ಹೂಗಳು ಅರಳುವ ಸಮಯ :

ಮೊದಲ ಕವಿತೆಯ ರೋಮಾಂಚನ

ಅನುಪಮಾ ತುರುವೇಕೆರೆ

Book: chapter six

ನನ್ನ ಜನ ಈಗ ನಿರಾಶ್ರಿತರು ಮತ್ತೊಮ್ಮೆ

ಸಾಗಬೇಕು ಈ ದಾರಿಯಲ್ಲಿ ?
ಪಯಣವನ್ನು ಇನ್ನೆಷ್ಟು ಸಾಗಿಸಬೇಕು!
ಹಸಿವಿನ ಸಮುದ್ರವ ಬೆನ್ನಲಿ ಕಟ್ಟಿ
ನಿರಾಸೆಯ ಕಾಂತಾರವ ಕಣ್ಣೊಳಗೆ ಬಂಧಿಸಿ
ನಡೆಯುತ್ತಲೇ ಇದ್ದಾರೆ ನನ್ನ ಜನ
ಊರಿಂದ ಪೇಟೆಗೆ ಅನ್ನಬಯಸಿ
ಪೇಟೆಯಿಂದ ಊರಿಗೆ ಜೀವ ಬಯಸಿ

ಆಶ್ರಯದ ಭರವಸೆಗಳ ಹೆಣಗಳು
ಹೇಷಾರವ ಮಾಡುತಿವೆ
ಮಹಲಿನ ಸ್ಮಶಾನಗಳಲಿ
ಅಲ್ಲಿ ಚಿಗುರಿದ ಗರಿಕೆ ನನ್ನ ಜನ
ಹೆದರಿಕೆಯ ನಲ್ಲೆಯನು ಮುದ್ದಿಸುತ
ಸಾಗುತ್ತಲೇ ಇದ್ದಾರೆ.

ಬಾಗಿದ ಬೆನ್ನಲಿ
ಶತಮಾನದ ನೋವ ಹೊತ್ತವರು
ಮಣ್ಣ ಕಣದೊಳಗೆ ಕಣ್ಣ ಕಣವನು ಕಂಡ
ಎರೆಯಹುಳದಂತೆ
ಹಸುರೊಳಗೆ ಪತ್ರಹರಿತ್ತುವಿನಂತೆ
ಸಮ್ಮಾನವ ಬಯಸದ ನನ್ನ ಜನ
ನಿರಾಶ್ರಿತರು ನಿರಾಸೆಯ ಮಕ್ಕಳು

ನೀರು ಬಾಯಾರಿದ ಹೊತ್ತಲ್ಲಿ
ಬಯಲಿಗೆ ಬೆವರ ಬಸಿದು ನಗಿಸಿದವರು
ಗಾಳಿ ನಿತ್ರಾಣವಾದ ಗಳಿಗೆಯಲಿ
ಮಾರುತದಂತೆ ಆವರಿಸಿ ಗಿಡಮರಗಳ ಸಂತೈಸಿದರು
ಭೂಮಿಯ ಮೈಯ ಕೊಳೆಯನ್ನ
ಭಕ್ತರು ಮಾಡುವ ನೇಮದಂತೆ ಬಾಚಿ ಬಳಿದವರು

ನಿಲ್ಲದ ಪಯಣದಲಿ ದಾರಿಯ ಒಂಟಿತನ ನೀಗಿ
ಗಿಡಗೆಂಟೆಗಳ ಹಾಡಿಗೆ ಹೆಜ್ಜೆಯಾದವರು
ನನ್ನ ಜನ ಈಗ ಮತ್ತೊಮ್ಮೆ ನಿರಾಶ್ರಿತರು

ಈ ಕವಿತೆಯು ನನ್ನ ಬಾಲ್ಯದ ಗೆಳತಿ.ಶಾಲಾ ದಿನಗಳಿಂದ ಲೇ ಅವಳು ನನ್ನ ಎದೆಯೊಳಗೆ ಸೇರಿ ಪಲ್ಲವಿಸುತ್ತಿದ್ದಳು. ನಾನು ಬೆಳೆದ ಪರಿಸರದಲ್ಲಿ ಕನ್ನಡದ ನುಡಿಗಟ್ಟುಗಳು, ಜನರಾಡುವ ಮಾತಿನ ಲಯಗಳು ಎಲ್ಲವೂ ಸೇರಿ ಪದಗ ಳು ಜೀವ ತಳೆದು,ಹೊಚ್ಚ ಹೊಸಬಳಾದ ಕವಿತೆ ನನ್ನ ಸಂಗಾತಿಯಂತೆ ಕಾಲೇಜಿಗೆ ಬಂದಾಗಲೂ ನನ್ನೊಳಗೆ ಪ್ರೌಢವಾಗುತ್ತ ಬಂದವಳು.

