ಧಾರಾವಾಹಿ ಸಂಗಾತಿ-114 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ತಳಮಳ ಮಕ್ಕಳಿಗೆ ಊಟವನ್ನು ಬಡಿಸಿ ನಂತರ ತಾನು ತಟ್ಟೆಯಲ್ಲಿ ಅನ್ನ-ಸಾರು, ಹೀರೇಕಾಯಿ ಪಲ್ಯವನ್ನು ಬಡಿಸಿಕೊಂಡು ಅನ್ನಕ್ಕೆ ಸಾರನ್ನು ಹಾಕಿ ಕಲಸಿ ಪಲ್ಯ ಸೇರಿಸಿ ಮೂವರಿಗೂ ಒಂದೊಂದು ತುತ್ತು ತಿನಿಸಿ ತಾನು ಊಟ ಮಾಡಿದಳು. ಅಮ್ಮ ಊಟ ಮಾಡುವ ಮುನ್ನ ಅಮ್ಮನ ಕೈಯಿಂದ ಒಂದೊಂದು ತುತ್ತು ತಿನ್ನುವುದೆಂದರೆ ಮಕ್ಕಳಿಗೆ ಪಂಚಪ್ರಾಣ. ಸುಮತಿ ಮಾಡುತ್ತಿದ್ದ ಅಡುಗೆಯೂ ಅಷ್ಟೇ ರುಚಿಕರವಾಗಿರುತ್ತಿತ್ತು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇಲ್ಲದಿದ್ದಾಗ ಒಣ ಮೆಣಸಿನಕಾಯಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಈರುಳ್ಳಿಯನ್ನು ಸಣ್ಣ ಸಣ್ಣದಾಗಿ ಹೆಚ್ಚಿ ಹುಣಸೆಹಣ್ಣನ್ನು ಸೇರಿಸಿ ಸ್ವಲ್ಪ ಉಪ್ಪು ಹಾಕಿ ಕಿವುಚಿ ಅಮ್ಮ ಮಾಡವ ಗೊಜ್ಜು ಬಹಳ ರುಚಿಕರವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳು ಬೆರಳುಗಳನ್ನು ಚಪ್ಪರಿಸಿ ನೆಕ್ಕುತ್ತಾ ಆಸ್ವಾದಿಸುತ್ತಿದ್ದರು. ಊಟದ ನಂತರ ಮಕ್ಕಳು ಚಾಪೆ ಹಾಸಿ ಸುಮತಿಯ ಕೈಯನ್ನು ದಿಂಬಾಗಿಸಿಕೊಂಡು ಮಲಗಿ ಅಮ್ಮ ಹೇಳುವ ಕಥೆಯನ್ನು ಕೇಳುತ್ತಾ ಮಕ್ಕಳು ನಿದ್ರೆಗೆ ಜಾರಿದರು. ಸುಮತಿ ಬೆಳಗ್ಗೆ ಬೇಗನೆ ಎದ್ದು ತಿಂಡಿ ಮಾಡಿದಳು. ಭಾನುವಾರ ಬೆಳಗ್ಗೆ ಸುಮತಿಯ ಜೊತೆ ಮೂವರು ಮಕ್ಕಳು ಶಾಲೆಗೆ ಹೊರಟರು. ಮಕ್ಕಳು ಬಂದರೆ ಸುಮತಿಗೆ ಸ್ವಲ್ಪ ನಿರಾಳವಾಗಿರುತ್ತಿತ್ತು. ತೋಟದ ಕೂಲಿ ಕೆಲಸಗಾರರ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಮಕ್ಕಳು ಅವಳಿಗೆ ನೆರವಾಗುತ್ತಿದ್ದರಿಂದ ಅಷ್ಟು ಆಯಾಸವಾಗುತ್ತಿರಲಿಲ್ಲ. ಶಾಲೆಗೆ ಹೊರಡುವ ಮುನ್ನ ಮಧ್ಯಾಹ್ನದ ಊಟಕ್ಕೆ ಬೇಕಾದ ಬುತ್ತಿ ತುಂಬಿಕೊಳ್ಳುತ್ತಿದ್ದರು. ಅಲ್ಲಿನ ಬಂಗಲೆಯ ಮೇಲ್ವಿಚಾರಕ ಬಂಗಲೆಯ ಸುತ್ತಲಿರುವ ಹಣ್ಣಿನ ಗಿಡಗಳಿಂದ ಹಣ್ಣುಗಳನ್ನು ಕಿತ್ತು ತಂದು ಕೊಡುವರು.. ಆ ಹಣ್ಣುಗಳನ್ನು ಶಾಲೆಯ ಮಕ್ಕಳಿಗೂ ಕೊಟ್ಟು ಸುಮತಿ ಮತ್ತು ಮಕ್ಕಳು ತಿನ್ನುತ್ತಿದ್ದರು. ಸಂಜೆ ಹೊತ್ತಿಗೆ ಶಾಲೆಯಿಂದ ಹೊರಟು ಮಾತನಾಡುತ್ತಾ ಅಮ್ಮನ ಕೈಹಿಡಿದು ಮಕ್ಕಳು ಜೊತೆಗೆ ನಡೆಯುವರು. ದಾರಿ ಹೋಕರಿಗೆ ಈ ತಾಯಿ ಮಕ್ಕಳ ಬಾಂಧವ್ಯ ಕಂಡು ಸಂತಸವಾಗುತ್ತಿತ್ತು. ಸುಮತಿ ಟೀಚರಿಗೆ ಹಣ ಐಶ್ವರ್ಯ ಇಲ್ಲದಿದ್ದರೇನು, ಮಕ್ಕಳು ಆಕೆಗೆ ನೆರಳಾಗಿ ಇರುವರು ಎಂದು ಹೇಳಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಾ ನಡೆದರೆ ಸುಮತಿಗೆ ದಾರಿ ಸಾಗುವುದು ತಿಳಿಯುತ್ತಿರಲಿಲ್ಲ. ಮನೆ ತಲುಪಿದ ಮೇಲೆಯೂ ಮಕ್ಕಳು ಸುಮತಿಯ ಹಿಂದೆ ಮುಂದೆ ಸುಳಿದಾಡುತ್ತಾ ಕೀಟಲೆ ಮಾಡುತ್ತಾ ನಗಿಸುತ್ತಾ ಕಾಲ ಕಳೆಯುವರು. ಮಾರನೇ ದಿನ ಬೇಗನೆ ಎದ್ದು ಮಗಳು ಹೊರಡಲು ಅನುವಾದಳು. ವಾರಕ್ಕೊಮ್ಮೆ ಮಗಳು ಬರುವಾಗ ಎಷ್ಟು ಸಂಭ್ರಮಿಸುತ್ತಿದ್ದಳೋ ಅವಳನ್ನು ಕಳುಹಿಸಿಕೊಡುವಾಗ ಸುಮತಿಗೆ ಅಷ್ಟೇ ಸಂಕಟವಾಗುತ್ತಿತ್ತು. ಹೀಗೆ ಕೆಲವು ತಿಂಗಳುಗಳು ಕಳೆದವು. ಸುಮತಿಗೆ ಈಗ ಮೊದಲಿಗಿಂತ ಆಯಾಸ ಹೆಚ್ಚಾಗುತ್ತಿತ್ತು. ಒಂದು ದಿನ ಸುಮತಿ ಬೆಳಗಿನ ಬಸ್ಸಿನಲ್ಲಿ ಎರಡನೇ ಮಗಳು ಕೆಲಸ ಮಾಡುತ್ತಿದ್ದ ಅನಾಥಾಶ್ರಮದ ಕಡೆಗೆ ಹೊರಟಳು. ಮೂರನೇ ಮಗಳು ಬಸ್ಸು ಹತ್ತಲು ಅಮ್ಮನಿಗೆ ಸಹಾಯ ಮಾಡಿದಳು. ಸುಮತಿಯ ಬದಲಿಗೆ ಶಾಲೆಗೆ ಹೋಗಬೇಕಾಗಿದ್ದ ಕಾರಣ ಅವಳು ತಾಯಿಯೊಂದಿಗೆ ಸಕಲೇಶಪುರಕ್ಕೆ ಹೊರಡಲಿಲ್ಲ. ಒಂದು ದಿನವೂ ಶಾಲೆಯ ಕೆಲಸ ತಪ್ಪಿಸುವಂತೆ ಇರಲಿಲ್ಲ. ತಪ್ಪಿದರೆ ಎಲ್ಲಿ ಕೆಲಸ ಕೈಬಿಟ್ಟು ಹೋಗುವುದೋ ಎನ್ನುವ ಭಯ ಸುಮತಿಯನ್ನು ಸದಾ ಕಾಡುತ್ತಿತ್ತು. ವರಮಾನಕ್ಕೆ ಇದೊಂದೇ ಮಾರ್ಗವಿತ್ತು. ಎರಡನೇ ಮಗಳು ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅವಳಿಗೆ ಸಿಗುವ ಸಂಬಳದಿಂದ ಮನೆಯ ಪೂರ್ತಿ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗುತ್ತಿರಲಿಲ್ಲ. ಅದೂ ಅಲ್ಲದೇ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಾನೇ ಅವಳು ಕೆಲಸಕ್ಕೆ ಹೋಗುತ್ತಿರುವುದು. ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಹಾಗಾಗಿ ನನ್ನ ಬದಲು ಈ ಮಗಳಾದರೂ ಶಾಲೆಗೆ ಹೋಗಲೇಬೇಕು ಎಂದು ಆಲೋಚಿಸಿ ಮೂರನೇ ಮಗಳನ್ನು ಶಾಲೆಗೆ ಹೋಗುವಂತೆ ತಿಳಿಸಿದಳು. ಸಕಲೇಶಪುರ ನನಗೆ ಗೊತ್ತಿಲ್ಲದ ಊರಲ್ಲ. ಮಗಳು ಕೆಲಸ ಮಾಡುತ್ತಿರುವ ಅನಾಥಾಶ್ರಮ ಹುಡುಕುವುದು ಕಷ್ಟವೇನಲ್ಲ ಎಂದೂ ಮಗಳಿಗೆ ತಿಳಿಸಿದಳು. ಆದರೆ ಸಕಲೇಶಪುರದ ಬಸ್ ನಿಲ್ದಾಣ ಬಂದಾಗ ಬಸ್ಸಿಂದ ಕೆಳಗಿಳಿಯಲು ಸುಮತಿ ಬಹಳ ಕಷ್ಟ ಪಡಬೇಕಾಯಿತು. ಒಂದೊಂದು ಹೆಜ್ಜೆ ಇಡುವುದೂ ಅವಳಿಗೆ ಕಷ್ಟಕರವೆನಿಸುತ್ತಿತ್ತು. ಬಸ್ ನಿಲ್ದಾಣದಿಂದ ಮಗಳು ಇರುವ ಅನಾಥಾಶ್ರಮದ ಬಳಿಗೆ ಹೋಗಲು ಹೆಚ್ಚು ದೂರವೇನೂ ಇರಲಿಲ್ಲ. ಎಂದಿಲ್ಲದ ಇಂದೇಕೋ ಅವಳ ಕಣ್ಣುಗಳಿಗೆ ಎಲ್ಲವೂ ಮಸುಕಾಗಿ ಕಾಣುತ್ತಿತ್ತು. ತಡವರಿಸುತ್ತಾ ಹೇಗೋ ಮಗಳು ವಾಸವಿದ್ದ ಅನಾಥಾಶ್ರಮದ ಬಾಗಿಲ ಮುಂದೆ ಬಂದು ನಿಂತಳು. ತಲೆ ಸುತ್ತು ಬಂದಂತೆ ಅನುಭವವಾಯಿತು. ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತಳು. ಸ್ವಲ್ಪ ಸುಧಾರಿಸಿದ ನಂತರ ಮೆಲ್ಲನೆ ಎದ್ದು ಬಾಗಿಲನ್ನು ತಟ್ಟಿದಳು. ಅನಾಥಾಶ್ರಮದ ಮಕ್ಕಳಲ್ಲಿ ಒಬ್ಬ ಹುಡುಗಿ ಬಂದು ಬಾಗಿಲು ತೆರೆದಳು…. ಯಾರು ನೀವು? ಯಾರು ಬೇಕಿತ್ತು ನಿಮಗೆ? ಎಂದು ಕೇಳಿದಳು. ಆ ಹುಡುಗಿಯ ಮುಖ ಸುಮತಿಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ತನ್ನ ಮಗಳ ಹೆಸರನ್ನು ಹೇಳಿ…”ಅವರು ಇಲ್ಲಿದ್ದಾರೆಯೇ”…. ಎಂದು ಕೇಳಿದಳು. ಒಳಗೆ ಕುಳಿತು ಆಶ್ರಮಕ್ಕೆ ಬೇಕಾದ ದಿನಸಿಗಳ ಪಟ್ಟಿಯನ್ನು ಮಾಡುತ್ತಿದ್ದ ಸುಮತಿಯ ಎರಡನೇ ಮಗಳು ಅಮ್ಮನ ಧ್ವನಿ ಕೇಳಿದಂತಾಗಿ ಎದ್ದು ಹೊರಗೆ ಬಂದಳು. ಓಹ್!! ಅಮ್ಮ ಬಂದಿದ್ದಾಳೆ…. ಎಂದು ಹೇಳುತ್ತಾ ಕೋಣೆಯಿಂದ ಹೊರ ಬಂದ ಮಗಳ ಮುಖದಲ್ಲಿ ಮಂದಹಾಸ ಮೂಡಿತು. ಆದರೆ ಮರುಕ್ಷಣವೇ ಅವಳ ಹಣೆಯಲ್ಲಿ ಗೆರೆಗಳು ಮೂಡಿದವು. ಅಮ್ಮ ಏಕೆ ಇಷ್ಟು ಬೆಳಗ್ಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾಳೆ? ನಾನು ಮನೆಗೆ ಹೋಗಿ ಬಂದು ಒಂದೆರಡು ದಿನಗಳಷ್ಟೇ ಆಗಿವೆ ಎಂದುಕೊಳ್ಳುತ್ತಾ ಅಚ್ಚರಿಯಿಂದ ಅಮ್ಮನನ್ನು ಒಮ್ಮೆ ನೋಡಿದಳು. ಓಡು ನಡಿಗೆಯಲ್ಲಿ ಸುಮತಿಯ ಬಳಿ ಬಂದು ಕೈಹಿಡಿದುಕೊಂಡು, … “ನಾನು ಇಲ್ಲೇ ಇರುವುದು…. ಅಮ್ಮ ಒಳಗೆ ಬಾ”…. ಎಂದಳು. ಮಗಳ ಧ್ವನಿ ಕೇಳಿ ಸುಮತಿ ಅವಳೆಡೆಗೆ ನೋಡಿದಳು. ಅವಳ ಮುಖ ಅಸ್ಪಷ್ಟವಾಗಿ ಕಂಡಿತು. ಕಣ್ಣುಗಳು ಹನಿಗೂಡಿದವು. ಮಗಳ ಕೈ ಹಿಡಿದು ತಡವರಿಸುತ್ತಾ ಅನಾಥಾಶ್ರಮದ ಒಳಗೆ ಹೆಜ್ಜೆ ಇಟ್ಟಳು. ಕುತೂಹಲದಿಂದ ಯಾರಿರಬಹುದೆಂದು ನೋಡಲು ಅನಾಥಾಶ್ರಮದ ಮಕ್ಕಳೆಲ್ಲ ಅಲ್ಲಿ ಬಂದು ಸೇರಿದರು….”ಇವರು ನನ್ನ ತಾಯಿ”…. ಎಂದು ಮಕ್ಕಳಿಗೆ ಪರಿಚಯಿಸಿದಳು. ಮಕ್ಕಳೆಲ್ಲರೂ….”ನಮಸ್ತೆ ಅಮ್ಮಾ”….ಎಂದು ಕೈ ಮುಗಿದರು. ಸುಮತಿ ಮುಗುಳ್ನಕ್ಕಳಷ್ಟೇ, ಮಾತನಾಡಲು ಅವಳಿಂದ ಸಾಧ್ಯವಾಗಲಿಲ್ಲ. ಇದನ್ನರಿತ ಮಗಳು ತನ್ನ ಕೋಣೆಯ ಕಡೆಗೆ ಅಮ್ಮನನ್ನು ಕರೆದುಕೊಂಡು ಹೋದಳು. ಸುಮತಿಯ ಕೈಗಳು ನಡುಗುತ್ತಿದ್ದವು. ಬಾಯಿ ಒಣಗಿತ್ತು. ಏನೋ ಹೇಳಲು ಮುಂದಾದಳು ಆದರೆ ಧ್ವನಿ ಗಂಟಲಿನಿಂದ ಆಚೆ ಬರಲಿಲ್ಲ. ಅಮ್ಮನ ಈ ಸ್ಥಿತಿಯನ್ನು ಕಂಡು ಮಗಳಿಗೆ ತುಂಬಾ ಗಾಬರಿಯಾಯಿತು. ಮೂರು ಬೆಂಚುಗಳನ್ನು ಸೇರಿಸಿ ಮಂಚದಂತೆ ಮಾಡಿಕೊಂಡಿದ್ದ ಹಾಸಿಯ ಮೇಲೆ ಅಮ್ಮನನ್ನು ಕುಳ್ಳಿರಿಸಿ, ಒಬ್ಬ ಹುಡುಗಿಯನ್ನು ಕರೆದು ಸ್ವಲ್ಪ ನೀರನ್ನು ತರುವಂತೆ ತಿಳಿಸಿದಳು.
