ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ-41 ವೃತ್ತಿ ವೃತ್ತಾಂತ ಸುಜಾತಾ ರವೀಶ್ ಹೀಗಿರುವಾಗಲೇ ನಮ್ಮ ನಿಗಮದಲ್ಲಿ ಚೆಕ್ ಕೊಡುವ ಸಂಪ್ರದಾಯವನ್ನು ಕೈ ಬಿಟ್ಟು ಇನ್ನು ಮುಂದೆ ನೇರ ಬ್ಯಾಂಕ್ ಗೆ ಹಣ ವರ್ಗಾಯಿಸುವ ಪದ್ಧತಿ ಬರಲಿದೆ ಎಂಬ ವಿಷಯ ತಿಳಿಯಿತು ಅದು ಸರ್ಕಾರದ ಆಜ್ಞಾನುಸಾರ ಕ್ರಿಯೆಗೆ ಏನ್ ಈ ಎಫ್ ಟಿ(NEFT) ಎಂದು ಕರೆಯುತ್ತಿದ್ದರು. ಏನಿದು ತಿಳಿಯೋಣ ಬನ್ನಿ ಎಲ್‌ಐಸಿಯಲ್ಲಿ (LIC of India) ನೆಫ್ಟ್ (NEFT – National Electronic Funds Transfer) ಸೌಲಭ್ಯವನ್ನು 2011ರಲ್ಲಿ ಅನುಷ್ಠಾನಗೊಳಿಸಲಾಯಿತು.​ಇದರ ಮೂಲಕ ಪಾಲಿಸಿದಾರರ ಮೆಚುರಿಟಿ (Maturity), ಸರೆಂಡರ್ (Surrender), ಸಾಲ (Loan), ಹಾಗೂ ಪೆನ್ಷನ್ ಅಥವಾ ಕ್ಲೈಮ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.​ಎಲ್‌ಐಸಿಯಲ್ಲಿ NEFT ನೋಂದಾಯಿಸುವ ಪ್ರಕ್ರಿಯೆಯ ಹಂತಗಳು:​೧. ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸುವುದು​NEFT ಮ್ಯಾಂಡೇಟ್ ಫಾರ್ಮ್ (NEFT Mandate Form): ಎಲ್‌ಐಸಿ ಶಾಖೆಯಲ್ಲಿ ಉಚಿತವಾಗಿ ಸಿಗುತ್ತದೆ ಅಥವಾ ಎಲ್‌ಐಸಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.​ರದ್ದಾದ ಚೆಕ್ (Cancelled Cheque): ಪಾಲಿಸಿದಾರರ ಹೆಸರು ಮುದ್ರಿತವಾಗಿರುವ ರದ್ದಾದ ಚೆಕ್ ಎಲೆ.(ಹೆಸರು ಮುದ್ರಿತವಿಲ್ಲದಿದ್ದರೆ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ ಅಥವಾ ಇತ್ತೀಚಿನ ಬ್ಯಾಂಕ್ સ્ટેಟ್‌ಮೆಂಟ್ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು).​ಪಾನ್ ಕಾರ್ಡ್ (PAN Card): ಪ್ರತಿಯನ್ನು ಸ್ವಯಂ ದೃಢೀಕರಿಸಿ (Self-attested) ನೀಡಬೇಕು.​೨. ಫಾರ್ಮ್ ಭರ್ತಿ ಮಾಡುವುದು​ಫಾರ್ಮ್‌ನಲ್ಲಿ ಕೆಳಗಿನ ವಿವರಗಳನ್ನು ನಿಖರವಾಗಿ ಭರ್ತಿ ಮಾಡಬೇಕು:​ಪಾಲಿಸಿ ಸಂಖ್ಯೆ (Policy Number)​ಪಾಲಿಸಿದಾರರ ಹೆಸರು (Policyholder Name)​ಬ್ಯಾಂಕ್ ಹೆಸರು ಮತ್ತು ಶಾಖೆ (Bank Name & Branch)​ಬ್ಯಾಂಕ್ ಖಾತೆ ಸಂಖ್ಯೆ (Account Number)​ಖಾತೆಯ ಪ್ರಕಾರ (Savings / Current)​ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್ (IFSC Code – 11 ಅಕ್ಷರಗಳ ಕೋಡ್)​ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ​೩. ದಾಖಲೆಗಳನ್ನು ಸಲ್ಲಿಸುವುದು​ಭರ್ತಿ ಮಾಡಿದ NEFT ಫಾರ್ಮ್ ಹಾಗೂ ಲಗತ್ತಿಸಿದ ದಾಖಲೆಗಳಿಗೆ (ರದ್ದಾದ ಚೆಕ್ / ಪಾಸ್‌ಬುಕ್ ಪ್ರತಿ) ಸಹಿ ಮಾಡಿ, ನಿಮ್ಮ ಪಾಲಿಸಿ ಇರುವ ಎಲ್‌ಐಸಿ ಸೇವಾ ಶಾಖೆಗೆ (Home Branch) ಅಥವಾ ಯಾವುದೇ ಸಮೀಪದ ಎಲ್‌ಐಸಿ ಶಾಖೆಗೆ ಸಲ್ಲಿಸಬೇಕು.​೪. ದೃಢೀಕರಣ ಮತ್ತು ಸಕ್ರಿಯಗೊಳಿಸುವಿಕೆ (Verification & Activation)​ಎಲ್‌ಐಸಿ ಸಿಬ್ಬಂದಿ ನಿಮ್ಮ ಬ್ಯಾಂಕ್ ವಿವರಗಳನ್ನು ಸಿಸ್ಟಮ್‌ನಲ್ಲಿ ಅಪ್‌ಡೇಟ್ ಮಾಡುತ್ತಾರೆ.​ವಿವರಗಳು ಯಶಸ್ವಿಯಾಗಿ ನೋಂದಣಿಯಾದ ನಂತರ ನಿಮ್ಮ ಮೊಬೈಲ್‌ಗೆ/ಇಮೇಲ್‌‌ಗೆ ಮೆಸೇಜ್ ಬರುತ್ತದೆ.​ಗಮನಿಸಿ: ಆನ್‌ಲೈನ್ ಮೂಲಕ (LIC Customer Portal/App) ಕೂಡ ಪಾಲಿಸಿದಾರರು ಲಾಗಿನ್ হৈ ತಮ್ಮ ಪಾಲಿಸಿಗೆ NEFT ವಿವರಗಳನ್ನು ನೇರವಾಗಿ ಅಪ್‌ಲೋಡ್ ಮಾಡಬಹುದು. ಆದರೆ ಅದು ಇನ್ನೂ ಆರಂಭದ ದಿನಗಳಾಗಿದ್ದರಿಂದ ಬ್ಯಾಂಕಿಗೆ ನೇರವಾಗಿ ಪಾವತಿ ಮಾಡಬೇಕಾಗಿದ್ದು ಫಾಲಿಸಿದಾರರ ಐಚ್ಚಿಕ ಆಪ್ಷನ್ ಆಗಿದ್ದು ಚೆಕ್ ಮೂಲಕ ಸಹ ಪಾವತಿ ಮಾಡುತ್ತಿದ್ದವು. ಆದರೆ ಪಾಲಿಸಿದಾರರ ಬ್ಯಾಂಕ್ ಖಾತೆ ವಿವರಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡುವ ಕೆಲಸ ನೂರು ಪ್ರತಿಶತ ಆಗಲೇಬೇಕಿತ್ತು. ಆದರೆ ಬಹಳ ಜನ ಇನ್ನೂ ಬ್ಯಾಂಕ್ ವಿವರಗಳನ್ನು ಕೊಡಲು ಇಷ್ಟಪಡುತ್ತಿರಲಿಲ್ಲ. ಇದರಿಂದ ಮತ್ತೊಂದು ಅನುಕೂಲ ಆದದೆಂದರೆ ಆಗ ತಾನೇ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದ ಮೊಬೈಲ್ ನಂಬರ್ ಗಳನ್ನು ನಮ್ಮ ದಾಖಲೆಗಳಲ್ಲಿ ಅಳವಡಿಸುವುದು ಇದರಿಂದಾಗಿ ನಾವು ಪಾಲಿಸಿದಾರರನ್ನು ಸಂಪರ್ಕಿಸಬೇಕಾದಾಗ ತುಂಬಾ ಅನುಕೂಲ ಆಗುತ್ತಿತ್ತು. ಇದರ ಜೊತೆಗೆ ಇ-ಮೇಲ್ ತೆಗೆದುಕೊಳ್ಳಬೇಕು ಎಂದು ಇದ್ದರೂ ಆಗ ಬಹಳಷ್ಟು ಜನ ಈಮೇಲ್ ಉಪಯೋಗ ಮಾಡದೆ ಇದುದರಿಂದ ಅದು ಬರಿ ನಾಮಕಾವಸ್ತೆ ಕಾಲಂ ಆಗಿದ್ದಂತೂ  ಸುಳ್ಳಲ್ಲ.  ಈ ಮಧ್ಯೆ ಶಾಖೆಯಲ್ಲಿ ಎಲ್ಲರ ವಿಭಾಗದ ಬದಲಾವಣೆಯ ವಿಷಯ ಕೇಳಿ ಬರತೊಡಗಿತ್ತು ಈಗಾಗಲೇ ನಾನು ಪಾಲಿಸಿ ಸೇವಾ ವಿಭಾಗಕ್ಕೆ ಬಂದು ಮೂರು ವರ್ಷಗಳು ಉರುಳಿ ಹೋಗಿದ್ದರಿಂದ ಮತ್ತೆ ಬೇರೆಯ ವಿಭಾಗದಲ್ಲಿ ಕೆಲಸ ಮಾಡಲು ಸಿದ್ದಳಾಗಬೇಕಿತ್ತು. ಆಗಿದ್ದ ಶಾಖಾಧಿಕಾರಿ ಅನುರಾಧ ಅವರು ಸಹ ಇನ್ನೇನು ವರ್ಗವಾಗಿ ಹೋಗುವುದರಿಂದ ಅದಕ್ಕೆ ಮೊದಲು ಶಾಖೆಗಳ ವರ್ಗಾವಣೆ ಮಾಡಿ ಹೋಗಲು ನಿರ್ಧರಿಸಿದ್ದರು.  ನಮಗೆಲ್ಲ ಮೂರು ವಿಭಾಗಗಳನ್ನು ಆಯ್ಕೆ ಮಾಡಿ ಅರ್ಜಿ ಕೊಡಲು ಹೇಳಲಾಯಿತು ಅದರಲ್ಲಿ ನಾನು ವಿಕ್ರಯ ವಿಭಾಗವನ್ನು ಸಹ ಸೇರಿಸಿದೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮಾತ್ರ ನಾನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಿದ್ದು ಈಗ ಕಂಪ್ಯೂಟರಿಕರಣವಾದ ನಂತರ ಅಲ್ಲಿನ ಕೆಲಸ ಮಾಡಲು ಉತ್ಸುಕಳಾಗಿದ್ದೆ. ಅಲ್ಲಿಗೆ ಬೇರೆ ಯಾರು ಹೋಗಲು ಇಷ್ಟಪಡದೆ ಇದ್ದುದರಿಂದ ನನಗೆ ಅಲ್ಲಿಗೆ ವರ್ಗಾವಣೆ ಮಾಡಲು ಒಪ್ಪಿ ಆದೇಶವನ್ನು ಸಹ ಹಾಕಿ ಆಯಿತು. ಆ ಸಮಯಕ್ಕೆ ಶಾಖಾಧಿಕಾರಿಗಳ ವರ್ಗಾವಣೆ ಆದೇಶಗಳು ಆಗಿ ಅನುರಾಧರಿಗೆ ವರ್ಗಾವಣೆ ಸಿಕ್ಕಿತು. ಆದರೆ ನಮ್ಮ ಶಾಖೆಗೆ ವರ್ಗಾವಣೆ ಆಗಿಬಂದದ್ದು ನನ್ನ ತಂಗಿಯ ಪತಿ ಪ್ರಸನ್ನ ಅವರು. ವಿಕ್ರಯ ವಿಭಾಗ ನೇರವಾಗಿ ಶಾಖಾಧಿಕಾರಿಗಳ ಆಡಳಿತಕ್ಕೆ ಒಳಪಡುತ್ತದೆ ಮತ್ತು ಬೇರೆ ಯಾವ ಅಧಿಕಾರಿಗಳು ಅಲ್ಲಿ ಇರುವುದಿಲ್ಲ.‌ ಹಾಗಾಗಿ ನಾವು ಸಂಬಂಧಿಗಳು ಮಾತ್ರ ಆ ವಿಭಾಗದಲ್ಲಿ ಜವಾಬ್ದಾರರಾಗುವುದು ಸರಿ ಹೋಗುವುದಿಲ್ಲ ಎಂದು ಹೇಳಿ ಇನ್ನು ರಿಲೀವ್ ಆಗಿರದ ಅನುರಾಧ ಅವರೊಂದಿಗೆ ಮಾತನಾಡಿದರೆ, ಅವರು ಆ ವಿಷಯಕ್ಕೆ ಸ್ವಲ್ಪವೂ ಪ್ರಾಮುಖ್ಯತೆ ಕೊಡದೆ ಏನು ಆಗುವುದಿಲ್ಲ ಕೊಟ್ಟಿರುವುದನ್ನು ಮಾಡಿ ಎಂದು ಕಟುವಾಗಿ ಹೇಳಿದರು ಮತ್ತು ನಾನು ಬಲವಂತಿಸಿದಾಗ ಬೇರೆ ಯಾರಾದರೂ ಅಲ್ಲಿಗೆ ಬರುವುದಿದ್ದರೆ ಅವರೊಂದಿಗೆ ವಿನಿಮಯ ಮಾಡಿಕೊಳ್ಳಿ ಎಂದರು. ಆದರೆ ಜವಾಬ್ದಾರಿ ಹೆಚ್ಚು ಇರುತ್ತಿದ್ದ ಈ ವಿಭಾಗಕ್ಕೆ ಬಂದು ತಲೆ ಕೊಡಲು ಬೇರೆ ಯಾರು ಸಿದ್ದರಿರಲಿಲ್ಲ. ಹಾಗಾಗಿ ನಾನು ತೆಪ್ಪಗೆ ಅಲ್ಲಿಯೇ ಮುಂದುವರೆಯುವ ನಿರ್ಧಾರ ಮಾಡಬೇಕಾಯಿತು. ಈ ವೇಳೆಗೆ ನನ್ನ ತಂಗಿ ಗರ್ಭಿಣಿಯಾಗಿದ್ದು ಪೂರ ಬೆಡ್ ರೆಸ್ಟ್ ಹೇಳಿದ್ದರಿಂದ ಅವಳು ಕಚೇರಿಗೆ ಹೋಗುತ್ತಿರಲಿಲ್ಲ. ನಮ್ಮ ಶಾಖೆಯ ಬಳಿ ಸರಸ್ವತಿಪುರಂನಲ್ಲೇ ಅವರು ಮನೆ ಮಾಡಿದ್ದಾಯಿತು .ನನಗೂ ಆಫೀಸಿನಿಂದ ವಾಪಸ್ ಹೋಗುತ್ತಾ ಅವಳನ್ನು ಮಾತನಾಡಿಸಿಕೊಂಡು ಹೋಗಲು ಅಥವಾ ಅವರಲ್ಲಿಗೆ ಅವಶ್ಯಕತೆ ಇದ್ದಾಗ ಹೋಗಲು ಅನುಕೂಲ ಆಯಿತು. ಆಗ ಅಲ್ಲಿ ನನ್ನ ಜೊತೆ ಇದ್ದವರು ವೀಣಾ ಮತ್ತು ರಾಧಿಕಾ.  ಅದುವರೆಗೆ ಇದ್ದ ಪ್ರೋಗ್ರಾಮರ್ ರಾಮಚಂದ್ರ ಅವರು ವರ್ಗವಾಗಿ ರಾಜಲಕ್ಷ್ಮಿ ಅಲ್ಲಿಗೆ ಬಂದಿದ್ದಳು. ಅವಳು ಸಹ ತಮ್ಮದೇ ಯೂನಿಯನ್ ನವಳಾಗಿದ್ದು ಮೊದಲಿನಿಂದಲೂ ಗೆಳತಿ ಆದ್ದರಿಂದ ಕಂಪ್ಯೂಟರ್ಗೆ ಸಂಬಂಧಿಸಿದ ಕೆಲಸಗಳನ್ನು ಕಲಿಯಲು ಹಾಗೂ ಅವರಿಂದ ಮಾಡಿಸಿಕೊಳ್ಳಲು ತುಂಬಾ ಅನುಕೂಲವಾಗಿತ್ತು. ಈ ಮೊದಲೇ ಹೇಳಿದ ಬ್ಯಾಂಕ್ ದಾಖಲೆಗಳ ವಿವರ ಆಗ ಎಲ್ಲಾ ಪ್ರತಿನಿಧಿಗಳಿಗೂ ಕಡ್ಡಾಯ ಎಂದಾಗಿದ್ದರಿಂದ ಆಗ ಇದ್ದ ಎಲ್ಲಾ ಪ್ರತಿನಿಧಿಗಳ ಬ್ಯಾಂಕ್ ವಿವರಗಳನ್ನು ತೆಗೆದುಕೊಂಡು ಕಂಪ್ಯೂಟರ್ಗೆ ತುಂಬಿಸುವ ಒಂದು ದೊಡ್ಡ ಪ್ರಾಜೆಕ್ಟ್ ಆಗಿ ಅದನ್ನು ಒಂದೇ ಸಮ ಕುಳಿತು ಮಾಡಿದ್ದು ನನಗೆ ಈಗಲೂ ತೃಪ್ತಿ ಕೊಡುವ ವಿಷಯ. ಹಾಗೆಯೇ ಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ಲಬ್ ರೋಸ್ಟರ್ ಕೆಲಸವು ಅಷ್ಟೇ, ಅದೇ ಮೊದಲ ಬಾರಿಗೆ ಸಂಪೂರ್ಣ ಕಂಪ್ಯೂಟರಿ ಕೃತ ಆಗಿದ್ದು ಅದನ್ನು ತುಂಬಾ ಯಶಸ್ವಿಯಾಗಿ ನಮ್ಮ ಶಾಖೆಯಲ್ಲಿಯೇ ಪ್ರಥಮ ಬಾರಿಗೆ ಮಾಡಿದ್ದು ತುಂಬಾ ಖುಷಿ ಕೊಟ್ಟಿತು. ನಾನು ಅಲ್ಲಿ ಕೆಲಸ ಮಾಡಿದ ಮೂರು ವರ್ಷಗಳಲ್ಲೂ ನಮ್ಮ ಶಾಖೆಯೇ ಮೊತ್ತ ಮೊದಲು ಈ ರೀತಿಯ ಕ್ಲಬ್ ರೋಸ್ಟರ್ ಗಳನ್ನು ಸಲ್ಲಿಸಿದ್ದು .‌ನಮ್ಮ ದೂರದ ಸಂಬಂಧಿ ಸ್ವಾಮಿ ಅವರು ಸಹ ವಿಭಾಗಿಯ ಕಚೇರಿಯ ವಿಕ್ರಯ ವಿಭಾಗದಲ್ಲೇ ಆಗ ಕೆಲಸ ಮಾಡುತ್ತಿದ್ದು ನಮಗೆ ಬೇಕಾದಾಗ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದರು. ಆಡಿಟ್ ಇನ್ಸ್ಪೆಕ್ಷನ್ ಎಲ್ಲದರಲ್ಲೂ ನಮ್ಮ ವಿಭಾಗ ತುಂಬಾ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮತ್ತೊಂದು ವಿಶೇಷ. ವಿಭಾಗಿಯ ಮಟ್ಟದ ಕ್ಲಬ್ ಸಮಾವೇಶಗಳನ್ನು ಮೈಸೂರಿನಲ್ಲಿಯೇ  ದಾಸ ಪ್ರಕಾಶ್ ಹೋಟೆಲ್ನಲ್ಲಿಯೇ ಮಾಡುತ್ತಿದ್ದು ಆ ಮೂರು ವರುಷಗಳು ಅದನ್ನು ನಿರೂಪಿಸಿ ಅಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ಇನ್ನೊಂದು ಮುಖ್ಯವಾದ ಕೆಲಸ ಅಂದರೆ ಪ್ರತಿನಿಧಿಗಳ ಆದಾಯ ತೆರಿಗೆ ವಿಷಯ. ಎಲ್ಲಾ ಪ್ರತಿನಿಧಿಗಳು ಪ್ಯಾನ್ ಕಾರ್ಡ್ ಹೊಂದಿರದಿದ್ದ ಕಾರಣ ಅವರಿಗೆ ಕಮಿಷನ್ ಬಟವಾಡೆಗೆ ನಿಲುಗಡೆ ಆಗಿತ್ತು ಅವರಿಗೆ ಹೇಳಿ ಪ್ಯಾನ್ ಕಾರ್ಡ್ ಮಾಡಿಸಿ ಆ ವಿವರಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುವ ಕೆಲಸವು ನಾವಿದ್ದ ಸಮಯದಲ್ಲೇ ಆಗಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆ. ಅಲ್ಲದೆ ಪ್ರತಿನಿಧಿಗಳ ತೆರಿಗೆ ಸಲ್ಲಿಸುವ ಹಾಗೂ ಅವರಿಗೆ ಫಾರ್ಮ್ 21 ಅನ್ನು ಕೊಡುವ ಈ ಎಲ್ಲಾ ಕೆಲಸಗಳನ್ನೂ ಕಲಿತು ಮಾಡಿದ್ದು ಖುಷಿ ಕೊಟ್ಟಿತ್ತು.  ಈ ಹಿಂದೆ ಸರಿಯಾದ ಪ್ಯಾನ್ಗಳು ಇಲ್ಲದೆ ಆದಾಯ ತೆರಿಗೆ ವಿಭಾಗದಿಂದ ಕೆಲವೊಂದು ನೋಟಿಸ್ ಗಳು ಜಾರಿಯಾಗಿತ್ತು . ಅಂತಹ ನೋಟಿಸ್ ಗಳನ್ನು ನೋಡಿ ಅವುಗಳಿಗೆ ಬೇಕಾದ ವಿವರಗಳನ್ನು ಹೊಂದಿಸಿ ಅದನ್ನು ಆದಾಯ ತೆರಿಗೆ ರಿಟರ್ನಸ್ ಮಾಡಿ ಕೊಡುವಂತಹ ಕಠಿಣತರ ಕೆಲಸವನ್ನು ಸಹ ಒಂದು ಏಜೆನ್ಸಿಯ ಮೂಲಕ ತುಂಬಾ ತೃಪ್ತಿಕರವಾಗಿ ಮಾಡಿ ಯಾವುದೇ ನೋಟಿಸ್ ರಾಕಿ ಇಲ್ಲದಂತೆ ನೋಡಿಕೊಂಡಿದ್ದೆ .ಹಾಗಾಗಿ ವಿಭಾಗಿಯ ಕಚೇರಿಯವರು ಸಹ ಬೇರೆ ಯಾವುದಾದರೂ ಶಾಖೆಗೆ ನೋಟಿಸ್ ಬಂದರೆ ನನ್ನ ಮಾರ್ಗದರ್ಶನ ತೆಗೆದುಕೊಳ್ಳಲು ಹೇಳುತ್ತಿದ್ದರು. ಆ ನಾನಿದ್ದ ಸಮಯದ ಅವಧಿಯಲ್ಲಿ ವೀಣಾ ಅವರಿಗೆ ಬೇರೆ ವಿಭಾಗಕ್ಕೆ ಬದಲಾವಣೆ ದೊರಕಿ ನಾಗಮ್ಮ ಅಲ್ಲಿಗೆ ಬಂದರು. ನಾನು ರಾಧಿಕಾ ಮತ್ತು ನಾಗಮ್ಮ ತುಂಬಾ ಒಳ್ಳೆಯ ಟೀಮ್ ಆಗಿ ವರ್ಕ್ ಮಾಡಿದೆವು. ಅಲ್ಲಿ ಏನೆಲ್ಲಾ ವಿಶೇಷ ಸಾಧನೆಗಳು ಆಯಿತು ಅದೆಲ್ಲ ಈ ಟೀಮ್ ವರ್ಕ್ ನ ಫಲವೇ. ನಾನು ಹೋದ ಸ್ವಲ್ಪ ದಿನ ಒಬ್ಬ ಉಪ  ಶಾಖಾಧಿಕಾರಿಗಳು ಇದ್ದಾರಾದರೂ ಅವರಿಗೆ ಬೆಂಗಳೂರಿಗೆ ವರ್ಗ ಸಿಕ್ಕಿದ ನಂತರ ಮತ್ತೆ ಯಾವ ಉಪಶಾಖಾಧಿಕಾರಿಗಳನ್ನು ನಮ್ಮ ಶಾಖೆಗೆ ಪೋಸ್ಟ್ ಮಾಡಲಿಲ್ಲ . ಹಾಗಾಗಿ ವಿಕ್ರಯ ವಿಭಾಗದ ಮುಖ್ಯಸ್ಥೆ ಆಗಿದ್ದ ನನ್ನ ಮೇಲೆ ಸ್ವಲ್ಪ ಹೆಚ್ಚಿನ ಜವಾಬ್ದಾರಿಯೇ ಎಂದು ಹೇಳಬಹುದು. ಆದರೆ ಎಲ್ಲರ ನೆರವು ಹಾಗೂ ಶಾಖಾಧಿಕಾರಿಗಳಾಗಿದ್ದ ನಮ್ಮ ಭಾವ ಪ್ರಸನ್ನ ಅವರ ಸಹಕಾರದಿಂದಾಗಿ ತೃಪ್ತಿಕರ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಆ ವೇಳೆಗೆ ನಮ್ಮ ಎಲ್ಐಸಿನಲ್ಲಿ ಎರಡನೇ ಬಾರಿಗೆ ಮನೆ ಸಾಲ ತೆಗೆದುಕೊಳ್ಳುವ ಯೋಜನೆ ಬಂದಿತ್ತು. ಹಾಗಾಗಿ ನಾನು ಮೊದಲು ಇದ್ದ ಚಿಕ್ಕ ಸೈಟಿನ ಮನೆಯನ್ನು ಮಾರಿ ಆ ಹಣದೊಂದಿಗೆ ಎರಡನೆಯ ಬಾರಿಯ ಸಾಲ ಉಪಯೋಗಿಸಿಕೊಂಡು ಈಗಿರುವ ಮನೆಯನ್ನು ಕೊಂಡುಕೊಂಡಿದ್ದು. ಹೀಗೆ ಇದೇ ಸಮಯದಲ್ಲಿ ನನ್ನ ತಂಗಿಯ ಮಗ ಸುಧನ್ವ ಸಹ ಹುಟ್ಟಿದ್ದು. ನಂತರ ನನ್ನ ತಂಗಿಗೆ ಹುಣಸೂರು ಶಾಖೆಯಿಂದ ಮೈಸೂರಿನ ಶಾಖೆ 4ಕ್ಕೆ ವರ್ಗವಾಯಿತು. ಮೂರು ವರ್ಷ ನಮ್ಮ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ನನ್ನ ಭಾವ ಪ್ರಸನ್ನ ಅವರಿಗೆ ನಾಗಮಂಗಲ ಶಾಖೆಗೆ ವರ್ಗವಾಗಿತ್ತು.  ಆನಂತರ ಬಂದ ಶಾಖಾಧಿಕಾರಿಗಳೇ ರಾಜಶೇಖರ ಅವರು. ನಮ್ಮ ಶಾಖೆಯ ಪದ್ಧತಿಯಂತೆ ಮೂರು ವರ್ಷ ಮುಗಿದಿದ್ದರಿಂದ ವಿಕ್ರಯ ವಿಭಾಗದಿಂದ ನನಗೆ ಮತ್ತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ಬಾರಿ ಮೊದಲು ಕೆಲಸ ಮಾಡುತ್ತಿದ್ದ ಸಿಂಗಲ್ ವಿಂಡೋ ದ ಬದಲು ಪಿ ಎಸ್ ಜನರಲ್ ಎಂದು ಬೇರೆ ಎಲ್ಲಾ ಇತರೆ ಕೆಲಸಗಳು ಇದ್ದ ವಿಭಾಗ ಅಲ್ಲಿ ನಾನು ಮುಖ್ಯವಾಗಿ ನೋಡಿಕೊಳ್ಳುತ್ತಿದ್ದು ಅಸೈನ್ಮೆಂಟ್ ನಾಮಿನೇಷನ್ ರಿವೈವಲ್ ಆಲ್ಟರೇಷನ್ ಬಾಂಡ್ ರಿಲೀಸ್ ಇತ್ಯಾದಿ ಕೆಲಸಗಳು.   ಈ ವೇಳೆಗೆ ಬ್ಯಾಂಕ್ ವಿವರಗಳ್ನ ಸಲ್ಲಿಸುವಿಕೆ ಕಡ್ಡಾಯವಾಗಿದ್ದು ಚೆಕ್ ನಲ್ಲಿ ಪಾವತಿ ಮಾಡುವುದು ಪೂರ್ತಿ ನಿಂತುಹೋಗಿತ್ತು ಹಾಗಾಗಿ ಬ್ಯಾಂಕ್ ವಿವರಗಳನ್ನು ಎಲ್ಲರೂ ಸಲ್ಲಿಸುತ್ತಿದ್ದರು ಹಾಗೂ ಅದು ಒಂದು ದೊಡ್ಡ ಪ್ರಮುಖ ಕೆಲಸವಾಗಿ ಬಿಟ್ಟಿತ್ತು ಆ ವೇಳೆಗೆ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ-40 ಸುಜಾತಾ ರವೀಶ್ ವೃತ್ತಿ ವೃತ್ತಾಂತ ಪಾಲಿಸಿಯ ಮೇಲೆ ಸಾಲ ಕೊಡುವುದು ಮತ್ತು ಅದರ ನಿರ್ವಹಣೆ ಜೀವವಿಮಾ ನಿಗಮದಲ್ಲಿ ಒಂದು ಪ್ರಮುಖ ಕೆಲಸ. ಫೀಪ್ ಅಂದರೆ ಸಂಪೂರ್ಣ ಡಿಜಿಟೀಕರಣ ಆಗುವ ಮೊದಲು ಸಾಲ ಲೆಕ್ಕಾಚಾರ ಅದಕ್ಕೆ ಬಡ್ಡಿಯ ಲೆಕ್ಕಾಚಾರ ಎಲ್ಲವೂ ಸಂಪೂರ್ಣ ಮಾನ್ಯುಯಲ್ ಆಗಿಯೇ ನಡೆಯುತ್ತಿತ್ತು. ದಾವಾ ಸಮಯದಲ್ಲಿ ಸಹ ಈ ಎಲ್ಲ ಲೆಕ್ಕಾಚಾರಗಳನ್ನು ಹಾಕಿ ಅದನ್ನು ಪರಿಶೀಲನೆ ಮಾಡಬೇಕಿತ್ತು.ಎಲ್.ಐ.ಸಿ. (LIC) ಯಲ್ಲಿ ಕಂಪ್ಯೂಟರೀಕರಣ ಅಥವಾ ಸಾಫ್ಟ್‌ವೇರ್ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರುವ ಮೊದಲು, ಪಾಲಿಸಿ ಲೋನ್ ಷೆಡ್ಯೂಲ್ ರಿಕನ್ಸಿಲಿಯೇಷನ್ (Loan Schedule Reconciliation) ಅಥವಾ ಸಾಲದ ಲೆಕ್ಕಾಚಾರದ ಪರಿಶೀಲನೆ ಸಂಪೂರ್ಣವಾಗಿ ಮಾನವ ಶ್ರಮ, ಮ್ಯಾನುಯಲ್ ಲೆಕ್ಕಾಚಾರ ಮತ್ತು ರಿಜಿಸ್ಟರ್‌ಗಳ (Registers) ಆಧಾರದ ಮೇಲೆಯೇ ನಡೆಯುತ್ತಿತ್ತು.