ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಕು ಸರಿಯಾದ ಸಮಯಕೆ ಕಾಯುವಿಕೆ”                                       ಇನ್ಫೋಸಿಸ್ ಸಂಸ್ಥೆ ಹೆಸರು ಯಾರು ಕೇಳಿಲ್ಲ ಹೇಳಿ. ಅದು ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಹೀಗಾಗಿ ಎಲ್ಲರಿಗೂ ಗೊತ್ತು. ಈ ಸಂಸ್ಥೆಯನ್ನು ಪ್ರಾರಂಭಿಸುವಾಗ ನಾರಾಯಣ ಮೂರ್ತಿ ಅವರ ಬಳಿ ದೊಡ್ಡ ಬಂಡವಾಳವಿರಲಿಲ್ಲ. ಪರಸ್ಥಿತಿ ಎಲ್ಲ ಸುಧಾರಿಸಿದ ಮೇಲೆ ಕಂಪನಿ ಆರಂಭಿಸುತ್ತೇನೆoದು ಕಾಯಲಿಲ್ಲ. ಪತ್ನಿ ಸುಧಾ ಮೂರ್ತಿಯವರಿಂದ ಪಡೆದ ಕೇವಲ ೧೦,೦೦೦ ರೂ ಗಳೊಂದಿಗೆ ಚಿಕ್ಕ ಕೋಣೆಯಲ್ಲಿ ಕಂಪನಿಯನ್ನು ಆರಂಭಿಸಿದರು. ಅವರು ಅಂದು ಇಟ್ಟ ದೃಢ ನಿರ್ಧಾರದ  ಹೆಜ್ಜೆ  ಪರಿಸ್ಥಿತಿ ಪೂರಕವಾಗುವವರೆಗೆ ಕಾಯುವ ಅಗತ್ಯವಿಲ್ಲ ಎಂಬುದನ್ನು ಸಾರಿದೆ. ಶುಭ ಗಳಿಗೆ ಯಶಸ್ಸಿನ ದಾರಿಯಲ್ಲಿ ಅತ್ಯಂತ ದೊಡ್ಡ ತಡೆಗೋಡೆ ಎಂದರೆ ಶುಭ ಮುಹೂರ್ತಕ್ಕಾಗಿ, ಸರಿಯಾದ ಸಮಯಕ್ಕಾಗಿ ಕಾಯುವುದು. ನಮ್ಮಲ್ಲಿ ಬಹುತೇಕರು ಹೊಸ ಉದ್ಯೋಗ ಆರಂಭಿಸಲು ಇಲ್ಲವೇ ಹೊಸ ವ್ಯಾಪಾರ ಶುರು ಮಾಡಲು ಇಲ್ಲವೇ ಯಾವುದೇ ಒಳ್ಳೆಯ ಕೆಲಸ ಮಾಡಬೇಕಾದರೂ ಶುಭ ಮುಹೂರ್ತ ನೋಡಿಯೇ ಮುಂದುವರೆಯುತ್ತಾರೆ. ಈಗ ನನ್ನ ಪರಿಸ್ಥಿತಿ ಸರಿಯಾಗಿಲ್ಲ, ನನ್ನ ಬಳಿ ಹಣ ಇಲ್ಲ. ಗ್ರಹಗತಿಗಳು ಚೆನ್ನಾಗಿಲ್ಲ, ಶುಕ್ರ ದೆಸೆ ನಡೆಯುತ್ತಿಲ್ಲ. ಹಣ ಕೈಗೆ ಸೇರಿದ ಮೇಲೆ ಕೆಲಸ ಆರಂಭಿಸುವೆ ಗ್ರಹಗತಿಗಳು ಚೆನ್ನಾಗಿ ಆದ ಮೇಲೆ ಎಂಬ ಮಾತುಗಳನ್ನು ಹೇಳುತ್ತ ಮಾಡುವ ಉತ್ತಮ ಕೆಲಸವನ್ನು ಮುಂದೂಡುತ್ತಲೇ ಹೋಗುತ್ತಾರೆ. ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿ ನಂತರ ಅವಕಾಶಗಳೇ ಇಲ್ಲವೆಂದು ಅಳುವುದು ಹುಚ್ಚುತನವಲ್ಲದೇ ಮತ್ತೇನು? ತಲೆಯಲ್ಲಿ ಭ್ರಮೆ ಇಟ್ಟುಕೊಂಡು ಶುಭ ಗಳಿಗೆ ಬರುವವರೆಗೂ ಕೆಲಸವನ್ನು ಶುರು ಮಾಡಲು ಕಾಯುತ್ತಾರೆ. ಕೆಲವರಿಗೆ ಆ ಗಳಿಗೆ ಎಂದಿಗೂ ಬರುವುದೇ ಇಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಹಾಗಾದರೆ ಉತ್ತಮ ಕೆಲಸಕ್ಕೆ  ಕೈಯಲ್ಲಿರುವ ಈ ಗಳಿಗೆಯನ್ನು ಉತ್ತಮ ಗಳಿಗೆಯನ್ನಾಗಿ ಮಾಡಿಕೊಳ್ಳುವುದು ಹೇಗೆ ನೋಡೋಣ ಬನ್ನಿ. ಕಾರ್ಯಪ್ರವೃತ್ತರಾಗಿ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡಲು ಕಾಯುವಷ್ಟು ಸಮಯವಿಲ್ಲ. ಹಾಗೆ ನೋಡಿದರೆ ಸರಿಯಾದ ಸಮಯಕ್ಕಾಗಿ ಕಾಯುವುದು ಒಳ್ಳೆಯ ಗಳಿಗೆಗಾಗಿ ಕಾಯುತ್ತಲೇ ಇರುವುದು ಒಂದು ತರಹ ಕೆಲಸವನ್ನು ಮುಂದೂಡುವ ಕಾಯಿಲೆಯೇ ಸರಿ. ಏಕೆಂದರೆ ಜೀವನ ತುಂಬಾ ಚಿಕ್ಕದು. ಹಾಗಾಗಿ ಉತ್ತಮ ಕೆಲಸಗಳನ್ನು ಮಾಡಲು ಸೂಕ್ತ ಸಮಯ ಅಥವಾ ಪರಿಪೂರ್ಣ ಸಂದರ್ಭಕ್ಕಾಗಿ ಕಾಯಬೇಕಿಲ್ಲ. ಕಾಯುವಿಕೆ ಪ್ರಗತಿಯ ಶತ್ರು ಎಂಬುದನ್ನು ಮರೆಯಬಾರದು. ಜಗತ್ತಿನ ಪ್ರಸಿದ್ಧ ಚಿಂತಕರಾದ ಮಾರ್ಕ್ ಟ್ವೇನ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. ‘ಮುಂದೆ ಸಾಗಲು ಇರುವ ಏಕೈಕ ರಹಸ್ಯವೆಂದರೆ ಕಾರ್ಯಪ್ರವೃತ್ತರಾಗುವುದು.’ ನೇರವಾಗಿ ಹೇಳಬೇಕೆಂದರೆ ಸರಿಯಾದ ಕೆಲಸಕ್ಕೆ ವಿಶೇಷ ಸಮಯದ ಅಗತ್ಯವಿರುವುದಿಲ್ಲ.. ಈ ಕಾಯುವಿಕೆ ಎಂಬುದು ಆಲಸ್ಯತನಕ್ಕೆ ಮಣೆ ಹಾಕುತ್ತದೆ. ಮತ್ತು ಇದರಲ್ಲಿ ಭಯವೂ ಅಡಗಿರುತ್ತದೆ. ಭಯ ಮತ್ತು ಆಲಸ್ಯವನ್ನು ಮೀರಿ ಕಾರ್ಯಪ್ರವೃತ್ತರಾದರೆ ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯ. ಲಭ್ಯ ಸೌಲಭ್ಯ ಬಳಸಿ ‘ಹಾಸಿಗೆ ಇದ್ದಷ್ಟು ಕಾಲು ಚಾಚು.’ ಎಂಬ ಗಾದೆ ಮಾತು ನಮಗೆ ಲಭ್ಯವಿರುವ ಸಂಪನ್ಮೂಲಗಳಲ್ಲೇ ಬದುಕುವುದನ್ನು ಕಲಿಸುತ್ತದೆ. ಸರಿಯಾದ ಕೆಲಸಕ್ಕೆ ಸಂಪನ್ಮೂಲಗಳಿಗಿoತ ನಾ ಈ ಕೆಲಸ ಮಾಡಿಯೇ ತೀರಬೇಕೆಂಬ ಛಲ ಮುಖ್ಯ. ಛಲವಿದ್ದರೆ ಕೆಲಸ ತಾನೇ ಕೂಡಿ ಬರುತ್ತದೆ. ಅದ್ಭುತ ಸಾಧನೆ ಮಾಡಿದವರೆಲ್ಲ ಎಲ್ಲ ಸೌಲಭ್ಯಗಳು ಲಭ್ಯವಾದ ಮೇಲೆ ತಮ್ಮ ಸಾಧನೆ ಆರಂಭಿಸಬೇಕೆoದು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಸೂಕ್ತ ಸಮಯಕ್ಕಾಗಿ ಕಾಯಲಿಲ್ಲ. ಬದಲಾಗಿ ಇದ್ದ ಪರಿಸ್ಥಿತಿಯಲ್ಲೇ ಕೆಲಸ ಆರಂಭಿಸಿದರು. ಕಷ್ಟಗಳ ಹಾದಿಯಲ್ಲೂ ಹೆದರದೇ ಮುನ್ನುಗ್ಗಿದರು. ಈ ಹೊತ್ತನ್ನು ಉತ್ತಮವಾಗಿ ಬಳಸಿಕೊಳ್ಳುವವನಿಗೆ ಯಾವಾಗಲೂ ಶುಭ ಸಮಯವೆ ಇರುತ್ತದೆಂಬುದನ್ನು ನೆನಪಿನಲ್ಲಿಡಿ. ಯಾರಿಗಾಗಿಯೂ ಯಾವುದಕ್ಕಾಗಿಯೂ ಕಾಯದೇ ನೀವಂದುಕೊoಡ ಉತ್ತಮ ಕೆಲಸ ಆರಂಭಿಸಿ. ನಿಮ್ಮ ಬಳಿ ಇರಲಾರದ್ದನ್ನು ನೆನೆಯುತ್ತ ಬಳಿಯಿರುವುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಳಿ ಇರುವ ಸೌಲಭ್ಯಗಳನ್ನು ಸಂಪನ್ಮೂಲವನ್ನು ಗೌರವಿಸಿ. ಈಗ ನಿಮ್ಮ ಬಳಿಯಿರುವ ಬುದ್ಧಿವಂತಿಕೆಯನ್ನು ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಕೆಲಸದ ಫಲಾಫಲಗಳು ಅವಲಂಬಿತವಾಗಿರುತ್ತವೆ ಹೊರತು ಎಂದೋ ಬರುವ ಯಾವುದೇ ಸಮಯವಲ್ಲ. ಹಾಗಾಗಿ ನಿಮ್ಮ ಬಳಿ ಇರುವುದನ್ನು ಗೌರವಿಸುವುದನ್ನು ಕಲಿಯಬೇಕು.  ಕೈಯಲ್ಲೇ ಇದೆ. ಬುದ್ಧ ಹೇಳುತ್ತಾನೆ ‘ನಿಮ್ಮಲ್ಲಿರುವ ದೊಡ್ಡ ಭ್ರಮೆ ಎಂದರೆ ನಿಮಗೆ ಇನ್ನೂ ಸಮಯವಿದೆ ಎಂದುಕೊಳ್ಳುವುದು.’ ನಾಳೆ ದಿನ ಏನೋ ಹೇಗೋ ಯಾರಿಗೂ ಗೊತ್ತಿಲ್ಲ. ಆದರೆ ಇಂದು ಮಾತ್ರ ನಮ್ಮ ಕೈಯಲ್ಲೇ ಇದೆ. ಇರುವ ಸಮಯವನ್ನು ಮುಂದೂಡುತ್ತ ಹಾಳು ಮಾಡಿ ಮುಂದೆ ಬರುವ ಸಮಯಕ್ಕಾಗಿ ಕಾಯುತ್ತ ಕೂರುವುದು ಶುದ್ಧ ಮೂರ್ಖತನ. ನಾವು ದೃಢ ನಿರ್ಧಾರದಿಂದ ಇಡುವ ಮೊದಲ ಹೆಜ್ಜೆ. ಮನಸ್ಸಿನಲ್ಲಿರುವ ದೃಢ ಸಂಕಲ್ಪ ಮತ್ತು ಮಾಡಿಯೇ ತೀರಬೇಕೆಂಬ ಛಲಗಳೇ ಒಳ್ಳೆಯ ಕೆಲಸಕ್ಕೆ ಆ ಸಮಯವನ್ನು ಸರಿಯಾದ ಸಮಯವಾಗಿ ಬದಲಾಯಿಸುತ್ತವೆ. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ.’ ಎಂಬ ಮಾತಿದೆ. ಕಾಯುತ್ತ ಕುಳಿತರೆ ಕಾಲ ದಾಟಿ ಹೋಗಿಬಿಡುತ್ತದೆ. ಒಮ್ಮೆ ಕಳೆದ ಸಮಯ ಮತ್ತೆಂದಿಗೂ ಮರಳಿ ಬಾರದು. ಉತ್ತಮ ಸಮಯಕ್ಕಾಗಿ ಕಾಯುವ ಬದಲು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಸೂಕ್ತ ಸಮಯವನ್ನು ಸೃಷ್ಟಿಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಹೇಳಿದಂತೆ, ‘ನಿಮ್ಮ ಭವಿಷ್ಯವು ನೀವು ಇಂದು ಏನು ಮಾಡುತ್ತೀರಿ ಎಂಬುದರ ಮೇಲೆ ಆಧಾರಿತವಾಗಿದೆ.’ ಬೇಡ ನೆಪ ಇಂದು ಬೇಡ ನಾಳೆಯಿಂದ ಶುರು ಮಾಡುತ್ತೇನೆ. ಸೋಮವಾರದಿಂದ ಆರಂಭಿಸುತ್ತೇನೆ. ಇನ್ನೇನು ಈ ತಿಂಗಳು ಮುಗಿಯುತ್ತಲೇ ಬಂತು ಮುಂದಿನ ತಿಂಗಳು ಖಂಡಿತ ಆರಂಭಿಸುತ್ತೇನೆ. ಇಂಥ ನೆಪಗಳು ಜೀವವನ್ನು ತಿನ್ನುತ್ತವೆ. ನೆಪದ ಬಲೆಗೆ ಒಮ್ಮೆ ಬಿದ್ದರೆ ಸಾಕು ಅಲ್ಲಿಂದ ಮರಳಿ ಎದ್ದು ಬರುವುದು ಅಷ್ಟು ಸುಲಭದ ಮಾತಲ್ಲ. ದಿನದಿಂದ ದಿನಕ್ಕೆ ನೆಪಗಳ ಸುರುಳಿ ಹೆಚ್ಚುತ್ತಲೇ ಹೋಗುತ್ತದೆ. ನೆಪಗಳ ಗೂಡಿನಲ್ಲಿ ಉಳಿಯುವ ಚಟ ಒಮ್ಮೆ ಅಂಟಿಕೊoಡರೆ ಅದು ಅಷ್ಟು ಸರಳ ಬಿಟ್ಟು ಹೋಗುವುದಿಲ್ಲ. ಹಾಗಾಗಿ ಯಾವುದೇ ಹೊಸ ಕೆಲಸ  ಆರಂಭಿಸಲು ಇಂದಿಗಿಂತಶ್ರೇಷ್ಢವಾದ ದಿನ ಮತ್ತೊಂದಿಲ್ಲ. ಯಾವುದೇ ಹೊಸತನ್ನು ಆರಂಭಿಸಿದಾಗ ಆರಂಭದಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ. ಅಡೆತಡೆಗಳಿಗೆ ನೆಪಗಳನ್ನು ಹೇಳುತ್ತ ಕುಳಿತುಕೊಳ್ಳಬಾರದು. ಉದ್ದೇಶ ಚೆನ್ನಾಗಿದ್ದರೆ ಸಾಕು ಸಮಯ ತನ್ನಷ್ಟಕ್ಕೆ ತಾನೇ ನಮ್ಮ ಜೊತೆ ನಡೆಯುತ್ತದೆ. ಉನ್ನತ ಧ್ಯೇಯದೊಂದಿಗೆ ಉತ್ತಮ ಉದ್ದೇಶದೊಂದಿಗೆ ಆರಂಭಿಸಿದ ಕೆಲಸಕ್ಕೆ ಪರಿಸ್ಥಿತಿಗಳು ತಾವಾಗಿಯೇ ಪೂರಕವಾಗಿ ಬದಲಾಗತೊಡಗುತ್ತವೆ. ಎದೆಗಾರಿಕೆ ‘ಆಳಾಗಿ ದುಡಿದವನೇ ಅರಸನಾಗುತ್ತಾನೆ.’ ಎನ್ನುವಂತೆ ಅಂದುಕೊoಡ ಕೆಲಸವನ್ನು ತಕ್ಷಣ ಆರಂಭಿಸಿದವನಿಗೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ.. ತಕ್ಷಣ ಆರಂಭಿಸುವವನೇ ಕೊನೆಗೆ ವಿಜಯಿಯಾಗುತ್ತಾನೆ. ‘ಇಂದು ಮಾಡುವ ಕೆಲಸ ಈಗಲೇ ಮಾಡು ಎನ್ನುವ ದಾಸರ ವಾಣಿ ಇಲ್ಲಿ ಅತ್ಯಂತ ಪ್ರಸ್ತುತ. ಕಾಲಾಯ ತಸ್ಮೈ ನಮಃ ಎಂಬ ನುಡಿ ಕಾಲದ ಮಹತ್ವವನ್ನು ಹೇಳುತ್ತದೆ. ಕಾಲ ಎಲ್ಲಕ್ಕಿಂತಲೂ ಶಕ್ತಿಶಾಲಿ.  ಕಾಲ ಮಿಂಚಿದರೆ ಕಣ್ಣೀರು ಗ್ಯಾರಂಟಿ. ಎನ್ನುವಂತೆ ಶುಭ ಮುಹೂರ್ತ ಒಳ್ಳೆಯ ಸಮಯವೆಂದು ಕಾಯುತ್ತ ಕುಳಿತರೆ ಪಶ್ಚಾತ್ತಾಪದ ಹೊರತು ಮತ್ತೇನೂ ಸಿಗುವುದಿಲ್ಲ. ಪರಿಸ್ಥಿತಿ ಹೇಗೆ ಇರಲಿ ಏನೇ ಬರಲಿ ಎದೆಗಾರಿಕೆಯಿಂದ ಎದುರಿಸುತ್ತ ಮುಂದೆ ಹೆಜ್ಜೆ ಹಾಕಿದರೆ ಸರಿಯಾದ ಗುರಿಗೆ ಸರಿಯಾದ ಸಮಯ ತಾನೇ ಜೊತೆಯಾಗುತ್ತದೆ. ಗೆಲುವಿನ ಅರಮನೆಗೆ ಕರೆದೊಯ್ಯುತ್ತದೆ. ಜಯಶ್ರೀ.ಜೆ. ಅಬ್ಬಿಗೇರಿ

