ಶರಣರ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಹನ್ನೆರಡನೆಯ ಶತಮಾನದ ಶರಣರು ಬಸವಣ್ಣನವರ ನೇತೃತ್ವದಲ್ಲಿ ಸಮ ಸಮಾಜದ ಪರಿಕಲ್ಪನೆಯ ಅಡಿಯಲ್ಲಿ ಸಾರ್ವಕಾಲಿಕ ಸಮಾನತೆಯನ್ನು ತಂದು ಜಗತ್ತಿನಲ್ಲಿ ಸಾಮಾಜಿಕ ಧಾರ್ಮಿಕ ಸಾಹಿತಿಕ ಸಾಂಸ್ಕೃತಿಕ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಕಾರಣ ಇಂದು ಇಡಿ ವಿಶ್ವವೆ ಬಸವಣ್ಣನವರ ತತ್ವಗಳನ್ನು ಹೆಮ್ಮೆಯಿಂದ ತಮ್ಮದಾಗಿಸಿಕೊಂಡಿದ್ದಾರೆ. ಒಕ್ಕಲಿಗ ಮುದ್ದಣ್ಣ ಅವರು 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಒಬ್ಬ ಶ್ರೇಷ್ಠ ವಚನಕಾರರು ಮತ್ತು ಶಿವಶರಣರು. ಇವರು ಕೃಷಿ ಅಥವಾ ಬೇಸಾಯವನ್ನು ತಮ್ಮ ಮುಖ್ಯ ಕಾಯಕವನ್ನಾಗಿಸಿಕೊಂಡು ಬದುಕಿದವರು. ಒಕ್ಕಲಿಗ ಮುದ್ದಣ್ಣನವರ ಪ್ರಮುಖ ಜೀವನ ಮತ್ತು ಸಾಹಿತ್ಯದ ಪರಿಚಯದ ಒಂದು ನೋಟ: • ಕಾಲ ಮತ್ತು ಸ್ಥಳ: ಇವರು ಬಸವಾದಿ ಶರಣರ ಅವಧಿಯಲ್ಲಿ ಜೀವಿಸಿದ್ದರು ಹಾಗೂ ಇವರ ಜನ್ಮಸ್ಥಳ ಈಗಿನ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿಗೆ ಸೇರಿದ ಜೋಳದಹಾಳು ಗ್ರಾಮ. ಇವರ ತಂದೆ ತಾಯಿ ಮತ್ತು ಮಡದಿ ಮಕ್ಕಳ ಯಾವುದೇ ಉಲ್ಲೇಖ ಕಂಡು ಬಂದಿಲ್ಲ. • ಅಂಕಿತ ನಾಮ: ಮುದ್ದಣ್ಣನವರ ವಚನಗಳ ಅಂಕಿತ ನಾಮ ‘ಕಾಮಭೀಮ ಜೀವಧನದೊಡೆಯ’. • ಕಾಯಕ ಮತ್ತು ದಾಸೋಹ: ಬೇಸಾಯ ವೃತ್ತಿಯನ್ನು ಶ್ರೇಷ್ಠವೆಂದು ನಂಬಿದ್ದ ಇವರು, ನಿತ್ಯವೂ ಜಂಗಮ ದಾಸೋಹ (ಅನ್ನದಾನ) ನಡೆಸುತ್ತಿದ್ದರು. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ನೀಡದೆ, ಆ ಹಣವನ್ನು ಶರಣರ ದಾಸೋಹಕ್ಕಾಗಿ ಬಳಸಿದ ಧೀಮಂತ ಶರಣ ಇವರಾಗಿದ್ದಾರೆ. • ವಚನ ಸಾಹಿತ್ಯ: ಪ್ರಸ್ತುತ ಇವರ ಕೇವಲ 12 ವಚನಗಳು ಮಾತ್ರ ದೊರೆತಿವೆ. ಇವರ ವಚನಗಳಲ್ಲಿ ಒಕ್ಕಲುತನದ (ವ್ಯವಸಾಯದ) ಪರಿಭಾಷೆ, ಮುಗ್ಧ ಭಕ್ತಿ ಹಾಗೂ ಸರಳ ಶೈಲಿಯನ್ನು ಕಾಣಬಹುದು. ಪ್ರಸಿದ್ಧ ವಚನದ ಸಾಲುಗಳು: “ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ.” ಇವರ ವಚನಗಳು ಇಂದಿನ ಕೃಷಿಕರಿಗೂ ಬದುಕಿನ ಸಾರ ಮತ್ತು ಮಾರ್ಗದರ್ಶನವನ್ನು ನೀಡುತ್ತವೆ. ಒಕ್ಕಲಿಗ ಮುದ್ದಣ್ಣ ಮತ್ತು ಅವರ ವಚನ ತಾತ್ಪರ್ಯ ಒಕ್ಕಲಿಗ ಮುದ್ದಣ್ಣನವರ ಕಾಯಕ ನಿಷ್ಠೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ತೋರ್ಪಡಿಸುವ ಪ್ರಮುಖ ವಚನಗಳು ಹಾಗೂ ಅವುಗಳ ಸರಳ ವಿಶ್ಲೇಷಣೆ ಕಾಣಬಹುದು: 1. ಕೃಷಿ ಮತ್ತು ಆಧ್ಯಾತ್ಮದ ಸಮ್ಮಿಲನ (ವಚನ ವಿಶ್ಲೇಷಣೆ – ) ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ, ವಿಶ್ವಾಸವೆಂಬ ಬತ್ತ ಒಲಿದು ಉಂಡು ಸುಖಿಯಾಗಿರಬೇಕೆಂದ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಈ ವಚನದಲ್ಲಿ ಮುದ್ದಣ್ಣನವರು ಬೇಸಾಯದ ಪರಿಭಾಷೆಯ ಮೂಲಕವೇ ಆತ್ಮಸಾಕ್ಷಾತ್ಕಾರದ ಹಾದಿಯನ್ನು ವಿವರಿಸಿದ್ದಾರೆ. ನಮ್ಮ ಈ ಭೌತಿಕ ಶರೀರವೇ (ಅಂಗ) ಒಂದು ಕೃಷಿ ಭೂಮಿ. ಅದರಲ್ಲಿ ಬಿತ್ತಿ ಬೆಳೆಯಬೇಕಾದ ಬೆಳೆಯೇ ದೈವತ್ವ ಅಥವಾ ‘ಲಿಂಗ’. ಈ ಬೆಳೆಯನ್ನು ಬೆಳೆಸಲು ಬೇಕಾದ ಮುಖ್ಯ ಶಕ್ತಿ ‘ವಿಶ್ವಾಸ’ ಅಥವಾ ಅಚಲವಾದ ನಂಬಿಕೆ. ಮಾನವನು ತನ್ನ ಶರೀರವೆಂಬ ಭೂಮಿಯಲ್ಲಿ ಭಕ್ತಿಯಿಂದ ಲಿಂಗ ತತ್ವವನ್ನು ಬೆಳೆಸಿ, ಆ ಅರಿವಿನ ಸವಿಯನ್ನುಂಡು ಸುಖಿಯಾಗಿರಬೇಕು ಎಂದು ಅವರು ಸಂದೇಶ ನೀಡುತ್ತಾರೆ. 2. ಕಾಯಕದ ಮುಗ್ಧತೆ ಮತ್ತು ಸಮರ್ಪಣಾ ಭಾವ (ವಚನ ವಿಶ್ಲೇಷಣೆ – ) ವೇದ ಶಾಸ್ತ್ರವನೋದುವುದಕ್ಕೆ ಹಾರುವನಲ್ಲ; ಇರಿದು ಮೆರೆವುದಕ್ಕೆ ಕ್ಷತ್ರಿಯನಲ್ಲ; ಬೆರಸಿ ವ್ಯವಹಾರವ ಮಾಡುವುದಕ್ಕೆ ವೈಶ್ಯನಲ್ಲ; ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಶರಣರು ಚಾತುರ್ವರ್ಣ್ಯ ಪದ್ಧತಿಯನ್ನು ಮೀರಿ ನಿಂತವರು. ಮುದ್ದಣ್ಣನವರು ಇಲ್ಲಿ ತಮ್ಮನ್ನು ತಾವು ಮುಗ್ಧ ಕೃಷಿಕನೆಂದು ಗುರುತಿಸಿಕೊಳ್ಳುತ್ತಾರೆ. “ನಾನು ವೇದ ಓದುವ ಬ್ರಾಹ್ಮಣನಲ್ಲ (ಹಾರುವ), ಯುದ್ಧ ಮಾಡುವ ಕ್ಷತ್ರಿಯನಲ್ಲ, ಅಥವಾ ಲಾಭಕ್ಕಾಗಿ ವ್ಯಾಪಾರ ಮಾಡುವ ವೈಶ್ಯನಲ್ಲ. ನಾನು ಕೇವಲ ಕರಗಷ್ಟ ಪಟ್ಟು ದುಡಿಯುವ ಉಳುವ ಒಕ್ಕಲ ಮಗ” ಎಂದು ಹೆಮ್ಮೆಯಿಂದ ಹೇಳುತ್ತಾರೆ. “ಹೊಲ ಉಳುವಾಗ ನನ್ನಿಂದ ತಿಳಿಯದೇ ತಪ್ಪುಗಳಾಗಿದ್ದರೆ (ಉದಾಹರಣೆಗೆ ಮಣ್ಣಿನಲ್ಲಿರುವ ಕ್ರಿಮಿಕೀಟಗಳಿಗೆ ನೋವಾಗುವುದು), ನನ್ನ ಮುಗ್ಧತೆಯನ್ನು ಕಂಡು ನನ್ನನ್ನು ಒಪ್ಪಿಕೋ ಪ್ರಭುವೇ” ಎಂದು ದೇವರಲ್ಲಿ ಅನನ್ಯವಾಗಿ ಪ್ರಾರ್ಥಿಸುತ್ತಾರೆ. 3. ಕೃಷಿ ಪ್ರಜ್ಞೆ ಮತ್ತು ಜ್ಞಾನದ ಅರಿವು (ವಚನ ವಿಶ್ಲೇಷಣೆ – ) ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು… ಬೆಳೆಯ ಕೊಯಿದ ಮತ್ತೆ ಹೊಲಕ್ಕೆ ಕಾವಲುಂಟೆ ಕಾಮಭೀಮ ಜೀವಧನದೊಡೆಯ. • ವಿಶ್ಲೇಷಣೆ: ಒಬ್ಬ ಚತುರ ರೈತನಿಗೆ ತನ್ನ ಹೊಲದ ಪೈರಿಗೆ ಯಾವಾಗ, ಎಷ್ಟು ನೀರು ಹಾಯಿಸಬೇಕು ಎಂಬ ‘ಉಚಿತ’ (ಸದಸದ್ವಿವೇಕ) ಜ್ಞಾನವಿರಬೇಕು. ಅತಿಯಾದರೆ ಬೆಳೆ ಕೊಳೆಯುತ್ತದೆ, ಕಡಿಮೆಯಾದರೆ ಒಣಗುತ್ತದೆ. ಹಾಗೆಯೇ ಮನುಷ್ಯ ಮಾಡುವ ಕಾಯಕಕ್ಕೆ (ಕ್ರಿಯೆಗೆ) ಜ್ಞಾನದ (ಅರಿವಿನ) ಬೆಂಬಲವಿರಬೇಕು. ಒಮ್ಮೆ ಸಾಧಕನು ಆಧ್ಯಾತ್ಮಿಕ ಸಾಧನೆಯೆಂಬ ‘ಬೆಳೆಯನ್ನು’ ಕೊಯ್ದು ಜೀವನ್ಮುಕ್ತನಾದ ಮೇಲೆ, ಅವನಿಗೆ ಲೌಕಿಕ ಬಂಧನಗಳಾಗಲಿ ಅಥವಾ ಶರೀರದ ಕಾವಲಿನ ಹಂಗಾಗಲಿ ಇರುವುದಿಲ್ಲ ಎಂಬುದನ್ನು ಕೃಷಿಯ ಉದಾಹರಣೆಯೊಂದಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಒಕ್ಕಲಿಗ ಮುದ್ದಣ್ಣನವರ ಹೆಚ್ಚಿನ ಐತಿಹಾಸಿಕ ಮಾಹಿತಿ: • ಕಾಯಕವೇ ಕೈಲಾಸ ತತ್ವ: ಅವರು ಕೇವಲ ಹೊಲದಲ್ಲಿ ದುಡಿಯುತ್ತಿರಲಿಲ್ಲ, ಆ ದುಡಿಮೆಯ ಆದಾಯದಿಂದ ನಿತ್ಯವೂ ಮನೆಗೆ ಬರುವ ಶರಣರಿಗೆ, ದಾಸೋಹಿಗಳಿಗೆ ಅನ್ನದಾನ (ಜಂಗಮ ದಾಸೋಹ) ಮಾಡುತ್ತಿದ್ದರು. • ವಚನಗಳ ವಿಶೇಷತೆ: ಇವರ ವಚನಗಳಲ್ಲಿ ನೇಗಿಲು, ಕುಂಟೆ, ಎತ್ತು, ಮಳೆ, ಹೊಲ, ಕಾವಲು ಮುಂತಾದ ಕೃಷಿ ಪರಿಭಾಷೆಗಳೇ ಆಧ್ಯಾತ್ಮಿಕ ರೂಪಕಗಳಾಗಿ ಬಳಕೆಯಾಗಿವೆ. 12ನೇ ಶತಮಾನದ ಶರಣ ಚಳವಳಿಯು ಸಮಾಜದ ಕೆಳಸ್ತರದ ಕಾಯಕಜೀವಿಗಳಿಗೆ ಹೇಗೆ ಆತ್ಮಗೌರವ ಮತ್ತು ಸಾಹಿತ್ಯದ ಅಭಿವ್ಯಕ್ತಿಯನ್ನು ನೀಡಿತು ಎಂಬುದಕ್ಕೆ ಒಕ್ಕಲಿಗ ಮುದ್ದಣ್ಣನವರೇ ಸಾಕ್ಷಿ. ಶರಣ ಸಂಸ್ಕೃತಿಗೆ ಶ್ರಮವನ್ನು ಶಿವಯೋಗವನ್ನಾಗಿಸಿದ ಶ್ರೇಷ್ಠ ಶರಣ ವಚನಕಾರ ಒಕ್ಕಲಿಗ ಮುದ್ದಣ್ಣ. ಇವರ ಬದುಕೆ ಒಂದು ಮಾದರಿಯ ಪಾಠ. ಇವರು ಜಗದ ಇತಿಹಾಸದಲ್ಲಿ ಸಾವಿಲ್ಲದ ಶರಣರು. ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ದಿಟ್ಟ ಗಣಾಚಾರಿ ಶರಣೆ ಅಮುಗೆ ರಾಯಮ್ಮ ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಜಿಲ್ಲೆಯ ಪುಳಜೆ ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರ ಶೀಲ ವ್ರತ ನೇಮ ಶೀಲ ಮತ್ತು ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಒಬ್ಬ ದಿಟ್ಟ ಹೆಣ್ಣು ಮಗಳು ಗಣಾಚಾರಿ ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. • ಪತಿ: ಶಿವಶರಣರಾದ ಅಮುಗೆ ದೇವಯ್ಯ. • ಕಾಯಕ: ಇವರ ಕುಟುಂಬವು ನೆಯ್ಗೆಯ (ನೇಕಾರ) ಕಾಯಕದಲ್ಲಿ ತೊಡಗಿತ್ತು. • ಜೀವನ : ಬಸವಣ್ಣನವರ ಕಾಯಕ ದಾಸೋಹ ಮತ್ತು ಸಮ ಸಮಾಜದ ಪರಿಕಲ್ಪನೆಯ ಪ್ರಭಾವಕ್ಕೆ ಒಳಗಾಗಿ ಪತಿಯೊಂದಿಗೆ ಕಲ್ಯಾಣಕ್ಕೆ ತೆರಳಿ, ಅಲ್ಲಿನ ಕ್ರಾಂತಿಯ ನಂತರ ಪುಳುಜೆಗೆ (ಪುಳಜೆ) ಬಂದು ಅಲ್ಲಿಯೇ ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ. ವಚನ ಸಾಹಿತ್ಯಕ್ಕೆ ಕೊಡುಗೆ • ವಚನಗಳ ಸಂಖ್ಯೆ: ಇವರ ಸುಮಾರು ೧೧೬ ವಚನಗಳು ಲಭ್ಯವಾಗಿವೆ.ಅಕ್ಕ ಮಹಾದೇವಿ ಅಕ್ಕಮ್ಮ ನೀಲಮ್ಮರ ನಂತರ ಅತಿ ಹೆಚ್ಚು ವಚನಗಳನ್ನು ಬರೆದ ಶರಣೆಯರಲ್ಲಿ ಇವರೂ ಒಬ್ಬರು. • ವಚನಾಂಕಿತ: ಇವರ ವಚನಗಳ ಅಂಕಿತನಾಮ “ಅಮುಗೇಶ್ವರಲಿಂಗ” ಅಥವಾ “ಮಹಾಲಿಂಗ ಅಮುಗೇಶ್ವರಲಿಂಗ”. • ವಚನಗಳ ಶೈಲಿ: ರಾಯಮ್ಮನವರ ವಚನಗಳಲ್ಲಿ ಗಾಢವಾದ ಲಿಂಗನಿಷ್ಠೆ, ಆತ್ಮನಿರೀಕ್ಷೆ, ಕೆಚ್ಚು ಮತ್ತು ಧೈರ್ಯ ಎದ್ದು ಕಾಣುತ್ತವೆ. ಕೇವಲ ಬಾಹ್ಯ ಆಚಾರಗಳನ್ನು ಪಾಲಿಸುತ್ತಾ ಅಧರ್ಮವಾಗಿ ನಡೆಯುವವರನ್ನು, ಕಾಷಾಯ ವಸ್ತ್ರ ತೊಟ್ಟು ಕಾಮವಿಕಾರಗಳಲ್ಲಿ ಮುಳುಗುವ ಕಪಟ ವೇಷಧಾರಿಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಅಮುಗೆದೇವಯ್ಯ ‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ಕೆಡಿಸುವರಾರನೂ ಕಾಣೆನಯ್ಯಾ ಆದ್ಯರ-ವೇದ್ಯರ ವಚನಗಳಿಂದ ಅರಿದೆವೆಂಬುವರು ಅರಿಯಲಾರರು ನೋಡಾ! ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು ಅಮುಗೇಶ್ವರಲಿಂಗವ ನಾನೇ ಅರಿಯಬೇಕು’. ಇನ್ನೊಂದು ವಚನವನ್ನು ನೋಡೋಣ ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ ? ಆಡಿನ ಮರಿಯು ಆನೆಯಾಗಬಲ್ಲುದೆ ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ? ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ. ವಚನ ವಿಶ್ಲೇಷಣೆ : ಈ ವಚನದಲ್ಲಿ ಅಮುಗೆ ರಾಯಮ್ಮನವರು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ, ವೇಷಭೂಷಣಗಳ ಮೂಲಕ ಜನರನ್ನು ವಂಚಿಸುವ ಡಾಂಭಿಕ ಭಕ್ತರನ್ನು ಅತ್ಯಂತ ಕಠೋರವಾದ ಉಪಮೆಗಳ ಮೂಲಕ ಟೀಕಿಸಿದ್ದಾರೆ. ೧. ಬಾಹ್ಯ ಬದಲಾವಣೆ ಆಂತರಿಕ ಸತ್ಯವಾಗಲಾರದು (ಮೊದಲ ಮೂರು ಸಾಲುಗಳು): • “ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ?”: ಕಾಗೆ ಮತ್ತು ಕೋಗಿಲೆ ಎರಡೂ ಕಪ್ಪಗಿದ್ದರೂ, ಕಾಗೆಯು ಕೋಗಿಲೆಯಂತೆ ಮಧುರವಾಗಿ ಹಾಡಲು ಸಾಧ್ಯವಿಲ್ಲ. • “ಆಡಿನ ಮರಿಯು ಆನೆಯಾಗಬಲ್ಲುದೆ?”: ಸಣ್ಣದಾದ ಆಡಿನ ಮರಿ ಎಂದಿಗೂ ಆನೆಯಷ್ಟು ಭವ್ಯ ಹಾಗೂ ಬಲಿಷ್ಠವಾಗಲು ಸಾಧ್ಯವಿಲ್ಲ. • “ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?”: ಸೀಳನಾಯಿಯು ಸಿಂಹದ ಚರ್ಮ ಹೊದ್ದರೂ ಸಿಂಹದ ಗಾಂಭೀರ್ಯ ಮತ್ತು ಶೌರ್ಯವನ್ನು ಹೊಂದಲು ಸಾಧ್ಯವಿಲ್ಲ. • ಈ ಮೂರು ನಿಸರ್ಗದ ಉದಾಹರಣೆಗಳ ಮೂಲಕ ರಾಯಮ್ಮನವರು ಹೇಳುವುದೇನೆಂದರೆ, ಕೇವಲ ವೇಷ ಬದಲಾಯಿಸಿದ ತಕ್ಷಣ ಒಬ್ಬ ವ್ಯಕ್ತಿಯ ಮೂಲ ಗುಣ ಅಥವಾ ಯೋಗ್ಯತೆ ಬದಲಾಗುವುದಿಲ್ಲ. ೨. ಡಾಂಭಿಕತೆಯ ಖಂಡನೆ • “ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ”: ನಿಜವಾದ ಭಕ್ತನಿಗೆ ಮೂರು ಗುಣಗಳು ಮುಖ್ಯ – ಅರಿವು (ಆತ್ಮಜ್ಞಾನ), ಆಚಾರ (ಶುದ್ಧ ನಡೆ), ಮತ್ತು ಸಮ್ಯಜ್ಞಾನ (ಸದಸದ್ವಿವೇಕ ಬುದ್ಧಿ). ಆದರೆ, ಇವು ಯಾವುದನ್ನೂ ಅರಿಯದೆ ಕೇವಲ ಹಣೆಗೆ ವಿಭೂತಿ ಧರಿಸಿ, ಕೊರಳಿಗೆ ಲಿಂಗ ಅಥವಾ ರುದ್ರಾಕ್ಷಿ ನೇತುಹಾಕಿಕೊಂಡು ತಾನು ದೊಡ್ಡ ಭಕ್ತನೆಂದು “ನಾಮ” (ವೇಷ) ಹೊತ್ತು ತಿರುಗುವವರನ್ನು ರಾಯಮ್ಮ ಇಲ್ಲಿ ಪ್ರಶ್ನಿಸುತ್ತಾರೆ. ೩. ಕಟು ನಿಷ್ಠುರತೆ • “ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ”: ಅಂತರಂಗ ಶುದ್ಧಿ ಇಲ್ಲದೆ ಕೇವಲ ಬಹಿರಂಗದ ಪ್ರದರ್ಶನ ಮಾಡುವ ಅಂತಹ ಮೂರ್ಖರ (ಗಾವಿಲರ) ಮುಖವನ್ನು ನೋಡುವುದು ಕೂಡ ಪಾಪ ಎಂದು ರಾಯಮ್ಮನವರು ಅತ್ಯಂತ ನಿಷ್ಠುರತೆಯಿಂದ ಹೇಳುತ್ತಾರೆ. ಅಂತಹವರ ಭಕ್ತಿಯನ್ನು ತಮ್ಮ ಆರಾಧ್ಯದೈವ “ಅಮುಗೇಶ್ವರ” ಎಂದಿಗೂ ಒಪ್ಪಲಾರ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಈ ವಚನದ ಮೂಲಕ ಅಮುಗೆ ರಾಯಮ್ಮನವರು “ನುಡಿದಂತೆ ನಡೆ, ನಡೆದಂತೆ ನುಡಿ” ಎಂಬ ಶರಣ ತತ್ವವನ್ನು ಎತ್ತಿಹಿಡಿಯುತ್ತಾರೆ. ಭಕ್ತಿ ಎಂಬುದು ಪ್ರದರ್ಶನದ ವಸ್ತುವಲ್ಲ; ಅದು ಅಂತರಂಗದ ಶುದ್ಧಿ ಮತ್ತು ಜ್ಞಾನದ ಸಂಕೇತವಾಗಿರಬೇಕು ಎಂಬ ವೈಚಾರಿಕ ಸಂದೇಶವನ್ನು ಈ ವಚನ ನಮಗೆ ನೀಡುತ್ತದೆ. ಆಯ್ದಕ್ಕಿ ಲಕ್ಕಮ್ಮನಂತೆ ದಿಟ್ಟ ವಚನಕಾರ್ತೆ ತನ್ನ ಗಂಡನೊಂದಿದೆ ಕಾಯಕ ದಾಸೋಹ ಮಾಡಿ ಕೊನೆಗೆ ನಡೆದ ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ ಚೆನ್ನ ಬಸವಣ್ಣ ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು ಸೋಮಿದೇವನ ಸೈನಿಕರನ್ನು ಎದುರಿಸುತ್ತಾ ಸೊಲ್ಲಾಪುರದ ಪುಳಜೆಗೆ ಬಂದು ಅಲ್ಲಿಯೇ ನೆಲೆಸಿ ಕೊನೆಗೆ ಅಲ್ಲಿಯೇ ಐಕ್ಯಳಾದ ಸಾವಿಲ್ಲದ ಮಹಾಶರಣೆ ಅಮುಗೆ ರಾಯಮ್ಮಳ ಜೀವನ ಸಂಘರ್ಷ ನಿಷ್ಠುರತೆ ನಮಗೆ ಇಂದಿಗೂ ಮಾದರಿಯಾಗಿವೆ. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಬಸವ ಪ್ರೇಮಿ ಸಿರಿಗೆರೆಯ ಸಿರಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಹೀಗೆ ಮಧ್ಯ ಕರ್ನಾಟಕದ ಭಾಗಗಳಲ್ಲಿ ಬಸವ ಜ್ಯೋತಿಯ ಬೆಳಕಾಗಿ ಮನೆ ಮನೆಗೆ ಬಸವಾದಿ ಶರಣರ ವಚನಗಳನ್ನು ಮುಗಿಸಿದ ಶಿವಯೋಗದ ಸಿರಿ ತರಳಬಾಳು ಶ್ರೀ ಮಠದ 20ನೆಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ. ಏಪ್ರಿಲ್ 28, 1914ರಂದು ಬಸವ ಜಯಂತಿಯಂದು ಜನಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು 1940ರ ಬಸವ ಜಯಂತಿಯಂದೇ ತರಳಬಾಳು ಪೀಠದ ಜಗದ್ಗುರುಗಳಾಗಿ ಸಮಾಜಸೇವಾ ದೀಕ್ಷೆಯನ್ನು ಕೈಗೊಂಡರು. ಆ ಮೂಲಕ ಮಠದ 20ನೆಯ ಜಗದ್ಗುರುಗಳಾಗಿ ಮಠಗಳ ಪರಂಪರೆಯಲ್ಲಿಯೇ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ. ಮಠದ ಆಡಳಿತದ ಚುಕ್ಕಾಣಿ ಹಿಡಿದಾಗ ಸಿರಿಗೆರೆ ಮಠ ದುಗ್ಗಾಣಿ ಮಠವಾಗಿತ್ತು. ಅಂಥ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿಸುವಲ್ಲಿ ಅವರಲ್ಲಿನ ಕಾಯಕಶ್ರದ್ಧೆ, ದೂರದೃಷ್ಡಿ, ತಾಯ್ತನ, ಸಂಘಟನಾ ಚಾತುರ್ಯ, ನೇರನಿಷ್ಟುರ ನುಡಿ, ಅದಮ್ಯ ವಿಶ್ವಾಸವೇ ಕಾರಣ. 19ನೆಯ ಶತಮಾನದ ಕಲ್ಯಾಣದಲ್ಲಿ ಬೆಳಗಿದ ಶರಣ ಧರ್ಮದ ದೀವಿಗೆಯನ್ನು ಸಿರಿಗೆರೆಯ ಪ್ರಣತಿಯಲ್ಲಿ ಬೆಳಗಿಸಿದವರು ಪೂಜ್ಯರು. ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರ ಚಿಂತನೆ, ವಿಶ್ವಗುರು ಬಸವಣ್ಣನವರ ತತ್ವಸಿದ್ಧಾಂತಗಳ ತಳಹದಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದಾ ಕಲ್ಲುಮಳ್ಳುಗಳ ಹಾದಿಯಲ್ಲಿ ಸಾಗಿದ ಧೀಮಂತ ಗುರುಗಳು ಶ್ರೀ ಶಿವಕುಮಾರ ಶ್ರೀಗಳು. ಪ್ರಸ್ತುತ ದಿನಮಾನದಲ್ಲಿ ಒಂದು ಮಠವನ್ನು ಕಟ್ಟುವುದು ಅಷ್ಟು ಕಷ್ಟವಾಗಲಾರದೇನೋ! ಸರ್ಕಾರದ ಅನುದಾನದಿಂದಲೇ ಅನೇಕ ಮಠಗಳು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರಬಹುದು. ಆದರೆ ಕಳೆದ ನಾಲ್ಕು ದಶಕದ ಹಿಂದೆ ಮಠವೆಂದರೆ ಭಕ್ತರಿಗೆ ಏನೂ ಎಂಬುದೇ ಗೊತ್ತಿಲ್ಲದ ಸಂದರ್ಭದಲ್ಲಿ ಇಡೀ ಭಕ್ತಸಮೂಹವನ್ನು ಎಚ್ಚರಿಸಿ ಮಠದ ಕಡೆಗೆ ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ಪಟ್ಟ ಕಷ್ಟ, ನೋವು, ನಿಂದನೆ, ಯಾರಿಗೂ ಬಂದಿರಲಾರದೇನೋ! ಆದರೆ ಹಿಡಿದ ಕಾಯಕವನ್ನು ಮಾಡಿಮುಗಿಸುವ ಇಚ್ಛಾಶಕ್ತಿ ಗುರುಗಳಿಗೆ ಇದ್ದುದರಿಂದಲೇ ಸಿರಿಗೆರೆ ಮಠವನ್ನು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿಸಿತು. ಶಿಷ್ಯರು ಮತ್ತು ಮಠದ ನಡುವೆ ಬಾಂಧವ್ಯಕಲ್ಪಿಸಿ ಶಿಷ್ಯರೆಂದರೆ ಸಿರಿಗೆರೆ ಶಿಷ್ಯರಂತೆ ನಡೆದುಕೊಳ್ಳಬೇಕು ಎನ್ನುವ ವಾತಾವರಣವನ್ನು ನಿರ್ಮಿಸಿದರು. ’ಮಠ ನಮಗೇನು ಮಾಡಿದೆ’ ಎಂದು ಆಶಿಸುವ ಜನರೇ ಈ ಸಮಾಜದಲ್ಲಿ ತುಂಬಿರುವಾಗ ’ಮಠಕ್ಕೆ ನಾನೇನು ಮಾಡಿದೆ’ ಎಂದು ಯೋಚಿಸುವ ಸಮರ್ಪಣಾ ಭಾವದ ಭಕ್ತರು ಸಿರಿಗೆರೆ ಮಠಕ್ಕಿದ್ದಾರೆ. ಅದರಂತೆ ಸ್ವಾಮಿಗಳೆಂದರೆ ಸಿರಿಗೆರೆ ಸ್ವಾಮಿಗಳ ಹಾಗೆ ಇರಬೇಕು ಎನ್ನುವಂತೆ ತೋರಿಸಿಕೊಟ್ಟರು. ನಿಸರ್ಗದ ಮುನಿಸಿನಿಂದ ಬರಗಾಲ ಬರಬಹುದೇ ಹೊರತು ಆ ಮಠದ ಶಿಷ್ಯರ ಶ್ರದ್ಧಾ-ಭಕ್ತಿಗೆ ಎಂದಿಗೂ ಬರವೆಂಬುದಿಲ್ಲ. ಹಾಗೆ ನೋಡಿದರೆ ಹಿರಿಯ ಗುರುಗಳಿಗಿಂತ ಮೊದಲು ಆರ್ಥಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮಠವದು. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಸದ್ಧರ್ಮ ಸಿಂಹಾಸನವನ್ನು ಅಲಂಕರಿಸಿದ ನಂತರ, ಭಕ್ತರು ನಾಮುಂದು ತಾಮುಂದು ಎಂದು ತನು-ಮನ-ಧನದ ಸೇವೆಯ ಮೂಲಕ ಈ ಬೃಹನ್ಮಠವನ್ನು ಅನ್ವರ್ಥವಾಗಿಯೂ ಬೃಹದಾಕಾರವಾಗಿ ಬೆಳೆಸಿದರು. ‘ಕಾಯ, ಕಾಲ, ಕಾಸಿಗೆ ಮಹತ್ವ ಕೊಡದವನು ಉದ್ಧಾರವಾಗುವುದಿಲ್ಲ’ ಎಂದು ಸಾರುತ್ತಾ ಅದರಂತೆಯೇ ತಾವು ನಡೆದು, ತಮ್ಮ ಶಿಷ್ಯವರ್ಗವೂ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.ಬಹುಶಃ ಭಾರತದಲ್ಲಿ ಸಂವಿಧಾನ ಜಾರಿ ಆಗುವುದಕ್ಕಿಂತ ಮೊದಲೇ ಇಡೀ ರಾಷ್ಟ್ರದಲ್ಲಿ ಜಾತ್ಯತೀತ ಕನಸನ್ನು ಕಂಡು ಅದನ್ನು ನಿಜಗೊಳಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಶ್ರೀ ಶಿವಕುಮಾರ ಶ್ರೀಗಳು ಮಾತ್ರ ಎಂದು ಹೆಮ್ಮೆಯಿಂದ ಹೇಳಬಹುದು. ಸಹಪಂಕ್ತಿ ಭೋಜನ, ಸಮಾನ ಶಿಕ್ಷಣ, ಅಂತರ್ಜಾತಿ ಶಿಕ್ಷಣದ ಮೂಲಕ ’ಮಾನವಜಾತಿ ತಾನೊಂದೆ ವಲಂ’ ಎನ್ನುವ ಪಂಪನ ನುಡಿಯನ್ನು ನಿಜಗೊಳಿಸಿದರು. ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಫಾಪಿಸಿ ಅದರ ಅಡಿಯಲ್ಲಿ ನೂರಾರು ಶಾಲಾಕಾಲೇಜುಗಳನ್ನು ತೆರೆದರು. ಅಲ್ಲಿ ಓದುವ ಮಕ್ಕಳಲ್ಲಿ ಸಮಾನತೆಯ ಬೀಜಬಿತ್ತಿದರು. ವ್ಯವಹಾರ ಜ್ಙಾನವಿರುವವನಿಗೆ ವ್ಯಾಪಾರ ಮಾಡು, ಕೃಷಿ ಕೆಲಸದಲ್ಲಿ ಅನುಭವವಿದ್ದರೆ ಒಳ್ಳೆಯ ರೈತನಾಗು, ಚೆನ್ನಾಗಿ ಓದಿ ಉತ್ತಮ ಪದವಿಯನ್ನು ಪಡೆದಿದ್ದರೆ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸು ಎಂದು ಹೇಳುವ ಮೂಲಕ ಬಸಣ್ಣನವರ ಕಾಯಕ ಶ್ರದ್ಧೆಯನ್ನು ಬೆಳೆಸಿದರು. ‘ನೆತ್ತಿಯುಳ್ಳವನು ಓದಬೇಕು, ರಟ್ಟೆಯುಳ್ಳವನು ದುಡಿಯಬೇಕು, ಹೊಟ್ಟೆಯುಳ್ಳವನು ಉಣ್ಣಬೇಕು’ ಎಂದು ಹೇಳುತ್ತಿದ್ದ ಅವರ ಆಶೀರ್ವಾಣಿಯು ಅದೆಷ್ಟೋ ಜನರನ್ನು ಕರ್ತವ್ಯ ಪ್ರಜ್ಞರನ್ನಾಗಿ ಹಾಗೂ ಕ್ರಿಯಾಶೀಲರನ್ನಾಗಿ ಮಾಡಿತು. ಸಮಾಜದಲ್ಲಿ ನಡೆಯುವ ವಿವಾಹ, ಶಿವಗಣಾರಾಧನೆ, ಗೃಹಪ್ರವೇಶ ಇತ್ಯಾದಿ ಯಾವುದೇ ಕಾರ್ಯಕ್ರಮವಿರಲಿ; ಅಲ್ಲಿ ‘ಸರ್ವ ಶರಣ ಸಮ್ಮೇಳನ’ಗಳ ಮೂಲಕ ನಾಡಿನ ಒಳ-ಹೊರಗೆ ಶರಣತತ್ವ ಪ್ರಸಾರ ಕಾರ್ಯವನ್ನು ಕೈಗೆತ್ತಿಕೊಂಡರು. ಅನ್ಯ ಭಾಷೆಗಳಿಗೂ ಶರಣರ ವಚನಗಳನ್ನು ಭಾಷಾಂತರಿಸಿ ಅನ್ಯ ಭಾಷಿಕರೂ ಶರಣ ಸಾಹಿತ್ಯದ ಮಹತ್ವವನ್ನ್ನು ಮನಗಾಣುವಂತೆ ಮಾಡಿದರು. ಒಂದು ಮಠದ ಪೀಠಾಧಿಪತಿಯಾಗಿ, ಕಾವಿಧಾರಿ ಸ್ವಾಮಿಗಳಾಗಿರುವವರು ಬಹುತೇಕ ಸಂಪ್ರದಾಯವಾದಿಗಳೇ ಆಗಿರುತ್ತಾರೆ. ಜಪ, ತಪ, ನಿತ್ಯ ನೇಮಗಳನ್ನು ಅನುಸರಿಸುತ್ತಾ ಅದನ್ನೇ ಶಿಷ್ಯರಿಗೆ ಬೋಧಿಸುತ್ತಾ ಕುರುಡು ಆಚರಣೆಗೆ ಒಳಗಾದವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಆದರೆ ಸ್ವಾಮಿಗಳಾಗಿ ಪ್ರಖರ ವಿಚಾರವಾದಿಯಾಗಿ, ಮೂಢನಂಬಿಕೆಗಳ ವಿರೋಧಿಯಾಗಿ ಶಿಷ್ಯರನ್ನು ತಿದ್ದುತ್ತಾ ಸರಿದಾರಿಯಲ್ಲಿ ಕರೆದೊಯ್ಯೊವ ಶ್ರೀ ಶಿವಕುಮಾರ ಸ್ವಾಮಿಜಿಯಂಥವರು ಸಿಗುವುದು ವಿರಳವೇ ಸರಿ. ಹಳಕಟ್ಟಿಯವರಿಗೆ ಬಂಗಾರದ ಪದಕ ಒಮ್ಮೆ ದಾವಣಗೆರೆ ನಗರದ ರಾಜನಹಳ್ಳಿ ಹನುಮಂತಪ್ಪ ಛತ್ರದ ಆವರಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿತ್ತು. ಆಗ ವಚನಶಾಸ್ತ್ರದ ಪಿತಾಮಹರೆಂದೇ ಖ್ಯಾತರಾದ ಫ.