ಮೊದಲ ಕವಿತೆಯ ರೋಮಾಂಚನ
ವಸುಂದರಾ ಕದಲೂರು

‘ಸಂಗಾತಿ’ ಬರಹಗಾರರನ್ನು ತಮ್ಮ ಮೊದಲ ಕಾವ್ಯದ ಹುಟ್ಟನ್ನು ಕುರಿತು ಬರೆಯುವಂತೆ ಪ್ರೇರೇಪಿಸಿದೆ. ಎಲ್ಲರೂ ಅಂದದ ತೊಟ್ಟಿಲೊಳಗೆ ಮಲಗಿ ನಿದ್ರಿಸುವ ತಮ್ಮ ಮುದ್ದಿನ ಮಗುವನ್ನು ಜತನದಿಂದ ಮೇಲೆತ್ತಿ ಮುದ್ದು ಮಾಡಿ ಓಲೈಸಿ ಆಡಿಸುವಂತೆ ಮೊದಲ ಕವನದ ನವಿರು ನೆನಪುಗಳನ್ನು ಕುರಿತು ಹೇಳುತ್ತಿದ್ದಾರೆ. ಓದಲು ಬಹಳ ಖುಷಿ ಎನಿಸುತ್ತದೆ.
ಹಳೆಯದನ್ನು ನೆನೆದು ಬರೆಯುವುದು ಆ ಕ್ಷಣದ ಮಟ್ಟಿಗೆ ಒಂದು ಆನಂದ ಲಹರಿಯೇ..
ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಸಾಹಿತ್ಯ ಪ್ರಿಯರು. ಮನೆಗೆ ತಪ್ಪದೇ ಮಯೂರ, ಸುಧಾ, ತರಂಗ, ಪ್ರಜಾವಾಣಿ ಬರುತ್ತಿದ್ದವು. ಮನೆಮಂದಿಯೆಲ್ಲಾ ಪೈಪೋಟಿ ಮೇಲೆ ಅವುಗಳನ್ನು ಓದುತ್ತಿದ್ದೆವು. ಬಾಲಮಂಗಳ, ಚಂದಾಮಾಮದ ಖಾಯಂ ಓದುಗರು ನಾವು(ಅಕ್ಕ, ಅಣ್ಣ ಮತ್ತು ನಾನು). ನಾನಂತೂ ಮಿಡ್ಲ್ ಸ್ಕೂಲ್ ಇದ್ದಾಗಲೇ ಪಠ್ಯಪುಸ್ತಕದ ನಡುವಲ್ಲಿ ಮರೆಮಾಡಿಕೊಂಡು ಸುಧಾ,ಮಯೂರದ ಕತೆಗಳನ್ನು ಓದಿ ವಿಸ್ಮಯ ಪಡುತ್ತಿದ್ದೆ.
ನಾನು ಯಾವಾಗ ಬರೆದೆನೋ ನಿಶ್ಚಿತವಾಗಿ ಗೊತ್ತಿಲ್ಲ. ಆದರೆ ‘ನಾನೂ ಬರೆಯಬಲ್ಲೆನೆ!?’ ಎಂಬ ಯಾವ ಶಂಕೆ ಸಂದೇಹಗಳೂ ನನಗೆ ಇರಲಿಲ್ಲ ಎಂದು ಕಾಣುತ್ತದೆ. ಜಂಭ ಇವಳಿಗೆ ಎನಿಸುವಂತೆ ಇತರರಿಗೆ ಕಾಣುವ ನಾನು ಸ್ವಲ್ಪ ಹೆಚ್ಚೇ ಎನಿಸುವ ಆತ್ಮವಿಶ್ವಾಸದ ಹುಡುಗಿ. ಅದೇನು ಹುಕಿ ಹುಟ್ಟಿತೋ ಹೇಗೆ ಹುಟ್ಟಿತೋ ಗೊತ್ತಿಲ್ಲ. ಅಂತೂ ನಾನೂ ಬರೆಯುವುದಕ್ಕೆ ಶುರು ಮಾಡಿದೆ. ಬರೆದ ಮೇಲೆ ಸುಮ್ಮನಿರೋದು ಹೇಗೆ? ಮನೆಯಲ್ಲಿ ಅಮ್ಮ ನನ್ನ ಬೆಸ್ಟ್ ಫ್ರೆಂಡ್. ಅವರ ಮುಂದೆ ನಾನು ಬರೆದುದನ್ನು ಓದಿ ಹೇಳುವುದು ಸ್ನೇಹಿತರ ಮುಂದೆ ಓದುವುದು ಮಾಡುತ್ತಿದ್ದೆ.
ನಾಕಾರು ಸಾಲು ಪದ್ಯ ಬರೆದುದನ್ನೇ ದೊಡ್ಡದು ಮಾಡಿದ ಗೆಳತಿಯರು ನನ್ನನ್ನು ‘ಕನ್ನಡ ಪಂಡಿತೆ’ ಎಂದು ಕರೆಯಲು ಶುರು ಮಾಡಿಬಿಟ್ಟರು.. ಆಗೆಲ್ಲಾ ಎಷ್ಚು ಖುಷಿಯಿಂದ ಬೀಗುತ್ತಿದ್ದೆ…! ಅವರು ನನ್ನನ್ನು ಗೇಲಿ ಮಾಡಿರಬಹುದೇ..?! ಇರಲಿ ಬಿಡಿ, ಆಗಂತೂ ಬಹಳ ಅಭಿಮಾನದಿಂದ ಬೀಗಿದ್ದೆ. ಬರೆಯುತ್ತಿದ್ದೆ. ಹಾಗೆ ಬರೆದುದನ್ನು ಅಪ್ಪ ಅಮ್ಮನಿಗೆ, ಗೆಳೆಯರಿಗೆ, ಶಿಕ್ಷಕರಿಗೆ ತೋರುತ್ತಿದ್ದೆ. ಖುಷಿಪಡುತ್ತಿದ್ದೆ.
ಎಲ್ಲರೂ ಏನೋ ಬರೆಯುತ್ತೆ ಹುಡುಗಿ, ಬರೆಯಲಿ ಬಿಡು ಎಂದುಕೊಳ್ಳುತ್ತಿದ್ದರೇನೋ.. ಇದೆಲ್ಲಾ ನಡೆದದ್ದು ನಾನು ಆರು ಏಳನೆಯ ತರಗತಿಯಲ್ಲಿದ್ದಾಗ. ಆದರೆ ಹಳ್ಳಿಗಳ ತೆಕ್ಕೆಯಿಂದ ಪಟ್ಟಣದ ಮಡಿಲಿಗೆ ಬಿದ್ದಾಗಲೇ ಗೊತ್ತಾದದ್ದು ನಗರವಾಸಿಗಳು ಬಹಳ ಹುಶಾರಿಗಳೆಂದು. ಅವರು ಬಹಳ ಚೆನ್ನಾಗಿ ಓದುತ್ತಾರೆ ಮತ್ತು ಬರೆಯುತ್ತಾರೆಂದು!! ಪಟ್ಟಣದ ಶಿಸ್ತಿನ ಶಾಲೆ, ಪಠ್ಯಕ್ರಮ, ಜೀವನ ವಿಧಾನ ಕಂಡು ನಾನು ದಂಗಾದೆ. ಆದರೆ ಅಂತಹ ಸಂದರ್ಭದಲ್ಲೂ ನನ್ನನ್ನು ಕಳವಳಗೊಳ್ಳದಂತೆ, ಕಳೆದು ಹೋಗದಂತೆ ಕಾಪಾಡಿದ್ದು ನಾನು ಬರೆಯುವ ನಾಲ್ಕಾರು ಸಾಲುಗಳೇ. ಇಲ್ಲಿಯೂ ಅದು ನನ್ನ ‘ಕನ್ನಡ ಪಂಡಿತೆ’ಯ ಸ್ಥಾನವನ್ನು ಗಟ್ಟಿಗೊಳಿಸಿತು.