ಕಂಪ್ಯೂಟರೀಕರಣ ಜಾರಿಗೆ ಬಂದ ನಂತರ ಈ ಸಂಪೂರ್ಣ ಪ್ರಕ್ರಿಯೆ ಆಟೋಮ್ಯಾಟಿಕ್ ಆಗಿ ಬದಲಾಯಿತಾದರೂ, ಅದಕ್ಕೂ ಮೊದಲು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ನಿಖರತೆ, ಗಣಿತದ ನೈಪುಣ್ಯ ಮತ್ತು ಲೆಡ್ಜರ್ ನಿರ್ವಹಣೆಯ ಶ್ರಮ ಅತ್ಯಂತ ಪ್ರಶಂಸನೀಯವಾಗಿತ್ತು.ಇ ಫೀಪ್ಜಾರಿಯಾದ ನಂತರ ಲೋನ್ ಷೆಡ್ಯೂಲ್ ರಿಕನ್ಸಿಲಿಯೇಷನ್ ಎಂಬುದು “ಲೆಡ್ಜರ್ ಪುಟಗಳನ್ನು ಹುಡುಕುವ ಸುದೀರ್ಘ ಕೆಲಸ” ದಿಂದ “ಸಿಸ್ಟಮ್ ರಿಪೋರ್ಟ್‌ಗಳನ್ನು ಕ್ರಾಸ್-ವೆರಿಫೈ ಮಾಡುವ ಸರಳ ಕೆಲಸ” ವಾಗಿ ಪರಿವರ್ತನೆಯಾಯಿತು. ನಾನು ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವಧಿ ಒಂದು ರೀತಿ ಮಧ್ಯಂತರ ಅವಧಿ. ಪೂರ್ಣ ಮಾನವ ಶ್ರಮವೂ ಅಲ್ಲ ಪೂರ್ಣ ಕಂಪ್ಯೂಟರಿಕರಣವೂ ಅಲ್ಲ .ಹಾಗಾಗಿ ಅಲ್ಲಿ ಸಾಲ ರೀ ಕನ್ಸೀಲಿಯೇಷನ್ ಎನ್ನುವುದು ಒಂದು ಮುಖ್ಯ ಕೆಲಸವಾಗಿದ್ದು ಹೆಚ್ಚಿನ ಶ್ರಮ ಬೇಡುತ್ತಿತ್ತು. ಸಾಲಗಳ ಮರುಪಾವತಿ ನಗದು ಕೌಂಟರ್ನಲ್ಲಿ ನಗದು ಅಥವಾ ಚೆಕ್ ಗಳ ಮೂಲಕ ಹಾಗೂ ದಾವಾ ವಿಭಾಗದಲ್ಲಿ ಸರ್ವೈವಲ್ ಬೆನಿಫಿಟ್, ಪಾಲಿಸಿ ಪಕ್ವವಾದ ಸಂದರ್ಭ ಹಾಗೂ ಪಾಲಿಸಿದಾರರ ಸಾವಿನ ಸಂದರ್ಭ ಈ ಮೂರು ಸಮಯಗಳಲ್ಲಿ ಆಗುತ್ತಿತ್ತು. ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ಆ ತಿಂಗಳು ವಿತರಿಸಿದ ಸಾಲ ಹಾಗೂ ನಮ್ಮ ಶಾಖೆಯಿಂದ ಬೇರೆ ಶಾಖೆಗೆ ವರ್ಗವಾಗಿ ಹೋದ ಪಾಲಿಸಿಗಳ ಮೇಲಿನ ಸಾಲ ಮತ್ತು ನಮ್ಮ ಶಾಖೆಗೆ ವರ್ಗವಾಗಿ ಬಂದ ಪಾಲಿಸಿಗಳ ಮೇಲಿನ ಸಾಲ ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ತಿಂಗಳ ಮೊದಲಿನ ಮೊತ್ತ ಹಾಗೂ ತಿಂಗಳ ಕೊನೆಯಲ್ಲಿ ಸಾಲದ ಷಡ್ಯುಲಿನ ಮೊತ್ತ ಇವುಗಳನ್ನು ತಾಳೆ ಮಾಡಬೇಕಿತ್ತು. ನಮ್ಮ ಶಾಖೆ ಐದು ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಿಗಳ ಪಾಲಿಸಿಗಳನ್ನು ಹೊಂದಿದ್ದ ಶಾಖೆಯಾಗಿದ್ರಿಂದ ವರ್ಗಾವಣೆಗಳ ಸಂಖ್ಯೆ ವಿಪರೀತ ಹೆಚ್ಚು . ಆಗಿನ್ನೂ ಹೊಸದಾದುದರಿಂದ ಕೆಲವೊಂದು ಸಮಸ್ಯೆಗಳು ಉದ್ಭವವಾಗುತ್ತಿತ್ತು .ಆದರೆ ಅವುಗಳನ್ನು ಸರಿಪಡಿಸಿಕೊಳ್ಳುವ ವಿಧಾನಗಳನ್ನು ಅಧಿಕಾರವನ್ನು ಶಾಖೆಗಳಿಗೆ ಕೊಟ್ಟಿದ್ದರು. ಆರ್ ಎಫ್ ಎಮ್ ಅಂದರೆ ರಿಕ್ವೆಸ್ಟಡ್ ಫೈಲ್ ಮೆಂಟೇನೆನ್ಸ್ ವಿಧಾನದ ಮೂಲಕ ಏನಾದರೂ ತಪ್ಪುಗಳಾಗಿ ಸಮಸ್ಯೆ ಯಾಗಿದ್ದರೆ ಒಂದು ಆಫೀಸ್ ನೋಟ್ ಹಾಕಿ ಅದಕ್ಕೆ ಅನುಮೋದನೆ ಪಡೆದು ಮೊತ್ತಗಳನ್ನು ಸರಿಪಡಿಸಬಹುದಿತ್ತು.ಹಾಗಾಗಿ ಬಹಳಷ್ಟು ಸಮಸ್ಯೆಗಳು ಇದ್ದರೂ ಅವುಗಳ ಮೂಲವನ್ನು ಸರಿಯಾಗಿ ಶೋಧಿಸಿ ಸರಿಯಾದ ಆಫೀಸ್ ನೋಟ್ ಹಾಕಿ ಅನುಮೋದನೆ ಪಡೆದು ಸರಿಪಡಿಸಿದ್ದೆವು. ಬಹಳಷ್ಟು ಪರಿಶ್ರಮದ ಕೆಲಸ. ತಿಂಗಳಿಗೆ ಮೂರು ಅಥವಾ ನಾಲ್ಕು ದಿನ ಅದಕ್ಕೆ ಹಿಡಿಯುತ್ತಿತ್ತು . ಆದರೂ ಸಂಪೂರ್ಣ ತೃಪ್ತಿ ಕೊಡುತ್ತಿದ್ದ ಕೆಲಸ.ಈ ಮೊದಲೇ ಹೇಳಿದಂತೆ ನನ್ನ ತಂಗಿ ಛಾಯ ಹಾವೇರಿ ಶಾಖೆಯಲ್ಲಿ ಸಾಲದ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದಳು. ಅದು ಬಹಳಷ್ಟು ದೊಡ್ಡ ಶಾಖೆ ಆದುದರಿಂದ ಪ್ರತಿದಿನ 100 ಕ್ಕಿಂತ ಹೆಚ್ಚು ಸಾಲ ನಗದು ಸಾಲಗಳನ್ನೇ ಕೊಡುತ್ತಿದ್ದರು. ಹಾಗೂ ಕರ್ನಾಟಕದಲ್ಲಿಯೇ ವಿಶಿಷ್ಟವಾಗಿ ಆ ಶಾಖೆಯಲ್ಲಿ ಟೋಕನ್ ಗಳನ್ನು ವಿತರಿಸಿ ಆ ಮೂಲಕ ನಗದು ಸಾಲವನ್ನು ವಿತರಿಸಲಾಗುತ್ತಿತ್ತು. ಅಲ್ಲಿ ಅವಳು ಸಹ ಈ ಲೋನ್ ರಿಕಂಸಿಲಿಯೇಷನ್ ಕೆಲಸ ಮಾಡುತ್ತಿದ್ದರಿಂದ ನಾವಿಬ್ಬರು ಬಹಳಷ್ಟು ಚರ್ಚೆ ಫೋನ್ ಮೂಲಕ ಮಾಡಿ ಪರಸ್ಪರ ಸಮಸ್ಯೆಗಳನ್ನು ಮಾತನಾಡಿ ಪರಿಹರಿಸಿಕೊಳ್ಳುತ್ತಿದ್ದೆವು. ಆಗ ಯುವ ಅಧಿಕಾರಿಗಳಿಗೆ ಪೂನಾದ ಎಸ್ ಟಿ ಸಿ ನಲ್ಲಿ 15 ದಿನದ ತರಬೇತಿ ಕಾರ್ಯಕ್ರಮ ಇರುತ್ತಿತ್ತು. ನನ್ನ ತಂಗಿಯು ಅದಕ್ಕೆ ಆಯ್ಕೆಯಾಗಿದ್ದಳು. ಅಲ್ಲಿ ಯಾವುದಾದರೂ ಒಂದು ಕೆಲಸದ ಬಗ್ಗೆ ಫ್ಲೋ ಚಾರ್ಟ್ ಮಾಡಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಬೇಕಿತ್ತು. ಛಾಯ ಅದಕ್ಕೆ ಈ ಸಾಲ ರಿಕಂಸಿಲಿಯೇಷನ್ ಕೆಲಸವನ್ನು ಆಯ್ಕೆ ಮಾಡಿಕೊಂಡು ತುಂಬಾ ಸಮರ್ಥವಾಗಿ ಪ್ರೆಸೆಂಟ್ ಮಾಡಿದ್ದಳು. ಆನಂತರ ಅವುಗಳಲ್ಲಿ ಕೆಲವನ್ನು ಅಳವಡಿಸಿ ಪ್ರೋಗ್ರಾಮ್ ಮಾಡಿಕೊಟ್ಟಿದ್ದರು. ಆನಂತರ ರಿಕನ್ ಸಿಲೇಷನ್ ಕೆಲಸ ಬಹಳವೇ ಸುಲಭ ಆಗಿತ್ತು. ಈಗಂತೂ ಈ ಸಾಲ ರಿಕನ್ಸಿಲಿಯೇಷನ್ ಕೆಲಸ ಒಂದು ಗಂಟೆ ಮಾತ್ರ ಹಿಡಿಯುತ್ತದೆ. ಅಂದರೆ ಎಷ್ಟೊಂದು ಮಾನವ ಗಂಟೆಗಳು ಮಿಕ್ಕಿದವು ನೋಡಿ. ಹಾಗಾಗಿಯೇ ಈಗ ಸಿಬ್ಬಂದಿ ನೇಮಕಾತಿ ನಿಲುಗಡೆಯೇ ಆಗುವಷ್ಟು ಕಡಿಮೆ ಆಗಿರುವುದು ಸಹ. ಈ ಮಧ್ಯೆ ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಶಾಖಾಧಿಕಾರಿಗಳಾಗಿ ಪದೋನ್ನತಿಯಾಗಿ ಮೈಸೂರು ವಿಭಾಗದ ಕುಶಾಲನಗರ ಶಾಖೆಗೆ ಪೋಸ್ಟಿಂಗ್ ಆಗಿತ್ತು.ಛಾಯಾ ಸಹ ಮೈಸೂರು ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಳು. ಚಾಮರಾಜನಗರದಲ್ಲಿ ಮಾತ್ರ ಜಾಗ ಖಾಲಿ ಇದ್ದುದರಿಂದ ಅವಳಿಗೆ ಅಲ್ಲಿಗೆ ವರ್ಗಾವಣೆ ಆಗಿತ್ತು. ಕುಶಾಲನಗರದಿಂದ ದಿನವೂ ಓಡಾಡಲು ಕಷ್ಟ ಆಗಿದ್ದರಿಂದ ಅವಳು ಮೈಸೂರಿನಲ್ಲಿಗೆ ನಮ್ಮ ಮನೆ ಹಾಗೂ ನನ್ನ ತಂಗಿ ವೈಶಾಲಿ ಇವರ ಮನೆಗಳಲ್ಲಿ ಇದ್ದು ವಾರಕ್ಕೊಮ್ಮೆ ಕುಶಾಲನಗರಕ್ಕೆ ಹೋಗುತ್ತಿದ್ದಳು. ನಮ್ಮ ಶಾಖೆಯಲ್ಲಿ ಇದ್ದ ನನ್ನ ಗೆಳತಿ ಶೈಲಜ ತುಂಬಾ ಒಳ್ಳೆಯ ಹಾಡುಗಾತಿ. ನಾವೆಲ್ಲ ಕೆಲವಾದರೂ ದೇವರ ನಾಮಗಳನ್ನು ಅವಳ ಮೂಲಕ ಕಲಿಯೋಣವೆಂದು ಹೇಳಿ ಎಲ್ಲರಿಗೂ ಅನುಕೂಲವಾಗುವಂತೆ ಮಧ್ಯದಲ್ಲಿ ಇದ್ದ ಗೆಳತಿ ಮಂಗಳಾಳ ಮನೆಯಲ್ಲಿ ಅದಕ್ಕಾಗಿ ಏರ್ಪಾಡು ಮಾಡಿದೆವು. ದಿನಾ ಸಂಜೆ ಆಫೀಸು ಮುಗಿದ ನಂತರ ಅಲ್ಲಿ ಹೋಗಿ ದೇವರನಾಮ ಕಲಿತು ವಾಪಸ್ ಆಗುತ್ತಿದ್ದೆವು. ಒಂದೊಂದು ದಿನ ಒಬ್ಬೊಬ್ಬರ ಆತಿಥ್ಯ. ಹಾಡಿನ ಜೊತೆ ಜೊತೆಗೆ ತಿಂಡಿ ತಿನಿಸುಗಳ ವಿತರಣೆ. ಯಾವುದು ಹೆಚ್ಚು ಆಕರ್ಷಣೆ ಪ್ರೇರಣೆ ಗೊತ್ತಾಗ್ತಿರಲಿಲ್ಲ. ೧೦ _ ೧೫ ದಿನ ಈ ರೀತಿ ತರಬೇತಿ ಆದ ನಂತರ ಒಂದು ಶನಿವಾರ ಸಂಜೆ ಅವರ ಮನೆಯಲ್ಲಿಯೇ ಈ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನೂ ಸಹ ಮಾಡಿ ನಾವು ಕಲಿತದ್ದನ್ನು ಅಲ್ಲಿ ಹಾಡಿ ಬೇರೆ ಬಂದ ಅತಿಥಿಗಳ ಎದುರಿಗೆ ನಮ್ಮ ಪ್ರತಿಭೆಯನ್ನು ತೋರಿಸಿದ್ದೂ ಆಯಿತು. ಅದರ ನಂತರ ಹೊಟ್ಟೆ ಪೂಜೆಯು ಆಯಿತು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಇನ್ನು ಮುಂದೆ ವರಷಕ್ಕೊಮ್ಮೆಯಾದರೂ ಈ ರೀತಿ ದೇವರನಾಮಗಳ ಕಾರ್ಯಾಗಾರ ಮಾಡಿ ಒಂದಿಷ್ಟು ಹಾಡು ಕಲಿಯೋಣ ಅಂತ ಅಂದುಕೊಂಡಿದ್ದು ಅಷ್ಟೇ. 20 ವರ್ಷಗಳಾದರೂ ಮತ್ತೆ ಆ ರೀತಿ ಮಾಡಲು ಆಗೇ ಇಲ್ಲ ಈಗಂತೂ ಎಲ್ಲರೂ ನಿವೃತ್ತಿಯಾಗಿ ಒಟ್ಟಿಗೆ ಸೇರುವುದೇ ಅಪರೂಪ ಆಗಿಹೋಗಿದೆ. ಈ ಸಮಯದಲ್ಲಿ ಒಂದು ಮುಖ್ಯ ಘಟನೆ ಅಂದರೆ ಆಗ ಹೆಚ್ಚು ವ್ಯಾಪಕವಾಗಿದ್ದ ಚಿಕನ್ ಗುನ್ಯಾ ರೋಗ ನನಗೂ ಆಟ ಕಾಯಿಸಿಕೊಂಡಿತು. ನನಗಂತೂ ಆಸ್ಪತ್ರೆಗಳೆಂದರೆ ಅಲರ್ಜಿ. ಭಗವಂತನು ಕರುಣಾಮಯಿ ಅಂತಹ ಸಂದರ್ಭ ಇದುವರೆಗೆ ತಂದಿಲ್ಲ (touchwood). ಓರಗೆಯವರು ಅಸೂಯೆ ಪಡುವಷ್ಟು ಎನರ್ಜಿ ಲೆವೆಲ್ .ಕೆಲಸದವಳು ಸಹಾ ಇರದೆ ವೃತ್ತಿ ಪ್ರವೃತ್ತಿ ತೂಗಿಸುತ್ತಿರುವ ನನ್ನನ್ನು ಕಾಡಿದ ಕಾಡುತ್ತಿರುವ ಮಾರಿ ಎಂದರೆ ಚಿಕನ್ ಗುನ್ಯಾ .ಅದರ ಹೆಸರು ಗೊತ್ತಾಗಿ ಪ್ರಸಿದ್ಧವಾಗುವ ಮೊದಲೇ ನನಗೆ ಆಟಕಾಯಿಸಿ ಕೊಂಡಿತ್ತು.ಅಂದು ಜೂನ್ ಮೊದಲ ವಾರ. ಮಂಗಳವಾರದ ದಿನ ಮಾಮೂಲಿನಂತೆ ಕಚೇರಿಗೆ ಹೋಗಿ ಬಂದೆ.ಸಂಜೆ ಟಿವಿ ನೋಡುತ್ತಿದ್ದಂತೆ ಸುಸ್ತೆನಿಸಿ ಜ್ವರ ಬರುವ ಹಾಗಾಯಿತು. ಮಾಮೂಲಿ ಜ್ವರ ಎಂದು ಮಲಗಿದರೆ ಮಧ್ಯರಾತ್ರಿಗೆ ಸಿಕ್ಕಾಪಟ್ಟೆ temperature.ನಾನು ಕನವರಿಸಿ ಕೊಳ್ಳುತ್ತಿದ್ದುದು ಕಂಡು ನನ್ನವರಿಗೆ ಗಾಬರಿ .ಮಾರನೆಯ ದಿನ ಡಾಕ್ಟರ್ ಶಾಪ್ ತೆಗೆದ ಕೂಡಲೇ ಹೋಗಿ ಔಷಧಿ ತಂದಾಯ್ತು. ಮೂರು ದಿನದ ಡೋಸ್ ಮುಗಿದರೂ ಜಪ್ಪಯ್ಯ ಅನ್ನದ ಜ್ವರಕ್ಕೆ ಆಂಟಿಬಯಾಟಿಕ್ ಉಪಚಾರವೂ ಆಯ್ತು. ಕ್ಯಾರೇ ಅನ್ನದಾಗ ಡಾಕ್ಟರ್ ಬ್ಲಡ್ ಟೆಸ್ಟ್ ಮಾಡಲು ಹೇಳಿದರು. ಅಷ್ಟರಲ್ಲಾಗಲೇ ಒಂದು ವಾರ ಕಳೆದಿದ್ದು ಊಟ ತಿಂಡಿ ಸೇರದೆ ನಿತ್ರಾಣವಾಗಿದ್ದೆ.ಎಷ್ಟೇ ಹುಷಾರು ಇರದಿದ್ದರೂ ಉಪ್ಪಿಟ್ಟು ಮಾತ್ರ ಗುಳುಂ ಸ್ವಾಹ ಮಾಡುತ್ತಿದ್ದ ನನಗೆ ಏನು ಸೇರದೆ ಹೋದಾಗ ನನ್ನ ಮೇಲೆ ನನಗೆ ಮರುಕ ಉಕ್ಕುಕ್ಕಿ ಬರುತ್ತಿತ್ತು .ಸರಿ ರಿಪೋರ್ಟ್ ಬಂತು .ಚಿಕನ್ ಗುನ್ಯಾ ಎಂದು ಗುರುತಿಸಿ ಅದಕ್ಕೆ ಸೇವೆ ಸಲ್ಲಿಸಿ ಜ್ವರವಂತೂ ಬಿಡ್ತು .ಆದರೆ ಕಾಲು ನೋವು ಬಂತು ನೋಡ್ರಿ !ಎಂದೂ ಏನೂ ನೋವು ಕಂಡಿರಲಿಲ್ಲ .ಇಡೀ ಜನ್ಮದ ನೋವು ಅನುಭವಿಸಿದೆ. 15 ದಿನ ರಜಾ ಹಾಕಿದ್ದೆ ಎಂದು ಹೇಳಿ ಶಾಖಾಧಿಕಾರಿಗಳಾದ ಅನುರಾಧ ನಮ್ಮದೇ ಕಚೇರಿಯ ಶಿವಶಂಕರ್ ಅವರ ಜೊತೆ ಬಂದು ನನ್ನ ಯೋಗ ಕ್ಷೇಮ ವಿಚಾರಿಸಿಕೊಂಡು ಹೋದರು.ಲಿಫ್ಟ್ ಇರದಿದ್ದರೆ ಎರಡನೇ ಮಹಡಿಯ ಮೇಲಿನ ಆಫೀಸಿಗೆ ಸಹ ಹೋಗಲಾಗುತ್ತಿರಲಿಲ್ಲ . ಒಂದು ಮೆಟ್ಟಲು ಹತ್ತಲು ಒಂದು ನಿಮಿಷ ತೆಗೆದುಕೊಂಡು ಹಹತ್ತಬೇಕಿತ್ತು.ಹದಿನೈದು ದಿನ ಪೂರ್ತಿ ರಜಾ ಮತ್ತೆ ಹದಿನೈದು ದಿನ ಬೆಳಿಗ್ಗೆ ಮಾತ್ರ ಹೋಗಿ ಮಧ್ಯಾಹ್ನ ರಜಾ. ಆಗ ಜೂನ್ ತಿಂಗಳ ಕೊನೆ ಆದುದರಿಂದ ಉಳಿದ ಸಂದರ್ಭ ರಜೆ ತೆಗೆದು ಕೊಂಡು ಮುಗಿದಿದ್ದು. ಹೇಗೋ ಎಲ್ಲ ಸರಿ ಹೋದರೂ ಈಗಲೂ ಕಾಲುನೋವು ಒಮ್ಮೊಮ್ಮೆ ದಾಳಿ ಇಡುತ್ತೆ .ಕೆಲಸ ಹೆಚ್ಚಾದಾಗ, ಮೈಯಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾದಾಗ ಕಾಲೇ ಮೊದಲ ಬಲಿಪಶು. ನನ್ನ ಈwalk ಸ್ವಾತಂತ್ರ್ಯವನ್ನು ಕಿತ್ತುಕೊಂಡ ಮಾರಿಗೆ ನನ್ನ ಧಿಕ್ಕಾರ . ಯಾರೋ ಅಂದರು. ಚಿಕನ್ಗುನ್ಯಾ ವೈರಸ್ ಹತ್ತು ವರ್ಷ ಮಾತ್ರ ದೇಹದಲ್ಲಿ ಪ್ರಬಲ ಮತ್ತು ಅಸ್ತಿತ್ವ ಅಂತ. ಇನ್ನೇನು ೧೫ ವರ್ಷ ಆಗ್ತಿದೆ ಸರಿ ಹೋಗಬಹುದು ಅಲ್ವಾ? ಹಾಗಂತ ನಾನೇನು ಒಲಿಂಪಿಕ್ಸ್ ಗೆ ಹೋಗೋ ತಯಾರಿ ಮಾಡ್ತಿಲ್ಲ . ಆದರೂ ಚಂಗ್ ಅಂತ ಓಡಾಡಬಹುದಲ್ವಾ?(ಮುಂದುವರೆಯುವುದು) ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ-39 ಸುಜಾತಾ ರವೀಶ್ ವೃತ್ತಿ ವೃತ್ತಾಂತ ಮತ್ತಷ್ಟು ಎರರ್ ಪಟ್ಟಿಗಳು ಈ ಹಿಂದೆಯೇ ಹೇಳಿದಂತೆ ತಪ್ಪುಗಳ ಲಿಸ್ಟ್ ಬಂದಾಗ ಅದನ್ನು ಸರಿಪಡಿಸುವುದು ನನಗೆ ತುಂಬಾ ಖುಷಿಯ ಕೆಲಸ ನಮ್ಮ ಪಾಲಿಸಿ ಸೇವಾ ವಿಭಾಗದಲ್ಲಿ ಸಂಭವಿಸಬಹುದಾದ ತಪ್ಪುಗಳ ಪಟ್ಟಿಗಳನ್ನು ಸರಿಪಡಿಸಿದ್ದಾಗಿತ್ತು ಕೆಲವೊಮ್ಮೆ ಪ್ರೀಮಿಯಂ ಗೆ ಹಣ ಅಡ್ಜಸ್ಟ್ ಮಾಡಲು ಸಾಧ್ಯವಾಗದೆ ಬಂದ ಹಣವನ್ನು ಡೆಪಾಸಿಟ್ ಅಂತ ಯಾವುದಕ್ಕೂ ಅಕೌಂಟ್ ಮಾಡದೆ ಇಟ್ಟು ಬಿಡುವ ವ್ಯವಸ್ಥೆ ಇತ್ತು .ಆ ರೀತಿ ಇಟ್ಟ ಡೆಪಾಸಿಟ್ ಗಳು ನಾನು ಪಾಲಿಸಿ ಸೇವಾ ವಿಭಾಗದಲ್ಲಿದ್ದಾಗ ಸ್ವಲ್ಪ ಹೆಚ್ಚಿನ ಸಂಖ್ಯೆ ಹಾಗೂ ಹೆಚ್ಚಿನ ಮೊತ್ತದಲ್ಲಿಯೇ ಇದ್ದವು. ಅದು ಏಕೆ ಆ ರೀತಿ ಪ್ರೀಮಿಯಂ  ಅಡ್ಜಸ್ಟ್ ಆಗಲಿಲ್ಲ ಎಂಬುದನ್ನು ಕಂಡುಕೊಂಡು, ಬೇಕಾದ ಕಡೆ ಪಾಲಿಸಿ ದಾರರ ಜೊತೆ ಪತ್ರ ವ್ಯವಹಾರ ಅಥವಾ ಫೋನ್ ನಲ್ಲಿ ಹೇಳಿ ಕಡಿಮೆ ಇದ್ದ ಮೊತ್ತ ಕಟ್ಟಿಸಿ ಅದನ್ನು ಸರಿ ಮಾಡಬೇಕಿತ್ತು. ಕೆಲವೊಮ್ಮೆ ಹೆಚ್ಚು ಹಣ ಉಳಿದುಕೊಳ್ಳುತ್ತಲೂ ಇತ್ತು .ಅವುಗಳನ್ನು ಸಹ ವಾಪಸ್ಸು ಮಾಡಬೇಕಿತ್ತು. ಆ ರೀತಿ ಹೆಚ್ಚುವರಿ ಇದ್ದ ಹಣ ನೂರು ರೂಪಾಯಿಗಿಂತ ಹೆಚ್ಚು ಇದ್ದಲ್ಲಿ ಚೆಕ್ ಮೂಲಕ ವಾಪಸ್ಸು ನೂರು ರೂಪಾಯಿಯ ಒಳಗೆ ಇದ್ದಲ್ಲಿ ಮನಿ ಆರ್ಡರ್ ಮೂಲಕ ಹಿಂದಿರುಗಿಸಬೇಕಿತ್ತು. ಒಂದಷ್ಟು ದಿನ ಪಟ್ಟು ಹಿಡಿದು ಆ ಕೆಲಸದ ಬಗ್ಗೆ ಗಮನ ಹರಿಸಿದ್ದರಿಂದ ಎಲ್ಲಾ ಕೇಸ್ ಗಳು ಇತ್ಯರ್ಥವಾಗಿ ಡೆಪಾಸಿಟ್ ಜೀರೋ ಅಂದರೆ ನಿಲ್ ಆಗಿ ಅದಕ್ಕೂ ಸಹ ನಮಗೆ ವಿಭಾಗಿಯ ಕಚೇರಿಯಿಂದ ಒಂದು ಪ್ರಮಾಣ ಪತ್ರ ಬಂದಿತ್ತು. ಮತ್ತೊಂದು ಹೆಚ್ಚು ತಪ್ಪುಗಳಾಗುತ್ತಿದ್ದ ಕ್ಷೇತ್ರ ಎಂದರೆ ಪೆನ್ಷನ್.ಅನ್ಯುಯಿಟಿ ವಿಭಾಗ. ಅಲ್ಲಿ ಪಾಲಿಸಿಗಳ ಮಾಹಿತಿಗಳು ಕೆಲವೊಮ್ಮೆ ತಪ್ಪಾಗಿ ಫೀಡ್ ಆಗಿದ್ದರಿಂದ ಕೆಲವೊಂದು ಕಡೆ ತಾಳೆ ಆಗದೆ ಅವು ಎರರ್ ಪಟ್ಟಿಯಲ್ಲಿ ಬರುತ್ತಿತ್ತು . ಫೈಲ್ಗಳನ್ನು ತರಿಸಿ ಪ್ರೊಪೋಸಲ್ ನಲ್ಲಿ ಇದ್ದ ಹಾಗೆ ಎಲ್ಲಾ ಮಾಹಿತಿಗಳನ್ನು ತಿದ್ದಿ ಮಾಹಿತಿ ಪೂರ ಸರಿಯಾದ ಮೇಲೆ ಪೆನ್ಷನ್ ಸೆಟಲ್ ಮಾಡಲು ಆಗುತ್ತಿತ್ತು .ಆ ರೀತಿ 600ಕ್ಕೂ ಹೆಚ್ಚು  ಎರರ್ ಗಳು ಇದ್ದವು. ಈ ಕೆಲಸ ಪಾಲಿಸಿ ಸೇವಾ ವಿಭಾಗಕ್ಕೆ ಸಂಬಂಧಿಸಿದ್ದಲ್ಲ, ದಾವಾ ವಿಭಾಗಕ್ಕೆ ಸಂಬಂಧಿಸಿದ್ದು. ಆಗ ಆ ವಿಭಾಗದ ಅಧಿಕಾರಿ ಆಗಿದ್ದವರು ಎಸ್ ಆರ್ ಮುರಳಿ. ಈ ಹಿಂದೆ ನಾನು ವಿಭಾಗೀಯ ಕಚೇರಿಯಲ್ಲಿ ಇದ್ದಾಗ ನನ್ನ ಎಚ್ ಜಿ ಎ ಆಗಿದ್ದವರು. ಅವರು ಈ ವಿಷಯದಲ್ಲಿ ನನ್ನ ಸಹಕಾರ ಕೋರಿದಾಗ ನನಗೆ ಇಷ್ಟದ ಕೆಲಸವೂ ಆದ್ದರಿಂದ ಅವರೊಂದಿಗೆ ಸೇರಿ ಆ ಪಟ್ಟಿಯನ್ನು ಸಹ ಪೂರ್ತಿ ಸರಿ ಮಾಡಿದ್ದೆವು. ಈ ಹಂತದಲ್ಲೇ ನಮ್ಮ ನಿಗಮದ ಕೆಲಸಗಳನ್ನು ಡಿಜಿಟೀಕರಣ ಮಾಡುವ ಯೋಜನೆ ಆರಂಭವಾಗಿದ್ದು. ಇದು ಸಹ ಒಂದು ಬೃಹತ್ ಯೋಜನೆ.  ಆದರೆ ಇಡೀ ನಿಗಮದ ಕಾರ್ಯ ವೈಖರಿಯಲ್ಲಿ ಒಂದು ಐತಿಹಾಸಿಕ ಬದಲಾವಣೆ ಆಗಿತ್ತು ಇದರಿಂದ. ​LIC ಯಲ್ಲಿ ದಾಖಲೆಗಳ ಡಿಜಿಟಲೀಕರಣ ಮತ್ತು ಸ್ಕ್ಯಾನಿಂಗ್ ಯೋಜನೆ 2008 – 2010 ರ ಅವಧಿಯಲ್ಲಿ ದೇಶಾದ್ಯಂತ ಹಂತ-ಹಂತವಾಗಿ ಪ್ರಾರಂಭವಾಯಿತು.​ಪಾಲಿಸಿ ದಾಖಲೆಗಳನ್ನು ಕಾಗದದ ರೂಪದಿಂದ ಡಿಜಿಟಲ್ ರೂಪಕ್ಕೆ ಬದಲಾಯಿಸಲು EDMS (Enterprise Document Management System) ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಮೊದಲನೆಯ ಹಂತ ದಾಖಲೆಗಳ ವರ್ಗಿಕರಣ ಮತ್ತು ಸಿದ್ಧತೆ ಶಾಖೆಗಳಲ್ಲಿ ಇರುವ ಹಳೆಯ ಪಾಲಿಸಿ ಫೈಲ್ ಗಳು ಲೈನ್ ದಾಖಲೆಗಳು ಮತ್ತು ಹೊಸ ಪ್ರಪೋಸಲ್ ಫಾರಂ ಗಳನ್ನು ವರ್ಗೀಕರಿಸಿ ಪಿನ್ ಅಥವಾ ಟ್ಯಾಗ್ ತೆಗೆದು ಸ್ಕ್ಯಾನಿಂಗ್ ಗೆ ಸಿದ್ಧಪಡಿಸಲಾಯಿತು. ಎರಡನೆಯ ಹಂತದಲ್ಲಿ ಇಡಿಎಂಎಸ್(EDMS)   ಪೋರ್ಟಲ್ ಮೂಲಕ ಸ್ಕ್ಯಾನಿಂಗ್ ವಿಶೇಷ ಹಾಯ್ ಸ್ಪೀಡ್ ಡಾಕ್ಯುಮೆಂಟ್ ಸ್ಕ್ಯಾನರ್ ಗಳನ್ನು ಬಳಸಿ ಪಾಲಿಸಿ ಪತ್ರಗಳು ವೈದ್ಯಕೀಯ ವರದಿಗಳು ವಯಸ್ಸಿನ ದಾಖಲೆ ಮತ್ತು ಕೆ ವೈ ಸಿ ಪತ್ರಗಳನ್ನು ಇ ಡಿ ಎಂ ಎಸ್ ತಂತ್ರಾಂಶಕ್ಕೆ ಸ್ಕ್ಯಾನ್ ಮಾಡಲಾಯಿತು. ಮೂರನೆಯ ಹಂತದಲ್ಲಿ ಇಂಡಾಕ್ಸಿಂಗ್ ಮತ್ತು ಪರಿಶೀಲನೆ ಪ್ರತಿ ಸ್ಕ್ಯಾನ್ ಮಾಡಿದ ದಾಖಲೆಗೂ ಸೂಕ್ತ ಪಾಲಿಸಿ ಸಂಖ್ಯೆ ಮತ್ತು ದಾಖಲೆಯ ಪ್ರಕಾರವನ್ನು ಟ್ಯಾಗ್ ಮಾಡಿ ಡೇಟಾ ಸರಿಯಾಗಿದೆಯೇ ಎಂದು ತಾಳೆ ನೋಡಲಾಯಿತು. ನಾಲ್ಕನೆಯ ಹಂತದಲ್ಲಿ ಕೇಂದ್ರೀಕೃತ ಸರ್ವರ್ ನಲ್ಲಿ ಸಂಗ್ರಹಣೆ ಮಾಡಲಾಯಿತು ಆದ ದಾಖಲೆಗಳನ್ನು ನಿಗಮದ ಕೇಂದ್ರೀಕೃತ ಭದ್ರತಾ ಸರ್ವರ್ ನಲ್ಲಿ ಭದ್ರವಾಗಿ ಸಂಗ್ರಹಿಸಲಾಯಿತು ಇದರಿಂದಾಗಿ ಯಾವುದೇ ಶಾಖೆಯಿಂದ ಸಿಬ್ಬಂದಿ ಕ್ಷಣಾರ್ಧದಲ್ಲಿ ದಾಖಲೆಗಳನ್ನು ವೀಕ್ಷಿಸಲು ಸಾಧ್ಯವಾಯಿತು. ಇದರಿಂದಾದ ಮುಖ್ಯ ಪ್ರಯೋಜನಗಳು:​ಸೇವೆಗಳ ವೇಗ: ಪಾಲಿಸಿ ಸಾಲ (Policy Loan), ಸರ್ವಿಸ್ಸಿಂಗ್, ಮತ್ತು ಕ್ಲೈಮ್‌ಗಳ (Claim Settlement) ಪ್ರಕ್ರಿಯೆ ಅತ್ಯಂತ ವೇಗವಾಗಿ ಪೂರ್ಣಗೊಳ್ಳಲು ನೆರವಾಯಿತು.