ಧಾರಾವಾಹಿ ಸಂಗಾತಿ-113 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಎರಡನೇ ಮಗಳು ತನ್ನ ಬಟ್ಟೆ ಬರೆ ಪುಸ್ತಕಗಳು ಹಾಗೂ ತನಗೆ ಅತ್ಯವಶ್ಯಕವಾಗಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಅನಾಥಾಶ್ರಮಕ್ಕೆ ಹೊರಡಲು ಅನುವಾದಳು. ಸುಮತಿ ಹಾಗೂ ಮೂರನೇ ಮಗಳು ಒಲ್ಲದ ಮನಸ್ಸಿನಿಂದ ಅವಳನ್ನು ಬೀಳ್ಕೊಟ್ಟರು. ಏಕೋ ಮಗಳನ್ನು ಬೀಳ್ಕೊಡುವಾಗ ಸುಮತಿಯ ಮನಸ್ಸು ಬಹಳ ಭಾರವಾಯಿತು. ಏನೋ ಅವ್ಯಕ್ತವಾದ ನೋವೊಂದು ಅವಳ ಹೃದಯವನ್ನು ಹಿಂಡಿತು….”ವಾರಕ್ಕೊಮ್ಮೆ ನಾನು ಬರುತ್ತೇನೆಲ್ಲವೇ ಅಮ್ಮಾ …. ವಾರದಲ್ಲಿ ಒಂದು ದಿನ ನಿಮ್ಮ ಜೊತೆ ಕಳೆಯುತ್ತೇನೆ….ದಯವಿಟ್ಟು ನೊಂದುಕೊಳ್ಳದೆ ನಸುನಗುತ್ತಾ ನನ್ನನ್ನು ಕಳುಹಿಸಿ ಕೊಡು”…. ಎಂದು ಮಗಳು ಹೇಳಿದಾಗ, ಅವಳನ್ನು ಅಪ್ಪಿ, ಹಣೆಗೊಂದು ಹೂಮುತ್ತನ್ನು ಕೊಟ್ಟಳು. ತಂಗಿಯು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಸ್ವಲ್ಪ ಹೊತ್ತು ಹಾಗೇ ನಿಂತು ಬಿಟ್ಟಳು. ಗೇಟಿನ ಬಳಿ ಡ್ರೈವರ್ ಬಂದು….”ಬಾ ಮಗು ಹೊರಡೋಣ”…. ಅಮ್ಮ ಅಲ್ಲಿ ಕಾಯುತ್ತಿದ್ದಾರೆ… ಎಂದು ಹೇಳಲು, ಮಗಳು ಅವರ ಜೊತೆ ಹೊರಟಳು. ಮೆಟ್ಟಿಲುಗಳನ್ನು ಏರುತ್ತಾ ಅಮ್ಮನನ್ನು, ತಂಗಿಯನ್ನು ನೋಡಿ ಕೈಬೀಸಿದಳು. ಮಗಳು ಹೊರಟು ಹೋದ ನಂತರ ಸುಮತಿ ಮನೆ ಒಳಗೆ ಬಂದು ಕೆಲವು ನಿಮಿಷಗಳ ಕಾಲ ಸುಮ್ಮನೆ ಕುಳಿತುಬಿಟ್ಟಳು. ಮೂರನೇ ಮಗಳು ಸುಮತಿಯ ಪಕ್ಕ ಬಂದು ಕುಳಿತು ಹೆಗಲ ಮೇಲೆ ಕೈ ಇಟ್ಟು ತಾಯಿಗೆ ಸಮಾಧಾನ ಮಾಡುವಂತೆ ಹೆಗಲನ್ನು ತಟ್ಟಿದಳು. ದಿನಗಳು ಉರುಳಿದವು. ನಾಲ್ಕನೇ ಮಗಳು ಬೇಸಿಗೆ ರಜೆಯಲ್ಲಿ ಮನೆಗೆ ಬಂದಳು. ಅವಳು ಬಂದ ಮೇಲೆ ಮೂರನೇ ಮಗಳು ಲವಲವಿಕೆಯಿಂದ ಇರುವಂತೆ ಆಯ್ತು. ಸುಮತಿಯ ಜೊತೆ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಶಾಲೆಯ ಕೆಲಸದಲ್ಲಿ ಮತ್ತು ಮನೆಯ ಕೆಲಸಗಳಲ್ಲಿ ಸುಮತಿಗೆ ಸಹಾಯ ಮಾಡುತ್ತಿದ್ದರು. ಇತ್ತೀಚೆಗೆ ಯಾಕೋ ಸುಮತಿ ಇನ್ನೂ ಹೆಚ್ಚು ಬಳಲಿದಂತೆ ತೋರುತ್ತಿದ್ದಳು. ಶನಿವಾರ ಸಂಜೆಯಾದರೆ ಬಸ್ಸು ಬರುವ ವೇಳೆಗೆ ಮಗಳನ್ನು ಕಾಯುತ್ತಾ ಗೇಟಿನ ಬಳಿ ಇರುವ ಕಲ್ಲಿನ ಮೆಟ್ಟಿಲಿನ ಮೇಲೆ ಕುಳಿತುಕೊಳ್ಳುವಳು…. “ಅಮ್ಮಾ….ಅಕ್ಕ ಇಲ್ಲಿಗೇ ಬರುತ್ತಾಳಲ್ಲವೇ?…. ಮತ್ತೇಕೆ ನೀನು ಅಲ್ಲಿ ಗೇಟಿನ ಬಳಿ ಕುಳಿತಿರುವೆ…. ಬಾ ಒಳಗೆ”…. ಎಂದರೂ ಕೇಳದೇ ಸಂಜೆಯ ಬಸ್ಸು ಬರುವುದನ್ನೇ ಕಾಯುತ್ತಾ ಕುಳಿತುಕೊಳ್ಳುವಳು. ಬಸ್ಸು ಬರುವುದು ಕೊಂಚ ತಡವಾದರೂ ಚಡಪಡಿಸುವಳು. ಎಷ್ಟು ಬೇಗ ಮಗಳನ್ನು ನೋಡುವೆನೋ ಎನ್ನುವ ಕಾತರದಲ್ಲಿ ಅವಳ ಕಣ್ಣುಗಳು ಕಾಯುತ್ತಿದ್ದವು. ಬಸ್ಸು ಬಂದು ನಿಂತ ಕೂಡಲೇ ಎದ್ದು ನಿಂತು ಜನರು ಇಳಿಯುದನ್ನೇ ನೋಡುತ್ತಾ, ಮಗಳು ಇಳಿದು ಬಂದ ಕೂಡಲೇ ಅವಳನ್ನು ಅಪ್ಪಿಕೊಂಡು ಅವಳೊಂದಿಗೆ ನಿಧಾನವಾಗಿ ಮೆಟ್ಟಿಲು ಇಳಿಯುವಳು. ಅಕ್ಕ ಬಂದಿದ್ದು ತಿಳಿದುಕೊಡಲೆ ತಂಗಿಯರು ಒಳಗಿನಿಂದ ಓಡೋಡಿ ಬಂದು ಖುಷಿಯಿಂದ ಅಕ್ಕನನ್ನು ಅಪ್ಪಿಕೊಳ್ಳುತ್ತಿದ್ದರು. ಅವಳು ಸಕಲೇಶಪುರದಿಂದ ಬರುವಾಗ ತಂಗಿಯರಿಗಾಗಿ ತಿಂಡಿ ಮತ್ತು ಅಮ್ಮನಿಗೆ ಹಣ್ಣುಗಳನ್ನು ತರುವಳು. ಅವಳು ಬಂದಳೆಂದರೆ ಮನೆಯಲ್ಲಿ ಹಬ್ಬದಂತೆ ಸಂಭ್ರಮ ಪಡುವರು. ರಾತ್ರಿ ಎಲ್ಲಾ ನಿದ್ರೆ ಮಾಡದೆ ನಾಲ್ವರೂ ಕುಳಿತು ಮಾತನಾಡುವರು. ಅವಳ ಕೆಲಸದ ಬಗ್ಗೆ, ಅವಳ ಓದಿನ ಬಗ್ಗೆ ಕೇಳಿ ತಿಳಿದುಕೊಳ್ಳುವರು. ಇವಳು ಕೂಡ ಎಲ್ಲರ ದಿನಚರಿಗಳನ್ನು ಕೇಳಿ ತಿಳಿದುಕೊಳ್ಳುವಳು. ಅಮ್ಮ ಇತ್ತೀಚೆಗೆ ಕ್ಷೀಣಿಸುತ್ತಿರುವುದನ್ನು ಗಮನಿಸಿ….. ಏಕಮ್ಮಾ… ಏನಾಯ್ತು?… ನಾನು ನಾಡಿದ್ದು ಹೊರಡುವಾಗ ನನ್ನ ಜೊತೆ ಬನ್ನಿ…. ನಾನು ಆಸ್ಪತ್ರೆಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ…. ಎಂದರೆ, ನನಗೇನೂ ಆಗಿಲ್ಲಪ್ಪಾ…. ಸ್ವಲ್ಪ ಆಯಾಸ ಇದೆ ಅಷ್ಟೇ…, ಎಂದಿನಂತೆ ಪಥ್ಯದಲ್ಲಿದ್ದೇನೆ… ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ನನಗೇನಾಗಿದೆ? ನೀವು ಮೂವರೂ ನನ್ನ ಜೊತೆ ಇದ್ದರೆ ಅದೇ ನನಗೆ ಸ್ವರ್ಗ…. ಅದಕ್ಕಿಂತ ಹೆಚ್ಚಿನದು ನನಗೇನು ಬೇಡ…. ಎನ್ನುವಳು ಸುಮತಿ. ಅವಳ ತಂಗಿ….ಹೌದು ಅಕ್ಕ… ಅಮ್ಮ ಈ ನಡುವೆ ಮೊದಲಿನಂತೆ ಲವಲವಿಕೆಯಿಂದ ಇಲ್ಲ….ಯಾಕೋ ತುಂಬಾ ಆಯಾಸವಾದಂತೆ ಕಾಣಿಸುತ್ತಾರೆ…. ಶಾಲೆಗೆ ಹೋಗುವಾಗಲೂ ಅಷ್ಟೇ, ಇಲ್ಲಿಂದ ಅಷ್ಟು ದೂರ ಹೋಗಬೇಕು…. ನಾವು ಅಲ್ಲೇ ಇದ್ದಿದ್ದರೆ ಚೆನ್ನಾಗಿತ್ತು…. ಅಮ್ಮ ಅಷ್ಟೊಂದು ದೂರ ನಡೆದುಕೊಂಡು ಹೋಗಿ ಬರುವುದು ಕಷ್ಟವಾಗುತ್ತಿದೆ… ಅಲ್ಲಿ ಗುಡ್ಡ ಹತ್ತಿ ಬರುವಾಗ ಉಸಿರಾಡಲು ತುಂಬಾ ಕಷ್ಟಪಡುತ್ತಾರೆ…. ಸ್ವಲ್ಪ ಹೊತ್ತು ಅಲ್ಲಿ ದೇವಸ್ಥಾನದ ಆ ಮಾವಿನ ಮರದ ನೆರಳಲ್ಲಿ ಕುಳಿತು ದಣಿವಾರಿಸಿಕೊಂಡು ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾರೆ”…. ಎಂದು ತಂಗಿ ಹೇಳಿದ್ದನ್ನು ಕೇಳಿ ಅವಳ ಮುಖ ಬಾಡಿತು…. ಇನ್ನೂ ಸ್ವಲ್ಪ ದಿನ ಅಷ್ಟೇ… ನನ್ನ ಓದು ಮುಗಿಯಲಿ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸಿಗುತ್ತದೆ…. ಅಮ್ಮನನ್ನು ಕೆಲಸಕ್ಕೆ ಕಳುಹಿಸುವುದು ಬೇಡ….