“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು

ಕೃಷಿ ಸಂಗಾತಿ ಗೊರೂರು ಅನಂತರಾಜು “ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಪಠ್ಯ ಬೋಧನೆ, ಜನಪದ ಸಂಶೋಧನೆ, ಕೃಷಿಕಾಯಕ  ಈ ಮೂರೂ ಕ್ಷೇತ್ರಗಳ ಪ್ರಗತಿಪರ ಕೃಷಿಕ ಡಾ. ಬಿ.ಡಿ.ಕುಮಾರ್  ಅರಸೀಕೆರೆಯ ಜಗದ್ಗುರು ಶ್ರೀ ಕೋಡಿಮಠ ಪದವಿಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ಕನ್ನಡ ಉಪನ್ಯಾಸಕರು. ಇವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಇತ್ತೀಚಿಗೆ ಬಿಡುಗಡೆಯಾಗಿದೆ. ಲೇಖನ ಕೊಟ್ಟಿದ್ದ ನಾನು  ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮೊನ್ನೆ ಕುಮಾರ್ ಹಾಸನಕ್ಕೆ ಬಂದು ಪೋನ್ ಮಾಡಿದರು. ಗೌರವ ಪ್ರತಿ ನೀಡಿದರು. ಬರೆಯಿರಿ ಎಂದು ಪ್ರೀತಿಯಿಂದ ಹೇಳಿದರು.  ಓದುತ್ತಾ ಹೋದ ನನಗೆ ಇಷ್ಟವಾಗಿದ್ದು ಇವರ ಬಾಲ್ಯದ ದಿನಗಳು.  ‘ಬಣ್ಣದ ಗುಬ್ಯಾರು ಮಳೆರಾಜ-ಅವರು ಮಣ್ಣಾಗಿ ಹೋದಾರು ಮಳೆರಾಜ.. ಮನದ ನೆನಪಿನ್ನು ಮಾಸಿಲ್ಲ. ನನ್ನ ಭೋಧನಾ ವೃತ್ತಿ ಬದುಕಿನ ಮೊದಲ ಭೋದನೆ ಈ ಜನಪದ ಗೀತೆಯಾಗಿತ್ತು. ಮಳೆಯ ಬೆಳೆಯ ಇಳೆಯ ಪೂರಕ ಸಂಬAಧ,ಉಳಿವಿದ್ದರೆ ಹೋರಾಟ ಕೂಳಿದ್ದರೆ ಕಾಳಗ ಮೇವಿದ್ದರೆ ಮೇಳ ಅನ್ನವಿದ್ದರೆ ಪ್ರಾಣ, ಪ್ರಾಣವಿದ್ದರೆ ಪರಾಕ್ರಮ ಈ ವೈವಿಧ್ಯ ವಿಷಯ ಲೇಪನದೊಂದಿಗೆ ಅತೀವೃಷ್ಟಿ  ಅನಾವೃಷ್ಟಿಯ ರಣಭೀಕರ ಕಠೋರತೆ ಹೇಳುತ್ತಾ ಒಕ್ಕಲ ಬಿಕ್ಕಲು ಆರಂಭವಾಗಿ ಬದುಕು ಮೂರಾಬಟ್ಟೆಯಾಗುತ್ತದೆ. ನಿಸರ್ಗದೆದುರು ಮಾನವನÀ ಆಟ  ನಡೆಯುವುದಿಲ್ಲ ಎಂಬ ಕರಾಳ ಸತ್ಯ ಈ ಗೀತೆಯಲ್ಲಿದೆ..ಲೇಖಕರು ಕನ್ನಡ ಉಪನ್ಯಾಸಕರಾಗಿ ಪ್ರಥಮ ಪಿಯುಸಿಗೆ ಈ ಪಾಠ ಮಾಡುವಾಗ  ಅವರಿಗೆ ಅರಿವಿಲ್ಲ. ತನ್ನ ಬದುಕು  ಇದೇ ಜನಪದ ಹಾಡಿನಂತೆ ಆಗುತ್ತದೆ ಎಂದು.  ನಿಜ, ಯಾರು ತಾನೇ ನಮ್ಮ ಭವಿಷ್ಯದ ಬದುಕು ಹೀಗೆ ಇರುವುದೆಂದು ಊಹಿಸಲು ಸಾಧ್ಯ. ಆದರೆ ನಾವು  ಸನ್ಮಾರ್ಗದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುತ್ತೇವೆಯೋ ಅದು ಕೆಲವರಿಗೆ ಸಿಗುತ್ತದೆ. ಇದಕ್ಕೆ  ಕುಮಾರ್ ಉದಾಹರಣೆ ಅಷ್ಟೇ. ಪಠ್ಯ ಬೋಧನೆಯೊಂದಿಗೆ ತಮ್ಮ ಜೀವನದ ಅನುಭವ ಪಾಠವನ್ನು ಅರಗಿಸಿಕೊಂಡು ಒರ್ವ ಪ್ರಗತಿಪರ ರೈತನಾಗಿ ಹೊರಹೊಮ್ಮಿರುವುದು ಮಾದರಿ ಎನಿಸುತ್ತದೆ.  ಜೀವಿತದ ಹೋರಾಟ ಬದುಕಿನಲ್ಲಿ   ಹಲವು ಕಷ್ಟನಷ್ಟ ಎದುರಿಸಿ ಗೆದ್ದವರು ಈ ಬಿ.ಡಿ.ಕುಮಾರ್. ಕೃತಿಯ ಸಂಪಾದಕರು ಡಾ. ಹರೀಶ್ ಕುಮಾರ್ ಬರೆದಂತೆ ಇವರು  ವಿದ್ಯಾರ್ಥಿಗಳಿಗೆ ಕೇವಲ ಪಾಠ ಹೇಳಿಕೊಟ್ಟ ಮೇಷ್ಟುç ಮಾತ್ರವಲ್ಲ ಬದುಕಿನ ದಾರಿ ಕಂಡುಕೊAಡ  ಮಾರ್ಗದರ್ಶಿ. ಇವರ ವ್ಯಕ್ತಿತ್ವ ಬಹುಮುಖಿ ಕ್ಯಾನ್ವಾಸ್. ಜಮೀನಲ್ಲಿ ನಿಂತರೆ ಮಣ್ಣಿನ ವಾಸನೆಯ ಅಪ್ಪಟ ಕೃಷಿಕ. ತಮಟೆ ತಂಬೂರಿ ಹಿಡಿದರೆ ಜನಪದ ಕಲಾವಿದ. ಪುಸ್ತಕ ಹಿಡಿದರೆ ಓದಿನ ಸಂತ.  ಸಾವಿರ ಪುಟಗಳ ಕೃತಿಯಲ್ಲಿ ನನಗೆ ಇಷ್ಟವಾಗಿದ್ದು ಇವರ ನೇರ ನುಡಿಯ ಬಾಲ್ಯದ ಘಟನೆಗಳು.ದಿನಾಂಕ ೨೧-೬-೧೯೬೬ರ ಮಧ್ಯಾಹ್ನ ೪ ಗಂಟೆಯಲ್ಲಿ ದ್ಯಾವೇಗೌಡ ದೇವಮ್ಮ ಇವರ ದ್ವಿತೀಯ ಪುತ್ರನಾಗಿ ಈ ಭೂಮಿಗೆ ಬಂದನAತೆ. ನನ್ನ ಅಜ್ಜಿ ತಾಯಮ್ಮನ ತಮ್ಮ ಕೃಷ್ಣಪ್ಪ ಕಲ್ಯಾಡಿಕೊಪ್ಪಲಿನ ಬ್ರಾಹ್ಮಣ ಗೆಳೆಯ ಶಿವಪ್ರಕಾಶ್ ಇದೇ ದಿನ ಬೆಳಿಗ್ಗೆ ಹುಟ್ಟಿದರಂತೆ. ಇವನನ್ನು ನೋಡಿಕೊಂಡ ಕೃಷ್ಣಪ್ಪ ಬಸವಾಘಟ್ಟಕ್ಕೆ ಬಂದು ನನ್ನನ್ನು ನೋಡಿದರÀಂತೆ. ಈ ವಿಷಯದಿಂದ ನಾನು ಜನಿಸಿದ ನಿಜ ದಿನಾಂಕ ಗೊತ್ತಾಯಿತು..ಕುಮಾರ್ ಒಬ್ಬರೇ ಅಲ್ಲಾ ಎಲ್ಲಾ ಅನಕ್ಷರಸ್ಥ ನಮ್ಮ ತಂದೆತಾಯಿಗಳದು ಇದೇ ಸ್ಥಿತಿ.   ಐದು ವರ್ಷಗಳ ನಂತರ ಶಾಲೆಗೆ ಸೇರಿಸುವಾಗ ಹುಟ್ಟಿದ ದಿನಾಂಕ ಸರಿಯಾಗಿ ನೆನಪಿಲ್ಲದೇ ಒಂದು ಅಂದಾಜಿನ ಮೇಲೆ ಶಾಲೆಗೆ ಸೇರಿಸುತ್ತಿದ್ದ ಆ ದಿನಗಳು.   ಶಾಲೆಗೆ ಬೇಗನೇ ಸೇರಿಸಲು ಕೆಲವು ಪೋಷಕರು ಒಂದು ವರ್ಷ ಫ್ಲಸ್ ಮಾಡಿ ಬರೆಸಿ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದುವಾಗ ಅದು ಮೈನಸ್ ಆಗಿದ್ದನ್ನು ನೊಂದುಕೊAಡು  ಹೇಳಿದ್ದನ್ನು ಕೇಳಿದ್ದೇನೆ. ಹಳ್ಳಿಯ ಹಂಚಿನ ಮನೆ ತೊಲೆಗಳಲ್ಲಿ ಮಕ್ಕಳು ಹುಟ್ಟಿದ ದಿನಾಂಕ ಬರೆದಿದ್ದನ್ನು  ನೋಡಿದ್ದೆನೆ.ಈ ಸಂದರ್ಭದಲ್ಲಿ ಒಂದು ನೆನಪು ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅದೇನೆಂದರೆ ಅಷ್ಟೊತ್ತಿಗಾಗಲೇ ಹೊಲದಲ್ಲಿ ಹೊಸಮನೆ ಕಟ್ಟುತ್ತಿದ್ದೆವು. ಹಳೆ ಮನೆಗೂ ಹೊಸ ಮನೆಗೂ ತಿರುಗಾಟ ಸಾಗುತ್ತಿತ್ತು. ಆಗ ತಾನೇ ನೀರುಗುಂದ ಹೊಲಕ್ಕೆ ಅಲೆಮನೆ ಕಟ್ಟಿದ್ದರಂತೆ. ಅಲ್ಲಿ ಗಡಿಗೆಗಳಿಗೆ ಗುಳ ತುಂಬಿಸಿ ಮನೆಯಲ್ಲಿ ತಂದಿಟ್ಟಿದ್ದರು. ನಾನು ಅಂಕೆಯಿಲ್ಲದೆ ಅದನ್ನು ಕುಡಿದು ಹೊಟ್ಟೆಯಲ್ಲಿ ಲಾಡಿ ಉಳವಾಗಿತ್ತು. ಅದೊಂದು ಸುಂದರವಾದ ದಿನ ಆ ಹುಳ ಈಚೆಗೆ ಬರಲು ಆಗದೇ ಒಳಗೆ ಹೋಗಲು ಆಗದ ಅದನ್ನು ನೇತಾಡಿಸಿಕೊಂಡು ಊರಲೆಲ್ಲಾ ತಿರುಗಾಡಿದ್ದೆ. ನನ್ನ ಪಾಲಿಗೆ ಅದನ್ನು ಕಾಳಿಂಗ ಸರ್ಪವೆಂದೇ ಬಾವಿಸಿ ಭಯಭೀತರಾಗಿ ಊರ ತುಂಬಾ ಓಡಾಡಿದ್ದೆ… ಕುಮಾರರ ಈ ನೆನಪು ನಗು ತರಿಸಿದರೂ ಇಂತಹ ದೃಶ್ಯಗಳನ್ನು ಕಂಡಿರುವೆ.      ಕೃತಿಯ ಕವಲು-೧À ಅಂತರAಗ ವಿಭಾಗದಲ್ಲಿ ೩೭ ಲೇಖಕರು ಇವರ ವ್ಯಕ್ತಿ ಚಿತ್ರಣವನ್ನು ತಮ್ಮ ಸ್ನೇಹನೆಲೆಯಲ್ಲಿ ಬರೆದಿದ್ದಾರೆ. ಕುಮಾರ್ ಪದವಿಪೂರ್ವ ಐಚ್ಛಿಕ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು. ಕೆ.ಪಿ.ಎಸ್.ಸಿ ಸ್ಫರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ ತಯಾಸಿದ್ದಾರೆ. ರಾಜ್ಯ ಸಬ್ ಇನ್ಸ್ಸ್ಪೆಕ್ಟರ್ ಪರೀಕ್ಷೆÀ ಮೌಲ್ಯಮಾಪಕರು. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷರು. ದೆಹಲಿಯಲ್ಲಿ ೧೯೯೬ರಲ್ಲಿ ರಾಷ್ಟಿçÃಯ ಜಾನಪದ ಹಬ್ಬದಲ್ಲಿ  ತಮಟೆ ಕಲಾವಿದರಾಗಿ ಭಾಗವಹಿಸಿದ್ದಾರೆ.   ಇವರ ತೋಟದ ಮನೆಯಲ್ಲಿ ಹತ್ತು ಸಾವಿರ ಪುಸ್ತಕಗಳ ಸಂಗ್ರಹ ಇದೆ. ಅಮೇರಿಕದ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ತರಹ ಇವರದು ನಿಸರ್ಗಪ್ರೇಮ ಜೀವನ.  ಬಾಗೇಶಪುರದ ಬಳಿ  ೧೨ ಎಕರೆ ಭೂಮಿ ಖರೀದಿಸಿ ಗುಡ್ಡದಲ್ಲೊಂದು ಮನೆಯ ಮಾಡಿ ಪಂಚೆ ಕಟ್ಟಿ ಕೃಷಿ ಕಾಯಕ ಮಾಡಿದವರು. ಅದೀಗ ಜಮೀನಾಗಿ ಉಳಿಯದೇ ಅಲ್ಲಿ ನೂರಾರು ಜಾತಿಯ ಹಣ್ಣಿನ ಮರಗಳು ಬೆಳೆದು, ಪ್ರಾಣಿ ಪಕ್ಷಿಗಳ ನೆಲೆವೀಡಾಗಿ ಕಾಡುಕೃಷಿಗೆ ಮಾದರಿಯಾಗಿದೆ. ಹಸು ಕುರಿ ಕೋಳಿ ಸಾಕಣಿಕೆಯಿಂದ  ಕೃಷಿ ಬದುಕಿಗೆ ಮತ್ತೊಂದು ದಾರಿ ತೋರಿಸಿದ್ದಾರೆ. ಅಕ್ಷರ ಸಂಸ್ಕೃತಿ ಮಣ್ಣಿನ ಸಂಸ್ಕೃತಿ ನಡುವೆ ಸಂತನಾಗಿದ್ದಾರೆ. ಇದೊಂದು ಅಭಿನಂದನಾ ಗ್ರಂಥ ಮತ್ತು  ನಾಡಿನ ಅನೇಕ ಜನಪದ ವಿದ್ವಾಂಸರು ಲೇಖಕರ ವಿಶಿಷ್ಟ ಬರಹಗಳ ಸಂಗ್ರಹ.  ಕವಲು-೨ ಜನಪದ ಪಲುಕು ಜನಪದ ಸಾಹಿತ್ಯ ವಿಶೇಷವಾಗಿದೆ.  ಡಾ.ಕಾಳೇಗೌಡ ನಾಗವಾರರ  ಲೇಖನವು ಗಮನಾರ್ಹ. ಕರ್ನಾಟಕವು ವಿಸ್ತಾರ ಭೂಪ್ರದೇಶವಾಗಿ ನಾನಾ ಬಗೆಯ ವೈವಿಧ್ಯಗಳಿಂದ ಕೂಡಿದೆ. ಒಂದು ಕಡೆ ಅರಬ್ಬಿಸಮುದ್ರ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ  ಆವರಿಸಿದ ಮಲೆನಾಡು, ಪೂರ್ವ ಪಶ್ಚಿಮ ಘಟ್ಟಗಳ ನಡುವಣ ಉತ್ತರ ದಕ್ಷಿಣ ಕರ್ನಾಟಕಗಳ ಬಗೆಬಗೆಯ ಪದ್ಧತಿ ಅನುಸರಿಸುವ ಜನರ ಗುಂಪು ಒಳಗೊಂಡಿದೆ. ಈ ನಡುವೆ ಕೊಡವ ತುಳು ಕೊಂಕಣಿ  ಭಾಷೆಗಳ ಜಾನಪದ ಸಂಪತ್ತು  ಅರಳಿದೆ. ಈ ಎಲ್ಲಾ  ಜನಪದ ಸಾಹಿತ್ಯವು ಪೂರ್ಣ ಸಂಗ್ರಹವಾಗಬೇಕೆAದು ಆಶಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದು ಗಾಣದೆತ್ತಿನಂತೆ ನಿರಂತರವಾಗಿ ದುಡಿಯುತ್ತಲೇ ಬಂದು ಉದ್ದಕ್ಕೂ ಅಕ್ಷರ ಜ್ಞಾನದಿಂದ ವಂಚಿತರಾಗಿರುವ ನಮ್ಮ ಜನಪದ ಕಲಾವಿದರು ವಾಸ್ತವವಾಗಿ ಗಂಧರ್ವಲೋಕದ ಗೆಣೆಕಾರರು ಎಂದಿದ್ದಾರೆ.  ಡಾ.ಹಿ.ಶಿ.ರಾಮಚಂದ್ರೇಗೌಡರು ಬಿ.ಡಿ.ಕುಮಾರ್ ಅವರಿಗೆ ಗೈಡ್ ಆಗಿದ್ದವರು. ಇವರ ಮಾರ್ಗದರ್ಶನದಲ್ಲಿ ಕುಮಾರ್ ಡಾಕ್ಟರೇಟ್ ಮಾಡಿದ್ದಾರೆ. ಗೌಡರಿಗೆ ತಮ್ಮ ಶಿಷ್ಯನ ಸಾಧನೆಗೆ ಪ್ರೀತಿ ಇದೆ. ವೈಫಲ್ಯದ ಬಗ್ಗೆ ಬೇಸರವೂ ಇದೆ. ‘ನಾನು ಪ್ರತಿಭೆ ಮತ್ತು ಕ್ರಿಯಾಶೀಲತೆ  ಕಂಡಲ್ಲಿ ಪುಳಕಗೊಳುತ್ತೇನೆ, ಸಂಭ್ರಮಿಸುತ್ತೇನೆ. ಇಂಥ ದ್ವಿಜತ್ವವನ್ನು ಹೊಂದಿದ ವ್ಯಕ್ತಿ ಡಾ. ಬಿ.ಡಿ.ಕುಮಾರ್. ಅವರ ಬಗ್ಗೆ ನನಗೆ ಪ್ರೀತಿಯೂ ಇದೆ. ಸಿಟ್ಟು ಇದೆ. ಪ್ರೀತಿ ಯಾಕೆಂದರೆ ಆ ಎರಡನ್ನೂ ಒಳಗೊಂಡ ವ್ಯಕ್ತಿ. ಸಿಟ್ಟು ಯಾಕೆಂದರೆ ಅವನ್ನು ಫಲಪ್ರದವಾಗಿ ಬಳಸಿಕೊಂಡಿಲ್ಲ ಎಂದು. ಅವರ ಪ್ರತಿಭೆ ಹೊರಚೆಲ್ಲುವ ಯಾವ ಉತ್ತಮ ಕೆಲಸ ಅವರು ಮಾಡಿದಂತೆ ನನಗೆ ಕಂಡಿಲ್ಲ. ನನ್ನ ಮಾರ್ಗದರ್ಶನ ದಲ್ಲಿ ಅವರು ಪಿಹೆಚ್‌ಡಿ ಪಡೆದರು. ವಿಷಯ: ಹಾಸನ ಜಿಲ್ಲೆಯ ಐತಿಹ್ಯಗಳನ್ನು ಕುರಿತು. ಪಿಹೆಚ್‌ಡಿಯ ನಂತರ ಆ ವಿಷಯದಲ್ಲಿ ತುಂಬ ಕೆಲಸ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಆವರ ಪ್ರತಿಭೆಯನ್ನು ದುಡಿಸಿಕೊಳ್ಳಲಿಲ್ಲ..    ಇದೇ ಕೃತಿಯನ್ನು ಪರಿಚಯಿಸುವ ನನ್ನ ಲೇಖನವು (ಗೊರೂರು ಅನಂತರಾಜು)  ಕವಲು ೨ರಲ್ಲಿದೆ. ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ. ಕೃತಿಯಲ್ಲಿ ಲೇಖಕರು ತಮ್ಮ ಭೌಗೋಳಿಕ ನೆಲೆಯಲ್ಲಿ ಐತಿಹ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವುಗಳ ಸಾಂಸ್ಕೃತಿಕ ಒಳತೋಟಿಗಳನ್ನು ಒಳನುಗ್ಗಿ ನೋಡಲು ಪ್ರಯತ್ನ ಮಾಡಿದ್ದಾರೆ. ಬಹುಮುಖಿ ದೃಷ್ಟಿಯಿಂದ ಅವುಗಳ ಆಶಯ ಕಾರ್ಯತತ್ಪರತೆಯನ್ನು ಪ್ರಾತ್ಯಕ್ಷೀಕರಿಸಲು ಪ್ರಯತ್ನಿಸಿದ್ದಾರೆ. ಜನಪದದಲ್ಲಿ ಜಾತಿ ಇಲ್ಲ ಅರ್ಥಾತ್ ತಾರತಮ್ಯ ಇಲ್ಲ. ಅಲ್ಲಿರುವುದು ಸಹಜ ಮಾನವೀಯ ಬದುಕು.. ಇದು  ಡಾ. ಹಿ.ಶಿ.ರಾಮಚಂದ್ರೇಗೌಡರ ಮುನ್ನುಡಿ ಬರಹ. –ಗೊರೂರು ಅನಂತರಾಜು, ಹಾಸನ.ಮೊ:೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ. 