​ದಾಖಲೆಗಳ ಭದ್ರತೆ: ಹಳೆಯ ಕಾಗದದ ಫೈಲ್‌ಗಳು ಹಾಳಾಗುವುದು ಅಥವಾ ಕಳೆದುಹೋಗುವ ಅಪಾಯ ತಪ್ಪಿತು.​Any Branch Servicing: ಗ್ರಾಹಕರು ದೇಶದ ಯಾವುದೇ LIC ಶಾಖೆಗೆ ಹೋದರೂ ಅವರ ಪಾಲಿಸಿ ದಾಖಲೆಗಳನ್ನು ಕಂಪ್ಯೂಟರ್ ಪರದೆಯ ಮೇಲೆ ತಕ್ಷಣ ಪರಿಶೀಲಿಸಲು ಸಾಧ್ಯವಾಯಿತು.​ಪ್ರಸ್ತುತ ಹೊಸ ಪ್ರಪೋಸಲ್ ಫಾರ್ಮ್‌ಗಳು ಮತ್ತು ದಾಖಲೆಗಳನ್ನು e-KYC ಹಾಗೂ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯ ಮೂಲಕ ನೇರವಾಗಿ ಡಿಜಿಟಲ್ ರೂಪದಲ್ಲೇ ಅಪ್‌ಲೋಡ್ ಮಾಡಲಾಗುತ್ತದೆ. ಇದೊಂದು ಬೃಹತ್ ಯೋಜನೆ ಎಂದು ಮೊದಲೇ ಹೇಳಿದ್ದೆ. ಸಾವಿರಗಳ ಗಟ್ಟಲೆ ಕೆಲವೊಂದು ದೊಡ್ಡ ಶಾಖೆಗಳಲ್ಲಿ ಲಕ್ಷಗಟ್ಟಲೆ ಇರುವ ದಾಖಲೆಗಳನ್ನು ಈ ರೀತಿ ಸ್ಕ್ಯಾನಿಂಗ್ ಗೆ ಸಿದ್ಧ ಮಾಡುವ ಕೆಲಸ ಶಾಖೆಗಳಿಗೆ. ಆದರೆ ಅದಕ್ಕೆಂದು ಹೆಚ್ಚುವರಿ ಸಿಬ್ಬಂದಿಯನ್ನೇನು ಕೊಟ್ಟಿರಲಿಲ್ಲ. ಇರುವ ಸಿಬ್ಬಂದಿಗಳನ್ನೇ ಪಾನಲ್ ತರಹ ಮಾಡಿ ಕೆಲಸಕ್ಕೆ ನಿಯೋಜಿಸಿ ತುಂಬಾ ಯಶಸ್ವಿಯಾಗಿ ಈ ಕಾರ್ಯವನ್ನು ನಿರ್ವಹಿಸಲಾಯಿತು. ಈ ಸಮಯದಲ್ಲಿ ನಮಗೆ ಇದ್ದ ಅಧಿಕಾರಿ ಹಂಸಿನಿ ಎನ್ನುವವರು.  ಇದನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದರು ಎಂದೇ ಹೇಳಬಹುದು. ಆದರೆ ಮೊದ-ಮೊದಲು ಆರಂಭಿಕ ತೊಂದರೆಗಳು ಬಹಳಷ್ಟು ಬಂದವು ಕೆಲವೊಂದು ಡಾಕೆಟ್ ಗಳು ಸಿಗುತ್ತಿರಲಿಲ್ಲ.  ಇಡಿಎಂಎಸ್ ಇಮೇಜ್ ಸಹ ಇರುತ್ತಿರಲಿಲ್ಲ. ಪಾಲಿಸಿ ಸೇವೆಗಾಗಿ ಬಂದ ಪಾಲಿಸಿದಾರರಿಗೆ ಸಮರ್ಪಕ ಕಾರಣ ನೀಡಲು ಆಗುತ್ತಿರಲಿಲ್ಲ ಆದರೆ ಇವೆಲ್ಲ ಕೆಲ ದಿನಗಳು ಮಾತ್ರ. ನಂತರ ಇದು ತುಂಬಾ ಪ್ರಾಯೋಗಿಕವಾಗಿ ಅನುಕೂಲಕ್ಕೆ ಬಂತು. ಈಗಂತೂ ದೇಶದ ಯಾವ ಮೂಲೆಯಲ್ಲಿ ಪಾಲಿಸಿ ಸೇವೆ ನಡೆಯುತ್ತಿದ್ದರೂ ಬೇರೆ ಯಾವುದೇ ಶಾಖೆಯಲ್ಲಿ ಪ್ರೀಮಿಯಂ ಕಟ್ಟುವುದು ಸಾಲ ತೆಗೆದುಕೊಳ್ಳುವುದು ನಾಮಿನಿ ಬದಲಾಯಿಸುವುದು ಕೆಲವೊಂದು ಸೀಮಿತ ಪಾಲಿಸಿಗಳಿಗೆ ದಾವಾ ಮೊತ್ತವನ್ನು ಪಡೆಯುವುದು ಸಹ ಸಾಧ್ಯವಾಗುತ್ತಿದೆ. ಇದಿಷ್ಟು ಕಚೇರಿಯ ಒಳಗಿನ ವಿಷಯಗಳು. ಆದರೆ ಇದೇ ಅವಧಿಯಲ್ಲಿ ನಾನು ಮತ್ತೊಮ್ಮೆ ಹೈದರಾಬಾದ್ ನ ತರಬೇತಿಗೆ ಹೋಗಿ ಬಂದಿದ್ದು. ವಿಭಾಗಿಯ ಕಚೇರಿಯ ನಮ್ಮದೇ ಕಾರ್ಮಿಕ ಸಂಘದ ಮಂಜುಳಾ ಮತ್ತು ಇನ್ನೊಬ್ಬ  ಸ್ಟೆನೋಗ್ರಾಫರ್ ಮಂಜುಳಾ ಜೊತೆಗೆ ನನ್ನನ್ನು ತರಬೇತಿಗೆ ಹಾಕಿದ್ದರು. ಒಳ್ಳೆಯ ಕಂಪನಿ ತುಂಬಾ ಚೆನ್ನಾಗಿ ಇತ್ತು. ಈ ವೇಳೆಗೆ ತರಬೇತಿಯ ಅವಧಿಯನ್ನು ಮೂರು ದಿನಗಳಿಗೆ ಇಳಿಸಿದ್ದರು.  ಆಗ ಮೈಸೂರಿನಿಂದ ನೇರ ರೈಲು ಇರಲಿಲ್ಲ ಸಂಜೆ 6:00 ಗಂಟೆಗೆ ಬೆಂಗಳೂರಿನಿಂದ ಇದ್ದದ್ದು ಬೆಳಿಗ್ಗೆ ಹನ್ನೆರಡು ಗಂಟೆಗೆ ಹೊರಟು ಬೆಂಗಳೂರಿಗೆ ಬಸ್ ನಲ್ಲಿ ಹೋಗಿ ಅಲ್ಲಿ ರಾಮಕೃಷ್ಣ ಹೋಟೆಲ್ ನಲ್ಲಿ ಊಟ ಮಾಡಿ ಯಾವುದೋ ಒಂದು ಪುಟ್ಟ ಮಾಲ್ ನಲ್ಲಿ ಸುತ್ತಾಡಿ ನಂತರ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆವು. ಅಲ್ಲದೆ ಒಂದು ದಿನ ಮುಂಚೆ ಹೋಗುವ ಅನುಕೂಲ ಇರಲಿಲ್ಲ. ಬೆಳಗ್ಗೆ ಹೋದ ತಕ್ಷಣವೇ ತರಬೇತಿ ಆರಂಭವಾಗಿತ್ತು ಹಾಗೂ ನಾಲ್ಕನೆಯ ದಿನ ತರಬೇತಿ ಮುಗಿದ ತಕ್ಷಣವೇ ಮೈಸೂರಿನ ರೈಲು ಹತ್ತಬೇಕಿತ್ತು ಹಾಗಾಗಿ ಬಹಳಷ್ಟು ಜಾಗಗಳನ್ನು ನೋಡಲಿಲ್ಲ. ಬೆಳಿಗ್ಗೆ ಬೇಗ ಎದ್ದು ತರಬೇತಿ ಆರಂಭವಾಗುವ ಮೊದಲೇ ಬಿರ್ಲಾ ಮಂದಿರ ಅನ್ನು ನೋಡಿಕೊಂಡು ಬಂದಿದ್ದೆವು. ಇನ್ನುಳಿದ ಮೂರು ದಿನ ಬೇಗಂ ಪೇಟ್ ಚಾರ್ಮಿನಾರ್ ಇಲ್ಲೆಲ್ಲ ಸುತ್ತಿ ಒಂದಷ್ಟು ಶಾಪಿಂಗ್ ಮಾಡಿದ್ದು ಅಷ್ಟೇ. ಆ ಬಾರಿ ನಾನೇನು ಹೆಚ್ಚು ಖರೀದಿಸಲಿಲ್ಲ ಯಾಕೋ ಏನೋ ಬೇಡ ಎನಿಸಿತ್ತು ಆಗ. ಮತ್ತೊಂದು ಮುಖ್ಯವಾದ ಘಟನೆ ನಡೆದದ್ದು ಅಂದರೆ ಆಫೀಸಿನ ಪಕ್ಕದ ಬೀದಿಯಲ್ಲಿ ಒಂದು ಸಂಗೀತ ಶಾಲೆ ಆರಂಭವಾದ್ದು. ಒಂದು ದಿನ ಬೋರ್ಡ್ ನೋಡಿದ್ದೆ. ಅಲ್ಲಿ ಹೋಗಿ ದೇವರನಾಮ ಕಲಿಯುವ ಆಸೆ ನನಗೆ ಗೆಳತಿಯರಿಗೆ ಹೇಳಿದಾಗ ಒಂದು ಐದು ಜನ ತಾವೂ ಕಲಿಯಲು ಸಿದ್ದರಾದರು. ವಾರದಲ್ಲಿ ಎರಡು ದಿನ ಸಂಜೆ ಆಫೀಸ್ ಮುಗಿದ ನಂತರ ಅಲ್ಲಿ ಹೋಗಿ ಹೇಳಿಸಿಕೊಂಡು ಹೋಗುವುದು ಎಂದು ನಿರ್ಧಾರವಾಯಿತು. ಒಂದಷ್ಟು ಹಾಡುಗಳನ್ನು ಕಲಿತೂ ಆಯಿತು. ಅಷ್ಟರಲ್ಲಿ ನನ್ನ ಸಂಗೀತ ಕಲಿಯುವ ಚಿಕ್ಕಂದಿನ ಆಸೆಗೆ ಕೊಂಬು ಬಂದಿತ್ತು. ಸಂಗೀತ ಟೀಚರ್ ಅಂಬಿಕಾ ಅವರು ಈಗಲೂ ಕಲಿಯಬಹುದು ಎಂದು ಪ್ರೋತ್ಸಾಹ ಕೊಟ್ಟಿದ್ದರಿಂದ ಶಾಸ್ತ್ರೀಯ ಸಂಗೀತ ಕ್ಲಾಸಿಗೆ ನಾನು ಮತ್ತು ಗೆಳತಿ ವೈದೇಹಿ ಸೇರಿಕೊಂಡೆವು. ಅದೆಷ್ಟುಓ ದಿನ ಆದ್ಮೇಲೆ ಗೆಳತಿಯರು ಬಿಟ್ಟು ದೇವರನಾಮದ ಕ್ಲಾಸ್ ಕಥೆ ಮುಗಿಯಿತು. ಆದರೆ ನಾನು ಮತ್ತು ವೈದೇಹಿ ಶಾಸ್ತ್ರೀಯ ಸಂಗೀತದ ಕ್ಲಾಸ್ಗೆ ನಿಯಮಿತವಾಗಿ ಹೋಗುತ್ತಿದ್ದೆವು. ಈ ನಡುವೆ ಮೈಸೂರು ಸಿಲ್ಕ್ ಫ್ಯಾಕ್ಟರಿಯವರು ಹಾಗೂ ಚಾಮುಂಡಿ ಸಿಲ್ಕ್ ಫ್ಯಾಕ್ಟರಿ ಅವರು ನಮ್ಮ ಶಾಖೆಯ ಆವರಣದಲ್ಲಿ ಸ್ಟಾಲ್ ಹಾಕಿದ್ದು ಮತ್ತು ಕಂತಿನಲ್ಲಿ ಸೀರೆ ಕೊಳ್ಳಲು ಅನುವು ಮಾಡಿ ಕೊಟ್ಟಿದ್ದು ಒಂದು ವಿಶೇಷ ಸಂಗತಿ. ನಮ್ಮದೇ ಕಟ್ಟಡದಲ್ಲಿ ಕೆಳಗಡೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ವಲಯ ಕಛೇರಿ ಇತ್ತು ಹಾಗೂ ನಮ್ಮ ಮೇಲಿನ ಎರಡನೆಯ ಫ್ಲೋರ್ ನಲ್ಲಿ ರಾಜ್ಯ ವಿಮಾ ಘಟಕ ಹಾಗೂ ಹಿಂದುಳಿದ ವರ್ಗದವರ ಕಚೇರಿ ಇತ್ತು ಎಲ್ಲಾ ಸಿಬ್ಬಂದಿಗಳಿಗೂ ಇದರಿಂದ ಅನುಕೂಲವಾಯಿತು. ಆ ಸಂಸ್ಥೆಗಳವರ ಸೇಲ್ ಸಹ ಚೆನ್ನಾಗಿ ಆಯಿತು . ಹಾಗೆಲ್ಲ ಕರೆದು ಕರೆದು ಕಂತಿನಲ್ಲಿ ಕೊಟ್ಟು ನಮ್ಮ ಕಚೇರಿಗೆ ಬಂದು ಸ್ಟಾಲ್ ಹಾಕುತ್ತಿದ್ದ ಮೈಸೂರು ಸಿಲ್ಕ್ ನ ಉತ್ಪಾದನೆ ಈಗ ಬಾರಿ ಇಳಿಮುಖವಾಗಿದ್ದು ಕೊಳ್ಳುತ್ತೇನೆ ಎಂದರೂ ಸಹ ಸೀರೆಗಳು ಸಿಗುತ್ತಿಲ್ಲ .ಎಂತಹ ವಿಪರ್ಯಾಸ ನೋಡಿ. ಅದರ ಬೆಲೆಗಳು ಮುಗಿಲೆತ್ತರ ಆದರೂ ಕೊಳ್ಳಲು ಜನ ಮುಗಿ ಬೀಳುತ್ತಾರೆ. ಆದರೆ ಸಮರ್ಪಕವಾದ ವ್ಯವಸ್ಥೆಯೇ ಇಲ್ಲ.     ಅಷ್ಟರಲ್ಲಿ ಮತ್ತೊಂದು ಕುತೂಹಲಕಾರಿ ಕೆಲಸ ನನ್ನ ಪಾಲಿಗೆ. ಏನದು? ಮುಂದಿನ ವಾರ ತಿಳಿದುಕೊಳ್ಳೋಣ.       ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ̲38 ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ಪಾಲಿಸಿ ವಿಭಾಗದಲ್ಲಿ ಮತ್ತಷ್ಟು ಮೈಸೂರಿನಸಿಲ್ಕ್‌ ಫ್ಯಾಕ್ಟರಿ ಹೀಗೆ ವಿವಿಧ ರೀತಿಯ ತಪ್ಪುಗಳ ಪಟ್ಟಿಯನ್ನು ಸರಿ ಮಾಡುತ್ತಾ ಹೋಗುವುದು ತುಂಬಾ ಆಸಕ್ತಿದಾಯಕವಾದ ವಿಷಯವಾಗಿತ್ತು. ನಗದು ಕಟ್ಟುವ ಪಾಲಿಸಿಗಳಿಗೆ ಆಗ ತಾನೇ ಎಲ್ಲಿ ಬೇಕಾದರೂ ಕಟ್ಟಬಹುದು ಎನ್ನುವ ವ್ಯವಸ್ಥೆ ಆರಂಭವಾಗಿತ್ತು. ಆದರೆ ಮೊದ ಮೊದಲು ಸಮಸ್ಯೆಗಳು ಎದುರಾಗಿದ್ದವು. ಬೇರೆ ಕಡೆ ಕಟ್ಟಿದ್ದು ಅಪ್ಡೇಟ್ ಆಗದೆ ಎರಡೆರಡು ಬಾರಿ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಕೆಲವೊಮ್ಮೆ ಕ್ಲೇಮ್ಸ್ ನಿಂದ ಮುರಿದುಕೊಂಡಿದ್ದರೂ ಸಹ ಅದು ಮಾನ್ಯ ಆಗದೆ ಮತ್ತೆ ಮತ್ತೆ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಈ ಎಲ್ಲವೂ ಸೆಂಟ್ರಲ್ ಆಫೀಸಿನಲ್ಲಿ ತಿಂಗಳಿಗೆ ಒಮ್ಮೆ ಸರಿಯಾಗಿ ಈ ರೀತಿ ತಪ್ಪುಗಳು ಪಟ್ಟಿ ಆಗಿ ಬರುತ್ತಿದ್ದವು. ಅವುಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ನಿಜವಾಗಿ ಎರಡು ಬಾರಿ ಕಟ್ಟಿದ್ದಾರೆ ಎಂದರೆ ಆ ವ್ಯಕ್ತಿಗಳಿಗೆ ಅದನ್ನು ವಾಪಸ್ಸು ಮಾಡುವ ಕೆಲಸ ಈ ಕ್ಯಾಶ್ ಎರರ್ ಸರಿ ಮಾಡುವ ಕೆಲಸ. ಅದು ಸಹ ಮೊದಮೊದಲು ತಿಂಗಳಿಗೆ 30 40 ಆ ರೀತಿ ಬರುತ್ತಿತ್ತು. ಈಗ ಎಲ್ಲಾ ಕಡೆಯೂ ಸರಿಯಾಗಿ ಆಗಿದೆ. ಗೂಗಲ್ ಪೇ ಮುಂತಾದವುಗಳಿಂದ ಕಟ್ಟಿದ್ದು ಸಹ ತಕ್ಷಣವೇ ಸರಿಯಾಗಿ ತೋರಿಸುತ್ತದೆ. ಅಂದರೆ ತಂತ್ರಜ್ಞಾನ ಎಷ್ಟು ಚೆನ್ನಾಗಿ ಈಗ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಕಾಣಬಹುದು. ಮೊದಲೇ ಹೇಳಿದಂತೆ ಸಾಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿ ಪಾಲಿಸಿದಾರರಿಂದ ಪಡೆದ ಬಾಂಡುಗಳು ಅವರ ಅರ್ಜಿಗಳು ಸಂಗ್ರಹ ಮಾಡಿ ಇಡುತ್ತೇವೆ. ಲೋನ್ ಡಾಕೆಟ್ ಎಂದು ಇದಕ್ಕೆ ಹೆಸರು. ಸಾಲ ತೆಗೆದುಕೊಂಡಾಗಿನಿಂದ ಹಿಡಿದು ಸಾಲ ವಾಪಸ್ ಆಗುವವರೆಗೆ ಇವುಗಳನ್ನು ಜೋಪಾನ ಮಾಡಬೇಕಾಗುತ್ತದೆ.  ಅವರು ನಗದು ತಂದು ಕಟ್ಟಿ ಸಾಲ ತೀರಿಸಿದರೂ ಸಹ ಬಾಂಡುಗಳನ್ನು ಮತ್ತೆ ವಾಪಸ್ ಮಾಡಬೇಕಾಗುತ್ತದೆ. ಹಾಗಾಗಿ ಪಾಲಿಸಿಗಳು ಬೇರೆ ಊರಿನಿಂದ ವರ್ಗವಾಗಿ ಬಂದರು ಅಲ್ಲಿಂದ ಲೋನ್ ಡಾಕೆಟ್ ಗಳನ್ನು ತರಿಸಬೇಕಾಗುತ್ತದೆ. ನಮ್ಮಿಂದ ಹೋಗುವ ಪಾಲಿಸಿಗಳ ಫೈಲ್ ಜೊತೆಯಲ್ಲೂ ಸಾಲದ ಡಾಕೆಟ್ಗಳನ್ನು ಕಳಿಸಬೇಕಾಗುತ್ತದೆ. ಹಾಗಾಗಿ ಇವುಗಳು ಬೇಕಾದ ಸಮಯಕ್ಕೆ ಸರಿಯಾಗಿ ಸಿಗಬೇಕಾದದ್ದು ಅತ್ಯವಶ್ಯ. ಆದರೆ ಕೆಲವೊಮ್ಮೆ ಅವುಗಳು ನಮಗೆ ಬೇಕಾದಾಗ ದೊರೆಯದೆ ಹೋಗುತ್ತಿದ್ದುದು ಒಂದು ಸಮಸ್ಯೆಯಾಗಿತ್ತು. ಸಕಲೇಶಪುರದಲ್ಲಿ ಈ ರೀತಿ ಸಾಲದ ವಿಭಾಗ ಕಂಪ್ಯೂಟರೀಕರಣ ಆದಾಗ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದೆಲ್ಲವನ್ನು ಕಂಪ್ಯೂಟರ್ ಮಾಹಿತಿಗೆ ತುಂಬಿದ ವಿಷಯ ಹೇಳಿದ್ದೆ .ಆ ರೀತಿ ಕೆಲವು ಶಾಖೆಗಳಲ್ಲಿ ಸರಿಯಾಗಿ ಮಾಡದೆ ಹೋದಾಗ ನಮಗೆ ಆ ಪಾಲಿಸಿಗಳು ವರ್ಗವಾಗಿ ಬಂದಾಗ ತೊಂದರೆ ಉಂಟಾಗುತ್ತಿತ್ತು. ಇವುಗಳನ್ನೆಲ್ಲ ನಿವಾರಿಸಲು ಸರಿಯಾದ ಮಾರ್ಗವೆಂದರೆ ಇತ್ತೀಚಿನ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಲೋನ್ ಡಾಕೆಟ್ ಗಳು ಇದೆಯಾ ಎಂದು ಪರಿಶೀಲಿಸುವುದು.  ಈ ಕೆಲಸಕ್ಕೆ “ಲೋನ್ ಡಾಕೆಟ್ ಪ್ಯೂರಿಫಿಕೇಶನ್” ಎಂದು ಹೇಳುತ್ತಿದ್ದರು .ನಾನು ಸಾಲದ ವಿಭಾಗದಲ್ಲಿ ಇದ್ದಾಗ ಮಾಮೂಲಿಯ ಕೆಲಸದ ಜೊತೆ ದಿನ ಸ್ವಲ್ಪ ಸ್ವಲ್ಪ ಮಾಡಿ ಈ ರೀತಿ ಸಾಲದ ಪ್ಯೂರಿಫಿಕೇಶನ್ ಕೆಲಸ ಮಾಡಿದ್ದು ಸಹ ಒಂದು ರೀತಿಯ ಹೆಮ್ಮೆಯ ವಿಷಯವೇ. ನಮ್ಮಲ್ಲಿ ಷೆಡ್ಯೂಲಿನಲ್ಲಿ ಇಲ್ಲದೆ ಇರುವ ಡಾಕೆಟ್ಗಳನ್ನು ಬೇರೆ ಶಾಖೆಗಳಿಗೆ ಕಳಿಸುವುದು ಈಗಾಗಲೇ ಪರಿಪಕ್ವ ಅಥವಾ ಸಾವಿನ ದಾವಾ ಗಳು ಇದ್ಯರ್ಥ ಆಗಿದ್ದ ಪಾಲಿಸಗಳ ಸಾಲದ ಡಾಕೆಟ್ಳನ್ನು ನಾಶ ಮಾಡುವುದು ಇವೆಲ್ಲವುಗಳಿಂದ ಜಾಗ ಸಹ ಹೆಚ್ಚು ದೊರೆಯುವಂತೆ ಆಯಿತು. ಹೆಚ್ಚು ಹುಡುಕಾಟ ಮಾಡುವ ಕೆಲಸವು ತಪ್ಪಿತು. ಇಷ್ಟೆಲ್ಲ ಆಗುವ ವೇಳೆಗೆ ಮತ್ತೆ ಶಾಖಾಧಿಕಾರಿಗಳ ಬದಲಾವಣೆ. ಈ ಬಾರಿ ಮಹಿಳಾ ಶಾಖಾಧಿಕಾರಿಗಳು. ಅನುರಾಧ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ನಮಗೆಲ್ಲ ಅದು ಸಂತಸದ ಹಾಗೂ ಹೆಮ್ಮೆಯ ವಿಷಯವೇ ಆಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರು ದಿನಾಲು ಉಟ್ಟುಕೊಂಡು ಬರುತ್ತಿದ್ದ ಮೈಸೂರು ಸಿಲ್ಕ್ ಸೀರೆ ನಮ್ಮೆಲ್ಲರ ಗಮನ ಸೆಳೆದಿತ್ತು. ಒಂದು ರೀತಿ ನಮಗೆಲ್ಲ ಸ್ಪೂರ್ತಿಯೇ ಆದ ಅವರಿಂದ ನಾವು ಸಹ ಹೆಚ್ಚು ಮೈಸೂರ್ ಸಿಲ್ಕ್ ಸೀರೆಗಳನ್ನು ಕೊಳ್ಳಲು ಆರಂಭಿಸಿದ್ದೆವು. ಅದಕ್ಕೆ ಮತ್ತೊಂದು ಕಾರಣ ಎಂದರೆ ಮೈಸೂರು ಸಿಲ್ಕ್ ಫ್ಯಾಕ್ಟರಿ ಅವರು ತಾವೇ ಶಾಖೆಗೆ ಬಂದು ಕಂತಿನ ರೂಪದಲ್ಲಿ ಸೀರೆಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದು. ಒಂದು ಕಂತು ನಗದು ಕೊಟ್ಟರೆ ಮಿಕ್ಕ ಕಂತುಗಳನ್ನು  9 ಚೆಕ್ ಗಳಾಗಿ ಮುಂಚೆಯೇ ಕೊಟ್ಟರೆ ಆಯಿತು .ಪ್ರತಿ ತಿಂಗಳು ಬ್ಯಾಂಕ್ನಿಂದ ಅದು ಡೆಬಿಟ್ ಆಗಿ ಹೋಗುತ್ತಿತ್ತು .ಒಂದು ರೀತಿ ಒಳ್ಳೆಯ ಅನುಕೂಲವೇ ಆಗಿ ಎಲ್ಲರೂ ಆಗ ಮೈಸೂರು ಸಿಲ್ಕ್ ಖರೀದಿ ಕಡೆ ಮುಖ ತಿರುಗಿಸುವ ಹಾಗೆ ಮಾಡಿತ್ತು. ಶಾಖೆಯಲ್ಲಿ ವಿಮಾ ಉತ್ಸವ ಶಾಖೆ ೫ಕ್ಕೆ ಬಂದಮೇಲೆ ಪ್ರತಿ ಸೆಪ್ಟೆಂಬರ್ ಒಂದರಂದು ನಡೆಸುವ ಜೀವ ವಿಮಾ ನಿಗಮದ ವಾರ್ಷಿಕೋತ್ಸವ ಸಮಾರಂಭಗಳಿಗೆ ಒಂದು ಹೊಸ ಕಳೆ ಬಂದಿತ್ತು. ಇಲ್ಲಿ ಬಹಳ ವಿಜೃಂಭಣೆಯಿಂದ ಅದನ್ನು ಆಚರಿಸುವ ಪದ್ಧತಿ ಅಥವಾ ಎಲ್ಲಾ ಶಾಖೆಗಳಲ್ಲೂ ಆಗ ಆ ರೀತಿ ಆಚರಿಸುವ ಅಭ್ಯಾಸ ಆರಂಭವಾಗಿತ್ತು ಅನ್ನಿಸುತ್ತೆ.  ಬೇರೆ ಬೇರೆ ಶಾಲೆಯ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು, ಸಿಬ್ಬಂದಿ ವರ್ಗದವರಿಗೆ ಸ್ಪರ್ಧೆಗಳು ಹಾಗೂ ಪ್ರತಿನಿಧಿಗಳನ್ನು ಒಳಗೊಂಡು ತುಂಬಾ ಸಂಭ್ರಮದಿಂದ ಸೆಪ್ಟೆಂಬರ್ ಒಂದರಿಂದ ಏಳರವರೆಗಿನ ವಿಮಾ ಸಪ್ತಾಹವನ್ನು ಸಡಗರದಿಂದ ಆಚರಿಸಲಾಗುತ್ತಿತ್ತು. ಅದಕ್ಕೆ ಎಂಟು ಹತ್ತು ದಿನ ಮುಂಚೆ ಬೇರೆ ಬೇರೆ ವಿಭಾಗಗಳಿಗೆ ಕಮಿಟಿಗಳನ್ನು ರಚಿಸಿ ಅವರಿಗೆ ಕೆಲಸಗಳನ್ನು ವಹಿಸಿಕೊಡಲಾಗುತ್ತಿತ್ತು . ಸೆಪ್ಟೆಂಬರ್ ಒಂದರ ಬೆಳಿಗ್ಗೆ ದೀಪ ಹಚ್ಚಲು ರಂಗೋಲಿ ಅಲಂಕಾರದಿಂದ ಹಿಡಿದು ಹೆಂಗಳೆಯರು ಒಂದೊಂದು ದಿನ ಒಂದೊಂದು ಬಣ್ಣದ ಥೀಮ್ ನಲ್ಲಿ ಅಲಂಕರಿಸಿಕೊಂಡು ಬಂದು ಇಡೀ ಶಾಖೆಯೇ ಬಣ್ಣ ಬಣ್ಣವಾಗಿ ತೋರುತ್ತಿತ್ತು. ಸಿಬ್ಬಂದಿಗಳಿಗೆ ಸ್ಪರ್ಧೆಗಳನ್ನು ತಮಾಷೆಯಾಗಿ ಇರುವ ಹಾಗೆ ಇಡುತ್ತಿದ್ದಿದರಿಂದ ಆ ಸ್ಪರ್ಧೆಗಳು ನಡೆಯುವಷ್ಟು ಹೊತ್ತು ಎಲ್ಲರಿಗೂ ಮನರಂಜನೆ. ಗೆಲುವು ಸೋಲು ಮುಖ್ಯವಲ್ಲ, ಎಲ್ಲರೂ ಭಾಗವಹಿಸಿ ಆ ಕ್ಷಣಗಳನ್ನು ಸ್ಮರಣೀಯ ಮಾಡಿಕೊಳ್ಳುತ್ತಿದ್ದು ವಿಶೇಷ. ಹಾಗೆಯೇ ಹಿಂದಿ ದಿನದ ಆಚರಣೆಯು ಸಹ. ಇಲ್ಲಿ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರುತಿರಲಿಲ್ಲ ಬೇರೆ ಶಾಖೆಗಳಲ್ಲಿ ಇದ್ದಂತೆ. ಆದರೆ ಒಬ್ಬ ಮುಖ್ಯ ಅತಿಥಿಯನ್ನು ಕರೆದು ಅವರಿಂದ ಹಿಂದಿ ಬಗ್ಗೆ ಮಾತನಾಡಿಸಿ ಅವರಿಗೊಂದು ಉಡುಗೊರೆ ಕೊಟ್ಟು ಕಳಿಸುವುದು ಹಾಗೂ ಇಡೀ ಶಾಖೆಯ ಸಿಬ್ಬಂದಿಗೆ ಸಂಜೆ ಒಂದು ಹೈಟೀ. ಸಾಮಾನ್ಯ ಸೆಪ್ಟೆಂಬರ್ 2ನೆಯ ವಾರದಲ್ಲಿ ಈ ಹಿಂದಿ ದಿನಾಚರಣೆಯನ್ನು ನಡೆಸುತ್ತಿದ್ದು. ನಾನು  ಹಿಂದಿ ಕಮಿಟಿಯ ಸದಸ್ಯಳೂ ಆಗಿದ್ದರಿಂದ ಈ ದಿನಾಚರಣೆಯ ಕೆಲಸಗಳಲ್ಲಿ  ತುಂಬಾ ಖುಷಿಯಿಂದ ಪಾಲ್ಗೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಿಂದಿ ದಿನದ ಆಚರಣೆಯ ನಿರೂಪಣೆಯನ್ನು ನಾನೇ ನಿರ್ವಹಿಸುತ್ತಿದ್ದೆ.