ನಿಮ್ಮೆಲ್ಲರನ್ನು ನಾನು ನೋಡಿಕೊಳ್ಳುತ್ತೇನೆ….. ಎಷ್ಟೊಂದು ವರ್ಷಗಳಿಂದ ಅಮ್ಮ ಕಷ್ಟ ಪಟ್ಟು ದುಡಿದು ನಮ್ಮನ್ನು ಸಾಕುತ್ತಿದ್ದಾರೆ. ಈಗ ನೀನು ಅಮ್ಮನ ಜೊತೆ ಇರುವುದು ನನಗೆ ದೊಡ್ಡ ಸಮಾಧಾನ…. ಅಮ್ಮನ ಸಹಾಯಕ್ಕೆ ಜೊತೆಗೆ ನೀನಿರುತ್ತೀಯ ಎನ್ನುವ ಧೈರ್ಯ….. ಇನ್ನೂ ಒಂದೆರಡು ವರ್ಷಗಳಷ್ಟೇ…. ನನ್ನ ಡಿಗ್ರಿ ಮುಗಿಯಲಿ….. ಸರ್ಕಾರಿ ಕೆಲಸ ಸಿಗಲಿ ಎಂದು ನಾನು ಕಾಯುವುದಿಲ್ಲ…. ಯಾವುದಾದರೂ ಸಣ್ಣ ಸಂಸ್ಥೆಯಲ್ಲಿ ಕಡಿಮೆ ಸಂಬಳ ಸಿಕ್ಕರೂ ಸೇರಿಕೊಳ್ಳುತ್ತೇನೆ…. ನಂತರ ನೀನು ಕಾಲೇಜಿಗೆ ಹೋಗುವೆಯಂತೆ…. ಕೆಲವು ವರ್ಷಗಳಲ್ಲಿ ನೀನೂ ದುಡಿಯಲು ಪ್ರಾರಂಭಿಸುತ್ತೀಯಾ…. ಆಗ ಅಮ್ಮನಿಗೆ ಸಂಪೂರ್ಣ ವಿಶ್ರಾಂತಿ ಸಿಕ್ಕಂತಾಗುತ್ತದೆ….. ಇವಳೂ ಕೂಡ ನವೋದಯ ಶಾಲೆಯಲ್ಲಿ ಪಿಯುಸಿ ಯವರೆಗೂ ವಿದ್ಯಾಭ್ಯಾಸ ಮುಗಿಸಿ ಬಂದರೆ, ನಂತರ ಇವಳ ಮುಂದಿನ ವಿದ್ಯಾಭ್ಯಾಸಕ್ಕೆ ನಾವಿಬ್ಬರೂ ಇರುತ್ತೇವೆ…. ಎಂದು ಮಗಳು ಹೇಳಿದಾಗ, ಸುಮತಿ ಮೂವರು ಮಕ್ಕಳನ್ನು ಅಪ್ಪಿಕೊಂಡು,….”ನೀವಿರುವಾಗ ನನಗೇನು ಚಿಂತೆ ಮಕ್ಕಳೇ….. ನನ್ನ ಕೈಲಿ ಆಗುವರೆಗೂ ನಾನು ದುಡಿಯುತ್ತೇನೆ…. ನಿಮ್ಮ ಈ ಮಾತುಗಳನ್ನು ಕೇಳಿ ನನ್ನ ಹೃದಯ ಹಗುರವಾಯಿತು…. ಇಷ್ಟು ವರ್ಷ ಕಷ್ಟಪಟ್ಟಿದ್ದು ಸಾಕಾಗಿದೆ…. ನಿಮ್ಮ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯಿಂದ ಕಳೆಯುವಂತಾದರೆ ಸಾಕು…. ಬನ್ನಿ ಎಲ್ಲರೂ ಊಟ ಮಾಡೋಣ…. ನಿಮಗೆಲ್ಲರಿಗೂ ಇಷ್ಟವಾದ ಅಡುಗೆಯನ್ನು ಮಾಡಿದ್ದೇನೆ”…. ಎಂದು ಹೇಳಿ ಸುಮತಿ ಅಡುಗೆ ಮನೆಯ ಕಡೆ ನಡೆದಳು. ಮೂವರು ಹೆಣ್ಣುಮಕ್ಕಳೂ ಅಮ್ಮನನ್ನು ಹಿಂಬಾಲಿಸಿದರು.
ಧಾರಾವಾಹಿ ಸಂಗಾತಿ-112 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅನಾಥಾಶ್ರಮದ ಕೆಲಸಕ್ಕೆ ಹೊರಟ ಮಗಳು ಬಂಗಲೆಯಿಂದ ಇಬ್ಬರೂ ಮನೆಗೆ ಬಂದ ನಂತರ ಮೂರನೇ ಮಗಳ ಜೊತೆಗೆ ಕುಳಿತು ಅಮ್ಮ ಹೇಳಿದ ವಿಷಯದ ಬಗ್ಗೆ ಚರ್ಚಿಸಿದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅನಾಥಾಶ್ರಮದ ಮಕ್ಕಳ ಮೇಲ್ವಿಚಾರಣೆ ನನ್ನ ಮಗಳಿಂದ ಸಾಧ್ಯವೇ? ಕಲಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಅವಳು ಖಂಡಿತ ಅಲ್ಲಿನ ಮಕ್ಕಳ ಶಾಲೆಯ ಪಠ್ಯ ವಿಷಯಗಳ ಕಲಿಕೆಯ ಸಹಾಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದರೆ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಮಕ್ಕಳ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರಲು ನನ್ನ ಮಗಳು ಸಮರ್ಥಳೇ? ಈ ಚಿಕ್ಕ ಹುಡುಗಿಯ ಮಾತನ್ನು ಅಲ್ಲಿನ ಮಕ್ಕಳು ಅನುಸರಿಸಿಯಾರೇ? ಆ ಮಕ್ಕಳ ನಡುವೆ ಈಕೆಯು ಕೂಡ ಮಕ್ಕಳಂತೆ ಅಲ್ಲವೇ? ಅಲ್ಲಿನ ಖರ್ಚು- ವೆಚ್ಚ, ಉಳಿತಾಯ ಇತರೆ ವಿಷಯಗಳ ಬಗ್ಗೆ ಇವಳಿಗೆ ಯಾವುದೇ ಅರಿವಿಲ್ಲ. ಅಮ್ಮ ಹೇಳಿದಂತೆ ಅವಳಿಗೆ ಸಹಾಯಕ್ಕಾಗಿ ಅಲ್ಲಿ ಎಲ್ಲರೂ ಇರುತ್ತಾರೆ. ಅವಳು ಕೂಡ ಅಲ್ಲಿ ಇದ್ದುಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಮೂರು ವರ್ಷದ ಪದವಿ ತರಗತಿಯನ್ನು ಮುಗಿಸಿದ ನಂತರ ಅವಳಿಗೆ ಯಾವುದಾದರೂ ಒಳ್ಳೆಯ ಕೆಲಸ ಸಿಗಬಹುದು. ಬಿ ಎಡ್ ತರಬೇತಿ ಪಡೆದು ಹೈ ಸ್ಕೂಲ್ ಶಿಕ್ಷಕಿಯೂ ಆಗಬಹುದು. ಅಲ್ಲದೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಟೈಪಿಂಗ್ ಸಹ ಕಲಿತಿದ್ದಾಳೆ. ನಮಗೂ ಈಗ ಹಣದ ಅಗತ್ಯವಿದೆ. ಇವಳಿಗೊಂದು ಒಳ್ಳೆಯ ಕೆಲಸ ಸಿಕ್ಕರೆ ಮುಂದೆ ನಾವು ಒಳ್ಳೆಯ ದಿನಗಳನ್ನು ನೋಡಬಹುದು. ನನಗೆ ಸಹಾಯ ಮಾಡುವುದಕ್ಕಾಗಿ ನನ್ನ ಮಕ್ಕಳು ಯಾವುದೇ ರೀತಿಯ ಕೆಲಸವನ್ನು ಮಾಡಲು ತಯಾರಿದ್ದಾರೆ. ಹೈಸ್ಕೂಲ್ ಹಂತದಲ್ಲಿರುವಾಗಲೇ ತಮಗೆ ರಜೆ ಇದ್ದಾಗ ಕಾಫಿ ತೋಟಕ್ಕೆ ಹೋಗಿ, ಕಾಫಿ ಹಣ್ಣುಗಳನ್ನು ಕೊಯ್ದು ತಮಗೆ ಸಾಧ್ಯವಾದಷ್ಟು ಹಣವನ್ನು ಗಳಿಸಿ ನನ್ನ ಕೈಲಿಟ್ಟಿದ್ದಾರೆ. ನಾವು ಓದುತ್ತಿರುವ ಮಕ್ಕಳು ಎನ್ನುವ ಅಹಂಭಾವವಿಲ್ಲದೆ ಸೊಂಟಕ್ಕೆ ಗೋಣಿ ಚೀಲವನ್ನು ಕಟ್ಟಿ, ನಾನು ತುಂಬಿಸಿಕೊಟ್ಟ ಊಟದ ಬುತ್ತಿಯನ್ನು ತೆಗೆದುಕೊಂಡು ಹೋಗಿ, ಹಣ್ಣು ಕೊಯ್ಯುವ ಅಭ್ಯಾಸ ಇಲ್ಲದಿದ್ದರೂ ಕೂಲಿ ಕೆಲಸಗಾರರ ಜೊತೆ ಸೇರಿ ಹುಮ್ಮಸ್ಸಿನಿಂದ ನನ್ನ ಮೂವರು ಮಕ್ಕಳೂ ಅವರ ಜೊತೆ ಹಣ್ಣುಗಳನ್ನು ಕೊಯ್ದು ದೊಡ್ಡ ಚೀಲದಲ್ಲಿ ತುಂಬಿಸಿ ಟ್ರ್ಯಾಕ್ಟರ್ ಗೆ ಹಾಕಿ, ಕಾಫಿ ಕಣದಲ್ಲಿ ಅವರ ಚೀಲಗಳನ್ನು ಗುರುತಿಸಿ ತೆಗೆದು ಅದನ್ನು ತೂಕ ಹಾಕಿಸಿ, ಪಲ್ಪರ್ ಮಾಡುವಲ್ಲಿಗೆ ತೆಗೆದುಕೊಂಡು ಹೋಗಿ ಕೊಟ್ಟು ಸಂಬಳವನ್ನು ಪಡೆದು ಖುಷಿಯಿಂದ ತಮ್ಮ ಸಂಪಾದನೆಯನ್ನು…. ‘ಅಮ್ಮಾ…..ನೋಡು…. ನಾವೆಷ್ಟು ಸಂಪಾದನೆ ಮಾಡಿದ್ದೇವೆ…. ಎಂದು ಕಣ್ಣರಳಿಸಿ ಸಂತೋಷದಿಂದ ನನ್ನ ಕೈಲಿಟ್ಟಿದ್ದಾರೆ….. ಒಂದು ಬಿಡಿಗಾಸನ್ನು ಕೂಡಾ ನಮಗಾಗಿ ಕೊಡಿ ಎಂದು ಆ ಮಕ್ಕಳು ಕೇಳಿಲ್ಲ….”