ಆದರೆ ಎಂದು ಅಕ್ಷರ ರೂಪದಲ್ಲಿ ನನ್ನ ಭಾವನೆಗಳಿಗೆ ಸಾಕ್ಷಿಯಾದವಳಲ್ಲ. ಆದರೆ ಜಗತ್ತನ್ನೇ ತಲ್ಲಣಗೊಳಿಸಿದ ಮಾರಣಾಂತಿಕ ರೋಗ ಕೊರೋನಾ ಸಮಯದಲ್ಲಿ ಖಾಲಿಯಾಗಿ ಕೂತ ಮೆದುಳಿಗೆ ಈ ನನ್ನೊಳಗಿನ ಕವಿತೆ ಮಿಡಿದಳು. ಭಯ,ಆತಂಕಗಳ ನಡುವೆಯೂ ಅಕ್ಷರಗಳ ಕಟ್ಟುವ ಅನಿವಾರ್ಯತೆ ನನಗೂ ಬಂದಿತು.ಮೊದಮೊದ ಲು ನಡೆದ ಸತ್ಯಘಟನೆಗಳನ್ನು ಬರೆಯುವುದು ನನಗೆ ಅನಿವಾರ್ಯವಾಗಿತ್ತು.ಏಕೆಂದರೆ ಕಾವ್ಯದ ದನಿ ಅದು ಎದೆಯ ದನಿಯಾಗಿತ್ತು.ಆದರೆ ಬರೆಯುವಾಗ ಮೂಡಿದ ಹೊಸ ಚೈತನ್ಯ ಪದಗಳಿಂದ ಹೊರ ಹೊಮ್ಮಿದ ಅರ್ಥಶಕ್ತಿ, ಇವುಗಳನ್ನು ನಾನೇ ಬರೆದೆನೆ ಎನ್ನುವಷ್ಟು ಆಹ್ಲಾದಕರ ಅನುಭವ ನನಗಾಗುತ್ತಿತ್ತು.ಆ ಮೊದಲ ಪದದಿಂದ ಬಂದ ಸ್ಪೂರ್ತಿ ಈಗಲೂ ಆ ನನ್ನೊಳಗಿನ ಗೆಳತಿ ಕಾವ್ಯಳನ್ನು ಸಶಕ್ತಳನ್ನಾಗಿ ಮಾಡುತಿದೆ. ಮೊದಲ ಬರವಣಿಗೆ ಆ ನನ್ನ ಪುಳಕಿತ ಭಾವವೇ ನನ್ನೊಳಗಿನ ಆ ಬೆಳೆದ ಕಾವ್ಯ–ಕವಿತೆ ಯಾದಳು ಹಾಡಾದಳು.

ಲೇಖನಿ ಹಿಡಿದು ಕುಳಿತರೇ ಆ ಮೊದಲ ಅನುಭವದ ಸ್ಪೂರ್ತಿ ಬದಲಾಗುತ್ತಿಲ್ಲ. ಹೀಗೆ ಮನವನ್ನು ಮುದಗೊಳಿಸಿ ಕವಿತೆಗಳ ಕಟ್ಟುಲು ಅಣಿಗೊಳಿಸಿದ ಆ ಮೊದಲ ಅನುಭ ವಕೆ ನನ್ನದೊಂದು ಮನವಿ.ಮೊದಲ ದಿನ ಇದ್ದ ಆ ಹುರು ಪು ಆಹ್ಲಾದತೆ ಹಾಗೆಯೇಇರಲಿ ಎಂದು ಕೇಳುವೆ.

ಮೊದಲ ಕವನದ ಅನುಭವ ನವ್ಯ ಹುರುಪಿನ ಮನೋ ಭಾವ

**********************

One thought on “ಹೂಗಳು ಅರಳುವ ಸಮಯ :

  1. ನಿಮ್ಮ ಕಾವ್ಯ ಕವನ ತುಂಬಾ ಚನ್ನಾಗಿದೆ
    ನಿಮ್ಮ ಮೊದಲ ಅನುಭವ ನಿಮಗೆ ಸ್ಫೂರ್ತಿಯಾಗಲಿ
    ನನ್ನ ಶುಭ ಆರೈಕೆಗಳು ಅಕ್ಕ ನಿಮಗೆ

Leave a Reply

Back To Top