ಒಮ್ಮೆ ಅನುರಾಧ ಅವರ ನೇತೃತ್ವದಲ್ಲಿ ವಿಮಾ ಸಪ್ತಾಹದಲ್ಲಿ ಗಾಡಿ ತೆಗೆದುಕೊಂಡು ಜಾಥಾ ಹೋಗಿದ್ದ ನೆನಪು ಸಹ ಇದೆ. ವಿಮಾ ಸಪ್ತಾಹದ ಒಂದು ನೋಟ ಅಲ್ಲದೆ ವಿಭಾಗೀಯ ಮಟ್ಟದಲ್ಲಿ ಸಿಬ್ಬಂದಿ ವರ್ಗದವರಿಗಾಗಿ ಹಿಂದಿ‌ ಪ್ರಬಂಧ ಮತ್ತು ಪತ್ರಲೇಖನ ಸ್ಪರ್ಧೆಗಳು ನಡೆಸಲು ಆರಂಭಿಸಿದರು. ಮುಂಚೆಯೇ ನೋಂದಾಯಿಸಿಕೊಳ್ಳ ಬೇಕಿತ್ತು. ಸ್ಪರ್ಧೆಗೆ ಐದು ನಿಮಿಷ ಮುಂಚೆ ಇ-ಮೇಲ್ ಮುಖಾಂತರ ವಿಷಯಗಳು ಬರುತ್ತಿತ್ತು ಒಂದು ದಿನ ಪ್ರಬಂಧ ಸ್ಪರ್ಧೆ ಮತ್ತೊಂದು ದಿನ ಕಚೇರಿ ಕೆಲಸಕ್ಕೆ ಸಂಬಂಧ ಪಟ್ಟಂತೆ ನೋಟ್ ಮತ್ತು ಪತ್ರಲೇಖನಗಳು ಹಾಗೂ ವಿಮಾ ಪಾರಿಭಾಷಿಕ ಶಬ್ದಗಳ ಬಗ್ಗೆ ಕ್ವಿಜ್ ಇಷ್ಟು ಇರುತ್ತಿತ್ತು . ಸಾಮಾನ್ಯ ಪ್ರತಿ ವರ್ಷ ನಾನು ಈ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಮೊದಮೊದಲು ಎರಡರಲ್ಲೂ ಬಹುಮಾನ ಸಿಗುತ್ತಿತ್ತು. ನಂತರ ಯಾವುದಾದರೂ ಒಂದರಲ್ಲಿ ಮಾತ್ರ ಬಹುಮಾನ ಎಂದು ನಿಗದಿಪಡಿಸಿದರು. ಅಂತೂ ಭಾಗವಹಿಸಿದಾಗೆಲ್ಲ ಒಂದೊಂದು ಬಹುಮಾನ ಗೆದ್ದ ಖುಷಿ ನನ್ನದು. ಇದಕ್ಕೆ ನಗದು ಬಹುಮಾನ ಅದು ಸಹ ಒಳ್ಳೆಯ ಮೊತ್ತವೇ. ಮೊದಲ ಬಹುಮಾನ ೧೫00 ಎರಡನೆಯ ಬಹುಮಾನ ೧೨೦೦ ಹಾಗೂ ತೃತೀಯ ಬಹುಮಾನ  ರೂ.‌೧೦೦೦. ಬರುತ್ತಿದ್ದ ಹಣದಲ್ಲಿ ಶಾಖೆಗೆ ಸಿಹಿ ಕೊಡಿಸಲು ಅರ್ಧ ಮೊತ್ತ ಖರ್ಚಾಗುತ್ತಿದ್ದು ಅದು ಬೇರೆ ವಿಚಾರ. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಎರಡನೆಯ ಬಾರಿ ವಾಹನ ಸಾಲ ತೆಗೆದುಕೊಂಡು ನನ್ನ ಪತಿಗೆ ಹೀರೋ ಹೋಂಡಾ ಗಾಡಿ ಕೊಡಿಸಿದ್ದು. ಸಾಲವಿಲ್ಲದೆ ನನ್ನ ಮೊಟ್ಟ ಮೊದಲ ಹೊಸ ದ್ವಿಚಕ್ರ ವಾಹನ ಸ್ಟ್ರೀಕ್ ಕೊಂಡಿದ್ದು ಸಹ ಅದಾಗಿ ಒಂದೆರಡು ತಿಂಗಳಿಗೇ… ಈ ವೇಳೆಗೆ ನನ್ನ ತಂಗಿ ಛಾಯಾಳಿಗೆ ಆಡಳಿತ ಅಧಿಕಾರಿ ಪದೋನ್ನತಿ ಸಿಕ್ಕಿ ದೂರದ ಧಾರವಾಡ ವಿಭಾಗದ ಹಾವೇರಿ ಶಾಖೆಗೆ ಹಾಕಿದ್ದರು. ಈಗಾಗಲೇ ಒಮ್ಮೆ ನಿರಾಕರಿಸಿದರಿಂದ ಈ ಪದೋನ್ನತಿ ಮತ್ತೆ ನಿರಾಕರಿಸುವ ಹಾಗೆ ಇರಲಿಲ್ಲ .ಹಾಗಾಗಿ ಅವಳು ಅದನ್ನು ಒಪ್ಪಿಕೊಂಡು ಹೋದಳು ಮತ್ತೆ ಕೆಲವೇ ದಿನಗಳಲ್ಲಿ ಅವಳ ಪತಿ ಪ್ರಸನ್ನ ಅವರಿಗೂ ಅದೇ ಶಾಖೆಗೆ ವರ್ಗ ದೊರೆಯಿತು. ನಾವು ಒಮ್ಮೆ ಹಾವೇರಿಗೆ ಹೋಗಿ ಅಲ್ಲಿ ಸುತ್ತಮುತ್ತಲ ಜಾಗಗಳನ್ನೆಲ್ಲ ನೋಡಿಕೊಂಡು ಒಂದೆರಡು ದಿನ ಇದ್ದು ಬಂದೆವು. ಅವಳಿದ್ದ ಹಾವೇರಿ ಶಾಖೆ ತುಂಬಾ ದೊಡ್ಡದು ಅಲ್ಲಿ ಸಾಲ ತೆಗೆದುಕೊಳ್ಳಲು ಬಂದವರಿಗೆ ಟೋಕನ್ ಕೊಟ್ಟು ಪ್ರತಿದಿನವೂ ನಗದು ಸಾಲ ವಿತರಿಸಲಾಗುತ್ತಿತ್ತು ಈ ರೀತಿ ವಿಶೇಷವಾಗಿ ಟೋಕನ್ ಮೂಲಕ ಸಾಲ ಕೊಡುವ ಶಾಖೆಗಳಲ್ಲಿ ಕರ್ನಾಟಕದಲ್ಲಿ ಅದೊಂದೇ ಅಂತೆ ಆಗ ಇದ್ದದ್ದು. ಈಗಂತೂ ನಗದು ಸಾಲ ಕೊಡುವ ಪದ್ಧತಿಯೇ ಇಲ್ಲ ಎಲ್ಲವೂ ನೆಫ್ಟ್ ಮೂಲಕ ಬ್ಯಾಂಕಿಗೆ ಹಾಕುವ ವ್ಯವಸ್ಥೆ. ಮತ್ತೊಂದು ಖುಷಿ ಇರುವ ಬೆಳವಣಿಗೆ ಎಂದರೆ ನಾವು ಮನೆಗೆ ಹೋಗುವ ದಾರಿಯಲ್ಲೇ ಕಚೇರಿಯ ಪಕ್ಕದ್ದಲ್ಲ ಪಕ್ಕದ ರಸ್ತೆಯಲ್ಲಿ ಜನನಿ ಟೆಕ್ಸ್ಟೈಲ್ ಎಂದು ಮನೆಯಲ್ಲಿಯೇ ಒಂದು ಅಂಗಡಿ ಆರಂಭವಾಗಿದ್ದು ನಮಗೆಲ್ಲ ಆಹ್ವಾನಪತ್ರಿಕೆ ಕೊಟ್ಟು ಹೋದರು. ಮುಖ್ಯ ಆಕರ್ಷಣೆ ಎಂದರೆ ಕಂತಿನಲ್ಲಿ ಬಟ್ಟೆ ತೆಗೆದುಕೊಳ್ಳುವ ಅವಕಾಶ. ಹೊಸ ಸ್ಟಾಕ್ ಬಂದಾಗ ಯಾರಿಗಾದರೂ ಒಬ್ಬರಿಗೆ ಫೋನ್ ಮಾಡಿ ಹೇಳುವರು. ಸಂಜೆ ಮನೆಗೆ ಹೋಗುತ್ತಾ ನೋಡಿಕೊಂಡು ತೆಗೆದುಕೊಂಡು ಹೋಗುವುದು. ಅದರ ಕಂತು ಕಟ್ಟಲು ಹೋದಾಗ ಮತ್ತೆ ತೆಗೆದುಕೊಳ್ಳುವುದು. ಅಂತೂ ಅವರು ಆ ಮನೆ ಬಿಟ್ಟು ಬೇರೆ ಕಡೆ ಹೋಗುವ ತನಕ ನಮ್ಮ ಅಕೌಂಟ್ ಅವರಲ್ಲಿ ಇದ್ದೇ ಇತ್ತು ಅಂದರೆ ನಮ್ಮ ಬಟ್ಟೆಯ ವ್ಯಾಮೋಹ ಅರ್ಥವಾಗಬಹುದು. ಸೀರೆ ಚೂಡಿದಾರ್ ಎಲ್ಲವೂ ಅವರ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ೧೦೦೦೦ದ ರೇಷ್ಮೆ ಸೀರೆಯಿಂದ ಹಿಡಿದು  300 ರೂಗಳ ಸಾಮಾನ್ಯ ಸೀರೆಯವರೆಗೂ ಅಲ್ಲಿ ದೊರೆಯುತ್ತಿತ್ತು ಮತ್ತು ನಾವೆಲ್ಲ ಅಲ್ಲಿಗೆ ಖಾಯಂ ಗ್ರಾಹಕರು. ಹಳೆಯ ಶಾಖೆಯ ಪಕ್ಕ ಇದ್ದ ಕನಕಗಿರಿ ಟೆಕ್ಸ್ ಟೈಲ್ಸ್ ನಲ್ಲಿ ಆ ಶಾಖೆಯಲ್ಲಿದ್ದಾಗ ತುಂಬಾ ಕೊಳ್ಳುತ್ತಿದ್ದೆವು. ಈ ಕಟ್ಟಡಕ್ಕೆ ಬಂದಮೇಲೆ ಅಲ್ಲಿ ಹೋಗಿ ಕೊಳ್ಳುವುದು ಕಡಿಮೆಯಾಯಿತು. ಆದರೆ ಈ ಹೊಸ ಅಂಗಡಿ ಆ ಕೊರತೆ ನಿವಾರಿಸಿತ್ತು. (ಮುಂದುವರೆಯುವುದು) ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಧಾರಾವಾಹಿ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ ನೋಟ -37 ಜನವರಿ ೨೦೦೫ ರಿಂದ ಏಪ್ರಿಲ್ ೨೦೨೬ ರಲ್ಲಿ ನಾನು ನಿವೃತ್ತಿ ಹೊಂದುವ ತನಕ ಕೆಲಸ ಮಾಡಿದ್ದು ಈ ಶಾಖೆ ಐದರಲ್ಲಿ ವೃತ್ತಿ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆದದ್ದು ಇಲ್ಲೇ. ಯಾವುದನ್ನು ಬರೆಯುವುದು ಯಾವುದನ್ನು ಬಿಡುವುದು ಎಂದೆ ತೋಚದಷ್ಟು ಸುದೀರ್ಘ ನೆನಪಿನ ಯಾನ ಇದು. ಒಂದು ಬಾರಿ ಲೂನಾದಿಂದ ಬಿದ್ದು ಅಪಘಾತವಾಗಿ ಒಂದು ರೀತಿ ಬಿಸಿ ಹಾಲು ಕಂಡ ಬೆಕ್ಕಿನಂತೆ ಆಗಿಬಿಟ್ಟಿದ್ದೆ. ಆದರೆ ರವೀಶ್ ಅವರು ಸೇಲ್ಸ್ ಮೇಲೆ ಬೇರೆ ಊರುಗಳಿಗೆ ಹೋದಾಗ ಆಟೋದಲ್ಲಿ ಹೋಗಬೇಕಿತ್ತು. ಗೆಳತಿ ಶೈಲಾ ಒಮ್ಮೊಮ್ಮೆ ಅವಳ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದರೂ ಸದಾ  ತೊಂದರೆ ಕೊಡುವುದು ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಮತ್ತೆ ಒಂದು ಸೆಕೆಂಡ್ ಹ್ಯಾಂಡ್ ವಾಹನ ಕೊಂಡು ಧೈರ್ಯವಾಗಿ ಆಫೀಸಿಗೆ ಹೋಗಲು ಆರಂಭಿಸಿದೆ. ನಾನು ಶಾಖೆ ಎರಡರಲ್ಲಿ ಇದ್ದಾಗಲೇ ನನ್ನ ತಂಗಿ ವೈಶಾಲಿ ಅವರು ರಾಮಕೃಷ್ಣನಗರದ ಮನೆ ಕೊಂಡುಕೊಂಡು ಅಲ್ಲಿಗೆ ಬಂದಿದ್ದರು. ಅವರ ಜೊತೆಯೇ ನನ್ನ ತಂದೆ ಇದ್ದದ್ದು .ಹಾಗಾಗಿ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಮನೆಗೆ ಹೋಗುವಾಗ ಹೋಗಿ ಅವರನ್ನು ಭೇಟಿಯಾಗಲು ನನಗೆ ವಾಹನವಿದ್ದುದು ತುಂಬಾ ಅನುಕೂಲಕರವಾಗಿತ್ತು. ಹೊಸ ವ್ಯವಹಾರ ವಿಭಾಗದಲ್ಲಿ ಇದ್ದರಿಂದ ಆ ವರ್ಷ ಮಾರ್ಚ್ ಕೊನೆಯ ವರ್ಷಾಂತ್ಯದ ಕೆಲಸಗಳನ್ನು ಸಮರ್ಪಕವಾಗಿ ಮುಗಿಸಿ ವಿಭಾಗೀಯ ಕಚೇರಿಗೆ ಹೋಗಿ ಸಲ್ಲಿಸಿ ಬಂದಿದ್ದಾಯಿತು. ಈ ಶಾಖೆಯಲ್ಲಿ ಎಲ್ಲರೂ ಪಕ್ಕದಲ್ಲಿ ಇದ್ದ ಜಯಲಕ್ಷ್ಮಿ ಹೋಟೆಲಿಗೆ ಕಾಫಿಗೆ ಹೋಗುತ್ತಿದ್ದದ್ದು ನಾನು ಅವರೊಂದಿಗೆ ಹೋಗಿ ಬರುತ್ತಿದ್ದೆ. ಅಲ್ಲಿ ಎದುರುಗಡೆ ಮಲ್ಲಿಗೆ ಕೆಫೆ ಎಂಬ ಹೋಟೆಲ್ ಇತ್ತು .ಅಲ್ಲಿ ಬಿಸಿಬೇಳೆ ಬಾತ್ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಊಟಕ್ಕೆ ಮನೆಗೆ ಹೋಗದೆ ಅಲ್ಲಿ ನಾನು ಗೆಳತಿಯರು ಒಂದೊಂದು ಬಿಸಿಬೇಳೆ ಬಾತ್ ತೆಗೆದುಕೊಂಡು ಮೊಸರನ್ನು ಇಬ್ಬರು ಮೂವರು ಶೇರ್ ಮಾಡುತ್ತಿದ್ದೆವು. ಆ ಹೋಟೆಲ್ ನನ್ನ ಪಿಯುಸಿ ಸಹಪಾಠಿ ಶ್ರೀನಿವಾಸ್ ಅವರದಂತೆ. ಅದು ಆಗಲೇ ಕ್ಲೋಸ್ ಆಗಿತ್ತು .ಆನಂತರ ನಮ್ಮ ಪಿಯುಸಿ ಸಹಪಾಠಿಗಳು ವಾಟ್ಸಾಪ್ ಗುಂಪು ಮಾಡಿಕೊಂಡಾಗ ಆ ವಿಷಯ ತಿಳಿದು ಬಂತು. ನಾನು ರೇಗಿಸುತ್ತಿದ್ದೆ ನಿನ್ನದು ಎಂದು ತಿಳಿದಿದ್ದರೆ ದಿನ ಅಲ್ಲಿಗೆ  ಊಟಕ್ಕೆ ಬಂದುಬಿಡಬಹುದಿತ್ತು ಅಂತ.ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಅಲ್ಲೇ ಸರ್ಕಲ್ ಪಕ್ಕದಲ್ಲಿ ಇದ್ದ ಕನಕಗಿರಿ ಸೀರೆಯ ಅಂಗಡಿ. ಅಲ್ಲಿಗೆ ಹೊಸ ಸ್ಟಾಕ್ ಬಂದಾಗಲೆಲ್ಲ ಹೋಗಿ ನೋಡುತ್ತಿದ್ದವು ನೋಡಿದ ಮೇಲೆ ತೆಗೆದುಕೊಳ್ಳದಿದ್ದರೆ ಆಗುತ್ತದೆಯೇ… ಹಾಗಾಗಿ ಬಹಳಷ್ಟು ಸೀರೆಗಳನ್ನು ಆ ಅಂಗಡಿಯಲ್ಲಿ ಕೊಂಡಿದ್ದೆವು. ಈ ಮಧ್ಯೆ ಮುಂದಿನ ಜನವರಿಯಲ್ಲಿ ಶಾಖೆಯ ಕಟ್ಟಡವನ್ನು ಖಾಲಿ ಮಾಡಿ ಅದೇ ರಸ್ತೆಯ ಇನ್ನೊಂದು ತುದಿಯಲ್ಲಿ ಇದ್ದ ಎಸ್ ಬಿ ಎಂ ಬ್ಯಾಂಕಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಅಲ್ಲಿ ಎರಡನೆಯ ಮಹಡಿಯಲ್ಲಿ ನಮ್ಮ ಕಚೇರಿ ಲಿಫ್ಟ್ ಸೌಲಭ್ಯ ಏನೋ ಇತ್ತು .ಆದರೆ ಮೂರು ಮೂರು ದಿನಕ್ಕೂ ಲಿಫ್ಟ್ ಕೆಟ್ಟುಹೋಗುತ್ತಿತ್ತು . ನಾವು ಕೆಲವರಿಗೆನೋ ಸುಲಭವಾಗಿ ಹತ್ತಲು ಆಗುತ್ತಿತ್ತು ಆದರೆ ವಯಸ್ಸಾಗಿದ್ದ ಶಾಂತ ಅವರಿಗೆ ಹಾಗೂ ಆರೋಗ್ಯ ಸರಿ ಇಲ್ಲದಿದ್ದ ಲೀಲಾವತಿ ಅವರಿಗೆಲ್ಲ ತುಂಬಾ ಕಷ್ಟವಾಗುತ್ತಿತ್ತು. ಲೀಲಾವತಿ ಆ ವೇಳೆಗಾಗಲೇ ನಾಟಕ ಸಣ್ಣ ಕಥೆ ಸಂಕಲನಗಳನ್ನು ಪ್ರಕಟಿಸಿ ಹೆಸರಾಂತ ಲೇಖಕಿಯಾಗಿದ್ದರು ಎಷ್ಟು ನಿಯತಕಾಲಿಕೆಗಳಲ್ಲಿ ಅವರ ಕಥೆಗಳು ಬಂದಿದ್ದವು. ಆದರೆ ನಾನು ಆಗ ಬರೆಯಲು ಇನ್ನೂ ಆರಂಭಿಸಿರಲಿಲ್ಲ ಈಗ ಅವರ ಜೊತೆ ಇದ್ದಿದ್ದರೆ ಎಷ್ಟೋ ಮಾರ್ಗದರ್ಶನ ಸಿಗುತ್ತಿತ್ತು ಅನಿಸುತ್ತೆ ನಮ್ಮ ಶಾಖೆಯಿಂದ ವಿಭಾಗೀಯ ಕಚೇರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಒಂದೆರಡು ವರ್ಷಗಳಾದ ನಂತರ ಅವರ ದೇಹಾಂತವಾಯಿತು ಒಳ್ಳೆಯ ಗೆಳತಿ ಆಕೆ.ಇಲ್ಲಿ ಪಕ್ಕದಲ್ಲಿಯೇ ಮೋರ್ ಹಾಗೂ ರಸ್ತೆ ದಾಟಿದ ನಂತರ ಲಾಯಲ್ ವರ್ಲ್ಡ್ ಗಳು ಇದ್ದಿದ್ದು ಸಂಜೆ ಕಚೇರಿ ಮುಗಿದ ನಂತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ತುಂಬಾ ಅನುಕೂಲವಾಗುತಿತ್ತು. ಅದರಲ್ಲೂ ಮೋರ್ನಲ್ಲಿ ಬುಧವಾರದ ದಿನ ತರಕಾರಿ ಹಾಗೂ ಹಣ್ಣುಗಳು ಸ್ವಲ್ಪ ರಿಯಾಯಿತಿ ದರದಲ್ಲಿ ದೊರೆಯುತ್ತಿತ್ತು. ಇಲ್ಲಿ ಎದುರುಗಡೆ ಶಿವ ಸಾಗರ್ ಎಂಬ ಹೋಟೆಲ್ ಇದ್ದರೂ ಸಹ ಕಚೇರಿಗೆ ಒಬ್ಬ ಹುಡುಗ ಟೀ ತಂದು ಕೊಡುತ್ತಿದ್ದು ಎಲ್ಲರೂ ಅಲ್ಲೇ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಒಂದೇ ಮಹಡಿಯಲ್ಲಿ ಎರಡು ಭಾಗಗಳಿದ್ದವು ಒಂದು ಭಾಗದಲ್ಲಿ ಕ್ಯಾಶ್ ಕೌಂಟರ್ ಲೆಕ್ಕಪತ್ರ ವಿಭಾಗ ಪಾಲಿಸಿ ಸೇವಾ ವಿಭಾಗ ಎಸ್ಎಸ್ ವಿಭಾಗ ಮತ್ತು ದಾವಾಗಿ ಭಾಗಗಳಿದ್ದವು ಮತ್ತೊಂದು ಭಾಗದಲ್ಲಿ ಕಂಪ್ಯೂಟರ್ ಸೆಕ್ಷನ್ ಸಾಕಾಧಿಕಾರಿಗಳ ಕಚೇರಿ ವಿಕ್ರಯ ವಿಭಾಗ ಮತ್ತು ಹೊಸ ವ್ಯವಹಾರಗಳ ವಿಭಾಗ, ಕಛೇರಿ ಸೇವಾ ವಿಭಾಗಗಳೂ ಇದ್ದು ಡೆವಲಪ್ಮೆಂಟ್ ಆಫೀಸರ್ಸ್ ಹಾಗೂ ಏಜೆಂಟ್ ಗಳ ವಿಭಾಗವೂ ಇಲ್ಲಿಯೇ ಇತ್ತು.‌ ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಚೆನ್ನಾಗಿ ಇದ್ದದ್ದರಿಂದ ಬಹಳ ಬೇಗ ಅಡ್ಜಸ್ಟ್ ಆಗಿಬಿಟ್ಟಿತ್ತು.‌ ಈ ನಡುವೆ ಹಳೆಯ ಕಟ್ಟಡದಲ್ಲಿ ಇದ್ದಾಗಲೇ ನಮ್ಮ ತಂದೆ ಸ್ಕೂಟರ್ನಿಂದ ಬಿದ್ದು ತೊಡೆ ಮೂಳೆ ಆಪರೇಷನ್ ಆಗಿತ್ತು. ನಂತರದಲ್ಲಿ ಅವರ ಆರೋಗ್ಯ ಕೆಟ್ಟು ಕೆಮ್ಮು ಹೆಚ್ಚಾಗಿ ಉಸಿರಾಟ ಕಷ್ಟವಾಗಿ ಅಪೋಲೋ ಆಸ್ಪತ್ರೆಗೆ ಸೇರಿಸಿದೆವು. ಕಡೆಗೂ ಅವರನ್ನು ಉಳಿಸಿಕೊಳ್ಳಲು ನಮಗೆ ಆಗಲೇ ಇಲ್ಲ. ಯಾಕೋ ಅಪ್ಪ ನಾನು ಕಳೆದಿಕೊಂಡ ಮೇಲೆ ಎಲ್ಲದರಲ್ಲಿ ನಿರಾಸೆ. ಒಂದು ರೀತಿ ಖಿನ್ನತೆ ಕಾಡುತ್ತಿತ್ತು. ಆಗ ಪೂರ್ತಿ ಕಚೇರಿಯ ಕೆಲಸಗಳಲ್ಲಿ ತೊಡಗಿಸಿಕೊಂಡು ನನ್ನನ್ನು ಮರೆಯಲು ಪ್ರಯತ್ನಿಸುತ್ತಿದೆ . ಪಾಲಿಸಿದಾರರ ಹುಟ್ಟಿದ ದಿನಾಂಕ ಬದಲಾವಣೆ ಆ ರೀತಿ ಎಲ್ಲಾ ತಿದ್ದುವಿಕೆಯ ಕೆಲಸಗಳನ್ನು ಮಾಡತೊಡಗಿದ್ದು ಆಫೀಸ್ನ ಸಮಯದ ನಂತರ 5:30 ಇಂದ 6.30 ತನಕ ಈ ರೀತಿ ಕೆಲಸಗಳನ್ನು ಮಾಡುತ್ತಿದ್ದೆವು. ಆಗ ಶೈಲಾ ನನಗೆ ತುಂಬಾ ಸಹಕಾರ ನೀಡಿ ಜೊತೆಯಲ್ಲಿ ಇರುತ್ತಿದ್ದಳು. ಆಗ ಪಾಲಿಸಿ ಸೇವಾ ವಿಭಾಗದ ಆಡಳಿತ ಅಧಿಕಾರಿಗಳಾಗಿದ್ದವರು ಶ್ರೀ ಲಕ್ಷ್ಮೇಂದ್ರ  ಕುಮಾರ್.  ಅವರು ಈ ಹಿಂದೆ ಸಕಲೇಶಪುರದಲ್ಲಿ ಅವರು ನನ್ನೊಂದಿಗೆ ಕೆಲಸ ಮಾಡುತ್ತಿದ್ದರು.  ಬೇರೆಯ ಕೆಲಸಗಳನ್ನು ಮಾಡುತ್ತಿದ್ದು ಒಂದು ರೀತಿ ನನಗೆ ನನ್ನ ಸಂಸ್ಥೆಗೆ ಸೇವೆ ಸಲ್ಲಿಸುವುದರಲ್ಲಿ ಒಂದು ತೃಪ್ತಿ ತಂದು ಕೊಟ್ಟಿದ್ದು ಎಂದು ಮಾತ್ರ ಹೇಳಬಹುದು. ಮೊದಲಿನಿಂದಲೂ ನಾನು ನನ್ನ ವಿಭಾಗ ಮಾತ್ರ ಎಂಬ ಚೌಕಟ್ಟು ಹಾಕಿಕೊಂಡಿರಲಿಲ್ಲ . ಈವರೆಗೆ ಮಾಡಿ ನನಗೆ ಚೆನ್ನಾಗಿ ತಿಳಿದ ವಿಭಾಗಗಳ ಕೆಲಸ ಆಗಿದ್ದರೆ ಅಥವಾ ಅಲ್ಲಿ ಹೆಚ್ಚುವರಿ ಕೆಲಸ ಆಗಿ ನನ್ನ ಅವಶ್ಯಕತೆ ಇದ್ದಿದ್ದರೆ ಸದಾ ನನ್ನ ನೆರವಿನ ಹಸ್ತ ನೀಡುತ್ತಲೇ ಇರುತ್ತಿದ್ದೆ .ಈ ಮಾತನ್ನು ನನ್ನೊಂದಿಗೆ ಕೆಲಸ ಮಾಡಿದೆ ಎಲ್ಲಾ ಅಧಿಕಾರಿಗಳು ಮುಕ್ತ ಕಂಠದಿಂದ ಶ್ಲಾಘನೆ ಮಾಡುತ್ತಾರೆ. ಹೊಸ ವ್ಯವಹಾರ ವಿಭಾಗದಲ್ಲಿ ಬಹಳಷ್ಟು ದಿನ ಕೆಲಸ ಮಾಡಿದ್ದರಿಂದ ಒಂದು ರೀತಿಯ “ಪಂಟರ್” ಆಗಿಬಿಟ್ಟಿದ್ದೆ. ಬೇರೆ ಶಾಖೆಯವರು ವಿಭಾಗಿಯ ಕಛೇರಿಯವರೂ ಸಹ ಕೆಲವೊಮ್ಮೆ ನನ್ನ ಬಳಿ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಿ ಕೆ ರವಿ ಶಾಖಾಧಿಕಾರಿಗಳು ವರ್ಗವಾಗಿ ಹೋಗಿ ಮಂಜುನಾಥ್ ಎನ್ನುವವರು ಬಂದರು. ಅವರು ಮೊದಲು ಪತ್ರಕರ್ತರಾಗಿದ್ದರಂತೆ. ಹಾಗಾಗಿ ಸಾಹಿತ್ಯಾಸಕ್ತರು.ಎಷ್ಟೋ ಸಾಹಿತ್ಯದ ವಿಷಯಗಳನ್ನು ಮಾತನಾಡುತ್ತಿದ್ದೆವು.  ಅವರು ಸಹ ನನಗೆ ಹೊಸ ವ್ಯವಹಾರ ವಿಭಾಗದಿಂದ ಬದಲಾವಣೆ ತೆಗೆದುಕೊಳ್ಳಲು ಬಿಡಲೇ ಇಲ್ಲ. ಅವರು ವರ್ಗವಾಗಿ ಹೋಗುವ ಮುಂಚೆ ಎಲ್ಲರಿಗೂ ವಿಭಾಗ ಬದಲಾವಣೆಗಳನ್ನು ಮಾಡಿದರು ಆಗ ನಾನು ತುಂಬಾ ದಿನಗಳಿಂದ ಬಯಸುತ್ತಿದ್ದ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಸಿಕ್ಕಿತು. ಅಲ್ಲಿ ಪಾಲಿಸಿ ಸಾಲ ಕೊಡುವ ವಿಭಾಗ ಮತ್ತು ಇತರೆ ಕೆಲಸಗಳ ವಿಭಾಗ ನನ್ನ ಪಾಲಿಗೆ ಬಂತು. ನನ್ನದೇ ಹೆಸರಿನ ಕೆ ಸುಜಾತ ಎನ್ನುವವರು ಮತ್ತು ಶಿವಶಂಕರ್ ಎನ್ನುವವರು ನನಗೆ ಸಹಾಯಕರು ಮೂರು ಜನವು ಸೇರಿ ಹಳೆಯ ಬಾಕಿ ಇದ್ದದ್ದನ್ನು ಮುಗಿಸಿದಲ್ಲದೆ ಅಂದು ಅರ್ಜಿ ಕೊಟ್ಟ ಸಾಲಗಳನ್ನು ಅಂದೆ ವಿಲೇವಾರಿ ಮಾಡುವಷ್ಟು ಮಟ್ಟಕ್ಕೆ ಒಂದು ತಿಂಗಳಲ್ಲಿ ತೆಗೆದುಕೊಂಡು ಬಂದೆವು. ಅಂದಿನಿಂದ ಇಂದಿನವರೆಗೂ ನಮ್ಮ ಶಾಖೆ ಐದರಲ್ಲಿ ಅಂದು ಕೊಟ್ಟ ಅರ್ಜಿಗಳು ಅಂದೇ ವಿಲೇವಾರಿ ಆಗುವಂತೆ ಕ್ರಮ ಇಂದಿಗೂ ನಡೆದುಕೊಂಡು ಬಂದಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ನಮ್ಮ ಕಾಲದಲ್ಲಿ ಎಂದು ಹೇಳಲು ತುಂಬಾ ಸಂತೋಷವಿದೆ.ಆಗ FEAP Front End Application  Programme ಹೊಸದಾಗಿ ಚಾಲ್ತಿಯಲ್ಲಿತ್ತು. 