೧೯೯೫ ರಿಂದ ನಾನು ಬರೆದುದನ್ನೆಲ್ಲಾ ದಿನಾಂಕವನ್ನು ನಮೂದಿಸುತ್ತಾ ಒಂದು ಡೈರಿಯಲ್ಲಿ ಬರೆದಿಡುತ್ತಾ ಬಂದೆ. ಆ ಮುಂಚೆ ಬರೆದುದು ಏನಾಯಿತೋ ಗೊತ್ತಿಲ್ಲ. ಆದರೆ ಹಾಗೆ ೧೯೯೫ರಿಂದ ಬರೆದಿಟ್ಟ ಡೈರಿ ನನ್ನ ಬಳಿ ಈಗಲೂ ಇದೆ. ಪುಸ್ತಕದ ಹಲವು ಪುಟಗಳು ಬಿಡಿಬಿಡಿಯಾಗಿ ಬಿಡಿಸಿಕೊಂಡಿವೆ. ಅದರಲ್ಲಿನ ಸಾಲುಗಳನ್ನು ಈಗ ಓದುವಾಗ ಬಾಲಿಶವೆನಿಸಿದರೂ ನನಗೆ ಅಪಾರ ಸಂತಸವನ್ನು ನೀಡುತ್ತವೆ.
ನಾನು ಬರೆದ ಕವನಗಳೆಲ್ಲಾ ಸಾಮಾನ್ಯವಾಗಿ ಪುಟ್ಟ ಸಾಲುಗಳುಳ್ಳವು. ಅದರಲ್ಲೂ ಚುಟುಕು ಗಳೇ ಹೆಚ್ಚಿದ್ದವು. ಸಮಕಾಲೀನ ಸನ್ನಿವೇಶಗಳನ್ನು ಗಮನಿಸಿ ಬರೆದಂತಹವು.
ಒಂದೆರಡು ಉದಾರಹಣೆ ನೀಡುವೆ.
೧. ‘ಯಾಕೆ!?’
ಪುಟ್ಟನಿಗೆ ಹೇಳಿದರು ಅವರಪ್ಪ
ಆಗೋ ನೀ ಪುಟ್ಟ ಪೋಲಿಸಪ್ಪ
ಪುಟ್ಟ ಹೇಳಿದ ನಾ ಪೋಲಿಸ್* ಆಗಲ್ಲಪ್ಪ
ಯಾಕೋ? ಕಮಂಗಿ ಎಂದರವರಪ್ಪ
ಅದಕೆ ಹೇಳಿದ ಪುಟ್ಟಪ್ಪ
ಇನ್ನೂ ಇರುವನು ‘ವೀರಪ್ಪ’ನ್
(ವೀರಪ್ಪನ್ ಪೊಲೀಸರನ್ನು ಅಪಹರಿಸಿದ ಸಂದರ್ಭಕ್ಕೆ ಬರೆದದ್ದು. ೨೬/೧೧/೯೫ ರಲ್ಲಿ ಬರೆದ ಕವಿತೆ.)
* ‘ಪೊಲೀಸ್’ ಎಂಬುದು ಸರಿಯಾದ ಬಳಕೆ ಆದರೆ ಆಗ ನನಗಿದ್ದ ತಿಳುವಳಿಕೆಗೆ ನಾನು ಪೋಲಿಸ್ ಪದ ಬಳಸಿರುವೆ.