ಗು ಹಳಕಟ್ಟಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ತಿರುಗಿ ವಚನಗಳ ಓಲೆಗರಿ, ಕೈಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕವೆಚ್ಚ ಹೆಚ್ಚಾಗಿ ಆಗಿನ ಕೆಸಿಸಿ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ತೀರಿಸಲಾಗದೆ ಮನೆ ಜಪ್ತಿಗೆ ಬಂದಿತು. ಈ ವಿಷಯ ತಿಳಿದ ಶ್ರೀ ಶಿವಕುಮಾರ ಶ್ರೀಗಳು ಕೂಡಲೇ ಎ. ಜಿ ವಿರುಪಾಕ್ಷಪ್ಪ, ಮತ್ತು ಸಿ ಅಂಕಪ್ಪ ಇವರನ್ನು ಸಿರಿಗೆರೆಗೆ ಕಳುಹಿಸಿ ಮಠದ ಏಜೆಂಟ್ ಆಗಿದ್ದ ರುದ್ರಯ್ಯನವರಿಗೆ ಪತ್ರ ಕೊಟ್ಟು ಮಠದಲ್ಲಿದ್ದ ಬಂಗಾರದ ಪದಕವನ್ನು ತರಿಸಿ ಅಂದಿನ ಕಾರ್ಯಕ್ರಮ ಮುಗಿಯುವದರೊಳಗಾಗಿ ಫ .ಗು ಹಳಕಟ್ಟಿಯನ್ನು ಸನ್ಮಾನಿಸಿ ‘ಮಠ ಕೊಟ್ಟದ್ದು ಎಂದು ಬಂಗಾರದ ಪದಕವನ್ನು ಹಾಗೆ ಇಟ್ಟುಕೊಳ್ಳಬೇಡಿ. ಇದನ್ನು ಮಾರಿ ನಿಮ್ಮ ಸಾಲವನ್ನು ತೀರಿಸಿ ಋಣಮುಕ್ತರಾಗಿ, ಶರಣ ಸಾಹಿತ್ಯದ ಸೇವಕರು ಸಾಲಗಾರರಾಗಿ ಈ ರೀತಿ ನೋವನ್ನು ಪಡುವುದು ನಮಗೆ ಇಷ್ಟವಿಲ್ಲ’ ಎಂದು ಆಶೀರ್ವದಿಸಿದರು. ತುಂಬಿದ ಕಣ್ಣು, ಮುಗಿದ ಕೈನಿಂದ ಅದನ್ನು ಸ್ವೀಕರಿಸಿದ ಹಳಕಟ್ಟಿಯವರು ಸಾಲ ತೀರಿಸಿ ಉಳಿದ ಹಣವನ್ನು ಮಠಕ್ಕೆ ತಲುಪಿಸುವುದಾಗಿ ಎಂದು ಹೇಳಿದಾಗ ಸಾಧ್ಯವಿಲ್ಲ, ಅದು ಶರಣ ಸಾಹಿತ್ಯದ ಮೀಸಲು ಎಂದು ಶ್ರೀಗಳು ಹೇಳಿದ್ದರು. ತಮ್ಮ ಜೀನದುದ್ದಕ್ಕೂ ಜಾತಿಮತ ಭೇದವಿಲ್ಲದೆ ಗ್ರಾಮೀಣ ಜನರ ಅಭ್ಯುದಯಕ್ಕಾಗಿ ನಾಲ್ಕು ದಶಕಗಳ ಕಾಲ ಅಹರ್ನಿಷಿ ದುಡಿದು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಆಮುಲಾಗ್ರ ಬದಲಾವಣೆಗೆ ನಾಂದಿ ಹಾಡಿದವರು ಶ್ರೀಗಳವರು. ಕಲ್ಲಾಗಿದ್ದ ಭಕ್ತರನ್ನು ಶಿಲೆಗಳನ್ನಾಗಿ ರೂಪಿಸಿದರು. ಬಿದ್ದವರನ್ನು, ಶೋಷಣೆಗೆ ಒಳಗಾದವರನ್ನು. ದೀನ ದಲಿತರನ್ನು, ಅಜ್ಞಾನದ ಸ್ಥಿತಿಯಲ್ಲಿ ಇರುವವರನ್ನು ಸದಾ ಮೇಲಕ್ಕೆತ್ತುವ ಮೂಲಕ ಸರ್ವ ಜನಾಂಗದ ಕಲ್ಯಾಣಕ್ಕೆ ಶ್ರಮಿಸಿದರು. ತಮ್ಮ ಕಣ್ ಸನ್ನೆ, ಬಾಯ್ ಸನ್ನೆ, ಕೈಸನ್ನೆಯ ಮೂಲಕವೇ ಸಾವಿರ ಸಾವಿರ ಜನರನ್ನು ಒಗ್ಗೂಡಿಸುವ, ಎಚ್ಚರಿಸುವ, ಮೌನರನ್ನಾಗಿಸುವ ಅವರ ವ್ಯಕ್ತಿತ್ವ ಕಲ್ಪನೆಗೂ ನಿಲುಕದ್ದು.ಪೀಠ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ; ಮುಳ್ಳಿನ ಹಾಸಿಗೆಯಾಗಿತ್ತು. ಪೂಜ್ಯರು ಮನಸ್ಸಿದ್ದರೆ ಮಾರ್ಗ ಎಂಬ ತತ್ವದ ಮೇಲೆ ನಂಬಿಕೆಯಿಟ್ಟವರು. ಯಾವುದೇ ಕಾರ್ಯವಿರಲಿ ಹಣವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಶ್ರೀಜಗದ್ಗುರುಗಳು ಹಣವನ್ನು ಎಂದೂ ಹಿಂಬಾಲಿಸಲಿಲ್ಲ; ಇವರು ಕಾರ್ಯ ಸಾಧನೆ ಮಾಡುತ್ತಾ ಹೋದಂತೆ ಹಣವೇ ಇವರನ್ನು ಹಿಂಬಾಲಿಸಿತು. ದೀನದಲಿತರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುತ್ತ ಅವರ ಬದುಕಿನಲ್ಲಿ ವಿಶ್ವಾಸ ಮೂಡಿಸಿದ ಶಿವಕುಮಾರ ಶ್ರೀಗಳು ಸಮಸ್ತ ಸಮಾಜದ ಜಾಗೃತಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡ ವಾಸ್ತವ ಮಾನವತಾವಾದಿಗಳು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಉನ್ನತಿಗೆ ಹಗಲಿರುಳು ಶ್ರಮಿಸಿ ಸಮಾಜದ ಅಭ್ಯುದಯಕ್ಕೆ ಪಣತೊಟ್ಟು ಸುಂದರ ’ಮಹಾಮನೆ’ಯನ್ನೇ ನಿರ್ಮಾಣ ಮಾಡಿದ ಶ್ರೀಗಳಿಗೆ ನಾಡು ಎಷ್ಟು ಋಣಿಯಾಗಿದ್ದರೂ ಸಾಲದು. ಜಾತಿ ನಿರ್ಮೂಲನೆ ಜಾತಿಯ ವಿಷಬೀಜ ಎಲ್ಲೆಲ್ಲೂ ಚಿಗುರಿ ’ಗಿರಕಿ’ ಹೊಡೆಯುತ್ತಿದ್ದಾಗ ಮೊತ್ತಮೊದಲು ಕರ್ನಾಟಕದಲ್ಲಿ ಸಹಪಂಕ್ತಿ ಭೋಜನ ಆರಂಭಿಸಿ ಇಂದಿಗೂ ನಿರಂತರತೆ ಉಳಿಸಿದ ಧೀರ ಚೇತನ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳವರು. “ಸಹಪಂಕ್ತಿ ಭೋಜನ ಬೇಡ ಎನ್ನುವುದಾದರೆ ಈ ಪೀಠದ ಜಗದ್ಗುರು ಪಟ್ಟವೇ ನಮಗೆ ಬೇಡ” ಎಂದ ಮಾನವತಾವಾದಿ ಅವರು.ಶ್ರೀಗಳವರನ್ನು ಕುರಿತು ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಸೂರ್ಯನನ್ನು ಪರಿಚಯಿಸುತ್ತೇನೆ ಎನ್ನುವುದು ದಡ್ಡತನದ ಮಾತಾಗುತ್ತದೆ. ಕಲೆ, ಸಾಹಿತ್ಯ, ನಾಟಕ, ಶಿಕ್ಷಣ, ಧರ್ಮ, ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಶಾಲಾ-ಕಾಲೇಜುಗಳ ಮುಖಾಂತರ ಅನ್ನದಾನ, ವಿದ್ಯಾದಾನಗಳ ಕ್ರಾಂತಿಯನ್ನು ಮಾಡಿ ನವಸಮಾಜವನ್ನು ಕಟ್ಟಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಇಂದಿನ ವಿಜ್ಞಾನ ಯುಗದಲ್ಲಿಯೂ ಅಡ್ಡಪಲ್ಲಕ್ಕಿ ಇರಲಾರದೆ ನಾವು ಬರುವುದಿಲ್ಲ ಎನ್ನುವ ವೇಷದಾರಿ ಸ್ವಾಮಿಜಿಗಳೆತ್ತ, ಅಂದಿನ ಕಾಲದಲ್ಲಿ ಜಗದ್ಗುರುಗಳಾಗಿದ್ದರೂ ತಾವೇ ಬಂದು ಜನ-ಮನದ ಹೃದಯಾಂತರಾಳದಲ್ಲಿ ಬಸವ ಬೀಜ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡ ನಿಜವಾದ ಜಗದ್ಗುರು ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳೆತ್ತ! ತಮ್ಮ ಉತ್ತರಾಧಿಕಾರಿಯಾಗಿ ವಿದ್ವತ್ ಪೂರ್ಣ ಜಗದ್ಗುರುಗಳಾಗಿರುವ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ತಮ್ಮ ಸ್ಥಾನಕ್ಕೆ ಕುಳ್ಳಿರಿಸಿ ತರಳಬಾಳು ಮಠವನ್ನು ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ರೈತಮುಖಿಯಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವಂತೆ ಮಾಡಿದ್ದಾರೆ. ಶ್ರೀಗಳವರ ಭೌತಿಕ ಶರೀರ ಅಳಿದಿರಬಹುದು. ಆದರೆ ಅವರ ವ್ಯಕ್ತಿತ್ವ ಜಂಗಮ. ಸಾವಿರ ವರ್ಷ ಕಳೆದರೂ ಅವರ ಚೈತನ್ಯ ಮರೆಯಾಗಲಾರದು. ಇಂದಿಗೂ ಅವರ ಸ್ಮರಣೆ ನಮ್ಮಲ್ಲಿ ಚೈತನ್ಯ ತುಂಬುತ್ತದೆ. ಇದು ಅವರ ಜಂಗಮತ್ವ. ಅವರನ್ನು ಸ್ಮರಿಸಿದಾಗಲೆಲ್ಲಾ ಕಣ್ಣು ಒದ್ದೆಯಾಗುತ್ತದೆ. ಹೀಗೆ ಶ್ರೀಗಳ ಬಗ್ಗೆ ಬರೆಯುತ್ತಾ ಹೋದರೆ ಬತ್ತದ ಒರತೆಯಂತೆ, ವಜ್ರದ ಗಣಿಯಂತೆ ಅನೇಕ ಪಾಠ ಕಲಿಸುವ ಪ್ರಸಂಗಗಳು ನೆನಪಿನ ಬುತ್ತಿಯಿಂದ ಚಿಮ್ಮುತ್ತವೆ.ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಬಲ್ಲವರು ಅವರನ್ನು ನೆನೆಯದ ದಿನವೇ ಇಲ್ಲ. ಬಯಲಲ್ಲಿ ಬಯಲಾದರು ಪೂಜ್ಯರು 1992 ಸೆಪ್ಟೆಂಬರ್ 24 ರಂದು ಲಿಂಗೈಕ್ಯರಾಗಿದ್ದರೂ ಭಕ್ತರ ಅಂತರಾಳದಲ್ಲಿ ಇಂದಿಗೂ ಹೃದಯ ಸಿಂಹಾಸನಾಧೀಶ್ವರರಾಗಿ ಉಳಿದಿದ್ದಾರೆ. ಭಕ್ತರೆದೆಯಲಿ ಹಣತೆ ಹಚ್ಚಿಭಕ್ತರೇಳಿಗೆಯಲಿ ಬೆಳಕ ಕಂಡು ಮಾತಿಗಿಂತ ಕೃತಿಯೆ ಮೇಲೆಂದ ಭಕ್ತರೆದೆಯ ದಿವ್ಯಪ್ರಭೆ ವರಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯ ಸಾಧನೆ ನಿತ್ಯ ಸ್ಮರಣೀಯವಾಗಿದೆ. ಬಸವ ತತ್ವ ಪ್ರಸಾರ ಮಾಡುವ ಕೈಂಕರ್ಯಕ್ಕೆ ದುಡಿಯುವ ಶ್ರೇಷ್ಠ ಶಿವಯೋಗದ ಸಿರಿ ಸಾಧಕ ಪೂಜ್ಯರು ಶ್ರೀ ಶಿವಕುಮಾರ ಸ್ವಾಮಿಗಳು. ಇವರು ಸಾವಿಲ್ಲದ ಶರಣರು ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸೇನಾನಿ ದೇಶ ಭಕ್ತ ಲಿಂಗೈಕ್ಯ ಶ್ರೀ ರತ್ನಪ್ಪಣ್ಣ ಕುಂಬಾರ ರತ್ನಪ್ಪ ಭರಮಪ್ಪ ಕುಂಬಾರ (ದೇಶಭಕ್ತ ರತ್ನಪ್ಪಣ್ಣ ಕುಂಬಾರ) ಅವರು ಮಹಾರಾಷ್ಟ್ರದ ಇಚಲಕರಂಜಿಯ ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕಾರಣಿಯಾಗಿದ್ದರು. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ವಿಲೀನಕ್ಕಾಗಿ ಶ್ರಮಿಸಿದ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದೂ ಕರೆಯಲಾಗುತ್ತದೆ. ಡಾ. ರತ್ನಪ್ಪ ಕುಂಬಾರ ಅವರ ಜೀವನದ ಪ್ರಮುಖ ವಿವರಗಳು .ಜನನ: 15 ಸೆಪ್ಟೆಂಬರ್ 1909, ನಿಮ್ಶಿರ್ಗಾಂವ್ (ಮಹಾರಾಷ್ಟ್ರ).