1990 ರ ದಶಕದ ಕೊನೆಯಲ್ಲಿ ಮತ್ತು 2000 ರ ಆರಂಭದಲ್ಲಿ LIC ಪರಿಚಯಿಸಿದ ಒಂದು ಮೂಲಭೂತ ಸಾಫ್ಟ್‌ವೇರ್ ಇದು.. ಇದಕ್ಕೂ ಮುನ್ನ ಬಹುತೇಕ ಕೆಲಸಗಳು ಹಸ್ತಪ್ರತಿ (Manual ledgers) ಅಥವಾ ಹಳೆಯ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ನಡೆಯುತ್ತಿದ್ದವು. ಅದನ್ನು ಡಿಜಿಟಲೀಕರಣಗೊಳಿಸಲು FEAP ತರಲಾಯಿತು.​ಉದ್ದೇಶ: ಎಲ್.ಐ.ಸಿ ಶಾಖೆಗಳ (Branch Offices) ಕೌಂಟರ್‌ಗಳಲ್ಲಿ ಗ್ರಾಹಕರ ಸೇವೆಗಳನ್ನು ವೇಗಗೊಳಿಸುವುದು.​ಮುಖ್ಯ ಕಾರ್ಯಗಳು: ಪಾಲಿಸಿಯ ಸದ್ಯದ ಸ್ಥಿತಿ (Policy Status), ಸಾಲ ಮತ್ತು ಪುನಶ್ಚೇತನದ ಉಲ್ಲೇಖಗಳು (Loan & Revival quotations), ಕಂತು ಪಾವತಿ (Premium payments) ಮತ್ತು ವಿಳಾಸ ಬದಲಾವಣೆಯಂತಹ ಮೂಲಭೂತ ಕೆಲಸಗಳನ್ನು ಮಾಡಲು ಇದು ಸಹಕಾರಿಯಾಗಿತ್ತು.​ಕಾರ್ಯವೈಖರಿ: ಇದು ಆಯಾ ಶಾಖೆಯ ಸ್ಥಳೀಯ ಸರ್ವರ್‌ಗಳ (Local Servers) ಆಧಾರದ ಮೇಲೆ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಇವುಗಳನ್ನು ವ್ಯಾನ್ (WAN – Wide Area Network) ಮೂಲಕ ಜೋಡಿಸಲಾಯಿತು. ಕಂಪ್ಯೂಟರಿಕರಣ ಎಂದರೆ garbage in garbage out. ಹಾಗಾಗಿ ಅದಕ್ಕೆ ಕೊಡುವ ಎಲ್ಲಾ ಡಾಟಾಗಳು ಸರಿಯಾಗಿರಬೇಕು. ಹಾಗಾಗಿ ರೆಕಾರ್ಡ್ಸ್ ಗಳ ಶುದ್ಧೀಕರಣ ಅಂದರೆ purification of records ಆಗಲೇ ಬೇಕಿತ್ತು ಆ ನಿಟ್ಟಿನಲ್ಲಿ ಪಾಲಿಸಿ ಸೇವಾ ವಿಭಾಗದಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದವು ಆಗ ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದವರು ವಿಷಕಂಠನಾಯಕ್ ಅನ್ನುವವರು. ಅವರ ಸಹಕಾರದಿಂದ ನಾನು ಮತ್ತೊಬ್ಬರು ಕೆ. ಸುಜಾತ ಮತ್ತು ಶಿವಶಂಕರ್ ಅವರುಗಳು ಸೇರಿ ಕಂಪ್ಯೂಟರ್ ಸಹಾಯದಿಂದ ಕೊಡುತ್ತಿದ್ದ ಎರರ್ ಲಿಸ್ಟ್ ಗಳನ್ನು ಸರಿ ಮಾಡುತ್ತಾ ಹೋಗುತ್ತಿದ್ದೆವು. ಮೂಲಭೂತವಾಗಿ ನಮ್ಮದು ಜಿಎಸ್‌ಡಿ‌ ಅಂದರೆ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಯೋಜನೆ ಅಡಿ ಬರುವ ಪಾಲಿಸಿಗಳು ಹೆಚ್ಚು ಇದ್ದದ್ದು ಬೇರೆ ಕಡೆಯಿಂದ ಬಂದ ಪಾಲಿಸಿಗಳಲ್ಲಿ ಡಾಟಾ ಎಷ್ಟೋ ಬೇರೆ ವೇಳೆ ತಪ್ಪಾಗಿ ಇರುತ್ತಿತ್ತು ಕೆಲವೊಮ್ಮೆ ಪಾಲಿಸಿಗಳು ವರ್ಗವಾಗಿ ಬಂದಿರುತ್ತಲೇ ಇರುತ್ತಿರಲಿಲ್ಲ ಈ ಎಲ್ಲಾ ಸಮಸ್ಯೆಗಳಿಂದಾಗಿ ಎರರ್ ಗಳು ಹೆಚ್ಚುತ್ತಾ ಹೋಗುತ್ತಿದ್ದವು ಅದು ಒಂದು ರೀತಿ ಮಧ್ಯಂತರ ಸ್ಥಿತಿ ಆದುದರಿಂದ ಪೂರ್ತಿ ಮಾನ್ಯುಯಲ್ ಆಗಿ ಮಾಡಲು ಆಗದೆ ಕಂಪ್ಯೂಟರ್ ಮೂಲಕ ಮಾಡಲು ಮಾಹಿತಿ ಸರಿ ಇರದೆ ತುಂಬಾ ಕಷ್ಟ ಆಗುತ್ತಿತ್ತು ಹಾಗಾಗಿ ಎಲ್ಲಾ ಎರರ್ ಗಳನ್ನು ಸರಿಪಡಿಸಬೇಕಾಗಿದ್ದು ಆಗ ಮೂಲಭೂತವಾಗಿ ಆಗಬೇಕಿದ್ದ ಕಾರ್ಯ. ಇದಕ್ಕಾಗಿ ಮೊದಲು ವಿವಿಧ ರೀತಿಯ ಲಿಸ್ಟ್ಗಳನ್ನು ಡಿಪಿ ವಿಭಾಗದ ಪ್ರೋಗ್ರಾಮರ್ ರಾಮಚಂದ್ರ ಅವರು ತೆಗೆದುಕೊಡುತ್ತಿದ್ದರು ನಂತರ ನಾವು ನಮ್ಮ ವಿಭಾಗದಲ್ಲಿ ಫೈಲ್ಗಳನ್ನು ತೆಗೆದು ಸರಿಯಾದ ಮಾಹಿತಿಗಳನ್ನು ಕಂಪ್ಯೂಟರ್ಗೆ ಹಾಕಿ ಅದನ್ನು ಸರಿ ಮಾಡುತ್ತಿದ್ದೆವು. ತುಂಬಾ ಖುಷಿ ಪಟ್ಟ ಕೆಲಸ ಅದು ಅದಕ್ಕೆ ಸಹಕಾರ ನೀಡಿದ ವಿಶ್ವಕಂಠನಾಯಕ್ ಸರ್ ಸುಜಾತ ಮತ್ತು ಶಿವಶಂಕರ್ ಹಾಗೂ ರಾಮಚಂದ್ರ ಹಾಗೂ ಕೇಳಿದ ಸಮಯಕ್ಕೆ ಸರಿಯಾಗಿ ಫೈಲ್ಗಳನ್ನು ರೆಕಾರ್ಡ್ಸ್ ನಿಂದ ತೆಗೆದುಕೊಡುತ್ತಿದ್ದ ಪ್ರತಾಪ್ ಎಲ್ಲರಿಗೂ ಈ ಮೂಲಕ ಮತ್ತೊಮ್ಮೆ ಧನ್ಯವಾದಗಳು ಈ ರೀತಿ

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-36 ನಾವು ಆ ಶಾಖೆಗೆ ಹೋದಾಗ ಶಾಖಾಧಿಕಾರಿ ಆಗಿದ್ದವರು ಶ್ರೀ ಸತ್ಯನಾರಾಯಣ ಅವರು. ಅವರು ಮೂಲತಃ ಶ್ರೀನಿವಾಸಪುರರದವರು. ನನ್ನ ತಂದೆಯ ಊರು ಸಹ ಅದೇ ಆಗಿದ್ದು ಕೆಲವು ಹಳಬರನ್ನು ನೆನೆಸಿಕೊಂಡು ಮಾತನಾಡುತ್ತಿದ್ದೆವು.  ಅವರಿಗೆ ಆಫೀಸಿನಲ್ಲೇ ಹೃದಯಘಾತ ಆಗಿತ್ತು. .ನಂತರ ಚೇತರಿಸಿಕೊಂಡರು. ಆದರೆ ನಮಗೆಲ್ಲ ಒಂದು ರೀತಿಯ ಶಾಕ್ ಆಗಿದ್ದಂತೂ ನಿಜ .ಆಗ ಇಷ್ಟೆಲ್ಲ ಹೃದಯಾಘಾತಗಳ ವಿಷಯ ಕೇಳದೆ ಇದ್ದರಿಂದ ಅದು ಅಪರೂಪದ ಸಂಗತಿಯಾಗಿತ್ತು. ಹಾಗೆಯೇ ಶಾಖೆ ಎರಡರಲ್ಲಿ ಅತ್ಯಂತ ನೆನಪಿನಲ್ಲಿ ಉಳಿದ ವಿಷಯವೆಂದರೆ ಜನವರಿ ಒಂದನೆಯ ತಾರೀಕು ನಾವು ಹೆಂಗಳೆಯರೆಲ್ಲ ಸೇರಿ ಗೋಸಾಯಿ ಘಾಟ್ ಗೆ ಪ್ರವಾಸ ಹೋಗಿದ್ದು. ಆ ಬಾರಿ ಜನವರಿ ಒಂದನೆಯ ತಾರೀಕು ಶನಿವಾರ ಬಂದದ್ದು ಅಂದು ನಮಗೆ ಅರ್ಧ ದಿನ ಮಾತ್ರ ಕಚೇರಿ ಆದ್ದರಿಂದ ನೀವು ಪ್ರವಾಸವನ್ನು ಯೋಚಿಸಿದೆ ಕೆಳಗಡೆ ಇದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಒಂದು ಸಣ್ಣ ಮೆಟದ ಬುಕ್ ಮಾಡಿಕೊಂಡು ಮದ್ಯಾಹ್ನ ಹೊರಟೆವು ಎಲ್ಲರೂ ಅವರವರ ಮನೆಯಿಂದ ವಿಶೇಷ ತಿಂಡಿಗಳನ್ನು ಮಾಡಿಕೊಂಡು ಬರುವುದಾಗಿ ನಾನು ಅಂದು ಅವರೇ ಕಾಳು ರೊಟ್ಟಿ ಮಾಡಿ ತಂದಿದ್ದೆ. ಹತ್ತು ರೊಟ್ಟಿಗಳು ನಮಗಾಗಿ ಹಾಗೂ ಮತ್ತೆ ಎರಡು ಬೇರೆ ಬಾಕ್ಸ್ ನಲ್ಲಿ ಮಂಜುಗಾಗಿ. ತುಂಬಾ ಖುಷಿಯಾಗಿ ತಿಂದಿದ್ದ ಅಂದು.ಸರಿ ಅಲ್ಲಿ ಮಧ್ಯಾಹ್ನ ಹೋದ ತಕ್ಷಣ ಎಲ್ಲರೂ ಡಬ್ಬಿಗಳಿಂದ ಹಂಚಿಕೊಂಡು ತಿಂದದ್ದಾಯಿತು.  ಇನ್ನು ಮೂರು ರೊಟ್ಟಿಗಳು ಉಳಿದಿದ್ದನ್ನು ರಾಜಿ ಮನೆಗೆ ತೆಗೆದುಕೊಂಡು ಹೋದಳು. ಸುಮಾ ತಂದಿದ್ದ ಉಳಿದ ಪೂರಿ ಆಲೂಗೆಡ್ಡೆ ಪಲ್ಯ  ನಾನು ಮನೆಗೆ ತೆಗೆದುಕೊಂಡು ಬಂದೆ. ಸ್ವಲ್ಪ ಹೊತ್ತು ನೀರಿನಲ್ಲಿ ಇಳಿದು ಹಾಡಿ ನಂತರ ದೋಣಿಯಲ್ಲಿ ಒಂದು ರೌಂಡ್ ಹೋಗಿ ಬಂದು ಐದು ಗಂಟೆಗೆ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದೆವು ಪ್ರತಿ ವರ್ಷ ಜನವರಿ ಒಂದನೆಯ ತಾರೀಕು ಆ ದಿನ ನಾವು ಹೋದ ಪ್ರವಾಸದ ನೆನಪು ಆಗುತ್ತಲೇ ಇರುತ್ತದೆ.ಹಾಗೆ ಮತ್ತೊಂದು ಕಹಿ ನೆನಪು ಎಂದರೆ ಪ್ರತಿ ನಿಧಿ ಬಾಂಧವರೂ ಪರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನದೊಂದು ಸಣ್ಣ ಚಿನ್ನದ ಸರ ಕಳೆದುಹೋದದ್ದು. ನಂಜನಗೂಡಿನ ಗೆಳತಿ ಇಂದುಮತಿ ಅವರ ತಮ್ಮನ ಮೂಲಕ ದುಬೈ ನಿಂದ ತರಿಸಿದ್ದ ೫ ಗ್ರಾಂ ನ‌ ಸರ. ಬಹಳ ವರ್ಷಗಳಿಂದ ಭೇಟಿ ಆಗದೆ ಇದ್ದ ಪಿಯುಸಿ ಗೆಳತಿ ಲತಾ ಅವರ ನೆರೆಯ ಮನೆಗೆ ನಾವು ಗೃಹಪ್ರವೇಶಕ್ಕೆ ಹೋಗಿದ್ದು ಅವಳು ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು. ಆಗಿನು ಮೊಬೈಲು ಕಾಲಿಟ್ಟ ಸಮಯ ಅವಳ ಬಳಿ ನನ್ನ ಬಳಿ ಇಬ್ಬರ ಬಳಿಯೂ ಮೊಬೈಲ್ ಇರಲಿಲ್ಲ ಹಾಗಾಗಿ ಮತ್ತೆ ಸ್ನೇಹ ಮುಂದುವರಿಸಲು ಆಗಲಿಲ್ಲ. ಮೊದಲೇ ಹೇಳಿದಂತೆ ಮನೆಯ ಬಳಿ ಇದ್ದ ಶಾಖೆ ಐದಕ್ಕೆ ವರ್ಗಾವಣೆ ಕೇಳಿದ್ದು ಆದರೆ ಅಲ್ಲಿ ಹೆಚ್ ಜಿ ಎ ಅಂದರೆ ನಮ್ಮ ಪೋಸ್ಟ್ ಖಾಲಿ ಇರಲಿಲ್ಲ. ಅಲ್ಲಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನ ಜೊತೆಗೆ ಬಂದು ರಿಪೋರ್ಟ್ ಆದ ಮೊದಲನೇ ಸ್ಥಾನ ಹಾಗೂ ನನ್ನದು ಎರಡನೆಯ ಸ್ಥಾನ. ಅಲ್ಲಿ ಪೋಸ್ಟ್ ಖಾಲಿ ಇಲ್ಲ ಅಂದಮೇಲೆ ಈ ವರ್ಷ ನಮಗೆ ವರ್ಗಾವಣೆ ಇಲ್ಲ ಎಂದು ಖಾತ್ರಿ ಯಾಗಿತ್ತು ಆದರೆ ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿ ಇದ್ದುದರಿಂದ ಇನ್ನೂ ಒಂದು ವರ್ಷ ಹಾಯಾಗಿ ಇರಬಹುದು ಆದರೆ ಈ ಶಾಖೆ ಇವಾಗ ಕಟ್ಟಡಕ್ಕೆ ಅಂದರೆ ಬನ್ನಿ ಮಂಟಪಕ್ಕೆ ಸ್ಥಳಾಂತರ ಗೊಳ್ಳುವ ಯೋಜನೆ ಇತ್ತು. ಹಾಗಾಗಿ ಸ್ಥಳಾಂತರಗೊಳ್ಳುವ ಮೊದಲು ನಮಗೆ ವರ್ಗಾವಣೆ ಸಿಕ್ಕಿದರೆ ಒಳ್ಳೆಯದು ಎಂದಿತ್ತು. ಏಕೆಂದರೆ ನಮ್ಮ ಏರಿಯಾದಿಂದ ಬನ್ನಿಮಂಟಪಕ್ಕೆ ಎರಡೆರಡು ಬಸ್ ಹಿಡಿದು ಹೋಗಬೇಕಿತ್ತು. ಬಹಳ ದೂರವೂ ಇತ್ತು. ಆ ದೇವರಿಗೆ ನಮ್ಮ ಮೊರೆ ಕೇಳಿಸಿತೇನೋ ಎಂಬಂತೆ ಆ ವರ್ಷ ಶಾಖೆ ಎರಡರ ಇಬ್ಬರಿಗೆ ಸಹಾಯಕ ಅಧಿಕಾರಿಗಳಾಗಿ ಬಡ್ತಿ ಸಿಕ್ಕಿತು ಗಿರಿಜಾ ಮತ್ತು ರೇಣುಕುಮಾರಿ ಇಬ್ಬರು ಪದೋನ್ನತಿ ಹೋಗಲು ಒಪ್ಪಿಗೆ ಕೊಟ್ಟಿದ್ದರಿಂದ ನಮಗೆ ಅಲ್ಲಿ ಎರಡು ಪೋಸ್ಟ್ ಖಾಲಿ ಆಗಿತ್ತು, ಇನ್ನು ವರ್ಗಾವಣೆ ಆದೇಶ ಬರುವುದಷ್ಟೇ ಬಾಕಿ. ನಾನು ರಜೆ ಹಾಕಿದ್ದೆ. ಒಂದ್ಸಲ ನಮ್ಮ ಮನೆಯಲ್ಲಿ ಕಾಲ್ ಮಾಡಿದ್ದಳು ನನ್ನ ರಿಲವಿಂಗ್ ಆರ್ಡರ್ ಬಂದಿದ್ದು 15ನೆಯ ತಾರೀಕು ನಾವು ಆಗಬೇಕಿತ್ತು ಅಂದೇ ಮಧ್ಯಾಹ್ನ ನಾವಿಬ್ಬರೂ ಯಾಕೆಯವರಿಗೆ ಊಟ ಕೊಡಿಸೋಣವ ಎಂದು ಕೇಳಿದಳು ಆಯಿತು ಎಂದು ಹೇಳಿ ಹಬ್ಬದ ಮಾರನೆಯ ದಿನ ಮಧ್ಯಾಹ್ನ ನಮ್ಮ ಪಾರ್ಟಿ ಕೊಟ್ಟು ಸಂಜೆಗೆ ರಿಲೀಸ್ ಆದದ್ದು 1೭ನೆಯ ತಾರೀಕು ಸೋಮವಾರ ನಾವು ಶಾಖೆ ಐದಕ್ಕೆ ರಿಪೋರ್ಟ್ ಆಗಬೇಕಿತ್ತು ಈ ಹಿಂದೆ ನಂಜನಗೂಡಿನಲ್ಲಿ ನಮಗೆ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಿಕೆ ರವಿ ಅವರೇ ಅಲ್ಲಿ ಈಗ ಶಾಖಾಧಿಕಾರಿಗಳು ಅವರು ಶಾಖೆಗೆ ಫೋನ್ ಮಾಡಿ ನನಗೆ ಹೊಸ ವ್ಯವಹಾರ ವಿಭಾಗ ಕೊಡುವುದಾಗಿ ತಿಳಿಸಿದರು. ವತ್ಸಲಾಗೆ ಮಾರುಕಟ್ಟೆ ವಿಭಾಗ. ನನ್ನದೇನೂ ಅಭ್ಯಂತರವಿರಲಿಲ್ಲ. ಅಂತೂ ಇಂತೂ ಶಾಖೆ ಐದಕ್ಕೆ ಬಂದು ರಿಪೋರ್ಟ್ ಆದೆವು. ಮೊಟ್ಟ ಮೊದಲ ಬಾರಿ ಡ್ಯೂಟಿ ರಿಪೋರ್ಟ್ ಜೊತೆಗೆ ವರ್ಗಾವಣೆ ಕೋರಿಕೆ ಪತ್ರ ಇರಲಿಲ್ಲ. ಮುಂದೆ ನಿವೃತ್ತಿಯಾಗುವವರೆಗೂ ಬರೋಬರಿ 21 ವರ್ಷ ಇದೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬ ಅಂದಾಜು ಸಹ ಅಂದು ಇರಲಿಲ್ಲ. ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿ ಇದ್ದ ಆ ಶಾಖೆಯ ಪಕ್ಕದಲ್ಲಿ ರಾಜ್ಯ ಸರ್ಕಾರದ ಕೆ ಜಿ ಐ ಡಿ ಕಚೇರಿಯೂ ಸಹ ಇತ್ತು. ರಸ್ತೆಯ ಎಡಬದಿಯಲ್ಲಿ ಇದ್ದ ಆ ಶಾಖೆ 2 ಅಂತಸ್ತಿನದಾಗಿತ್ತು ನನ್ನ ಹೊಸ ವ್ಯವಹಾರ ವಿಭಾಗ ಮೊದಲನೆಯ ಮಹಡಿಯಲ್ಲಿ ಇತ್ತು. ಮೊದಲಿಂದ ಪರಿಚಿತರಾಗಿದ್ದ ಶೈಲಾ ವೀಣಾ ಮಂಗಳ ಶಾಂತ ಹಾಗೂ ಎದುರು ಮನೆಯಲ್ಲಿ ಇದ್ದ ಸಾವಿತ್ರಿ ಎಲ್ಲರೂ ಇಲ್ಲೇ ಇದ್ದರು. ಹೊಸ ವಾತಾವರಣ ಅನಿಸಲೇ ಇಲ್ಲ ತುಂಬಾ ಬೇಗ ಅಂದುಕೊಳ್ಳುವಂತೆ ಆಯಿತು.ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ರಾಜೇಂದ್ರ ಅವರು ಸಹಾಯಕ ಆಡಳಿತ ಅಧಿಕಾರಿಗಳಾಗಿ ಇದ್ದರೆ ಸಹಾಯಕ ರಾಗಿ ನನ್ನದೇ ಹೆಸರಿನ ಜಿ ಸುಜಾತ ಮತ್ತು ಗುರುರಾಜ್ ಅವರು ಅಲ್ಲಿ ಇಬ್ಬರು ಹೆಜ್ಜೆಯಗಳಿದ್ದು ನಮ್ಮದೇ ಯೂನಿಯನ್ ನ ಸಿ ಚಂದ್ರಕುಮಾರ್ ಅವರು ಸಹ ಅದೇ ವಿಭಾಗದಲ್ಲಿ ಇದ್ದರು. ಆಗಿಲ್ಲ ಪಾಲಿಸಿಗಳು ಹೆಚ್ಚಾಗಿ ಬರುತ್ತಿದ್ದು ಆ ವಿಭಾಗದಲ್ಲಿ ಕೈ ತುಂಬಾ ಕೆಲಸ ಇತ್ತು ಆಸಕ್ತಿದಾಯಕವಾಗಿಯೂ ನಾನು ಈ ಮೊದಲು ಅದೇ ಹೊಸ ವ್ಯವಹಾರ ವಿಭಾಗದಲ್ಲಿ ಮಾಡಿದಾಗ ಪೂರ್ತಿ ಮಾನ್ಯುಯಲ್ ಕೆಲಸಗಳಿತ್ತು ಈಗ ಎಲ್ಲವೂ ಕಂಪ್ಯೂಟರ್ನಲ್ಲಿ ಮಾಡಬೇಕಿತ್ತು ಹೊಸದಾಗಿ ಕಲಿಯುವ ಆಸಕ್ತಿಯು ತುಂಬಾ ಖುಷಿಯಾಗುವಂತಿತ್ತು.‌ ರವೀಶ್ ಅವರು ಊರಿನಲ್ಲಿ ಇದ್ದಾಗ ಮದ್ಯಾಹ್ನ ಊಟಕ್ಕೂ ಸಹ ಕರೆದುಕೊಂಡು ಹೋಗಿ ಬಂದು ಬಿಡುತ್ತಿದ್ದರು. ಸಕಲೇಶಪುರ ಬಿಟ್ಟ ಮೇಲೆ ಮಧ್ಯಾಹ್ನ ಮನೆಯ ಬಿಸಿಯೂಟ ಮತ್ತೆ ದೊರೆಯಿತು ಅನ್ನಬಹುದು.(ಮುಂದುವರೆಯುವುದು) ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-35 ಮೈಸೂರು ಶಾಖೆ ಎರಡಕ್ಕೆ ಬಂದು ರಿಪೋರ್ಟ್ ಮಾಡಿಕೊಂಡಿದ್ದು ಆಯಿತು. ಮಾಮೂಲಿನಂತೆ ಇಲ್ಲಿಯೂ ಒಂದು ಕೈಯಲ್ಲಿ ಕರ್ತವ್ಯ ಹಾಜರಾಗುವ ಪತ್ರ ಇದ್ದರೆ ಮತ್ತೊಂದು ಕೈಯಲ್ಲಿ ವರ್ಗಾವಣೆ ಅರ್ಜಿ. ಈ ಬಾರಿ ಮನೆಗೆ ಹತ್ತಿರದ ಶಾಖೆ  ೫ ಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದೆ.  ಇಲ್ಲಿ ನನಗೆ ಮತ್ತೆ ನನ್ನ ಮೆಚ್ಚಿನ ಪಾಲಿಸಿ ಸೇವಾ ವಿಭಾಗ ಕೊಟ್ಟರು. ಪಾಲಿಸಿಯ ಪುನರುಜ್ಜೀವನ, ಅಸೈನ್ಮೆಂಟ್ ಮತ್ತು ನಾಮನಿರ್ದೇಶನ ಹಾಗೂ ಪಾಲಿಸಿಗಳ ಅಲ್ಟ್ರೇಶನ್ ಇಷ್ಟು ವಿಭಾಗಗಳ ಮೇಲ್ವಿಚಾರಣೆ ನನ್ನದು. ಈ ಮೂರು ವಿಭಾಗಗಳಿಗೂ ಒಬ್ಬೊಬ್ಬರು ಸಹಾಯಕರು ಇದ್ದರು. ನನ್ನದೇ ಬ್ಯಾಚ್ ನ  ಶ್ರೀಹರಿ ಸುಬ್ರಹ್ಮಣ್ಯ ಶೋಭಾ ಮತ್ತು ಪುಟ್ಟ ಲಕ್ಷ್ಮಿ ಈ ವಿಭಾಗದ ಸಹಾಯಕರು. ಈ ಹಿಂದೆ ನಂಜನಗೂಡಿನಲ್ಲಿ ನನ್ನ ಜೊತೆ ಉನ್ನತ ಶ್ರೇಣಿ ಸಹಾಯಕರಾಗಿದ್ದ ಜಗದೀಶ್ ಅವರು ಈಗ ಆಡಳಿತ ಅಧಿಕಾರಿಯಾಗಿ ಶಾಖೆಯಲ್ಲಿ ಇದ್ದರು. ಬಹುತೇಕ ಬಹುತೇಕ ಎಲ್ಲರೂ ಮೊದಲಿನಿಂದ ಪರಿಚಯದವರೇ ಆಗಿದ್ದರಿಂದ ಅಲ್ಲಿಗೆ ಹೊಂದಿಕೊಳ್ಳಲು ಸ್ವಲ್ಪವೂ ಕಷ್ಟವಾಗಲಿಲ್ಲ. ಬೇರೆ ವಿಭಾಗಗಳಿಂದ ವರ್ಗವಾಗಿ ಬಂದಿದ್ದ ಹೇಮಗೋಮತಿ ಮತ್ತು ರೇಖಾ ಮಾತ್ರ ಹೊಸ ಪರಿಚಯ ಆದರೂ ಏಕವಚನದಲ್ಲಿ ಮಾತನಾಡುವಷ್ಟು ಸಲಿಗೆ ಆತ್ಮೀಯತೆ ಬೆಳೆದುಬಿಟ್ಟಿತ್ತು. ನನ್ನದೇ ಬ್ಯಾಚ್ನ  ಅನಿತ ಗಾಯಿತ್ರಿ ಹಾಗೂ ಶೋಭಾ ಈ ಮುಂಚೆ ಮಂಡ್ಯದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಗಾಯಿತ್ರಿ ದೇವಿ ಸಹಪಾಠಿ ಸುಮಾ ಇವರೆಲ್ಲರೂ ಇದೇ ಬ್ರಾಂಚ್ ನಲ್ಲಿ ಇದ್ದರು. ಪ್ರಸೂತಿ ರಜೆಗೆ ಹೋಗಿದ್ದ ಮಂಜುಳಾ ಸಹ ವಾಪಸ್ ಆಗಿದ್ದು ಅವಳು ಸಹ ತುಂಬಾ ಕ್ಲೋಸ್ ಆದಳು. ಈ ಮುಂಚೆ ನಾನು ಪ್ರಸ್ತಾಪಿಸಿದ ಮಂಡ್ಯ ಬ್ರಾಂಚ್ ನಲ್ಲಿದ್ದ  ಪ್ರೈಮರಿ ಶಾಲೆಯ ಸಹಪಾಠಿ ಮಂಜುನಾಥ್ ಸಹ ಇಲ್ಲಿಯೇ ಇದ್ದಿದ್ದು .ಬಹಳ ವರ್ಷಗಳಿಂದ ಅವರೆಲ್ಲ ಒಟ್ಟಿಗೆ ಅದೇ ಶಾಖೆಯಲ್ಲಿ ಕೆಲಸ ಮಾಡಿದ್ದರಿಂದ ಏಕವಚನದಲ್ಲಿಯೇ ಮಾತನಾಡಿಸಿಕೊಳ್ಳುವಷ್ಟು ಆತ್ಮೀಯತೆ ಇತ್ತು ಒಂದು ರೀತಿಯ ಕೋಝೀ ವಾತಾವರಣ. ಆ ಬ್ರಾಂಚ್ ನಲ್ಲಿ ಮನೆಯ ಸದಸ್ಯರ ಹಾಗೆ ಎಲ್ಲರೂ ಹೊಂದಿಕೊಂಡು ಇದ್ದದ್ದು ತುಂಬಾ ಖುಷಿ ಕೊಟ್ಟಿತ್ತು ಇದುವರೆಗೆ ನಾನು ಕೆಲಸ ಮಾಡಿದ ಯಾವುದೇ ಶಾಖೆ ಗಿಂತ ಇಲ್ಲಿ ತುಂಬಾ ಆತ್ಮೀಯತೆಯ ಅನುಬಂಧ ಇದ್ದದ್ದು ಕಾಣಿಸುತ್ತಿತ್ತು. ಹಾಗಾಗಿ ಕೆಲಸಗಳನ್ನು ಸಹ ಹಂಚಿಕೊಂಡಿದೆ ಮಾಡಿಬಿಡುತ್ತಿದ್ದರಿಂದ ತುಂಬಾ ಸುಗಮವಾಗಿ ನಡೆಯುತ್ತಿತ್ತು. ನಂಜನಗೂಡು ಶಾಖೆ ಬಿಡುವ ಸ್ವಲ್ಪ ಮೊದಲು ನಾವು ಮಾರುತಿ ಒಮ್ಮೆ ಗಾಡಿಯನ್ನು ಖರೀದಿಸಿದವು ನಮ್ಮ ಮನೆಯವರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗಲು ಈ ವ್ಯವಸ್ಥೆ. ಆ ಸಮಯದಲ್ಲಿ ಮೊಬೈಲ್ ಗಳು ಹೆಚ್ಚು ಜನಪ್ರಿಯ ವಾಗುತ್ತಿತ್ತು ಅದೇ ಬಿಲ್ಡಿಂಗ್ನ ಒಂದು ಕಡೆ ಬಿ ಎಸ್ ಎನ್ ಎಲ್ ಸಿಮ್ ಗಳನ್ನು ಕೊಡುತ್ತಿದ್ದರು. ಸುಲಭವಾಗಿಯೇ ಸಿಮ್ ಸಿಕ್ಕಿತು .ಮೊದಲ ನೋಕಿಯಾ ಮೊಬೈಲ್ ರವೀಶ್ ಖರೀದಿಸಿದರು ಆಗ ಅದರ ಬೆಲೆ ಹತ್ತು ಸಾವಿರ ರೂಪಾಯಿಗಳು ಆಗ ಮೊಬೈಲ್ ದರಗಳು ಸ್ವಲ್ಪ ಹೆಚ್ಚೇ ಇದ್ದವು. ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಪದೋನ್ನತಿ ಆಗಿ ಉಪ ಶಾಖಾಧಿಕಾರಿಗಳಾಗಿ ಬೆಂಗಳೂರಿನ ಸೆಂಟ್ ಮಾರ್ಕ್ಸ್ ರೋಡ್ ಶಾಖೆಗೆ ವರ್ಗಾವಣೆ ಆಯಿತು. ಛಾಯಾ ಸಹ ಬೆಂಗಳೂರಿಗೆ ಅರ್ಜಿ ಕೋರಿದಳು ಬಹಳ ಬೇಗನೆ ಅವಳಿಗೂ ಬೆಂಗಳೂರಿನ ಸಿಎ ಬ್ರಾಂಚ್ ಗೆ ವರ್ಗ ಸಿಕ್ಕಿತು ಈಗ ಅವರು ಬೆಂಗಳೂರಿನ ಹಲಸೂರಿನಲ್ಲಿ ಮೊದಲು ನಂತರ ಸಂಜಯ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ನನಗೆ ಓಡಾಡಲು ಸಹ ಅನುಕೂಲವಾಗಿತ್ತು.  ಆಫೀಸಿನ ಎದುರಿಗೆ ಬಸ್ ಸ್ಟ್ಯಾಂಡ್. ಯಾವಾಗಲಾದರೂ ಬೆಂಗಳೂರಿಗೆ ಹೋದಾಗ ಬೆಳಿಗ್ಗೆ ಎದ್ದು ಹೊರಟು ನೇರ ಆಫೀಸಿಗೆ ವಾಪಸ್ ಬರುತ್ತಿದ್ದೆ. ಹಾಗೆ ಒಮ್ಮೆ ವಾಪಸ್ ಬರುವಾಗ ಎಸ್ ಎಲ್ ಭೈರಪ್ಪನವರ ಸಹಪಾಠಿ ವೃದ್ಧರೊಬ್ಬರು ನನ್ನ ಪಕ್ಕದ ಸೀಟ್ ನಲ್ಲಿಯೇ ಕುಳಿತಿದ್ದು ದಾರಿಯುದ್ದಕ್ಕೂ ಭೈರಪ್ಪನವರ ಬಗ್ಗೆ, ಅವರ ಕೃತಿಗಳ ಬಗ್ಗೆ ಚರ್ಚೆ ಮಾಡುತ್ತಾ ಬಂದಿದ್ದು ಒಂದು ಸುಂದರ ಸವಿ ನೆನಪು. ಅವರು ಅಕ್ಕಿಹೆಬ್ಬಾಳದವರಾಗಿದ್ದು ಅಲ್ಲಿನ ಜಾತ್ರೆಗೆ ಬನ್ನಿ ಎಂದು ಆಮಂತ್ರಣವನ್ನು ಸಹ ಕೊಟ್ಟಿದ್ದರು. ನನ್ನ ಸಹಪಾಠಿ ಮಂಜುವಿನ ಬಗ್ಗೆ ಒಂದೆರಡು ಮಾತುಗಳನ್ನು ಇಲ್ಲಿ ಹೇಳಲೇಬೇಕು ಮೊದಲಿನಿಂದ ನಮ್ಮ ಮನೆಗೆ ಬರುತ್ತಿದ್ದು ಅಮ್ಮನ ಕೈ ರುಚಿ ನೋಡುತ್ತಿದ್ದವನಿಗೆ ಆಗಲಿಂದ ಅಕ್ಕಿ ಮಸಾಲೆ ರೊಟ್ಟಿ ಎಂದರೆ ತುಂಬಾ ಇಷ್ಟ ನಾನು ಡಬ್ಬಿಗೆ ಅದನ್ನು ತಂದ ದಿನಗಳಲ್ಲೆಲ್ಲ ನನ್ನ ಡಬ್ಬಿಯನ್ನು ಅವನೇ ತೆಗೆದುಕೊಂಡು ಬಿಟ್ಟು ನನಗೆ ಕೆಳಗಿನ ಹೋಟೆಲ್ ನಿಂದ ಮಸಾಲೆ ದೋಸೆ ತರಿಸಿ ಕೊಟ್ಟುಬಿಡುತ್ತಿದ್ದ ಅದರಲ್ಲೂ ಅವರೇ ಕಾಳು ರೊಟ್ಟಿ ಮಾಡಿದಾಗಲಂತೂ ನಾನು ಅವನಿಗಾಗಿಯೇ ಪ್ರತ್ಯೇಕ ಎರಡು ರೊಟ್ಟಿ ಮಾಡಿ ಡಬ್ಬಿಯಲ್ಲಿ ತಂದುಕೊಡುತ್ತಿದೆ ಅಷ್ಟು ಖುಷಿಯಾಗಿ ತಿನ್ನುತ್ತಿದ್ದ ಜೀವನದಲ್ಲಿ ಅಷ್ಟೊಂದು ಉತ್ಸಾಹ ತುಂಬಿಕೊಂಡಿದ್ದ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಂತೂ ನನಗೆ ಇಂದಿಗೂ ಅರಗಿಸಿಕೊಳ್ಳಲಾಗದ ಆಘಾತ. ಫೆಬ್ರವರಿ ತಿಂಗಳ ಮೊದಲ ಭಾಗದಲ್ಲಿ ಒಂದು ಹೊಸ ಬೆಳವಣಿಗೆ ಆರಂಭವಾಯಿತು. ಚುನಾವಣಾ ಕಚೇರಿಯಿಂದ ನಮ್ಮ ಸಿಬ್ಬಂದಿಗಳ ಪಟ್ಟಿಯನ್ನು ತೆಗೆದುಕೊಂಡು ಹೋಗಲು ಆರಂಭಿಸಿದ್ದರು. ಇದುವರೆಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಉಪಾಧ್ಯಾಯರು ಶಿಕ್ಷಕರುಗಳನ್ನು ಮಾತ್ರ ಈ ಡ್ಯೂಟಿಗೆ ತೆಗೆದುಕೊಳ್ಳುತ್ತಿದ್ದದ್ದು ಈ ಬಾರಿ ರಾಜ್ಯ ಹಾಗೂ ಕೇಂದ್ರ ಎರಡು ಕಡೆಯ ಚುನಾವಣೆಗಳು ನಡೆಯುತ್ತಿದ್ದರಿಂದ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯತೆ ಉಂಟಾಗಿದ್ದು ಬ್ಯಾಂಕುಗಳು ಹಾಗೂ ಭಾರತೀಯ ಮತ್ತು ಸಾಮಾನ್ಯ ವಿಮೆ ನೌಕರರನ್ನು ಚುನಾವಣಾ ಡ್ಯೂಟಿಗೆ ಕರೆಯುವ ಪರಿಪಾಠ ಆರಂಭವಾಯಿತು ಇಲ್ಲಿಂದ ಮೊದಲುಗೊಂಡು ಚುನಾವಣೆ ಘೋಷಣೆ ಎಂದ ತಕ್ಷಣ ನಮಗೆಲ್ಲ ದುಃಸ್ವಪ್ನಗಳು ಕಾಡಲು ಆರಂಭವಾಗಿತ್ತು. ಚುನಾವಣೆ ಹೆಸರು ಕೇಳಿದರೆ ಬೆಚ್ಚಿ ಬೀಳುವಷ್ಟು ಚುನಾವಣೆ ಕರ್ತವ್ಯಗಳ ಕಾಟ. ನಿವೃತ್ತಿಯ ಕಡೆಯ ವರ್ಷದಲ್ಲಿಯೂ ಸಹ ಈ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಬೇಕಾಯಿತು. ಏಪ್ರಿಲ್ 26 2004 ರಂದು ಚುನಾವಣೆಗಳು ನಿಗದಿಯಾಗಿತ್ತು. ಅದಕ್ಕೆ ಮುಂಚೆ ಒಂದು ವಾರದಲ್ಲಿ ತರಬೇತಿಗೆಂದು ಕರೆದಿದ್ದರು ಮೈಸೂರಿನ ಟೌನ್ ಹಾಲ್ ನಲ್ಲಿ ತರಬೇತಿ ಒಂದು ರೀತಿಯ ದೊಂಬಿಯೇ ಅದು. ಯಾವ ವಿಷಯಗಳು ನಮಗೆ ಸರಿಯಾಗಿ ಅರ್ಥವಾಗಲಿಲ್ಲ ಅವರು ಹೇಳಿಕೊಟ್ಟಿದ್ದು ಸರಿಯಾಗಿರಲಿಲ್ಲ ಎಂಬುದು ಒಂದು ಕಾರಣವಾದರೆ ಅವೆಲ್ಲವೂ ನಮಗೆ ಮೊಟ್ಟಮೊದಲಿಗೆ ಬಾರಿ ಆದ್ದರಿಂದ ಎಲ್ಲಾ ಹೊಸದು ಎನಿಸತೊಡಗಿತ್ತು. ಶಾಖೆಯ ಎಲ್ಲಾ ಬಹುತೇಕ ಮಂದಿ ಚುನಾವಣಾ ಕರ್ತವ್ಯಕ್ಕೆ ಕರೆ ಬಂದಿತ್ತು. ನನಗೆ ಎ ಪಿ ಆರ್ ಒ ಅಂದರೆ ಉಪಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಕಾರ್ಯ ಇತ್ತು .ಅಕಸ್ಮಾತ್ ಪಿ ಆರ್ ಓ ಬರಲಿಲ್ಲ ಎಂದರೆ ನಾನೇ ಆ ಕರ್ತವ್ಯವನ್ನು ನಿರ್ವಹಿಸಬೇಕಿತ್ತು, ಮೊದಲೇ ಹೆದರುವವರ ಮೇಲೆ ಕಪ್ಪೆ ಎಸೆದಂತಾಗಿತ್ತು ನನ್ನ ಪರಿಸ್ಥಿತಿ. ನಾವು ಕಾರ್ಯನಿರ್ವಹಿಸಬೇಕಾಗಿದ್ದು ಹುಣಸೂರು  ತಾಲೂಕು. ಚುನಾವಣೆಯ ಹಿಂದಿನ ದಿನವೇ ಮಹಾರಾಜ ಕಾಲೇಜು ಮೈದಾನಕ್ಕೆ ಬೆಳಿಗ್ಗೆ 7 ಗಂಟೆಗೆ ಹೋಗಿದ್ದು ಅಲ್ಲಿಂದ ಏರ್ಪಾಡು ಮಾಡಿದ್ದ ಬಸ್ಗಳಲ್ಲಿ ಹೋಗಿದ್ದಾಯಿತು. ಅಲ್ಲಿ ಬೂತ್ ನಂಬರ್ ಹಾಗೂ ಕಾರ್ಯನಿರ್ವಹಿಸಬೇಕಾಗಿದ್ದ ಶಾಖೆ ಹಾಗೂ ನಾವು ಹತ್ತಬೇಕಿದ್ದ ಬಸ್ ನಂಬರ್ ತಿಳಿಸಿದರು. 12 ಗಂಟೆಗೆ ಬಸ್ ಹೊರಡುವುದು ಎಂದು ತಿಳಿಯಿತು ಅಲ್ಲಿಯೇ ಕ್ಯಾಂಪ್ ಹಾಕಿದ್ದ ಹೋಟೆಲ್ ನಲ್ಲಿ ತಿಂಡಿ ತಿಂದು ನಮ್ಮ ನಮ್ಮ ಬೂತ್ ನವರ ಪರಿಚಯ ಮಾಡಿಕೊಂಡು ಅವರಿಂದ ಸಾಮಗ್ರಿಗಳನ್ನು ಪಡೆದೆವು ವಿದ್ಯಾವರ್ಧಕ ಕಾಲೇಜಿನ ಲೆಕ್ಚರರ್ ಒಬ್ಬರು ಖಾಸಗಿ ಶಾಲೆಗೆ ಶಿಕ್ಷಕಿ ಗೀತಾ ಇನ್ನೊಬ್ಬರು ಹಾಗೂ ಉಳಿದಿದ್ದರು ಸರ್ಕಾರಿ ರಾಜ್ಯ ಸರ್ಕಾರಿ ನೌಕರರು ನಮ್ಮ ತಂಡದಲ್ಲಿ ಇದ್ದರು.  ಅಂತೂ ಇಂತೂ ಹನ್ನೆರಡುವರೆಗೆ ಬಸ್ ಹೊರಟಿದ್ದು ದಾರಿಯ ಮದ್ಯ ಹುಣಸೂರಿನ ಹೋಟೆಲ್ ನಲ್ಲಿ ನಿಲ್ಲಿಸಿ ಊಟ ಮಾಡಿದೆವು. ನಮ್ಮ ಪಿ ಆರ್ ಓ ಅವರಿಗೂ ಇದೆ ಮೊದಲ ಚುನಾವಣಾ ಅನುಭವ ತುಂಬಾ ಜಾಗರೂಕತೆಯಿಂದ ವರ್ತಿಸುತ್ತಿದ್ದರು. ನಾಲ್ಕು ಗಂಟೆಯ ವೇಳೆಗೆ ನಮ್ಮನ್ನು ಬಳಿ ಬಿಟ್ಟರು ಅಲ್ಲಿ ಇಲ್ಲ ವ್ಯವಸ್ಥೆಗಳನ್ನು ಮಾಡಿ ಕೊಂಡೆವು. ರಾತ್ರಿ ಅಲ್ಲಿ ಹಳ್ಳಿಯವರೆ ಅಡುಗೆಯ ವ್ಯವಸ್ಥೆ ಮಾಡಿದ್ದರು. ನಾನು ಮತ್ತು ಗೀತಾ ಅವರು ನಾನು ತೆಗೆದುಕೊಂಡು ಹೋಗಿದ್ದ ಚಪಾತಿ ಹಾಗೂ ಹಾಗಲಕಾಯಿ ಗೊಜ್ಜುಗಳಲ್ಲಿ ರಾತ್ರಿಯ ಊಟ ಮುಗಿಸಿದೆವು .ಹಳ್ಳಿಯ ಶಾಲೆ, ಸದ್ಯ ನಮಗೆ  ಶಿಕ್ಷಕರು ಉಪಯೋಗಿಸುವ ಶೌಚಾಲಯವನ್ನು ಸ್ವಚ್ಛಗೊಳಿಸಿ ಬಿಟ್ಟು ಕೊಟ್ಟಿದ್ದರು. ಆದರೆ ಸ್ನಾನಕ್ಕೆ ಮಾತ್ರ ವ್ಯವಸ್ಥೆ ಇರಲಿಲ್ಲ ಬೆಳಗಾಗುವ ಮೊದಲೇ ಸ್ನಾನ ಮಾಡಿಕೊಂಡಿದ್ದರಂತೆ .ನಮಗೆ ಮಾತ್ರ ಅಂದು ಸ್ನಾನ ಭಾಗ್ಯ ಸಿಗಲಿಲ್ಲ.ಬೆಳಿಗ್ಗೆ 7.30ಗೆ ಚುನಾವಣೆ ಆರಂಭವಾಯಿತು ಎರಡೆರಡು ಸ್ಥಾನಗಳಿಗೆ ಆದ್ದರಿಂದ ಸ್ವಲ್ಪ ಸಮಯ ಹಿಡಿಯುತ್ತಲು ಇತ್ತು ಬೆಳಿಗ್ಗೆ 7.30 ಇಂದ ಸಂಜೆ ಆರು ಗಂಟೆಯ ತನಕ ಚುನಾವಣೆಗಳು ತಿಂಡಿ ತಿನ್ನಲು ಸಹ ಬಿಡುವಾಗಲಿಲ್ಲ ನಮಗೆಲ್ಲ ಕೈ ತುಂಬಾ ಕೆಲಸ ಇದ್ದುದರಲ್ಲಿ ಪಿ ಆರ್ ಓ ಅವರೇ ಮೇಲ್ವಿಚಾರಣೆ ಮಾಡಿಕೊಳ್ಳುತ್ತ ನಾವು ಕೆಲಸ ಮಾಡುತ್ತಲೇ ತಿನ್ನುವ ಹಾಗೆ ಬ್ರೆಡ್ ಚಾ ಬಾಳೆಹಣ್ಣು ಬಿಸ್ಕತ್ತು ಇವುಗಳನ್ನು ಸರಬರಾಜು ಮಾಡಿದರು ಒಂದು ಗಂಟೆಯ ವೇಳೆಗೆ ಸ್ವಲ್ಪ ಜನಸಂದಣಿ ಕಡಿಮೆಯಾಗಿದ್ದರಿಂದ ಒಬ್ಬೊಬ್ಬರಾಗಿ ಹೋಗಿ ಊಟ ಮಾಡಿಕೊಂಡು ಬಂದೆವು .ನನಗೆ ಅಲ್ಲಿಯ ಅಡಿಗೆ ಹೇಗಪ್ಪಾ ತಿನ್ನುವುದು ಎಂದು ಚಿಂತೆ .ಆದರೆ ಬೆಳಿಗ್ಗೆ ತಂದಿಟ್ಟಿದ್ದ ಉಪ್ಪಿಟ್ಟು ಹಾಗೆ ಇತ್ತು ಅದನ್ನ ತಿಂದು ಮೊಸರನ್ನ ತಿಂದು ಹೇಗೋ ಕಥೆ ಮುಗಿಸಿದ್ದಾಯಿತು. ಸಂಜೆ ಆರು ಗಂಟೆಗೆ ಮುಕ್ತಾಯ ಎಂದಿದ್ದರು ಆ ವೇಳೆಗೆ ಇದ್ದವರನ್ನೆಲ್ಲ ಮತದಾನ ಮಾಡಲು ಅವಕಾಶ ಮಾಡಿಕೊಡಲೇಬೇಕಿತ್ತು, ಆರು ಗಂಟೆಯ ನಂತರವೂ 60 70 ಜನ ಇದ್ದರು ನಮ್ಮ ಬೂತ್ ನಲ್ಲಿ 95% ಮತದಾನ ಆಗಿತ್ತು, ಅದು ಏಳು ಗಂಟೆಯ ವೇಳೆಗೆ ಮುಗಿದು ನಾವು ಎಲ್ಲಾ ಸ್ಟೇಟ್ಮೆಂಟ್ ಗಳನ್ನು ತಯಾರಿಸಿಕೊಳ್ಳುವ ವೇಳೆಗೆ 8.30 ಆಗಿತ್ತು ಬಸ್ ಆಗ ಬಂತು ಸಣ್ಣಪುಟ್ಟ ಉಳಿದದ್ದನ್ನು ಅಲ್ಲಿಗೆ ಮುಗಿಸಿಕೊಂಡು ಎಂದು ಹೊರಟುಬಿಟ್ಟವು ಮತ್ತೆ ಹುಣಸೂರು ತಾಲೂಕು ಕಚೇರಿಯಲ್ಲಿ ತುಂಬಾ ಜನ ಸಂದಣಿ. ಏನೊಂದು ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಹೇಗೋ ನುಗ್ಗಿ ಅಂತೂ ಎಲ್ಲವನ್ನು ಸಲ್ಲಿಸುವ ವೇಳೆಗೆ ರಾತ್ರಿ 10:30 ಆಗಿ ಹೋಗಿತ್ತು. ನಂತರ ಮೈಸೂರಿಗೆ ಹೊರಡುವ ಬಸ್ನಲ್ಲಿ ಕುಳಿತು ಹೊರಟೆವು. ನಮ್ಮ ಪಿ ಆರ್ ಓ ಬಳಿ ಇದ್ದ ಮೊಬೈಲಿನಿಂದ ನನ್ನ ತಾಯಿಯ ಮನೆಯ ಲ್ಯಾಂಡ್ಲೈನ್ ಗೆ ಫೋನ್ ಮಾಡಿ ನಮ್ಮ ಪತಿಗೆ ವಿಷಯ ತಿಳಿಸಿ ಅವರು ಬಂದು ಬಸಪ್ಪ ಹಾಸ್ಪಿಟಲ್ ಬಳಿ ನನಗಾಗಿ ಕಾಯುತ್ತಿದ್ದರು. ಅಂತೂ ಇಂತೂ ನಾಳೆ ಮುಗಿಸಿ ಮನೆಗೆ ಬಂದಾಗ ಆ ದಿನ ದಾಟಿ ಹೋಗಿತ್ತು. ಈ ಶಾಖೆಯಲ್ಲಿ ಇದ್ದಾಗಲೇ ಮತ್ತೊಮ್ಮೆ ಹೈದರಾಬಾದ್ ತರಬೇತಿಗೆ ಕರೆ ಬಂತು ಅದು ಮತ್ತೆ ನಾನು ಹಾಗೂ ನಂದಶ್ರೀ ಕುಲಕರ್ಣಿ ಕಟ್ಟಿ ಜೊತೆಯಾಗಿ ಹೈದರಾಬಾದಿಗೆ ಹೋಗಿದ್ದೆವು. ಮಕ್ಕಳನ್ನು ಅವರ ತಾಯಿ ಮನೆಗೆ ಬಿಟ್ಟು ಹೋಗಬೇಕಾಗಿತ್ತು. ಮೊದಲು ಬೆಂಗಳೂರಿಗೆ ಹೋಗಿ ಅವರ ಮನೆಯಲ್ಲಿ ಬಿಟ್ಟು ನಂತರ ಹೈದರಾಬಾದ್ ಟ್ರೈನ್ ಹಿಡಿದದ್ದು ಇಂದಿನಂತೆ ಹೈದರಾಬಾದ್ ತರಬೇತಿ ತುಂಬಾ ಆಸಕ್ತಿದಾಯಕವಾಗಿ ಚೆನ್ನಾಗಿಯೂ ಇತ್ತು. ಈ ಬಾರಿ ಬರಿ ಬಿರ್ಲಾ ಮಂದಿರ ಮಾತ್ರ ನೋಡಿದ್ದು ಖರೀದಿಯೇ ಹೆಚ್ಚು. ನನ್ನ ತಂಗಿಯರಿಗೆ ಹಾಗೂ ಈಗಾಗಲೇ ನನ್ನ ಮೈದುನನಿಗೆ ಮದುವೆಯಾಗಿ ನಾನು ಓರಗಿತ್ತಿಗೆ ಸೀರೆ ತೆಗೆದುಕೊಂಡಿದ್ದೆ ನನ್ನ ನಾದಿನಿ ಮೂರು ಜನರಿಗೂ ಹೈದರಾಬಾದ್ ಸರಗಳು. ತುಂಬಾ ಖುಶಿ ಕೊಟ್ಟ ಪ್ರವಾಸ ಅದು.(ಮುಂದುವರೆಯುವುದು) ಸುಜಾತಾ ರವೀಶ್ಮೈಸೂರು

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ–32 ನಮ್ಮ ಆಫೀಸಿನ ಮುಂದಿನ ರಸ್ತೆಯಲ್ಲಿಯೇ ಒಂದು ಎಂಟು ನಿಮಿಷ ನಡೆದರೆ ಸಂತೆ ನಡೆಯುವ ಸಂತೆ ಮಾಳ ಅಥವಾ ಬಯಲು. ನಾವು ಮಧ್ಯಾಹ್ನ ಭೋಜನ ವಿರಾಮ ವೇಳೆಯಲ್ಲಿ ಬೇಗ ಬೇಗ ಊಟ ಮುಗಿಸಿ ಸಂತೆಗೆ ಹೋಗುತ್ತಿದ್ದೆವು. ಸಾಮಾನ್ಯವಾಗಿ ನಾನು ಇಂದುಮತಿ ಮತ್ತು ಶಶಿಕಲಾ ಹೋಗುತ್ತಿದ್ದೆವು.. ನಂತರ ಗಂಗಾ ಮತ್ತು ಫಾತಿಮಾ ವರ್ಗವಾಗಿ ಬಂದಮೇಲೆ ಅವರೂ ಬರುತ್ತಿದ್ದರು.ಮೊದಲಿಗೆ ಸಂತೆಯಲ್ಲಿದ್ದ ಮೂರು ನಾಲ್ಕು ಸಾಲುಗಳನ್ನು ಒಂದು ಬಾರಿ ಕಣ್ಣಾಡಿಸಿ ಬರುವುದು. ನಂತರ ಎಲ್ಲಿ ಚೆನ್ನಾಗಿದೆಯೋ ಹಾಗೂ ಬೆಲೆ ಕಡಿಮೆ ಇರುತ್ತದೆಯೋ ಅಲ್ಲಿ ತೆಗೆದುಕೊಳ್ಳುವುದು.. ನಾನು ಅಮ್ಮನ ಮನೆಗೂ ಸೇರಿಸಿ ತರಕಾರಿ ತೆಗೆದುಕೊಂಡು ಬರುತ್ತಿದ್ದೆ .ಸಾಮಾನ್ಯ ನನ್ನ ಬ್ಯಾಗ್ ತೂಕವಾಗಿ ಇರುತ್ತಿತ್ತು. ಈಗಾದರೆ ಅಷ್ಟು ಭಾರ ಹೊತ್ತು ಎಂಟು ನಿಮಿಷ ನಡೆಯಲು ಆಗುತ್ತಿತ್ತೋ ಇಲ್ಲವೋ ಹಾಗಂತು ನಿರಾಯಾಸವಾಗಿ ತೆಗೆದುಕೊಂಡು ಬರುತ್ತಿದ್ದೆವು. ಸಂಜೆ ಮಾತ್ರ ಆಟೋ ಹಿಡಿದು ಹೋಗುತ್ತಿದ್ದೆವು. ಸಾಮಾನ್ಯ ಅಲ್ಲಿ ತರಕಾರಿ ಬೆಳೆದವರೇ ತಂದು ಮಾರುತಿದ್ದುದರಿಂದ ತುಂಬಾ ತಾಜಾ ಆಗಿಯೂ ಇರುತ್ತಿತ್ತು ಅಲ್ಲದೆ ಮೈಸೂರಿಗಿಂತ ಬಹಳ ಕಡಿಮೆ ದರದಲ್ಲಿಯೇ ಸಿಗುತ್ತಿದ್ದುದಿ ಒಂದು ಕಾರಣ. ಸೊಪ್ಪಂತೂ ತುಂಬಾ ಚೆನ್ನಾಗಿರುತ್ತಿತ್ತು. ಆದರೆ ನಾವು ಸಂತೆಯಲ್ಲಿ ಸೊಪ್ಪನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ ತೆಗೆದುಕೊಂಡು ಸಂಜೆಯ ವೇಳೆಗೆ ಬಾಡಿ ಹೋಗುತ್ತದೆ ಎನ್ನುವುದು ಒಂದು ಕಾರಣವಾದರೆ ರೈಲ್ವೆ ಸ್ಟೇಷನ್ ಪಕ್ಕದಲ್ಲಿಯೇ ಒಂದು ತರಕಾರಿ ಮಾರುಕಟ್ಟೆ ಇತ್ತು. ಅಲ್ಲಿ ತುದಿಯಲ್ಲಿಯೇ ಒಂದು ಅಜ್ಜಿ ಸೊಪ್ಪು ಮಾರುತ್ತಾ ಕುಳಿತಿರುತ್ತಿತ್ತು. ಸಾಮಾನ್ಯ ಆಕೆಯ ಬಳಿಯೇ ತೆಗೆದುಕೊಂಡು ರೈಲು ಹತ್ತುತ್ತಿದ್ದುದು. ಅದು ಶುಕ್ರವಾರ ಮಾತ್ರ ಸೊಪ್ಪು ತೆಗೆದುಕೊಳ್ಳದೆ ಬೇರೆ ದಿನಗಳಲ್ಲಿ ತೆಗೆದುಕೊಳ್ಳುತ್ತಿದ್ದೆವು.. ಕಸಿ ಮಾಡಿದ ದೊಡ್ಡ ಗಾತ್ರದ ಬದನೆಕಾಯಿ ಒಳಗೆ ಒಂದು ಬೀಜವು ಇರದೆ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು. ಎಳೆ ಹುರಳಿ ಕಾಯಿ ಗೋರಿಕಾಯಿ ಹೀರೆಕಾಯಿಗಳು ನೋಡಿದರೆ ತಿನ್ನುವಷ್ಟು ಆಸೆ ಆಗುತ್ತಿತ್ತು. ಕ್ಯಾರೆಟ್ ಸಹ ಚೆನ್ನಾಗಿಯೇ ಸಿಗುತ್ತಿತ್ತು. ಹೀಗಾಗಿ ಎಲ್ಲ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಅವರೇ ಕಾಯಿ ಮತ್ತು ಸೊಪ್ಪು ಮಾತ್ರ ರೈಲ್ವೆ ಸ್ಟೇಷನ್ ಬಳಿಯಲ್ಲಿಯೇ ತೆಗೆದುಕೊಳ್ಳುತ್ತಿದ್ದು ಹೊತ್ತುಕೊಂಡು ಹೋಗಬೇಕಲ್ಲ ಎನ್ನುವುದು ಒಂದಾದರೆ ಅಲ್ಲೂ ಸಹ ಇದೇ ದರದಲ್ಲಿ ಸಿಗುತ್ತಿದ್ದುದು ಮತ್ತೊಂದು ವಿಶೇಷ. ಮತ್ತೊಂದು ಬಾರಿ ವರ್ಗಾವಣೆ ಚಕ್ರ ಉರುಳಿತು. ಈ ಬಾರಿ ಸುಲೋಚನಾ ಅವರಿಗೆ ಚಾಮರಾಜನಗರದಿಂದ ನಂಜನಗೂಡಿಗೆ ವರ್ಗ ಸಿಕ್ಕಿತ್ತು .ಅದರ ಜೊತೆಯಲ್ಲಿ ಈ ಮೊದಲು ನನ್ನ ಜೊತೆ ವಿಭಾಗೀಯ ಕಚೇರಿಯಲ್ಲಿ ಇದ್ದ ಸುಮಾ ಸಹ ಕೆಆರ್ ಪೇಟೆಯಿಂದ ನಂಜನಗೂಡಿಗೆ ವರ್ಗವಾಗಿ ಬಂದಳು. ನಮ್ಮ ರೈಲಿನಲ್ಲಿ ಓಡಾಡುವ ಬಳಗಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಯಿತು. ಫಾತಿಮಾ ಹಾಗೂ ವೈದೇಹಿ ಅವರು ಅದರ ಮುಂದಿನ ಸುತ್ತಿನಲ್ಲಿ ವರ್ಗವಾಗಿ ಬಂದರು. ಅವರಿಬ್ಬರೂ ಬಸ್ ನಲ್ಲಿ ಓಡಾಡುತ್ತಿದ್ದರು.ಸುಲೋಚನ ಬಂದದ್ದು ಒಂದು ಅನುಕೂಲ ಏನಾಯಿತೆಂದರೆ ಮೈಸೂರಿನಿಂದ ನೀರು ಹೊತ್ತುಕೊಂಡು ಹೋಗುವುದು ತಪ್ಪಿತು. ಅವರ ಮನೆಯಿಂದ ಆಟೋದಲ್ಲಿ ಬರುತ್ತಿದ್ದುದರಿಂದ  ದಿನಾ ನಾನೇ ನೀರು  ತರುತ್ತೇನೆ ಎಂದು ಹೇಳಿದ್ದರು. ರಜೆ ತೆಗೆದುಕೊಳ್ಳದ ಚಿಕ್ಕ ಪುಟ್ಟ ಹಬ್ಬಗಳು ನಂಜನಗೂಡಿನ ದೊಡ್ಡ ಜಾತ್ರೆ ಇಂತಹ ದಿನಗಳೆಲ್ಲ ಅವರ ಮನೆಗೆ ಆಟೋದಲ್ಲಿ ಹೋಗಿ ಊಟ ಮಾಡಿ ಬರುತ್ತಿದ್ದೆವು. ಅವರಿಗೆ ಕಚೇರಿ ಸೇವಾ ವಿಭಾಗವನ್ನು ಕೊಟ್ಟಿದ್ದರು. ಸುಮಾಗೆ ಲೆಕ್ಕ ಪತ್ರ ವಿಭಾಗ. ಈ ಸುತ್ತಿನಲ್ಲಿ ನನಗೆ ಮೊದಲೇ ಹೇಳಿದಂತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ಕೊಟ್ಟರು .ಅಲ್ಲಿ ನಾನು ಲೋನ್ಸ್ ಅಂದರೆ ಸಾಲ ವಿಭಾಗಕ್ಕೆನಿಯುಕ್ತಳಾದೆ. ಅಲ್ಲಿ ಆಗ ನಾರಾಯಣಸ್ವಾಮಿ ಅವರು ನಮಗೆ ಆಡಳಿತ ಅಧಿಕಾರಿಗಳಾಗಿ ಇದ್ದರು. ಆಗೆಲ್ಲ ಒಂದೇ ಸಾವಿರದ ಒಳಗೆ ಸಾಲ ಇದ್ದಾಗ ಅದನ್ನು ನಗದು ರೂಪದಲ್ಲಿಯೇ ಕೊಡುತ್ತಿದ್ದರು .ಹಾಗಾಗಿ ಒಂದು ರೀತಿಯ ಒತ್ತಡದಲ್ಲಿಯೇ ಕೆಲಸ ಮಾಡಬೇಕಿತ್ತು ಆದರೂ ಖುಷಿ ಕೊಡುತ್ತಿತ್ತು. ತುಂಬಾ ಅನಿವಾರ್ಯ ಸ್ಥಿತಿಯಲ್ಲಿ ಸಾಲ ಬೇಕಾದವರಿಗೆ ತಕ್ಷಣ ಮಾಡಿಕೊಟ್ಟಾಗ ಅವರು ತೋರಿಸುತಿದ್ದ ಕೃತಜ್ಞತಾ ಭಾವ ಸಾರ್ಥಕ ಭಾವನೆ ಮೂಡಿಸುತ್ತಿತ್ತು. ಹೋದ ಕೆಲವು ದಿನಗಳಲ್ಲೇ ಅಲ್ಲಿನ ನಿಯತಕಾಲಿಕೆಗಳ ವಿತರಣೆ ಕೆಲಸ ಮತ್ತೆ ಈ ಶಾಖೆಯಲ್ಲಿಯೂ ನನ್ನನ್ನೇ ಅರಸಿ ಬಂದಿತ್ತು ಅದು ತುಂಬಾ ಇಷ್ಟದ ಕೆಲಸವಾದ್ದರಿಂದ ಒಪ್ಪಿಕೊಳ್ಳಲು ನಿರಾಕರಿಸಲಿಲ್ಲ.  ಆಗ ಪಾಲಿಸಿ ಸೇವಾ ವಿಭಾಗದಲ್ಲಿನ ನಮ್ಮ ತಂಡ ತುಂಬಾ ಚೆನ್ನಾಗಿತ್ತು ನಾಗಮಣಿ ಗಿರಿಜಾ ಮತ್ತು ನಾನು ಉನ್ನತ ದರ್ಜೆ ಸಹಾಯಕಿಯರು.  ಈ ಸಮಯದಲ್ಲಿ ತುಂಬಾ ದುಃಖಕರ ಘಟನೆ ಒಂದು ನಡೆಯಿತು .