ಬೇಡ ಮಕ್ಕಳೇ ನಿಮಗಿದು ಅಭ್ಯಾಸವಿಲ್ಲದ ಕೆಲಸ…. ನೀವಿನ್ನೂ ಚಿಕ್ಕವರು…..ತೋಟದ ಗಿಡಗಳ ನಡುವೆ ಇಳಿಜಾರಿನಲ್ಲಿ ಕೂಡ ಇಳಿದು ಹಣ್ಣುಗಳನ್ನು ಕೊಯ್ಯಬೇಕು…. ನಿಮ್ಮಿಂದ ಇದು ಸಾಧ್ಯವಾಗದು…. ಎಂದು ನಾನು ಹೇಳಿದಾಗ…. ಏನು ಆಗೋದಿಲ್ಲ ಅಮ್ಮಾ… ಅಲ್ಲಿ ಕೆಲಸ ಮಾಡುವ ಕೆಲಸಗಾರರು ನಮಗೆ ಪರಿಚಿತರಲ್ಲವೇ?…. ರೈಟರ್ ಕೂಡ ಹೇಗೆ ಹಣ್ಣುಗಳನ್ನು ಕೊಯ್ಯಬೇಕೆಂದು ನಮಗೆ ತಿಳಿಸುತ್ತಾರೆ”…. ಎಂದು ಹೇಳಿ ನನ್ನ ಸಮ್ಮತಿಯನ್ನು ಪಡೆದುಕೊಂಡು ಹಣ್ಣು ಕೊಯ್ಯುವ ಕೆಲಸಕ್ಕೆ ಕೂಡ ಹೋಗಿದ್ದಾರೆ. ಆದರೆ ಅನಾಥಾಶ್ರಮದ ಕೆಲಸ ಹೆಚ್ಚು ಜವಾಬ್ದಾರಿಯುತವಾದದ್ದು. ಇದನ್ನು ನಿಭಾಯಿಸಲು ನನ್ನ ಈ ಮಗಳ ಕೈಲಿ ಸಾಧ್ಯವೇ? ಇವಳಿಂದೇನಾದರೂ ಪ್ರಮಾದವಾದರೆ ಕಷ್ಟವಲ್ಲವೇ? ನಾನು ‘ಹೂಂ’ ಅಂದರೆ ಇವಳು ಖಂಡಿತ ಈ ಕೆಲಸಕ್ಕೆ ಹೋಗುತ್ತಾಳೆ. ನೋಡೋಣ ಅವಳ ತೀರ್ಮಾನ ಏನೆಂದು ಎಂದು ಯೋಚಿಸುತ್ತಾ…. ಮಗಳೇ, ನೀನು ಅಮ್ಮ ಹೇಳಿದ ಈ ಕೆಲಸವನ್ನು ಮಾಡಬಲ್ಲೆಯೇ? ನಿನ್ನಿಂದ ಇದು ಸಾಧ್ಯವೇ? ಎಂದು ಸುಮತಿ ಕೇಳಿದಾಗ…. ಅಮ್ಮಾ …ಸ್ವಲ್ಪ ದಿನ ಹೋಗಿ ಅಲ್ಲಿ ಇದ್ದು ಕೆಲಸ ಮಾಡಿ ನೋಡುತ್ತೇನೆ…. ಸಾಧ್ಯವಾದರೆ ಮುಂದುವರೆಸುತ್ತೇನೆ… ಇಲ್ಲದಿದ್ದರೆ ಆ ಕೆಲಸವನ್ನು ಬಿಟ್ಟು ಬಂದು ಇಲ್ಲಿ ನಿನ್ನ ಜೊತೆ ಇರುತ್ತೇನೆ….. ನನ್ನ ಡಿಗ್ರಿ ಮುಗಿದ ಕೂಡಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಸೇರಿಕೊಂಡು ನಿನ್ನ ಜವಾಬ್ದಾರಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವ ಹಂಬಲ ನನಗೆ ಇದೆ ಅಮ್ಮ…. ನಾನು ಅನಾಥಾಶ್ರಮಕ್ಕೆ ಹೋಗುತ್ತೇನೆ …. ಹೇಗಿದ್ದರೂ ಅದು ನಾನು ಕಳೆದ ಪರಿಸರವಲ್ಲವೇ? ವಾರಕ್ಕೊಮ್ಮೆ ಬಂದು ನಿನ್ನನ್ನು ನೋಡಬಹುದಲ್ಲವೇ?…. ಎಂದಾಗ ಸುಮತಿ ಮಗಳನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳು ತುಂಬಿ ಬಂತು. ಈ ಮಗಳು ನನ್ನ ಜೊತೆ ಇದ್ದಿದ್ದೇ ಕಡಿಮೆ. ಇವಳಿಗೆ ನಾಲ್ಕುವರೆ ವರ್ಷವಿದ್ದಾಗ ಅನಾಥಾಶ್ರಮಕ್ಕೆ ಸೇರಿದ ಹುಡುಗಿ, ಎಂಟನೇ ತರಗತಿಯಿಂದ 10ನೇ ತರಗತಿವರೆಗೂ ನನ್ನ ಹಿರಿಯ ಮಗಳ ಮನೆಯಲ್ಲಿದ್ದಳು. ಈಗ ಒಂದೆರಡು ವರ್ಷದಿಂದ ನನ್ನ ಜೊತೆ ಇದ್ದಾಳಷ್ಟೇ…. ಹೆಣ್ಣು ಮಕ್ಕಳು ಹೇಗಿದ್ದರೂ ಮುಂದೆಯಾದರೂ ನನ್ನನ್ನಗಲಿ ಇನ್ನೊಬ್ಬರ ಮನೆಗೆ ಹೋಗಬೇಕಾದವರೇ…. ಆದರೆ ಅಲ್ಲಿಯವರೆಗೂ ನನ್ನ ಜೊತೆಗಿರುವ ಅದೃಷ್ಟವಿಲ್ಲವೇ ದೇವರೇ?…. ಮಗಳ ಜೊತೆ ಇದ್ದು ಆಸೆ ಪೂರೈಸಿಲ್ಲ…. ಇಷ್ಟು ಬೇಗ ಮತ್ತೊಮ್ಮೆ ಅಗಲಿಕೆಯೇ? ಎಂದು ತನ್ನಲ್ಲೇ ಸ್ವಗತ ಹೇಳಿಕೊಂಡಳು. ತನ್ನ ಮಗಳನ್ನು ಅನಾಥಾಶ್ರಮದಲ್ಲಿ ಕೆಲಸಕ್ಕೆ ಕಳುಹಿಸದೆ ಬೇರೆ ದಾರಿ ಇರಲಿಲ್ಲ. ಅಕ್ಕನ ತೀರ್ಮಾನ ಕೇಳಿದಾಗ ತಂಗಿಗೆ ಬಹಳ ದುಃಖವಾಯಿತು. ಏಕೆಂದರೆ ಅಕ್ಕ ಎಂದರೆ ಅವಳಿಗೆ ಬಹಳ ಪ್ರೀತಿ. ಅಕ್ಕನ ಜೊತೆ ಕಾಲ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತೋಷ. ಅಕ್ಕನ ಜೊತೆ ಕಳೆದ ಕ್ಷಣಗಳು ಅವಳ ಅತ್ಯಂತ ಸಂತೋಷದ ಸಮಯವಾಗಿದ್ದವು. ಕೊನೆಯ ತಂಗಿಯು ಜೊತೆಯಲ್ಲಿಲ್ಲ ಅವಳು ದೂರದ ನವೋದಯ ಶಾಲೆಯಲ್ಲಿ ಓದುತ್ತಿರುವಳು. ವಾರ್ಷಿಕ ರಜೆ ಇದ್ದಾಗ ಮಾತ್ರ ಮನೆಗೆ ಬರುವಳು. ಈಗ ಅಕ್ಕ ಅನಾಥಾಶ್ರಮದ ಮೇಲ್ವಿಚಾರಕಿ ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾಳೆ. ತಾಯಿಯ ಜೊತೆ ಇರುವುದೆಂದರೆ ಅವಳಿಗೆ ಸಂತೋಷದ ವಿಚಾರವೇ, ಆದರೂ ಸಣ್ಣ ವಯಸ್ಸಿನಿಂದ ಅಕ್ಕನ ಜೊತೆ ಅಕ್ಕನ ಪ್ರೀತಿಯಲ್ಲಿ ಕಳೆದ ಅವಳಿಗೆ ಈಗ ಅವಳು ಮತ್ತೆ ದೂರ ಹೋಗುತ್ತೇನೆ ಎಂದಾಗ ಸಂಕಟವಾಯಿತು. ಆದರೂ ಅವಳಿಗೂ ತಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ಕಾರಣ ಏನೂ ಮಾತನಾಡದೆ ಸಮ್ಮತಿ ಸೂಚಿಸಿದಳು. ಸುಮತಿ ಬಂಗಲೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿ, ನನ್ನ ಮಗಳು ಅನಾಥಾಶ್ರಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದಾಳೆ ಎನ್ನುವ ವಿಚಾರವನ್ನು ಅಮ್ಮನಿಗೆ ತಿಳಿಸಿದಳು. ವಿಷಯ ತಿಳಿದು ಅಮ್ಮನಿಗೆ ಸಂತೋಷವಾಯಿತು. ಶಾಲೆ ಪ್ರಾರಂಭವಾಗುವ ಮೊದಲೇ ಆದಷ್ಟು ಬೇಗ ಮುಂದಿನ ವಾರವೇ ಅಲ್ಲಿಗೆ ಹೋಗುವ ತಯಾರಿಯನ್ನು ಮಾಡಿಕೊಳ್ಳಲು ಮಗಳಿಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು.
ಧಾರಾವಾಹಿ ಸಂಗಾತಿ-111 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ವ್ಯವಸ್ಥೆಯಾದ ಮಕ್ಕಳ ಶಿಕ್ಷಣ ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು. “ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು. ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ. “….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು…. ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.