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು Read Post »

ಇತರೆ, ಲಹರಿ

“ಈ ಜಗತ್ತಿನಲ್ಲಿ ಸತ್ಯ ಗೋಚರಿಸುವುದಿಲ್ಲ……!”  ಐಗೂರು ಮೋಹನ್ ದಾಸ್ ಜಿ.                    

ವಿಶೇಷ ಸಂಗಾತಿ ಐಗೂರು ಮೋಹನ್ ದಾಸ್ ಜಿ.                     “ಈ ಜಗತ್ತಿನಲ್ಲಿ ಸತ್ಯ ಗೋಚರಿಸುವುದಿಲ್ಲ……!”   ದಾರಿ ದೀಪ :                                                               ಅವಳು…..!ಅವಳು…..! ಕೇವಲ ನನ್ನ ಗೆಳತಿ… ಪ್ರಾಣಸಖಿ ಮಾತ್ರವಾಗಿರಲಿಲ್ಲ….! ಆ ಪ್ರಿಯಾ ನನ್ನ ದಾರಿ ದೀಪ ಸಹ ಆಗಿದ್ದಳು….! ದಾರಿ ತಪ್ಪಿ ಹೆಜ್ಜೆ ಹಾಕುವ ವೇಳೆ ಎಲ್ಲಾ ಎಚ್ಚರಿಕೆಯ ‘ ಗಂಟೆ’ ಬಾರಿಸಿ ನನ್ನನ್ನು ಎಚ್ಚರಿಸುತ್ತಿದ್ದಳು..!ಹೆಚ್ಚಿನ ಮಾತುಕತೆ ಇಲ್ಲಾದೇ ಇದ್ದರೂ, ‘ಮೋರಿ ಕಟ್ಟೆ’ಯ ಮೇಲೆ ಕುಳಿತುಕೊಂಡ ವೇಳೆ, ನನ್ನ ಮುಖ ನೋಡಿ ಹೇಳುತ್ತಿದ್ದ ಎಲ್ಲಾ ‘ಭವಿಷ್ಯ’ಗಳು ಸತ್ಯವಾಗುತ್ತಿತ್ತು…! ಆದರೂ ನಾನು ಅವಳನ್ನು ನಂಬಲಿಲ್ಲ…!ನಾನು ನನ್ನ ಲೋಕದಲ್ಲಿಯೇ ಮುಳುಗಿ ಬಿಟ್ಟೆ….!!   .                                   ದಿನ… ವಾರ… ತಿಂಗಳು…. ವಷ೯…. ಎಂದು ಸಮಯ ಸಾಗಿದ್ದು ನನಗೆ ತಿಳಿಯಲೇ ಇಲ್ಲ…! ಏಕೆಂದರೆ ನಾನು ‘ಗಂಟೆ’ ನೋಡಿ ಕೆಲಸ ಮಾಡುವ ವ್ಯಕ್ತಿವಾಗಿರುವುದಿಲ್ಲ…! ಕೆಲಸ ಮುಗಿಸಿ ಗಂಟೆ      ನೋಡುವ ಪಾಳು ಜನ್ಮ….! ಕಾಲಿಗೆ ಹಾಕಿಕೊಂಡಿರುವ ಚಪ್ಪಲಿ ಸವೆದು ಹೋಗುತ್ತಿದ್ದರೂ, ಮನದಲ್ಲಿ ಕಂಡ ಕನಸುಗಳನ್ನು ನನಸು ಮಾಡುಲು ಓಡುತ್ತಿರುವ ಬ್ರೇಕ್ ಇಲ್ಲಾದ ಗಾಡಿ….!                                                                 ಈ ವೇಳೆಗೆ ಪ್ರಿಯಾ ನನ್ನ ಬಾಳಿನಿಂದ ದೂರವಾಗಿ ಬಿಟ್ಟಳು…! ನಾನು ಸಾಗುತ್ತಿದ್ದ ಹಾದಿಯಲ್ಲಿ ಬೆಳಕು ಇರಲಿಲ್ಲ…!ಹಗಲು ಕಂಡ ಬಾವಿಯಲ್ಲಿಯೇ ರಾತ್ರಿ ಬೀಳುತ್ತಿದ್ದೆ…! ಆದರೂ ನನಗೆ ಬುದ್ಧಿ ಬರುತ್ತಿರಲಿಲ್ಲ…! ನನ್ನ ದಡ್ಡ ಕೆಲಸಗಳಿಂದ ಬಹು ಬೇಗಾನೆ ‘ಪೆದ್ದ ಶಿಖಾಮಣಿ’ ಎಂಬ ಬಿರುದು ನನಗೆ ಸಿಕ್ಕಿ ಬಿಟ್ಟಿತ್ತು…!ನಾನು ಮತ್ತು ಪ್ರಿಯಾ ನಡುವೆ ಯಾವುದೇ ಭೇಟಿ ಮತ್ತು ಮಾತುಕತೆ ಇಲ್ಲಾದಿದ್ದರೂ ಕೆಲ ದಿನಗಳಿಂದ ಕನಸಿನಲ್ಲಿ ಬಂದು, ಕೆಲ ನೀತಿ ಕಥೆಗಳನ್ನು ಹೇಳುತ್ತಾ, ನನಗೆ ಜ್ಞಾನೋದಯವಾಗಲು ಪ್ರಯತ್ನ ಮಾಡುತ್ತಿದ್ದಳು….!                                                ನಾವು ಯಾವುದೇ ಮಂದಿಯನ್ನು ಈ ಭೂಮಿಯಲ್ಲಿ  ಕಣ್ಣು ಮುಚ್ಚಿ ನಂಬಬಾರದು…!ನಮ್ಮ ‘ ನಂಬಿಕೆ’ಯೂ ರಾಜಕೀಯ ಪಕ್ಷಗಳ ಆಶ್ವಾಸನೆಗಳಂತೆ ಢಮಾರ್ ವಾಗ   ಬಹುದು…! ಆಗ ಸುಮ್ಮನೆ ದುಃಖಿಸಿ ಪ್ರಯೋಜನ ಇಲ್ಲ…! ಕೆಲವೊಂದು ವಿಚಾರಗಳಲ್ಲಿ ನಮ್ಮ ಕಣ್ಣುಗಳನ್ನು ಸಹ ನಂಬು ವಂತೆ ಇಲ್ಲ….! ಈ ವಿಚಾರ ಕುರಿತು ಒಂದು ಕಥೆಯನ್ನು ಪ್ರಿಯಾ ನನಗೆ ಕೆಲ ದಿನಗಳ ಹಿಂದೆ ಹೇಳಿದ್ದಳು…! ಆ ಕಥೆ ಈಗ ನಿಮಗಾಗಿ…. !!        ಒಂದು ಏಡಿ ಸಮುದ್ರ ತೀರದ ಮರಳಿನಲ್ಲಿ ಹೆಜ್ಜೆ ಹಾಕುತ್ತಿತ್ತು…. ಸುಮಾರು ದೂರ ಸಾಗಿದ ಮೇಲೆ ಏಡಿ ಒಮ್ಮೆ ತಿರುಗಿ ನೋಡಿದಾಗ, ಮರಳಿನಲ್ಲಿ ತನ್ನ ಕಾಲಿನ ಗುರುತುಗಳಿಂದ ರಚನೆಯಾಗಿರುವ ‘ಕಲಾಕೃತಿ’ಯನ್ನು ನೋಡಿ ಮನಸ್ಸಿಗೆ ಬಹಳ ಖುಷಿ ಮತ್ತು ಹೆಮ್ಮೆ ಎನ್ನಿಸಿತ್ತು..! ತಾನು ಒವ೯ ‘ಕಲಾವಿದ ‘ ಎಂದು ಏಡಿ ಭಾವಿಸಿತ್ತು…! ಆದರೆ ಈ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ..!ಏಕೆಂದರೆ ದೊಡ್ಡ ಸಮುದ್ರ ಅಲೆಯೊಂದು ಅಪ್ಪಳಿಸಿ , ಈ ಏಡಿಯ ಸುಂದರವಾದ ಹೆಜ್ಜೆ ಗುರುತುಗಳ ಕಲಾಕೃತಿಯನ್ನು ಮಾಯ ಮಾಡಿಯೇ ಬಿಟ್ಟಿತ್ತು…!ಆಗ ಏಡಿಯೂ ಬಹಳ ಮನನೊಂದು ಸಮುದ್ರದ ಬಳಿ ಕೇಳಿಯೇ ಬಿಟ್ಟಿತ್ತು.     “ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೆ…. ನಾನು ನಿನಗೆ ಯಾವುದೇ ದ್ರೋಹಗಳನ್ನು ಮಾಡಿಯೇ ಇಲ್ಲ….! ನೀನು ಇಂತಹ   ‘ಅನ್ಯಾಯ’ವನ್ನು, ನನಗೆ ಮಾಡಬಹುದು   ಎಂದು ಮನಸ್ಸಿನಲ್ಲಿ ಒಮ್ಮೆಯೂ ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ.. ಆದರೆ ನನ್ನ ಕಲಾಕೃತಿಗಳನ್ನು ನೋಡಿ ನಿನಗೆ ‘ಅಸೂಯೆ’ ಬರಲು ಕಾರಣ ಏನು….?”.     ಆಗ ಸಮುದ್ರ ನಗುತ್ತಾ ಸರ್ವ ಪ್ರಶ್ನೆಗಳಿಗೂ ಶಾಂತವಾಗಿ ಉತ್ತರಿಸ ತೊಡಗಿತ್ತು…!     “ನೀನು ನನ್ನನ್ನು ತಪ್ಪಾಗಿ ತಿಳಿದುಕೊಂಡಿರುವೆ…. ನನಗೆ ನಿನ್ನ ಮೇಲೆ ಯಾವುದೇ ಅಸೂಯೆ- ಕೋಪ ಇಲ್ಲ..! ನೀನು ಮರಳಿನಲ್ಲಿ ನಿನ್ನ ಕಾಲುಗಳಿಂದ ರಚಿಸಿರುವ ಕಲಾಕೃತಿಯನ್ನು ನೋಡಿ, ಬೇರೆಯೊಂದು ಪ್ರಾಣಿ ನಿನ್ನನ್ನು ಹಿಡಿದು, ತಿಂದು ಮುಗಿಸಲು ಬರುವುದನ್ನು ನೋಡಿ, ನಿನ್ನ ಹೆಜ್ಜೆ ಗುರುತುಗಳನ್ನ ಅಳಿಸಿ, ನಿನ್ನ ಜೀವವನ್ನು ಉಳಿಸಿದೆ ಅಷ್ಟೇ…!” ಎಂದು ಸಮುದ್ರ ಹೇಳಿದನ್ನು ಕೇಳಿದಾಗ, ಏಡಿಗೆ ತನ್ನ ಅಜ್ಞಾನ ಮತ್ತು ತಪ್ಪಿನ ಅರಿವು ತಿಳಿಯಿತ್ತು… ಕೃತಜ್ಞತೆ ಭಾವದಿಂದ ಏಡಿಯೂ ಸಮುದ್ರಕ್ಕೆ ಕೈ ಮುಗಿದು ಮುಂದಕ್ಕೆ ಸಾಗಿತ್ತು…!  ಈ ಭೂಮಿಯಲ್ಲಿ ಬದುಕು ಸಾಗಿಸುತ್ತಿರುವ ಪ್ರತಿಯೊಂದು ಜೀವಿಗಳಿಗೂ ಒಂದು ‘ನಗ್ನ ಸತ್ಯ’ ಗೊತ್ತಿರಲೇಬೇಕು….!      “ನಮ್ಮ ಕಣ್ಣುಗಳು ಕಾಣುವುದು ಎಲ್ಲಾ ಸತ್ಯವಾಗಿರುವುದಿಲ್ಲ…..! ಸತ್ಯವಾಗಿರುವುದು ಎಲ್ಲಾ ಕಾಣುವುದು ಸಹ ಇಲ್ಲ….!!!.”. ಐಗೂರು ಮೋಹನ್ ದಾಸ್ ಜಿ.                             

“ಈ ಜಗತ್ತಿನಲ್ಲಿ ಸತ್ಯ ಗೋಚರಿಸುವುದಿಲ್ಲ……!”  ಐಗೂರು ಮೋಹನ್ ದಾಸ್ ಜಿ.                     Read Post »

ಇತರೆ

“ಲೇ ಇರುವೆ.. ನಿನ್ನನ್ನ ಕಚ್ಚಲಾ?!” ಲೇಖನ ಕವಿತಾ ಶ್ರೀನಿವಾಸ್ ನಾಯಕ್

ಲೇಖನ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ “ಲೇ ಇರುವೆ.. ನಿನ್ನನ್ನ ಕಚ್ಚಲಾ?!”  (ಇರುವೆ ಕಡಿತ ಮತ್ತು ಸಂಸ್ಕಾರದ ಕಲಿಕೆ…)“ಒಂದು ಚಿಕ್ಕ ಇರುವೆ ನಮಗೆ ಕಚ್ಚಬಹುದು… ಆದರೆ ನಾವು ಇರುವೆಗೆ ಮರಳಿ ಕಚ್ಚಲು ಸಾಧ್ಯವೇ?”ಬೆಳಗಿನ ಜಾವ ಚಹಾ ಕುಡಿಯುತ್ತಾ ಕುಳಿತಾಗಲೋ ಅಥವಾ ದಿನದ ಯಾವುದೋ ಬಿಡುವಿನ ವೇಳೆಯಲ್ಲೋ ಈ ಮಾತು ಕಿವಿಗೆ ಬಿದ್ದರೆ, ಮೊದಲು ಮುಖದಲ್ಲಿ ಒಂದು ಸಣ್ಣ ನಗು ಮೂಡುವುದು ಸಹಜ. ಮೇಲ್ನೋಟಕ್ಕೆ ಇದು ಕೇವಲ ಒಂದು ತಮಾಷೆಯ ಸಾಲಿನಂತೆ ಕಂಡರೂ, ಇದರ ಆಳಕ್ಕೆ ಇಳಿದು ಯೋಚಿಸಿದರೆ ನಮ್ಮ ಜೀವನದಲ್ಲಿ ನಡೆಯುವ ದೊಡ್ಡದೊಂದು ಜೀವನ ಸತ್ಯ ಮತ್ತು ತತ್ವಜ್ಞಾನ ನಮಗೆ ಅರಿವಾಗುತ್ತದೆ.ಜಗತ್ತಿನಲ್ಲಿ ನಾವೆಷ್ಟೇ ದೊಡ್ಡವರಾಗಿದ್ದರೂ, ಎಷ್ಟೇ ಅಧಿಕಾರ, ಅಂತಸ್ತು ಅಥವಾ ಹಣ ಸಂಪಾದಿಸಿದ್ದರೂ ಪ್ರಕೃತಿಯ ಒಂದು ಸಣ್ಣ ಜೀವಿ ನಮ್ಮನ್ನು ಅಲುಗಾಡಿಸಿಬಿಡಬಹುದು. ನಮಗಿಂತ ಕೋಟಿ ಪಟ್ಟು ಸಣ್ಣದಾಗಿರುವ ಒಂದು ಪುಟ್ಟ ಇರುವೆ ಕಚ್ಚಿದರೆ ನಮಗೆ ನೋವಾಗುತ್ತದೆ, ನಾವು ನಲುಗಿ ಹೋಗುತ್ತೇವೆ. ನಮ್ಮ ಅಹಂಕಾರಕ್ಕೆ ಪ್ರಕೃತಿ ನೀಡುವ ಅತ್ಯಂತ ಸರಳವಾದ ಎಚ್ಚರಿಕೆ ಇದು.ಆದರೆ, ಕಚ್ಚಿದ ಇರುವೆಗೆ ನಾವು ಮರಳಿ ಕಚ್ಚಲು ಹೋದರೆ ಏನಾಗುತ್ತದೆ? ಅದು ಹಾಸ್ಯಾಸ್ಪದ ಮತ್ತು ಮೂರ್ಖತನ ಎನಿಸಿಕೊಳ್ಳುತ್ತದೆ. ಏಕೆಂದರೆ, ಇರುವೆಗೆ ಕಚ್ಚುವುದು ಅದರ ಸ್ವಭಾವ. ಆದರೆ ನಮಗೆ ಭಗವಂತ ವಿವೇಕವನ್ನು ಕೊಟ್ಟಿದ್ದಾನೆ.ನಮ್ಮ ಇಂದಿನ ಬದುಕಿನ ಪರಿಸ್ಥಿತಿಯೂ ಹೌದು. ಸಮಾಜದಲ್ಲಿ, ನಮ್ಮ ಸುತ್ತಮುತ್ತ ಇರುವೆಗಳಂತಹ ಸಣ್ಣ ಮನಸ್ಥಿತಿಯ ಜನರು ಇರುತ್ತಾರೆ. ಅವರು ತಮ್ಮ ಮಾತಿನಿಂದಲೋ, ನಡವಳಿಕೆಯಿಂದಲೋ ನಮಗೆ ನೋವು ಕೊಡಬಹುದು ಅಥವಾ ಕೀಳಾಗಿ ನಡೆಸಿಕೊಳ್ಳಬಹುದು. ಆದರೆ ಅವರು ಮಾಡಿದ ಕೀಳು ಕೆಲಸವನ್ನೇ ನಾವು ಅವರಿಗೆ ಮರಳಿ ಮಾಡಲು ಹೋದರೆ, ನಮ್ಮ ಸಂಸ್ಕಾರಕ್ಕೂ ಅವರ ಅಜ್ಞಾನಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಕೆಟ್ಟದ್ದಕ್ಕೆ ಕೆಟ್ಟದ್ದೇ ಎಂದಿಗೂ ಸರಿಯಾದ ಉತ್ತರವಾಗಲು ಸಾಧ್ಯವಿಲ್ಲ. ರಸ್ತೆಯಲ್ಲಿ ಹೋಗುವಾಗ ನಾಯಿ ಬೊಗಳಿದರೆ, ನಾವು ಮರಳಿ ಬೊಗಳುವುದಿಲ್ಲ ಅಲ್ಲವೇ?ಇರುವೆ ಕಚ್ಚಿದರೆ ನೋವಾಗುತ್ತದೆ ನಿಜ,ಆದರೆ ಮರಳಿ ಕಚ್ಚಲು ಹೋಗುವುದು ಮೂರ್ಖತನ!ಜೀವನದಲ್ಲೂ ಅಷ್ಟೇ… ನೋವು ಕೊಟ್ಟವರೆಲ್ಲರಿಗೂಮರಳಿ ನೋವು ಕೊಡುತ್ತಾ ಕೂತರೆ,ನಮ್ಮ ವ್ಯಕ್ತಿತ್ವವೇ ಮಣ್ಣು ಪಾಲಾಗುತ್ತದೆ.ಕೆಲವೊಮ್ಮೆ ಮೌನ ಮತ್ತು ನಿರ್ಲಕ್ಷ್ಯವೇ ಅತ್ಯುತ್ತಮ ಪ್ರತಿಕಾರ. ನಮಗೆ ನೋವು ಕೊಟ್ಟವರ ಮಟ್ಟಕ್ಕೆ ನಾವು ಇಳಿಯಬೇಕಾಗಿಲ್ಲ. ಇರುವೆಗೆ ಕಚ್ಚುವುದು ಸ್ವಭಾವವಾದರೆ, ಅದನ್ನು ನಿರ್ಲಕ್ಷಿಸಿ ನಮ್ಮ ಹಾದಿಯಲ್ಲಿ ನಾವು ಪ್ರೀತಿಯಿಂದ ಮುನ್ನಡೆಯುವುದೇ ನಿಜವಾದ ಬುದ್ಧಿವಂತಿಕೆ. ನಮ್ಮ ಶಕ್ತಿಯನ್ನು ನಾವು ಯಾರ ಮೇಲೆ, ಹೇಗೆ ಬಳಸಬೇಕು ಎಂಬ ವಿವೇಕವೇ ನಮ್ಮ ಶ್ರೀರಕ್ಷೆ ̤ ಕವಿತಾ ಶ್ರೀನಿವಾಸ್ ನಾಯಕ್