ಹೊಸ ವ್ಯವಹಾರ ವಿಭಾಗದಲ್ಲಿ ನನ್ನ ಜೊತೆಗೆ ಸಹಾಯಕರಾಗಿ ಇದ್ದ ಮಹಾದೇವನ್ ಅವರ ಆಘಾತಕಾರಿ ಸಾವು. ಉತ್ತರ ಭಾರತಕ್ಕೆ ಪತ್ನಿಯೊಂದಿಗೆ ಪ್ರವಾಸ ಹೋಗಿದ್ದಾಗ ಗಂಗಾನದಿಯ ನೀರಿನ ಸೆಳೆತಕ್ಕೆ ಅವರ ಪತ್ನಿ ಕೊಚ್ಚಿ ಹೋದರು .ಅವರನ್ನು ಹಿಡಿಯಲು ಇವರು ಅವರ ಹಿಂದೆಯೇ ಧುಮುಕಿದರು. ಬೇರೆ ನುರಿತ ಈಜುಗಾರರು ಅವರಿಬ್ಬರನ್ನು ದಡಕ್ಕೆ ಎಳೆದು ತರುವಷ್ಟರ ಮಹದೇವನ್ ಅವರ  ಪ್ರಾಣ ಹೋಗಿಬಿಟ್ಟಿತ್ತು. ನಂತರ ಅವರ ಪತ್ನಿಗೆ ಅವರ ಕೆಲಸ ಸಿಕ್ಕಿತು ಇತ್ತೀಚೆಗೆ ಅವರ ಮಗಳ ಮದುವೆಯೂ ಆಯಿತು. ಆದರೂ ಬಹಳ ದಿನಗಳ ಕಾಲ ಕಾಡಿದ ಸಾವು ಅದು. ಮತ್ತೆ ಸಂತೆಯ ವಿಷಯಕ್ಕೆ ಬರುತ್ತೇನೆ. ಈ ಮೊದಲೇ ಹೇಳಿದಂತೆ ಹುಲ್ಲಹಳ್ಳಿ ಸರ್ಕಲ್ ನಿಂದ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ನಮ್ಮ ಆಫೀಸ್ ಇರುವುದು. ಸಂತೆ ನಡೆಯುತ್ತಿರುವುದು ಶುಕ್ರವಾರ. ನಮ್ಮ ಶಾಖೆಯಲ್ಲಿ ಮಹಿಳೆಯರ ಶೌಚಾಲಯ ಕ್ಯಾಶ್ ಕೌಂಟರ್ ನ ಎದುರಿಗೆ ಎಲ್ಲರ ಕಣ್ಣಿಗೆ ಬೀಳುವಂತೆಯೇ ಇತ್ತು .ಸಂತೆಯ ದಿನ ಸಂತೆಗೆ ಹೋಗುವ ಹೆಂಗಸರು ಸಂತೆಯ ಮಾರಾಟಗಾರ್ತಿ ಹೆಂಗಸರು ಎಲ್ಲರಿಗೂ ನಮ್ಮ ಶಾಖೆಯ ಶೌಚಾಲಯ ಒಂದು ಸಾರ್ವಜನಿಕ ಶೌಚಾಲಯದ ತರಹ ಆಗಿ ಹೋಗಿತ್ತು. ಸದಾ ತೆರೆದೇ ಇರುತ್ತಿದುದರಿಂದ ಮುಂಬಾಗಿಲಿನಿಂದ ಪ್ರವೇಶಿಸಿ ನೇರ ಅಲ್ಲಿಗೆ ಹೋಗಿ ಬಿಡುತ್ತಿದ್ದರು .ಪ್ರವೇಶ ನಿಷೇಧ ಎಂಬ ಬೋರ್ಡ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ. ಮಕ್ಕಳನ್ನು ಕರೆದುಕೊಂಡು ಬಂದು ತುಂಬಾ ಗಲೀಜು ಮಾಡಿ ಇಡೀ ಮಧ್ಯಾಹ್ನ ನಮಗೂ ಅದನ್ನು ಉಪಯೋಗಿಸಲು ಸಾಧ್ಯವಾಗದೆ ಮಹಡಿಯ ಮೇಲಿದ್ದ ಬೇರೊಂದು ಶೌಚಾಲಯವನ್ನು ನಾವು ಸಿಬ್ಬಂದಿಯವರು ಉಪಯೋಗಿಸಿಬೇಕಾಗಿತ್ತು. ಮಾರನೆಯ ದಿನ ಬಂದ ಸ್ವಚ್ಛತಾ ಸಿಬ್ಬಂದಿಯವರು ಶಾಖಾಧಿಕಾರಿಗಳ ಬಳಿ ಅದನ್ನು ಹೇಳಿ ನಂತರದಲ್ಲಿ ಅಲ್ಲಿಗೆ ಬೀಗ ಹಾಕಿ ಬೀಗದ ಕೈ ಸಿಬ್ಬಂದಿಗಳಿಗೆ ಮಾತ್ರ ಗೊತ್ತಿರುವ ಜಾಗದಲ್ಲಿ ಇಡಿಸಲಾಯಿತು .ಒಂದೆರಡು ಮೂರು ವಾರ ಬಂದವರು ಮುಚ್ಚಿದ ಬಾಗಿಲನ್ನು ನೋಡಿ ನಮ್ಮನ್ನು ಕೇಳಿದರು .ಆದರೆ ಅದು ಎಲ್ಲರ ಉಪಯೋಗಕ್ಕೆ ಅಲ್ಲ ಎಂದು ತಿಳಿದ ಮೇಲೆ ನಂತರದಲ್ಲಿ ಜನ ಹಾಗೆ ಬರುವುದು ಕಡಿಮೆಯಾಯಿತು. ಆದರೆ ನಾನು ವಾಪಸ್ ಮೈಸೂರಿಗೆ ಬರುವವರೆಗೂ ಶುಕ್ರವಾರದ ದಿನ ಅದಕ್ಕೆ ಬೀಗ ಹಾಕಿಯೇ ಇಡುತ್ತಿದ್ದೆವು.ಅದು ತಪ್ಪು ನಾವು ಹಾಗೆ ಮಾಡಬಾರದಿತ್ತು ಎಂದೆನಿಸಿದರೂ ಬಂದವರು ಕನಿಷ್ಠ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ ತುಂಬಾ ಗಲೀಜು ಮಾಡಿ ಬಿಡುವುದರಿಂದಲೂ, ಮಧ್ಯಾಹ್ನದ ವೇಳೆ ನಾವು ಆ ಮಹಿಳಾ ಕೊಠಡಿಯಲ್ಲಿ ಊಟ ಮಾಡಬೇಕಾಗಿದ್ದರಿಂದ ಆ ಕೊಳಕನ್ನು ಸಹಿಸಲು ಸಾಧ್ಯವಾಗದಿದ್ದುದು ಈ ನಡೆಗೆ ಕಾರಣವಾಗಿತ್ತು .‌ನಂತರ ಸ್ವಚ್ಛತಾ ಸಿಬ್ಬಂದಿ ವಿರೋಧ ಬಂದ ಮೇಲಂತೂ ನಮ್ಮ ಅಪರಾಧಿ ಮನೋಭಾವ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ನಾವು ಮಹಿಳಾ ಬೋಗಿಯಲ್ಲೇ ದಿನ ಓಡಾಡುತ್ತಿದ್ದುದು ಎಂದು ಹೇಳಿದೆನಲ್ಲ ಅಲ್ಲಿ ನಮಗೆ ಬೇರೆ ಬ್ಯಾಂಕಿನ ಮತ್ತು ರಾಜ್ಯ ಸರ್ಕಾರಿ ನೌಕರಿಯ ಗೆಳತಿಯರು ಸಿಕ್ಕಿದರು. ಕೆನರಾ ಬ್ಯಾಂಕಿನ ನನ್ನದೇ ಹೆಸರಿನ ಸುಜಾತ ಎನ್ನುವವರು ಅಲ್ಲದೆ ಕಮರ್ಷಿಯಲ್ ಟ್ಯಾಕ್ಸ್ ಆಫೀಸಿನ ಗೀತಾ ಮತ್ತು ಸರಸ್ವತಿ ರಾಜ್ಯ ಸರ್ಕಾರದ ನೌಕರಿಯಲ್ಲಿದ್ದ ಉಮಾ ಮತ್ತು ಇನ್ನೊಬ್ಬರು ಹೆಸರು ಮರೆತು ಹೋಗಿದೆ. ಮತ್ತೆ ಕಡ ಕೊಳದ ಹಿಟ್ಟಿನ ಕಾರ್ಖಾನೆಯಲ್ಲಿ ಕೆಲಸದಲ್ಲಿದ್ದ ಪೂರ್ಣಿಮಾ ಮತ್ತು ಅನಿತಾ  ನಾವೆಲ್ಲ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು. ಉಮಾ ಅವರ ಮನೆಯಲ್ಲಿ ಜಾಜಿ ಹೂ  ಬಿಡುತ್ತಿದ್ದುದರಿಂದ ಅವರು ತರುತ್ತಿದ್ದರು. ಆದರೆ ಕಟ್ಟಲು ಸಮಯವಾಗುತ್ತಿರಲಿಲ್ಲ . ದಿನಾ ರೈಲಿನಲ್ಲಿ ನಾನೇ ಕಟ್ಟಿಕೊಡುತ್ತಿದ್ದೆ . ನನಗೂ  ಅದರಲ್ಲಿ ಪಾಲು ಇರುತ್ತಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ನಾನು ಮನೆಯಲ್ಲಿ ತಿನ್ನಲು ಸಮಯವಾಗದಿದ್ದದರಿಂದ ಹಾಗೂ ಬೇಗ ಆಗುತ್ತಿದುದರಿಂದ ತಿಂಡಿಯನ್ನು ಸಹ ರೈಲಿನಲ್ಲಿ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೆ. ಆ ಸಮಯದಲ್ಲಿ ಪೂರ್ಣಿಮಾ ಅವರು ಗರ್ಭಿಣಿಯಾಗಿದ್ದರು. ಅವರಿಗೆ ನಮ್ಮ ಮನೆಯ ಮೆಂತ್ಯದ ಹಿಟ್ಟಿನ ಗೊಜ್ಜು ಹಾಗೂ ಹುಳಿ ಅನ್ನ ತುಂಬಾ ಇಷ್ಟವಾಗುತ್ತಿತ್ತು. ಸಾಮಾನ್ಯ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವರು ಹೆರಿಗೆ ರಜೆ ಹೋಗುವ ಮೊದಲು ನಾವು ನಮ್ಮ ಬೋಗಿಯಲ್ಲಿ  ಅವರಿಗೆ ಒಂದು ಸೀರೆ ಬಳೆ ಮಲ್ಲಿಗೆ ಹೂವು ಕೊಟ್ಟು ಅಂದಿನ ದಿನ ಸಿಹಿ ತಿನಿಸು ಮಾಡಿ ತೆಗೆದುಕೊಂಡು ಹೋಗಿ ಕೊಟ್ಟಿದ್ದೆವು. ಆನಂತರದಲ್ಲಿ ಅವರು ನನ್ನ ತಂಗಿಯ ಪತಿ ಮುರಳಿ ಅವರ ಸಂಬಂಧಿ ಎಂದು ತಿಳಿಯಿತು. ಈಗಲೂ ಅವರ ಸಂಪರ್ಕ ಇದೆ ಸರಸ್ವತಿ ಅವರ ಮಗನ ಮದುವೆಗೆ ಆಹ್ವಾನಿಸಿದ್ದರು. ಅದಕ್ಕೂ ಹೋಗಿದ್ದೆ .ಈಗ ಅವರು ಎಲ್ಲ ನಿವೃತ್ತರಾಗಿರಬಹುದು. ಇತ್ತೀಚೆಗೆ ನನ್ನ ಗೆಳತಿ ಸಹೋದ್ಯೋಗಿ ಮಂಗಳಾಂಬ ಅವರ ಮಗನ ಮದುವೆಯಲ್ಲಿ ಉಮಾ ಮತ್ತು ಪರಮೇಶ್ವರ ಅವರು ಸಿಕ್ಕಿದ್ದರು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು ಈಗ ಅವರು ಸಹ ಸಂಪರ್ಕದಲ್ಲಿ ಇದ್ದಾರೆ.ತುಂಬಾ ಚೆನ್ನಾಗಿ ಬಾಂಧವ್ಯ ಇತ್ತು. ರೈಲಿನಲ್ಲಿ ಓಡಾಡುವುದೆಂದರೆ ತುಂಬಾ ಸಂತೋಷವಾಗುತ್ತಿತ್ತು. ಗೆಳತಿಯರು ಅಷ್ಟೇ ಅನ್ಯೋನ್ಯವಾಗಿದ್ದೆವು. ಅದನ್ನೆಲ್ಲ ನೆನೆದರೆ ತುಟಿ ಅಂಚಿನಲ್ಲಿ ಮುಗುಳ್ನಗೆ ಬಿರಿಯುತ್ತದೆ. ಖುಷಿಯ ಕ್ಷಣಗಳು ನೆನಪಾಗುತ್ತದೆ. ಸವಿ ನೆನಪುಗಳು ಬೇಕು ಸವಿಯಲೀ ಬದುಕು ಅಲ್ಲವೇ?(ಮುಂದುವರೆಯುವುದು) ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-32 ಫೆಬ್ರವರಿ ಕಡೆಯ ವಾರದಲ್ಲಿ ನಮಗೆ ವರ್ಗಾವಣೆಯ ಆದೇಶ ಬಂದದ್ದು ಮಾರ್ಚ್ ಆರನೆಯ ತಾರೀಕು ರಿಲೀವ್ ಆಗಬೇಕಿತ್ತು. ಯಾವಾಗಲೂ ಶನಿವಾರ ಮಧ್ಯಾಹ್ನ ರಿಲೀಫ್ ಆಗುವಂತೆ ಬರುತ್ತಿದ್ದ ಆದೇಶ ಈ ಬಾರಿ ಸೋಮವಾರ ಸಂಜೆ ರಿಲೀವ್ ಆಗುವ ಹಾಗೆ ಬಂದಿತ್ತು. ಐದನೆಯ ತಾರೀಕು ಶಿವರಾತ್ರಿ ಬಂದಿದ್ದರಿಂದ ನಾವು ಮೈಸೂರಿಗೆ ಹೋಗಲೇಬೇಕಿತ್ತು. ಹಾಗಾಗಿ ಅಂದೇ ಬಂದು ಅಂದೆ ವಾಪಸ್ ಆಗುವ ಸರ್ಕಸ್ ಸಹ ಮಾಡಿ ಬಿಟ್ಟೆವು. ಆರನೆಯ ತಾರೀಕು ಬೆಳಿಗ್ಗೆ 5:30 ಬಸ್ಸಿಗೆ ಹೊರಟು ಸಕಲೇಶಪುರಕ್ಕೆ ಬಂದೆವು. ಅಂದೇ ನಾವು ಶಾಖಾ ಸಿಬ್ಬಂದಿಗೆ ಊಟ ಕೊಡಿಸುವ ಕಾರ್ಯಕ್ರಮ ಸಹ ಇತ್ತು .ಬೆಳಿಗ್ಗೆ ಹೋಟೆಲ್ನಲ್ಲಿ ತಿಂಡಿ ತಿಂದು ಮಧ್ಯಾಹ್ನ ನಮ್ಮದೇ ಆತಿಥ್ಯದ ಊಟ ಮಾಡಿ ಶಾಖಾಧಿಕಾರಿಗಳನ್ನು ವಿನಂತಿಸಿಕೊಂಡು ನಾಲ್ಕು ವರೆಗೆ ವಿದಾಯ ಸಮಾರಂಭವನ್ನು ಆಯೋಜಿಸಿಕೊಂಡು ಅಂತೂ ಇಂತೂ ಆರು ಗಂಟೆ ಬಸ್ಸಿಗೆ ಮೈಸೂರಿಗೆ ಹತ್ತಿದೆವು ಬಂದು ತಲುಪಿದಾಗ ರಾತ್ರಿ 11:00 ಗಂಟೆ. ಸುಲೋಚನ ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಎದ್ದು ನಂಜನಗೂಡಿಗೆ ಹೋಗಿ ಅಲ್ಲಿಂದ ಚಾಮರಾಜನಗರಕ್ಕೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು . ನಾನು ಸೋಮವಾರ ಬೆಳಿಗ್ಗೆ ಅಂದರೆ ಏಳನೆಯ ತಾರೀಕು ಮಾರ್ಚ್ 2000 ರಂದು ನಂಜನಗೂಡಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ. ಮಾಮೂಲಿನಂತೆ ಒಂದು ಕೈಯಲ್ಲಿ ಬ್ಯೂಟಿ ರಿಪೋರ್ಟ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆಗೆ ಅರ್ಜಿ. ಅಶೋಕಪುರಂ ರೈಲ್ವೆ ಸ್ಟೇಷನ್ ಗೆ ಹೋಗಿ ಮೂರು ತಿಂಗಳ ಪಾಸ್ ರೆಡಿ ಮಾಡಿಸಿಕೊಂಡು ಹಿಂದಿನ ಕಹಿ ಅನುಭವದ ಆಧಾರದ ಮೇಲೆ ಅಲ್ಲಿಯೇ ಸಹಿ ಮಾಡಿ ಮಹಿಳಾ ಭೋಗಿಗೆ ಹತ್ತಿದೆ. ಅಲ್ಲಿಯೇ ನಮ್ಮ ಶಾಖೆಯ ಜಯಲಕ್ಷ್ಮಿ ಅವರ ಭೇಟಿಯು ಆಯಿತು. ಈಗ ಶಾಖೆ ಮೊದಲಿನಂತೆ ದೇವಸ್ಥಾನದ ಬಳಿಯ ಬಜಾರ್ ರಸ್ತೆಯಲ್ಲಿ ಇರದೆ ತನ ಸ್ವಂತ ಕಟ್ಟಡಕ್ಕೆ ಶಿಫ್ಟ್ ಆಗಿತ್ತು .ನಂತರ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ಬಲಗಡೆ ನಮ್ಮ ಶಾಖಾ ಕಚೇರಿ ಇತ್ತು. ಮುಖ್ಯ ರೈಲ್ವೆ ಸ್ಟೇಷನ್ ನಿಂದ ಶಾಖೆಗೆ ಬರಲು ತಡವಾಗುತ್ತಿದ್ದ ಕಾರಣ ಎಲ್ಲರೂ ಸುಜಾತಪುರಂ ರೈಲ್ವೆ ಸ್ಟೇಷನ್ ನಲ್ಲಿಯೇ ಇಳಿದು ಅಲ್ಲಿ ಓಡಾಡುತ್ತಿದ್ದ ಖಾಸಗಿ ಟೆಂಪೋಗಳಲ್ಲಿ ಹುಲ್ಲಹಳ್ಳಿ ಸರ್ಕಲ್ಗೆ ಬಂದು ಇಳಿಯುತ್ತಿದ್ದೆವು. ಆಗ ಆ ಟೆಂಪೋಗಳಲ್ಲಿ ಚಾರ್ಜ್ ಒಂದು ರೂಪಾಯಿ ಮಾತ್ರ ಇತ್ತು .ಹುಲ್ಲಹಳ್ಳಿ ಸರ್ಕಲ್ ನಿಂದ 3-4 ನಿಮಿಷದ ನಡಿಗೆ ನಮ್ಮ ಶಾಖೆಗೆ. ಸಂಜೆ ಮಾತ್ರ ಮುಖ್ಯ ಸ್ಟೇಶನ್ಗೆ ನಡೆದು ಹೋಗಲು ಸಮಯ ಇತ್ತು. ಕೆಲವೊಮ್ಮೆ ಸುಸ್ತಾಗಿದ್ದಾಗ ಹೊರಡಲು ತಡವಾದರೆ ಅಥವಾ ಸಂತೆಯಲ್ಲಿ ಕೊಂಡ ತರಕಾರಿಗಳಿದ್ದರೆ ಆಗ ಮೂರು ನಾಲ್ಕು ಜನ ಸೇರಿ ಆಟೋದಲ್ಲಿ ಸ್ಟೇಷನ್ನಿಗೆ ಬರುತ್ತಿದ್ದೆವು. ಮೊದಲಿನಿಂದ ಪರಿಚಯವಿದ್ದ ಜಯಲಕ್ಷ್ಮಿ ಮತ್ತು ನಾಗಮಣಿ ಜೊತೆಗೆ ಹೊಸ ಪರಿಚಯವಾದ ಕವಿತಾ ನಿಕ್ಕಮ್ ವಿದ್ಯಾ ಚಂದ್ರಶೇಖರ್ ಮೊದಲಾದವರು. ಆಂಧ್ರಪ್ರದೇಶದ ರಜನಿ ಸಹ ಇಲ್ಲಿಯೇ ಇದ್ದಳು .ಮುಂದೆ ಅವಳು ಪದೋನ್ನತಿ ತೆಗೆದುಕೊಂಡು ಈಗ ಹೈದರಾಬಾದ್ ನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ. ಅಲ್ಲಿಯೇ ಪರಿಚಯವಾದದ್ದು ನಮ್ಮದೇ ಯೂನಿಯನ್ ನಲ್ಲಿ ಇದ್ದ ಇಂದುಮತಿ. ಮೊದಲು ಬಸ್ ನಲ್ಲಿ ಓಡಾಡುತ್ತಿದ್ದಳು ನಂತರ ಅವರ ಸ್ವಂತ ಮನೆ ನಮ್ಮ ಮನೆಯ ಬಳಿಗೆ ಇದುದರಿಂದ ಅಲ್ಲಿಗೆ ಶಿಫ್ಟ್ ಆದ ಮೇಲೆ ನನ್ನ ಜೊತೆಗೆ ರೈಲಿನಲ್ಲಿ ಓಡಾಡಲು ಆರಂಭಿಸಿದಳು. ನನಗೆ ತುಂಬಾ ಆಪ್ತ ಗೆಳತಿ. ಈಗಲೂ ನಮ್ಮ ಸ್ನೇಹ ಅಷ್ಟೇ ಸದೃಢವಾಗಿದೆ ನಂಜನಗೂಡು ನನಗೆ ಕೊಟ್ಟ ಅನರ್ಘ್ಯ ಸ್ನೇಹ ರತ್ನಗಳಲ್ಲಿ ಅವಳು ಒಬ್ಬಳು. ಈ ಹಿಂದೆ ಮಂಡ್ಯದಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ಮಂಜುಳಾ ಮತ್ತು ಮೊದಲೇ ಪರಿಚಿತರಾಗಿದ್ದ ಶಶಿಕಲಾ ಗಿರಿಜಾ ಇವರೆಲ್ಲ ಇದೇ ಶಾಖೆಯಲ್ಲಿ ಇದ್ದರು ತುಂಬಾ ಸ್ನೇಹ ಮಯ ವಾತಾವರಣ ತುಂಬಾ ಖುಷಿಯಾಗಿತ್ತು.ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇಳಿದ ತಕ್ಷಣ ಅಲ್ಲಿ ಒಬ್ಬ ಕಾಯಂ ಆಗಿ ಸೈಕಲ್ಲಿನಲ್ಲಿ ಹೂವ ಮಾರುತಿದ್ದ .ಅವನ ಬಳಿ ಹೂವು ಕೊಂಡು ಮುಂದೆ ನಮ್ಮ ಪ್ರಯಾಣ .ಅಲ್ಲೇ ಮಧ್ಯದಲ್ಲಿ ಇದ್ದದ್ದು ಸುಬ್ಬಣ್ಣನ ಹೋಟೆಲ್ ಇಡ್ಲಿ ಚಟ್ನಿ .ಜೊತೆಗೆ ಟೊಮ್ಯಾಟೋ ಗೊಜ್ಜು ಕೊಡುತ್ತಿದ್ದರು ತುಂಬಾ ರುಚಿಯಾಗಿರುತ್ತಿತ್ತು. ಕೆಲವೊಮ್ಮೆ ತಿಂಡಿ ಸರಿಯಾಗಿ ತಿನ್ನದೆ ಬರುತ್ತಿದ್ದಾಗ ಅಥವಾ ತಿಂಡಿ ತಿನ್ನದೇ ಬಂದಾಗ ಅಲ್ಲಿ ಇಡ್ಲಿ ತಿಂದು ಮುಂದುವರೆಯುವುದು. ಇಲ್ಲದಿದ್ದರೆ ವೈಟು ಕಾಫಿ ಕುಡಿದು ಹೋಗುತ್ತಿದ್ದೆವು. ಮಧ್ಯಾಹ್ನ 12 ಗಂಟೆ ಹಾಗೂ ಅಪರಾಹ್ನ ನಾಲ್ಕು ಗಂಟೆಯ ಕಾಫಿ ಅಲ್ಲಿಯೇ ಪಕ್ಕದಲ್ಲಿ ಇದ್ದ ಒಂದು ಮಲಯಾಳಿ ಬೇಕರಿಯಲ್ಲಿ ಬೇಸಿಗೆ ಕಾಲವಾದರೆ ವಿವಿಧ ಹಣ್ಣುಗಳ ಜ್ಯೂಸ್ ಸಹ ಸಿಗುತ್ತಿತ್ತು. ಅಲ್ಲದೆ ಶಾಖೆಯ ಮುಂದೆಯೇ ಒಬ್ಬ ಎಳನೀರು ಮಾರುತ್ತಾ ನಿಂತಿರುತ್ತಿದ್ದ. ಒಟ್ಟಿನಲ್ಲಿ ನಮ್ಮ ಹೊಟ್ಟೆ ಪೂಜೆಗೆ ಮೋಸ ಬಂತು ಇರಲಿಲ್ಲ. ಸ್ವಲ್ಪ ದಿನಗಳಾದ ನಂತರ ಟೆಂಡರ್ ಕರೆದು ನಮ್ಮ ಶಾಖೆಯಲ್ಲಿಯೇ ವಾಹನ ನಿಲುಗಡೆ ಜಾಗದಲ್ಲಿ ಒಂದು ಕ್ಯಾಂಟೀನ್ ಓಪನ್ ಆಯಿತು. ಸತೀಶ್ ಎನ್ನುವವರು ಅದನ್ನು ಆರಂಭಿಸಿದ್ದರು ಬೆಳಗಿನ ಹೊತ್ತು ಏನಾದರೂ ಒಂದು ತಿಂಡಿ ಮಧ್ಯಾಹ್ನ ಅಣ್ಣ ಸಾಂಬಾರ್ ಮಜ್ಜಿಗೆ ಹಾಗೂ ಸಂಜೆಯ ಹೊತ್ತು ಏನಾದರೂ ಕರಿದ ತಿಂಡಿ ಸಿಗುತ್ತಿತ್ತು ಕಾಫಿ ಟೀ ಮಜ್ಜಿಗೆ ಯಾವಾಗಲೂ ಸಿಗುತ್ತಿತ್ತು.ಯಾರಾದರೂ ಒಬ್ಬರು ಊಟ ತರದಿದ್ದರೆ ಕ್ಯಾಂಟೀನ್ ನಲ್ಲಿಯೇ ತರಿಸಿಕೊಳ್ಳುತ್ತಿದ್ದೆವು. ಇಬ್ಬರು ಮೂವರು ತಂದಿಲ್ಲದಿದ್ದಾಗ ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇದ್ದ ರಾಮಪ್ರಸಾದ್ ಹೋಟೆಲಿಗೆ ಹೋಗುತ್ತಿದ್ದೆವು. ಶನಿವಾರ ಮಧ್ಯಾಹ್ನದ ಹೊತ್ತು ಮೂರು ಗಂಟೆಗೆ ರೈಲು ಇದ್ದುದರಿಂದ ಪ್ರತಿ ಶನಿವಾರ ಯಾವುದಾದರೂ ಹೋಟೆಲ್ ಗೆ ಅಥವಾ ಕ್ಯಾಂಟೀನ್ ನವರು ಚೆನ್ನಾಗಿರುವ ತಿಂಡಿ ಮಾಡಿದರೆ ಅದನ್ನೇ ತಿಳಿದುಕೊಳ್ಳುತ್ತಿದ್ದೆವು ಅಂದು ಡಬ್ಬಿ ತರುವುದು ನಮಗೆಲ್ಲಾ ನಿಷಿದ್ಧ. ಹೊಸ ವ್ಯವಹಾರಗಳ ವಿಭಾಗದಲ್ಲಿ ಇದ್ದ ಉನ್ನತ ದರ್ಜೆ ಸಹಾಯಕರು ವರ್ಗಾವಣೆಯಾಗಿ ಹೋಗಿದ್ದರಿಂದ ಮಾರ್ಚ್ ವರ್ಷಾಂತ್ಯದ ಬಿಜಿ ಸಮಯವೂ ಆಗಿದ್ದರಿಂದ ನನ್ನನ್ನು ಹೊಸ ವ್ಯವಹಾರ ವಿಭಾಗಕ್ಕೆ ನಿಯುಕ್ತಿಗೊಳಿಸಿದರು. ಅಲ್ಲಿ ಶ್ರೀವತ್ಸ ಮತ್ತು ಮಹಾದೇವನ್ ಅವರು ಸಹಾಯಕರು. ನಾಗರಾಜ್ ಅವರು ಸಹಾಯಕ ಆಡಳಿತ ಅಧಿಕಾರಿಗಳು ಆಗ ತುಂಬಾ ಪ್ರಪೋಸಲ್ಗಳು ಬರುತ್ತಿತ್ತು ಕೆಲಸವು ಹೆಚ್ಚು ಇರುತ್ತಿತ್ತು ವರ್ಷಾಂತ್ಯವಾದ್ದರಿಂದ ಕೆಲವೊಂದು ರಜೆಯ ದಿನ ಭಾನುವಾರಗಳಲ್ಲೂ ಬರಬೇಕಿತ್ತು. ಶನಿವಾರವಂತೂ ಸಂಜೆಯ ರೃಲಿಗೇ ವಾಪಸ್ ಆಗುತ್ತಿದ್ದುದು. ಆದರೂ ಸಹ ತುಂಬಾ ಖುಷಿಯ ವಾತಾವರಣ. ಎಲ್ಲರೂ ಹೊಂದಿ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಹೊರೆ ಎನಿಸುತ್ತಿರಲಿಲ್ಲ. ನಾಲ್ಕೈದು ತಿಂಗಳ ಬಳಿಕ ಶಾಖಾಧಿಕಾರಿಗಳು ಅವರ ಕೊಠಡಿಗೆ ಕರೆಸಿ ನನ್ನನ್ನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಲು ಸೂಚಿಸಿದರು.  ಆಗ ಆ ವಿಭಾಗದಲ್ಲಿ ಒಬ್ಬರೇ ಉನ್ನತ ಶ್ರೇಣಿ ಸಹಾಯಕರು ಪ್ರಸಾದ್ ಎಂಬುವವರು ಇದ್ದು ಸಹಾಯಕರು ಯಾರು ಇರಲಿಲ್ಲ. ಹಾಗಾಗಿ ನನ್ನನ್ನು ಅಲ್ಲಿಯೇ ಕೆಲಸ ಮಾಡಲು ವಿನಂತಿಸಿರು. ನನಗೆ ಹೊಸ ವ್ಯವಹಾರ ಹಾಗೂ ವಿಕ್ರಯ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಇದ್ದುದು .ಸಕಲೇಶಪುರದಲ್ಲಿ ಸ್ವಲ್ಪ ದಿನಗಳ ಕಾಲ ಕಚೇರಿ ಸೇವಾ ವಿಭಾಗದಲ್ಲಿ ಮಾಡಿದ್ದೆ. ಆದರೆ ಪಾಲಿಸಿ ಸೇವಾ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶವೇ ದೊರೆತಿರಲಿಲ್ಲ .ಹಾಗಾಗಿ ಶಾಖಾಧಿಕಾರಿಗಳಿಗೆ ಮುಂದಿನ ಬದಲಾವಣೆಯ ಸಮಯದಲ್ಲಿ ನನಗೆ ಪಾಲಿಸಿ ಸೇವಾ ವಿಭಾಗವನ್ನೇ ಕೊಡಬೇಕು ಎಂದು ಕೋರಿಕೊಂಡೆ ಅವರು ಸಹ ಒಪ್ಪಿಕೊಂಡರು.