೨. ‘ಪ್ರಧಾನಿ’
ನಲ್ಲೆಗೆ ಹೇಳಿದ ನಲ್ಲ
ನಡೆದು ಬಾ ನೀ ಮೆಲ್ಲ- ನೆ
ನಸುಗೋಪದಿ ನುಡಿದಳು ನಲ್ಲೆ
ನಾನೇನು ಪ್ರಧಾನಿ ಅಲ್ಲ
( ಇದು ೨೭/೦೧/೯೬ ರಲ್ಲಿ ಬರೆದ ಕವಿತೆ. ಶ್ರೀ ಪಿ. ವಿ. ಎನ್. ಆಗ ನಮ್ಮ ಪ್ರಧಾನಿಗಳಾಗಿದ್ದರು. ‘ನಿಧಾನವೇ ಪ್ರಧಾನ’ ಎಂಬ ಧ್ಯೇಯವನ್ನು ಪತ್ರಿಕೆಗಳು ‘ನಿಧಾನವೇ ಪ್ರಧಾನಿ’ ಎಂದು ಬರೆದು ಗೇಲಿ ಮಾಡುತ್ತಿದ್ದವು. ಅದರ ಪ್ರತಿರೂಪ ಈ ಚುಟುಕ.)
ಹೀಗೆ ಮೊದಲ ಕವನಗಳನ್ನು ಕುರಿತು ಹಿಂದಿರುಗಿ ನೋಡಿದಾಗ ಈಗ ‘ಅಯ್ಯೋ ಹೀಗೆಲ್ಲಾ ಬರೆದಿರುವೆನಾ?!’ ಎಂದು ಅಚ್ಚರಿಯ ಪ್ರಶ್ನೆ ಮೂಡುತ್ತದೆಯೇ ಹೊರತು, ಅದರ ಹೊರತಾಗಿ ಹೀಗೆಲ್ಲಾ ಪೆದ್ದುಪೆದ್ದಾಗಿ ಬರೆದಿರುವೆನಲ್ಲಾ ಎಂದು ಯಾವತ್ತಿಗೂ ನಾಚಿಕೆ ತರಿಸಿಲ್ಲ. ಏಕೆಂದರೆ ಬರೆಯುವುದು ನನಗೆ ಎಂದಿಗೂ ಅಪರಾಧ ಎನಿಸಿಯೇ ಇಲ್ಲ.
ಹೀಗೆ ಹಳೆಯ ನೆನಪು ಮರಳಿಸಿ ಕೊಟ್ಟ ‘ಸಂಗಾತಿ’ಗೆ ಧನ್ಯವಾದಗಳು.
*************************
ಕನ್ನಡ ಪಂಡಿತೆಯವರ ಆರಂಭದ ಚುಟುಕುಗಳಾದ ಯಾಕೆ? ಮತ್ತು ಪ್ರಧಾನಿ ಮಜವಾಗಿವೆ. ಬರೀತಾ ಇರಿ ಇನ್ನಷ್ಟು. ನಿಮ್ಮ ಕವನ ಸಂಕಲನ ತುಂಬ ಚೆನ್ನಾಗಿದೆ.
ಡಾಕ್ಟ್ರೇ… ಬಹಳ ಧನ್ಯವಾದಗಳು. ನಾನು ನಿಮ್ಮಷ್ಟು ಚೆಂದ ಬರೆಯಲಾರೆ.