“ಲೇ ಇರುವೆ.. ನಿನ್ನನ್ನ ಕಚ್ಚಲಾ?!” ಲೇಖನ ಕವಿತಾ ಶ್ರೀನಿವಾಸ್ ನಾಯಕ್ Read Post »

ಇತರೆ

“ಕವಿ ಚಿಂತಕ ಬಸವ ಭಕ್ತ ಡಾ ಸಿದ್ದಯ್ಯ ಪುರಾಣಿಕ”ವಿಶೇಷ ಲೇಖನ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ವ್ಯಕ್ತಿ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಕವಿ ಚಿಂತಕ ಬಸವ ಭಕ್ತ ಡಾ ಸಿದ್ದಯ್ಯ ಪುರಾಣಿಕ”  ಅತ್ಯಂತ ಬಡತನದಲ್ಲಿ ಹೈದ್ರಾಬಾದ ನಿಜಾಮನ ಕಾಲದಲ್ಲಿ ಹುಟ್ಟಿದ ಸಿದ್ದಯ್ಯ ಎಂಬ ಬಾಲಕ ಕನ್ನಡ ಉರ್ದು ಇಂಗ್ಲಿಷ್ ಹಿಂದಿ ಮರಾಠಿ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿ ಕನ್ನಡ ಸಾಹಿತ್ಯ ಲೋಕದ ವಿಶ್ವ ಮಾನವನ ಸಂದೇಶವನ್ನು ಸಾರಿದ ಶ್ರೇಷ್ಠ ಶಿವಯೋಗ ಸಾಧಕರು ಸಾವಿಲ್ಲದ ಶರಣರು . ಕನ್ನಡ ಸಾಹಿತ್ಯ ಅದರಲ್ಲೂ ವಚನ ಸಾಹಿತ್ಯದ ಮೌಲ್ಯವನ್ನು ಪಸರಿಸುವ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಅಪ್ರತಿಮ ಸಾಹಿತ್ಯದ ರಾಯಭಾರಿ ಡಾ ಸಿದ್ದಯ್ಯ ಪುರಾಣಿಕ ಅವರು.ಮನೆಯಲ್ಲಿ ಅಜ್ಜ ಅಪ್ಪ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಸಂಪ್ರದಾಯ ಜಂಗಮತ್ವದಿಂದ ಹೊರ ಬಂದು ಅಪ್ಪ ಬಸವಣ್ಣನವರ ವಿಚಾರಧಾರೆಗಳನ್ನು ಬದುಕಿನುದ್ದಕ್ಕೂ ಪಸರಿಸಿದ ಧೀಮಂತ ಸಾಹಿತಿ. ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು.  ‘ವಚನೋದ್ಯಾನದ ಅನುಭಾವಿ ಬಿರುದಾಂಕಿತ,  ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು. *ಹುಟ್ಟು ಮತ್ತು ಜೀವನ* ಸಿದ್ಧಯ್ಯ ಪುರಾಣಿಕರು ಲಿಂಗಾಯತ ಜಂಗಮ ಕುಟುಂಬದಲ್ಲಿ‌ ೧೮ನೇ ಜೂನ್ ೧೯೧೮ರಲ್ಲಿ ಜನಿಸಿದರು. ಈಗಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರ ಪುರಾಣಿಕರು ಹುಟ್ಟಿದ ಊರು. ಶ್ರೀ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಹಾಗೂ ಶ್ರೀಮತಿ ದಾನಮ್ಮ ಪುರಾಣಿಕರಿಗೆ ಜನಿಸಿದ ಐದು ಮಕ್ಕಳಲ್ಲಿ ಹಿರಿಯವರು ಡಾ. ಸಿದ್ಧಯ್ಯ ಪುರಾಣಿಕರು. ಸಿದ್ಧಯ್ಯ ಪುರಾಣಿಕರು ಬಾಲ್ಯದಿಂದಲೇ ಉತ್ತಮವಾದ ಸಾಂಸ್ಕೃತಿಕ ವಾತಾವರಣ ಪಡೆದಿದ್ದರು.ಅವರ ತಂದೆಯವರಾದ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ನೂರಾರು ನಾಟಕ-ರಂಗಗೀತೆಗಳನ್ನು,೬ ಪುರಾಣಗಳು ಮತ್ತು ವಚನ ಸಾಹಿತ್ಯದ ಕುರಿತು ೧೦ ಕೃತಿಗಳನ್ನು ರಚಿಸಿದವರು.ಪ್ರಸಿದ್ಧ ಆರ್ಯುವೇದ ಪಂಡಿತರಾದ ಇವರು ಜನಸಾಮಾನ್ಯರಿಗಾಗಿ ಆರೋಗ್ಯದ ಕುರಿತು ಕನ್ನಡದಲ್ಲಿ ಅನೇಕ ಲೇಖನಗಳು ಬರೆದಿದ್ದಾರೆ.ಇದಲ್ಲದೆ ಪ್ರಪ್ರಥಮ ಕನ್ನಡ ಶಾಲೆಯನ್ನು ಸ್ಥಾಪಿಸಿ,ಮುನ್ನೆಡಿಸಿದವರು.ಜೈಮಿನಿ ಭಾರತ, ಶಬರಶಂಕರ ವಿಲಾಸ,ಪ್ರಭುಲಿಂಗ ಲೀಲೆ ಮೊದಲಾದ ಕಾವ್ಯಗಳನ್ನು,ವ್ಯಾಕರಣ,ಛಂದಸ್ಸು ಶಾಸ್ತ್ರಗಳನ್ನೂ, ವಚನ,ಸುಭಾಷಿತಗಳು,ಹಾಡುಗಳು,ಶತಕ ಮೊದಲಾದುವುಗಳನ್ನು ಮಗ ಸಿದ್ಧಯ್ಯನಿಗೆ ಕಲಿಸಿಕೊಟ್ಟರು. ತಮ್ಮ ತಂದೆಯವರು ಬರೆದು ಆಡಿಸುತ್ತಿದ್ದ ನಾಟಕ, ಆಗಾಗ ರಚಿಸಿ ಹಾಡುತ್ತಿದ್ದ ಕವಿತೆ ಇವುಗಳನ್ನೆಲ್ಲಾ ಕೇಳಿದಾಗ ಬೆಳೆಯುವ ಸಿದ್ಧಯ್ಯ ಪುರಾಣಿಕರ ಮನಸ್ಸಿನಲ್ಲಿ ತಾನೂ ಹಾಗಾಗಬೇಕೆನ್ನುವ ಹಂಬಲ ಮೂಡಿಬಂತು. ಸಿದ್ಧಯ್ಯ ಪುರಾಣಿಕರ ಅಜ್ಜಂದಿರಾದ ಕವಿರತ್ನ ಚೆನ್ನಕವಿಗಳಂತೂ ಕವಿಗಳಾಗಿ ವಿಖ್ಯಾತರಾದವರು ಸೋದರಮಾವಂದಿರಾದ ಕಾಲ ಕಾಲೇಶ್ವರ ಶಾಸ್ತ್ರಿಗಳಂತೂ ದೊಡ್ಡ ವೇದಾಂತಿಗಳು. ವಿದ್ವತ್ತು, ಕಾವ್ಯ ರಚನೆ, ಪುರಾಣ ಪ್ರವಚನ ಹಾಗೂ ತಾತ್ವಿಕ ಜಿಜ್ಞಾಸೆಗಳಿಗೆ ಅಪರೂಪವಾದ ವಾತಾವರಣ ಮನೆಯಲ್ಲೇ ದೊರೆತದ್ದು ಪುರಾಣಿಕರ ಪುಣ್ಯ. ಬಾಲ್ಯದಿಂದ ಸಾಹಿತ್ಯವೆನ್ನುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಮುಂದೆ ಶರಣ ಸಾಹಿತ್ಯದಲ್ಲಿ ಸಿದ್ಧಯ್ಯ ಪುರಾಣಿಕರು ಮಾಡಿರುವ ಕಾರ್ಯಸಾಧನೆಗಳಿಗೆ ಅಗತ್ಯವಾದ ವಾತಾವರಣ ಮತ್ತು ಸ್ಫೂರ್ತಿಗಳು ಬಾಲ್ಯದಲ್ಲೇ ಅವರಿಗೆ ಒದಗಿದ್ದವೆಂಬುದು ಸ್ಮರಣೀಯ ಅಂಶವಾಗಿದೆ. ಸಿದ್ಧಯ್ಯ ಪುರಾಣಿಕರದು ತುಂಬಾ ಶಿಸ್ತಿನಿಂದ ಕೂಡಿದ ಅಧ್ಯಯನಶೀಲ ಪ್ರವೃತ್ತಿ. ವ್ಯಾಯಾಮದಿಂದ ಶರೀರವನ್ನು ದೃಢಗೊಳಿಸಿಕೊಳ್ಳುವ ಹಾಗೆಯೇ ಸಾಹಿತ್ಯಾಧ್ಯಾಯನದಿಂದ ಮನಸ್ಸನ್ನು ಶಕ್ತಗೊಳಿಸಿಕೊಂಡವರು. ಏಕಾಗ್ರತೆಯೆನ್ನುವುದು ಅವರಿಗೆ ವರವಾಗಿತ್ತು. ಹೀಗಾಗಿಯೇ ಅವರು ವಿದಾರ್ಥಿಜೀವನದ ಉದ್ದಕ್ಕೂ ತಮ್ಮ ಉತ್ತಮವಾದ ಮಟ್ಟವನ್ನು ಉಳಿಸಿಕೊಂಡು ಬಂದದ್ದೇ ಅಲ್ಲದೆ ಪರೀಕ್ಷೆಗಳೆಲ್ಲದರಲ್ಲಿ ಗೌರವದ ಸ್ಥಾನಗಳನ್ನು ಉಳಿಸಿಕೊಳ್ಳುತ್ತಲೇ ಬಂದವರು. ಬಿ.ಎ ಪರೀಕ್ಷೆಯಲ್ಲಿ ಸಕಲ ವಿಷಗಳಲ್ಲೂ ಅವರಿಗೆ ಪ್ರಥಮ ಸ್ಥಾನ. *ವಿಜ್ಞಾನಿಯಾಗುವುದ ಬಿಟ್ಟು ಕವಿಯಾದ* ಜೀವನದ ಎಲ್ಲ ರಂಗಗಳಲ್ಲಿ ಉತ್ತಮಿಕೆಯನ್ನು ಮೆರೆದ ಸಿದ್ಧಯ್ಯ ಪುರಾಣಿಕರು ಕನ್ನಡದತ್ತ ಬಂದದ್ದು ಒಂದು ಯೋಗಾಯೋಗ. ಪ್ರೌಢಶಾಲೆಯಲ್ಲಿದ್ದಾಗ ಇವರು ಬಯಸಿದ್ದು ಯಂತ್ರಜ್ಞನಾಗಬೇಕೆಂದು. ಅದಕ್ಕಾಗಿ ಉನ್ನತ ಗಣಿತಶಾಸ್ತ್ರವನ್ನು ಐಚ್ಚಿಕ ವಿಷಯವನ್ನಾಗಿ ಆಯ್ಕೆಮಾಡಿಕೊಂಡಿದ್ದರು. ಇವರ ಮೆಚ್ಚಿನ ಗುರುಗಳಾದ ರಹಮತ್ತುಲ್ಲಾ ಖಾನ್ ಸಾಹೇಬರು ಹೋಮ್ ವರ್ಕ್ ಬಗ್ಗೆ ತುಂಬಾ ಕಟ್ಟುನಿಟ್ಟಿನವರಾಗಿದ್ದು ಒಂದು ದಿನ ಸಿದ್ಧಯ್ಯ ಪುರಾಣಿಕರು ಹೋಮ್ ವರ್ಕ್ ಮಾಡಿರದಿದ್ದರಿಂದ ಸಿಟ್ಟಾದದ್ದೇ ಅಲ್ಲದೆ ಈ ವಿಷಯ ಬಿಟ್ಟು ಬೇರೆಯದನ್ನು ಆರಿಸಿಕೋ ಹೋಗು ಎಂದು ಗದರಿಸಿಬಿಟ್ಟರು. ಸ್ವಾಭಿಮಾನಿಯಾಗಿದ್ದ ಸಿದ್ಧಯ್ಯ ಪುರಾಣಿಕರು ತಟ್ಟನೆ ಒಂದು ನಿರ್ಧಾರಕ್ಕೆ ಬಂದು ಬಿಟ್ಟರು. ಕನ್ನಡಕ್ಕೆ ಹೆಸರಾಗಿದ್ದ ತವಗ ಭೀಮಸೇನರಾಯರ ಬಳಿಗೆ ಹೋಗಿ ಕನ್ನಡವನ್ನು ಐಚ್ಚಿಕವಾಗಿ ಆರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿ ಅವರ ಶಿಷ್ಯತ್ವವನ್ನೂ ಪಡೆದುಕೊಂಡುಬಿಟ್ಟರು. ಇಷ್ಟೆಲ್ಲಾ ಆದರೂ ಅವರ ಗಣಿತಶಾಸ್ತ್ರದ ಅಧ್ಯಾಪಕರು ಇವರ ಮೇಲೆ ಯಾವುದೇ ರೀತಿಯ ಆಕ್ರೋಶ ತೋರದೆ ಇವರನ್ನು ಪ್ರೀತಿಯಿಂದಲೇ ಕಂಡದ್ದು ಅಂದಿನ ಅಧ್ಯಾಪಕ ವೃತ್ತಿಯವರ ಸದ್ಗುಣಗಳಿಗೆ ಸಾಕ್ಷಿಯಾಗಿತ್ತು. ಅಂತೂ ಸಿದ್ಧಯ್ಯ ಪುರಾಣಿಕರು ಯಂತ್ರಜ್ಞನಾಗದೇ ಕನ್ನಡಕ್ಕೆ ಹೊರಳಿದ್ದು ಈ ಪರಿಯಲ್ಲಿ. ಸಿದ್ಧಯ್ಯ ಪುರಾಣಿಕರು ಅಧ್ಯಯನ ಮಾಡುತ್ತಿದ್ದಾಗ ಅವರಿಗೆ ನೆರವಾದವರು ಒಬ್ಬಿಬ್ಬರಲ್ಲ. ಅವರಲ್ಲಿ ಮುಖ್ಯರಾದವರು ಅಲಿಬನ್ ಗಾಲಿಬ್ ಸಾಹೇಬರು, ಮೀನಾಯಿ ಸಾಹೇಬರು, ಇಮಾಂ ಸಾಹೇಬರು, ಅಜೀಜ್ ಖಾನ್ ಸಾಹೇಬರು, ಹಕ್ಕನಿ ಸಾಹೇಬರು ಮತ್ತು ಹುಸೇನ ಆಲೀಖಾನ ಸಾಹೇಬರು ಮುಂತಾದವರ ದೊಡ್ಡ ಗುಣಗಳನ್ನು ಪುರಾಣಿಕರು ಮತ್ತೆ ಮತ್ತೆ ನೆನೆಯುತ್ತಿದ್ದರು. ಅಷ್ಟೇ ಅಲ್ಲ ಅವರ ಬದುಕಿನಲ್ಲಿ ಅದರಲ್ಲೂ ತಹಶೀಲ್ದಾರರಾಗಿ ಆಯ್ಕೆಯಾಗುವ ಸಂದರ್ಭದಲ್ಲಿ ಹುಸೇನ ಆಲೀಖಾನರು ಸ್ವಂತ ಮಗನನ್ನು ಬಿಟ್ಟು ಇವರ ಬಗ್ಗೆ ಮಾಡಿದ ಶಿಫಾರಸ್ಸನ್ನು ಅಷ್ಟೇ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು. *ಕಾವ್ಯಾನಂದರಾದ ಕುರಿತು* ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಕಲಬುರ್ಗಿಯಲ್ಲಿ ನಡೆದ ಕವನ ಸ್ಪರ್ಧೆಯಲ್ಲಿ ಪ್ರಥಮಸ್ಥಾನಗಳಿಸಿದ ಸಿದ್ಧಯ್ಯನವರು ಕವಿಯೆಂಬ ಹೆಮ್ಮೆಗೂ ಪಾತ್ರರಾದವರು. ಜಯಕರ್ನಾಟಕದಲ್ಲಿ ಇವರ ಪದ್ಯವೊಂದು ಅಚ್ಚೂ ಆಯಿತು. ಆಲಮಟ್ಟಿಯಲ್ಲಿದ್ದಾಗ ಇವರ ಕವಿತೆಯೊಂದು ‘ಶರಣ ಸಂದೇಶ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಕಾವ್ಯದೇವಿ ಎಂಬ ನೀಳ್ಗವಿತೆಯಲ್ಲಿರುವ ಸಾಲುಗಳು -“ನಿನ್ನಾತ್ಮವಾನಂದ ನನ್ನಾತ್ಮ ಕಾವ್ಯ! ಇಂತೂ ಕಾವ್ಯಾನಂದ’ ನಾಮ ಸುಶ್ರಾವ್ಯ” – ಕವಿ ಸಿದ್ಧಯ್ಯ ಪುರಾಣಿಕರು ಕಾವ್ಯಾನಂದರಾದ ರೀತಿ ಇದು. *ಉದ್ಗಿರ ಪೀಠಾಧ್ಯಕ್ಷತೆಗೆ  ಆಹ್ವಾನ* ಅಧ್ಯಯನ, ಕಾವ್ಯರಚನೆ, ಸಾಹಿತ್ಯ ಪ್ರೇಮಗಳಿಂದ ಬದುಕಿಗೆ ಒಂದು ಆದರ್ಶವನ್ನು ಕಟ್ಟಿಕೊಳ್ಳುತ್ತಿದ್ದ ಕಾಲದಲ್ಲೇ ಮದುವೆಯ ಒತ್ತಡ ಬಂದಾಗ ತಂದೆಗೆ ಸುದ್ದಿಕೊಡದೆ ಹರ್ಡೇಕರ್ ಮಂಜಪ್ಪನವರ ಆಶ್ರಮದಲ್ಲಿ ಆಶ್ರಯ ಪಡೆದಿದ್ದರು. ಯೋಗ, ಅಧ್ಯಯನ ಹಾಗೂ ಮಂಜಪ್ಪನವರ ಪ್ರಭಾವಗಳಿಂದ ಮನಸ್ಸು ಸ್ವಲ್ಪಮಟ್ಟಿಗೆ ವೇದಾಂತದ ಕಡೆಗೆ ಎಳೆಯುತ್ತಾ ಇದ್ದುದೂ ಉಂಟು. ಆದರೆ ಸಂಗ್ರಾಮಪ್ಪ ಶೆಟ್ಕರ್ ಅವರಿಂದ  ಬಂದ ಸುದೀರ್ಘ ಪತ್ರ ಇವರ ಬದುಕಿನ ದಿಕ್ಕನ್ನು ಬದಲಿಸಿತು. ಉದಯಗಿರಿಯ ಹಾವಗಿಸ್ವಾಮಿ ಮಠ ಆ ಭಾಗದ ಪ್ರಸಿದ್ಧ ಮಠವಾಗಿದ್ದು ಅದಕ್ಕೆ ಪೀಠಾಧ್ಯಕ್ಷರಾಗಲು ನಿಮ್ಮ ಮಗನನ್ನು ದಾನವಾಗಿ ನೀಡಬೇಕೆಂದು ಸಿದ್ಧಯ್ಯ ಪುರಾಣಿಕರ ತಂದೆಯವರಿಗೆ ಬಂದ ಪತ್ರ ಅದು. ಸಿದ್ಧಯ್ಯ ಪುರಾಣಿಕರ ತಂದೆ ಆ ಪತ್ರವನ್ನೋದಿ ಮಂಕಾದುದೇನೋ ನಿಜ, ಆದರೆ ಅದನ್ನು ಮಗನ ಕೈಯಲ್ಲಿಟ್ಟು ‘ಈ ಬಗ್ಗೆ ನಿನ್ನ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ’ ಎಂದು ಹೇಳಿದಂತೆಯೇ ನಡೆದುಕೊಂಡರು. ಸಿದ್ಧಯ್ಯನವರು ಬಹಳಷ್ಟು ಯೋಚಿಸಿದರು. ತಂದೆಯವರ ಬಡತನ, ತಮ್ಮಂದಿರ ಕಷ್ಟ ಕಾರ್ಪಣ್ಯದ ಸ್ಥಿತಿ ಇವುಗಳೆಲ್ಲಾ ಕಣ್ಣೆದುರು ನಿಂತವು. ಸಂಯಮಿಯೆಂದು ಖ್ಯಾತರಾಗಿದ್ದ ಸಿದ್ಧಯ್ಯನವರು ತಾವು ಮೆಚ್ಚಿದ್ದ ಗವಿಯೊಂದರಲ್ಲಿದ್ದ ಯೋಗಿಯನ್ನೇ ಈ ಬಗ್ಗೆ ಸಲಹೆ ಕೇಳಲು ಹೊರಟರು. ಗುಹೆಯ ಸಮೀಪ ಬರುತ್ತಿದ್ದಾಗ ಕಂಡ ಭೋಗದ ದೃಶ್ಯ ಅವರ ಮನಸ್ಸನ್ನು ಕ್ಷಣಕಾಲ ಗೊಂದಲದಲ್ಲಿ ಬೀಳಿಸಿದರೂ ಬದುಕಿನ ಹಾದಿ ಅವರಿಗೀಗ ನಿಚ್ಚಳವಾಗಿತ್ತು, ಸಂನ್ಯಾಸಿಯಾಗುವ ಹಂಬಲವನ್ನು ದೂರಮಾಡಿಬಿಟ್ಟರು. *ಅಧಿಕಾರಿಗಳಾಗಿ* ಬಿ. ಎ. ತೇರ್ಗಡೆಯಾಗಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾದಾಗ ವಕೀಲರಾಗುವ ಸಲಹೆ ಮೇಲೆ ಎಲ್.ಎಲ್.ಬಿ ಪರೀಕ್ಷೆಗೂ ಕುಳಿತರು. ಬಿ. ಎ. ಪರೀಕ್ಷೆಯ ಉನ್ನತ ಸ್ಥಾನದ ದೆಸೆಯಿಂದ ಸಿದ್ಧಯ್ಯ ಪುರಾಣಿಕರು 1943ರಲ್ಲಿ ತಹಶೀಲ್ದಾರರಾಗಿ ಆಯ್ಕೆಯಾದರು. ಮುಂದೆ ಅವರು ನಾಂದೇಡ, ಕಲಬುರಗಿ, ತಾಂಡೂರು,, ಯಾದಗಿರಿ, ಬೆಂಗಳೂರು, ಮಡಿಕೇರಿ, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿ ಬೆಂಗಳೂರಿನಲ್ಲಿ ನಿವೃತ್ತರಾದರು. ತಹಶೀಲ್ದಾರರಾಗಿ ನೌಕರಿಗೆ ಸೇರಿದ ಅವರು ಹೈದರಾಬಾದು ಸಂಸ್ಥಾನದಲ್ಲಿದ್ದು ಪಡೆದ ಅನುಭವ ಅಪಾರವಾದದ್ದು. ಅವರಿಗೊದಗಿದ ವಿಪತ್ತುಗಳು ಕೆಲವಲ್ಲ. ಆದರೆ ಒಪ್ಪಿಕೊಂಡ ಕೆಲಸವನ್ನು ಅತ್ಯಂತ ಪ್ರೀತಿ, ದಕ್ಷತೆಗಳಿಂದ ನಿರ್ವಹಿಸಿ, ಕರ್ತ್ಯವ್ಯ ಎನ್ನುವುದು ಸೇವೆಯ ಅವಕಾಶ ಎಂದು ಭಾವಿಸಿದ ಸಿದ್ಧಯ್ಯ ಪುರಾಣಿಕರು ಡೆಪ್ಯೂಟಿ ಕಲೆಕ್ಟರ್, ಅಧೀನ ಕಾರ್ಯದರ್ಶಿ, ಉಪಕಾರ್ಯದರ್ಶಿ, ವಾರ್ತಾ ಮತ್ತು ಪ್ರವಾಸೋದ್ಯ್ಯಮ ಇಲಾಖೆಯ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ, ಸಾರಿಗೆ ಕಮಿಷನರ್, ಕಾರ್ಮಿಕ ಕಮಿಷನರ್ ಹೀಗೆ ವಿವಿಧ ಹಂತಗಳಲ್ಲಿ ಹಾಗೂ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಬಹುಮುಖವಾಗಿ ಜನಪರವಾದ ಕಾರ್ಯಗಳನ್ನು ಮಾಡಿದವರು. *ಕುಟುಂಬ*ಅಮಲ್ದಾರರಾಗಿ ನೇಮಕಗೊಂಡ ಕಾಲದಲ್ಲಿಯೇ ಸಿದ್ಧಯ್ಯ ಪುರಾಣಿಕರು ತಾವು ನೋಡಿ ಮೆಚ್ಚಿದ ಗಿರಿಜಾದೇವಿಯವರನ್ನು ಮದುವೆಯಾದರು. ವಿಜಯಾ, ಶಿವಗೀತಾ ಮತ್ತು ಭಾರತಿ ಎಂಬ ಮೂವರು ಹೆಣ್ಣು ಮಕ್ಕಳು ಮತ್ತು ಪ್ರಸನ್ನ ಕುಮಾರ ಪುರಾಣಿಕ ಎಂಬ ಪುತ್ರರ ಸಂಸಾರ ಅವರದಾಗಿತ್ತು. *ಕನ್ನಡದ ಕಹಳೆ* ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದಾಗ ಕನ್ನಡದ ಕೆಲಸಕ್ಕಾಗಿ ಬಿ.ಎಂ.ಶ್ರೀ, ಎ. ಎನ್. ಮೂರ್ತಿರಾವ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಸೀತಾರಾಮಯ್ಯ ಮೊದಲಾದ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ಕರೆಯಿಸಿ ಕನ್ನಡದ ಕಹಳೆಯನ್ನು ಮೊಳಗಿದ್ದೇ ಅಲ್ಲದೆ ಕನ್ನಡದ ವಾತಾವರಣ ನಿರ್ಮಾಣಕಾಯಕದಲ್ಲಿ ಸಿದ್ಧಯ್ಯ ಪುರಾಣಿಕರು ವಹಿಸಿದ ಪಾತ್ರ ಮಹತ್ವದ್ದು. ಈಗಿನ ಬೀದರ್, ರಾಯಚೂರು, ಗುಲ್ಬರ್ಗಾ ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಕನ್ನಡದ ಕೆಲಸ ಆಗುವುದಕ್ಕೆ ಕಾರಣರಾದ ಪ್ರಾತಃಸ್ಮರಣೀಯರೆಂದರೆ ಜಯದೇವ ತಾಯಿ ಲಿಗಾಡೆ, ಹರ್ಡೇಕರ್ ಮಂಜಪ್ಪ, ಡೆಪ್ಯೂಟಿ ಚನ್ನಪ್ಪ ಮೊದಲಾದವರು. ಈ ಮಹಾ ಕಾರ್ಯದಲ್ಲಿ ಸಿದ್ಧಯ್ಯ ಪುರಾಣಿಕರ ಪಾತ್ರ ಸಾಮಾನ್ಯವಾದುದಲ್ಲ. 1976ರ ವರ್ಷದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಸಿದ್ಧಯ್ಯ ಪುರಾಣಿಕರು ಮಡಿಕೇರಿ, ಬೆಳಗಾವಿ ಜಿಲ್ಲೆಗಳ ಜನರು ಸಿದ್ಧಯ್ಯ ಪುರಾಣಿಕರು ಅಲ್ಲಿ ಮಾಡಿದ ಕೆಲಸದ ಬಗ್ಗೆ ಅಪಾರ ಅಭಿಮಾನದಿಂದ ಮಾತನಾಡುತ್ತಿದ್ದುದನ್ನು ಅಪಾರ ಸಂತಸದಿಂದ ನೆನೆಯುತ್ತಿದ್ದರು. ಕನ್ನಡದ ವಿಶ್ವಕೋಶ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆ, ಸರ್ಕಾರದಿಂದ ಪ್ರಕಟವಾದ ಸುಲಭಾವೃತ್ತಿಯ ಲೀಲಾವತಿ ಪ್ರಂಬಂಧ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ವಚನ ಸಾಹಿತ್ಯ ಸಂಗ್ರಹ, ಸರ್ವಜ್ಞನ ವಚನಗಳಂಥ ಕೃತಿಗಳ ಪ್ರಕಟಣೆಯ ಯೋಜನೆಗಳಲ್ಲಿ ತಾವು ನಿರ್ವಹಿಸಿದ ಪಾತ್ರದ ಬಗ್ಗೆ ಅವರಿಗೆ ತುಂಬು ಅಭಿಮಾನವಿತ್ತು. *ಸಾಹಿತ್ಯ ಸೇವೆ* ಸಿದ್ಧಯ್ಯ ಪುರಾಣಿಕರು ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳು. ಅವರ ಸಾಹಿತ್ಯರಾಶಿ ವಿಪುಲವಾಗಿದೆ. ಹಾಗೂ ವೈವಿಧ್ಯಮಯವೂ ಆಗಿದೆ. ಆತ್ಮಾರ್ಪಣೆ, ಭಾರತವೀರ, ರಜತ ರೇಖೆ, ಭಿನ್ನನೂಪುರು ಅಲ್ಲದೆ ಕೆಲವು ಗೇಹ ನಾಟಕಗಳು ಎಂಬ ನಾಟಕಗಳನ್ನವರು ರಚಿಸಿದ್ದಾರೆ. ಭಾರತವೀರ ನಾಟಕ ಚೀನಿಯರ ದಾಳಿಯ ಸಂದರ್ಭದಲ್ಲಿ ಹುಟ್ಟಿದ್ದು. ತ್ರಿಭುವನ ಮಲ್ಲ ಎಂಬ ಕಾದಂಬರಿಯೂ ಇವರದೆ. ವಿಕಾಸವಾಣಿ ಎಂಬುದು ವಯಸ್ಕರಿಗಾಗಿ ಬರೆದ ಕೃತಿ. ಮಕ್ಕಳಿಗಾಗಿ ತುಪ್ಪಾರೊಟ್ಟಿ ಗೇಗೇಗೇ, ಗಿಲ್ ಗಿಲ್ ಗಿಲಗಚ್ಚಿ, ತಿರುಗೆಲೇ ತಿರುಗೆಲೆ ತಿರುಗುಯ್ಯಾಲೆ, ನ್ಯಾಯ ನಿರ್ಣಯ, ಮಕ್ಕಳ ಲೋಕ ಸಂಚಾರ, ಬಣ್ಣ ಬಣ್ಣದ ಓಕುಳಿ ಎಂಬ ಆರು ಕೃತಿಗಳನ್ನು ರಚಿಸಿದ್ದಾರೆ. ಬಸವಣ್ಣನವರ ಜೀವನ ಹಾಗೂ ಸಂದೇಶ, ಮಹಾದೇವಿ, ಹರ್ಡೇಕರ್ ಮಂಜಪ್ಪನವರು, ಸಿದ್ಧರಾಮ, ಮಿರ್ಜಾಗಾಲಿಬ್, ಅಲ್ಲಮ ಪ್ರಭು ಎಂಬ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಕಥಾ ಮಂಜರಿ ಹಾಗೂ ತುಷಾರ ಹಾರ ಎಂಬ ಎರಡು ಕಥಾ ಸಂಕಲನಗಳನ್ನೂ ಬರೆದಿದ್ದಾರೆ. ಹದಿಮೂರಕ್ಕೂ ಹೆಚ್ಚು ಕೃತಿಗಳ ಸಂಪಾದನೆ ಕಾರ್ಯವನ್ನು ಮಾಡಿದ್ದಾರೆ. ಇವುಗಳಲ್ಲಿ ಕೆಲವು ಅನ್ಯಮಹನೀಯರೊಡನೆ ಸಂಪಾದಿಸಿದವುಗಳಾಗಿವೆ. ಹಲವೊಂದು ಅನುವಾದಗಳನ್ನೂ ಮಾಡಿದ್ದಾರೆ. ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ಮೊದಲು ಮಾನವನಾಗು, ಕಲ್ಲೋಲ ಮಾಲೆ, ಚರಗ, ಹಾಲ್ದೆನೆ, ಮರುಳ ಸಿದ್ಧನ ಕಂತೆ, ಆಯ್ದ ಕವನಗಳು ಎಂಬ ಕವನ ಸಂಕಲನಗಳು ಪ್ರಕಟವಾಗಿವೆ. ಕುವೆಂಪು, ಅಂಬಿಕಾತನಯದತ್ತ, ಡಿ. ಎಸ್. ಕರ್ಕಿ ಮೊದಲಾದವರ ಮೆಚ್ಚುಗೆಗೆ ಪಾತ್ರವಾದ ಇವರ ಕಾವ್ಯ ನವೋದಯ ಮಾರ್ಗಕ್ಕೆ ಸೇರಿದುದಾಗಿದೆ. ಬಾಳಪ್ಪ ಹುಕ್ಕೇರಿ ಅವರು ಹಾಡಿರುವ ಮೊದಲು ಮಾನವನಾಗು ಗೀತೆ ಮುಟ್ಟದ ಕನ್ನಡದ ಕಿವಿಗಳಿಲ್ಲ, ತಟ್ಟದ ಹೃದಯಗಳೇ