ವಿಕ್ರಯ ವಿಭಾಗದಲ್ಲಿ ಪ್ರಸಾದ್ ಮತ್ತು ನಾನು ಒಳ್ಳೆಯ ಸೇವೆ ಸಲ್ಲಿಸಿದ್ದೆವು. ಇಬ್ಬರೂ ಒಳ್ಳೆಯ ಕೆಲಸಗಾರರಾದ್ದರಿಂದ ಹಂಚಿಕೊಂಡು ಮಾಡುತ್ತಿದ್ದೆವು. ೨೦೦೦ ನನಗೆ ಅಷ್ಟೇನೂ ಖುಷಿಯದ್ದಾಗಿರಲಿಲ್ಲ. ಅಮ್ಮನ ಆರೋಗ್ಯ ಆಗಾಗ್ಗೆ ಹದಗೆಟ್ಟು ಆಸ್ಪತ್ರೆಗೆ ಸೇರಿಸುವುದು ಕರೆದುಕೊಂಡು ಬರುವುದು ನಡೆದೇ ಇತ್ತು. ಆದರೂ ಛಾಯ ಮತ್ತು ಪ್ರಸನ್ನ ಅವರು ಪಿರಿಯಾಪಟ್ಟಣದಲ್ಲಿ ಮಾಡಿದ್ದ ಮನೆಗೆ ಹೋಗಿ ಸ್ವಲ್ಪ ದಿನ ಇದ್ದು ಬಂದಿದ್ದರು. ನಾವೂ ಒಂದೆರಡು ಬಾರಿ ಹೋಗಿ ಬಂದಿದ್ದೆವು. ಕೊನೆಗೆ ಯಾವ ಪ್ರಯತ್ನವೂ ಫಲ  ಕೊಡದೆ ಜನವರಿ ೬ ೨೦೦೦ ದಂದು ನಮ್ಮನ್ನೆಲ್ಲಾ ಬಿಟ್ಟು ಅಮ್ಮ ಹೊರಟೇ ಬಿಟ್ಟಳು. ಅಂದು ಸೋಮವಾರ . ಹಿಂದಿನವಾರ ರಜೆ ಹಾಕಿ ಅಮ್ಮನ ಜೊತೆಯಲ್ಲೇ ಇದ್ದೆ. ಅಂದು ರೈಲಿನಲ್ಲಿ ಹೊರಟು ಕಛೇರಿ ತಲುಪುವಷ್ಟರಲ್ಲಿ ಫೋನ್ ಬಂದಿದೆ. ನಾನು ತಲುಪಿದ ಕೂಡಲೇ ತುಂಬಾ ಸೀರಿಯಸ್  ವಾಪಸ್ ಹೋಗಿ ಎಂದು ಸ್ಕೂಟರ್ ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿದರು. ಮೈಸೂರಲ್ಲಿ ರವೀಶ್ ಬಂದು ಮನೆಗೆ ಕರೆದುಕೊಂಡು ಬಂದರು.ಊರುಗಳಿಂದ ಎಲ್ಲಾ‌ ಬಂದು ಸೇರಿ ಅಮ್ಮನನ್ನು ಅಂತಿಮ ಬಾರಿಗೆ ಕರೆದುಕೊಂಡು ಹೊರಟಾಗ ಸಂಜೆ. ನಾನು ದಿನಾ ವಾಪಸಾಗುವ ರೈಲು ಕೂ ಅಂತ ಕೂಗ್ತಿತ್ತು.  ಶಾಖಾಧಿಕಾರಿಗಳು ಕೆಲವರು ಸ್ನೇಹಿತರು ಸುಲೋಚನಾ ಎಲ್ಲ ಬಂದಿದ್ದರು. ಈಗಲೂ ಸಂಜೆ ರೈಲಿನ ಕೂಗು ಕಿವಿಗೆ ಬಿದ್ದಾಗಲೆಲ್ಲಾ ಅಂದಿನ ಆ ಸಂಜೆಯ ಮಡುಗಟ್ಟಿದ ದುಃಖ ಮರುಕಳಿಸುತ್ತದೆ.ಈಗಲೂ ಇದನ್ನು ಬರೆಯುವಾಗ ಕಣ್ಣು ತುಂಬಿ ನೀರು ಹರಿದು ಮಂಜಾಗುತ್ತಿದೆ. ಸಧ್ಯಕ್ಕೆ ನಿಲ್ಲಿಸುವೆ.(ಮುಂದಿನ ವಾರಕ್ಕೆ ಮುಂದುವರೆಯುವುದು) ಸುಜಾತಾ‌ ರವೀಶ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-31 ಈ ಮನೆಯ ಬಾಲ್ಕನಿಯಲ್ಲಿ ನಿಂತರೆ ಇಡೀ ಸಂತೆಯೇ ಕಾಣುತ್ತಿತ್ತು ಗುರುವಾರದ ದಿನ ಬಂತು ಬೆಳಗ್ಗೆ 6 ಗಂಟೆಯಿಂದಲೇ ಜನಗಳ ಗಾಡಿಗಳ ಓಡಾಟ ಮತ್ತೆ ಸಂಜೆಯವರೆಗೂ ಇದೇ ರೀತಿ ರಸ್ತೆ ಬ್ಯುಸಿ ಇರುತ್ತಿತ್ತು. ಸಂಜೆ ಸಂತೆ ಕೆ ಬಂದ ಕೆಲವು ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು ಹಳೆಯ ಮನೆಯ ಬಳಿಯಿದ್ದ ಪರಿಚಿತರು ಬರುತ್ತಿದ್ದರು ಹಾಗಾಗಿ ಗುರುವಾರ ನಾವು ಸಂಜೆ ತುಂಬಾ ಬ್ಯುಸಿ ಆಗಿಬಿಡುತ್ತಿದ್ದೆವು. ಅದೇ ರಸ್ತೆಯ ಕೊನೆಯಲ್ಲಿ ಬಸ್ ಡಿಪೋ ಇದುದರಿಂದ ಬಹಳಷ್ಟು ಬಸ್ ಓಡಾಟ ಸದಾ ಇರುತ್ತಿತ್ತು .ಹೀಗಾಗಿ ಬಾಲ್ಕನಿ ಸದಾ ಧೂಳಾಗಿಯೇ ಇರುತ್ತಿತ್ತು . ಆಗ ಪುಟ್ಟ ಮಗುವಾಗಿದ್ದ ನನ್ನ ತಂಗಿಯ ಮಗ ನಿಶ್ಚಯ್ ಗಂತೂ ಓಡಾಡುತ್ತಿದ್ದ ಆ ಕೆಂಪು ಬಸ್ ಗಳನ್ನು ನೋಡುವುದೇ ಒಂದು ಖುಷಿ.ಈ ಮನೆಯಲ್ಲಿ ಇದ್ದಾಗಲೇ ನಮ್ಮ ಅತ್ತೆ ಮಾವ ಸಹ ಬಂದು ಒಂದು ವಾರ ಇದ್ದರು ನಮ್ಮ ಅತ್ತೆಯ ತಾಯಿಯ ಮನೆ ಸಕಲೇಶಪುರದ ಹತ್ತಿರದ ಊರೇ ಆದ್ದರಿಂದ ಅಲ್ಲಿಗೂ ಒಮ್ಮೆ ಹೋಗಿ ಬಂದರು. ನನ್ನ ಮೈದುನ ಹಾಗೂ ಓರಗಿತ್ತಿ ಸಹ ಒಮ್ಮೆ ಇಲ್ಲಿಗೆ ಬಂದಿದ್ದರು. ಅವರೊಂದಿಗೆ ನಾವು ಹೊರನಾಡು ಹೋಗಿ ದೇವಿ ದರ್ಶನ ಮಾಡಿ ಬಂದೆವು ದಿನವೇ ಐ ಆರ್ ಡಿ ಎ ಬಿಲ್ ಸಹ ಮಂಡಿಸಲ್ಪಟ್ಟು ಇದ್ದಕ್ಕಿದ್ದಂತೆ ಆ ದಿನ ಸ್ಟ್ರೈಕ್ ಕೊಟ್ಟಿದ್ದರು ಹಾಗಾಗಿ ರಜೆಯ ಬದಲು ಸ್ಟ್ರೈಕ್ ನಲ್ಲಿ ಭಾಗವಹಿಸುವ ಹಾಗೆ ಆಯಿತು. ಏನಿದು ಐಆರ್‌ಡಿಎ ಬಿಲ್? ಇದುವರೆಗೆ ಏಕಸ್ವಾಮ್ಯವಾಗಿ ಇದ್ದ ಭಾರತೀಯ ಜೀವವೀಮನಿಗಮ ಮತ್ತು ವಿಮಾ ವಲಯ ಈಗ ಒಂದು ಪ್ರಾಧಿಕಾರದ ಮಿತಿಗೆ ಒಳಪಟ್ಟು ಹೊರಗಿನ ಸಂಸ್ಥೆಗಳು ಸಹ ಜೀವವಿಮ ವಹಿವಾಟು ನಡೆಸಲು ಅರ್ಹವಾಗುತ್ತಿದ್ದವು. ಭಾರತೀಯ ಜೀವ ವಿಮಾ ನಿಗಮದ ಸಾರ್ವಭೌಮತ್ವಕ್ಕೆ ಉಂಟಾಯಿತು. IRDAI ಎನ್ನುವುದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಮಾ ಕ್ಷೇತ್ರವನ್ನು (Insurance Sector) ನಿಯಂತ್ರಿಸುವ ಮತ್ತು ಅಭಿವೃದ್ಧಿಪಡಿಸುವ ಸರ್ವೋಚ್ಚ ಸಂಸ್ಥೆಯಾಗಿದೆ.​ಇದನ್ನು 1999 ರಲ್ಲಿ ‘IRDA ಕಾಯ್ದೆ’ಯ ಅಡಿಯಲ್ಲಿ ರಚಿಸಲಾಯಿತು.ಮಲ್ಹೋತ್ರಾ ಸಮಿತಿಯ ಶಿಫಾರಸಿನ ಮೇರೆಗೆ IRDAI ಅಸ್ತಿತ್ವಕ್ಕೆ ಬಂದಿತು.​ಕೇಂದ್ರ ಕಚೇರಿ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿದೆ. ​IRDAI ಸ್ಥಾಪನೆಯ ಹಿಂದೆ ಪ್ರಮುಖವಾಗಿ ಮೂರು ಉದ್ದೇಶಗಳಿವೆ:​ವಿಮಾದಾರರ ಹಿತರಕ್ಷಣೆ: ವಿಮೆ ಮಾಡಿಸಿದ ಗ್ರಾಹಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡುವುದು.​ಕ್ಷೇತ್ರದ ನಿಯಂತ್ರಣ: ವಿಮಾ ಕಂಪನಿಗಳು ಸರಿಯಾದ ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ಮಾಡುವುದು.​ಅಭಿವೃದ್ಧಿ: ವಿಮಾ ಕ್ಷೇತ್ರವು ವ್ಯವಸ್ಥಿತವಾಗಿ ಬೆಳೆಯಲು ಪೂರಕವಾದ ವಾತಾವರಣ ನಿರ್ಮಿಸುವುದು.​IRDAI ಈ ಕೆಳಗಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ:​ಪರವಾನಗಿ ನೀಡುವುದು: ಹೊಸ ವಿಮಾ ಕಂಪನಿಗಳಿಗೆ ವ್ಯವಹಾರ ನಡೆಸಲು ಪರವಾನಗಿ (License) ನೀಡುವುದು ಮತ್ತು ಅದನ್ನು ನವೀಕರಿಸುವುದು.​ನಿಯಮಗಳ ರೂಪಣೆ: ವಿಮಾ ಪಾಲಿಸಿಗಳು ಹೇಗೆ ಇರಬೇಕು, ಪ್ರೀಮಿಯಂ ದರಗಳು ಮತ್ತು ಕ್ಲೈಮ್ (Claim) ಇತ್ಯರ್ಥದ ಬಗ್ಗೆ ನಿಯಮಗಳನ್ನು ರೂಪಿಸುವುದು.​ದೂರುಗಳ ಪರಿಹಾರ: ವಿಮಾ ಕಂಪನಿ ಮತ್ತು ಗ್ರಾಹಕರ ನಡುವೆ ವಿವಾದ ಉಂಟಾದಾಗ ಅದನ್ನು ಬಗೆಹರಿಸಲು ವೇದಿಕೆ ಕಲ್ಪಿಸುವುದು.​ಬಂಡವಾಳದ ಮೇಲ್ವಿಚಾರಣೆ: ವಿಮಾ ಕಂಪನಿಗಳು ಗ್ರಾಹಕರ ಹಣವನ್ನು ಹಿಂತಿರುಗಿಸಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯ ಹೊಂದಿವೆಯೇ ಎಂದು ಪರಿಶೀಲಿಸುವುದು.​ತರಬೇತಿ ಮತ್ತು ಶಿಕ್ಷಣ: ವಿಮಾ ಏಜೆಂಟ್‌ಗಳಿಗೆ ಬೇಕಾದ ಅರ್ಹತೆ ಮತ್ತು ತರಬೇತಿಯ ಮಾನದಂಡಗಳನ್ನು ನಿಗದಿಪಡಿಸುವುದು. ಅಂದಿನ ದಿನಗಳಲ್ಲಿ ಈ ವಿದ್ಯಮಾನಗಳು ತುಂಬಾ ಆತಂಕವನ್ನು ಹುಟ್ಟಿಸಿದ್ದು ಮುಂದಿನ ದಿನಗಳು ಹೇಗೋ ಏನೋ ಎಂಬ ದಿಗಿಲು ಸಹ ಉಂಟಾಗಿತ್ತು. ಆದರೆ ಜೀವ ವಿಮಾನ ನಿಗಮ ತನ್ನ ಸಮರ್ಥ ಆರ್ಥಿಕ ನೀತಿ ಹಾಗೂ ದಕ್ಷ ಆಡಳಿತ ವಿಧಾನಗಳಿಂದ ಈ ಹೊರಗಿನ ಸ್ಪರ್ಧೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜೂನ್ 1999ರಲ್ಲಿ ನನ್ನ ತಂಗಿ ಪ್ರಯಾಣ ವಿವಾಹ ಆಯಿತು. 15 ದಿನಗಳ ಕಾಲ ರಜೆ ತೆಗೆದುಕೊಂಡು ಹೋಗಿ ಮದುವೆ ಮುಗಿಸಿ ಬಂದಾಯಿತು. ಮದುವೆ ತಿಂಡಿಗಳನ್ನು ಇಟ್ಟಿದ್ದ ಬ್ಯಾಗ್ ಸಕಲೇಶಪುರಕ್ಕೆ ಬರುವಾಗ ಮರೆತು ಬಂದಿದ್ದೆವು. ರವೀಶ್ ಸಹ ಅಂದು ನನ್ನ ಜೊತೆಗೆ ಬಂದುಬಿಟ್ಟಿದ್ದರು ಇನ್ನು ತಿಂಡಿಗಳು ಮಿಸ್ ಆಗುತ್ತದೆ ಎಂದು ಅಷ್ಟು ಆಯಾಸವಾಗಿದ್ದರು ಸಹ ಮಧ್ಯಾಹ್ನವೇ ನಮ್ಮ ತಂದೆ ಅದನ್ನೆಲ್ಲ ತೆಗೆದುಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಅದನ್ನು ನೆನೆಸಿಕೊಂಡರೆ ಈಗಲೂ ಕಣ್ಣು ತುಂಬಿ ಬರುತ್ತದೆ ಆ ಪ್ರೀತಿಗೆ ಯಾವುದು ತಾನೇ ಸಾಟಿಯಾದೀತು?ಅಣ್ಣ ಅಲ್ಲಿದ್ದಾಗಲೇ ನವ ವಿವಾಹಿತ ಜೋಡಿಯು ಸಹ ಸಕಲೇಶಪುರಕ್ಕೆ ಬಂದಿದ್ದರು ಅಲ್ಲಿ ಸುತ್ತ ಮುತ್ತಲಿನ ಹಾರ್ಲೆ ಎಸ್ಟೇಟ್ ಟೀ ಫ್ಯಾಕ್ಟರಿ ಅವೆಲ್ಲವನ್ನು ಆಗ ಹೋಗಿ ನೋಡಿಕೊಂಡು ಬಂದೆವು. ಸುಲೋಚನಾ ಸಹ ನಮ್ಮೊಂದಿಗೆ ಆಗ ಬಂದಿದ್ದರು.ಮದ್ದೂರಿನಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದ ನನ್ನ ತಂಗಿ ಔಅಯಳಿಗೆ ಮದುವೆಯ ನಂತರ ಹುಣಸೂರಿಗೆ ವರ್ಗ ಆಯಿತು. ಅವಳ ಪತಿ ಪ್ರಸನ್ನ ಅವರು ಸಹ ಜೀವವಿಮನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಆರ್ ನಗರಕ್ಕೆ ಸೇರಿದಂತಿದ್ದ ಬೆಟ್ಟದ ಪುರದಲ್ಲಿ ಇದ್ದರು. ಅವರು ನಮಗೆ ಬ್ಯಾಚ್ ನ ಹಿಂದಿನ ಮೊದಲ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿ ಸಹಾಯಕರಾಗಿ ಆಯ್ಕೆಯಾದವರು ನಂತರ ಅಭಿವೃದ್ಧಿ ಅಧಿಕಾರಿಯಾಗಿ ಬದಲಾವಣೆ ತೆಗೆದುಕೊಂಡಿದ್ದರು .ಇಬ್ಬರಿಗೂ ಮಧ್ಯದ ಜಾಗವಾದ ಪಿರಿಯಾಪಟ್ಟಣದಲ್ಲಿ ಮನೆ ಮಾಡಿದ್ದರು.ಅಲ್ಲಿ ಕಚೇರಿ ಸೇವಾ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು ಆಗ ಹಿಂದಿ ದಿನಾಚರಣೆಯ ಸಂದರ್ಭ ಬಂದಿತ್ತು. ಆಗ ಸುಮಾರು ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವ ಹಾಗೆ ಒಂದು ಅಂತ್ಯಾಕ್ಷರಿ ಸ್ಪರ್ಧೆಯನ್ನು ಸಹ ಏರ್ಪಡಿಸಿದೆವು ನಾನು ಮತ್ತು ಸುಲೋಚನಾ ಸೇರಿ ಅದನ್ನು ನಡೆಸಿಕೊಟ್ಟವು ಅಲ್ಲಿ ಎಲ್ಲರಿಗೂ ಅದು ತುಂಬಾ ಇಷ್ಟವಾಗಿತ್ತು. ಹೀಗೆ ಒಂದು ಕನ್ನಡದ ಅಂತ್ಯಾಕ್ಷರಿ ಮಾಡಿ ಎಂದು ಹೇಳಿ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡರು. ಆಗೊಮ್ಮೆ ಕನ್ನಡ ಅಂತ್ಯಾಕ್ಷರಿಯನ್ನು ಸಹ ನಡೆಸಿಕೊಟ್ಟಿದ್ದೆವು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಅವುಗಳಿಗೆ ಬಹುಮಾನಗಳನ್ನು ಆರಿಸಿ ತರುವುದು ಇವೆಲ್ಲವೂ ತುಂಬಾ ಖುಷಿ ಕೊಟ್ಟ ಕೆಲಸ. ನನಗೆ ಸಹಾಯಕ ಆಗಿದ್ದ ರಘು ಅವರು ಅಲ್ಲಿನ ಅಂಗಡಿಗಳ ಮಾಲೀಕರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಒಳ್ಳೆಯ ಚೌಕಾಸಿ ನಡೆಸಿ ಗುಣಮಟ್ಟದ ಸಾಮಾನುಗಳನ್ನು ಆದಷ್ಟು ರಿಯಾಯಿತಿಯಲ್ಲಿ ಕೊಂಡು ಬರುತ್ತಿದ್ದೆವು.ನಾವು ಹೋಗಿದ್ದಾಗ ಉಮೇಶ್ ಭಟ್ ಎನ್ನುವವರು ಅಲ್ಲಿನ ಉಪ ಶಾಖಾಧಿಕಾರಿಗಳಾಗಿದ್ದವು ಅವರು ನಟಿ ವಿನಯ ಭಟ್ ಅವರ ಕುಟುಂಬ ಸ್ನೇಹಿತರು ಒಮ್ಮೆ ಸಕಲೇಶಪುರದ ಬಳಿ ಶೂಟಿಂಗ್ ಗೆ ಬಂದಿದ್ದ ವಿನಯ ಭಟ್ ಅವರು ಅವರ ಮನೆಗೆ ಬಂದಿದ್ದರಂತೆ. ಆಗ ನಮ್ಮ ಶಾಖೆಯ ಎಲ್ಲರೂ ಅವರ ಮನೆಗೆ ಹೋಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದರಂತೆ ನಾನು ಸುಲೋಚನಾ ಆಗ ರಜೆ ಹಾಕಿ ಮೈಸೂರಿಗೆ ಬಂದು ಬಿಟ್ಟಿದ್ದೆವು. ಹಾಗಾಗಿ ನಮಗೆ ಆ ಭೇಟಿ ಸಾಧ್ಯವಾಗಲಿಲ್ಲ ನಮಗೆ ಪುಸ್ತಕದ ಮೇಲಿನ ಪ್ರೀತಿ ನೋಡಿ ಉಮೇಶ್ ಭಟ್ ಅವರು ಹಸ್ತ ಸಾಮುದ್ರಿಕೆಯ ಬಗ್ಗೆ ಇದ್ದ ಒಂದು ಇಂಗ್ಲಿಷ್ ಪುಸ್ತಕವನ್ನು ನಮಗೆ ಅವರು ವರ್ಗವಾಗಿ ಹೋಗುವಾಗ ಉಡುಗೊರೆಯಾಗಿ ಕೊಟ್ಟಿದ್ದರು. ಅವರು ಹೋದ ನಂತರ ಮೈಸೂರಿನ ಬ್ರಾಂಚ್ ಒಂದರಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ರಾಜೇಂದ್ರ ಪ್ರಸಾದ್ ಎನ್ನುವವರು ಉಪಶಾಖಾಧಿಕಾರಿಗಳಾಗಿ ಬಂದಿದ್ದರು. ನಾವು ವಾಪಸ್ ಮನೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ರವೀಶ್ ಅವರನ್ನು ಕರೆದುಕೊಂಡು ಹೋಗಿ ಸಕಲೇಶಪುರದ ವಿಶೇಷವಾದ ಕಾಫಿ ಬೊಡ್ಡೆಯ ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳಲು ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದು ಈಗಲೂ ನಮ್ಮ ಮನೆಯಲ್ಲಿ ಇದೆ ಸಕಲೇಶಪುರದಲ್ಲಿ ಕೆಲಸ ಮಾಡಿದ ದಿನಗಳ ನೆನಪಿನ ಕುರುಹಾಗಿ. ಛಾಯಾ ಮತ್ತು ಪ್ರಸನ್ನ ನಿರ್ಮಲ ಟ್ರಾವೆಲ್ಸ್ ನ ಮಧ್ಯ ಇಂಡಿಯಾ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಿದರು. ನಮ್ಮ ತಂದೆ ತಾಯಿ ಹಾಗೂ ಪ್ರಸನ್ನ ಅವರ ತಂದೆ ತಾಯಿ ಅವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇತ್ತು ನಮಗೂ ಹೇಗೂ ಎಲ್ ಟಿ ಸಿ ದೊರೆಯುತ್ತಿದ್ದರಿಂದ ನಾನು ಮತ್ತು ರವೀಶ್ ಸಹ ಹೊರಡಲು ನಿಶ್ಚಯಿಸಿದೆವು. ಭಾರತೀಯ ಜೀವವಿಮಾನ ನಿಗಮದಲ್ಲೇ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರಸನ್ನ ಅವರ ಅಣ್ಣ ಪ್ರಭಾಕರ್ ಹಾಗೂ ಅವರ ಪತ್ನಿ ಶಾಮಲಾ ಮತ್ತು ಮಗಳು ಪ್ರೇರಣಾ ಸಹ ನಮ್ಮ ಜೊತೆಗೆ ಸೇರಿಕೊಂಡರು. ಹೀಗೆ ಹನ್ನೆರಡು ಜನಗಳ ನಮ್ಮ ಗುಂಪು ಮಂಗಳೂರಿನಿಂದ ಹೊರಟ ಆ ಪ್ರವಾಸದಲ್ಲಿ ಸೇರಿದೆವು ತುಂಬಾ ಚೆನ್ನಾಗಿ ನಡೆದ ಪ್ರವಾಸ ಈಗಲೂ ಒಂದು ಸವಿ ನೆನಪು. ನಾವು ಸಕಲೇಶಪುರದಿಂದಲೇ ಮಂಗಳೂರಿಗೆ ಹೋಗಿದ್ದೆವು ಮತ್ತು ಮಂಗಳೂರಿನಿಂದಲೇ ಮತ್ತೆ ವಾಪಸ್ಸಾದೆವು. ಅವರೆಲ್ಲ ಹೊರಡುವಾಗ ಮಂಗಳೂರಿಗೆ ಬಂದಿದ್ದರು. ವಾಪಸ್ ಆಗುವಾಗ ಹುಬ್ಬಳ್ಳಿಯಿಂದಲೇ ಮೈಸೂರಿಗೆ ವಾಪಸ್ ಹೋದರು. ನನ್ನ ಕಡೆಯ ತಂಗಿ ವೈಶಾಲಿ ಮತ್ತು ಮುರಳಿ ಮಗು ಚಿಕ್ಕವನಿದ್ದುದರಿಂದ ಬರಿ ಮಂಗಳೂರು ಪ್ರವಾಸಕ್ಕೆ ಮಾತ್ರ ಜೊತೆಯಾಗಿ ನಂತರ ಮೈಸೂರಿಗೆ ವಾಪಸ್ ಆದರು. ಹಾಗೆ ಹೀಗೆ ಎನ್ನುವಂತೆ ದಿನಗಳು ಕಳೆದು ಮುಂದಿನ ಪದೋನ್ನತಿಗಳ ಸಮಯ ಬಂದೇ ಬಿಟ್ಟಿತು. ಆ ಬಾರಿ ಅದು ತಡವಾಗಿ ಮಾರ್ಚ್ ತಿಂಗಳ ತನಕ ಎಳೆದುಕೊಂಡು ಹೋಗಿದ್ದು. ಬಹಳ ಕಾಲದಿಂದ ನಿರೀಕ್ಷೆ ಇದ್ದ ವರ್ಗಾವಣೆ ಪಟ್ಟಿ ಪ್ರಕಟವಾಗಿತ್ತು ನನಗೆ ನಂಜನಗೂಡಿಗೆ ಸಿಕ್ಕಿತ್ತು ಸ್ವಲ್ಪವೇ ಅಂತರದಿಂದ ಸುಲೋಚನಾ ಅವರಿಗೆ ನಂಜನಗೂಡು ತಪ್ಪಿ ಹೋಗಿ ಚಾಮರಾಜನಗರಕ್ಕೆ ವರ್ಗಾವಣೆ ಸಿಕ್ಕಿತು. ಓಡಾಡಬಹುದಾಗಿತ್ತು ಅವರ ಮನೆ ನಂಜನಗೂಡಿನಲ್ಲಿ ಇದ್ದುದರಿಂದ. ಸ್ವಲ್ಪ ಸಮಾಧಾನ ಅಷ್ಟೇ. ಆದರೆ ಮತ್ತೊಂದು ಸಮಸ್ಯೆ ಎದುರಾಗಿತ್ತು.ನಾವಿದ್ದ ಮನೆಯ ಮಾಲೀಕ ತುಂಬಾ ಸಾಲದ ಸುಳಿಗಳಿಗೆ ಸಿಕ್ಕಿಕೊಂಡು ಮನೆ ಕೋರ್ಟ್ ಆದೇಶದಲ್ಲಿ ಇತ್ತು. ನಾವು ಕೊಟ್ಟಿದ್ದ ಮುಂಗಡ ಹಣ 15000 ವಾಪಸ್ ಮಾಡುವ ಸ್ಥಿತಿಯಲ್ಲಿ ಆತ ಇರಲಿಲ್ಲ .ಆದರೆ ನಾವು ಮನೆಯನ್ನು ಬಿಡಲೇಬೇಕಿತ್ತು.‌ ಕೆಲವರು ಕೊಟ್ಟ ಸಲಹೆಯಂತೆ ಒಂದೆರಡು ಹಳೆಯ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಮನೆಯ ಬೀಗವನ್ನು ಸಕಲೇಶಪುರದಲ್ಲೇ ಇದ್ದ ರವೀಶ್ ಅವರ ಊರಿನವರೇ ಆದ ಸತ್ಯ ಮತ್ತು ಮೋಹನ್ ಅವರಿಗೆ ಕೊಟ್ಟು ಬಂದೆವು. ಆ ಕಾಲಕ್ಕೆ ೧೫೦೦೦ ಸಣ್ಣ ಮೊತ್ತವೇನಲ್ಲ. ವಾಪಸ್ಸು ಬಾರದಿದ್ದರೆ ಹೇಗಪ್ಪಾ ಅಂತಲೂ ಚಿಂತೆ. ಆದರೆ ನಮ್ಮ ತಂದೆ ಮಾತ್ರ ಭರವಸೆ ಇಟ್ಟುಕೊಂಡು ಹೇಳುತ್ತಿದ್ದರು ಕಷ್ಟಪಟ್ಟು ದುಡಿದ ಹಣ ಖಂಡಿತ ವಾಪಸ್ ಬಂದೆ ಬರುತ್ತದೆ ಎಂದು ಅವರ ಆಶೀರ್ವಾದದಂತೆ ಒಂದೆರಡು ತಿಂಗಳ ಬಳಿಕ ಆ ಮನೆಯನ್ನು ಬೇರೊಬ್ಬರು ಕೊಂಡುಕೊಂಡು ಮುಂಗಡ ಹಣ ವಾಪಸ್ ಕೊಟ್ಟು ಕೀ ಪಡೆದುಕೊಂಡರಂತೆ. ಫೋನ್ ಮಾಡಿ ತಿಳಿಸಿದ ಮೇಲೆ ರವೀಶ್ ಅವರು ಹೋಗಿ ಹಣ ತೆಗೆದುಕೊಂಡು ಬಂದರು ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ಮೊದಲು ನಾವಿದ್ದ ಮನೆ ಕಟ್ಟಿದ್ದಾಗ ವಾರ್ಡ್ರೋಬ್ ಕೆಲಸಗಳನ್ನು ಮಾಡಿರಲಿಲ್ಲ ಹೀಗಾಗಿ ನಾವು ವಾಪಸ್ ಬರುವಾಗ ಮತ್ತೆ ಮನೆಗೆ ಪೇಂಟ್ ಮಾಡಿಸಿ ವಾರ್ಡ್ರೋಬ್ ಗಳನ್ನು ಮಾಡಿಸಿಕೊಂಡು ಬಂದೆವು..(ಮುಂದಿನವಾರಕ್ಕೆ) ಸುಜಾತಾ ರವೀಶ್

Read Post »

You cannot copy content of this page

Scroll to Top