ನಿಧನ: 23 ಡಿಸೆಂಬರ್ 1998 (ವಯಸ್ಸು 89). ಬಿರುದು: ದೇಶಭಕ್ತ. ರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಸಾಧನೆಗಳು ಮತ್ತು ಕೊಡುಗೆಗಳು ಸಂವಿಧಾನಕ್ಕೆ ಸಹಿ: ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಭಾರತದ ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕಿದ ಮಹನೀಯರಲ್ಲಿ ಇವರೂ ಒಬ್ಬರು. ಸ್ವಾತಂತ್ರ್ಯ ಹೋರಾಟ: 1942 ರ ಆಗಸ್ಟ್ 9 ರಂದು ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಹಕಾರಿ ರಂಗ: ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಹಕಾರಿ ರಂಗದ ನಕ್ಷತ್ರವಾಗಿ ಬೆಳಗಿದ ಇವರು, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು. ಪದ್ಮಶ್ರೀ ಪ್ರಶಸ್ತಿ: ಇವರ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1985 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಜಕೀಯ ಸೇವೆ: ಇವರು ಸಂಸತ್ ಸದಸ್ಯರಾಗಿ (MP) ಹಾಗೂ ಮಹಾರಾಷ್ಟ್ರ ಸರ್ಕಾರದ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯಹೋರಾಟ ಡಾ. ರತ್ನಪ್ಪಣ್ಣ ಕುಂಬಾರ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಅತ್ಯಂತ ಸಕ್ರಿಯ ಮತ್ತು ಪ್ರಭಾವಶಾಲಿ ಪಾತ್ರ ವಹಿಸಿದ್ದರು. ಅವರ ಪ್ರಮುಖ ಸ್ವಾತಂತ್ರ್ಯ ಹೋರಾಟದ ವಿವರಗಳು : 1. ಬ್ರಿಟಿಷ್ ಮತ್ತು ರಾಜಪ್ರಭುತ್ವದ ವಿರುದ್ಧ ಹೋರಾಟ 2. ಕೊಲ್ಹಾಪುರ ಪ್ರಜಾ ಪರಿಷತ್: ರತ್ನಪ್ಪಣ್ಣನವರು ಕೊಲ್ಹಾಪುರ ಸಂಸ್ಥಾನದಲ್ಲಿ ರಾಜಪ್ರಭುತ್ವ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ‘ಕೊಲ್ಹಾಪುರ ರಾಜ್ಯ ಪ್ರಜಾ ಪರಿಷತ್’ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 3. ಪ್ರಜಾಪ್ರಭುತ್ವಕ್ಕಾಗಿ ಆಗ್ರಹ: ಸಂಸ್ಥಾನದ ಜನರಿಗೆ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಸಿಗಬೇಕೆಂದು ಅವರು ನಿರಂತರ ಚಳವಳಿ ನಡೆಸಿದರು. 4. . ಕ್ವಿಟ್ ಇಂಡಿಯಾ ಚಳವಳಿ (1942)ಭೂಗತ ಹೋರಾಟ: 1942ರಲ್ಲಿ ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಘೋಷಿಸಿದಾಗ, ರತ್ನಪ್ಪಣ್ಣನವರು ಅದರಲ್ಲಿ ಸಕ್ರಿಯವಾಗಿ ಧುಮುಕಿದರು. ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಲು ಆದೇಶ ಹೊರಡಿಸಿದಾಗ, ಇವರು ಸುಮಾರು 6 ವರ್ಷಗಳ ಕಾಲ ಭೂಗತರಾಗಿ (Underground) ಹೋರಾಟ ಮುಂದುವರಿಸಿದರು. 5. ಸಶಸ್ತ್ರ ಮತ್ತು ಸೈದ್ಧಾಂತಿಕ ಪ್ರತಿರೋಧ: ಭೂಗತರಾಗಿದ್ದ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಕಣ್ಣು ತಪ್ಪಿಸಿ ಯುವಕರನ್ನು ಸಂಘಟಿಸುವುದು, ಕ್ರಾಂತಿಕಾರಿ ಪತ್ರಿಕೆಗಳನ್ನು ಹಂಚುವುದು ಮತ್ತು ಸರ್ಕಾರದ ಖಜಾನೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟಿಸುವುದರಲ್ಲಿ ಇವರು ಮುಂಚೂಣಿಯಲ್ಲಿದ್ದರು. ಇವರನ್ನು ಹಿಡಿದುಕೊಟ್ಟವರಿಗೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿತ್ತು. 6. ಸಂಸ್ಥಾನಗಳ ವಿಲೀನ ಮತ್ತು “ದಕ್ಷಿಣ ಭಾರತದ ಪಟೇಲ್” ಎಂದು ಜನರಿಂದ ಅಭಿಮಾನದಿಂದ ಕರೆಯಿಸಿ ಕೊಂಡರು. 7. ಭಾರತ ಒಕ್ಕೂಟಕ್ಕೆ ಸೇರ್ಪಡೆ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ (1947) ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ದಕ್ಷಿಣದ ಹಲವು ದೇಶಿ ಸಂಸ್ಥಾನಗಳು ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ನಿರಾಕರಿಸುತ್ತಿದ್ದವು. 8 ಕಠಿಣ ನಿರ್ಧಾರ: ರತ್ನಪ್ಪಣ್ಣನವರು ಈ ಸಂಸ್ಥಾನಗಳ ರಾಜರ ವಿರುದ್ಧ ಪ್ರಬಲ ಜನಪ್ರತಿಭಟನೆಗಳನ್ನು ಸಂಘಟಿಸಿ, ಅವರು ಭಾರತದೊಂದಿಗೆ ವಿಲೀನವಾಗುವಂತೆ ಒತ್ತಡ ಹೇರಿದರು. ಈ ಅದ್ಭುತ ಚಾಕಚಕ್ಯತೆ ಮತ್ತು ಸಾಹಸಕ್ಕಾಗಿ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿನ ಕೊಡುಗೆಗಳು ಸಂವಿಧಾನ ರಚನೆಯಲ್ಲಿನ ಪಾತ್ರದ ವಿವರಗಳು ಭಾರತದ ಸಂವಿಧಾನ ರಚನೆಯಲ್ಲಿ ಡಾ. ರತ್ನಪ್ಪಣ್ಣ ಕುಂಬಾರ ಅವರು ಅತ್ಯಂತ ಗೌರವಾನ್ವಿತ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದರು. ದೇಶಿ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸುವಲ್ಲಿ ಅವರು ತೋರಿದ ನಾಯಕತ್ವವನ್ನು ಗುರುತಿಸಿ, ಅವರನ್ನು ಸಂವಿಧಾನ ರಚನಾ ಸಭೆಯ (Constituent Assembly) ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂವಿಧಾನ ರಚನೆಯಲ್ಲಿ ಅವರ ಪ್ರಮುಖ ಕೊಡುಗೆಗಳು ಮತ್ತು ಪಾತ್ರದ ವಿವರಗಳು 1. ಸಂವಿಧಾನದ ಮೂಲ ಪ್ರತಿಯ ಸಹಿ ಒಕ್ಕೂಟದ ಸದಸ್ಯರುಭಾರತದ ಸಂವಿಧಾನದ ರಚನೆ ಪೂರ್ಣಗೊಂಡ ನಂತರ, 24 ಜನವರಿ 1950 ರಂದು ಸಂವಿಧಾನದ ಅಂತಿಮ ಕರಡು (Final Draft) ಮತ್ತು ಮೂಲ ಪ್ರತಿಯ ಮೇಲೆ ಸಹಿ ಹಾಕಿದ ಭಾರತದ ಪ್ರಮುಖ ನಾಯಕರಲ್ಲಿ ರತ್ನಪ್ಪಣ್ಣ ಕುಂಬಾರ ಅವರೂ ಒಬ್ಬರು. ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ದೇಶದ ಅತ್ಯುನ್ನತ ಕಾನೂನು ಗ್ರಂಥಕ್ಕೆ ಸಹಿ ಹಾಕಿದ ಹೆಮ್ಮೆ ಇವರದ್ದಾಗಿದೆ. ದೇಶಿ ಸಂಸ್ಥಾನಗಳ ಜನರ ಧ್ವನಿಯಾಗಿ ಪ್ರಾತಿನಿಧ್ಯಸಂಸ್ಥಾನಗಳ ಜನರ ಹಕ್ಕುಗಳು: ಸಂವಿಧಾನ ರಚನಾ ಸಭೆಯಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ ಪ್ರತಿನಿಧಿಗಳ ಜೊತೆಗೆ ದೇಶಿ ಸಂಸ್ಥಾನಗಳ (Princely States) ಪ್ರತಿನಿಧಿಗಳೂ ಇದ್ದರು. ರತ್ನಪ್ಪಣ್ಣನವರು ಕೊಲ್ಹಾಪುರ ಮತ್ತು ದಕ್ಷಿಣದ ಇತರ ಸಂಸ್ಥಾನಗಳ ಲಕ್ಷಾಂತರ ಸಾಮಾನ್ಯ ಜನರ ಧ್ವನಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣ: ರಾಜಪ್ರಭುತ್ವದ ಆಡಳಿತದಲ್ಲಿದ್ದ ಜನರಿಗೆ ಸಮಾನ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸೌಲಭ್ಯಗಳು ಸಿಗಬೇಕೆಂದು ಅವರು ಪ್ರತಿಪಾದಿಸಿದರು. .ಕರಡು ಪರಿಶೀಲನೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವಿಕೆ ಸಂವಿಧಾನ ರಚನಾ ಸಭೆಯ ವಿವಿಧ ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ ಇವರು, ಭಾರತದಂತಹ ವೈವಿಧ್ಯಮಯ ದೇಶಕ್ಕೆ ಬಲಿಷ್ಠ ಒಕ್ಕೂಟ ವ್ಯವಸ್ಥೆ (Federal Structure) ಎಷ್ಟು ಮುಖ್ಯ ಎಂಬುದರ ಕುರಿತು ತಮ್ಮ ನುಡಿಗಟ್ಟುಗಳನ್ನು ಹಂಚಿಕೊಂಡಿದ್ದರು. ಹಿಂದುಳಿದ ವರ್ಗಗಳು, ರೈತರು ಮತ್ತು ಶ್ರಮಿಕ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಸಂವಿಧಾನದಲ್ಲಿ ಸೂಕ್ತ ಅವಕಾಶಗಳಿರಬೇಕು ಎಂದು ಅವರು ಆಗ್ರಹಿಸಿದ್ದರು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಕೇವಲ ಸಂವಿಧಾನ ಬರೆಯುವುದಷ್ಟೇ ಅಲ್ಲದೆ, ಸ್ವಾತಂತ್ರ್ಯದ ನಂತರ ದೇಶದ ಮೊದಲ ಲೋಕಸಭೆಯ (1952-1957) ಸಂಸದರಾಗಿ (MP) ಆಯ್ಕೆಯಾಗಿ, ಸಂವಿಧಾನದ ಆಶಯಗಳನ್ನು ಕಾನೂನು ರೂಪದಲ್ಲಿ ಜಾರಿಗೆ ತರಲು ಶ್ರಮಿಸಿದರು. ರತ್ನಪ್ಪಣ್ಣ ಕುಂಬಾರ ಅವರು ಸಂವಿಧಾನ ಸಭೆಯ ನಂತರ ದೇಶದ ಮೊದಲ ಲೋಕಸಭೆ ಸದಸ್ಯರಾಗಿ (MP) ಮಾಡಿದ ಅನೇಕ ಕೆಲಸಗಳ ಲೆಕ್ಕ ಇಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಇಚಲಕರಂಜಿಯನ್ನು “ಮ್ಯಾಂಚೆಸ್ಟರ್ ಆಫ್ ಮಹಾರಾಷ್ಟ್ರ” ಆಗಿ ಬದಲಾಯಿಸಿದ ಅವರ ಸಹಕಾರಿ ಚಳವಳಿಯ ದೂರದೃಷ್ಟಿ ರತ್ನಪ್ಪಣ್ಣನವರು ಸಹಕಾರಿ ರಂಗದಲ್ಲಿ ಕ್ರಾಂತಿ ಉಂಟು ಮಾಡಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿಯ (ಗಂಗಾನಗರ) ಕಬ್ನೂರ್ನಲ್ಲಿ ಈ ಬೃಹತ್ ಕಾರ್ಖಾನೆಯನ್ನು 1954 ರಲ್ಲಿ ಸ್ಥಾಪಿಸಿದರು. ವಾಣಿಜ್ಯ ಕಾಲೇಜು ಸ್ಥಾಪನೆ. ಇಂತಹ ಅಪರೂಪದ ಅಪ್ಪಟ ಬಸವ ಭಕ್ತ ಸ್ವತಂತ್ರ ಸೇನಾನಿ ದೇಶಭಕ್ತ ಶ್ರೀ ರತ್ನಪ್ಪಣ್ಣ ಕುಂಬಾರ ಸಾವಿಲ್ಲದ ಶರಣರು ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಶಿಕ್ಷಣ ಪ್ರವರ್ತಕ ರಾವ್ ಬಹಾದ್ದೂರ್ ಗಿಲಗಂಚಿ ಗುರುಸಿದ್ದಪ್ಪನವರು ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಎಂಬ ಉತ್ತರ ಕರ್ನಾಟಕದ ಧ್ರುವತಾರೆ ಸಮಾಜಸೇವಕ ಅಪ್ರತಿಮ ಸಮಾಜ ಚಿಂತಕರು. ಇವರ ಸಂಕ್ಷಿಪ್ತ ಪರಿಚಯ ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಪ್ರಕಟ ಮಾಡುತ್ತಿದ್ದೇನೆ. (1841–1891) ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಪ್ರವರ್ತಕರು, ಲಿಂಗಾಯತ ಧರ್ಮದ ಸಂಘಟಿಕರು, ಸಮಾಜ ಸುಧಾರಕರು ಮತ್ತು ಬ್ರಿಟಿಷ್ ಆಡಳಿತಾವಧಿಯಲ್ಲಿ ಧಾರವಾಡದ ಡೆಪ್ಯೂಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಯಾಗಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯ ಮತ್ತು ಶೋಷಿತ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಇವರು ನೀಡಿದ ಕೊಡುಗೆ ಅನನ್ಯವಾದದ್ದು. ಜನನ ಮತ್ತು ಶಿಕ್ಷಣ ಗಿಲಗಂಚಿ ಗುರುಸಿದ್ದಪ್ಪನವರು 1841 ರಂದು ಧಾರವಾಡದ ಲಿಂಗಾಯತ ನೇಕಾರ( ಹಟಗಾರ ) ಕುಟುಂಬದಲ್ಲಿ ಜನಿಸಿದರು. ಬಾಲಕ ಗುರುಸಿದ್ದಪ್ಪನವರು ತುಂಬಾ ಚತುರ ಮತ್ತು ಬುದ್ಧಿವಂತನಾಗಿದ್ದನು. ಹೀಗಾಗಿ ಇವರ ತಂದೆ ವೀರಬಸಪ್ಪ ಇವರ ಶಿಕ್ಷಣಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು. ಅವರ ಪ್ರಮುಖ ಸಾಧನೆಗಳು ಮತ್ತು ಜೀವನದ ಮುಖ್ಯಾಂಶಗಳು : 1. ಶೈಕ್ಷಣಿಕ ಕ್ರಾಂತಿ ಮತ್ತು ಸಂಸ್ಥೆಗಳ ಸ್ಥಾಪನೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA): ಒಂದು ದಿನ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಆಪ್ತ ಮಿತ್ರರು ಇವರ ಜೊತೆಗೆ ಕೆಲಸ ನಿರ್ವಹಿಸುವ ಶ್ರೀ ಅರಟಾಳ ರುದ್ರಗೌಡರು ಮತ್ತು ಇತರ ಸ್ನೇಹಿತರೊಂದಿಗೆ ಒಂದು ದಿನ ಸಂಜೆ ಮೈಲಾರ ಗುಡ್ಡಕ್ಕೆ ವಾಕಿಂಗ್ ವಸ್ತು ವಿಹಾರಕ್ಕೆ ಹೋಗುವಾಗ ಬೇರೆ ಬೇರೆ ವಿಷಯ ಮಾತನಾಡುತ್ತಾ ಲಿಂಗಾಯತರು ಏಕೆ ಹಿಂದುಳಿದಿದ್ದಾರೆ ಎಂದು ಚರ್ಚಿಸ ತೊಡಗಿದರು. ಇದಕ್ಕೆ ಮುಖ್ಯ ಕಾರಣ ಬಡತನ ಶಿಕ್ಷಣ ಇಲ್ಲದಿರುವುದು. ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ ಇ ಎ ಲಿಂಗಾಯತ ಎಜ್ಯುಕೇಶನ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು 1883 ರಲ್ಲಿ 215500 ರೂಪಾಯಿ ಹಣವನ್ನು ಡಿಪಾಸಿಟ್ ಮಾಡಿ ಅದರ ಬಡ್ಡಿಯಲ್ಲಿ ಲಾಕ್ ಲಿಂಗಾಯತ ಶಿಷ್ಯ ವೇತನ ಸ್ಕಾಲರ್ಶಿಪ್ ಫಂಡ್ ಬರುವಂತೆ ಯೋಜನೆಯನ್ನು ಜಾರಿಗೆ ತಂದರು. ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ಅರಟಾಳ ರುದ್ರಗೌಡರು ಸೇರಿ 1883 ರಲ್ಲಿ ಧಾರವಾಡದಲ್ಲಿ Lingayat Education Association ಸಂಸ್ಥೆಯನ್ನು ಸ್ಥಾಪಿಸಿದರು. ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಇದು ಪ್ರಮುಖ ಆಧಾರವಾಯಿತು. ಉತ್ತರ ಕರ್ನಾಟಕದ ಡಾ ಫ ಗು ಹಳಕಟ್ಟಿ ಅವರನ್ನೂ ಸೇರಿ ಅನೇಕ ಮಹನೀಯರು ಈ ಸಂಸ್ಥೆಯಿಂದ ಶಿಷ್ಯ ವೇತನ ಪಡೆದು ಬೆಳೆದವರು. ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಲ್ಪಿ ಡಾ ಫ ಗು ಹಳಕಟ್ಟಿ ಇವರೂ ಸಹಿತ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಸ್ಥಾಪಿಸಿದ ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ತಮ್ಮ ಪದವಿ ಮತ್ತು ವಕೀಲಿ ಕೋರ್ಸ್ ಮಾಡಿದ್ದು. ಕೆ.ಎಲ್.ಇ ಸಂಸ್ಥೆಗೆ ಮುನ್ನುಡಿ: ಇವರು ಸ್ಥಾಪಿಸಿದ್ದ ‘ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ಅಂದಿನ ಪ್ರಮುಖ ಸಪ್ತರ್ಷಿಗಳು ಪ್ರೊ ಶಿ ಶಿ ಬಸವನಾಳ ಪ್ರೊ ಎಂ ಆರ್ ಸಾಖರೆ ಬಿ ಎಸ್ ಹಂಚಿನಾಳ ಏಚ್ ಎಫ ಕಟ್ಟಿಮನಿ ಬಿ ಬಿ ಮಮದಾಪೂರ ಪಂಡಿತಪ್ಪ ಚಿಕ್ಕೋಡಿ ಸರ್ದಾರ್ ವೀರನಗೌಡ ಪಾಟೀಲ (ಏಳು ಜನ ಶಿಕ್ಷಕರು) ಉನ್ನತ ಶಿಕ್ಷಣ ಪಡೆದಿದ್ದರು. ಇದೇ ಪ್ರೇರಣೆಯಿಂದ ಮುಂದೆ ಪ್ರಸಿದ್ಧ KLE ಶಿಕ್ಷಣ ಸಂಸ್ಥೆ 1916 ರಲ್ಲಿ ಉದಯಿಸಲು ಸಾಧ್ಯವಾಯಿತು. 2. ಸಾಮಾಜಿಕ ಸೇವೆ ಮತ್ತು ಸಂಘಟನೆ ಅಖಿಲ ಭಾರತ ವೀರಶೈವ ಮಹಾಸಭೆ: ಸಮಾಜದ ಸುಧಾರಣೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಉದ್ದೇಶದಿಂದ ಸ್ಥಾಪನೆಯಾದ ವೀರಶೈವ ಮಹಾಸಭೆಯ ಆರಂಭಿಕ ದಿನಗಳಲ್ಲಿ ಅರಟಾಳ ರುದ್ರಗೌಡರು, ಸರ್ದಾರ್ ಬುಳ್ಳಪ್ಪ ಮಾಮಲೆದೇಸಾಯಿ ಮುಂತಾದ ಧೀಮಂತರು ಸೇರಿ ಸಮಾಜ ಸಂಘಟನೆಗೆ ಇವರು ಸ್ಪೂರ್ತಿಯಾದರು. ದೂರದೃಷ್ಟಿಯ ನಾಯಕತ್ವ: ಲಿಂಗಾಯತ ಸಮಾಜ ಸುಶಿಕ್ಷಿತವಾಗಬೇಕೆಂಬ ಹಂಬಲದಿಂದ ತಮ್ಮ ಇಡೀ ಜೀವನ ಹಾಗೂ ಸಂಪತ್ತನ್ನು ಧಾರೆ ಎರೆದ ಇವರನ್ನು ಉತ್ತರ ಕರ್ನಾಟಕದ ಶೈಕ್ಷಣಿಕ ರಂಗದ ಪ್ರಾತಃಸ್ಮರಣೀಯರೆಂದು ಗೌರವಿಸಲಾಗುತ್ತದೆ. ಲಿಂಗಾಯತ ಸಮಾಜದಲ್ಲಿ ಮೊಟ್ಟ ಮೊದಲ ಡೆಪ್ಯುಟಿ ಕಮಿಷನರ್ ಆಗಿ ನೇಮಕ ಗೊಂಡ ಪ್ರಥಮರು ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಉದಾರತ್ವತನಕ್ಕೆ ಮಾದರಿ. 1884 ರಲ್ಲಿ ಪುಣೆಯಲ್ಲಿ ಓದುವ ನಾಲ್ಕು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ತಿಂಗಳಿಗೆ 80 ರೂಪಾಯಿಯಂತೆ ತಿಂಗಳಿಗೆ 320 ರೂಪಾಯಿಯನ್ನು ಐದು ತಿಂಗಳು ತಮ್ಮ ಸ್ವಂತ ಹಣ ಕೊಡುತ್ತಿದ್ದರು.ಕಾರಣ ಲಿಂಗಾಯತ ವೆಲ್ ಫೇರ್ ಫಂಡ್ ಬಡ್ಡಿ ಜಮಾ ಆಗಿರದ ಕಾರಣ ತಮ್ಮ ಹಣವನ್ನು ಕೊಟ್ಟು ವಿದ್ಯಾರ್ಥಿಗಳನ್ನು ಕಲಿಸಿದರು. ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು 1890 ರಲ್ಲಿ ಒಂದು ದಿನ ಮಧ್ಯಾನ್ಹ ಊಟ ಮಾಡಿ ಪ್ರಾಂಗಣದಲ್ಲಿ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಒಬ್ಬ ಬಡ ವಿದ್ಯಾರ್ಥಿ ಬಂದು ತನ್ನ ಕಾಲೇಜಿಗೆ ಫೀ ಕಟ್ಟಲು ಹಣ ಬೇಕೆಂದು ಕೇಳಿಕೊಂಡಾಗ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಎದ್ದು ಗೂಟಕ್ಕೆ ನೇತು ಹಾಕಿದ್ದ ತಮ್ಮ ಕೋಟ್ ನ ಕಿಸೆಯಲ್ಲಿ ಕೈಹಾಕಿದಾಗ ಅಲ್ಲಿ ಒಂದು ಅಣೆ ಪೈಸೆ ದೊರೆಯಲಿಲ್ಲ . ಕಣ್ಣೀರು ಕೆನ್ನೆಯ ಮೇಲೆ ಹರಿದವು. ಅಸಹಾಯಕನಾಗಿ ದುಡ್ಡಿಲ್ಲ ಕ್ಷಮಿಸು ಎಂದು ಹೇಳಿ ಕಳುಹಿಸಿದರು. ವಿದ್ಯಾರ್ಥಿ ಮನೆಯ ಕಾಂಪೌಂಡ್ ದಾಟುವ ಮುನ್ನ ತಮ್ಮ ಎದೆಯ ಮೇಲಿನ ಬಂಗಾರದ ಗುಂಡಗಡಗಿ ಕರಡಿಗೆ ತೆಗೆದು ಇಷ್ಟ ಲಿಂಗವನ್ನು ಕೈಯಲ್ಲಿ ಹಿಡಿದು ಬಿಳಿ ಬಟ್ಟೆಯಲ್ಲಿ ಕಟ್ಟಿ ಬಂಗಾರದ ಗುಂಡಗಡಗಿಯನ್ನು ಬಡ ವಿದ್ಯಾರ್ಥಿಗೆ ಕೊಟ್ಟು. ” ನೋಡು ಇದನ್ನು ಮಾರಿ ನಿನ್ನ ಇಡೀ ಶಿಕ್ಷಣವನ್ನು ಮುಗಿಸು ಎಂದು ಹರಸಿ ಕಳುಹಿಸಿದ ಮಹಾ ಮಾನವತಾವಾದಿ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಕೊನೆಯ ಸಂದೇಶ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಐವತ್ತನೆಯ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅವರನ್ನು ನೋಡಲು ಇವರ ಆಪ್ತ ಮಿತ್ರರು ಶ್ರೀ ಅರಟಾಳ ರುದ್ರಗೌಡರು ಭೇಟಿಗೆ ಬಂದರು ” ರಾವ್ ಸಾಹೇಬ್ ಶ್ರೀ ಗುರುಸಿದ್ದಪ್ಪನವರೇ ನಮಗೆ ಏನಾದರೂ ತಮ್ಮ ಸಂದೇಶ ಮಾರ್ಗದರ್ಶನ ನೀಡುತ್ತೀರಾ ಎಂದು ಕೇಳಿದಾಗ ಮುಗುಳು ನಕ್ಕು. ರುದ್ರಗೌಡರೆ ನಾವಿಬ್ಬರೂ ಆರಂಭಿಸಿದ ಲಿಂಗಾಯತ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA) ಎಲ್ಲಾ ಬಡ ಮಕ್ಕಳ ಶಿಕ್ಷಣಕ್ಕೆ ನಿರಂತರವಾಗಿ ಶಿಷ್ಯವೇತನ ನೀಡಿ. ಯಾರೂ ಶಿಕ್ಷಣ ವಂಚಿತರಾಗಬಾರದು. ಬಸವಾದಿ ಶರಣರ ಕಾಯಕ ದಾಸೋಹ ನಿಲ್ಲ ಬಾರದು ಎಂದು ಅವರಿಂದ ಪ್ರಮಾಣ ಮಾಡಿಸಿಕೊಂಡರು. 22ಜೂನ್ 1891 ರಂದು ಅವರು ಬಯಲಲ್ಲಿ ಬಯಲಾದರು. ಇಂತಹ ಅಪರೂಪದ ಮಹಾಶರಣ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ನಾಗರಿಕ ಸಮಾಜಕ್ಕೆ ಲಿಂಗಾಯತ ಸಮಾಜದವರಿಗೆ ನಿತ್ಯ ಸ್ಮರಣೀಯರು ಸಾವಿಲ್ಲದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ವಿಶ್ವ ಮಾನವ ಕವಿ ಪಂಪ ಪಂಪ (ಕ್ರಿ.ಶ. (902-955 CE) ಕನ್ನಡದ ಆದಿ ಮಹಾಕವಿ ಎಂದು ಪ್ರಸಿದ್ಧನಾದವನು. ಕನ್ನಡ ಸಾಹಿತ್ಯ ಸಾರಸ್ವತ ಲೋಕದ ಮಹಾಮಾನವತಾವಾದಿ ಶ್ರೇಷ್ಠ ಜೀವ ಪರ ಕವಿ ಪಂಪ. ಕನ್ನಡ ಸಾಹಿತ್ಯ ಲೋಕದಲ್ಲಿ ಪಂಪನ ಯುಗವೆಂದೇ ಗುರುತಿಸಲ್ಪಟ್ಟ ಅಪರೂಪದ ಪ್ರಬುದ್ಧ ಪ್ರಾಮಾಣಿಕ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಕವಿ ಶ್ರೀಮಂತ. ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. “ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಇವೆರಡೂ, ಪಂಪನ ಎರಡು ಮೇರು ಕೃತಿಗಳು. ಹಿನ್ನೆಲೆ ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ ೯೫೫ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪನ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು. ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ ನಿಡುಗುಂದಿ ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು ಬನವಾಸಿ, ಅಂದರೆ ಕರ್ನಾಟಕದ ಉತ್ತರ ಕನ್ನಡ/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. ಪಂಪನ ತಂದೆ ಭೀಮಪ್ಪಯ್ಯ ಯಜ್ಞಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ಜೀವನ ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಪಂಪನು ಪುಲಿಗೆರೆಯ ‘ತಿರುಳ್ ಗನ್ನಡ’ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. ಪಂಪನ ಇನ್ನೊಂದು ಕೃತಿ ‘ವಿಕ್ರಮಾರ್ಜುನ ವಿಜಯ’ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. ಪಂಪನನ್ನು “ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ” ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. ‘ಹಿತಮಿತ ಮೃದುವಚನ’ ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. ವಿಶೇಷವಾಗಿ ಕುವೆಂಪು ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ಕೃತಿಗಳು ಆದಿಪುರಾಣ ವಿಕ್ರಮಾರ್ಜುನ ವಿಜಯ ಪಂಪ ಭಾರತ ಅರಿಕೇಸರಿಯ ಆಸ್ಥಾನ ಬನವಾಸಿ ವರ್ಣನೆಯ ಪದ್ಯ ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ- ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ- ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ (ಚಂಪಕಮಾಲೆ) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ- ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-| ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| (ಉತ್ಪಲಮಾಲೆ) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ- ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-| ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ- ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| (ಉತ್ಪಲಮಾಲೆ) ಗದ್ಯಭಾಗ – ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ. ಪಂಪ ಭಾರತದಲ್ಲಿ ಕರ್ಣನಿಗೆ ನಾಯಕತ್ವವನ್ನು ಪಟ್ಟವನ್ನು ಕಟ್ಟುವ ಪಂಪ ಮಹಾಭಾರತದಲ್ಲಿ ನೆನೆದೊಡೆ ನೆನೆ ಕರ್ಣಂ ನೆನೆ ಎಂದಿದ್ದಾನೆ. ಆಕರಗಳು “ಆರ್ಕೈವ್ ನಕಲು”. Archived from the original on 2022-10-09. Retrieved 2020-03-26. ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭ ಈ-ಭೋಗದ-ಜಗತ್ತೇ-ಬೇರೆ-ಆದಿಪುರ/ ಪಂಪಭಾರತ : ಗದ್ಯಾನುವಾದ – ಚತುರ್ದಶಾಶ್ವಾಸಂ ಪದ್ಯ ೪೩-೫೨ ______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಅಂಕಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಹಾಮಾನವತಾವಾದಿ ಶರಣೆ ಮದರ್ ಥೆರೇಸಾ ಬಡವರ ನಿರ್ಗತಿಕರ ರೋಗಿಗಳ ಪಾಲಿನ ದೇವತೆ ಮಾನವತಾವಾದಿ ಮದರ್ ಥೆರೇಸಾ ಅವರ ಜೀವನವೇ ಒಂದು ದಿವ್ಯಾವದರ್ಶನ. ಮದರ್ ಥೆರೇಸಾ ಅವರು ಜಗತ್ತಿನಾದ್ಯಂತ ದಯೆ, ಕರುಣೆ ಮತ್ತು ನಿಸ್ವಾರ್ಥ ಸೇವೆಗೆ ಹೆಸರಾದ ಒಬ್ಬ ಮಹಾನ್ ಮಾನವತಾವಾದಿ. ಅವರು ತಮ್ಮ ಇಡೀ ಜೀವನವನ್ನು ಅನಾಥರು, ರೋಗಿಗಳು ಮತ್ತು ಸಮಾಜದಿಂದ ನಿರ್ಲಕ್ಷಿಸಲ್ಪಟ್ಟ ಬಡವರ ಸೇವೆಗಾಗಿ ಮುಡಿಪಾಗಿಟ್ಟರು. ೧. ಆರಂಭಿಕ ಜೀವನ ಮತ್ತು ಬಾಲ್ಯ ನಿಜವಾದ ಹೆಸರು: ಆಗ್ನೆಸ್ ಗೊಂಕ್ಷಾ ಬೊಜಾಕ್ಸಿಯು.ಜನನ: ಆಗಸ್ಟ್ ೨೬, ೧೯೧೦ ರಂದು ಉತ್ತರ ಮ್ಯಾಸಿಡೋನಿಯಾದ ಸ್ಕೋಪ್ಜೆಯಲ್ಲಿ ಜನಿಸಿದರು. ಅಲ್ಬೇನಿಯಾ ಕುಟುಂಬ: ಇವರ ಪೋಷಕರು ನಿಕೊಲಾ ಮತ್ತು ಡ್ರಾನಾಫಿಲ್ ಬೊಜಾಕ್ಸಿಯು ಅಲ್ಬೇನಿಯಾ. ಇವರ ಕುಟುಂಬವು ಬಡವರ ಬಗ್ಗೆ ಅಪಾರ ದಯೆ ಹೊಂದಿತ್ತು. ಧಾರ್ಮಿಕ ಕರೆ: ಆಗ್ನೆಸ್ ಅವರಿಗೆ ಕೇವಲ ೧೨ನೇ ವಯಸ್ಸಿನಲ್ಲಿಯೇ ಧಾರ್ಮಿಕ ಜೀವನವನ್ನು ನಡೆಸುವ ಮತ್ತು ಬಡವರ ಸೇವೆ ಮಾಡುವ ಬಯಕೆ ಮೂಡಿತ. ೨. ಭಾರತಕ್ಕೆ ಆಗಮನ ಮತ್ತು ಶಿಕ್ಷಕಿಯಾಗಿ ಸೇವೆ ೧೮ನೇ ವಯಸ್ಸಿನಲ್ಲಿ ಅವರು ‘ಸಿಸ್ಟರ್ಸ್ ಆಫ್ ಲೊರೆಟೊ’ ಸಂಸ್ಥೆಯನ್ನು ಸೇರಿದರು.೧೯೨೯ರಲ್ಲಿ ಭಾರತಕ್ಕೆ ಬಂದ ಅವರು, ಕೋಲ್ಕೊತ್ತಾದ (ಕಲ್ಕತ್ತಾ) ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಭೂಗೋಳಶಾಸ್ತ್ರ ಶಿಕ್ಷಕಿಯಾಗಿ ಸೇವೆ ಆರಂಭಿಸಿದರು. ನಂತರ ಅಲ್ಲಿಯೇ ಮುಖ್ಯೋಪಾಧ್ಯಾಯಿನಿಯಾಗಿಯೂ ಕಾರ್ಯನಿರ್ವಹಿಸಿದರು ೩. ಮಿಷನರೀಸ್ ಆಫ್ ಚಾರಿಟಿ ಸ್ಥಾಪನೆ ೧೯೪೬ರಲ್ಲಿ ಕೋಲ್ಕೊತ್ತಾದ ಕೊಳೆಗೇರಿಗಳಲ್ಲಿದ್ದ ಬಡವರ ಕಷ್ಟಗಳನ್ನು ಕಂಡು, ಅವರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಡಲು ತೀರ್ಮಾನಿಸಿದರು. ೧೯೫೦ರಲ್ಲಿ ವ್ಯಾಟಿಕನ್ನ ಅನುಮತಿಯೊಂದಿಗೆ “ಮಿಷನರೀಸ್ ಆಫ್ ಚಾರಿಟಿ” ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು.ಈ ಸಂಸ್ಥೆಯ ಸನ್ಯಾಸಿನಿಯರು ನೀಲಿ ಅಂಚಿನ ಸರಳ ಬಿಳಿ ಸೀರೆಯನ್ನು ತಮ್ಮ ಸಮವಸ್ತ್ರವಾಗಿ ಧರಿಸತೊಡಗಿದರು. ೧೯೫೨ರಲ್ಲಿ ಸಾಯುವ ಸ್ಥಿತಿಯಲ್ಲಿದ್ದವರಿಗಾಗಿ ‘ನಿರ್ಮಲ್ ಹೃದಯ’ ಎಂಬ ಧರ್ಮಶಾಲೆಯನ್ನು ಆರಂಭಿಸಿದರು. ಇಲ್ಲಿ ನಿರಾಶ್ರಿತರು ಘನತೆಯಿಂದ ಕೊನೆಯುಸಿರೆಳೆಯಲು ಆಸರೆಯಾಗುತ್ತಿದ್ದರು. ೪. ಪ್ರಶಸ್ತಿ ಮತ್ತು ಗೌರವಗಳು ಅವರ ನಿಸ್ವಾರ್ಥ ಮಾನವೀಯ ಸೇವೆಯನ್ನು ಗುರುತಿಸಿ ಜಗತ್ತಿನಾದ್ಯಂತ ನೂರಾರು ಪ್ರಶಸ್ತಿಗಳನ್ನು ನೀಡಲಾಯಿತು: ನೊಬೆಲ್ ಶಾಂತಿ ಪ್ರಶಸ್ತಿ (೧೯೭೯). ಭಾರತ ರತ್ನ ಪ್ರಶಸ್ತಿ (೧೯೮೦) – ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ರೇಮನ್ ಮ್ಯಾಗ್ಸೇಸೆ ಪ್ರಶಸ್ತಿ (೧೯೬೨) ೫. ಕೊನೆಯ ದಿನಗಳು ಮತ್ತು ಸಂತ ಪದವಿ ನಿರಂತರ ಕಠಿಣ ಶ್ರಮ ಮತ್ತು ವಯೋಸಹಜ ಕಾಯಿಲೆಗಳಿಂದಾಗಿ ಮದರ್ ಥೆರೇಸಾ ಅವರು ಸೆಪ್ಟೆಂಬರ್ ೫, ೧೯೯೭ ರಂದು ಕೋಲ್ಕೊತ್ತಾದಲ್ಲಿ ನಿಧನರಾದರು.ಭಾರತ ಸರ್ಕಾರವು ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿತು. ಸೆಪ್ಟೆಂಬರ್ ೪, ೨೦೧೬ ರಂದು ವ್ಯಾಟಿಕನ್ನ ಪೋಪ್ ಫ್ರಾನ್ಸಿಸ್ ಅವರು ಮದರ್ ಥೆರೇಸಾ ಅವರಿಗೆ ‘ಸಂತ’ (Saint Teresa of Calcutta) ಪದವಿಯನ್ನು ನೀಡಿ ಗೌರವಿಸಿದರು. ಮದರ್ ಥೆರೇಸಾ ಅವರ ನಿಸ್ವಾರ್ಥ ಸೇವೆ, ಕರುಣೆ ಮತ್ತು ಮಾನವೀಯತೆಯನ್ನು ಭಾರತದ ರಾಷ್ಟ್ರೀಯ ನಾಯಕರು, ಕವಿಗಳು ಮತ್ತು ವಿಮರ್ಶಕರು ವಿಭಿನ್ನ ಹಾಗೂ ಗೌರವಾನ್ವಿತ ದೃಷ್ಟಿಕೋನಗಳಿಂದ ಕಂಡಿದ್ದಾರೆ. ಅವರ ಬಗ್ಗೆ ಪ್ರಮುಖರ ಅಭಿಪ್ರಾಯಗಳು ನೋಡೋಣ: 1. ರಾಷ್ಟ್ರೀಯ ನಾಯಕರ ಅಭಿಪ್ರಾಯ ಭಾರತದ ರಾಜಕೀಯ ನಾಯಕರು ಮದರ್ ಥೆರೇಸಾ ಅವರನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಮತ್ತು ಕರುಣೆಯ ಸಾಕಾರ ರೂಪವಾಗಿ ನೋಡಿದ್ದಾರೆ. ಮಹಾತ್ಮ ಗಾಂಧಿ ಮತ್ತು ಅವರ ತತ್ವಗಳ ಹೋಲಿಕೆ: ಅನೇಕ ನಾಯಕರು ಮದರ್ ಥೆರೇಸಾ ಅವರ ಸೇವೆಯನ್ನು ಗಾಂಧೀಜಿಯವರ “ದರಿದ್ರ ನಾರಾಯಣ” (ಬಡವರಲ್ಲಿ ದೇವರನ್ನು ಕಾಣುವುದು) ತತ್ವಕ್ಕೆ ಹೋಲಿಸಿದ್ದಾರೆ. ಇಂದಿರಾ ಗಾಂಧಿ: “ಮದರ್ ಥೆರೇಸಾ ಅವರನ್ನು ಭೇಟಿಯಾಗುವುದೆಂದರೆ ನಂಬಿಕೆ, ಕರುಣೆ ಮತ್ತು ದೈವಿಕ ಶಕ್ತಿಯನ್ನು ಹತ್ತಿರದಿಂದ ಅನುಭವಿಸಿದಂತೆ. ಅವರು ಮಾತನಾಡುವುದು ಕಡಿಮೆ, ಮಾಡುವುದು ಹೆಚ್ಚು” ಎಂದು ಹೇಳಿದ್ದರು. ಡಾ. ಎಸ್. ರಾಧಾಕೃಷ್ಣನ್: “ಅವರು ಜಗತ್ತಿನ ಅತ್ಯಂತ ದೀನ ದಲಿತರಲ್ಲಿ ದೇವರನ್ನು ಕಂಡರು. ಅವರ ಸೇವೆ ಯಾವುದೇ ಧರ್ಮ ಅಥವಾ ದೇಶಕ್ಕೆ ಸೀಮಿತವಾಗಿರಲಿಲ್ಲ, ಅದು ಜಾಗತಿಕವಾಗಿತ್ತು” ಎಂದು ಶ್ಲಾಘಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ: ಮದರ್ ಥೆರೇಸಾ ನಿಧನರಾದಾಗ, “ಭಾರತವು ತನ್ನ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡಿದೆ. ಅವರು ಕತ್ತಲೆಯಲ್ಲಿದ್ದ ಕೋಟಿಗಟ್ಟಲೆ ಜನರ ಜೀವನದಲ್ಲಿ ಬೆಳಕಾಗಿದ್ದರು” ಎಂದು ಕಂಬನಿ ಮಿಡಿದಿದ್ದರು. 2. ಕವಿಗಳ ದೃಷ್ಟಿಕೋನ ಕವಿಗಳು ಮದರ್ ಥೆರೇಸಾ ಅವರನ್ನು ಶಾಂತಿ, ಪ್ರೀತಿ ಮತ್ತು ದೈವಿಕ ಕೃಪೆಯ ಸಂಕೇತವಾಗಿ ತಮ್ಮ ಕಾವ್ಯಗಳಲ್ಲಿ ಚಿತ್ರಿಸಿದ್ದಾರೆ.ನಡೆದಾಡುವ ದೇವತೆ: ಕವಿಗಳು ಅವರನ್ನು ಕಲ್ಕತ್ತಾದ ಬೀದಿಗಳಲ್ಲಿ ನಡೆದಾಡಿದ “ಕರುಣೆಯ ದೇವತೆ” ಎಂದು ವರ್ಣಿಸಿದ್ದಾರೆ. ಅಹಿಂಸೆ ಮತ್ತು ಪ್ರೀತಿಯ ಭಾಷೆ: ಕಾವ್ಯಗಳಲ್ಲಿ ಅವರ ಬಿಳಿ ಮತ್ತು ನೀಲಿ ಅಂಚಿನ ಸೀರೆಯನ್ನು ಶಾಂತಿಯ ಧ್ವಜಕ್ಕೆ ಹೋಲಿಸಲಾಗಿದೆ. ಭಾಷೆ ತಿಳಿಯದ ದೇಶಕ್ಕೆ ಬಂದು ಕೇವಲ ‘ಪ್ರೀತಿಯ ಭಾಷೆ’ಯ ಮೂಲಕವೇ ಎಲ್ಲರ ಹೃದಯ ಗೆದ್ದರೆಂದು ಕವಿಗಳು ಕೊಂಡಾಡಿದ್ದಾರೆ. ತ್ಯಾಗದ ಮೂರ್ತಿ: ಸ್ವಂತ ಸಂಸಾರ, ದೇಶವನ್ನು ತೊರೆದು ಪರರ ಕಣ್ಣೀರು ಒರೆಸುವುದನ್ನೇ ಧರ್ಮವಾಗಿಸಿಕೊಂಡ ಅವರ ತ್ಯಾಗವನ್ನು ಕವಿಗಳು ದೈವಿಕ ಮಟ್ಟಕ್ಕೆ ಏರಿಸಿದ್ದಾರೆ. 3. ವಿಮರ್ಶಕರು ಕಂಡಂತೆ ವಿಮರ್ಶಕರು ಮದರ್ ಥೆರೇಸಾ ಅವರ ಕಾರ್ಯವನ್ನು ಸಾಮಾಜಿಕ ಮತ್ತು ತಾತ್ವಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ. ಸಾಂಸ್ಥಿಕ ಸಮಾಜ ಸೇವೆ: ವಿಮರ್ಶಕರ ಪ್ರಕಾರ, ಮದರ್ ಥೆರೇಸಾ ಕೇವಲ ವೈಯಕ್ತಿಕವಾಗಿ ಸೇವೆ ಮಾಡಲಿಲ್ಲ. ಬದಲಿಗೆ ‘ಮಿಷನರೀಸ್ ಆಫ್ ಚಾರಿಟಿ’ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ವ್ಯವಸ್ಥಿತವಾದ ಸೇವಾ ಜಾಲವನ್ನು ನಿರ್ಮಿಸಿದರು. ಇದು ಆಧುನಿಕ ಜಗತ್ತಿಗೆ ಮಾದರಿ.