ನಿಜಕ್ಕೂ ನೀನು ಕನ್ನಡ ಪಂಡಿತೆಯೇ. ನಿನ್ನ ಬರೆಯುವ ವೇಗಕ್ಕೆ ನಾನು ಓಡಿಕೊಂಡೂ ಓದಿ ಮುಗಿಸಲಾರೆ.ಅಭಿನಂದನೆ ಗೆಳತಿ.ನಿನ್ನ ಆತ್ಮವಿಶ್ವಾಸವೇ ನಿನ್ನ ಕೈ ಹಿಡಿದು ಬರೆಯಿಸುತ್ತಾ ಇಷ್ಟು ದೂರ ಕರೆದುಕೊಂಡು ಬಂದಿದೆ.ಬರೆಯುತ್ತಲೇ ಇರು.ಓದುವ ಸುಖ ನಮ್ಮದಾಗಲಿ..ಬರಹ ಆಪ್ತವಾಗಿದೆ ವಸುಂಧರಾ
ಸ್ಮಿತಾ… ನಿಮ್ಮ ನಿಷ್ಕಲ್ಮಶ ಪ್ರೀತಿ- ಸ್ನೇಹಕ್ಕೆ
ನಾನು ಬಲ್ಲೆ ನೀವು ಆತ್ಮವಿಶ್ವಾಸದ ಹುಡುಗಿ ಎಂದು , ಈ ಅನುಭವ ಆಗಿದ್ದು ಪ್ರಥಮ ಎಂ ಎ ಪ್ರಥಮ ತರಗತಿಯಲ್ಲಿ ಎಲ್ಲಾರು ತಮ್ಮ ತಮ್ಮ ಪರಿಚಯ ಮಾಡಿಕೊಂಡರು , ತಮ್ಮ ಸರದಿ ಬಂದಾಗ ನೀವು ನಗುತ್ತಾ ಡಯಾಸ್ ಹತ್ತಿರ ಬಂದು ಹರಳು ಉರಿದಂತೆ ಪಟಪಟನೆ ಮಾತಾಡಿ ನಿಮ್ಮ ಕನಸುಗಳನ್ನು ಶುದ್ಧ ಕನ್ನಡದಲ್ಲಿ ಮಾತಾಡಿದಿರಿ ಇನ್ನೂ ಅದು ನನಗೆ ನೆನಪಿದೆ ,ಗುಂಗರು ಕೂದಲಿನ ಡೀಸೆಂಟ್ ಮಾತುಗಾರ್ತಿ ಅಂದು ಕೊಂಡೆ ಅಷ್ಟೇ ಅಲ್ಲ ನೀವು ಅಂದು ನಿಮ್ಮ ಕನಸುಗಳನ್ನು ಹೇಳಿಕೊಂಡಾಗ ಕೊಂಚ ಅತಿ ಎನಿಸಿತು , ,ಆದರೆ ಅಂದು ಕೊಂಡಿದ್ದನ್ನ ಮಾಡಿ ತೋರಿಸಿ ಎಲ್ಲರಂತಲ್ಲ ವಸುಂಧರ ಎಂದು ಸಾಧಿಸಿ ತೋರಿಸಿದಿರಿ , ನಿಮ್ಮ ಹೀಗಿನಇರು ವಿಕೆಯೇ ನಿಮ್ಮ ಹಿರಿತನಕ್ಕೆ ನಿಮ್ಮ ಹೃದಯ ಶ್ರೀಮಂತಿಕೆಗೆ ನನ್ನ ನಮನಗಳು .
ನೀವು ನನ್ನ ಸಹಪಾಠಿ ಮಿತ್ರರಾಗಿರುವುದು ನನಗೆ ಬಹಳ ಸಂತೋಷದ ವಿಚಾರ. ನಮ್ಮ ಸ್ನೇಹ- ಹೀಗೆಯೇ ಹಸಿರಾಗಿರಲಿ.
Mad only
I’m mad reading your sonnet’s ..they took back me to my childhood.. really appreciate your writings..keep up the spirit and do contribute more to our Kannada Literature.
Lots of love from America
Thank you
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕೂ ಮರೆಯದ ನೆನಪು
ಮೊದಮೊದಲ್ ಕಲಿಸಿದ ಕಮಲಾ ಟೀಚರ್
ಮೊದಮೊದಲ್ ಕಂಡ ಕಲರಕಲರ್ ಸಿನೆಮಾ
ಹೀಗೆ ಮೊದಲ ಕೆಲಸದ ನೆನಪು ಸದಾ ಹಚ್ಚಹಸಿರಾಗಿತ್ತದೆ.
ಹಾಗೆ ತಮ್ಮ ಮೊದಲ ಕವಿತೆಯ ನೆನಪು ಚಿರಾಯು.
ಈ ವರ್ಷಕ್ಕೆ ಅದಕ್ಕೆ ೨೫ ರ ಪ್ರಾಯ.ತಮ್ಮ ಸಾಹಿತ್ಯ ಸೇವೆ ಮುಂದೆ ಸಾಗಲಿ.
ಬಹಳ ಧನ್ಯವಾದಗಳು..