“ಕವಿ ಚಿಂತಕ ಬಸವ ಭಕ್ತ ಡಾ ಸಿದ್ದಯ್ಯ ಪುರಾಣಿಕ”ವಿಶೇಷ ಲೇಖನ, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ

“ಅಪ್ಪನ ಮಡಿಲು”ವಿಶೇಷ ಬರಹ ಪೃಥ್ವಿರಾಜ್ ಟಿ ಬಿ

ವಿಶೇಷ ಸಂಗಾತಿ ಪೃಥ್ವಿರಾಜ್ ಟಿ ಬಿ “ಅಪ್ಪನ ಮಡಿಲು” ಅಪ್ಪನ ಮಡಿಲು…ಅದು ಕೇವಲ ಒಬ್ಬ ತಂದೆಯ ಮಡಿಲಲ್ಲ.ಅದು ನನ್ನ ಬದುಕಿನ ಮೊದಲ ಆಶ್ರಯ,ಮೊದಲ ಪಾಠಶಾಲೆ,ಮೊದಲ ದೇವಾಲಯ.ನಾನು ಈ ಜಗತ್ತಿಗೆ ಬಂದಾಗ ನನಗೆ ಯಾವುದರ ಅರಿವೂ ಇರಲಿಲ್ಲ. ಬೆಳಕು, ಕತ್ತಲೆ, ಮುಖಗಳು, ನಗು, ಅಳು—ಯಾವುದೂ ನನಗೆ ಅರ್ಥವಾಗಲಿಲ್ಲ. ಕಿವಿಗೆ ಬಿದ್ದ ಶಬ್ದಗಳೇ ನನ್ನ ಮೊದಲ ಪರಿಚಯ. ಆ ಶಬ್ದಗಳ ಅರ್ಥ ಗೊತ್ತಾಗುವ ಮೊದಲೇ ನಾನು ಬದುಕಿನೊಳಗೆ ಕಾಲಿಟ್ಟಿದ್ದೆ.ಅದು ನನ್ನ ಜನನ.ಆ ಕ್ಷಣದಿಂದಲೇ ಆರಂಭವಾಯಿತು ಒಂದು ಪಯಣ—ನಾನು ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಅರ್ಥಮಾಡಿಕೊಳ್ಳುತ್ತಿದ್ದ ಬದುಕಿನ ಪಯಣ.ಬದುಕು ಯಾವಾಗಲೂ ನಮಗೆ ತಿಳಿಸಿ ನಡೆಯುವುದಿಲ್ಲ.ಅದು ನಮ್ಮನ್ನು ಎತ್ತಿಕೊಂಡು ಹೋಗುತ್ತದೆ.ಕೆಲವೊಮ್ಮೆ ಮುದ್ದಾಗಿ,ಕೆಲವೊಮ್ಮೆ ಕ್ರೂರವಾಗಿ.ನಮ್ಮ ಮನೆ ಚಿಕ್ಕದಾಗಿತ್ತು. ನಾಲ್ಕು ಗೋಡೆಗಳು, ಒಂದು ಚಿಕ್ಕ ಅಡುಗೆಮನೆ, ಒಂದು ಹಳೆಯ ಬಾಗಿಲು. ಆದರೆ ಆ ಮನೆಯೊಳಗೆ ಅಪಾರವಾದ ಉಷ್ಣತೆ ಇತ್ತು. ಅಪ್ಪ, ಅಮ್ಮ, ನಾನು ಮತ್ತು ನನ್ನ ತಂಗಿ—ನಾಲ್ವರೂ ಸೇರಿ ನಮ್ಮದೇ ಒಂದು ಪುಟ್ಟ ಲೋಕವನ್ನು ಕಟ್ಟಿಕೊಂಡಿದ್ದೆವು.ಅಪ್ಪ ಮನೆಯ ಹೊರಗಿನ ಜಗತ್ತಿನ ಹೊರೆ ಹೊತ್ತವರು.ಅಮ್ಮ ಮನೆಯೊಳಗಿನ ಜಗತ್ತಿನ ಶಕ್ತಿಯು.ತಂಗಿ ಅಪ್ಪನ ಜೀವದ ತುಣುಕು.ನಾನು ಎಲ್ಲವನ್ನೂ ಮೌನವಾಗಿ ನೋಡುತ್ತಾ ಬೆಳೆದುಬಂದ ಮಗ.ಅಪ್ಪ ನಮ್ಮನ್ನು ಯಾವಾಗಲೂ ಕೊರತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದರು. ಹಣ ಇದ್ದರೂ ಇಲ್ಲದಿದ್ದರೂ, ನಗುವಿನ ಕೊರತೆ ನಮ್ಮ ಮನೆಯಲ್ಲಿರಲಿಲ್ಲ. ಅವರ ಜೀವನದ ಉದ್ದೇಶ ಒಂದೇ—ಮಕ್ಕಳಿಗೆ ನೋವು ತಟ್ಟಬಾರದು.ಅಪ್ಪನ ಕೈಗಳು ಕಠಿಣವಾಗಿದ್ದರೂ, ಹೃದಯ ಮೃದುವಾಗಿತ್ತು.ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರು ಮಾಡಿದ ಕೆಲಸಗಳೇ ಮಾತಾಡುತ್ತಿತ್ತು.ನಾನು ಚಿಕ್ಕಂದಿನಿಂದಲೇ ಹಠ ಹಿಡಿದು ಅಳುವ ಮಕ್ಕಳಲ್ಲಿ ಒಬ್ಬನಲ್ಲ. ಏನಾದರೂ ಬೇಕು ಎಂದರೆ ಅಪ್ಪನ ಮುಖ ನೋಡುತ್ತಿದ್ದೆ. ಅವರ ಕಣ್ಣುಗಳಲ್ಲಿ “ಇಲ್ಲ” ಅಂದರೆ, ಅದು ನನ್ನಿಗೆ ಅಂತಿಮ ಉತ್ತರ. ಅವರ ಮೌನದಲ್ಲೇ ನನಗೆ ಉತ್ತರ ಸಿಗುತ್ತಿತ್ತು.ಹಂಚಿಕೊಂಡು ತಿನ್ನುವುದು, ಇತರರ ನೋವನ್ನು ಅರ್ಥಮಾಡಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚು ಬೇಡ ಅನ್ನಿಸುವುದು—ಇವೆಲ್ಲ ನನ್ನಲ್ಲಿ ಸಹಜವಾಗಿಯೇ ಬೆಳೆದ ಗುಣಗಳು. ಬಹುಶಃ ಅದು ಅಪ್ಪನಿಂದ ನನಗೆ ಬಂದ ಉಡುಗೊರೆ.ಅಪ್ಪನ ಮಡಿಲು ನನಗೆ ದೇವಾಲಯದಂತಿತ್ತು.ಅಲ್ಲಿ ಕುಳಿತರೆ ಜಗತ್ತು ಮೌನವಾಗುತ್ತಿತ್ತು.ಅಪ್ಪ ತಲೆಗೆ ಕೈ ಇಟ್ಟರೆ, ನನ್ನೊಳಗಿನ ಭಯಗಳು ಕರಗುತ್ತಿತ್ತು.ಅವರು ನನ್ನ ಮೊದಲ ದೇವರು.ಮೊದಲ ಹೀರೋ.ನನ್ನ ಬಾಲ್ಯ ಸಂಪೂರ್ಣ ಸಂತೋಷದಿಂದ ತುಂಬಿತ್ತು ಎಂದು ಹೇಳಿದರೆ ಅದು ಅರ್ಧ ಸತ್ಯ. ಹೊರಗೆ ನೋಡಿದರೆ ಎಲ್ಲವೂ ಸರಿಯೇನೋ ಎಂಬಂತೆ ಕಾಣುತ್ತಿತ್ತು. ಆದರೆ ಮನೆಯೊಳಗೆ ಮೌನವಾಗಿ ಬೆಳೆಯುತ್ತಿದ್ದ ಕೆಲ ನೋವುಗಳು, ಅರ್ಥವಾಗದ ನಿಶ್ಶಬ್ದಗಳು ನನ್ನೊಳಗೆ ಪ್ರಶ್ನೆಗಳಾಗಿ ಉಳಿಯುತ್ತಿತ್ತು.ಅಪ್ಪ–ಅಮ್ಮನ ನಡುವೆ ಮಾತಿಲ್ಲದ ದಿನಗಳು.ನಗು ಇದ್ದರೂ, ಹೃದಯಗಳು ದೂರವಾಗುತ್ತಿರುವ ಕ್ಷಣಗಳು.ಆ ನೋವುಗಳನ್ನು ನಾನು ಪದಗಳಲ್ಲಿ ಅರ್ಥಮಾಡಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ಸಂಗ್ರಹಿಸಿಕೊಂಡಿದ್ದೆ.ನಾನು ಐದನೇ ತರಗತಿಯಲ್ಲಿ ಓದುತ್ತಿದ್ದಾಗ, ನಮ್ಮ ಬದುಕಿನ ಮೇಲೆ ಬಿರುಗಾಳಿ ಬಂತು.ಅಪ್ಪ ಮತ್ತು ಅಮ್ಮ ದೂರವಾದರು.ಗೋಡೆಗಳು ಹಾಗೆಯೇ ಇದ್ದವು.ಬಾಗಿಲು, ಕಿಟಕಿ, ನೆಲ— ಯಾವುದು ಬದಲಾಗಿರಲಿಲ್ಲಆದರೆ ಮನೆಯ ಆತ್ಮ ಒಡೆದಿತ್ತು.ಅಮ್ಮ ಮನೆ ಬಿಟ್ಟು ಹೋದ ದಿನ ಮನೆ ಮೌನವಾಗಿತ್ತು. ಆ ಮೌನವು ಕಿವಿಗೆ ಕೇಳಿಸದ ಶಬ್ದವಾಗಿ ನನ್ನ ಮನಸ್ಸಿನಲ್ಲಿ ಕೂಗುತ್ತಿತ್ತು.“ಅಮ್ಮ ಏಕೆ ಹೋದಳು?”ಈ ಪ್ರಶ್ನೆಗೆ ಉತ್ತರ ಯಾರಲ್ಲೂ ಇರಲಿಲ್ಲ.ಅಮ್ಮ ಎಂದರೆ ದೇವರು ಎನ್ನುತ್ತಾರೆ.ಆದರೆ ನನ್ನ ಬದುಕಿನಲ್ಲಿ ‘ಅಮ್ಮ’ ಎಂಬ ಪದ ನೋವಿನ ಅರ್ಥ ಹೊತ್ತುಕೊಂಡಿತ್ತು.ಎಲ್ಲಾ ತಾಯಂದಿರು ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ ಎಂಬ ಮಾತು ನನ್ನಿಗೆ ಸುಳ್ಳಾಗಿ ಕಾಣಿಸಿತು.ನನ್ನ ತಾಯಿ ತನ್ನ ಸುಖವನ್ನು ಆರಿಸಿಕೊಂಡಳು.ಮಕ್ಕಳ ಕಣ್ಣೀರನ್ನು ನೋಡದೆ.ದೇವರ ಮುಂದೆ ನಾನು ಒಂದು ಮೌನ ಪ್ರಾರ್ಥನೆ ಮಾಡಿಕೊಂಡೆ—“ದೇವರೆ, ಈ ತರದ ತಾಯಿ ಯಾರಿಗೂ ಕೊಡಬೇಡ.”ಇದು ಎಲ್ಲಾ ತಾಯಂದಿರ ವಿರುದ್ಧದ ಮಾತಲ್ಲ.ಇದು ನನ್ನ ಬದುಕಿನ ಸತ್ಯ. ಮೌನದಲ್ಲಿ ಬದುಕಿದ ತಂದೆ ಅಮ್ಮ ಮನೆ ಬಿಟ್ಟು ಹೋದ ನಂತರ ನಮ್ಮ ಮನೆ ಮೌನವನ್ನು ಕಲಿತಿತು.ಆ ಮೌನ ಮಾತಾಡುತ್ತಿರಲಿಲ್ಲ, ಆದರೆ ಎಲ್ಲವನ್ನೂ ಹೇಳುತ್ತಿತ್ತು.ಅಪ್ಪ ಮೊದಲ ಕೆಲವು ದಿನಗಳು ಏನೂ ಆಗದಂತೆ ನಡೆದುಕೊಂಡರು.ಅವರು ಅಳಲಿಲ್ಲ.ಕೋಪಗೊಂಡಿಲ್ಲ.ಪ್ರಶ್ನೆ ಕೇಳಲಿಲ್ಲ.ಆದರೆ ನಾನು ಗಮನಿಸಿದ್ದೆ—ಅಪ್ಪನ ನಗು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಸಮಾಜ ಮಾತ್ರ ಮೌನವಾಗಿರಲಿಲ್ಲ.“ಹೆಂಡತಿ ಹೋದಳು” ಅನ್ನೋದು ನಮ್ಮ ಮನೆಯ ಪರಿಚಯವಾಗಿ ಬಿಟ್ಟಿತು.ಕೆಲವರು ಸಹಾನುಭೂತಿ ತೋರಿಸಿದರು.ಹೆಚ್ಚಿನವರು ಕುತೂಹಲ ತೋರಿಸಿದರು.ಕೆಲವರು ಮೌನವಾಗಿ ನಿಂದಿಸಿದರು.ಅಪ್ಪನಿಗೆ ಸಲಹೆಗಳು ಬಂತು—“ಮಕ್ಕಳಿಗಾಗಿ ಮರುಮದುವೆ ಮಾಡಿ”“ಒಬ್ಬ ಹೆಣ್ಣು ಮನೆಗೆ ಬಂದರೆ ಎಲ್ಲವೂ ಸರಿಯಾಗುತ್ತದೆ”“ಮಕ್ಕಳು ತಾನೇ ಹೊಂದಿಕೊಳ್ಳುತ್ತಾರೆ”ಆದರೆ ಅಪ್ಪನ ಉತ್ತರ ಒಂದೇ.ಅದು ಗಟ್ಟಿಯಾಗಿರಲಿಲ್ಲ.ಆದರೆ ಅಚಲವಾಗಿತ್ತು.“ನನ್ನ ಮಕ್ಕಳ ಮನಸ್ಸಿಗೆ ನೋವಾಗಬಾರದು.”ಅಪ್ಪನಿಗೆ ತಮ್ಮ ಬದುಕಿನ ಬಗ್ಗೆ ಚಿಂತೆಯೇ ಇರಲಿಲ್ಲ.ಅವರ ಪ್ರಶ್ನೆ ಒಂದೇ—ನನ್ನ ಮಕ್ಕಳು ಸುರಕ್ಷಿತರಾಗಿದ್ದಾರೆಯೇ?ಮರುಮದುವೆ ಅಂದ್ರೆ ಕೇವಲ ಒಂದು ಸಂಬಂಧ ಅಲ್ಲ.ಅದು ಮಕ್ಕಳ ಬದುಕಿನೊಳಗೆ ಮತ್ತೊಬ್ಬರ ಪ್ರವೇಶ.ಆ ಪ್ರವೇಶ ಒಳ್ಳೆಯದಾಗುತ್ತದೆಯೋ, ಗಾಯವಾಗುತ್ತದೆಯೋ—ಅಪ್ಪನಿಗೆ ಅದರ ಭಯ ಇತ್ತು.ಆ ಭಯವೇ ಅವರನ್ನು ಜೀವನಪೂರ್ತಿ ಒಬ್ಬಂಟಿಯಾಗಿಸಿದರೂ, ಮಕ್ಕಳಿಗಾಗಿ ಅವರು ಒಪ್ಪಿಕೊಂಡರು.ಅಪ್ಪ ಅಮ್ಮನ ಕೊರತೆಯನ್ನು ನಮಗೆ ತೋರಿಸಲಿಲ್ಲ.ಅಡುಗೆ ಮನೆಯಲ್ಲಿ ಅವರೇ ನಿಂತರು.ಬಟ್ಟೆ ತೊಳೆಯುವುದು, ಊಟ ಮಾಡಿಸುವುದು, ಶಾಲೆಗೆ ಕಳುಹಿಸುವುದು—ಎಲ್ಲವನ್ನೂ ಅವರು ಮೌನವಾಗಿ ಮಾಡುತ್ತಿದ್ದರು.ಅಪ್ಪನ ಕೈಗಳಿಂದ ಬಂದ ಊಟದಲ್ಲಿ ಅಮ್ಮನ ಕೈರೇಖೆಗಳು ಕಾಣಿಸದಿದ್ದರೂ, ತ್ಯಾಗ ಸ್ಪಷ್ಟವಾಗಿತ್ತು.ತಂಗಿ ದೊಡ್ಡದಾಗುತ್ತಾ ಹೋಗುತ್ತಿದ್ದಳು.ಅವಳಿಗೆ ಅಪ್ಪ ತಾಯಿ ಎರಡೂ ಆಗಿದ್ದರು.ಅವಳ ಕೂದಲನ್ನು ಬಿಚ್ಚಿ ಜಡೆ ಹಾಕುವುದು, ಅವಳ ಕಣ್ಣೀರನ್ನು ಒರೆಸುವುದು—ಅಪ್ಪ ಕಲಿತರು.ಅವಳು ನಗಿದರೆ ಅಪ್ಪ ಬದುಕಿದ್ದಂತೆ.ಅವಳು ಮೌನವಾದರೆ ಅಪ್ಪನ ಹೃದಯ ನಡುಗುತ್ತಿತ್ತು.ನಾನು ಅಷ್ಟರಲ್ಲಿ ಮೌನದಿಂದ ಜವಾಬ್ದಾರಿಯತ್ತ ಸಾಗುತ್ತಿದ್ದೆ.ನನ್ನೊಳಗೆ ಅಪ್ಪನಂತಾಗಬೇಕು ಅನ್ನೋ ಆಸೆ ಬೆಳೆದುಬಂದಿತ್ತು.ಅವರ ನೋವನ್ನು ಕೇಳದೆ ಅರ್ಥಮಾಡಿಕೊಳ್ಳಬೇಕು ಎಂದು ಕಲಿತಿದ್ದೆ.ಅಪ್ಪ ಮಾತಾಡದ ದಿನಗಳಲ್ಲಿ ನಾನು ಅವರ ಪಕ್ಕ ಕುಳಿತುಕೊಳ್ಳುತ್ತಿದ್ದೆ.ಮಾತು ಬೇಡ.ಹಾಜರಾತಿಯೇ ಸಾಕಾಗುತ್ತಿತ್ತು.ಕಾಲ ಸಾಗಿತು.ತಂಗಿ ಕಾಲೇಜಿಗೆ ಹೋದಳು.ಅಪ್ಪ ಅವಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು.ಅಷ್ಟು ನಂಬಿಕೆ ಅಂದ್ರೆ—ಮನೆಯ ಹಣದ ಜವಾಬ್ದಾರಿಯನ್ನೇ ಅವಳ ಕೈಗೆ ಕೊಟ್ಟಿದ್ದರು.ಲೆಕ್ಕ ಕೇಳಲಿಲ್ಲ.ಅನುಮಾನ ಮಾಡಲಿಲ್ಲ.“ನನ್ನ ಮಗಳು ತಪ್ಪು ಮಾಡೋದಿಲ್ಲ”ಅದು ಅಪ್ಪನ ವಿಶ್ವಾಸ.ಆ ವಿಶ್ವಾಸವೇ ಮುಂದೆ ಅಪ್ಪನ ಹೃದಯವನ್ನು ಹೆಚ್ಚು ನೋಯಿಸಿದ ಸಂಗತಿ ಅನ್ನೋದು ಆ ಕ್ಷಣದಲ್ಲಿ ಯಾರಿಗೂ ಗೊತ್ತಿರಲಿಲ್ಲ.ನಾನು ಡಿಗ್ರಿ ಓದುತ್ತಿದ್ದೆ.ಬದುಕಿನ ಹೊಣೆಗಾರಿಕೆ ನನ್ನತ್ತ ನಿಧಾನವಾಗಿ ಜಾರುತ್ತಿತ್ತು.ಅಪ್ಪ ವಯಸ್ಸಾಗುತ್ತಿದ್ದರು.ಆದರೆ ಅವರ ಮನಸ್ಸು ಮಾತ್ರ ನಮ್ಮ ಭವಿಷ್ಯದಲ್ಲೇ ಸಿಲುಕಿತ್ತು.ಆ ದಿನ ಬಂತು.ತಂಗಿಗೆ ಕೊನೆಯ ಪರೀಕ್ಷೆ.ನಾನೇ ಅವಳನ್ನು ಕಾಲೇಜಿಗೆ ಬಿಟ್ಟು ಬಂದೆ.“ಪರೀಕ್ಷೆ ಮುಗಿದ ಮೇಲೆ ಬೇಗ ಮನೆಗೆ ಬಾ” ಎಂದು ಸಹಜವಾಗಿ ಹೇಳಿದ್ದೆ.ಅವಳು ನಗುತ್ತಾ ತಲೆ ಆಡಿ ಹೋಗಿದ್ದಳು.ಸಂಜೆಯಾಯಿತು.ರಾತ್ರಿ ಆಯಿತು.ಅವಳು ಬರಲಿಲ್ಲ.ಅಪ್ಪ ಮೊದಲಿಗೆ ಗಾಬರಿಯಾಗಲಿಲ್ಲ.“ಇನ್ನೂ ಬರ್ತಾಳೆ” ಅಂದರು.ಆದರೆ ಸಮಯ ಸಾಗಿದಂತೆ ಮೌನ ಗಟ್ಟಿಯಾಗುತ್ತಿತ್ತು.ಆಮೇಲೆ…ಅಪ್ಪನ ಫೋನ್‌ಗೆ ಒಂದು ವಾಟ್ಸ್‌ಆ್ಯಪ್ ಮೆಸೇಜ್ ಬಂತು.ಒಂದು ಫೋಟೋ.ಆ ಫೋಟೋದಲ್ಲಿ—ಅಪ್ಪನ ಮುದ್ದಿನ ಮಗಳುಮದುವೆಯ ಉಡುಪಿನಲ್ಲಿಬೇರೊಬ್ಬನ ಕೈ ಹಿಡಿದು ನಿಂತಿದ್ದಳು.ಅಪ್ಪ ಆ ಫೋಟೋವನ್ನು ನೋಡಿದರು.ಒಮ್ಮೆ ನೋಡಿದರು.ಮತ್ತೊಮ್ಮೆ ನೋಡಿದರು.ಅವರು ಕುಸಿದಿಲ್ಲ.ಅವರು ಕೂಗಿಲ್ಲ.ಅವರು ಶಪಿಸಲಿಲ್ಲ.ಆದರೆ ಅವರ ಕಣ್ಣುಗಳಲ್ಲಿ ನಂಬಿಕೆ ಒಡೆದ ಶಬ್ದವಿತ್ತು.ಅದು ನಾನು ಜೀವನದಲ್ಲಿ ಮೊದಲ ಬಾರಿ ನೋಡಿದ ಅಪ್ಪ.ಆ ದಿನ ಅಪ್ಪ ಒಳಗೊಳಗೆ ಕುಸಿದರು.ಅವರ ನೋವಿಗೆ ಮಾತು ಸಿಗಲಿಲ್ಲ.ಮೌನವೇ ಅವರ ಭಾಷೆಯಾಯಿತು.ಆದರೂ…ಅಪ್ಪ ಸಂಪೂರ್ಣವಾಗಿ ಮುರಿಯಲಿಲ್ಲ.ಅವರು ನನ್ನತ್ತ ನೋಡಿದರು.ಆ ದೃಷ್ಟಿಯಲ್ಲಿ ಒಂದು ಪ್ರಶ್ನೆ ಇತ್ತು—“ನೀನು ಇದ್ದೀಯಾ?”ನಾನು ಉತ್ತರ ಕೊಟ್ಟಿಲ್ಲ.ಆದರೆ ಅವರ ಪಕ್ಕ ಕುಳಿತೆ.ಅದು ಸಾಕಾಗಿತ್ತು. ಪೃಥ್ವಿರಾಜ್ ಟಿ ಬಿ

“ಅಪ್ಪನ ಮಡಿಲು”ವಿಶೇಷ ಬರಹ ಪೃಥ್ವಿರಾಜ್ ಟಿ ಬಿ Read Post »