ಮಾನವೀಯತೆಯೇ ಧರ್ಮ: ಕೆಲವರು ಅವರ ಧಾರ್ಮಿಕ ಹಿನ್ನೆಲೆಯನ್ನು ಚರ್ಚಿಸಿದರೂ, ಬಹುತೇಕ ವಿಮರ್ಶಕರು “ಅವರ ಸೇವೆ ಜಾತೀಯತೆ ಮತ್ತು ಧರ್ಮದ ಗಡಿಗಳನ್ನು ಮೀರಿದ್ದು. ರೋಗಿಗಳನ್ನು ಮುಟ್ಟಲು ಹಿಂಜರಿಯುತ್ತಿದ್ದ ಕಾಲದಲ್ಲಿ, ಅವರು ಕುಷ್ಠರೋಗಿಗಳನ್ನು ತಬ್ಬಿ ಆರೈಕೆ ಮಾಡಿದ್ದು ಕ್ರಾಂತಿಕಾರಿ ಹೆಜ್ಜೆ” ಎಂದು ಒಪ್ಪಿಕೊಂಡಿದ್ದಾರೆ. ನೊಬೆಲ್ ಪ್ರಶಸ್ತಿಯ ಸಾರ್ಥಕತೆ: ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಾಗ, “ಈ ಪ್ರಶಸ್ತಿಯಿಂದ ಮದರ್ ಥೆರೇಸಾ ಅವರಿಗೆ ಗೌರವ ಬರಲಿಲ್ಲ, ಬದಲಿಗೆ ಅವರಿಗೆ ನೀಡಿದ್ದರಿಂದ ನೊಬೆಲ್ ಪ್ರಶಸ್ತಿಗೇ ಒಂದು ಸಾರ್ಥಕತೆ ಸಿಕ್ಕಿತು” ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಮದರ ಥೆರೇಸಾ ಎಂಬ ಮಹಾಮಾನವತೆಯ ದೇವತೆ ಹುಟ್ಟಿದ ಅಲ್ಬೇನಿಯಾ ರಾಷ್ಟ್ರ ಮತ್ತು ಕರ್ಮ ಭೂಮಿ ಭಾರತದ ನೆಲದ ಋಣ ತೀರಿಸಿದ ಸಂತೆ ಶರಣೆ. ಮನುಕುಲವು ನೆನಪಿಡುವ ಮಹಾ ಮಾನವತಾವಾದಿ ಸಾವಿಲ್ಲದ ಶರಣೆ _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಅಪ್ಪಟ ರಾಷ್ಟ್ರ ಪ್ರೇಮಿ ಜೈ ಹಿಂದ್ ಘೋಷಣೆ ಜನಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ರಾಜ್ಯಗಳ ಧರ್ಮೀಯರ ಕೊಡುಗೆ ಅಪಾರವಾಗಿದೆ. ಮಹಾತ್ಮಾ ಗಾಂಧಿ ನೆಹರು ವಲ್ಲಭಭಾಯಿ ಪಟೇಲ್ ಸುಭಾಷ್ ಚಂದ್ರ ಬೋಸ್ ಹೀಗೆ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ಸಂಗ್ರಾಮ ಹೋರಾಟ ನಡೆದಿವೆ. ಇಂತಹ ಒಂದು ಅಪರೂಪದ ಹೋರಾಟವೇ ಭಾರತೀಯ ರಾಷ್ಟ್ರೀಯ ಸೇನೆಯ (INA) ಇದನ್ನು ಸ್ಥಾಪಿಸಿದವರು. ಸುಭಾಷ್ ಚಂದ್ರ ಬೋಸ್. ಇವರ ಕರೆಗೆ ಓಗೊಟ್ಟು ಸಾವಿರಾರು ಯುವಕರು ಭಾರತೀಯ ಸೇನೆಯನ್ನು ಸೇರಿದರು. ಹಿಂದೂ ಮುಸ್ಲಿಂ ಸಿಖ್ ಇಸಾಯಿ ಮುಂತಾದ ಬೇರೆ ಬೇರೆ ಧರ್ಮದವರ ನಂಬಿಕೆಯುಳ್ಳ ಯುವಕರ ಪಡೆ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು . ಅವರೆಲ್ಲರ ಆಚರಣೆ ವಿಚಾರ ಭಿನ್ನ ಭಿನ್ನವಾಗಿ ಕಂಡು ಬಂದವು. ಕೆಲವರು ಬೆಳಿಗ್ಗೆ ಎದ್ದು ಕೂಡಲೇ ರಾಮ್ ರಾಮ್ ಎನ್ನುತ್ತಿದ್ದರು ಇನ್ನೂ ಕೆಲವರು ವಾಲೀಕುಂ ಸಲಾಂ ಎನ್ನುತ್ತಿದ್ದರು. ಸಿಖ್ ಜನಾಂಗ ಅಕಾಲಿ ಎನ್ನುತ್ತಿದ್ದರು ಹೀಗೆ ಒಂದೇ ಭಾರತೀಯ ಸೇನಾ ಸಂಸ್ಕೃತಿಯಲ್ಲಿ ಭಿನ್ನ ಭಿನ್ನವಾಗಿ ಸೈನಿಕರು ಘೋಷಣೆ ಅಥವಾ ತಮ್ಮ ತಮ್ಮ ಬೆಳಗಿನ ನಮಸ್ಕಾರಗಳನ್ನು ಹೇಳುತ್ತಿದ್ದರು. ಇದನ್ನು ಏಕ ರೂಪದಲ್ಲಿ ಅಳವಡಿಸಲು ಸುಭಾಷ್ ಚಂದ್ರ ಬೋಸರು ಚಿಂತಿಸ ಹತ್ತಿದರು ಆಗ ಇವರ ನೆರವಿಗೆ ಬಂದವರೇ ಅಬಿದ್ ಹಸನ್ ಸಫ್ರಾನೀ ಎಂಬ. ಮುಸ್ಲಿಂ ಯುವಕ. ಹಲವು ದಿನಗಳ ವರೆಗೆ. ಯೋಚನೆ ಮಾಡಿ ಜೈ ಹಿಂದುಸ್ತಾನಿ ಎಂದು ಆರಂಭದಲ್ಲಿ ಘೋಷಣೆ ಕೂಗಿದರೂ ಸಹಿತ ಮುಂದೆ ಅದನ್ನು ಜೈ ಹಿಂದ್ ಎಂಬ ಘೋಷಣೆಗೆ ಮಾರ್ಪಾಡಿಸಿದವರು ಅಬಿದ ಹಸನ್ ಸಫ್ರಾನಿ . ಅಬಿದ್ ಹಸನ್ ಸಫ್ರಾನಿ (Zain-al-Abdin Hasan) ಅವರು ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಕಟ ಒಡನಾಡಿ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯ (INA) ಪ್ರಮುಖ ಅಧಿಕಾರಿಯಾಗಿದ್ದರು. ಇಡೀ ದೇಶವನ್ನು ಒಗ್ಗೂಡಿಸಿದ ‘ಜೈ ಹಿಂದ್’ (Jai Hind) ಎಂಬ ಪ್ರಸಿದ್ಧ ಘೋಷಣೆಯನ್ನು ಸೃಷ್ಟಿಸಿದ ರೂವಾರಿ ಇವರೇ ಆಗಿದ್ದಾರೆ. ಆರಂಭಿಕ ಜೀವನ ಮತ್ತು ಶಿಕ್ಷಣ ಜನನ: ಇವರು 11 ಏಪ್ರಿಲ್ 1911 ರಂದು ಹೈದರಾಬಾದ್ನ ಶ್ರೀಮಂತ ಮತ್ತು ಬ್ರಿಟಿಷ್ ವಿರೋಧಿ ನಿಲುವು ಹೊಂದಿದ್ದ ಕುಟುಂಬದಲ್ಲಿ ಜನಿಸಿದರು. ಮೂಲ ಹೆಸರು: ಇವರ ನಿಜವಾದ ಹೆಸರು ‘ಝೈನ್-ಅಲ್-ಅಬ್ದಿನ್ ಹಸನ್’.ಶಿಕ್ಷಣ: ಇವರ ತಾಯಿ ಬ್ರಿಟಿಷರ ಮೇಲಿನ ವಿರೋಧದಿಂದಾಗಿ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ಕಳುಹಿಸದೆ ಜರ್ಮನಿಗೆ ಕಳುಹಿಸಿದರು. ಅಲ್ಲಿ ಅಬಿದ್ ಅವರು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ನೇತಾಜಿ ಒಡನಾಟ ಮತ್ತು ಐಎನ್ಎ (INA) ಪಾತ್ರಪ್ರೇರಣೆ: ಜರ್ಮನಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾಷಣದಿಂದ ಪ್ರೇರಿತರಾಗಿ, ತಮ್ಮ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಸಬ್ಮರೀನ್ ಪ್ರಯಾಣ: ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಅವರೊಂದಿಗೆ ಜರ್ಮನಿಯಿಂದ ಜಪಾನ್ಗೆ ಅತ್ಯಂತ ಅಪಾಯಕಾರಿ 90 ದಿನಗಳ ಸಬ್ಮರೀನ್ (ಜಲಾವೃತ ನೌಕೆ) ಪ್ರಯಾಣ ಕೈಗೊಂಡ ಏಕೈಕ ಭಾರತೀಯ ಇವರಾಗಿದ್ದಾರೆ.’ಸಫ್ರಾನಿ’ ಹೆಸರಿನ ಹಿನ್ನೆಲೆ: ಐಎನ್ಎ ಧ್ವಜ ವಿನ್ಯಾಸದ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಸೈನಿಕರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಕೋಮು ಸೌಹಾರ್ದತೆಯನ್ನು ಸಾರಲು, ಹಿಂದೂಗಳ ಪವಿತ್ರ ಬಣ್ಣವಾದ ಕೇಸರಿಯನ್ನು (Saffron) ಸೂಚಿಸಿ, ತಮ್ಮ ಹೆಸರಿನೊಂದಿಗೆ ‘ಸಫ್ರಾನಿ’ ಎಂದು ಸೇರಿಸಿಕೊಂಡರು. ‘ಜೈ ಹಿಂದ್’ ಘೋಷಣೆಯ ಜನ್ಮ ಭಾರತೀಯ ಸೈನಿಕರನ್ನು ಧರ್ಮ ಮತ್ತು ಪ್ರಾಂತ್ಯಗಳ ಭೇದವಿಲ್ಲದೆ ಒಂದೇ ಗೌರವ ವಂದನೆಯಲ್ಲಿ ಸ್ವಾಗತಿಸಲು ನೇತಾಜಿ ಬಯಸಿದ್ದರು.ಆಗ ಅಬಿದ್ ಹಸನ್ ಅವರು “ಜೈ ಹಿಂದೂಸ್ತಾನ್ ಕಿ” ಎಂಬ ನುಡಿಗಟ್ಟನ್ನು ಸುಧಾರಿಸಿ “ಜೈ ಹಿಂದ್” (ಭಾರತಕ್ಕೆ ಜಯವಾಗಲಿ) ಎಂಬ ಸಂಕ್ಷಿಪ್ತ, ಶಕ್ತಿಯುತ ಘೋಷಣೆಯನ್ನು ಸೃಷ್ಟಿಸಿದರು. ನೇತಾಜಿ ಇದನ್ನು ತಕ್ಷಣವೇ ಒಪ್ಪಿಕೊಂಡು ಐಎನ್ಎಯ ಅಧಿಕೃತ ವಂದನೆಯನ್ನಾಗಿ ಮಾಡಿದರು. ರಾಜತಾಂತ್ರಿಕ ವೃತ್ತಿಜೀವನ (Diplomat)ಸ್ವಾತಂತ್ರ್ಯದ ನಂತರ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೋರಿಕೆಯ ಮೇರೆಗೆ ಇವರು ಭಾರತೀಯ ವಿದೇಶಾಂಗ ಸೇವೆಗೆ (IFS) ಸೇರಿದರು.ಈಜಿಪ್ಟ್, ಡೆನ್ಮಾರ್ಕ್, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ (Ambassador) ಅತ್ಯುತ್ತಮ ಸೇವೆ ಸಲ್ಲಿಸಿ 1969 ರಲ್ಲಿ ನಿವೃತ್ತರಾದರು. Nidhana ಈ ಮಹಾನ್ ದೇಶಭಕ್ತರು 9 ಮೇ 1984 ರಂದು ತಮ್ಮ ಸ್ವಂತ ನಗರವಾದ ಹೈದರಾಬಾದ್ನಲ್ಲಿ ನಿಧನರಾದರು. ಇತ್ತೀಚೆಗೆ ಅವರ ಸಾಹಸಮಯ ಜೀವನದ ಕುರಿತು Abid Hasan Safrani Netaji’s Comrade-in-Arms ಎಂಬ ಪುಸ್ತಕವನ್ನು ಅವರ ಕುಟುಂಬದವರು ಪ್ರಕಟಿಸಿದ್ದಾರೆ. ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಭಾರತೀಯ ಸೇನಾ ಪಡೆ ಸೇನಾನಿ ಇತಿಹಾಸಗಳ ಪುಟದಲ್ಲೂ ಸೇರ್ಪಡೆಗೊಂಡಿಲ್ಲ. __________________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸಿಂಹ ನರಗುಂದ ಶ್ರೀ ಬಾಬಾಸಾಹೇಬ ಸಂಸ್ಥಾನ ಸಿಂಹ ಕ್ರಾಂತಿಕಾರಿ ಹೋರಾಟಗಾರ ಶ್ರೀ ಬಾಬಾಸಾಹೇಬ ಭಾವೆ ನರಗುಂದ ಸಂಸ್ಥಾನದ ಪ್ರಭು (1842-58) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ಅಪ್ರತಿಮ ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ. ನರಗುಂದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಅಪ್ರತಿಮ ವೀರ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ. ಇವರು ಬ್ರಿಟಿಷರ “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ತೀವ್ರವಾಗಿ ವಿರೋಧಿಸಿ, ದೇಶಪ್ರೇಮದ ಕಹಳೆ ಮೊಳಗಿಸಿದರು ಅಧಿಕಾರಕ್ಕೆ ಇವರ ತಂದೆ ದಾದಾಜಿ ತಾಯಿ ಯಮುನಾಬಾಯಿ. ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ. ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. ಬಂಡಾಯ ಆ ಕಾಲದಲ್ಲಿ ಲಾರ್ಡ್ ಡಾಲ್ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857). ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರೂ ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ಜಿದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಕೂಟ ರಚನೆ: ಬಾಬಾಸಾಹೇಬರು ಬ್ರಿಟಿಷರನ್ನು ಮಟ್ಟಹಾಕಲು ಮುಂಡರಗಿ ಭೀಮರಾವ್, ಸುರ್ಪುರ ವೆಂಕಟಪ್ಪ ನಾಯಕ, ರಾಮದುರ್ಗ, ಕೊಪ್ಪಳ ಮತ್ತು ನಿಪ್ಪಾಣಿಯ ಪ್ರಮುಖ ನಾಯಕರನ್ನು ಒಗ್ಗೂಡಿಸಿ ಬೃಹತ್ ಒಕ್ಕೂಟ ರಚಿಸಿಕೊಂಡರು. ಆರಂಭಿಕ ಗೆಲುವು ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ. ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ.ಹತ್ತಿರದ ಮಲ್ಲಿಕಾರ್ಜುನ ಗುಡ್ಡದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಮ್ಯಾನ್ಸನ್ ಮೇಲೆ ಬಾಬಾಸಾಹೇಬರ ಸೈನಿಕರು ಅನಿರೀಕ್ಷಿತ ದಾಳಿ ಮಾಡಿದರು. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ಅಗಸಿ ದ್ವಾರವೊಂದಕ್ಕೆ ನೇತುಹಾಕಲಾಯಿತು. ಮ್ಯಾನ್ಸನನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮತ್ತು ಮಾನ್ಯಾ ಬಾಪು ಮೊದಲಾದ ಬಾಬಾಸಾಹೇಬರ ಆಪ್ತರು ತಮ್ಮ ಕುಟಿಲುತನದಿಂದ ದ್ರೋಹ ಎಸಗಿ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ತಿಳಿಸಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ. ಸೋಲು ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ರಾಮದುರ್ಗ ತೊರೆದು ಹೋದ. ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದು ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರ ಬಾಬಾಸಾಹೇಬನನ್ನು ನೇಣುಹಾಕಲಾಯಿತು. ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು. ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು. 1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಹೀಗೊಂದು ಕ್ರಾಂತಿ ತನ್ನ ಜನರಿಂದಲೇ ನೆಲೆ ಕಚ್ಚಿತು.