ಧಾರಾವಾಹಿ ಸಂಗಾತಿ-110 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಬದಲಾದ ವಾಸ್ತವ್ಯ ರೈಟರ್ ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು. ಸುಮತಿ ಟೀಚರ್ ಮತ್ತು ಮಕ್ಕಳು ತೋಟದ ದೊಡ್ಡ ಬಂಗಲೆಯ ಹತ್ತಿರವಿರುವ ಮನೆಯ ಕಡೆಗೆ ಪ್ರಯಾಣ ಬೆಳೆಸಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟರು. ತೋಟದ ಲಾರಿಯನ್ನು ತರಿಸಿ, ಕೆಲಸಗಾರರ ಸಹಾಯದಿಂದ ಸುಮತಿಯ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ಸುಮತಿ ವಾಸಿಸಬೇಕಾದ ಮನೆಯ ಬಳಿಗೆ ಕಳುಹಿಸಿಕೊಟ್ಟರು. ಸಾಹುಕಾರರು ಸೂಚಿಸಿದ ಪರಿಹಾರದದಂತೆ ಸುಮತಿ ಮತ್ತು ಮಕ್ಕಳು ದೊಡ್ಡ ತೋಟದ ಬಂಗಲೆ ಹತ್ತಿರ ಇರುವ ಮನೆಯಲ್ಲಿ ಹೊಸದಾಗಿ ವಾಸ್ತವ್ಯ ಹೂಡಿದರು. ಅವರಿಗೆ ಚಿರಪರಿಚಿತವಾದ ಸ್ಥಳವಾಗಿದ್ದ ಕಾರಣ ಅಂತಹಾ ದೊಡ್ಡ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಸುಮತಿ ಪ್ರತಿದಿನವೂ ನಡೆದು ಅದೇ ಶಾಲೆಗೆ ಹೋಗುತ್ತಿದ್ದಳು. ಮಕ್ಕಳಿಬ್ಬರು ಬಿಡುವಿರುವಾಗ ಅಮ್ಮನ ಜೊತೆ ಶಾಲೆಯ ಬಳಿ ತೆರಳುತ್ತಿದ್ದರು. ನವೋದಯ ಶಾಲೆಯಲ್ಲಿ ಓದುತ್ತಿದ್ದ ಕೊನೆಯ ಮಗಳು ಈ ಬಾರಿಯೂ ರಜಕ್ಕೆ ಬಂದಳು. ಹೊಸ ವಾಸ್ತವ್ಯ ಅವಳಿಗೂ ಖುಷಿ ಕೊಟ್ಟಿತು. ಆದರೆ ಮೂವರಿಗೂ ಮೊದಲಿನಂತೆ ಸ್ವಚ್ಛಂದವಾಗಿ ತೋಟವನ್ನು ಸುತ್ತಲು ಸಾಧ್ಯವಿರಲಿಲ್ಲ. ಅಲ್ಲಿನ ಪರಿಸರವೇ ಬೇರೆ ಇಲ್ಲಿನ ಪರಿಸರವೇ ಬೇರೆ. ಎರಡನೇ ಮಗಳು ದ್ವಿತೀಯ ಪಿಯುಸಿಯಲ್ಲಿ, ಮೂರನೇ ಮಗಳು ಹತ್ತನೇ ತರಗತಿಯಲ್ಲಿ ಹಾಗೂ ಮೂರನೇ ಮಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಬೇಕಾಗಿರುತ್ತಿತ್ತು. ಮಕ್ಕಳು ಮೂವರೂ ಓದಿನಲ್ಲಿ ಬಹಳ ಚುರುಕಾಗಿದ್ದುದರಿಂದ ಸುಮತಿಗೆ ಅವರ ವ್ಯಾಸಂಗದ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಬದಲಿಗೆ ತನ್ನ ಮಕ್ಕಳು ಇನ್ನೇನು ಬೆಳೆದು ದೊಡ್ಡವರಾಗಿದ್ದಾರೆ. ಎಲ್ಲರೂ ಸಾಧ್ಯವಾದಷ್ಟು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಗಳಿಗೆ ಸೇರುತ್ತಾರೆ ಎಂಬ ಭರವಸೆ ಇತ್ತು. ಇಬ್ಬರೂ ಹೆಣ್ಣು ಮಕ್ಕಳು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಫೀಸ್ ಹಣವನ್ನು ಭರಿಸುವಂತಿರಲಿಲ್ಲ. ಹಾಗೂ ಇಬ್ಬರೂ ಪಠ್ಯ ವಿಷಯಗಳಲ್ಲಿ ಉತ್ತಮರಾಗಿದ್ದ ಕಾರಣ ಸ್ಪೈಸಸ್ ಬೋರ್ಡ್ ನಿಂದ ಅವರಿಬ್ಬರಿಗೂ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಮೂರನೇ ಮಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ಅವಳ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತಿತ್ತು. ಕಡುಬಡತನದ ಜೀವನವಾದರೂ ಅಮ್ಮ ಮಕ್ಕಳು ಸಂತೋಷದಿಂದಲೇ ಬದುಕುತ್ತಿದ್ದರು. ಈಗೀಗ ಸುಮತಿಗೆ ಕೇರಳದ ತನ್ನ ಮನೆ ಅಪ್ಪ ಅಮ್ಮ, ಅಕ್ಕ, ತಮ್ಮಂದಿರು, ತಂಗಿ ಹಾಗೂ ಸಂಬಂಧಿಕರ ನೆನಪು ಬಹಳವಾಗಿ ಕಾಡುತ್ತಿತ್ತು. ಅಕ್ಕ ಸಕಲೇಶಪುರದಲ್ಲಿ ಇರುವುದರಿಂದ ಗುರುವಾರ ಸಂತೆಗೆ ಹೋದಾಗ ಕೆಲವೊಮ್ಮೆ ಅಕ್ಕನ ಮನೆಗೆ ಹೋಗಿ ಅಕ್ಕನನ್ನು ಕಂಡು ಮಾತನಾಡಿಸಿ ಬರುತ್ತಿದ್ದಳು. ಒಮ್ಮೊಮ್ಮೆ ಸುಮತಿ ಮತ್ತು ಮಕ್ಕಳು ಅವರ ಮನೆಯಲ್ಲಿ ಒಂದು ರಾತ್ರಿ ಕಳೆದು ಮಾರನೇ ದಿನ ತಮ್ಮ ಮನೆಯ ಕಡೆಗೆ ಹೊರಡುತ್ತಿದ್ದರು. ದೊಡ್ಡಮ್ಮನ ಮಕ್ಕಳಲ್ಲಿ ಕಿರಿಯ ಅಣ್ಣ ಎಂದರೆ ಈ ನಾಲ್ಕು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಚಿಕ್ಕಮ್ಮನ ಮಕ್ಕಳನ್ನು ತನ್ನ ಸ್ವಂತ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತ. ಅವರೆಲ್ಲರೂ ಮನೆಗೆ ಬಂದಾಗ ಹತ್ತಿರದಲ್ಲಿಯೇ ಇರುವ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತಿದ್ದ. ಸುಮತಿಯ ತಮ್ಮಂದಿರು ಇಬ್ಬರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹಿರಿಯ ತಮ್ಮ ಹಾಸನದಲ್ಲಿ ವಾಸ್ತವ್ಯವಿರುವಾಗ ಅಪರೂಪಕ್ಕೊಮ್ಮೆ ಅಲ್ಲಿಗೆ ಮಕ್ಕಳೊಂದಿಗೆ ಹೋಗಿ ಬರುತ್ತಿದ್ದಳು. ಈಗ ಅವನು ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಮೇಲೆ ಅವನನ್ನು ಕಾಣುವುದು ಸಾಧ್ಯವಿರಲಿಲ್ಲ. ಏಕೆಂದರೆ ಬೆಂಗಳೂರು ಬಹಳ ದೂರವಿದ್ದುದರಿಂದ ಹಾಗೂ ಅವಳಲ್ಲಿ ಅಷ್ಟೊಂದು ಹಣವಿರದ ಕಾರಣ ಅಲ್ಲಿಗೆ ಹೋಗಿ ತಮ್ಮನನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಚಿಕ್ಕ ತಮ್ಮನೂ ಕೂಡ ಗೊರೂರಿನಿಂದ ಕುಶಾಲನಗರದ ಹತ್ತಿರವಿರುವ ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದ. ಅಮ್ಮ ತೀರಿ ಹೋದ ನಂತರ ಸುಮತಿ ಎಂದಿಗೂ ಕಿರಿಯ ತಮ್ಮನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಿರಿಯ ತಮ್ಮನಿಂದ ಮತ್ತು ಅಕ್ಕನಿಂದ ಅವನ ಯೋಗ ಕ್ಷೇಮದ ವಿಚಾರಗಳು ತಿಳಿಯುತ್ತಿದ್ದವೇ ವಿನಹ ಅವಳೆಂದೂ ಅವನ ಮನೆಗೆ ಹೋಗಿರಲಿಲ್ಲ. ಅವನಿಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರವು ಅಕ್ಕನಿಂದ ಸುಮತಿಗೆ ತಿಳಿದಿತ್ತು. ತನ್ನ ಕಷ್ಟಕರವಾದ ಜೀವನದ ಬಗ್ಗೆ ಅವನಲ್ಲಿ ಹೇಳಿಕೊಳ್ಳಲು ಸುಮತಿಗೆ ಮನಸ್ಸಿರಲಿಲ್ಲ. ಅದೇಕೋ ಇವರಿಬ್ಬರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಲವು ಎಲ್ಲವನ್ನೂ ಬದಲು ಮಾಡಿತ್ತು. ಸುಮತಿಗೆ ಕಿರಿಯ ತಮ್ಮನನ್ನು ನೋಡಲೇಬೇಕು ಎಂಬ ಹಂಬಲವೂ ಹೆಚ್ಚಾಗಿತ್ತು. ಆದರೆ ಮಕ್ಕಳನ್ನು ಕರೆದುಕೊಂಡು ತಾನು ಅವನ ಮನೆಗೆ ಹೋಗುವ ಅವಕಾಶವೇ ಇರಲಿಲ್ಲ. ಏಕೆಂದರೆ ಅವಳಿಗೆ ಬರುವ ಸಂಬಳದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿತ್ತು. ದೊಡ್ಡ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಮಲಯಾಳಿ ಡ್ರೈವರ್ ಕುಟುಂಬದೊಂದಿಗೆ ಸುಮತಿ ಹಾಗೂ ಮಕ್ಕಳು ಹೆಚ್ಚಾಗಿ ಬೆರೆಯಲು ಅವಕಾಶವಾಯಿತು. ಸುಮತಿಯ ಕಷ್ಟ ಸುಖಗಳನ್ನು ಡ್ರೈವರ್ ಹಾಗೂ ಆತನ ಪತ್ನಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಪಡುತ್ತಿರುವ ಕಷ್ಟವನ್ನು ಕಂಡು ಮರುಗಿ ಸಾಹುಕಾರರ (ಪತ್ನಿ) ಅಮ್ಮ ನಲ್ಲಿ ಡ್ರೈವರ್ ಹೇಳಿಕೊಳ್ಳುತ್ತಿದ್ದರು. ಸುಮತಿಯ ಕಷ್ಟವನ್ನು ಅರಿತ ಅಮ್ಮ ಸುಮತಿಯನ್ನು ಕರೆದು ಬಂಗಲಗೆ ಸೇರಿಕೊಂಡಂತೆ ಇದ್ದ ಸಹಕಾರಿ ಅಂಗಡಿಯಿಂದ ತಿಂಗಳಿಗೆ ಒಂದಿಷ್ಟು ರೇಷನ್ ಕೊಡಿಸುವ ವ್ಯವಸ್ಥೆ ಮಾಡಿದರು. ಹಳೆಯದಾದರೂ ಹೊಸದರಂತೆ ಕಾಣುವ ಸೀರೆಗಳನ್ನು ಹಾಗೂ ತನ್ನ ಮಕ್ಕಳ ಬಟ್ಟೆಗಳನ್ನು ಸುಮತಿಯ ಮಕ್ಕಳಿಗೆ ಕೊಡುತ್ತಿದ್ದರು. ಹಾಗಾಗಿ ಬಟ್ಟೆಬರೆಯ ಬಗ್ಗೆ ಚಿಂತಿಸುವ ಅಗತ್ಯ ಸುಮತಿಗೆ ಇರಲಿಲ್ಲ. ಸುಮತಿಯ ಮಕ್ಕಳು ಬುದ್ಧಿವಂತರು ಎನ್ನುವ ವಿಷಯ ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಆ ಮಕ್ಕಳ ಬಗ್ಗೆ ಅಮ್ಮನಿಗೆ ಕಾಳಜಿ ಇತ್ತು. ಸುಮತಿಯ ಮಕ್ಕಳಿಬ್ಬರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರು. ಸುಮತಿ ಈಗೀಗ ಮೊದಲಿಗಿಂತ ನಿತ್ರಾಣಗೊಳ್ಳುತ್ತಿದ್ದಳು. ಗಾಳಿ,ಮಳೆ, ಬಿಸಿಲು ಎನ್ನದೇ ಸುಮಾರು ದೂರವಿದ್ದ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದಳು. ಈಗಿಗ ಅವಳಿಗೆ ಹೆಚ್ಚು ಆಯಾಸವಾಗುತ್ತಿತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಮಕ್ಕಳ ಓದು ಮುಗಿದು ಒಳ್ಳೆಯ ಕೆಲಸ ದೊರಕುವವರೆಗೂ ತಾನು ಹೇಗಾದರೂ ದುಡಿಯಲೇಬೇಕಿತ್ತು.
ಧಾರಾವಾಹಿ ಸಂಗಾತಿ-108 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ “ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು. ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು. ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ? ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು. ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು.
ಅಂಕಣ ಸಂಗಾತಿ ಧಾರಾವಾಹಿಕಂತು=106 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಪಾರಾಗಿ ಬಂದ ಮಕ್ಕಳು ತನ್ನನ್ನು ಬಲವಾಗಿ ಹಿಂದಿನಿಂದ ಹಿಡಿದುಕೊಂಡವನು ಯಾರೆಂದು ಅವಳಿಗೆ ಊಹಿಸಲು ಸಾಧ್ಯವಿರಲಿಲ್ಲ. ಈ ದಿನ ತನಗೆ ಆಪತ್ತು ಖಂಡಿತ ಹಾಗಾಗಿ ಹೇಗಾದರೂ ಮಾಡಿ ಇವನಿಂದ ಬಿಡಿಸಿಕೊಳ್ಳಬೇಕು. ಎಂದು ಮನದಲ್ಲೇ ಅಂದುಕೊಂಡು “ಕೃಷ್ಣಾ ನನಗೆ ಶಕ್ತಿ ಕೊಡು” ಎಂದು ಕೇಳಿಕೊಂಡಳು. ಕೈಯಲ್ಲಿ ಪುಸ್ತಕ ಹಾಗೂ ಮಡಚಿಟ್ಟಿದ್ದ ಕೊಡೆ ಇತ್ತು. ಅವಳು ಪುಸ್ತಕವನ್ನು ಎದೆಗಾನಿಸಿಕೊಂಡು ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ವಸ್ತ್ರವನ್ನು ಧರಿಸಿದ್ದರೂ ಶಲ್ಯವನ್ನು ಹೊದ್ದುಕೊಂಡಿದ್ದರೂ ಕ್ಯಾಮರಾ ಕಣ್ಣುಗಳಿಂದ ವಕ್ಷಸ್ಥಳವನ್ನೇ ದಿಟ್ಟಿಸಿ ನೋಡುವ ಲಂಪಟರ ನೋಟಕ್ಕೆ ಬೇಸತ್ತು ಪುಸ್ತಕವನ್ನು ಎದೆಗವಚಿಕೊಂಡು ನಡೆಯುತ್ತಿದ್ದಳು. ತನ್ನನ್ನು ಬಲವಾಗಿ ಹಿಡಿದುಕೊಂಡವನ ಕರಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕೈಯಲ್ಲಿದ್ದ ಕೊಡೆಯ ಹಿಡಿಯಿಂದ ಬಲವಾಗಿ ಒತ್ತಿದಳು. ಬಹುಶಃ ಆತನಿಗೆ ಹೊಟ್ಟೆಗೆ ಏನೋ ಚುಚ್ಚಿದಂತ ಅನುಭವ ಆಗಿರಬೇಕು ಹಿಡಿತವನ್ನು ಸ್ವಲ್ಪ ಸಡಿಲಿಸಿದ. ಇದು ಗಮನಕ್ಕೆ ಬಂದ ಕೂಡಲೇ ಆ ಹುಡುಗಿ ಹಿಂತಿರುಗಿ ನೋಡದೆ ಮಡಚಿದ್ದ ಕೊಡೆಯನ್ನು ಹಿಡಿದುಕೊಂಡು ಅದರ ಹಿಡಿಯಿಂದ ಮತ್ತೊಮ್ಮೆ ಬಲವಾಗಿ ಹೊಟ್ಟೆಗೆ ಗುದ್ದಿದಳು. ಬಹುಶಃ ಅವಳನ್ನು ಹಿಡಿದುಕೊಂಡಾತ ಹೆಚ್ಚು ಎತ್ತರವಿಲ್ಲದವನಿದ್ದಿರಬೇಕು. ಅವನ ಮರ್ಮಾಂಗಕ್ಕೆ ಕೊಡೆಯ ಹಿಡಿಯ ಹೊಡೆತ ಬಲವಾಗಿ ಬಿದ್ದುದರಿಂದ ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಆತ ಅವಳನ್ನು ಬಿಟ್ಟು ನೆಲದ ಮೇಲೆ ದೊಪ್ಪನೆ ಕುಳಿತುಬಿಟ್ಟ. ಆತನ ಸ್ನೇಹಿತ …”ಏನಾಯ್ತೋ ನಿನಗೆ”….