ಇತರೆ

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್

ವ್ಯಕ್ತಿ ಸಂಗಾತಿ ಗೊರೂರು ಶಿವೇಶ್ “ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ನನ್ನ ಕಾಲಘಟ್ಟದ ಯಾರೇ ನಮ್ಮೂರಿನ ರಸಿಕರನ್ನು ಚಿತ್ರಿಸಲು ಹೊರಟರೆ, ಅದರಲ್ಲಿ ಮರೆಯದೆ ದಾಖಲು ಮಾಡಬೇಕಾದ ಪಾತ್ರ ಯಾಕೂಬ್ ನದು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ರು ತಮ್ಮ ನಮ್ಮೂರಿನ ರಸಿಕರು ಕೃತಿಯಲ್ಲಿ ಚಿತ್ರಿಸಿದ ಶಾಲು ಸಾಬಿ ಪಾತ್ರವು ತನ್ನ ಮುತ್ತಜ್ಜನೆಂದು ಹೇಳಿಕೊಳ್ಳುವ ಯಾಕೂಬ್ ಗುಣದಲ್ಲೂ ಅವರನೇ ನೆನಪಿಸುತ್ತಾನೆ . ಈಗ ಹಾಸನದಲ್ಲಿ ನೆಲೆಸಿರುವ ಆತ ನಮ್ಮೂರಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಜೊತೆಗೆ ಊರಿನ ರಥೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಹಾಸನದಲ್ಲಿ ನಡೆಯುವ ಯಾವುದೇ ಸಾಹಿತ್ಯ ಕಾರ್ಯಕ್ರಮ ನಾಟಕಗಳಲ್ಲಿ ಕಾಣಸಿಗುತ್ತಾನೆ ಕಳೆದ 50 ವರ್ಷಗಳ ಇಡೀ ಗೊರೂರಿನ ಇತಿಹಾಸವನ್ನು ದಾಖಲು ಮಾಡುವ ಸಾಮರ್ಥ್ಯ ಇರುವ ಆತನಿಗೆ ನಮ್ಮೂರಿನ ಮನೆಮನೆ ಕಥೆಗಳು ಗೊತ್ತು. ಅಷ್ಟೇ ಏಕೆ ಹಾಸನದ ಪ್ರಮುಖ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಘಟನೆಗಳನ್ನು ಆತ ಹೇಳಬಲ್ಲ. ಯಾಕೂಬ್ ಗೂ ನನ್ನ ತಂದೆಗೂ ಒಂದು ರೀತಿಯ  ಪ್ರೇಮ ಕೋಪದ ಅನನ್ಯ ಸಂಬಂಧ. 1990ರ ಸುಮಾರಿಗೆ ಆರಂಭವಾದ ಸಾಕ್ಷರತಾ  ಆಂದೋಲನದಲ್ಲಿ ನನ್ನಣ್ಣನು ಹಾಗೂ ಯಾಕೂಬ್ ಇಬ್ಬರೂ ಧುಮುಕಿದ  ಸಂದರ್ಭ. ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಪದೇಪದೇ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಬಸ್ಸಿನಲ್ಲಿ ಮಧ್ಯರಾತ್ರಿ ಬಂದು ಮನೆಯ ಬಾಗಿಲು ಬಡಿಯುತ್ತಿದ್ದ ಕಾರಣಕ್ಕೆ ತಂದೆ ಅವರಿಗೆ  ನನ್ನ ಅಣ್ಣನ ಮೇಲೆ ಕೋಪ. ಈ ಕೋಪವನ್ನು   ಜೊತೆಗಿರುತ್ತಿದ್ದ   ಯಾಕುಬ್ ಮೇಲೆ    ಆಗಾಗ್ಗೇ ತೀರಿಸಿಕೊಳ್ಳುತ್ತಿದ್ದರು. ಅವರು ಬೈದ ಬೈಗಳನೆಲ್ಲ  ನಾನು ಸಿಕ್ಕಾಗ ನನಗೆ  ನಿಮ್ಮ ತಂದೆ ಹೀಗೆಲ್ಲಾ ಬೈದ್ರು ಅಣ್ಣ ಎಂದು ಒಪ್ಪಿಸುತ್ತಿದ್ದ. ಆದರೆ   ಮಾರನೇ ದಿನವೇ ನನ್ನ ತಂದೆ  ಯಾಕೂಬ್ ಬಣ್ಣ ತರಲು ಹಾಸನಕ್ಕೆ ಹೋಗಲು ನಮ್ಮೂರಿನ ಬಸ್ ಸ್ಟ್ಯಾಂಡ್ ನ ಬಳಿ ಕಾಣಿಸುತ್ತಿದ್ದರು.  ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಮಣ್ಣಿನ ಗೋಡೆ ಆದ್ದರಿಂದ ನೀರು ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸುಣ್ಣ ಬಣ್ಣ ಮೊದಲಿಗೆ ಬೇಡ ಬೇಡ ಎಂದುಕೊಂಡರೂ ಜಾತ್ರೆ ಹತ್ತಿರ ಬಂದಂತೆ  ಸುಣ್ಣ ಬಣ್ಣ ಆಗಲೇಬೇಕೆಂದು ಬೇಕೆಂದು ನಿರ್ಧರಿಸಿದ ನಮ್ಮ ತಂದೆ ಅದಕ್ಕಾಗಿ ಯಾಕೋಬನನ್ನು ನಿಯೋಜಿಸಿದ ನಂತರ 3- 4 ದಿನ ಮನೆಯಲ್ಲಿ ಬಣ್ಣ ದೇ ಸಡಗರ. ಪಾತ್ರೆಗಳನ್ನೆಲ್ಲ ಹಿತ್ತಲಿಗೆ ಸಾಮಾನುಗಳನ್ನೆಲ್ಲ  ರೂಮ್ ನ ಮಧ್ಯಕ್ಕೆ ಜೋಡಿಸಿ ಅದರ ಮೇಲೆ ಚಾಪೆ ಮುಚ್ಚಿ ಬಣ್ಣ ಹೊಡೆಯುವ ಪ್ರಕ್ರಿಯೆ ಆರಂಭವಾಗುತ್ತಿತ್ತು .ಬಣ್ಣ ನೆಲದ ಮೇಲೆ ಬಿದ್ದಾಗಲಿಲ್ಲ ತಾಯಿ  ಗೊಣಗಲು ಒಮ್ಮೊಮ್ಮೆ ಕೂಗಾಡಲು ಆರಂಭಿಸಿದೊಡನೆ ತಟ್ಟನೆ ಬಣ್ಣ ಬಳಿಯುವುದನ್ನು ನಿಲ್ಲಿಸಿ ಕೆಳಗೆ  ಹಾರಿ ಟರ್ಪೆಂಟೇನನ್ನು ಹಾಕಿ ನೆಲ ಉಜ್ಜಿ ಸರಿ ಆಯ್ತಾ ಅಕ್ಕ ಎಂದು ಸಮಾಧಾನಿಸುತ್ತಿದ್ದ . ನನಗೆ ಅವನ ಕುರಿತು ಗಮನ ಸೆಳೆಯುತ್ತಿದ್ದದ್ದು ಸದಾ  ಆತನ ಕೈಯಲ್ಲಿರುತ್ತಿದ್ದ ಒಂದಿಲ್ಲೊಂದು ಪತ್ರಿಕೆಗಳು. ಅದರಲ್ಲೂ  ಆ ವಾರದ ಲಂಕೇಶ್ ಪತ್ರಿಕೆ ಮತ್ತು  ಹಾಯ್ ಬೆಂಗಳೂರು ಕೈಯಲ್ಲಿ ಹಿಡಿದು ಮನೆಗೆ ಬಂದು ಮಂಚದ ಮೇಲೆ ಇರಿಸಿ ತನ್ನ ಕಾರ್ಯ ಆರಂಭಿಸುತ್ತಿದ್ದ .ಅವನು ತನ್ನ ಕೆಲಸ ಮುಗಿಸುವುದರೊಳಗೆ ನಾನು ಆ ಪತ್ರಿಕೆಗಳನ್ನು ಓದಿ ಮುಗಿಸುತ್ತಿದ್ದೇ. ಈ ರೀತಿಯ ಓದಿನ ಹವ್ಯಾಸ ಹೊಂದಿದ ಯಾಕೂಬನಿಗೆ ಬಹುತೇಕ ಪ್ರಮುಖ ಲೇಖಕರು ಅವರ ಕೃತಿಗಳು ಅವರ ಕೃತಿಗಳ ಸಿನಿಮಾಗಳು ಗೊತ್ತಿತ್ತು .ಅಷ್ಟೇ ಅಲ್ಲದೆ ಚಿತ್ರರಂಗದ ಅನೇಕ ಮಾಹಿತಿಗಳನ್ನು ಆತ ಹಂಚಿಕೊಳ್ಳುವುದರ ಜೊತೆಗೆ ಊರಿನ ಹಲವಾರು ರಸವತ್ತಾದ ಪ್ರಸಂಗಗಳನ್ನು  ಅವನದೇ ಹಾಸ್ಯಮಯ ದಾಟಿಯಲ್ಲಿ ಹೇಳುತ್ತಿದ್ದ. ಆತ ಹೇಳುತ್ತಿದ್ದ ಅನೇಕ ಪ್ರಸಂಗಗಳು ಮತ್ತೊಂದು ಪ್ರಬಂಧಕ್ಕೆ ವಸ್ತುವಾಗಬಲ್ಲದು.  ಬೇಸಿಗೆ ರಜೆ ಸಮಯಕ್ಕೆ ನಮ್ಮೂರಿನಲ್ಲಿ  ಸಮಯ ಕಳೆಯಲು  ಹೊಸದಾಗಿ ಆರಂಭವಾದ ಗ್ರಂಥಾಲಯಕ್ಕೆ ಹೋಗುತ್ತಿದ್ದೆ..ಆದರೆ ಅಲ್ಲಿನ ಗ್ರಂಥಪಾಲಕರು ಅದೇ ಸಮಯಕ್ಕೆ ಅರ್ಜೆ ಹಾಕಿ ತಮ್ಮ ಊರಿಗೆ ತೆರಳಿರುತ್ತಿದ್ದರು ಒಮ್ಮೆ ಈ ರೀತಿ ಗ್ರಂಥಾಲಯದ  ಹೋಗುತ್ತಿದ್ದಾಗ ಯಾಕೂಬ್ ಎದುರಾದ.  ನನ್ನನ್ನು ನೋಡಿ” ಅಣ್ಣ  ಆಶ್ ಮಟಾಶ್ ಇಲ್ಲ” ಎಂದ. ನನಗೆ ತಕ್ಷಣ ಗೊತ್ತಾಗಲಿಲ್ಲ. ನಂತರ ಅದರ ಅನುವಾದ  ಅವನೇ ಮಾಡಿದ.  ” ಆ್ಯಷ್ ಎಂದರೆ ಬೂದಿ ಮಟ್ಯಾಷ್ ಎಂದರೆ ಹಾಳು” ಗ್ರಂಥಪಾಲಕರ ಹೆಸರು ಬೂದಿಹಾಳು ಎಂದಿದ್ದು, ಅದನ್ನು ಆ ರೀತಿ ಪ್ರಯೋಗಿಸುತ್ತಿದ್ದ. ಹಂಸಲೇಖರ ಹಾಸನಕ್ಕೆ ಬಂದ ಸಂದರ್ಭದಲ್ಲಿ ಇವನನ್ನು ಯಾಕುಬ್ ಎಂದು  ಪರಿಚಯಿಸಿದಾಗ ಕ್ಯಾ ಕೂಬ್  ಲಗತಿ ಹೋ ಹಾಡನ್ನು ಬದಲಿಸಿ ಯಾ ಕೂಬ್  ಲಗತಿ ಹೊ ಎಂದು  ಹಾಡಿದ್ದನ್ನು ಖುಷಿಯಿಂದ ನೆನೆಯುತ್ತಿರುತ್ತಾನೆ. 1984ರ ಸುಮಾರಿನಲ್ಲಿ ಗೊರೂರಿನಲ್ಲಿ ಗೊರೂರು  ರಾಮಸ್ವಾಮಿ ಅಯ್ಯಂಗಾರ್ ಮತ್ತು ವೀರೇಂದ್ರ ಹೆಗಡೆಯವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನದ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅರಕಲಗೂಡು ವರದರಾಜಲು ರವರಿಗೆ  ಪ್ರಥಮ ದರ್ಜೆ ಕಾಲೇಜಿಗೆ ಬೇಡಿಕೆ ಇಟ್ಟಾಗ ಸ್ಥಾಪಿತವಾದ ಎ ಎನ್ ವಿ ಕಾಲೇಜಿನ  ಮೊದಲ ಫಲಾನುಭವಿ ಯಾಕೋಬನು ಮುಂದೆ ಮಾಸ್ಟರ್ ಡಿಗ್ರಿಯನ್ನು ಪಡೆದ. ಆತನ ಸಹಪಾಠಿಗಳು ಈಗ ಉಪ ನಿರ್ದೇಶಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೆ ತನ್ನ ವಿದ್ಯಾಭ್ಯಾಸದ ದಿನದಲ್ಲಿ ಬಣ್ಣದ ಬದುಕಿಗೆ ಬಿದ್ದ ಯಾಕೂಬ್ ತನ್ನ ಸಂಬಂಧಿಕರ ಜಿಎಎಸ್ ಟಾಕೀಸ್ ನಲ್ಲಿ  ಟಿಕೆಟ್ ವಿತರಕ ,ಗೇಟ್ ಕೀಪರ್, ಆಪರೇಟರ್ ಜೊತೆ ಜೊತೆಗೆ ಬೋರ್ಡ್ ಬರೆಯುವ ಹವ್ಯಾಸಕ್ಕೂ ಬಿದ್ದ ನಂತರ ಯಾಕೋ ಅಲ್ಲಿಯೇ ಸಂತೃಪ್ತನಾದ. ಕುವೆಂಪುರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ವಿಶ್ವ ಮಾನವ ಸಂದೇಶವನ್ನು ನಮ್ಮೂರಿನ ಗ್ರಂಥಾಲಯಕ್ಕೆ ಉಚಿತವಾಗಿ ಬ್ಯಾನರ್ ಬೋರ್ಡನ್ನು ಕೊಟ್ಟಿದ್ದಲ್ಲದ ಸುತ್ತಲೂ ನಾಲ್ಕೈದು ಶಾಲೆಗಳಿಗೆ ಕೈಯಲ್ಲಿ ಬರೆದ ಉದ್ದನೆಯ ಫೋಲ್ಡಿಂಗ್ ಬ್ಲಾಕ್ ಬೋರ್ಡ್ ನಲ್ಲಿ ಬರೆದು ಕೊಟ್ಟಿದ್ದು ನೆನಪಿದೆ. ಕಳೆದ ವರ್ಷ ಜಹೊನಾ ಸ್ಮರಣೆಯ ಸಮಾರಂಭದಲ್ಲಿ ಅವರ ಮಗಳಾದ ಖ್ಯಾತ ಲೇಖಕಿ  ಜ ನಾ ತೇಜಶ್ರೀ  ಅವರು ಜಹೊನಾರು ತೀರಿಕೊಂಡ ಸಂದರ್ಭದಲ್ಲಿ  ಪಾರ್ಥಿವ ಶರೀರವನ್ನು ರಾತ್ರಿಯಿಡೀ ಎಚ್ಚರವಾಗಿ ಕುಳಿತು ನೋಡಿಕೊಂಡದ್ದನ್ನು ನೆನಪಿಸಿಕೊಂಡರು.  ಆ ಸಂದರ್ಭದಲ್ಲಿ ಸಾಕ್ಷರತಾ  ಆಂದೋಲನದ ಸಮಯದಲ್ಲಿ ಹಾರನ ಹಳ್ಳಿಯಲ್ಲಿ ಗೋಡೆ ಬರಹವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿದ ಪ್ರಸಂಗವನ್ನು ನನ್ನೊಂದಿಗೆ ಹಂಚಿಕೊಂಡ ಯಾಕೂಬ್ ಆಗ ಸಾಕ್ಷರತಾ ಸಮಿತಿಯ ಅಧ್ಯಕ್ಷರಾಗಿದ್ದ ಜಹೊನಾರವರು ಅಲ್ಲಿಗೆ ಬಂದು ಬಿಡಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವನದೇ ಗೋಡೆ ಬರಹ . ಇವನು ಬರೆಯುವ ಗೋಡೆ ಬರಹಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ.ಈಗಲೂ  ರಾಜ್ಯ ,ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ  ಆಯ ಊರುಗಳಿಗೆ ಹೋಗಿ ಸಾಹಿತ್ಯ ಸಮ್ಮೇಳನದ ದಿನಾಂಕಗಳ ಜೊತೆಗೆ ಲೇಖಕರ ಪ್ರಸಿದ್ಧ ನುಡಿಗಳನ್ನು ದಾಖಲಿಸುವ ಕೆಲಸವನ್ನು ಮುಂದುವರಿಸಿಕೊಂಡು ಬಂದಿರುವ ಯಾಕೂಬ್   ನಮ್ಮೂರಿನ ಅನನ್ಯ ಪ್ರತಿಭೆ. ಗೊರೂರು ಶಿವೇಶ್

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್ Read Post »

