಸಿವೆಹರಕಲು ಮುರುಕಲು ಮಾಳಿಗೆನಮ್ಮ ಬಾಳ ನೆಟ್ಟಗಾಗಿಸಿವೆ ಸರಕಾರಿ ಶಾಲೆ ಕವಿತೆಯಲ್ಲಿ ಮೂಡಿಬಂದ ಈ ಸಾಲುಗಳು ಸರ್ಕಾರಿ ಶಾಲೆಯ ಮಹತ್ವವನ್ನು ಸಾರುತ್ತವೆ. ಬಹುತೇಕರು ಆಗ ಸರ್ಕಾರಿ ಶಾಲೆಯಲ್ಲಿಯೇ ಓದಿ ಈಗ ಬಹಳಷ್ಟು ಉನ್ನತ ಹುದ್ದೆಗಳನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವಂತಹ ಈ ಸಂದರ್ಭದಲ್ಲಿ ಅದರ ಮಹತ್ವ ಸಾರುವ ಈ ಕವನ ಸಕಾಲಿಕವಾಗಿದೆ. ಇದೇ ರೀತಿ ಶಾಲೆಗೆ ಸಂಬಂಧಿಸಿದಂತೆ ಬರೆದ ಇನ್ನಷ್ಟು ಕವಿತೆಗಳೆಂದರೆ ಪಾಟಿ ಚೀಲ , ಪುಸ್ತಕ ಮತ್ತು ನಿನಗೆ ಕಲಿಸಿದ ಮಾಸ್ತರ ಯಾರು? ಕವಿತೆಗಳು.ಇಂದು ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಪರಿಸರದಲ್ಲಿಯೂ ಹಲವು ಬದಲಾವಣೆಗಳಾಗುತ್ತಿವೆ. ಪ್ರಕೃತಿಯಲ್ಲಿಯ ಹಸಿರು ನಾಶವಾಗಿ, ಜೀವಸಂಕುಲಗಳು ತೊಂದರೆಗೊಳಗಾಗಿವೆ. ಇಂತಹ ನೋಡಿದ ಕೇಳಿದ ಘಟನೆಗಳ ಹಿನ್ನೆಲೆಯಲ್ಲಿ ಹಲವು ಕವಿತೆಗಳು ಮೂಡಿಬಂದಿವೆ. ಈ ಜಾಗ ನಂದೈತಿ, ನಂಬಿಕೆ ಪಟ್ಟ ಕಟ್ಟಿದವರಾರು? , ಸಹಿಸಿಕೊಂಡಿರುವೆ ಕವನಗಳು ಆ ಚಿತ್ರಣವನ್ನು ಕಟ್ಟಿಕೊಡುತ್ತವೆ. ಸಖ್ಯ ಬೆಳೆಸಿಕೊ, ಸುಖ ನೀಡುವೆನಂಬು, ಇಂಬನೀಯುವೆಕಡೆಗಣಿಸಿದರೆ ನಡುಗಣ್ಣ ತೆರಯುವೆ .. ಇಂತಹ ಸಾಲುಗಳು ಮಾನವನಿಗೆ ತಿಳುವಳಿಕೆ ನೀಡುವ ಜೊತೆಗೆ ಮುಂದೆ ಆಗುವ ಆನಾಹುತವನ್ನು ತಿಳಿಸಿಕೊಡುತ್ತವೆ. ಕವಿಗಿರುವ ಪರಿಸರ ಪ್ರೇಮವನ್ನು ಅರಿಯಬಹುದಾಗಿದೆ. ಇಷ್ಟೇ ಅಲ್ಲದೇ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತಹ ಕವಿತೆಗಳು ಕನ್ನಡತನವನ್ನು ಜಾಗೃತಿಗೊಳಿಸುತ್ತವೆ. “ ಕನ್ನಡ ಭಾಷೆ ನಾಲಿಗೆಯಲಿ ಉಲಿಯದೆ ಗಂಟಲಲ್ಲಿ ಸಿಕ್ಕಾಕಿಕೊಂಡಂತಿರುವ ಭಯ “ ಈ ಸಾಲು ಅನ್ಯಭಾಷೆಯ ಹಾವಳಿಯನ್ನು ಸೂಚ್ಯವಾಗಿ ಹೇಳುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹಬ್ಬಗಳು ಇವುಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಬರೆದ ಹಲವು ಕವಿತೆಗಳು ಭೂತ ವರ್ತಮಾನದ ಸಂಗತಿಗಳನ್ನು ಕಟ್ಟಿಕೊಡುತ್ತವೆ.ಕವಿ ಎಂದರೆ ಭಾವತೀವ್ರ ವೇದನೆಗಳನು ಹೊರುವ, ಹೆರುವ ಸೃಜನಶೀಲ ಗರ್ಭಸ್ಥ ಸ್ಥಿತ ಪ್ರಜ್ಞ ಎಂದು ಹೇಳುವ ಕಿರಣ ಅವರ ಮಾತಿಗೆ ಪೂರಕವಾಗಿಯೇ ಹಲವು ಕವಿತೆಗಳು ಭಾವನೆಗಳನ್ನು ಹೊದ್ದು ನಿಂತಿವೆ. ಪ್ರತಿಯೊಂದು ಕವನಗಳನ್ನು ಓದುವಾಗಲೂ ಇಂದಿನ ನೋವು, ವೇದನೆಗಳ ಚಿತ್ರಣ ಕಣ್ಮುಂದೆ ಸುಳಿದು ಬದಲಾದ ಮನುಷ್ಯನ ವ್ಯಕ್ತಿತ್ವಗಳನ್ನು ತೋರಿಸುತ್ತವೆ. ಇವರ ಮೊದಲ ಕವನ ಸಂಕಲನಕ್ಕಿಂತ ಈ ಕವನ ಸಂಕಲನ ಸಂಪೂರ್ಣವಾಗಿ ಭಿನ್ನ ಸಂಗತಿಗಳನ್ನು ಓದುಗರಿಗೆ ತರೆದಿಡುತ್ತದೆ. ಕಾಲದ ಸುಳಿಯಲ್ಲಿ ಮಾಗಿದ ಕವಿತೆಗಳು ಈ ಬೆಳಕಿನ ಪ್ರವಾಹದಲ್ಲಿ ಮಿಂದೆದ್ದಿವೆ. ಇವರಿಂದ ಮತ್ತಷ್ಟು ಮತ್ತಷ್ಟು ಕವನಸಂಕಲನಗಳು ಹೊರ ಬರಲೆಂದು ಆಶಿಸುವೆ. ಗಂಗಾ ಚಕ್ರಸಾಲಿ
ಶ್ರೀ ಕಿರಣ ಗಣಾಚಾರಿ ಅವರ ಕೃತಿ “ಬೆಳಕಿನ ಹೊಳೆಯ ಪ್ರವಾಹ” ಅವಲೋಕನ ಗಂಗಾ ಚಕ್ರಸಾಲಿ Read Post »