ಎನ್ನುತ್ತಾ ಆತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಟಾರ್ಚ್ ಕೈಯಿಂದ ಕೆಳಗೆ ಬಿದ್ದ ಸದ್ದು ಕೇಳಿಸಿತು. ಕೂಡಲೇ ಆ ಹುಡುಗಿ ಜಾಗ್ರತಳಾಗಿ ಪುಸ್ತಕವನ್ನೆಲ್ಲ ಅಲ್ಲಿ ಬಿಸಾಡಿ ತನ್ನ ತಂಗಿಯ ಕೈ ಹಿಡಿದು ಮಾತಾಡದೆ ಎಳೆದುಕೊಂಡು ನೆಲಗೇಟಿನ ಗ್ರಿಲ್ ಮೇಲೆ ಹೆಜ್ಜೆ ಇಟ್ಟು ವೇಗವಾಗಿ ಓಡಲು ಶುರು ಮಾಡಿದಳು. ತಂಗಿಯು ತನ್ನ ತೋಳಲ್ಲಿದ್ದ ಪುಸ್ತಕದ ಚೀಲವನ್ನು ಕೆಳಗೆ ಬಿಸಾಡಿ ಅಕ್ಕನೊಂದಿಗೆ ಓಡಿದಳು. ಎಲ್ಲಿ ತಮ್ಮ ಹಿಂದೆ ಅವರು ಬರುತ್ತಿವರೋ ಎಂದು ಹೆದರುತ್ತ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಓಡುವ ಪ್ರಯತ್ನವನ್ನು ಮಾಡಿದರು. ಮಣ್ಣಿನ ಕಚ್ಚಾ ದಾರಿಯಲ್ಲಿ ಅಲ್ಲಲ್ಲಿ ಕಲ್ಲುಗಳು ಎದ್ದಿದ್ದವು. ಜೊತೆಗೆ ಕತ್ತಲು ಬೇರೆ, ಓಡುತ್ತಿರುವಾಗ ತಂಗಿ ಎಡವಿ ಬಿದ್ದಳು. ಬಿದ್ದ ತಂಗಿಯನ್ನು ಹಿಡಿದೆತ್ತಿ….”ಬಾ ಆದಷ್ಟು ಬೇಗ ಹೋಗೋಣ ….ಇಲ್ಲದಿದ್ದರೆ ನಮಗೆ ಆಪತ್ತು ಖಂಡಿತ”… ಎಂದಾಗ ಮಂಡಿ ತರಚಿ ಹೆಬ್ಬೆರಳು ಕೂಡ ನೋಯುತ್ತಿದ್ದರೂ ಅಕ್ಕನ ಮಾತಿಗೆ ಸರಿ ಎಂದು ಜೊತೆಗೆ ತಾನೂ ಓಡಿದಳು. ಇಳಿಜಾರು ದಾಟಿದ ನಂತರ ತಿರುವಿನ ಪಕ್ಕದಲ್ಲಿಯೇ ರೈಟರ್ ಮನೆ ಇತ್ತು. ಅಕ್ಕ ಓಡುತ್ತಲೇ ಹೋಗಿ ರೈಟರ್ ಮನೆಯ ಬಾಗಿಲನ್ನು ತಟ್ಟಿದಳು…” ಸರ್ ದಯವಿಟ್ಟು ಬಾಗಿಲು ತೆಗೆಯಿರಿ”… ಎಂದು ಜೋರಾಗಿ ಬಾಗಿಲನ್ನು ಬಡಿದಳು. ಆಗತಾನೆ ರಾತ್ರಿಯ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಕುಳಿತಿದ್ದ ರೈಟರ್ ಬಾಗಿಲು ಜೋರಾಗಿ ಬಡಿಯುವ ಸದ್ದಿಗೆ ಬೇಗನೆ ಬಂದು ಬಾಗಿಲು ತೆರೆದರು. ನೋಡಿದರೆ ಸುಮತಿಯ ಇಬ್ಬರು ಮಕ್ಕಳೂ ಏದುಸಿರು ಬಿಡುತ್ತಾ ನಿಂತಿದ್ದರು. ಬಹಳ ಹೆದರಿದಂತೆ ಕಂಡರು. “ಏನಾಯ್ತು ಮಕ್ಕಳೇ?…. ಯಾಕೆ ಹೀಗೆ ಹೆದರುತ್ತಾ ನಿಂತಿರುವಿರಿ?… ಎಂದು ರೈಟರ್ ಕೇಳಿದಾಗ ಹೇಳಲು ಬಾಯಿ ತೆರೆದಳಾದರೂ ಅವಳಿಂದ ಮಾತು ಬರಲಿಲ್ಲ ಬಾಯಿ ಒಣಗಿ ಹೋಗಿತ್ತು. ಅದನ್ನರಿತ ರೈಟರ್ ತನ್ನ ಪತ್ನಿಯನ್ನು ಕೂಗಿ ಸ್ವಲ್ಪ ನೀರು ತೆಗೆದುಕೊಂಡು ಬಾ ಎಂದು ಹೇಳಿದರು. ಒಂದು ಗುಟುಕು ನೀರು ಕುಡಿದ ಹುಡುಗಿ ನಡುಗುತ್ತಲೇ ಎಲ್ಲಾ ವಿವರವನ್ನು ತಿಳಿಸಿದಳು. ತಂಗಿಯು ಹೆದರಿ ಗಾಬರಿಯಿಂದ ನಿಂತಿದ್ದಳು ಜೊತೆಗೆ ಅವಳಿಗೆ ಕಾಲು ಕೂಡ ತುಂಬಾ ನೋಯುತ್ತಿತ್ತು. ಸುಮತಿಯ ಮಗಳ ಮಾತನ್ನು ಆಲಿಸಿದ ರೈಟರ್ ಒಳಗೆ ಹೋಗಿ ಟಾರ್ಚ್ ತಂದು…”ನಡೆಯಿರಿ ಮಕ್ಕಳೇ ನಾನು ನಿಮ್ಮ ಜೊತೆ ಬರುತ್ತೇನೆ…. ನೋಡೋಣ ನೆಲಗೀಟಿನ ಬಳಿ ಯಾರಿದ್ದರೆ ನೋಡೋಣ?….. ಎಂದು ಹೇಳುತ್ತಾ ಮಕ್ಕಳ ಜೊತೆ ಅವರು ಅಲ್ಲಿಯವರೆಗೆ ಹೋದರು. ಅಲ್ಲಿ ಯಾರೂ ಇರಲಿಲ್ಲ. ಬಹುಶಃ ತಮ್ಮಿಂದ ಬಿಡಿಸಿಕೊಂಡು ಓಡಿದ ಮಕ್ಕಳು ಯಾರನ್ನಾದರೂ ಕರೆದುಕೊಂಡು ಬರಬಹುದು ಎನ್ನುವ ಅರಿವಿದ್ದುದರಿಂದ ಅವರಿಬ್ಬರೂ ಅದಾಗಲೇ ಅಲ್ಲಿಂದ ಹೊರಟಿದ್ದರು. ಮಕ್ಕಳ ಪುಸ್ತಕ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಎಲ್ಲಾದರೂ ತೋಟದೊಳಗೆ ಅಡಗಿ ಕುಳಿತಿರಬಹುದು ಎನ್ನುವ ಗುಮಾನಿಯಿಂದ ರೈಟರ್ ಒಂದಷ್ಟು ದೂರದವರೆಗೂ ಟಾರ್ಚ್ ಲೈಟ್ ಹಾಕಿ ಹುಡುಕಿದರು. ಅಲ್ಲಿ ಯಾರೂ ಇರಲಿಲ್ಲ. ಮಕ್ಕಳಿಗೆ ಧೈರ್ಯ ಹೇಳುತ್ತಾ ಜೊತೆಗೆ ಕರೆದುಕೊಂಡು ಮನೆಯ ಕಡೆಗೆ ಹೊರಟರು. ರೈಟರ್ ಮನೆಯ ಒಂದು ತಿರುವಿನ ನಂತರವೇ ಸುಮತಿ ವಾಸಿಸುತ್ತಿದ್ದ ಮನೆ ಇದ್ದಿದ್ದು. ಹಾಗಾಗಿ ಮಕ್ಕಳು ರೈಟರ್ ರವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟರು. ಅಕ್ಕ ತಂಗಿಯರಿಬ್ಬರೂ ಆತಂಕದಲ್ಲಿದ್ದರು. ಯಾವುದೋ ಒಂದು ದುರ್ಘಟನೆಯಿಂದ ಕೂದಲೆಳೆಯಲ್ಲಿ ಪಾರಾದ ಸಮಾಧಾನವೂ ಇತ್ತು. ಮಕ್ಕಳು ಇಷ್ಟೊತ್ತಾದರೂ ಮನೆಗೆ ಬರದ ಕಾರಣ ಸುಮತಿ ಮನೆಯಿಂದ ಆಚೆ ಬಂದು ನಲ್ಲಿಯ ಕಟ್ಟೆಯ ಬಳಿ ನಿಂತು ದಾರಿಯೆಡೆಗೆ ನೋಡುತ್ತಿದ್ದಳು. ಎರಡು ನೆರಳು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಅಕ್ಕ-ತಂಗಿಯರಿಬ್ಬರು ದಾರಿಯಲ್ಲಿ ನಡೆದು ಬರುವಾಗ ನಗುತ್ತಾ, ತಮಾಷೆ ಮಾಡುತ್ತಾ ಬರುವವರು, ಇಂದು ಮೌನವಾಗಿ ನಡೆದು ಬರುತ್ತಿದ್ದರು. ಅವರ ಮೌನವನ್ನು ನೋಡಿ ಸುಮತಿ ತಾನು ಒಂದೆರಡು ಹೆಜ್ಜೆ ಮುಂದೆ ನಡೆದಳು. ಕತ್ತಲಿನಲ್ಲೂ ಅಮ್ಮನ ಆಕೃತಿ ಮಕ್ಕಳಿಗೆ ಗೋಚರಿಸಿತು. ಇಬ್ಬರೂ ಓಡೋಡಿ ಬಂದು ಅಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡರು. ಮಕ್ಕಳ ಈ ಚರ್ಯೆ ಸುಮತಿಗೆ ಹೊಸದೆನಿಸಿತು. ಅವ್ಯಕ್ತ ಭಯವೊಂದು ಮನವನ್ನು ಕಾಡಿ ಗಾಬರಿಯಾದಳು….”ಏನಾಯ್ತು ಮಕ್ಕಳೇ, ಏಕೆ ಇಂದು ಇಷ್ಟು ಮೌನವಾಗಿದ್ದೀರಿ?!!.. ಎಂದು ಕೇಳಿದಾಗ ಎರಡನೇ ಮಗಳು ಸಣ್ಣಗೆ ಬಿಕ್ಕುತ್ತಿರುವುದು ಸುಮತಿಯ ಅರಿವಿಗೆ ಬಂತು. ಅವಳ ಬಿಕ್ಕುವಿಕೆ ಕೇಳಿ ಸುಮತಿಯ ಹೃದಯ ಸಣ್ಣಗೆ ನಡುಗಿತು. ಮೂರನೇ ಮಗಳು….,”ಅಮ್ಮಾ ಕಾಲು ನೋಯುತ್ತಿದೆ…. ನಡಿ ಬೇಗ ಮನೆಗೆ ಹೋಗೋಣ…. ಅಲ್ಲಿ ಹೋಗಿ ಮಾತನಾಡೋಣ”…. ಎಂದಳು. ಮಕ್ಕಳು ದಾರಿಯಲ್ಲಿ ಬಿದ್ದಿರಬಹುದು. ಹೆಚ್ಚು ಪೆಟ್ಟಾಗಿರಬಹುದು. ಹಾಗಾಗಿ ಎರಡನೇ ಮಗಳು ಬಿಕ್ಕುತ್ತಿರಬಹುದು. ಎಂದು ತಿಳಿದ ಸುಮತಿ….. “ಬನ್ನಿ ಮಕ್ಕಳೇ, ಅಡುಗೆ ಮಾಡಿದ್ದೇನೆ ಬಿಸಿಯಾದ ಊಟವನ್ನು ತಿನ್ನುವಿರಂತೆ”….ಎಂದು ಮೂರನೇ ಮಗಳ ಕೈ ಹಿಡಿದು ನಿಧಾನವಾಗಿ ಮೆಟ್ಟಲುಗಳನ್ನು ಇಳಿದಳು. ಎರಡನೇ ಮಗಳು ಬಿಕ್ಕುತ್ತಲೇ ಅವರಿಬ್ಬರನ್ನು ಹಿಂಬಾಲಿಸಿದಳು.
ರುಕ್ಮಿಣಿ ನಾಯರ್ ಅವರ ಧಾರಾವಾಹಿಯ104 ನೆ ಕಂತು
ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