ಇತರೆ

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ ಮಡಿಕೇರಿ ಹೋಗುವುದಾದರೂ ಎಲ್ಲಿಗೆ ….?? ಪಿ ಯು ಸಿ ಮೌಲ್ಯ ಮಾಪನ ನಡೆಯುತ್ತಿದ್ದ ದಿನಗಳವು. ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಉಪನ್ಯಾಸಕರೊಬ್ಬರು ಅವರ ವತಿಯಿಂದ ಆ ಒಂದು ದಿನ ಮೌಲ್ಯ ಮಾಪನ ಕೇಂದ್ರದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟ ಬರುವುದು ತಡವಾಯಿತು. ಎರಡು ಗಂಟೆಯವರೆಗೂ ಊಟಕ್ಕೆ ಕಾದು ದಣಿದಿದ್ದ ಉಪನ್ಯಾಸಕ ವೃಂದ ಆಹಾರ ಬಂದ ತಕ್ಷಣ ಊಟಕ್ಕೆ ಮುಗಿಬಿದ್ದಿತು.  ಸಾಲೂ ಇಲ್ಲ,ಸಂಯಮವೂ ಇಲ್ಲ, ಒಂದು ವ್ಯವಸ್ಥೆ ಯಂತೂ ಮೊದಲೇ ಇಲ್ಲ. ಶಕ್ತಿವಂತರು ಆಹಾರ ಗಿಟ್ಟಿಸಿಕೊಳ್ಳುವಲ್ಲಿ ಗೆದ್ದರು, ಕೆಲವರು ಸೋತು ಗೆದ್ದರು. ಒಂದಿಬ್ಬರು ಪಡೆಯುಕೊಂಡ ತಟ್ಟೆಯ ಅನ್ನ ಸಾಂಬಾರ್ ಗುಂಪು ತಿಕ್ಕಾಟದಲ್ಲಿ ಮತ್ತೊಬ್ಬರ ಮೇಲೆ ಚೆಲ್ಲಿ..ಅದೇ ಒಂದು ಜಗಳದ ವಿಷಯವಾಗಿ , ಕಿರುಚಾಡಿ.. ಉಫ್..  ಸಾಕಪ್ಪ ಸಾಕು ಎನಿಸುವ ಒಂದು ಅನುಭವ ಎಲ್ಲರಿಗೂ. ಕೊನೆಗೆ ನಿಂತವರಿಗೆ ಊಟವೇ ಸಿಗದೆ, ಆ ದಿನ ಊಟದ ವ್ಯವಸ್ಥೆ ಇದೆ ಎಂದುದರಿಂದ ಕ್ಯಾಂಟೀನ್ ನವರೂ ಊಟ  ಪೂರೈಕೆ ಮಾಡದೇ ಹೋದ್ದರಿಂದ ಕೆಲವರು ಆ ದಿನ ಉಪವಾಸ ಇದ್ದುಕೊಂಡೇ ಪೇಪರ್ ತಿದ್ದುವಂತಾಯಿತು. ಆ  ಚಿತ್ರಣ ನನ್ನ ಮನದಲ್ಲಿ ಅಚ್ಚೊತ್ತಿ  ನಿಂತಿದೆ. ವ್ಯಾಲ್ಯೂಯೇಷನ್ ಸೆಂಟರ್ ನಲ್ಲೇ ಊಟ ಸಿಗುತ್ತೆ ಅಂತ ಜೆ ಎಸ್ ಎಸ್  ಮಹಿಳಾ ಹಾಸ್ಟೆಲ್ ನಲ್ಲಿ ರುಚಿಕರವಾಗಿ ತಯಾರಿಸಿ ಕೊಡುತ್ತಿದ್ದ ಊಟವನ್ನು ಬಿಟ್ಟು ಬಂದು  ಕೊನೆಗೆ ಊಟ ಸಿಗದೆ ಇದ್ದವರಲ್ಲಿ  ನಾನೂ ಒಬ್ಬಳು.   ಅಲ್ಲಿ ಇದ್ದವರೆಲ್ಲ  ಸುಶಿಕ್ಷಿತರೇ..ಸಾಲು..ಶಿಸ್ತು ಸಂಯಮದ ಬಗ್ಗೆ ಬೋಧನೆ ಮಾಡುವವರೇ….ಆದರೇನು? ವಚನಕಾರರು ಹೇಳುವಂತೆ ” ಹಸಿವೆಂಬ ಹೆಬ್ಬಾವು ಬಂದು ಬಸಿರ ಹಿಡಿಯಲು ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ “. ಅಷ್ಟೇ. ‘ಹಸಿವು’ ಎನ್ನುವ ರಾಕ್ಷಸನ ಅಸುರ ಗುಣಗಳ ಮುಂದೆ ಸಭ್ಯತೆ ಸಂಸ್ಕಾರಗಳು ಮೌಲ್ಯ ಕಳೆದುಕೊಂಡುಬಿಡುತ್ತವೆ. ಮಾತು ಬರುವ ನಮ್ಮ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಮಾತು ಬಾರದ ಮೂಕ ಪ್ರಾಣಿಗಳು ಹಸಿವು ನಿವಾರಣೆಗೆ ಕಾಡು ಬಿಟ್ಟು ನಾಡಿಗೆ ಬರುವುದರಲ್ಲಿ ತಪ್ಪೇನಿದೆ?  ಹಸಿವು ಬಾಯಾರಿಕೆಗಳ ಈಡೇರಿಕೆ ಈ ಭೂಮಿಯಲ್ಲಿ ಜನಿಸಿದ   ಪ್ರತಿಯೊಂದು ಜೀವಿಯ ಮೂಲಭೂತ ಅವಶ್ಯಕತೆ. ಹಸಿದ ಜೀವಕಷ್ಟೇ ಗೊತ್ತು  ಹಸಿವಿನ ಕಾವು. ಮಾತು ಬಲ್ಲ, ಚಿಂತನಾಶಕ್ತಿಯುಳ್ಳ ಮನುಷ್ಯರಾದ ನಾವೇ ಹಸಿವಾದಾಗ ಅನ್ಯರ ಬಗ್ಗೆ ಯೋಚಿಸದ ರೀತಿಯಲ್ಲಿ ವರ್ತಿಸುವಾಗ ವನ್ಯ ಮೃಗಗಳಾದ ಆನೆ, ಹುಲಿ, ಚಿರತೆ, ಕಾಡು ಹಂದಿ ಇತ್ಯಾದಿ  ಹಸಿವು ನೀಗಿಸಿಕೊಳ್ಳಲು ನಾಡಿನ ಹಾದಿ ಹಿಡಿಯುವ  ಮತ್ತು ಹಿಂಸಾತ್ಮಕ ವರ್ತನೆ ತೋರುವ ಬಗ್ಗೆ  ಏನು ಹೇಳುವುದು? ಹೊಟ್ಟೆ ತುಂಬಿಸಿಕೊಳ್ಳುವ  ಏಕೈಕ ಉದ್ದೇಶದಿಂದ ಅವು ಹಸಿರು ಕಂಡಲ್ಲಿಗೆ ಧಾವಿಸುತ್ತವೆ. ಅವುಗಳ ಅಸಹಾಯಕತೆ ನಡೆ ಅದು.ಆ ಪ್ರಾಣಿಗಳು ನಮಗೆ ಉಂಟುಮಾಡುವ ಕಷ್ಟ ನಷ್ಟಗಳನ್ನು  ನಾವು ನುಂಗಿಕೊಳ್ಳಲೇ ಬೇಕು.   ಇಲ್ಲ, ಪರಿಹಾರವನ್ನು ಕಂಡುಕೊಳ್ಳಬೇಕು. ಈ ಪ್ರಕೃತಿಯಲ್ಲಿ ಜೀವಿಸಲು ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಆದರೆ ಬದುಕುವ ಸಂದರ್ಭ ಪ್ರಕೃತಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೂಕ ಪ್ರಾಣಿಗಳು ಮೌನವಾಗಿಯೇ ಪ್ರಕೃತಿಯ ಮಾತನ್ನು ಆಲಿಸುತ್ತವೆ. ನಿಸರ್ಗ ನಿಯಮವನ್ನು ಪಾಲಿಸುತ್ತವೆ. ಮಾತು ಬಲ್ಲ ಮನುಷ್ಯ ಮಾತ್ರ ಮಾತನಾಡುತ್ತಾ ಆಡುತ್ತಾ ಉಳಿದ ಜೀವರಾಶಿಗಳು ತನ್ನ ಅಧೀನದಲ್ಲಿಯೇ ಇರಬೇಕು ಎಂದು ತನಗೆ ತಾನೇ ಒಂದು ನಿಯಮ ಮಾಡಿಕೊಂಡಿದ್ದಾನೆ. ಕಾಡಿನಲ್ಲೂ ಅಧಿಪತ್ಯ ಸ್ಥಾಪಿಸುವಲ್ಲಿ ಕೆಲವೆಡೆ ಜಯವನ್ನೂ ಸಾಧಿಸಿದ್ದಾನೆ.  ವನ್ಯಜೀವಿಗಳಿಗೆ ಮೀಸಲಾದ ಅರಣ್ಯ ಪ್ರದೇಶದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಅರಣ್ಯ ಪ್ರದೇಶ ಕಿರಿದಾಗುತ್ತಾ ಸಾಗುತ್ತಿದೆ. ವಸತಿ, ವ್ಯವಸಾಯ, ಸಾರಿಗೆ ವ್ಯವಸ್ಥೆ.. ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯ ಮೃಗಗಳ ನೆಲೆ ನಶಿಸುತ್ತಿದೆ.  ಒಂದು ಕಾಲದಲ್ಲಿ ಆನೆ ನಾಡಿನತ್ತ ಬಂದಿದೆ ಎಂದರೆ ಅದು ಪರಮಾಶ್ಚರ್ಯ ದ ವಿಚಾರವಾಗಿತ್ತು. ಏಕೆಂದರೆ ಅರಣ್ಯ ಹೇರಳವಾಗಿದ್ದಾಗ ಎಲ್ಲೋ  ದಾರಿತಪ್ಪಿ  ಅಪರೂಪಕ್ಕಷ್ಟೇ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದವು. ಈಗ ಹಾಗಲ್ಲ. ಇದು ಪ್ರತಿದಿನದ ಸುದ್ದಿಯೇ ಆಗಿದೆ.  ಮನುಷ್ಯ ಬೆಳೆದ ಕಬ್ಬು,ಬಾಳೆ,  ಬತ್ತ ಇತ್ಯಾದಿ ಬೆಳೆಗಳನ್ನು   ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ  ವನ್ಯಮೃಗಗಳು ನಾಡಿಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.ಇಲ್ಲಿ ಒಂದು ಅಂಶ ಗಮನಾರ್ಹ,  ವನ್ಯ ಮೃಗಗಳು ಆಸೆ ಪಡುವುದು ಆಹಾರಕ್ಕಾಗಿ. ಮನುಷ್ಯರಾದ ನಾವು ಆಸೆ ಪಟ್ಟಿರುವುದು ಅವುಗಳ ಆವಾಸಸ್ಥಾನಕ್ಕಾಗಿ!! ಇತ್ತೀಚೆಗೆ ಆನೆ ಮಾನವ ಸಂಘರ್ಷವಂತೂ ಮಿತಿ ಮೀರಿದೆ. ಆನೆ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ.  ಪ್ರತಿ ಬಾರಿಯೂ ನಾಡಿಗೆ ದಾಳಿಯಿಟ್ಟ ಆನೆಗಳನ್ನು ಮರಳಿ ಕಾಡಿಗೆ ಸೇರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡುತ್ತಾರೆ. ಕಾಡಿಗೆ ಅಟ್ಟಿದ ಆನೆಗಳು ತಮ್ಮ ದಂಡಿನೊಂದಿಗೆ ಮತ್ತೆ  ನಾಡಿನಲ್ಲಿ ಪ್ರತ್ಯಕ್ಷವಾಗಿವೆ ಎನ್ನುವ ಸುದ್ದಿ ಅರಿಯುವುದೇ ಯಾವುದೋ ಅಮಾಯಕ ಜೀವ ಬಲಿಯಾದಾಗ. ನೀರು,ಆಹಾರ ಅರಸಿ  ತನ್ನ ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು 10-15  ಕಿಲೋಮೀಟರ್ ನಡೆದಾಡುವ ಆನೆಗಳು ಜನ ವಸತಿ ಪ್ರದೇಶಗಳನ್ನು ಲೆಕ್ಕಿಸದೆ ಹೊಟ್ಟೆ ಹೊರೆಯಲು ಹೆಣಗಾಡುತ್ತವೆ.ಅಂಥ ಸಂದರ್ಭದಲ್ಲಿ  ತನಗೆದುರಾದ ಮನುಷ್ಯರನ್ನು  ಸೊಂಡಿಲಿನಿಂದ ಎತ್ತಿ ಎಸೆಯುವ,ಮೆಟ್ಟಿ ಸಾಯಿಸುವ ಕ್ರೂರ ಕೃತ್ಯವನ್ನು ಎಸಗುತ್ತದೆ.  ಆನೆಗಳಿಗೆ ಮಾನವನ ಮೇಲೆ ಇನ್ನಿಲ್ಲದ ದ್ವೇಷ! ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆನೆಗಳ ಸಂತತಿ ಕೂಡಾ ಹೆಚ್ಚುತ್ತಲೇ ಇದೆ.  ಹೀಗಿರುವಾಗ ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡ  ಆನೆಗಳು ಹೋಗುವುದಾದರೂ  ಎಲ್ಲಿಗೆ? ಕುಳಿತು ಉಣ್ಣುವ ಅಭ್ಯಾಸವಾದ ಮನುಷ್ಯ ದುಡಿದು ಉಣ್ಣಲಾರನಂತೆ! ಹಾಗೆ ಒಮ್ಮೆ ನಾಡಿನಲ್ಲಿ ಜನರು ಬೆಳೆದ ಕಬ್ಬು ಬಾಳೆ ಇತ್ಯಾದಿಗಳನ್ನು ತಿಂದು ರೂಢಿಯಾದ ಆನೆಗಳು ಕಾಡಿನಲ್ಲಿ ಆಹಾರ ಅರಸುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿವೆಯೋ ಏನೋ!!   ಎಷ್ಟು ಬಾರಿ ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತವೆ,  ಉಪಟಳ ಕೊಡುತ್ತಲೇ ಇರುತ್ತವೆ. ಸಾಗರದಿಂದ ನಭಕ್ಕೇರಿದ ನೀರ ಹನಿಗಳು ಮತ್ತೆ ಸಾಗರವನ್ನೇ ಸೇರಬೇಕು. ಈ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಎಷ್ಟೇ ಸಂಪಾದನೆ ಮಾಡಿದರೂ ಮತ್ತೆ ಭೂಮಿಯ ಒಡಲಿಗೇ ಸೇರಬೇಕು.ಇದು ಪ್ರಕೃತಿ ನಿಯಮ.  ಈ ಸೂಕ್ಷ್ಮ ಅರಿತಾಗ ಅರಣ್ಯ ಒತ್ತುವರಿಯನ್ನೂ ಒಳಗೊಂಡಂತೆ ಮನುಜನ ಅತಿ ಆಸೆಗಳಿಗೆ ಕಡಿವಾಣ ಬೀಳಬಹುದು. ವನ್ಯ ಜೀವಿ – ಮಾನವ ಸಂಘರ್ಷ ಕೊನೆಯಾಗಬಹುದು. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಕಲೆಗಾರಿಕೆ ಮೃಗ ಪಕ್ಷಿಗಳಿಗಿವೆ. ಮನುಷ್ಯರಾದ ನಾವು ಈಗ ಕಲಿಯುತ್ತಿದ್ದೇವೆ. ಪ್ರಕೃತಿ ನಿಯಮದ ವಿರುದ್ಧ ನಾವು ಎಸಗಿದ ದ್ರೋಹದ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳಿಂದ  ಪರಿಹಾರವನ್ನು ಕಂಡುಕೊಳ್ಳುವತ್ತ ಚಿಂತನೆ ನಡೆಸದೆ      ನಾವು ಮಾಡುವ ಪ್ರತಿಭಟನೆ, ಹೋರಾಟ, ಅಧಿಕಾರಿ ವರ್ಗದವರು ಮಾಡಿಕೊಳ್ಳುವ ಪರಸ್ಪರ ನಿಂದನೆ ಯಾವುವೂ ನಿರೀಕ್ಷಿತ  ಫಲ ನೀಡಲಾರವು. ಅಡವಿಯಲ್ಲಿ ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲಾಗದ ವನ್ಯ ಮೃಗಗಳು ಮತ್ತೆ ಹೋಗುವುದಾದರೂ ಎಲ್ಲಿಗೆ??? ಜಯಲಕ್ಷ್ಮಿ ಕೆ ಮಡಿಕೇರಿ.

ಹೋಗುವುದಾದರೂ ಎಲ್ಲಿಗೆ ….??ವಿಶೇಷಲೇಖನ ಜಯಲಕ್ಷ್ಮಿ ಕೆ ಮಡಿಕೇರಿ Read Post »

ಇತರೆ, ಜೀವನ

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷಲೇಖನ ಕವಿತಾ ಶ್ರೀನಿವಾಸ್‌ ನಾಯಕ್ “ವಿದಾಯ “ವಿದಾಯ” ಇದು ಬೆಳೆಯುವ ಹಾದಿಯ ಅನಿವಾರ್ಯ ಮೈಲುಗಲ್ಲು.​’ವಿದಾಯ’ ಎಂದರೆ ಕೇವಲ ಅಗಲುವಿಕೆ ಅಥವಾ ಅಂತ್ಯವಲ್ಲ; ಅದು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ದಾಟಲು ನಾವು ಇಡುವ ಪಾದಾರ್ಪಣೆ. ನಮಗೆ ತಿಳಿಯದೆಯೇ ನಾವು ಪ್ರತಿದಿನ ಯಾವುದಕ್ಕೋ ಒಂದಕ್ಕೆ ವಿದಾಯ ಹೇಳುತ್ತಲೇ ಬೆಳೆಯುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿರಿಯ ಜೀವದವರೆಗೆ, ಜೀವನವು ವಿದಾಯಗಳ ಸರಪಳಿಯೇ ಸರಿ.​ಬಾಲ್ಯಕ್ಕೆ ವಿದಾಯ: ಮುಗ್ಧತೆಯ ಸಂಭ್ರಮದ ಅಂತ್ಯ​ನಮ್ಮ ಬದುಕಿನ ಮೊದಲ ದೊಡ್ಡ ವಿದಾಯ ಎಂದರೆ ಅದು ನಮ್ಮ ಬಾಲ್ಯಕ್ಕೆ ಹೇಳುವ ವಿದಾಯ. ತೊದಲು ನುಡಿಯ ಮಗು ಸ್ವಲ್ಪ ದೊಡ್ಡದಾದಾಗ, ಅದು ತನ್ನ ಆಟಿಕೆಗಳಿಗೆ, ತನ್ನ ಅಮ್ಮನ ಮಡಿಲಿನ ಬೆಚ್ಚನೆಯ ಆರಾಮಕ್ಕೆ, ಮತ್ತು ಹೊಣೆಗಾರಿಕೆ ಇಲ್ಲದ ಆ ಮುಗ್ಧ ಆಟದ ದಿನಗಳಿಗೆ ನಿಧಾನವಾಗಿ ವಿದಾಯ ಹೇಳುತ್ತದೆ. ಶಾಲೆಯ ಹೊಸ್ತಿಲು ತುಳಿದಾಗ, ಮನೆಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ವಿಶಾಲತೆಯನ್ನು ಅರಿಯುವಾಗ ಬಾಲ್ಯದ ಹಕ್ಕಿ ಹಾರಿಹೋಗಿರುತ್ತದೆ. ಅದು ನೋವಿನ ವಿದಾಯವಲ್ಲ, ಆದರೆ ಬದಲಾವಣೆಯ ಮೊದಲ ಪಾಠ.​ಹದಿಹರೆಯಕ್ಕೆ ವಿದಾಯ: ಕನಸುಗಳ ಚಿಗುರು​ನಂತರ ಬರುವುದು ಹದಿಹರೆಯದ ಮಧುರ ವಿದಾಯ. ಕಿಶೋರಾವಸ್ಥೆಯ ಕನಸುಗಳು, ಗೆಳೆಯರೊಂದಿಗೆ ಕಳೆದ ಆ ಸಾಹಸಮಯ ದಿನಗಳು, ಶಾಲೆ-ಕಾಲೇಜಿನ ಆ ಸವಿ ನೆನಪುಗಳು – ಇವೆಲ್ಲವೂ ವೃತ್ತಿ ಬದುಕಿನ ಅನಿವಾರ್ಯತೆಗಳ ಮುಂದೆ ಬಿದ್ದು ಹೋಗುತ್ತವೆ. ಜವಾಬ್ದಾರಿಗಳ ಹೆಗಲೇರಿದಾಗ, ಆ ನಿರ್ಭೀತ ಹುಡುಗಾಟದ ದಿನಗಳಿಗೆ ವಿದಾಯ ಹೇಳಲೇಬೇಕಾಗುತ್ತದೆ. ಇಲ್ಲಿ ನಾವು ಬರಿಯ ವಯಸ್ಸನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ನಮ್ಮೊಳಗಿನ ಮಗುವಿನ ಅಮಾಯಕತೆಯನ್ನು ಸಮಾಜದ ಪಾಠಗಳಿಗಾಗಿ ಬಲಿ ಕೊಡುತ್ತೇವೆ.​ಯೌವನ ಮತ್ತು ಪ್ರಬುದ್ಧತೆ: ನಿರಂತರ ವಿದಾಯಗಳ ಪಯಣ​ಜೀವನವು ಮುಂದುವರೆದಂತೆ, ನಾವು ಹಳೆಯ ಮನೆಗೆ, ಹಳೆಯ ಊರಿಗೆ, ಹಳೆಯ ಗೆಳೆಯರಿಗೆ, ಕೆಲವೊಮ್ಮೆ ನಮ್ಮ ಹಳೆಯ ಆಲೋಚನೆಗಳಿಗೆ ವಿದಾಯ ಹೇಳುತ್ತಲೇ ಇರುತ್ತೇವೆ. ಕೆಲಸದ ನಿಮಿತ್ತ ಊರು ಬಿಡುವಾಗ ಬರುವ ವಿದಾಯ ಇರಬಹುದು ಅಥವಾ ನಮ್ಮ ಹಳೆಯ ತಪ್ಪುಗಳಿಗೆ ವಿದಾಯ ಹೇಳಿ ಹೊಸ ವ್ಯಕ್ತಿಯಾಗಿ ಬದಲಾಗುವ ಕ್ಷಣ ಇರಬಹುದು—ಇವೆಲ್ಲವೂ ನಮ್ಮ ಬೆಳವಣಿಗೆಯ ಸಂಕೇತಗಳೇ.​ಏಕೆ ಈ ವಿದಾಯ ಅನಿವಾರ್ಯ?​ನಿಸರ್ಗದ ನಿಯಮದಂತೆ, ಹಳೆಯ ಎಲೆ ಉದುರದ ಹೊರತು ಹೊಸ ಚಿಗುರು ಬರಲು ಸಾಧ್ಯವಿಲ್ಲ. ನಾವು ಒಂದೊಂದಕ್ಕೂ ವಿದಾಯ ಹೇಳುತ್ತಾ ಹೋದರೆ ಮಾತ್ರವೇ ಬದುಕಿನ ಹೊಸ ಆಯಾಮಗಳು ನಮಗೆ ತೆರೆದುಕೊಳ್ಳುವುದು. ಬಾಲ್ಯಕ್ಕೆ ವಿದಾಯ ಹೇಳದಿದ್ದರೆ ಪ್ರೌಢಿಮೆ ಬರುವುದಿಲ್ಲ, ಹಳೆಯದಕ್ಕೆ ವಿದಾಯ ಹೇಳದಿದ್ದರೆ ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ.​ಕೊನೆಯ ಮಾತು:ವಿದಾಯಗಳು ಕಣ್ಣೀರಿನ ಮಳೆಯಾಗಿರಬೇಕಿಲ್ಲ; ಅವು ಕೃತಜ್ಞತೆಯ ನಗುಗಳಾಗಿರಲಿ. ಕಳೆದುಕೊಂಡದ್ದರ ಬಗ್ಗೆ ಕೊರಗುವ ಬದಲು, ಆ ಹಂತ ನಮಗೆ ಕೊಟ್ಟ ಅನುಭವಗಳಿಗೆ ಧನ್ಯವಾದ ಅರ್ಪಿಸಿ ಮುಂದೆ ಸಾಗುವುದು ಬದುಕಿನ ಜಾಣತನ. ಅಂತಿಮವಾಗಿ, ನಾವು ಹೇಳುವ ಪ್ರತಿಯೊಂದು ವಿದಾಯವೂ ನಮ್ಮನ್ನು ನಾವು ಮತ್ತಷ್ಟು ಅರಿಯುವ, ರೂಪಿಸುವ ಒಂದು ಸುಂದರ ಪ್ರಯತ್ನ. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್ Read Post »

You cannot copy content of this page

Scroll to Top