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಗಜೇಶ ಮಸಣಯ್ಯ ಗಜೇಶ ಮಸಣಯ್ಯನವರ ವಚನಗಳು ಶರಣಸತಿ ಲಿಂಗಪತಿ ಭಾವ, ಷಟ್ಸ್ಥಲ ಸಿದ್ಧಾಂತ ಮತ್ತು ಆತ್ಮಜ್ಞಾನದ ಆಳವಾದ ತಿಳುವಳಿಕೆಯನ್ನು ಒಳಗೊಂಡಿವೆ. ಬಸವಣ್ಣನವರ ಕೀರ್ತಿಯನ್ನು ಕೇಳಿ ಇವರು ತಮ್ಮ ಮಡದಿಯೊಂದಿಗೆ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು. ಒಬ್ಬಶ್ರೇಷ್ಠಅನುಭಾವಿ ಚಿಂತಕ ಬಸವಕಾಲಿನಶರಣರು. ಕಾಲ – ಹನ್ನೆರಡನೆಯ ಶತಮಾನಒಟ್ಟು ವಚನಗಳು 70 ಜನ್ಮ ಸ್ಥಳ ಇವರು ಅಕ್ಕಲಕೋಟೆ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಜನಿಸಿದರು.ಅಂಕಿತ -ಮಹಾಲಿಂಗ ಗಜೇಶ್ವರ”. ಮಡದಿ -ಗಜೇಶ ಮಸಣಮ್ಮಐಕ್ಯ ಸ್ಥಳ – ಕಲ್ಯಾಣ ಕ್ರಾಂತಿಯ ನಂತರದಲ್ಲಿ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಮನಹಳ್ಳಿ ಗ್ರಾಮದಲ್ಲಿದ್ದು ಕೊನೆಗೆ ಅಲ್ಲಿಯೇ ಐಕ್ಯರಾದರೆಂದು ಕೆಲವರು ಹೇಳಿದರೆ, ಅಕ್ಕಲಕೋಟೆಯ ಕರ್ಜಗಿ ಗ್ರಾಮದಲ್ಲಿ ಐಕ್ಯರಾದರೆಂದು ತಿಳಿದು ಬರುತ್ತದೆ. 12 ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ “ಮಹಾಲಿಂಗ ಗಜೇಶ್ವರ”. ಹೊಸ ಮದುವೆ ಹಸೆ ಉಡುಗದ ಮುನ್ನಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನನೀರ ತಾಳ್ಮೆ ಹರಿಯದ ಮುನ್ನತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದುಹುಸಿ ಇಲ್ಲದಿದ್ದಡೆ ಭಕ್ತನೆಂಬೆಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆತನುವಿಲ್ಲದಿದ್ದಡೆ ಪ್ರಸಾದಿ ಎಂಬೆಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆಆಸೆ ಇಲ್ಲದಿದ್ದಡೆ ಶರಣನೆಂಬೆಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆಇಂತಾಗಬೇಕೆಂಬ ಮನದ ದೇಹಇರಿದಡರಿಯದು, ಸ್ತುತಿಸಿದಡರಿಯದುಸುಖವನರಿಯದು, ದುಃಖವನರಿಯದುಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆಅದೇ ಮಹಾಲಿಂಗ ಗಜೇಶ್ವರನೆಂಬೆ ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ ಮಹಾಲಿಂಗ ಗಜೇಶ್ವರನಿಮ್ಮ ಶರಣರ ಘನವನುಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು. ಗಜೇಶ ಮಸಣಯ್ಯ -ವಚನ ಸಂಖ್ಯೆ 213 ಪುಟ 78 ಸಂಪುಟ 7ಇದು ಮಹಾ ಅನುಭವಿ ಗಜೇಶ ಮಸಣಯ್ಯನವರ ಅಪರೂಪದ ವಚನವಾಗಿದೆ. ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗಗಳು ತನ್ನ ಬದುಕಿನಲ್ಲಿ ಹೇಗೆ ಅಳವಡಿಸಿಕೊಂಡನು ಮಸಣಯ್ಯ ಎಂದು ಸುಂದರವಾಗಿ ಸಾದರಪಡಿಸಿದ್ದಾನೆ .ಎನ್ನ ಕರಸ್ಥಲವೇ ಬಸವಣ್ಣನಯ್ಯ———————————-ಗುರು ಲಿಂಗ ಜಂಗಮ – ಉಪಾದಿತವಲ್ಲ ಅವು ತತ್ವಗುಣಗಳು .ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.ಕರಸ್ಥಲಕ್ಕೆ ಪರಂಜ್ಯೋತಿಯ ಕುರುಹು ತಂದಿಟ್ಟ ಕರಣ ಬಸವಣ್ಣ ತನ್ನ ಕರಸ್ಥಲದಲ್ಲಿದ್ದನಯ್ಯ ಬಸವಣ್ಣನು ಎಂದಿದ್ದಾನೆ ಗಜೇಶ ಮಸಣಯ್ಯ . ಇದನ್ನು ಚಾಮರಸನು ಅತ್ಯಂತ ಸುಂದರವಾಗಿ ಹೀಗೆ ಹೇಳಿದ್ದಾನೆ. ಕಾಯದೊಳು ಗುರು ಲಿಂಗ ಜಂಗಮದಾಯತವನರಿಯಲ್ಕೆ ಸುಲಭೋಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |ದಾಯದೋರಿ ಸಮಸ್ತ ಭಕ್ತ ನಿಕಾಯವನು ಪಾವನವ ಮಾಡಿದರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ ) ಗಜೇಶ ಮಸಣಯ್ಯನವರು ಬಸವಣ್ಣ ತನ್ನ ಕರಸ್ಥಲದ ಚೇತನ ಕಾರಸ್ತಹದಲ್ಲಿ ಇಂಬುಗೊಂಡ ಲಿಂಗದ ಜನಕ ಎಂತಲೂ ಹೇಳಿದ್ದಾನೆ. ಕರಸ್ಥದಲ್ಲಿರುವ ಲಿಂಗವು ಜಂಗಮ ಸಮಾಜ ಎಂತಾದರೆ ಮಸಣಯ್ಯನವರಿಗೆ ಅದು ಬಸವಣ್ಣ ಮಾತ್ರ.ಕರಸ್ಥಲದಿಂದ ಕಾಯಕ ಮಾಡಿ ದಾಸೋಹ ಮಾಡುವ ತತ್ವವ ನೀಡಿದ ಬಸವಣ್ಣ ತನ್ನ ನಿಜದ ಅರಿವಿನ ಗುರು ಎಂದಿದ್ದಾನೆ. ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯ————————————–ಕರವು ಬಸವಣ್ಣನವರು ನೀಡಿದ ಇಷ್ಟಲಿಂಗದಿಂದ ಚುಳುಕಾಗಿ ಜಂಗಮ ಜ್ಞಾನಕ್ಕೆ ಕಾಲಿಡುವಾಗ ಮುಂದಿನ ಅಂತರಂಗದ ವಿಕಸತನದಲ್ಲಿ ಚೆನ್ನ ಬಸವಣ್ಣ ಮನದ ಮೂರುತಿಯಾಗುತ್ತಾರೆ.ಮಾನಸಿಕವಾಗಿ ಬೌದ್ಧಿಕವಾಗಿ ಬಾಹ್ಯ ಶರೀರದಿಂದ ಆತ್ಮದ ಒಳಗೆ ಪ್ರವೇಶ ಮಾಡುವಾಗ ಚೆನ್ನ ಬಸವಣ್ಣನವರ ಷಟಸ್ಥಲ ಕರಣ ಹಸಿಗೆ ಕೊಡುಗೆ ಅಪಾರವಾಗಿದೆ..ಹೀಗಾಗಿ ಚೆನ್ನ ಬಸವಣ್ಣನವರ ಅನುಭವ ತಮ್ಮ ಪ್ರಾಣಲಿಂಗವಾಯಿತ್ತು ಎಂದು ಇಷ್ಟಲಿಂಗವೆಂಬ ಸ್ಥಾವರ ಭಾವವನ್ನು ತೊರೆದು ಚೆನ್ನಬಸವಣ್ಣನವರ ಅನುಭವವೇ ಮೌಲ್ಯ ಅವುಗಳೇ ತಮಗೆ ಪ್ರಾಣಲಿಂಗವಾಗಿಸಲು ಅಂತರಂಗದ ಆತ್ಮ ವಿಮರ್ಶೆ ಆತ್ಮಾವಲೋಕನ ಅಗತ್ಯವಾಗಿದೆ ಎಂದಿದ್ದಾರೆ ಮಸಣಯ್ಯನವರು. ಎನ್ನ ಭಾವಸ್ಥಲವೇ ಪ್ರಭುದೇವರಯ್ಯ,———————————–ಇಷ್ಟಲಿಂಗ ಬಸವಣ್ಣ ಪ್ರಾಣಲಿಂಗಚೆನ್ನಬಸವಣ್ಣನವರ ಜ್ಞಾನ ಪಡೆದ ಶರಣನು ಅಲ್ಲಮ ಪ್ರಭುದೇವರ ಉದಾತ್ತೀಕರಣ . ನಿರ್ದೇಹಿ ತತ್ವ ಶರಣ ಸಂಕುಲಕ್ಕೆ ಆಕರ್ಷಣೆ ಮತ್ತು ಅನುಕರಣೀಯವಾಗಿದೆ.ಅಲ್ಲಮರ ಅನುಭಾವವು ಚಿಂತನೆಗಳು ಜಗತ್ತಿನ ಇಂದಿಗೂ ಆದರಣೀಯವಾದ ಮೌಲ್ಯಗಳು . ಇಷ್ಟಲಿಂಗವೆಂಬುದು ಅರಿವಿನ ಕುರು ಇಷ್ಟಲಿಂಗವು ಯೋಗ ಸಾಧನವು. ಅದನ್ನು ಮನದಲ್ಲಿರಿಸಿಕೊಂಡು ಪ್ರಾಣಜೀವಕ್ಕೆ ಸಂಚಯಿಸುವುದು ಪ್ರಾಣಲಿಂಗವು ಅದು ಚೆನ್ನಬಸವಣ್ಣನವರಜ್ಞಾನ ಮತ್ತು ಅನುಭವವು. ಪ್ರಾಣಮಯ ಮಾಡಿದ ಲಿಂಗ ಜ್ಞಾನವು ಭಾವಲಿಂಗವಾಗಿ ಸೃಷ್ಟಿ ಸ್ಥಿತಿ ಲಯಗಳ ಮಧ್ಯೆ ಪಂಚ ಮಹಾಭೂತಗಳ ಚೇಷ್ಟೆ ಕಾರ್ಯಗಳನ್ನು ಪಂಚೇಂದ್ರಿಗಳ ಮೂಲಕ ಅನುಭವಿಸುವ ಭಾವ ಲಿಂಗವೇ ಅಲ್ಲಮ ಪ್ರಭುಗಳು ಎಂದೆನ್ನುತ್ತಾರೆ ಮಸಣಯ್ಯನವರು. ಇಂತೆನ್ನ ಕರ ಮನ ಭಾವಂಗಳಲ್ಲಿ ಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ——————————————————————————ಈ ರೀತಿಯಾಗಿ ಇಷ್ಟ ಲಿಂಗ ಪ್ರಾಣಲಿಂಗ ಭಾವಲಿಂಗವು ತನ್ನ ಕಾಯದೊಳು ಕೂಡಿಕೊಂಡು ತನ್ನ ಶರೀರವನ್ನುಪ್ರಾಣವನ್ನು ಮನವನ್ನು ಭಾವವನ್ನು ಶುದ್ಧ ಮಾಡುವ ಪರಿ ಅದ್ಭುತವಾಗಿದೆ . ಇಷ್ಟ ಪ್ರಾಣ ಭಾವ ಲಿಂಗವೆನ್ನುವುದು ಒಂದು ಮುಹೂರ್ತ ಸ್ವರೂಪ . ಭಕ್ತನ ಆಧ್ಯಾತ್ಮಿಕ ವಿಕಸನದ ಒಳ ಪಯಣ .ಬಾಹ್ಯವಾಗಿ ಬದುಕಲುಅಣಿಯಾಗುವ ಉಪಕ್ರಮ ಮಾತ್ರ . ಇದೆ ಕಾರಣಕ್ಕೆ ಬಸವಣ್ಣನವರು ಇದೆ ಅಂತರಂಗದ ಶುದ್ಧಿ ಇದೆ ಬಹಿರಂಗದ ಶುದ್ಧಿ ಎಂದಿದ್ದಾರೆ.ಒಳಗಿನ ಶುಚಿತ್ವವು ಹೊರಗಿನ ಸುಂದರತೆಗೆ ತತ್ವ ನಿಷ್ಠೆಗೆ ಕಾರಣವಾಗುತ್ತದೆ. ಶರಣ ಸಂಸ್ಕೃತಿಗೆ ಬಸವಣ್ಣ ಚೆನ್ನ ಬಸವಣ್ಣ ಮತ್ತು ಅಲ್ಲಮಪ್ರಭುಗಳ ಅನುಭಾವ ಅನುಪಮವಾದದ್ದು ಎಂದು ಮಸಣಯ್ಯ ಶರಣ ಅವರನ್ನು ನೆನೆದಿದ್ದಾನೆ. ಮಹಾಲಿಂಗ ಗಜೇಶ್ವರ ನಿಮ್ಮ ಶರಣರ ಘನವನು ಎನ್ನ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾಗಿರ್ದೆನು.————————————————————————————————–ಶರಣರ ಆಧ್ಯಾತ್ಮಿಕ ಸಾಧನೆಯಲ್ಲಿ ಅಲ್ಲಮ ಬಸವಣ್ಣ ಸಿದ್ಧರಾಮ ಅಕ್ಕಮಹಾದೇವಿ ಚೆನ್ನ ಬಸವಣ್ಣ ಮಡಿವಾಳ ಮಾಚಿದೇವ ಕಕ್ಕಯ್ಯ ಹೀಗೆ ಸಾವಿರಾರು ಶರಣರುತಮ್ಮ ಅನುಭಗಳ ನಿಜದ ನಿಲುವುಗಳನ್ನು ಅನುಭವ ಮಂಟಪದಲ್ಲಿ ನಿರಂತರವಾಗಿ ಪ್ರಕಟಗೊಳಿಸಿ ಶರಣಾತ ತತ್ವಗಳನ್ನು ಇನ್ನಷ್ಟು ಬಲಗೊಳಿಸಿದ್ದಾರೆ.ಆ ಕಾರಣ ತನ್ನ ಚೈತನ್ಯದ ಕುರುಹು ಮಹಾಲಿಂಗ ಗಜೇಶ್ವರ ಎಂಬುದಾಗಿ ಆತ್ಮ ನಿವೇದನೆ ಮಾಡಿಕೊಳ್ಳುತ್ತಾ ಗಜೇಶ ಮಸಣಯ್ಯನವರು ಪ್ರತಿ ಸಾಧಕರ ಶರಣರ ಘನವಾದ ನಿಲುವುಗಳನ್ನು ತಮ್ಮ ಅಂಗ ಗುಣ ಕಾಯದಲ್ಲಿ ಸರ್ವಾಂಗದಲ್ಲಿ ಕಂಡು ಪರಮ ಸುಖಿಯಾದೆನು ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.ಇಷ್ಟಲಿಂಗ ಸಾಧಕನ ಗಟ್ಟಿ ಮುಟ್ಟದ ಸಂಕೇತ ಅರಿವಿನ ಕುರುಹು ಅದನ್ನು ಕೊಟ್ಟ ಬಸವಣ್ಣ ಸಮಗ್ರ ಪಯಣದ ಚಿಂತನೆಗಳ ಆರಂಭಿಕ ಸೂತ್ರಧಾರ . ಇಷ್ಟಲಿಂಗವು ನಿತ್ಯ ಯೋಗಕ್ಕೆ ಸಾಧನ ಹಾಗು ಬಹು ಮುಖ್ಯ ಸಾಧನೆಯ ಮೆಟ್ಟಿಲು. ಇಷ್ಟಲಿಂಗದ ಯೋಗದೊಳು ಹೊಕ್ಕು ನಿರಂತರವಾಗಿ ವಿಕಸಿತವಾಗಿ ಅವುಗಳನ್ನು ಪ್ರಾಣದಲ್ಲಿ ಪ್ರತಿಷ್ಠಾಪನೆ ಮಾಡಿದಲ್ಲಿ ಅಲ್ಲಿ ಪ್ರಾಣವು ಆನಂದಕರ ಭಾವವನ್ನು ಹೊಂದುತ್ತದೆ ಅದು ಮುಂದೆ ಭಾವಕ್ಕೆ ತಲುಪಿ ಮನವು ಪ್ರಸನ್ನ ಭಾವವಾಗುತ್ತದೆ. ಅದುವೇ ಕಾಯ ಪ್ರಸಾದ ಗುಣವಾಗುವ ಸಿದ್ಧಿಯೋಗ. ಬಸವಣ್ಣ ಸ್ಥೂಲ ಚೆನ್ನಬಸವಣ್ಣ ಸೂಕ್ಷ್ಮ ಮತ್ತು ಅಲ್ಲಮ ಪ್ರಭುಗಳು ಕಾರಣ ಶರೀರಕ್ಕೆ ಪ್ರತಿನಿಧಿಗಳಾಗುತ್ತಾರೆ.ಇದನ್ನು ಭಕ್ತನು ನಿತ್ಯ ನಿರಂತರವಾಗಿ ಕೈಗೊಂಡಾಗ ಮಾತ್ರ ಅನಂತಹ ಎತ್ತರದ ನಿಲುವನ್ನು ಕಾಣಲುಸಾದ್ಯ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ









